ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉತ್ತರಾಧಿಕಾರ
ಉತ್ತರಾಧಿಕಾರ: ಸ್ವತ್ತಿನ ಒಡೆಯ ಸತ್ತಾಗ ಅನ್ವಯಪ್ರಾಪ್ತವಾಗಿಯೋ ಆತನ ಕೊನೆಯ ಇಚ್ಛೆಯ ಉಯಿಲಿನಲ್ಲಿ ವ್ಯಕ್ತಪಟ್ಟಿರುವ ರೀತಿಯಲ್ಲೋ ಅವನ ಸ್ವತ್ತಿನ ಮೇಲೆ ಬರುವ ಅಧಿಕಾರ (ಸಕ್ಸೆಷನ್; ಇನ್ಹೆರಿಟೆನ್ಸ್). ಹೀಗೆ ಅಧಿಕಾರ ಪಡೆದ ವ್ಯಕ್ತಿ ಉತ್ತರಾಧಿಕಾರಿ. ಉತ್ತರಾಧಿಕಾರವನ್ನು ನಿಯಂತ್ರಣಗೊಳಿಸಲು ಆಧುನಿಕ ಸಮಾಜಗಳಲ್ಲಿ ವಿಶದವಾದ ನ್ಯಾಯವ್ಯವಸ್ಥೆಯೇ ರಚಿತವಾಗಿದೆ.
ಸ್ವತ್ತಿನ ಉತ್ತರಾಧಿಕಾರ ಪ್ರಶ್ನೆ ಉದ್ಭವಿಸಬೇಕಾದರೆ ಮುಖ್ಯವಾಗಿ ವ್ಯಕ್ತಿಸ್ವಾಮ್ಯಕ್ಕೆ ಒಳಪಟ್ಟ ವಸ್ತುಗಳಿರಬೇಕು. ಎಲ್ಲವೂ ಸಮಷ್ಟಿಯ ಒಡೆತನಕ್ಕೆ ಸೇರಿದ್ದಾದರೆ ಆಗ ಅದರ ವೈಯಕ್ತಿಕ ಹಕ್ಕುದಾರಿಕೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮಾಲೀಕ ಸತ್ತ ಮೇಲೂ ಈ ವಸ್ತುಗಳು ಉಳಿಯುವಂತಿರಬೇಕು, ಉಪಯುಕ್ತವಾಗಿ ಮುಂದುವರಿಯುವಂತಿರಬೇಕು. ಆಗಲೇ ಉತ್ತರಾಧಿಕಾರದ ಪ್ರಶ್ನೆ ಉದ್ಭವಿಸುವುದು ಸಾಧ್ಯ. ಸತ್ತಾತನ ವೈಯಕ್ತಿಕ ಒಡೆತನದ ಸಾಮಗ್ರಿಗಳನ್ನು ನಾಶ ಮಾಡುವ ಕ್ರಮ ಆದಿಯ ಜನರಲ್ಲಿ ರೂಢಿಯಲ್ಲಿತ್ತು. ಆತನ ಪ್ರೇತ ಉಳಿದವರನ್ನು ಕಾಡದಿರಲೆಂಬುದೇ ಈ ಕೃತಿಯ ಹಿಂದಿನ ಉದ್ದೇಶ. ಒಬ್ಬ ವ್ಯಕ್ತಿಯ ಸಾವಿಗೆ ಕಾರಣವಾದ ರೋಗದೇವತೆ ಇತರರಿಗೂ ಮೃತ್ಯುವಾಗಿ ಪರಿಣಮಿಸೀತೆಂಬ ಅಂಜಿಕೆಯಿಂದ ಅವನ ಗುಡಿಸಲನ್ನು ತ್ಯಜಿಸುವುದೂ ದಹಿಸುವುದೂ ದಕ್ಷಿಣ ಆಫ್ರಿಕದ ಕೆಲವು