ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉತ್ತರ ಕನ್ನಡ ಜಿಲ್ಲೆ

ವಿಕಿಸೋರ್ಸ್ದಿಂದ

ಉತ್ತರ ಕನ್ನಡ ಜಿಲ್ಲೆ: ಕರ್ನಾಟಕದ ಪಶ್ಚಿಮ ಕರಾವಳಿಯ ಒಂದು ಜಿಲ್ಲೆ. ಈ ಜಿಲ್ಲೆಯ ಪೂರ್ವದಲ್ಲಿ ಧಾರವಾಡ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಗಳು, ಪಶ್ಚಿಮದಲ್ಲಿ ಅರಬ್ಬೀಸಮುದ್ರ, ಉತ್ತರದಲ್ಲಿ ಗೋವಾ ಮತ್ತು ಬೆಳಗಾಂವಿ ಜಿಲ್ಲೆ, ದಕ್ಷಿಣದಲ್ಲಿ ಉಡುಪಿ ಜಿಲ್ಲೆ ಇವೆ. ವಿಸ್ತೀರ್ಣ 10,291ಚಕಿಮೀ. ಜನಸಂಖ್ಯೆ 13,53,644 (2001). ಈ ಜಿಲ್ಲೆಯ ಕೇಂದ್ರಸ್ಥಳ ಕಾರವಾರ. ಜಿಲ್ಲೆಯಲ್ಲಿ 11 ತಾಲ್ಲೂಕು, 35 ಹೋಬಳಿ ಮತ್ತು 1246 ಜನವಸತಿಯಿರುವ ಹಳ್ಳಿಗಳಿವೆ. 206 ಗ್ರಾಮ ಪಂಚಾಯಿತಿಗಳು ಮತ್ತು 13 ಪುರಸಭೆಗಳಿವೆ.

ಈ ಜಿಲ್ಲೆಯನ್ನು ಎರಡು ಭೌಗೋಳಿಕ ವಿಭಾಗಗಳನ್ನಾಗಿ ವಿಂಗಡಿಸಬಹುದು. ಸಮುದ್ರದಂಚಿನಿಂದ 10-15ಕಿಮೀ ಅಗಲ ಮತ್ತು ಸು.130ಕಿಮೀ ಉದ್ದವಾಗಿರುವ ಕರಾವಳಿ ಘಟ್ಟದ ಕೆಳಗಿನ ಭಾಗ. ಅದರ ಪೂರ್ವ ದಿಕ್ಕಿಗೆ ಗೋಡೆಯಂತೆ ದಕ್ಷಿಣೋತ್ತರವಾಗಿ ಹಬ್ಬಿದ ಜಂಜುಕಲ್ಲಿನ ಸಹ್ಯಾದ್ರಿ ಶ್ರೇಣಿ. ಬೆಟ್ಟದ ತಪ್ಪಲಿನಿಂದ ಹರಿದು ಸಮುದ್ರ ಸೇರುವ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ ನದಿಗಳು ಸುತ್ತಲೂ ಹಸುರು ಹಾಸಿ ಸೌಂದರ್ಯ ಬೆಳೆಸಿವೆ. ಶಿವಮೊಗ್ಗ ಮತ್ತು ಉತ್ತರ ಕನ್ನಡದ ಗಡಿಯಲ್ಲಿ ಹರಿಯುವ ಶರಾವತಿ, ಗೇರುಸೊಪ್ಪೆಯ ಬಳಿ 252ಮೀ ಕೆಳಗೆ ದುಮುಕಿ ಜಗತ್ಪ್ರಸಿದ್ಧ ಜೋಗ್ ಜಲಪಾತವನ್ನು ನಿರ್ಮಿಸಿದೆ. ಅಘನಾಶಿನಿ ನದಿಯ ಉಂಚಳ್ಳಿ, ಗಂಗಾವಳಿ ನದಿಯ ಮಾಗೋಡು, ಕಾಳಿನದಿಯ ಲಾಲಗುಳಿ, ಗಣೀಶಪಾಲ ಹೊಳೆಯ ಶಿವಗಂಗಾ ಜಲಪಾತಗಳೂ ನಿಸರ್ಗ ಸೌಂದರ್ಯದಿಂದ ಕೂಡಿವೆ. ಇವಲ್ಲದೆ ಸುಸುಬ್ಬಿಯಂಥ ಅನೇಕ ಚಿಕ್ಕಪುಟ್ಟ ಜಲಪಾತಗಳಿವೆ. ಜೋಗದ ಶರಾವತಿ ಕಮರಿಯಲ್ಲಿ ಕಟ್ಟಲಾದ ಮಹಾತ್ಮಗಾಂಧಿ ವಿದ್ಯುತ್ ಉತ್ಪಾದನಾ ಕೇಂದ್ರವಿದೆ (1948). ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಶರಾವತಿ ವಿದ್ಯುತ್ ಉತ್ಪಾದನಾ ಕೇಂದ್ರ (1965) ಏಷ್ಯದಲ್ಲಿ ಅತ್ಯಂತ ದೊಡ್ಡ ವಿದ್ಯುತ್ ಉತ್ಪಾದನಾ ಕೇಂದ್ರ.

ಕಾರವಾರದಿಂದ ಭಟ್ಕಳದವರೆಗೆ ಚಾಚಿಕೊಂಡ ಕರಾವಳಿ ಮರಳುಮಯವಾಗಿದೆ. ಘಟ್ಟದ ಕೆಳಗೆ ಕಾರವಾರ, ಅಂಕೋಲ, ಕುಮಟ, ಹೊನ್ನಾವರ, ಭಟ್ಕಳ ತಾಲ್ಲೂಕುಗಳಿವೆ. ಘಟ್ಟದ ಮೇಲೆ ಶಿರಸಿ, ಯಲ್ಲಾಪುರ, ಸಿದ್ಧಾಪುರ, ಹಳಿಯಾಳ, ಜೊಯ್ಡ (ಸುಪ), ಮುಂಡಗೋಡ ತಾಲ್ಲೂಕುಗಳಿವೆ. ಕರಾವಳಿಯ ತಾಲ್ಲೂಕುಗಳಲ್ಲಿ ತೆಂಗು ವಿಪುಲವಾಗಿ ಬೆಳೆದರೆ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಅಡಕೆ ಬೆಳೆಯುತ್ತದೆ. ಇಲ್ಲಿಯ ಹವಾಮಾನ ಹಿತಕರ. ಕರಾವಳಿ ತಾಲ್ಲೂಕುಗಳಲ್ಲಿ ಸೆಖೆ ಹೆಚ್ಚು. ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಹೆಚ್ಚು ತಂಪಾದ ವಾಯುಗುಣವಿದೆ. ಮಳೆಗಾಲ ಜೂನ್ನಲ್ಲಿ ಆರಂಭಗೊಂಡು ಅಕ್ಟೋಬರ್ವರೆಗೂ ಇರುತ್ತದೆ. ವಾರ್ಷಿಕ ಸರಾಸರಿ ಮಳೆ 2836 ಮಿಮೀ. ಕರಾವಳಿಯಲ್ಲಿ ಸಹ್ಯಾದ್ರಿಯ ಅಂಚಿನಲ್ಲಿ ಮಳೆ ಹೆಚ್ಚು. ಪೂರ್ವಕ್ಕೆ ಹೋದಂತೆ ಮಳೆ ಕಡಿಮೆಯಾಗುತ್ತದೆ. ಜಿಲ್ಲೆಯ ಶೇ.80ರಷ್ಟು ನೆಲ ಅರಣ್ಯಾವೃತ. ಅರಣ್ಯದ ವಿಸ್ತೀರ್ಣ 8,15,057 ಹೆಕ್ಟೇರ್. 10325 ಹೆಕ್ಟೇರುಗಳಲ್ಲಿ ತಾಳೆ ಬೆಳೆಯುತ್ತಾರೆ. ಸಾಗವಾನಿ, ಮತ್ತಿ, ಹೊನ್ನೆ, ನಂದಿ ಮೊದಲಾದ ಗಟ್ಟಿ ಮರಗಳಲ್ಲದೆ ಬೆಂಕಿಪೆಟ್ಟಿಗೆಯ ತಯಾರಿಕೆಗೆ ಉಪಯುಕ್ತವಾದ ಮೃದು ಮರಗಳೂ ಶ್ರೀಗಂಧದ ಮರವೂ ಇವೆ. ಬಿದಿರು ಹೇರಳವಾಗಿದೆ. ತೈಲಯುತ ಸಸ್ಯಜಾತಿಗಳೂ ಇವೆ. ಅಳಲೆ, ಸೀಗೆ, ಜೇನು, ಅರಗು, ಗೋಂದು, ಹಾಲ್ಮಡ್ಡಿ ಇವು ಅರಣ್ಯೋತ್ಪನ್ನಗಳು. ರಾಜ್ಯದ ಅರಣ್ಯೋತ್ಪನ್ನದಲ್ಲಿ ಶೇ.65 ಭಾಗ ಈ ಜಿಲ್ಲೆಯಿಂದ ದೊರೆಯುತ್ತದೆ. ಮ್ಯಾಂಗನೀಸ್, ಕಬ್ಬಿಣ, ಸುಣ್ಣದಶಿಲೆ ಜೇಡಿಮಣ್ಣು, ಇಲ್ಮನೈಟ್, ಗಾಜು, ಸಾಬೂನು, ಅಭ್ರಕ, ಬಾಕ್ಸೈಟ್ ಈ ಜಿಲ್ಲೆಯ ಖನಿಜಗಳು. ಜಿಲ್ಲೆಯಲ್ಲಿ ಅನೇಕ ಕಡೆ ಮ್ಯಾಂಗನೀಸ್ ದೊರೆಯುತ್ತದೆ. ಜೋಯ್ಡ ತಾಲ್ಲೂಕಿನ ಕೊಡ್ಲಿಗವಿಗಳು ಮ್ಯಾಂಗನೀಸ್ಗೆ ಪ್ರಸಿದ್ಧವಾಗಿದ್ದರೆ ಹೊನ್ನಾವರ ತಾಲ್ಲೂಕಿನ ಅಪ್ಸರಕೊಂಡದಲ್ಲು, ಕುಮಟ ತಾಲ್ಲೂಕಿನ ಯಾಣದಲ್ಲೂ ಕಬ್ಬಿಣದ ಅದಿರಿನ ನಿಕ್ಷೇಪವಿದೆ. ಸಹ್ಯಾದ್ರಿ ಪಾದಭಾಗಗಳಲ್ಲಿ ಕಬ್ಬಿಣವಲ್ಲದೆ ಇತರ ಲೋಹನಿಕ್ಷೇಪಗಳುಂಟು. ಯಾಣ ಮತ್ತಿತರ ಕಡೆಗಳಲ್ಲಿ ಸುಣ್ಣಶಿಲೆದೊರೆಯುತ್ತದೆ. ಹಲವೆಡೆ ಸ್ವರ್ಣಮಕ್ಷಿಕೆ ಬಿಳಿ ಜೇಡು ಇವೆ.

ಜಿಲ್ಲೆಯಲ್ಲಿ ಕೃಷಿ ವೃತ್ತಿ ಮುಖ್ಯ. ಒಟ್ಟು 118996 ಹೆ. ನಿವ್ವಳ ಬಿತ್ತನೆ ಪ್ರದೇಶವಿದೆ. ಇದರಲ್ಲಿ 22,421 ಹೆ. ಗಳಿಗೆ ನೀರಾವರಿ ಸೌಲಭ್ಯವಿದೆ. ಬತ್ತ, ತೆಂಗು, ಕಬ್ಬು, ಅಡಕೆ, ಮೆಣಸು, ಏಲಕ್ಕಿ, ಬಾಳೆ ಮುಖ್ಯವಾದ ಬೆಳೆಗಳು. ಇವಲ್ಲದೆ ಜಿಲ್ಲೆಯಲ್ಲಿ ಗೋಡಂಬಿ, ಮಾವು, ಹುಣಸೆ, ನಿಂಬೆ, ಅನಾನಸು, ಹಲಸು, ಪಪ್ಪಾಯಿ, ಬಟಾಟೆ, ಬದನೆ, ಕಲ್ಲಂಗಡಿ, ಹೈಬ್ರಿಡ್ಜೋಳ, ರಾಗಿ, ಶೇಂಗಾ ಇತ್ಯಾದಿಗಳನ್ನು ಬೆಳೆಯುತ್ತಾರೆ. ಬತ್ತ 82197 ಹೆ, ಜೋಳ 290 ಹೆ, ಕಬ್ಬು 872 ಹೆ, ಅಡಕೆ 11160 ಹೆ, ತೆಂಗು 5907 ಹೆ, ಗೋಡಂಬಿ 1827 ಹೆ, ಮೆಣಸು 135 ಹೆ, ಮಾವು 1140 ಹೆ, ಬಾಳೆ 7245 ಹೆ, ಏಲಕ್ಕಿ 369ಹೆ, ಅನಾನಸ್ 315 ಹೆ, ಹಲಸು 206 ಹೆ, ಪರಂಗಿ 114.9 ಹೆ, ಹತ್ತಿ 7245 ಹೆನಲ್ಲಿ ಬೆಳೆಸುತ್ತಾರೆ. ಅಡಕೆಯ ತೋಟದಲ್ಲಿ ಏಲಕ್ಕಿ, ಕಾಳುಮೆಣಸು, ಬಾಳೆ ಬೆಳೆಸುತ್ತಾರೆ. ಗದ್ದೆಯಲ್ಲಿ ರಾಗಿ, ಕಡಲೆ, ತೊಗರಿ ಮೊದಲಾದ ಧಾನ್ಯಗಳನ್ನೂ ಬೆಳೆಯುತ್ತಾರೆ. ಪಶುಪಾಲನೆಯೂ ರೂಢಿಯಲ್ಲಿದೆ.

ಈ ಜಿಲ್ಲೆಯಲ್ಲಿ ಮೀನುಗಾರಿಕೆ ಒಂದು ಮುಖ್ಯ ಉದ್ಯೋಗ. ಒಂದು ಕಾಲದಲ್ಲಿ ಹರಿಕಾಂತ, ತಾಂಡೇಲ, ಖಾರ್ವಿ, ಗಾಬಿತ, ಅಂಬಿಗ, ಮೊಗೇರ, ಆಗೇರ, ಕ್ರಿಶ್ಚಿಯನ್ ದಾಲಜಿಗಳಷ್ಟೇ ಈ ವೃತ್ತಿಯನ್ನವಲಂಬಿಸಿದ್ದರೆ ಇತ್ತೀಚೆಗೆ ಸಾಮಾನ್ಯವಾಗಿ ಎಲ್ಲ ಜಾತಿಯವರೂ ಮೀನು ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಇವರು ಕರಾವಳಿ ಪ್ರದೇಶದ 118 ಹಳ್ಳಿಗಳಲ್ಲಿದ್ದಾರೆ. ಸಮುದ್ರದಿಂದ ಮೀನು ಹಿಡಿಯುವ ಕೇಂದ್ರಗಳೆಂದರೆ ಅರ್ಗಾ, ಭಟ್ಕಳ, ಬಿಣಗಾ, ಚೆಂಡಿಯೆ, ಗಂಗಾವಳಿ, ಕಾರವಾರ, ಹೊನ್ನಾವರ, ಖಾರವಿ, ಕೇಣಿ, ಕೋಡಾರ್, ಕುಮಟ, ಮಾಜಾಳಿ, ಮಂಕಿ, ಮುರ್ಡೇಶ್ವರ, ಶಿರಾಲಿ, ತದಡಿ. ಸಾಗರ ಮೀನುಗಾರಿಕೆಯಲ್ಲಿ 30094 ಟನ್ ಹಿಡಿದರೆ, ಸಿಹಿನೀರಿನಲ್ಲಿ 249ಟನ್ ಮೀನು ಹಿಡಿಯಲಾಗಿದೆ (2001).

ಮರ ಕೊಯ್ಯುವ ಗಿರಣಿ, ಹೆಂಚಿನ ಕಾರ್ಖಾನೆ, ನೇಯ್ಗೆ, ಮೇಣದಬತ್ತಿಯ ಉತ್ಪಾದನೆ, ಸಾಬೂನು ತಯಾರಿಕೆ, ವಾಹನ ದುರಸ್ತಿ, ಮುದ್ರಣ, ಕೆತ್ತನೆಯ ಕೆಲಸ, ಚಿನ್ನ ಬೆಳ್ಳಿಯ ಕೆಲಸ, ಬುಟ್ಟಿ, ಚಾಪೆ ಹೆಣೆಯುವಿಕೆ, ಬೆತ್ತದ ಹೆಣಿಗೆ, ಜೇನು ಸಾಕಣೆ, ಕೋಳಿ ಕುರಿ ಸಾಕಣೆ, ರೇಷ್ಮೆ, ಚರ್ಮದ ಉದ್ಯೋಗ, ವ್ಯಾಪಾರ, ಏಜೆನ್ಸಿಗಳಲ್ಲಿ ಜನ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಮಂಜುಗೆಡ್ಡೆ ತಯಾರಿಕಾ ಕಾರ್ಖಾನೆಗಳು 52 ಇವೆ. ದಾಂಡೇಲಿಯಲ್ಲಿಯೂ ಕಾಗದದ ಕಾರ್ಖಾನೆ ದೊಡ್ಡ ಉದ್ದಿಮೆ. ಅಲ್ಲದೆ ಪ್ಲೈವುಡ್, ಫೆರೋಮ್ಯಾಂಗನೀಸ್ ಉದ್ದಿಮೆಗಳೂ ಇವೆ. ಕಾರವಾರ, ಬೆಲೆಕೇರಿ, ತದಡಿ, ಕುಮಟ, ಹೊನ್ನಾವರ, ಭಟ್ಕಳ-ಇವು ಮುಖ್ಯ ಬಂದರುಗಳು.

ಕಾರವಾರದಲ್ಲಿ ಸರ್ವಋತು ಬಂದರನ್ನು ಬೃಹತ್ತಾಗಿ ಕಟ್ಟಲಾಗಿದೆ. ಬಳ್ಳಾರಿ ಪ್ರದೇಶದ ಕಬ್ಬಿಣದ ಅದಿರನ್ನು ಸಾಗಿಸಲು ಕಾರವಾರ ಬಂದರು ಉಪಯುಕ್ತವಾಗುತ್ತದೆ.

