ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಗಾದಿ

ವಿಕಿಸೋರ್ಸ್ದಿಂದ

ಉಗಾದಿ- ವರ್ಷಾರಂಭ. ಯುಗಾದಿ ಎಂಬ ಸಂಸ್ಕೃತ ಪದದ ತದ್ಭವ. ಈ ಹಬ್ಬ ಎಲ್ಲರಿಗೂ ಒಂದೇ ದಿವಸ ಬರುವುದಿಲ್ಲ. ಕಾಲ ದೇಶ ಮತ್ತು ಸಂಪ್ರದಾಯಾನುಗುಣವಾಗಿ ಇದರಲ್ಲಿ ವ್ಯತ್ಯಾಸಗಳಾಗಿವೆ. ಹಿಂದೂಗಳಲ್ಲಿ ವಾಡಿಕೆಯಲ್ಲಿರುವ ವರ್ಷಮಾನಗಳು ಮೂರು: ಬಾರ್ಹಸ್ಪತ್ಯಮಾನ, ಚಾಂದ್ರಮಾನ ಮತ್ತು ಸೌರಮಾನ (ಆಯಾ ಶೀರ್ಷಿಕೆಗಳನ್ನು ನೋಡಿ). ವಿಂಧ್ಯಪರ್ವತಕ್ಕೆ ಉತ್ತರದಲ್ಲಿರುವ ಜನ ಬಾರ್ಹಸ್ಪತ್ಯಮಾನವನ್ನೂ ದಕ್ಷಿಣಕ್ಕಿರುವವರು ಚಾಂದ್ರ ಅಥವಾ ಸೌರಮಾನವನ್ನೂ ಸಾಮಾನ್ಯವಾಗಿ ಅನುಸರಿಸುತ್ತಾರೆ. ತಮಿಳುನಾಡಿನಲ್ಲಿ ಸೌರಮಾನವೂ, ಕರ್ಣಾಟಕ ಆಂಧ್ರಗಳಲ್ಲಿ ಚಾಂದ್ರಮಾನವೂ ಆಚರಣೆಯಲ್ಲಿವೆ.

ಪದ್ಧತಿ ಯಾವುದೇ ಇರಲಿ, ಉಗಾದಿ ಎಲ್ಲರಿಗೂ ದೊಡ್ಡ ಹಬ್ಬ. ಬಂಧುಮಿತ್ರರನ್ನು ಕಂಡು ಶುಭ ಕೋರುವುದು ಎಲ್ಲರಲ್ಲೂ ವಾಡಿಕೆ. ಅಂದು ಬೆಳಗ್ಗೆ ತೈಲಾಭ್ಯಂಗನ ಮಾಡಿ, ಹೊಸ ಬಟ್ಟೆ ಉಟ್ಟು ವಜ್ರಕಾಯವನ್ನೂ ದೀರ್ಘಾಯುಸ್ಸನ್ನೂ ಪಡೆಯಲು ಬೇವುಬೆಲ್ಲ ಸವಿಯುವ ರೂಢಿ ಕನ್ನಡನಾಡಿನಲ್ಲಿರುವ ಸಂಪ್ರದಾಯ. ಇದರ ಹಿಂದೆ ಜೀವನದ ಕಹಿ-ಸಿಹಿಗಳನ್ನು ಏಕರೀತಿಯಾಗಿ ಕಾಣಬೇಕೆಂಬ ತತ್ತ್ವದ ಸೂಚನೆಯಿದೆಯೆಂದು ತೋರುತ್ತದೆ. ಆ ವರ್ಷದ ಪಂಚಾಂಗವನ್ನು ಅಂದು ಪುಜಿಸುವುದೂ ವಾಡಿಕೆ. ಹಬ್ಬದ ಊಟ ಮಾಡಿ ಮಧ್ಯಾಹ್ನ ಪಂಚಾಂಗವನ್ನು ಓದಿ ಅಥವಾ ಓದಿಸಿ, ವರ್ಷದ ಫಲವನ್ನು ಅಂದರೆ ಮಳೆ, ಬೆಳೆ, ಆರೋಗ್ಯ, ಆದಾಯ, ರಾಜ್ಯದ ಶಾಂತಿ ಇತ್ಯಾದಿಗಳನ್ನೂ ತಮಗೆ ವರ್ಷದಲ್ಲಿ ಗ್ರಹಗತಿಗಳು ಯಾವ ಬಗೆಯಾಗಿವೆ ಎಂಬುದನ್ನೂ ತಿಳಿದುಕೊಳ್ಳುತ್ತಾರೆ. ಸಂಜೆ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಮಾಡುತ್ತಾರೆ. (ಜಿ.ಎಚ್.)

