ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ಪ್ರವಾಸ ಸಾಹಿತ್ಯ

ವಿಕಿಸೋರ್ಸ್ದಿಂದ

ಕನ್ನಡದಲ್ಲಿ ಪ್ರವಾಸ ಸಾಹಿತ್ಯ

[ಸಂಪಾದಿಸಿ]

ಕನ್ನಡ ಪ್ರವಾಸ ಸಾಹಿತ್ಯ 19ನೆಯ ಶತಮಾನದಲ್ಲಿಯೇ ಆರಂಭವಾಯಿತು. ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿಯವರು (ನೋಡಿ) 1890ರಲ್ಲಿ "ದಕ್ಷಿಣ ಭಾರತ ಯಾತ್ರೆ" ಎಂಬ ಪ್ರವಾಸ ಗ್ರಂಥವನ್ನು ಪ್ರಕಟಿಸಿದರು. ಇದು ಕನ್ನಡದ ಮೊದಲ ಪ್ರವಾಸ ಕಥನವಾಗಿದೆ.ನಂತರ 35 ವರ್ಷಗಳ ಕಾಲ ಯಾವ ಪ್ರವಾಸ ಗ್ರಂಥವೂ ಬರಲಿಲ್ಲ. 1920ರಲ್ಲಿ ವಿ.ಸೀ.ಯವರ ಪಂಪಾಯಾತ್ರೆ ಪ್ರಕಟವಾಯಿತು. ಈ ವಿಭಾಗದಲ್ಲಿ ಇದು ಆದ್ಯ ಹಾಗೂ ಮೇರುಕೃತಿ. ಲೇಖಕರು ತಮ್ಮ ಮಿತ್ರರೊಂದಿಗೆ ಹಂಪೆಗೆ ಹೋಗಿ, ಅಲ್ಲಿನ ಪಾಳು ಹಂಪೆಯನ್ನು ಕಂಡು ತಮಗಾದ ಅನುಭವವನ್ನು ಈ ಗ್ರಂಥದಲ್ಲಿ ಪಡಿಮೂಡಿಸಿದ್ದಾರೆ. ಇದೊಂದು ರಸಭರಿತ ಪ್ರಬಂಧ. ಇಲ್ಲಿ ಲೇಖಕರ ಅಗಾಧವಾದ ಲೋಕಾನುಭವ, ತತ್ತ್ವಚಿಂತನ ಮತ್ತು ಜೀವನ ದೃಷ್ಟಿಗಳ ತ್ರಿವೇಣಿ ಸಂಗಮವನ್ನು ಕಾಣಬಹುದು. ಎರಡು ದಿನಗಳ ಅಲ್ಪಾವದಿಯಲ್ಲಿ ಇನ್ನೂರ ಐವತ್ತು ವರ್ಷಗಳ ಚರಿತ್ರೆಯನ್ನು ಸ್ವತಃ ಲೇಖಕರು ಇಲ್ಲಿ ಅನುಭವ ಮಾಡಿಸಿಕೊಡುತ್ತಾರೆ. ಸುಖ ದುಃಖಗಳೆರಡನ್ನೂ ಓದುಗರಿಗೆ ಉಣಬಡಿಸುತ್ತಾರೆ. ಕೊನೆಯಲ್ಲಿ ಬರುವ ಸ್ವಪ್ನ ಮಾಲಿಕೆಗಳಲ್ಲಿ ಗತಕಾಲದ ವೈಭವ, ವಿನಾಶಗಳು ಹೃದಯವಿದ್ರಾವಕವಾಗಿ ನಿರೂಪಿತವಾಗಿವೆ. ಕವಿಯ ಅನುಭವಕ್ಕೆ ಐತಿಹಾಸಿಕ ದೃಷ್ಟಿಯೂ ಉಜ್ವಲ ಅಭಿsಮಾನವೂ ಬೆಸೆದುಕೊಂಡಿವೆ.

ಬಿ.ಪುಟ್ಟಯ್ಯನವರ ಅಭಿವೃದ್ಧಿ ಸಂದೇಶ ಪಶ್ಚಿಮ ದೇಶದಲ್ಲಿಯ ಪ್ರವಾಸದ ಪ್ರಥಮ ಗ್ರಂಥ. ವಿ.ಕೃ.ಗೋಕಾಕರ 'ಸಮುದ್ರದಾಚೆ'ಯಿಂದ, ಇಂದಲ್ಲ ನಾಳೆ ಮತ್ತು ಸಮುದ್ರದೀಚೆಯಿಂದ ಗ್ರಂಥಗಳು ಕನ್ನಡ ಪ್ರವಾಸ ಸಾಹಿತ್ಯದ ಗಮನಾರ್ಹ ಕೃತಿಗಳು. 1936-37ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದ ತಮ್ಮ ಅನುಭವಗಳನ್ನು ಪತ್ನಿ ಹಾಗೂ ಸ್ನೇಹಿತರನ್ನು ಸಂಬೋದಿಸಿ ಬರೆದ ಪತ್ರಗಳ ಸಂಕಲನವೇ ಸಮುದ್ರದಾಚೆಯಿಂದ ಎಂಬ ಗ್ರಂಥ. ಇಂದಲ್ಲ ನಾಳೆ ಎಂಬ ಗ್ರಂಥದಲ್ಲಿ ಅಮೆರಿಕದ ಗಡಿಬಿಡಿಯ ಬದುಕು, ನಿರಾಸಕ್ತಿ, ನಾಗರಿಕತೆಗಳ ಚಿತ್ರಣ ಕಾವ್ಯಮಯವಾಗಿ ಮೂಡಿಬಂದಿದೆ. ಇಲ್ಲಿನ ನವೀನ ಚಂಪು ಶೈಲಿ ವಸ್ತು ನಿರೂಪಣೆಯ ಹೊಸತೊಂದು ಮಾರ್ಗವನ್ನು ತೆರೆದಿದೆ. 1967ರಲ್ಲಿ ಪಿ.ಇ.ಎನ್. ಸಮ್ಮೇಳನಕ್ಕಾಗಿ ಜಪಾನಿಗೆ ಹೋದಾಗಿನ ಅನುಭವ ಸಮುದ್ರದೀಚೆಯಿಂದ ಎಂಬ ಗ್ರಂಥದಲ್ಲಿ ಮೂಡಿವೆ.

ಒಟ್ಟಿನಲ್ಲಿ ಗೋಕಾಕರಿಗೆ ಕಾವ್ಯದ ಮುಖ್ಯ ಪ್ರೇರಣೆಯೇ ಪ್ರವಾಸ ಎನ್ನುವ ಜಿ.ಎಸ್.ಶಿವರುದ್ರಪ್ಪನವರ ಮಾತು ಒಪ್ಪತಕ್ಕುದಾಗಿದೆ. ಶಿವರಾಮ ಕಾರಂತರ ಅಪೂರ್ವ ಪಶ್ಚಿಮ (1953) ಪ್ರವಾಸ ಸಾಹಿತ್ಯದ ಬಹುಮುಖ್ಯ ಕೃತಿ. ಇದೊಂದು ಕಲೆಗಾರನ ಅನುಭವದ ಕಥೆ. ಇಲ್ಲಿ ಭಾವದ ಕಾವೂ ಆಲೋಚನೆಯ ತೀಕ್ಷ್ಣತೆಯೂ ಮಿಳಿತವಾಗಿವೆ. ಪಾಶ್ಚಾತ್ಯ ಪ್ರವಾಸದ ಅನುಭವಗಳು ಇಲ್ಲಿ ವಿಸ್ತಾರವಾಗಿ ಸವಿವರವಾಗಿ ಬಂದಿವೆ. ಕಾರಂತರ ಆತ್ಮಕಥನವಾದ ಹುಚ್ಚು ಮನಸ್ಸಿನ ಹತ್ತು ಮುಖಗಳು ಎಂಬ ಗ್ರಂಥದಲ್ಲೂ ಆಳನಿರಾಳದಂಥ ಅವರ ಬಹುಪಾಲು ಕಾದಂಬರಿಗಳಲ್ಲೂ ಪ್ರವಾಸಾನುಭವ ಕಥೆಯೊಂದಿಗೆ ಮಿಳಿತವಾಗಿ ಬಂದಿದೆ.

ದಿನಕರ ದೇಸಾಯಿಯವರ ನಾ ಕಂಡ ಪಡುವಣ, ಮನೋಹರ ಗ್ರಂಥಮಾಲೆಯವರ ನಡೆದು ಬಂದ ದಾರಿಯ ಮೂರನೆಯ ಸಂಪುಟದಲ್ಲಿ ಅಚ್ಚಾಗಿದೆ. ದೇಸಾಯಿಯವರು ಭಾರತದ ಪ್ರತಿನಿದಿಯಾಗಿ ಅಂತಾರಾಷ್ಟ್ರೀಯ ಕೂಲಿಕಾರ ಪರಿಷತ್ತಿನಲ್ಲಿ ಭಾಗವಹಿಸಲು ಪ್ರವಾಸಮಾಡಿದಾಗಿನ ಅನುಭವಮಾಲಿಕೆಯೇ ಈ ಕೃತಿ. ಈ ಗ್ರಂಥದಲ್ಲಿ ದೇಸಾಯಿಯವರು ಕೂಲಿಕಾರರ ಸಂಘಟನೆ, ಸಾರಿಗೆ ವ್ಯವಸ್ಥೆ, ಶಿಸ್ತು, ಪಾಕಶಾಸ್ತ್ರ ಮುಂತಾದವುಗಳ ಬಗ್ಗೆ ಕಥೆಯ ರೀತಿಯಲ್ಲಿ ತಮ್ಮ ಅನುಭವಗಳನ್ನು ನೀಡಿದ್ದಾರೆ. ಅಮೆರಿಕವನ್ನು ಕುರಿತು ಬಂದ ಗ್ರಂಥಗಳಲ್ಲಿ ಬಿ.ಜಿ.ಎಲ್. ಸ್ವಾಮಿಯವರ ಅಮೆರಿಕದಲ್ಲಿ ನಾನು ಎಂಬುದು ಅತ್ಯುತ್ತಮ ಗ್ರಂಥ. ಸ್ವಾಮಿಯವರು ಸಸ್ಯವಿಜ್ಞಾನದಲ್ಲಿ ಸಂಶೋಧನೆ ನಡೆಸಲು ಅಮೆರಿಕಕ್ಕೆ ಹೋಗಿ ಆರು ವರ್ಷಗಳ ಕಾಲ ಅಲ್ಲಿದ್ದು, ಅಲ್ಲಿನ ಜನಜೀವನ ಸಂಸ್ಕೃತಿ ವ್ಯವಹಾರ ಸ್ವಭಾವ ಧರ್ಮ ಹಾಗೂ ಭಾರತೀಯ ಮತ್ತು ಅಮೆರಿಕದ ಜೀವನದಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಕುರಿತು ಬರೆದಿದ್ದಾರೆ. ‘ನಮ್ಮಂತೆಯೇ ಅಮೆರಿಕನ್ನರು ಅಮೆರಿಕನ್ನರಂತೆಯೇ ನಾವು’ ಎಂಬುದು. ಅವರ ಅನುಭವ: ಕೃಷ್ಣಾನಂದ ಕಾಮತರ ನಾನೂ ಅಮೆರಿಕೆಗೆ ಹೋಗಿದ್ದೆ ಎಂಬುದು ಅಮೆರಿಕ ಪ್ರವಾಸವನ್ನು ವಿವರಿಸುವ ಮತ್ತೊಂದು ಉತ್ತಮ ಕೃತಿ. ಹೋಗುವ ಮುಂಚೆ ಹಲವು ಕಲ್ಪನೆಗಳನ್ನು ಕಟ್ಟಿಕೊಂಡು ಹೋಗಿ ಅಲ್ಲಿ ಹೋದ ಬಳಿಕ ತಾವು ಎದುರಿಸಿದ ಸಮಸ್ಯೆಗಳನ್ನು ಲೇಖಕರು ಹೊಸಬಗೆಯಲ್ಲಿ ವಿವರಿಸಿದ್ದಾರೆ.

