ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಂಗ್ಲೆಂಡಿನ ಚರ್ಚು
ಇಂಗ್ಲೆಂಡಿನಲ್ಲಿ 16ನೆಯ ಶತಮಾನದಲ್ಲಿ ರೋಮಿನ ಪೋಪ್ ಗುರುವಿನ ಅಧಿಕಾರವನ್ನು ನಿರಾಕರಿಸಿ ಸ್ವಯಂ ಆಡಳಿತ ಸ್ಥಾಪಿಸಿಕೊಂಡ ಕ್ರೈಸ್ತ ಮತ ಸಂಸ್ಥೆ (ಚರ್ಚ್ ಆಫ್ ಇಂಗ್ಲೆಂಡ್). ಲ್ಯಾಟಿನ್ ಕ್ರೈಸ್ತ ಮಂಡಲಿಯ ಆಂಗ್ಲಶಾಖೆ. ಇಂಗ್ಲೆಂಡಿಗೆ ಕ್ರೈಸ್ತ ಮತ ಬಂದಾಗಿನಿಂದ ಬೆಳೆದು ವಿಶಿಷ್ಟ ಸಂಸ್ಥೆಯಾಗಿ ರೂಪುಗೊಂಡಿರುವ ಇದಕ್ಕೆ ಒಂದು ದೀರ್ಘ ಇತಿಹಾಸವಿದೆ.
ಕ್ರೈಸ್ತಮತ ಇಂಗ್ಲೆಂಡಿಗೆ ಬಂದದ್ದು ಹೇಗೆಂಬುದು ಖಚಿತವಾಗಿ ತಿಳಿದುಬಂದಿಲ್ಲ. ಈ ವಿಚಾರವಾಗಿ ಲಭ್ಯವಿರುವ ನಾನಾ ಆಖ್ಯಾಯಿಕೆಗಳನ್ನೂ ಊಹೆಗಳನ್ನೂ ಆಧರಿಸಿ ಸ್ಥೂಲವಾಗಿ ಕೆಲವು ಮಾತು ಹೇಳಬಹುದು. ಸಂತ ಪಾಲನೇ ಇಲ್ಲಿಗೆ ಬಂದ ಮೊದಲ ಉಪದೇಶಕನೆಂದು ಪ್ರತೀತಿ. ಇವನು ಪಶ್ಚಿಮದ ಎಲ್ಲೆಯವರೆಗೂ ಸಂಚರಿಸಿದನೆಂಬುದಾಗಿ ಹೇಳಿರುವ ರೋಮಿನ ಕ್ಲೆಮಂಟನ ಮಾತನ್ನೂ ಸ್ಪೇನ್ ಸಂದರ್ಶನ ಮಾಡಬೇಕೆಂಬುದಾಗಿ ಸಂತ ಪಾಲನೇ ತನ್ನ ಬಯಕೆ ವ್ಯಕ್ತಪಡಿಸಿದ್ದನೆಂಬ ಉಲ್ಲೇಖವನ್ನೂ ಆಧಾರವಾಗಿ ನೀಡುವ ವಾಡಿಕೆಯಿದೆ. ಆದರೆ ಇಷ್ಟರಿಂದಲೇ ಸಂತ ಪಾಲ್ ಇಂಗ್ಲೆಂಡಿಗೆ ಬಂದಿದ್ದನೆಂದು ದೃಢವಾಗಿ ಸಿದ್ಧಪಡಿಸಲಾಗುವುದಿಲ್ಲ. ಅರಿಮಾಥಿಯದ ಸಂತ ಜೋಸೆಫ್ ಇಲ್ಲಿಗೆ ಬಂದು ಈ ನಾಡಿನ ಮೊಟ್ಟ ಮೊದಲ ಚರ್ಚು ಕಟ್ಟಿಸಿದನೆಂದೂ ಕಥೆಯುಂಟು. ಆದರೆ ಇದನ್ನು ಸಿದ್ಧಪಡಿಸುವುದಕ್ಕೂ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ. ಆಗಿಂದಾಗ್ಗೆ ಇಲ್ಲಿಗೆ ಬರುತ್ತಿದ್ದ. ಮುಖ್ಯವಾಗಿ ಗಾಲಿನಿಂದ ಬರುತ್ತಿದ್ದ, ಕ್ರೈಸ್ತರು ಇಲ್ಲ್ಲಿ ತಮ್ಮ ಧರ್ಮಪ್ರಚಾರ ಮಾಡಿದರೆಂದು ಸ್ಥೂಲವಾಗಿ ಹೇಳಬಹುದು. ಇಂಗ್ಲೆಂಡಿನ ಜನರನ್ನು ಕ್ರೈಸ್ತಮತಕ್ಕೆ ಪರಿವರ್ತಿಸುವ ಉದ್ದೇಶದಿಂದಲೇ ಈ ಕಾಲದಲ್ಲಿ ಹೊರಗಿನಿಂದ ಯಾವ ಸಂಘಟಿತ ಪ್ರಯತ್ನ ನಡೆಯಿತೆಂದು ಹೇಳಲಾಗುವುದಿಲ್ಲ. ಈ ವಿಚಾರವಾಗಿ ತನಗೇನೂ ತಿಳಿಯದೆಂದು ಅತ್ಯಂತ ಹಿಂದಿನ ಬ್ರಿಟಿಷ್ ಇತಿಹಾಸಕಾರನಾದ ಗಿಲ್ಡಾಸ್ (516-70) ಎಂಬುವನು ಕೂಡ ಹೇಳಿಕೊಂಡಿದ್ದಾನೆ. ಈ ಪ್ರಶ್ನೆಗೆ ಉತ್ತರ ನೀಡಬಹುದಾಗಿದ್ದ ದಾಖಲೆಗಳನ್ನೆಲ್ಲ ಸ್ಯಾಕ್ಸನ್ ಆಕ್ರಮಣಕಾರರು ನಾಶಮಾಡಿರಬೇಕು; ಅಥವಾ ಇಲ್ಲಿಂದ ಹೊರಕ್ಕೆ ವಲಸೆ ಹೋದವರು ತಮ್ಮೊಡನೆ ತೆಗೆದುಕೊಂಡು ಹೋಗಿರಬೇಕು. ಇದು ಗಿಲ್ಡಾಸನ ಮತ.
ಇತಿಹಾಸ ಗುರುತಿಸಬಹುದಾದ ಈ ದೇಶದ ಪ್ರಥಮ ಕ್ರೈಸ್ತನೆಂದರೆ ಪೆಲೇಗಿಯಸ್ ಎಂಬುವನು. ಇವನೊಬ್ಬ ಶ್ರೀಸಾಮಾನ್ಯ; ತುಂಬ ರೋಮನೀಕರಣವಾದ ಪ್ರದೇಶದಲ್ಲಿದ್ದ. ಈತನಿಗೆ ಸಾಹಿತ್ಯ ಚಟುವಟಿಕೆಯಲ್ಲಿ ಆಸಕ್ತಿಯಿತ್ತು. ಹೊಸ ಒಡಂಬಡಿಕೆಯ ಮೇಲೆ ಈತ ಕೆಲವು ಮುಖ್ಯ ವ್ಯಾಖ್ಯಾನಗಳನ್ನು ಬರೆದಿದ್ದಾನೆ. ಇವನು 380ರಲ್ಲಿ ಈ ದೇಶ ಬಿಟ್ಟು ಹೋದ; ಮತ್ತೆ ಬರಲಿಲ್ಲ. ಈತ ಉಪದೇಶನಿರತನಾಗಿದ್ದನೆಂಬುದಕ್ಕೂ ಆಧಾರವಿಲ್ಲ. ಮುಂದೆ ಪೆಲೇಗಿಯನಿಸಂ ಎಂಬ ಪಂಥದ ಉದಯವಾದದ್ದಕ್ಕೆ 421ರಲ್ಲಿ ರೋಮಿನಿಂದ ಉಚ್ಚಾಟನೆಗೊಂಡು ಇಲ್ಲಿಗೆ ಬಂದ ಪೆಲೇಗಿಯನರು ಕಾರಣ. ಇವರ ಆಕ್ರಮಣವನ್ನೆದುರಿಸಲು ನೆರವು ನೀಡಬೇಕೆಂದು ಈ ದೇಶದ ಜನರು ಪೋಪರಿಗೆ ಮನವಿ ಸಲ್ಲಿಸಿದ್ದುಂಟು. ಸಂತ ಜರ್ಮೇನಸ್ ಎಂಬುವನು 429 ಮತ್ತು 447ರಲ್ಲೂ ಇಲ್ಲಿಗೆ ಬರಲು ಈ ಮನವಿಯೇ ಕಾರಣ.
