ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಚಿನ್

ವಿಕಿಸೋರ್ಸ್ದಿಂದ

ಕಚಿನ್ : ಮಯನ್ಮಾರಿನ ಈಶಾನ್ಯ ಭಾಗದಲ್ಲಿರುವ ರಾಜ್ಯ. 1947ರ ಸಂವಿಧಾನಕ್ಕನುಗುಣವಾಗಿ ಏರ್ಪಟ್ಟಿತು. ವಾಯವ್ಯಕ್ಕೆ ಭಾರತ, ಉತ್ತರಕ್ಕೆ ಟಿಬೆಟ್, ಪುರ್ವಕ್ಕೆ ಚೀನ ಇದರ ಮೇರೆಗಳು. ಬ್ರಿಟಿಷ್ ಬರ್ಮದ ಜಿಲ್ಲೆಗಳಾಗಿದ್ದ ಭಾಮೊ ಮತ್ತು ಮ್ಯಿಚೀನಾಗಳೂ ಉತ್ತರದ ಪುಟಾ-ಒ ಜಿಲ್ಲೆಯೂ ಈ ರಾಜ್ಯಕ್ಕೆ ಸೇರಿವೆ. ಇರಾವಾಡಿ ನದಿಯ ಮೇಲ್ದಂಡೆಯ ಮೇಲಿರುವ ಮ್ಯಿಚೀನಾ ಇದರ ರಾಜಧಾನಿ. ಇದೊಂದು ರೈಲ್ವೆನಿಲ್ದಾಣ. ಭಾಮೊ ಮತ್ತು ಮೋಗೌಂಗ್ ಇತರ ಪಟ್ಟಣಗಳು. ಇಲ್ಲಿಯ ಪರ್ವತಸೀಮೆಯಲ್ಲಿ ವಾಸವಾಗಿರುವ ಜನ ಕಚಿನರು. ರೈಲುಮಾರ್ಗದ ಪ್ರದೇಶದಲ್ಲೂ ದಕ್ಷಿಣದ ಕಣಿವೆಗಳಲ್ಲೂ ಇರುವವರು ಷಾನ್ ಮತ್ತು ಬರ್ಮೀಯರು. ಈ ಜಿಲ್ಲೆಯ ಉತ್ತರ ಗಡಿಸೀಮೆಯ ವಿಚಾರವಾಗಿ ಮಯನ್ಮಾರಿಗೂ ಚೀನಕ್ಕೂ ನಡುವೆ 1960ರ ದಶಕದ ಆದಿಕಾಲದ ವರೆಗೂ ವ್ಯಾಜ್ಯವಿತ್ತು. ಈ ಜಿಲ್ಲೆಯ ಪ್ರತಿನಿಧಿಯಾಗಿ ಕೇಂದ್ರ ಸರ್ಕಾರದಲ್ಲಿ ಒಬ್ಬ ಮಂತ್ರಿಯಿದ್ದಾನೆ. ಸು. 7,00,000 ಜನಸಂಖ್ಯೆಯಿದೆ.