ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಏಳೆ

ವಿಕಿಸೋರ್ಸ್ದಿಂದ

ಏಳೆ : - ಅಚ್ಚಕನ್ನಡ ಛಂದಸ್ಸಿನ ಒಂದು ಪದ್ಯಜಾತಿ. ಇದರ ಲಕ್ಷಣವನ್ನು ಮೊದಲು ನಾಗವರ್ಮನ (ಸು. 990) ಛಂದೋಂಬುಧಿಯಲ್ಲೂ ಅನಂತರ ಜಯಕೀರ್ತಿಯ (ಸು. 1050) ಛಂದೋನುಶಾಸನ ಎಂಬ ಸಂಸ್ಕೃತ ಛಂದೋಗ್ರಂಥ ಮತ್ತು ಶಾಙರ್ಗ್‌ದೇವನ (ಸು. 1250) ಸಂಗೀತರತ್ನಾಕರ ಎಂಬ ಸಂಗೀತಶಾಸ್ತ್ರ ಗ್ರಂಥಗಳಲ್ಲಿಯೂ ನಿರೂಪಿಸಲಾಗಿದೆ. ಛಂದೋಂಬುಧಿಯಲ್ಲಿ ಹೀಗೆ ಹೇಳಿದೆ: ಭುಜಪಕ್ಷಪುರಗಣ ವ್ರಜದೊಳಾಯೊಳಕ್ಕು| ಮಜಗಣಮೇಳೆಗಿಭಗತೀ|| ಕ್ರಮವಾಗಿ 2, 2 ಮತ್ತು 3 ಗಣಗಳ ಗುಂಪಿನಲ್ಲಿ 6ನೆಯದು ಬ್ರಹ್ಮಗಣವಾಗಿರುವುದು ಏಳೆಯ ಲಕ್ಷಣ-ಎಂಬುದು ಪದ್ಯದ ಆಶಯ. ಈ ಲಕ್ಷಣಪದ್ಯ ಅದರ ಲಕ್ಷ್ಯವೂ ಆಗಿದೆ. ಆದ್ದರಿಂದ ಉಳಿದ ಗಣಗಳು ವಿಷ್ಣುಗಣಗಳಾಗಿರುತ್ತವೆಯೆಂದೂ ಎರಡು ಪಾದಗಳಿರುವ ಈ ಮಟ್ಟಿನ ಮೊದಲನೆಯ ಪಾದದಲ್ಲಿ 2 ಗಣಗಳಾದ ಮೇಲೆ ಪ್ರಾಯಃ ಯತಿ ಬಂದು 3ನೆಯ ಗಣದಲ್ಲಿ ಒಳಪ್ರಾಸ ಪಾಲಿತವಾಗುತ್ತದೆಯೆಂದೂ ತಿಳಿಯಲವಕಾಶವಿದೆ. ಛಂದೋನುಶಾಸನದಲ್ಲಿ ಹೀಗೆ ಹೇಳಿದೆ: - ತ್ರಿಪದೀ ತೃತೀಯಾಂ ಹ್ರಾ| ವಪಮುಞ್ಚ ತೈಲೇತಿ|| ಸುಪಠಿತಾ ಗೇಯವಿದಜನೈಃ|| 3ನೆಯ ಪಾದವನ್ನು ಬಿಟ್ಟರೆ ತ್ರಿಪದಿಯೇ ಏಳೆಯಾಗುತ್ತದೆಯೆಂಬುದಾಗಿ ಗೇಯವಿದರಾದ ಜನರಿಂದ ಹೇಳಲ್ಪಟ್ಟಿದೆ-ಎಂಬುದು ಪದ್ಯದ ಆಶಯ. ಜಯಕೀರ್ತಿ ತ್ರಿಪದಿಯ ಮೊದಲ ಪಾದವನ್ನು 2-2 ಗಣಗಳಿಗೆ ಒಂದೊಂದು ಪಾದವಾಗಿ ಗಣಿಸಿರುವುದರಿಂದ ನಾವು 2ನೆಯ ಪಾದವೆಂದು ತಿಳಿಯುವುದು ಆತನ ಅಭಿಪ್ರಾಯದಂತೆ 3ನೆಯದಾಗಿದೆ. ಆ ಕಾರಣ ಆತನ ಮತದಂತೆ ತ್ರಿಪದಿಯಲ್ಲಿ 2ನೆಯ ಪಾದವನ್ನು ಬಿಟ್ಟರೆ ಉಳಿಯುವ 1-3ನೆಯ ಪಾದಗಳ ಲಕ್ಷಣವೇ ಏಳೆಯ ಲಕ್ಷಣ, ಇದು ನಾಗವರ್ಮ ಹೇಳಿರುವ ಲಕ್ಷಣಕ್ಕೆ ಸಮಾನವಾದುದೇ ಆಗಿದೆ.