ಶ್ರೀರಂಗರ ಶ್ರೀರಂಗಯಾತ್ರೆ ಮತ್ತೊಂದು ಉತ್ತಮ ವಿದೇಶಿ ಪ್ರವಾಸ ಗ್ರಂಥ. ಯುರೋಪಿನ ಈ ಪ್ರವಾಸಕಥನ ಕುತೂಹಲ ಭರಿತವಾಗಿದೆ. ಶ್ರೀರಂಗ, ನೆಗಳೂರು ರಂಗನಾಥ, ಎಚ್.ಎಲ್.ಪಾಟೀಲ -ಈ ಮೂವರೂ ಕೂಡಿ ಹಳೇಬೀಡು, ಬೇಲೂರು, ಶ್ರವಣಬೆಳಗೊಳ ಮುಂತಾದ ದಕ್ಷಿಣ ಮೈಸೂರಿನ ಪ್ರದೇಶಗಳಲ್ಲಿ ಮಾಡಿದ ಪ್ರವಾಸಕಥನ ಮುಕ್ಕಣ್ಣಯಾತ್ರೆ ಎಂಬ ಪುಸ್ತಕದಲ್ಲಿ ರಮ್ಯವಾಗಿ ಚಿತ್ರಿತವಾಗಿದೆ (1946).

ನವರತ್ನರಾಮ್ ಬರೆದ ಪ್ಯಾರಿಸ್ಸಿನಿಂದ ಪ್ರೇಯಸಿಗೆ ಎಂಬ ಪುಸ್ತಕ ಆಕರ್ಷಕ ಶೈಲಿ ಹಾಗೂ ಸುಂದರ ಸನ್ನಿವೇಶಗಳಿಂದ ಕೂಡಿದೆ. ಪ್ಯಾರಿಸ್ಸಿನ ಸ್ವಚ್ಫಂದ ಪ್ರೇಮ ವಾತಾವರಣವನ್ನು ಚಿತ್ರಿಸುವುದರಲ್ಲಿ ರಾಮ್ ಯಶಸ್ವಿಯಾಗಿದ್ದಾರೆ. ವಕೀಲರಾದ ಕೆ.ಆರ್.ಕಾರಂತರು ಯುರೋಪಿನಲ್ಲಿ ಪ್ರವಾಸಮಾಡಿ ಪ್ರವಾಸಿಯ ಪತ್ರಗಳು (1951) ಎಂಬ ಗ್ರಂಥವನ್ನು ರಚಿಸಿದ್ದಾರೆ. ಇದರಲ್ಲಿ ರಾಜಕೀಯದ ಮತ್ತು ಪ್ರಜಾಪ್ರಭುತ್ವದ ವಿಶ್ಲೇಷಣೆ ವಿಶೇಷವಾಗಿ ಬಂದಿದೆ. ಸಾಗರದಾಚೆ ಮತ್ತು ನಮ್ಮ ಕಾಗದಗಳು ಎಂಬೆರಡು ಹೊತ್ತಗೆಗಳಲ್ಲಿ ನಾಡಿಗ ಕೃಷ್ಣಮೂರ್ತಿಯವರು ಪತ್ರಿಕೋದ್ಯಮದ ವಿಷಯ ಸಂಗ್ರಹಣೆಗಾಗಿ ಅಮೆರಿಕದಲ್ಲಿ ಪ್ರವಾಸ ಮಾಡಿದಾಗಿನ ತಮ್ಮ ಅನುಭವಗಳನ್ನು ವ್ಯಕ್ತಪಡಿಸಿದ್ದಾರೆ. ಎಂ.ವೀರಪ್ಪನವರ ಸಯೋನರ ಜಪಾನ್, ಜಪಾನ್ ಪ್ರವಾಸದ ಅನುಭವಗಳನ್ನು ತಿಳಿಸುವ ಪತ್ರರೂಪದ ಕಥನ.

ವಿದೇಶಗಳಲ್ಲಿ ನಾಲ್ಕು ವಾರ ಎಂಬುದು ದೇಜಗೌ ಅವರ ಮೊದಲ ಪ್ರವಾಸ ಗ್ರಂಥ. ಈ ಕ್ಷೇತ್ರದ ಉತ್ತಮ ಕೃತಿಗಳಲ್ಲೊಂದು. 1970ರ ಅಕ್ಟೋಬರ್- ನವೆಂಬರ್ ತಿಂಗಳುಗಳಲ್ಲಿ ರಷ್ಯದ ಕೀವ್ ವಿಶ್ವವಿದ್ಯಾಲಯದಲ್ಲಿ ಲೆನಿನ್ ಪ್ರಶಸ್ತಿ ಸ್ವೀಕರಿಸಲೂ ಆಸ್ಟ್ರಿಯ, ಜರ್ಮನಿ ಹಾಗೂ ಲಂಡನ್ ವಿಶ್ವವಿದ್ಯಾಲಯಗಳನ್ನು ವೀಕ್ಷಿಸಲೂ ಕೈಗೊಂಡ ಪ್ರವಾಸ ಸಮಯದಲ್ಲಿನ ತಮ್ಮ ಅನುಭವಗಳ ದಿನಚರಿಯನ್ನು ಇಲ್ಲಿ ಕೊಡಲಾಗಿದೆ. ‘ನನ್ನ ನಾಡು ಬಡವಾಗಿದ್ದರೂ ಅದೇ ನನಗೆ ಮೆಚ್ಚು; ನನ್ನ ಜನ ಹರಕು ಚಿಂದಿಯಲ್ಲಿದ್ದರೂ ಅವರೇ ನನಗೆ ಹೆಚ್ಚು; ನನ್ನ ನೆಲ ನನಗೆ ಹುಚ್ಚು. ಬೇರೆಯವರ ಬಗೆಗೆ ದ್ವೇಷವಿಲ್ಲ. ಅಷ್ಟೇ ಅಲ್ಲ ಅವರ ಬಗೆಗೆ, ಅವರು ಸಾದಿಸಿರುವ ಸಿದ್ಧಿಯ ಬಗೆಗೆ ನನಗೆ ಅಪಾರ ಗೌರವ. ನಮ್ಮ ಸಂಸ್ಕೃತಿಗೆ ಬಾಧಕವಾಗದಂತೆ ಅದರ ಪ್ರಗತಿಯ ದೃಷ್ಟಿಯಿಂದ ಅನ್ಯ ಸಂಸ್ಕೃತಿಯ ಶ್ರೇಷ್ಠ ಗುಣಗಳನ್ನು ಅಳವಡಿಸಿಕೊಳ್ಳಬೇಕೆಂಬುದೇ ನನ್ನ ಸ್ಪಷ್ಟ ನಿಲುವು’ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಈ ಗ್ರಂಥದಲ್ಲಿ ಅವರು ಪ್ರವಾಸ ಮಾಡಿದ ದೇಶಗಳ ಜನರ ವಾಸ್ತವ ಚಿತ್ರಣ ನೈಜವಾಗಿ ಮೂಡಿಬಂದಿದೆ. ವಿದೇಶಿಯರ ಗುರಿ ನಿಲುವು ಕರ್ತವ್ಯ ಶ್ರದ್ಧೆ ತಾಯ್ನಾಡು ಮತ್ತು ತಾಯ್ನುಡಿಗಳ ಬಗ್ಗೆ ಅವರಿಗಿರುವ ಕಾಳಜಿಗಳು ಗ್ರಂಥದುದ್ದಕ್ಕೂ ಮಿನುಗುತ್ತವೆ.

ವಿದೇಶ ಯಾತ್ರೆಯನ್ನು ಕುರಿತ ಈ ಗ್ರಂಥಗಳಲ್ಲದೆ ಹಲವು ಪತ್ರಿಕೆಗಳಲ್ಲಿ ಸಾಪ್ತಾಹಿಕ, ಮಾಸಿಕಗಳಲ್ಲಿ ಹಾಗೂ ಪ್ರಬಂಧ ಸಂಕಲನಗಳಲ್ಲಿ ಪ್ರಕಟವಾದ ಪ್ರವಾಸ ಸಾಹಿತ್ಯ ಲೇಖನಗಳಂತೂ ಅಸಂಖ್ಯಾತವಾಗಿವೆ. ಬಹುಪಾಲು ಉತ್ತಮ ಲೇಖನಗಳು ಹೀಗೆ ಚೆಲ್ಲಾಪಿಲ್ಲಿಯಾಗಿವೆ. ರಂ.ಶ್ರೀ.ಮುಗಳಿ, ಎಸ್.ಪಿ.ಭಟ್ಟ, ಬಸವರಾಜ ಕಟ್ಟೀಮನಿ, ಸ.ಸ.ಮಾಳವಾಡ, ಬಿ.ವಿ.ರಾಮನ್, ಭಾಸ್ಕರ್ ರಾವ್ ಮಾಲೂರ್ಕರ್, ಸಿದ್ಧವನಹಳ್ಳಿ ಕೃಷ್ಣಶರ್ಮ, ತೀ.ನಂ.ಶ್ರೀಕಂಠಯ್ಯ, ಪ.ಸು.ಭಟ್ಟ, ಆರ್.ಸಿ.ಹಿರೇಮಠ, ಹಾ.ಮಾ.ನಾಯಕ, ಸರೋಜಿನಿಮಹಿಷಿ, ಮತ್ತೀಹಳ್ಳಿ ನಾಗರಾಜರಾವ್, ಸಿಸು ಸಂಗಮೇಶ- ಮುಂತಾದವರ ಹೆಸರುಗಳನ್ನು ಉದ್ಧರಿಸಬಹುದು.

ಸರ್ಕಾರದ ಉನ್ನತ ಹುದ್ದೆಯಲ್ಲಿದ್ದು ವಿಶ್ವದಲ್ಲಿ ಹಲವು ಬಾರಿ ಸಂಚರಿಸಿ ಹಲವು ದೇಶದ ಹಲವು ಜನರ ಜೀವನ ಸಂಸ್ಕೃತಿಗಳನ್ನು ತುಂಬ ಹತ್ತಿರದಿಂದ ಕಂಡು ವಿದೇಶೀಯರ ಬಗೆಗೆ ಅತ್ಯಂತ ನೈಜವಾಗಿ ರಚಿತವಾಗಿರುವ ಗ್ರಂಥವೆಂದರೆ ಕೆ.ಪಿ.ಎಸ್.ಮೆನನ್ ಅವರ ವಿಶ್ವಪರ್ಯಟನೆ. ಇಂಗ್ಲಿಷಿನಲ್ಲಿರುವ ಈ ಗ್ರಂಥವನ್ನು ಮಾ.ಭೀ.ಶೇಷಗಿರಿರಾವ್ ರವರು ಕನ್ನಡಕ್ಕೆ ಅನುವಾದಿಸಿ ಕನ್ನಡ ಪ್ರವಾಸ ಸಾಹಿತ್ಯಕ್ಕೆ ಅಮೂಲ್ಯ ಕಾಣಿಕೆ ಕೊಟ್ಟಿದ್ದಾರೆ.