ಈ ದೇಶದ ಉತ್ತರ ಭಾಗದಲ್ಲಿ ಕ್ರೈಸ್ತಮತದ ಪ್ರಸರಣ ಮಾಡಿದವ ಸೇಂಟ್ ನಿನಿಯನ್ ಎಂಬ ರೋಮನೋ-ಬ್ರಿಟನ್. ಇವನು ರೋಮಿನಲ್ಲಿ ಶಿಕ್ಷಣ ಪಡೆದ; ಇಲ್ಲಿನ ಗಾಲೊವೇ ಜಿಲ್ಲೆಯಲ್ಲಿ ಮತಪ್ರಚಾರ ಕಾರ್ಯದಲ್ಲಿ ತೊಡಗಿದ. ಈ ದೇಶದ ಪ್ರಥಮ ಕ್ರೈಸ್ತ ಮಠವನ್ನು 397ರಲ್ಲಿ ಸ್ಥಾಪಿಸಿದ.
ರೋಮನ್ ಮಾದರಿಗಿಂತ ಭಿನ್ನವಾದ ಅಚ್ಚ ಸ್ವದೇಶಿ ಕ್ರೈಸ್ತಮತ ಇಲ್ಲಿ ಈ ಕಾಲದಲ್ಲಿ ಪ್ರಚಾರದಲ್ಲಿತ್ತೆಂಬ ನಂಬಿಕೆಗೆ ಆಧಾರವಿಲ್ಲ. 5ನೆಯ ಶತಮಾನದಲ್ಲಿ ಪರಾಕ್ರಮಣದಿಂದ ವಿಮೋಚನೆಯಾದಾಗ ತಾತ್ಕಾಲಿಕವಾಗಿ ಈ ದೇಶ ಬಾಹ್ಯ ಜಗತ್ತಿನಿಂದ ಬೇರ್ಪಟ್ಟಿದ್ದಿರಬಹುದು. ಆದರೆ ಧರ್ಮದ ವಿಚಾರದಲ್ಲಿ ಪ್ರತ್ಯೇಕತೆಯೇನೂ ಆಗ ಏರ್ಪಟ್ಟಿರಲಿಲ್ಲ. ಮುಂದೆ ಸ್ಯಾಕ್ಸನರು ಇಲ್ಲಿಗೆ ಬಂದು ಇಲ್ಲಿನ ಚರ್ಚುಗಳಿಗೂ ಮೆಡಿಟರೇನಿಯನ್ ಪ್ರದೇಶಕ್ಕೂ ನಡುವೆ ವೆಜ್ಜ ಹಾಕಿದಾಗ ಈ ಸಂಬಂಧ ಕಡಿದು ಬಿತ್ತು.
ಆರಂಭ ಕಾಲ
[ಸಂಪಾದಿಸಿ]ಸ್ಯಾಕ್ಸನರ ಆಕ್ರಮಣಗಳ ಫಲವಾಗಿ ಈ ದೇಶದ ಮೇಲೆ ರೋಮನ್ ನಾಗರಿಕತೆಯ ಪ್ರಭಾವ ಬಹಳಮಟ್ಟಿಗೆ ಕಳೆಗುಂದಿತು. ಈ ದ್ವೀಪದ ಪಶ್ಚಿಮದ ಓರೆಗೆ ಮಾತ್ರವೇ ಕ್ರೈಸ್ತಮತದ ಪ್ರಭಾವ ಸೀಮಿತವಾಯಿತು. ಡಮ್ನೋನಿಯದ ಸ್ಥಳೀಯ ರಾಜರ ಆಳ್ವಿಕೆಯಲ್ಲಿ ಜಿಲ್ಲಾ ವ್ಯಾಪ್ತಿಯ ಚರ್ಚ್ ವ್ಯವಸ್ಥೆಯೇರ್ಪಟ್ಟಿತು. ಮುಂದೆ 9ನೆಯ ಶತಮಾನದಲ್ಲಿ ಇದು ಇಂಗ್ಲಿಷ್ ಚರ್ಚಿನಲ್ಲಿ ವಿಲೀನವಾಯಿತು.
ಸ್ಯಾಕ್ಸನ್ ಆಕ್ರಮಣಕಾರರು ಕ್ರೈಸ್ತಮತಕ್ಕೆ ಪರಿವರ್ತನೆ ಹೊಂದಿದ್ದು ಹೊರಗಿನವರ ಪ್ರಯತ್ನದಿಂದ. ಮುಂದೆ ಪೋಪ್ ಆದ 1ನೆಯ ಗ್ರಿಗರಿಯೇ ಇದಕ್ಕೆ ನಿಮಿತ್ತ. ಮೊದಲನೆಯ ಬೆನೆಡಿಕ್ಟ್ ಅಧೀನದಲ್ಲಿ ರೋಮನ್ ಚರ್ಚಿನಲ್ಲಿ ಉನ್ನತ ಧರ್ಮಾಧಿಕಾರಿಯಾಗಿದ್ದಾಗಲೇ ಪೋಪನಿಗೆ ಈ ಹಂಬಲವಿತ್ತು. ಚೆಲುವು ಕೂದಲಿನ ತರುಣ ಸ್ಯಾಕ್ಸನರನ್ನು ರೋಮನ್ ಮಂಟಪದೊಳಕ್ಕೆ ಸೇರಿಸಿಕೊಳ್ಳಬೇಕೆಂದು ಆಗಲೇ ಈತ ಹಂಚಿಕೆ ಹಾಕಿದ್ದ. ಆದರೆ ಆಗಲೇ ಇದನ್ನು ಕಾರ್ಯರೂಪಕ್ಕೆ ತರುವುದು ಅಸಾಧ್ಯವಾಯಿತು. ಏಕೆಂದರೆ ಇದಕ್ಕೆ ಆಗ ತುಂಬ ವಿರೋಧವಿತ್ತು. ಮುಂದೆ ಈತನೇ ಪೋಪನಾದಾಗ ಪರಿಸ್ಥಿತಿ ಕೂಡಿ ಬಂತು.
ಆಗಸ್ಟೀನ್ ಎಂಬುವನು ಈ ಕಾರ್ಯಕ್ಕಾಗಿ ಪೋಪ್ ಗ್ರಿಗರಿಯಿಂದ ನೇಮಿತನಾದ. ಪೋಪ್ ಇವನ ವಶಕ್ಕೆ ನಲವತ್ತು ಮಂದಿ ಸಂನ್ಯಾಸಿಗಳನ್ನೂ ಉದಾರವಾಗಿ ಸಾಮಗ್ರಿಯನ್ನೂ ಗಾಲಿನ ದೊರೆಮಕ್ಕಳಿಗೆ ಒಕ್ಕಣಿಸಿದ ಪತ್ರಗಳನ್ನೂ ಕೊಟ್ಟ. ಕೆಂಟಿನ ಆಗಿನ ದೊರೆಯಾದ ಈಥೆಲ್ ಬರ್ಟ್ ಎಂಬುವನು ಪ್ಯಾರಿಸ್ಸಿನ ಶ್ರೀಮಂತ ಪುತ್ರಿಯೊಂದಿಗೆ ವಿವಾಹ ಸಂಬಂಧ ಬೆಳೆಸಿದ್ದರಿಂದ ಈ ಸಮಯ ಇವರಿಗೆ ಪ್ರಶಸ್ತವಾಗಿತ್ತು. ಮದುವಣಿಗಿತ್ತಿ ಬರ್ಥ್ ವಿವಾಹಕಾಲದಲ್ಲಿ ತನ್ನ ಮತವಿಧಿಯನ್ನೇ ಅನುಸರಿಸುವುದೆಂದು ಒಪ್ಪಿಗೆ ಲಭಿಸಿತ್ತು. ಆಗಸ್ಟೀನ್ ಬರುವುದಕ್ಕೆ ಒಂಬತ್ತು ವರ್ಷ ಹಿಂದಿನಿಂದಲೇ ಕೆಂಟಿನ ಆಸ್ಥಾನಕ್ಕೆ ಕ್ರೈಸ್ತಮತದ ಪರಿಚಯವಿತ್ತು.
