ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ಪ್ರಬಂಧ ಸಾಹಿತ್ಯ

ವಿಕಿಸೋರ್ಸ್ದಿಂದ

ಕನ್ನಡದಲ್ಲಿ ಪ್ರಬಂಧಸಾಹಿತ್ಯ : ಆಧುನಿಕ ಸಾಹಿತ್ಯದ ಇತರ ಪ್ರಕಾರಗಳಂತೆ ಕನ್ನಡ ಪ್ರಬಂಧನಾ ರಚನಾವಿಧಾನ ದೃಷ್ಟಿಯಿಂದ ಇಂಗ್ಲಿಷ್ ಪ್ರಬಂಧದಿಂದ ಪ್ರಭಾವಿತವಾಗಿದ್ದರೂ ನಮ್ಮ ನುಡಿನೆಲದಲ್ಲಿ ಹುಟ್ಟಿ ಬೆಳೆದದ್ದು ಎಂಬಂತೆ ಸ್ವಂತ ಸತ್ವದಿಂದ ಶೋಭೆ ಪಡೆದಿದೆ. ಸಾಹಿತ್ಯಗುಣ ಸಿದ್ಧಿಸುವಂತೆ ವಿಶಿಷ್ಟ ಪದಬಂಧಗಳಿಂದ ನಿರ್ಮಾಣವಾದ ಯಾವ ಸಾಹಿತ್ಯ ಕೃತಿಯನ್ನಾದರೂ ಪ್ರಬಂಧ ಎಂದು ಹೇಳಬಹುದು. ಪ್ರಬಂಧ ಎಂಬ ಮಾತು ಬಹಳ ಹಳೆಯದು. ಕನ್ನಡದ ಅನೇಕ ಪ್ರಾಚೀನ ಕವಿಗಳು ತಮ್ಮ ಕಾವ್ಯಗಳನ್ನು ‘ಪ್ರಬಂಧ’ ಎಂದು ಕರೆದಿರುವುದೂ ಉಂಟು. ಆದರೆ ಪ್ರಾಚೀನರ ದೃಷ್ಟಿಯಲ್ಲಿ ಪ್ರಬಂಧ ಎಂದರೆ ಕಾವ್ಯ ಎಂದರ್ಥ.

ನಮ್ಮಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸ ಪ್ರಾರಂಭವಾದಮೇಲೆ ಶಾಲಾಕಾಲೇಜುಗಳ ಶಿಕ್ಷಣ ಕ್ರಮದಲ್ಲಿ ‘ಪ್ರಬಂಧ’ ಎಂಬ ಮಾತಿಗೆ ಒಂದು ನಿರ್ದಿಷ್ಟ ವಿಷಯದ ಮೇಲೆ ಬರೆದ ಸಂಕ್ಷೇಪವಾದ ಗದ್ಯರಚನೆ ಎಂಬ ಅರ್ಥ ಬಂತು. ಪ್ರಬಂಧ ರಚನೆ ಅಭ್ಯಾಸವಿಷಯ ವಾಯಿತು. ಇಂಗ್ಲಿಷಿನ ಎಸ್ಸೆ ಕನ್ನಡದಲ್ಲಿ ಪ್ರಬಂಧ, ಲಘು ಪ್ರಬಂಧ, ನಿಬಂಧ, ಹರಟೆ, ನ್ಯಾಸ, ಪ್ರಸಂಗ, ಲಲಿತ ಪ್ರಸಂಗ ಎಂಬ ಬೇರೆ ಬೇರೆ ಹೆಸರುಗಳಲ್ಲಿ ಅವತರಿಸಿತು. ಈ ಎಸ್ಸೆ ಎಂಬ ಇಂಗ್ಲಿಷ್ ಪದವನ್ನೇ ಈ ಪ್ರಕಾರಕ್ಕೆ ಕನ್ನಡದಲ್ಲೂ ಬಳಸಿದವರೂ ಬಳಸುತ್ತಿರುವವರೂ ಉಂಟು.

ಸಂಕ್ಷಿಪ್ತತೆ ಮತ್ತು ಅಸಮಗ್ರತೆಯಲ್ಲಿಯೂ ಪರಿಪುರ್ಣತೆಯ ತೋರಿಕೆ ಈ ಬರೆಹದ ವಿಶಿಷ್ಟ ಲಕ್ಷಣ. ನಮ್ಮ ವಿಮರ್ಶಕರು ಬಳಸುವ ಭಾವಪ್ರಬಂಧ, ಲಲಿತಪ್ರಬಂಧ, ಲಘುಪ್ರಬಂಧ ಎಂಬ ಪದಗಳಲ್ಲಿನ ವಿಶೇಷಣಗಳು ಪ್ರಬಂಧದ ಕಾವ್ಯಗುಣ ವನ್ನೂ ಶೈಲಿಯ ಸೊಬಗನ್ನೂ ಸಂಕ್ಷಿಪ್ತವೂ ಹಗುರವೂ ಆದ ನಿರೂಪಣಾ ಕ್ರಮವನ್ನೂ ಸೂಚಿಸುತ್ತವೆ. ಸ್ವಂತ ಭಾವನೆಗಳನ್ನೂ ಆಲೋಚನೆಗಳನ್ನೂ ಇನ್ನೊಬ್ಬರಿಗೆ ಆತ್ಮೀಯವಾಗಿ ಹೇಳುವ ಪ್ರಬಂಧದ ವ್ಯಕ್ತಿನಿಷ್ಠ ಕಥನಕ್ರಮದಲ್ಲಿ ಹರಟೆಯ ಧೋರಣೆ ಇದ್ದರೂ ಪ್ರಬಂಧ ಹೆಚ್ಚು ಗಂಭೀರವಾದದ್ದು. ಆದರೂ ಕನ್ನಡದ ಮಟ್ಟಿಗೆ, ಪ್ರಬಂಧ - ಹರಟೆಗಳನ್ನು ಒಂದೇ ಸಾಹಿತ್ಯಪ್ರಕಾರದ ಅವಳಿಜವಳಿಗಳೆಂದು ಎಣಿಸಬಹುದು.

ವಿಜ್ಞಾನ, ತತ್ತ್ವಜ್ಞಾನ, ಸಾಹಿತ್ಯ ವಿಮರ್ಶೆ ಮುಂತಾದ ನಾನಾ ಶಾಸ್ತ್ರಗಳ ತೂಕದ ವಿಷಯಗಳನ್ನು ಕುರಿತು ಒಳ್ಳೆಯ ರಂಜಕ ಶೈಲಿಯಲ್ಲಿ ಬರೆದ ಲೇಖನಗಳನ್ನೂ ಪ್ರಬಂಧಗಳೆಂದೇ ಕರೆಯಬಹುದು. ಆದರೆ, ಅವುಗಳ ಗುರಿ ತಿಳಿವಳಿಕೆ ನೀಡುವುದೇ ಹೊರತು ಮನೋಲ್ಲಾಸವಲ್ಲ. ಇವುಗಳನ್ನು ಶುದ್ಧ ಎಸ್ಸೆಯಿಂದ ಬೇರ್ಪಡಿಸಿ, ‘ವಿಚಾರ ಪ್ರಬಂಧ’ ಎಂದು ಕರೆಯಬಹುದು.

ಕನ್ನಡ ಪ್ರಬಂಧ ಅನುಕರಣಶೀಲವಾಗದೆ ಸ್ವತಂತ್ರವಾಗಿಯೇ ಬೆಳೆದು ಬಂದಿದ್ದರೂ ಇಂಗ್ಲಿಷ್ ಪ್ರಬಂಧದಿಂದ ಬಿನ್ನವಾದ ಲಕ್ಷಣಗಳನ್ನೇನೂ ಹೊಂದಿಲ್ಲ. ಕನ್ನಡದ ಪ್ರಬಂಧಗಳನ್ನೇ ಬಹುಮಟ್ಟಿಗೆ ಅದಿಕರಿಸಿ ಪ್ರಬಂಧದ ಸಾಮಾನ್ಯ ಲಕ್ಷಣಗಳನ್ನು ವಿವರಿಸುವ ಲೇಖನಗಳು ಪ್ರಬಂಧ ಸಂಗ್ರಹಗಳ ಮುನ್ನುಡಿಗಳ ರೂಪದಲ್ಲಿಯೂ ಪ್ರತ್ಯೇಕ ವಾಗಿಯೂ ಪ್ರಕಟವಾಗಿವೆ. ದ.ರಾ.ಬೇಂದ್ರೆ, ವಿ.ಕೃ.ಗೋಕಾಕ, ವಿ.ಸೀ., ಗೊರೂರು ರಾಮಸ್ವಾಮಿ ಅಯ್ಯಂಗಾರ್, ಜಿ.ವೆಂಕಟಸುಬ್ಬಯ್ಯ, ಎ.ಎನ್. ಮೂರ್ತಿರಾವ್ ಮುಂತಾದವರ ಮುನ್ನುಡಿಗಳು ವಿಮರ್ಶಾತ್ಮಕ ಸಮೀಕ್ಷೆಗಳನ್ನು ಒಳಗೊಂಡಿವೆ. ವರದರಾಜ ಹುಯಿಲಗೋಳರು ಲಲಿತ ಪ್ರಬಂಧಗಳು ಎಂಬ ಸಮೀಕ್ಷೆ ಗ್ರಂಥವನ್ನೇ ಬರೆದಿದ್ದಾರೆ. ಎ.ಎನ್. ಮೂರ್ತಿರಾಯರ ಹರಟೆ ಮತ್ತು ಪ್ರಬಂಧ, ಎಚ್ಚೆಸ್ಕೆ ಅವರ ಕನ್ನಡದಲ್ಲಿ ಹರಟೆಯ ಸ್ಥಾನ ಎಂಬ ಲೇಖನಗಳು ಪ್ರಬಂಧದ ಸ್ವರೂಪ ವನ್ನು ಚೆನ್ನಾಗಿ ತಿಳಿಸಿಕೊಡುತ್ತವೆ. ಹೊಸಗನ್ನಡ ಪ್ರಬಂಧ ಸಂಕಲನದ (1961) ಸಂಪಾದಕರಾದ ಗೊರೂರು ರಾಮಸ್ವಾಮಿ ಅಯ್ಯಂಗಾರರ ಕೆಲವು ಮಾತುಗಳನ್ನು ಕನ್ನಡ ಪ್ರಬಂಧಕ್ಕೆ ಸಂಬಂಧಪಟ್ಟಂತೆ ಇಲ್ಲಿ ಉಲ್ಲೇಖಿಸಬಹುದು.

