ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ಭಾವಗೀತೆ
ಕನ್ನಡದಲ್ಲಿ ಭಾವಗೀತೆ : ಭಾವಗೀತೆ ಎಂಬ ಸಾಹಿತ್ಯ ರೂಪ ಮೂಲತಃ ಕನ್ನಡದ್ದಲ್ಲ. ಮೊದಲು ಗ್ರೀಕ್ ಭಾಷೆಯಲ್ಲಿ ಪ್ರಚುರವಾದ ಈ ಸಾಹಿತ್ಯರೂಪ ಅನೇಕ ಶತಮಾನಗಳ ಅನಂತರ ಇಂಗ್ಲಿಷ್ ಭಾಷೆಯಲ್ಲಿ ಸಮೃದ್ಧವಾಗಿ ಬೆಳೆಯಿತು. ಇಂಗ್ಲಿಷ್ ಸಾಹಿತ್ಯದ ಪ್ರಭಾವ ಕನ್ನಡದ ಮೇಲೆ ಆದಂತೆ ಅಲ್ಲಿ ಲಿರಿಕ್ ಎಂದು ಕರೆಯುತ್ತಿದ್ದ ಈ ವಿಧಾನವನ್ನು ಇಲ್ಲಿ ಸ್ವೀಕರಿಸಿ ಭಾವಗೀತೆ ಎಂದು ಕರೆಯಲಾಯಿತು. ಕನ್ನಡದ ಅನೇಕ ಪ್ರತಿಭಾಶಾಲಿ ಕವಿಗಳು ವಿಪುಲ ಸಂಖ್ಯೆಯಲ್ಲಿ ಶ್ರೇಷ್ಠಮಟ್ಟದ ಭಾವಗೀತೆಗಳನ್ನು ರಚಿಸಿದ್ದಾರೆ. ಕಾದಂಬರಿ ಕ್ಷೇತ್ರವನ್ನು ಬಿಟ್ಟರೆ ಇಷ್ಟು ಪುಷ್ಟವಾಗಿ ಬೆಳೆದ ಮತ್ತೊಂದು ಸಾಹಿತ್ಯ ಪ್ರಕಾರ ಹೊಸಗನ್ನಡದಲ್ಲಿ ಇಲ್ಲ.
ಕನ್ನಡಿಗರಿಗೆ ಈ ಸಾಹಿತ್ಯ ಪ್ರಕಾರವನ್ನು ಸ್ಫೂರ್ತಿದಾಯಕವಾದ ರೀತಿಯಲ್ಲಿ ಪರಿಚಯ ಮಾಡಿಸಿದ ಕೀರ್ತಿ ಐದಾರು ಜನ ಸಾಹಿತಿಗಳಿಗೆ ಸಲ್ಲುವುದಾದರೂ ಅವರಲ್ಲಿ ಅಗ್ರಗಣ್ಯ ರಾದವರು ಬಿ.ಎಂ. ಶ್ರೀಕಂಠಯ್ಯನವರು. ಅಬಿನಂದನೀಯವಾದ ಈ ಕಾರ್ಯದಲ್ಲಿ ತೊಡಗಿದ್ದ ಇತರ ಸ್ಮರಣೀಯ ವ್ಯಕ್ತಿ ಗಳೆಂದರೆ ಎಸ್.ಜಿ. ನರಸಿಂಹಾ ಚಾರ್ಯರು, ಪಂಜೆ ಮಂಗೇಶರಾಯರು, ಹಟ್ಟಿಯಂಗಡಿ ನಾರಾಯಣರಾಯರು, ಎಂ.ಗೋವಿಂದ ಪೈ ಅವರು ಹಾಗೂ ಡಿ.ವಿ.ಗುಂಡಪ್ಪನವರು. ಇವರಲ್ಲಿ ಅನೇಕರು ಅನುವಾದಕ್ಕೆ ಕನ್ನಡದ ಹಳೆಯ ಛಂದೋರೂಪಗಳನ್ನೇ ಬಳಸಿಕೊಂಡರು. ಇವರಲ್ಲಿ ಪ್ರಾಸತ್ಯಾಗದ ದೀರ ನಿರ್ಧಾರವನ್ನು ಕೈಗೊಂಡವರು ಗೋವಿಂದ ಪೈ ಅವರು. 1911ರ ಸುಮಾರಿಗೆ ಅವರು ಪ್ರಾಸವನ್ನು ಬಿಡುವುದಾಗಿ ತೀರ್ಮಾನಿಸಿದರು. ಅಂದಿನ ದಿನಕ್ಕೆ ಅದು ಸಾಹಸದ ಮಾತು. ಹೀಗೆ ಮಾಡಿದುದಕ್ಕೆ ಅವರು ಕೊಟ್ಟ ಕಾರಣ ‘ಕನ್ನಡಕ್ಕೆ ಪ್ರಾಸವೇನು ವೇದವಾಕ್ಯವು ಅಲ್ಲ, ಶಾಶ್ವತವೂ ಅಲ್ಲ, ಅದನ್ನು ಬೇಕಾದಾಗ ಬೇಕಾದಂತೆ ಬಿಟ್ಟುಬಿಡಬಹುದು’ ಎಂದು. ಈ ಪ್ರಾಸತ್ಯಾಗ ಕವಿಯ ಭಾವಗಳು ನಿರರ್ಗಳವಾಗಿ ಹರಿಯಲು ಅವಕಾಶ ಮಾಡಿಕೊಟ್ಟಿತು.
ಹಟ್ಟಿಯಂಗಡಿ ನಾರಾಯಣರಾಯರು 1900ಕ್ಕೆ ಮುಂಚೆಯೇ ಕಾಲಿನ್ಸ್, ಗ್ರೇ, ಟೈಲರ್, ಷೆಲ್ಲಿ, ಕೀಟ್ಸ್, ವಡ್ರ್ಸ್‌ವರ್ತ್, ಲಾಂಗ್ಫೆಲೋ, ವ್ಹಿಟ್ಟಿಯರ್ ಮತ್ತು ಎಮರ್ಸನ್ ಮುಂತಾದ ಕವಿಗಳ ಕವನಗಳನ್ನು ಅನುವಾದ ಮಾಡಿದ್ದರು. ಆದರೆ ಇವರ ಕವನಗಳು ಅಚ್ಚಾದದ್ದು ಮಾತ್ರ ಕೆಲವು ವರ್ಷಗಳ ಅನಂತರ. ಇವರಲ್ಲಿ ಮೂಲದ ಭಾವಗಳನ್ನು ಸಂಗ್ರಹಿಸುವ ಪ್ರವೃತ್ತಿ ಇದ್ದುದರಿಂದ ಮೂಲದ ಎಷ್ಟೋ ಸುಂದರವಾದ ಭಾವಗಳು ಅನುವಾದದಲ್ಲಿ ಹಾರಿಹೋಗಿವೆ. ಅನುವಾದ ಬಹುಮಟ್ಟಿಗೆ ವಿಫಲವಾಗಿದೆ. ‘ಆದರೆ ಈ ಪ್ರಥಮ ಪ್ರಯತ್ನದ ಸೋಲಿಗೂ ಚಾರಿತ್ರಿಕವಾಗಿ ವಿಶೇಷವಾದ ಪ್ರಾಮುಖ್ಯತೆಯಿದೆ. ಇದರ ಹಿಂದೆ ಕನ್ನಡದ ಏಳಿಗೆಗಾಗಿ, ಕನ್ನಡದಲ್ಲಿ ನೂತನ ಮಾರ್ಗವನ್ನು ತೆರೆಯುವುದಕ್ಕಾಗಿ ಆಳವಾಗಿ ಆಲೋಚಿಸುವ ನಿರಂತರವೂ ಶ್ರಮಿಸುವ’ ಚೇತನಮೊಂದು ಇದೆ ಎಂಬುದನ್ನು ನಾವು ಮರೆಯುವಂತಿಲ್ಲ.