ಆಗಸ್ಟೀನನ ನಿಯೋಗ 597ರಲ್ಲಿ ಥಾನೆಟ್ ತೀರದ ಮೇಲೆ ಬಂದಿಳಿಯಿತು. ಈ ಆಗಂತುಕರು ಯಕ್ಷಿಣಿ ಮಾಡಬಹುದೆಂದು ಬೆದರಿದ ಈಥೆಲ್ ಬರ್ಟ ದೊರೆ ಇವರನ್ನು ಬಟ್ಟಬಯಲಿನಲ್ಲಿ ಎದುರುಗೊಂಡ. ಸಂದರ್ಶನ ಕಾಲದಲ್ಲಿ ದೊರೆಗೆ ಇವರ ಪ್ರಾಮಾಣಿಕತೆಯ ಮನವರಿಕೆಯಾಯಿತು. ಆದರೆ ಇವರು ತಂದ ಸಂದೇಶದ ಸತ್ತ್ವಪರೀಕ್ಷೆಯಾಗಬೇಕಿತ್ತು. ಅಂತೂ ಇವರಿಗೆ ಕ್ಯಾಂಟರ್ಬರಿಯಲ್ಲಿ ಎಡೆ ದೊರಕಿತು. ಸರಕು ಸರಂಜಾಮು ಸರಬರಾಜಾಯಿತು. ಇವರು ಪುರಾತನ ಸೇಂಟ್ ಮಾರ್ಟಿನ್ ಚರ್ಚಿನಲ್ಲಷ್ಟೇ ತಮ್ಮ ಕಾರ್ಯವನ್ನಾರಂಭಿಸಿದರು. ಅದು ಆಗ ರಾಣಿಯ ಸುಪರ್ದಿಯಲ್ಲಿತ್ತು. ಬಲು ಬೇಗ ರಾಜನೇ ಈ ಹೊಸ ಮತಕ್ಕೆ ಶರಣುಹೋದ. ಮತಪರಿವರ್ತನೆಯ ಜೋರು ಏರಿದಂತೆಲ್ಲ ಆಗಸ್ಟೀನ್ ಚುರುಕಿನಿಂದ ಕಾರ್ಯನಿರತನಾದ. ಹಳೆಯ ಚರ್ಚುಗಳ ಜೀರ್ಣೋದ್ಧಾರವಾಯಿತು. ಹೊಸ ಚರ್ಚುಗಳು ಮೇಲೆದ್ದವು. ಒಂದೇ ವರ್ಷದಲ್ಲಿ ಈ ಮತದ ಕಲಾಪ ಬೆಳೆದದ್ದರಿಂದ ಇದಕ್ಕೆ ಇಲ್ಲಿ ಕಾಯಂ ವ್ಯವಸ್ಥೆ ಅಗತ್ಯವೆನಿಸಿತು. ಆಗಸ್ಟೀನ್ ಯುರೋಪ್ ಖಂಡ ಪ್ರದೇಶಕ್ಕೆ ಹಿಂದಿರುಗಿ ಲ್ಯೆಯನ್ಸ್ನ ಬಿಷಪ್ನಿಂದ ಅಭಿಷೇಕ ಹೊಂದಿದ. ಆಗಸ್ಟೀನನ ವಿಜಯದ ಸುದ್ದಿ ರೋಮನ್ನೂ ಮುಟ್ಟಿತು. ಆದರೆ ಆ ಕಾಲದಲ್ಲಿ ಪೋಪ್ ಗ್ರಿಗರಿಯ ಮೈ ಸ್ವಸ್ಥವಿಲ್ಲದ್ದರಿಂದ ಆಗಸ್ಟೀನನಿಗೆ ಪ್ರಧಾನ ಬಿಷಪ್ ಅಧಿಕಾರ ಬರಲು ಕೆಲ ವರ್ಷ ತಡವಾಯಿತು. 601 ರಲ್ಲಿ ಆತನಿಗೆ ಈ ಅಧಿಕಾರದ ಉಡುಗೆ ದತ್ತವಾಯಿತು; ಬೇರೆ ಬೇರೆ ವಿಭಾಗಗಳಿಗೆ ಬಿಷಪ್ರನ್ನು ನೇಮಿಸುವ ಅನುಮತಿ ದೊರಕಿತು.
ಈ ರೀತಿ ಲಂಡನ್ನಿನ ಮಠಾಧಿಪತ್ಯ ಸ್ಥಾಪನೆಯಾದರೂ ಕೆಂಟ್ ಪ್ರದೇಶದಿಂದ ಹೊರಗೆ ಇದಕ್ಕೆ ಸಾಕಷ್ಟು ಯಶಸ್ಸು ದೊರಕಲಿಲ್ಲ. ಆಗ ಇನ್ನೂ ಅಲ್ಲಲ್ಲಿ ಆಡಳಿತ ನಡೆಸುತ್ತಿದ್ದ ಹಳೆಯ ಬ್ರಿಟಿಷ್ ಬಿಷಪ್ಪರು ರೋಮನ್ ಸಂಪ್ರದಾಯದೊಳಕ್ಕೆ ಬರಲು ನಿರಾಕರಿಸಿದರು. ಈ ಅಯಶಸ್ಸಿಗೆ ಇನ್ನೂ ಅನೇಕ ಕಾರಣಗಳಿದ್ದುವು. ಈ ಸಂಸ್ಥೆಯ ಪ್ರತ್ಯೇಕತೆಯ ಫಲವಾಗಿ ಸಂಪ್ರದಾಯ ಜಡ್ಡು ಕಟ್ಟಿತ್ತು. ಈ ಪಂಥಕ್ಕೆ ಬಂದ ಹೊಸಬರಲ್ಲಿ ಅಲಸಿಕೆ ಹುಟ್ಟಿತ್ತು.