ಆದಿವಾಸಿಗಳ ವಾಡಿಕೆಯಾಗಿತ್ತು. ಮೃತನ ಆಡುಗಳನ್ನು ಕೊಂದು ತಿಂದರೆ ಆಗ ಆ ಪ್ರಾಣಿಗಳ ಆತ್ಮಗಳೂ ತಮ್ಮ ಭಾವೀ ಒಡೆಯನನ್ನು ಹಿಂಬಾಲಿಸಿ ಹೋಗಿ ಆತನ ಸೇವೆಯಲ್ಲಿ ನಿರತವಾಗುವುವೆಂಬುದು ಆಗ್ನೇಯ ಆಫ್ರಿಕದ ಹೆರೆರೋ ಜನರ ನಂಬಿಕೆ. ಸತ್ತವನ ಅಗತ್ಯಗಳನ್ನೊದಗಿಸುವ ಉದ್ದೇಶ ದಿಂದಲೇ ಅವನೊಂದಿಗೆ ಆಹಾರ. ಉಪಕರಣಗಳನ್ನೂ ಗುಲಾಮರನ್ನೂ ಪತ್ನಿಯರನ್ನೂ ಹೂಳುವ ಅಭ್ಯಾಸವಿತ್ತು. ಆತನ ಸ್ವತ್ತುಗಳನ್ನು ದೂರದ ನೆಂಟರಿಷ್ಟರಲ್ಲಿ ಹಂಚುವ ಪದ್ಧತಿ ಇಂಡಿಯನ್ನರಲ್ಲಿತ್ತೆಂದು ತಿಳಿದುಬಂದಿದೆ. ಆದರೆ ಉತ್ತರಾಧಿಕಾರದ ಸೂಕ್ತ ನಿಯಮಗಳಿಲ್ಲದ ಇಂಥ ಪದ್ಧತಿಯಿಂದ ಜಗಳಗಳಾಗುತ್ತಿದ್ದದ್ದೇ ಸಾಮಾನ್ಯ.
ಮಾನವನ ನಾಗರಿಕತೆಯ ಒಂದು ಕಾಲದಲ್ಲಿ ನೆಲವೇ ಮುಂತಾದ ಸ್ವತ್ತುಗಳ ಸಮಷ್ಟಿ ಸ್ವಾಮ್ಯವೇ ಸಾರ್ವತ್ರಿಕವಾಗಿತ್ತೆಂಬುದು ಮಾಕರ್ಸ್‌ನ ವಾದ. ಏಷ್ಯ, ಯುರೋಪ್, ಆಫ್ರಿಕಗಳ ಹಲವು ಭಾಗಗಳಲ್ಲಿ ನೆಲದ ಸಾಮೂಹಿಕ ಒಡೆತನ ಇದ್ದದ್ದುಂಟು. ಬೇಸಾಯದ ಯಾಂತ್ರೀಕರಣ, ಕೃಷಿಕ್ಷೇತ್ರದ ವಿಸ್ತರಣೆ ಹಾಗೂ ಸಮಾಜವಾದೀ ಭಾವನೆಗಳ ಪ್ರಚಾರದಿಂದಾಗಿ ಈ ಶತಮಾನದಲ್ಲಿ ಸೋವಿಯತ್ ಒಕ್ಕೂಟ, ಚೀನ, ಇಸ್ರೇಲ್ ಮುಂತಾದ ದೇಶಗಳಲ್ಲಿ ಸಾಮೂಹಿಕ ಒಡೆತನದ ಹೊಸ ಹೊಸ ವ್ಯವಸ್ಥೆಗಳ ಆವಿರ್ಭಾವವಾಗುತ್ತಿದೆ. ನೆಲದ ಸಾಮೂಹಿಕ ಒಡೆತನ ಹೊಂದಿರುವವರ ಪೈಕಿ ಒಬ್ಬನ ಮರಣ ಸಂಭವಿಸಿದಾಗ ಉದ್ಭವಿಸುವುದು ಉತ್ತರಾಧಿಕಾರದ ಪ್ರಶ್ನೆಯಲ್ಲ, ಉಳಿದವರ ಪರಸ್ಪರ ಕರ್ತವ್ಯಗಳ ಪುನವರ್ಯ್‌ವಸ್ಥೆಯ ಪ್ರಶ್ನೆ.