ಕನ್ನಡದಲ್ಲಿ ಪ್ರಕಟವಾಗಿರುವ ಪ್ರವಾಸ ಕಥನಗಳಲ್ಲಿ ಅರ್ಧಕ್ಕಿಂತ ಹೆಚ್ಚು ಗ್ರಂಥಗಳು ಕ್ಷೇತ್ರ ಪರಿಚಯವನ್ನು ಮಾಡಿ ಕೊಡುವಂಥವು. ಭಾರತದ ಹಾಗೂ ಕರ್ನಾಟಕದ ಹಲವು ಕ್ಷೇತ್ರಗಳನ್ನು ಪರಿಚಯಿಸುವ ಈ ಗ್ರಂಥಗಳಲ್ಲಿ ಸಾಹಿತ್ಯ ಮೌಲ್ಯಕ್ಕಿಂತ ಹೆಚ್ಚಾಗಿ ಕ್ಷೇತ್ರ ಪರಿಚಯವೇ ಮುಖ್ಯ ಗುರಿಯಾಗಿದೆ. ಇಂಥ ಕೆಲವು ಗ್ರಂಥಗಳಲ್ಲಿ ಕ್ಷೇತ್ರ ಮಹಿಮೆಯನ್ನು ಕುರಿತು ರಚಿತವಾಗಿರುವ ಹಾಡುಗಳಲ್ಲಿ ಸಾಹಿತ್ಯಾಂಶವನ್ನು ಕಾಣಬಹುದಾಗಿದೆ. ಬಹುಪಾಲು ಗ್ರಂಥಗಳು ಸಚಿತ್ರವಾಗಿರುವುದರಿಂದ ಆಕರ್ಷಕವಾಗಿವೆ. ಇವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಹೆಸರಿಸಬಹುದು. ಕೃಷ್ಣ ನಾರಾಯಣ ಗೋಸಾಮಿ ಅವರ ಹಿಮಾಲಯ ದರ್ಶನ, ಕೈಲಾಸ - ಮಾನಸ ಸರೋವರ ಯಾತ್ರೆ ಮತ್ತು ಬದರಿಯಾತ್ರೆ, ಭಾರದ್ವಾಜರ ಸಚಿತ್ರ ಭಾರತಯಾತ್ರೆ, ಶ್ರೀನಿವಾಸ ಕಂಪನಿಯವರ ಸಚಿತ್ರ ವಿಜಯನಗರ, ನ.ರಾ.ಗಲಗಲಿಯವರ ಬದರಿನಾರಾಯಣ ದರ್ಶನ, ಜಿ.ವೆಂಕಟಯ್ಯನವರ ಚಿನ್ನದ ಗಿರಿ ಯಾತ್ರೆ, ಬನದ ಸೆರಗು, ಸೋಮನಾಥಾನಂದರ ಅಮರನಾಥ ಯಾತ್ರೆ ಮತ್ತು ಹೈಮಾಚಲ ಸಾನಿಧ್ಯದಲ್ಲಿ, ಬಿ.ಶಿವಮೂರ್ತಿಶಾಸ್ತ್ರಿಗಳ ಕರ್ನಾಟಕ ಸಂದರ್ಶನ, ಯು.ರಾಘವೇಂದ್ರ ಭಟ್ಟರ ರಜತಪೀಠದಿಂದ ರಜತಾದ್ರಿಗೆ, ಮಹದೇವಿಯಮ್ಮನವರ ದೇವತಾತ್ಮ, ಪಿ.ಆರ್.ಜಯಲಕ್ಷ್ಮಮ್ಮ ನವರ ಬದರೀ ಯಾತ್ರೆ, ಮ.ನ.ಮೂರ್ತಿಯವರ ನಮ್ಮ ಪ್ರವಾಸ ಮತ್ತು ನಾವು ಕಂಡ ಬೆಂಗಳೂರು, ಡಿ.ಟಿ.ರಂಗಸ್ವಾಮಿಯವರ ಭಾರತ ಯಾತ್ರೆ, ಎಚ್.ಆರ್.ನಾಗರಾಜ್ರವರ ಹಿಮಾಚಲ ಪ್ರದೇಶ, ಜೆ.ವಿ.ನರಸಿಂಹಮೂರ್ತಿ ಯವರ ಆಸೇತುಹಿಮಾಚಲ ಯಾತ್ರೆ, ಎಂ.ವೆಂಕಟಾಚಲ ಭಟ್ಟರ ಕಾಶ್ಮೀರ ಅಮರನಾಥ ಯಾತ್ರೆ, ಕೋ.ಚೆನ್ನಬಸಪ್ಪನವರ ದಕ್ಷಿಣೇಶ್ವರ ದರ್ಶನ, ಗುರುನಾಥ ಜೋಶಿಯವರ ಪ್ರವಾಸ, ಭದ್ರಗಿರಿ ಕೇಶವದಾಸರ ದಾಸ ಕೀರ್ತನೆ ಮಂಡಳಿಯ ಪ್ರಥಮ ಯಾತ್ರೆ, ಕೆ.ಗಣೇಶಮಲ್ಯರ ಶರಾವತಿಯಿಂದ ಗೋದಾವರಿವರೆಗೆ, ಶ್ರೀರಂಠಶಾಸ್ತ್ರೀಯವರ ಮಾನಸ ಸರೋವರ ಮತ್ತು ಕೈಲಾಸ ಕ್ಷೇತ್ರ ಪ್ರಕರಣ, ಟಿ.ಚಂದ್ರರಾಜ ಶೆಟ್ಟಿಯವರ ಮಂಗಳೂರಿನಿಂದ ಮಧುರೆಗೆ, ಕೆ.ಗೋಪಾಲಕೃಷ್ಣರಾಯರ ತಿರುಪತಿ ಯಾತ್ರೆ,

ಎಂ.ಎನ್.ಶೇಷಾದ್ರಿ ಅಯ್ಯಂಗಾರ್ ಅವರ ಧರ್ಮಸ್ಥಳದ ಯಾತ್ರೆ, ವಿ.ನಾ.ಅವರ ಯಾತ್ರಿಕನ ಪತ್ರಗಳು, ಕೆ.ಕೊಟ್ಟರಗೌಡರ ನಮ್ಮ ಪ್ರವಾಸ, ಎಸ್.ರಜತಾದ್ರಿಯವರ ಪಶ್ಚಿಮದ ಹೊಂಬೆಳಕು ಮುಂತಾದ ಗ್ರಂಥಗಳು ಒಂದೇ ಮಾಲಿಕೆಯಲ್ಲಿ ಬರಬಹುದಾದ ಕೃತಿಗಳಾಗಿವೆ. ಇವೇ ಅಲ್ಲದೆ ಬಾಲಕನೊಬ್ಬ ಬಾಲಕರಿಗಾಗಿ ಬರೆದ ಅಜಿತಕುಮಾರನ ನನ್ನ ಪ್ರವಾಸ ಕಥನ, ಎಸ್.ವಿ.ಕೃಷ್ಣಮೂರ್ತಿರಾಯರ ದಿಲ್ಲಿಯ ಪತ್ರಗಳು, ಎಚ್.ವಿ.ಶ್ರೀರಂಗರಾಜು ಅವರ ಸೋವಿಯೆಟ್ ದಿನಚರಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಮಹಾತ್ಮಾ ಗಾಂಧಿಯವರ ದಕ್ಷಿಣ ಯಾತ್ರೆ, ಗುಂಡ್ಮಿ ಚಂದ್ರಶೇಖರ ಐತಾಳರ ಸೌಂದರ್ಯದ ಸಾನಿಧ್ಯದಲ್ಲಿ, ಮಿರ್ಜಿ ಅಣ್ಣಾರಾಯರ ನಾ ಕಂಡ ನಾಡು, ಎಚ್.ಜಿ.ಜೋಶಿಯವರ ಶಿಲಾಹೃದಯ, ವೆಂ.ಮು.ಜೋಶಿಯವರ ಸೈನಿಕ ಉವಾಚ, ಎನ್.ಎಸ್.ಗದಗಕರ್ರವರ ಗೋವಾಯಾತ್ರೆ, ಟಿ.ಚಂದ್ರರಾಜ ಶೆಟ್ಟಿ ಅವರ ಭಾರತದ ಮಹಾನಗರಗಳು, ಎ.ಎಂ.ಅಣ್ಣಿಗೇರಿಯವರ ಕರ್ನಾಟಕದ ಸಾಂಸ್ಕೃತಿಕ ಸ್ಥಳಗಳು, ಹಿರೇಮಲ್ಲೂರು ಈಶ್ವರನ್ ಅವರ ಕವಿ ಕಂಡ ನಾಡು - ಕನ್ನಡ ಪ್ರವಾಸ ಸಾಹಿತ್ಯಕ್ಕೆ ಕೊಟ್ಟ ಮಹತ್ವದ ಕೊಡುಗೆಗಳಾಗಿವೆ.

ಕ್ಷೇತ್ರ ಪರಿಚಯ ಗ್ರಂಥಗಳಲ್ಲಿ ಶಿವರಾಮ ಕಾರಂತರ ಅಬುವಿನಿಂದ ಬರಾಮಕ್ಕೆ ಒಂದು ಅಪುರ್ವ ಕೃತಿ. ಅಬು, ಅಜ್ಮೀರ, ಪುಷ್ಕರ, ಜಯಪುರ, ಸಿಮ್ಲಾ, ಆಗ್ರ, ಕಾಶಿ, ಡಾಲ್ಮಿಯಾ, ಕಲ್ಕತ್ತ ಮತ್ತು ಬರಾಮಗಳಲ್ಲಿ ಸಂಚರಿಸಿ ಅಲ್ಲಿನ ನಿಸರ್ಗ ಮತ್ತು ಸಂಗೀತ, ಸಾಹಿತ್ಯ, ಜನಜೀವನಾದಿಗಳನ್ನು ಈ ಗ್ರಂಥದಲ್ಲಿ ಕಂಡರಿಸಿದ್ದಾರೆ. ಕೆ.ಬಿ. ಪ್ರಭುಪ್ರಸಾದರ ದೇಗುಲಗಳ ದಾರಿಯಲ್ಲಿ ಎಂಬುದು ಒಂದು ಉತ್ತಮ ಗ್ರಂಥ. ಸಹಜವಾಗಿ, ನೇರವಾಗಿ, ಸರಳವಾಗಿ ತಮ್ಮ ಅನುಭವಗಳನ್ನು ಲೇಖಕರು ಇಲ್ಲಿ ಮೂಡಿಸಿದ್ದಾರೆ. ಹ.ರಾ.ಪುರೋಹಿತರ ರಾಮೇಶ್ವರ ಕನ್ಯಾಕುಮಾರಿ ದರ್ಶನ ಮತ್ತು ಬದರಿ ಕೇದಾರನಾಥ ದರ್ಶನಗಳು ಭಕ್ತಿ ಭಾವದಿಂದ ಬರೆದ ಗ್ರಂಥಗಳಾಗಿವೆ.

1943ರಲ್ಲಿ ಶಿವಮೊಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಿತ್ರರೊಂದಿಗೆ ಹೋಗಿದ್ದ ಮಾನ್ವಿ ನರಸಿಂಗರಾಯರು ತಮ್ಮ ಮತ್ತು ಮಿತ್ರರ ಅನುಭವಗಳನ್ನು ಕನ್ನಡ ಯಾತ್ರೆಯಲ್ಲಿ ತಂದುಕೊಟ್ಟಿದ್ದಾರೆ. ಸಿದ್ಧವನಹಳ್ಳಿ ಕೃಷ್ಣಶರ್ಮರ ವಾರ್ಧಾಯಾತ್ರೆಯಲ್ಲಿ ಕಥನ ಕೌಶಲ, ವರ್ಣನೆ, ವಿನೋದ ವಿಲಾಸ ಮೊದಲಾದ ಅನೇಕ ಗುಣಗಳು ಕೃಷ್ಣಶರ್ಮರ ಮನಃಶಕ್ತಿಗಳ ಪರಿಪಾಕದೊಡನೆ ಇದರಲ್ಲಿ ಸ್ವಚ್ಫಂದವಾಗಿ ಬಂದಿವೆ ಎಂದು ಬೇಂದ್ರೆಯವರು ಅಬಿಪ್ರಾಯಪಟ್ಟಿದ್ದಾರೆ. ಇವರ ಭೂದಾನಯಜ್ಞ ಯಾತ್ರೆ ಉತ್ತರ ಭಾರತ ಪ್ರವಾಸದ ವಿವರವನ್ನೊಳಗೊಂಡ ಮತ್ತೊಂದು ಕೃತಿ. ಒಕ್ಕಲುತನದ ಪ್ರವಾಸ ಗ್ರಂಥಗಳಲ್ಲಿ ವೀ.ಚ.ಹಿತ್ತಲಮನಿಯವರ ಶರಾವತಿಯಿಂದ ಸಾಬರಮತಿ, ವಿ.ಪುರಂದರ ರೈರವರ ನಮ್ಮ ಪ್ರವಾಸಾನುಭವ ಗಣನೀಯ ಕೃತಿಗಳು.

ಜಿ.ಪಿ.ರಾಜರತ್ನಂ ಅವರ ಚೀನಾದೇಶದ ಬೌದ್ಧ ಯಾತ್ರಿಕರು, ಪಾಹಿಯಾನನ ಕ್ಷೇತ್ರಯಾತ್ರೆ ಎಂಬುವು ವಿದೇಶೀ ಯಾತ್ರಿಕರ ಅನುಭವಗಳನ್ನು ಕುರಿತ ಅನುವಾದ ಗ್ರಂಥಗಳು. ಪ್ರಾಚೀನ ಕಾಲದಿಂದಲೂ ಭಾರತಕ್ಕೆ ಬಂದು ಹೋದ ನೂರಾರು ಪ್ರವಾಸಿಗಳ ಪ್ರವಾಸ ಕಥನವನ್ನು ಸಮಗ್ರವಾಗಿ ಕನ್ನಡಕ್ಕೆ ತಂದುಕೊಟ್ಟ ಕೀರ್ತಿ ಎಚ್.ಎಲ್.ನಾಗೇಗೌಡರಿಗೆ (ನೋಡಿ) ಸಲ್ಲುತ್ತದೆ. ಮಾರ್ಕೋಪೋಲೋನ ಪ್ರವಾಸ ಕಥನವನ್ನು ಮೊದಲು ಕನ್ನಡಕ್ಕೆ ತಂದು, ಈ ಅನುವಾದದಿಂದ ಪ್ರೋತ್ಸಾಹಿತರಾಗಿ, ದಶಕಗಳಷ್ಟು ಕಾಲ ಇಡೀ ಭಾರತದಲ್ಲಿ ಸಂಚರಿಸಿ ಹಲವು ಪ್ರಾಚ್ಯ ಕೋಶಾಗಾರಗಳಲ್ಲೂ ಗ್ರಂಥ ಹಾಗೂ ವಸ್ತು ಸಂಗ್ರಹಾಲಯಗಳಲ್ಲೂ ಹುದುಗಿದ್ದ ವರದಿಗಳನ್ನು ಹೆಕ್ಕಿ ತಂದು ಅವುಗಳ ಸಾರವನ್ನು ಭಟ್ಟಿ ಇಳಿಸಿ ಸು.200 ಜನ ವಿದೇಶೀಪ್ರವಾಸಿಗರ ಪ್ರವಾಸ ಕಥನವನ್ನು ಕನ್ನಡದಲ್ಲಿ "ಪ್ರವಾಸಿ ಕಂಡ ಇಂಡಿಯಾ" ಎಂಬ ಹೆಸರಿನಲ್ಲಿ ಐದು ಬೃಹತ್ ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ಈ ಗ್ರಂಥಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅತ್ಯಮೂಲ್ಯ ಕಾಣಿಕೆ ಕೊಟ್ಟು ಕನ್ನಡಿಗರೆಲ್ಲರ ಕೃತಜ್ಞತೆಗೆ ಪಾತ್ರರಾಗಿದ್ದಾರೆ.

ರಾವಬಹಾದ್ದೂರ ಅವರ ನಾನು ಕಂಡ ಬಾಂಗ್ಲಾದೇಶ (1972) ಕೃಷ್ಣಾನಂದ ಕಾಮತರ ವಂಗದರ್ಶನ (1972), ಜಿ.ಎಸ್.ಶಿವರುದ್ರಪ್ಪನವರ ವಿದೇಶಗಳಲ್ಲಿ ಇಪ್ಪತ್ತೆರಡು ದಿನ (1973), ದೇಜಗೌ ಅವರ ಪ್ರವಾಸಿಯ ದಿನಚರಿ (1974), ಹ.ವೆಂ.ನಾಗರಾಜರಾವ್ ಅವರ ನವರಷ್ಯದ ನೋಟ (1974), ಶಾಂತಾದೇವಿ ಮಾಳವಾಡ ಅವರ ಶ್ರೀಗಿರಿಯಿಂದ ಹಿಮಗಿರಿಗೆ (1974)- ಇವು ಇತರ ಕೆಲವು ಮುಖ್ಯ ಪ್ರವಾಸ ಗ್ರಂಥಗಳು. ಶಾಂತಾದೇವಿ ಮಾಳವಾಡರ ಶ್ರೀಗಿರಿಯಿಂದ ಹಿಮಗಿರಿಗೆ ಹಾಗೂ ರುಕ್ಮಿಣಿ ಗಿರಿಮಾಜಿಯವರ ಬೆಂಗಳೂರಿಂದ ಬದರಿನಾಥಕ್ಕೆ (1974), ಎಂಬ ಕೃತಿಯ ತೀರ್ಥಯಾತ್ರೆಯ ನೆವದಲ್ಲಿ ಭಾರತದ ಹಲವು ಪ್ರದೇಶಗಳ ಸಾಂಸ್ಕೃತಿಕ ಬದುಕಿನ ಪದರಗಳನ್ನು ಚಿತ್ರಿಸುತ್ತವೆ.

ಹ.ವೆಂ.ನಾಗರಾಜರಾವ್ ಅವರ ನವರಷ್ಯದ ನೋಟ (1974) ಲೆನಿನ್ ನಾಯಕತ್ವದ ಮಹಾಕ್ರಾಂತಿಯ ಅನಂತರದ ರಷ್ಯದ ವಿವಿಧ ರೀತಿಯ ಸ್ಥಿತ್ಯಂತರಗಳನ್ನು ದಾಖಲಿಸುತ್ತದೆ.

ಜವಹರಲಾಲ್ ನೆಹರೂರವರು ಕೆ.ಪಿ.ಎಸ್.ಮೆನೆನ್ರವರ ಗ್ರಂಥಕ್ಕೆ ಮುನ್ನುಡಿ ಬರೆಯುತ್ತ ಹೀಗೆ ಹೇಳಿದ್ದಾರೆ: ‘ಪ್ರವಾಸ ಮಾಡುವುದು ಒಳ್ಳೆಯದು; ಹಾಗೆ ಪ್ರವಾಸ ಮಾಡಲಾರದೇ ಹೋದಾಗ ಪ್ರವಾಸದ ಬಗೆಗೆ ಬಂದಿರುವ ಸಾಹಿತ್ಯವನ್ನಾದರೂ ಓದುವುದು ಉತ್ತಮ ಹವ್ಯಾಸ’. ಕನ್ನಡಿಗರು ಈ ಹವ್ಯಾಸ ಬೆಳೆಸಿಕೊಳ್ಳಲು ಸಾಕಷ್ಟು ಸರಕಿದೆ. ಪ್ರವಾಸ ಸಾಹಿತ್ಯದ ಬೆಳೆ 80 ಮತ್ತು 90ರ ದಶಕದಲ್ಲಿ ಅಪೂರ್ವವ ಸಾಹಿತ್ಯ ಶ್ರೀಮಂತವ ಆಗಿದೆಯೆಂದು ಅಬಿಮಾನದಿಂದಲೇ ಹೇಳಬಹುದಾದಷ್ಟು ವಿಪುಲ ಸಂಖ್ಯೆ, ಭಿನ್ನ ವಿಭಿನ್ನ ದೃಷ್ಟಿಕೋನ ಹಾಗೂ ಅನುಭವದ ಪ್ರವಾಸ ಕೃತಿಗಳು ಪ್ರಕಟವಾಗಿರುವುದನ್ನು ನೋಡಬಹುದಾಗಿದೆ. ಪ್ರತಿಯೊಬ್ಬ ಲೇಖಕನೂ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಹೊಸ ನಾಡಿನ ಹೊಸ ಕತೆಯೊಂದನ್ನು ಕೊಟ್ಟಿದ್ದಾನೆ. ಕೆಲಮೊಂದು ಕಥನಗಳಂತೂ ಜಾಗತಿಕ ಪ್ರವಾಸ ಸಾಹಿತ್ಯ ಕೃತಿಗಳ ಮಟ್ಟಕ್ಕೆ ನಿಲ್ಲುವಷ್ಟು ಚೆನ್ನಾಗಿವೆ. ಶೈಕ್ಷಣಿಕ ಮಹತ್ವ ಹಾಗೂ ವಿಬಿನ್ನ ಅನುಭವದ ನೆಲೆಗಳು ಇಂದು ಪ್ರವಾಸ ಸಾಹಿತ್ಯದ ಒಳಸೂತ್ರವಾಗಿ ನಿಂತಿವೆ. ಪ್ರವಾಸಾನುಭವ ಕಥನ, ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ- ಹೀಗೆ ಭಿನ್ನ ಕೋನಗಳಿಂದ ಅನ್ಯ ಸಂಸ್ಕೃತಿಯನ್ನು ಸಾಂದ್ರವಾಗಿ ತಾಗುವ ದಿಕ್ಕಿನಲ್ಲಿ ಸಾಗಿದೆ. ಈ ಪ್ರಯತ್ನದ ಹಾದಿಯಲ್ಲಿ ಪ್ರವಾಸ ಸಾಹಿತ್ಯದ ಸಂಖ್ಯೆಯೂ ಮಹಿಳಾ ಬರೆಹಗಾರ್ತಿಯರ ಸಂಖ್ಯೆಯೂ ವೃದ್ಧಿಸಿದೆ. ಸ್ವಾತಂತ್ರ್ಯೋತ್ತರ ಕಾಲದಿಂದ ಇಲ್ಲಿಯವರೆಗೆ 50ಕ್ಕೂ ಹೆಚ್ಚು ಮಹಿಳಾ ಪ್ರವಾಸ ಕಥನಗಳು ದೊರಕುತ್ತವೆ. ಪ್ರವಾಸಕ್ಕಾಗಿ ಒದಗುತ್ತಿರುವ ಕಾರಣಗಳೂ ಗಮನಾರ್ಹವಾಗಿ ಹೆಚ್ಚಾಗಿವೆ. ಯುನೆಸ್ಕೋ ಸೇವೆಗಾಗಿಯೋ ವಿವಿಧ ಸಾಹಿತ್ಯ ಸಂಘಗಳ ಮೂಲಕವೋ ಸಾಂಸ್ಕೃತಿಕ ತಂಡಗಳ ಪರವಾಗಿಯೋ ಅಕಾಡೆಮಿಗಳ ನೆರವಿನಿಂದಲೋ ಕೆಲಮೊಮ್ಮೆ ಸ್ವಂತ ಖರ್ಚಿನಿಂದಲೋ ದೇಶೀಯ ಹಾಗೂ ವಿದೇಶೀಯ ಸ್ಥಳಗಳ ಪ್ರವಾಸ ಸಮೃದ್ಧವಾಗಿದೆ. (ಜೆ.ಎಸ್.ಪಿ.ಎಂ.)

