ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಒಡೆಸ್ಸ 2

ವಿಕಿಸೋರ್ಸ್ದಿಂದ

ಒಡೆಸ್ಸ2: ಅಮೆರಿಕ ಸಂಯುಕ್ತಸಂಸ್ಥಾನದ ಪಶ್ಚಿಮ ಟೆಕ್ಸಾಸಿನಲ್ಲಿರುವ ಒಂದು ನಗರ. ಎಕ್ಟರ್ ಕೌಂಟಿಯ ಆಡಳಿತ ಕೇಂದ್ರ. 1884ರಲ್ಲಿ ಟೆಕ್ಸಾಸ್ ಮತ್ತು ಪೆಸಿಫಿಕ್ ರೈಲ್ವೆಯಿಂದ ಇದು ಸ್ಥಾಪಿತವಾಯಿತು. ಈ ನಗರದ ನಿವೇಶನಕ್ಕೆ ಒಡೆಸ್ಸ ಎಂದು ನಾಮಕರಣ ಮಾಡಿದವರು (1881) ರಷ್ಯನ್ನರು. ರೈಲು ರಸ್ತೆ ನಿರ್ಮಾಣಕ್ಕಾಗಿ ಅವರು ಇಲ್ಲಿಗೆ ಬಂದಿದ್ದಾಗ ಈ ಪ್ರದೇಶ ರಷ್ಯದಲ್ಲಿ ತಮ್ಮ ಸ್ಥಳವಾದ ಒಡೆಸ್ಸವನ್ನೇ ಹೋಲುತ್ತಿದ್ದುದರಿಂದ ಇದಕ್ಕೆ ಆ ಹೆಸರನ್ನೇ ಇಟ್ಟರು. ಅಮೆರಿಕ ಸಂಯುಕ್ತಸಂಸ್ಥಾನದ ಅತ್ಯಂತ ದೊಡ್ಡ ಉಲ್ಕಾಪಾತದ ಕುಳಿಗಳಲ್ಲೊಂದು ಈ ನಗರದ ಬಳಿ ಇದೆ. ಅದರ ವ್ಯಾಸ 600 ಅಡಿ, ಆಳ 150 ಅಡಿ.

ಇದು ಮುಖ್ಯ ವ್ಯಾಪಾರಕೇಂದ್ರ, ಉಣ್ಣೆ, ಪೆಟ್ರೋಲಿಯಂ ಮತ್ತು ದನಕರುಗಳನ್ನು ಹೆಚ್ಚಾಗಿ ನಿರ್ಯಾತ ಮಾಡಲಾಗುತ್ತದೆ. ರಾಸಾಯನಿಕ ವಸ್ತು, ಹಬೆಪಾತ್ರೆ, ಉಪಕರಣ ಪೆಟ್ಟಿಗೆ, ಅಣಿಕಟ್ಟು, ಸೀಸ, ಹಂಚು-ಇವು ಇಲ್ಲಿ ತಯಾರಾಗುವ ಮುಖ್ಯ ವಸ್ತುಗಳು. ಕಬ್ಬಿಣದ ಕಾರ್ಖಾನೆಯೂ ತೈಲಶುದ್ಧೀಕರಣ ಕೇಂದ್ರವೂ ಇವೆ. 1944ರಲ್ಲಿ ಒಂದು ದೊಡ್ಡ ತೈಲಶುದ್ಧೀಕರಣ ಕೇಂದ್ರವನ್ನು ಇಲ್ಲಿ ಸ್ಥಾಪಿಸಲಾಯಿತು. ಸಭಾ-ವ್ಯವಸ್ಥಾಪಕ ಪದ್ಧತಿಯಲ್ಲಿ (ಕೌನ್ಸಿಲ್ ಮ್ಯಾನೇಜರ್) ಈ ನಗರದ ಆಡಳಿತ ನಡೆಯುತ್ತದೆ. ಸಭಾಸದಸ್ಯರನ್ನು ಎರಡು ವರ್ಷಗಳಿಗೊಂದು ಸಾರಿ ಆಯ್ಕೆ ಮಾಡಲಾಗುತ್ತದೆ. ನೀರು ಸರಬರಾಯಿ ಮತ್ತು ನಗರ ನೈರ್ಮಲ್ಯದ ಹೊಣೆ ಪುರಸಭೆಯದು. ಇಲ್ಲಿ ಎರಡು ದೊಡ್ಡ ಆರೋಗ್ಯಕೇಂದ್ರಗಳಿವೆ.

1920ರ ದಶಕದ ಉತ್ತರಾರ್ಧದಲ್ಲಿ ಇಲ್ಲಿ ತೈಲನಿಕ್ಷೇಪ ಪತ್ತೆಯಾದ ಮೇಲೆ ಒಡಸ್ಸ ಶೀಘ್ರವಾಗಿ ಬೆಳೆಯುತ್ತಿದೆ. 1930ರಲ್ಲಿ ಕೇವಲ 3,000 ಇದ್ದ ಜನಸಂಖ್ಯೆ ಮೂವತ್ತು ವರ್ಷಗಳಲ್ಲಿ (1960) 80,338 ಕ್ಕೆ ಏರಿದೆ. ಅತ್ಯಧಿಕ ತೈಲನಿಕ್ಷೇಪ ವಿರುವ ಪರ್ಮಿಯನ್ ಕೊಳ್ಳದ ಭೌಗೋಳಿಕ ಕೇಂದ್ರದಲ್ಲಿ ಇರುವುದರಿಂದ ಇದು ಪೆಟ್ರೋಲಿಯಂ ಕೈಗಾರಿಕೆಯ ಮುಖ್ಯ ವಿತರಣ ಮತ್ತು ಸೇವಾ ಸ್ಥಳವಾಗಿದೆ. (ಪಿ.ಎಚ್.)