ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಷರ್ವುಡ್, ಕ್ರಿಸ್ಟಫರ್ ವಿಲಿಯಂ ಬ್ರಾಡ್ ಷಾ

ವಿಕಿಸೋರ್ಸ್ದಿಂದ

ಇಷರ್‍ವುಡ್, ಕ್ರಿಸ್ಟಫರ್ ವಿಲಿಯಂ ಬ್ರಾಡ್ ಷಾ (1904-1989). ಇಂಗ್ಲಿಷ್ ಕಾದಂಬರಿಕಾರ. ಜನನ ಇಂಗ್ಲೆಂಡಿನ ಚೆಷೈರ್ ಪ್ರಾಂತ್ಯದ ಡಿಸ್ಲಿಯಲ್ಲಿ, 1904ರಲ್ಲಿ ಶಿಕ್ಷಣ ಕೇಂಬ್ರಿಜಿನ ಕಾರ್ಪಸ್ ಕ್ರಿಸ್ಟಿಯಲ್ಲಿ ಮುಂದೆ (1928-29) ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ವೈದ್ಯಶಾಸ್ತ್ರಾಭ್ಯಾಸ. ಇದೇ ಕಾಲದಲ್ಲಿ (1928) ಈತನ ಕಾದಂಬರಿ ಆಲ್ ದಿ ಕಾನ್ಸ್ಪಿರೇಟರ್ಸ್ ಪ್ರಕಟವಾಯಿತು. ದಿ ಮೆಮೋರಿಯಲ್ ಬೆಳಕು ಕಂಡಿದ್ದು 1932ರಲ್ಲಿ. 1946ರಲ್ಲಿ ಅಮೆರಿಕದ ಪ್ರಜೆಯಾದ. (ಎಚ್.ಎ.ಎಸ್.)

ಮಿಸ್ಟರ್ ನಾರಿಸ್ ಛೇಂಜಸ್ ಟ್ರೇನ್ಸ (1935) ಮತ್ತು ಗುಡ್‍ಬೈ ಟು ಬರ್ಲಿನ್ (1939) ಕೃತಿಗಳಿಂದ ಇಷರ್‍ವುಡ್ ಪ್ರಸಿದ್ಧನಾದ. ಆರ್ಥಿಕ ಮುಗ್ಗಟ್ಟಿನ ಅನಂತರದ, ಹಿಟ್ಲರ್ ಪೂರ್ವಕಾಲದ ಬರ್ಲಿನ್ ನಗರದಲ್ಲಿ (1930-33) ಇಷರ್‍ವುಡ್ ಇಂಗ್ಲಿಷ್ ಬೋಧಕನಾಗಿದ್ದಾಗ ಗಳಿಸಿದ ಅನುಭವದ ಆಧಾರದ ಮೇಲೆ ಈ ಎರಡು ಕಾದಂಬರಿಗಳೂ ರಚಿತವಾಗಿವೆ. ನಾನೊಂದು ಕ್ಯಾಮೆರ, ಮುಚ್ಚಳ ತೆರೆದ ಕ್ಯಾಮೆರ; ನಡೆಯುತ್ತಿರುವ ಸಮಸ್ತಕ್ಕೂ ಸಾಕ್ಷೀಭೂತ; ನಿರ್ಲಿಪ್ತ; ಗ್ರಹಿಸುವುದಷ್ಟೇ ನನ್ನ ಕೆಲಸ; ಯೋಚಿಸುವುದಲ್ಲ-ಎಂದು ಹೇಳಿಕೊಂಡಿರುವ ಇಷರ್‍ವುಡ್ ತನ್ನ ಈ ಕೃತಿಗಳಲ್ಲಿ ಆ ಕಾಲದ ಜರ್ಮನಿಯ-ಒಟ್ಟಿನಲ್ಲಿ ಇಂಥ ಎಲ್ಲ ಸಮಾಜಗಳ-ಪತನದ ಚಿತ್ರ ನೀಡಿದ್ದಾನೆ. ಸಾಯುತ್ತಿದ್ದ ನಗರವೊಂದರ ಕ್ಷೋಭೆ ದುರಂತಗಳನ್ನೂ ಭ್ರಷ್ಟಜನರ ಬಂಡಾಟಗಳನ್ನೂ ಕೆಳದರ್ಜೆಯ ವಸತಿಗಳಲ್ಲಿನ ಹೀನದೀನ ಜೀವನವನ್ನೂ ಆ ಜನರ ಲೈಂಗಿಕ ಸಮಸ್ಯೆಗಳನ್ನೂ ಕಣ್ಣಾರೆ ಕಂಡಂತೆ ಬಣ್ಣಿಸಿದ್ದಾನೆ.

