ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಏ

ವಿಕಿಸೋರ್ಸ್ ಇಂದ
Jump to navigation Jump to search

ಕನ್ನಡ ವರ್ಣಮಾಲೆಯ ಹತ್ತನೆಯ ಅಕ್ಷರ. ದೀರ್ಘಸ್ವರ,

ಪ್ರಾಚೀನತಮ ಬ್ರಾಹ್ಮೀಲಿಪಿಯಲ್ಲಿ ಈ ಅಕ್ಷರ ಒಂದು ತ್ರಿಕೋಣದಂತೆ ಇದ್ದು ಪ್ರ.ಶ. 2ನೆಯ ಶತಮಾನದ ಹೊತ್ತಿಗೆ ತ್ರಿಕೋಣದ ಮೂಲೆಗಳು ದುಂಡಗಾದುವು. ಕದಂಬರ ಕಾಲದಲ್ಲಿ ಕೆಳಗಿನ ಒಳಭಾಗ ವೃತ್ತಾಕಾರದಂತಾಗಿ ಚೌಕತಲೆಯ ತಲೆಕಟ್ಟು ಸ್ಪಷ್ಟವಾಗಿ ಕಾಣುತ್ತದೆ. ಪ್ರ.ಶ. 9ನೆಯ ಶತಮಾನದಲ್ಲಿ ಕೆಳಗಿನ ವೃತ್ತಾಕಾರದಲ್ಲಿ ಬದಲಾವಣೆಗಳುಂಟಾಗಿ ಅಕ್ಷರ ಈಗಿರುವ ರೂಪವನ್ನು ಹೋಲುತ್ತದೆ. 13ನೆಯ ಶತಮಾನದಲ್ಲಿ ವೃತ್ತ ಮಾರ್ಪಟ್ಟು ಒಂದು ಸಣ್ಣ ಕೊಂಡಿಯಂತೆ ಬದಲಾಗುತ್ತದೆ. ಇದೇ ಪ್ರವೃತ್ತಿ ಮುಂದುವರಿದು ಈಗಿರುವ ರೂಪವನ್ನು ತಳೆಯುತ್ತದೆ. ಉಚ್ಚಾರಣೆಯಲ್ಲಿ ವ್ಯತ್ಯಾಸವಿದ್ದರೂ ಎಕಾರ ಏಕಾರಗಳ ಚಾಕ್ಷುಷರೂಪ ಮಾತ್ರ ಬಹಳ ಕಾಲ ಒಂದೇ ಆಗಿತ್ತೆಂದು ತೋರುತ್ತದೆ. ಈ ಅಕ್ಷರ ಪುರ್ವ ಅಗೋಲ ಅರ್ಧ ಸಂವೃತ ದೀರ್ಘಸ್ವರವನ್ನು ಸೂಚಿಸುತ್ತದೆ. ವ್ಯಂಜನದೊಂದಿಗೆ ಸೇರಿದಾಗ ಎ ವರ್ಣ ಪಡೆಯುತ್ತಿದ್ದ ರೂಪಾದಿ ವಿವರಗಳಿಗೆ (ನೋಡಿ- ಎ). (ಎ.ವಿ.ಎನ್.)