ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎಕ್ಕುಂಡಿ ಎಸ್ ಆರ್
ಸು.ರಂ.ಎಕ್ಕುಂಡಿ
1923-95. ಕನ್ನಡದ ಪ್ರಸಿದ್ಧ ಕವಿ. ಸುಬ್ಬಣ್ಣ ರಂಗನಾಥ ಎಕ್ಕುಂಡಿ ಇವರ ಪೂರ್ಣ ಹೆಸರು. ಕಲಬುರ್ಗಿಯ ಮಣ್ಣೂರು ಇವರ ಮೂಲ ಮನೆತನದ ಊರು. ಇವರು 1923 ಜನವರಿ 20ರಂದು ಇಂದಿನ ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ಜನಿಸಿದರು. ಇವರ ತಂದೆ ರಂಗಾಚಾರ್ಯ ಎಕ್ಕುಂಡಿಯವರು ರಾಣೆಬೆನ್ನೂರಿನಲ್ಲಿ ಶಿಕ್ಷಕರಾಗಿದ್ದರು. ತಾಯಿ ರಾಜಕ್ಕ. ಇವರಿಗೆ ಐದು ವರ್ಷಗಳಾಗಿದ್ದಾಗ ತಂದೆ ನಿಧನರಾದರು. ಚಿಕ್ಕಂದಿನಲ್ಲಿಯೇ ಸಂಸಾರದ ಭಾರ ತಲೆಯ ಮೇಲೆ ಬಿದ್ದುದರಿಂದ ಸವಣೂರಿನಲ್ಲಿ ಶ್ರೀ ಸತ್ಯಬೋ ಸೇವಾಸಂಘ ನಡೆಸುತ್ತಿದ್ದ ವಾಚನಾಲಯದ ಪುಸ್ತಕಗಳನ್ನು ಮನೆಮನೆಗೆ ಮುಟ್ಟಿಸುವ ಕೆಲಸ ಮಾಡಿದರು. ಪುಸ್ತಕಗಳನ್ನು ಪುಕ್ಕಟೆ ಓದುವ ಅವಕಾಶವಾದುದರಿಂದ ಬಾಲ್ಯದಲ್ಲಿ ಜ್ಞಾನಸಂಪಾದನೆ ಇವರ ಕಾಯಕವಾಯಿತು. ಇದರಿಂದ ಶಿಕ್ಷಣದತ್ತ ಒಲವುಬೆಳೆಯಿತು. ಇವರ ಪ್ರಾಥಮಿಕಶಿಕ್ಷಣ ಹುಬ್ಬಳ್ಳಿ ಯಲ್ಲಾಯಿತು. ಪ್ರೌಢ ಶಾಲೆಯಲ್ಲಿದ್ದಾಗ ಉನ್ನತಿ ಎಂಬ ಕೈಬರೆಹದ ಮಾಸಿಕದ ಸಂಪಾದಕರಾದರು. ಇವರ ಗುರುಗಳು ಇವರಿಗೆ ಬಿ.ಎಂ.ಶ್ರೀ, ಟೆನಿಸನ್, ವಡ್ರ್ಸ್‍ವರ್ತ್ ಮುಂತಾದವರ ಸಾಹಿತ್ಯವನ್ನು ಪರಿಚಯ ಮಾಡಿಕೊಟ್ಟರು. ಇವರು ತಮ್ಮ ಹದಿನೈದನೆಯ ವಯಸ್ಸಿನಲ್ಲಿಯೇ ಕವಿತೆ ಬರೆಯಲಾರಂಭಿಸಿದರು. ಜಗದೀಶಚಂದ್ರ ಬೋಸರ ಸಾವು ಇವರ ಹೃದಯವನ್ನು ಕಲಕಿ ಕಾವ್ಯ ರೂಪದಲ್ಲಿ ಹೊರಬಂದಿತು.
ನಾಡಹಬ್ಬಕ್ಕೆ ಹುಬ್ಬಳ್ಳಿಗೆ ಬರುತ್ತಿದ್ದ ಬೇಂದ್ರೆ, ಗೋಕಾಕ, ಶಂ.ಬಾ.ಜೋಶಿ, ಶ್ರೀರಂಗ, ಬೆಟಗೇರಿ ಕೃಷ್ಣಶರ್ಮ ಮೊದಲಾದವರ ಪರಿಚಯವಾಗಿ ಕಾವ್ಯದಲ್ಲಿ ಆಸಕ್ತಿ ಬೆಳೆಯಿತು. ಇವರು ಸಾಂಗ್ಲಿಯ ವಿಲಿಂಗ್ಡನ್ ಕಾಲೇಜಿನಲ್ಲಿ ಓದುತ್ತಿದ್ದಾಗ ಚಾಸರ್, ಷೇಕ್‍ಸ್ಪಿಯರ್, ಜೇಮ್ಸ್ ಬ್ಯಾರಿ ಮುಂತಾದ ಪಾಶ್ಚಾತ್ಯ ಸಾಹಿತಿಗಳನ್ನು ಓದಿದ್ದರು. ಪೇಜಾವರ ಸದಾಶಿವರಾಯರ ವರುಣನಿಗೆ ಆಹ್ವಾನ ಎಂಬ ಕವಿತೆ ಓದಿ ಪ್ರಭಾವಿತರಾದ ಇವರು ಗಂಗಾಧರ ಚಿತ್ತಾಲ, ವರದರಾಜ ಹುಯಿಲಗೋಳ, ರಾ.ಯ. ಧಾರವಾಡಕರ, ವಿ.ಜಿ.ಭಟ್ಟ ಇವರ ಒಡಗೂಡಿ ವರುಣಕುಂಜ ಎಂಬ ಬರೆಹಗಾರರ ಬಳಗ ಆರಂಭಿಸಿದರು. ಅಲ್ಲಿ ಪ್ರತಿವಾರವೂ ಸಾಹಿತ್ಯಕ ಚರ್ಚೆ ನಡೆಯುತ್ತಿತ್ತು. ಇವರು ವಿಲಿಂಗ್ಡನ್‍ನಲ್ಲಿ ಓದುತ್ತಿದ್ದಾಗಲೇ ಪ್ರಥಮ ಕವನ ಸಂಗ್ರಹ ಸಂತಾನವನ್ನು ರಂ.ಶ್ರೀ. ಮುಗಳಿ ಪ್ರಕಟಿಸಿದರು (1953). ಇವರು ಪದವಿ ಪಡೆದ ಅನಂತರ ಹೈದರಾಬಾದಿನಲ್ಲಿ ಸಿ.ಐ. ಉನ್ನತ ಶಿಕ್ಷಣ ಪಡೆದು, ಮುಂದೆ ಬಂಕಿಕೊಡ್ಲಿನ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಮುಖ್ಯೋಪಾಧ್ಯಾಯರಾಗಿ ಮೂವತ್ತೈದು ವರ್ಷ ಸೇವೆ ಸಲ್ಲಿಸಿ ನಿವೃತ್ತರಾದರು.
