ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಒರಾಂಗೂಟಾನ್

ವಿಕಿಸೋರ್ಸ್ದಿಂದ

ಒರಾಂಗೂಟಾನ್: ಕಪಿ ಜಾತಿಗೆ ಸೇರಿದ ಒಂದು ದೊಡ್ಡ ವಾನರ. ಮಲಯ ಭಾಷೆಯಲ್ಲಿ ಕಾಡುಮನುಷ್ಯ ಎಂದರ್ಥ. ಪ್ರಾಣಿವಿಜ್ಞಾನದಲ್ಲಿ ಇದರ ಹೆಸರು ಪಾಂಗೊ ಪಿಗ್ಮೆಯಿಸ್. ಹಲವು ಸಹಸ್ರ ವರ್ಷಗಳ ಹಿಂದೆ ಆಗ್ನೇಯ ಏಷ್ಯದ ಕಾಡುಗಳಲ್ಲೆಲ್ಲ ಹರಡಿಕೊಂಡಿದ್ದರೂ ವಾತಾವರಣದಲ್ಲಾದ ಬದಲಾವಣೆಗಳಿಂದಲೋ ಮಾನವಶಕ್ತಿಗೆ ಮಣಿದೋ ಇವುಗಳ ಸಂಖ್ಯೆ ಈಗ ಬಹುವಾಗಿ ಇಳಿದಿದೆ. ಇಂದು ಬೋರ್ನಿಯೊ ಮತ್ತು ಸುಮಾತ್ರಗಳ ಜೌಗು ಕಾಡುಗಳಲ್ಲಿ ಮಾತ್ರ ಕಾಣಬಹುದಾದ ಇವುಗಳ ಸಂಖ್ಯೆ 5,000ಕ್ಕಿಂತ ಕಡಿಮೆ. ವಾಸ ಮರಗಳ ಮೇಲೆ. ಸಾಮಾನ್ಯವಾಗಿ ಗಂಡು ಹೆಣ್ಣುಗಳು ಜೊತೆಜೊತೆಯಾಗಿ ಬಾಳುತ್ತವೆ; ಕೆಲವೊಮ್ಮೆ ಒಂಟಿಯಾಗಿಯೂ ಗುಂಪಿನಲ್ಲಿಯೂ ಇರಬಹುದು. ಮರಗಳ ಮೇಲೆ ರೆಂಬೆಗಳನ್ನು ಹೆಣೆದು ಗೂಡು ಕಟ್ಟಿಕೊಂಡು ಅಲ್ಲಿ ಮಲಗುತ್ತವೆ. ವಿಶ್ರಮಿಸುವಾಗ ಎಲೆಗಳಿಂದ ಮೈಯನ್ನು ಮುಚ್ಚಿಕೊಳ್ಳುವ ಅಭ್ಯಾಸ ಉಂಟು.

