ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉ

ವಿಕಿಸೋರ್ಸ್ದಿಂದ

- ಇದು ಕನ್ನಡ ವರ್ಣಮಾಲೆಯ ಐದನೆಯ ಅಕ್ಷರ. ಅಶೋಕನ ಶಾಸನಗಳಲ್ಲಿನ ಇದರ ರೂಪ ಅತಿ ಪ್ರಾಚೀನವಾದುದು. ಎರಡು ನೇರಗೆರೆಗಳು ಸುಮಾರು 120 ಡಿಗ್ರಿ ಕೋನದಲ್ಲಿ ಸಂಧಿಸಿದಂತೆ ಕಾಣುವ ಈ ರೂಪ ಸು. 300 ವರ್ಷಗಳ ಕಾಲ ಯಾವ ಬದಲಾವಣೆಯೂ ಇಲ್ಲದೆ ಮುಂದುವರಿದಂತೆ ಕಾಣುತ್ತದೆ. ಕದಂಬರ ಕಾಲದಲ್ಲಿ ಗುಂಡಗಾಗುವ ಪ್ರವೃತ್ತಿ ಯನ್ನು ತೋರುತ್ತದೆ. ರಾಷ್ಟ್ರಕೂಟರ ಕಾಲದಲ್ಲಿ ಅಕ್ಷರದ ಕೆಳಭಾಗ ಅಗಲವಾಗುತ್ತದೆ. ಪ್ರ.ಶ. 13ನೆಯ ಶತಮಾನದ ಹೊತ್ತಿಗೆ ಕೆಳಭಾಗ ಎರಡು ಕೊಂಡಿಗಳಂತೆ ಆಗಿ, ಅದೇ ರೂಪ ವಿಜಯನಗರದ ಕಾಲದಲ್ಲೂ ಮುಂದುವರಿಯುತ್ತದೆ. ಪ್ರ.ಶ. 16ನೆಯ ಶತಮಾನದ ಅನಂತರ ಗಮನಾರ್ಹವಾದ ಬದಲಾವಣೆಗಳುಂಟಾಗಿ ಪ್ರ.ಶ. 18ನೆಯ ಶತಮಾನದಲ್ಲಿ, ಈಗಿನ ರೂಪಕ್ಕೆ ಸಮೀಪವಾಗಿರುವಂತೆ ತೋರುತ್ತದೆ. ಆದರೆ ಮೇಲಿರುವ ತಲೆಕಟ್ಟಿನ ಮಾದರಿಯ ರೇಖೆ ಮಾತ್ರ ಉಳಿದುಬರುತ್ತದೆ. ಅನಂತರ ಅದು ಮಾಯವಾಗಿ, ಈಗಿನ ರೂಪವನ್ನು ತಾಳುತ್ತದೆ. ಈ ಅಕ್ಷರ ಪಶ್ಚ ಸಂವೃತ ಗೋಲ ಹ್ರಸ್ವಸ್ವರ ಧ್ವನಿಯನ್ನು ಸೂಚಿಸುತ್ತದೆ. (ಎ.ವಿ.ಎನ್.)