ಇವರು ಆನಂದತೀರ್ಥರು (ಖಂಡಕಾವ್ಯ 1953), ಹಾವಾಡಿಗರ ಹುಡುಗ (1967), ಮತ್ಸ್ಯಗಂದಿs (1975), ಬೆಳ್ಳಕ್ಕಿಗಳು (1982), ಕಥನ ಕವನ (1985), ಬಕುಲದ ಹೂವುಗಳು (1991), ಗೋದಿಯ ತೆನೆಗಳು (1996) ಎಂಬ ಕಾವ್ಯಸಂಕಲನಗಳನ್ನು ಪ್ರಕಟಿಸಿದ್ದಾರೆ. ನೆರಳು ಎಂಬುದು ಇವರ ಕಥಾ ಸಂಕಲನ (1960). ಪು.ತಿ.ನರಸಿಂಹಾಚಾರ್ಯರು (ಜೀವನ ಚರಿತ್ರೆ, 1957), ಪಂಜುಗಳು (1998), ಎರಡು ರಷ್ಯನ್ ಕಾದಂಬರಿಗಳು, ಪ್ರತಿಬಿಂಬಗಳು, ಲೆನಿನ್ನರ ನೆನಪಿಗಾಗಿ, ನವ್ಯಕವಿತೆ, ವರುಣಕುಂಜ, ತಾಳತಂಬೂರಿ - ಇವು ಇವರ ಇತರ ಗ್ರಂಥಗಳು.
ಇವರು ಪ್ರಧಾನವಾಗಿ ಕವಿಯಾಗಿ ಹೆಸರು ಪಡೆದವರು. ಇವರ ಕಾವ್ಯದಲ್ಲಿ ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಯ ನಿಸರ್ಗ ಸೌಂದರ್ಯ ಮೈವೆತ್ತಿ ನಿಂತಿದೆ. ಅಲ್ಲಿಯ ಸಮುದ್ರ, ಮುಸಲಧಾರೆ ಮಳೆ, ಹಕ್ಕಿಪಕ್ಷಿಗಳ ಕಲರವ, ಹಾಲಕ್ಕಿ ಒಕ್ಕಲಿಗರ ಶ್ರಮಜೀವನ, ತೆಂಗಿನಮರಗಳ ಸೊಬಗು ಇವರ ಕವಿತೆಗಳಲ್ಲಿ ಜೀವಂತಿಕೆ ಪಡೆದಿವೆ. ಸಹಜ ಕವಿಯಾದ ಇವರ ಕಾವ್ಯದಲ್ಲಿ ಎಡಪಂಥೀಯ ಚಿಂತನೆಯ ಎಳೆಯನ್ನು ಗುರುತಿಸಬಹುದಾಗಿದೆ. ಕಾವ್ಯ ಜನವಾಣಿಯಾಗದ ಹೊರತು, ಸಮಾಜಮುಖಿಯಾಗದ ಹೊರತು ಅದಕ್ಕೆ ಬೆಲೆಯಿಲ್ಲವೆಂಬುದು ಇವರ ಅಭಿಪ್ರಾಯವಾಗಿದೆ. ಕೀಟ್ಸ್ ಇವರ ಪ್ರೀತಿಯ ಇಂಗ್ಲಿಷ್ ಕವಿ. ಕಥನ ಕವನ ಕಥೆಯ ಮೂಲಕ ಬರೆಯುವವನ ಅನುಭವಕ್ಕೂ ಓದುಗನ ಅನುಭವಕ್ಕೂ ಸೇತುವೆ ಕಟ್ಟತ್ತದೆ ಎಂದು ಹೇಳಿದ ಇವರು ಕಥನ ಕವನಗಳಿಗೊಂದು ಹೊಸ ಆಯಾಮ ನೀಡಿದ್ದಾರೆ. ಇವರಿಗೆ ಅನೇಕ ಸನ್ಮಾನ, ಪ್ರಶಸ್ತಿಗಳು ಲಭ್ಯವಾಗಿವೆ. ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ (1970), ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (1982), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1992) ಇವು ಅವುಗಳಲ್ಲಿ ಕೆಲವು. ಇವರು ಕೆಲಕಾಲ ರೋಮನ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. 1995 ಆಗಸ್ಟ್ 20ರಂದು ನಿಧನರಾದರು.
(ಎಸ್.ಎಂ.ಕೆ.)