ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನಿಷ್ಕ 1

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಕನಿಷ್ಕI : ಉತ್ತರ ಭಾರತದಲ್ಲಿ ರಾಜ್ಯವಾಳಿದ ಕುಶಾಣ ವಂಶದ ಚಕ್ರವರ್ತಿಗಳಲ್ಲಿ ಅತ್ಯಂತ ಶ್ರೇಷ್ಠ, ಪ್ರಸಿದ್ಧ. ಪ್ರಾಚೀನ ಭಾರತದ ಪ್ರದೇಶಗಳಾದ ಮಧ್ಯ ದೇಶ, ಉತ್ತರಾಪಥ ಮತ್ತು ಅಪರಾಂತಗಳು ಇವನ ಆಳ್ವಿಕೆಗೆ ಒಳಪಟ್ಟಿದ್ದುವು. ಪುರ್ವ-ಪಶ್ಚಿಮವಾಗಿ ಬಿಹಾರದಿಂದ

ಖೊರಾಸಾನದವರೆಗೂ ಉತ್ತರ-ದಕ್ಷಿಣವಾಗಿ ಖೊತಾನದಿಂದ ಕೊಂಕಣದವರೆಗೂ ಈತನ ಚಕ್ರಾಧಿಪತ್ಯ ಹಬ್ಬಿತ್ತೆಂದು ಹೇಳಲಾಗಿದೆ. ಈತನ ಕಾಲ ಯಾವುದೆಂದು ನಿಶ್ಚಿತವಾಗಿ ಹೇಳುವುದು ಸಾಧ್ಯವಿಲ್ಲ: ಎರಡನೆಯ ಕಡ್ಫೀಸಿಸನ ಅನಂತರ ಈತ ಇದ್ದಿರಬೇಕೆಂದು

ಕಾಣುತ್ತದೆ. (ನೋಡಿ- ಕಡ್ಫೀಸಿಸ್-2) ಎರಡನೆಯ ಕಡ್ಫೀಸಿಸನ ಕಾಲ ಪ್ರ.ಶ. ಸು. 65-75 ಎನ್ನುವುದಾದರೆ, ಕನಿಷ್ಕ ಪ್ರ.ಶ. 1ನೆಯ ಶತಮಾನದ ಕೊನೆಯ ಭಾಗದಲ್ಲಿ ಆಳಿದನೆಂದು ಹೇಳಬಹುದಾಗಿದೆ. ಈತನೊಬ್ಬ ಶಕಸ್ಥಾಪಕ. ಇವನ ಆಳ್ವಿಕೆಯ ವರ್ಷಗಳ ಎಣಿಕೆಯೇ

ಅನಂತರವೂ ಮುಂದುವರಿದಿದ್ದಿರಬಹುದು. ಪ್ರ.ಶ. 78ರಲ್ಲಿ ಆರಂಭವಾದ ಶಕೆಯೇ ಇವನದೆಂದು ಊಹಿಸಲಾಗಿದೆ. ಇದನ್ನೊಪ್ಪುವುದಾದರೆ ಈತ ಪ್ರ.ಶ. 101 ಅಥವಾ 102ರವರೆಗೆ ಆಳಿದನೆಂದು ಹೇಳಬಹುದು. ಕನಿಷ್ಕನ ಆಳ್ವಿಕೆ ಪ್ರ.ಶ. 130ರಿಂದ ಆರಂಭವಾಯಿತೆಂದು ಕೆಲವು

ಭಾರತಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಇದಕ್ಕೆ ಟಿಬೆಟನ್ ಮತ್ತು ಚೀನೀ ದಾಖಲೆಗಳು ಆಧಾರ. ಈತ ಒಂದನೆಯ ಮತ್ತು ಎರಡನೆಯ ಕಡ್ಫೀಸಿಸರಿಗಿಂತಲೂ ಹಿಂದಿನವನೆಂದೂ ಪ್ರ.ಶ.ಪು 58ರಲ್ಲಿ ಆರಂಭವಾದ ವಿಕ್ರಮಶಕಪುರಷನೀತನೆಂದೂ ಇನ್ನು ಕೆಲವು ವಿದ್ವಾಂಸರ

ವಾದ. ಈತ ಪ್ರ.ಶ. 248ರಲ್ಲಿ ಸಿಂಹಾಸನಾರೋಹಣ ಮಾಡಿದನೆಂದೂ ತ್ರೈಕೂಟಕ ಮತ್ತು ಇತರ ವಂಶಗಳ ಅರಸರು ಅನುಸರಿಸುವ ಶಕೆಯನ್ನು ಈತ ಆರಂಭಿಸಿದನೆಂದೂ ಒಂದು ಅಭಿಪ್ರಾಯವುಂಟು. ಆದರೆ ಇದು ಇತಿಹಾಸಕಾರರಿಂದ ಅಷ್ಟೇನೂ ಪುರಸ್ಕೃತವಾಗಿಲ್ಲ. ಬೌದ್ಧ ಸಂಪ್ರದಾಯಗಳಲ್ಲಿ ಕನಿಷ್ಕನ ಹೆಸರು ಬಹಳ ಪ್ರಸಿದ್ಧವಾಗಿದೆ. ಕನಿಷ್ಠ ಎಂಬುದು ಇವನ ಹೆಸರಿನ ಸಂಸ್ಕೃತರೂಪ. ಈತ ಪಾರ್ಥಿಯನರ ವಿರುದ್ಧ ದಂಡಯಾತ್ರೆ ನಡೆಸಿದನೆಂದು ಹೇಳಲಾಗಿದೆ. ಸಾಕೇತ ಮತ್ತು ಪಾಟಲಿಪುತ್ರಗಳನ್ನು ಈತ ಗೆದ್ದ ವಿಚಾರವನ್ನು ಟಿಬೆಟಿನ

ಲೇಖಕರು ಉಲ್ಲೇಖಿಸಿದ್ದಾರೆ. ಬಂಗಾಲ ಒರಿಸ್ಸಗಳಲ್ಲೂ ಇವನ ನಾಣ್ಯಗಳು ದೊರೆತಿವೆ. ನೇಪಾಳದ ಲಿಚ್ಛವಿಗಳು ಕನಿಷ್ಕನ ಶಕೆಯನ್ನೇ ಅನುಸರಿಸಿದ್ದಾರೆ. ಹೀಗೆಂದ ಮಾತ್ರಕ್ಕೆ ಈ ಪ್ರದೇಶಗಳೆಲ್ಲ ಕನಿಷ್ಕನಿಗೆ ಅಧೀನವಾಗಿದ್ದುವೆಂದು ಹೇಳಲಾಗುವುದಿಲ್ಲ. ಕಾಶ್ಮೀರದಲ್ಲಿ

ಕನಿಷ್ಕನ ಅಳ್ವಿಕೆ ನಡೆಸಿದ ಬಗ್ಗೆ ಕಲ್ಹಣನ ರಾಜತರಂಗಿಣಿಯಲ್ಲಿ ಉಲ್ಲೇಖವಿದೆ. ಗಾಂಧಾರ ರಾಜ್ಯ ಇವನ ಅಧೀನದಲ್ಲಿತ್ತೆಂದು ಹ್ಯುಎನ್ ತ್ಸಾಂಗ್ ಹೇಳಿದ್ದಾನೆ. ಪುರುಷಪುರ ಪುರ್ವದ ಪ್ರದೇಶವನ್ನೂ ಈತ ಗೆದ್ದಿದ್ದನೆಂದು ಗೊತ್ತಾಗುತ್ತದೆ. ಮುಪ್ಪು ಸಂಭವಿಸಿದಾಗಲೂ ಕನಿಷ್ಕನಿಗೆ ರಾಜ್ಯ ಗೆಲ್ಲುವ ಆಸೆ ಹೋಗಿರಲಿಲ್ಲವೆಂದು ಕಾಣುತ್ತದೆ. ಮಧ್ಯ ಏಷ್ಯದಲ್ಲಿದ್ದ ಚೀನೀಯರ ವಿರುದ್ಧ ಈತನೊಂದು ವಿಫಲ ದಂಡಯಾತ್ರೆ ನಡೆಸಿದ. ಮೂರು ರಾಜ್ಯಗಳನ್ನು ಗೆದ್ದರೂ ಉತ್ತರದ ನೆಲ ಮಾತ್ರ ತನಗೆ ದಕ್ಕಲಿಲ್ಲವೆಂದು ಈತ