ಆಧುನಿಕ ಕನ್ನಡ ಕಾವ್ಯ ಪ್ರಪಂಚಕ್ಕೆ ಹೊಸದೊಂದು ಹೆದ್ದಾರಿಯನ್ನು ತೆರೆದು ಚಿರಂಜೀವಿಯಾಗುವ ಸತ್ವವನ್ನು ತಳೆದಿರುವ ಕೃತಿ ಬಿ.ಎಂ.ಶ್ರೀ.ಅವರ ಇಂಗ್ಲಿಷ್ ಗೀತಗಳು. ಇಂಗ್ಲಿಷ್ನ ನ್ಯಾಷ್, ಬ್ರಿಡ್ಜಸ್, ಷೆಲ್ಲಿ, ಕೀಟ್ಸ್, ವಡ್ರ್ಸ್‌ವರ್ತ್, ಕೋಲ್ರಿಜ್, ಲೇಡಿ ಲಿಂಡ್ಸ್ ಮೊದಲಾದ ಕವಿಗಳ ಕವನಗಳನ್ನು ಸೊಗಸಾದ ರೀತಿಯಲ್ಲಿ ಶ್ರೀಯವರು ಅನುವಾದ ಮಾಡಿದ್ದಾರೆ. ಇಂಗ್ಲಿಷ್ ಗೀತಗಳು ಸಂಕಲನವನ್ನು ಸ್ವಾಗತಿಸುತ್ತ ‘ಆಂಗ್ಲೇಯ ಸಾಹಿತ್ಯವನ್ನು ಕಾಣದೆ ಇರುವವರಿಗೆ ಆ ಸಾಹಿತ್ಯದ ಐಶ್ವರ್ಯವೆಂಥದೆಂದು ತಿಳಿಯುವುದಕ್ಕೆ ಕನ್ನಡದಲ್ಲಿ ಇಂಥ ಒಂದು ಭಾಷಾಂತರ ಬೇಕಾಗಿತ್ತು. ಈ ಅತ್ಯವಶ್ಯಕವಾದ ಕಾರ್ಯವನ್ನು ಕೈಗೊಂಡಿದ್ದಕ್ಕಾಗಿ ಕನ್ನಡಿಗರು ಗ್ರಂಥಕರ್ತರನ್ನು ವಂದಿಸಬೇಕಾಗಿದೆ. ಶ್ರೀಕಂಠಯ್ಯನವರು ಪ್ರಯೋಗಿಸಿರುವ ಛಂದೋರೂಪಗಳು ಸುಂದರವಾಗಿವೆ; ಕಾವ್ಯ ವಸ್ತುವಿಗೆ ಅನುಕೂಲ ವಾಗಿವೆ; ಕನ್ನಡದ ಮರ್ಯಾದೆಗೆ ಒಪ್ಪಿವೆ. ಮುಖ್ಯವಾಗಿ ಶೈಲಿಯಲ್ಲಿಯೂ ಛಂದಸ್ಸಿನಲ್ಲಿಯೂ ಶ್ರೀಕಂಠಯ್ಯನವರು ಮಾರ್ಗದರ್ಶಿಗಳು. ಇನ್ನು ಮೇಲೆ ಬರುವ ಕವಿಗಳು ಇವರು ತೋರಿಸಿಕೊಟ್ಟಿರುವ ದಾರಿಯಲ್ಲಿ ಹೆಚ್ಚು ಹೆಚ್ಚಾಗಿ ನಡೆಯುವರೆಂಬುದರಲ್ಲಿಯೂ ಇದರಿಂದ ನಮ್ಮ ಸಾಹಿತ್ಯವು ಪಂಡಿತರಿಗೆ ಮಾತ್ರವಲ್ಲದೆ ಈಗಿನದಕ್ಕಿಂತ ಹೆಚ್ಚಾಗಿ ಜನಸಾಮಾನ್ಯಕ್ಕೆ ನಿಲುಕುವಂತಾಗುತ್ತದೆಂ ಬುದರಲ್ಲಿಯೂ ಸಂದೇಹವಿಲ್ಲ’ ಎಂದು ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಬರೆದ ಮಾತುಗಳು ಈ ಕೃತಿಯ ಮಹತ್ತ್ವವನ್ನು ಸೂಚಿಸುತ್ತವೆ. ‘ವಿಮರ್ಶಕರ ನಿರೀಕ್ಷೆ ನಿಷ್ಫಲವಾಗಲಿಲ್ಲ. ಕೃತಿಯ ಅಂತರ್ನಿಹಿತವಾದ ಶಕ್ತಿಯ ಪ್ರಭಾವದಿಂದಲೂ ಸಹೃದಯರ ಮತ್ತು ವಿಮರ್ಶಕರ ತೋಲನ ದಕ್ಷತೆಯಿಂದಲೂ ಕನ್ನಡದ ಅಗತ್ಯದಿಂದಲೂ ಮಾರ್ಗದರ್ಶನದ ಕಠಿಣ ಕಾರ್ಯವನ್ನು ಸಾಮಾನ್ಯ ಜನಮನದ ನಿರೀಕ್ಷಣೆಯನ್ನು ಮೀರಿದ ಮಹತ್ ಪ್ರಮಾಣದಲ್ಲಿ ಈ ಕೃತಿ ಸಾದಿಸಿತು’. ಕೆಲವು ಕನ್ನಡ ಕವಿಗಳು ಕಾವ್ಯಾಬಿವ್ಯಕ್ತಿಯ ಹೊಸ ಮಾಧ್ಯಮಕ್ಕಾಗಿ ಸ್ವಂತವಾಗಿ ಪ್ರಯೋಗಗಳನ್ನು ನಡೆಸುತ್ತಿದ್ದರು. ಇಂಗ್ಲಿಷ್ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ್ದ ಕುವೆಂಪು ಅವರೂ ಅಂಥವರಲ್ಲಿ ಒಬ್ಬರು. ತಾವು ಕೂಡ ನೂತನ ಛಂದೋವೈವಿಧ್ಯಗಳನ್ನು ಕುರಿತು ಸ್ವತಂತ್ರವಾಗಿ ಪ್ರಯೋಗಗಳಲ್ಲಿ ತೊಡಗಿದ್ದರೆಂದು ಅವರು ಹೇಳುತ್ತಾರೆ. ಆದರೂ ಎಲ್ಲರಿಗೂ ಸ್ಪಷ್ಟವಾದ ಒಂದು ಮಾರ್ಗದರ್ಶನ ಶ್ರೀಯವರ ಇಂಗ್ಲಿಷ್ ಗೀತಗಳಿಂದ ದೊರಕಿತು ಎಂಬುದರಲ್ಲಿ ಭಿನ್ನಾಬಿಪ್ರಾಯಗಳಿಲ್ಲ.
ಇಂಗ್ಲಿಷ್ ಗೀತಗಳು ಮುಖ್ಯವಾಗಿ ಸಾದಿಸಿ ತೋರಿಸಿದ ಅಂಶಗಳು ಎರಡು. ಮೊದಲನೆಯದು, ಕನ್ನಡ ಅದುವರೆಗೆ ಕಾಣದಿದ್ದ ವಸ್ತು ವೈವಿಧ್ಯವನ್ನು ನಮ್ಮ ಜನದ ಮುಂದೆ ತೆರೆದಿಟ್ಟದ್ದು. ಎರಡನೆಯದು, ಹಳೆಯ ಮಾತ್ರಾಗಣಗಳನ್ನು ಆಧಾರವಾಗಿಟ್ಟುಕೊಂಡು ಹೊಸ ಹೊಸ ರೂಪವೈವಿಧ್ಯವನ್ನು ತರಬಹುದು ಎಂದು ತೋರಿಸಿದ್ದು.
ವಸ್ತುವಿನ ನೂತನತೆಯ ಬಗೆಗೆ ಒಂದು ಮಾತನ್ನು ಒತ್ತಿ ಹೇಳಬೇಕಾದ ಅಗತ್ಯವಿದೆ. ಈ ಶತಮಾನದ ಆದಿಯಲ್ಲಿ ಕೆಲವರಾದರೂ ಕವಿಗಳು ವಸ್ತುವಿನಲ್ಲಿ ನೂತನತೆಯನ್ನು ತರಲು ಪ್ರಯತ್ನಿಸಿದ್ದರು ಎಂಬುದಕ್ಕೆ ಆಧಾರಗಳಿವೆ.
ರೈಲನ್ನು ಕುರಿತು ಎಸ್.ಜಿ.ನರಸಿಂಹಾಚಾರ್ಯರು ಬರೆದ ಹೊಗೆಯಗಾಡಿ ಎಂಬ ಕವಿತೆ ಚೌಪದದಲ್ಲಿದೆ. ಅದರ ಕೆಲವು ಪಂಕ್ತಿಗಳು: ನೊಗವನೆತ್ತಿನ ಕೊರಳೊಳಿಡುವ ಪಾಡಿಲ್ಲ ಬಿಗಿದ ಕುದುರೆಯ ಹೂಡುವಾಯಾಸವಿಲ್ಲ ಮಿಗೆ ಕಾದ ನೀರ ಹಬೆಯಿಂದ ಬಲುಬೇಗ ಹೊಗೆಯ ಗಾಡಿಯು ನೋಡು ಹೋಗುತಿಹುದೀಗ
ರೈಲನ್ನು ಕುರಿತು ಆಸ್ಥಾನ ವಿದ್ವಾನ್ ಜಯರಾಯಾಚಾರ್ಯರು ಬರೆದ ರೈಲುಗಾಡಿ ಎಂಬ ಪದ್ಯ: ಓಡುತಿರ್ಪುದು| ರೈಲು || ಪಲ್ಲವಿ || ನೋಡು ಕೂಡಿರುವ ಜನರ| ಗಾಡಿಯನೊಳಕೊಂಡು ಬೇಗ || ಅನುಪಲ್ಲವಿ || ಮುಂದಿನಿಂಜಿನಲ್ಲಿ ಬೆಂಕಿ ಯೊಂದೆಡೆಯೊಳಗಾ ಬೆಂಕಿ ಯಿಂದ ನೀರು ಕಾಯ್ದು ಹಬೆಯು| ಬಂದಪುದಾ ಹಬೆಯ ಬಲದಿ||
ಸಿದ್ದೇಶ್ವರ ಮಳೀಮಠ ಎಂಬವರು ಅತ್ಯದಿsಕ ಸಂತಸದಿಂದ ಇಪ್ಪತ್ತು ರೌಪ್ಯವ ಕೊಟ್ಟು ಕೊಂಡ ಕಾಲುಗಾಡಿ (ಸೈಕಲ್)ಯ ಸವಾರಿಯನ್ನು ಕುರಿತು ರಚಿಸಿರುವ ಒಂದು ಷಟ್ಪದಿ ಹೀಗಿದೆ:
ಬಲು ಭಯದಿ ಸತ್ತಿರುವ ನರಗಳ ಸೆಳೆದು ಬಿಗಿದನು ಕಚ್ಚಿ ದವಡೆಯ ಉಲುಕದುಸುರನು ಬಿಡದಲೆದೆಯನು ಗಟ್ಟಿ ಪಿಡಿದಿಹನು ನಿಲದೆ ಗಣಗಣ ಗಂಟೆ ಹೊಡೆಯುತ ಹಲವು ಕುತ್ತನು ದಾಂಟಿ ಗುಡ್ಡದ ಹೊಳಲ ಹೊರಗಿರ್ಪಿಳುಕಲಿನ ಮಾರ್ಗದಲಿ ನಡೆತಂದ
ಇವೆಲ್ಲ ಒಳ್ಳೆಯ ಭಾವಗೀತೆಗಳಿಗೆ ನಿದರ್ಶನ ಎಂದು ಭಾವಿಸುವಂತಿಲ್ಲ. ಆದರೆ ವಸ್ತುವಿನಲ್ಲಿ ನೂತನತೆಯನ್ನು ತರುವ ಪ್ರಯತ್ನ ನಡೆದಿತ್ತು ಎಂಬುದನ್ನು ಇದು ಸೂಚಿಸುತ್ತದೆ. ಇಂಗ್ಲಿಷ್ ಕವನಗಳ ಅನುವಾದದಿಂದ ಕನ್ನಡ ಕಾವ್ಯ ಪ್ರಪಂಚವನ್ನು ಶ್ರೀಮಂತಗೊಳಿಸಲು ಶ್ರಮಿಸಿದ ಬಿ.ಎಂ.ಶ್ರೀಯವರೇ ಸ್ವಯಂ ಕವಿಗಳಾಗಿದ್ದು ಉತ್ತಮವಾದ ಕೆಲವು ಸ್ವತಂತ್ರ ಭಾವಗೀತೆಗಳನ್ನು ರಚಿಸಿದ್ದಾರೆ. ತಿಳಿಯಾದ ಕನ್ನಡದಲ್ಲಿ, ಹೇಳಬೇಕಾದುದನ್ನು ಕಣ್ಣಿಗೆ ಕಟ್ಟುವಂತೆ ಹೇಳುವ ಕಲೆ ಶ್ರೀಯವರಿಗೆ ಸಿದ್ಧಿಸಿತ್ತು. ಈ ಕೆಲವು ಪಂಕ್ತಿಗಳು ಅದಕ್ಕೆ ಸಾಕ್ಷಿ:
ಕನ್ನಡ ನುಡಿ, ನಮ್ಮ ಹೆಣ್ಣು ಮ್ಮ ತೋಟದಿನಿಯ ಹಣ್ಣು ಬಳಿಕ, ಬೇರೆ ಬೆಳೆದ ಹೆಣ್ಣು ಬಳಿಗೆ ಸುಳಿದಳು ಹೊಸದು ರಸದ ಬಳ್ಳಿ ಹಣ್ಣು ಒಳಗೆ ಸುಳಿದಳು
ಶ್ರೀಯವರು ರಚಿಸಿರುವ ಕನ್ನಡ ತಾಯನೋಟ, ಶುಕ್ರಗೀತೆ ಮತ್ತು ಶ್ರೀ ಕೃಷ್ಣರಾಜ ರಜತ ಮಹೋತ್ಸವ ಪ್ರಗಾಥ ಎಂಬ ಮೂರು ಪ್ರಗಾಥಗಳು ಕನ್ನಡಕ್ಕೆ ಕವಿ ನೀಡಿರುವ ಉತ್ತಮ ಕಾಣಿಕೆಗಳು.ಶ್ರೀಯವರಿಗಿಂತ ಹತ್ತು ಹದಿನೈದು ವರ್ಷಗಳ ಹಿಂದೆಯೇ ಅನುವಾದಗಳನ್ನು ಮಾಡಿ, ಸ್ವತಂತ್ರ ಕವನಗಳನ್ನು ರಚಿಸಿ ಕಾವ್ಯಕ್ಷೇತ್ರವನ್ನು ಸಮೃದ್ಧಗೊಳಿಸಲು ಪ್ರಯತ್ನಿಸಿದ್ದ ಮತ್ತೊಬ್ಬರು ಪಂಜೆ ಮಂಗೇಶರಾಯರು. 1893ಕ್ಕೆ ಮುಂಚಿನಿಂದಲೂ ಪಂಜೆಯವರು ಕವಿತೆಗಳನ್ನು ಬರೆಯುತ್ತಿದ್ದರು ಎಂದು ತೀರ್ಮಾನಿಸುವುದಕ್ಕೆ ಆಧಾರಗಳಿವೆ. ಅವರ ಕವಿತೆಗಳಲ್ಲಿ ‘ಅದೊಂದು ಬಗೆಯ ದ್ರಾವಣವಿದೆ, ಮನೆವಳಿಕೆ ಇದೆ’ ಎನ್ನುತ್ತಾರೆ ಗೋವಿಂದ ಪೈ. ಅವರ ಲಲಿತವಾದ ಶೈಲಿ ಮುಂದೆ ಕನ್ನಡದಲ್ಲಿ ಇತರರು ಅನುಕರಣ ಮಾಡಬೇಕಾದಂಥದು ಎನಿಸಿತು.