ಸಂಗೀತರತ್ನಾಕರದಲ್ಲಿ ಕನ್ನಡ ಏಳೆಯನ್ನು ಕುರಿತಾಗ, ಪಂಚಕಾಮಾ ರತಿಶ್ಷೈವ ಕಮೋ„ತೇ ಚರಣತ್ರಯೇ-ಎಂದು ಹೇಳಿದೆ. 5 ಮದನ (= ವಿಷ್ಣು) ಗಣಗಳು, 1 ರತಿ (=ಬ್ರಹ್ಮ) ಗಣ. ಕೊನೆಗೊಂದು ಮದನ (=ವಿಷ್ಣು) ಗಣ-ಹೀಗೆ ಬರುವ 3 ಪಾದಗಳನ್ನು (ಎಂದರೆ ನಮ್ಮ ಗಣನೆಯಂತೆ 2 ಪಾದಗಳನ್ನು) ಉಳ್ಳದ್ದು ಏಳೆ-ಎಂದು ಇಲ್ಲೂ ಹೇಳಿರುವುದು ಕಾಣುತ್ತದೆ. ಕನ್ನಡ, ಸಂಸ್ಕೃತ ಲಾಕ್ಷಣಿಕರು ಏಳೆಗೆ ಹೇಳಿರುವ ಮೇಲಿನ ಲಕ್ಷ ನಿರ್ವಚನವನ್ನು ಸಾಹಿತ್ಯದಲ್ಲಿ ದೊರೆಯವ ಅದರ ನಿದರ್ಶನಗಳಿಗೆ ಅನ್ವಯಿಸಿ ನೋಡಿ, ಅದರ ಸಾಮಾನ್ಯ ಲಕ್ಷಣವನ್ನೂ ಅಪವಾದಗಳನ್ನೂ ಹೀಗೆ ಹೇಳಬಹುದು. ಎರಡು ಪಾದಗಳು; ಮೊದಲ ಪಾದದಲ್ಲಿ 4 ವಿಷ್ಣುಗಣಗಳು (2 ಗಣಗಳು ಬಳಿಕೆ ಯತಿ ಮತ್ತು 3ನೆಯ ಗಣದಲ್ಲಿ ಒಳ ಪ್ರಾಸ ಎಂದರೆ ದ್ವಿತೀಯಾಕ್ಷರ ಪ್ರಾಸದ ಆವೃತ್ತಿ); ಎರಡನೆಯ ಪಾದದಲ್ಲಿ, ಒಟ್ಟು ಪದ್ಯದ 5ನೆಯ ಗಣ ವಿಷ್ಣು, 6ನೆಯದು ಬ್ರಹ್ಮ, 7ನೆಯದು ವಿಷ್ಣು, ಇದನ್ನು ಹೀಗೆ ತೋರಿಸಬಹುದು.

