ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ಮಹಿಳಾ ಸಾಹಿತ್ಯ

ವಿಕಿಸೋರ್ಸ್ದಿಂದ

ಕನ್ನಡದಲ್ಲಿ ಮಹಿಳಾಸಾಹಿತ್ಯ ಸಾವಿರದೈನೂರು ವರ್ಷಗಳ ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನಿಸಿದರೆ 20ನೆಯ ಶತಮಾನಕ್ಕೆ ಕಾಲಿರಿಸುವವರೆಗೆ ಮಹಿಳೆಯರೇ ರಚಿಸಿದ ಸಾಹಿತ್ಯ, ಮಹಿಳಾ ಸಾಹಿತ್ಯವೆಂಬ ಹೆಸರಿನಲ್ಲಿ ಗುರುತಿಸಬಹುದಾದಂಥದ್ದು ಹೆಚ್ಚು ಕಂಡುಬರುವುದಿಲ್ಲ. ಸ್ತ್ರೀಯರು ವಿದ್ಯೆಯಿಂದ ವಂಚಿತರಾದದ್ದು, ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಸಾರ್ವಜನಿಕ ಜೀವನದಲ್ಲಿ ಭಾಗಿಯಾಗುವ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗದೇ ಹೋದದ್ದು, ಸ್ವಾತಂತ್ರ್ಯವಿರದ ಅವಲಂಬನೆಯ ಜೀವನವೇ ಪ್ರಧಾನವಾದದ್ದು - ಇಂಥ ಅನೇಕ ಕಾರಣಗಳಿಂದಾಗಿ ಮಹಿಳೆ ಕನ್ನಡ ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಬಹುಕಾಲದವರೆಗೆ ಅನನ್ಯತೆಯನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಇದಕ್ಕೆ ಅಲ್ಲೊಂದು ಇಲ್ಲೊಂದು ಅಪವಾದಗಳಿರಬಹುದು. ಗುರುತಿಸುವಂಥ ಸೃಜನಶೀಲತೆ ನಮಗೆ ಕಾಣುವುದು 20ನೆಯ ಶತಮಾನದಲ್ಲಿಯೇ ಎನ್ನಬಹುದು.

ಸಾತವಾಹನರ ಕಾಲದಿಂದಲೂ ಆಡಳಿತ, ರಾಜ್ಯಭಾರ ಇತ್ಯಾದಿ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಶಕ್ತಿಸಾಮಥರ್ಯ್‌ಗಳನ್ನು ಪ್ರದರ್ಶಿಸಿದ ಕೆಲ ಮಹಿಳೆಯರು ಪ್ರತಿಭೆಗೆ ಉದಾಹರಣೆಯಾಗಿ ಕಾಣಸಿಗುತ್ತಾರೆ. ಬಾದಾಮಿ ಚಳುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿಯ (ಸು.610-42) ಎರಡನೆಯ ಮಗನಾದ ಚಂದ್ರಾದಿತ್ಯನ ಪ್ರಿಯ ಮಹಿಷಿ ‘ವಿಜ್ಜಿಕೆ’ ಎಂದು ಹೆಸರಾದ ವಿಜಯಮಹಾದೇವಿ ಸಂಸ್ಕೃತ ಪಂಡಿತೆಯೂ ಉತ್ತಮ ಕವಯಿತ್ರಿಯೂ ಆಗಿದ್ದು ಕೌಮುದೀ ಮಹೋತ್ಸವ ಎಂಬ ಸಂಸ್ಕೃತ ನಾಟಕವನ್ನು ರಚಿಸಿದಳೆಂದು ತಿಳಿದುಬರುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯ ಸಂದರ್ಭದಲ್ಲಿ ಸಾಂಸ್ಕೃತಿಕವಾಗಿ ಅತ್ತಿಮಬ್ಬೆ ಎಂಬ ಜೈನ ಮಹಿಳೆಯ ಹೆಸರು ಪ್ರಸಿದ್ಧವಾದದ್ದು. ಈಕೆ ಸಾವಿರದೈನೂರು ಜಿನ ಬಸದಿಗಳನ್ನು ನಿರ್ಮಿಸಿ, ಜಿನ ಪ್ರತಿಮೆಗಳನ್ನು ಮಾಡಿಸಿ ದಾನ ಚಿಂತಾಮಣಿ ಎಂಬ ಬಿರುದು ಗಳಿಸಿದ್ದವಳು. ಕವಿ ರನ್ನನಿಂದ ಅಜಿತ ಪುರಾಣ ಕಾವ್ಯವನ್ನು ಬರೆಸಿ, ಪೊನ್ನ ಬರೆದ ಶಾಂತಿಪುರಾಣದ ಸಹಸ್ರ ಪ್ರತಿಗಳನ್ನು ಮಾಡಿಸಿ ದಾನ ಮಾಡಿದವಳು. ಸು.1100ರಲ್ಲಿದ್ದಳೆಂದು ಭಾವಿಸಲಾಗಿರುವ ಕಂತಿ (ನೋಡಿ) ಕನ್ನಡದ ಪ್ರಪ್ರಥಮ ಕವಯಿತ್ರಿ. ಈಕೆಗೆ ಅದ್ಭುತ ಕವಿತಾ ಸಾಮಥರ್ಯ್‌ವಿತ್ತೆಂದೂ ಅಬಿsನವ ವಾಗ್ದೇವಿ, ಅದಿsಕ ಕವೀಶ್ವರಿ ಇತ್ಯಾದಿ ಬಿರುದುಗಳಿದ್ದವೆಂದೂ ಕಂತಿ ಹಂಪನ ಸಮಸ್ಯೆಗಳು ಎಂಬ ಕೃತಿಯನ್ನು ಬರೆದಿರುವಳೆಂದೂ ತಿಳಿದುಬರುತ್ತದೆ.

ಕಂತಿಯ ಅನಂತರ 12ನೆಯ ಶತಮಾನದಲ್ಲಿ ಹಲವಾರು ವಚನಕಾರ್ತಿಯರು ಕನ್ನಡದಲ್ಲಿ ವಚನಗಳನ್ನು ರಚಿಸಿ ಒಂದು ಚಳವಳಿಯನ್ನೇ ನಡೆಸಿದರು. ಮಹಿಳೆಯರು ತಮ್ಮ ಸಾಹಿತ್ಯದಲ್ಲಿ ಸಮಾಜದ ಬಗ್ಗೆ ಗಂಬೀರವಾಗಿ ಚಿಂತನೆ ನಡೆಸಿ, ಸಾಹಿತ್ಯ ರಚಿಸತೊಡಗಿದ್ದನ್ನು ನಾವು ಕೆಲವು ಹಂತಗಳಲ್ಲಿ ಗುರುತಿಸಬಹುದು. ಮೊದಲನೆಯದು 12ನೆಯ ಶತಮಾನದ ವಚನಕಾರ್ತಿಯರ ಕಾಲದಲ್ಲಿ; ಎರಡನೆಯ ಹಂತ, ದೇಶದ ಸ್ವಾತಂತ್ರ್ಯ ಚಳವಳಿಗಳು ನಡೆಯತೊಡಗಿ, ಸ್ವಾತಂತ್ರ್ಯಪುರ್ವ ಸಂದರ್ಭದಲ್ಲಿ ಮಹಿಳೆಯರು ಶಿಕ್ಷಣದ ಮಹತ್ತ್ವದ ಬಗ್ಗೆ ಅರಿವು ಮೂಡಿಸಿಕೊಂಡಾಗ; ಮೂರು ಮತ್ತು ನಾಲ್ಕನೆಯ ಹಂತ, 20ನೆಯ ಶತಮಾನದ ಎಪ್ಪತ್ತು - ಎಂಬತ್ತರ ದಶಕದಲ್ಲಿ, ದಲಿತ - ಬಂಡಾಯ ಹಾಗೂ ಸ್ತ್ರೀಶೋಷಣೆಯ ಅಥವಾ ಸ್ತ್ರೀವಾದದ ಹೊಸ ಎಚ್ಚರ, ಹೊಸ ಅರಿವು ಮೂಡಿದಾಗ. ಈ ಸಂದರ್ಭಗಳಲ್ಲೆಲ್ಲ ಮಹಿಳೆಯರು ಸಮಾಜದ ಸಮಸ್ಯೆಗಳ ಬಗ್ಗೆ, ಅವುಗಳನ್ನು ತೊಡೆಯಲು ಆಗಬೇಕಾದ ಸುಧಾರಣೆಗಳ ಬಗ್ಗೆ ಗಂಬಿsೕರ ಚಿಂತನೆ ನಡೆಸಿ ಸಾಹಿತ್ಯ ರಚಿಸಿದ್ದಾರೆ. ಇವೆಲ್ಲದರ ಜೊತೆ ಜೊತೆಗೇ ಪ್ರತ್ಯೇಕವಾಗಿ ಹರಿದು ಬಂದ ಜನಪದ ಸಾಹಿತ್ಯವನ್ನೂ ನಾವು ಮರೆಯುವಂತಿಲ್ಲ. 12ನೆಯ ಶತಮಾನದಲ್ಲಿ ಶರಣರು ಧಾರ್ಮಿಕ ಬದಲಾವಣೆಯ ಮೂಲಕ ಸಮಾಜದ ಪರಿವರ್ತನೆಗೆ ಪ್ರಯತ್ನಿಸಿದರು. ಸಾಮಾಜಿಕ, ಸಾಹಿತ್ಯಕ ಆಂದೋಲನವನ್ನು ರೂಪಿಸಿದರು. ಮೊದಲ ಬಾರಿಗೆ ಮಹಿಳೆಯರೂ ಸಾಹಿತ್ಯ ಸೃಷ್ಟಿಗೆ ಹಾಗೂ ಸಾಂಸ್ಕೃತಿಕ ಬದಲಾವಣೆಗೆ ಸ್ಪಂದಿಸಿದರು. ಕನ್ನಡ ಮಹಿಳಾ ಸಾಹಿತ್ಯದ ಆರಂಭದ ಕುರುಹುಗಳನ್ನು ನಾವು ವಚನ ಚಳವಳಿಯಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ವಚನ ಸಾಹಿತ್ಯದ ಮೂಲಕ ಸಾಹಿತ್ಯ ಆರಂಭಗೊಂಡಿದೆ. ಅಕ್ಕಮಹಾದೇವಿ, (ಚನ್ನಮಲ್ಲಿಕಾರ್ಜುನ), ಅಕ್ಕಮ್ಮ (ರಾಮೇಶ್ವರ ಲಿಂಗ), ರೆಮ್ಮವ್ವೆ (ಗುಮ್ಮೇಶ್ವರ), ಗಂಗಮ್ಮ, ಲಕ್ಷ್ಮಮ್ಮ ಮೊದಲಾದ ವಚನಕಾರ್ತಿಯರು ವಚನ ರಚನೆಯಲ್ಲಿ ಪಾಲುದಾರರಾದರು. ಮೂವತ್ತಾರಕ್ಕೂ ಹೆಚ್ಚು ಶಿವಶರಣೆಯರು ವಚನಗಳನ್ನು ರಚಿಸಿದ್ದು ಸೂಳೆ ಸಂಕವ್ವೆ, ಹೊಲತಿ ಗುಡ್ಡವ್ವೆ, ಉರಿಲಿಂಗ ಪೆದ್ದಿಯ ಪತ್ನಿ ಕಾಳವ್ವೆ, ಕುಂಬಾರ ಕೇತಲದೇವಿ, ಲಕ್ಕವ್ವೆ ಮೊದಲಾದ ದಲಿತ ಸ್ತ್ರೀಯರೂ ವಚನಗಳಲ್ಲಿ ಮಾತನಾಡಿದ್ದು ಆ ಕಾಲಕ್ಕೆ ಪವಾಡಸದೃಶ ಸಂದರ್ಭವಾಗಿತ್ತು. ಹೀಗೆ ವಚನಕಾರ್ತಿಯರು ವಚನ ಸಾಹಿತ್ಯಕ್ಕೆ ತಮ್ಮ ಅಮೂಲ್ಯ ಕಾಣಿಕೆ ನೀಡಿದರು. ಸಮಾಜದ ರೀತಿ-ನೀತಿಗಳನ್ನು ಜಾತಿ ಭೇದಗಳನ್ನು ಲಿಂಗ ಭೇದಗಳನ್ನು ತೊಡೆದು ಹಾಕುವ ಚಿಂತನೆ ಮಾಡಿದರು. ಇಂದಿನ ಮಹಿಳಾವಾದಕ್ಕೆ, ದಲಿತ ವಾದಕ್ಕೆ ಸಮಾಜದಲ್ಲಿ ಸಮಾನತೆ ಬೇಕೆಂಬ ಆಲೋಚನೆ ಮತ್ತು ಬೇಡಿಕೆಗಳಿಗೆ, ಇತಿಹಾಸದಲ್ಲಿ ಈ ವಚನಕಾರ್ತಿಯರು ಮೊದಲ ಮೆಟ್ಟಿಲನ್ನು ಕಟ್ಟಿಕೊಟ್ಟಿದ್ದಾರೆ ಎಂದು ಹೇಳಬಹುದು. ಅಕ್ಕಮಹಾದೇವಿಯನ್ನು ಕನ್ನಡ ಸಾಹಿತ್ಯದ ಮೊದಲ ಬಂಡಾಯ ಲೇಖಕಿ ಎಂದು ನಾವು ಗುರುತಿಸಬಹುದು.

