ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ವಿಮರ್ಶನ ಸಾಹಿತ್ಯ

ವಿಕಿಸೋರ್ಸ್ದಿಂದ

ಕನ್ನಡದಲ್ಲಿ ಸಾಹಿತ್ಯ ವಿಮರ್ಶೆ : - ಸಾಹಿತ್ಯ ವಿಮರ್ಶೆ ಕನ್ನಡದಲ್ಲಿ ಒಂದು ಪ್ರತ್ಯೇಕವಾದ ಅಧ್ಯಯನ ಶಿಸ್ತಾಗಿ ಬೆಳೆದದ್ದು ಈ ಶತಮಾನದಲ್ಲಿಯೇ. ಇದರ ಉಗಮ ಮತ್ತು ಬೆಳೆವಣಿಗೆಗಳಿಗೆ ಕಾರಣ ಪಾಶ್ಚಾತ್ಯ ಸಾಹಿತ್ಯ ವಿಮರ್ಶೆ ಕನ್ನಡದ ಸಾಹಿತ್ಯಾಭ್ಯಾಸಿಗಳ ಮೇಲೆ ಬೀರಿದ ಪ್ರಭಾವ. ಪಶ್ಚಿಮದಲ್ಲಿ ತೀಕ್ಷ್ಣಮತಿಗಳೂ ಪ್ರಕಾಂಡ ಪಂಡಿತರೂ ಸೂಕ್ಷ್ಮ ಸಂವೇದನಾಶೀಲರೂ ಆದ ಅನೇಕ ವಿಮರ್ಶಕರೂ ಕವಿ ವಿಮರ್ಶಕರೂ ಈ ಕ್ಷೇತ್ರದಲ್ಲಿ ದುಡಿದು ನೂರಾರು ಆಚಾರ್ಯ ಕೃತಿಗಳನ್ನು ರಚಿಸಿದ್ದಾರೆ. ಇಂಗ್ಲಿಷ್ ಭಾಷೆ, ಸಾಹಿತ್ಯ, ವಿಮರ್ಶೆಗಳನ್ನು ಆಸ್ಥೆಯಿಂದ ಅಧ್ಯಯನ ಮಾಡಿದ ಕನ್ನಡದ ವಿದ್ವಾಂಸರು ಪಶ್ಚಿಮದ ವಿಮರ್ಶೆಯ ವೈಪುಲ್ಯವನ್ನೂ ಪ್ರಖರತೆಯನ್ನೂ ಕಂಡು ಬೆರಗಾಗಿ, ಅನಂತರ ಅದನ್ನು ಆಳವಾಗಿ ಅಧ್ಯಯನ ಮಾಡಿ, ಅದರ ಮೂಲತತ್ತ್ವಗಳನ್ನು ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಜೊತೆಗೆ ಆ ಮೂಲತತ್ತ್ವಗಳನ್ನು ಕನ್ನಡದಲ್ಲಿ ಸಾಹಿತ್ಯ ಕೃತಿಗಳಿಗೆ ಅನ್ವಯಮಾಡಿ ವಿಮರ್ಶೆ ನಡೆಸಿದ್ದಾರೆ. ಮುಂದೆ ಇಲ್ಲಿ ಸೃಷ್ಟಿಯಾಗಿರುವ ಕೃತಿಗಳಿಗೆ ಅನ್ವಯವಾಗಬೇಕಾದ ಮಾನದಂಡಗಳು ಯಾವುವು ಎಂಬುದನ್ನು ಕುರಿತು ಚರ್ಚೆ ನಡೆಸಿದ್ದಾರೆ. ಅಲ್ಲದೆ ನಮ್ಮಲ್ಲಿ ಮಹತ್ತಾದವು ಎಂದು ಪ್ರಖ್ಯಾತವಾಗಿರುವ ಕೃತಿಗಳನ್ನು ಜಗತ್ತಿನ ಇತರ ಮಹಾಕೃತಿಗಳೊಂದಿಗೆ ಹೋಲಿಸಿ ನೋಡಿದ್ದಾರೆ. ಇದೆಲ್ಲದರ ಫಲವಾಗಿ ಕನ್ನಡದಲ್ಲಿ ಸಾಹಿತ್ಯ ವಿಮರ್ಶೆ ವಿಸ್ತಾರವಾಗಿಯೂ ವಿಪುಲವಾಗಿಯೂ ಬೆಳೆದಿದೆ. ಅನೇಕ ವಿಮರ್ಶಕರು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಿಮರ್ಶೆಯ ಗ್ರಂಥಗಳು ಪ್ರಕಟವಾಗುತ್ತಿವೆ. ಸಾಹಿತ್ಯ ಸಂಪ್ರದಾಯಗಳು ಬದಲಾದಂತೆಲ್ಲ ಕನ್ನಡ ವಿಮರ್ಶೆಯೂ ಕಾಲಕ್ಕೆ ಅನುಗುಣವಾಗಿ ಹೊಸ ಹೊಸ ಮಾನದಂಡಗಳನ್ನು ರೂಪಿಸಿಕೊಳ್ಳುತ್ತ ಸಾಗಿದೆ.

ಮೊದಲಿಗೆ ನಮ್ಮಲ್ಲಿದ್ದ ವಿಮರ್ಶಾ ವಿಧಾನ ಯಾವ ರೀತಿಯದು ಎಂಬುದನ್ನು ಪರಿಶೀಲಿಸಬಹುದು. ಪ್ರಾಚೀನರು ಅಲಂಕಾರ ಗ್ರಂಥಗಳಲ್ಲಿ ಕಾವ್ಯದ ಗುಣಗಳಿಗೂ ದೋಷಗಳಿಗೂ ಉದಾಹರಣೆ ನೀಡುವಾಗ ಇದು ಒಳ್ಳೆಯ ಕಾವ್ಯ ಭಾಗ, ಇದು ಅಲ್ಲ ಎಂದು ಸೂಚಿಸುತ್ತಿದ್ದರಷ್ಟೆ. ಅದರಿಂದ ಅವರು ಇದು ಸಾಹಿತ್ಯ ವಿಮರ್ಶೆ ಎಂದು ಸ್ಪಷ್ಟವಾಗಿ ಹೇಳದೆ ಒಂದು ರೀತಿಯಲ್ಲಿ ವಿಮರ್ಶೆ ಮಾಡುತ್ತಿದ್ದರು ಎಂದು ಹೇಳಬಹುದು. ಎರಡನೆಯದಾಗಿ, ಕವಿಗಳು ಕಾವ್ಯದ ಮೊದಲಲ್ಲಿಯೋ ಕೊನೆಯಲ್ಲಿಯೋ ಸತ್ಕಾವ್ಯದ ಪ್ರಶಂಸೆಯನ್ನು, ಕೆಟ್ಟ ಕಾವ್ಯದ ನಿಂದೆಯನ್ನು ಮಾಡುವಲ್ಲಿ ಮತ್ತೊಂದು ರೀತಿಯಲ್ಲಿ ವಿಮರ್ಶೆಯ ಕಾರ್ಯ ನಡೆಯುತ್ತಿತ್ತು. ಆದರೆ ಇವು ಯಾವ ಕ್ರಮಬದ್ಧವಾದ ಶಾಸ್ತ್ರೀಯವಾದ ವಿಮರ್ಶೆ ಎನ್ನಿಸಿಕೊಳ್ಳುವುದಿಲ್ಲ.

ಕನ್ನಡ ವಿಮರ್ಶೆಯ ಉಗಮ ಸಂಸ್ಕೃತ ಕೃತಿಗಳು ಮತ್ತು ಪ್ರಾಚೀನ ಕನ್ನಡ ಗ್ರಂಥಗಳ ಪರಿಚಯದಲ್ಲಿ ಎನ್ನಬಹುದು. ಕನ್ನಡ ಸಾಹಿತ್ಯ ವಿಮರ್ಶೆ ಮೊತ್ತಮೊದಲ ಕೃತಿ ಎಂ.ಎ.ರಾಮಾನುಜ ಅಯ್ಯಂಗಾರ್ ಅವರ "ಕವಿ ಚಕ್ರವರ್ತಿ ಕವಿ ರನ್ನನ ಜೀವನ ಚರಿತ್ರೆ" ಗ್ರಂಥವಿಮರ್ಶೆ ಇತ್ಯಾದಿ (1895). ಈ ಗ್ರಂಥದಲ್ಲಿ ಲೇಖಕರು ರನ್ನನ ಜೀವನ ಚರಿತ್ರೆಯ ಜೊತೆಗೆ ಅವನ ಕೃತಿಗಳ ಪರಿಚಯಾತ್ಮಕ ವಿಮರ್ಶೆಯನ್ನೂ ಒದಗಿಸಿದ್ದಾರೆ. ಈ ಕೃತಿಯನ್ನು ಗಮನಕ್ಕೆ ತಂದುಕೊಂಡು ಹೇಳುವುದಾದರೆ ಕನ್ನಡ ವಿಮರ್ಶೆಯ ಉಗಮ 19ನೆಯ ಶತಮಾನದ ಕೊನೆಯ ಭಾಗದಲ್ಲೇ ಎಂದು ಹೇಳಬಹುದು. ಐತಿಹಾಸಿಕ ದೃಷ್ಟಿಯಿಂದ ಮುಖ್ಯವಾದ ಇನ್ನೊಂದು ಕೃತಿ ಬಿ.ಕೃಷ್ಣಪ್ಪನವರ ರಾಮಚಂದ್ರಚರಿತಪುರಾಣ ವಿಮರ್ಶೆ (1923). ಮುಂದೆ ಜಿ.ಪಿ. ರಾಜರತ್ನಂ ಅವರು ಶ್ರೀ ಕವಿ ಪಂಪ (1931) ಎಂಬುದರಲ್ಲಿ ಪಂಪನನ್ನು ಕುರಿತು ತಕ್ಕ ಮಟ್ಟಿಗೆ ವಿಸ್ತಾರವಾದ ವಿಮರ್ಶೆಯನ್ನು ನೀಡಿದರು. ತೀ.ನಂ.ಶ್ರೀ ಅವರ ಪಂಪ (1939) ಎಂಬ ಕಿರು ಹೊತ್ತಗೆ ಮಹಾಕವಿಯೊಬ್ಬನನ್ನು ಅಚ್ಚುಕಟ್ಟಾದ ರೀತಿಯಲ್ಲಿ ಪರಿಚಯ ಮಾಡಿಕೊಡಲು ನಡೆದಿರುವ ಒಂದು ಸ್ತುತ್ಯ ಪ್ರಯತ್ನ. ಎಸ್.ವಿ.ರಂಗಣ್ಣನವರ ಕುಮಾರವ್ಯಾಸ (1962) ಕೂಡ ಇಂಥದೇ ಇನ್ನೊಂದು ಗ್ರಂಥ. ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳು ತಮ್ಮ ಪ್ರಚಾರ ಪುಸ್ತಕ ಮಾಲೆಗಳಲ್ಲಿ ಅನೇಕ ಕನ್ನಡ, ಸಂಸ್ಕೃತ, ತೆಲುಗು, ಹಿಂದಿ ಕವಿಗಳನ್ನು ಕುರಿತು ಕಿರು ಹೊತ್ತಗೆಗಳನ್ನು ತಂದಿವೆ. ಅವುಗಳಲ್ಲೆಲ್ಲ ಅಲ್ಲಲ್ಲಿ ಒಳ್ಳೆಯ ವಿಮರ್ಶೆ ಪ್ರತಿಬಿಂಬಗೊಂಡಿದೆ.