*            ವಿ+ವಿ+ವಿ+ವಿ
*             ವಿ+ಬ್ರ+ವಿ||

ಇದು ಸಾಮಾನ್ಯ ಲಕ್ಷಣ. ಏಳೆಯ ಎಲ್ಲ ನಿದರ್ಶನಗಳೂ ಈ ಸಾಮಾನ್ಯ ಲಕ್ಷಣಕ್ಕೆ ಹೊಂದಿಕೊಂಡಿರುತ್ತವೆಯೆಂದು ಹೇಳುವಂತಿಲ್ಲ. ಇತರ ಅಂಶವೃತ್ತಗಳಿಗೆ ಸಹಜವಾಗಿರುವ ಅಪವಾದಗಳು ಇಲ್ಲೂ ಉಂಟು. ಆದಿಪ್ರಾಸ ಅಥವಾ ಒಳಪ್ರಾಸ ಅಥವಾ ಈ ಎರಡು ಬಗೆಯ ಪ್ರಾಸಗಳೂ ಇಲ್ಲದೆ ಹೋಗಬಹುದು. ವಿಷ್ಣುಗಣಗಳಿಗೆ ಪರ್ಯಾಯವಾಗಿ ಯಾವುದೇ ಗಣಸ್ಥಾನದಲ್ಲಿ ರುದ್ರವೋ ಬ್ರಹ್ಮವೋ ಬರಬಹುದು. ಹಾಗೂ 6ನೆಯ ಬ್ರಹ್ಮಗಣ ಸ್ಥಾನದಲ್ಲಿಯೇ ವಿರಳವಾಗಿ ವಿಷ್ಣುವೋ ರುದ್ರವೋ ಬರಬಹುದು.

ಇಲ್ಲಿ ಗಮನಿಸತಕ್ಕ ಒಂದು ಸಂಗತಿಯಿದೆ. 3ನೆಯ ಸೋಮೇಶ್ವರನ ಮಾನಸೋಲ್ಲಾಸದಲ್ಲೂ (1129) ಶಾಙರ್ಗ್‌ದೇವನ ಸಂಗೀತರತ್ನಾಕರದಲ್ಲೂ ಇತರ ಕೆಲವು ಶಾಸ್ತ್ರಗ್ರಂಥಗಳಲ್ಲೂ ಸಂಸ್ಕೃತ ಛಂದಸ್ಸಿನ ವಿಷಯಗಳನ್ನು ವಿವರಿಸುವಾಗ ಏಲಾ ಎಂಬೊಂದು ಸಂಸ್ಕೃತ ಪದ್ಯಜಾತಿಯ ಮತ್ತು ಅದರ ಪ್ರಭೇದಗಳ ಲಕ್ಷಣಗಳನ್ನು ಲಕ್ಷ್ಯಸಹಿತವಾಗಿ ನಿರೂಪಿಸಿರುವುದು ಕಂಡುಬರುತ್ತದೆ. ಗಣೈಲಾ ಮಾತ್ರೈಲಾ ವರ್ಣೈಲಾ ಎಂಬುದಾಗಿಯೂ ಕರ್ಣಾಟೀ ಏಲಾ, ಲಾಟೀ ಏಲಾ ಎಂದು ಮುಂತಾಗಿಯೂ ಪ್ರಕಾರಗಳನ್ನು ಮಾಡಿಕೊಂಡು ಒಂದೊಂದಕ್ಕೂ ಹಲವು ಪ್ರಭೇದಗಳನ್ನು ಕಲ್ಪಿಸಿ ಆ ಗ್ರಂಥಗಳಲ್ಲಿ ವಿವರಿಸಿದೆ. ಇವುಗಳಿಗೂ ಅಂಶ ಗಣಾತ್ಮಕವಾಗಿ ನಿರೂಪಿಸಿರುವ ನಾಗವರ್ಮ ಜಯಕೀರ್ತಿಗಳ ಕನ್ನಡ ಏಳೆಗೂ ಯಾವ ಸಂಬಂಧವೂ ಇಲ್ಲವೆಂದು ಹೇಳಬಹುದು. ಸಂಸ್ಕೃತದ ಗೀತನಾಮವಾದ ಏಲಾ ಎಂಬುದರ ತದ್ಭವವಾಗಿ ಏಳೆ ಎಂಬುದು ಬಂದಿರಬಹುದೆಂದು ಮಾತ್ರ ತೋರುತ್ತದೆ.