ಹೊ.ಶ್ರೀನಿವಾಸಯ್ಯನವರ ನಾ ಕಂಡ ಜರ್ಮನಿ (1975), ದೇಜಗೌ ಅವರ ಆಫ್ರಿಕಾ ಯಾತ್ರೆ (1975) ಸಾಂಸ್ಕೃತಿಕ ಹಾಗೂ ಜನಪದೀಯ ನೆಲೆಗಳನ್ನು ಕುರಿತ ಅಧ್ಯಯನ ಶೀಲ ದೃಷ್ಟಿಕೋನವನ್ನು ಹೊಂದಿವೆ. ಆಶಾ ಪೋತೆದಾರ್ ಅವರ ಪೌರ್ವಾತ್ಯ ದೇಶಗಳ ಹಕ್ಕಿನೋಟ (1977) ಎಂಬ ಕೃತಿಯಲ್ಲಿ ಜಪಾನ್, ಹಾಂಕಾಂಗ್, ಥಾಯ್ಲೆಂಡ್ಗಳಲ್ಲಿ ಕಾರ್ಖಾನೆಗಳ ಕುರಿತ ಕುತೂಹಲಗಳಿವೆ. ವಿವಿಧ ಸ್ಥಳಗಳ ದರ್ಶನ ಮಾಡಿಸುವ ಅನುಪಮಾ ನಿರಂಜನ ಅವರ ಸ್ನೇಹಯಾತ್ರೆ (1978), ಕೊಡತ್ತೂರು ನಯನಾಬಿsರಾಮ ಉಡುಪರ ಔತ್ತರೇಯ ಖಂಡ ದರ್ಶನ (1978), ರಾಗು ಜೋಶಿಯವರ ರಾಯಚೂರಿನಿಂದ ರಾಮೇಶ್ವರದಾಟಿ (1978) - ಇವುಗಳನ್ನು ಹೆಸರಿಸಬಹುದು. ಶ್ರೀ ಮೂಜಗಂ ಅವರ ನಮ್ಮ ವಿದೇಶಯಾತ್ರೆ (1979), ಉ.ಕಾ.ಸುಬ್ಬರಾಯಚಾರ್ ಅವರ ಸೋವಿಯತ್ ನಾಡಿನಲ್ಲಿ ಹತ್ತುದಿನಗಳು (1980), ಎಂ.ಕೆ.ಇಂದಿರಾ ಅವರ ಅನುಭವ ಕುಂಜ (1980) ಕೃತಿಗಳೂ ಇದೇ ಸಾಲಿನಲ್ಲಿ ಬರುವಂಥವು.

ಇಲ್ಲಿ ವಿಶೇಷವಾಗಿ ದಾಖಲಿಸಬೇಕಾದ ಎರಡು ಮುಖ್ಯ ಕೃತಿಗಳೆಂದರೆ ಎ.ಎನ್.ಮೂರ್ತಿರಾಯರ ಅಪರವಯಸ್ಕನ ಅಮೆರಿಕಾ ಯಾತ್ರೆ (1979) ಹಾಗೂ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಅಮೆರಿಕದಲ್ಲಿ ಗೊರೂರು (1979). ಶೈಕ್ಷಣಿಕ ಮೌಲ್ಯವುಳ್ಳ ಪರಸಂಸ್ಕೃತಿ, ಜೀವನ ಸಂಪ್ರದಾಯಗಳನ್ನು ಅತ್ಯಂತ ಕಟವೆಂಬಂತೆ ಪರಿಚಯಿಸುವ ಶೈಲಿ ಈ ಕೃತಿಗಳ ವೈಶಿಷ್ಟ್ಯ. ಹಾಸ್ಯದ ಲೇಪನವುಳ್ಳ ಅಮೆರಿಕದಲ್ಲಿ ಗೊರೂರು ನಮ್ಮನ್ನು ಹೆಚ್ಚು ಆಕರ್ಷಿಸುತ್ತದೆ. ಈ ಎರಡೂ ಕೃತಿಗಳಲ್ಲಿ ಸಾಮ್ಯವಿದೆ. ಭಾರತೀಯ ಹಾಗೂ ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿಗಳನ್ನು ಹೋಲಿಕೆಯ ಮಾನದಂಡದಿಂದ ವಿಶ್ಲೇಷಿಸದೆ ಸಣ್ಣಸಣ್ಣ ಸಂಗತಿಗಳನ್ನೂ ನಿರ್ಲಕ್ಷಿಸದೆ, ಹೇಗೆ ಬೃಹತ್ತಾಗಿ ಬೆಳೆದಿವೆ ಎಂಬ ಪರಿಶೀಲನಾ ದೃಷ್ಟಿಯಿದೆ. ಪ್ರವಾಸ ಸಾಹಿತ್ಯಗಳ ಸಾಲಿನಲ್ಲಿ ಈ ಕೃತಿಗಳು ಬಿನ್ನವಾಗಿ ನಿಲ್ಲುವುದೇ ಈ ವೈಶಿಷ್ಟ್ಯದಿಂದ.

ಸೀತಮ್ಮ ನಂಜೇಗೌಡ ಅವರ ನಾ ಕಂಡ ಅಮೆರಿಕಾ (1981), ಸರೋಜಾ ಚಾಮರಾಜರ ಉತ್ತರ ಭಾರತ ಪ್ರವಾಸ ಕುರಿತ ಸಿಂಹಾಚಲದಿಂದ ಹೈಮಾಚಲದವರೆಗೆ (1981), ಕು.ಶಿ.ಹರಿದಾಸಭಟ್ಟರ ಜಗದಗಲ (1981), ಸರೋಜಾ ಗೋಪಾಲ್ ಅವರ ಭೂಪ್ರದಕ್ಷಿಣೆ (1982)- ಈ ಕೃತಿಗಳು ಸಾಂಸ್ಕೃತಿಕ ಬಿನ್ನತೆಗಳನ್ನು ವಿವಿಧ ನೆಲೆಗಳಲ್ಲಿ ಪರಿಚಯಿಸಿಕೊಡುತ್ತವೆ. ಎಚ್.ವಿ.ಶ್ರೀನಿವಾಸರಾವ್ ಅವರ ವೇಲ್ಸ್‌ ದಿನಚರಿಯಿಂದ (1982) ಹಾಗೂ ಜಿ.ಗೋಪಾಲ್ ಅವರ ಮೈಸೂರಿನಿಂದ ಮೆಕ್ಸಿಕೋಗೆ (1982) ಕೃತಿಗಳೂ ಭಿನ್ನ ಭಿನ್ನ ಸಾಂಸ್ಥಿಕ ಯೋಜನೆಗಳ ರೀತಿನೀತಿಗಳನ್ನು ಪರಿಶೀಲಿಸಿವೆ.

ಯುನೆಸ್ಕೋ ಪ್ರವಾಸದ ಈಜಿಪ್ಟ್‌, ಇರಾನ್, ನೈಜೀರಿಯ, ಘಾನಾ, ರೊಮೇನಿಯ, ಪಿಲಿಫೈ಼ನ್ಸ್‌, ಇಂಡೊನೇಷ್ಯಗಳ ಸಾಂಸ್ಕೃತಿಕ ವರದಿ ನೀಡುವ ಎಚ್.ಕೆ.ರಂಗನಾಥರ ಪರದೇಶಿಯಾದಾಗ (1983), ಕು.ಶಿ.ಹರಿದಾಸಭಟ್ಟರ ಒಮ್ಮೆ ರಷಿಯಾ ಒಮ್ಮೆ ಇಟಲಿಯಾ (1983), ವಿ.ಪುಟ್ಟಮಾದಪ್ಪನವರ ನೆಮ್ಮುಗೆಯ ನಾಡು, ಅನುಪಮಾ ನಿರಂಜನರ ಅಂಗೈಯಲ್ಲಿ ಯುರೋ ಅಮೆರಿಕಾ (1984), ಎಡಿನ್ಬರೋದಲ್ಲಿನ ವೈದ್ಯಕೀಯ ವ್ಯವಸ್ಥೆಯನ್ನೂ ಆಸ್ಪತ್ರೆಯ ನಿಯಮಾವಳಿಗಳನ್ನೂ ದಾಖಲಿಸುವ ಹಾಗೂ ಆ ಹಿನ್ನೆಲೆಯಲ್ಲಿ ಅಲ್ಲಿನ ಸಾಮಾಜಿಕ ಎತ್ತರ ಬಿತ್ತರಗಳನ್ನು ಪರಿಶೀಲಿಸುವ ಜಿ.ಗೋಪಾಲರ ವೈದ್ಯನ ವಿದೇಶ ಯಾತ್ರೆ (1984) ಮುಂತಾದ ಕೃತಿಗಳು ಬಿನ್ನ ಬಿನ್ನ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಐತಿಹಾಸಿಕ ದೃಷ್ಟಿಕೋನಗಳಿಂದ ಆಯಾ ದೇಶಗಳನ್ನು ವಿಮರ್ಶಿಸುವ ಕೃತಿಗಳಾಗಿವೆ. ಈ ನಿಟ್ಟಿನಲ್ಲಿ ರಂಜನಭಟ್ಟ ಅವರ ಕುಬೇರ ರಾಜ್ಯದ ಚಿತ್ರವಿಚಿತ್ರ (1983) ಕೃತಿಯನ್ನು ಗಮನಿಸಬೇಕು. ಅಮೆರಿಕದ ವ್ಯಾಪಾರೀಕರಣದ ಗುಣ ಆ ಸಮಾಜದಲ್ಲಿ ಸೃಷ್ಟಿಸಿರುವ ಚಿತ್ರ ವಿಚಿತ್ರಗಳು, ಮೃತ್ಯುವಿನ ಸಮ್ಮುಖದಲ್ಲಿ ಮನುಷ್ಯನ ಭಾವ ಭಾವನೆಗಳ ಚಿತ್ರ, ಅಮೆರಿಕೆಯ ಜೀವನ ವ್ಯವಸ್ಥೆಯ ಒಳಚಿತ್ರಗಳ ಪರಿಚಯವನ್ನು ಈ ಕೃತಿ ನೀಡುತ್ತದೆ. ಅಲ್ಲಲ್ಲಿ ಬರುವ ಅಮೆರಿಕದ ನಿಸರ್ಗ ನಿರ್ಜನವಾದುದು, ಬರ್ಕೆಲಿ ಹೂವಿಲ್ಲದ ಹಕ್ಕಿಯಿಲ್ಲದ ಊರು ಎಂಬ ಮಾತುಗಳು ಕುಬೇರ ರಾಜ್ಯದ ನಿರ್ಜೀವ ಪರಿಸರವನ್ನು ದಾಖಲಿಸುತ್ತದೆ.