ಜಿಲ್ಲೆಯಲ್ಲಿ 329ಕಿಮೀಗಳ ರಾಷ್ಟ್ರೀಯ ಹೆದ್ದಾರಿ, 863ಕಿಮೀಗಳ ರಾಜ್ಯ ಹೆದ್ದಾರಿ ಮಾರ್ಗಗಳಿವೆ. ಜಿಲ್ಲಾ ಮುಖ್ಯ ರಸ್ತೆಗಳು 1039ಕಿಮೀ. 24 ಭಾರೀ ಸೇತುವೆಗಳಿವೆ. ಪಶ್ಚಿಮ ಕರಾವಳಿಯ ಹೆದ್ದಾರಿ ದಕ್ಷಿಣಕ್ಕೆ ಕನ್ಯಾಕುಮಾರಿಯವರೆಗೆ, ಉತ್ತರಕ್ಕೆ ಕಾಶ್ಮೀರದವರೆಗೆ ಸಂಪರ್ಕ ಕಲ್ಪಿಸುತ್ತದೆ. ಕಾರವಾರದಿಂದ ಹುಬ್ಬಳ್ಳಿಯ ಕಡೆಗೆ ಹೋಗುವ ಹೆದ್ದಾರಿ ಅನೇಕ ನಗರಗಳ ಸಂಪರ್ಕ ಕಲ್ಪಿಸುತ್ತದೆ. ನಗರಗಳೊಂದಿಗೆ ಹಳ್ಳಿಗಳ ಸಂಪರ್ಕವನ್ನು ಕಲ್ಪಿಸುವ ರಸ್ತೆಗಳೂ ಇವೆ. ಘಟ್ಟದ ಮೇಲೆ ಸಿದ್ದಾಪುರದಿಂದ ಹುಬ್ಬಳ್ಳಿಗೆ, ಕಾರವಾರಕ್ಕೆ, ದಾಂಡೆಲಿಗೆ, ಯಲ್ಲಾಪುರಕ್ಕೆ ಸಂಪರ್ಕ ದೊರಕಿಸುವ ರಸ್ತೆಗಳಿವೆ. ಇತ್ತೀಚೆಗೆ ಕೊಚ್ಚಿ ಮುಂಬೈಗಳಿಗೆ ಹೋಗುವ ಕೊಂಕಣ ರೈಲ್ವೆ ಈ ಜಿಲ್ಲೆಯ ಮೂಲಕ ಹೋಗುತ್ತದೆ. ಜಿಲ್ಲೆಯಲ್ಲಿ 179ಕಿಮೀ ಉದ್ದದ ರೈಲು ಮಾರ್ಗವಿದೆ. 16 ರೈಲು ನಿಲ್ದಾಣಗಳಿವೆ. ಇವುಗಳಲ್ಲಿ ಮುಖ್ಯವಾದವು-ಭಟ್ಕಳ, ಹೊನ್ನಾವರ, ಕುಮಟ, ಗೋಕರ್ಣ, ಅಂಕೋಲ, ಕಾರವಾರ. ಜಿಲ್ಲೆಯಲ್ಲಿ 497 ಅಂಚೆ ಕಚೇರಿಗಳು 152 ದೂರವಾಣಿ ವಿನಿಮಯ ಕೇಂದ್ರಗಳು ಮತ್ತು 90,234 (2006) ದೂರವಾಣಿ ಸಂಪರ್ಕಗಳಿವೆ. ಇದಲ್ಲದೆ ಜಲಮಾರ್ಗದ ಸಂಪರ್ಕವೂ ಇದೆ. ಜಿಲ್ಲೆಯ ಒಟ್ಟು ಜನಸಂಖ್ಯೆ 13,53,644 ಇದರಲ್ಲಿ 9,65,731 ಜನ ಹಳ್ಳಿಯಲ್ಲಿ ವಾಸಿಸುತ್ತಾರೆ. ಇವರಲ್ಲಿ 4,89,908 ಗಂಡಸರು, 4,75,823 ಹೆಂಗಸರು. ಜನಸಾಂದ್ರತೆ ಪ್ರತಿ ಚ.ಕಿಮೀ.ಗೆ 132 ಜನರು, ಲಿಂಗಾನುಪಾತ ಸಾವಿರ ಪುರುಷರಿಗೆ 970 ಮಹಿಳೆಯರು ಈ ಜಿಲ್ಲೆಯಲ್ಲಿ ಹಿಂದುಗಳೂ (ಶೇ. 83.6) ಮುಸಲ್ಮಾನರೂ (ಶೇ.11.9) ಕ್ರೈಸ್ತರೂ (ಶೇ.3.3) ಇದ್ದಾರೆ. ಬಹುಸಂಖ್ಯಾತರು ಹಿಂದುಗಳು. ಈ ಜಿಲ್ಲೆಯಲ್ಲಿ ಬೌದ್ಧ, ಜೈನ ಧರ್ಮಗಳೂ ಪ್ರಚಾರವಾದವು. 10-12ನೆಯ ಶತಮಾನಗಳಲ್ಲಿ ನಾಥಪಂಥವೂ 16-18ನೆಯ ಶತಮಾನಗಳಲ್ಲಿ ವೀರಶೈವ ಪಂಥದ ಪ್ರಚಾರವೂ ನಡೆದವು. ಜಿಲ್ಲೆಯಲ್ಲಿ ಕ್ರೈಸ್ತ ಮಂದಿರಗಳೂ ಮಸೀದಿಗಳೂ ಸ್ಮಾರ್ತ, ಜೈನ, ವೀರಶೈವ, ವೈಷ್ಣವ ಮಠಗಳೂ ಇವೆ. ಹಿಂದುಧರ್ಮದ ಹಲವು ಪಂಗಡಗಳಿಗೆ ಸೇರಿದ ನೂರಾರು ದೇವಾಲಯಗಳು ಇವೆ. ನಾಥಪಂಥದ ಅವಶೇಷಗಳು ಅಂಕೋಲ, ಬೆಳಂಬರ್, ಹೊನ್ನೆಬೈಲ, ಅಘನಾಶಿನಿ, ಲಿಂಗೆ, ಮಾಜಾಳಿ, ಯಾಣ, ಕವಳೆಯಲ್ಲಿವೆ.

ಸಹಕಾರ

[ಸಂಪಾದಿಸಿ]

1904ರಲ್ಲಿ ಸಹಕಾರಿಸಂಘಗಳ ನೋಂದಣಿ ಕಾಯಿದೆ ಜಾರಿಗೆ ಬಂದಿತು. 1912ರಲ್ಲಿ ಅದಕ್ಕೆ ತಿದ್ದುಪಡಿ ಬಂತು. 1912ರ ಕಾಯಿದೆಯಂತೆ ಕೃಷಿ, ಕೃಷಿಯೇತರ ಸಾಲ ಸಂಘಗಳು ಅಸ್ತಿತ್ವಕ್ಕೆ ಬಂದವು. 1905ರಲ್ಲಿ ಶಿರಸಿ ಗ್ರಾಮೀಣ ಸಹಕಾರಿ ಸಂಘ, 1912ರಲ್ಲಿ ಹಳಿಯಾಳದ ಸಂಘ, 1913ರಲ್ಲಿ ಪಾಳಾದಲ್ಲಿ ಕೃಷೀತರ ಸಾಲ ಸಂಘ ಪ್ರಾರಂಭವಾದುವು. 1911ರಲ್ಲಿ ಶಿರಸಿ ಚರ್ಮಕಾರರ ಪರಸ್ಪರ ಪತ್ತಿನ ಸಂಘ, 1917ರಲ್ಲಿ ಹೊನ್ನಾವರ ಹವ್ಯಕ ಕೊ-ಆಪರೇಟಿವ್ ಸೊಸೈಟಿ, 1918ರಲ್ಲಿ ಕಾರವಾರ ಕೆನರಾ ಕೆಥೊಲಿಕ್ ಕ್ರೆಡಿಟ್ ಸೊಸೈಟಿ, 1915ರಲ್ಲಿ ಮೀನುಗಾರರ ಸಹಕಾರಿ ಸಂಘವಾದ ಹರಿತಂತ್ರ ಖಾರವಿ ಷಿಷರೀಸ್ ಸೊಸೈಟಿ ಕಾರವಾರದಲ್ಲಿ ಪ್ರಾರಂಭವಾದವು. 1912ರಲ್ಲಿ ಕಾರವಾರ ಮತ್ತು ಕುಮಟ ಪಟ್ಟಣ ಬ್ಯಾಂಕುಗಳು ಮತ್ತು ಶಿರಸಿ ಅರ್ಬನ್ ಬ್ಯಾಂಕ್ ಆರಂಭವಾದವು. 1920ರಲ್ಲಿ ಜಿಲ್ಲಾ ಮಧ್ಯವರ್ತಿ ಸಹಕಾರಿಬ್ಯಾಂಕ್, 1922ರಲ್ಲಿ ಕುಮಟದಲ್ಲಿ ತೋಟಗಾರ್ಸ್‌ ಕೊ-ಆಪರೇಟಿವ್ ಸೇಲ್ಸ್‌ ಸೊಸೈಟಿ, ಅರೆಕಾನೆಟ್ ಕೊ-ಆಪರೇಟಿವ್-ಸೊಸೈಟಿ, ಕಾರವಾರದಲ್ಲಿ 1935ರಲ್ಲಿ ಆರಂಭವಾದ ಭೂ ಅಡಮಾನಬ್ಯಾಂಕ್, 1913ರಲ್ಲಿ ಸ್ಥಾಪನೆಯಾದ ಶಿರಸಿ ತೋಟಗಾರ್ಸ್‌ ಸಹಕಾರಿ ಖರೀದಿ ವಿತರಣ ಮತ್ತು ಸಾಲ ಸಂಘ 1962ರ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆಗಿ ಪರಿವರ್ತನೆಯಾಯಿತು. 1950ರಲ್ಲಿ ತಾಲ್ಲೂಕು ಕೃಷಿ ಹುಟ್ಟುವಳಿ ಮಾರಾಟ ಸಂಘಗಳು, ಕೂಲಿಕಾರರ ಸಹಕಾರಿ ಸಂಘಗಳು, ಮಹಿಳಾ ಸಹಕಾರಿ ಸಂಘಗಳು ಹುಟ್ಟಿದ್ದವು. ಈಗ ಎಲ್ಲ ತಾಲ್ಲೂಕುಗಳಲ್ಲೂ ಭೂ ಅಭಿವೃದ್ಧಿ ಬ್ಯಾಂಕುಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು, ಕೃಷಿ ಹುಟ್ಟುವಳಿ ಮಾರಾಟ ಸಂಘಗಳು, ನೌಕರರ ಸಹಕಾರಿ ಸಂಘಗಳು, ಸಂಸ್ಕರಣ ಸಹಕಾರಿ ಸಂಘಗಳು, ಮೀನುಗಾರಿಕೆ ಸಹಕಾರಿ ಸಂಘಗಳು, ಸ್ಥಳೀಯ ಅರ್ಬನ್ ಬ್ಯಾಂಕುಗಳು, ಚೇತನಾ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತವೆ. ಇವಲ್ಲದೆ ಕೂಲಿಕಾರರ ಅನೇಕ ಸಂಘಗಳಿವೆ. ಜಿಲ್ಲೆಯಲ್ಲಿ 175 ವ್ಯವಸಾಯ ಸಹಕಾರಿ ಸಂಘಗಳೂ 26 ಗೃಹ ನಿರ್ಮಾಣ ಸಹಕಾರ ಸಂಘಗಳೂ 13 ವ್ಯವಸಾಯೋತ್ಪನ್ನ ಮಾರಾಟ ಸಂಘಗಳೂ 32 ನಿಯಂತ್ರಿತ ಮಾರುಕಟ್ಟೆಗಳು ಇವೆ. 136 ಹಾಲು ಉತ್ಪಾದಕರ ಮಾರಾಟ ಸಂಘಗಳು, 12 ಸಹಕಾರ ಬ್ಯಾಂಕುಗಳು.