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕಂಪಣನ ರಾಣಿಯಾದ ಗಂಗಾಂಬಿಕೆ ಮಧುರಾವಿಜಯವನ್ನು (ವೀರ ಕಂಪಣರಾಯ ಚರಿತೆ) ಸಂಸ್ಕೃತದಲ್ಲಿ ಬರೆದಳು. ಅಚ್ಯುತರಾಯನ ಹಿರಿಯ ರಾಣಿ ತಿರುಮಲಾಂಬೆ ಪತಿಯ ಎರಡನೆಯ ವಿವಾಹವನ್ನು ವಸ್ತುವಾಗಿಟ್ಟುಕೊಂಡು ವರದಾಂಬಿಕಾ ಪರಿಣಯ ಎಂಬ ಕೃತಿಯನ್ನು ರಚಿಸಿದಳು. ಅಬಿsರಾಮ ಕಾಮಾಕ್ಷಿ ಎಂಬಾಕೆ ಅಬಿನವ ರಾಮಾಭ್ಯುದಯವನ್ನೂ ರಾಮಭದ್ರಾಂಬ ಎಂಬಾಕೆ ರಘುನಾಥ ಅಭ್ಯುದಯವನ್ನೂ ರಚಿಸಿರುವುದಾಗಿ ಹೇಳಲಾಗಿದೆ. ರಘುನಾಥ ನಾಯಕನ ಆಸ್ಥಾನದಲ್ಲಿ ಮಧುರವಾಣಿ ಎಂಬ ಕವಯಿತ್ರಿ ಇದ್ದಳೆಂದು ತಿಳಿದುಬರುತ್ತದೆ.

ಚಿಕ್ಕದೇವರಾಜ ಒಡೆಯರ (1672-1704) ಆಸ್ಥಾನದಲ್ಲಿ ಸಂಚಿಯ ಹೊನ್ನಮ್ಮ, ಶೃಂಗಾರಮ್ಮ ಎಂಬ ಕವಯಿತ್ರಿಯರಿದ್ದರು. ಸಂಚಿಯ ಹೊನ್ನಮ್ಮ (ನೋಡಿ) ಹದಿಬದೆಯ ಧರ್ಮ ಎಂಬ ಕಾವ್ಯವನ್ನು ಸಾಂಗತ್ಯದಲ್ಲಿ ರಚಿಸಿದ್ದಾಳೆ. ಈಕೆ ಸಮಾಜದಲ್ಲಿಯ ಪುರುಷ ಪ್ರಾಧಾನ್ಯವನ್ನು ಸಂಪುರ್ಣ ಒಪ್ಪಿಕೊಂಡು, ಪುರುಷನ ಸುಖ- ಸಂತೋಷಗಳಿಗಾಗಿ ಹೆಣ್ಣು ದುಡಿದರೆ, ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಸುಖ-ನೆಮ್ಮದಿಗಳಿರುತ್ತವೆ ಎಂಬ ಅಬಿಪ್ರಾಯವನ್ನೇ ತನ್ನ ಕೃತಿಯ ಉದ್ದಕ್ಕೂ ಹೇಳಿಕೊಂಡು ಬಂದಿದ್ದಾಳೆ. ಈಕೆ ಸ್ತ್ರೀ ಪ್ರಗತಿಯ ಚಿಂತಕಿಯೂ ಅಲ್ಲ, ಪುರುಷ ಪ್ರಾಧಾನ್ಯವನ್ನು ಪ್ರಶ್ನಿಸಿದವಳೂ ಅಲ್ಲ. ಕುವರನಾದರೆ ಬಂದ ಗುಣವೇನದರಿಂದ ಕುವರಿಯಾದೊಡೆ ಕುಂದೇನು; ಹೆಣ್ಣು ಹೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು; ಪೆಣ್ಣು ಪೆತ್ತವರು ಪೆಚುರ್ಚ್‌ವರು; ಪೆಣ್ಣ ನಿಂದಿಸಲೇಕೆ ಪೆರರು; ಪೆಣ್ಣಿಂದ ಪೆರ್ಮೆಗೊಂಡನು ಹಿಮವಂತನು - ಹೀಗೆ ಸ್ತ್ರೀಪರವಾದ ಚಿಂತನೆಯ, ಹೆಣ್ಣು ಕೀಳಲ್ಲ ಎಂಬ ಭಾವನೆಯ ತಣ್ಣಗಿನ, ಮೆಲುದನಿಯ ಪ್ರತಿಭಟನೆಯ ದನಿಯನ್ನು ನಾವು ಇವಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.

ಶೃಂಗಾರಮ್ಮ (ನೋಡಿ) ಬರೆದ ಪದ್ಮಿನೀ ಕಲ್ಯಾಣ ಸಾಂಗತ್ಯ ರೂಪದ ಒಂದು ಸಾಮಾನ್ಯ ಕಾವ್ಯ. ದೊಡ್ಡ ಕೃಷ್ಣರಾಜ ಒಡೆಯರ (1713-32) ಪಟ್ಟ ಮಹಿಷಿಯಾಗಿದ್ದ ಚೆಲುವಾಂಬೆ (ನೋಡಿ) ವರನಂದೀ ಕಲ್ಯಾಣ ಎಂಬ ಕೃತಿಯನ್ನು ರಚಿಸಿದ್ದಾಳೆ. ವೆಂಕಟಾಚಲ ಮಾಹಾತ್ಮ್ಯ ಲಾಲಿಪದ, ಅಲಮೇಲುಮಂಗೈ ಲಾಲಿಪದ, ತಲಕಾವೇರಿ ಮಹಾತ್ಮ್ಯ ಟೀಕೆ - ಇವು ಈಕೆ ರಚಿಸಿದ ಇತರ ಕೃತಿಗಳು. ಹೆಳವನಕಟ್ಟೆ ಗಿರಿಯಮ್ಮ (ನೋಡಿ) ಚಂದ್ರಹಾಸನ ಕಥೆ, ಸೀತಾ ಕಲ್ಯಾಣ, ಉದ್ದಾಳಿಕನ ಕಥೆ, ಬ್ರಹ್ಮ ಕೊರವಂಜಿ ಮುಂತಾದ ಹಾಡುಗಬ್ಬಗಳನ್ನು ರಚಿಸಿದ್ದಾಳೆ. ಚಂದ್ರಹಾಸನ ಕಥೆಗೆ ಲಕ್ಷ್ಮೀಶನ ಜೈಮಿನೀ ಭಾರತ ಮೂಲ ಆಧಾರವೆಂದು ಈಕೆ ಹೇಳಿಕೊಂಡಿದ್ದಾಳೆ. ದಾಸ ಸಾಹಿತ್ಯದ ಸಂದರ್ಭದಲ್ಲಿಯೂ ಅನೇಕ ಸ್ತ್ರೀಯರು ಕೀರ್ತನೆಗಳನ್ನೂ ರಚಿಸಿದ್ದಾರೆ. ರುಕ್ಮೀಣೀಬಾಯಿ, ವಿಜಾಪುರದ ಪ್ರಯಾಗಬಾಯಿ, ಗಲಗಲಿ ಅವ್ವ, ಹರಪನಹಳ್ಳಿ ಬೀಮವ್ವ ಮೊದಲಾದವರು ಹಲವಾರು ಕೀರ್ತನೆಗಳನ್ನು ರಚಿಸಿದ್ದಾಗಿ ತಿಳಿದುಬಂದಿದೆ. ಗೋಪಾಲಕೃಷ್ಣ ವಿಠಲ ಎಂಬ ಅಂಕಿತ ಪಡೆದು 400ಕ್ಕೂ ಹೆಚ್ಚು ಹಾಡುಗಳನ್ನೂ ದ್ವಿಪದಿ ಛಂದಸ್ಸಿನ ರಾಮಾಯಣವನ್ನೂ ಬರೆದ ಚಿತ್ರದುರ್ಗದ ಅಂಬಾಬಾಯಿಯ (ಸು.1902) ಜೀವನ ವಿವರಗಳು ಇತ್ತೀಚೆಗೆ ದೊರಕಿದ್ದು ಆಕೆಯ ಹಾಡಿನ ಕ್ಯಾಸೆಟ್ಗಳು ಬಿಡುಗಡೆಯಾಗಿವೆ (2003).

ಜನಪದ ಗೀತೆಗಳ ರಚನೆಯಲ್ಲಿ ಮಹಿಳೆಯರದೇ ಸಿಂಹಪಾಲು. ಆದರೆ ಇಂಥವರ ರಚನೆಗಳು ಕಳೆದುಹೋಗಿರುವುದೇ ಹೆಚ್ಚು. ಸೀತಾ ಪರಿತ್ಯಾಗ, ರುಕ್ಮಿಣೀ ಕಲ್ಯಾಣ, ಚಂದ್ರಾವಳಿ ಮುಂತಾದ ಕೃತಿಗಳ ಲೇಖಕಿ ಯಶೋದಾಬಾಯಿ, ಜನಪದ ಛಂದಸ್ಸನ್ನು ಬಳಸಿ ಕೀರ್ತನ ರಾಮಾಯಣ ಬರೆದ ಬೊಮ್ಮಸಂದ್ರದ ಭಾಗೀರಥಮ್ಮ ಇಂಥ ಅಲ್ಲೊಬ್ಬ ಇಲ್ಲೊಬ್ಬರ ರಚನೆಗಳು ಅಕಸ್ಮಾತ್ ಉಳಿದುಬಂದಿರುವುದನ್ನು ನಾವು ಕಾಣಬಹುದು.