ಶಿರಂಗಲ್ಲು ಈಶ್ವರಭಟ್ಟರ ಅಮರನಾಥ ದರ್ಶನ (1984), ದೊಡ್ಡೇರಿ ವೆಂಕಟರಾವ್ ಅವರ ಏಕಾಕಿ ಪ್ರವಾಸಿ (1984), ನಾ ಕಂಡ ಪಡುವಣ, ಎಚ್.ಎಸ್.ಹರಿಶಂಕರ್ ಅವರ ಸುಂದರ ಮಾಸ್ಕೋ ಸುಂದರ ರಶಿಯಾ (1985), ಗೌತಮರ ನಯಾಗರಾಕ್ಕೆ ಐದು ಮೈಲಿ, ಜಿ.ಗೋಪಾಲರ ಬೆಂಗಳೂರಿಂದ ಬಾರ್ಸೆಲೋನಾಕ್ಕೆ- ಇವು ಗಮನಿಸಬೇಕಾದಂತಹ ಕೃತಿಗಳು. ನೀಳಾದೇವಿಯವರ ನಾ ಕಂಡ ಆ ಖಂಡ (1985) ಅಮೆರಿಕದ ಶ್ರೀಮಂತಿಕೆಗೆ ಕಾರಣವಾಗುವ ಅವರ ಜೀವನಶ್ರದ್ಧೆ, ಅಪಾರ ಪರಿಶ್ರಮದ ಜೀವನವನ್ನು ವ್ಯವಸ್ಥಿತ ಸಾಮಾಜಿಕ ಬದುಕು, ಕಾಲವನ್ನು ಬಳಸಿಕೊಳ್ಳುವಲ್ಲಿನ ಶಿಸ್ತು- ಇವುಗಳನ್ನು ಅತ್ಯಂತ ಎಚ್ಚರಿಕೆಯಿಂದ ಪರಿಶೀಲಿಸುತ್ತದೆ. ಇದೇ ಸಾಲಿನಲ್ಲಿ ಬರುವ ನಭ ಅವರ ಕ್ಯಾಮರೂನಿನ ಬಣಗಳೊಡನೆ (1985) ಎಂಬ ಕೃತಿಯಲ್ಲಿ ಆಫ್ರಿಕಾದ ಕ್ಯಾಮರೂನನ್ನು ಅಲ್ಲಿಯ ಜನ ದೇವತೆಗಳ ರಥ ಎಂದು ಬಣ್ಣಿಸಿರುವುದನ್ನು ವಿವರಿಸಲಾಗಿದೆ. ಎಚ್.ಎಸ್.ರಾಘವೇಂದ್ರರಾಯರ "ಜನಗಣಮನ" ಎಂಬ ಕೃತಿಯಲ್ಲಿ ಪಶ್ಚಿಮ ಬಂಗಾಲವನ್ನು ಅತೀ ವ್ಯಾವಹಾರಿಕ ಜಗತ್ತು ಎಂದೂ ಅಲ್ಲಿನ ಅರಾಜಕತೆಯ ಹಿಂದೆ ಒಂದು ಜೀವಂತಿಕೆಯೂ ನಿಗೂಢ ಚೆಲುವಿಕೆಯೂ ಇರುವುದನ್ನು ಗುರುತಿಸಿದ್ದಾರೆ. ನಭ ಅವರು ಯುನೆಸ್ಕೋ ಸೇವೆಯಲ್ಲಿ (1985) ಎಂಬ ಕೃತಿಯಲ್ಲಿ ಇಂಡೊನೇಷ್ಯದ ಪ್ರಸಿದ್ಧ ಬೋರಾಂ ಬೋದೂರಿನ ಒಂಬತ್ತು ಅಂತಸ್ತುಗಳ ಬೌದ್ಧ ಸ್ತೂಪವನ್ನು ವಿಶಿಷ್ಟವಾಗಿ ವರ್ಣಿಸಿದ್ದಾರೆ. ಬೆಂಗಳೂರಿಂದ ಬಾರ್ಸೆಲೋನಾಕ್ಕೆ ಕೃತಿಯಲ್ಲಿ ಜಿ.ಗೋಪಾಲರು ಬಾರ್ಸೆಲೋನಾದ ಜನಪದ ನೃತ್ಯ, ಸಂಗೀತ ರಚನೆ, ಕೊಲಂಬಸ್ ಹಡಗಿನ ಕುತೂಹಲ ಈ ಎಲ್ಲವನ್ನೂ ವೈದ್ಯಕೀಯ ಹಾಗೂ ಸಾಮಾಜಿಕ ಗ್ರಹಿಕೆಗಳೊಂದಿಗೆ ಪರಿಭಾವಿಸಿದ್ದಾರೆ. ನಾ ಕಂಡ ಜರ್ಮನಿಯಲ್ಲಿ ಹೊ.ಶ್ರೀನಿವಾಸಯ್ಯನವರು ದಾಖಲಿಸುವ ಕೈರೋ ಮ್ಯೂಸಿಯಂ, ಟುಟುನ್ ಖಾಮೆನ್ ಕಾಲದ ಖಡ್ಗಗಳು, ಮಮ್ಮಿಗಳು, ಸ್ತ್ರೀ ಮುಖ ಮತ್ತು ಸಿಂಹದ ಮೈ ಹೊಂದಿರುವ ಸ್ಫಿಂಕ್ಸ್‌ - ಇವುಗಳು ವಿಶೇಷ ಅಧ್ಯಯನ ಮೂಲದ ದೃಷ್ಟಿಕೋನಗಳಾಗಿವೆ. ಇದೇ ಹಂತದಲ್ಲಿ ಬಿ.ಜಿ.ಎಲ್. ಸ್ವಾಮಿಯವರ "ಹಸಿರು ಹೊನ್ನು" ಕೃತಿಯನ್ನೂ (1983) ನೆನೆಯಬೇಕು. ಅಧ್ಯಯನಶೀಲತೆಯೇ ಪ್ರಧಾನ ಎಂಬಂತೆ ಸಸ್ಯಕ್ಷೇತ್ರದ ಅನ್ವೇಷಣೆಯ ದಾಖಲಾತಿ ಇದಾಗಿದೆ. ಪ್ರವಾಸ ಸಾಹಿತ್ಯದ ಹಿಂದಿರುವ ಸಿದ್ಧಾಂತಗಳ ನೆಲೆಗೊಂದು ಬಿನ್ನ ಒಳನೋಟವನ್ನು ಈ ಕೃತಿ ನೀಡುತ್ತದೆ.

90ರ ದಶಕದಲ್ಲಿ ಅನೇಕ ಮಹತ್ವದ ಪ್ರವಾಸ ಸಾಹಿತ್ಯ ಕೃತಿಗಳು ಪ್ರಕಟಗೊಂಡಿವೆ. ಲತಾಗುತ್ತಿಯವರ ಯುರೋನಾಡಿನಲ್ಲಿ (1986), ರುಕ್ಮಿಣಿಕುಮಾರಿಯವರ ಸುವರ್ಣ ಮಧುಚಂದ್ರ (1988), ವ್ಯಾಸರಾಯ ಬಲ್ಲಾಳರ ನಾನೊಬ್ಬ ಭಾರತೀಯ ಪ್ರವಾಸಿ (1989), ಸುಶೀಲಾ ಕೊಪ್ಪರ ಅವರ ಪಡುವಣ ಪತ್ರಮಾಲೆ (1989), ವಿ.ಕೃ.ಗೋಕಾಕರ ಪ್ರವಾಸ ಸಾಹಿತ್ಯ (1988), ರಾ.ಯ.ಧಾರವಾಡಕರರ ನಾಕಂಡ ಅಮೆರಿಕೆ (1988), ಜಿ.ಎಸ್.ಕಾಪಸೆ ಅವರ ಶಾಲ್ಮಲೆಯಿಂದ ಗೋದಾವರಿವರೆಗೆ (1989), ನಭ ಅವರ ನಾ ಕಂಡ ಕೆನ್ಯಾ (1986) ಮುಂತಾದುವುಗಳನ್ನು ಹೆಸರಿಸಬಹುದು.

ಯಜ್ಞವತಿ ಕೇಶವ ಕಂಗೆನ್ ಅವರ ಸ್ಮರಣೀಯ ಪ್ರವಾಸ (1991), ಹೇಮಲತಾ ಮಹಿಷಿ ಅವರ ಯುರೋದರ್ಶನ (1991), ಶಮಂತರ ನೇಪಾಳದ ಹಿಮಾಲಯ ಚಾರಣ ಅನುಭವ ನೀಡುವ ಗಿರಿಸ್ನೇಹ (1992), ಶಿವಲಿಂಗಮ್ಮ ಕಟ್ಟಿಯವರ ಲಂಡನ್ ಭೇಟಿ ಕುರಿತ ಪಡುವಣ ಪಯಣ (1993), ಪದ್ಮಾಶೆಣೈ ಅವರ ಅಮೆರಿಕವಾಸ - ಪ್ರವಾಸ (1993), ಬಿ.ಕೆ.ನರ್ಮದ ಅವರ ಸುಂದರಸ್ವಪ್ನ, ಅನಸೂಯಾ ರಾವ್ ಅವರ ಸುಂದರ ಕರ್ನಾಟಕ, ಜಯಾ ರಾಜಶೇಖರ ಅವರ ಶ್ರೀಲಂಕಾ - ಇಂಗ್ಲೆಂಡ್ ಅಮೆರಿಕಾ ಪ್ರವಾಸ ಕುರಿತ ಮರಳಿ ಬಂದ ಮಧುರ ಮಾಸ, ಟಿ.ಆರ್.ನಾಗಪ್ಪನವರ ದೇಶ ನೋಡು ಕೋಶ ಓದು (1992), ಜಾನಕಿ ಬ್ರಹ್ಮಾವರ ಅವರ ತಿರುಗಾಟದ ತಿರುಳು, ನನ್ನ ಪ್ರವಾಸ ಕಥನ ಮೊದಲಾದವು ಪ್ರವಾಸ ಸಾಹಿತ್ಯ ಪಟ್ಟಿಯಲ್ಲಿನ ಪ್ರಮುಖ ಸೇರ್ಪಡೆಗಳು.