ಉತ್ತರಾಧಿಕಾರ ವ್ಯವಸ್ಥೆಯನ್ನು ಟೀಕಿಸಿಯೂ ಸಮರ್ಥಿಸಿಯೂ ನಾನಾ ವಾದಗಳುಂಟು. ದುಡಿಮೆಯಿಲ್ಲದೆ ಸಂಪತ್ತು ಗಳಿಸುವುದಕ್ಕೆ ಇದರಿಂದ ಎಡೆಯುಂಟಾಗುವುದೆಂಬುದೂ ವರಮಾನದ ಅಸಮತೆಗೆ ಇದು ಹೆದ್ದಾರಿಯೆಂಬುದೂ ಒಂದು ಮುಖ್ಯ ಟೀಕೆ. ಸ್ವತ್ತಿನ ಖಾಸಗಿ ಒಡೆತನ ವ್ಯವಸ್ಥೆಯ ವಿರೋಧವೇ ಈ ಎಲ್ಲ ಟೀಕೆಗಳ ಮೂಲ.
ಸ್ವತ್ತಿನ ವೈಯಕ್ತಿಕ ಒಡೆತನ ಹಾಗೂ ಉತ್ತರಾಧಿಕಾರ ವ್ಯವಸ್ಥೆಯಿಂದ ಉದ್ಯಮಗಳು ಕುಂಠಿತವಾಗದೆ ಮುಂದುವರಿಯುವುದು ಸಾಧ್ಯವೆಂದೂ ಇದು ಎಲ್ಲ ಯತ್ನಶೀಲತೆಯ ಪ್ರೇರಕಶಕ್ತಿಯೆಂದೂ ಇದನ್ನು ಸಮರ್ಥಿಸುವವರಿದ್ದಾರೆ. ಆದರೆ ಬೃಹದ್ಗಾತ್ರದ ಉದ್ಯಮಗಳೂ ಇವುಗಳ ಒಡೆತನ ಹೊಂದಿರುವ ಕಂಪನಿಗಳೂ ಇರುವ ಈ ಕಾಲದಲ್ಲಿ ಇಂಥ ಉದ್ಯಮಗಳನ್ನು ನಡೆಸುವವರು ಒಡೆಯರಲ್ಲ; ವಿಶೇಷ ಪರಿಣತರು. ಇವರ ಪರಿಣತಿ ವಂಶಪಾರಂಪರ್ಯವಲ್ಲ. ಇವರು ಉದ್ಯಮದ ಒಡೆಯರಲ್ಲವಾದ್ದರಿಂದ ಉತ್ತರಾಧಿಕಾರವನ್ನು ಸಮರ್ಥಿಸುವ ವಾದ ಈ ದೃಷ್ಟಿಯಲ್ಲಿ ದುರ್ಬಲವೆನಿಸಬಹುದು.
ವ್ಯಕ್ತಿಯ ಸಾವಿನೊಂದಿಗೆ ಆತನ ಸ್ವತ್ತಿನ ಸ್ವಾಮ್ಯದ ಹಕ್ಕು ಹೊರಟುಹೋಗಬೇಕು ಎಂಬ ಆದರ್ಶದ ವಿಚಾರ ಬೇರೆ. ಆದರೆ ವಾಸ್ತವವಾಗಿ ಇದರಲ್ಲಿ ಅನೇಕ ತೊಂದರೆಗಳು ಉದ್ಭವಿಸುತ್ತವೆ. ಅವನು ಬದುಕಿದ್ದಾಗ ಹೊಂದಿದ್ದ ಪದಾರ್ಥಗಳೆಲ್ಲ ಸರ್ಕಾರಕ್ಕೆ ಸೇರಬೇಕು-ಎಂಬ ವಾದಕ್ಕೆ ಸ್ವತಂತ್ರ ಸಮಾಜದಲ್ಲಿ ಪುರಸ್ಕಾರವಿಲ್ಲ. ತನ್ನ ಸ್ವತ್ತಿನ ವಿಚಾರವಾಗಿ ಅದರ ಒಡೆಯ ಬದುಕಿದ್ದಾಗ ವ್ಯಕ್ತಪಡಿಸಿದ ಅಂತಿಮ ಇಚ್ಛೆಯ ಪ್ರಕಾರ ಅದರ ವಿಲೇವಾರಿ ಮಾಡುವುದೊಂದು ಮಾರ್ಗ. ಆತ ಈ ರೀತಿ ಯಾವ ಇಚ್ಛೆಯನ್ನೂ ವ್ಯಕ್ತಪಡಿಸದಿದ್ದ ಪಕ್ಷದಲ್ಲಿ ದೇಶದಲ್ಲಿ ಸಾರ್ವತ್ರಿಕವಾಗಿ ಅನ್ವಯಿಸುವಂತೆ ಜಾರಿಯಲ್ಲಿರುವ ನ್ಯಾಯಸೂತ್ರಗಳ ಪ್ರಕಾರ ಸ್ವತ್ತಿನ ವಿಲೇವಾರಿ ಆಗುತ್ತದೆ. ಸತ್ತವನ ಸ್ವತ್ತು ಸಂಕ್ರಮಿಸುವ ವಿಚಾರವಾಗಿ ಅನೇಕ ದೇಶಗಳಲ್ಲಿರುವಂತೆ ಭಾರತದಲ್ಲೂ ವ್ಯಾಪಕವಾದ ನ್ಯಾಯನಿಯಮಗಳಿವೆ. ಒಬ್ಬನ ಸ್ವತ್ತು ಅವನ ರಕ್ತಸಂಬಂಧದ ವಾರಸುದಾರರಿಗೇ ಸೇರಬೇಕು ಎಂಬ ಸೂತ್ರ ಭಾರತದಲ್ಲಿ ಸಹಜವಾಗಿ ತನಗೆ ತಾನೇ ರೂಪಿತವಾಯಿತು. ಹಿಂದೂ ನ್ಯಾಯಶಾಸ್ತ್ರದಲ್ಲಿಯಂತೂ ಇದು ಅತ್ಯಂತ ಖಚಿತವಾಗಿದೆಯೆನ್ನಬಹುದು. ಒಬ್ಬ ಹಿಂದೂ ಅವಿಭಕ್ತ ಕುಟುಂಬದ ಕರ್ತ (ಯಜಮಾನ) ಸತ್ತರೆ ಅವನ ಆಸ್ತಿ ಮೊದಲು ತನ್ನ ಗೋತ್ರಜ ಸಪಿಂಡ ವರ್ಗದವರಿಗೆ, ಅವರಿಲ್ಲದಿದ್ದರೆ ಸಮನೋದಕ ವರ್ಗದವರಿಗೆ, ಅವರೂ ಇಲ್ಲದಿದ್ದರೆ ಕೊನೆಯದಾಗಿ ಬಂಧು ವರ್ಗದವರಿಗೆ ಸೇರಬೇಕೆಂದು ಹಿಂದೂ ನ್ಯಾಯಶಾಸ್ತ್ರದಲ್ಲಿ ವಿಧಿಸಲಾಗಿದೆ. ಬಂಧುವರ್ಗದವರಲ್ಲಿ ಆತ್ಮಬಂಧುಗಳೆಂದೂ ಪಿತೃ ಬಂಧುಗಳೆಂದೂ ಮಾತೃ ಬಂಧುಗಳೆಂದೂ ಮೂರು ಉಪವರ್ಗಗಳುಂಟು. ಮುಸ್ಲಿಂ ಜನಾಂಗದಲ್ಲೂ ಆಸ್ತಿಯ ಸಂಕ್ರಮಣದ ಬಗ್ಗೆ ಖಚಿತವಾದ ನ್ಯಾಯಶಾಸ್ತ್ರದ ಬೆಳವಣಿಗೆಯಾಗಿದೆ.
ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಸ್ಥಾಪಿತವಾದ ಮೇಲೂ ಈ ನ್ಯಾಯಸೂತ್ರಗಳೇ ಜಾರಿಯಲ್ಲಿದ್ದುವು. ಆದರೆ ಹಿಂದೂ ಮುಸ್ಲಿಮರೇ ಅಲ್ಲದೆ ಈ ದೇಶದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಕ್ರೈಸ್ತರಿಗೂ ಪಾರ್ಸಿಗಳಿಗೂ ಹಿಂದೂ ಮುಸ್ಲಿಂ ನ್ಯಾಯಶಾಸ್ತ್ರಗಳು ಅನ್ವಯಿಸುವುದು ಧರ್ಮಸಮ್ಮತವೆನಿಸಲಿಲ್ಲ. ಹಿಂದೂ ಮುಸ್ಲಿಂ ಧರ್ಮಗ್ರಂಥಗಳಲ್ಲಿರುವಂತೆ ಪಾರ್ಸಿಗಳಿಗೆ ಅವರ ಧರ್ಮಗ್ರಂಥಗಳಲ್ಲೇ ರೂಪಿತವಾದ ವಾರಸು ಪದ್ಧತಿಯ ಉತ್ತರಾಧಿಕಾರ ವ್ಯವಸ್ಥೆ ಇರಲಿಲ್ಲ. ಹಿಂದೂ ಮತದಿಂದ ಹೊರಗೆ ಹೋದವರಿಗೆ ಈ ಬಗ್ಗೆ ಯಾವ ನ್ಯಾಯಸೂತ್ರ ಅನ್ವಯವಾಗಬೇಕೆಂಬ ಬಗ್ಗೆ ಬಳ್ಳಾರಿ ಜಿಲ್ಲೆಯ ಸಿವಿಲ್ ನ್ಯಾಯಾಲಯದಿಂದ ಪ್ರಿವಿ ಕೌನ್ಸಿಲ್ವರೆಗೆ ನಡೆದ ಒಂದು ಮೊಕದ್ದಮೆಯಲ್ಲಿ ಈ ಜಿಜ್ಞಾಸೆ ಬಂದಿತ್ತು. ಹಿಂದೂವಾಗಿ ಹುಟ್ಟಿದವ ಮತಾಂತರ ಹೊಂದಿ ಇನ್ನೊಂದು ಮತವನ್ನವಲಂಬಿಸಿದರೂ ತನ್ನ ಅನಂತರ ಸ್ವತ್ತು ಹೇಗೆ ಸಂಕ್ರಮಿಸಬೇಕೆಂಬ ವಿಚಾರದಲ್ಲಿ ಆತ ತನ್ನಿಚ್ಛೆಯಂತೆಯೇ ನಿರ್ಧರಿಸಬಹುದು ಎಂದು ಆ ಪ್ರಿವಿ ಕೌನ್ಸಿಲ್ ನ್ಯಾಯಾಲಯ ತೀರ್ಪು ನೀಡಿತು. ಅಂದರೆ, ಹಿಂದೂವಾಗಿದ್ದವ ಕ್ರೈಸ್ತನಾದರೂ ಆತ ಇಷ್ಟಪಟ್ಟರೆ ಹಿಂದೂ ಉತ್ತರಾಧಿಕಾರದ ನ್ಯಾಯಶಾಸ್ತ್ರವನ್ನೇ ಅನುಸರಿಸ ಬಹುದು ಎಂಬುದು ಇದರ ಅರ್ಥ. ಹಿಂದೂ ಮತದಿಂದ ಹೊರಗೆ ಹೋದವನು ಹಿಂದೂವಾಗಿದ್ದಾಗ ಪಡೆದಿದ್ದ ಸ್ವತ್ತಿನ ಹಕ್ಕಿಗೆ ಧಕ್ಕೆಯಿರಲಿಲ್ಲ. ಇದರಿಂದ ಹಿಂದೂವಾದವ ಕ್ರೈಸ್ತನಾದರೆ ಆತ ಹಿಂದೂವಾಗಿಯೇ ಉಳಿದಿದ್ದರೆ ಪಿತ್ರಾರ್ಜಿತವಾಗಿ ಬರಬೇಕಾಗಿದ್ದ ಸ್ವತ್ತು ಬರುತ್ತಿತ್ತಲ್ಲದೆ ಕ್ರೈಸ್ತನಾಗಿದ್ದರಿಂದ ದೊರಕುವ ವಿಶೇಷ ಸೌಲಭ್ಯಗಳೂ ಪ್ರಾಪ್ತವಾಗುತ್ತಿದ್ದುವು. ಈ ತೀರ್ಪಿನ ಪರಿಣಾಮ ಬಲು ತೀವ್ರವೇ ಆಗಿತ್ತೆನ್ನಬಹುದು. ಇದರಿಂದ ದೇಶದಲ್ಲೆಲ್ಲ ದೊಡ್ಡ ಅವಾಂತರವೇ ಆದೀತೆಂಬ ಶಂಕೆ ತಲೆದೋರಿ, ಈ ಬಗ್ಗೆ ಒಂದು ಕಾಯಿದೆ ಜಾರಿಗೆ ತರಬೇಕೆಂದು ಬ್ರಿಟಿಷ್ ಸರ್ಕಾರ ನಿರ್ಧರಿಸಿತು. ಇದರ ಫಲವೇ ಭಾರತೀಯ ಉತ್ತರಾಧಿಕಾರ ಕಾಯಿದೆ. 1865ರ ಈ ಕಾಯಿದೆ 1925ರ ವರೆಗೂ ಜಾರಿಯಲ್ಲಿತ್ತು. ಆಗ ಅಂದಿನವರೆಗೆ ಪಡೆದ ಅನುಭವದಿಂದ ಮತ್ತೊಂದು ಶಾಸನ ರೂಪಿಸಲಾಯಿತು. ಅದೇ ಇಂದಿಗೂ ಜಾರಿಯಲ್ಲಿದೆ.