ಅವರ ಹುತ್ತರಿ ಹಾಡು ಕೊಡಗರಿಗೆ ನಾಡಗೀತೆ ಯಾಯಿತು. ಕೊಡಗರ ಸಾಹಸವನ್ನು ಕೊಂಡಾಡುತ್ತ ಪಂಜೆಯವರು ನೀಡಿರುವ ಚಿತ್ರಗಳು ಭಯಮಿಶ್ರಿತ ರೋಮಾಂಚನವನ್ನು ಉಂಟುಮಾಡುವಂಥವು:
ಸವಿದು ಮೆದ್ದರೊ ಯಾರು ಪುರ್ವದಿ ಹುಲಿಯ ಹಾಲಿನ ಮೇವನು, ಕವಣೆ ತಿರಿ ಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು, ಸವರಿ ಆನೆಯ ಸೊಂಡಲಿನ ರಣಕೊಂಬನಾರ್ ಭೋರ್ಗರೆದರೋ ಸವೆದು ಸವೆಯದ ಸಾಹಸತ್ವದ ಕ್ಷತ್ರ ಬೇಟೆಯ ಮೆರೆದರೋ, ಅವರೆ ಸೋಲ್ ಸಾವರಿಯರು ! ಅವರೆ ಕಡುಗಲಿ ಗರಿಯರು ! ಅವರೆ ಕೊಡಗಿನ ಹಿರಿಯರು !
ಇದೇ ತಲೆಮಾರಿನ ಕವಿಗಳಲ್ಲಿ ಗಮನೀಯರಾದವರು ಎಸ್.ಜಿ. ನರಸಿಂಹಾಚಾರ್ಯರು. ಇವರು ಅನೇಕ ಇಂಗ್ಲಿಷ್ ಕವನಗಳನ್ನು ತುಂಬ ಸೊಗಸಾಗಿ ಅನುವಾದ ಮಾಡಿದ್ದಾರೆ. ಇವರ ಕನ್ನಡದ ಹದಕ್ಕೆ ಈ ಕೆಳಗಿನ ಉದಾಹರಣೆ: ವಡ್ರ್ಸ್‌ವರ್ತ್ ಕವಿಯ ಟು ದಿ ಕಕೂ ಎಂಬ ಕವನದ ಪಂಕ್ತಿಗಳ ಅನುವಾದ ಇದು: ಬಾರೊ ಬಸಂತದ ಕಂದಾ ಬಾ ಬಾರೊ ಹಾರುವ ಹಕ್ಕಿ ನೀನಲ್ಲ ಸಾರುವ ದನಿ, ಮಾಯದಗಂಟು|,ಕಣ್ಣಿಗೆ ತೋರದ ಹುರುಳಾಗಿ ಸುಳಿವೆ
ಅನುವಾದಗಳಲ್ಲದೆ ಸ್ವತಂತ್ರ ಕವನಗಳ ರಚನೆಯನ್ನು ನೋಡಿದರೆ ನರಸಿಂಹಾಚಾರ್ಯರು ಹುಟ್ಟುಕವಿ. ಕನ್ನಡ ಭಾಷೆ ಇವರ ಕೈಯಲ್ಲಿ ಹೊಸ ಹದವನ್ನು ಕಂಡಿತು ಎಂದು ಹೇಳಬೇಕಾಗುತ್ತದೆ. ಅದಕ್ಕೆ ನಿದರ್ಶನ ‘ನೋಡು ಕಾವೇರಿಯು ನಾಡಿನ ಜನರಿಗೆ ಬೇಡಿದ ಫಲಗಳ ನೀಡುತ ಪೊರೆವಳು’, ‘ಬಾರೋ ನಾವಾಡುವ ಬಾರೋ, ಸಾರಿತು ಸುಗ್ಗಿಯ ತಿಂಗಳಿದು’ ಎಂದು ಆರಂಭವಾಗುವ ಕವನಗಳು ಹಳೆಯ ಷಟ್ಪದಿ ಛಂದಸ್ಸಿನಲ್ಲಿ ರಚಿತವಾದುದಾದರೂ ನಮ್ಮ ಭಾಷೆಗೆ ಹೊಸದು ಎನ್ನುವಂಥ ಶೋಕಗೀತೆಯೊಂದನ್ನು ರಚಿಸಿದವರು ಇವರೇ. 1894ರಲ್ಲಿ ಚಾಮರಾಜ ಒಡೆಯರು ತೀರಿಕೊಂಡಾಗ ಬರೆದ ಚರಮಗೀತೆ ಅದು. ಸಂಗೀತ ನಾಟಕಗಳಿಗೆ ಆಶ್ರಯ ಕೊಟ್ಟಿದ್ದ ಪ್ರಭು ಅವರು. ಅವರೇ ತೀರಿಕೊಂಡಮೇಲೆ ಇನ್ನೆಲ್ಲಿ ಆ ಕಲೆಗಳಿಗೆ ಉಳಿವು ಎಂಬ ಭಾವ ಹೀಗೆ ಬಂದಿದೆ:
ವೀಣೆಗಳು ಮುಸುಕಿಟ್ಟು ಮೌನದಿ ಕೋಣೆಯೊಳಡಗಿದುವು ಬಿನ್ನನೆ ಜಾಣಳಿದು ನಾಟಕಗಳುಳಿದುವು ತೆರೆಯ ಮರೆಯೊಳಗೆ ||
1918ಕ್ಕೆ ಮುಂಚೆಯೇ ಸ್ವತಂತ್ರವಾದ ಕವನಗಳನ್ನು ರಚಿಸಿ ಭಾವಗೀತೆಯ ಪಂಥಕ್ಕೆ ಒಳ್ಳೆಯ ಬುನಾದಿಯನ್ನು ಹಾಕಿದ ಮತ್ತೊಬ್ಬ ಗಣ್ಯರು ಬಾಳಾಚಾರ್ಯ ಗೋಪಾಳಾಚಾರ್ಯ ಸಕ್ಕರಿ (ಶಾಂತಕವಿ). ಕನ್ನಡಿಗರನ್ನು ಎಚ್ಚರಿಸಲು ಬರೆದ ಒಂದು ಕವನದ ಕೆಲವು ಪಂಕ್ತಿಗಳು ಇವು:
ಏಳು ಸಾಯಣ ಕಟ್ಟು ಗ್ರಂಥವ ನೇಳು ಪಂಪಾಕ್ಷೇತ್ರಕೆ ಗಾಳಿಗಂಟುಗಳೋದಿದೇತಕೆ ಏಳು ಈ ಕ್ಷಣಮಾತ್ರಕೆ
ಶ್ರೀಯವರು ತೆರೆದ ನೂತನ ಕಾವ್ಯಮಾರ್ಗವನ್ನು ವಿಸ್ತರಿಸುತ್ತ ಹೋದ ಕವಿಗಳಲ್ಲಿ ಮುಖ್ಯರಾದವರು ಡಿ.ವಿ.ಗುಂಡಪ್ಪನವರು. ಹಳೆಯ ವಸ್ತು, ಛಂದಸ್ಸುಗಳನ್ನು ಉಳಿಸಿಕೊಂಡು ಹೊಸದರ ಕಡೆಗೆ ಕಣ್ಣು ಹಾಯಿಸಿದ್ದು ಇವರ ಕವನಗಳ ವೈಶಿಷ್ಟ್ಯ. ಸೀಸ, ವೃತ್ತ, ಕಂದ, ಖಂಡಭೋಗ ಷಟ್ಪದಿ ಮುಂತಾದ ಛಂದೋರೂಪಗಳನ್ನು ಇವರು ಬಳಸಿಕೊಂಡರು. ಸಂಗೀತದ ಕಡೆಗೆ ಒಲವು ಹೆಚ್ಚಾಗಿರುವ ಈ ಕವಿ ಗಡುಸಾದ, ಆದರೆ ಇಂಪಾದ ಅನೇಕ ಕವನಗಳನ್ನು ರಚಿಸಿದ್ದಾರೆ. ವನಸುಮ ಎಂಬುದು ಸುಮಾರು ನಾಲ್ಕು ದಶಕಗಳ ಕಾಲ ಕನ್ನಡನಾಡಿನ ಜನರೆಲ್ಲರ ಕಿವಿ ಮನಗಳನ್ನು ತುಂಬಿದ ಕವನ. ಎಸ್.ಅನಂತನಾರಾಯಣ ಅವರು ಹೇಳುವಂತೆ ಇವರ ಹೆಚ್ಚಿನ ‘ಗೀತೆಗಳೆಲ್ಲ ಜೀವಂತ ಕಳೆ ಪಡೆಯುವುದು ಹಾಡಿದಾಗ ............. ಇಲ್ಲಿಯ ಲಾಲಿತ್ಯ, ಪದಗಳನ್ನು ಜೋಡಿಸುವ ಕೌಶಲ್ಯ, ನೃತ್ಯಲಯ - ಇವುಗಳು ಅಂತಃಪುರಗೀತೆ (1950) ಯಲ್ಲಿ ಪರಿಪುರ್ಣ ಪಾಕವನ್ನು ಪಡೆದಿವೆ.’ ಅನೇಕ ಕವಿಗಳಿಗೆ ಸ್ಫೂರ್ತಿ ದಾಯಕರಾಗಿದ್ದು, ಆಚಾರ್ಯ ಸ್ಥಾನದಲ್ಲಿ ನಿಂತ ಡಿ.ವಿ.ಜಿ. ಅವರ ಕವನಗಳಲ್ಲಿ ಕನ್ನಡ ಕಬ್ಬವೆಣ್ಣು ಸನಾತನ ಮತ್ತು ನೂತನಗಳ ಮಧ್ಯೆ ಹೊಸ್ತಿಲಮೇಲೆ ನಿಂತಂತಿದೆ.