ಮೈಸೂರು ಅರಸರ ಕಾಲದ ಅನಂತರ 19ನೆಯ ಶತಮಾನದವರೆಗೆ-ಹೊಸಗನ್ನಡದ ಅರುಣೋದಯದ ಕಾಲದವರೆಗೆ - ಸಾಹಿತ್ಯ ರಚನೆ ಅಷ್ಟಾಗಿ ಕಂಡುಬರುವುದಿಲ್ಲ. 19ನೆಯ ಶತಮಾನದಲ್ಲಿ, ಸಾಂಸ್ಕೃತಿಕ ವಾತಾವರಣದಲ್ಲಿ ಸ್ತ್ರೀಪರ ಆಲೋಚನೆಗಳು ಕಾಣಿಸಿಕೊಳ್ಳತೊಡಗಿದ್ದವು. ರಾಷ್ಟ್ರೀಯ ಪುನರುತ್ಥಾನ ಆಂದೋಲನದಲ್ಲಿ ಸ್ತ್ರೀಯರ ಉದ್ಧಾರದ ಕಳಕಳಿಯೂ ಸೇರಿಕೊಂಡಿತ್ತು. ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ, ಶಾಲಾ ಶಿಕ್ಷಣ ಪಡೆದ ಮತ್ತು ಸಾಹಿತ್ಯದಲ್ಲಿ ಒಂದಿಷ್ಟು ಆಸಕ್ತಿ ಹೊಂದಿದ ಸ್ತ್ರೀಯರು ಅಲ್ಲಲ್ಲಿ ಕಾಣ ಸಿಕ್ಕರೂ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಡುವ ಧೈರ್ಯ ಮಾಡಿರಲಿಲ್ಲ. ಮಹಿಳೆಯರ ಪರವಾಗಿ ಪುರುಷರೇ ಬರೆಯಬೇಕಾದ ಸಂದರ್ಭವಿತ್ತು. ಆ ಕಾಲದ ಕೆಲವು ಪತ್ರಿಕೆಗಳು ಮತ್ತು ಸಂಘ-ಸಂಸ್ಥೆಗಳು, ಹೆಣ್ಣು ಮಕ್ಕಳ ಬರೆವಣಿಗೆಗೆ ಪ್ರಚೋದನೆ ನೀಡುವ ಉದ್ದೇಶದಿಂದ ಮಹಿಳೆಯರ ಬರೆಹಗಳಿಗೆ ಬಹುಮಾನಗಳನ್ನಿಟ್ಟು ಸ್ಪರ್ಧೆಗಿಳಿಸಿದವು. ಹೀಗೆ ಸ್ಪರ್ಧೆಗೆ ಬರೆಯುವ ಮೂಲಕ, ಬರೆವಣಿಗೆಯ ಬದುಕು ಆರಂಬಿsಸಿದ ಶಾಂತಾಬಾಯಿ ನೀಲಗಾರ, ತಿರುಮಲಾಂಬಾ, ಸರಸ್ವತಿ ದೇವಿಗೌಡರ ಮೊದಲಾದವರು, ನಿಬಂಧ, ಕಾದಂಬರಿ ಅಥವಾ ಲೇಖನಗಳನ್ನು ಬರೆದು ಬಹುಮಾನಗಳನ್ನೂ ಪಡೆದರು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಇಂಥ ನಿಬಂಧವನ್ನು ಆಹ್ವಾನಿಸಿದಾಗ, ಧಾರವಾಡದ ಹೆಣ್ಣುಮಕ್ಕಳ ಟ್ರೇನಿಂಗ್ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ರಾಗಿದ್ದ ಶಾಂತಾಬಾಯಿ ನೀಲಗಾರ ಎಂಬ ಮಹಿಳೆ ಸದ್ಗುಣಿ ಕೃಷ್ಣಾಬಾಯಿ (ಉತ್ತಮ ಗೃಹಿಣಿ) ಎಂಬ ಕೃತಿಯನ್ನು ಬರೆದರು. ಇದು ವಾಗ್ಭೂಷಣ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು (1908). ಇದು ಆಧುನಿಕ ಕಾಲದಲ್ಲಿ ಮಹಿಳೆಯೊಬ್ಬರು ಬರೆದ ಮೊತ್ತ ಮೊದಲ ಕಾದಂಬರಿ. ಶಾಂತಾಬಾಯಿ ನೀಲಗಾರರೇ ಮೊದಲ ಕಾದಂಬರಿಕಾರ್ತಿ. ಈ ಕೃತಿಯಲ್ಲಿ ಆ ಕಾಲದ ಸಮಾಜದಲ್ಲಿ ಮಹಿಳೆಯರ ಶಿಕ್ಷಣದ ಬಗ್ಗೆ ಇದ್ದ ಆತಂಕ ಮತ್ತು ಅನುಮಾನಗಳನ್ನು ದೂರಮಾಡುವ ಪ್ರಯತ್ನವಿದೆ. ‘ಜ್ಞಾನವು ಎಲ್ಲ ಹೆಂಗಸರಿಗೂ ಗಂಡಸರಿಗೂ ಸರಿಯಾಗಿಯೇ ಅಗತ್ಯವಾದದ್ದು. ವಿದ್ಯೆ ಕಲಿತ ಹೆಂಗಸರೇ ವಿದ್ಯೆ ಕಲಿತ ಗಂಡಸರ ಮನಸ್ಸಿಗೆ ತಮ್ಮ ಭಾಷಣ ಮುಂತಾದ್ದರಿಂದ ಆನಂದಪಡಿಸುವರಲ್ಲದೆ ಮೂಢ ಹೆಂಗಸರು ಪಡಿಸಲಾರರು. ವಿದ್ಯೆ ಕಲಿಯದ ಹೆಂಡಂದಿರು, ಸುಶಿಕ್ಷಿತ ಗಂಡಂದಿರಿಗೆ, ಕೇವಲ ವಂಶಾಬಿವೃದ್ಧಿಯ ಕೆಲಸದಲ್ಲಿ ಮಾತ್ರ ಉಪಯೋಗವಾಗುವರು. ಸುಶಿಕ್ಷಿತ ಸ್ತ್ರೀಯರು ಮಕ್ಕಳಿಗೂ ಗಂಡಂದಿರಿಗೂ ಗುರುಹಿರಿಯರಿಗೂ ಉಪಯುಕ್ತರಾಗಿ ದೇಶೋನ್ನತಿಗೆ ಸಹ ಕಾರಣರಾಗುತ್ತಾರೆ’ ಎಂಬಂತಹ ವಿಚಾರ ನೀತಿಸಂಹಿತೆಯಂತೆ ಕಂಡರೂ ಸಂಸ್ಕೃತಭೂಯಿಷ್ಠ ಶೈಲಿ ಅನಿಸಿದರೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕಾದ ಅಗತ್ಯದ ಬಗ್ಗೆ ಆಲೋಚನೆ ಮಾಡುವಂತೆ ಮಾಡಿದರು.

ಶಾಂತಾಬಾಯಿಯವರ ಕಾದಂಬರಿ ದೊರಕುವವರೆಗೆ ನಂಜನಗೂಡು ತಿರುಮಲಾಂಬಾ ಅವರೇ ಆಧುನಿಕ ಕನ್ನಡದ ಮೊತ್ತಮೊದಲ ಕಾದಂಬರಿಕಾರ್ತಿ ಎಂದೂ ಅವರು ಪ್ರಕಟಿಸಿದ ಸುಶೀಲೆ (1913) ಕಾದಂಬರಿಯೇ ಮೊದಲ ಮಹಿಳಾ ಕಾದಂಬರಿ ಎಂದೂ ಪರಿಗಣಿಸಲಾಗಿತ್ತು. ತಿರುಮಲಾಂಬಾ ಮತ್ತು ಆರ್.ಕಲ್ಯಾಣಮ್ಮನವರು ಸ್ವತಃ ನವೋದಯದ ಲೇಖಕರಿಗಿಂತ ಹೆಚ್ಚು ಹಳೆಯ ಪೀಳಿಗೆಯವರ ಸುಧಾರಣಾ ಮನೋಭಾವ, ವಿಚಾರ ಮತ್ತು ಭಾಷೆಗಳನ್ನು ತಮ್ಮ ಆದರ್ಶವಾಗಿಸಿಕೊಂಡವರು. ಸ್ವತಃ ವಿಧವೆಯರಾಗಿದ್ದು ವಿದ್ಯಾಭ್ಯಾಸ ಮಾತ್ರವಲ್ಲದೆ, ಕೇಶಮುಂಡನ ಸಮಸ್ಯೆ, ಅಸಮ ವಿವಾಹ, ಬಾಲ್ಯ ವಿವಾಹ, ವಿಧವಾ ವಿವಾಹ ಮುಂತಾದ ಸುಧಾರಣಾ ಅಂಶಗಳ ಬಗ್ಗೆ ಆಲೋಚನೆ ನಡೆಸಿದರು. ಸಮಾಜದ ಮನಸ್ಸನ್ನೂ ಸ್ತ್ರೀಯರ ಸ್ಥಾನಮಾನವನ್ನೂ ತಿದ್ದಲು ಬೇಕಾದಂತಹ ಪಾತ್ರಸನ್ನಿವೇಶಗಳನ್ನು ತಮ್ಮ ಕೃತಿಗಳಲ್ಲಿ ತಂದು ಕಥೆ, ಕಾದಂಬರಿ, ನಾಟಕ, ಲೇಖನ ಇತ್ಯಾದಿ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದರು. ತಿರುಮಲಾಂಬಾರವರು ಸತೀಹಿತೈಷಿಣಿ ಗ್ರಂಥಮಾಲೆ ಎಂಬ ಪ್ರಕಟಣಾ ಸಂಸ್ಥೆಯನ್ನೂ (1913) ಕರ್ನಾಟಕ ನಂದಿನಿ ಎಂಬ ಪತ್ರಿಕೆಯನ್ನೂ ಆರಂಬಿಸಿದ್ದರು (1916). ತಿರುಮಲಾಂಬಾರವರಿಗಿಂತ ಹೆಚ್ಚು ನಿಖರವಾದ ನಿಲುವುಳ್ಳ ಆರ್.ಕಲ್ಯಾಣಮ್ಮನವರು ‘ಶ್ರೀ ಶಾರದಾ ಸ್ತ್ರೀ ಸಮಾಜ’ (1913) ಆರಂಬಿಸಿದುದಲ್ಲದೆ ಸ್ತ್ರೀ ಸಮಸ್ಯೆಗಳು, ಸ್ತ್ರೀ ಜಗತ್ತಿನ ವಿವಿಧ ವಿಷಯಗಳು, ಜ್ಞಾನ ನಾಬಿವೃದ್ಧಿ ಅಂಕಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ವರದಿ, ಕೌಟುಂಬಿಕ ಸಲಹೆ ಇತ್ಯಾದಿ ವಿಷಯಗಳನ್ನೊಳಗೊಂಡ ಸರಸ್ವತಿ ಎಂಬ ಪತ್ರಿಕೆಯನ್ನು ಆರಂಬಿsಸಿ (1917) ಸು.43 ವರ್ಷಗಳ ಕಾಲ ನಡೆಸಿದರು. ಇದೇ ಪತ್ರಿಕೆಯ ಮಕ್ಕಳ ಬಾವುಟ ವಿಭಾಗ ಮಕ್ಕಳ ಬರೆಹಗಳನ್ನು ಪ್ರಕಟಿಸಿ, ಆ ಕಾಲದಲ್ಲಿ ಮಕ್ಕಳಲ್ಲಿ ಸಾಹಿತ್ಯ ರಚನೆಯನ್ನೂ ಅಧ್ಯಯನದ ಅಬಿsಲಾಷೆಯನ್ನೂ ಮೂಡಿಸುವಲ್ಲಿ ನೆರವಾಯಿತು. ಪೌರ ಸಾಮಾಜಿಕ ಕಾರ್ಯಗಳಿಗೂ ತಮ್ಮ ಜವಾಬ್ದಾರಿಯನ್ನು ಹೆಂಗಸರು ವಿಸ್ತರಿಸಲು ಅನುವಾಗುವಂತೆ ಸಾಮಾಜಿಕ ಪ್ರe್ಞೆಯನ್ನು ಬೆಳೆಸುವ ರೀತಿಯಲ್ಲಿ ಸ್ತ್ರೀಯರಿಗೆ ವಿದ್ಯೆಯಾಗಬೇಕು ಎಂಬುದನ್ನು ಇವರು ಪ್ರತಿಪಾದಿಸಿದರು. ಸಾಮಾಜಿಕ ವಾತಾವರಣ ಬದಲಾಗುತ್ತ ಹೋದಂತೆ ತಮ್ಮ ಬರೆಹದ ಧಾಟಿ, ಧೋರಣೆಗಳನ್ನೂ ಇವರು ಬದಲಾಯಿಸಿಕೊಂಡರು.