ಕೊರಗುತ್ತಲೇ ಪ್ರಾಣ ಬಿಟ್ಟನಂತೆ. ಚೀನೀ ದಂಡನಾಯಕ ಪಾನ್-ಜೋ ಅಗ ಅನೇಕ ಪ್ರದೇಶಗಳನ್ನು ಜಯಿಸಿ ಕ್ಯಾಸ್ಪಿಯನ್ ಸಮುದ್ರದವರೆಗೂ ಚೀನೀ ಪ್ರಭಾವ ವಿಸ್ತರಿಸಿದ್ದ. ಚೀನೀಯರ ವಿಜಯದಿಂದ ಕನಿಷ್ಕನಿಗೂ ಹುರುಪು ತುಂಬಿ, ತಾನೂ ಚೀನೀ ಚಕ್ರವರ್ತಿಗೆ

ಸಮನೆಂಬುದನ್ನು ಸ್ಥಾಪಿಸುವ ಉದ್ದೇಶದಿಂದ ಅತ ಚೀನೀ ಚಕ್ರವರ್ತಿಕುಮಾರಿಯ ಕೈಬೇಡಿದ. ಪಾನ್-ಜೋ ಇದಕ್ಕೆ ಒಪ್ಪಲಿಲ್ಲ. ಇದು ತನ್ನ ಚಕ್ರವರ್ತಿಗೆ ಮಾಡಿದ ಅಪಮಾನವೆಂಬುದು ಅವನ ಭಾವನೆಯಾಗಿತ್ತು. ಕನಿಷ್ಕನಿಗೆ ಕೋಪ ಬಂತು. 70,000 ಮಂದಿ ಅಶ್ವಸವಾರರ

ಸೈನ್ಯವನ್ನು ಯುದ್ಧಕ್ಕೆ ಕಳಿಸಿದ. ಈ ಸೈನ್ಯ ಹಿಮಾಲಯ ಪರ್ವತಗಳನ್ನು ದಾಟಿ ಚೀನೀ ನೆಲವನ್ನು ಮುತ್ತಿಗೆ ಹಾಕುವ ವೇಳೆಗೆ ಜರ್ಝರಿತವಾಗಿತ್ತು. ಕನಿಷ್ಕನ ಕಂಗೆಟ್ಟ ಸೇನೆಯನ್ನು ಪಾನ್-ಜೋ ನಿರ್ದಯೆಯಿಂದ ಒರೆಸಿ ಹಾಕಿದ. ಕನಿಷ್ಕನ ಮಹತ್ತ್ವಾಕಾಂಕ್ಷೆ ಹೀಗೆ ಮುರಿದು

ಬಿತ್ತು.-ಎಂದು ಹೇಳಲಾಗಿದೆ. ಕನಿಷ್ಕ ಬೌದ್ಧನಾಗಿದ್ದನೆಂಬುದಕ್ಕೆ ಅನೇಕ ಶಾಸನಗಳ ಮತ್ತು ನಾಣ್ಯಗಳ ಅಧಾರಗಳುಂಟು. ಈತ ಪೆಷಾವರಿನಲ್ಲಿ ಕಟ್ಟಿಸಿದ ಪ್ರಸಿದ್ಧ ವಿಹಾರದ ಬಗ್ಗೆ ಹಬ್ಬಿದ್ದ ದಂತಕಥೆಗಳನ್ನು ಹ್ಯುಎನ್ ತ್ಸಾಂಗನೂ ಅಲ್ಬೆರೂನಿಯಾ ಉಲ್ಲೇಖಿಸಿದ್ದಾರೆ. ಇದು ಬೌದ್ಧ ಸಂಸ್ಕೃತಿಯ

ಕೇಂದ್ರವಾಗಿತ್ತು. ಪಾಶರ್ವ್‌ ಮತ್ತು ಪಾಶಿರ್ವ್‌ಕರೆಂಬವರ ಸಲಹೆಯ ಮೇರೆಗೆ ಈತ ಒಂದ ಬೌದ್ಧ ಧರ್ಮಸಭೆಯನ್ನು ಕೂಡಿಸಿದನಂತೆ. ಇದು ಕಾಶ್ಮೀರದಲ್ಲಿ ಸೇರಿತ್ತೆಂಬುದು ಒಂದು ಮತವಾದರೆ, ಗಾಂಧಾರ ಅಥವಾ ಜಲಂಧರದಲ್ಲಿ ನಡೆಯಿತೆಂಬುದು ಇನ್ನೊಂದು ಮತ.

