ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇದ್ರಿಸಿ
ಇದ್ರಿಸಿ ಸು. 1100-1166. ಪೂರ್ಣ ಹೆಸರು ಅಬು ಅಬ್ದುಲ್ಲಾ ಮಹಮದ್ ಇಬ್ನ್ ಮಹಮದ್ ಅಷ್‍ರೀಷ್ ಅಲ್ ಇದ್ರಿಸಿ. ಅರಬ್ಬೀ ಭೂಗೋಳ ಶಾಸ್ತ್ರಜ್ಞ, ವಿಜ್ಞಾನಿ, ಕವಿ. ಈತ ಸೀಟಾ ಎಂಬಲ್ಲಿ ಜನಿಸಿದನೆಂದು ಇತ್ತೀಚೆಗೆ ಹೇಳಲಾಗಿದೆಯಾದರೂ ಹೀಗೆಂದು ನಿಷ್ಕರ್ಷೆಯಾಗಿಲ್ಲ. ಈತ ಕಾರ್ಡೋಬದಲ್ಲಿ ವಿದ್ಯಾರ್ಜನೆ ಮುಗಿಸಿ ಸ್ಪೇನ್, ಉತ್ತರ ಆಫ್ರಿಕ, ಏಷ್ಯಾ ಮೈನರ್‍ಗಳಲ್ಲಿ ಪರ್ಯಟನೆ ಮಾಡಿದ. ಸಿಸಿಲಿಯ ಎರಡನೆಯ ರೋಜರ್ ಈತನನ್ನು ಗೌರವಿಸಿ ಆಗ ಗೊತ್ತಿದ್ದ ಪ್ರಪಂಚದ ಬಗ್ಗೆ ವಿವರಣ ಗ್ರಂಥವೊಂದನ್ನು ರಚಿಸುವ ಕೆಲಸವನ್ನು ಈತನಿಗೆ ವಹಿಸಿಕೊಟ್ಟ. ಈ ಕೆಲಸವನ್ನು ಇದ್ರಿಸಿ ಸುಮಾರು ಹದಿನೈದು ವರ್ಷಗಳ ಅವಧಿಯಲ್ಲಿ ಮುಗಿಸಿದ. ಈ ಗ್ರಂಥದ ಹೆಸರು ನುಜಾಹತ್ ಲಾ ಮುಸ್ತಾಕಷ್ಕಿ ತೀಕಲಾ ಅಪ್ಕ. ಇದನ್ನು ಸಾಮಾನ್ಯವಾಗಿ ರೋಜರನ ಪುಸ್ತಕ (ಕಿತಾಬ್ ರೋಜರ್) ಎಂದು ಹೇಳಲಾಗುತ್ತದೆ. ರೋಜರನ ಪುಸ್ತಕದಲ್ಲಿ ಭೂಮಿಯನ್ನು ಗ್ರೀಕ್ ಭೂಗೋಳ ಶಾಸ್ತ್ರಜ್ಞರು ವಿಂಗಡಿಸಿದ್ದ ಏಳು ವಾಯುಗುಣಗಳಿಗೆ ಅನುಗುಣವಾಗಿ ವಿಭಾಗಿಸಿದೆ. ಸಮಭಾಜಕ ವೃತ್ತದಿಂದ ಪ್ರಾರಂಭವಾಗಿ ಶೀತಪ್ರದೇಶದ ವರೆಗೂ ಇರುವ ನೆಲ ಈ ವಿಭಾಗಕ್ಕೆ ಒಳಪಟ್ಟಿದೆ. ಇದರ ಪ್ರತಿಯೊಂದು ಭಾಗವನ್ನೂ ಸಮಾನಾಂತರ ಲಂಬರೇಖೆಗಳಿಂದ ಹತ್ತು ಉಪವಿಭಾಗಗಳನ್ನಾಗಿ ಮಾಡಿದೆ. ಈ ವಿಭಾಗಗಳನ್ನು ಪಶ್ಚಿಮದಿಂದ ಪೂರ್ವದ ಕಡೆಗೆ ಎಣಿಸಲಾಗಿದೆ. ಒಂದಕ್ಕೊಂದು ಹೊಂದಾಣಿಕೆ ಇಲ್ಲದ ಅಂಶಗಳನ್ನೆಲ್ಲ ಈ ಪುಸ್ತಕದ ಜೋಡಣೆಯಲ್ಲಿ ನಿರ್ಲಕ್ಷಿಸಲಾಗಿದೆ. ಕೆಲವು ಪುರಾಣಗಳಲ್ಲಿ ಬರುವ ಗೋಗ್ ಮತ್ತು ಮಗೋಗ್ ಭೂಮಿ, ವಿಸ್ಮಯ ರೋಮ್ ಹಾಗೂ ಸೇಂಟ್ ಬ್ರಾಂಡನ್ ದ್ವೀಪಗಳ ವಿವರಣೆಯನ್ನು ಈ ಪುಸ್ತಕದಲ್ಲಿ ಕೊಡಲಾಗಿದೆ. ಪುಸ್ತಕದಲ್ಲಿ ಗಣಿತ ಹಾಗೂ ವಿವರಣೆಯ ತಪ್ಪುಗಳಿರುವುದು ಸಹಜ. ಇದರಲ್ಲಿರುವ ಭೂಪಟಗಳು ಚಿಕ್ಕವಾದರೂ ಲೇಖಕನಿಗೆ ಗೊತ್ತಿರುವ ಪ್ರದೇಶಗಳನ್ನು ಬಹು ಸ್ಟಷ್ಟವಾಗಿ ತೋರಿಸಲಾಗಿದೆ. ಪೀಠಿಕೆಯಲ್ಲಿ ಲೇಖಕನಿಗೆ ಉಪಯುಕ್ತವಾದ ಮೂಲ ಲೇಖನಗಳನ್ನು ನಮೂದಿಸಲಾಗಿದೆ. ಇಲ್ಲಿ ಟಾಲಮಿ ಮತ್ತು ಒರೊಸಿಯಸರನ್ನು ಬಿಟ್ಟು ಇನ್ನಾವ ಐರೋಪ್ಯ ಲೇಖಕರನ್ನೂ ನಮೂದಿಸಿಲ್ಲ. ಇದ್ರಿಸಿ ತನ್ನ ಕೃತಿಯಲ್ಲಿ ಮಸೂದಿ ಮತ್ತು ಇಬ್ನ್ ಹೌಕಾಲರು ಅರಬ್ಬೀ ದೇಶದ ಮುಖ್ಯ ಅಧಿಕಾರಿಗಳೆಂದು ತಿಳಿಸಿದ್ದಾನೆ. ಆದರೆ ಇವನಿಗೆ ಬಿರೂನಿ ಅಥವಾ ಮಕ್‍ದಿಸಿ ಬಹುಶಃ ಗೊತ್ತಿಲ್ಲವೆಂದು ಕಂಡುಬರುತ್ತದೆ. ಇದ್ರಿಸಿ ತನ್ನ ಪುಸ್ತಕಗಳಲ್ಲಿ ಕೊಟ್ಟಿರುವ ಹೆಚ್ಚು ವಿಷಯಗಳನ್ನು ಪ್ರಯಾಣಿಕರ ವರದಿ ಹಾಗೂ ರೋಜರನ ರಾಜ್ಯದ ಅಧಿಕಾರಿಗಳ ದಾಖಲೆಗಳಿಂದ ಆರಿಸಿದ್ದಾನೆ. ಇಲ್ಲಿಯ ಸಿಸಿಲಿಯ ವರ್ಣನೆ ವಿವರವಾಗಿದ್ದರೂ ಅದರಲ್ಲಿ ಭೂಗೋಳದ ಅಂಶಕ್ಕಿಂತ ಇತಿಹಾಸದ ಅಂಶವೇ ಹೆಚ್ಚಾಗಿ ಕಂಡುಬಂದಿದೆ. ಇದನ್ನು ಸಮುದ್ರಯಾತ್ರಿಕರ ಬರೆಹದ ಆಧಾರದ ಮೇಲೆ ರಚಿಸಲಾಗಿದೆ. ಇದರಲ್ಲಿ ಭೌಗೋಳಿಕ ಭಾಗಗಳ ಲಕ್ಷಣ, ರೋಮ್, ಸಿಸಿಲಿ, ಇಟಲಿ, ಗರೀಸ್, ಪ್ರಾಚ್ಯ, ಬ್ರಿಟನ್ ದೇಶಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಬೆಳ್ಳಿಯ ಭೂಗೋಳವನ್ನೂ ಪ್ಲಾನಿಸ್ಪಿಯರ್ ಎಂಬ ಉಪಕರಣವನ್ನೂ ಈತ ರಚಿಸಿದ. ವಿಲಿಯಂ ದಿ ಬ್ಯಾಡ್‍ನ ಬಗ್ಗೆ ಈತ ಬರೆದ ಕೆಲವು ಟೀಕೆಗಳು ನಾಶವಾಗಿವೆ. ಸಸ್ಯಶಾಸ್ತ್ರ ಹಾಗೂ ವೈದ್ಯಶಾಸ್ತ್ರದ ಬಗ್ಗೆ ಈತ ಬರೆದ ಕೆಲವು ಲಿಪಿಗಳನ್ನು ಇಸ್ತಾನ್ ಬುಲ್‍ನಲ್ಲಿ ಇಡಲಾಗಿದೆ. ಈತ ಬರೆದ ಪುಸ್ತಕದ ಕೆಲವು ಭಾಗಗಳನ್ನು ಆಕ್ಸ್‍ಫರ್ಡ್, ಪ್ಯಾರಿಸುಗಳಲ್ಲಿನ ಗ್ರಂಥಾಲಯಗಳಲ್ಲಿ ಇಡಲಾಗಿದೆ. ಈತನ ಭೂಪಟಶಾಸ್ತ್ರ ಯೂರೋಪಿನ ಮೇಲೆ ಹೆಚ್ಚು ಪ್ರಭಾವ ಬೀರದಿದ್ದರೂ ಮಾರಿನೋ-ಸನುಡೂ ಮತ್ತು ಪಿಯೆತ್ರೊ ವೈಕಾಂಟಿ ರಚಿಸಿದ ಭೂಪಟದ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಆಫ್ರಿಕ ಪಶ್ಚಿಮದ ಕಡೆಗೆ ಬೆಳೆದು ಹಿಂದೂ ಮಹಾಸಾಗರದ ದಕ್ಷಿಣ ಭಾಗವನ್ನು ಸೇರಿದೆಯೆಂದು ಟಾಲಮಿಯಂತೆ ಈತನೂ ನಂಬಿದ್ದ. ಮಡೀರ ಮತ್ತು ಕೆನರೀಗಳ ಸಮುದ್ರಯಾನ ಕುರಿತ ಈತನ ವಿವರಣೆಯಿಂದ ಅಟ್ಲಾಂಟಿಕ್ ಸಾಗರದ ಅನ್ವೇಷಣೆಗೆ ದಾರಿಯಾಯಿತೆಂದು ನಂಬಲಾಗಿದೆ. ಈತನ ಜೀವನಚರಿತ್ರೆಯ ಕುರುಹುಗಳು ಅರಬ್ಬೀದೇಶಗಳ ಇತಿಹಾಸ ಸಾಮಗ್ರಿಯಲ್ಲಿ ಕಂಡುಬರುವುದಿಲ್ಲ. 1161ರ ಮುಸ್ಲಿಂ ವಿರುದ್ಧ ದಂಗೆಯ ಬಳಿಕ ಈತ ಸಿಸಿಲಿಯಲ್ಲಿದ್ದದ್ದು ಅಸಂಭವವಾದರೂ ತನ್ನ ಅಂತಿಮ ಕಾಲದಲ್ಲಿ ಈತ ಎಲ್ಲಿದ್ದನೆಂಬುದಾಗಲಿ, ಯಾವಾಗ ಮರಣ ಹೊಂದಿದನೆಂಬುದಾಗಲಿ ಸ್ಪಷ್ಟವಾಗಿಲ್ಲ.
(ಬಿ.ಜೆ.ಎನ್.)