ಭಾರತ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಅನೇಕ ಮಹಿಳೆಯರು ಭಾಗವಹಿಸಿದರು. ಅದುವರೆಗೆ ಅಡುಗೆಮನೆಯನ್ನು ದಾಟದವರಿಗೆ, ದೇಶದ ಸ್ವಾತಂತ್ರ್ಯದ ಪರಿಕಲ್ಪನೆಯೊಂದಿಗೆ ಶಿಕ್ಷಣದ ಪರಿಕಲ್ಪನೆ ಮೂಡಿತು. ಸಮಾಜವೆಂದರೆ ಕೇವಲ ಪುರುಷರಲ್ಲ, ಅದರಲ್ಲಿ ಸ್ತ್ರೀಯೂ ಸೇರಿದ್ದಾಳೆ ಎಂಬ ಭಾವನೆ ಬೆಳೆಯಲಾರಂಭವಾಯಿತು. ಸ್ತ್ರೀಗೂ ಶಿಕ್ಷಣ ಬೇಕು, ಆಗಲೇ ಸಮಾಜದ ಅಬಿsವೃದ್ಧಿ ಸಾಧ್ಯ ಎಂಬುದನ್ನು ಕಂಡುಕೊಳ್ಳುವ ಪ್ರಯತ್ನಗಳು ನಡೆದವು. ತಿ.ತಾ.ಶರ್ಮರ ಪತ್ನಿ ತಿರುಮಲೆ ರಾಜಮ್ಮ (ಸು.1900) ನವರು ಭಾರತಿ ಎಂಬ ಕಾವ್ಯನಾಮದಿಂದ ಕಾವ್ಯ, ನಾಟಕ, ವ್ಯಕ್ತಿಚಿತ್ರ, ರೂಪಕ ಮುಂತಾದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದರು. ಮಹಾತ್ಮಾ ಗಾಂದೀಜಿಯವರನ್ನು ತಮ್ಮ ಸಂಗೀತದಿಂದ ಪ್ರಭಾವಿಸಿದರು. ಇವರು ಬರೆದ ತಪಸ್ವಿನಿ, ಮಹಾಸತಿ, ವಾತ್ಸಲ್ಯ, ತರಂಗಲೀಲ ಎಂಬ ನಾಟಕಗಳು; ಸ್ವರ್ಗ ನಿರಸನ, ದುಂದುಬಿ ಮುಂತಾದ ಕೃತಿಗಳು; ಜೀವನ ಜಿಜ್ಞಾ ಸೆ, ಅಂತರವಾಣಿ ಮುಂತಾದ ಕವಿತೆಗಳು, ವಿಮರ್ಶೆ, ಪ್ರಬಂಧ, ಮಕ್ಕಳ ಸಾಹಿತ್ಯ - ಇವು ಇವರು ಕನ್ನಡಕ್ಕೆ ನೀಡಿದ ಉತ್ತಮ ಕೊಡುಗೆಗಳು. ಇವರು ರಚಿಸಿದ ‘ಜೈ ಭಾರತ ಭುವಿಗೆ ಮಾತೆಗೆ ಜೈ ಪಾವನ ಮೂರ್ತಿಗೆ ಜೈ’ ಎಂಬುದು ಆ ಕಾಲದ ಅತ್ಯಂತ ಜನಪ್ರಿಯ ದೇಶಭಕ್ತಿ ಗೀತೆಯಾಗಿತ್ತು.

ಇವರ ಅನಂತರದ ಪೀಳಿಗೆಯವರಾದ ಶ್ಯಾಮಲಾದೇವಿಯವರು (1910) ಮಿಸೆಸ್ ಬಿ.ಟಿ.ಜಿ.ಕೃಷ್ಣ ಎಂಬ ಹೆಸರಿನಿಂದ ಕಥೆಗಳನ್ನು ಬರೆದರು. ಕೊಡಗಿನ ಗೌರಮ್ಮ (1912-39), ಗಿರಿಬಾಲೆ (ಸರಸ್ವತಿಬಾಯಿ ರಾಜವಾಡೆ, 1913), ಎಚ್.ವಿ.ಸಾವಿತ್ರಮ್ಮ (1913) - ಇವರು ಆಧುನಿಕ ಶಿಕ್ಷಣ, ಸುಧಾರಣೆಯ ಮನೋಧರ್ಮಗಳನ್ನು ಹೊಂದಿದ್ದು, ಮುಂದುವರೆದ ನೆಲೆಯಲ್ಲಿ ತಮ್ಮ ಚಿಂತನೆ ಮತ್ತು ಬರೆಹಗಳಿಗೆ ತೊಡಗಿದರು. ಸ್ತ್ರೀಯರ ಮತ್ತು ಬಡವರ ಶೋಷಣೆಯ ಸಮಸ್ಯೆಗಳನ್ನು ವಸ್ತುವಾಗಿಟ್ಟುಕೊಂಡು ಇವರೆಲ್ಲರೂ ಕೃತಿ ರಚನೆ ಮಾಡಿದ್ದಾರೆ. ‘ಕಂಬನಿ’ ಕೊಡಗಿನ ಗೌರಮ್ಮನವರ (ನೋಡಿ) ಸಣ್ಣಕಥೆಗಳ ಸಂಕಲನ, ಅವರ ನಿಧನಾನಂತರ ಪ್ರಕಟವಾಯಿತು. ಗಿರಿಬಾಲೆಯವರು ಕ್ರೌರ್ಯ, ಸ್ವಾರ್ಥ, ಬಡತನ, ಡಾಂಬಿಕತೆ, ಮೌಢ್ಯಗಳನ್ನು ತೀಕ್ಷ್ಣವಾಗಿ ತರ್ಕಬದ್ಧವಾಗಿ ತಮ್ಮ ಹರಿತವಾದ ಭಾಷೆಯಲ್ಲಿ ಚಿತ್ರಿಸಿದರು. ಅನ್ಯಾಯದ ವಿರುದ್ಧ ಬಂಡೇಳಬಲ್ಲ ಗಟ್ಟಿತನ, ವಿಚಾರಶಕ್ತಿಗಳು ಇವರ ಕೃತಿಗಳಲ್ಲಿವೆ. ಹೂ ಬಿಸಿಲು (1936), ಹೊಂಬಿಸಿಲು (1943) ಎಂಬ ಕಥಾಸಂಕಲನಗಳ ಕರ್ತೃವಾದ ಶ್ಯಾಮಲಾದೇವಿ ಬೆಳಗಾಂವಕರ್ ಅವರು ಸಾಮಾಜಿಕ ಸಮಸ್ಯೆಗಳಿಗೆ ಕಲಾತ್ಮಕ ರೂಪ ಕೊಟ್ಟವರು. ತಮ್ಮ ಪತಿಯೊಂದಿಗೆ ಜಯ ಕರ್ನಾಟಕ ಪತ್ರಿಕೆಯನ್ನು ನಡೆಸಲು ಎಲ್ಲ ರೀತಿಯಲ್ಲಿ ನೆರವಾದವರು. ಎಚ್.ವಿ.ಸಾವಿತ್ರಮ್ಮನವರು ಸೀತೆ-ರಾಮ-ರಾವಣ, ವಿಮುಕ್ತಿ ಎಂಬ ಕಾದಂಬರಿಗಳಲ್ಲಿ ರಾಮಾಯಣದ ಕಥೆಯಲ್ಲೇ ಜಾಗೃತ ಸ್ತ್ರೀ ಪಾತ್ರಗಳನ್ನು ಕೆತ್ತಿದ್ದಾರೆ. ಸಂಕಷ್ಟ ಪರಿಸ್ಥಿತಿಯಲ್ಲಿ ಪುರುಷರ ಪಲಾಯನವಾದ, ಸ್ವಾರ್ಥ, ಅವಿಶ್ವಾಸಗಳನ್ನು ಈ ಕೃತಿಗಳು ಗಮನಕ್ಕೆ ತರುತ್ತವೆ. ಈ ಎಲ್ಲ ಲೇಖಕಿಯರು ಸ್ತ್ರೀ ಸಂವೇದನೆಯ ಕೃತಿಗಳನ್ನು ರಚಿಸಿದವರು. ಬೆಳಗೆರೆ ಜಾನಕಮ್ಮನವರು (1912) ಕಲ್ಯಾಣ ಎಂಬ ಒಂದೇ ಕವನ ಸಂಕಲನ ತಂದರೂ ಇದು ಸ್ತ್ರೀವಾದಿ ದೃಷ್ಟಿಯಿಂದ ಮಹತ್ತ್ವದ ಕೃತಿಯಾಗಿದೆ. ಸ್ತ್ರೀ ಪರ ಕಾಳಜಿಯುಳ್ಳ ಕೃತಿ ರಚಿಸಿದ ಮೊದಲಿಗರಲ್ಲಿ ಇವರೂ ಒಬ್ಬರು. ಆ ಕಾಲದ ಸ್ತ್ರೀಯರ ಬವಣೆಗಳ ಬಗ್ಗೆ, ಬಂಧನ ಮತ್ತು ಕಟ್ಟುಪಾಡುಗಳ ಬಗ್ಗೆ, ಪಾರತಂತ್ರ್ಯದ ಬಗ್ಗೆ ಇವರ ಕವನಗಳು ನಮ್ಮ ಗಮನ ಸೆಳೆಯುತ್ತವೆ. ಹೆಣ್ಣಿನ ಮುಕ್ತಿಗೆ, ಸುಖಕ್ಕೆ ಮದುವೆ-ಮಕ್ಕಳು ಬಿಟ್ಟು ಬೇರೆ ಪ್ರಪಂಚವೂ ಕಾರ್ಯರಂಗವೂ ಇದೆ, ಉಪಯುಕ್ತ ಸೇವೆಗಳಿವೆ ಎಂಬ ಹೊಸ ಮಾತನ್ನು ಹೇಳಿದ ವಿಶಿಷ್ಟ ಕತೆಗಾರ್ತಿ ಎಚ್.ಎಸ್.ಕಾತ್ಯಾಯನಿ (1923-95). ರಸಪಾಕದಿಂದ ಹಿಡಿದು ಶೂರರಾಣಿ ಕೆಳದಿಯ ಚೆನ್ನಮ್ಮಾಜಿಯಂತಹ ಸಂಶೋಧನಾತ್ಮಕ ಕೃತಿಗಳನ್ನೊಳಗೊಂಡಂತೆ ಇಪ್ಪತ್ತಾರಕ್ಕೂ ಹೆಚ್ಚು ವಿವಿಧ ವಿಷಯಗಳ ಕುರಿತು ಕೃತಿ ರಚಿಸಿದ ಶಾಂತಾದೇವಿ ಮಾಳವಾಡ (1922), ಸ್ತ್ರೀ ಸಂಬಂಧದ ಪರಂಪರಾಗತ ಮೌಲ್ಯಗಳು ಹಾಗೂ ಧೋರಣೆಗಳನ್ನು ಒರೆಗೆ ಹಚ್ಚಿ ನೋಡುವ ಹೊಸ ಕೆಲಸವನ್ನು ತಮ್ಮ ಹಲವಾರು ನಾಟಕ, ಸಣ್ಣಕತೆ, ಕಾವ್ಯ, ಪ್ರಬಂಧಗಳ ಮೂಲಕ ಮಾಡಿದ ಸರಸ್ವತೀ ದೇವಿಗೌಡರ (1923-73), ಸ್ತ್ರೀಯನ್ನು ಕನಿಕರದಿಂದ ಕಾಣದೆ ಸಮಾನ ಭಾವನೆಯಿಂದ ಕಾಣಬೇಕೆಂದು ಪ್ರತಿಪಾದಿಸಿ ಸಣ್ಣಕತೆ, ಕಾದಂಬರಿ, ನಾಟಕ, ಶಿಶುಸಾಹಿತ್ಯಗಳ ಪ್ರಕಾರದಲ್ಲಿ ಕೊಡುಗೆ ನೀಡಿದ ಗೀತಾ ಕುಲಕರ್ಣಿ (1927-86) ಇವರುಗಳ ಕೊಡುಗೆಯೂ ಈ ನಿಟ್ಟಿನಲ್ಲಿ ಗಮನಾರ್ಹವಾದುದು.