ಪ್ರಾಚೀನ ಕನ್ನಡ ಕವಿಗಳ ಕೃತಿಗಳನ್ನು ಸಹೃದಯರಿಗೆ ಪರಿಚಯ ಮಾಡಿಕೊಡುವ ಕೆಲವು ಗ್ರಂಥಗಳಲ್ಲಿ ವಿಮರ್ಶೆ ತನ್ನ ಬೆಳೆವಣಿಗೆಯನ್ನೂ ಕಂಡಿದೆ. ರಂ.ಶ್ರೀ.ಮುಗಳಿಯವರ ರನ್ನನ ಕೃತಿರತ್ನ (1946), ಜಿ.ಎಸ್.ಮುರಿಗಾರಾಧ್ಯರ ಷಡಕ್ಷರದೇವಂ (1906), ಡಿ.ವಿ.ಶೇಷಗಿರಿರಾಯರ ಪಂಪ ರಾಮಾಯಣ ಕಾವ್ಯ ಪರಿಚಯ (1950), ನಾಗಚಂದ್ರನ ಕಾವ್ಯಗಳು (1950), ವಿ.ಶಿವಾನಂದ ಅವರ ಸೀಮಾಪುರುಷ ಷಡಕ್ಷರದೇವ (1966), ಚನ್ನಬಸವಪ್ಪ ಕವಲಿ ಮತ್ತು ಸಂ.ಮರಿದೇವಸ್ವಾಮಿ ಅವರ (ದೇವಕವಿಯ ಮರುಳಸಿದ್ಧ ಕಾವ್ಯದ ವಿಮರ್ಶೆಯನ್ನುಳ್ಳ) ಮರುಳಸಿದ್ಧಾಂಕ (1949)- ಇವೆಲ್ಲ ಈ ಗುಂಪಿನವೇ. ಕಾಲದ ದೃಷ್ಟಿಯಿಂದ ಇವೆಲ್ಲಕ್ಕಿಂತ ಮೊದಲು ಪ್ರಕಟವಾದ ಮುಳಿಯ ತಿಮ್ಮಪ್ಪಯ್ಯನವರ ನಾಡೋಜ ಪಂಪ (1938) ಒಂದು ಅಸಾಮಾನ್ಯವಾದ ಕೃತಿ. ಹತ್ತಿರ ಹತ್ತಿರ ಆರು ನೂರು ಪುಟಗಳ ವಿಸ್ತಾರವಾದ ಹರವಿನಲ್ಲಿ ತಿಮ್ಮಪ್ಪಯ್ಯನವರು ಪಂಪನನ್ನು ಕುರಿತ ಆಳವಾದ ಅಧ್ಯಯನವನ್ನೂ ಅಂದಿಗೆ ಹೊಸತು ಎನಿಸುವ ಚಾರಿತ್ರಿಕ ದೃಷ್ಟಿಯನ್ನೂ ಅವನ ಕೃತಿಗಳನ್ನು ಕುರಿತಂತೆ ಹಿತಮಿತವಾದ ವಿಮರ್ಶೆಯನ್ನೂ ನೀಡಿದ್ದಾರೆ. ಪಂಪನನ್ನು ಕುರಿತು ವಿಸ್ತಾರವಾದ ಇಂಥ ಒಂದು ಅಧ್ಯಯನ, ಆದರೆ ಇನ್ನೂ ಹರಿತವಾದ, ಹೃದಯಂಗಮವಾದ, ವಿಚಾರಪುರ್ಣವಾದ ವಿಮರ್ಶೆ ಕನ್ನಡ ವಾಚಕರಿಗೆ ದೊರೆತದ್ದು ವಿ.ಸೀತಾರಾಮಯ್ಯನವರ ಮಹಾಕವಿ ಪಂಪ (1975) ಎಂಬ ಕೃತಿಯಿಂದ. ಈ ಕೃತಿ ವಿ.ಸೀ.ಅವರ ಅರ್ಧ ಶತಮಾನದ ಅಧ್ಯಯನ, ಪುರ್ವ ಪಶ್ಚಿಮಗಳ ಕಾವ್ಯತತ್ತ್ವಗಳ ನಿಕಟವಾದ ಪರಿಚಯ, ಪಕ್ವವಾದ ಜೀವನಾನುಭವ, ಹೃದಯಸ್ಪರ್ಶಿಯಾದ ರಸದೃಷ್ಟಿ, ನಮ್ಮ ಜೀವನ ಮಾರ್ಗಕ್ಕೆ ತೀರ ಪರಿಚಿತವಾದ ಜೀವನ ನೋಟ ಇವುಗಳೆಲ್ಲವನ್ನೂ ಒಳಗೊಂಡಿರುವ ತೂಕವಾದ ವಿಮರ್ಶೆಗೆ ಸಾರ್ವಕಾಲಿಕವಾದ ಆದರ್ಶವಾಗಿದೆ.

ತಮ್ಮ ಬರೆಹಗಳ ಬಾಹುಳ್ಯದಿಂದ ಜನಸಾಮಾನ್ಯರಿಗೆ ತುಂಬ ಪ್ರಿಯವಾಗುವ ಪದ್ಯಗಂದಿಯಾದ ಶೈಲಿಯಿಂದ ಜನಪ್ರಿಯರಾಗಿರುವ ನಿಡುಮಾಮಿಡಿ ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ (ಜ.ಚ.ನಿ.) ಅವರು ತಮ್ಮ ಹೆಮ್ಮೆಗಳು (1948) ಎಂಬ ಕೃತಿಯಲ್ಲಿ ಮುಪ್ಪಿನ ಷಡಕ್ಷರಿಯ ಹಾಡುಗಳ ವಿವರಣೆ ವಿಮರ್ಶೆಗಳನ್ನೂ ಅಲ್ಲಯ್ಯನ ಬೆಳಕು (1950) ಎಂಬ ಕೃತಿಯಲ್ಲಿ ಅಲ್ಲಮ ಪ್ರಭುವಿನ ವಚನಗಳ ವಿಮರ್ಶೆಯನ್ನೂ ನೀಡಿದ್ದಾರೆ.

ಕನ್ನಡದ ಹಿಂದಿನ ಕವಿಗಳನ್ನು ಕುರಿತು ಪ್ರಕಟಿಸಿದ ಅನೇಕ ಸಂಭಾವನಾ ಗ್ರಂಥಗಳು ಸ್ತುತಿ ಪರವಾಗಿದ್ದು ಒಳ್ಳೆಯ ವಿಮರ್ಶೆಗೆ ನಿದರ್ಶನಗಳಲ್ಲವಾದರೂ ಆಯಾ ಕವಿಗಳನ್ನು ಸಹೃದಯರಿಗೆ ಪರಿಚಯ ಮಾಡಿಕೊಡುವ ಗ್ರಂಥಗಳಾಗಿ ಉಪಯುಕ್ತವಾದ ಕೆಲಸ ಮಾಡಿದವು. ಅವುಗಳಲ್ಲಿ ಮುದ್ದಣ (1926), ರನ್ನಕವಿ ಪ್ರಶಸ್ತಿ (1928), ಅಬಿನವ ಪಂಪ (1934), ಕುಮಾರವ್ಯಾಸ ಪ್ರಶಸ್ತಿ (1940), ಹರಿಹರದೇವ (1937), ಶ್ರೀ ಶಿವಯೋಗಿ ನಿಜಗುಣರ ಸ್ವರೂಪ ದರ್ಶನ (1954), ಕವಿ ಲಕ್ಷ್ಮೀಶ (1933), ಮಹಾತ್ಮ ಕನಕದಾಸ ಪ್ರಶಸ್ತಿ (1965) ಮುಂತಾದವು ಇಂಥವು. ಇವುಗಳ ಜೊತೆಗೆ ಅನೇಕ ಲೇಖಕರು ತಮ್ಮ ಪ್ರಬಂಧ ಸಂಕಲನಗಳಲ್ಲಿ ಪ್ರಾಚೀನ ಕವಿಗಳನ್ನು ಕುರಿತು ತಮ್ಮ ದೃಷ್ಟಿಕೋನಗಳನ್ನು ಮಂಡಿಸಿದ್ದಾರೆ. ಇವುಗಳಲ್ಲಿ ಹೆಸರಿಸಬೇಕಾದ ಕೃತಿಗಳು ಟಿ.ಎಸ್.ವೆಂಕಣ್ಣಯ್ಯನವರ ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಇತರ ಲೇಖನಗಳು (1938), ತೀ.ನಂ.ಶ್ರೀಕಂಠಯ್ಯನವರ "ಕಾವ್ಯಸಮೀಕ್ಷೆ "(1947) ಮತ್ತು ಸಮಾಲೋಕನ (1958), ಜಿ.ಎಸ್.ಶಿವರುದ್ರಪ್ಪನವರ ಪರಿಶೀಲನ (1967) ಮತ್ತು ಗತಿಬಿಂಬ (1969), ಚೆನ್ನವೀರ ಕಣವಿಯವರ ಸಾಹಿತ್ಯ ಚಿಂತನ (1966). ಸುಜನಾ ಎಂಬ ಕಾವ್ಯನಾಮದಿಂದ ಬರೆಯುತ್ತಿರುವ ಎಸ್.ನಾರಾಯಣಶೆಟ್ಟರ ಹೃದಯ ಸಂವಾದ (1964) ನಮ್ಮ ವಿಮರ್ಶೆ ಏರಬಲ್ಲ ಎತ್ತರಗಳನ್ನೂ ವ್ಯಾಪಿಸಬಲ್ಲ ಹರಹನ್ನೂ ಸೂಚಿಸುತ್ತದೆ. ವಿಮರ್ಶೆಯ ಕ್ಷೇತ್ರದಲ್ಲಿ ದೇಜಗೌ ಅವರದು ಮುಖ್ಯ ಹೆಸರು. ಇವರು ಹಲವು ಗ್ರಂಥಗಳಿಗೆ ಬರೆದ ಅನೇಕ ಮುನ್ನುಡಿಗಳಲ್ಲಿ ತೂಕವಾದ ವಿಮರ್ಶೆ, ಕಸುವುಳ್ಳ ಭಾಷೆಯ ಬಳಕೆ ಕಂಡುಬರುತ್ತದೆ. ಇವರ ನಂಜುಂಡ ಕವಿ, ಷಡಕ್ಷರದೇವ ಆಯಾ ಕವಿಗಳನ್ನು ಕುರಿತ ವಿಮರ್ಶಾ ಗ್ರಂಥಗಳಾಗಿವೆ.

ಕನ್ನಡದಲ್ಲಿ ಸಾಹಿತ್ಯ ವಿಮರ್ಶೆಯ ದಿಕ್ಕುದೆಸೆಗಳನ್ನೇ ಬದಲಿಸಲು ಪ್ರಯತ್ನಿಸಿದ ಇಬ್ಬರು ಮಹನೀಯರು ಇಲ್ಲಿ ಪ್ರತ್ಯೇಕವಾಗಿ ಉಲ್ಲೇಖಾರ್ಹರು. ಮೊದಲನೆಯವರು ಎಸ್.ವಿ.ರಂಗಣ್ಣನವರು. ಇವರ ‘ಶೈಲಿ’ (1944) ಕನ್ನಡ ವಿಮರ್ಶೆಯ ಜಗತ್ತಿಗೆ ಹೊಸ ಆಯಾಮವನ್ನು ತಂದ ಮೊದಲ ಕೃತಿ. ಶೈಲಿಯ ಸ್ವರೂಪವನ್ನೂ ಮಧ್ಯಮ ಶೈಲಿ, ಸಾಧಾರಣ ಶೈಲಿ ಎಂದರೇನು ಎಂಬುದನ್ನೂ ಶೈಲಿಯಲ್ಲಿ ಮಹತ್ತ್ವ ಭವ್ಯತೆಗಳ ಸ್ವರೂಪವನ್ನೂ ನಮ್ಮ ಜನತೆಗೆ ಮೊದಲಬಾರಿಗೆ ಪರಿಚಯ ಮಾಡಿ ಕೊಟ್ಟವರು ಇವರು. ಪಂಪ, ರನ್ನ, ರಾಘವಾಂಕ, ಕುಮಾರವ್ಯಾಸ, ಜನ್ನ, ರತ್ನಾಕರವರ್ಣಿ, ರುದ್ರಭಟ್ಟ, ಹರಿಹರ, ಲಕ್ಷ್ಮೀಶ, ನಾಗಚಂದ್ರ, ನಯಸೇನ, ಆಂಡಯ್ಯ, ಪುರಂದರದಾಸ, ಕನಕದಾಸ, ಕುಮಾರ ವಾಲ್ಮೀಕಿ, ಸರ್ವಜ್ಞ, ಹೊನ್ನಮ್ಮ, ಷಡಕ್ಷರದೇವ- ಈ ಕವಿಗಳ ಶೈಲಿಯ ಸ್ವರೂಪವನ್ನೂ ಅವರ ಏಳು ಬೀಳು ಗಳನ್ನೂ ದೀರ ರೀತಿಯಿಂದ ಚರ್ಚಿಸಿದ ಕೀರ್ತಿ ರಂಗಣ್ಣನವರದು. ಇಂಗ್ಲಿಷ್ ಭಾಷಾ ಸಾಹಿತ್ಯಗಳ ಪ್ರಕಾಂಡ ಪಾಂಡಿತ್ಯ, ಕನ್ನಡ ಕವಿಗಳ ಆಳವಾದ ಅಧ್ಯಯನ ಇವರ ವಾಣಿಗೆ ಅದಿsಕಾರವನ್ನೂ ದೃಷ್ಟಿಗೆ ತೀಕ್ಷ್ಣತೆಯನ್ನೂ ಒದಗಿಸಿದುವು. ಇವರ ಹೊನ್ನ ಶೂಲ (1959) ಅದುವರೆಗೆ ಅತಿ ಪ್ರಶಂಸೆಯಿಂದ ಬೀಗಿ ಬಿರಿಯುತ್ತಿದ್ದ ಅನೇಕ ಕವಿಗಳನ್ನು, ಅದರಲ್ಲೂ ಕನ್ನಡದ ಮುದ್ದಣ, ಸಂಸ್ಕೃತದ ಕಾಳಿದಾಸ- ಇವರನ್ನು ಅವರವರ ಸ್ಥಾನಗಳಿಗೆ ಕೂರಿಸಿತು.