ಉಳಿಯ ದನಿ ಕಡಲಮೊರೆ (1994) ಪಿ.ವಿ.ನಾರಾಯಣ ಅವರ ಒರಿಸ್ಸ ರಾಜ್ಯ ಪ್ರವಾಸ ಕುರಿತದ್ದು. ಎಚ್.ಎಸ್.ಮುಕ್ತಾಯಕ್ಕನವರ ಮದಿರೆಯ ನಾಡಿನಲ್ಲಿ ಎಂಬ ಕೃತಿಯಲ್ಲಿ ಗೋವೆಯ ಭೇಟಿಯ ಚಿತ್ರಣವಿದೆ. ದೇವಕೀ ಮೂರ್ತಿ ಅವರ ಯುರೋ-ಅಮೆರಿಕಾದ ಇಣುಕುನೋಟ (1994), ಪದ್ಮಗುರುರಾಜ್ ಅವರ ಕಾಂಗರೂಗಳ ನಾಡಿನಲ್ಲಿ (1995), ಲೀಲಾ ಮಿರ್ಲೆಯವರ ಪ್ರವಾಸ (1995), ಆರ್.ನಂಜುಂಡೇಗೌಡರ ಕೆರೆಬಿಯನ್ ಪ್ರವಾಸ, (1996)- ಈ ಕೃತಿಗಳು ನಮ್ಮ ಕುತೂಹಲವನ್ನು ತಣಿಸುತ್ತವೆ. ಕೆರೆಬಿಯನ್ ದ್ವೀಪದ ಸೊಬಗು, ಕಪ್ಪುಜನರ ಬದುಕು, ಕಾರ್ವಾಲ್ ಹಬ್ಬ, ಉತ್ತರ ಮತ್ತು ದಕ್ಷಿಣ ಅಮೆರಿಕಗಳ ನಡುವಣ ಭಾಗದ ಈ ದ್ವೀಪ ಸಮುಚ್ಚಯದಲ್ಲಿ ರೂಪುಗೊಂಡ ಬಗೆಯನ್ನು ಕೆರೆಬಿಯನ್ ಪ್ರವಾಸ ಎಂಬ ಕೃತಿ ಮನೋಜ್ಞವಾಗಿ ವಿಶ್ಲೇಷಿಸುತ್ತದೆ. ಹಿ.ಚಿ.ಬೋರಲಿಂಗಯ್ಯನವರ ಗಿರಿಜನ ನಾಡಿಗೆ ಪಯಣ (1991) ಕೃತಿ ಭಾರತದ ಎಲ್ಲೆಕಟ್ಟಿನೊಳಗೆ ಕರಾವಳಿಯ ಸುಂದರ ಗಿರಿಶಿಖರ ಶ್ರೇಣಿಗಳು, ಹಸುರು, ಸಾಗರ ನಡುಗಡ್ಡೆಯ ಸೊಬಗು, ಹವಳ ಕಣಿವೆಯ ಸೌಂದರ್ಯ, ಗೊಂಡರ ಜೀವನ-ಸಂಸ್ಕೃತಿ-ಪರಿಚಯ- ಹೀಗೆ ಅನೇಕ ದೃಷ್ಟಿಯಿಂದ ಅತ್ಯಂತ ಮಹತ್ವಪುರ್ಣ ಜನಪದ ಮಾಹಿತಿಯ ದಾಖಲೆಯಾಗಿದೆ.

ಜಿ.ಎನ್.ಮೋಹನ ಅವರ ನನ್ನೊಳಗಿನ ಹಾಡು ಕ್ಯೂಬಾ (2000) ಒಂದು ವಿಶಿಷ್ಟ ರೀತಿಯ ಪ್ರವಾಸ ಕೃತಿ. ಹೊಟ್ಟೆಯಲ್ಲಿ ಅಳುವಿಟ್ಟುಕೊಂಡು ಸದಾ ನಾದದ ಅಲೆಗಳ ಮೇಲೆ ನಿಂತಿರುವ ದೇಶ ಕ್ಯೂಬಾ ಎಂದು ಲೇಖಕರು ಹೇಳುವ ಮಾತು ಅರ್ಥಪುರ್ಣವಾಗಿದೆ. ಕ್ರಾಂತಿ ನಮ್ಮನ್ನು ಮನುಷ್ಯರನ್ನಾಗಿ ಮಾಡುತ್ತದೆ ಎಂದಿದ್ದ ಚೆಗೆವಾರನ ಮಾತಿನಂತೆ ಸೋಲುಗಳನ್ನು ಏಣಿ ಮಾಡಿಕೊಂಡು ಮೇಲೇರಿದ ಕ್ಯೂಬಾದ ದಣಿವಿನ ಕತೆಯನ್ನು ಇಲ್ಲಿ ಲೇಖಕರು ಆಪ್ತ ಧಾಟಿಯಲ್ಲಿ ವರ್ಣಿಸಿದ್ದಾರೆ.

ಕೆ.ಅನಂತರಾಮು ಅವರ ದಕ್ಷಿಣದ ಸಿರಿನಾಡು (1997), ಇಸ್ರೇಲಿನ ಸಾಧನೆಗಳ ರೋಚಕ ಇತಿಹಾಸವನ್ನೊಳಗೊಂಡ ಮತ್ತಿಹಳ್ಳಿ ನಾಗರಾಜರ ಮರುಭೂಮಿ ಚಿಗುರಿತು (2000), ಎಸ್.ಎಲ್.ಕುಲಕರ್ಣಿ ಯವರ ಭಾರತ ದರ್ಶನ (2000), ಭಾರತಿ ಭಟ್ ಅವರ ನನ್ನ ಬೆಲ್ಜಿಯಂ ಪ್ರವಾಸ (2000), ಕೆ.ಜಿ.ಗುರುಮೂರ್ತಿ ಅವರ ಅಮೆರಿಕೆಯಲ್ಲಿ ಪ್ರವಾಸ (2000), ವಿಜಯಾ ಸುಬ್ಬರಾಜ್ರ ಸ್ವರ್ಗ ದ್ವೀಪದ ಕನಸಿನ ಬೆನ್ನೇರಿ ಮುಂತಾದ ಕೃತಿಗಳು ವಿಷಯನಿರೂಪಣೆ, ಕುತೂಹಲದ ವರ್ಣನೆಗಳಿಂದ ನಮ್ಮ ಗಮನವನ್ನು ಸಾಕಷ್ಟು ಸೆಳೆಯುತ್ತವೆ.

ಕೆ.ಪಿ.ಪುರ್ಣಚಂದ್ರ ತೇಜಸ್ವಿಯವರ ಅಲೆಮಾರಿಯ ಅಂಡಮಾನ್ ಹಾಗೂ ಮಹಾನದಿ ನೈಲ್ (1990) ಎಂಬ ಕೃತಿಗಳು ಪ್ರವಾಸ ಸಾಹಿತ್ಯದ ಏಕಮುಖ ಏಕತಾನವನ್ನು ಮೀರಿದ ಕೃತಿಗಳು. ಇಲ್ಲಿನ ಕಥನತಂತ್ರ ಹೊಸ ರೀತಿಯ ವಸ್ತು, ಶೋಧನೆ, ಅನುಭವದ ಆಳ ವಿಸ್ಮಯಗೊಳಿಸುವಂಥವು. ಜಿ.ಟಿ.ನಾರಾಯಣರಾಯರ ಸಪ್ತ ಸಾಗರದಾಚೆಯೆಲ್ಲೋ (1999) ವಿಜ್ಞಾನ ವಾಙ್ಮಯದ ಮತ್ತೊಂದು ಮಗ್ಗುಲಿನ ಪರಿಶೋಧನೆಯೇ ಆಗಿದೆ. ಎಸ್.ಸಂಧ್ಯಾ ಅವರು ಹಲವು ಕಾಲಗಳ ನಾಡು- ಗುಜರಾತು (1997), ಕಾಶ್ಮೀರದ ತಲ್ಲಣದ ಚಿತ್ರ ನೀಡುವ ಶಮಂತ ಅವರ ಹಿಮದಗ್ನಿ (1996), ಜಯಾ ಕಲ್ಬಾಗಲ್ ಅವರ ಅಮೆರಿಕದಲ್ಲಿ 67ರ ಹುಟ್ಟುಹಬ್ಬ, ಸಿದ್ಧರಾಮ ಹೊನ್ನಲ್ ಅವರ ಪಂಜಾಬು ಕುರಿತ ಪಂಚನದಿಗಳ ನಾಡಿನಲ್ಲಿ (1996), ಶಂಕರ ಪಾಟೀಲರ ಹಿಮಾಚಲದ ಹಿನ್ನೆಲೆಯಲ್ಲಿ (1997), ಪಿ.ವಿ.ಕೃಷ್ಣಮೂರ್ತಿಯವರ ವಿಂಧ್ಯ ನರ್ಮದೆಯರ ನಾಡಿನಲ್ಲಿ (1999), ಎಚ್.ಎಸ್.ಗೋಪಾಲರಾವ್ ಅವರ ಗೋದಾವರಿಯ ಆಸುಪಾಸಿನಲ್ಲಿ (1999), ದೇಜಗೌ ಅವರ ಸ್ವಿಟ್ಸರ್ಲೆಂಡ್ ಕುರಿತ ನಿಚ್ಚ ಹಸುರಿನ ನಾಡಿನಲ್ಲಿ, ವಸಂತೀ ಚಂದ್ರರ ಕನಕಕ್ಷೇತ್ರ-ಕರ್ನಾಟಕ ಭಾಗ-1 (1999), ನೀಳಾದೇವಿಯರ ಮಕ್ಕಳಿಗೆಂದೇ ಬರೆದ ಸಬಲನ ವಿದೇಶ ಪ್ರವಾಸ (1997), ಕುಲಶೇಖರಿ ಅವರ ಅಮೆರಿಕ ಕುರಿತ ಬೊಗಸೆ ಬುತ್ತಿ, ಶ್ವೇತಾಕೋಟಿ ಅವರ ಪುಟಾಣಿಯ ಕಂಗಳಲ್ಲಿ ನೂರು ಬಣ್ಣಗಳು (1997), ವಿಜಯಾದಬ್ಬೆ ಅವರ ಒರಿಸ್ಸ ಕುರಿತ ಉರಿಯ ಚಿಗುರ ಉತ್ಕಲೆ (1998), ದೊಡ್ಡಿ ಸಾರಾಬಾಯಿ ಅವರ ತೀರ್ಥಕ್ಷೇತ್ರ ಮಹಿಮೆ (1998), ಬಿ.ಎನ್.ಸುಮಿತ್ರಾಬಾಯಿ ಅವರ ಅಸ್ಸಾಂ ಕುರಿತ ಬ್ರಹ್ಮಪುತ್ರದ ಕಣಿವೆಯಲ್ಲಿ, ವನಜ ರಾಜನ್ ಅವರ ಕಣ್ಣಂಚಿನಲ್ಲಿ ಪುರ್ವ ಪಶ್ಚಿಮ (1998), ಶಿವಲಿಂಗಮ್ಮ ಕಟ್ಟಿ ಅವರ ಬೆಳಕಿನೆಡೆಗೆ (1998), ಲೀಲಾವತಿ ದೇವದಾಸರ ಏಸುವಿನ ತಾಣವಾದ ಇಸ್ರೇಲ್ ಕುರಿತಾದ ಪವಿತ್ರನಾಡಿನಲ್ಲಿ ಪ್ರವಾಸ (1999), ಶಾರದಾ ಹೆಮ್ಮಿಗೆ ಅವರ ಕರ್ನಾಟಕದ ಒಂದು ನಿರ್ದಿಷ್ಟ ದಿಕ್ಕಿನ ಹಳ್ಳಿಯ ಸುತ್ತಮುತ್ತ (1999), ನೇಮಿಚಂದ್ರರು ಹೇಮಲತಾ ಮಹಿಷಿಯವರೊಂದಿಗೆ ಕೈಗೊಂಡ ಯುರೋಪಿನ ಪ್ರವಾಸ ವಿಶೇಷವಾಗಿ ಮಹಿಳಾ ಸಾಹಿತಿ, ವಿಜ್ಞಾನಿ , ಕಲೆಗಾರರುಗಳ ಬಗೆಗಿನ ವಿವರಗಳನ್ನೂ ಒಳಗೊಂಡ ಒಂದು ಕನಸಿನ ಪಯಣ (1999), ವಸಂತೀ ಚಂದ್ರರ ಅಮೆರಿಕ ಕುರಿತ ಭೋಗಭೂಮಿಯ ಮಡಿಲಲ್ಲಿ ಭಾಗ-1 (1999), ಪ್ರವೀಣ್ ಫರ್ನಾಂಡಿಸ್ ಅವರ ಜಪಾನ್ ಕುರಿತ ಕಣ್ಣು ಕುಕ್ಕುವ ಜಪಾನ್ (1998), ಎಸ್.ವಿ.ಶ್ರೀನಿವಾಸರಾವ್ ಅವರ ಅಮೆರಿಕ ಕುರಿತ ಇಣುಕು ನೋಟ (1997), ಲತಾಗುತ್ತಿ ಅವರ ನಾ ಕಂಡ ಅರೇಬಿಯಾ (1995) ಎಸ್.ಕೇಶವಮೂರ್ತಿ ಅವರ ನೇಪಾಳ ಯಾತ್ರೆ (2000), ವಿಜಯಾ ಸುಬ್ಬರಾವ್ ಅವರ ಅಂಡಮಾನ ಪ್ರವಾಸ ಕುರಿತ ಸ್ವರ್ಗದ್ವೀಪದ ಕನಸಿನ ಬೆನ್ನೇರಿ (2000), ಇಂದಿರಾ ಶಿವಣ್ಣ ಅವರ ಹಾಲೆಂಡ್ನಿಂದ ಲಂಡನ್ವರೆಗೆ (2001), ಎಸ್.ಕೇಶವಮೂರ್ತಿ ಅವರ ಉತ್ತರಾಖಂಡದ ಯಾತ್ರೆ (2000), ಬಿ.ವಿ.ನಾಗರಾಜರ ಕೆನಡಾದಲ್ಲಿ ಬಿ.ವಿ.ದಿನಚರಿ (1999), ದೇಜಗೌ ಅವರ ಅಲಾಸ್ಕ ಪ್ರವಾಸ ಕುರಿತ ಜಗತ್ತಿನ ನಡುನೆತ್ತಿಯ ಮೇಲೆ (1999), ಮುಂತಾದ ಕೃತಿಗಳನ್ನು ಗಮನಿಸಿದರೆ ವಿಶೇಷವಾಗಿ ಈ ಅವದಿಯಲ್ಲಿ ಬಂದ ಮಹಿಳಾ ಪ್ರವಾಸ ಕಥನಕಾರರ ಸಂಖ್ಯೆ, ಸಾಧನೆ, ಕೌಶಲ ಗಮನಸೆಳೆಯುವಂಥದ್ದು. 2001-2003ರ ಅವದಿಯಲ್ಲಿಯೂ ಹಲವು ಕೃತಿಗಳು ಈ ಕ್ಷೇತ್ರದಲ್ಲಿ ಪ್ರಕಟವಾಗಿವೆ. ರಹಮತ್ ತರೀಕೆರೆ ಅವರ ಅಂಡಮಾನ್ ಕನಸು (2001), ಬಿ.ಎಸ್.ಸಣ್ಣಯ್ಯನವರ ನಾನೂ ಹೋಗಿದ್ದೆ ಅಮೆರಿಕೆಗೆ (2001), ಜಲಜಾ ಗಂಗೂರ್ರವರ ಅವನಿಯ ಅಪ್ಸರೆ ಅಮೆರಿಕ (2001),