‘‘ಲಘುಪ್ರಬಂಧಕ್ಕೆ ವಿಷಯ ಇಂತಹುದೇ ಆಗಬೇಕೆಂಬ ನಿಯಮವಿಲ್ಲ. ಸಣ್ಣ ವಿಷಯ, ದೊಡ್ಡ ವಿಷಯ, ಯಾವುದು ಬೇಕಾದರೂ ಆಗಬಹುದು. .......... ಲಘು ಪ್ರಬಂಧವನ್ನು ಓದಿದ ಕೂಡಲೇ ಒಂದು ತೃಪ್ತಿಯ ಮನೋಭಾವ ಉಂಟಾಗಬೇಕು. ಹೇಳುವುದನ್ನೆಲ್ಲ ಹೇಳಿಯಾಯಿತು ಎಂಬಂತೆ ಇರಬಾರದು .......... ಒಂದು ದೃಷ್ಟಿಯಿಂದ ಪುರ್ಣವಾಗಿ ತೋರಿದರೂ ಮತ್ತೊಂದು ದೃಷ್ಟಿಯಿಂದ ಹೆಚ್ಚಿನ ಜ್ಞಾನಕ್ಕೆ ಅದು ಸೋಪಾನವಾಗಬೇಕು. ಉತ್ತಮವಾದ ಎಸ್ಸೆ ನಮ್ಮನ್ನು ನಲಿಸಲೂ ಬೇಕು, ತಿದ್ದಲೂ ಬೇಕು ......... ಭಾವನೆಗಳು ಅನುಭವಗಳು ಹಾಸ್ಯನಗೆ ಇವು ಉದ್ದಕ್ಕೂ ಮಿಂಚುತ್ತಿರಬೇಕು ......... ಗುರಿ ಮುಟ್ಟುವುದೊಂದೇ ಮುಖ್ಯವಲ್ಲ ಮಾರ್ಗಪ್ರಯಾಣವೂ ಆಕರ್ಷಕ ವಾಗಿರಬೇಕು’’. ಈ ಮಾತುಗಳು ಪ್ರಬಂಧದ ವಿಷಯ, ಉದ್ದೇಶ, ವ್ಯಾಪ್ತಿ, ಗುಣ ಇವುಗಳ ಬಗ್ಗೆ ಸಂಪುರ್ಣ ಜ್ಞಾನ ನೀಡುತ್ತವೆ.

ವಿ.ಕೃ.ಗೋಕಾಕರು ಇಂಗ್ಲಿಷ್ ಹಾಗೂ ಕನ್ನಡ ಪ್ರಬಂಧ ಸಾಹಿತ್ಯವನ್ನು ಅನುಲಕ್ಷಿಸಿ ನಿಬಂಧ ಹಾಗೂ ಹರಟೆಯ ವಿಭಾಗಗಳು ಅನೇಕ ಸಲ ಬೆರೆಯುವುದುಂಟೆಂದೂ ಅವುಗಳ ಬೆರಕೆಯಿಂದ ಸಣ್ಣಪುಟ್ಟ ಭೇದಗಳು ಹುಟ್ಟುವುದೆಂದೂ ಹೇಳಿ ಅಂತಹ ಉಪಭೇದಗಳನ್ನು ಹೀಗೆ ಒಕ್ಕಣಿಸಿದ್ದಾರೆ: ಚಿಂತನಪರ (ಮಾಸ್ತಿಯವರ ಶಾಂತಿ); ಚಾರಿತ್ರಿಕ (ಸಿದ್ಧವನಹಳ್ಳಿ ಕೃಷ್ಣಶರ್ಮರ ಕನ್ನಡ ಕಿಡಿಗಳು); ಐತಿಹಾಸಿಕ (ಆಲೂರ ವೆಂಕಟರಾಯರ ಕರ್ನಾಟಕ ಗತವೈಭವದ ಲೇಖನಗಳು); ವೈಜ್ಞಾನಿಕ (ಕನ್ನಡ ನಿಯತಕಾಲಿಕಗಳಲ್ಲಿ ಪ್ರಕಟವಾಗುವ ವಿಜ್ಞಾನಕ್ಕೆ ಸಂಬಂದಿsಸಿದ ಲೇಖನಗಳು); ವಿಮರ್ಶಾತ್ಮಕ ಇಲ್ಲವೇ ವಿವೇಚನಾತ್ಮಕ (ಸಾಹಿತ್ಯ, ಕಲೆ ಮುಂತಾದುವನ್ನು ಕುರಿತವು); ಸ್ವಭಾವ ವಿಭಜನಾತ್ಮಕ (ಕೆ.ಎಸ್.ಕಾರಂತರ ಮುಂದಾಳುಗಳು - ಮಂದಾಳುಗಳು); ಲಘು ಕಥಾತ್ಮಕ (ಗೊರೂರು ರಾಮಸ್ವಾಮಿ ಅಯ್ಯಂಗಾರರ ವಿಮೆ ಯಮನನ್ನೇ ಹೆದರಿಸಿತು); ವರ್ಣನಪರ (ವಿ.ಜಿ. ಕುಲಕರ್ಣಿ ಅವರ ಮಾವು); ಪತ್ರಪ್ರಬಂಧ ಇಲ್ಲವೇ ಹರಟೆಯೋಲೆ (ಸಿ.ಕೃಷ್ಣರ ಮುಗುದೆಯರ ಪತ್ರಗಳು); ಹರಟೆ (ರಂ.ಶ್ರೀ.ಮುಗಳಿಯವರ ನಾದುರಸ್ತು). ಇವುಗಳ ಜೊತೆಗೆ ವ್ಯಕ್ತಿಚಿತ್ರಗಳನ್ನೂ (ಎಚ್ಚೆಸ್ಕೆ ಅವರ ಎತ್ತರದ ವ್ಯಕ್ತಿಗಳು) ಮತ್ತು ಸ್ಮೃತಿ ಚಿತ್ರಗಳನ್ನೂ (ಡಿ.ವಿ.ಜಿ. ಅವರ ಜ್ಞಾಪಕ ಚಿತ್ರಶಾಲೆ) ನಾವು ಸೇರಿಸಬಹುದು. ಈ ಎಲ್ಲ ಪ್ರಭೇದಗಳನ್ನೂ ಒಟ್ಟಿನ ಮೇಲೆ, ವರ್ಣನಾತ್ಮಕ, ಚಿಂತನಾತ್ಮಕ, ವಿಚಾರಾತ್ಮಕ ಅಥವಾ ವಿವೇಚನಾತ್ಮಕ, ಲಘುಪ್ರಬಂಧ ಅಥವಾ ಹರಟೆ (ವಿನೋದಾತ್ಮಕ ಮತ್ತು ವಿಡಂಬನಾತ್ಮಕ) ಎಂದು ನಾಲ್ಕೈದು ಸ್ಥೂಲ ಪ್ರಭೇದಗಳಲ್ಲಿ ಅಡಕ ಮಾಡಬಹುದು.

ಬಂಕಿಮಚಂದ್ರರ ಬಂಗಾಳಿ ಪ್ರಬಂಧಗಳ ಕನ್ನಡ ಅನುವಾದ, "ಲೋಕರಹಸ್ಯ "ಬಿ.ವೆಂಕಟಾಚಾರ್ಯರಿಂದ 1898ರಲ್ಲಿ ಪ್ರಕಟವಾಯಿತೆನ್ನಲಾದ ಇದು ಕನ್ನಡದ ಮೊದಲ ಪ್ರಬಂಧ ಸಂಕಲನ. ಅನಂತರ ಪ್ರಕಟವಾದ ಆರ್.ಶ್ರೀನಿವಾಸರಾವ್ ಅವರ ವಿವೇಕಮಂಜರಿ (1912) ಕನ್ನಡ ಪ್ರಬಂಧ ಸಂಕಲನಗಳಲ್ಲಿ ಎರಡನೆಯದು. ಬಿ.ವೆಂಕಟಾಚಾರ್ಯರಿಂದ ರಚಿತವಾದ "ದಾಡಿಯ ಹೇಳಿಕೆ" ಕನ್ನಡದಲ್ಲಿ ಪ್ರಕಟವಾದ ಸ್ವತಂತ್ರ ಲಲಿತ ಪ್ರಬಂಧ. ಚಿತ್ರವಿಚಿತ್ರಾವಳಿ ಇದೇ ಲೇಖಕರ ಇನ್ನೊಂದು ಪ್ರಬಂಧ ಸಂಕಲನ. ಕೆ.ಲಕ್ಷ್ಮಣರಾವ್ ಅವರ ಕಲಿಯುಗ ಸುಧನ್ವ ಇದೇ ಕಾಲದ್ದಾಗಿದ್ದು,