ಹಿಂದಿ, ಕೊಂಕಣಿ ಮತ್ತು ಕನ್ನಡದಲ್ಲಿ ಕೃತಿಗಳನ್ನು ರಚಿಸಿದ ಸೀತಾದೇವಿ ಪಡುಕೋಣೆ (1903), ಸಾಕಷ್ಟು ಸಂಕಷ್ಟಗಳ ನಡುವೆಯೂ ಸ್ವಂತ ಕೃತಿಗಳನ್ನೂ ಹಿಂದಿಯಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಹಿಂದಿಗೆ ಭಾಷಾಂತರಿಸಿದ ರಚನೆಗಳನ್ನು ಹೊರತಂದ ವಾಸಂತಿ ಪಡುಕೋಣೆ (1908-95), ನೈತಿಕ ನಿಲುವಿನಲ್ಲಿಯೇ ಮಹಿಳೆಯರ ಪ್ರಗತಿಯ ಬಗ್ಗೆಯೂ ಯೋಚಿಸಿ ಗ್ರಾಮೋದ್ಧಾರಕ ರಾಮಚಂದ್ರ, ಕುಮುದಿನಿ, ಕೃಪಾಶಂಕರ್, ಚಂಚಲೆ, ಪರಿಮಳೆ, ಜೀವನದ ಕರೆ ಮುಂತಾಗಿ ತಮಿಳು ಮತ್ತು ಕನ್ನಡಗಳಲ್ಲಿ ಕಥೆ, ಕಾದಂಬರಿ, ಮತ್ತಿತರ ಪ್ರಕಾರದಲ್ಲಿ ಸಾವಿರಕ್ಕೂ ಹೆಚ್ಚು ಲೇಖನ ಹಾಗೂ ಕಥೆಗಳನ್ನು ರಚಿಸಿದ (ಸರೋಜ ಕಾವ್ಯನಾಮದ) ಜಯಲಕ್ಷ್ಮಿ ಶ್ರೀನಿವಾಸನ್ (1911), ಸಂಪ್ರದಾಯಗಳ ದಾರಿಯಲ್ಲಿ, ಸಿದ್ಧರಾಮೇಶ್ವರ ಪುರಾಣ, ತಾಯಿಯ ಪದಗಳು, ಜಯಗೀತ, ಬಂದೇವು ಕಲ್ಯಾಣಕೆ ಮುಂತಾದ ಧಾರ್ಮಿಕ ನೆಲೆಯ ಕೃತಿಗಳನ್ನು ರಚಿಸಿ, ಕನ್ನಡದ ಉಳಿವಿಗೆ ಸೊಲ್ಲಾಪುರ ಪ್ರದೇಶದಲ್ಲಿ ಹೋರಾಟ ನಡೆಸಿದ ಜಯದೇವಿತಾಯಿ ಲಿಗಾಡೆ (1912-86), "ಸೋದರಿ "ಎಂಬ ವಾರಪತ್ರಿಕೆಯ ಮೂಲಕ ಹಲವು ಮಹಿಳೆಯರ ಅರಿವಿಗೆ ಹಾಗೂ ಪ್ರಗತಿಗೆ ಅಗತ್ಯ ಸಾಮಗ್ರಿಗಳನ್ನೊದಗಿಸಿ, ಹಲವರನ್ನು ಬರೆಹಕ್ಕೆ ತೊಡಗಿಸಿದ ಎಂ.ಆರ್.ಲಕ್ಷ್ಮಮ್ಮ (1913), ಹಾಸ್ಯ ಕ್ಷೇತ್ರದಲ್ಲಿ ಲೇಖಕಿಯಾಗಿ ನವಿರು ಹಾಸ್ಯದ ಉತ್ತಮ ಕೃತಿಗಳನ್ನು ಕೊಟ್ಟ ಟಿ.ಸುನಂದಮ್ಮ (1917), ಸಂಪ್ರದಾಯಗಳ ಬೇರಿಗೆ ಅಂಟಿಕೊಳ್ಳದೆ, ಕ್ರಿಸ್ತನಲ್ಲೇ ರಾಮನನ್ನು ಕಾಣುತ್ತ ವಿಜಾತೀಯರಲ್ಲಿ ಮತ್ತು ವಿದೇಶೀಯರಲ್ಲಿ ಮಾನವೀಯ ಅಂಶಗಳನ್ನು ಗಮನಿಸಿ ತಮ್ಮವರಾಗಿ ಕಾಣುವ ವಿಶಾಲ ಮನೋಭಾವನೆಯಿಂದ ಲೇಖಕನ ಹೆಂಡತಿ ಮತ್ತು ಇತರ ಕಥೆಗಳು, ಕಣ್ಮುಚ್ಚಿ ನೋಡಿದಾಗ ಮೊದಲಾದ ಕೃತಿಗಳನ್ನು ಹೊರ ತಂದ ಸುಶೀಲಾ ಕೊಪ್ಪರ್ (1924), ಜೀವನಪ್ರೀತಿಯನ್ನು ತೋರುವ ಕಥೆಗಳನ್ನು ಬರೆಯುತ್ತಿದ್ದ ರಾಜೇಶ್ವರಿ ನರಸಿಂಹಮೂರ್ತಿ (1916-73), ಗಂಗರಸ ದುರ್ವಿನೀತ, ಶಪ್ತವಾಪಿ ಎಂಬ ಉತ್ತಮ ಚಾರಿತ್ರಿಕ ಕಾದಂಬರಿಗಳನ್ನು ಬರೆದ ಮೊದಲ ಕನ್ನಡ ಮಹಿಳೆ ಸಿ.ಎನ್.ಜಯಲಕ್ಷ್ಮೀದೇವಿ (1925-95), ವೀರಮಾತೆ ಎಂಬ ಪತ್ರಿಕೆಯ ಸಂಪಾದಕಿಯೂ ಸಮರ್ಥ ಮಂತ್ರಿಯೂ ಮುಳ್ಳು ಗುಲಾಬಿ, ನವಿಲು, ಇಂಚರ ಎಂಬ ಶಿಶುಸಾಹಿತ್ಯವನ್ನೂ ಕಾವ್ಯ ಕೃತಿಗಳನ್ನೂ ಕರ್ನಾಟಕದ ಕವಯಿತ್ರಿಯರು ಎಂಬ ಸಂಶೋಧನಾ ನಿಬಂಧವನ್ನೂ ಹಲವಾರು ಲೇಖನಗಳನ್ನೂ ರಚಿಸಿದ ಅಪಾರ ವಿದ್ವತ್ ಪ್ರತಿಭೆಯ ಸರೋಜಿನಿ ಮಹಿಷಿ ಮೊದಲಾದವರು ಸಾಹಿತ್ಯವನ್ನು ಗಂಬೀರವಾಗಿ ಪರಿಗಣಿಸಿ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡಿದ್ದಾರೆ. ಮಂಡ್ಯದ ಶೃಂಗಾರಮ್ಮನವರು ಶ್ರೀದೇವಿ ಎಂಬ ಕಾವ್ಯನಾಮದಲ್ಲಿ ಆಗಮ ಶಾಸ್ತ್ರಗಳ ಬಗ್ಗೆ ಪುಸ್ತಕಗಳನ್ನು ಬರೆದ ಮೊದಲ ಲೇಖಕಿಯಾಗಿ ಕಂಡುಬರುತ್ತಾರೆ.

