ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಬ್ನ್‌ಬತೂತ್

ವಿಕಿಸೋರ್ಸ್ ಇಂದ
Jump to navigation Jump to search

ಇಬ್ನ್‍ಬತೂತ್ 1304-1368. ಹದಿನಾಲ್ಕನೆಯ ಶತಮಾನದ ಪ್ರಸಿದ್ಧ ಮುಸ್ಲಿಂ ಪ್ರವಾಸಿ. ಪೂರ್ಣ ಹೆಸರು ಇಬ್ನ್ ಬತೂತ ಅಬು ಅಬ್ದುಲ್ಲಾ ಮೊಹಮ್ಮದ್. ಆಫ್ರಿಕದ ಟ್ಯಾಂಜೀರ್‍ನಲ್ಲಿ ಈತ ಹುಟ್ಟಿದ. 1325-1354ರ ಕಾಲವನ್ನು ಪ್ರವಾಸದಲ್ಲೇ ಕಳೆದ. ಆಫ್ರಿಕದ ನೈಜರ್ ನದಿಯಿಂದ ಹಿಡಿದು ಚೀನದ ತುದಿಯವರಗೆ ಸುತ್ತಾಡಿದ. ಮೆಕ್ಕಾ ಯಾತ್ರೆಯಿಂದ ಆರಂಭಿಸಿ ಪರ್ಷಿಯ, ಮೆಸೊಪೊಟೇಮಿಯ, ಅರೇಬಿಯ, ಆಫ್ರಿಕದ ಪೂರ್ವ ಕರಾವಳಿ, ಏಷ್ಯಮೈನರ್, ಕ್ಯಾಸ್ಪಿಯನ್ ಪ್ರದೇಶ. ಆಫ್ಘಾನಿಸ್ತಾನ, ಭಾರತ, ಸಿಂಹಳ, ಸುಮಾತ್ರ, ಚೀನ, ಸ್ಪೇನ್, ಟಿಂಬಕ್ಟೂ ಮುಂತಾದವನ್ನೆಲ್ಲ ಕುತೂಹಲದ ಕಣ್ಣುಗಳಿಂದ ಸಂದರ್ಶಿಸಿದ. ಹೀಗೆ ಒಟ್ಟು ಸುಮಾರು 75,000 ಮೈಲಿಗಳಷ್ಟು ಪ್ರವಾಸ ಮಾಡಿ ಕೊನೆಗೆ 1354ರಲ್ಲಿ ಮೊರಾಕೊ ದೇಶದ ಫೆಜ್óಗೆ ಮರಳಿ ಬಂದ. ಅಲ್ಲಿಯೇ ನೆಲೆಸಿದ. ತನ್ನ ಪ್ರವಾಸದ ದೀರ್ಘಕಥನ ರಚಿಸಿದ. ಸ್ವಂತ ಅನುಭವಗಳ ಐತಿಹ್ಯಗಳೇ ಕಿಕ್ಕಿರಿದುಂಬಿರುವ ಈ ಕಥನದಲ್ಲಿ ಅಲ್ಲಲ್ಲಿ ಹಾಸ್ಯವೂ ವರ್ಣನೆಯೂ ಕಂಗೊಳಿಸುತ್ತವೆ. ಆ ಕಾಲದಲ್ಲಿ ತಾನು ಸಂದರ್ಶಿಸಿದ ನಾನಾ ದೇಶದ ಆಗುಹೋಗುಗಳನ್ನೆಲ್ಲ ಕಂಡಂತೆ ಈತ ಬಣ್ಣಿಸಿದ್ದಾನೆ. ಚರಿತ್ರಕಾರರಿಗಂತೂ ಇದು ಬಹು ಉಪಯುಕ್ತ ಗ್ರಂಥ. (ಎಸ್.ಎನ್.)