ಪರೀಕ್ಷೆಯಲ್ಲಿ ಅನುತ್ತೀರ್ಣನಾದ ವ್ಯಕ್ತಿಯೊಬ್ಬನ ಸ್ವಾನುಭವ ಚಿತ್ರಣ ಇದರಲ್ಲಿ ಮೂಡಿಬಂದಿದೆ. ಸ್ವಲ್ಪಕಾಲದ ಅನಂತರ ಪ್ರಕಟವಾದ ಬಾಳಾಜಿ ಕೃಷ್ಣಪೇಟೆಯವರ ಎಲ್ಲಿದೆ ಸ್ತ್ರೀ ಸೌಂದರ್ಯವು (1923), ಸಳಕೆರೆ ಜಯರಾವ್ ಅವರ ಒಂದು ಗಳಿಗೆಯ ಮೋಜು (1925), ರಾಘವೇಂದ್ರರಾವ್ ತಡಸ ಅವರ ಇತ್ಯಾದಿಯ ಆತ್ಮವೃತ್ತ ಕಥನ (1927) - ಪ್ರಮುಖವಾದವುಗಳು. 1930ರ ದಶಕವನ್ನು ಗಮನಿಸಿ ಹೇಳುವುದಾದರೆ ರಚಿತವಾದ ಪ್ರಬಂಧಗಳ ಸಂಖ್ಯೆ ಕಡಿಮೆಯಷ್ಟೇ ಅಲ್ಲದೆ ಅವುಗಳನ್ನು ರಚಿಸಿದ ಯಾರೂ ಪ್ರಮುಖ ಪ್ರಬಂಧಕಾರರೆಂಬ ಹೆಸರು ಗಳಿಸಲಿಲ್ಲ. ಈ ಕಾಲವನ್ನು ಕನ್ನಡ ಪ್ರಬಂಧಗಳ ಬಾಲ್ಯಾವಸ್ಥೆಯ ಕಾಲವೆಂದು ಹೇಳಬಹುದು.

ಕಾಲಮಾನ ದೃಷ್ಟಿಯಿಂದ 1931 ಲಲಿತ ಪ್ರಬಂಧಗಳ ಇತಿಹಾಸದಲ್ಲಿ ಎರಡನೆಯ ಘಟ್ಟದ ಆರಂಭವೆನ್ನಬಹುದು. ಇಂಗ್ಲಿಷ್ ಪ್ರಬಂಧದ ಜಾಡನ್ನು ಮೊತ್ತಮೊದಲಿಗೆ ಹಿಡಿಯಲು ಯತ್ನಿಸಿದ ಬರೆಹ ಎಂದರೆ, ಎಂ.ಜಿ. ವೆಂಕಟೇಶಯ್ಯನವರ ಪುಲ್ಲಯ್ಯನ ಪ್ರಬಂಧಗಳು. ಇದು ಎರಡು ಭಾಗಗಳಲ್ಲಿ ಪ್ರಕಟವಾಗಿದೆ. ಜೈಲ್ದರ್ಶನ, ಶೈಲಿ, ಮೀಸೆ, ಮುಖಸ್ತುತಿ ಇವು ಇವರ ಉತ್ತಮ ಪ್ರಬಂಧಗಳು. ಅನಂತರದಲ್ಲಿ ಸಂಪದ್ಗಿರಿರಾಯರ ಇಜಾರ, ವಿ.ಸೀತಾರಾಮಯ್ಯನವರ ಮೈಸೂರು ರುಮಾಲು ಹಾಗೂ ಖಾಯಿಲೆಗಳು ಎಂಬ ಪ್ರಬಂಧಗಳು ಸಾಹಿತ್ಯ ರಸಿಕರ ಮನಸ್ಸನ್ನು ಸೆಳೆದು, ಕನ್ನಡ ಪ್ರಬಂಧದ ಬೆಳೆವಣಿಗೆಗೆ ಮಾರ್ಗದರ್ಶಕವಾದುವು. ಜಯಕರ್ನಾಟಕ, ಪ್ರಬುದ್ಧ ಕರ್ಣಾಟಕ ಮುಂತಾದ ಸಾಹಿತ್ಯ ಪತ್ರಿಕೆಗಳಲ್ಲಿ ಪ್ರಬಂಧಗಳು ಕ್ರಮವಾಗಿ ಪ್ರಕಟವಾಗತೊಡಗಿದುವು. ಸ್ವಲ್ಪ ಒರಟು ಎನ್ನಿಸಿದರೂ ಹಾಸ್ಯದ ಬರೆಹಕ್ಕೆ ಹಾದಿ ತೆರೆದಿದ್ದು ವಿಕಟ ವಿನೋದಿನಿ, ದ.ರಾ.ಬೇಂದ್ರೆಯವರು ಹೊರತಂದ ಹರಟೆಗಳು (ಪ್ರಥಮ ಪ್ರಾತಿನಿದಿಕ ಹರಟೆಗಳ ಸಂಕಲನ), ವಿ.ಕೃ.ಗೋಕಾಕರ ಮುನ್ನುಡಿಯುಳ್ಳ ಸುಳುವು ಹೊಳವು (ಪ್ರಾತಿನಿದಿಕ ಪ್ರಬಂಧ ಸಂಕಲನ). ಇವು ಹೊರಬರುವ ವೇಳೆಗೆ (ಸು.1938-39) ಆ.ನ.ಕೃಷ್ಣರಾಯರ ಹೊಸ ಹುಟ್ಟು, ಎ.ಎನ್.ಮೂರ್ತಿರಾಯರ ಹಗಲುಗನಸುಗಳು, ಕೆ.ವಿ.ಪುಟ್ಟಪ್ಪನವರ ಮಲೆನಾಡಿನ ಚಿತ್ರಗಳು, ಪು.ತಿ.ನರಸಿಂಹಾಚಾರ್ಯರ ರಾಮಾಚಾರಿಯ ನೆನಪು ಮುಂತಾದ ಪ್ರಬಂಧ ಸಂಗ್ರಹಗಳು ಪ್ರಕಟವಾಗಿ ಕನ್ನಡ ಪ್ರಬಂಧ ಸಾಹಿತ್ಯದ ಆಶಾದಾಯಕ ಬೆಳೆವಣಿಗೆಗೆ ನಿದರ್ಶನಗಳಾಗಿದ್ದವು. ಸಣ್ಣಕಥೆ, ಕಾದಂಬರಿ ಸಾಹಿತ್ಯ ಪ್ರಕಾರಗಳಷ್ಟು ಜನಪ್ರಿಯವಲ್ಲದ ಪ್ರಬಂಧ ಸಾಹಿತ್ಯ ಪ್ರಕಾರ ಕೆಲವು ಕಾಲ ಹಿಂದೆ ಸರಿದಂತೆ ಕಂಡುಬಂದದ್ದೂ ಉಂಟು. ಆದರೆ ಈಚಿನ ದಶಕಗಳಲ್ಲಿ ಅನೇಕ ಹೊಸ ಪ್ರಬಂಧಕಾರರೂ ನಗೆಬರೆಹಗಾರರೂ ಬೆಳಕಿಗೆ ಬಂದು ಕೃಷಿ ಮಾಡಿದ್ದರಿಂದ ಕನ್ನಡ ಪ್ರಬಂಧ ಸಾಹಿತ್ಯದ ಪರಂಪರೆ ಅವಿಚ್ಫಿನ್ನವಾಗಿ ಮುಂದುವರಿದುಕೊಂಡು ಬಂದಿದೆ. ಅದರ ಗುಣಮಟ್ಟ ಇಳಿಯದೆ, ವೈವಿಧ್ಯಪುರ್ಣವಾದ ಬಾಹುಳ್ಯ ಬೆಳೆಯಲು ಅವಕಾಶವಾಗಿದೆ. ಈ ಬೆಳೆವಣಿಗೆಗೆ ಇಂಗ್ಲೆಂಡಿನಂತೆ ಇಲ್ಲಿಯೂ ನಿಯತಕಾಲಿಕ ಪತ್ರಿಕೆಗಳು ತುಂಬ ಸಹಕಾರಿಯಾಗಿವೆ.

ಕೆಲವು ಕನ್ನಡ ಪ್ರಬಂಧಗಳ ಹೆಸರುಗಳನ್ನು ಗಮನಿಸಿದರೆ, ಕನ್ನಡ ಪ್ರಬಂಧ ಸಾಹಿತ್ಯದ ವಿಷಯವೈವಿಧ್ಯ ವೈಶಿಷ್ಟ್ಯ ಸ್ವಷ್ಟವಾಗುತ್ತದೆ. ಶಾಂತಿ (ಶ್ರೀನಿವಾಸ), ಬರೆಹಗಾರನ ಹಣೆಬರಹ (ಗೋವಿಂದ ಪೈ), ಕೋಗಿಲ (ವಿ.ಕೃ.ಗೋಕಾಕ), ವ್ಯಾಸಂಗದ ಹವ್ಯಾಸ (ಡಿ.ಎಲ್.ನರಸಿಂಹಾಚಾರ್), ಸಾವಿನ ಕೂಡ ಸರಸ (ದ.ರಾ.ಬೆಂದ್ರೆ), ಹೋಟೆಲುಗಳು (ಎ.ಎನ್.ಮೂರ್ತಿರಾವ್), ಅಜ್ಜಯ್ಯನ ಅಭ್ಯಂಜನ (ಕೆ.ವಿ.ಪುಟ್ಟಪ್ಪ), ತುಂಬೆಯ ಹೂ (ಎಂ.ವಿ.ಸೀತಾರಾಮಯ್ಯ), ನನ್ನ ಬೆನ್ನು (ನಾ.ಕಸ್ತೂರಿ), ನೆಗಡಿ, ತಿಗಣೆ, (ತೀ.ನಂ.ಶ್ರೀಕಂಠಯ್ಯ), ನನ್ನ ಸ್ವಂತ ಶ್ರಾದ್ಧ (ಶ್ರೀರಂಗ), ಮಂಕರು ಬೆಪ್ಪರು (ರಾ.ಶಿ) ಇತ್ಯಾದಿ.