ತ್ರಿವೇಣಿ (1928-65) ಕಾವ್ಯನಾಮದ ಅನಸೂಯ ಮಹಿಳಾ ಕಾದಂಬರಿಕಾರ್ತಿಯರಲ್ಲಿ ದೊಡ್ಡ ಹೆಸರು. ಇವರು 20ನೆಯ ಶತಮಾನದ 50-60ರ ದಶಕದಲ್ಲಿ ಲೇಖಕಿಯರ ಸುಧಾರಣಾ ಸಾಹಿತ್ಯ ಮಾರ್ಗವನ್ನೂ ಅ.ನ.ಕೃ., ಕಾರಂತ ಮೊದಲಾದವರು ಸಿದ್ಧಪಡಿಸಿಟ್ಟ ಕಾದಂಬರಿಯ ವೇದಿಕೆಯನ್ನೂ ಮನೋವೈಜ್ಞಾನಿಕ ಸೂತ್ರಗಳನ್ನು ಬಳಸಿಕೊಂಡು ಮಹಿಳೆಯರ ವಿವಿಧ ಬಗೆಯ ಸಮಸ್ಯೆಗಳನ್ನು ವಸ್ತುವಾಗಿಟ್ಟುಕೊಂಡು, ಆಕರ್ಷಕ ಶೈಲಿ, ಸುಂದರ ಭಾಷೆ ಮತ್ತು ನಿರೂಪಣೆಯ ಜಾಣ್ಮೆಯಿಂದ ಒಂದು ದಶಕದ ಅವದಿಯಲ್ಲಿ ಇಪ್ಪತ್ತನಾಲ್ಕು ಕಥೆ-ಕಾದಂಬರಿಗಳನ್ನು ರಚಿಸಿ ಅಪಾರ ಜನಪ್ರಿಯತೆ ಗಳಿಸಿದರು. ಕಾದಂಬರಿ ಪ್ರಕಾರದ ಮಹತ್ತ್ವವನ್ನೂ ಓದುಗರ ಸಂಖ್ಯೆಯನ್ನೂ ಇವರ ರೀತಿ ಬರೆಯುವ ಲೇಖಕಿಯರ ಸಂಖ್ಯೆಯನ್ನೂ ಹೆಚ್ಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಹಣ್ಣೆಲೆ ಚಿಗುರಿದಾಗ, ಬೆಳ್ಳಿಮೋಡ, ಶರಪಂಜರ, ಹೂವು ಹಣ್ಣು ಕನ್ನಡದಲ್ಲೂ ಬೆಕ್ಕಿನ ಕಣ್ಣು ಮಲೆಯಾಳಂನಲ್ಲೂ ಚಲನಚಿತ್ರಗಳಾಗಿ ಭರ್ಜರಿ ಯಶಸ್ಸುಗಳಿಸಿದ ಕಾದಂಬರಿಗಳು. ದೂರದ ಬೆಟ್ಟ, ಹಣ್ಣೆಲೆ ಚಿಗುರಿದಾಗ, ಸೋತು ಗೆದ್ದವಳು, ಕೀಲುಗೊಂಬೆ ಮುಂತಾದವು ಹೆಚ್ಚಿನ ಜನಮೆಚ್ಚುಗೆ ಪಡೆದ ಇತರ ಕಾದಂಬರಿಗಳು (ನೋಡಿ: ತ್ರಿವೇಣಿ). ತ್ರಿವೇಣಿಯವರ ಅನಂತರದ ಮಹತ್ತ್ವದ ಹೆಸರು ಎಂ.ಕೆ.ಇಂದಿರಾ (1917). ತಮ್ಮ 44ನೆಯ ವಯಸ್ಸಿನಲ್ಲಿ ಬರೆಹಕ್ಕೆ ತೊಡಗಿ ಮೊದಲ ಕಾದಂಬರಿಯಾದ ತುಂಗಭದ್ರದಿಂದ ಜನಪ್ರಿಯರಾದವರು. ಸಾಮಾಜಿಕ ಜೀವನವನ್ನು ಸಂಪ್ರದಾಯಪರ ನಿಲುವಿನಲ್ಲಿಯೇ ಚಿತ್ರಿಸಿದರೂ ಸಮಾಜದ ವಿವಿಧ ಬಗೆಯ ಸಾಮಾಜಿಕ ಸಮಸ್ಯೆಗಳನ್ನೂ ಸ್ತ್ರೀಯರ ಜಗತ್ತಿನಲ್ಲಿ ಆಗುತ್ತಿರುವ ಶೋಷಣೆಯ ಸೂಕ್ಷ್ಮ ಎಳೆಗಳನ್ನೂ ಕಂಡರಿಸಿದ್ದರೆ, ತಪೋವನ ಎಂಬ ಕಾದಂಬರಿಯಲ್ಲಿ ದೇವರು, ಭಕ್ತಿ ಇತ್ಯಾದಿಗಳ ಬೂಟಾಟಿಕೆಗಳನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಗೆಜ್ಜೆಪೂಜೆಯಲ್ಲಿ ವಿವಾಹದ ದಾರಿಯಲ್ಲಿ ಹೋಗಬೇಕೆಂದು ಬಯಸುವ ವೇಶ್ಯೆಯೊಬ್ಬಳ ಮಗಳು ಎದುರಿಸುವ ಸಮಸ್ಯೆಗಳ ಬಗ್ಗೆ ಚಿತ್ರಣವಿದೆ. ವೇಶ್ಯೆಯ ಸಮಸ್ಯೆಯ ಬಗ್ಗೆ ಸಮಾಜ ಯೋಚಿಸುವಂತೆ ಮಾಡಿದ ಕೃತಿಯಿದು. ವಿಧವಾ ಸಮಸ್ಯೆಯನ್ನು ಕುರಿತ ಇವರ ಫಣಿಯಮ್ಮ ಕಾದಂಬರಿ ಚಲನಚಿತ್ರವಾಗಿಯೂ ಹೆಸರು ಗಳಿಸಿದೆ. ಪ್ರೇಮಾಕಾರಂತರು ಈ ಕಾದಂಬರಿಯನ್ನು ಯಶಸ್ವೀ ಚಲನಚಿತ್ರವಾಗಿ ತೆರೆಗೆ ತಂದಿದ್ದಾರೆ. ಗೆಜ್ಜೆಪೂಜೆ ಕಾದಂಬರಿಯೂ ಚಲನಚಿತ್ರವಾಗಿ ಪ್ರಸಿದ್ಧವಾಗಿದೆ.

1970ರ ಅನಂತರ ದಲಿತ, ಬಂಡಾಯ ಸಾಹಿತ್ಯದ ದನಿ ಕೇಳಲಾರಂಬಿsಸಿತು. ದಲಿತರ ಮೇಲೆ ನಡೆಯುವ ದೌರ್ಜನ್ಯ, ಶೋಷಣೆಗಳ ಚಿತ್ರಣ ಮೊದಲಿಗೆ ಕಾವ್ಯದಲ್ಲಿ, ಅನಂತರ ಗದ್ಯ ಸಾಹಿತ್ಯದಲ್ಲಿ ಗಟ್ಟಿಯಾಗಿ ಕಾಣಿಸಿಕೊಳ್ಳಲು ಆರಂಭವಾಯಿತು. ಆಗ ಕೆಲವು ಲೇಖಕಿಯರೂ ಬರೆಯತೊಡಗಿದರು. ಅವರ ಬರೆವಣಿಗೆ ಈ ದಲಿತ ಬಂಡಾಯದಿಂದ ಇನ್ನಷ್ಟು ಪ್ರಖರಗೊಳ್ಳಲು ಸಾಧ್ಯವಾಯಿತು. ಗೀತಾ ನಾಗಭೂಷಣ, ಬಿ.ಟಿ.ಲಲಿತಾನಾಯಕ್, ಬಿ.ಟಿ.ಜಾಹ್ನವಿ, ಸರಸ್ವತಿ ಚಿಮ್ಮಲಗಿ, ಸುಕನ್ಯಾ ಮಾರುತಿ ಮುಂತಾದವರು ದಲಿತ ಸಮಾಜವನ್ನೂ ಅವರ ಸಮಸ್ಯೆಗಳನ್ನೂ ಬಹು ಸೂಕ್ಷ್ಮವಾಗಿ ಸಾಹಿತ್ಯದಲ್ಲಿ ಚಿತ್ರಿಸತೊಡಗಿದರು. ಗೀತಾ ನಾಗಭೂಷಣರವರ ಹಸಿ ಮಾಂಸ ಮತ್ತು ಹದ್ದುಗಳು, ಮಾಪುರ ತಾಯಿ ಮಕ್ಕಳು, ಬದುಕು, ಬಿ.ಟಿ.ಲಲಿತಾನಾಯಕ್ರವರ ಹಬ್ಬ ಮತ್ತು ಬಲಿ ಮುಂತಾದ ಕೃತಿಗಳು ಕೆಳವರ್ಗದಲ್ಲಿ ನಡೆಯುವ ಜೀವನ ಸಂಗತಿಗಳನ್ನು ಸಮಾಜದ ಗಮನಕ್ಕೆ ಸಾಹಿತ್ಯದ ಮೂಲಕ ತರಲು ಪ್ರಯತ್ನ ಮಾಡಿದವು. ದಲಿತಪರ ಕಾಳಜಿಯಿಂದ ತಮ್ಮ ಚಿಂತನೆಯನ್ನು ದಲಿತೇತರ ಬರೆಹಗಾರ್ತಿಯರೂ ಮಾಡಿದರು. ವೈದೇಹಿ (ಅಸ್ಪ್ಬಶ್ಯರು), ಅನುಪಮಾ ನಿರಂಜನ (ಘೂೕಷ), ಎಂ.ಎಸ್.ವೇದಾ (ಪಾಲು), ಕೆ.ಎಂ.ವಿಜಯಲಕ್ಷ್ಮೀ (ಭೇದವಿಲ್ಲದ ಆಸೆಗಳು), ಎಚ್.ನಾಗವೇಣಿ (ನಾಕನೇ ನೀರು, ಗಾಂದೀ ಬಂದ) ಮೊದಲಾದವರ ಕೃತಿಗಳಲ್ಲಿ ಕೆಳವರ್ಗದವರ ಸಮಸ್ಯೆ ಮತ್ತು ನೋವುಗಳ ಬಗ್ಗೆ ತುಡಿತವಿರುವುದನ್ನು ನಾವು ಗುರುತಿಸಬಹುದು.