ಇಂಗ್ಲೆಂಡಿನ ಹಲವು ಭಾಗಗಳಲ್ಲಿ ಕ್ರೈಸ್ತಮತವನ್ನು ಪುನಃ ಸ್ಥಿರೀಕರಣಗೊಳಿಸಿದವರು ಐರಿಷ್ ವಸಾಹತಾದ ಐಯೊನದಿಂದ ಬಂದ ಕೆಲ್ಟಿಕ್ ಪಾದ್ರಿಗಳು. ಐರಿಷ್ ಪಾದ್ರಿಗಳು ತಮ್ಮೊಂದಿಗೆ ವಿಚಿತ್ರ ಸಂಪ್ರದಾಯಗಳನ್ನೂ ತಂದರು. ಇವರ ಆಚಾರಗಳಿಗೂ ರೋಮನ್ ಆಚಾರಗಳಿಗೂ ಹೊಂದಿಕೆಯಾಗದ್ದರಿಂದ ಇವನ್ನು ನೇರ್ಪುಗೊಳಿಸುವ ಉದ್ದೇಶದಿಂದ ನಾರ್ಥಂಬ್ರಿಯದ ದೊರೆ ವಿಟ್ಟಿಯೆಂಬಲ್ಲಿ ಈ ಸಂಪ್ರದಾಯಗಳ ಪ್ರಮುಖ ಸಮರ್ಥಕರ ಸಭೆ ಸೇರಿಸಿದ. ಎರಡೂ ಪಕ್ಷಗಳ ವಾದಗಳನ್ನವಧರಿಸಿದ. ಕೊನೆಗೆ ಈ ದೊರೆ ರೋಮನ್ ಪಕ್ಷದ ಪರವಾಗಿ ತೀರ್ಪು ನೀಡಿದ. 663ರಲ್ಲಿ ನಡೆದ ಈ ಧರ್ಮಸಭೆ ಇತಿಹಾಸ ದೃಷ್ಟಿಯಲ್ಲಿ ಬಲು ಮುಖ್ಯ. ಏಕೆಂದರೆ ವ್ಯರ್ಥ ಜಲ್ಪವಿತಂಡಗಳಲ್ಲಿ ನಿರತರಾಗಿದ್ದ ಮತಪ್ರಮುಖರು ಅಲ್ಲಿಂದ ಮುಂದೆ ಆ ಮಾರ್ಗ ತೊರೆದು ಒಂದಾಗುವುದು ಸಾಧ್ಯವಾಯಿತು. ಥಿಯೊಡೋರಿನ ಆರ್ಚ್ ಬಿಷಪ್ನ ಅಡಿಯಲ್ಲಿ ಇಂಗ್ಲಿಷ್ ಚರ್ಚು ಸಂಘಟಿತವಾಯಿತು. ಇಂಗ್ಲೆಂಡಿನ ಪಶ್ಚಿಮ ಯುರೋಪ್ಗಳ ನಡುವೆ ವಿಚಾರ ವಿನಿಮಯ ಸುಲಭಸಾಧ್ಯವಾಯಿತು. ಕ್ಯಾಂಟರ್ಬರಿಯ ಪೀಠಕ್ಕೆ ಥಿಯೋಡೋರ್ ಬಂದಮೇಲೆ ಇದು ಇಡೀ ಇಂಗ್ಲೆಂಡಿನ ಪ್ರಧಾನಪೀಠವಾಯಿತು. ವೇಲ್ಸಿನ ಕ್ರೈಸ್ತಪಂಥ ಮಾತ್ರ ಮುಂದೆಯೂ ಬಹುಕಾಲ ಪ್ರತ್ಯೇಕವಾಗಿ ಮುಂದುವರಿಯಿತು. 12ನೆಯ ಶತಮಾನದ ಅಂತ್ಯಭಾಗದಲ್ಲಿ ಅದಕ್ಕೂ ಇಂಗ್ಲಿಷ್ ಚರ್ಚಿಗೂ ಸಫಲ ಸಂಲಗ್ನವುಂಟಾಯಿತು.
ಡೇನಿಷ್ ಆಕ್ರಮಣಕಾರರಿಂದ ಆಂಗ್ಲೋ-ಸ್ಯಾಕ್ಸನ್ ಚರ್ಚಿಗೆ ಆಘಾತ ಒದಗಿತು. ಆದರೆ ಯುರೋಪಿನ ಪಂಥದೊಂದಿಗೆ ಸಾಹಿತ್ಯಕ ಹಾಗೂ ಇತರ ನಾನಾ ಬಗೆಯ ಸಂಬಂಧಗಳಿದ್ದುದರಿಂದಲೂ ಕೆಳಸೀಮೆಯ ಧರ್ಮಪ್ರಭುವಾಗಿದ್ದ ಸಂತ ಬೋನಿಫೇಸನ ಸಮರ್ಥ ಪ್ರಚಾರದಿಂದಲೂ ಅದು ಅಳಿಯದೆ ಉಳಿಯಿತು.
ನಾರ್ಮನರಿಂದ ನಿಗ್ರಹಕ್ಕೊಳಗಾಗಿದ್ದ ಕಾಲದಲ್ಲಿ ಇಂಗ್ಲಿಷರು ನಾನಾ ಬಗೆಯ ಬವಣೆಗೊಳಗಾದರು. ಅನೇಕ ದೇಶೀಯ ಮಠಾಧಿಪತಿಗಳು ಸ್ಥಾನಭ್ರಷ್ಠರಾದರು. ಆದರೆ ವಿಲಿಯಂ ದೊರೆಯ ಪಟ್ಟ ಭದ್ರವಾದ ಮೇಲೆ ಇಂಗ್ಲೆಂಡಿನ ಚರ್ಚಿಗೆ ಒಳ್ಳೆಯ ದೆಸೆ ಬಂತು. ಅಲ್ಲಿ ನೇಮಕವಾದ ನಾರ್ಮನ್ ಪಾದ್ರಿಗಳು ಇಂಗ್ಲಿಷ್ ಪುರೋಹಿತರಿಗಿಂತ ಕಡಿಮೆಯಿರಲಿಲ್ಲ. ವಿಜ್ಞಾನದಲ್ಲೂ ನಡತೆಯಲ್ಲೂ ಅವರದು ಮೊದಲನೆಯ ದರ್ಜೆ. ನಾರ್ಮನ್ ಶ್ರೀಮಂತರಿಂದಲೂ ಚರ್ಚಿಗೆ ಧಾರಾಳವಾಗಿ ಕೊಡುಗೆಗಳು ಬಂದವು. ಭವ್ಯ ಪೂಜಾಮಂದಿರಗಳು ನಿರ್ಮಿತವಾದವು. ಲ್ಯಾಟಿನ್ ಕ್ರೈಸ್ತ ಜಗತ್ತಿನೊಂದಿಗೆ ಇಂಗ್ಲಿಷ್ ಚರ್ಚಿನ ಸಂಬಂಧ ಬೆಳೆಯಿತು. 1069ರಲ್ಲಿ ಸ್ಯಾಕ್ಸನ್ ಬಂಡಾಯವಾದಾಗ ಕ್ಯಾಂಟರ್ಬರಿಯ ಆಗಿನ ಪ್ರಧಾನಾಧಿಕಾರಿಯನ್ನು ವಜಾ ಮಾಡುವುದಕ್ಕೆ ದೊರೆಗೆ ಒಂದು ನೆವ ಸಿಕ್ಕಿತ್ತು. ಆದರೆ ತಾನು ಕೈಗೊಂಡ ಕ್ರಮಕ್ಕೆ ಅವನಿಗೆ ಪೋಪ್ ಅಧಿಕಾರದ ನೆರವು ಬೇಕಿತ್ತು. ಆದ್ದರಿಂದ 1070ರಲ್ಲಿ ಆತ ವಿಂಚೆಸ್ಟರಿನಲ್ಲಿ ಧರ್ಮಸಭೆ ನಡೆಸಿದ. ಕ್ರೈಸ್ತಮಠೀಯರಿಗೆ ಪ್ರತ್ಯೇಕವಾದ ಸ್ವತಂತ್ರ ನ್ಯಾಯಾಲಗಳ ಸ್ಥಾಪನೆಯಾಯಿತು.