ಎರಡನೆಯವರು ಈ ಯುಗದ ಮಹಾಕವಿಯಾದ ಕುವೆಂಪು ಅವರು. ಇವರು ಕವಿಯ ಕಣ್ಣು ಕಾವ್ಯದ ದರ್ಶನದಲ್ಲಿ ಎಂದು ಸಾರಿದರು. ವಿಮರ್ಶೆಯಲ್ಲಿ ಕಾವ್ಯ ಒಡಗೂಡುವಂತೆ ಮಾಡಿದರು. ಇವರ ಕಾವ್ಯವಿಹಾರ, ತಪೋನಂದನ (1950), ವಿಭೂತಿಪುಜೆ (1953), ದ್ರೌಪದಿಯ ಶ್ರೀಮುಡಿ (1960), ರಸೋ ವೈ ಸಃ (1962)- ಇವು ಅಂತಃಸತ್ವದಲ್ಲಿ ಮಹಾಕವಿಯಾದವನು ಮಾತ್ರ ನಿರೂಪಿಸಬಲ್ಲ ಕಾವ್ಯ ತತ್ತ್ವಗಳನ್ನು, ನೂತನ ವಿಮರ್ಶೆಯನ್ನು ಒಳಗೊಂಡಿವೆ - ಸರೋವರದ ಸಿರಿಗನ್ನಡಿಯಲ್ಲಿ, ಪಂಪನಲ್ಲಿ ಭವ್ಯತೆ, ಕಾವ್ಯ ವಿಮರ್ಶೆಯಲ್ಲಿ ಪುರ್ಣದೃಷ್ಟಿ - ಇವು ಜಗತ್ತಿನ ಇತರ ಸಾಹಿತ್ಯಗಳಿಗೂ ಕೊಡುಗೆಯಾಗಬಲ್ಲಂಥ ವಿಮರ್ಶಾ ಪ್ರಬಂಧಗಳು. ಇವರದು ದರ್ಶನ ವಿಮರ್ಶೆ ಎಂದರೆ, ಇತರರು ಕಾಣದ ಲಾಲಿತ್ಯ ಭವ್ಯತೆಗಳನ್ನೂ ಮಹಿಮೆ ಮಾರ್ದವತೆಗಳನ್ನೂ ಕಾವ್ಯಮಯವಾಗಿ ನಿರೂಪಿಸುವ ವಿಮರ್ಶೆ.

ಪ್ರಾಚೀನ ಕವಿಗಳನ್ನು ಕುರಿತ ವಿಮರ್ಶೆ ಹಲವು ಕಾವ್ಯ ಸಂಗ್ರಹಗಳ ಮುನ್ನುಡಿಗಳಲ್ಲಿ ಹಂಚಿಹೋಗಿದೆ. ಆದಿಪುರಾಣ ಸಂಗ್ರಹದಲ್ಲಿ ಎಲ್.ಗುಂಡಪ್ಪನವರು, ಪಂಪ ರಾಮಾಯಣ ಸಂಗ್ರಹದಲ್ಲಿ ಡಿ.ಎಲ್.ನರಸಿಂಹಾಚಾರ್ಯರು, ಹರಿಶ್ಚಂದ್ರಕಾವ್ಯಸಂಗ್ರಹದಲ್ಲಿ ಎ.ಆರ್.ಕೃಷ್ಣ ಶಾಸ್ತ್ರಿಗಳು, ಭರತೇಶವೈಭವ ಸಂಗ್ರಹದಲ್ಲಿ ತ.ಸು. ಶಾಮರಾಯರು ಆಯಾ ಕವಿಗಳ ಕಾವ್ಯಶಕ್ತಿಯನ್ನು ಅಳೆದು ತೂಗಿದ್ದಾರೆ. ಆಧುನಿಕರ ಕೃತಿಗಳಿಗೆ ಬರೆದ ಮುನ್ನುಡಿಗಳಲ್ಲಿಯೂ ಇಂಥ ವಿಮರ್ಶೆ ಅಡಗಿದ್ದು ಮಾಸ್ತಿಯವರ ಪುಜನ, ಪು.ತಿ.ನ. ಅವರ ಕಾವ್ಯ ಕುತೂಹಲ ಸಂಕಲನಗಳಾಗಿ ಪ್ರಕಟಗೊಂಡಿವೆ. ಅಬಿನವಗುಪ್ತ, ಮಿಡ್ಲ್‌ಟನ್ ಮರ್ರಿ ಮುಂತಾದವರಂತೆ ಸ್ವತಂತ್ರವಾಗಿ ಪ್ರತಿಭಾ ಪುರ್ಣವಾಗಿ ಕಾವ್ಯಮೀಮಾಂಸೆಯ ಮೂಲತತ್ತ್ವಗಳನ್ನು ನೂತನವಾಗಿ ನಿರೂಪಿಸಬಲ್ಲ ಪು.ತಿ.ನ. ಅವರ ಶಕ್ತಿ ಕಾವ್ಯಕುತೂಹಲದ ಪುಟಗಳಲ್ಲಿ ಮಡುಗಟ್ಟಿ ನಿಂತಿದೆ.

ಒಂದು ಕೃತಿಯನ್ನು ಕುರಿತು ಅಪುರ್ವವಾದ ರೀತಿಯಲ್ಲಿ ಒಬ್ಬ ಲೇಖಕರು ವಿಚಾರ ನಡೆಸಿರುವ ಒಂದು ಮಹತ್ತ್ವದ ಕೃತಿ ಎಂದರೆ ಸಂ.ಶಿ.ಭೂಸನೂರಮಠ ಅವರ ಶೂನ್ಯಸಂಪಾದನೆಯ ಪರಾಮರ್ಶೆ (1969). ಇದು ಕನ್ನಡ ವಿಮರ್ಶೆಯ ಕ್ಷೇತ್ರದಲ್ಲಿ ಮೂಲವನ್ನು ಪ್ರವೇಶಿಸಿ, ಅದನ್ನು ಮತ್ತೆ ಹೊಸದಾಗಿ ಸೃಷ್ಟಿಸಿ, ರಸಾನುಭವವನ್ನು ಅನುಭಾವದ ಅನುಭೂತಿಯನ್ನು ಸಹೃದಯರಿಗೆ ಒದಗಿಸುವ ಕೃತಿ. ವಿಮರ್ಶೆಯ ಕ್ಷೇತ್ರವನ್ನು ಶ್ರೀಮಂತಗೊಳಿಸುವುದರಲ್ಲಿ ನೆರವಾದ ಒಂದು ಉದ್ಯಮ ಎಂದರೆ ಸಂಸ್ಕೃತ ಕವಿಗಳನ್ನೂ ಅವರ ಕೃತಿಗಳನ್ನೂ ಪರಿಚಯ ಮಾಡಿಕೊಡಲು ನಡೆದ ಪ್ರಯತ್ನ. ಈ ಗುಂಪಿನಲ್ಲಿ ಆಚಾರ್ಯಕೃತಿ ಎ.ಆರ್.ಕೃಷ್ಣಶಾಸ್ತ್ರಿಗಳ ಸಂಸ್ಕೃತ ನಾಟಕ. ಸಂಸ್ಕೃತ ನಾಟಗಳನ್ನು ಕುರಿತು ಇಂಥ ಒಂದು ಕೃತಿ ಇಂಗ್ಲಿಷ್ನಲ್ಲಾಗಲೀ ಬೇರಾವುದೇ ದೇಶಭಾಷೆಗಳಲ್ಲಾಗಲಿ ಪ್ರಕಟವಾಗಿಲ್ಲ ಎಂಬುದು ಅನೇಕ ವಿದ್ವಾಂಸರ ಅಬಿಪ್ರಾಯ. ಅವರದೇ ‘ಭಾಸಕವಿ‘ (1933) ಕೂಡ ಈ ಗುಂಪಿಗೆ ಸೇರುವಂಥದ್ದು. ಇತರ ಕೃತಿಗಳು ಸಿ.ಕೆ.ವೆಂಕಟರಾಮಯ್ಯನವರ ಕಾಳಿದಾಸ ಮಹಾಕವಿ (1966), ನಾರಾಯಣ ವೆಂಕಟೇಶ ಕುರಡಿಯವರ ಶ್ರೀಹರ್ಷನ ನಾಟಕಗಳು (1930), ಎಂ.ಸುಬ್ರಾಯನ್ ಅವರ ವಿಶ್ವಕವಿ ಕಾಳಿದಾಸ ಕೃತಿದರ್ಶನ, ಸಿ.ಆರ್.ಹೊಸಲಯ್ಯನವರ ಸಂಸ್ಕೃತಿ (1955), ಎಂ.ರಾಜಗೋಪಾಲ ಆಚಾರ್ಯ ಅವರ ಕಾಳಿದಾಸನ ಉಪಮೆಗಳು (1967). ವಿ.ಸೀ. ಅವರು ತಮ್ಮ ಅಬಿಜ್ಞಾಶಾಕುಂತಲ (1943) ಗ್ರಂಥದಲ್ಲಿ ಕಾಳಿದಾಸನ ಶಾಕುಂತಲದ ಬಗ್ಗೆ ಸಮಗ್ರ ವಿಮರ್ಶೆಯನ್ನೂ ಕೆ.ಕೃಷ್ಣಮೂರ್ತಿಗಳು ಕಾಳಿದಾಸನ ನಾಟಕಗಳು ಮತ್ತು ಭವಭೂತಿ ಎಂಬ ಎರಡು ಪುಟ್ಟ ಪುಸ್ತಕಗಳಲ್ಲಿ ಆ ಕವಿಗಳ ಕೃತಿಗಳಿಗೆ ಪ್ರವೇಶವನ್ನೂ ದೊರಕಿಸಿಕೊಟ್ಟಿದ್ದಾರೆ.

ಮಾಸ್ತಿಯವರ ‘ಆದಿಕವಿ ವಾಲ್ಮೀಕಿ’ ಒಂದು ರಸಸೃಷ್ಟಿ, ಇಲ್ಲಿ ವಿಮರ್ಶೆ ಕಾವ್ಯವಾಗಿ ಹರಿದಿದೆ. ವಾಲ್ಮೀಕಿ ರಾಮಾಯಣದ ಶಿಖರಗಳನ್ನೂ ವಾಲ್ಮೀಕಿಯ ಪ್ರತಿಭೆಯ ನೂರಾರು ಮುಖಗಳನ್ನೂ ಆ ಮಹಾಕವಿಯ ಹೃದಯದ ನವಿರು ಕೋಮಲತೆಗಳನ್ನೂ ಮನೋಜ್ಞವಾದ ರೀತಿಯಲ್ಲಿ ಮಾಸ್ತಿಯವರು ಪರಿಚಯ ಮಾಡಿಕೊಟ್ಟಿದ್ದಾರೆ. ವಾಲ್ಮೀಕಿ ರಾಮಾಯಣವನ್ನು ಕುರಿತ ಇನ್ನೊಂದು ಕೃತಿ ವಿ.ಸೀತಾರಾಮಯ್ಯನವರದು. ಎಸ್.ವಿ. ರಂಗಣ್ಣನವರು ಶಾಕುಂತಲ ನಾಟಕದ ವಿಮರ್ಶೆ ಮತ್ತು ವಿಕ್ರಮೋರ್ವಶೀಯ ನಾಟಕದ ವಿಮರ್ಶೆ (1960)- ಈ ಗ್ರಂಥಗಳಲ್ಲಿ ಕವಿಕುಲಗುರು ಎಂಬ ಕಾಳಿದಾಸನ ಪ್ರಶಸ್ತಿಯನ್ನು ತರ್ಕಬದ್ಧವಾಗಿ ಪ್ರಶ್ನಿಸಿದ್ದಾರೆ. ಸೊಗಸಾದ ವಾದವೈಖರಿಯಿಂದಲೂ ಉದಾರವಾದರೂ ತೀಕ್ಷ್ಣವಾದ ವಿಮರ್ಶನ ಶಕ್ತಿಯಿಂದಲೂ ಕಾಳಿದಾಸನ ಮೌಲ್ಯಮಾಪನ ಮಾಡಿದ್ದಾರೆ. ವಿಮರ್ಶೆಯ ಮೇಲೆ ಹಿಡಿತವುಳ್ಳ ಇವರ ಬರೆವಣಿಗೆ ಮೆಚ್ಚುವಂಥದ್ದು.