ಅನೇಕ ಪದ್ಯಗಳು ವೃತ್ತಕಂದ ರೂಪವಾಗಿವೆ. ಆತ್ಮವು ನೂತನವಾದರೂ ವೇಷವು ಪುರಾತನವಾದುದು ಎಂಬುದು ಕುವೆಂಪು ಅವರ ಅಬಿಪ್ರಾಯ. ಡಿ.ವಿ.ಜಿ. ಅವರಂತೆಯೇ ಗಡುಸಾಗಿಯೂ ಚಿಂತನಾಂಶಗಳಿಂದ ಕೂಡಿದುವೂ ಆದ ಭಾವಗೀತೆಗಳನ್ನು ರಚಿಸಿದವರು ಮಂಜೇಶ್ವರ ಗೋವಿಂದ ಪೈ ಅವರು. ಇವರು ಶ್ರೀಯವರಂತೆಯೇ ಅನೇಕ ಇಂಗ್ಲಿಷ್ ಕವನಗಳನ್ನು ಸಮರ್ಥವಾಗಿ ಕನ್ನಡಕ್ಕೆ ತಂದಿರುವುದಲ್ಲದೆ ಸ್ವತಂತ್ರವಾಗಿಯೂ ಕವನಗಳನ್ನು ರಚಿಸಿ ಯಶಸ್ಸು ಗಳಿಸಿದ್ದಾರೆ. ಈ ದಿಕ್ಕಿನಲ್ಲಿ ಇವರ ಗಿಳಿವಿಂಡು (1930) ಗಮನಾರ್ಹವಾದ ಸಂಕಲನ.
1925 ರಿಂದ 1950ರ ವರೆಗಿನ ಇಪ್ಪತ್ತೈದು ವರ್ಷಗಳು ಕನ್ನಡ ಭಾವಗೀತೆಯ ಇತಿಹಾಸದಲ್ಲಿ ಸುವರ್ಣಯುಗ. ಕೆ.ವಿ.ಪುಟ್ಟಪ್ಪ, ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ಪು.ತಿ.ನರಸಿಂಹಾಚಾರ್, ವಿ.ಸೀತಾರಾಮಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಜಿ.ಪಿ.ರಾಜರತ್ನಂ, ಕೆ.ಎಸ್.ನರಸಿಂಹಸ್ವಾಮಿ, ಎಂ.ಗೋಪಾಲಕೃಷ್ಣ ಅಡಿಗ ಮುಂತಾದ ಪ್ರತಿಭಾಶಾಲಿ ಕವಿಗಳು ಭಾವಗೀತೆಯ ಕ್ಷೇತ್ರದಲ್ಲಿ ಸಮೃದ್ಧವಾದ ಸುಗ್ಗಿಯನ್ನು ತಂದರು. ಪ್ರಕೃತಿ, ಪ್ರೇಮ, ದೇಶಭಕ್ತಿ, ಸಮಾಜ, ಸಂಸಾರ ಎಲ್ಲವು ಈ ಕವಿಗಳಿಗೆ ವಸ್ತುವಾದುವು. ಕನ್ನಡದಲ್ಲಿ
ಇದುವರೆಗೆ ಕಾಣದಿದ್ದ ವಸ್ತುವೈವಿಧ್ಯವನ್ನು ಭಾವಗೀತಕಾರರು ಪ್ರದರ್ಶಿಸಿದರು. ಜೊತೆ ಜೊತೆಗೇ ಕನ್ನಡ ಭಾಷೆ ಹೆಚ್ಚು ಸತ್ತ್ವಪುರ್ಣವಾದ ಅಬಿವ್ಯಕ್ತಿಗೆ ಪಾತ್ರವಾಗುವಂತೆ ಮಾಡಲು ಶ್ರಮಿಸಿದರು. ವಸ್ತುವೈವಿಧ್ಯದಂತೆಯೇ ಛಂದೋ ವೈವಿಧ್ಯವೂ ಪ್ರದರ್ಶಿತವಾಯಿತು. ಒಟ್ಟಿನಲ್ಲಿ ಭಾವಗೀತಕಾರರಿಂದ ಕನ್ನಡದ ಕಾವ್ಯ ಪ್ರಕಾರ ಸಂಪದ್ಭರಿತವಾಯಿತು.
ಭಾವಗೀತೆಯ ಸಮೃದ್ಧಿಗೆ ಕಾರಣರಾದ ಕವಿಗಳಲ್ಲಿ ಪ್ರಧಾನರಾದವರು ಕುವೆಂಪು. ಕೊಳಲು, ನವಿಲು, ಪಕ್ಷಿಕಾಶಿ, ಅಗ್ನಿಹಂಸ, ಪ್ರೇಮಕಾಶ್ಮೀರ, ಇಕ್ಷುಗಂಗೋತ್ರಿ, ಚಂದ್ರಮಂಚಕೆ ಬಾ ಚಕೋರಿ, ಜೇನಾಗುವಾ, ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ ಮುಂತಾದ ಕವನ ಸಂಕಲನಗಳಲ್ಲಿ ಪ್ರಕಟವಾಗಿರುವ ಇವರ ಭಾವಗೀತೆಗಳ ವಸ್ತು ಪ್ರಕೃತಿ ವರ್ಣನೆ, ಅಧ್ಯಾತ್ಮ, ಪ್ರೇಮ, ಸಾಮಾಜಿಕ ಚಿಂತನೆ, ಕುಟುಂಬಜೀವನದ ರಸನಿಮಿಷಗಳು ಇತ್ಯಾದಿ. ಪ್ರಕೃತಿ ಮತ್ತು ಅಧ್ಯಾತ್ಮಗಳು ಈ ಭಾವಗೀತಕಾರರ ಶ್ವಾಸಕೋಶಗಳು. ಮನೋಹರವಾದ ಪ್ರಕೃತಿಯ ವಿವಿಧ ಅಂಶಗಳು, ಬಿಳಿ ಮಳಲ ರಾಶಿ, ಕಾಡಿನ ಹಸುರೆಲೆಯ ಸಾಗರ ಮುಂತಾದುವು ಕವಿಯ ದೃಷ್ಟಿಗೆ ಆವೇಶ ಭಾವಗಳು; ವಿಶ್ವರೂಪಿಯಾದ ಭಗವಂತನ ಶರೀರದ ಚಿನ್ಮಯವಾದ ಅಂಗಗಳು; ಬ್ರಹ್ಮದ ಮಹಾಚಿತ್ತ ಶರದಿಯ ಅಲೆಗಳು,
ವಡ್ರ್ಸ್‌ವರ್ತನಿಗೆಂತೋ ಅಂತು ಮನಸ್ಸಿನ ಚಿಂತೆಗಳಾಗಿ, ನಾಡಿಯಲ್ಲಿ ಹರಿಯುವ ರಕ್ತಬಿಂದುಗಳಾಗಿ ಅವು ಪರಿವರ್ತನೆ ಹೊಂದಿವೆ. ತಾವು ಉಸಿರಾಡಿದರೆ ಮೋಡಗಳು ಉಸಿರಾಡುತ್ತವೆ ಎನ್ನುವ ತಾದಾತ್ಮ್ಯ ದೊರೆತಿದೆ ಈ ಕವಿಗೆ. ಪ್ರಕೃತಿಸಾಧನೆಯ ವಿಷಯಕವಾದ ಕವಿಯ ಜೀವನ ಮಂತ್ರ ಇದು. ಪ್ರಕೃತಿಯಾರಾಧನೆಯೇ ಪರಮನಾರಾಧನೆ. ಈ ಭಾವದಿಂದ ಕವಿಯ ಪ್ರಕೃತಿಯ ಆರಾಧನೆ ಮುಂದುವರಿದಿದೆ. ಇವರ ಪ್ರಕೃತಿಯ ಕಲ್ಪನೆ ‘ಉದಯಾಸ್ತಗಳು, ವನಗಿರಿಗಳು, ತಂಗಾಳಿ, ರುದ್ರವರ್ಷ, ತಿಂಗಳು, ಹಿಮಮಣಿಗಳು, ಕಾಜಾಣ, ಕಾಮಳ್ಳಿ, ಕೋಗಿಲೆ, ಗಿಳಿಗಳನ್ನು ಮಾತ್ರ ಒಳಗೊಂಡು ಮುಕ್ತಾಯವಾಗಿಲ್ಲ. ಮಾನವ ಸೌಂದರ್ಯ, ಒಲುಮೆ, ಸ್ನೇಹಗಳನ್ನೂ ಅದು ವ್ಯಾಪಿಸಿದೆ. ಆ ಎಲ್ಲದರಲ್ಲಿ ತಮ್ಮ ಇಷ್ಟದೇವತೆಯ ಗುಡಿಯನ್ನು ಕಟ್ಟಿ ಕವಿ ಪುಜೆಯಲ್ಲಿ ತಲ್ಲೀನರಾಗಿದ್ದಾರೆ’. ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೋ ಎಂದು ಈ ಕವಿ ಹಾಡಿದರು. ಹೀಗೆಯೇ ಪ್ರೇಮ, ಅಧ್ಯಾತ್ಮಗಳನ್ನು ಕುರಿತ ಇವರ ಕವನಗಳೂ ಸಹೃದಯರ ಮೆಚ್ಚುಗೆಯನ್ನು ಗಳಿಸಿದುವು. ಕುವೆಂಪು ಅವರ ಸಾಮಾಜಿಕ ಗೀತೆಗಳು ಇಂದಿನ ಕ್ರಾಂತಿಯನ್ನು ಮೂರು ನಾಲ್ಕು ದಶಕಗಳಷ್ಟು ಮುಂಚೆಯೇ ನಿರೀಕ್ಷಿಸಿದ್ದವು. ಇವರ ಕಲ್ಕಿ ಅತ್ಯಂತ ಶಕ್ತಿಪುರ್ಣವಾದ ಒಂದು ಸಾಮಾಜಿಕ ಗೀತೆ. ಅಪಾರವಾದ ಧ್ವನಿ ಪ್ರಪಂಚವನ್ನು ಮಾತ್ರವಲ್ಲದೆ ನಾಳೆಯನ್ನು ಇಂದೇ ತೆರೆದು ತೋರಿಸಿದ ಆ ಕವನದ ಕೆಲವು ಪಂಕ್ತಿಗಳು ಇವು:
ಬಡಬಗ್ಗರ ಜಠರಾಗ್ನಿಯು ಎದ್ದು, ಗುಡಿಸಲುಗಳಿಗೇ ಬೆಂಕಿಯು ಬಿದ್ದು, ಧಗಧಗ ಧಗಧಗ ಹೊತ್ತಿದುದು ಭುಗಿಭುಗಿಲೆನ್ನುತ ಮುತ್ತಿದುದು ಮುಗಿಲಿನವರೆಗೂ ಬಾನಿನವರೆಗೂ ದಿಕ್ಕುದಿಕ್ಕುಗಳ ಜುಟ್ಟಿನವರೆಗೂ ಬಡವರ ಬೆಂಕಿಯು ನಾಲಗೆ ಚಾಚಿ ಶ್ರೀಮಂತರನಪ್ಪಿತು ಬಾಚಿ
ಸಾಮಾನ್ಯವಾದ ಅಗ್ನಿಯಲ್ಲ ಅದು, ‘ಅದರ ಮುಂದೆ ಬಡಬಾಗ್ನಿಯು ತಲೆ ತಗ್ಗಿತು ನಾಚಿ’.
ಜನಪದ ಛಂದಸ್ಸು ಲಯಗಳನ್ನು ಬಳಸಿಕೊಂಡು ಉತ್ತರ ಕರ್ನಾಟಕದ ಜನರ ಆಡುಭಾಷೆಯಲ್ಲಿ ತುಂಬ ಸತ್ತ್ವಪುರ್ಣವಾದ ಅನೇಕ ಭಾವಗೀತೆಗಳನ್ನು ರಚಿಸಿದವರು ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು. ಗರಿ, ಉಯ್ಯಾಲೆ, ನಾದಲೀಲೆ, ಸಖೀಗೀತ, ಮೂರ್ತಿ ಮತ್ತು ಕಾಮಕಸ್ತೂರಿ, ಗಂಗಾವತರಣ, ನಾಕುತಂತಿ ಮುಂತಾದ ಕವನ ಸಂಕಲನಗಳ ಮೂಲಕ ಭಾವಗೀತೆಯ ಪ್ರಕಾರಕ್ಕೆ ಈ ಕವಿ ಅಮರವಾದ ಕಾಣಿಕೆಯನ್ನು ನೀಡಿದ್ದಾರೆ. ನಾದದ ಗುಂಗು, ಭಾವದ ಸೊಗಸು, ಮಾತಿನ ಮೋಡಿ - ಇವು ಇವರ ಕವನಗಳ ವಿಶಿಷ್ಟಲಕ್ಷಣಗಳು. ಭಾವ ತೀವ್ರವಾಗಿ, ಗಾನ ಪ್ರಧಾನವಾಗಿ ಅನನ್ಯ ಮನೋಹರತೆಯಿಂದ ವಿಶಿಷ್ಟತೆಯನ್ನು ಪಡೆದಿವೆ ಇವರ ಕವನಗಳು. ಬೆಳಗು ಬೆಳುದಿಂಗಳುಗಳ ವರ್ಣನೆ ಇವರಿಂದ ಕನ್ನಡ ಕಾವ್ಯದಲ್ಲಿ ಹೊಚ್ಚ ಹೊಸದಾಗಿ ಉಳಿದಿವೆ.
ಈ ಕೆಲವು ದಶಕಗಳಲ್ಲಿ ಎಲ್ಲರ ಬಾಯಲ್ಲೂ ಕೇಳಿಬರುತ್ತಿರುವ, ಸರ್ವಜನ ಮೋಹಕವಾಗಿರುವ ಇವರ ಕವನ ‘ಬೆಳಗು’, ಅತ್ಯಂತ ಸರಳವಾದ, ಅಚ್ಚಗನ್ನಡ ಪದಗಳಿಂದ ಅತ್ಯಪುರ್ವವಾದ ವರ್ಣನೆ, ಅನುಭವಗಳನ್ನು ಒಳಗೊಂಡಿರುವ ಈ ಕವನ ಆ ಕಾರಣಗಳಿಗಾಗಿಯೇ ಸರ್ವಜನಪ್ರಿಯತೆಯನ್ನು ಪಡೆದಿದೆ. ಅದರ ಆರಂಭದ ಸಾಲುಗಳು ಹೀಗಿವೆ: ಮೂಡಲ ಮನೆಯಾ ಮುತ್ತಿನ ನೀರಿನ ಎರಕಾವ ಹೊಯ್ದಾ ನುಣ್ಣ - ನ್ನೆರಕಾವ ಹೊಯ್ದಾ ಬಾಗಿಲ ತೆರೆದೂ ಬೆಳಕು ಹರಿದೂ ಜಗವೆಲ್ಲಾ ತೊಯ್ದಾ ಹೋಯ್ತೋ - ಜಗವೆಲ್ಲಾ ತೊಯ್ದಾ
ಸೂಕ್ಷ್ಮವಾದ ಕವಿಕಲ್ಪನೆ ಪ್ರಕೃತಿಯ ವರ್ಣನೆಯಲ್ಲೇ ತನ್ನನ್ನು ಮುಗಿಸಿಕೊಂಡಿಲ್ಲ. ಸಾಮಾಜಿಕ ಅನ್ಯಾಯಗಳ ಖಂಡನೆ, ದೇಶಭಕ್ತಿ ಮುಂತಾದ ಅನೇಕ ಭಾವಗಳು ಸುಂದರ ಪ್ರತಿಮಾ ಕವನಗಳ (ಕುರುಡು ಕಾಂಚಾಣಾ, ಪುಟ್ಟ ವಿಧವೆ, ಮೂವತ್ತು ಮೂರು ಕೋಟಿ) ರಚನೆಗೆ ಕಾರಣವಾಗಿವೆ. ಚಿಂತನಪ್ರಧಾನವಾದ, ಚಿಂತನೆಯ ಸಾಣೆಗೆ ಭಾವವನ್ನು ಒಡ್ಡಿ ಹರಿತಗೊಳಿಸಿದ ಅನೇಕ ಅಮೂಲ್ಯವಾದ ಕವನಗಳನ್ನು ರಚಿಸಿರುವ ಅಗ್ರಪಂಕ್ತಿಯ ಮತ್ತೊಬ್ಬ ಕವಿ ಪು.ತಿ.ನರಸಿಂಹಾಚಾರ್ಯರು. ಹಣತೆ, ಮಾಂದಳಿರು, ಶಾರದಯಾಮಿನೀ, ಗಣೇಶದರ್ಶನ, ರಸಸರಸ್ವತಿ, ಮಲೆದೇಗುಲ ಮುಂತಾದ ಕವನಸಂಕಲನಗಳಲ್ಲಿ ಮಾತ್ರವಲ್ಲದೆ ಗೋಕುಲನಿರ್ಗಮನ, ಅಹಲ್ಯೆ ಮುಂತಾದ ಗೀತರೂಪಕಗಳಲ್ಲೂ ಇವರ ಅತ್ಯುತ್ಕೃಷ್ಟವಾದ ಭಾವಗೀತೆಗಳಿವೆ. ಪ್ರಕೃತಿಯ ಆಸ್ವಾದನೆಯಂತೆಯೇ ಭಕ್ತಿ, ಪ್ರಪತ್ತಿಗಳ ಪ್ರತಿಪಾದನೆಯೂ ಕಾವ್ಯಕ್ಕೆ ನೂತನತೆಯ ಸೊಗಡನ್ನು ತರುವ ವಸ್ತುವಾಗಬಹುದು ಎಂಬುದನ್ನು ಪು.ತಿ.ನ. ತೋರಿಸಿದ್ದಾರೆ. ಜಗತ್ತಿನ ಚೆಲುವನ್ನು ಗುರುತಿಸುವುದೂ ಅದನ್ನು ಆಹ್ವಾನಿಸುವುದೂ ಭಗವಂತನ ಅಹೇತುಕ ಕರುಣೆಯಿಂದಲೇ ಎನ್ನುವುದು ಈ ಕವಿಯ ಅಚಲವಿಶ್ವಾಸ. ‘ಜಗ ಚೆಲುವೆನ್ನುವ ಬಗೆಯನುರಣನೆ ವಿಶ್ವಾತ್ಮನ ನಿಹೇತುಕ ಕರುಣೆ’, ಜಗದ ಚೆಲುವಿನ ಒಂದು ಮುಹೂರ್ತದ ಆಸ್ವಾದನೆಯಿಂದ ತೃಪ್ತಿಪಡೆದ ಇವರ ಮನಸ್ಸು ಮರುಗಳಿಗೆಯೆ ಆಲೋಚನಾಮಗ್ನವಾಗುತ್ತದೆ. ಚಿಂತನೆ ಇವರ ಕವನಗಳಲ್ಲಿ ಭಾವದ ಅವಿನಾಸಂಗಿ, ಜೊತೆಗೆ ಆಶ್ಚರ್ಯ ಇವರ ಕವನಗಳ ಇನ್ನೊಂದು ಲಕ್ಷಣ. ಸೊಗವು ತೋರಬೇಕಾದಲ್ಲಿ ಅಳಲು ತೋರುವುದು, ವಿಷಾದದ ಛಯೆಯಲ್ಲಿ ಲೀನವಾಗುವುದು ಇವರ ಕೆಲವು ಮುಖ್ಯ ಕವನಗಳಲ್ಲಿ ಎದ್ದು ಕಾಣುವ ಮತ್ತೊಂದು ಅಂಶ. ಒಂದು ಸಂಜೆ ಎಂಬ ಇವರ ಪುಟ್ಟ ಕವನವೊಂದು ಇವರ ಕಾವ್ಯದ ಲಕ್ಷಣಗಳಿಗೆಲ್ಲ ಸುಂದರವಾದ ನಿದರ್ಶನ: ಹೊತ್ತು ಮುಳುಗಿತು - ಮಾಸಿಹೋಯಿತು ಭೂಮಿ ಹೊರಳುತ ನಸುಕೊಳು, ತಾಯಿ ಕಣ್ಮರೆಯಾಗೆ ಧೂಳಿನೊ- ಳಾಡಿ ಮಾಸುವ ಮಗುವೊಲು ಕತ್ತಲಾಯಿತು ಹೊಳೆದುವಿದುಗೋ ಮೇಲೆ ಚುಕ್ಕಿಗಳಂದದಿ ಅಂಧಕಾರದ ತೆರೆಗಳಾವುದೊ ಬೆಳಕ ಬಿಂಬಿಸುವಂದದಿ ತಲದಿ ನಾನಿಹೆನೀ ಪುರಾತನ ತಮರು ತಾರೆಗು ಮೋಹಿಸಿ, ನಿಜ ವಿಷಾದದೊಳಲ್ಲಿಗಲ್ಲಿಗೆ ಹೊಳೆವ ಭಾವಕೆ ಹೋಲಿಸಿ ಅರುಣ, ಬಿನ್ನಹ, ತಾವರೆ - ಇವು ಮಾಸ್ತಿವೆಂಕಟೇಶ ಅಯ್ಯಂಗಾರ್ಯರ ಭಾವಗೀತೆಗಳ ಸಂಕಲನಗಳು. ಭಗವಂತನ ಅನುಗ್ರಹಕ್ಕಾಗಿ ಕಾತರತೆ, ಚೆಲುವಿನ ಬಗೆಗೆ ನವುರಾದ ವಿಸ್ಮಯ - ಇವು ಇವರ ಕವನಗಳ ಪ್ರಧಾನ ವಸ್ತು. ಸತ್ವದಲ್ಲಿ ಇವರ ಸಣ್ಣಕಥೆಗಳ ಮಟ್ಟಕ್ಕೆ ಬರುವ ಸಾಮಥರ್ಯ್ ಇವರ ಕವನಗಳಿಗಿಲ್ಲ. ಆದರೆ ಸಂಖ್ಯೆಯಲ್ಲಿ ಇವು ವಿಪುಲವಾಗಿವೆ.
ಕನ್ನಡದ ಮತ್ತೊಬ್ಬ ಪ್ರಮುಖ ಭಾವಗೀತಕಾರರು ವಿ.ಸೀತಾರಾಮಯ್ಯನವರು. ಬಹುಮುಖ ಪ್ರತಿಭೆಯ ಈ ಕವಿ ಭಾವಗೀತಕಾರನ ಕರ್ತವ್ಯವೇನು ಎಂಬುದನ್ನು ಸೂಚಿಸಿದರು. ‘ಕವಿಯು ಪ್ರಪಂಚವನ್ನು ಕಣ್ಣುತುಂಬ ನೋಡಲಿ ತನ್ನ ಆದೇಶಗಳು ಒಂದು ಹದಕ್ಕೂ ಪಾಕಕ್ಕೂ ಬರುವಂತೆ ಮನಸ್ಸನ್ನು ನಿರಂತರವಾಗಿ ಒಂದು ಶಾಖದಲ್ಲಿಟ್ಟುಕೊಳ್ಳಲಿ: ತನ್ನ ವ್ಯಕ್ತಿತ್ವದ ಮುದ್ರೆಯನ್ನು ಕವಿತೆಯ ಮೇಲೆ ಹಾಕಲಿ (ಅವನು ನಿಜವಾಗಿ ವ್ಯಕ್ತಿಯಾದರೆ ಆ ಮುದ್ರೆ ಬಿದ್ದೇ ಅವನ ವಾಣಿ ಕೇಳುವುದು); ಪ್ರಪಂಚಕ್ಕೆ ಒಂದು ಹೊಸ ದೃಷ್ಟಿಯನ್ನೂ ಸಾತ್ವಿಕದಿಂದ ಮಿಡಿಯುವ ಒಂದು ಮೃದು ಜೀವನವನ್ನೂ ಕಾಣಿಕೆಯಾಗಿ ಅರ್ಪಿಸಲಿ; ಅದರಿಂದ ಪ್ರಪಂಚದ ಸತ್ಯವು ಬೆಳೆಯುವಂತಾಗಲಿ’. ಗೀತಗಳು, ದೀಪಗಳು, ನೆಳಲು-ಬೆಳಕು, ದ್ರಾಕ್ಷಿ ದಾಳಿಂಬೆ, ಹೆಜ್ಜೆ ಪಾಡು, ಅರಲು ಬರಲು - ಇವು ವಿ.ಸೀ. ಅವರ ಕವನಸಂಕಲನಗಳು. ಸೊಗಸಾದ ಕನ್ನಡ ಪದಗಳು, ಮುಗಿಲಿನವರೆಗೂ ಬೀಸುವ ಭಾವ, ಹೃದಯದ ಆಳದವರೆಗೂ ಇಳಿಯುವ ಸಂವೇದನೆ, ಇವೆಲ್ಲದರೊಡನೆ ಹದವಾಗಿ ಬೆರೆಯುವ ಸೂಕ್ಷ್ಮ ಸಂವೇದನೆ, ಕೆಲಮೊಮ್ಮೆ ಹದವಾದ ಸಂಗೀತ ಗುಣ - ಇವು ವಿ.ಸೀ. ಅವರ ಭಾವಗೀತೆಯ ಲಕ್ಷಣಗಳು.
ವಿಶ್ವಾಸ ಎನ್ನುವ ಕವನದ ಎರಡು ಪಂಕ್ತಿಗಳು ಇವು: ಮಾನವನೆತ್ತರ ಆಗಸದೇರಿಗೆ ಏರುವವರೆಗೂ ಏರೇವು; ಮಾನವಹೃದಯಕೆ ವಿಶ್ವವಿಶಾಲತೆ ಹಾಯುವವರೆಗೂ ಹಾರೇವು,
ಕನ್ನಡದ ಅತಿಶ್ರೇಷ್ಠ ಭಾವಗೀತೆಗಳ ಪಂಕ್ತಿಯಲ್ಲಿ ನಿಲ್ಲುವ ಕವನ ವಿ.ಸೀ.ಅವರ ಮನೆ ತುಂಬಿಸುವುದು, ಜಿ.ಎಸ್.ಶಿವರುದ್ರಪ್ಪನವರ ಮಾತಿನಲ್ಲಿ ‘ಮುಟ್ಟಿದರೆಲ್ಲಿ ಮಾಸುವುದೋ ಎಂಬಂತೆ ಥಳಥಳಿಸುವ ಇಬ್ಬನಿಯಂತೆ ಇದರ ಚೆಲುವು’. ಆ ಕವನದ ಮೊದಲ ಪಂಕ್ತಿಗಳು: ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು ಕೊಳ್ಳಿರೀ ಮಗುವನ್ನು ಎಮ್ಮ ಮನೆ ಬೆಳಕನ್ನು ನಿಮ್ಮ ಮನೆಯನ್ನು ತುಂಬಲೊಪ್ಪಿಸುವೆವು ಸಾಮಾನ್ಯಾತಿಸಾಮಾನ್ಯರು ಆಡುವ ಮಾತಿನ ಸೊಗಡನ್ನು ಕಾವ್ಯಕ್ಕೆ ಕನ್ನಡದಲ್ಲಿ ಬಹುಶಃ ಮೊಟ್ಟಮೊದಲ ಬಾರಿಗೆ ತಂದು ಅನೇಕ ಶ್ರೇಷ್ಠ ಭಾವಗೀತೆಗಳನ್ನು ರಚಿಸಿದ ಕವಿ ಜಿ.ಪಿ.ರಾಜರತ್ನಂ. ರತ್ನನ ಪದಗಳು ಮತ್ತು ನಾಗನ ಪದಗಳು ಇವರು ಕನ್ನಡ ಕಾವ್ಯಕ್ಕೆ ನೀಡಿರುವ ಅಪೂರ್ವ ಕಾಣಿಕೆಗಳು. ಪ್ರಕೃತಿಯ ಸೊಬಗು, ಕೌಟುಂಬಿಕ ಜೀವನದ ಹತ್ತು ಹಲವು ರಸನಿಮಿಷಗಳು, ಕನ್ನಡದ ಉತ್ಕಟಪ್ರೇಮ - ಇವೆಲ್ಲಕ್ಕೂ ಆಡುಭಾಷೆ ಅಬಿವ್ಯಕ್ತಿಮಾಧ್ಯಮವಾಗಬಲ್ಲದು ಎಂಬುದನ್ನು ರಾಜರತ್ನಂ ಯಶಸ್ವಿಯಾಗಿ ತೋರಿಸಿಕೊಟ್ಟಿದ್ದಾರೆ. ತಾಯಿ ಮಗುವನ್ನು ಎತ್ತಿಕೊಂಡಂತೆ, ಒಂದು ಮತ್ತೊಂದನ್ನು ಕೂಡಿ ಅಂಟಿಕೊಂಡಂತೆ ಮಡಿಕೇರಿಯನ್ನು ಎತ್ತಿಕೊಂಡಿದ್ದ ಮಂಜಿನ ಶುಭ್ರತೆಯನ್ನು ಸೂಚಿಸುವ ವರ್ಣನೆ ಇದು:
ಮಲಗಾಕ್ ಸೊಳ್ಳೇಪರದೆ ಕಟ್ಟಿ ಒದಿಯಾಕ್ ಒಗದಿದ್ ದುಪಟಿ ಕೊಟ್ಟಿ ಪಕ್ದಾಗ್ ಗಂದದ್ ದೂಪ ಆಕ್ದಂಗ್ ಮಡಿಕೇರೀಮೇಲ್ ಮಂಜು!