ಉದಾಹರಣೆಗೆ, ಆಗಿನ ಕಾಲದಲ್ಲಿ ಹಿಂದೂಗಳಲ್ಲಿ ಜಾರಿಯಲ್ಲಿದ್ದ ಸತಿಪದ್ಧತಿಯನ್ನು ಕುರಿತು ಈತ ಬರೆದಿರುವ ಭಾಗವನ್ನು ಕೊಡಬಹುದು: "ಎರಡು ದಿವಸಗಳಾದ ಮೇಲೆ ನಾವು ಅಜೂಧಾನ್ (ಪಕಟ್ಟನ್) ಎಂಬ ಸಣ್ಣ ಊರಿಗೆ ಬಂದೆವು. ಇಲ್ಲಿ ಹಿಂದೂ ಸ್ತ್ರೀಯೊಬ್ಬಳು ಸತ್ತ ಗಂಡನೊಡನೆ ಸಹಗಮನ ಮಾಡುವುದನ್ನು ನೋಡಿದೆವು. ಗಂಡನ ಶವವನ್ನು ಹೆಂಡತಿ ತಬ್ಬಿಕೊಂಡು ಆಕೆ ಚಿತೆಯಲ್ಲಿ ಭಸ್ಮವಾದಳು. ಹಿಂದೂ ಸ್ತ್ರೀಯರು ಈ ರೀತಿ ಮಾಡಿದುದನ್ನು ಆಮೇಲೆ ಅನೇಕ ಸಲ ನೋಡಿದ್ದೇನೆ. ಚಿತೆಯನ್ನೇರುವ ಹಿಂದೂ ಸ್ತ್ರೀ ಅಲಂಕಾರ ಮಾಡಿಕೊಂಡು ಕುದುರೆಯ ಮೇಲೆ ಹೊರಡುತ್ತಾಳೆ. ಅವಳನ್ನು ಮುಸಲ್ಮಾನರೂ ಹಿಂದುಗಳೂ ತಾಳಮೇಳ ಸಮೇತ ಹಿಂಬಾಲಿಸುತ್ತಾರೆ. ಹಿಂದೂಗಳ ಮುಖ್ಯಸ್ಥರಾದ ಬ್ರಾಹ್ಮಣರು ಅವಳೊಡನೆ ಇರುತ್ತಾರೆ. ಆಕೆಯನ್ನು ನೋಡಬೇಕಾದರೆ ಸುಲ್ತಾನನ ಅಪ್ಪಣೆ ಪಡೆಯಬೇಕು. ಸುಲ್ತಾನನು ಅಪ್ಪಣೆ ಕೊಡುತ್ತಾನೆ. ಗಂಡ ಸತ್ತ ಮೇಲೆ ಹೆಂಡತಿ ಚಿತೆಯಲ್ಲಿ ಬೀಳುವುದು ಬಹಳ ಮೆಚ್ಚಿನ ಕೆಲಸವೆಂದು ಭಾವಿಸುತ್ತಾರೆ. ಆದರೆ ಬಲಾತ್ಕಾರವಿಲ್ಲ. ವಿಧವೆಯಾದವಳು ಈ ರೀತಿ ದಹನಮಾಡಿ ಕೊಂಡರೆ ಆಕೆಯ ಮನೆತನದ ಹೆಸರು ಹೆಚ್ಚುತ್ತದೆಯಲ್ಲದೆ. ಆಕೆ ಪತಿವ್ರತೆಯೆಂಬ ಹೆಸರನ್ನೂ ಪಡೆಯುತ್ತಾಳೆ. ಹೀಗೆ ದಹನಮಾಡಿಕೊಳ್ಳದವಳು ಒರಟು ಬಟ್ಟೆಗಳನ್ನು ಧರಿಸಿ ತನ್ನ ಮನೆಯರೊಡನೆ ನೆರೆಹೊರೆಯವರ ಚುಚ್ಚುಮಾತುಗಳಿಗೊಳಗಾಗಿ ಕಷ್ಟದಲ್ಲಿ ಬಾಳಬೇಕಾಗುತ್ತದೆ.