ವಿಮರ್ಶೆಯ ಮೂಲತತ್ತ್ವಗಳನ್ನು ಕುರಿತು ಅತ್ಯಗತ್ಯವಾದ ಪರಿಚಯ ಕೃತಿಗಳನ್ನು ಕೆಲವರು ನೀಡಿದ್ದಾರೆ. ವಿಮರ್ಶೆ ಎಂದರೆ ಏನು ಎಂಬುದನ್ನು ಸರಳವಾದ ಮಾತುಗಳಲ್ಲಿ ನಮಗೆ ತಿಳಿಯಹೇಳಿದ ಮೊದಲಿಗರು ಮಾಸ್ತಿಯವರು. 1926ರಲ್ಲಿ ಪ್ರಕಟವಾದ ಇವರ ವಿಮರ್ಶೆ ಎಂಬ ಗ್ರಂಥದಲ್ಲಿ ಸಾಹಿತ್ಯ ವಿಮರ್ಶೆಯ ಕಾರ್ಯ ಎಂಬ ಲೇಖನವಿದೆ. ಪುರ್ವ ಪಶ್ಚಿಮಗಳ ಸಾಹಿತ್ಯ ಮತ್ತು ವಿಮರ್ಶೆಯ ಆಳವಾದ ಪಾಂಡಿತ್ಯವುಳ್ಳ ಈ ಹಿರಿಯರು ತಮ್ಮ ಕವಿಸಹಜವಾದ ದೃಷ್ಟಿಯಿಂದ ಅನನುಕರಣೀಯವಾದ ಸರಳ ಶೈಲಿಯಲ್ಲಿ ವಿಮರ್ಶೆಯ ಮೂಲತತ್ತ್ವಗಳನ್ನು ಅಡಕವಾಗಿ ಆ ಪ್ರಬಂಧದಲ್ಲಿ ನಿರೂಪಿಸಿದ್ದಾರೆ. ಅನಂತರದ ವರ್ಷಗಳಲ್ಲಿ ಎಷ್ಟೋ ಬಗೆಯ ವಿಮರ್ಶೆಗಳು ಬೆಳೆದರೂ ವಿಮರ್ಶೆಯ ಮೂಲ ತತ್ತ್ವಗಳನ್ನು ಕುರಿತ ಗ್ರಂಥಗಳು ನಮ್ಮಲ್ಲಿ ಕಡಮೆ. ಇದುವರೆಗೆ ನಮ್ಮಲ್ಲಿ ಪ್ರಕಟವಾಗಿರುವ ವಿಮರ್ಶೆಯ ಮುಕ್ಕಾಲು ಮೂರು ವೀಸ ಪಾಲು ಆನ್ವಯಿಕ ವಿಮರ್ಶೆ. ವಿಮರ್ಶೆಯ ಸಿದ್ಧಾಂತಗಳನ್ನು ತಿಳಿಸುವುದಕ್ಕೆಂದು ಹೊರಟಿರುವ ಕೆಲವು ಪುಸ್ತಕಗಳು ಇವು - ವಿ.ಕೃ.ಗೋಕಾಕರ ಇಂದಿನ ಕನ್ನಡ ಕಾವ್ಯದ ಗೊತ್ತು ಗುರಿಗಳು (1946), ಸ.ಸ.ಮಾಳವಾಡರ ಪುಸ್ತಕ ಪ್ರಪಂಚ (1956), ಮಿರ್ಜಿ ಅಣ್ಣಾರಾಯರ ವಿಮರ್ಶೆಯ ಸ್ವರೂಪ (1959), ಜಿ.ಎಸ್.ಶಿವರುದ್ರಪ್ಪನವರ ವಿಮರ್ಶೆಯ ಪುರ್ವಪಶ್ಚಿಮ (1961), ಎಚ್.ತಿಪ್ಪೇರುದ್ರಸ್ವಾಮಿಗಳ ಸಾಹಿತ್ಯ ವಿಮರ್ಶೆಯ ಮೂಲತತ್ತ್ವಗಳು (1970), ರಂ.ಶ್ರೀ.ಮುಗಳಿಯವರ ಸಾಹಿತ್ಯ ವಿಮರ್ಶೆಯ ಮಾರ್ಗದರ್ಶಕ ಸೂತ್ರಗಳು (1969).

"ವಿಮರ್ಶೆಯ ಶಾಸ್ತ್ರೀಯವಾದ ವಿವೇಚನೆ ಮೊಟ್ಟಮೊದಲ ಬಾರಿಗೆ ಪ್ರಶಂಸನೀಯವಾದ ರೀತಿಯಲ್ಲಿ ಸಮಗ್ರವಾಗಿ ಪುಸ್ತಕರೂಪದಲ್ಲಿ ಪ್ರಕಟವಾದದ್ದು ಜಿ.ಎಸ್.ಶಿವರುದ್ರಪ್ಪನವರ "ವಿಮರ್ಶೆಯ ಪೂರ್ವ ಪಶ್ಚಿಮ"ದಲ್ಲಿ. ಈ ಲೇಖಕರಿಗೆ ಅನೇಕ ರೀತಿಯ ಅನುಕೂಲತೆಗಳು ದೊರೆತಿದ್ದವು. ಮೊದಲನೆಯದು ಪಾಶ್ಚಾತ್ಯ ಮತ್ತು ಪೌರ್ವಾತ್ಯ ಕಾವ್ಯಮೀಮಾಂಸೆಗಳ ಶಾಸ್ತ್ರೀಯವಾದ ಅಧ್ಯಯನ, ಕುವೆಂಪು ಅವರಂಥ ಸಮರ್ಥ ಗುರುಗಳ ಬೋಧನ, ಮಾರ್ಗದರ್ಶನ; ಜೊತೆಗೆ ತಾವೇ ಕವಿಗಳಾದುದರಿಂದ ಕವಿಮನಸ್ಸು ಕೆಲಸ ಮಾಡುವ ರೀತಿಯ ನಿಕಟವಾದ ಪರಿಚಯ, ಇವೆಲ್ಲದರ ಜೊತೆಗೆ ಆಕರ್ಷಕವಾದ ಶೈಲಿ - ಹೀಗಾಗಿ ಈ ಕೃತಿ ಕಾಲದಲ್ಲಿ ಹೇಗೋ ಹಾಗೆ ಗುಣದಲ್ಲೂ ವಿಮರ್ಶೆಯ ಮೂಲತತ್ತ್ವಗಳಿಗೆ ಅನುಗುಣವಾಗಿದೆ. ಭಾರತೀಯಕಾವ್ಯಮೀಮಾಂಸೆಯ ವಿಸ್ತಾರವಾದ ಹಿನ್ನೆಲೆಯಲ್ಲಿ ಪಾಶ್ಚಾತ್ಯ ವಿಮರ್ಶೆಯ ಮೂಲಭೂತ ಸಿದ್ಧಾಂತಗಳನ್ನು ತಿಪ್ಪೇರುದ್ರಸ್ವಾಮಿಯವರು ತಮ್ಮ ಗ್ರಂಥದಲ್ಲಿ ಸೊಗಸಾಗಿ ನಿರೂಪಿಸಿದ್ದಾರೆ. ಈ ಇಬ್ಬರ ಕೃತಿಗಳ ವೈಶಿಷ್ಟ್ಯವೆಂದರೆ ಇಬ್ಬರೂ ಆಧುನಿಕ ಮನಶ್ಶಾಸ್ತ್ರದ ಬೆಳಕಿನಲ್ಲಿ ವಿಮರ್ಶೆಯ ನಡೆಯನ್ನು ಗುರುತಿಸಿರುವುದು.

