ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಏಕಾದಶಿ
ಏಕಾದಶಿ: ದಶಮಿಯ ಮಾರನೆಯ ತಿಥಿ. ಹರಿವಾಸರ ಹರಿದಿನ ಎಂದೂ ಹೇಳುವುದುಂಟು. ಏಕಾದಶೀ ವ್ರತ ಮಾಹಾತ್ಮ್ಯ ಪ್ರಾಯಶಃ ಎಲ್ಲ ಪುರಾಣಗಳಲ್ಲೂ ಪ್ರತಿಪಾದಿತವಾಗಿದೆ. ಅಮಾವಾಸ್ಯೆ ಅಥವಾ ಪುರ್ಣಿಮೆಯ ದಿನದಿಂದ ಹನ್ನೊಂದನೆಯ ದಿನ ಏಕಾದಶಿಯಾಗುತ್ತದೆ. ಆ ದಿನ ಸಂಪುರ್ಣವಾಗಿ ಆಹಾರವನ್ನು ಬಿಟ್ಟು ಬ್ರಹ್ಮಚರ್ಯಾದಿ ನಿಯಮಗಳಿಂದ ಇದ್ದು ಭಗವಂತನ ಧ್ಯಾನ, ಅರ್ಚನೆ ಮುಂತಾದ ಸತ್ಕರ್ಮಗಳಿಂದ ದಿನವೆಲ್ಲ ಕಳೆದು, ರಾತ್ರಿಯಲ್ಲಿ ಜಾಗರಣವಿದ್ದು ಮರುದಿನ ಬೆಳಗ್ಗೆ ಪಾರಣೆ ಮಾಡಬೇಕು. ಇದು ಈ ವ್ರತದ ಸಂಕ್ಷಿಪ್ತ ಪರಿಚಯ. ಸಂಪುರ್ಣವಾಗಿ ಆಹಾರವನ್ನು ಬಿಡಲು ಶಕ್ತಿಯಿಲ್ಲದವರು ಫಲಾಹಾರದಲ್ಲಿದ್ದು ಇದನ್ನು ಆಚರಿಸಬಹುದು. ಧರ್ಮ, ಅರ್ಥ, ಕಾಮ, ಮೋಕ್ಷವೆಂಬ ಸಕಲ ವಿಧಫಲಗಳನ್ನೂ ಈ ವ್ರತ ಕೊಡಬಲ್ಲದ್ದೆಂದು ಹೇಳಲಾಗಿದೆ. ಲೌಕಿಕವಾದ ಯಾವ ಫಲವನ್ನೂ ಅಪೇಕ್ಷಿಸದೆ ಕೇವಲ ಕರ್ತವ್ಯದೃಷ್ಟಿಯಿಂದ ಇದನ್ನು ಆಚರಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಆಗ ಇದನ್ನು ನಿತ್ಯವ್ರತ ಎಂದು ಕರೆಯುತ್ತಾರೆ. ಅವರವರಿಗೆ ಬೇಕಾದ ಫಲಗಳಿಗೋಸ್ಕರವೂ ಸಕಲ ವಿಧದ ಪಾಪಗಳ ಪ್ರಾಯಶ್ಚಿತ್ತರೂಪದಲ್ಲೂ ಇದನ್ನು ಕಾಮ್ಯವ್ರತವಾಗಿಯೂ ಆಚರಿಸಬಹುದು. ಏಕಾದಶೀವ್ರತಾಚರಣೆಯಲ್ಲಿ ಪ್ರಸಿದ್ಧನಾದವನೆಂದರೆ ರುಕ್ಮಾಂಗದ. ಇವನ ಚರಿತ್ರೆಯನ್ನು ನಾರದೀಯ ಪುರಾಣದಲ್ಲಿ ವಿಸ್ತಾರವಾಗಿ ಹೇಳಲಾಗಿದೆ. ಇವನಲ್ಲದೆ ಮುಖ್ಯವಾಗಿ-ಶ್ರೀರಾಮ, ನಾರದ, ಅಂಬರೀಷ, ಮಾಂಧಾತ, ಮುಚುಕುಂದ, ಹರಿಶ್ಚಂದ್ರ, ಪಂಚಪಾಂಡವರು-ಮುಂತಾದ ಅನೇಕರು ತಮ್ಮತಮ್ಮ ಅಭೀಷ್ಟವನ್ನೂ ಮೋಕ್ಷವನ್ನೂ ಪಡೆದರೆಂದು ಆಯಾ ಪುರಾಣಗಳಿಂದ ತಿಳಿಯಬಹುದು. ಏಕಾದಶಿಯಂದು ಪಾಲಿಸಬೇಕಾದ ಉಪವಾಸ, ಜಾಗರಣೆ ಮುಂತಾದವು ಎಷ್ಟು ಮುಖ್ಯವೋ ಅಷ್ಟೇ ದ್ವಾದಶಿಯಂದು ಪಾಲಿಸಬೇಕಾದ ಪಾರಣೆ ಮೊದಲಾದವೂ ಮುಖ್ಯ. ಆ ವಿವರಗಳಿಗೆ (ನೋಡಿ- ದ್ವಾದಶೀ). (ಆರ್.ಎಸ್.ವಿ.)