ಭಾರತೀಯ ಉತ್ತರಾಧಿಕಾರದ ಕಾಯಿದೆ ಪ್ರಮುಖವಾಗಿ ಕ್ರೈಸ್ತ ಮತ್ತು ಪಾರ್ಸಿಗಳಿಗೆ ಅನ್ವಯಿಸಲೆಂದು ರೂಪಿಸಿದ್ದು. ಆದರೂ ಉಯಿಲು ಮೂಲಕ ಸಂಕ್ರಮಣವಾಗುವ ಹಕ್ಕುದಾರಿಗೆ ಸಂಬಂಧಿಸಿದ ಭಾಗಗಳು ಹಿಂದೂ ಮುಸ್ಲಿಂ ಉಯಿಲುಗಳಿಗೂ ಅನ್ವಯವಾಗುವಂತಿದ್ದುವು.
ಭಾರತೀಯ ಉತ್ತರಾಧಿಕಾರದ ಕಾಯಿದೆಯಲ್ಲಿ ಪ್ರಮುಖವಾಗಿ ಎರಡು ಭಾಗಗಳಿವೆ. ಉಯಿಲುಗಳಿಲ್ಲದೆ ಸಂಕ್ರಮಿಸುವ ಉತ್ತರಾಧಿಕಾರಕ್ಕೆ ಸಂಬಂಧಿಸಿದ್ದು ಮೊದಲನೆಯ ಭಾಗವಾದರೆ ಉಯಿಲುಗಳ ಮೂಲಕ ಸಂಕ್ರಮಿಸುವುದಕ್ಕೆ ಸಂಬಂಧಿಸಿದ್ದು ಎರಡನೆಯ ಭಾಗ. ಒಂದನೆಯ ಭಾಗ ಹಿಂದೂ, ಮುಸ್ಲಿಂ, ಬೌದ್ಧ, ಸಿಖ್ ಮತ್ತು ಜೈನರಿಗೆ ಅನ್ವಯಿಸುವುದಿಲ್ಲ. ಈ ಭಾಗದಲ್ಲಿ ಉಯಿಲು ಮಾಡದ ಸತ್ತಾತನ ಸ್ವತ್ತಿನ ಸಂಕ್ರಮಣಕ್ಕೆ ಸಂಬಂಧಪಟ್ಟ ವಿಧಿಗಳನ್ನು ನಿರೂಪಿಸಲಾಗಿದೆ. ಸಹಜವಾಗಿ ಸತ್ತವನ ಸ್ವತ್ತಿನ ವ್ಯಾಖ್ಯೆ, ವಾರಸುಗಳು ಯಾರೆಂಬ ನಿರ್ಣಯ, ಅವರವರ ಹಕ್ಕುಗಳ ನಿರ್ಧಾರ, ಸ್ವತ್ತು ಸಂಕ್ರಮಿಸುವ ರೀತಿ ಮತ್ತು ಪ್ರಮಾಣ-ಇವೆಲ್ಲ ಇಲ್ಲಿವೆ. ಉಯಿಲಿನ ವ್ಯಾಖ್ಯೆ, ಇದನ್ನು ಮಾಡುವವರ ಅಧಿಕಾರ ನಿರ್ಣಯ, ಉಯಿಲಿಗೆ ಒಳಗಾಗಬಹುದಾದ ಸ್ವತ್ತಿನ ವ್ಯಾಖ್ಯೆ, ಉಯಿಲುಗಳ ಪ್ರಭೇದ-ಇವಕ್ಕೆ ಎರಡನೆಯ ಭಾಗ ಮೀಸಲು. ಉಯಿಲುಗಳನ್ನು ಅರ್ಥೈಸುವ ನಿಯಮಗಳನ್ನೂ ಉಯಿಲುಗಳನ್ನು ಜಾರಿಗೆ ತರಬೇಕಾದರೆ ಅನುಸರಿಸಬೇಕಾದ ಕ್ರಮವನ್ನೂ ಇಲ್ಲಿ ಕೊಟ್ಟಿದೆ.