ಇಷರ್‍ವುಡ್ ವಿದ್ಯಾರ್ಥಿಯಾಗಿದ್ದಾಗ ತನ್ನ ಗೆಳೆಯನಾಗಿದ್ದ ಆಡೆನ್ ಕವಿಯೊಂದಿಗೆ ಕೂಡಿ ಮೂರು ಗದ್ಯ ಪದ್ಯ ನಾಟಕ ಬರೆದ. ಅಂದಿನ ರಾಜಕೀಯ ಅನುರಣವೇ ತುಂಬಿರುವ ಈ ನಾಟಕಗಳಲ್ಲಿ ಇವರು ಅಭಿವ್ಯಕ್ತಿ (ಎಕ್ಸ್ಟ್ರೆಷನಿಸ್ಟ್) ವಿಧಾನವನ್ನವಲಂಬಿಸಿದ್ದಾರೆ. ಆಡನ್ 'ಪೊಯ್‍ಟ್ರಿ ಆಫ್ ಆಕ್ಷನ್ ಅನ್ನು ಸೃಷ್ಟಿಸಿದ. ಇದಕ್ಕೆ ಇಷರ್‍ವುಡ್ ನಾಟಕ ಸ್ವರೂಪವನ್ನು ಕೊಟ್ಟ. ಸಂಗೀತಮಾರ್ಗವನ್ನೂ ಪ್ರತೀಕ ಪದ್ಧತಿಯನ್ನೂ ಅಳವಡಿಸಿಕೊಂಡು ಧ್ವನಿಯುಕ್ತವಾಗಿರುವ ನಾಟಕಗಳು ಅಂದಿನ ವಸ್ತುಸ್ಥಿತಿಗೂ ಆದರ್ಶಗಳಿಗೂ ನಡುವಣ ಘರ್ಷಣೆಯನ್ನೂ ಬಹಳ ಪರಿಣಾಮಕಾರಿಯಾಗಿ ಎತ್ತಿ ತೋರಿಸುತ್ತವೆ. ದಿ ಡಾಗ್ ಬಿನೀತ್ ದಿ ಸ್ಕಿನ್ (1935), ದಿ ಅಸೆಂಟ್ ಆಫ್ ಎಫ್ 6 (1937), ಆನ್ ದಿ ಫ್ರಾಂಟಿಯರ್ (1938) ಇವರ ನಾಟಕಗಳು.

ಇಷರ್‍ವುಡ್ 1938ರಲ್ಲಿ ಆಡೆನ್ನನೊಂದಿಗೆ ಚೀನದಲ್ಲಿ ಪ್ರವಾಸ ಮಾಡಿದ ; ಈತ ಜರ್ನಿ ಟು ಎ ವಾರ್ ಎಂಬುದನ್ನು ಬರೆದದ್ದು 1939ರಲ್ಲಿ. ಅನಂತರ 1940ರಲ್ಲಿ ಕ್ಯಾಲಿಪೋರ್ನಿಯಕ್ಕೆ ಹೋಗಿ ಅಲ್ಲಿ ಮೆಟ್ರೋ-ಗೋಲ್ಡ್ ವಿನ್-ಮೇಯರ್ ಚಲನಚಿತ್ರ ಸಂಸ್ಥೆಗಾಗಿ ನಾಟಕ ರಚನೆಯ ಕಾರ್ಯ ನಿರ್ವಹಿಸಿದ. 1946ರಲ್ಲಿ ಇಷರ್‍ವುಡ್ ಅಮೆರಿಕದ ಪ್ರಜೆಯಾದ.

ಭಾರತದ ಸನಾತನ ಧರ್ಮ ಸಾಹಿತ್ಯಗಳಲ್ಲಿ ಇಷರ್‍ವುಡ್‍ಗೆ ತುಂಬ ಆಸಕ್ತಿ. ಈತ ಸ್ವಾಮಿ ಪ್ರಭಾವಾನಂದರೊಂದಿಗೆ ಭಗವದ್ಗೀತೆಯನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದಾನೆ (1944). ಶಂಕರಾಚಾರ್ಯರ ವಿವೇಕ ಚೂಡಾಮಣಿಯ ಆಂಗ್ಲ ರೂಪ 1947ರಲ್ಲಿ ಪ್ರಕಟವಾಯಿತು. ಉಪನಿಷದ್ಸ್ ಇವರ ಇನ್ನೊಂದು ಗ್ರಂಥ. ಹೌ ಟು ನೋ ಗಾಡ್ ಮತ್ತು ದಿ ಯೋಗಿ ಅಫಾರಿಸ್‍ಮ್ಸ್ ಆಫ್ ಪತಂಜಲಿ (1953) ಇವು ಈತನ ಇನ್ನೆರಡು ಪುಸ್ತಕಗಳು.

ಫ್ರೆಂಚ್ ಲೇಖಕ ಬೋಡ್‍ಲೇರನ ಇಂಟಿಮೇಟ್ ಜರ್ನಲ್ಸ್ ಎಂಬ ಕೃತಿಯನ್ನು ಇಷರ್‍ವುಡ್ ಇಂಗ್ಲಿಷಿಗೆ ಭಾಷಾಂತರಿಸಿದ್ದಾನೆ (1947). ಪ್ರೇಟರ್ ವೈಯೊಲೆಟ್ (1945). ದಿ ವರ್ಲ್ಡ್ ಇನ್ ದಿ ಈವ್ನಿಂಗ್ (1954) ಮತ್ತು ಮೀಟಿಂಗ್ ಬೈದಿ ರಿವರ್ (1967) ಈತನ ಈಚಿನ ಕಾದಂಬರಿಗಳು. 1938ರಲ್ಲಿ ಈತ ಬರೆದ ಲಯನ್ಸ್ ಅಂಡ್ ಷಾಡೋಸ್ ಆತ್ಮಕಥಾತ್ಮಕವಾಗಿದೆ. (ಪರಿಷ್ಕರಣೆ: ಪ್ರೊ. ಎಲ್. ಎಸ್. ಶೇಷಗಿರಿರಾವ್)