ಕುಂಡಲವನ ವಿಹಾರದಲ್ಲಿ ಸೇರಿದ್ದ ಈ ಸಭೆಯ ಅಧ್ಯಕ್ಷನಾಗಿದ್ದವನು ವಸುಮಿತ್ರ. ಪ್ರಸಿದ್ಧ ಸಂಸ್ಕೃತ ಕವಿ ಅಶ್ವಘೋಷ ಇದರ ಉಪಾಧ್ಯಕ್ಷ. ಈತನನ್ನು ಕನಿಷ್ಕನೇ ಪಾಟಲಿಪುತ್ರದಿಂದ ಹಾರಿಸಿಕೊಂಡು ಬಂದನಂತೆ ಬೌದ್ಧ ಧರ್ಮ ಕುರಿತ ಅನೇಕ ಧರ್ಮಸೂತ್ರಗಳು ಅಲ್ಲಿ

ರಚಿತವಾದುವು. ಆ ಸಭೆಯಲ್ಲಿ ಪ್ರಮುಖವಾಗಿ ಭಾಗವಹಿಸಿದ್ದವರು ಹೀನಯಾನ ಪಂಥದವರು. ಆದರೆ ಆ ವೇಳೆಗೆ ಮಹಾಯಾನ ಬಹಳ ಮಟ್ಟಿಗೆ ಅಭಿವೃದ್ಧಿ ಹೊಂದಿತ್ತು. ಅಶ್ವಘೋಷ, ವಸುಮಿತ್ರ ಮುಂತಾದವರೆಲ್ಲ ಮಹಾಯಾನ ಪಂಥದವರು. ಇವರೆಲ್ಲ ರಾಜಮನ್ನಣೆ

ದೊರಕಿಸಿಕೊಂಡಿದ್ದವರು. ಕನಿಷ್ಕನ ಆಳ್ವಿಕೆಯ ಕಾಲದಲ್ಲಿ ಅನೇಕ ಕವಿಗಳಿಗೂ ವಿದ್ವಾಂಸರಿಗೂ ಪ್ರೋತ್ಸಾಹ ದೊರಕಿತೆಂಬುದಂತೂ ನಿಜ. ಮೇಲೆ ಹೇಳಿದ ಬೌದ್ಧ ಕವಿಗಳೂ ವಿದ್ವಾಂಸರೂ ಅಲ್ಲದೆ ಸಂಘರ್ಷಕನೆಂಬ ಪಂಡಿತನೂ ಕನಿಷ್ಕನ ಆಸ್ಥಾನದಲ್ಲಿದ್ದ. ಮಹಾಯಾನ ಬೌದ್ಧಪಂಥದ ಶ್ರೇಷ್ಠ

ಪ್ರತಿಪಾದಕನಾದ ನಾಗಾರ್ಜುನ, ಸುಪ್ರಸಿದ್ಧ ಆಯುರ್ವೇದಜ್ಞನಾದ ಚರಕ-ಇವರೂ ಬಹುಶಃ ಕನಿಷ್ಕನ ಆಸ್ಥಾನದಲ್ಲಿದ್ದರು. ಮಾಠರನೆಂಬವನು ಕನಿಷ್ಕನ ಮಂತ್ರಿ. ಇವನೊಬ್ಬ ಮಹಾ ರಾಜನೀತಿಜ್ಞ. ಗ್ರೀಕ್ ವಾಸ್ತು ಶಿಲ್ಪಿ ಅಜೆಸಿಲೇಯಸ್ ಕೂಡ ಇಲ್ಲಿದ್ದನೆನ್ನಲಾಗಿದೆ. ಅಂತೂ