"ಒಮ್ಮೆ ನಾನು ಆಮ್‍ಜಾರಿ (ಅಮ್ಧೇರ: ಇದು ಧಾರ್ ಬಳಿ ಇದೆ) ಎಂಬ ಪಟ್ಟಣದ ಬಳಿ ಯುದ್ಧದಲ್ಲಿ ಸತ್ತ ಮೂವರು ಯೋಧರ ಹೆಂಡತಿಯರು ದಹನ ಮಾಡಿಕೊಳ್ಳಲು ಹೊರಟಿದ್ದನ್ನು ಕಂಡೆ. ಅವರು ಅಲಂಕಾರ ಮಾಡಿಕೊಂಡು ಸುಗಂಧ ದ್ರವ್ಯಗಳನ್ನು ಪೂಸಿಕೊಂಡು ಕುದುರೆಗಳನ್ನೇರಿದರು. ಒಂದು ಕೈಯಲ್ಲಿ ಒಂದು ತೆಂಗಿನಕಾಯಿ : ಇನ್ನೊಂದು ಕೈಯಲ್ಲಿ ಕನ್ನಡಿ. ತೆಂಗಿನಕಾಯನ್ನು ಕೈಯಲ್ಲಿ ಆಡಿಸುತ್ತ ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳುತ್ತ ಹೊರಟರು. ಸುತ್ತಮುತ್ತ ವಾದ್ಯಗಳ ಜಯಘೋಷವಾಗುತ್ತಿತ್ತು. ನೆಂಟರಿಷ್ಟರೂ ಬ್ರಾಹ್ಮಣರೂ ಅವರನ್ನು ಹಿಂಬಾಲಿಸುತ್ತಿದ್ದರು. ಪ್ರತಿಯೊಬ್ಬ ಹಿಂದುವೂ ಅವರನ್ನು ಕುರಿತು ನಮ್ಮ ಅಪ್ಪ ಅಮ್ಮನಿಗೆ ನಮಸ್ಕಾರ ಹೇಳು. ನನ್ನ ಸ್ನೇಹಿತನಿಗೆ ನಮ್ಮ ಯೋಗಕ್ಷೇಮ ತಿಳಿಸು ಎಂದು ಹೇಳುತ್ತಿದ್ದರು. ಇವರು ಹೇಗೆ ದಹನಮಾಡಿಕೊಳ್ಳುತ್ತಾರೆಂಬುದನ್ನು ನೋಡಲು ನಾನೂ ನನ್ನ ಜತೆಗಾರರೂ ಹೋದೆವು. ಮೂರು ಮೈಲಿ ಹೋದ ಮೇಲೆ ಯಥೇಚ್ಛವಾಗಿ ನೀರೂ ನೆರಳೂ ಇರುವ ಸ್ಥಳದಲ್ಲಿ ನಾಲ್ಕು ವೇದಿಕೆಗಳಿದ್ದುದನ್ನು ನೋಡಿದೆವು. ಪ್ರತಿಯೊಂದರ ಮೇಲೂ ಕಲ್ಲಿನ ವಿಗ್ರಹಗಳಿದ್ದುವು. ವೇದಿಕೆಗಳ ಬಳಿ ಇದ್ದ ಕೊಳಗಳಲ್ಲಿ ನೀರು ತುಂಬಿತ್ತು. ಸೂರ್ಯರಶ್ಮಿಯೂ ಬೀಳದಷ್ಟು ಒತ್ತಾಗಿದ್ದ ಆ ನೆರಳಿನಲ್ಲಿ ಆ ಸ್ಥಳ ನರಕದಂತೆ ಕಾಣುತ್ತಿತ್ತು. ದೇವರೇ ! ನಮ್ಮನ್ನು ಆ ನರಕದಿಂದ ಪಾರುಮಾಡು ! ಈ ವೇದಿಕೆಗಳ ಬಳಿ ಹೋದಮೇಲೆ ಸ್ತ್ರೀಯರು ಕೊಳದಲ್ಲಿ ಇಳಿದು ನೀರಿನಲ್ಲಿ ಮುಳುಗಿ ಸ್ನಾನ ಮಾಡಿದರು. ತಮ್ಮ ಮೈಮೇಲಿದ್ದ ಬಟ್ಟೆಬರೆಗಳನ್ನೂ ಒಡವೆಗಳನ್ನೂ ಕಳಚಿ ದಾನ ಮಾಡಿದರು. ಅನಂತರ ಹೊಲಿಯದೆ ಇದ್ದ ಒಂದು ಬಟ್ಟೆಯನ್ನು ತೆಗೆದುಕೊಂಡು ಮೈಗೆ ಸುತ್ತಿಕೊಂಡರು. ವೇದಿಕೆಗಳ ಮಧ್ಯೆ ತೋಡಿದ್ದ ಗುಂಡಿಗಳಲ್ಲಿ ಬೆಂಕಿ ಉರಿಯುತ್ತಿತ್ತು. ಎಳ್ಳೆಣ್ಣೆಯನ್ನು ಸುರಿದು ಉರಿಯನ್ನು ಹೆಚ್ಚಿಸುತ್ತಿದ್ದರು. ಇಪ್ಪತ್ತೈದು ಜನ ಈ ಕುಂಡಗಳ ಬಳಿ ಸಣ್ಣ ಸಣ್ಣ ಕಟ್ಟಿಗೆಗಳನ್ನೂ ದೊಡ್ಡ ದೊಡ್ಡ ಮರದ ತುಂಡುಗಳನ್ನೂ ಹಿಡಿದು ನಿಂತಿದ್ದರು. ವಾದ್ಯಘೋಷ ಸಾಗುತ್ತಿತ್ತು. ಸ್ತ್ರೀಯರಿಗಾಗಿ ಕಾಯುತ್ತಿದ್ದರು. ಅವರಿಗೂ ಬೆಂಕಿಗೂ ಮಧ್ಯ ಗಂಡಸರು ಒಂದು ಪರದೆ ಹಿಡಿದು ನಿಂತಿದ್ದರು-ಸ್ತ್ರೀಯರು ಬೆಂಕಿಯನ್ನು ನೋಡಿ ಹೆದರಿಕೊಳ್ಳದಿರಲಿ ಎಂದು. ಸ್ತ್ರೀಯರಲ್ಲಿ ಒಬ್ಬಳು ಪರದೆಯ ಬಳಿಗೆ ಬಂದು ಅದನ್ನು ಕಿತ್ತು ಬಿಸಾಡಿ ನಗುತ್ತಾ ನಾನು ಬೆಂಕಿಗೆ ಹೆದರುವೆನೆಂದು ಭಾವಿಸಿದಿರಾ? ಅದು ಬೆಂಕಿ ಎಂದು ನನಗೆ ಗೊತ್ತು. ನನ್ನ ಪಾಡಿಗೆ ನನ್ನನ್ನು ಬಿಡಿ ! ಎಂದು ಹೇಳಿ ಆಕೆ ತನ್ನ ಕೈಗಳನ್ನು ಜೋಡಿಸಿ ಬೆಂಕಿಗೆ ವಂದಿಸಿ ಕುಂಡದೊಳಗೆ ದುಮುಕಿದಳು. ಅದೇ ಗಳಿಗೆಯಲ್ಲಿ ತಾಳ ಮದ್ದಳೆಗಳನ್ನು ಬಾರಿಸಿದರು; ತುತ್ತುರಿಗಳನ್ನು ಊದಿದರು. ಗಂಡಸರು ತಮ್ಮ ಕೈಯಲ್ಲಿದ್ದ ಸಣ್ಣ ಕಟ್ಟಿಗೆಗಳನ್ನೂ ಅನಂತರ ದೊಡ್ಡ ದೊಡ್ಡ ತುಂಡುಗಳನ್ನೂ ಅಕೆಯ ಮೇಲೆ ಹಾಕಿದರು-ಆಕೆ ಅಲುಗಾಡದಿರುವಂತೆ. ನೆರೆದಿದ್ದ ಜನರು ಜೈಜೈಕಾರ ಮಾಡಿದರು. ಇದನ್ನು ನೋಡುತ್ತಿದ್ದ ನಾನು ಜ್ಞಾನತಪ್ಪಿ ಕುದುರೆಯಿಂದ ಬೀಳುವುದರಲ್ಲಿದ್ದೆ. ಅಷ್ಟರೊಳಗೆ ನನ್ನ ಜೊತೆಗಾರರು ನೀರು ತಂದು ನನ್ನ ಮುಖಕ್ಕೆ ಎರಚಿ ನನಗೆ ಪ್ರಜ್ಞೆ ಬರುವಂತೆ ಮಾಡಿದರು".