ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಗ್ರರಾಷ್ಟ್ರಾಭಿಮಾನ

ವಿಕಿಸೋರ್ಸ್ದಿಂದ

ಉಗ್ರರಾಷ್ಟ್ರಾಭಿಮಾನ: ಅತಿಯೂ ವಿವೇಚನಾರಹಿತವೂ ಅನ್ಯಾಕ್ರಮಣ ಶೀಲವೂ ಆದ ಸ್ವದೇಶಪ್ರೇಮ (ಷೋವಿನಿಸಂ), ಫ್ರೆಂಚ್ ಯೋಧ ನಿಕೊಲಸ್ ಷೋವಿನ್ ಎಂಬವನ ಹೆಸರಿನಿಂದ ಷೋವಿನಿಸಂ ಎಂಬ ಆಂಗ್ಲಪದ ಬಂತು. ಫ್ರೆಂಚ್ ಮಹಾಕ್ರಾಂತಿಯ ಕದನಗಳಲ್ಲೂ ನೆಪೊಲಿಯಾನಿಕ್ ಯುದ್ಧಗಳಲ್ಲೂ ಈತ ಭಾಗವಹಿಸಿ ಪದೇ ಪದೇ ಗಾಯಗೊಂಡು ಕೊನೆಗೆ ನಿವೃತ್ತನಾದ. ಈತನಿಗೆ ನೆಪೋಲಿಯನ್ನನಲ್ಲಿ ತೀವ್ರ ಭಕ್ತಿ. 1815ರ ಅನಂತರ ಫ್ರಾನ್ಸಿನಲ್ಲಿ ಅನೇಕರಿಗೆ ಸೈನ್ಯ ಶಕ್ತಿಯಲ್ಲಿ ಅಗಾಧವಾದ ವಿಶ್ವಾಸ ಬೆಳೆದಿತ್ತು. ನೆಪೋಲಿಯನ್ನನ ನಾಯಕತ್ವದಲ್ಲಿ ಆ ದೇಶ ಸಾಧಿಸಿದ ವಿಜಯಗಳಿಂದ ಸೈನಿಕ ನಾಯಕರನೇಕರು ಉನ್ಮತ್ತರಾಗಿದ್ದರು. ದೇಶೋನ್ನತಿಗಾಗಿ ಏನು ಬೇಕಾದರೂ ಮಾಡಬಹುದು: ತಪ್ಪಿನ ಪ್ರಶ್ನೆಯೇ ಉದ್ಬವಿಸುವುದಿಲ್ಲ-ಎಂಬ ಧೋರಣೆ ಇವರಲ್ಲಿ ಬೆಳೆಯಿತು. ಇಂಥ ಪಂಥಕ್ಕೆ ಆದರ್ಶ ಪುರುಷನಾದ ಷೋವಿನ್ನನ ಹೆಸರೇ ಈ ಪಂಥಕ್ಕೂ ಬಂತು. (ಎಸ್.ಎ.ಆರ್.)

ಮುಂದೆ 1830ರ ದಶಕದಲ್ಲಿ ಈ ಬಗೆಯ ಆಕ್ರಮಣಶೀಲ ಸೈನಿಕರಶೌರ್ಯ ಫ್ರಾನ್ಸಿನಲ್ಲಿ ಬಹಳ ಲೇವಡಿಗೆ ಗುರಿಯಾಯಿತು. ಇದರ ಬಗ್ಗೆ ಟೀಕೆ, ವಿಡಂಬನೆ, ವ್ಯಂಗ್ಯಚಿತ್ರಗಳು ಪುಂಖಾನುಪುಂಖವಾಗಿ ಬಂದುವು. ಈ ಸೈನಿಕರು ಇಡೀ ದೇಶವನ್ನೆ ಸೈನಿಕ ಪಾಳೆಯನ್ನಾಗಿ ಪರಿವರ್ತಿಸುತ್ತಿದ್ದಾರೆಂದು ನಾಗರಿಕ ನಾಯಕರನೇಕರು ಈ ಮನೋಭಾವವನ್ನು ಪ್ರತಿಭಟಿಸಿದರು.

ಮುಂದೆ ಇತರ ದೇಶಗಳಲ್ಲೂ ಈ ಪದ ಬಳಕೆಗೆ ಬಂತು, ಸ್ವಜನಾಂಗಾಭಿಮಾನ, ವಂಶಾಭಿಮಾನ - ಮುಂತಾದವು ಅತಿಯಾದರೆ ಅವನ್ನೂ ಷೋವಿನಿಸಂ ಎಂದು ಕರೆಯುವುದು ರೂಢಿಗೆ ಬಂದಿದೆ. ಜಿಂಗೊಯಿಸಂ ಎಂಬುದನ್ನು ಅನೇಕ ವೇಳೆ ಷೋವಿನಿಸಂಗೆ ಸಮಾನಪದವಾಗಿ ಬಳಸಲಾಗುತ್ತಿದೆ. *