ವಿಮರ್ಶೆಯ ಮೂಲತತ್ತ್ವಗಳಿಗೆ ಸಂಬಂದಿಸಿದಂತೆ ವಿಶೇಷವಾಗಿ ಉಲ್ಲೇಖಿಸಬೇಕಾದ ಇನ್ನೊಂದು ಕೃತಿ. ಬಿ.ಎಚ್.ಶ್ರೀಧರರ "ಕಾವ್ಯಸೂತ್ರ" (1968). ಪ್ಲೇಟೋ, ಲಾಂಜೈನಸ್, ಉಲ್ಫ್‌ಡೋವರ್ ವಿಲ್ಸನ್, ಹೊರೇಸ್, ಡೆಮಿಟ್ರಿಯಸ್, ಐ.ಎ.ರಿಚಡ್ರ್ಸ್‌ ಮುಂತಾದವರ ವಿಮರ್ಶೆಯ ಪ್ರಕ್ರಿಯೆಗಳಿಂದ ಹಿಡಿದು ಮಾಕ್ರ್ಸ್‌ವಾದೀಯ ವಿಮರ್ಶೆ, ಮನೋವಿಶ್ಲೇಷಣಾತ್ಮಕ ವಿಮರ್ಶೆ, ಭಾಷಾಶಾಸ್ತ್ರೀಯ ಶೈಲಿ, ವಿವೇಚನಾತ್ಮಕ ವಿಮರ್ಶೆ- ಇವೆಲ್ಲವನ್ನೂ ಅತ್ಯಾಧುನಿಕ ಪಾಶ್ಚಾತ್ಯ ವಿಮರ್ಶಕರ ವಾದಗಳನ್ನೂ ತಮ್ಮದೇ ಆದ ಶಾಸ್ತ್ರೀಯ ಶೈಲಿಯಲ್ಲಿ ಶ್ರೀಧರರು ಮಂಡಿಸಿದ್ದಾರೆ. ಇತರ ವಿಮರ್ಶಕರ ದೃಷ್ಟಿಗಳನ್ನು ನಿರೂಪಿಸಿ ಕೈಬಿಟ್ಟು ಬಿಡದೆ ಅವುಗಳನ್ನು ಅರಗಿಸಿಕೊಂಡು ಶ್ರೀಧರರು ಸ್ವತಂತ್ರವಾಗಿ ಆಲೋಚಿಸಬಲ್ಲ ಶಕ್ತಿಯನ್ನು ತೋರಿಸಿದ್ದಾರೆ. ಒಂದು ರೀತಿಯಿಂದ ಈ ಕೃತಿಯನ್ನು ವಿಮರ್ಶೆಯ ಸಿದ್ಧಾಂತಗಳ ಕಿರಿಯ ವಿಶ್ವಕೋಶ ಎನ್ನಬಹುದು. ಸಾಹಿತ್ಯ ವಿಮರ್ಶೆ ಗಟ್ಟಿಯಾದ ತಳಹದಿಯ ಮೇಲೆ ನಿಂತು ಸರ್ವತೋಮುಖವಾಗಿ ಬೆಳೆಯಬೇಕಾದರೆ ಪ್ರಪಂಚದ ಪ್ರಬುದ್ಧ ಸಾಹಿತ್ಯಗಳನ್ನು ವಿಶ್ಲೇಷಣೆಗೆ ಗುರಿಪಡಿಸಿರುವ ಮೀಮಾಂಸಕಾರರು ನಿರೂಪಿಸಿದ ತತ್ತ್ವಗಳನ್ನು ಪರಿಚಯ ಮಾಡಿಕೊಳ್ಳಬೇಕಾದದ್ದು ಅಗತ್ಯ. ಈ ದೃಷ್ಟಿಯಿಂದ ಅರಿಸ್ಟಾಟಲನ ಕಾವ್ಯಮೀಮಾಂಸೆ (1959) ಮತ್ತು ಹೊರೇಸನ ಸಾಹಿತ್ಯ ವಿಮರ್ಶೆ (1969)- ಈ ಎರಡೂ ಎನ್.ಬಾಲಸುಬ್ರಹ್ಮಣ್ಯ ಅವರು ಕನ್ನಡಕ್ಕೆ ನೀಡಿದ ಅಪೂರ್ವ ಕಾಣಿಕೆಗಳು. ತಮ್ಮ ಪ್ರಕಾಂಡ ಪಾಂಡಿತ್ಯ, ನಿಷ್ಕೃಷ್ಟವಾದ ನಿರೂಪಣೆ, ಪ್ರಖರವಾದ ವಿಮರ್ಶನ ಶಕ್ತಿಗಳನ್ನು ಹಾಳತವಾಗಿ ಬೆರಸಿ, ಈ ಪ್ರಾಚೀನರ ಆಚಾರ್ಯಕೃತಿಗಳನ್ನು ಮೋಹಕವಾದ ಕನ್ನಡ ಶೈಲಿಯಲ್ಲಿ ನೀಡಿ ಬಾಲಸುಬ್ರಹ್ಮಣ್ಯ ಅವರು ಕನ್ನಡಿಗರ ಕೃತಜ್ಞತೆಗೆ ಪಾತ್ರ ರಾಗಿದ್ದಾರೆ. ಹಾಗೆಯೇ ಅಬರಕ್ರಾಂಬಿಯ ಪ್ರಿನ್ಸಿಪಲ್ಸ್‌ ಆಫ್ ಲಿಟರರಿ ಕ್ರಿಟಿಸಿಸಂ ಗ್ರಂಥವನ್ನು ಸಿ.ಪಿ.ಕೃಷ್ಣಕುಮಾರ್ ಅವರು ಸಾಹಿತ್ಯ ವಿಮರ್ಶೆಯ ತತ್ತ್ವಗಳು (1964) ಎಂಬ ಹೆಸರಿನಿಂದಲೂ ವಿಲಿಯಂ ಹೆನ್ರಿ ಹಡ್ಸನನ ಇಂಟ್ರೋಡಕ್ಷನ್ ಟು ದಿ ಸ್ಟಡಿ ಆಫ್ ಲಿಟರೇಚರ್ ಎಂಬ ಕೃತಿಯನ್ನು "ಸಾಹಿತ್ಯಪ್ರವೇಶ" (1965) ಎಂಬ ಹೆಸರಿನಿಂದಲೂ ಅನುವಾದ ಮಾಡಿಕೊಟ್ಟಿದ್ದಾರೆ. ಇವರ "ಪಾಶ್ಚಾತ್ಯ ಕಾವ್ಯಚಿಂತನ" (1970) ಎಂಬ ಗ್ರಂಥದಲ್ಲಿ ಲೀ ಹಂಟ್, ಎಮರ್ಸನ್, ಜಾನ್ ಸ್ಟುಯರ್ಟ್ ಮಿಲ್, ಜೇಮ್ಸ್‌, ರಸೆಲ್ ಲೊವೆಲ್, ಮ್ಯಾಥ್ಯೂ ಆರ್ನಾಲ್ಡ್‌, ಜಾರ್ಜ್ ಸಂತಾಯನ ಮತ್ತು ಎ.ಸಿ.ಬ್ರಾಡ್ಲೆ ಅವರ ಕಾವ್ಯಚಿಂತನೆಗಳ ಅನುವಾದ ಇದೆ. ಈ ಅನುವಾದಗಳ ಸಾಲಿನಲ್ಲೇ ಹೆಸರಿಸಬೇಕಾದ ಇತರ ಕೃತಿಗಳು ಇನ್ನೂ ಕೆಲವಿವೆ. ಜಿ.ಗುಂಡಣ್ಣನವರು ವಡ್ರ್ಸ್‌ವರ್ತ್ ಕವಿಯ ‘ಲಿರಿಕಲ್ ಬ್ಯಾಲೆಡ್ಸ್' ಮುನ್ನುಡಿಯನ್ನು ಕಾವ್ಯ ಮತ್ತು ಶಬ್ದದ ರೀತಿ (1961) ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಜಿ.ಗುಂಡಣ್ಣನವರು ಮತ್ತು ಸಿ.ಮಹಾದೇವಪ್ಪನವರು ಷೆಲ್ಲಿಯ ಡಿಫೆನ್ಸ್‌ ಆಫ್ ಪೊಯೆಟ್ರಿಯನ್ನು ಕಾವ್ಯ ಸಮರ್ಥನೆ (1956) ಎಂಬ ಹೆಸರಿನಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಅನುವಾದ ಮಾಡಿದ್ದಾರೆ (ಈ ಕೃತಿಯ ಸರಳಾನುವಾದವನ್ನು ಬಹಳ ಹಿಂದೆಯೇ 1930ರ ಸುಮಾರಿನಲ್ಲಿ ಕುವೆಂಪು ಅವರು ಮಾಡಿದ್ದರು). ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಷೋಪೆನ್ ಹೋವರನ ನಾಲ್ಕು ಸಾಹಿತ್ಯ ಪ್ರಬಂಧಗಳ ಅನುವಾದಗಳನ್ನು ಸಾಹಿತ್ಯದ ಜೀವಾಳ ಎಂಬ ಹೆಸರಿನಲ್ಲಿ ಪ್ರಕಟಿಸಿದರು (1942). ಎಸ್.ಬ್ರಾಡ್ಬ್ರೂಕನ ಟಿ.ಎಸ್.ಎಲಿಯಟ್ ಎಂಬ ಗ್ರಂಥವನ್ನು ಬಿ.ಎಚ್.ಶ್ರೀಧರ ಅವರು ಅನುವಾದ ಮಾಡಿದ್ದಾರೆ.

ವಿಮರ್ಶೆಯನ್ನು ಬೆಳೆಸುವುದರಲ್ಲಿ ನೆರವಾದ ಕೆಲವು ಡಾಕ್ಟೊರೇಟ್ ಪ್ರಬಂಧಗಳನ್ನು ಹೆಸರಿಸಬಹುದು. ಪ್ರಭುಶಂಕರರ ಕನ್ನಡದಲ್ಲಿ ಭಾವಗೀತೆ (1966), ಜಿ.ಎಸ್.ಶಿವರುದ್ರಪ್ಪನವರ ಸೌಂದರ್ಯ ಸಮೀಕ್ಷೆ (1965), ಎಚ್.ತಿಪ್ಪೇರುದ್ರಸ್ವಾಮಿಯವರ ಶರಣರ ಅನುಭಾವ ಸಾಹಿತ್ಯ (1963) ಇಂಥವು. ಪದವಿಗಾಗಿ ಬರೆದ ಮಹಾ ಪ್ರಬಂಧಗಳಲ್ಲಿ ತ.ಸು.ಶಾಮರಾಯರ ಕನ್ನಡನಾಟಕ (1961) ಒಂದು ಗಮನಾರ್ಹ ಕೃತಿ. ಇದೇ ಗುಂಪಿನಲ್ಲಿ ಎದ್ದುನಿಲ್ಲುವ ಒಂದು ಉತ್ತಮ ಕೃತಿ ಎಸ್.ಅನಂತನಾರಾಯಣ ಅವರ ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ (1962). ಕನ್ನಡದ ವಿವಿಧ ಕಾವ್ಯಪ್ರಕಾರಗಳ ಮೇಲೆ ಇಂಗ್ಲಿಷ್ ಕಾವ್ಯ ಬೀರಿರುವ ಪ್ರಭಾವವನ್ನು ಅನಂತನಾರಾಯಣ ಅವರು ಅಬಿನಂದನೀಯವಾದ ರೀತಿಯಲ್ಲಿ ಚಿತ್ರಿಸಿದ್ದಾರೆ. ಅವರದ್ದೇ ಕಾರಂತರ ಕಾದಂಬರಿಗಳು (1948) ಮತ್ತು ಪ್ರಸಿದ್ಧ ವಿದ್ವಾಂಸರಾದ ಎಲ್.ಎಸ್.ಶೇಷಗಿರಿರಾಯರ ಕಾದಂಬರಿ - ಸಾಮಾನ್ಯ ಮನುಷ್ಯ (1952)- ಇವು ಒಂದು ಸಾಹಿತ್ಯ ರೂಪದ ಅಭ್ಯಾಸದ ದಾರಿಯನ್ನು ತೆರೆದ ಕೃತಿಗಳು.

ಹೊರಭಾಷೆಯ ಸಾಹಿತ್ಯಗಳ ವಿಮರ್ಶೆಗೆ ಸಂಬಂದಿಸಿದಂತೆ ಅಬಿಮಾನ ಪಡಬಹುದಾದ ಎರಡು ಕೃತಿಗಳನ್ನು ಹೆಸರಿಸಬೇಕು. ಒಂದು ಎ.ಆರ್.ಕೃಷ್ಣಶಾಸ್ತ್ರಿಗಳ ಬಂಕಿಮಚಂದ್ರ (1960), ಬಂಗಾಲಿ ಭಾಷೆಯಲ್ಲೂ ಆ ಪ್ರಸಿದ್ಧ ಕಾದಂಬರಿಕಾರರನ್ನು ಕುರಿತು ಇಂಥ ವಿಸ್ತಾರವಾದ ಸಮರ್ಥ ವಿಮರ್ಶಾ ಗ್ರಂಥ ಪ್ರಕಟವಾಗಿಲ್ಲ ಎಂಬುದು ವಿದ್ವಾಂಸರ ಅಭಿಪ್ರಾಯ. ಎರಡನೆಯದು ಎ.ಎನ್.ಮೂರ್ತಿರಾಯರ ಷೇಕ್ಸ್‌ಪಿಯರ್ (ಅಪೂರ್ಣ), ಅಪೂರ್ವವಾದ ವಿದ್ವತ್ತು, ಅಬಿನಂದನೀಯವಾದ ಸಹೃದಯತೆಗಳು ಎಂಥ ತೂಕವಾದ ವಿಮರ್ಶೆಯನ್ನು ನೀಡಬಲ್ಲುವು ಎಂಬುದಕ್ಕೆ ಮೂರ್ತಿರಾಯರ ಕೃತಿ ನಿದರ್ಶನ. ವಿಮರ್ಶೆಯಲ್ಲಿ ಒಂದು ಮೇರುಕೃತಿ ಎಸ್.ವಿ.ರಂಗಣ್ಣನವರ ಪಾಶ್ಚಾತ್ಯಗಂಬೀರ ನಾಟಕಗಳು (1970). ಗಂಬೀರನಾಟಕಗಳ ಬೆಳೆವಣಿಗೆಯನ್ನು ಗ್ರೀಕ್ ಯುಗದಿಂದ ಇಂದಿನವರೆಗೆ ಸಾವಿರದ ಇನ್ನೂರು ಪುಟಗಳ ಹರವಿನಲ್ಲಿ ಚಿತ್ರಿಸಿರುವ ರಂಗಣ್ಣನವರು ತಮ್ಮ ಅರ್ಧಶತಮಾನದ ಅಧ್ಯಯನದ ಫಲವನ್ನೂ ಪರಿಣತ ವಿಮರ್ಶಾದೃಷ್ಟಿಯ ಸಾಧನೆಯನ್ನೂ ಈ ಗ್ರಂಥದಲ್ಲಿ ಏಕತ್ರ ಸಂಗಮಗೊಳಿಸಿದ್ದಾರೆ.