ಈವರೆಗೆ ತಿಳಿದಿರುವಂತೆ, ಕನ್ನಡದ ಯಾವ ಶಾಸನದಲ್ಲಿಯೇ ಆಗಲಿ ಕಾವ್ಯದಲ್ಲಿಯೇ ಆಗಲಿ ಏಳೆಯ ಛಂದಸ್ಸಿನಲ್ಲಿರುವ ಪದ್ಯ ದೊರೆತಿಲ್ಲ. ಜಾನಪದ ಸಾಹಿತ್ಯದಲ್ಲಿ ಮಾತ್ರ ಅಂಥ ಪದ್ಯಗಳು ತಕ್ಕಮಟ್ಟಿಗೆ ದೊರೆಯುತ್ತವೆ. ಪ್ರಯೋಗಶೀಲ ಕವಿಗಳ ಪ್ರಯತ್ನದಿಂದ ಹೊಸಗನ್ನಡ ಕಾಲದಲ್ಲೂ ಈ ಹಳೆಯ ಛಂದಸ್ಸು ಪುನರುಜ್ಜೀವನಗೊಂಡಿರುವುದು ಕಾಣುತ್ತದೆ. ಎಸ್.ವಿ.ಪರಮೇಶ್ವರಭಟ್ಟರ ತುಂಬೆಹೂವು (1968) ಎಂಬುದು 700 ಏಳೆಗಳ ಸ್ವತಂತ್ರ ಕೃತಿ. ಏಳೆ ಅಚ್ಚಕನ್ನಡ ಛಂದಸ್ಸಿನಲ್ಲಿ ತುಂಬ ಹಳೆಯ ಪದ್ಯಜಾತಿಯಾಗಿರುವುದು ಸಾಧ್ಯ. ಏಳೆಯೇ ತ್ರಿಪದಿಯಾಗಿ ರೂಪುಗೊಂಡಂತೆ ತೋರುವುದರಿಂದ ತ್ರಿಪದಿ ವ್ಯಾಪಕವೂ ಪ್ರಿಯವೂ ಆಗಿ ಬೆಳೆಯತೊಡಗಿದಂತೆ ಏಳೆ ರಚನೆಯಲ್ಲಿ ಹಿಂದೆ ಬಿದ್ದಿರಬೇಕೆಂದು ತೋರುತ್ತದೆ. (ಪ್ರಾಯಃ ಹಾಡಿಕೆಯಲ್ಲಿ ಅದರ 2ನೆಯ ಪಾದದ ಪುನರಾವರ್ತನೆ ಕಾರಣವಾಗಿ ಒಂದು ಗಣ ಕೂಡಿ, ಇಡಿಯ ಏಳೆಯೇ ಮತ್ತೆ ಮಗುಚಿ ಬಂದಂತಾಗಿ ತ್ರಿಪದಿ ಕಾಣಿಸಿಕೊಂಡಿರುವುದು ಶಕ್ಯ. ಹಾಡಿನಲ್ಲಿ ತ್ರಿಪದಿಯ 2ನೆಯ ಪಾದದ 3 ಗಣಗಳ ಪುನರಾವೃತ್ತಿಯನ್ನು ಬಿಟ್ಟರೆ ಅದರ 3 ಪಾದಗಳ ಸಾಹಿತ್ಯ ಉಳಿಯುತ್ತದೆ. ಅಥವಾ ಹಾಡಿನಲ್ಲಿ ಏಳೆಯ 2ನೆಯ ಪಾದದ 3 ಗಣಗಳನ್ನೂ ಹೇಳಿ ಮುಗಿಯುತ್ತಿದ್ದಂತೆ, ಮೀಟಿಗೆ ಇನ್ನೊಂದು ಗಣ ಕೂಡಿ, ಅದೇ ಪಾದದ ಮೊದಲ ಮೂರು ಗಣಗಳು ಇನ್ನೊಮ್ಮೆ ಆವೃತ್ತಿಗೊಂಡು ಕೂಡ ತ್ರಿಪದಿಯಾಗಿರುವುದು ಸಾಧ್ಯ.) ಅಚ್ಚಕನ್ನಡ ಛಂದಸ್ಸಿನ ಮಟ್ಟುಗಳಲ್ಲಿ ಏಳೆಯೇ ಅತಿಚಿಕ್ಕದು. ಅದರಲ್ಲಿ ವಿವರವಾದ ಭಾವವನ್ನಾಗಲಿ ಸಂಗತಿಯನ್ನಾಗಲಿ ತರುವುದು ಸಾಧ್ಯವಿಲ್ಲ. ಆದಕಾರಣ ಚುರುಕಿನ ನಡೆಯ ಕೋಲಾಟ, ಪ್ರಶ್ನೋತ್ತರ ಮೊದಲಾದವುಗಳಲ್ಲಿ ಇದು ಹೆಚ್ಚಾಗಿ ಬಳಕೆಗೆ ಬಂದಿರಬಹುದು ಎಂದು, ನಿದರ್ಶನಗಳನ್ನು ಗಮನಿಸಿ, ಊಹಿಸಬಹುದಾಗಿದೆ. ಏಳೆಯೇ ಗೀತಿಕೆ, ಸಾಂಗತ್ಯ ಮೊದಲಾದ ಇತರ ಕೆಲವು ಅಂಶವೃತ್ತಗಳಿಗೆ ಮೂಲವೆಂದು ಕೆಲವರು ಭಾವಿಸುತ್ತಾರೆ. ಆದರೆ ಇದನ್ನು ಖಚಿತವಾಗಿ ಸಾಧಿಸುವುದಕ್ಕೆ ಆಯಾ ಮಟ್ಟಿನ ಸಾಮಾನ್ಯ ಲಕ್ಷಣದ ಗಣರಚನೆ ಎಡೆಗೊಡುವುದಿಲ್ಲ. ತಮಿಳಿನ ಪ್ರಾಚೀನ ಗುಳ್ವೆಣ್ಬಾ ವೃತ್ತವನ್ನು ಏಳೇ ಹೋಲುತ್ತದೆ. ತಮಿಳು ಮತ್ತು ಕನ್ನಡಗಳ ಅಂಶಗಣರಚನೆ ವಿಶಿಷ್ಟವಾದುದೆಂಬುದನ್ನು ನೆನೆದರೆ ಆ ಎರಡು ಪದ್ಯ ಜಾತಿಗಳ ಪ್ರತ್ಯೇಕತೆ ಮನವರಿಕೆಯಾಗುತ್ತದೆ.