ಇವರೆಲ್ಲ ಈ ಕನಿಷ್ಕನ ಕಾಲದಲ್ಲೇ ಇದ್ದರೇ ಅಥವಾ ಇದೇ ಹೆಸರಿನ ಇತರರ ಕಾಲದಲ್ಲಿ ಇದ್ದರೇ ಎಂಬುದು ಸದ್ಯಕ್ಕೆ ಬಿಡಿಸಲಾರದ ಒಗಟಾಗಿದೆ. ಕನಿಷ್ಕ ಬೌದ್ಧಧರ್ಮೀಯನಾಗಿದ್ದರೂ ಇವನ ನಾಣ್ಯಗಳ ಹಿಂಬದಿಯಲ್ಲಿ ಗ್ರೀಕ್, ಸುಮೆರಿಯನ್, ಎಲಮೈಟ್, ಪರ್ಷಿಯನ್ ಮತ್ತು ಭಾರತೀಯ ದೇವರುಗಳ ಚಿತ್ರಗಳಿವೆ. ಶಿವ, ಶಾಕ್ಯಮುನಿ, ಬುದ್ಧ, ವಾಯು, ಅಗ್ನಿ, ಚಂದ್ರ, ಸೂರ್ಯ, ಮಿತ್ರ-ಮುಂತಾದವರ ಚಿತ್ರಗಳು ಕೆಲವು

ಉದಾಹರಣೆಗಳು. ನಾನಾ ಧರ್ಮಗಳ ದೇವತೆಗಳ ಚಿತ್ರಗಳು ಕನಿಷ್ಕನ ಉದಾರದೃಷ್ಟಿಯನ್ನೂ ಈತನ ರಾಜ್ಯದಲ್ಲಿ ನಾನಾ ಧರ್ಮಗಳು ಸಹಬಾಳ್ವೆ ನಡೆಸುತ್ತಿದ್ದುವೆಂಬುದನ್ನೂ ತೋರಿಸುತ್ತವೆಯೆನ್ನಲಾಗಿದೆ. ಅದುವರೆಗೂ ಚಲಾವಣೆಗೆ ಕೊಡಲಾಗುತ್ತಿದ್ದ ನಾಣ್ಯಗಳಲ್ಲಿದ್ದಂತೆ

ಇವುಗಳ ಹಿಂಬದಿಯಲ್ಲಿ ಖರೋಷ್ಠಿ ಲಿಪಿಯಿಲ್ಲ. ಕನಿಷ್ಕನಿಗೆ ವಾಸ್ತುಶಿಲ್ಪ ಮತ್ತು ಇತರ ಕಲೆಗಳಲ್ಲೂ ಆಸಕ್ತಿಯಿತ್ತು. ಪೆಷಾವರಿನ ಬುದ್ಧನ ಸ್ಮಾರಕದ ಮೇಲೆ 122 ಮೀ ಎತ್ತರದ ಗೋಪುರವನ್ನು ಈತ ಕಟ್ಟಿಸಿದ. ತಕ್ಷಶಿಲೆಯನ್ನು ವಿಸ್ತರಿಸಿದ. ಕಾಶ್ಮೀರದಲ್ಲಿ ತನ್ನ ಹೆಸರಿನಲ್ಲೊಂದು ನಗರ ನಿರ್ಮಿಸಿದ. ಮಥುರಾದಲ್ಲಿ ಅನೇಕ

ಸುಂದರ ಭವನಗಳನ್ನು ಇವನೇ ಕಟ್ಟಿಸಿದನೆಂದು ಹೇಳಲಾಗಿದೆ. ಗಾಂಧಾರ ಶೈಲಿಯ ಪ್ರವರ್ತಕನೀತನೇ ಆಗಿರಬಹುದು. ಸಾರನಾಥ ಮಥುರಾಗಳಲ್ಲಿಯ ಇತರ ಶೈಲಿಗಳೂ ಇವನ ಪ್ರೋತ್ಸಾಹದಿಂದ ವಿಕಾಸ ಹೊಂದಿದುವು. ಕನಿಷ್ಕನದು ಹೊರನಾಡಿನಿಂದ ಬಂದವರ

ವಂಶವಾದರೂ ಭಾರತದ ನಾನಾ ಭಾಗಗಳ ಮೇಲೆ ಇವನ ಪ್ರಭಾವ ಅಗಾಧವಾದದ್ದು. ಆದ್ದರಿಂದಲೇ ಈತ ಪ್ರಾಚೀನ ಭಾರತದ ಶ್ರೇಷ್ಠ ದೊರೆಗಳಲ್ಲೊಬ್ಬನೆಂದು ಪ್ರಸಿದ್ಧನಾಗಿದ್ದಾನೆ. (ಆರ್.ಆರ್.ಎ.)