ದಲಿತ ಬಂಡಾಯದ ಜೊತೆ ಜೊತೆಗೆ ನಡೆದ ಇನ್ನೊಂದು ಚಳವಳಿ ಎಂದರೆ ಸ್ತ್ರೀಯರ ಹೊಸ ಎಚ್ಚರದ ಮತ್ತು ಗಂಬೀರ ಚಿಂತನೆಯನ್ನು ಹೊಂದಿದ ಸ್ತ್ರೀವಾದಿ ಚಳವಳಿ. 1975ರ ಅಂತಾರಾಷ್ಟ್ರೀಯ ಮಹಿಳಾ ವರ್ಷದಿಂದ ಈ ಚಳವಳಿ ಪ್ರಾರಂಭಗೊಂಡಿತೆನ್ನಬಹುದು. ಗಮನಾರ್ಹ ಪ್ರಮಾಣದಲ್ಲಿ ಕನ್ನಡ ಸಾಹಿತಿಗಳು ಸ್ತ್ರೀವಾದಕ್ಕೆ ತೆರೆದುಕೊಳ್ಳತೊಡಗಿದರು. ‘ಸಮಾಜ, ಉದ್ಯೋಗ ಮತ್ತು ಕುಟುಂಬಗಳಲ್ಲಿ ಮಹಿಳೆಯರ ತುಳಿತ ಹಾಗೂ ಶೋಷಣೆಯ ಬಗ್ಗೆ ಅರಿವು ಮೂಡಿಸಿ, ಈ ಪರಿಸ್ಥಿತಿಯನ್ನು ಪರಿವರ್ತಿಸಲು ಪುರುಷರು ಮತ್ತು ಸ್ತ್ರೀಯರು ಸೇರಿ ನಡೆಸುವ ಪ್ರಜ್ಞೆ ಪುರ್ವಕ ಕ್ರಿಯೆಯೇ ಸ್ತ್ರೀವಾದ’ ಎಂದು ಸ್ತ್ರೀವಾದಿ ನೆಲೆಯನ್ನು ವ್ಯಾಖ್ಯಾನಿಸಲಾಯಿತು. ಎಂಬತ್ತರ ದಶಕದಲ್ಲಿ ಸ್ತ್ರೀವಾದಿ ನೆಲೆಯ ಚಿಂತನೆ ಪ್ರಖರವಾಯಿತು. ಪುರುಷ ಪ್ರಧಾನ ವ್ಯವಸ್ಥೆಯನ್ನು ಅರ್ಥಪುರ್ಣವಾಗಿ ಪ್ರಶ್ನಿಸುವ ಈ ಒಳ ಬಂಡಾಯದ ದನಿ ಕನ್ನಡ ಸಾಹಿತ್ಯ ರಚನೆಗೆ ಹೊಸ ಆಯಾಮವನ್ನು ಸೇರಿಸಿತು. ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯ ಸಾಹಿತ್ಯದ ನೆಲೆಯಿಂದ ಮಹಿಳೆಯರು ಸಾಹಿತ್ಯ ರಚನೆಯ ಕಾರ್ಯದಲ್ಲಿ ಆಯಾ ಸಾಹಿತ್ಯ ಸಿದ್ಧಾಂತಗಳ ಹಿನ್ನೆಲೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದುಂಟು. ಆವರೆಗೆ ಹೆಣ್ಣಿಗಾಗುತ್ತಿದ್ದ ಅನ್ಯಾಯಗಳನ್ನು ಖಂಡಿಸಿ, ಆ ಬಗ್ಗೆ ಸಮಾಜ ಆಲೋಚಿಸಬೇಕಾದಂತಹ ಕೃತಿಗಳನ್ನು ಅತ್ಯಂತ ಸಂಕೀರ್ಣತೆಯಲ್ಲಿ ಸಾಹಿತ್ಯಕವಾಗಿ ಹೃದಯಕ್ಕೆ ಮುಟ್ಟುವಂತೆ ತರತೊಡಗಿದರು. ವೀಣಾ ಶಾಂತೇಶ್ವರ ಮತ್ತು ರಾಜಲಕ್ಷ್ಮೀ ಎನ್.ರಾವ್ ಅವರು ನವ್ಯದ ಸಂದರ್ಭದಲ್ಲಿ ಹೊಸ ವಿಧಾನದಲ್ಲಿ ಅಬಿsವ್ಯಕ್ತಿಸಿದವರು. ರಾಜಲಕ್ಷ್ಮೀಯವರ ಸಂಗಮ, ವೈಶಾಖ ಶುದ್ಧ ಪುರ್ಣಿಮ, ಕಲ್ಯಾಣೀ ಮುಂತಾದ ಕಥೆಗಳು ಉಲ್ಲೇಖನೀಯವಾಗಿವೆ. ಸ.ಉಷಾ, ಚ.ಸರ್ವಮಂಗಳಾ, ಶಶಿಕಲಾವಸ್ತ್ರದ, ಜಯ ಭಾಗ್ಯಸುದರ್ಶನ, ಎನ್.ವಿ.ಭಾಗ್ಯಲಕ್ಷ್ಮೀ, ಶೈಲಜಾ ಉಡಚಣ, ಎಚ್.ಎಲ್.ಪುಷ್ಪ, ಸರಸ್ವತಿಗೌಡ ಮುಂತಾದ ಕವಯಿತ್ರಿಯರು ತಮ್ಮ ವ್ಯಕ್ತಿ ವಿಶಿಷ್ಟತೆಯನ್ನು, ಈ ಹೊಸ ಧೋರಣೆಯನ್ನು ಕಾವ್ಯ ಮಾಧ್ಯಮದಲ್ಲಿ ಅತ್ಯಂತ ಶಕ್ತಿಯುತವಾಗಿ ಅಬಿವ್ಯಕ್ತಿಸತೊಡಗಿದರು. ಸ.ಉಷಾ ಅವರ ತೊಗಲು ಗೊಂಬೆಯ ಆತ್ಮಕಥೆ (1973), ವಿಜಯಾದಬ್ಬೆಯವರ ಇರುತ್ತವೆ (1975), ಚ.ಸರ್ವಮಂಗಳಾ ಅವರ ಅಮ್ಮನಗುಡ್ಡ ಎಂಬ ಕವನ ಸಂಕಲನಗಳೂ ಶಾಂತಾದೇವಿ ಕಣವಿಯವರ ಬಯಲು ಆಲಯ, ಜಾತ್ರೆ ಮುಗಿದಿತ್ತು, ವೀಣಾ ಶಾಂತೇಶ್ವರರ ಗಂಡಸರು (1978), ಎನ್.ವಿ.ಭಾಗ್ಯಲಕ್ಷ್ಮೀಯವರ ಬೆರಳಸಂದಿಯ ಬದುಕು (1976), ಅನುಪಮಾ ನಿರಂಜನರ ಮಾಧವಿ (1976), ಭಾಗ್ಯ ಜಯಸುದರ್ಶನ ಅವರ ಬದುಕಿನ ತೆಕ್ಕೆಯಲ್ಲಿ (1978), ಶಾಂತಾ ಜಗದೀಶ್ ಅವರ ಎರಡು ಸೆಳೆ (1977), ಕೊಪ್ಲುಮನೆ ವಿಜಯಲಕ್ಷ್ಮಿಯವರ ಕೆಂಪು ಹೂ (1978) ಮೊದಲಾದ ಹಲವಾರು ಕೃತಿಗಳು ಈ ದಶಕದಲ್ಲಿ ಪ್ರಕಟವಾದುವು.

ಮಹಿಳೆಯರ ಬದುಕಿನ ವಿವಿಧ ಬರೆಹ ಕುರಿತು ಮಹಿಳೆಯರೇ ರಚಿಸಿರುವ 23 ಕೃತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಪ್ರಕಟವಾದುವು (1975). ಈ ಪ್ರಕಟಣೆಗಳು ಮಹಿಳೆಯರ ಆತ್ಮವಿಶ್ವಾಸಕ್ಕೆ ಹಾಗೂ ಮುಂದಿನ ಬರೆವಣಿಗೆಗೆ ಪ್ರೇರಕವಾದವೆನ್ನಬಹುದು. ಈಗ ಕನ್ನಡದಲ್ಲಿ ಮಹಿಳೆಯರು ರಚಿಸುತ್ತಿರುವ ಸಾಹಿತ್ಯ ವಿಪುಲವಾಗಿ ಪ್ರಕಟವಾಗುತ್ತಿದೆ. ಅನೇಕರು ಈ ಕ್ಷೇತ್ರದಲ್ಲಿ ಸಾಧನೆಯ ಪಥದಲ್ಲಿದ್ದಾರೆ. ಪ್ರತಿಭಾ ನಂದಕುಮಾರ್, ಹೇಮಾ ಪಟ್ಟಣಶೆಟ್ಟಿ, ಮಾಲತಿ, ಮಮತಾ ಜಿ.ಸಾಗರ, ಸವಿತಾ ನಾಗಭೂಷಣ, ಎಚ್.ಎಸ್.ಮುಕ್ತಾಯಕ್ಕ, ಆರ್.ಸುನಂದಮ್ಮ, ಮೊದಲಾದ ಲೇಖಕಿಯರು ಸ್ತ್ರೀವಾದಿ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಕಾವ್ಯ, ಕಥೆ, ಕಾದಂಬರಿ, ವಿಚಾರ ಮೊದಲಾದ ಪ್ರಕಾರಗಳಲ್ಲಿ ಕಲಾತ್ಮಕವಾಗಿ ಕೃತಿ ರಚನೆ ಮಾಡುತ್ತಿದ್ದಾರೆ.