ಉದ್ದಿಮೆಗಳು

[ಸಂಪಾದಿಸಿ]

ಎಂಜಿನಿಯರಿಂಗ್ ಉದ್ಯಮ 15, ರಾಸಾಯನಿಕ ಕಾರ್ಖಾನೆಗಳು 3, ಬಟ್ಟೆ ಕಾರ್ಖಾನೆ 2, ಇತರೆ ಸಣ್ಣ ಪ್ರಮಾಣದ ಕಾರ್ಖಾನೆಗಳು 66, ಈ ಕಾರ್ಖಾನೆಗಳಲ್ಲಿ ಉದ್ಯೋಗಿಗಳು 13,243. ಜಿಲ್ಲೆಯಲ್ಲಿ ಕೆಲವು ಬೃಹತ್ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿವೆ. ವೆಸ್ಟ್‌ಕೋಸ್ಟ್‌ ಪೇಪರ್ ಮಿಲ್ಸ್‌, ದಾಂಡೇಲಿಯ ಇಂಡಿಯನ್ ಪ್ಲೈವುಡ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿ, ಜೈಹಿಂದ್ ಸಾಮಿಲ್, ಬಳ್ಳಾಪುರ ಇಂಡಸ್ಟ್ರಿಸ್ ಲಿ, ಬಿಣಗಾದ, ದಾಂಡೇಲಿ ಫೆರೊ ಅಲಾಯ್ಸ್‌ ಪ್ರೈ.ಲಿ. ಇವು ಮುಖ್ಯ ಉದ್ದಿಮೆಗಳು. ಇವಲ್ಲದೆ ಸಣ್ಣ ಕೈಗಾರಿಕಾ ಘಟಕಗಳು, ಖಾದಿ ಗ್ರಾಮೋದ್ಯೋಗ ಕರಕುಶಲ ಘಟಕಗಳು ಹಾಗೂ ಕೈಮಗ್ಗದ ಘಟಕಗಳು ಜಿಲ್ಲೆಯಲ್ಲಿವೆ, ಹೆಂಚು ಕಾರ್ಖಾನೆಗಳಿವೆ. ಮೀನುಗಾರಿಕೆ ಘಟಕಗಳು, ದೋಣಿ ಕಟ್ಟುವ ಘಟಕಗಳು, ಆಹಾರ ಸಂಸ್ಕರಣ ಘಟಕಗಳು, ರಾಸಾಯನಿಕ ಘಟಕಗಳು ಚರ್ಮ ಮತ್ತು ರಬ್ಬರ್ ಘಟಕಗಳು, ಗಂಧ ಚಂದನ ಕೆತ್ತನೆಯ ಘಟಕಗಳು, ಮುದ್ರಣ ಘಟಕಗಳು, ನೂಲುವ ನೇಯುವ ಘಟಕಗಳು, ಜೇನು ಸಾಕಣೆ, ಬೆತ್ತ ಬಿದಿರುಗಳಿಂದ ವಸ್ತುಗಳನ್ನು ತಯಾರಿಸುವ ಘಟಕಗಳು, ಎಣ್ಣೆ ತಯಾರಿಕಾ ಘಟಕಗಳು, ಕುಂಬಾರಿಕೆ ಮುಂತಾದ ಅನೇಕ ಉದ್ಯಮಗಳಿವೆ. ಇವುಗಳಲ್ಲಿ ಕೆಲವು ಗುಡಿ ಕೈಗಾರಿಕೆಗಳು.

ಶಿಕ್ಷಣ

[ಸಂಪಾದಿಸಿ]

ಜಿಲ್ಲೆಯ ಸಾಕ್ಷರತಾ ಪ್ರಮಾಣ ಶೇ. 76.59, ಪುರುಷರು ಶೇ. 84.48, ಮಹಿಳೆಯರು ಶೇ. 68.48. ಜಿಲ್ಲೆಯಲ್ಲಿ ಮೊದಲು ಜೈನ, ವೀರಶೈವ, ಬ್ರಾಹ್ಮಣ ಸಂಪ್ರದಾಯದ ಪಾಠಶಾಲೆಗಳು ನಡೆಯುತ್ತಿದ್ದವು. ಅದಕ್ಕೆ ಅನೇಕ ಅಗ್ರಹಾರಗಳು ಪ್ರಚಲಿತವಿದ್ದವು. ಅವುಗಳೆಲ್ಲ ಬ್ರಿಟಿಷರ ಆಳಿಕೆಯಲ್ಲಿ ಕೊನೆಗೊಳ್ಳುತ್ತ ಬಂದು 1866 ಸುಮಾರಿಗೆ ಸರ್ಕಾರಿ ಶಾಲೆಗಳು ಆರಂಭವಾದವು. ಹಳಿಯಾಳ, ಕುಮಟ, ಶಿರಸಿಗಳಲ್ಲಿ ಆಂಗ್ಲೊವರ್ನಾಕ್ಯುಲರ್ ಶಾಲೆಗಳಿದ್ದವು. 1866ರಲ್ಲಿ ಒಂದು ಉರ್ದು ಶಾಲೆ ಹಳಿಯಾಳದಲ್ಲಿ ಆರಂಭವಾಯಿತು.

1864ರಲ್ಲಿ ಕಾರವಾರದಲ್ಲಿ ಮೊದಲ ಹೈಸ್ಕೂಲು ಪ್ರಾರಂಭವಾಯಿತು. 1935-36ರಲ್ಲಿ 853 ಪ್ರಾಥಮಿಕ ಶಾಲೆಗಳಿದ್ದವು. 23,465 ಮಂದಿ ಶಿಕ್ಷಣ ಪಡೆಯುತ್ತಿದ್ದರು. ಇವರಲ್ಲಿ 5776 ವಿದ್ಯಾರ್ಥಿನಿಯರು. ಆ ವರ್ಷದಿಂದ ಪರಿಶಿಷ್ಟ ಜಾತಿಯ, ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಲು ವಿಶೇಷ ಗಮನ ಕೊಡಲಾಯಿತು. ಜಿಲ್ಲಾ ಸ್ಕೂಲ್ ಬೋರ್ಡ್ 1944ರಲ್ಲಿ ಆರಂಭವಾಗಿ ಎಲ್ಲ ಶಾಲೆಗಳು ಸ್ಕೂಲ್ ಬೋರ್ಡ್ ಅಧೀನಕ್ಕೆ ಬಂದು ಶಿಕ್ಷಣದಲ್ಲಿ ಒಂದು ಬಗೆಯ ಶಿಸ್ತು ಬಂತು. ಸ್ಕೂಲ್ಬೋರ್ಡಿನಿಂದ ನಿಯಂತ್ರಣಗೊಂಡ ಶಿಕ್ಷಣ ಇಲಾಖೆಯ ಖರ್ಚು ಪುರೈಸಲು ಸ್ಥಳೀಯ ಆಡಳಿತಗಳು ವಿದ್ಯಾ ಕರ ಸಂಗ್ರಹಿಸತೊಡಗಿದವು. ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾನೂನು (1918) ಜಾರಿಗೆ ಬಂದಾಗ ಹಳಿಯಾಳ ಮತ್ತು ಹೊನ್ನಾವರ ಪುರಸಭೆಗಳು ಈ ಯೋಜನೆಯನ್ನು ಜಾರಿಗೆ ತಂದವು. 1947ರಲ್ಲಿ ಮುಂಬಯಿ ಪ್ರಾಥಮಿಕ ಶಿಕ್ಷಣ ಅಧಿನಿಯಮದಂತೆ 7-11 ವರ್ಷದ ಮಕ್ಕಳು ಶಾಲೆಗೆ ಹೋಗುವುದು ಕಡ್ಡಾಯವಾಯಿತು. ರಾಜ್ಯ ಪುನಾರಚನೆಯ ಕಾಲದಲ್ಲಿ 969 ಪ್ರಾಥಮಿಕ ಶಾಲೆಗಳೂ 71779 ವಿದ್ಯಾರ್ಥಿಗಳೂ 1759 ಶಿಕ್ಷಕರೂ ಇದ್ದರು. 1900ರ ವೇಳೆಗೆ ಘಟ್ಟದ ಕೆಳಗೆ ಐದು ಪ್ರೌಢಶಾಲೆಗಳೂ ಘಟ್ಟದ ಮೇಲೆ ಶಿರಸಿಯಲ್ಲಿ ಒಂದೇ ಒಂದು ಪ್ರೌಢಶಾಲೆಯೂ ಇದ್ದವು. 1947ರ ವರೆಗೂ ಶಿಕ್ಷಣ ಒಂದು ತೀವ್ರ ಆಸಕ್ತಿಯ ವಿಷಯವಾಗಿರಲಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಅದುವರೆಗೆ ಜಿಲ್ಲೆಯಲ್ಲಿ ಪದವಿಯ ಮಟ್ಟದ ಉನ್ನತ ಶಿಕ್ಷಣದ ಸೌಲಭ್ಯಗಳಿರಲಿಲ್ಲ. ಸರ್ಕಾರದಿಂದ ಎಲ್ಲವನ್ನೂ ಅಪೇಕ್ಷಿಸುವುದು ಸಾಧ್ಯವಿಲ್ಲವೆಂದು ಮನಗಂಡ ಸಾರ್ವಜನಿಕರು 1947ರಲ್ಲಿ ಕುಮಟದಲ್ಲಿ ಕೆನರಾ ಎಜುಕೇಶನ್ ಸೊಸೈಟಿಯನ್ನು ಆರಂಭಿಸಿದರು. 1919ರಲ್ಲಿ ಭಟ್ಕಳದಲ್ಲಿ ಆರಂಭವಾದ ಅಂಜುಮನ್ ಎಜುಕೇಶನ್ ಟ್ರಸ್ಟ್‌, 1952ರಲ್ಲಿ ಸಿದ್ದಾಪುರದಲ್ಲಿ ಸ್ಥಾಪಿಸಿದ ಸಹಕಾರಿ ಶಿಕ್ಷಣ ಪ್ರಸಾರ ಸಮಿತಿ, 1954ರಲ್ಲಿ ಯಲ್ಲಾಪುರದಲ್ಲಿ ಆರಂಭವಾದ ಶಿವಾಜಿ ಎಜುಕೇಶನ್ ಸೊಸೈಟಿ, 1961ರಲ್ಲಿ ಶಿರಸಿಯಲ್ಲಿ ಆರಂಭಿಸಲಾದ ಮಾಡರ್ನ್ ಎಜುಕೇಶನ್ ಸೊಸೈಟಿ, 1962ರಲ್ಲಿ ಅಂಕೋಲದಲ್ಲಿ ಆರಂಭಿಸಲಾದ ನೂತನ ಶಿಕ್ಷಣ ಸಭಾ ಟ್ರಸ್ಟ್‌, 1970ರಲ್ಲಿ ದಾಂಡೇಲಿಯಲ್ಲಿ ಆರಂಭಿಸಿದ ದಾಂಡೇಲಿ ಎಜುಕೇಶನ್ ಸೊಸೈಟಿ, 1964ರಲ್ಲಿ ಹೊನ್ನಾವರದಲ್ಲಿ ಮಹಾವಿದ್ಯಾಲಯ ಸ್ಥಾಪಿಸಿದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜುಕೇಶನ್ ಸೊಸೈಟಿ, 1953ರಲ್ಲಿ ದಿನಕರದೇಸಾಯಿ ನೇತೃತ್ವದಲ್ಲಿ ಸ್ಥಾಪಿತವಾದ ಕೆನರ ವೆಲ್ಫೇರ್ ಟ್ರಸ್ಟ್‌ ಮೊದಲಾದ ಅನೇಕ ಶಿಕ್ಷಣ ಸಂಸ್ಥೆಗಳು ಜಿಲ್ಲೆಯ ಶೈಕ್ಷಣಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದವು.

