ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎಲೆಕ್ಟ್ರಾನಿಕ್ ಕಾಮರ್ಸ್
ಎಲೆಕ್ಟ್ರಾನಿಕ್ ಕಾಮರ್ಸ್: ವ್ಯಾಪಾರ ವ್ಯವಹಾರ ವಿದ್ಯುನ್ಮಾನ ಮಾದ್ಯಮದ ಮೂಲಕ ನಡೆಯುವ ಒಂದು ಬಗೆಯ ಬ್ಯಾಂಕಿಂಗ್ ವ್ಯವಸ್ಥೆ. ಇದು ಒಂದು ವಿದ್ಯುನ್ಮಾನ ಸಂಪರ್ಕ ವ್ಯವಸ್ಥೆಯಾಗಿದ್ದು, ಕೈಗಾರಿಕೆಗಳು, ಗ್ರಾಹಕರು, ಪುರೈಕೆದಾರರು, ಹೂಡಿಕೆದಾರರು, ವ್ಯಾಪಾರ ಭಾಗಸ್ಥರು ಮತ್ತು ಸರ್ಕಾರದ ಕೇಂದ್ರಗಳ ನಡುವಿನ ಸಂಪರ್ಕವಾಗಿದೆ. ಸರಕು ಮತ್ತು ಸೇವೆಗಳನ್ನು ಅಂತರ್ಜಾಲದ ಮೂಲಕ ಯಾವಾಗಲಾದರೂ ಅಥವಾ ಎಲ್ಲಿಯಾದರೂ ಕೊಂಡುಕೊಳ್ಳುವುದು ಅಥವಾ ಮಾರಾಟ ಮಾಡಬಹುದು.
ಇದು ಕೇವಲ ದೊಡ್ಡ ಕಂಪನಿಗಳು ಮತ್ತು ಸರ್ಕಾರದ ಇಲಾಖೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಮಧ್ಯಮ ಮತ್ತು ಸಣ್ಣ ಪ್ರಮಾಣದ ವ್ಯವಹಾರ ಮಾಡುವವರಿಗೂ ಉಪಯುಕ್ತ. ಇದರ ಉಪಯೋಗ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಿಲ್ಲ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೂ ಉಪಯುಕ್ತವಾಗಿದೆ. ಇದರಿಂದ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ನಡುವಿನ ಅಂತರ ಕಡಿಮೆಯಾಗಲು ಸಹಾಯಕವಾಗಿದೆ. ಮಾರುಕಟ್ಟೆಯ ವಿಸ್ತರಣೆ, ಸರಕು-ಸೇವೆಗಳಿಗೆ ಪ್ರಚಾರ, ಮಾಹಿತಿಯ ಹಂಚಿಕೆ, ಮಾರಾಟದ ಅಭಿವೃದ್ಧಿ, ಸರಕುಗಳ ಮಾರಾಟ, ವಿಮಾ, ಹಣಕಾಸು ಕ್ಷೇತ್ರ ಮೊದಲಾದವು ಇದನ್ನು ಉಪಯೋಗಿಸುವುದ ರಿಂದ ನಿಗದಿತ ಅವಧಿಯೊಳಗೆ ಸರಿಯಾಗಿ ವ್ಯಾಪಾರ ನಡೆಯುವುದು. ಇದರಿಂದ ಸಮಯ ಮತ್ತು ಹಣದ ಉಳಿತಾಯವಾಗುತ್ತದೆ. ಉತ್ಪಾದನೆ ಹೆಚ್ಚಾಗಿ, ಮಾರುಕಟ್ಟೆ ವಿಸ್ತರಿಸಲ್ಪಡುವುದು. ಇದನ್ನು ಮೂರು ಕ್ಷೇತ್ರಗಳಲ್ಲಿ ಹೆಚ್ಚು ಅನ್ವಯಿಸಿಕೊಳ್ಳಲಾಗಿದೆ. ಅವುಗಳೆಂದರೆ ವ್ಯಾಪಾರ ಸಂಸ್ಥೆಗಳ ನಡುವೆ, ವ್ಯಾಪಾರಸ್ಥರು ಮತ್ತು ಗ್ರಾಹಕರ ನಡುವೆ ಹಾಗೂ ಒಂದೇ ದೊಡ್ಡ ವ್ಯಾಪಾರ ಸಂಸ್ಥೆಯೊಳಗೆ ಈ ತಾಂತ್ರಿಕತೆಯನ್ನು ಸರಿಯಾಗಿ ಅಳವಡಿಸಿಕೊಳ್ಳಬೇಕಾದರೆ ಕಂಪ್ಯುಟರ್, ಅಂತರ್ಜಾಲದ ವ್ಯವಸ್ಥೆ, ವೆಬ್ಸೈಟ್, ಅತ್ಯುತ್ತಮವಾದ ಸಂಪರ್ಕ ವ್ಯವಸ್ಥೆ, ಪರಿಣಿತ ಕೆಲಸಗಾರರು, ಉತ್ತಮವಾದ ಸೈಬರ್ ಕಾನೂನು, ವ್ಯಾಪಾರದಲ್ಲಿನ ರಕ್ಷಣೆ ಮತ್ತು ಉತ್ತಮ ಗ್ರಾಹಕರು ಆವಶ್ಯಕ. (ಎಸ್.ಕೆ.ಪಿ.)