ಆಧುನಿಕ ಕನ್ನಡ ಸಾಹಿತ್ಯದ ವಿಮರ್ಶೆಯ ಇತಿಹಾಸದಲ್ಲಿ ಕೀರ್ತಿನಾಥ ಕುರ್ತುಕೋಟಿ ಯವರಿಗೆ ಒಂದು ವಿಶಿಷ್ಟವಾದ ಸ್ಥಾನವಿದೆ. ಸಾಹಿತ್ಯದ ಮುಖ್ಯ ಪ್ರಕಾರಗಳನ್ನೆಲ್ಲ ಪರಿಶೀಲಿಸಿ ವಿಮರ್ಶಿಸ ಹೊರಟಿರುವ ಇವರ ಧೈರ್ಯ ಅಪಾರವಾದದ್ದು. ಇವರ ಅಧ್ಯಯನದ ವ್ಯಾಪ್ತಿ ಹಿರಿದು. ಇವರು ಹೇಳುವ ಎಲ್ಲ ಮಾತನ್ನೂ ಎಲ್ಲರೂ ಒಪ್ಪುವುದು ಸಾಧ್ಯವಿಲ್ಲ ಎಂಬುದು ಇವರ ವಿಮರ್ಶೆಗೆ ಮಾತ್ರವಲ್ಲದೆ ಎಲ್ಲ ವಿಮರ್ಶೆಗೂ ಅನ್ವಯಿಸುವಂಥ ಮಾತು. ಇವರ "ಯುಗಧರ್ಮ ಹಾಗೂ ಸಾಹಿತ್ಯ ದರ್ಶನ"(1963), ವಿಮರ್ಶೆಗೆ ವಿಶೇಷ ಆಸ್ಪದ ನೀಡಿರುವ ವಿಮರ್ಶಾಕೃತಿ. ನವ್ಯ ಸಾಹಿತ್ಯ ಆರಂಭವಾದ ಮೇಲೆ ಹೊಸ ವಿಮರ್ಶೆಯ ರೀತಿಯೂ ಕನ್ನಡಕ್ಕೆ ಬಂತು. ಎಲ್.ಎಸ್.ಶೇಷಗಿರಿರಾಯರು ಹೇಳುತ್ತಾರೆ: ಈ ಸಾಹಿತ್ಯ ವಿಮರ್ಶೆಯಲ್ಲಿ ಕೃತಿಯೇ ಸರ್ವಸ್ವವಾದ್ದರಿಂದ ಕೃತಿಕಾರ ಏನನ್ನೇ ಹೇಳಬೇಕಾದರೂ ಭಾಷೆಯ ಮೂಲಕ ಮಾತ್ರ ಹೇಳಬಲ್ಲ ಎಂಬ ನಂಬಿಕೆ ಇರುವುದರಿಂದ ಕೃತಿಯ ವಿವರವಾದ, ಸೂಕ್ಷ್ಮವಾದ ಅಧ್ಯಯನ ಮುಖ್ಯವಾಯಿತು. ಒಂದು ಕವನ, ನಾಟಕ ಅಥವಾ ಕಾದಂಬರಿ ಸಾವಯವ ಶಿಲ್ಪ. ಹೇಗೆ ಮನುಷ್ಯನ ಅಂಗಾಂಗಗಳೆಲ್ಲ ಸೇರಿ ದೇಹವಾಗಿದೆಯೋ ಹಾಗೆ ವಸ್ತು, ಪಾತ್ರ, ಆವರಣ, ತಂತ್ರ ಎಲ್ಲ ಸೇರಿ ಕೃತಿ. ಮೊದಲು ಭಾವ, ಅನಂತರ ಭಾಷೆ, ತಂತ್ರಗಳ ಆಯ್ಕೆ ಎನ್ನುವುದಿಲ್ಲ. ಇದನ್ನು ಸದಾ ಲಕ್ಷ್ಯದಲ್ಲಿಟ್ಟುಕೊಂಡೇ ವಿಮರ್ಶಕ ಕೃತಿಯ ಅರ್ಥವನ್ನು ಗ್ರಹಿಸಲು ಪ್ರಯತ್ನಿಸುತ್ತಾನೆ. ನವ್ಯ ವಿಮರ್ಶೆಯ ಕೃತಿ ವಿಶ್ಲೇಷಣಾ ರೀತಿಯನ್ನು ಅದರ ವೈವಿಧ್ಯವನ್ನು ಜಿ.ಎಸ್.ಶಿವರುದ್ರಪ್ಪನವರೂ ಎನ್.ಎಸ್.ಲಕ್ಷ್ಮೀ ನಾರಾಯಣ ಭಟ್ಟರೂ ಸಂಪಾದಿಸಿರುವ" ಪ್ರಾಯೋಗಿಕ ವಿಮರ್ಶೆ" ಎಂಬ ಗ್ರಂಥದಿಂದ ಪರಿಚಯ ಮಾಡಿಕೊಳ್ಳಬಹುದು. ಎಂ.ಗೋಪಾಲಕೃಷ್ಣ ಅಡಿಗರ "ನಡೆದು ಬಂದ ದಾರಿ" ಸಂಗ್ರಹಕ್ಕೆ ಬರೆದ ಮುನ್ನುಡಿಯಿಂದ ಪ್ರಾರಂಭವಾದ ನವ್ಯವಿಮರ್ಶೆ ಸಾಕ್ಷಿ, ಸಂಕ್ರಮಣ ಪತ್ರಿಕೆಗಳ ನೆರವಿ ನಿಂದಲೂ ಅನೇಕ ವಿಮರ್ಶಕರಿಂದಲೂ ಬೆಳೆಯುತ್ತ ಬಂದಿದೆ. ಯು.ಆರ್.ಅನಂತಮೂರ್ತಿ, ಎಂ.ಜಿ.ಕೃಷ್ಣಮೂರ್ತಿ, ಪಿ.ಲಂಕೇಶ್, ಗಿರಡ್ಡಿ ಗೋವಿಂದರಾಜ, ಜಿ.ಎಚ್.ನಾಯಕ, ಎಚ್.ಎಂ.ಚನ್ನಯ್ಯ, ಬರಗೂರು ರಾಮಚಂದ್ರಪ್ಪ, ರಾಮಚಂದ್ರದೇವ, ಮಾಧವ ಕುಲಕರ್ಣಿ - ಇವರೆಲ್ಲ ಈ ಕ್ಷೇತ್ರದಲ್ಲಿ ಕೃಷಿ ಮಾಡಿದ ಅನೇಕ ವಿಮರ್ಶಕರಲ್ಲಿ ಕೆಲವರು. ಯು.ಆರ್.ಅನಂತಮೂರ್ತಿಯವರ" ಪ್ರಜ್ಞೆ ಮತ್ತು ಪರಿಸರ" (1971), ಎಂ.ಜಿ.ಕೃಷ್ಣಮೂರ್ತಿ ಯವರ ಆಧುನಿಕ ಭಾರತೀಯ ಸಾಹಿತ್ಯ (1970), ಜಿ.ಎಚ್.ನಾಯಕರ ಸಮಕಾಲೀನ (1974), ಎಚ್.ಎಂ.ಚನ್ನಯ್ಯನವರ "ಜಿಜ್ಞಾಸೆ" (1975), ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಹೊರಳು ದಾರಿಯಲ್ಲಿ ಕಾವ್ಯ, ಜಿ.ಎನ್.ರಂಗನಾಥರಾವ್ ಅವರ ಹೊಸ ತಿರುವು, ಗಿರಡ್ಡಿ ಗೋವಿಂದರಾಜರ ಸಣ್ಣಕತೆಯ ಹೊಸ ಒಲವುಗಳು- ಇವೆಲ್ಲ ಗಮನಿಸಬೇಕಾದ ವಿಮರ್ಶೆಯ ಕೃತಿಗಳು. ಗೋಪಾಲಕೃಷ್ಣ ಅಡಿಗರನ್ನು ಕುರಿತು ಬರೆದ ಸುಮತೀಂದ್ರ ನಾಡಿಗರ ಗೋಪಾಲಕೃಷ್ಣ ಅಡಿಗ ಒಂದು ಕಾವ್ಯಾಭ್ಯಾಸ ಅಡಿಗರ ಕಾವ್ಯಧೋರಣೆಯನ್ನು ಅರ್ಥಮಾಡಿಕೊಳ್ಳಲು ಉತ್ತಮ ಪ್ರವೇಶಿಕೆಯಾಗಿದೆ. ವಿಮರ್ಶಕರಾಗಿ ಪ್ರಖ್ಯಾತರಾಗಿರುವ ಸಿ.ಪಿ.ಕೃಷ್ಣಕುಮಾರ್ ಅವರು ಅನೇಕ ವಿಮರ್ಶಾ ಸಂಕಲನಗಳನ್ನು ಹೊರತಂದಿದ್ದಾರೆ. ಕನ್ನಡ ಚತುರ್ಮುಖ, ಪರಿಭಾವನೆ, ಆಲೋಚನ ಮುಂತಾದ ಕೃತಿಗಳಲ್ಲಿ ಇವರು ಉತ್ತಮ ವರ್ಣನಾತ್ಮಕ ವಿಮರ್ಶೆಯನ್ನು ನೀಡಿದ್ದಾರೆ.

ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳ ಕನ್ನಡ ಅಧ್ಯಯನ ಸಂಸ್ಥೆಗಳು ವಿಸ್ತಾರವಾಗಿ ಪ್ರಕಟಿಸುತ್ತಿರುವ ಕನ್ನಡ ಸಾಹಿತ್ಯ ಚರಿತ್ರೆಯ ಪ್ರಕಟಿತ ಸಂಪುಟಗಳನ್ನು ನೋಡಿದರೆ ಕನ್ನಡದ ವಿಮರ್ಶೆ ವಿಪುಲವಾಗಿ ಬೆಳೆಯುವ ಶುಭಲಕ್ಷಣಗಳು ಕಾಣುತ್ತಿವೆ. ಅಲ್ಲದೆ ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸುತ್ತಿರುವ ಗೃಹಸರಸ್ವತೀ ಗ್ರಂಥಮಾಲೆಯಲ್ಲಿ ಪ್ರಭುಶಂಕರರ ಖಲೀಲ್ ಗಿಬ್ರಾನ್ (1970), ಎಚ್.ಕೆ.ರಾಮಚಂದ್ರ ಮೂರ್ತಿಯವರ ಮೋಲಿಯರ್ (1973), ಎಲ್.ಎಸ್.ಶೇಷಗಿರಿರಾಯರ ಆಲಿವರ್ ಗೋಲ್ಡ್‌ ಸ್ಮಿತ್ (1972)- ಇವು ಗಮನಿಸಬೇಕಾದ ಕೃತಿಗಳು. ಕೊನೆಯ ಎರಡರಲ್ಲಿ ಆಯಾ ಕವಿಗಳ ಕೃತಿಗಳ ಸೊಗಸಾದ ವಿಮರ್ಶೆಯಿದೆ.

ಮೈಸೂರು, ಬೆಂಗಳೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳು ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಅವುಗಳಲ್ಲಿ ಓದಿದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿವೆ. ಇವು ವಿಮರ್ಶೆಗೆ ಶ್ರೇಷ್ಠವಾದ ಕಾಣಿಕೆಗಳು. ಇವುಗಳಲ್ಲಿ ಕೆಲವು ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿರುವ ಸುವರ್ಣ ಸಂಚಯ (1967), ಚಿನ್ನದ ಗರಿ (1974), ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿರುವ ಸಾಹಿತ್ಯ ಮತ್ತು ಸಾಮಾಜಿಕ ಮೌಲ್ಯ,ಹೊಸಗನ್ನಡ ಕಾವ್ಯದ ಎರಡು ಮಾರ್ಗಗಳು, ಕನ್ನಡ ನಾಟಕ ಪರಂಪರೆ ಮತ್ತು ಪ್ರಯೋಗ, ಕನ್ನಡ ವಿಮರ್ಶೆಯ ನೆಲೆ ಬೆಲೆ, ಪಂಪ ಒಂದು ಅಧ್ಯಯನ; ಕರ್ನಾಟಕ ವಿಶ್ವವಿದ್ಯಾಲಯ ಪ್ರಕಟಿಸಿರುವ ದಾಸ ಸಾಹಿತ್ಯ, ಕನ್ನಡ ರಂಗಭೂಮಿ ಅಂದು-ಇಂದು - ಇವೆಲ್ಲ ಮೌಲಿಕ ವಿಮರ್ಶೆಗಳನ್ನು ಒಳಗೊಂಡಿವೆ. ರಾಜ್ಯ ಸಾಹಿತ್ಯ ಅಕಾಡೆಮಿಯ ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಕೂಡ ಒಂದು ಉತ್ತಮ ಸಂಕಲನ. (ಪಿ.ಎಸ್.)