ಕರ್ನಾಟಕದ ಪ್ರಸಿದ್ಧ ಲೇಖಕರೆಲ್ಲರೂ ಒಂದೋ ಎರಡೋ ಹಲವೋ ಕೆಲವೊ ಪ್ರಬಂಧಗಳನ್ನು ಬರೆದಿರುವರಾದರೂ ಪ್ರಬಂಧಕಾರರೆಂದು ಹೆಸರು ಮಾಡಿರುವವರ ಸಂಖ್ಯೆಯೂ ಕಡಮೇಯೆನಲ್ಲ. ಇವರ ಕೊಡುಗೆಯಿಂದಾಗಿ ಕನ್ನಡ ಪ್ರಬಂಧಸಾಹಿತ್ಯ ನಮಗೆ ಹೆಚ್ಚು ಪರಿಚಿತವಾದ ಇಂಗ್ಲಿಷ್ ಪ್ರಬಂಧ ಸಾಹಿತ್ಯಕ್ಕೆ ಸರಿದೊರೆಯಾಗಿ ನಿಲ್ಲಬಲ್ಲ ಯೋಗ್ಯತೆಯನ್ನು ಪಡೆದಿದೆ. ಪ್ರಸಿದ್ಧರಾದ ಪ್ರಬಂಧಕಾರರಲ್ಲಿ ಒಬ್ಬೊಬ್ಬರದ್ದು ಒಂದೊಂದು ವೈಶಿಷ್ಟ್ಯ. ಎ.ಎನ್.ಮೂರ್ತಿರಾಯರ (ಹಗಲುಗನಸುಗಳು, ಅಲೆಯುವ ಮನ, ಮಿನುಗು ಮಿಂಚು) ಹೂವರಳಿ ದಂತೆ ಅರಳುವ ಮಧುರಭಾವಗಳ ಮೋಹಕತೆ ಹಾಗೂ ಲಲಿತಶೈಲಿ, ವಿ.ಸೀ. ಅವರ (ಬೆಳುದಿಂಗಳು, ಸೀಕರಣೆ) ರಸಿಕ ಹೃದಯದಿಂದ ಹೊಮ್ಮುವ ಭಾವುಕತೆಯೊಂದಿಗೆ ಬೆರೆತ ತೆಳು ವಿಚಾರಧಾರೆ, ಪು.ತಿ.ನ. ಅವರ (ರಥಸಪ್ತಮಿ ಮತ್ತು ಇತರ ಚಿತ್ರಗಳು, ಈಚಲುಮರದ ಕೆಳಗೆ, ಧೇನುಕಪುರಾಣ) ಸಂಸ್ಕೃತ ಭೂಯಿಷ್ಠ ಪ್ರೌಢ ಶೈಲಿಯ ವಸ್ತುನಿಷ್ಠ ವೈಚಾರಿಕತೆ ಮತ್ತು ಭಾವಸಾಂದ್ರತೆ, ತೀ.ನಂ.ಶ್ರೀ. ಯವರ (ನಂಟರು) ಅಚ್ಚುಕಟ್ಟಾದ ಒಪ್ಪ ಓರಣದ ಸಮಗ್ರ ದೃಷ್ಟಿಯ ಗಂಬಿರತೆಯ ವಿಷಯ ವಿವೇಚನೆ, ರಾ.ಕುಲಕರ್ಣಿ ಅವರ (ಗಾಳಿಪಟ, ದೇವಕನ್ಯೆ), ಕಾವ್ಯಪ್ರಪಂಚಕ್ಕೂ ವಾಸ್ತವ ಜಗತ್ತಿಗೂ ಗಂಟುಹಾಕಿ ವಿವಿಧ ಕೋನಗಳಿಂದ ವಸ್ತುದರ್ಶನ ಮಾಡಿಸುವ ವಿಶಿಷ್ಟ ತಂತ್ರದ ಬಳಕೆ, ಎಂ.ವಿ.ಸೀ. ಅವರ (ಧೂಮಲೀಲೆ ಮತ್ತು ಮುಗಿಲುಗಳು) ಹದವಾದ ಗದ್ಯಶಿಲ್ಪದಲ್ಲಿ ಮೂಡಿಬಂದಿರುವ ಚಿತ್ರವಿನ್ಯಾಸ, ಜಿಜ್ಞಾಸೆಯ ಬಲೆಯನ್ನು ಹೆಣೆಯುವ ಕ್ರಮ, ಎನ್.ಪ್ರಹ್ಲಾದರಾವ್ ಅವರ (ರಥರಥಿಕ, ಮಧುವ್ರತ, ಮುತ್ತಿನ ಹಾರ) ಆತ್ಮಾಬಿವ್ಯಕ್ತಿಯ ಭಾವಲಹರಿಗಳ ಆತ್ಮೀಯತೆ, ಶುಚಿಯಾದ ಹಾಸ್ಯ, ಹಾ.ಮಾ.ನಾಯಕರ (ನಮ್ಮ ಮನೆಯ ದೀಪ) ಮಕ್ಕಳ ಜಗತ್ತಿನ ಮುಗ್ಧ ರಮ್ಯತೆ ಎಚ್.ಎಲ್.ನಾಗೇಗೌಡರ (ನನ್ನೂರು) ಆಡುಮಾತಿನ ಲಯಬದ್ಧ ಗ್ರಾಮ್ಯ ಬರೆವಣಿಗೆ ಇವು ಕನ್ನಡ ಪ್ರಬಂಧ ಸಾಹಿತ್ಯಕ್ಕೆ ಎತ್ತರಬಿತ್ತರಗಳನ್ನೂ ವೈವಿಧ್ಯಪುರ್ಣ ಸೌಂದರ್ಯವನ್ನೂ ನೀಡಿವೆ. ಈ ಪ್ರಬಂಧಕಾರರ ಸಾಲಿನಲ್ಲಿ ನಿಲ್ಲತಕ್ಕ ಅರ್ಹತೆಯನ್ನು ಹೊಂದಿರುವ ಹಿರೇಮಲ್ಲೂರ ಈಶ್ವರನ್ (ಶಿವನ ಬುಟ್ಟಿ), ಕಲ್ಯಾಣಸುಂದರ (ಸ್ನೇಹದೃಷ್ಟಿ), ಆನಂದ (ಆನಂದಲಹರಿ), ರಮಾನಂದರಾವ್, (ಹುಚ್ಚು ಬೆಳದಿಂಗಳಿನ ಹೂಬಾಣ), ಎನ್.ಎಸ್.ಗದಗಕರ (ಒಡೆದ ಕನ್ನಡಿ), ಬಿ.ಆರ್.ವಾಡಪ್ಪಿ (ಸುಳಿಗಾಳಿ), ಎಚ್ಚೆಸ್ಕೆ (ಜೇಡನ ಬಲೆ), ಎಂ.ರಾಮರಾವ್ (ನಮ್ಮ ಅರಣ್ಯಯಾತ್ರೆ), ಎಸ್.ಮಂಜುನಾಥ್ (ಪುಸ್ತಕವನ್ನು ಬಿಡು), ಅ.ನ.ಕೃ. (ಪೊರಕೆ), ಡಿ.ಎಸ್.ಕರ್ಕಿ (ನಾಲ್ದೆಸೆಯ ನೋಟ), ಶ್ರೀಧರಮೂರ್ತಿ (ಲಂಚ ಪ್ರಪಂಚ), ದ.ಬಾ.ಕುಲಕರ್ಣಿ (ಸಾವಧಾನ, ಬದುಕಿದ ಬಾಳು), ರಾ.ಯ. ಧಾರವಾಡಕರ (ಧೂಮ್ರವಲಯ), ಎಸ್.ಅನಂತನಾರಾಯಣ (ಇಂಥವರೂ ಇದ್ದಾರೆ), ಕೆ.ವೆಂಕಟರಾಯಪ್ಪ (ವಿಚಾರಲಹರಿ), ಸದಾಶಿವ ಒಡೆಯರ (ಜೀವನಕಥೆ) - ಮುಂತಾದವರು ತಮ್ಮ ಕೊಡುಗೆಗಳಿಂದ ಪ್ರಬಂಧದ ಪರಿದಿಯನ್ನು ವಿಸ್ತರಿಸಿದ್ದಾರೆ.