ಹೊಸ ತಲೆಮಾರಿನ ವೀಣಾ ಶಾಂತೇಶ್ವರರ ಸ್ತ್ರೀವಾದಿ ಅಂಶಗಳನ್ನೊಳಗೊಂಡ ಗಂಡಸರು (1978) ಕಾದಂಬರಿ ಹೆಚ್ಚಿನ ಚರ್ಚೆಗೆ ಒಳಪಟ್ಟ ಕೃತಿ. ಅನುಪಮಾನಿರಂಜನರು ಪ್ರಗತಿಶೀಲ ಪಂಥದ ಜೊತೆ ತಮ್ಮ ಸಾಹಿತ್ಯಕ ನಿಲವನ್ನು ಗುರುತಿಸಿಕೊಂಡ ಬಳಿಕ ಬಂದ ಕೃತಿಗಳಾದ ಒಂದು ಗಿಣಿಯ ಕಥೆ, ಒಂದು ಘಟನೆ ಮತ್ತು ಆ ನಂತರ, ಮಾಧವಿ ಮತ್ತು ಎಳೆಗಳಲ್ಲಿ ವ್ಯಕ್ತಿಯ ಆಂತರಿಕ ತಳಮಳ ಮತ್ತು ಬಾಹ್ಯ ಪರಿಸರದ ವಾಸ್ತವಗಳನ್ನು ಸ್ತ್ರೀ ಶೋಷಣೆಯನ್ನು ಅದರಾಚೆಗೆ ಹಾರುವ ಸ್ತ್ರೀ ಪ್ರತೀಕಗಳನ್ನು ಸೃಷ್ಟಿಸಿದರು. ವಿಜಯಾ ಅವರು ಎಲ್ಲಿದ್ದೇವೆ ನಾವು ಎಲ್ಲಿದ್ದೇವೆ ಎಂಬಂತಹ ಬೀದಿ ನಾಟಕಗಳಲ್ಲಿ, ಹೆಣ್ಣು ಮತ್ತು ಗಂಡು ಮಕ್ಕಳನ್ನು ಬೆಳೆಸುವ ವಿಧಾನದಲ್ಲಿಯೇ ಇರುವ ತಾರತಮ್ಯಗಳನ್ನು ಎತ್ತಿ ತೋರಿಸುವ ಕೆಲಸ ಮಾಡಿದರು. ಸಾರಾ ಅಬೂಬಕರ್ ಶೋಷಿತ ಮುಸಲ್ಮಾನ ಮಹಿಳೆಯರ ನಿರಂತರ ನೋವುಗಳನ್ನು ತಮ್ಮ ಕಾದಂಬರಿ, ಕತೆಗಳಲ್ಲಿ ತಂದರು (ಚಂದ್ರಗಿರಿಯ ತೀರದಲ್ಲಿ). ವೈದೇಹಿ ಅತ್ಯಂತ ಸೂಕ್ಷ್ಮ ಮತ್ತು ಹೆಪ್ಪುಗಟ್ಟಿಸುವ ರೀತಿಯಲ್ಲಿ ಸ್ತ್ರೀವಾದಿ ನೆಲೆಯ ಕೃತಿಗಳನ್ನು ನೀಡಿದರು. ನೇಮಿಚಂದ್ರರವರು ಸ್ತ್ರೀ ಸಂವೇದನೆಯನ್ನು ತಮ್ಮ ಕೃತಿಗಳಲ್ಲಿ ತಂದರು. ವಿಜಯಾ ದಬ್ಬೆ, ಬಿ.ಎನ್.ಸುಮಿತ್ರಾಬಾಯಿ, ಪ್ರೀತಿ ಶುಭಚಂದ್ರ, ಚಂದ್ರಮತಿ ಸೋಂದಾ ಮೊದಲಾದವರು ಸ್ತ್ರೀ ವಾದಿ ದೃಷ್ಟಿಕೋನದಿಂದ ಕನ್ನಡದ ಪ್ರಮುಖ ಕೃತಿಗಳನ್ನು ವಿಮರ್ಶಿಸತೊಡಗಿದರು. ಈಗ ಸ್ತ್ರೀ ಜಗತ್ತಿನ ಆಲೋಚನೆಗಳನ್ನು ಮಂಡಿಸಿ, ಹೊಸ ಅನುಭವವನ್ನೂ ಹೊಸ ದೃಷ್ಟಿಯನ್ನೂ ಒದಗಿಸಿ ಕೊಡುವ ಕಲಾತ್ಮಕ ಕೃತಿಗಳನ್ನು ಅನೇಕರು ರಚಿಸುತ್ತಿದ್ದಾರೆ. ಎಚ್.ಎಸ್.ಪಾರ್ವತಿ, ಗಂಗಾ ಪಾದೇಕಲ್, ಕಮಲಾ ಹೆಮ್ಮಿಗೆ, ವಿಜಯ ಸುಬ್ಬರಾಜ್, ಕೆ.ಎಂ.ವಿಜಯಲಕ್ಷ್ಮಿ (ಕೊಪ್ಲುಮನೆ), ಭಾಗೀರಥಿ ಹೆಗಡೆ, ಬಾನು ಮುಷ್ತಾಕ್, ಕೆ.ಆರ್.ಸಂಧ್ಯಾರೆಡ್ಡಿ, ಮಲ್ಲಿಕಾ ಘಂಟಿ, ಎಸ್.ವಿ.ಪ್ರಭಾವತಿ, ಸುನೀತಾ ಶೆಟ್ಟಿ, ಗಿರಿಜಾ ಶಾಸ್ತ್ರಿ, ತುಳಸಿ ವೇಣುಗೋಪಾಲ್ ಮೊದಲಾದವರು ಸ್ತ್ರೀವಾದೀ ಸಿದ್ಧಾಂತಗಳ ಅರಿವಿನ ಹಿನ್ನೆಲೆಯಲ್ಲಿ, ಶಕ್ತಿಯುತವಾಗಿ ಕೃತಿ ರಚಿಸುವ ಮತ್ತು ವಿಮರ್ಶಿಸುವ ಲೇಖಕಿಯರ ದೊಡ್ಡ ಪಡೆಯೇ ಇದೆ. ಕಜ್ಜಾಯ, ನಾಸು ಅಂತಹ ಶ್ರೇಷ್ಠ ಕೃತಿಗಳನ್ನು ಕೊಟ್ಟ ಸುನಂದಾ ಬೆಳಗಾಂವಕರ್, ಜೈನ ಸಾಹಿತ್ಯದಲ್ಲಿ ವಿಶೇಷ ಪರಿಣತಿ ಇರುವ ಕಮಲಾ ಹಂಪನಾ, ಹಲವು ಭಾಷೆಗಳ e್ಞÁನವಿರುವ ಸಾಕಷ್ಟು ಸಾಹಿತ್ಯ ರಚಿಸಿರುವ ನಿರುಪಮಾ; ಹಲವಾರು ಉತ್ತಮ ಕಾದಂಬರಿಗಳನ್ನು ಕೊಟ್ಟಿರುವ ರೇಖಾ ಕಾಖಂಡಕಿ ಹಾಗೂ ವಸುಮತಿ ಉಡುಪ; ಕಥೆಗಾರ್ತಿ ಪ್ರೇಮಾಭಟ್, ಎಂ.ಎಸ್.ವೇದಾ, ಮೊದಲಾದವರು ಯಾವುದೇ ವಾದಕ್ಕೆ ಅಂಟಿಕೊಳ್ಳದೆ ಬರೆಯುವಂಥ ಸಮರ್ಥ ಲೇಖಕಿಯರು. ಮಹಿಳಾ ಚಳವಳಿಯ ತಾತ್ತ್ವಿಕತೆಯನ್ನು ಕುರಿತಂತೆ ಬಿ.ಎಸ್.ವೆಂಕಟಲಕ್ಷ್ಮಿ, ಎನ್.ಗಾಯತ್ರಿ ನಾವಡ, ಧರಣೀದೇವಿ ಮಾಲಗತ್ತಿ, ಪ್ರೀತಿ ಶುಭ ಚಂದ್ರ, ಎಚ್.ಎಸ್.ಶ್ರೀಮತಿ ಮೊದಲಾದವರು ಕೃತಿಗಳನ್ನು ಹೊರತಂದಿದ್ದಾರೆ.

ಕರ್ನಾಟಕದಲ್ಲಿ ಸ್ತ್ರೀವಾದವನ್ನು ಚಳವಳಿಯಾಗಿ ರೂಪಿಸುವಲ್ಲಿ ಬಹಳಷ್ಟು ಶ್ರಮ ವಹಿಸಿದ ಬೆಂಗಳೂರಿನ ಕರ್ನಾಟಕ ಲೇಖಕಿಯರ ಸಂಘದ (1979) ಸಾಧನೆ ಕೂಡ ಗಮನಾರ್ಹವಾದದ್ದು. ಈ ಸಂಘ ಮಹಿಳೆಯರನ್ನು ಸಂಘಟಿಸುವ ಕೆಲಸವನ್ನು ಆರಂಬಿಸಿ, ಮಹಿಳೆಯರ ದನಿಗೆ ಪ್ರತ್ಯೇಕ ವೇದಿಕೆಯನ್ನು ಒದಗಿಸಿಕೊಟ್ಟದ್ದಲ್ಲದೆ ಸ್ತ್ರೀವಾದದ ಉದ್ದೇಶ, ಅರ್ಥ, ಚಿಂತನೆ, ಅದರ ಆವಶ್ಯಕತೆ ಇತ್ಯಾದಿಗಳ ಬಗ್ಗೆಯೇ ಹೆಚ್ಚು ಒತ್ತುಕೊಟ್ಟು ಹಲವಾರು ಕಾರ್ಯಕ್ರಮಗಳನ್ನೂ ವಿಚಾರ ಸಂಕಿರಣಗಳನ್ನೂ ಕಾರ್ಯಾಗಾರಗಳನ್ನೂ ನಡೆಸಿತು. ಈ ಸಂಘ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನಗಳನ್ನೂ ನಡೆಸಿದೆ. ಬೆಂಗಳೂರಿನಲ್ಲಿ ಸರೋಜಿನಿ ಮಹಿಷಿಯವರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಪ್ರಥಮ ಸಮ್ಮೇಳನ ನಡೆಯಿತು (1985). ಅನಂತರ ಪದ್ಮಾ ಶೆಣೈರವರ ಅಧ್ಯಕ್ಷತೆಯಲ್ಲಿ ದ್ವಿತೀಯ ಸಮ್ಮೇಳನ (1988), ಧಾರವಾಡದಲ್ಲಿ ಶಾಂತಾದೇವಿ ಮಾಳವಾಡರ ಅಧ್ಯಕ್ಷತೆಯಲ್ಲಿ ಮೂರನೆಯ ಸಮ್ಮೇಳನ (1993), ಮಂಗಳೂರಿನಲ್ಲಿ ಎಚ್.ಎಸ್.ಪಾರ್ವತಿಯವರ ಅಧ್ಯಕ್ಷತೆಯಲ್ಲಿ ನಾಲ್ಕನೆಯ ಸಮ್ಮೇಳನ (1996), ವೀಣಾ ಶಾಂತೇಶ್ವರರ ಅಧ್ಯಕ್ಷತೆಯಲ್ಲಿ ಐದನೆಯ ಸಮ್ಮೇಳನ ನಡೆದುವು. ಸ್ತ್ರೀ ಸಾಹಿತ್ಯ ಚರಿತ್ರೆಗೆ ಉಪಯುಕ್ತವಾಗುವ ಹಲವು ಪುಸ್ತಕಗಳನ್ನೂ ಈ ಸಂಘ ಪ್ರಕಟಿಸಿದೆ. ಈ ಸಂಘದ ಪ್ರಭಾವ ಮತ್ತು ಪ್ರೋತ್ಸಾಹಗಳಿಂದ ಉತ್ತರ ಕರ್ನಾಟಕ ಲೇಖಕಿಯರ ಸಂಘ (1985), ದಕ್ಷಿಣ ಕನ್ನಡ ಮತ್ತು ಕಾಸರಗೋಡು ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ (1987) ಸ್ಥಾಪನೆಯಾಗಿ ಸ್ತ್ರೀವಾದಕ್ಕೆ ಬೆಂಬಲ ನೀಡಿದುವು.

ಯಾವುದೇ ಸಾಹಿತ್ಯದ ಚಳವಳಿಯ ಪ್ರಭಾವ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ್ತದೆ. ಎನ್.ಎಂ.ಕೆ.ಆರ್.ವಿ. ಕಾಲೇಜಿನಲ್ಲಿ ಚಿ.ನಾ.ಮಂಗಳಾ ಅವರಿಂದ 1987ರಲ್ಲಿ ‘ಮಹಿಳಾ ಅಧ್ಯಯನ’ ಎಂಬ ಹೊಸ ವಿಷಯ ಬಿ.ಎ. ವಿದ್ಯಾರ್ಥಿನಿಯರಿಗಾಗಿ ಆರಂಭಗೊಂಡು, ಈಗ ಹೆಚ್ಚು ಕಡಿಮೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಅಳವಡಿಸಲಾಗಿದೆ. ಸ್ತ್ರೀವಾದದ ಪ್ರಭಾವದಿಂದಾಗಿ, ಕನ್ನಡದ ಕೆಲ ಮಹಿಳೆಯರು ವಿಶ್ವವಿದ್ಯಾಲಯಗಳಲ್ಲಿ, ಕಾನೂನು ಕ್ಷೇತ್ರ, ವೈದ್ಯಕೀಯ, ವೈಜ್ಞಾನಿಕ ಕ್ಷೇತ್ರ-ಹೀಗೆ ತಾವು ದುಡಿಯುವ ಕ್ಷೇತ್ರಗಳಲ್ಲಿ, ಮಹಿಳೆಯರ ಸ್ಥಾನಮಾನವನ್ನು ಹೆಚ್ಚಿಸಲು ಒಂದಲ್ಲ ಒಂದು ರೀತಿಯಲ್ಲಿ ಶ್ರಮಿಸುತ್ತಿದ್ದಾರೆ. ಮಾನವತಾವಾದದ ಒಂದು ಅಂಗವಾದ ಈ ಸ್ತ್ರೀವಾದ ಈಗ ಸರ್ವಮಾನ್ಯವಾಗಿದೆ. ಕೇವಲ ಲೇಖಕಿಯರ ಬರೆಹಗಳಲ್ಲಷ್ಟೇ ಅಲ್ಲದೆ ಲೇಖಕರ ಸಾಹಿತ್ಯ ಕೃತಿಗಳಲ್ಲಿಯೂ ಸ್ತ್ರೀವಾದಿ ನೆಲೆಯನ್ನು ನಾವು ಇತ್ತೀಚಿನ ದಿನಗಳಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. (ಕೆ.ಎಂ.ವಿ.)