ಸೂರ್ಯನನ್ನು ಹೆಂಡಕುಡುಕನಿಗೆ ಹೋಲಿಸಿ ಬರೆದಿರುವ ಸಮಾಧಾನ ಎಂಬ ಕವನ ಇವರ ಇನ್ನೊಂದು ಉತ್ತಮ ಪದ್ಯ. ಕವಿಯ ಕನ್ನಡ ಪ್ರೇಮ ಎಷ್ಟು ಉತ್ಕಟವಾದುದು ಎಂಬುದನ್ನು ತೋರಿಸುವ ಪಂಕ್ತಿಗಳು:
ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲಿಸಾಕಿದ್ರೂನೆ- ಮೂಗ್ನಲ್ ಕನ್ನಡ್ ಪದವಾಡ್ತೀನಿ! ನನ್ ಮನಸನ್ ನೀ ಕಾಣೆ! ತೀ.ನಂ.ಶ್ರೀಕಂಠಯ್ಯನವರ ಒಲುಮೆ (1932) ಕನ್ನಡ ನವೋದಯ ಸಾಹಿತ್ಯದಲ್ಲಿ ಪ್ರೇಮಕವನಗಳ ಪ್ರಥಮ ಸಂಕಲನ. 1930ರಲ್ಲಿ ಪ್ರಕಟವಾದ ಕುವೆಂಪು ಅವರ ಕೊಳಲು ಸಂಕಲನದಲ್ಲಿಯೇ ಕೆಲವು ಮುಗ್ಧವಾದ ಪ್ರೇಮಗೀತೆಗಳಿವೆ. ಆದರೂ ಪ್ರೇಮಗೀತೆಗಳೇ ಒಂದು
ಸಂಕಲನವಾಗಿ ಪ್ರಕಟವಾದುದು ತೀ.ನಂ.ಶ್ರೀ. ಅವರ ಒಲುಮೆಯಲ್ಲೇ. ಸ್ವಲ್ಪವೂ ಆಡಂಬರವಿಲ್ಲದ ಸಹಜವಾದ ಸರಳ ಶೈಲಿಯಲ್ಲಿ ಶುಚಿಯಾದ ಸಾಂಸಾರಿಕ ಪ್ರೇಮವನ್ನು ವರ್ಣಿಸಿದ ಕೀರ್ತಿ ತೀ.ನಂ.ಶ್ರೀ. ಅವರ ಕವನಗಳಿಗೆ ಸಲ್ಲುತ್ತದೆ. ಮೊದಲ ದಿನ ತಮ್ಮ ಜೀವನ
ಸಂಗಾತಿಯನ್ನು ಕಂಡ ಸಂದರ್ಭವನ್ನು ನಮ್ಮ ಸಾಮಾಜಿಕ ಸಂಪ್ರದಾಯದ ಹಿನ್ನೆಲೆಯಲ್ಲಿ ಕವಿ ವರ್ಣಿಸಿರುವ ರೀತಿ ಇದು:
ಬಾರೆ ತಾಯಿ, ಮಾವನವರಿ ಗೆರಗು ಎಂದ ಮಾತಿಗೆ - ತೋರಿ, ಮೆಲ್ಲನೊಳಗಿನಿಂದ ನಡೆದು ಬಂದ ಮಿಂಚಿದು, ಅವಳ ಮುಗುಳುನಗೆಯ ಹೊನಲು ಮನೆಯನೆಲ್ಲ ತುಂಬಿತು. ಅವಳ ಕಣ್ಣ ಬೆಳಕಿನಲ್ಲಿ ಹಗಲ ಮಂಕು ಚೆದರಿತು.
ಪ್ರೇಮಗೀತೆಗಳನ್ನೇ ಗಮನಿಸಿ ಹೇಳುವುದಾದರೆ ಭಾವಗೀತೆಗಳ ಇತಿಹಾಸದಲ್ಲಿ ಕೆ.ಎಸ್.ನರಸಿಂಹ ಸ್ವಾಮಿಯವರಿಗೆ ವಿಶಿಷ್ಟವಾದ ಒಂದು ಸ್ಥಾನವಿದೆ. ಪ್ರೇಮದ ತೋಟದಲ್ಲಿ ಕೃಷಿ ಮಾಡಿ, ಮಲ್ಲಿಗೆ, ಇರುವಂತಿಗೆಗಳನ್ನು ಅರಳಿಸಿದವರು ಇವರು. ಕರ್ನಾಟಕದಾದ್ಯಂತ ಮನೆಮನೆಗಳಲ್ಲೂ ಇವರ ಹೆಸರು ಅನುರಣಿಸುವಂತೆ ಮಾಡಿದ ಕವನ ಸಂಕಲನ ‘ಮೈಸೂರು ಮಲ್ಲಿಗೆ’. ಇವರದು ಮಲ್ಲಿಗೆ ಶೈಲಿ. ಅಚ್ಚಕನ್ನಡದ ಪದಗಳು, ನವುರಾದ ಭಾವ, ಸುಂದರವಾದ ಸ್ವಪ್ನಲೋಕವನ್ನು ಸೃಷ್ಟಿಸುವ ಉಪಮೆಗಳು ಇವರ ಭಾವಗೀತೆಗಳ ಲಕ್ಷಣಗಳು. ತಮ್ಮ ‘ಗೃಹಲಕ್ಷ್ಮಿ’ಯನ್ನು ವರ್ಣಿಸುವ ಇವರ ಕವನದ ಕೆಲವು ಪಂಕ್ತಿಗಳು ಇವು:
ನನ್ನವಳು ನನ್ನೆದೆಯ ಹೊನ್ನಾಡನಾಳುವಳು ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ; ಹೊಳೆಯ ಸುಳಿಗಳಿಗಿಂತ ಆಳ ಕಣ್ಣಿನ ಚೆಲುವು ಅವಳೊಮ್ಮೆ ಹೆರಳ ಕೆದರಿ ಕಪ್ಪುಗುರುಳನು ಬೆನ್ನ ಮೇಲೆಲ್ಲ ಹರಡಿದರೆ ದೂರದಲಿ ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ
ಉಂಗುರ, ಇರುವಂತಿಗೆ, ದೀಪದ ಮಲ್ಲಿ, ಐರಾವತ - ಇವು ಕೆ.ಎಸ್.ನರಸಿಂಹ ಸ್ವಾಮಿಯವರ ಇತರ ಕವನ ಸಂಕಲನಗಳು. ಹೆಣ್ಣಿನ ಹೃದಯದ ನಿಕಟವಾದ ಪರಿಚಯ, ಅವಳ ಹೂ ಮನಸಿನ ಹೊಂಗನಸುಗಳ ಚಿತ್ರಣ, ಸಂಸಾರದ ಮಧುರ ನಿಮಿಷಗಳ ಕಲಾತ್ಮಕ
ಅಭಿವ್ಯಕ್ತಿ, ಉಪಮೆಗಳ ನೂತನತೆ, ಶೈಲಿಯ ಮಾರ್ದವತೆ - ಈ ಎಲ್ಲ ಲಕ್ಷಣಗಳೂ ಇವರ ಅನೇಕ ಕವನಗಳಲ್ಲಿ ಎದ್ದು ಕಾಣುತ್ತವೆ. ಮಣ್ಣಿನಂತೆ ಕಾಣುವ ಜೀವನದ ಹೊನ್ನನ್ನು ಅನನ್ಯವಾದ ರೀತಿಯಲ್ಲಿ ತೆರೆದು ತೋರಿಸುವ ಈ ಕವಿ ಜನತೆಗೆ ತೀರ ಹತ್ತಿರ, ತುಂಬ ಪ್ರಿಯ. ನವೋದಯ ಭಾವಗೀತಕಾರರಾಗಿ ಪ್ರಾರಂಭವಾಗಿ ನವ್ಯ ಪಂಥದ ಕವಿಗಳಾಗಿ ಪರ್ಯವಸಾನಗೊಂಡ ಎಂ.ಗೋಪಾಲಕೃಷ್ಣ ಅಡಿಗರು ಭಾವತರಂಗ ಮತ್ತು ಕಟ್ಟುವೆವು ನಾವು ಕವನಸಂಕಲನಗಳಲ್ಲಿ ಕೆಲವು ಮಹತ್ತ್ವದ ಭಾವಗೀತೆಗಳನ್ನು ನೀಡಿದ್ದಾರೆ. ಇವರ ‘ಮೋಹನ - ಮುರಲಿ’, ಒಂದು ಸುಂದರ, ಶಕ್ತಿಪುರ್ಣ ಕಲಾಸೃಷ್ಟಿ. ಪ್ರಾಸ, ಅನುಪ್ರಾಸಗಳು ಮರುಕಳಿಸಿ, ರಹಸ್ಯಪುರ್ಣವಾದ, ಆದರೆ ನಮ್ಮ ಅಂತರಂಗ ಜಗತ್ತಿನಲ್ಲಿ ಅಸ್ತಿತ್ವದಲ್ಲಿದೆ ಎನ್ನುವಂಥ ವಾಸ್ತವ ಭಾವಗಳನ್ನು ಮೂರ್ತರೂಪದಲ್ಲಿ ನೀಡುವ ಶಕ್ತಿ ಅಡಿಗರಿಗೆ ಸಿದ್ಧಿಸಿದೆ. ಇವರ ಮೋಹನ - ಮುರಲಿಯ ಕೆಲವು ಪಂಕ್ತಿಗಳು ಇವು:
ಹೂವು ಹಾಸಿಗೆ, ಚಂದ್ರ ಚಂದನ, ಬಾಹುಬಂಧನ, ಚುಂಬನ; ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ ಒಲಿದ ಮಿದುವೆದೆ ರಕ್ತಮಾಂಸದ ಬಿಸಿದು ಸೋಂಕಿನ ಪಂಜರ; ಇಷ್ಟೆ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?
