ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಂಗ್ಲೆಂಡಿನ ಚರಿತ್ರೆ: ಇತಿಹಾಸ ಪೂರ್ವಕಾಲ
ಪ್ಲಿಸ್ಟೊಸೀನ್ ಯುಗದ ಪ್ರಾರಂಭದಲ್ಲಿ ಮೊದಲನೆಯ ಹಿಮಾಚ್ಛಾದಿತ ಕಾಲದಲ್ಲಿ ಇಂಗ್ಲೆಂಡಿನ ಬಹುಭಾಗವನ್ನು ಹಿಮದ ಗೆಡ್ಡೆಗಳು ಮುಚ್ಚಿದ್ದವು. ಅನಂತರದ ಹಿಮಾಚ್ಛಾದಿತ ಕಾಲಗಳಲ್ಲಿ ಇನ್ನೂ ಹೆಚ್ಚಿನ ಭಾಗಗಳು ಹಿಮದ ಗೆಡ್ಡೆಗಳಿಂದ ಮುಚ್ಚಲ್ಪಟ್ಟಿದ್ದಂತೆ ತಿಳಿದುಬರುತ್ತದೆ. ಮಧ್ಯ ಪ್ಲಿಸ್ಟೊಸೀನ್ ಯುಗಕ್ಕೆ ಸೇರಿದ ಭೂಪದರಗಳಲ್ಲಿ ಕೆಂಟಿನ ಸ್ವಾನ್ಸ್ ಕೂಂಬ್ ಎಂಬಲ್ಲಿ ದೊರಕಿರುವ ಮನುಷ್ಯನ ಪಳೆಯುಳಿಕೆಗಳು ಈ ದೇಶದಲ್ಲಿ ನಮಗೆ ದೊರಕಿರುವ ಅತ್ಯಂತ ಹಳೆಯ ಮಾನವನಿಗೆ ಸೇರಿವೆ. ಆದರೆ ಇದಕ್ಕೂ ಹಿಂದೆ ಇಂಗ್ಲೆಂಡಿನಲ್ಲಿ ಆದಿಮಾನವ ವಾಸಿಸುತ್ತಿದ್ದನೆಂಬುದಕ್ಕೆ ಅಲ್ಲಿ ದೊರಕಿರುವ ಕಲ್ಲಿನಾಯುಧಗಳು ಸಾಕ್ಷಿಯಾಗಿವೆ.
ಈಸ್ಟ್ ಆಂಗ್ಲಿಯದ ಕ್ರೋಮರ್, ನಾರ್ವಿಜ್, ಇಪ್ಸ್ವಿಚ್ ಮುಂತಾದೆಡೆಗಳಲ್ಲಿ ದೊರಕಿರುವ ಉಪಶಿಲಾಯುಧ ಅಥವಾ ಅತ್ಯಂತ ಹಳೆಯ ಕಾಲದ ಮತ್ತು ಬಹಳ ಒರಟಾದ ಕಲ್ಲಿನಾಯುಧಗಳನ್ನು ಬಹುಶಃ ಅವು ಮಾನವ ನಿರ್ಮಿತವಲ್ಲವೆಂದು ಇತ್ತೀಚೆಗೆ ತಿರಸ್ಕರಿಸಲಾಗಿದೆ. ಕ್ರೋಮರ್ ಪ್ರದೇಶದಲ್ಲಿ ಸ್ವಲ್ಪ ಮುಂದಿನ ಕಾಲಕ್ಕೆ ನಿರ್ದೇಶಿತವಾಗಿರುವ ಭೂಪದರಗಳಲ್ಲಿ ಒರಟೂ ದೊಡ್ಡದೂ ಆದ ಚಕ್ಕೆ ಕಲ್ಲಿನಾಯುಧಗಳು ದೊರೆತು ಇವು ಇಂಗ್ಲೆಂಡಿನ ಅತ್ಯಂತ ಹಳೆಯ ಮಾನವ ನಿರ್ಮಿತ ಆಯುಧಗಳೆಂದು ಪರಿಗಣಿತವಾಗಿವೆ. ಅನಂತರ ಹಲವಾರು ಪ್ರದೇಶಗಳಲ್ಲಿ ಅಬೆ ವಿಲಿಯನ್ ರೀತಿಯ ಕೈಗೊಡಲಿಗಳು ದೊರೆತು ಆಫ್ರಿಕ ಯುರೋಪು ಸಂಸ್ಕೃತಿಗಳ ಪ್ರಭಾವವನ್ನು ತೋರುತ್ತವೆ.