ಪ್ರಬಂಧದ ಕಕ್ಷೆಯಲ್ಲೆ ಬಂದರೂ ವಿನೋದ, ವ್ಯಂಗ್ಯ, ವಿಡಂಬನೆ ಮುಂತಾದ ವಿಬಿನ್ನ ಗುಣಗಳಿಂದ ಪ್ರತ್ಯೇಕ ಗಣ್ಯತೆಗೆ ಅರ್ಹವಾದ ಹರಟೆಯ ಪ್ರಕಾರ ಅನೇಕ ಪ್ರತಿಷ್ಠಿತ ಸಾಹಿತಿಗಳನ್ನೂ ಹೊಸ ಬರೆಹಗಾರರನ್ನೂ ಆಕರ್ಷಿಸಿದೆ. ಇವರಲ್ಲಿ ನಾ.ಕಸ್ತೂರಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್ (ಹೇಮಾವತಿಯ ತೀರದಲ್ಲಿ, ನಮ್ಮೂರಿನ ರಸಿಕರು), ರಾ.ಶಿ.ಶ್ರೀರಂಗ, ಶಿವರಾಮ ಕಾರಂತ, (ಮೈಲಿಕಲ್ಲಿನೊಡನೆ ಮಾತುಕತೆ), ಬೀಚಿ (ತಿಮ್ಮನ ತಲೆ), ನಾಡಿಗೇರ ಕೃಷ್ಣರಾಯ (ಮೆಲ್ಲೋಗರ), ಜಿ.ಪಿ.ರಾಜರತ್ನಂ, ಲಾಂಗೂಲಾಚಾರ್ಯ ಮುಂತಾದವರು ವಿವಿಧ ಕೃತಿಗಳ ಮೂಲಕ ನಗೆಬರೆಹಗಳ ಹೆದ್ದಾರಿ ಹಾಕಿದರು. ಇದೇ ದಾರಿಯಲ್ಲಿ ನಡೆದು ಪ್ರಬಂಧ ಸಾಹಿತ್ಯಕ್ಕೆ ವಿನೋದ ವಿಡಂಬನೆಗಳ ಮುಖವನ್ನು ಕೊಟ್ಟವರಲ್ಲಿ - ಅ.ರಾ.ಸೇ. (ಸುಳಿನಗು), ದಾಶರಥಿ ದೀಕ್ಷಿತ್ (ಗಾಂಪರ ಹರಟೆಗಳು), ಅಷ್ಟಾವಕ್ರ, ಎನ್ಕೆ (ಮುಂಗಾಲ್ ಪುಟಿಗೆ), ನಾಡಿಗೇರ ಗೋವಿಂದರಾವ್ (ನಗೆಬರಹಗಳು), ಕುಡ್ಡಿ ವಾಸುದೇವ ಶೆಣೈ (ಕಸದ ಡಬ್ಬಿಗಳು), ಅ.ರಾ.ಮಿತ್ರ (ಯಾರೋ ಬಂದಿದ್ದರು) ಇವರುಗಳು ಗಮನಾರ್ಹರು. ಇವರಲ್ಲದೆ ಎಚ್.ಕೆ.ರಂಗನಾಥ (ವೈದ್ಯನಲ್ಲದ ಗಂಡ), ಉಮಾಪತಿ (ಅಡಿಗೆಮನೆ), ಎ.ಕೃಷ್ಣಮೂರ್ತಿ, ಎ.ಎಸ್.ರಾಮಕೃಷ್ಣ (ಹುಟ್ಟೂರಿನ ಮೋಹ), ಅಶ್ವತ್ಥ, ಸಚ್ಚಿದಾನಂದ ಶಿರೋಡ್ಕರ್, ಸದಾಶಿವ ಎಣ್ಣೆಹೊಳೆ (ಸನ್ಮಾನ), ಎಚ್.ಎಲ್.ಕೇಶವ ಮೂರ್ತಿ (ನೀನ್ಯಾಕೊ ನಿನ್ನ ಹಂಗ್ಯಾಕೊ, ಹ್ಯಂಗಾರ ಟಿಕೇಟ್ ಕೊಡಿ) ಮೊದಲಾದ ಬರೆಹಗಾರರು ಪ್ರಬಂಧ ಸಾಹಿತ್ಯದ ಗಮನಾರ್ಹ ಲೇಖಕರಾಗಿದ್ದಾರೆ. ಹರಟೆಗಾರರ ಬಳಗ ಬೆಳೆಯುತ್ತಲೇ ಇದ್ದು, ಹರಟೆ ಕನ್ನಡ ಸಾಹಿತ್ಯದಲ್ಲಿ ಹಾಸ್ಯದ ಕೊರತೆಯನ್ನು ಬಹುಮಟ್ಟಿಗೆ ಹೋಗಲಾಡಿಸಿದೆ. ಬಿಗುವಿನ ಪ್ರಬಂಧಕ್ಕಿಂತ ನಗುವಿನ ಹರಟೆ ಜನಪ್ರಿಯ ಎನಿಸಿದೆ. ಇಂಗ್ಲಿಷ್ನ ಕೆಲವು ಪ್ರಸಿದ್ಧ ಪ್ರಬಂಧಗಳನ್ನು ಎಸ್. ಮಂಜುನಾಥ್, ಎಂ. ರಾಮರಾವ್, ಎನ್.ಎಸ್. ರಾಮಚಂದ್ರಯ್ಯ, ಎಸ್.ವಿ. ಪರಮೇಶ್ವರಭಟ್ಟ ಮುಂತಾದವರು ಭಾಷಾಂತರಮಾಡಿ ಕನ್ನಡಕ್ಕೆ ಒಳ್ಳೆಯ ಮಾದರಿಗಳನ್ನು ಒದಗಿಸಿದ್ದಾರೆ. (ಎಂ.ವಿ.ಎಸ್.)

ನವ್ಯ ಸಾಹಿತ್ಯದ ಪ್ರಖರತೆ ಕಡಿಮೆಯಾದ ಅನಂತರದಲ್ಲಿ ದಲಿತ ಬಂಡಾಯ ಸಾಹಿತ್ಯದ ನೆರಳಿನಲ್ಲಿ ಲಲಿತ ಪ್ರಬಂಧ ಪ್ರಕಾರ ಹೊಸಹುಟ್ಟನ್ನು ಪಡೆದಿರುವುದನ್ನು ಕಾಣಬಹುದಾಗಿದೆ. ನವ್ಯದ ಸಂದರ್ಭ ಒಬ್ಬನೇ ಒಬ್ಬ ಪ್ರಬಂಧಕಾರನನ್ನು ಸೃಜಿಸಲಿಲ್ಲ. ನವ್ಯದ ತಾತ್ತ್ವಿಕತೆಯ ಮಂದಶ್ರುತಿಯ ಭಾವಗೀತೆಯೆನಿಸಿದ ಪ್ರಬಂಧ ಪ್ರಕಾರವನ್ನು ಇಡಿಯಾಗಿ ತಿರಸ್ಕರಿಸಿತು. ಹೀಗೆಂದ ಮಾತ್ರಕ್ಕೆ ನವ್ಯದ ಕಾಲದಲ್ಲಿ ಪ್ರಬಂಧಗಳೇ ರಚಿತವಾಗಿಲ್ಲವೆಂದಲ್ಲ. ಕು.ಶಿ.ಹರಿದಾಸಭಟ್ಟ, ಹಾ.ಮಾ.ನಾಯಕ, ಪಾ.ವೆಂ.ಆಚಾರ್ಯ, ಪ್ರಭುಶಂಕರ, ಸಿ.ಪಿ.ಕೆ., ದೇಜಗೌ, ಜಿ.ಶಂ.ಪ., ಟಿ.ಸುನಂದಮ್ಮ ಮುಂತಾದವರೆಲ್ಲ ಪ್ರಬಂಧಗಳನ್ನು ರಚಿಸಿದ್ದಾರೆ. ಆದರೆ ನಿಜವಾದ ತಾತ್ತ್ವಿಕವಾಗಿ ಇವರು ನವೋದಯಕ್ಕೆ ಬದ್ಧರಾದವರು.

ವ್ಯಕ್ತಿಕೇಂದ್ರಿತ ನೆಲೆಯಲ್ಲಿ ಜಗತ್ತನ್ನು ಕಾಣುವ ನವ್ಯರ ಪರಿಭಾಷೆಯನ್ನು ನಿರಾಕರಿಸಿ ಕಾವ್ಯ ಹೇಗೆ ಸಂಗೀತದ ಸಾಹಚರ್ಯವನ್ನು ಮೈಗೂಡಿಸಿಕೊಂಡು ಮರುಜೀವವನ್ನು ಬಂಡಾಯ ಸಾಹಿತ್ಯ ಸಂದರ್ಭದಲ್ಲಿ ಪಡೆಯಿತೋ ಹಾಗೆ, ಲಲಿತ ಪ್ರಬಂಧವೂ ಸಾಹಿತ್ಯ ಮತ್ತು ಸಾಹಿತ್ಯೇತರ ಕಾರಣಗಳಿಂದ ಮರುಹುಟ್ಟನ್ನು ಪಡೆಯಿತು. ಸಮಷ್ಟಿಯೊಂದಿಗಿನ ಮುಖಾಮುಖಿ, ಸಾಹಿತಿಗಳ ಸಾಮಾಜಿಕ ಕಳಕಳಿ, ಹರಟುವ ಲಕ್ಷಣ ತೀವ್ರಗತಿಯಲ್ಲಿ ಪುನಃ ಸ್ಥಾಪನೆಗೊಂಡಿದ್ದು ಸಾಹಿತ್ಯಕ ಲಕ್ಷಣಗಳಾದರೆ, ಸಾಹಿತ್ಯ ಅಕಾಡೆಮಿಯಂಥ ಸಾಹಿತ್ಯ ಸಂಘಟನೆ ಈ ಪ್ರಕಾರವನ್ನು ಪೋಷಿಸಿದ್ದು ಸಾಹಿತ್ಯೇತರ ಕಾರಣ. ದಲಿತ ಬಂಡಾಯ ಸಾಹಿತ್ಯ ಸಂದರ್ಭದಲ್ಲಿ ಅನೇಕ ಪ್ರಬಂಧಕಾರರು ಪ್ರಬಂಧಗಳನ್ನು ಬರೆಯತೊಡಗಿದರು.