ಸಾಮಗಾನ, ಸಂಜೆದಾರಿ, ಚೆಲುವು- ಒಲವುಗಳ ಮೂಲಕ ಭಾವಗೀತೆಯ ಕ್ಷೇತ್ರದಲ್ಲಿ ತಮ್ಮ ಸ್ಥಾನವನ್ನು ಸ್ಥಾಪಿಸಿದ ಕವಿ ಜಿ.ಎಸ್.ಶಿವರುದ್ರಪ್ಪ. ಸರಳವಾದ ಮಾತುಗಳಲ್ಲಿ ಸಾಮಾನ್ಯ ಎಂದು ನಮಗೆ ತೋರು ವಂಥ ವಿಷಯಗಳಲ್ಲಿ ಕೂಡ ಆಶ್ಚರ್ಯ ವನ್ನು ವ್ಯಕ್ತಪಡಿಸಿ, ಮೋಹಕವಾದ ವರ್ಣನೆಯಿಂದ, ನಮ್ಮ ಮನಸ್ಸನ್ನು ಸೆರೆಹಿಡಿಯುವ ಶಕ್ತಿ ಈ ಕವಿಯ ಶೈಲಿಯಲ್ಲುಂಟು. ಬಯಲನ್ನು - ಅದೂ ಬರಿಯ ಬಯಲನ್ನು ಕಂಡು ಕೂಡ ಕವಿ ರೋಮಾಂಚನಗೊಳ್ಳು ತ್ತಾರೆ ‘ಎರಡು ಬಯಲ ಬೇಟಕಾಗಿ ಇರುಳು ತೆರೆಯ ಕಟ್ಟಿದೆ, ಮೌನ ವೊಂದೇ ಹಾಡಿದೆ’. ಮಲ್ಲಿಗೆ, ಜಡೆ, ಮುಂಬಯಿ ಜಾತಕ, ಮಬ್ಬಿನಿಂದ ಮಬ್ಬಿಗೆ, ಸಂಜೆದಾರಿ ಮುಂತಾದ ಇವರ ಕವನಗಳು ಭಾವಗೀತೆಯ ಕ್ಷೇತ್ರಕ್ಕೆ ಕವಿ ನೀಡಿರುವ ಅಮರವಾದ ಕಾಣಿಕೆಗಳು. ಪು.ತಿ.ನ. ಅವರು ಇವರ ಜಡೆ ಎಂಬ ಕವನವನ್ನು ‘ಭಾವೋಪಮಾಪುರ್ಣವಾದದ್ದು’ ಎಂದು ಕರೆದಿದ್ದಾರೆ. ಭವಪ್ರಪಂಚದಲ್ಲಿ ಆರಂಭವಾಗಿ ಭಾವಪ್ರಪಂಚದಲ್ಲಿ ವಿಹರಿಸಿ ಭವ್ಯತಾಪ್ರಪಂಚದ ಸೀಮೆಯಲ್ಲಿ ಲೀನವಾಗಿದೆ ಕವನ. ಕಣ್ಣಿಗೆ ಕಾಣುವ ಹೆಣ್ಣಿನ ಜಡೆಗಳ ವೈವಿಧ್ಯದಿಂದ ಪ್ರಾರಂಭವಾಗಿ, ಪುರಾಣಪ್ರಪಂಚದ ಪ್ರಖ್ಯಾತ ಜಡೆಗಳನ್ನು ನೆನೆದು ಓ ಓ ಈ ಜಡೆಗೆಲ್ಲಿ ಕಡೆ ಎಂದು ಆಶ್ಚರ್ಯವನ್ನು ವ್ಯಕ್ತಪಡಿಸಿ ಅನಂತರ ಪ್ರಕೃತಿಯ ವಿವಿಧ ಮುಖಗಳಲ್ಲಿ ಹೆಣೆದುಕೊಂಡಿರುವ ಜಡೆಗಳನ್ನು ವರ್ಣಿಸುವ ಪಂಕ್ತಿಗಳು ಇವು:
ಸಂಜೆಯಲಿ ಹಗಲು ಕೆದರುವ ಕತ್ತಲೆಯ ಕಾಳಜಡೆ ಬೆಳಗಿನಲಿ ಇರುಳು ಬಿಚ್ಚುವ ಬೆಳ್ಳನೆಯ ಬೆಳಕು ಜಡೆ ಒಮ್ಮೊಮ್ಮೆ ಮುಗಿಲಿನಲಿ ತೇಲುತ್ತ ಬರುವಂಥ ಬೆಳ್ಳಕ್ಕಿಗಳ ಜಡೆ, ಕೊಂಚೆಗಳ ಜಡೆ ಮರಮರದಿ ಬಳಕುತ್ತ ಹೂ ಬಿಟ್ಟ ಬಳ್ಳಿ ಜಡೆ ಕಾಡು ಬಯಲಿನ ಹಸರು ಹಸರದಲಿ ಹರಿಹರಿದು ಮುನ್ನಡೆವ ಹೊಳೆಯ ಜಡೆ; ಶ್ರೇಣಿ ಶ್ರೇಣಿಗಳಾಗಿ ಹರಿದಿರುವ ಗಿರಿಯ ಜಡೆ
ಚೆನ್ನವೀರ ಕಣವಿಯವರೂ ಪ್ರಕೃತಿಯನ್ನು ಮೆಚ್ಚಿ ಆರಾಧಿ ಸಿದ ಕವಿ. ಕಾವ್ಯಾಕ್ಷಿ, ಆಕಾಶಬುಟ್ಟಿ, ಭಾವಜೀವಿ, ಮಧುಚಂದ್ರ, ನೆಲ ಮುಗಿಲು ಮುಂತಾದ ಕವನಸಂಕಲನಗಳ ಅನೇಕ ಕವನಗಳು ಇವರ ಕಾವ್ಯಪ್ರತಿಭೆಯನ್ನು ಎತ್ತಿ ಸಾರುತ್ತಿವೆ. ನಿಯಮೋಲ್ಲಂಘನ ಎಂಬುದು
ಇವರ ಅತ್ಯುತ್ತಮ ಕವನಗಳಲ್ಲಿ ಒಂದು. ಅದರ ಒಂದು ಚರಣ ಹೀಗಿದೆ:
ತರುಲತಾದಿಗಳಲ್ಲಿ ಚಿಗುರಿಲ್ಲ ಹೊಗರಿಲ್ಲ- ಅಸ್ಥಿಪಂಜರವಾಗಿ ಸವೆಯುತಿಹವು ಎಲ್ಲೊ ಅಂಗೈಯಗಲ ಹಸಿರು ಕಂಡರೆ ಸಾಕು ಮನದ ಆಸೆಗಳಲ್ಲಿ ಸೇರುತಿಹವು ‘ಕಾಲ’ ಚೆನ್ನವೀರ ಕಣವಿಯವರ ಇನ್ನೊಂದು ಉತ್ತಮ ಕವನ.
ಈ ಸಮೀಕ್ಷೆಯಲ್ಲಿ ಸಾಂಕೇತಿಕವಾಗಿ ಕನ್ನಡದ ಕೆಲವು ಪ್ರಮುಖ ಕವಿಗಳ ಕಾವ್ಯಶೈಲಿಯನ್ನು ತೋರಿಸಲಾಗಿದೆ. ಇವರಲ್ಲದೆ ಇನ್ನೂ ನೂರಾರು ಜನ ಭಾವಗೀತಕಾರರು ತಮ್ಮ ಕವನಸಂಕಲನಗಳ ಮೂಲಕ ಭಾವಗೀತೆಯ ಪ್ರಕಾರವನ್ನು ಶ್ರೀಮಂತಗೊಳಿಸಿದ್ದಾರೆ. ಅವರಲ್ಲಿ ಪ್ರಮುಖರಾದ ಕೆಲವರು: ಪೇಜಾವರ ಸದಾಶಿವರಾಯರು, ಎಂ.ವಿ.ಸೀತಾ ರಾಮಯ್ಯ, ಸಿದ್ಧಯ್ಯ ಪುರಾಣಿಕ, ರಂಗನಾಥ ಎಕ್ಕುಂಡಿ, ಎಸ್.ಐ. ಇಂಚಲ, ಡಿ.ಎಸ್.ಕರ್ಕಿ, ಕುಸುಮಾಕರ ದೇವರಗೆಣ್ಣೂರ, ಸೇಡಿಯಾಪು ಕೃಷ್ಣಭಟ್ಟ, ಕಯ್ಯಾರ ಕಿಞ್ಞಣ್ಣ ರೈ, ಗಣಪತಿರಾವ್ ಪಾಂಡೇಶ್ವರ, ಜಿ.ಗುಂಡಣ್ಣ, ಗಂಗಾಧರ ಚಿತ್ತಾಲ, ಮಧುರಚೆನ್ನ, ದಿನಕರ ದೇಸಾಯಿ, ಎಸ್.ವಿ.ಪರಮೇಶ್ವರಭಟ್ಟ, ರಂ.ಶ್ರೀ.ಮುಗಳಿ, ಬ.ಗಿ.ಯಲ್ಲಟ್ಟಿ, ಸಾಲಿ ರಾಮಚಂದ್ರರಾಯರು, ಜಿ.ವರದರಾಜರಾವ್, ಅರ್ಚಕ ವೆಂಕಟೇಶ, ಅಕಬರ ಅಲಿ, ಹಿ.ಮ.ನಾಗಯ್ಯ.
ಭಾವಗೀತೆಗಳ ಇತಿಹಾಸ ಸುಮಾರು ಅರ್ಧ ಶತಮಾನಗಳ ಅವದಿsಯದ್ದು, ಈ ಐವತ್ತು ವರ್ಷಗಳಲ್ಲಿ ರಚಿತವಾಗಿರುವ ಭಾವಗೀತೆಗಳು ಗುಣದಲ್ಲೂ ಸಂಖ್ಯೆಯಲ್ಲೂ ಯಾವುದೇ ಸಾಹಿತ್ಯಕ್ಕೂ ಹೆಮ್ಮೆ ಸಮಾಧಾನಗಳನ್ನು ತರುವ ಅಂತಸ್ಸತ್ವವನ್ನು ಉಳ್ಳವು ಎಂಬ ಅಂಶ ಗಮನಾರ್ಹವಾದದ್ದು. ಈ ಭಾವಗೀತ ಪ್ರಕಾರವೇ ಮುಂದೆ ನವ್ಯಕಾವ್ಯದ ಜನನಕ್ಕೆ ಬೀಜಾಂಕುರವಾಯಿತು. (ಪಿ.ಎಸ್.)