ಕರ್ನಾಟಕದಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳಾದವು. ಕನ್ನಡ ಸಾಹಿತ್ಯಕ್ಕೆ ಇವುಗಳ ಪ್ರೇರಣೆಯೂ ಆಯಿತು. ನವೋದಯ ಸಾಹಿತ್ಯ (1920-45) ಚಳವಳಿಯಲ್ಲಿ ಪಾಶ್ಚಾತ್ಯ ಕಾವ್ಯದ ಅನುಸರಣೆಯೂ ಸೇರಿದಂತೆ ನಮ್ಮ ಸಂದರ್ಭದ ಆಸೆ ಆಕಾಂಕ್ಷೆಗಳು ಅಬಿವ್ಯಕ್ತಗೊಳ್ಳಲು ಕಾರಣವಾಯಿತು. ಅನಂತರ ವ್ಯಕ್ತಿ ಪ್ರಜ್ಞೆ ಯ ಕೇಂದ್ರ ನೆಲೆಯಾದ ನವ್ಯ ಸಾಹಿತ್ಯ (1950 ರಿಂದ) ರೂಪುಗೊಂಡರೆ ಪ್ರಗತಿಶೀಲ ಸಾಹಿತ್ಯಕ್ಕೆ (1945-50) ಮಾಕ್ರ್ಸ್‌ವಾದದ ನೆಲೆಗಟ್ಟು ಕಾರಣವಾಯಿತು. ಆಮೇಲೆ ಸ್ಥಗಿತ ಮೌಲ್ಯಗಳನ್ನು ಪ್ರಶ್ನಿಸಲೆಂದು ಶೂದ್ರ ಬರೆಹಗಾರರ ಒಕ್ಕೂಟ ಹುಟ್ಟಿಕೊಂಡಿತು. ದಲಿತರ ಮೇಲಿನ ಆಕ್ರಮಣವನ್ನು, ಶೋಷಣೆಯನ್ನು ತಪ್ಪಿಸಿ ಸಮಾನತೆ ಹಾಗೂ ಸ್ವಾಬಿಮಾನವನ್ನುಂಟುಮಾಡುವುದಕ್ಕಾಗಿ ದಲಿತ ಬಂಡಾಯ ಚಳವಳಿ (1979) ಹುಟ್ಟಿಕೊಂಡದ್ದಲ್ಲದೆ ಇವುಗಳ ಪ್ರತ್ಯುತ್ಪನ್ನವಾಗಿ ದಲಿತ ಬಂಡಾಯ ಸಾಹಿತ್ಯವು ರಚನೆಗೊಂಡಿತು. ಈ ಬಗೆಯ ಸಾಹಿತ್ಯದಲ್ಲಿ ಅಸಮಾನತೆಯ ನಿವಾರಣೆಗಾಗಿ, ತಮ್ಮ ಹಕ್ಕುಗಳ ಈಡೇರಿಕೆಗಾಗಿ ಜನಪರವಾದ ದನಿ ಸ್ಫೋಟವಾಯಿತು. ಸಾಹಿತ್ಯ ಕೃತಿಯನ್ನು ಕೇವಲ ಸಾಹಿತ್ಯ ಕೃತಿಯನ್ನಾಗಿ ನೋಡದೆ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ನೋಡುವ, ಮೌಲ್ಯಮಾಪನ ಮಾಡುವ ಪರಿಪಾಠ ಬೆಳೆದದ್ದರಿಂದ ಅದಕ್ಕೆ ಸಂಬಂದಿಸಿದ ವಿಮರ್ಶನ ಮಾದರಿಗಳು, ಕ್ರಮಗಳು ರೂಡಿಗೆ ಬಂದವು. ಹಾಗಾಗಿ ಸಾಹಿತ್ಯದ ಮೂಲಕ ಸಂಸ್ಕೃತಿಯನ್ನು ವ್ಯಾಖ್ಯಾನಿಸುವ, ವಿಶ್ಲೇಷಿಸುವ ಕೆಲಸದಲ್ಲಿ ವಿಮರ್ಶಕರು ಮುಂದಾದರು. ವರ್ತಮಾನದಲ್ಲಿ ಇದ್ದು ಭೂತವನ್ನು ಅವಲೋಕಿಸುವ ಕೆಲಸದಲ್ಲಿ ತೊಡಗಿದರು. ಅಂದರೆ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಜನಪರ ಆಶಯಗಳನ್ನು, ದುಡಿಯುವ ವರ್ಗದ ದನಿಗಳನ್ನು, ದಲಿತ ಬಂಡಾಯದ ಆಶಯಗಳನ್ನು, ಅನ್ವೇಷಿಸುವ ಕೆಲಸದಲ್ಲಿ ವಿಮರ್ಶನ ಕಾರ್ಯ ಜರುಗಿತು. ಹೀಗಾಗಿ ನವೋದಯ ಮತ್ತು ನವ್ಯ ವಿಮರ್ಶೆಗಿಂತ ಬಿನ್ನವಾದ ಶೈಲಿ ವ್ಯಕ್ತವಾಯಿತು. ಕನ್ನಡ ಸಾಹಿತ್ಯ ಪರಂಪರೆಯ ಜೊತೆ ಜೊತೆಯಲ್ಲಿಯೇ ವಿಮರ್ಶೆಯೂ ಬೆಳೆಯುತ್ತಾ ಬಂದಿರುವಂತೆ, ಕಾಲಕಾಲಕ್ಕೂ ಅದರ ಪರಿಭಾಷೆಯಲ್ಲೂ ಅಲ್ಪಸ್ವಲ್ಪ ಬದಲಾವಣೆಗಳೂ ಉಂಟಾಗಿರುವುದನ್ನು ಗಮನಿಸಬಹುದು. ಬರಗೂರು ರಾಮಚಂದ್ರಪ್ಪನವರು ಹೇಳುವಂತೆ “ಸಾಹಿತ್ಯ ಮತ್ತು ವಿಮರ್ಶೆಗಳ ಮುಖಾ ಮುಖಿ ಒಂದು ಉತ್ತಮ ಅಂತರ್ಕ್ರಿಯೆಗೆ ಕಾರಣವಾದಾಗ ಆರೋಗ್ಯಕರ ಸಾಂಸ್ಕೃತಿಕ ಪರಿಸರದ ನಿರ್ಮಾಣವಾಗುತ್ತದೆ.” ದಲಿತ ಬಂಡಾಯ ಸಂದರ್ಭದ ವಿಮರ್ಶೆ ಈ ಬಗೆಯದಾಗಿದೆ. ಗಾಂದಿ, ಲೋಹಿಯಾ, ಅಂಬೇಡ್ಕರ್, ಮಾಕ್ರ್ಸ್‌ ಸಿದ್ಧಾಂತಗಳು ಸಾಹಿತ್ಯ ವಿಮರ್ಶೆಯಲ್ಲಿ ಸಂವಾದದಲ್ಲಿ ಪ್ರಮುಖವಾದವು. ದಲಿತ ಬಂಡಾಯ ಸಾಹಿತ್ಯದ ಪ್ರಭಾವದಿಂದಾಗಿ ಈ ಬಗೆಯ ಸಂವೇದನೆಗಳ ಅಧ್ಯಯನಕ್ಕೆ ಕಾರಣವಾಯಿತು. ಈ ಸಂದರ್ಭದಲ್ಲಿ ಕನ್ನಡ ವಿಮರ್ಶೆ ಸಾಹಿತ್ಯವನ್ನು ರಾಜಕೀಯ ಸಿದ್ಧಾಂತ, ವರ್ಗ ಸಂಘರ್ಷಗಳ ಹಿನ್ನೆಲೆಯಲ್ಲಿ ಮೌಲ್ಯಮಾಪನ ಮಾಡತೊಡಗಿತು. ಜನಪರ ದನಿ ಪರಿಶೀಲನೆಗೆ ಬಳಸುವ ಸಾಮಾಜಿಕ ಮಾನದಂಡ, ಎಡಪಂಥೀಯ ಸೈದ್ಧಾಂತಿಕತೆ, ನಿರ್ದಿಷ್ಟವಾದ ಪರಿಭಾಷೆ ಇವೆಲ್ಲ ದಲಿತ ಬಂಡಾಯ ಸಾಹಿತ್ಯ ವಿಮರ್ಶೆಯ ಅಂತಃಸತ್ವಗಳಾದುವು. ಹಾಗಾಗಿ ವಿಮರ್ಶೆಯಲ್ಲಿ ಸಾಮಾಜಿಕ ಸಂದರ್ಭ ಮುಖ್ಯವಾಯಿತು. ಕನ್ನಡ ವಿಮರ್ಶೆ ಪರಂಪರೆಯೊಂದಿಗೆ ಅನುಸಂಧಾನದಲ್ಲಿ ತೊಡಗುತ್ತಲೇ ಬಂತು. ಈ ನಡುವೆ ವಿಮರ್ಶೆಯಲ್ಲಿ ಸಾಂಸ್ಕೃತಿಕ ಜವಾಬ್ದಾರಿ ಹೆಚ್ಚಿತು. ಅನ್ಯಜ್ಞಾನ ನ ಶಿಸ್ತುಗಳ ಅಧ್ಯಯನ, ಪುರಕ ಸಾಹಿತ್ಯದ ಬಗೆಗಿನ ಕಾಳಜಿಗಳು - ಇವು ನವ್ಯೋತ್ತರ ವಿಮರ್ಶೆಯಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡವು. ಸೂಕ್ಷ್ಮಗೊಂಡ ಈ ವಿಮರ್ಶೆ ಪ್ರಬುದ್ಧತೆಯತ್ತಲೂ ಸಾಗಿತು. ಅಲ್ಲದೆ ಪಾಶ್ಚಾತ್ಯ ವಿಮರ್ಶನ ಮಾದರಿಗಳ ಬಗ್ಗೆ ತಾತ್ಸಾರ ಹುಟ್ಟಿಸುತ್ತಲೇ ಕನ್ನಡ ಸಾಹಿತ್ಯ ಪರಂಪರೆ ಸಂಸ್ಕೃತಿಗಳಲ್ಲಿ ಅಂತರ್ಗಾಮಿಯಾಗಿರುವ ಸಾಂಸ್ಕೃತಿಕ ವಿನ್ಯಾಸಗಳನ್ನು, ದೇಸೀ ನೆಲೆಗಳನ್ನು ಅರಸತೊಡಗಿತು. ನವ್ಯವಿಮರ್ಶೆ ಓದುಗ ಸಂವೇದನೆಯನ್ನು ಕಡೆಗಣಿಸಿದರೂ ಬಂಡಾಯ ಸಾಹಿತ್ಯ ಆ ಕೃತಕ ಕಂದಕವನ್ನು ಮುಚ್ಚುವ ಕೆಲಸ ಮಾಡಿತು.

ಆದರೆ ನವ್ಯ ವಿಮರ್ಶೆಯಲ್ಲಿ ಸಾಂಸ್ಕೃತಿಕ ಕಾಳಜಿಗಳಿಲ್ಲದೆ ಶುಷ್ಕವಾಗತೊಡಗಿದಾಗಲೂ ಅನಂತಮೂರ್ತಿ, ಚನ್ನಯ್ಯನಂಥವರು ಸಮಾಜವಾದಿ ಹಿನ್ನೆಲೆಯಲ್ಲಿ ಬರೆಯತೊಡಗಿದ್ದರು. ನರಹಳ್ಳಿ ಬಾಲಸುಬ್ರಹ್ಮಣ್ಯ, ಎಚ್.ಎಸ್. ರಾಘವೇಂದ್ರರಾವ್, ಜಿ.ಎಚ್. ನಾಯಕ, ಕೆ.ವಿ.ತಿರುಮಲೇಶ ಮೊದಲಾದವರಂತೂ ನವ್ಯೋತ್ತರ ಸಾಹಿತ್ಯದ ಹೊಸಸಂವೇದನೆಗಳನ್ನು ಕುತೂಹಲದಿಂದ ಗಮನಿಸಿ ಪ್ರತಿಕ್ರಿಯಿಸತೊಡಗಿದ್ದು ಗಮನಾರ್ಹ ಸಂಗತಿ.