ಬಲಯುತವಾದ ದೇಹ, ಸಣ್ಣ ಕಿವಿಗಳು, ಗಿಡ್ಡ ಕಾಲುಗಳು, ಎದ್ದು ನಿಂತಾಗ ನೆಲ ಮುಟ್ಟುವಷ್ಟು ಉದ್ದವಾದ ಕೈಗಳು ಇದರ ವಿಶಿಷ್ಟ ಲಕ್ಷಣಗಳು. ಹೆಚ್ಚು ಕಡಿಮೆ ಗೋರಿಲ್ಲದಂತೆ ಕಾಣುತ್ತದೆ. ಇದರ ಚಿಕ್ಕ ಕಿವಿಗಳು, ಕಂದು ಚರ್ಮ, ಉದ್ದನೆಯ ವಿರಳ ಕೆಂಗೂದಲುಗಳಿಂದಾಗಿ ಇದು ಗೋರಿಲ್ಲಕ್ಕಿಂತ ಭಿನ್ನವೆನಿಸಿದೆ. ಗಂಡು ಸುಮಾರು 5ಳಿ ಅಡಿ ಎತ್ತರ ಬೆಳೆಯುವುದುಂಟು; 165 ಪೌಂ. ತೂಗುತ್ತದೆ. ಪ್ರಾಣಿಸಂಗ್ರಹಾಲಯಗಳಲ್ಲಿ ಸಾಕಿದ ಒರಾಂಗೂಟಾನುಗಳು ವಿಪರೀತ ದಪ್ಪವಾಗಿ ಬೆಳೆದು 400ಕ್ಕೂ ಹೆಚ್ಚು ಪೌಂಡು ತೂಗುವುದುಂಟು. ಪ್ರಬುದ್ದ ಗಂಡಿನಲ್ಲಿ ಗಡ್ಡ ಬೆಳೆಯುತ್ತದೆ. ಧ್ವನಿಪೆಟ್ಟಿಗೆಯಿಂದ ಉದ್ಭವಿಸಿದ ಗಾಳಿಯ ಚೀಲವೊಂದು ಕುತ್ತಿಗೆಯ ಭಾಗದಲ್ಲಿ ನೇತುಬಿದ್ದಿದೆ. ಅಲ್ಲದೆ ಎರಡು ಕೆನ್ನೆಗಳ ಬಳಿಯೂ ಕಪಿ ಸಾಮಾನ್ಯಕ್ಕಿರುವಂತೆ ಒಂದೊಂದು ಚೀಲವಿದೆ. ನೆಲದ ಮೇಲೆ ಇದರ ನಡಿಗೆ ನಿಧಾನ ಅಲ್ಲದೆ ಇದು ನೆಲದ ಮೇಲೆ ನಡೆಯಲು ಇಚ್ಛಿಸುವುದೂ ಇಲ್ಲ. ಮರಗಳ ಮೇಲೆ, ರೆಂಬೆಯಿಂದ ರೆಂಬೆಗೆ ನೆಗೆದು ಸಾಗುವುದೇ ಸಾಮಾನ್ಯ. ಸರಾಗವಾಗಿ ಗಂಟೆಗೆ 8-9 ಕಿಮೀ ದೂರ ಕ್ರಮಿಸುತ್ತದೆ.

ಒರಾಂಗೂಟಾನ್ ಸ್ವಾಭಾವಿಕವಾಗಿ (ಚಿಂಪಾಂಜಿಯಷ್ಟಲ್ಲದಿದ್ದರೂ) ಬಹು ಚುರುಕಾದ ಪ್ರಾಣಿ. ಸಾಕಿ ಶಿಕ್ಷಣವಿತ್ತಾಗ ಹೆಚ್ಚಿನ ಚುರುಕುತನ ಪ್ರದರ್ಶಿಸುತ್ತದೆ. ಮನುಷ್ಯರೊಂದಿಗೆ ಇದು ಸ್ನೇಹಪರ. ತನ್ನ ಆವರಣದ ಬಗ್ಗೆ ಕುತೂಹಲವನ್ನು ಪ್ರದರ್ಶಿಸುತ್ತದೆ. ಈ ಪ್ರಾಣಿ ಸಂಪುರ್ಣವಾಗಿ ಸಸ್ಯಹಾರಿ. ಮುಖ್ಯವಾಗಿ ಹಣ್ಣುಗಳು ಇದರ ಆಹಾರ. ಕೆಲವೊಮ್ಮೆ ಎಲೆ, ದಂಟುಗಳನ್ನೂ ತಿನ್ನುತ್ತದೆ. ಗಂಡು 10 ವರ್ಷಗಳಲ್ಲಿಯೂ ಹೆಣ್ಣು 8 ವರ್ಷಗಳಲ್ಲಿಯೂ ಪ್ರೌಢಾವಸ್ಥೆ ತಲುಪುತ್ತವೆ. ಗರ್ಭಾವಧಿ 270 ದಿನಗಳು. ಒಮ್ಮೆಗೆ ಒಂದು ಮರಿಯನ್ನು ಮಾತ್ರ ಹೆರುತ್ತದೆ. (ಎಚ್.ಬಿ.ಡಿ.)