1949ರಲ್ಲಿ ಕುಮಟದಲ್ಲಿ ಕೆನರಾ ಕಾಲೇಜು ಆರಂಭವಾಗಿ ಅನಂತರ ಅದು ಎ.ವಿ.ಬಾಳಿಗಾ ಕಾಲೇಜ್ ಎಂದು ನಾಮಕರಣ ಗೊಂಡಿತು. 1961ರಲ್ಲಿ ಕಾರವಾರದಲ್ಲಿ ಕಾಲೇಜು ಆರಂಭವಾಯಿತು. ಮುಂದಿನ ಹದಿನೈದು ವರ್ಷಗಳಲ್ಲಿ 13 ಪದವಿ ಮಹಾವಿದ್ಯಾಲಯಗಳು, 3 ವೃತ್ತಿಪರ ಮಹಾವಿದ್ಯಾಲಯಗಳು, 3 ಬಿ.ಇಡಿ. ಮಹಾ ವಿದ್ಯಾಲಯಗಳು, ಒಂದು ಕಾನೂನು ಮಹಾವಿದ್ಯಾಲಯ ಆರಂಭವಾದವು. 1984-85ರಿಂದ ಶಿರಸಿ ಕುಮಟ ಮತ್ತು ದಾಂಡೇಲಿಯಲ್ಲಿ ಪಾಲಿಟೆಕ್ನಿಕ್ಗಳು ನಡೆಯುತ್ತಿವೆ. 1958ರಲ್ಲಿ ಕಾರವಾರದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆರಂಭವಾಯಿತು. ಈಗ ಈ ಜಿಲ್ಲೆಯ ಭಟ್ಕಳದಲ್ಲಿ ಒಂದು ಎಂಜಿನಿಯರಿಂಗ್ ಕಾಲೇಜ್ ಇದೆ. ಸಿದ್ದಾಪುರದಲ್ಲೊಂದು ಆಯುರ್ವೇದ ಮಹಾವಿದ್ಯಾಲಯ ವಿದೆ. ಶಿರಸಿಯಲ್ಲಿ ಅರಣ್ಯ ವಿe್ಞÁನ ಕಾಲೇಜು ಇದೆ.

1937ರಲ್ಲಿ ಮುಂಬಯಿ ಸರ್ಕಾರದಿಂದ ಅನುದಾನಿತವಾದ ವಯಸ್ಕರ ಶಿಕ್ಷಣ ಸಮಿತಿಯ ರಚನೆಯಾಗಿತ್ತು. 1947-56ರ ಅವಧಿಯಲ್ಲಿ ಸಮುದಾಯ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರಿಂದ 4 ತಿಂಗಳ ಮತ್ತು ಆರು ತಿಂಗಳ ಅವಧಿಗಳ ಸಾಕ್ಷರತಾ ವರ್ಗಗಳು ಆರಂಭವಾದವು. 1980ರಲ್ಲಿ ಶಿರಸಿಯಲ್ಲಿ ವಯಸ್ಕರ ಶಿಕ್ಷಣಕ್ಕೆ ಯೋಜನಾ ಕಚೇರಿ ತೆರೆದ ಅನಂತರ ವಯಸ್ಕರ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಯಿತು. ಈಗ 150 ವಯಸ್ಕರ ಶಿಕ್ಷಣ ಕೇಂದ್ರಗಳೂ 150 ಸಾಕ್ಷರೋತ್ತರ ತರಬೇತಿ ಕೇಂದ್ರಗಳೂ ಕೆಲಸ ಮಾಡುತ್ತಿವೆ. ಕೇಂದ್ರ ಸರ್ಕಾರದ ಯೋಜನೆಯಡಿ ನವೋದಯ ಶಾಲೆಯೂ ನಡೆಯುತ್ತಿವೆ.

ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಸಿಗುವ ನಿಟ್ಟಿನಲ್ಲಿ ಶಿಕ್ಷಣ ಖಾತೆ 1981-82ರಲ್ಲಿ ಪ್ರೌಢಶಾಲೆಯ 65 ಶಿಕ್ಷಕರಿಗೆ ತರಬೇತು ನೀಡಿ ಅವರನ್ನು ಕೆರಿಯರ್ ಮಾಸ್ಟರ್ಸ್‌ ಎಂದು ಕರೆದುದಲ್ಲದೆ ಬಿ.ಎಡ್. ವಿದ್ಯಾರ್ಥಿಗಳಿಗೂ ಈ ವಿಷಯ ಪರಿಚಯಿಸಿತು. ಜಿಲ್ಲೆಯಲ್ಲಿ 2292 ಪ್ರಾಥಮಿಕ ಶಾಲೆಗಳು, 231 ಪ್ರೌಢಶಾಲೆಗಳೂ 63 ಪದವಿಪೂರ್ವ ಕಾಲೇಜುಗಳೂ 28 ಸಾಮಾನ್ಯ ಶಿಕ್ಷಣ ಕಾಲೇಜುಗಳು, 5 ಪಾಲಿಟೆಕ್ನಿಕ್ಗಳು, 168 ಗ್ರಂಥಾಲಯಗಳು ಇವೆ (2000). ಜಿಲ್ಲೆಯಲ್ಲಿ 11 ಅಲೋಪತಿ ಆಸ್ಪತ್ರೆಗಳು, 3ಭಾರತೀಯ ವೈದ್ಯ ಪದ್ಧತಿಯ ಆಸ್ಪತ್ರೆಗಳು, 61 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 120 ಕುಟುಂಬ ಕಲ್ಯಾಣ ಕೇಂದ್ರಗಳು ಇವೆ.

ಇತಿಹಾಸ

[ಸಂಪಾದಿಸಿ]