ಕ್ರೈಸ್ತಮಠ ಮಂಡಲಿಗೇ ಅನ್ವಯವಾಗುವಂಥ ನೀತಿಸೂತ್ರಗಳ ನಿರ್ಮಾಣ ಅಗತ್ಯವಾಯಿತು. ಇದರಿಂದ ಮುಂದೆ ಚರ್ಚಧಿಕಾರಕ್ಕೂ ಪ್ರಭುತ್ವಾಧಿಕಾರಕ್ಕೂ ನಡುವೆ ತಿಕ್ಕಾಟ ಸಂಭವಿಸುವ ಹಾಗಾಯಿತು. 1ನೆಯ ವಿಲಿಯಂನ ಅನಂತರದ ಕಾಲದಲ್ಲಿ ಇಂಥ ಬಿಕ್ಕಟ್ಟು ಒದಗಿದಾಗ ಇವೆರಡು ಸಂಸ್ಥೆಗಳಿಗೂ ನಡುವೆ ಒಂದು ರೀತಿಯ ಒಪ್ಪಂದವಾಯಿತು. ಎರಡನೆಯ ಹೆನ್ರಿ ದೊರೆಯಾಗಿ ಪಟ್ಟಕ್ಕೆ ಬಂದಾಗ ನ್ಯಾಯಾಡಳಿತದ ಕೆಲವು ಓರೆಕೋರೆಗಳನ್ನು ತಿದ್ದಲು ಯತ್ನಿಸಿದ. ಇದರಿಂದ ಕಷ್ಟಗಳು ಇನ್ನೂ ಹೆಚ್ಚಿದವು. ತನ್ನಲ್ಲಿ ಮುಖ್ಯಾಧಿಕಾರಿಯಾಗಿದ್ದ ಥಾಮಸ್ ಬೆಕೆಟ್ನನ್ನೇ ಕ್ಯಾಂಟರ್ಬರಿಯ ಪ್ರಧಾನಾಧಿಕಾರಿಯಾಗಿ ಆತ ನೇಮಿಸಿದ. ಇವನು ದೊರೆಯ ಪಕ್ಷದಲ್ಲಿರುವ ಬದಲು ಆತನ ಪ್ರತಿಕಕ್ಷಿಯಾದ. ದೊರೆಯ ನಡವಳಿಕೆಗಳಿಗೆ ಬೆಂಬಲ ನೀಡುವಂತೆ ವರ್ತಿಸಿ ಆಮೇಲಾಮೇಲೆ ವಿರೋಧಿಸಿದ. ದೊರೆಯ ಮರ್ಜಿ ಹಿಡಿಯಲು ನಿರಾಕರಿಸಿದ ಫಲವಾಗಿ ಇವನು ಆರು ವರ್ಷ ಗಡೀಪಾರಾಗಬೇಕಾಯಿತು. ಶಿಕ್ಷೆ ಮುಗಿಸಿಕೊಂಡು ಮರಳಿದ ಕೂಡಲೇ ಚರ್ಚಿವಲ್ಲಿದ್ದ ಇವನ ವಿರೋಧಿಗಳಿಗೆ ಈತನಿಂದ ಶಿಕ್ಷೆ ಕಾದಿತ್ತು. ಅವರನ್ನೆಲ್ಲ ಉಚ್ಚಾಟನೆಗೊಳಿಸಿದಾಗ ಅವರು ದೊರೆಯ ಬಳಿಗೆ ದೂರು ಹೊತ್ತರು. ಇದನ್ನು ಕೇಳಿದಾಗ ದೊರೆಯ ಬಾಯಿಂದ ಹೊರಟ ಉದ್ಗಾರದಿಂದ ಉದ್ರೇಕಗೊಂಡ ಕೆಲವು ಇಂಗ್ಲಿಷ್ ಶ್ರೀಮಂತರು ಬೆಕೆಟ್ ಇದ್ದ ಆರಾಧನ ಮಂದಿರಕ್ಕೆ (ಕೆಥೀಡ್ರಲ್) ಹೋಗಿ ಅಲ್ಲೇ ಆತನನ್ನು ಕೊಂದರು. ಈ ಕೊಲೆಯ ಫಲವಾಗಿ ದೊರೆಯ ಸುಧಾರಣೆಗಳಿಗೆ ತಾತ್ಕಾಲಿಕವಾಗಿ ಮರ್ಮಾಘಾತವಾಯಿತು (ಜಿಕೆಟ್, ಥಾಮಸ್).
ಐಹಿಕ ಪಾರಮಾರ್ಥಿಕ ಕ್ಷೇತ್ರಗಳೆರಡರಲ್ಲೂ ಜಾನ್ ದೊರೆಯ ವಿರುದ್ಧವಾಗಿ ಪೋಪ್ ಅಧಿಕಾರ ವ್ಯವಸ್ಥೆ ತನ್ನ ಅಧಿಕಾರ ವ್ಯಾಪ್ತಿಯನ್ನು ಎತ್ತಿ ಹಿಡಿಯಲಾರಂಭಿಸಿತು. ಮುಂದೆ ಕ್ಯಾಂಟರ್ಬರಿಯ ಪೀಠ ಖಾಲಿಯಾದಾಗ ಮೂರನೆಯ ಇನೊಸೆಂಟ್ ಪೋಪ್ ತನ್ನ ಕಡೆಯವನಾದ ಸ್ಟೀಫನ್ ಲ್ಯಾಂಗ್ಟನ್ನನ್ನು ಆ ಸ್ಥಾನಕ್ಕೆ ನೇಮಿಸಬೇಕೆಂದು ಒತ್ತಾಯಿಸಿದ. ಜಾನ್ ದೊರೆ ನಿರಾಕರಿಸಿದ. ದೊರೆಗೆ ತಕ್ಕ ಶಾಸ್ತಿ ಮಾಡಬೇಕೆಂಬ ಉದ್ದೇಶದಿಂದ ಪೋಪ್ ಗುರು ಇಡೀ ದೇಶಕ್ಕೇ ಬಹಿಷ್ಕಾರ ಶಿಕ್ಷೆ ವಿಧಿಸಿ ಅಲ್ಲಿರುವ ಯಾರಿಗೂ ಧಾರ್ಮಿಕ ಹುದ್ದೆ ಕೊಡಬಾರದೆಂದು ಆಜ್ಞಾನಪಿಸಿದ. ದೊರೆ ಜಗ್ಗಲಿಲ್ಲ. ಕೊನೆಗೆ ಜಾನ್ ದೊರೆಯನ್ನೇ ಅಧಿಕಾರದಿಂದ ಇಳಿಸುವ ಆಜ್ಞೆ ಪೋಪ್ನಿಂದ ಬಂತು. ಫ್ರಾನ್ಸಿನ ಫಿಲಿಪ್ ಕಿರೀಟ ಧರಿಸಬೇಕೆಂದು ಆಹ್ವಾನ ಹೋಯಿತು. ತನ್ನ ಸ್ಥಾನಕ್ಕೆ ಚ್ಯುತಿ ಬಂದಾಗ ಜಾನ್ ದೊರೆ ರಹಸ್ಯವಾಗಿ ಪೋಪನ ಪ್ರತಿನಿಧಿಯೊಂದಿಗೆ ಒಪ್ಪಂದ ಮಾಡಿಕೊಂಡ. ತನ್ನ ರಾಜ್ಯವನ್ನು ಪೋಪನ ವಶಕ್ಕೆ ಒಪ್ಪಿಸಿದಂತೆ ಮಾಡಿ ಅದನ್ನು ಜಹಗೀರಿಯಾಗಿ ವಾಪಸು ಪಡೆದ. ಪ್ರತಿಯಾಗಿ ವರ್ಷಕ್ಕೆ ಒಂದು ಸಾವಿರ ಮಾರ್ಕುಗಳ ಕಾಣಿಕೆ ಸಲ್ಲಿಸುವುದಾಗಿ ಒಪ್ಪಿಕೊಂಡ.