ಈಗ ಏಳೆಯ ಲಕ್ಷಣ ಹೇಗೆ ಕೆಲವು ನಿದರ್ಶನಗಳಲ್ಲಿ ಗೋಚರವಾಗುತ್ತದೆ ಎಂಬುದನ್ನು ನೋಡಬಹುದು :

 • 1 ಸಾಮಾನ್ಯ ಲಕ್ಷಣಕ್ಕೆ ಹೊಂದುವ ಲಕ್ಷ್ಯ :
 • ವಿ ವಿ ವಿ ವಿ
 • ಹಡೆದ ತಾ|ಯಿಗೆ ಬನ್ನಿ | ಹಡೆದ ತಂ|ದೆಗೆ ಬನ್ನಿ|
 • ವಿ ಬ್ರ ವಿ
 • ಪಡೆದ ಗಂ|ಡನಿಗೆ| ನಮ ಬನ್ನಿ||
 • 2 ಅಪವಾದ ರೀತಿಯ ರಚನೆಗೆ ಲಕ್ಷ್ಯ :
 • ರು
 • ೧. ಚಿನ್ನದ | ಕೈಗಡಗ | ಚೆನ್ನೇರು | ಇಟಗೊಂಡು |
 • ಚಿನ್ನದಾ|ಭರಣ | ನಡಬಾಗಿ||
 • ರು
 • ೨.ಹಂದರದ | ಜನ ಕೇಳಿ | ಒಂಧು ಬ|ಳಗ ಕೇಳಿ|
 • ರು
 • ಒಪ್ಪಿ ಮಗ | ಳೆನಗ | ಕೊಡಬೇಕ||
 • ೩.ಆರಿಯ | ಹೆಡೆಯಾಗಿ | ಬಾರಿಯ | ಗಣಿಯಾಗಿ ||
 • ವಿ
 • ಮುತ್ತಿನ | ಹಗ್ಗಕ | ಕಡಗೋಲ ||
 • ೪. ಮೂಡಣ | ದಿಕ್ಕಿನ | ಕತ್ತಲ | ಹರಿದ್ಹೋಗಿ |
 • ದಾಳಿಂಬ | ಕದವು | ಡಣಲಂದು || (ಟಿ.ವಿ.ವಿ.)