ಹಿರಿಯ ಪ್ರಬಂಧಕಾರರಲ್ಲಿ ಗೊರೂರರ ‘ಹಳೆಯ ಪಳೆಯ ಮುಖಗಳು’ ಶಿವರಾಮಕಾರಂತರ ‘ಅಳಿದುಳಿದ ನೆನಪುಗಳು’ ಈ ಎರಡರಲ್ಲೂ ಹಳೆಯ ಪ್ರಬಂಧಗಳಲ್ಲಿ ಚಿತ್ರಿತವಾಗದಿರುವ ಸ್ಮೃತಿಗಳಿವೆ. ಪು.ತಿ.ನ ಅವರ ‘ಯದುಗಿರಿಯಲ್ಲಿ ಗೆಳೆಯರು’ (1981) ‘ರಥಸಪ್ತಮಿ ಮತ್ತು ಇತರ ಚಿತ್ರಗಳು’ ಕೃತಿಯ ಬಂಧದ ವಿಷಯಕ್ಕೆ ಸೇರುವಂಥವು. ‘ರಾಮಾಚಾರಿಯ ನೆನಪು’ವಿನ ಶಿವ ಇಲ್ಲಿಯೂ ಕಾಣಿಸಿಕೊಳ್ಳುತ್ತಾನೆ. ಇಲ್ಲಿನ ‘ಗೆಳೆಯರು’ ಕಾಲ್ಪನಿಕರು. ಗೊರೂರು, ಕಾರಂತ ಮತ್ತು ಪು.ತಿ.ನ. ಅವರ ಲಲಿತ ಪ್ರಬಂಧದ ಕೊನೆಯ ರೇಖೆಗಳನ್ನಿಲ್ಲಿ ಕಾಣಬಲ್ಲೆವು.

ಎ.ಎನ್.ಮೂರ್ತಿರಾಯರ ‘ಸಮಗ್ರ ಲಲಿತ ಪ್ರಬಂಧಗಳು’ ಕ್ಷಿಪ್ರಗತಿಯಲ್ಲಿ ಮರುಮುದ್ರಣ ಕಂಡಿರುವುದು ಇವರ ಪ್ರಬಂಧಗಳು ಜನಮನವನ್ನು ಇಂದಿಗೂ ಆಕರ್ಷಿಸಿರುವುದನ್ನು ಸೂಚಿಸುತ್ತದೆ. ಈ ಹಿಂದೆಯೇ ಪ್ರಕಟವಾಗಿದ್ದ (ಹಗಲುಗನಸುಗಳು, ಅಲೆಯುವ ಮನ ಮತ್ತು ಮಿನುಗುಮಿಂಚು) ಮೂರು ಸಂಕಲನಗಳ ಜೊತೆಗೆ, ಸಂಕಲಿತ ಪ್ರಬಂಧಗಳು ಎಂಬ ಶೀರ್ಷಿಕೆಯಡಿ ಒಂಬತ್ತು ಪ್ರಬಂಧಗಳನ್ನು ಹೊಸದಾಗಿ ಸೇರಿಸಿದ್ದಾರೆ. ತೀ.ನಂ.ಶ್ರೀ.ಯವರಿಗೆ ಪಂಪಪ್ರಶಸ್ತಿ ಲಬಿsಸಿದಾಗ ಮಾಡಿದ ಅಬಿನಂದನಾ ಭಾಷಣ ಹಾಗೂ ‘ನಮಗೆ ಬೇಕಾದ ಸಾಹಿತ್ಯ’ ಮತ್ತು ‘ಸಾಹಿತ್ಯ ಮತ್ತು ಸಮಾಜ’ ಎಂಬೆರಡು ಬರೆಹಗಳೂ ಈ ಸಮಗ್ರಸಂಕಲನದಲ್ಲಿ ಸೇರಿವೆ. ‘ಚಿತ್ರಗಳು ಪತ್ರಗಳು’ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅಪರೂಪದ ಬರೆಹವೆನಿಸಿದೆ.

ಎರಡನೆಯ ತಲೆಮಾರಿನ ಪ್ರಬಂಧಕಾರರಲ್ಲಿ ಪ್ರಮುಖರಾದ ಅ.ರಾ. ಮಿತ್ರ ಅವರ ಎಪ್ಪತ್ತೊಂಬತ್ತು ಪ್ರಬಂಧಗಳನ್ನು ‘ಅ.ರಾ.ಮಿತ್ರರ ಸಮಗ್ರ ಲಲಿತ ಪ್ರಬಂಧಗಳು’ ಎಂಬ ಹೆಸರಿನಲ್ಲಿ ಹೊರತರಲಾಗಿದೆ. ಎಂ.ಎಚ್.ಕೃಷ್ಣಯ್ಯನವರ ಮೌಲಿಕವಾದ ಪ್ರಸ್ತಾವನೆ ಪ್ರಬಂಧಗಳಿಗೆ ಉತ್ತಮ ಪ್ರವೇಶಿಕೆಯನ್ನು ಕಲ್ಪಿಸಿದೆ. “ಅ.ರಾ.ಮಿತ್ರರು ತಮ್ಮ ಪ್ರಬಂಧಗಳಲ್ಲಿ ಮಾನವ ಸ್ವಭಾವದ ಅರೆಕೊರೆಗಳನ್ನು ವ್ಯಕ್ತಪಡಿಸುವ ರೀತಿ ಅನನ್ಯವಾಗಿದೆ. ನಯನಾಜೂಕಿನ ಭಾಷೆ ವಸ್ತುವನ್ನು ಸಮರ್ಥಿಸುತ್ತಿದ್ದರೂ ಅದನ್ನು ನಿಜವಾಗಿಯೂ ಖಂಡಿಸುತ್ತಿದ್ದಾರೆ ಎಂದು ನಂಬಿಕೆ ಹುಟ್ಟಿಸುವ ಶೈಲಿ, ವಸ್ತುವನ್ನು ವಿವಿಧ ಮಗ್ಗಲುಗಳಿಂದ ನೋಡಿ ಅದರಲ್ಲಿ ಹರಿಗಡಿಯದ ಏಕಸೂತ್ರತೆಯ ರೀತಿ ಹಾಗೂ ಪ್ರಸನ್ನ ಮನೋ ಧರ್ಮಗಳನ್ನು ವ್ಯಕ್ತಪಡಿಸುತ್ತಾ ಅ.ರಾ.ಮಿತ್ರರು ತಮ್ಮ ಪ್ರಬಂಧಗಳಲ್ಲಿ ಹಿರಿದಾದ ಯಶಸ್ಸನ್ನು ಪಡೆದಿದ್ದಾರೆ” ಎಂಬ ವೀರೇಂದ್ರ ಸಿಂಪಿಯವರ ಮಾತುಗಳು ಗಮನಾರ್ಹವಾದುದು.

‘ರಾ.ಕು.’ ಅವರ ಪ್ರಬಂಧಗಳಲ್ಲಿ ವ್ಯಂಗ್ಯೋಕ್ತಿ, ಕಟೋಕ್ತಿ, ತರ್ಕ, ಜಿಜ್ಞಾಸೆ, ಹಳೆಗನ್ನಡ ಕಾವ್ಯದ ಸಾಲುಗಳು, ಉಪಮೆಗಳು, ವಿಚಾರಗಳು - ಇವುಗಳನ್ನು ಬೆರೆಸಿರುವ ಬಗೆ ಆಕರ್ಷಣೀಯವೆನಿಸಿದೆ. ‘ಗಾಳಿಪಟ’ ಹಾಗೂ ‘ದೇವಕನ್ಯೆ’ ಇವೆರಡೂ ರಾ.ಕು. ಅವರ ಮಹತ್ತ್ವದ ಸಂಕಲನಗಳು. ಹಾ.ಮಾ. ನಾಯಕರು ಹೇಳುವಂತೆ ರಾ.ಕು. ಅವರ ಪ್ರಬಂಧಗಳಲ್ಲಿ ‘ತತ್ವಶಾಸ್ತ್ರೀಯ ಚಿಂತನವೂ ಕವಿಯ ಕಲ್ಪನಾ ವಿಲಾಸವೂ ಸಮರಸವಾಗಿ ಬೆರೆತುಕೊಂಡಿದೆ’.

ಮುಂಗಾಲ್ ಪುಟಿಗೆ (1945) ಎಂಬ ಸಂಕಲನದ ಮೂಲಕ ಗಮನಸೆಳೆದಿದ್ದ ಎನ್.ಕೆ.ಕುಲಕರ್ಣಿ (ಎನ್ಕೆ) ಯವರ ಎಂಬತ್ತೊಂದು ಬರೆಹಗಳಿರುವ ಎನ್ಕೆ ಲಲಿತ ಪ್ರಬಂಧಗಳು ಇತ್ತೀಚೆಗೆ ಪ್ರಕಟಗೊಂಡಿರುವ ಬೃಹತ್ ಸಂಪುಟ. ವೈವಿಧ್ಯಪುರ್ಣವಾದ ಪ್ರಬಂಧಗಳನ್ನಿಲ್ಲಿ ಕಾಣಬಹುದು. ಈ ಸಂಪುಟ ಇವರ ಸಮಗ್ರ ಪ್ರಬಂಧ ಸಂಪುಟವಲ್ಲ ಎಂಬುದನ್ನು ಗಮನಿಸಬೇಕು. ಈ ಸಂಕಲನದಲ್ಲಿರುವ ಎರಡೂವರೆಪಟ್ಟು ಲೇಖನಗಳು ಸಂಕಲಿತವಾಗದೆ ಉಳಿದಿವೆ.

ಟಿ.ಸುನಂದಮ್ಮನವರ ‘ಸಮಗ್ರ’ ಸಂಕಲನ ಈ ಕಾಲಮಾನದಲ್ಲಿ ಪ್ರಕಟಗೊಂಡಿರುವ ಬೃಹತ್ ಸಂಪುಟ. ಹಾಸ್ಯ ಹರಟೆಯ ಪ್ರಸಂಗಗಳೇ ಹೆಚ್ಚಾಗಿರುವ ಇಲ್ಲಿನ ಬರೆಹಗಳಲ್ಲಿ ಲಲಿತವಾದುವು ತೀರ ವಿರಳ.