ಜಾನ್ ಮರಣಾನಂತರ ಮೂರನೆಯ ಹೆನ್ರಿಗೆ ಸಿಂಹಾಸನ ದೊರಕಿಸಲು ಪೋಪ್ ಪ್ರತಿನಿಧಿ ಸಹಾಯ ಮಾಡಿದ. ತತ್ಫಲವಾಗಿ ದೊರೆ ಪೋಪರ ಅನುವರ್ತಿಯಾದ. 1ನೆಯ ಎಡ್ವರ್ಡ್ನ ಕಾಲದಲ್ಲಿ ಈ ಸಂಬಂಧದಲ್ಲಿ ಬದಲಾವಣೆಯಾಯಿತು. ಚರ್ಚಿಗೆ ಅಧೀನನಾಗಿರಬೇಕೆಂಬ ನಿರ್ಬಂಧ ಕತ್ತರಿಸಿತು. ಆತನ ಮೊಮ್ಮಗ 3ನೆಯ ಎಡ್ವರ್ಡ್ ಪೋಪ್ ಅಧಿಕಾರಕ್ಕೆ ವ್ಯತಿರಿಕ್ತವಾದ ಕ್ರಮಗಳನ್ನನುಸರಿಸಿದ. ಪೋಪನಿಗೆ ಸಲ್ಲುತ್ತಿದ್ದ ಕಾಣಿಕೆ ನಿಂತಿತು. ವೈಕ್ಲಿಫ್ ಎಂಬುವನು (ವೈಕ್ಲಿಫನ, ಜಾನ್) ಸುಧಾರಣಾವಾದಿಯಾಗಿದ್ದ. ಈತ ಬೈಬಲನ್ನು ಭಾಷಾಂತರಿಸಿದ. ವೈಕ್ಲಿಫನ ಕ್ರ್ರಾಂತಿಕಾರಿ ಭಾವನೆಗಳಿಂದ ಜಾಗೃತಿ ಹೊಂದಿದ್ದವರ ಚಳವಳಿಯನ್ನು ಹತ್ತಿಕ್ಕಲು ನಾಲ್ಕನೆಯ ಹೆನ್ರಿಯ ಕಾಲದಲ್ಲಿ ಉಗ್ರಕ್ರಮಗಳು ಜಾರಿಗೆ ಬಂದುವು. 15ನೆಯ ಶತಮಾನದ ವೇಳೆಗೆ ಚರ್ಚಿಗೂ ಪ್ರಭುತ್ವಕ್ಕೂ ನಡುವೆ ಮತ್ತೆ ರಾಜಿಯಾಯಿತು.
ಟ್ಯೂಡರ್ ಸುಧಾರಣೆ
[ಸಂಪಾದಿಸಿ]ಈ ಎರಡು ಸಂಸ್ಥೆಗಳ ನಡುವೆ ಪದೇ ಪದೇ ನಡೆಯುತ್ತಿದ್ದ ಘರ್ಷಣೆಗಳು 16ನೆಯ ಶತಮಾನದಲ್ಲಿ ಅಂತಿಮಘಟ್ಟ ಮುಟ್ಟಿದ್ದವು. ಟ್ಯೂಡರ್ ದೊರೆಯಾದ ಎಂಟನೆಯ ಹೆನ್ರಿಯ ವಿವಾಹಸಂಬಂಧವಾಗಿ ಗುರುಮನೆಗೂ ಅರಮನೆಗೂ ವೈರ ಮಸೆಯಿತು. ಸಂತಾನಾಭಿಲಾಷೆಯಿಂದಲೂ ಅಸೀಮ ಮೋಹದಿಂದಲೂ ಕೂಡಿದ್ದ ದೊರೆ ತನ್ನ ಪ್ರಥಮ ವಿವಾಹ ಬಂಧನವನ್ನು ಕೊನೆಗೊಳಿಸಿ ಇನ್ನೊಬ್ಬಳನ್ನು ವರಿಸಲೆತ್ನಿಸಿದ. ಚರ್ಚು ಅಡ್ಡ ಬಂತು. ಆಗ ಚರ್ಚಿನ ಬಗ್ಗೆ ಜನಸಾಮಾನ್ಯರಲ್ಲಿ ಹಬ್ಬಿದ್ದ ವಿರೋಧವನ್ನೂ ರಾಷ್ಟ್ರೀಯತಾಭಾವನೆಗಳನ್ನೂ ದೊರೆ ಉಪಯೋಗಿಸಿಕೊಂಡು ರೋಮಿನ ಸಂಬಂಧವನ್ನು ಕಡಿದು ಹಾಕಿದ. ಕ್ರೈಸ್ತಧರ್ಮಕ್ಕೆ ಚ್ಯುತಿ ಬಾರದಂತೆ ಇನ್ನು ಮುಂದೆ ದೊರೆಯೇ ಇಂಗ್ಲೆಂಡಿನ ಚರ್ಚಿಗೂ ಅಧಿಪತಿಯೆಂದು ಸಾರಿಕೊಳ್ಳಲಾಯಿತು (1534). ಈ ಮಧ್ಯೆ ಕ್ಯಾಂಟರ್ಬರಿಯ ಪೀಠಾಧಿಪತಿಯಿಂದ ಹೆನ್ರಿಯ ಪ್ರಥಮ ವಿವಾಹ ರದ್ದಾದ್ದರಿಂದ ಹೆನ್ರಿ ತನ್ನ ಪ್ರಿಯತಮೆಯಾದ ಆನ್ ಬೊಲೀನಳನ್ನು ವಿವಾಹವಾದ. ಮತಾಚಾರಗಳಲ್ಲಿ ಯಾವ ವ್ಯತ್ಯಾಸವನ್ನೂ ಮಾಡದೆ, ರಾಜಕೀಯದಲ್ಲಿ ಪೋಪ್ ಅಧಿಕಾರವನ್ನು ಅಂತ್ಯಗೊಳಿಸುವುದೇ ಹೆನ್ರಿಯ ಉದ್ದೇಶವಾಗಿತ್ತು. ಆದರೆ ಈ ಕ್ರಮದಿಂದ ಜನರು ಮತೀಯ ಸುಧಾರಣೆಗಳ ಕಡೆಗೂ ಗಮನ ಹರಿಸಿದರು. ಆರನೆಯ ಎಡ್ವರ್ಡ್ನ ಕಾಲದಲ್ಲಿ ಈ ಬಗೆಯ ಸುಧಾರಣೆ ಮುಂದುವರಿಯಿತು. ಇಂಗ್ಲಿಷ್ ಭಾಷೆಯಲ್ಲಿ ಪ್ರಾರ್ಥನಾ ಪುಸ್ತಕಗಳು ರಚಿತವಾದವು. ಮೇರಿ ರಾಣಿಯ ಕಾಲದಲ್ಲಿ ರೋಮಿನೊಂದಿಗೆ ಸಮರಸತೆ ಏರ್ಪಟ್ಟಿತು. ಆದರೆ ಸುಧಾರಣಾಪ್ರಿಯರ ವಿರುದ್ಧವಾಗಿ ಕೈಕೊಂಡ ಉಗ್ರಕ್ರಮಗಳಿಂದ ಸಂಪ್ರದಾಯವಾದಿಗಳೂ ಮುನಿದರು. 1558ರಲ್ಲಿ ಎಲಿಜಬೆತ್ ರಾಣಿ ಸಿಂಹಾಸನವನ್ನೇರಿದಾಗ ರಾಷ್ಟ್ರ ಸಂಘಟನೆಯ ಪಣತೊಟ್ಟಳು. 1552ರಲ್ಲಿ ರಚಿತವಾಗಿದ್ದ ಪ್ರಾರ್ಥನಾ ಪುಸ್ತಕಗಳು ಕ್ಯಾಥೊಲಿಕ್ ತಿದ್ದುಪಡಿಗಳೊಂದಿಗೆ ಮತ್ತೆ ರಚಿತವಾದವು. ಆದರೆ ಈ ಸುಧಾರಣೆ ಅಸಂಪುರ್ಣವೆಂದು ಪ್ರಾಟೆಸ್ಟಂಟ್ ಮತದ ಕೆಲವು ಧರ್ಮಶುದ್ಧಿವಾದಿಗಳು (ಪ್ಯುರಿಟನ್ಸ್) ಅಭಿಪ್ರಾಯಪಟ್ಟರು. ಅಶಾಸ್ತ್ರೀಯವೂ ದೂಷಣೀಯವೂ ಆದ ಆಚಾರಗಳನ್ನು ತೊಡೆದುಹಾಕಬೇಕೆಂದು ಇವರು ಚಳುವಳಿ ಹೂಡಿದರು. 1570ರಲ್ಲಿ 5ನೆಯ ಪಯಸ್ ಪೋಪ್ ರಾಣಿಗೆ ಬಹಿಷ್ಕಾರ ಹಾಕಿ ಆಕೆಯನ್ನು ಅಧಿಕಾರದಿಂದ ಇಳಿಸಿದ. ರಾಣಿಯ ವಿರುದ್ಧವಾಗಿ ಪಿತೂರಿಗಳು ನಡೆದವು. ರಾಣಿಯೂ ಪೋಪರ ಪಂಥದವರ ಮೇಲೆ ಉಗ್ರಕ್ರಮ ಕೈಗೊಂಡಳು. ಅತಿಗಾಮಿ ಧರ್ಮಶುದ್ಧಿವಾದಿಗ ಳನ್ನೂ ಶಿಕ್ಷಿಸಿದಳು.