ಸ್ವತಂತ್ರ ಭಾರತದ ಸಂವಿಧಾನದ 44ನೆಯ ಪ್ರಕರಣದ ಪ್ರಕಾರ ರಾಷ್ಟ್ರದ ಪ್ರಜೆಗಳೆಲ್ಲರಿಗೂ ಒಂದೇ ಬಗೆಯ ವ್ಯವಹಾರ ಸಂಹಿತೆ ಅನ್ವಯವಾಗುವಂತೆ ಮಾಡುವುದು ಭಾರತ ಗಣರಾಜ್ಯದ ಒಂದು ಆದರ್ಶ. ಈ ಆದರ್ಶದಂತೆ 1956ರಲ್ಲಿ ಜಾರಿಗೆ ತರಲಾದ ಹಿಂದೂ ಉತ್ತರಾಧಿಕಾರ ಕಾಯಿದೆಯ ಒಂದನೆಯ ಭಾಗದಲ್ಲಿ ಉಯಿಲುಗಳಿಲ್ಲದೆ ಆಸ್ತಿ ಸಂಕ್ರಮಿಸುವ ಬಗ್ಗೆ ರೂಪಿಸಿರುವ ವಿಧಿಗಳ ಕ್ರಾಂತಿಕಾರಕವೆನ್ನಬಹುದು. ಸ್ತ್ರೀಗೆ ಸ್ವತ್ತಿನ ಮೇಲೆ ಕೆಲವು ಸಂದರ್ಭಗಳಲ್ಲಿ ಸಂಪೂರ್ಣ ಹಕ್ಕುಗಳು ಲಭಿಸಿವೆಯಲ್ಲದೆ ಕೆಲವು ವರ್ಗದ ಸ್ತ್ರೀಯರಿಗೆ ಆಸ್ತಿಯಲ್ಲಿ ಹೆಚ್ಚಿನ ಹಕ್ಕುಗಳೂ ಲಭ್ಯವಾಗಿವೆ.
ಮುಸ್ಲಿಂ ಜನರ ಉತ್ತರಾಧಿಕಾರಿತ್ವ ಕಾಯಿದೆ ಮಾತ್ರ ಇಂದಿಗೂ ಇಸ್ಲಾಮೀ ನ್ಯಾಯದಂತೆಯೇ ನಡೆಯುತ್ತಿದೆ. ಇದನ್ನು ಬದಲಾಯಿಸಬಾರದೆಂಬುದು ಒಂದು ಮತ. ಅನೇಕ ಇಸ್ಲಾಮೀ ರಾಷ್ಟ್ರಗಳಲ್ಲಿ ಆಗಿರುವ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಇಲ್ಲೂ ಸೂಕ್ತ ಮಾರ್ಪಾಟು ಮಾಡಬಹುದೆಂಬ ಅಭಿಪ್ರಾಯವೂ ಉಂಟು. ಇದನ್ನು ಕುರಿತ ಪರ್ಯಾಲೋಚನೆ ನಡೆಯುತ್ತಿದೆ. (ನೋಡಿ-ಉತ್ತರಾಧಿಕಾರ-ತೆರಿಗೆ, ಉಯಿಲು) (ಕೆ.ಸಿ.)