ಕರ್ನಾಟಕ ಸಾಹಿತ್ಯ ಅಕಾಡೆಮಿ ದಶವಾರ್ಷಿಕ ಪ್ರಬಂಧ ಹಾಗೂ ವಾರ್ಷಿಕ ಪ್ರಬಂಧಗಳನ್ನು ಪ್ರಕಟಿಸುವ ಮೂಲಕ ಲಲಿತ ಪ್ರಬಂಧ ಸಂಕಲನಗಳ ಹೊಸಶಕೆಯನ್ನೇ ಆರಂಬಿಸಿತು. ದಶವಾರ್ಷಿಕ ಪ್ರಬಂಧಗಳು (1974-83) ಅತ್ಯಂತ ಮಹತ್ವದ ಸಂಕಲನ. ಈ ಅವಧಿಯಲ್ಲಿ ಸರಿಸುಮಾರು ಎಂಟನೂರು ಲಲಿತ ಪ್ರಬಂಧಗಳು ಪ್ರಕಟಗೊಂಡಿರುವ ಉಲ್ಲೇಖ ಇಲ್ಲಿದೆ. ಹಿರಿಯ ಕಿರಿಯ ಪ್ರಬಂಧಗಳೂ ಸೇರಿದಂತೆ, ಐವತ್ತಾರು ಪ್ರಬಂಧಗಳು ಈ ಸಂಕಲನದಲ್ಲಿ ಸೇರಿವೆ. ಸಂಖ್ಯೆಯ ದೃಷ್ಟಿಯಿಂದಲ್ಲದೆ ಗುಣಮಟ್ಟದ ದೃಷ್ಟಿಯಿಂದಲೂ ವಿಪುಲವಾದ ಪ್ರಬಂಧಗಳು ಈ ಅವದಿಯಲ್ಲಿ ಪ್ರಕಟಗೊಂಡಿವೆ. ಭಾರತದ ಬೇರೆ ಭಾಷೆಗಳ ಯಾವುದೇ ಅಕಾಡೆಮಿ ಕೈಗೊಳ್ಳದ ಅನನ್ಯ ಪ್ರಯತ್ನ ಇದಾಗಿದೆ. ಪ್ರತಿವರ್ಷವೂ ವಾರ್ಷಿಕ ಪ್ರಬಂಧಗಳನ್ನು ಅಕಾಡೆಮಿ ಪ್ರಕಟಿಸುತ್ತಿರುವುದು ಆಯಾ ವರ್ಷದಲ್ಲಿ ಪ್ರಬಂಧ ಸೃಷ್ಟಿಯ ಹರಹನ್ನು ದಾಖಲಿಸುವ ಪ್ರಯತ್ನವಾಗಿದೆ. ಪ್ರಬಂಧ 1976 (ಸಂ.ಅನಂತನಾರಾಯಣ), 1981 (ಸಂ.ಪ್ರಭುಶಂಕರ), 1987 (ಸಂ.ಡಿ.ಆರ್.ನಾಗರಾಜ್), 1988 (ಸಂ.ಪುರುಷೋತ್ತಮ ಬಿಳಿಮಲೆ) ಗಮನಾರ್ಹವಾದ ಸಂಕಲನಗಳು. ನಾಗರಾಜ್ ಹಾಗೂ ಬಿಳಿಮಲೆಯವರ ಪ್ರಸ್ತಾವನೆಗಳು ಆ ತಲೆಮಾರು ಪ್ರಬಂಧ ಸಾಹಿತ್ಯವನ್ನು ಗ್ರಹಿಸಿರುವ ಬಗೆಗಿನ ದಾಖಲೆಯಾಗಿದೆ ಎನ್ನಬಹುದು.

ಹಿರಿಯ ಲಲಿತ ಪ್ರಬಂಧಕಾರರಲ್ಲಿ ಒಬ್ಬರಾದ ರಾ.ಯ. ಧಾರವಾಡಕರರಿಗೆ ಎಪ್ಪತ್ತು ವರ್ಷ ತುಂಬಿದಾಗ ಅರ್ಪಿಸಿರುವ ‘ಪ್ರಬಂಧ ಪ್ರಪಂಚ’ ಎಂಬ ಅಬಿನಂದನಗ್ರಂಥ (ಸಂ.ಎಚ್.ವಿ.ನಾಗೇಶ) ಪ್ರಬಂಧ ಸಾಹಿತ್ಯವನ್ನು ಕುರಿತು ಅದುವರೆವಿಗೆ ನಡೆದಿರುವ ಅಧ್ಯಯನಗಳನ್ನು ಒಂದೆಡೆ ಸಂಕಲಿಸಿದೆ. ಈ ಗ್ರಂಥದ ವಿಶೇಷವೆಂದರೆ ಪ್ರಬಂಧ ವಿಸ್ತಾರ ಎಂಬ ವಿಭಾಗ. ಇಲ್ಲಿ ಎನ್.ಬಾಲಸುಬ್ರಮಣ್ಯರ ಫ್ರೆಂಚ್ ಮೂಲ, ಮಾಂಟೇನನ ಪ್ರಬಂಧಗಳು ಎಂಬ ಲೇಖನದಿಂದ ತೊಡಗಿ ಹಿಂದಿ ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಬಂಗಾಲಿ ಮತ್ತು ಮರಾಠಿ ಭಾಷೆಗಳಲ್ಲಿ ಪ್ರಬಂಧ ಸಾಹಿತ್ಯ ಪ್ರಕಾರ ಬೆಳೆದು ಬಂದಿರುವ ಹೆಜ್ಜೆಗಳನ್ನು ಗುರುತಿಸುವ ಪ್ರಯತ್ನವಿದೆ. ಇದು ಉಲ್ಲೇಖಾರ್ಹ ದಾಖಲೆ. ಭಾರತೀಯ ಲಲಿತ ಪ್ರಬಂಧಗಳ ಎಡೆಯಲ್ಲಿ ಕನ್ನಡ ಪ್ರಬಂಧಗಳ ಅನನ್ಯತೆಯನ್ನು ಅಧ್ಯಯನ ಮಾಡಲು ದಾರಿದೀಪವಾಗಿದೆ.

ಇದರೊಂದಿಗೆ ವಿ.ಕೃ.ಗೋಕಾಕ, ಗೊರೂರರು ಪ್ರಬಂಧ ಸಂಕಲನಗಳಿಗೆ ಬರೆದಿರುವ ಪ್ರಸ್ತಾವನೆಯೂ ಸೇರಿದಂತೆ, ಬೇಂದ್ರೆ, ಪಂಜೆ, ಪಡುಕೋಣೆ, ವಿಸೀ, ಪ್ರಹ್ಲಾದರಾವ್, ಮಾಸ್ತಿ, ತೀನಂಶ್ರೀ, ಕಡೆಂಗೋಡ್ಲು, ಮೂರ್ತಿರಾವ್, ಬೀಚಿ, ಪು.ತಿ.ನ., ಗೊರೂರು, ಕುವೆಂಪು, ಕಾರಂತ, ಎಂ.ವಿ.ಸೀ., ಪಾವೆಂ., ಹಾಮಾನಾ., ಮಿತ್ರ, ಸಿಂಪಿ ಲಿಂಗಣ್ಣ, ಎನ್ಕೆ, ರಾ.ಕು. ಪ್ರಬಂಧ ಸಾಹಿತ್ಯದ ಸಮೀಕ್ಷೆ ಇದೆ. ಒಟ್ಟಿನಲ್ಲಿ ಲಲಿತಪ್ರಬಂಧದ ಬಗ್ಗೆ ಆಸಕ್ತ ಅಧ್ಯಯನಕಾರರಿಗೆ ಪ್ರಬಂಧ ಪ್ರಪಂಚ ಕೈಮರವಿದ್ದಂತೆ. ಈ ಕೃತಿಯ ಯೋಜನೆಯ ಮೂಲಕ ಸಂಪಾದಕರಾದ ಎಚ್.ವಿ.ನಾಗೇಶ್ ಅಗತ್ಯ ದಾಖಲೆಯನ್ನು ಕನ್ನಡ ಸಾಹಿತ್ಯ ಚರಿತ್ರೆಗೆ ಕೊಟ್ಟಿದ್ದಾರೆ.

ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ‘ಶತಮಾನದ ಲಲಿತ ಪ್ರಬಂಧಗಳು’ (ಸಂ.ಗುರುಲಿಂಗ ಕಾಪಸೆ, 2000) ಲಲಿತ ಪ್ರಬಂಧ ನಡೆದು ಬಂದ ದಾರಿಯನ್ನು ಅತ್ಯಂತ ಸಮರ್ಪಕವಾಗಿ ಪರಿಚಯಿಸುವ ಸಂಕಲನವಾಗಿದೆ. ಗೋವಿಂದ ಪೈ, ಪಂಜೆಮಂಗೇಶರಾಯರಿಂದ ತೊಡಗಿ ಇಂದಿನ ಮಹತ್ವದ ಪ್ರಬಂಧಕಾರರಾದ ಚಂದ್ರಶೇಖರ ಆಲೂರು, ಬಿ.ಚಂದ್ರೇಗೌಡ ಮೊಗಳ್ಳಿ ಗಣೇಶ, ಈರಪ್ಪ ಎಂ.ಕಂಬಳಿ, ಗುರುದೇವಿ ಹುಲೆಪ್ಪನವರ ಮಠರವರೆಗೆ ಸರಿಸುಮಾರು ಎಂಬತ್ತು ತೊಂಬತ್ತು ವರ್ಷಗಳಲ್ಲಿ ವಿಕಾಸಗೊಂಡಿರುವ ಲಲಿತ ಪ್ರಬಂಧ ಸಾಹಿತ್ಯದ ಹಾಸನ್ನು ಈ ಸಂಕಲನ ಸಮರ್ಥವಾಗಿ ಪ್ರತಿನಿದಿಸಿದೆ. ಗುರುಲಿಂಗ ಕಾಪಸೆಯವರ ‘ಪ್ರಸ್ತಾವನೆ’ ಅಭ್ಯಾಸಯೋಗ್ಯವಾದುದು.