ಎಲಿಜಬೆತ್ಳ ಮರಣಾನಂತರದ ಧರ್ಮಶುದ್ಧಿವಾದಿಗಳು ಕಟ್ಟುಗುರಾಗಿ ತಮ್ಮ ಚಳುವಳಿ ಮುಂದುವರಿಸಿದರು. ಪ್ರಾರ್ಥನಾ ಪುಸ್ತಕವನ್ನು ರದ್ದುಗೊಳಿಸಿ, ಬಿಷಪ್ ಆಡಳಿತವನ್ನೇ ಕೊನೆಗೊಳಿಸಬೇಕೆಂದು ಒತ್ತಾಯ ಹಾಕಿದರು. ಇದೇ ಕಾಲಕ್ಕೆ ದೊರೆಯ ದಬ್ಬಾಳಿಕೆಯ ವಿರುದ್ಧವಾಗಿ ಪಾರ್ಲಿಮೆಂಟು ಚಳವಳಿ ಹೂಡಿತ್ತು. ಮೊದಲನೆಯ ಚಾಲ್ರ್ಸ್ ದೊರೆಗೆ ಸೋಲಾಯಿತು. ಬಿಷಪ್ ಆಡಳಿತ ಕೊನೆಗೊಂಡಿತು. ಪ್ರಾರ್ಥನಾ ಪುಸ್ತಕವನ್ನು ಬಳಸಬಾರ ದೆಂಬ ಆಜ್ಞೆ ಜಾರಿಗೆ ಬಂತು. 1660ರಲ್ಲಿ ಇಂಗ್ಲೆಂಡಿಗೂ ರಾಜತ್ವವನ್ನು ಪುನಃಸ್ಥಾಪಿಸಿದಾಗ ಅದರೊಂದಿಗೆ ಚರ್ಚಿನ ವ್ಯವಸ್ಥೆಯೂ ಉಸಿರು ತಳೆಯಿತು. ಉಚ್ಚಾಟನೆಗೊಂಡಿದ್ದ ಪುರೋಹಿತವರ್ಗದವರು ಮತ್ತೆ ಬಂದರು. ಧರ್ಮಶುದ್ಧಿವಾದಿಗಳ ತೀವ್ರ ಬೇಡಿಕೆಗಳಿಗೆ ಪುರಸ್ಕಾರ ಸಿಗದಿದ್ದರೂ ಇಂಗ್ಲೆಂಡಿನ ಚರ್ಚು ಸುಧಾರಣೆಗೊಂಡು. ಪೋಪ್ ಅಧಿಕಾರದಿಂದ ವಿಮುಕ್ತಿ ಹೊಂದುವ ಮಟ್ಟಿಗೆ ಪ್ರಾಟೆಸ್ಟಂಟ್ ಆಗಿ, ಆದರೂ ಹಳೆಯ ಕಾಲದ ಧರ್ಮಸಂಪ್ರದಾಯಗಳನ್ನೂ ವಿಧಿಗಳನ್ನೂ ಉಳಿಸಿಕೊಳ್ಳುವ ಮಟ್ಟಿಗೆ ಕ್ಯಾಥೋಲಿಕ್ ಆಗಿ ಒಂದು ವಿಶಿಷ್ಟ ಸಂಸ್ಥೆಯಾಗಿ ಮಾರ್ಪಟ್ಟಿತು. ಆದರೆ ಆಗ ಅದು ಎಲ್ಲ ಜನರ ಸಂಸ್ಥೆಯಾಗಿ ಉಳಿಯಲಿಲ್ಲ. ಈ ಕ್ರಮವನ್ನನುಮೋದಿಸಿ ಕ್ಯಾಥೊಲಿಕರೂ ಪ್ರಾಟೆಸ್ಟಂಟರೂ ಪ್ರತ್ಯೇಕವಾಗಿ ಸಂಘಟಿತರಾದರು.
ಚರ್ಚಿನ ಪುನಃಸ್ಥಾಪನೆಯ ಅನಂತರದಲ್ಲಿ ಅನೇಕ ಪಂಥಗಳು ಬೆಳೆದವು. ಜೆರೆಮಿ ಟೇಲರ್, ಕೋಸಿನ್, ಕೆನ್, ಸ್ಯಾನ್ಕ್ರಾಫ್ಟ್, ಥಾಮಸ್ ಬ್ರೇ ಮುಂತಾದ ಉನ್ನತ ಚರ್ಚ್ ಪಂಥದವರು ಚರ್ಚಿನ ಪ್ರಾಚೀನತೆಯನ್ನೂ ಪರಂಪರೆಯನ್ನೂ ಸ್ವಾತಂತ್ರ್ಯವನ್ನೂ ಎತ್ತಿ ಹಿಡಿದರು. ಅವನತ ಚರ್ಚ್ ಪಂಥದವರು ಬೇರೆ ರೀತಿ ಬಗೆದರು. ಚರ್ಚು ಸರ್ಕಾರದ ಆಡಳಿತಾಧಿಕಾರಿಗಳಿಗೆ ಅಧೀನವಾಗಿರಬೇಕೆಂದು ವಾದಿಸಿದರು. ದೈವಿಕದೃಷ್ಟಿಗಿಂತ ನೈತಿಕಾಂಶ ಗಳಿಗೆ ಹೆಚ್ಚು ಮೌಲ್ಯ ನೀಡಬೇಕೆಂದು ಭಾವಿಸಿದರು. 18ನೆಯ ಶತಮಾನದಲ್ಲಿ ಇನ್ನೂ ಕೆಲವರು, ಕ್ರೈಸ್ತಮತದ ಅಮಾನುಷಾಂಶಗಳನ್ನು ಅಲ್ಲಗಳೆಯದಿದ್ದರೂ ಹೇತುವಾದವನ್ನು ಮುಂದಿಟ್ಟರು. ಬೌದ್ಧಿಕ ನೈತಿಕ ಶ್ರದ್ಧೆ ಹೊಂದಿದ್ದ ಇವರು ಚರ್ಚಿನ ಅತ್ಯುತ್ಸಾಹದ ಬಗ್ಗೆ ಅನಾದರದಿಂದಿದ್ದರು. ತೆಪ್ಪಗೆ ಐಹಿಕ ವ್ಯಾಪಾರನಿರತರಾಗಿರಲೆತ್ನಿಸುತ್ತಿದ್ದ ಇವರ ಧೋರಣೆಯಿಂದ ಚರ್ಚು ಸಾಯದಿದ್ದರೂ ಸತ್ತ್ವ ಹೀನವಾಯಿತು. ಮುಂದೆ ಬಂದ ವೆಸ್ಲಿಗಳು ವ್ಯಕ್ತಿಯ ಪರಿವರ್ತನೆಗೂ ಭಕ್ತಿಗೂ ಬೆಲೆ ಕೊಟ್ಟರು. ಇವರು ಜನರನ್ನು ಕ್ರೈಸ್ತ ಮತಕ್ಕೆ ಪರಿವರ್ತನೆ ಮಾಡುವ ಕಾರ್ಯದಲ್ಲಿ ನಿರತರಾದರು. ಇವರು ಚರ್ಚಿನೊಳಗೇ ಇದ್ದರು. ಅನಂತರದ ಕಾಲದ ಮೆಥಡಿಸ್ಟರು ಚರ್ಚನ್ನೇ ತ್ಯಜಿಸಿದರು (ಮೆಥಡಿಸ್ಚ್ ಮಿಷನ್).
