ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಓ

ವಿಕಿಸೋರ್ಸ್ದಿಂದ

ಕನ್ನಡ ವರ್ಣಮಾಲೆಯಲ್ಲಿ ಹದಿಮೂರನೆಯದು, ದೀರ್ಘಸ್ವರಾಕ್ಷರ, ಲಿಪಿಯ ದೃಷ್ಟಿಯಿಂದ ಒ ಮತ್ತು ಓಕಾರಗಳಲ್ಲಿ ಪ್ರಾಚೀನಕಾಲದ ಶಾಸನಗಳಲ್ಲಿ ಅಷ್ಟಾಗಿ ವ್ಯತ್ಯಾಸಗಳು ಕಾಣಬರುವುದಿಲ್ಲ. (ನೋಡಿ- ಒ) ಬಹುಶಃ ಇವೆರಡಕ್ಕೂ ವ್ಯತ್ಯಾಸ ತೋರಿಸುವ ಪ್ರವೃತ್ತಿ ವಿಜಯನಗರ ಕಾಲಾಂತರ ಬೆಳೆದುಬಂದಿರಬೇಕು. ಆದರೆ ಬರೆವಣಿಗೆಯಲ್ಲಿನ ಈ ವ್ಯತ್ಯಾಸ ಖಚಿತವಾಗಿ ಯಾವಾಗ ಪ್ರಾರಂಭವಾಯಿತು ಎಂದು ಹೇಳುವುದು ಕಷ್ಟ. ಪ್ರ.ಶ. 18ನೆಯ ಶತಮಾನದ ಶಾಸನಗಳಲ್ಲಿ ಈ ಅಕ್ಷರದ ಹ್ರಸ್ವ ಮತ್ತು ದೀರ್ಘಗಳಿಗೆ ಪ್ರತ್ಯೇಕ ರೂಪಗಳಿರುವುದು ಕಂಡುಬರುತ್ತದೆ.

ಅಶೋಕನ ಕಾಲದಲ್ಲಿ ಅಕ್ಷರದ ಮೇಲ್ಭಾಗದಲ್ಲಿ ಎಡಬಲ ಗಳಲ್ಲಿ ಅಡ್ಡ ಗೀಟುಗಳಿದ್ದುವು. ಕದಂಬರ ಕಾಲದಲ್ಲಿ ಮೇಲಿನ ಅಡ್ಡಗೀಟುಗಳು ಡೊಂಕಾದುವು. ಗಂಗರ ಕಾಲಕ್ಕೆ ಬಲಭಾಗದ ರೇಖೆ ಇನ್ನೂ ಕೆಳಕ್ಕೆ ಬಾಗಿತು. ಇದು ರಾಷ್ಟ್ರಕೂಟ ಕಾಲದಲ್ಲಿ ಇನ್ನೂ ಸ್ಪಷ್ಟ. ಚಾಲುಕ್ಯರ ಕಾಲಕ್ಕೆ ಎಡದ ರೇಖೆಯ ಪ್ರಾಮುಖ್ಯ ಹೋಗಿ ಬಲಗಡೆಯ ರೇಖೆ ಇನ್ನೂ ಖಚಿತವಾಯಿತು. ಮದಕರಿನಾಯಕನ ಕಾಲಕ್ಕಾಗಲೆ ಅಕ್ಷರದಲ್ಲಿ ಓತ್ವ ಮತ್ತು ದೀರ್ಘಗಳು ಈಗಿನಂತೆ ಸ್ಪಷ್ಟವಾಗಿ ಗೋಚರಿಸಿದುವು.

ಈ ಅಕ್ಷರ ಪಶ್ಚ ಅರ್ಧ ಸಂವೃತ ಗೋಲ ದೀರ್ಘ ಸ್ವರವನ್ನು ಸೂಚಿಸುತ್ತದೆ. (ಎ.ಎ.ಎನ್.)