ಇಲ್ಲಿನ ಇತಿಹಾಸ ಮೌರ್ಯರ ಕಾಲದಿಂದ ಪ್ರಾರಂಭವಾಗುತ್ತದೆ (ಪ್ರ.ಶ.ಪು.4-3ನೆಯ ಶತಮಾನ). ಈ ಪ್ರದೇಶ ಮೌರ್ಯ ಸಾಮ್ರಾಜ್ಯದಲ್ಲಿತ್ತೆಂದೂ ವನವಾಸಿ ಅಥವಾ ಇಂದಿನ ಬನವಾಸಿ ಮುಖ್ಯ ಸ್ಥಳವಾಗಿತ್ತೆಂದೂ ಈ ಪ್ರದೇಶಕ್ಕೆ ಬೌದ್ಧ ಭಿಕ್ಷುಗಳನ್ನು ಧರ್ಮಪ್ರಸಾರಕ್ಕಾಗಿ ಅಶೋಕನ ಕಾಲದಲ್ಲಿ ಕಳಿಸಲಾಗಿತ್ತೆಂದೂ ಮಹಾವಂಶ, ದೀಪವಂಶ ಮೊದಲಾದ ಧರ್ಮಗ್ರಂಥಗಳಿಂದ ತಿಳಿಯುತ್ತದೆ. ಮುಂದೆ ಪ್ರ.ಶ.ಪು. 2 ರಿಂದ ಪ್ರ.ಶ.3ನೆಯ ಶತಮಾನದಲ್ಲಿ ಸಾತವಾಹನರ ಆಳ್ವಿಕೆಯಲ್ಲಿ ಇತ್ತೆಂದು ಬನವಾಸಿಯ ಉತ್ಖನನಗಳಿಂದ ತಿಳಿಯುತ್ತದೆ. ಇಲ್ಲಿ ಯಜ್ಞಶಾತಕರ್ಣಿಯ ಕೆಲವು ನಾಣ್ಯಗಳು ದೊರಕಿವೆ. 2 ಮತ್ತು 3ನೆಯ ಶತಮಾನದಲ್ಲಿ ಸಾತವಾಹನರ ಸಂಬಂಧಿಗಳಾದ ಚಟುಕುಲದವರು ಇಲ್ಲಿ ಆಳುತ್ತಿದ್ದರು. 4 ರಿಂದ 6ನೆಯ ಶತಮಾನದವರೆಗೆ ಈ ಪ್ರದೇಶ ಕದಂಬರ ಆಳ್ವಿಕೆಯಲ್ಲಿತ್ತು. ಕದಂಬರ ಅನಂತರ ಬಾದಾಮಿಯ ಚಳುಕ್ಯರು (6-8ನೆಯ ಶತಮಾನ), ರಾಷ್ಟ್ರಕೂಟರೂ (8-10ನೆಯ ಶತಮಾನ) ಆಳಿದರು. ರಾಷ್ಟ್ರಕೂಟರ ಮತ್ತು ಅನಂತರ ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಈ ಜಿಲ್ಲೆಯ ಬಹುಭಾಗ ಬನವಾಸಿ 12000 ಎಂಬ ಪ್ರಮುಖ ಪ್ರಾಂತ್ಯದ ಭಾಗವಾಗಿತ್ತು. ಅಂದಿನ ಆಳರಸರ ಪ್ರತಿನಿಧಿಗಳು ಬನವಾಸಿಯನ್ನು ತಮ್ಮ ಪ್ರಾಂತೀಯ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. 11 ಮತ್ತು 13ನೆಯ ಶತಮಾನಗಳಲ್ಲಿ ಹಾನಗಲ್ಲು ಮತ್ತು ಗೋವೆಯ ಕದಂಬರು ಚಾಳುಕ್ಯ ಸಾಮಂತರಾಗಿ ಹೆಚ್ಚುಮಟ್ಟಿಗೆ ಈ ಪ್ರದೇಶವನ್ನು ಆಳುತ್ತಿದ್ದರು. 14ನೆಯ ಶತಮಾನದಾರಭ್ಯ ಸು.16ನೆಯ ಶತಮಾನದವರೆಗೆ ಈ ಜಿಲ್ಲೆಯ ಬಹುಭಾಗ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿತ್ತು. 17-18ನೆಯ ಶತಮಾನಗಳಲ್ಲಿ ಕೆಳದಿಯ ನಾಯಕರು ಮತ್ತು ಬಿಳಗಿ, ಸ್ವಾದಿ, ಗೇರುಸೊಪ್ಪೆ ಮೊದಲಾದ ಪಾಳೆಗಾರ ವಂಶದವರು ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಲ್ಲಿ ಆಳುತ್ತಿದ್ದರು. 18ನೆಯ ಶತಮಾನದ ಉತ್ತರಾರ್ಧದಲ್ಲಿ, ಉತ್ತರ ಕನ್ನಡ ಜಿಲ್ಲೆ ಹೈದರ್ಅಲಿ ಮತ್ತು ಟಿಪ್ಪುಸುಲ್ತಾನರ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನದ ಭಾಗವಾಯಿತು. 1799ರಲ್ಲಿ ಶ್ರೀರಂಗಪಟ್ಟಣದ ಪತನವಾದ ಅನಂತರ ಇದು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟು ಮುಂಬಯಿ ಪ್ರಾಂತ್ಯಕ್ಕೆ ಸೇರಿತು. ಸು.150 ವರ್ಷ ಆ ಪ್ರಾಂತ್ಯದಲ್ಲಿದ್ದ ಈ ಜಿಲ್ಲೆ ಭಾಷಾನುಗುಣ ಪ್ರಾಂತರಚನೆಯ ಅನಂತರ (1956) ಕರ್ನಾಟಕ ರಾಜ್ಯಕ್ಕೆ ಸೇರಿತು.

ಸ್ವಾತಂತ್ರ್ಯಸಮರ

[ಸಂಪಾದಿಸಿ]

1862ಕ್ಕಿಂತ ಮೊದಲು ದಕ್ಷಿಣೋತ್ತರ ಜಿಲ್ಲೆಗಳು ಬೇರೆ ಬೇರೆಯಾಗಿರಲಿಲ್ಲ. ಆಗ ಈ ಇಡೀ ಜಿಲ್ಲೆಗೆ ಕನ್ನಡ ಜಿಲ್ಲೆ ಎಂಬ ಹೆಸರಿತ್ತು. ಈ ಜಿಲ್ಲೆಯ ಒಗ್ಗಟ್ಟು ಮುಂದೆ ಬ್ರಿಟಿಷ್ ಸರ್ಕಾರಕ್ಕೆ ಮುಳುವಾಗಬಹುದೆಂಬ ಶಂಕೆಯಿಂದ ಆಗಿನ ಜಿಲ್ಲಾ ಕಲೆಕ್ಟರ್ ಮುನ್ರೂ ಎಂಬಾತ ಈ ಜಿಲ್ಲೆಯನ್ನು ಎರಡಾಗಿ ಒಡೆಯಬೇಕೆಂದು ಸಲಹೆ ಮಾಡಿದ. ಅದರಂತೆ ಉತ್ತರ ಭಾಗವನ್ನು ಉತ್ತರ ಕನ್ನಡ ಎಂದು ಹೆಸರಿಸಿ ಮುಂಬಯಿ ಪ್ರಾಂತ್ಯಕ್ಕೂ ದಕ್ಷಿಣ ಭಾಗವನ್ನು ದಕ್ಷಿಣ ಕನ್ನಡ ಜಿಲ್ಲೆ ಎಂದು ಕರೆದು ಅದನ್ನು ಮದರಾಸು ಪ್ರಾಂತ್ಯಕ್ಕೂ ಸೇರಿಸಲಾಯಿತು. 1890ರಲ್ಲಿ ಜಿಲ್ಲೆಯ ಜನರಿಂದ ಜಂಗಲ್ ಸವಲತ್ತುಗಳನ್ನು ಕಸಿದುಕೊಳ್ಳಲಾ ಯಿತು. 1914-15ರಲ್ಲಿ ರೈತರ ಮೇಲೆ ವಿಪರೀತ ಕರ ಹೇರಲಾಯಿತು. ಮಾರಕ ರೋಗಗಳಾದ ಮಲೇರಿಯ, ಪ್ಲೇಗು ಹಬ್ಬಿ ಜನಸಂಖ್ಯೆ ಗಣನೀಯವಾಗಿ ಇಳಿಯಿತು. 1901ರಲ್ಲಿ 53,071 ಇದ್ದ ಜನಸಂಖ್ಯೆ 1931ರ ವೇಳೆಗೆ 37,000ಕ್ಕೆ ಇಳಿದಿತ್ತು. ಬ್ರಿಟಿಷ್ ಆಡಳಿತದಿಂದ ಜನ ಬೇಸರಗೊಂಡಿದ್ದರು.

ಮೂಲತಃ ಲೋಕಮಾನ್ಯ ಟಿಳಕರ ಕೇಸರಿಯ ಅಗ್ರಲೇಖದಿಂದ ಇಲ್ಲಿಯ ಜನ ಸ್ಫೂರ್ತಿ ಪಡೆದರು. ಕನ್ನಡ ಸುವಾರ್ತೆ (1882), ಹವ್ಯಕ ಸುಬೋಧ (1895), ಸಂಯುಕ್ತ ಕರ್ನಾಟಕ, ಕಾನಡಾವೃತ್ತ (1916), ಕಾನಡಾ ಧುರೀಣ, ಬಾಂಬೆಕ್ರಾನಿಕಲ್ ಪತ್ರಿಕೆಗಳಿಂದ ಜನರು ದೇಶವಿದೇಶದ ಸುದ್ದಿಗಳನ್ನು ತಿಳಿದುಕೊಂಡು ಬ್ರಿಟಿಷ್ ಆಡಳಿತದ ವಿರುದ್ಧ ಸಿಡಿದೆದ್ದರು. ಮೊದಲು ಟಿಳಕರ ವಿಚಾರಗಳನ್ನು ಬೆಂಬಲಿಸಿದ ಉತ್ತರ ಕನ್ನಡದ ಜನ ಟಿಳಕರ ಮರಣಾನಂತರ (1920) ಗಾಂಧೀಜಿಯವರು ನೇತೃತ್ತ್ವವಹಿಸಿದಾಗ ಅವರ ನಾಯಕತ್ವದಲ್ಲಿ ಹೋರಾಟ ಮುಂದುವರಿಸಿದರು.

ಸ್ವದೇಶಿ ಚಳವಳಿ (1906), ಅಸಹಕಾರ ಆಂದೋಲನ, ಉಪ್ಪಿನ ಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ, ಕರನಿರಾಕರಣೆ, ವೈಯಕ್ತಿಕ ಸತ್ಯಾಗ್ರಹ ಇವುಗಳಲ್ಲೆಲ್ಲಾ ಜಾತಿಮತಗಳನ್ನೆಣಿಸದೆ ಸಾವಿರಾರು ಜನ ಬೀದಿಗಿಳಿದು ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ನಿರತರಾದರು. ಅನೇಕರು ಶಾಲೆ ಕಾಲೇಜು ಕಚೇರಿಗಳನ್ನು ಬಿಟ್ಟು, ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ಜೈಲು ಸೇರಿದರು, ಕಠಿಣ ಶಿಕ್ಷೆ ಅನುಭವಿಸಿದರು. ಶಿರಸಿ, ಸಿದ್ದಾಪುರ, ಅಂಕೋಲ ಹೋರಾಟದ ಕೇಂದ್ರಗಳಾಗಿದ್ದವು. ನಾರಾಯಣ ಚಂದಾವರಕರ, ತಿಪ್ಪಯ್ಯ ಮಾಸ್ತರ, ಕಡವೆ ರಾಮಕೃಷ್ಣ ಹೆಗಡೆ, ವಾಮನ ಹೊರಿಕೆ, ಶಂಕರರಾವ್ ಗುಲ್ವಾಡಿ, ತಿಮ್ಮಪ್ಪ ನಾಯಕ, ನಾರಾಯಣ ಮರಾಠೆ, ಶಿರಳಗಿ ಸುಬ್ರಾಯಭಟ್ಟ, ಎಸ್.ಎನ್. ಕೇಶವೈನ್ ಮೊಟೆನ್ಸರ್, ತಿಮ್ಮಪ್ಪ ಹೆಗಡೆ, ದೊಡ್ಮನೆ ನಾಗೇಶ ಹೆಗಡೆ, ಭವಾನಿಬಾಯಿ ಕಾನಗೋಡು, ಸೀತಾಬಾಯಿ ಮಡಗಾಂವಕರ, ಜೋಗಿ ಬೀರಣ್ಣ ನಾಯಕ, ಎನ್.ಜಿ.ಪೈ., ನಾರಾಯಣ ಪಿ ಭಟ್ಟ ಮೊದಲಾದವರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಉತ್ತರ ಕನ್ನಡ ಜಿಲ್ಲೆಯ ಸಾಧನೆಗೆ ಚರಿತ್ರೆಯ ಪುಟಗಳಲ್ಲಿ ಶಾಶ್ವತ ಸ್ಥಾನ ದೊರಕಿಸಿಕೊಟ್ಟಿದ್ದಾರೆ. ಈ ಜಿಲ್ಲೆಯ ಜನ ಮಾಡಿದ ಉಪ್ಪಿನ ಸತ್ಯಾಗ್ರಹ, ಕರನಿರಾಕರಣೆ ಚಳವಳಿ ಇವು ಹೊಸ ಇತಿಹಾಸ ನಿರ್ಮಿಸಿದವು.

ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೂ ಕರ್ನಾಟಕ ಏಕೀಕರಣ ಚಳವಳಿ ಮುಂದುವರಿ ಯಿತು. 1954ರಲ್ಲಿ ದಿನಕರ ದೇಸಾಯಿ ಮತ್ತು ಪಿ.ಎಸ್.ಕಾಮತರು ಮನವಿಯೊಂದನ್ನು ತಯಾರಿಸಿ ರಾಜ್ಯ ಮರುವಿಂಗಡಣೆ ಆಯೋಗಕ್ಕೆ ಒಪ್ಪಿಸಿದ್ದರು.

1940ರ ಸುಮಾರಿನಲ್ಲಿ ಉಳುವವನೆ ಭೂಮಿಯ ಒಡೆಯ ಎಂಬ ಘೂೕಷಣೆಯೊಂದಿಗೆ ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ಧುರೀಣತ್ವದಲ್ಲಿ ನಡೆದ ಚಳವಳಿಯಲ್ಲಿ ಜಿಲ್ಲೆಯ ಜನ ಪಾಲ್ಗೊಂಡು ಅದನ್ನು ಒಂದು ಬಲಿಷ್ಠ ಸಂಘಟನೆಯನ್ನಾಗಿ ರೂಪಿಸಿದರು. ಸರ್ಕಾರ ಗಾಬರಿಗೊಂಡು 1940ರಿಂದ ದಿನಕರ ದೇಸಾಯಿಯವರು ಉತ್ತರ ಕನ್ನಡ ಗಡಿಯನ್ನು ಪ್ರವೇಶಿಸದಂತೆ ಆe್ಞೆ ಹೊರಡಿಸಿತು. ಆಗ ದಿನಕರ ದೇಸಾಯಿಯವರು ಸರ್ವೆಂಟ್ಸ್‌ ಆಫ್ ಇಂಡಿಯಾ ಸೊಸೈಟಿಯ ಸದಸ್ಯರಾಗಿ ಮುಂಬಯಿಯಲ್ಲಿದ್ದರು. ಆಗ ಶೇಷಗಿರಿ ಪಿಕಳೆ ಮತ್ತು ದಯಾನಂದ ನಾಡಕರ್ಣಿಯವರು ರೈತಕೂಟದ ಸೂತ್ರಗಳನ್ನು ಕೈಯಲ್ಲಿ ಹಿಡಿದುಕೊಂಡರು. ದಿನಕರ ದೇಸಾಯಿಯವರ ಮಾರ್ಗದರ್ಶನದಲ್ಲಿ ಚಳವಳಿ ನಡೆಯುತ್ತಿತ್ತು. ರೈತರು ಬಲಿಷ್ಠಗೊಳ್ಳಲೂ ಸ್ವತಂತ್ರ್ಯರಾಗಲೂ ಇದು ಕುಮ್ಮಕ್ಕು ನೀಡಿತು. ಈ ಚಳವಳಿಯಲ್ಲಿ ಉತ್ತರ ಕನ್ನಡದ ಸಾವಿರಾರು ರೈತರು ರಾಜಕೀಯ ಪಕ್ಷಗಳ ಕಾರ್ಯಕರ್ತರು ಒಮ್ಮನಸ್ಸಿನಿಂದ ದುಡಿದು ಒಂದು ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು.

ಪ್ರೇಕ್ಷಣೀಯ ಸ್ಥಳಗಳು

[ಸಂಪಾದಿಸಿ]

ಈ ಜಿಲ್ಲೆಯ ದಟ್ಟವಾದ ಕಾಡು, ಕಾಡಿನಲ್ಲಿ ಭೋರ್ಗರೆಯುವ ಜಲಪಾತಗಳು, ವಿಶಾಲವಾದ ಕಡಲ ದಂಡೆಗಳು ಪಯಣಿಗರ ಹೃದಯಗಳನ್ನು ಸೂರೆಗೊಳ್ಳುತ್ತವೆ. ಕಾರವಾರದ ಹತ್ತಿರದ ಅಂಜದೀವ ನಡುಗಡ್ಡೆ, ಕಣಿವೆ ಮಾರ್ಗವಾದ ಅಣಿಘಟ್ಟೆ, ಶಿರಸಿಯ ಪಡುವಣಕ್ಕಿರುವ ಬೆಡಸಗಾಂವ್ ಗುಡ್ಡ, ಹೊನ್ನಾವರದ ಬಳಿಯ ಬಸವರಾಜದುರ್ಗ, ಜಿಲ್ಲೆಯ ಉತ್ತರ ಭಾಗದ ದರ್ಶನಗುಡ್ಡ, ಭಟ್ಕಳ ಸಮೀಪದ ನೇತ್ರಾಣಿ ಗುಡ್ಡ -ಇವು ಸುಂದರವಾಗಿವೆ. ಹೊನ್ನಾವರ ತಾಲ್ಲೂಕಿನ ಇಡಗುಂಜಿ, ಗೋಕರ್ಣ, ಬನವಾಸಿ, ಉಳವಿ, ಮಂಜುಗುಣಿ, ಸೋದೆ - ಇವು ಪುಣ್ಯ ಕ್ಷೇತ್ರಗಳೆಂದು ಪರಿಗಣಿತವಾಗಿವೆ. ಮುಂಡಗೋಡ ತಾಲ್ಲೂಕಿನ ತಟ್ಟೆಹಳ್ಳಿಯಲ್ಲಿ ಟೆಬೆಟನರ ಬೃಹತ್ ವಸತಿ ಇದೆ. 1966ರಿಂದ ಟಿಬೆಟನ್ರು ಕೃಷಿ, ಕರಕುಶಲ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಇವರು ಇಲ್ಲೊಂದು ಬೃಹತ್ ಬುದ್ಧಮಂದಿರ ಕಟ್ಟಿಸಿದ್ದಾರೆ. ಇದೊಂದು ಪ್ರೇಕ್ಷಣೀಯ ಪುಣ್ಯ ಕ್ಷೇತ್ರ. ಕಾಳಿ ನದಿಗೆ ಸೂಪದಲ್ಲಿ ಜಲಾಶಯ ಕಟ್ಟಿದ್ದರಿಂದ ಆ ಪಟ್ಟಣ ಜಲಾವೃತ ವಾಯಿತು. ಈಗ ಜೋಯಿಡಾ ತಾಲ್ಲೂಕು ಕೇಂದ್ರವಾಗಿದೆ. ಲಂಬಿಕಾ ನಗರದಿಂದ ಮೂರು ಕಿಮೀ ದೂರದಲ್ಲಿರುವ ಸೈಕ್ಸ್‌ ಪಾಯಿಂಟ್, ಕಾಳಿ ನದಿಯ ವಿಹಂಗಮ ನೋಟ ಸುಂದರವಾಗಿವೆ. ಇದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಈ ಜಿಲ್ಲೆಯಲ್ಲಿ ಹೆಚ್ಚು ಸಂಖ್ಯೆಯ ಜನ ಕನ್ನಡ ಮಾತನಾಡುವವರು. ಕೊಂಕಣಿ, ಉರ್ದು, ಮರಾಠಿ ಮಾತನಾಡುವವರೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ತೆಲುಗು, ತಮಿಳು, ಮಲಯಾಳಂ, ತುಳು, ರಾಜಸ್ತಾನಿ, ಕೊಡವ, ಹಿಂದಿ, ಗುಜರಾತಿ, ಸಿಂಧಿ, ನೇಪಾಳಿ, ಬಂಗಾಳಿ, ಪಂಜಾಬಿ, ಒರಿಯ, ಪರ್ಷಿಯನ್ ಭಾಷೆ ಮಾತನಾಡುವವರನ್ನೂ ಕಾಣಬಹುದು.

ಕಲೆ ಮತ್ತು ಸಂಸ್ಕೃತಿ: ಉತ್ತರ ಕನ್ನಡ ಜಿಲ್ಲೆ ಜನಪದ ಸಂಸ್ಕೃತಿಯ ಬೀಡಾಗಿದೆ. ಹಾಲಕ್ಕಿ, ಹಸಲರು, ನಾಮಧಾರಿ, ನವಾಯತರು, ಸಿದ್ಧಿ, ಹವ್ಯಕ, ಗೊಂಡರು, ಮುಕ್ರಿ, ಸಾರಸ್ವತ, ಪಟಗಾರ, ಭಜಂತ್ರಿ, ದೈವಜ್ಞ (ಜನಿವಾರರು), ಗವಳಿ, ಮೀನುಗಾರರ ಉಪಸಂಸ್ಕೃತಿ ಗಳು ಇವೆ. ಇವರ ಹಾಡು-ಕುಣಿತ-ಹಬ್ಬಗಳು ಮನಮೋಹಕ. ಇಲ್ಲಿ ಜನಪದ ಗೀತೆಗಳನ್ನು ಸಂಗ್ರಹಿಸಿದ ಪ್ರಮುಖರಲ್ಲಿ ವಿ.ವೆ.ತೊರ್ಕೆ, ಮ.ಗ.ಶೆಟ್ಟಿ, ಜಿ.ಆರ್.ಹೆಗಡೆ, ಎಲ್.ಆರ್.ಹೆಗಡೆ, ಎನ್.ಆರ್.ನಾಯಕ, ಫಾದರ್ಸಿ.ಸಿ.ಎ.ಪೈ, ಎಲ್.ಜಿ.ಭಟ್ಟ, ಶಾಂತಿನಾಯಕ, ವಿ.ಗ.ನಾಯಕ ಮೊದಲಾದವರು ಪ್ರಮುಖರು.