18ನೆಯ ಶತಮಾನದಲ್ಲೂ 19ನೆಯ ಶತಮಾನದಲ್ಲೂ ಚರ್ಚು ಹಿಂದೆ ಸರಿದಿದ್ದಕ್ಕೆ ಅದು ವ್ಯತ್ಯಸ್ತ ಸಾಮಾಜಿಕ ಪರಿಸರಕ್ಕೆ ಹೊಂದಿಕೊಳ್ಳದಿದ್ದದ್ದೇ ಕಾರಣ. ಮಧ್ಯಯುಗದಿಂದಲೂ ಅದರ ವ್ಯವಸ್ಥೆ ಹಾಗೆಯೇ ಉಳಿದುಕೊಂಡಿತ್ತು. 1830ರಿಂದ ಈಚೆಗೆ ಚರ್ಚ್ ವ್ಯವಸ್ಥೆ ಕಣ್ತೆರೆಯಿತು. 1832ರಲ್ಲಿ ಜಾರಿಗೆ ಬಂದ ರಾಬರ್ಟ್ ಪೀಲನ ಸುಧಾರಣಾ ಕಾಯಿದೆಯಿಂದ ಇದು ಉತ್ತೇಜನ ಪಡೆದು ಹೊಸ ಹೊಸ ಚರ್ಚುಗಳನ್ನು ನಿರ್ಮಿಸಿತು. ಪ್ರಚಾರಕಾರ್ಯ ಭರದಿಂದ ಸಾಗಿತು.
1833ರಲ್ಲಿ ಆಕ್ಸ್ಫರ್ಡ್ ಚರ್ಚಿನ ಕೆಲವರು ಹಳೆಯ ಚರ್ಚಿನ ಔನ್ನತ್ಯ ಸ್ಥಾಪನೆ ಮಾಡಲು ಯತ್ನಿಸಿದರು. ಘರ್ಷಣೆಗಳಾದವು. ಇದು ಪೋಪಧಿಕಾರದ ಪಿತೂರಿಯಿರಬಹು ದೆಂದೂ ಶಂಕೆಯಾಯಿತು. ಭಿನ್ನ ಭಿನ್ನ ಶ್ರದ್ಧೆಗಳಿಗೆ ಒಳಗಾದ ಪಂಗಡಗಳಲ್ಲಿ ತಿಕ್ಕಾಟವಾಗಿ ಈ ವ್ಯಾಜ್ಯ ಪ್ರಿವಿಕೌನ್ಸಿಲಿನವರೆಗೂ ಹೋಯಿತು. ಕರ್ಮನಿಷ್ಠರು (ರಿಚುಯಲಿಸ್ಟ್ಸ್) ತಮ್ಮ ಪಂಥವೇ ಹೆಚ್ಚೆಂದು ಸಾಧಿಸಲು ಕಾರಾಗೃಹಕ್ಕೆ ಹೋಗಲೂ ಸಿದ್ಧರಾಗಿದ್ದರು.
19ನೆಯ ಶತಮಾನದಲ್ಲಿ ಚರ್ಚಿಗೂ ಪ್ರಭುತ್ವಕ್ಕೂ ನಡುವಣ ಸಂಬಂಧವನ್ನು ನೇರ್ಪುಗೊಳಿಸಲು ನಾನಾ ಕ್ರಮಗಳು ಜಾರಿಗೆ ಬಂದವು. ದೇಶದ ಇತಿಹಾಸದೊಂದಿಗೆ ಬೆಳೆದುಕೊಂಡು ಬಂದ ಚರ್ಚು ಸಂಸ್ಥೆಗೆ ನೀಡಿದ್ದ ಅಧಿಕೃತ ಮನ್ನಣೆಯನ್ನು ಹಿಂತೆಗೆದುಕೊಳ್ಳಬೇಕೆಂಬ ಸೂಚನೆಯೂ ಬಂದಿತ್ತು. ಆದರೆ ಈ ಕ್ರಮದಿಂದ ಅಗಾಧ ಪರಿಣಾಮಗಳಾಗಬಹುದೆಂಬುದು ಅನೇಕರು ವಾದಿಸಿದ್ದರಿಂದ ಈ ಸೂಚನೆ ಜಾರಿಗೆ ಬರಲಿಲ್ಲ. ದ್ವಿತೀಯ ಮಹಾಯುದ್ಧದ ಅನಂತರದ ಕಾಲದಲ್ಲಿ ಚರ್ಚಿನ ವಿಧಿಗಳಲ್ಲೂ ವ್ಯವಸ್ಥೆಯಲ್ಲೂ ನಾನಾ ಮಾರ್ಪಾಟುಗಳಾಗಿವೆ.
20ನೆಯ ಶತಮಾನದಲ್ಲಿ ಉದಾರವಾದ (ಲಿಬರಿಲಿಸಂ) ಬೆಳೆದಿದೆ. ಇತರ ಕ್ರೈಸ್ತ ಸಂಸ್ಥೆಗಳೊಂದಿಗೆ ಇಂಗ್ಲೆಂಡಿನ ಚರ್ಚಿನ ಬಾಂಧವ್ಯ ಬೆಳೆಯುತ್ತಿದೆ. ಒಮ್ಮೆ ಚರ್ಚಿನ ವ್ಯವಸ್ಥೆಯಿಂದ ಹೊರಬಂದ ಮೆಥಡಿಸ್ಟರ ಪುನರ್ಮಿಲನಕ್ಕಾಗಿ ಬಂದಿರುವ ಸಲಹೆಗಳ ಪರಿಶೀಲನೆ ನಡೆಯುತ್ತಿದೆ.
ಕ್ರೈಸ್ತಮತದ ಮೂಲಭೂತ ತತ್ತ್ವಗಳು ಕೇವಲ ಕೆಲವೇ ಆದ್ದರಿಂದ ಅವನ್ನು ಇಂಗ್ಲೆಂಡಿನ ಚರ್ಚಿನ ಎಲ್ಲರೂ ಒಪ್ಪುತ್ತಾರೆ. ಅಷ್ಟೇನೂ ಅಮುಖ್ಯವಲ್ಲದ ಉಳಿದ ಅನೇಕ ಅಂಶಗಳು ಅವರವರ ಅಭಿಪ್ರಾಯಗಳಿಗೆ ಸಂಬಂಧಪಟ್ಟವಾದ್ದರಿಂದ ಆ ಬಗ್ಗೆ ಇರುವ ಭಿನ್ನತೆಗಳ ಬಗ್ಗೆ ಸಹನೆಯಿದೆ. ಚರ್ಚ್ ವ್ಯವಸ್ಥೆಯಲ್ಲಿ ಭಿನ್ನತೆಗೆ ಎಡೆ ಕೊಟ್ಟಿದ್ದ ಉನ್ನತ, ಅವನತ ಹಾಗೂ ವಿಶಾಲ ಶಾಖೆಗಳವರೆಲ್ಲ ಈ ಸಂಸ್ಥೆಯ ರಕ್ಷೆಯಲ್ಲಿ ಒಂದಾಗಿ ಬಾಳುತ್ತಿದ್ದಾರೆ.
ಇಂಗ್ಲೆಂಡಿನ ಚರ್ಚಿನ ವ್ಯಾಪ್ತಿಗೊಳಪಟ್ಟ ಕ್ಷೇತ್ರವನ್ನು ಎರಡು ಪ್ರಾಂತ್ಯಗಳಾಗಿ ವಿಂಗಡಿಸಿದೆ. ಕ್ಯಾಂಟರ್ಬರಿ ಪೀಠದ ವ್ಯಾಪ್ತಿಯಲ್ಲಿ 29 ಮಠಗಳೂ ಯಾರ್ಕ್ ಪೀಠದ ವ್ಯಾಪ್ತಿಯಲ್ಲಿ 14 ಮಠಗಳೂ ಇವೆ (ಕ್ಯಾಥೊಲಿಕರು; ಕ್ರೈಸ್ತಮತ, ಪ್ರಾಟೆಸ್ಟೆಂಟರು).