ಕಳೆದ ಎರಡು ಮೂರು ದಶಕಗಳಲ್ಲಿ ಅನೇಕ ಗಮನಾರ್ಹ ಕೃತಿಗಳು ಪ್ರಕಟಗೊಂಡಿವೆ. ಮಹತ್ವದ ಕೃತಿಗಳನ್ನು ಗಮನಿಸುವುದಾದರೆ ಪು.ತಿ.ನ. ಅವರ ಯದುಗಿರಿಯಲ್ಲಿ ಗೆಳೆಯರು, ಶಿವರಾಮಕಾರಂತರ, ಅಳಿದುಳಿದ ನೆನಪುಗಳು, ಹಾ.ಮಾ.ನಾಯಕರ ಸೃಜನ, ಸೂಲಂಗಿ ಮತ್ತು ಸಂಗತಿ, ಕು.ಶಿ.ಹರಿದಾಸಭಟ್ಟರವರ ಲೋಕಾಬಿರಾಮ, ಸ.ಸ.ಮಾಳವಾಡರ ದೃಷ್ಟಿಕೋನ, ಗೀತಾಕುಲಕರ್ಣಿಯವರ ‘ಹುರಿಗಾಳು’, ಪ್ರಭುಶಂಕರರ ‘ಜನಮನ’, ಟಿ.ವಿ.ವೆಂಕಟಾಚಲಶಾಸ್ತ್ರೀಯವರ ಸದ್ಧಂತೆಂಬರ ಗಂಡ, ಎಚ್ಚೆಸ್ಕೆಯವರ ಮೇಘಲಹರಿ, ಹವಳದ ಸರ, ಡಿ.ಕೆ.ರಾಜೆಂದ್ರ ಅವರ ‘ಮಾತಿನ ಮಲ್ಲರು’, ಘಟನೆಗಳು, ರಾ.ಕು. ಅವರ ಸಲ್ಲಾಪ, ರಾಶಿಯವರ ಕೊರವಂಜಿ ಕಂಡ ಸಮಾಜ, ಸುನಂದಾ ಬೆಳಗಾಂವಕರರ ‘ಕಜ್ಜಾಯ’, ಮ.ಸು.ಕೃಷ್ಣ ಮೂರ್ತಿಯವರ ಚಂಕ್ರಮಣ, ಹಂಪನಾ ಅವರ ಹೆಸರಿನ ಸೊಗಸು, ಅನಂತ ಕುಲಕರ್ಣಿಯವರ ತಳಿರು, ಎಂ.ಎಸ್.ವೇಣುಗೋಪಾಲರ ಆತ್ಮೀಯ, ವೀರೇಂದ್ರ ಸಿಂಪಿಯವರ ಭಾವಮೈದುನ, ಬಿ.ಆರ್.ವಾಡಪ್ಪಿ ಯವರ ‘ಗಾಳಿಗುದುರಿ’, ಕಾಂತರಾಜು ಮಿರ್ಲೆಯವರ ‘ಪ್ರೇಮದರ್ಶನ’, ಪಿ.ಎಸ್.ರಾಮನುಜಂ ಅವರ ‘ಪ್ರಬಂಧ ವಿಹಾರ’, ಬಿ.ಶಾಮಸುಂದರ ಅವರ ಮುಖಗಳು, ರಸ್ತೆ ಹಾಗೂ ಇತರ ಪ್ರಬಂಧಗಳು, ವೈದೇಹಿಯವರ ಮಲ್ಲಿನಾಥನ ಧ್ಯಾನ, ಚಂದ್ರಶೇಖರ ಆಲೂರರ ‘ಒಲಿದಂತೆ ಹಾಡುವೆ’ ಹೀಗೆ ಅನೇಕವನ್ನು ಹೆಸರಿಸಬಹುದು. ಈಚಿನ ದಶಕಗಳಲ್ಲಿ ಲಂಕೇಶರ ‘ಟೀಕೆ ಟಿಪ್ಪಣಿ’ಯ ಲಂಕೇಶ್ ಪತ್ರಿಕೆಯ ಸಂಗ್ರಹಗಳಲ್ಲಿರುವ ರಾಮು ಎಂಬ ಹುಡುಗ, ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ ಹಾಗೂ ‘ಗುಬ್ಬಚ್ಚಿ ಗೂಡು’ ಇತ್ಯಾದಿ ಪ್ರಬಂಧಗಳು ಕನ್ನಡ ಗದ್ಯ ಸಾಹಿತ್ಯಕ್ಕೆ ಸಂದ ಅನನ್ಯ ಕೊಡುಗೆಗಳು.

ಲಂಕೇಶ್ ಪತ್ರಿಕೆಯಲ್ಲಿ ಎಸ್.ಮಂಜುನಾಥರ ಇಪ್ಪತ್ತಕ್ಕೂ ಹೆಚ್ಚು ಪ್ರಬಂಧಗಳು ಪ್ರಕಟಗೊಂಡಿವೆ. ಇವಿನ್ನೂ ಸಂಕಲನ ರೂಪದಲ್ಲಿ ಪ್ರಕಟವಾಗಿಲ್ಲ. ಹೊಸ ತಲೆಮಾರಿನ ಪ್ರಬಂಧಕಾರರಲ್ಲಿ ಚಂದ್ರಶೇಖರ ಆಲೂರು ವೈದೇಹಿ ಮೊಗಳ್ಳಿ ಗಣೇಶ ಉತ್ತಮ ಕಥನ ಪ್ರಬಂಧಗಳನ್ನು ರಚಿಸುತ್ತಿದ್ದಾರೆ. ಇವರು ರಚಿಸುತ್ತಿರುವ ಪ್ರಬಂಧಗಳ ವಸ್ತು, ನಿರೂಪಣೆ ಹಿಂದೆಂದಿಗಿಂತಲೂ ಬಿsನ್ನವೆನಿಸಿದೆ. ಅಂತರಂಗ ನಿರೀಕ್ಷಣೆ ಈ ಪ್ರಬಂಧಗಳಲ್ಲಿ ಎದ್ದು ಕಾಣುವ ಗುಣ. ಜಯಂತ ಕಾಯ್ಕಿಣಿಯವರ ‘ಬೊಗಸೆಯಲ್ಲಿ ಮಳೆ’ ಹಾಗೂ ‘ಶಬ್ದತೀರ’ ಶೀರ್ಷಿಕೆಯಡಿ ಪ್ರಕಟಗೊಂಡಿರುವ ಪ್ರಬಂಧಗಳು ವಿಶಿಷ್ಟ ಸಂವೇದನೆಗಳನ್ನು ಅಂತರ್ಗತವಾಗಿಸಿಕೊಂಡಿವೆ. ಬಿ.ಆರ್.ಲಕ್ಷ್ಮಣರಾಯರ ‘ಇತ್ಯಾದಿ’ ಕೃತಿ ಗಮನಾರ್ಹವಾದುದು.

ವಿವಿಧ ನಿಯತ ಕಾಲಿಕೆಗಳಲ್ಲಿ ಬೆಳಕು ಕಾಣುತ್ತಿರುವ ಹೊಸ ಪ್ರಬಂಧಕಾರರಲ್ಲಿ ಎಂ.ಆರ್.ಮಂದಾರವಲ್ಲಿ, ನಂದಾ. ಡಿ., ನರೇಂದ್ರ ರೈ ದೇರ್ಲ, ವಸುಮತಿ ಉಡುಪ, ಭಾರತೀ ಕಾಸರಗೋಡು, ಆರ್.ನಿರ್ಮಲ, ಜಯಾ ಯಾಜಿ, ಶಿರಾಲಿ, ಶೈಲಾ ಗುಬ್ಬ ಸೂರಿ ಹಾರ್ದಳ್ಳಿ, ಪ.ರಾಮಕೃಷ್ಣ ಶಾಸ್ತ್ರಿ, ಶ್ರೀನಿವಾಸ ಚಲವಾದಿ, ಹ.ಶಿ.ಭೈರವಟ್ಟಿ, ಜಾನಕಿ ಸುಂದರೇಶ, ಲೀಲಾ ದಾಮೋದರ, ಭುವನೇಶ್ವರಿ ಹೆಗಡೆ, ಪ್ರತಿಭಾ ನಂದಕುಮಾರ್, ರವಿ ಬೆಳಗೆರೆ ಮುಂತಾದವರು ಲಲಿತ ಪ್ರಬಂಧಗಳನ್ನು ಸೃಷ್ಟಿಸುತ್ತಿದ್ದಾರೆ.

ಕನ್ನಡ ವಿಮರ್ಶೆ ‘ಲಲಿತ ಪ್ರಬಂಧ’ ಪ್ರಕಾರವನ್ನು ಅಷ್ಟಾಗಿ ಗಮನಿಸಿಲ್ಲ. ಈ ಕ್ಷೇತ್ರದಲ್ಲಿ ನಡೆದಿರುವ ಅಧ್ಯಯನಗಳು ಬಿಡಿ ಬಿಡಿಯಾಗಿ ಪ್ರಬಂಧಕಾರರನ್ನು ಅಲ್ಲಲ್ಲಿ ಅನುಲಕ್ಷಿಸಿರುವುದನ್ನು ಬಿಟ್ಟರೆ ಸಮಗ್ರವಾದ ಸಮಾಜೋ - ಸಾಂಸ್ಕೃತಿಕ ಗ್ರಹಿಕೆಗಳನ್ನು ಅಭ್ಯಸಿಸಲು ವಿಪುಲವಾದ ಅವಕಾಶಗಳಿವೆ. (ಎಚ್.ಎಸ್.ಎಸ್.)