ಸುಧಾಮೂರ್ತಿ ಅವರ ಕಾವೇರಿಯಿಂದ ಮೆಕಾಂಗಿಗೆ (2001), ಹಕ್ಕಿಯ ತೆರದಲಿ (2001), ಆರ್ಯಾಂಬ ಪಟ್ಟಾಬಿ ಅವರ ವಿದೇಶ ಪ್ರವಾಸ (2001), ಸಾರಾ ಅಬೂಬಕರ್ ಅವರ ಐಷಾರಾಮದ ಆಳದಲ್ಲಿ (2001), ಪಿ.ಎಂ.ಹೆಗ್ಗಡೆಯವರ ಆಲ್ಮನೆಯಿಂದ ಆ್ಯನ್ ಆರ್ಬರ್ಗೆ (2002), ಚಂದ್ರಶೇಖರ ಆಲೂರರ ಅಮೆರಿಕಾದಲ್ಲಿ ಆಲೂರು (2002), ಕೃಷ್ಣಾನಂದ ಕಾಮತರ ನಾನೂ ಅಮೆರಿಕೆಗೆ ಹೋಗಿದ್ದೆ (2002), ಕೆ.ರಾಮಣ್ಣ ಅವರ ಜಗವ ಸುತ್ತಿ ನಲಿ - ಜನರ ನೋಡಿ ಕಲಿ (2002), ಶಾಂತಾ ನಾಗರಾಜರ ಸಿಂಗಾಪುರ, ಮಲೇಷಿಯಾ ಕುರಿತ ಯಾನ ಸಂಸ್ಕೃತಿ (2002)- ಅಜ್ಜಂಪುರ ಕೃಷ್ಣಸ್ವಾಮಿಯವರ ಜಪಾನ್ (2002), ಸುಮನಾ ವಿಶ್ವನಾಥ್ರವರ ಮತ್ತೂರರೊಂದಿಗೆ ಕಾಶಿಯಾತ್ರೆ (2002), ಕೆ.ಸಿ.ಲಕ್ಷೀನರಸಿಂಹಯ್ಯ ಅವರ ನಾ ಕಂಡ ಭಾರತ (ವಿಸ್ತೃತ-2002), ಜಗದಂಬಾ ಮಲ್ಲೆದೇವರು ಅವರ ಪಯಣಿಗಳಾಗಿ ಪಶ್ಚಿಮದೆಡೆಗೆ (2002), ನಾಗತಿಹಳ್ಳಿ ಚಂದ್ರಶೇಖರ ಅವರ ಅಮೆರಿಕಾ ಅಮೆರಿಕಾ (2002), ಪಿ.ವಿ.ನಾರಾಯಣ ಅವರ ಭುವಿಯ ಬಸಿರಿಗೆ ಪಯಣ (2002), ವಾಣಿರಾವ್ ಅವರ ಹಿಮಗಿರಿಯ ಶಿಖರದ ಮೇಲೆ (2002), ಡಿ.ವಿ.ಗುರುಪ್ರಸಾದರ ಯೂರೋಪಿನಿಂದ ಆಸ್ಟ್ರೇಲಿಯಾವರೆಗೆ ವಿಶ್ವಪರ್ಯಟನಾ ದಿನಚರಿ (2002), ಕೆ.ಮರುಳಸಿದ್ಧಪ್ಪ ಅವರ ನೋಟ ನಿಲುವು (2002), ಪ್ರಭಾಮೂರ್ತಿಯವರ ಹಸಿರು ಹವಳ (2002), ಜೀ.ವಿ.ಕುಲಕರ್ಣಿಯವರ ಜೀವಿ ಕಂಡ ಅಮೆರಿಕ (2002), ಸಿದ್ಧರಾಮ ಹೊನ್ಕಲ್ ಅವರ ಕನ್ಯಾಕುಮಾರಿಯಿಂದ ಹಿಮಾಲಯದೆಡೆಗೆ (2002), ಎಸ್.ಪಿ.ಪದ್ಮಪ್ರಸಾದ್ ಅವರ ರಾಜಾಸ್ಥಾನದ ಜೈನ ಮಂದಿರಗಳು (2002), ವೆಂಕಟೇಶ ಮಾಚಕನೂರು ಅವರ ಥೇಮ್ಸ್‌ನಿಂದ ಟೈಬರ್ವರೆಗೆ (2002), ಸುನೀತಾ ಎಂ.ಶೆಟ್ಟಿ ಅವರ ಪ್ರವಾಸಿಯ ಹೆಜ್ಜೆಗಳು (2002), ವಸಂತರಾಜ್.ಎನ್.ಕೆ. ಅವರ ಅಮೆರಿಕಾದೊಳಗೊಂದು ಇಣುಕು (2001), ಮೀನಾ ಮೈಸೂರು ಅವರ ಫ್ರಾನ್ಸ್‌ಪ್ರವಾಸದ ಎತ್ತಣಿಂದೆತ್ತ (2003), ಮೊಳಕಾಲ್ಮೂರು ಶ್ರೀನಿವಾಸಮೂರ್ತಿಯವರ ಬುದ್ಧನೊಡನೆ ಇಪ್ಪತ್ತು ದಿನಗಳು (2003) ಎಚ್.ಎಂ.ನಾಗರಾಜುರವರ ಸೂರ್ಯ ಮುಳುಗದ ಸಾಮ್ರಾಜ್ಯದಲ್ಲಿ ಮೊದಲಾದ ಕೃತಿಗಳು ನಿರಂತರವಾಗಿ ಹುಲಸಾಗಿ ಬೆಳೆಯುತ್ತ ಸಾಗಿರುವ ಪ್ರವಾಸ ಸಾಹಿತ್ಯದ ದಿಕ್ಸೂಚಿಯಾಗಿದೆ ಎನ್ನಬಹುದು.

ಪ್ರವಾಸ ಸಾಹಿತ್ಯದ ಹಲವು ಉತ್ತಮ ಅನುವಾದ ಗ್ರಂಥಗಳು ಕನ್ನಡಕ್ಕೆ ಬಂದಿವೆ. ಬಂಗಾಲಿ ಲೇಖಕ ಪ್ರಬೋಧಕುಮಾರ ಸನ್ಯಾಲರ ಪ್ರವಾಸ ಪ್ರಬಂಧವನ್ನು ಎಂ.ಕೆ.ಭಾರತೀರಮಣಾಚಾರ್ಯರು ಮಹಾಪ್ರಸ್ಥಾನದ ಪಥದಲ್ಲಿ ಎಂಬ ಹೆಸರಿನಿಂದ ಕನ್ನಡಕ್ಕೆ ತಂದಿದ್ದಾರೆ. ಇದು ಒಂದು ಉತ್ತಮ ಕಾದಂಬರಿಯಂತಿದೆ. ಸಾಮ್ಯುಯಲ್ ಎಲಿಯೆಟ್ ಮಾರಿಸನ್ರವರ ನಾವಿಕ ಕ್ರಿಸ್ಟೊಫರ್ ಕೊಲಂಬಸ್ ಗ್ರಂಥವನ್ನು ಎಚ್.ವಿ.ನಾರಾಯಣ ರಾಯರು, ಥಾರ್ ಹೆಯರ್ ಡಾಹಾಲ್ರ ಕಾಂಟಕಿಯ ಸಾಹಸವನ್ನು ಎಚ್.ಎನ್.ಮಾಧವರಾವ್ ಅವರೂ ಕನ್ನಡಕ್ಕೆ ಅನುವಾದಿಸಿದ್ದಾರೆ. ಸ್ವಾಮಿ ವಿವೇಕಾನಂದರ ಕೊಲಂಬೊ ಇಂದ ಆಲ್ಮೋರಕ್ಕೆ ಮತ್ತು ಜವಹರಲಾಲ್ ನೆಹರುರವರ ಮಗಳಿಗೆ ತಂದೆಯ ಓಲೆಗಳು ಎಂಬೆರಡು ಕೃತಿಗಳು ಕೂಡ ಕನ್ನಡದಲ್ಲಿ ಪ್ರಕಟವಾಗಿದ್ದು ಪ್ರವಾಸ ಸಾಹಿತ್ಯದ ಹರವಿಗೂ ಬರಬಹುದಾದ ಗ್ರಂಥಗಳಾಗಿವೆ.

ಪ್ರದೀಪ ಕೆಂಜಿಗೆಯವರ ಅದ್ಭುತಯಾನ (1995), ಬಿ.ಜಿ.ಎಲ್.ಸ್ವಾಮಿ ಅವರ ನಡೆದಿಹೆ ಬಾಳೌ ಕಾವೇರಿ (2001) ಎಂಬ ಕೃತಿಗಳನ್ನು ಈ ನಿಟ್ಟಿನಲ್ಲಿ ಉಲ್ಲೇಖಿಸಬಹುದು. (ಜಿ.ಎನ್.)