ಈ ಜಿಲ್ಲೆಯ ರಂಗಕಲೆಗಳಲ್ಲಿ ಯಕ್ಷಗಾನ ವಿಶಿಷ್ಟ ಸ್ಥಾನ ಗಳಿಸಿದೆ. ಕರ್ಕಿ ಪರಮಯ್ಯ ಹಾಸ್ಯಗಾರ, ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ ಚಿಟ್ಟಾಣಿ ರಾಮಚಂದ್ರ ಹೆಗಡೆ, ಎಕ್ಟರ್ ಜೋಶಿ, ಕೆರೆಮನೆ ಗಜಾನನ ಹೆಗಡೆ, ಪಿ.ವಿ.ಹಾಸ್ಯಗಾರ, ನಾರಾಯಣ ಹಾಸ್ಯಗಾರ, ಕೃಷ್ಣ ಹಾಸ್ಯಗಾರ, ಕೊಂಡದಕುಳಿ ರಾಮ ಹೆಗಡೆ, ಲಕ್ಷ್ಮಣ ಹೆಗಡೆ, ಮುರೂರು ದೇವರು ಹೆಗಡೆ, ಗೋಡೆ ನಾರಾಯಣ ಹೆಗಡೆ, ಡಿ.ಜಿ.ಹೆಗಡೆ, ಶಿರಳಗಿ ಭಾಸ್ಕರ ಜೋಶಿ, ಬಳ್ಳುರ ಕೃಷ್ಣಯಾಜಿ, ವೆಂಕಟೇಶ ಜಲವಳ್ಳಿ, ಕಡತೋಕ ಮಂಜುನಾಥ ಭಾಗವತ, ನೆಬ್ಬೂರು ನಾರಾಯಣ ಭಾಗವತ ಪ್ರಮುಖ ಕಲಾವಿದರು. ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಜಾನಪದ ಶ್ರೀ ಪ್ರಶಸ್ತಿ ಬಂದಿದೆ (2004). ತಾಳಮದ್ದಳೆಯ ಕಲಾವಿದರು ಅನೇಕರಿದ್ದಾರೆ. ನಾಟಕ ಕ್ಷೇತ್ರದಲ್ಲಿ ಹುಲಿಮನೆ ಸೀತಾರಾಮ ಶಾಸ್ತ್ರೀ ಜಯಕರ್ನಾಟಕ ನಾಟಕ ಮಂಡಳಿ ಸ್ಥಾಪಿಸಿ ನಡೆಸಿದರು. ಸುಗ್ಗಿಕುಣಿತ, ಗುಮಟೆಯ ಪಾಂಡು, ದೋಣಿಯ ಹಾಡು, ಬೆಸ್ತರ ಪದ, ಜನಪದ ಗೀತೆಗಳು, ಸಿದ್ಧಿಯರ ಕುಣಿತ- ಹಾಡುಗಳೂ ಜಿಲ್ಲೆಯ ಜನರನ್ನು ಮನರಂಜಿಸುತ್ತ ಬಂದಿವೆ.

ಸಾಹಿತ್ಯ ಕ್ಷೇತ್ರವನ್ನು ಕರ್ಕಿ ವೆಂಕಟರಮಣಶಾಸ್ತ್ರಿ ಸೂರಿ, ಜಿ.ಆರ್.ಪಾಂಡೇಶ್ವರ, ಗೌರೀಶ ಕಾಯ್ಕಿಣಿ, ಯಶವಂತ ಚಿತ್ತಾಲ, ಬಿ.ಎಚ್. ಶ್ರೀಧರ, ಶಾಂತಿನಾಥ ದೇಸಾಯಿ, ಸು.ರಂ.ಎಕ್ಕುಂಡಿ, ಅರವಿಂದ ನಾಡಕರ್ಣಿ, ಸ.ಪ.ಗಾಂವಕರ್, ಕೃಷ್ಣಾನಂದ ಕಾಮತ್, ಪ.ಸು.ಭಟ್ಟ, ಸುಂದರ ನಾಡಕರ್ಣಿ, ವಿ.ಜಿ.ಭಟ್ಟ, ದಿನಕರ ದೇಸಾಯಿ, ವಿ.ಜಿ.ಶಾನಭಾಗ, ಶಾ.ಮಂ.ಕೃಷ್ಣರಾಯ, ಗಂಗಾಧರ ಚಿತ್ತಾಲ, ಜಿ.ಜಿ.ಹೆಗಡೆ, ಜಿ.ಎಸ್.ಭಟ್ಟ, ಜಯಂತ ಕಾಯ್ಕಿಣಿ, ನಿರಂಜನ ವಾನಳ್ಳಿ, ರಾಜೀವ ಅಜ್ಜಿಬಳ ಇವರು ಸಮೃದ್ಧಗೊಳಿಸಿದ್ದಾರೆ. ಹೊಸ ತಲೆಮಾರಿನ ಅನೇಕ ಕವಿಗಳೂ ಲೇಖಕರೂ ಭರವಸೆ ಮೂಡಿಸುತ್ತಿದ್ದಾರೆ. ಈ ಜಿಲ್ಲೆಯ ಪತ್ರಿಕೆಗಳಲ್ಲಿ ಹವ್ಯಕ ಸುಬೋಧ (1885), ಕಾರವಾರ ಚಂದ್ರಿಕೆ (1885), ಮಕ್ಕಳ ಪತ್ರಿಕೆ ಹಿತೋಪದೇಶ (1888), ಸರಸ್ವತಿ (1900), ವಿನೋದಿನಿ (1904)- ಇವು ಮಾಸಪತ್ರಿಕೆಗಳು. 1919ರಲ್ಲಿ ಕುಮಟದಿಂದ ಕಾನಡಾ ಧುರೀಣ (1922), ನಂದಿನಿ (1925) ಮಾಸ ಪತ್ರಿಕೆ ಮೊದಲು ಗೋಕರ್ಣದಿಂದ ಪ್ರಕಟಿಸಲಾಗುತ್ತಿದ್ದು ಕೆಲಕಾಲ ನಿಂತು 1937 ರಿಂದ ಶಿರಸಿಯಿಂದ ಪ್ರಕಟವಾಗತೊಡಗಿತು. ಶರಣ ಸಂದೇಶ (1931), ನವಚೇತನ (1941), ಸಾಧನ (1949) ಹೊನ್ನಾವರದಿಂದ ಪ್ರಕಟವಾಗುತ್ತಿತ್ತು. ಮಲಯವಾಣಿ (1955) ವಾರ್ಷಿಕ ಪತ್ರಿಕೆ. 1956ರಲ್ಲಿ ಭಾಮಾ ಮಾಸ ಪತ್ರಿಕೆ ಶಿರಸಿಯಿಂದ ಪ್ರಕಟವಾಗ ತೊಡಗಿತು. 1957ರಲ್ಲಿ ಶಿರಸಿಯಿಂದ ಪ್ರಕಟವಾಗುತ್ತಿದ್ದ ನಗರವಾಣಿ ಅಲ್ಪಾಯುವಾಯಿತು. ಸಹಕಾರಿ ಸಮಾಜ (1979), ಯಕ್ಷಗಾನ (1959), ಗೋಕರ್ಣ ಗೋಷ್ಟಿ (1959), ಸ್ವತಂತ್ರವಾಣಿ (1960), ಮಧುವನ (1960), ಗ್ರಾಮಜೀವನ, ಸಮಾಜ (1965), ಸಂಘಟನೆ, ರಮಣ ಸಂದೇಶ, (1971), ಶಿರಸಿ ಸಮಾಚಾರ, ಸಹಚರ, ಸಮನ್ವಯ (1975) ಇವಲ್ಲದೆ ಕಡಲಧ್ವನಿ (1983), ಆಚಾರ (1980), ಕರಾವಳಿ ಗ್ರಾಮ ವಿಕಾಸ (1987), ಗ್ರಾಮ ಭಾರತಿ ಅಭಯ (1965), ನುಡಿಜೇನು (1968), ಗಿರಿಘರ್ಜನೆ, ಯುಗವಾಣಿ (1964), ಸಮಾಜವಾಣಿ (1965), ಚುನಾವಣೆ, ಆಧ್ಯಾತ್ಮಿಕ ಪತ್ರಿಕೆ ಜೀವೋತ್ತಮ ಉಲ್ಲೇಖನೀಯ. ಮುನ್ನಡೆ (1988) ದಿನಪತ್ರಿಕೆಯಾಗಿ 2000ದಲ್ಲಿ ನಿಂತುಹೊಯಿತು. ಜಿಲ್ಲೆಯ ಮೊದಲ ದೈನಿಕ ಲೋಕಧ್ವನಿ (1983), ಜನಮಾಧ್ಯಮ (1988), ಧ್ಯೇಯನಿಷವಿ ಪತ್ರಕರ್ತ (1991), ಕರಾವಳಿಯ ಮುಂಜಾವು (1994) - ಇವು ಇಂದಿನ ಪ್ರಮುಖ ಪತ್ರಿಕೆಗಳು.

ದೀರ್ಘಕಾಲ ನಡೆದ ಪತ್ರಿಕೆಗಳಲ್ಲಿ ಕಾನಡಾವೃತ್ತದ ಸ್ಥಾನ ಅದ್ವಿತೀಯ. ಇದು 1916ರಲ್ಲಿ ಪ್ರಾರಂಭವಾಗಿ ಈಗಲೂ ನಡೆಯುತ್ತಿದೆ. 1946ರಲ್ಲಿ ಆರಂಭವಾದ ನಾಗರಿಕ ಈಗಲೂ ಪ್ರಕಟವಾಗುತ್ತಿದೆ. 1960ರಲ್ಲಿ ಜನತಾ, 1955ರಲ್ಲಿ ದಿನಕರ ದೇಸಾಯಿ ಪ್ರಾರಂಭಿಸಿದ ಜನಸೇವಕ 1972ರ ವರೆಗೆ ನಡೆದು ಅನಂತರ ನಿಂತಿತು. ಶೃಂಗಾರ ಹೊನ್ನಾವರದಿಂದ ಪ್ರಕಟವಾಗುತ್ತಿತ್ತು.