ಯುಗಾದಿ ಆಚರಣೆಯ ಇತಿಹಾಸ ಬಹಳ ಪ್ರಾಚೀನವಾದದ್ದು. ಮೊಟ್ಟಮೊದಲು ದಾಖಲೆಯ ಪ್ರಕಾರ, ಪ್ರ.ಶ.ಪು. 2000ದಲ್ಲಿ ಮೆಸಪೊಟೇಮಿಯದಲ್ಲಿ ಉಗಾದಿಯ ಆಚರಣೆ ಇತ್ತೆಂದು ತಿಳಿದುಬರುತ್ತದೆ. ಮೇಷ ಸಂಕ್ರಾಂತಿ ಸಮಯದ ಅಮಾವಾಸ್ಯೆಯ ದಿನದಂದು ಬ್ಯಾಬಿಲೋನಿಯದಲ್ಲೂ ತುಲಾ ಸಂಕ್ರಾಂತಿಯ ಸಮಯದ ಅಮಾವಾಸ್ಯೆಯ ದಿನದಂದು ಅಸ್ಸೀರಿಯದಲ್ಲೂ ಹೊಸವರ್ಷ ಆರಂಭವಾಗುತ್ತದೆ ಎಂಬುದಾಗಿ ತಿಳಿಯಲಾಗಿತ್ತು. ಈಜಿಪ್ಷಿಯನ್ನರಿಗೆ, ಫೋನಿಷಿಯನ್ನರಿಗೆ, ಮತ್ತು ಪರ್ಷಿಯನ್ನರಿಗೆ ತುಲಾ ಸಂಕ್ರಾಂತಿಯಂದೂ ಗ್ರೀಕರಿಗೆ (5ನೆಯ ಶತಮಾನದವರೆಗೆ) ಮಕರ ಸಂಕ್ರಾಂತಿಯಂದೂ ಉಗಾದಿ ಪ್ರಾರಂಭವಾಗುತ್ತಿತ್ತೆಂದು ದಾಖಲೆಗಳಿಂದ ತಿಳಿದು ಬಂದಿದೆ. ರೋಮನ್ ಗಣರಾಜ್ಯದ ತಾರೀಖು ಪಟ್ಟಿಯ ಪ್ರಕಾರ ವರ್ಷಾರಂಭ ಮಾರ್ಚ್ 9ರಂದು, ಪ್ರ.ಶ.ಪು.153ರ ಅನಂತರ ಜನವರಿ 1ನೆಯ ತಾರೀಖನ್ನು ವರ್ಷಾರಂಭದ ದಿನವೆಂದು ಪರಿಗಣಿಸಲಾಗಿದ್ದು, ಜೂಲಿಯನ್ ತಾರೀಖು ಪಟ್ಟಿ ಇದನ್ನು ಸ್ಥಿರಪಡಿಸಿದೆ. ಯೆಹೂದ್ಯರ ಧಾರ್ಮಿಕ ತಾರೀಖು ಪಟ್ಟಿಯ ಪ್ರಕಾರ ವರ್ಷಾರಂಭ ಟಿಷ್ರಿ ತಿಂಗಳ (ಸೆಪ್ಟೆಂಬರ್ 6-ಅಕ್ಟೋಬರ್ 5) ಮೊದಲನೆಯ ದಿನದಂದು ಆಗುತ್ತದೆ. ಮಧ್ಯಯುಗದ ಪ್ರಾರಂಭದಲ್ಲಿ ಕ್ರೈಸ್ತಧರ್ಮ ಪ್ರಬಲವಾಗಿದ್ದ ಯುರೋಪಿನಲ್ಲೆಲ್ಲ ಮಾರ್ಚ್ 25ನೆಯ ದಿನವನ್ನು ವರ್ಷಾರಂಭದ ದಿನವೆಂದು ಪರಿಗಣಿಸಲಾಗಿತ್ತು. ಮುಂದೆ ಅದೇ ರಾಷ್ಟ್ರಗಳು ಡಿಸೆಂಬರ್ 25ನ್ನು ವರ್ಷಾರಂಭದ ದಿನವೆಂದು ಪರಿಗಣಿಸಿದಾಗ ಇಂಗ್ಲೆಂಡೂ ಅದನ್ನನುಸರಿಸಿತು. ಜನವರಿ 1ನೆಯ ತಾರೀಖು ವರ್ಷಾರಂಭದ ದಿನವೆಂದು ಗ್ರಿಗೋರಿಯನ್ ತಾರೀಖು ಪಟ್ಟಿಯಿಂದ ಸ್ಥಿರೀಕರಿಸಲ್ಪಟ್ಟು, ರೋಮನ್ ಕೆಥೊಲೆಕ್ ರಾಷ್ಟ್ರಗಳೆಲ್ಲವೂ ಇದನ್ನೇ ವರ್ಷಾರಂಭದ ದಿನವೆಂದು ಸ್ವೀಕಾರ ಮಾಡಿದವು. ಆದರೆ ಸ್ಕಾಟ್ಲೆಂಡು 1660ರಲ್ಲೂ ಜರ್ಮನಿ ಮತ್ತು ಡೆನ್ಮಾರ್ಕು ಸು. 1700ರಲ್ಲೂ ರಷ್ಯ 1706ರಲ್ಲೂ ಇಂಗ್ಲೆಂಡು 1752ರಲ್ಲೂ ಮತ್ತು ಸ್ವೀಡನ್ 1753ರಲ್ಲೂ ಇದನ್ನು ವಿರೋಧಿಸಿದುವು. ಯುಗಾದಿಯ ಆಚರಣೆಯ ಉದ್ದೇಶ ಅನೇಕ. ಮುಖ್ಯವಾಗಿ ಅದು ಮತಾಚರಣೆಯ ಒಂದು ಕ್ರಿಯೆ. ಜೀವನದ ಪುನಶ್ಚೈತನ್ಯಕ್ಕೆ ಸಂಬಂಧಿಸಿದಂತೆ ರಾಗ ದ್ವೇಷಗಳ ದಮನ, ದೇಹಶುದ್ಧೀಕರಣ, ಇತ್ಯಾದಿಗಳನ್ನದು ಸೂಚಿಸುತ್ತದೆ (ನೋಡಿ- ತಾರೀಕುಪಟ್ಟಿ). *