ಇನ್ನೂ ಕೆಲ ವಿಮರ್ಶಕರು ದಲಿತ ಬಂಡಾಯ ಕೃತಿಗಳನ್ನು ನವ್ಯ ವಿಮರ್ಶೆಯ ಮಾನದಂಡಗಳಿಂದಲೇ ಅಳೆಯತೊಡಗಿದ್ದರು. ಇದರ ಪರಿಣಾಮವಾಗಿ ಕೃತಿಯ ಮೌಲ್ಯಮಾಪನಕ್ಕಿಂತ ಅದನ್ನು ಸಾರಾಸಗಟಾಗಿ ತಳ್ಳಿಹಾಕುವ ನಿಲುವು ಬಹಿರಂಗವಾಯಿತು. ಆಕ್ರೋಶ, ಅಬ್ಬರ, ಸರಳತೆ, ಘೂೕಷಿತ ಬಂಡಾಯ - ಇವೆಲ್ಲಾ ಸಾಹಿತ್ಯಕ ಮೌಲ್ಯಗಳೇ ಅಲ್ಲ ಎಂಬ ನಿರ್ಧಾರಕ್ಕೆ ಬಂದದ್ದುಂಟು. ಅನಂತರ ಬಂದ ಬಂಡಾಯ ಸಾಹಿತ್ಯ ವಿಮರ್ಶಕರು ಇವುಗಳನ್ನೇ ನಿಜವಾದ ಸಾಹಿತ್ಯಕ ಮೌಲ್ಯಗಳೆಂದು ಪರಿಗಣಿಸಿ ಕೃತಿ ವಿಮರ್ಶೆಗೆ ತೊಡಗಿದರು. ಯಾರು ಬರೆದದ್ದು ದಲಿತ ಸಾಹಿತ್ಯ ಎಂಬ ಪ್ರಶ್ನೆ ಹುಟ್ಟಿತು. ದಲಿತರು ಬರೆದದ್ದು ದಲಿತಸಾಹಿತ್ಯವೆಂದೂ ಅದು ಮಹತ್ವದ್ದೇ ಆಗಿರುತ್ತದೆಂದೂ ಭಾವಿಸಲಾಯಿತು. ದಲಿತ ವಿಮರ್ಶೆ ಎಂಬುದು ಪ್ರತ್ಯೇಕವಾಗಿ ಬೆಳೆದಿಲ್ಲವಾದರೂ ಪಿ.ಕೃಷ್ಣಪ್ಪ, ದೇವಯ್ಯಹರವೆ ಮುಂತಾದವರು ಆರಂಭದ ದಿನಗಳಲ್ಲಿ ವಿಮರ್ಶನ ವಲಯದಲ್ಲಿ ಭರವಸೆ ಮೂಡಿಸಿದ್ದರು. ಅನಂತರ ಮ.ನ. ಜವರಯ್ಯ, ಅರವಿಂದ ಮಾಲಗತ್ತಿ, ಸಿದ್ಧಲಿಂಗಯ್ಯ, ಮೊಗಳ್ಳಿಗಣೇಶ ಮುಂತಾದವರ ಬರೆಹಗಳು ಗಮನಾರ್ಹವೆನಿಸಿದುವು.

ಪ್ರಜಾವಾಣಿಯ ಸಾಹಿತ್ಯ ಸಂವಾದದಲ್ಲಿ ಪ್ರಕಟವಾದ ವಿ.ಮುನಿವೆಂಕಟಪ್ಪನವರ ‘ದಲಿತ ಸಾಹಿತ್ಯ ಎತ್ತ ಸಾಗಿದೆ’ ಮುಳ್ಳೂರು ನಾಗರಾಜರ ‘ದಲಿತ ಸಾಹಿತಿಗಳ ಏಕಾಂತ ದಂತ ಗೋಪುರ’ ಮುಂತಾದ ಬರೆಹಗಳು ಏಕಮುಖವಾದ ವಿಮರ್ಶೆಯ ಬಗ್ಗೆ ಕಿಡಿಕಾರಿದವು. ಅದಕ್ಕಾಗಿ ಸುಬ್ಬು ಹೊಲೆಯಾರ್ ‘ದಲಿತ ಸಾಹಿತಿಗಳಿಗೆ ಅಸಹಾಯಕತೆ ಬೇಡ’ ಎಂದು ಸಮಾಧಾನಪಡಿಸಿದ್ದೂ ಉಂಟು. ಹೀಗೆ ಕೆಲ ದಲಿತ ಸಾಹಿತಿಗಳು ವೈಯಕ್ತಿಕ ಕೊರಗನ್ನು ತೋಡಿಕೊಳ್ಳುತ್ತಲೇ ತಮ್ಮ ಹಾಗೂ ತಮ್ಮಂಥವರ ಕೃತಿಗಳಿಗೆ ವಿಮರ್ಶನ ಕ್ಷೇತ್ರದಲ್ಲಿ ಆಗುತ್ತಿರುವ ತಾರತಮ್ಯಗಳನ್ನು ಬಹಿರಂಗಗೊಳಿಸಿದರು. ಮುಸುಕಿನ ಗುದ್ದಾಟದಂತೆ ಸಂವಾದದಲ್ಲಿ ತೊಡಗಿದ್ದವರ ಚರ್ಚೆಯೂ ಒಂದು ರೀತಿಯಲ್ಲಿ ದಲಿತ ಸಾಹಿತ್ಯ ವಿಮರ್ಶೆಯ ಏರುಪೇರಿನ ಮೌಲ್ಯಮಾಪನವ ಆಗಿತ್ತು. ಇಂಥ ವಿಮರ್ಶೆಗೆ ಮುಖ್ಯಕಾರಣ ವಿಮರ್ಶಾವಲಯದಲ್ಲಿ ಬರೆಯುವವರೆಲ್ಲಾ ಶೈಕ್ಷಣಿಕ ವಲಯದಲ್ಲಿರುವ ದಲಿತ ಲೇಖಕರನ್ನು ಅವರ ಕೃತಿಗಳನ್ನು ವೈಭವೀಕರಿಸಿದ್ದು ಮತ್ತು ನಾನ್ ಅಕಾಡೆಮಿಕ್ ವಲಯದ ದಲಿತ ಲೇಖಕರ ಬಗ್ಗೆ ಅನಾದರ ತೋರಿಸಿದ್ದು. ಅಕಸ್ಮಾತ್ ಬರೆದರೂ ‘ಈ ಸಾಲು ಸಪ್ಪೆಯಾಗಿದೆ ಈ ಪಂಕ್ತಿ ಖಾರವಾಗಿದೆ’ ಎಂದು ಊಟದ ಪರಿಭಾಷೆಯಲ್ಲಿ ದಲಿತ ಸಾಹಿತ್ಯದ ಪರಿಶೀಲನಾಕಾರ್ಯ ನಡೆದುದ್ದುಂಟು. ಇದನ್ನೆಲ್ಲಾ ಗಮನಿಸಿದವರಿಗೆ ವಿಮರ್ಶೆಯಲ್ಲಿ ಸಾಮಾಜಿಕ ಪರಿಭಾಷೆ ರೂಪುಗೊಳ್ಳುವವರೆಗೆ ದಲಿತ ಸಾಹಿತ್ಯಕ್ಕೆ ನ್ಯಾಯದೊರಕುವುದಿಲ್ಲ ಎನಿಸಿತು. ಪಾಶ್ಚಾತ್ಯ ಸಾಹಿತ್ಯದ ಮಾನದಂಡಗಳನ್ನಿಟ್ಟುಕೊಂಡು ವಿಮರ್ಶಿಸುವದರಿಂದಾಗಾಲೀ, ಗತ ಇತಿಹಾಸದ ಅಥವಾ ಪರಂಪರೆಯನ್ನು ತಪ್ಪಾಗಿ ಗ್ರಹಿಸುವುದರಿಂದಾಗಲೀ ಕಾವ್ಯಕ್ಕೆ ರಸವೇ ಪ್ರಧಾನ ಎಂಬುದರಿಂದಾಗಲೀ, ವ್ಯಾಕರಣವೇ ಪ್ರಧಾನ ಎನ್ನುವವರಿಂದಾಗಲೀ ದಲಿತ ಸಾಹಿತ್ಯದ ವಿಮರ್ಶೆ ಸಾಧ್ಯವಾಗದು ಎಂಬುದು ಇದರ ಮೀಮಾಂಸಕರ ವಾದವಾಯಿತು. ದಲಿತ ಪ್ರಜ್ಞೆಯ ಆಂತರ್ಯಕ್ಕೆ ಸ್ಪಂದಿಸಿದವರಿಂದ ಮಾತ್ರ ಇದರ ವಸ್ತುನಿಷ್ಠ ವಿಮರ್ಶೆ ಸಾಧ್ಯ ಎಂಬ ತೀರ್ಮಾನಕ್ಕೆ ಬಂದು ಘೂೕಷಣಾಮೂಲವಾದ ಕಾವ್ಯವೂ ಶ್ರೇಷ್ಠವೆಂದು ಪ್ರಶಂಸೆ ಮಾಡುತ್ತಾಬಂದದ್ದರಿಂದ ಕಲಾತ್ಮಕವಲ್ಲದ ಕಾವ್ಯಸೃಷ್ಟಿಗೂ ಕಾರಣವಾಗಬೇಕಾಯಿತು.

ವಿಮರ್ಶೆಯ ಹೆಸರಿನಲ್ಲಿ ನಡೆಯುವ ಹಲ್ಲೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬರಗೂರು ರಾಮಚಂದ್ರಪ್ಪನವರು ಬಂಡಾಯ ಸಾಹಿತ್ಯ ವಿಮರ್ಶೆಗೆ ಪ್ರತ್ಯೇಕವಾದ ಮಾನದಂಡಗಳ ಅಗತ್ಯವಿದೆ ಎಂದು ಹೇಳಿ ಬಂಡಾಯ ಸಾಹಿತ್ಯ ಮೀಮಾಂಸೆಯನ್ನು ಪ್ರಕಟಿಸಿದರು. ಆವರೆಗಿನ ವಿಮರ್ಶೆಯ ಪಕ್ಷಪಾತದ ಆರೋಪಕ್ಕೆ ಬದಲಾಗಿ ವಿಮರ್ಶೆಯ ಸ್ವರೂಪದ ವಿಮರ್ಶೆಗೆ ಹೆಚ್ಚು ಕಾಳಜಿ ವಹಿಸಿದರು. ವಿಮರ್ಶಕರಾಗಿ ಸಾಮಾಜಿಕ, ಸಾಂಸ್ಕೃತಿಕ ವಿಷಯಗಳಿಗೆ ಹೊಸ ತಿರುವು ನೀಡಿದರು. ಸಾಹಿತ್ಯದಲ್ಲಿ ರಾಜಕೀಯಪ್ರಜ್ಞೆಯ ಅಗತ್ಯವನ್ನು ಪ್ರತಿಪಾದಿಸಿದರು. ಸಾಹಿತ್ಯ ಮತ್ತು ರಾಜಕಾರಣದಲ್ಲಿ ಇಂಥ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

2001ರಲ್ಲಿ ಹೊರಬಂದ ಬರಗೂರರ ಆಯ್ದ ವಿಚಾರ ವಿಮರ್ಶಾ ಲೇಖನಗಳ ಸಂಕಲನ ‘ಸಂಸ್ಕೃತಿ: ಶ್ರಮ ಮತ್ತು ಸೃಜನಶೀಲತೆ’ಯಲ್ಲಿ ಸಂಸ್ಕೃತಿಜನ್ಯದ ಹಿಂದಿರುವ ಶ್ರಮ ಹಾಗೂ ಸೃಜನಶೀಲತೆಯಲ್ಲಿ ಕಾರ್ಯವೈಖರಿಯನ್ನು ವಸ್ತುನಿಷ್ಠವಾಗಿ ವಿಮರ್ಶಿಸಲಾಗಿದೆ. ಬಂಡಾಯ ಸಾಹಿತ್ಯವನ್ನು ವಿಮರ್ಶಿಸಬೇಕಾದ ಮಾನದಂಡಗಳ ಚರ್ಚೆ ನಡೆಯುತ್ತಿರುವಾಗಲೇ ಆಯಾ ವರ್ಗದವರಿಂದ ಬಂದಂಥ ಬರೆಹಗಾರರಲ್ಲಿ ಮಾತ್ರ ಅವರವರ ಬದುಕಿನ ವಿವರಗಳಿರುತ್ತವೆಂಬ ಅಬಿಪ್ರಾಯ ಮೂಡಿತು ಹಾಗೂ ಆ ಸಂದರ್ಭದಲ್ಲಿ ಮೂರು ಮುಖ್ಯ ವಿಮರ್ಶನ ಪರಿಕಲ್ಪನೆಗಳನ್ನು ಗುರುತಿಸಲು ಸಾಧ್ಯವಾಯಿತು. ಅವೆಂದರೆ ದಲಿತ ಸಂವೇದನೆ, ಮುಸ್ಲಿಂ ಸಂವೇದನೆ ಮತ್ತು ಸ್ತ್ರೀ ಸಂವೇದನೆ.

ಈ ಮೊದಲು ಪ್ರಸ್ತಾಪಿಸಿದಂತೆ ಪ್ರಗತಿಶೀಲ ಲೇಖಕರು ತಮ್ಮ ಕೃತಿಗಳಲ್ಲಿ ಸಾಮಾಜಿಕವಾದ ವೈರುಧ್ಯಗಳನ್ನು ಎತ್ತಿಹಿಡಿದರು, ನಿಜ. ಆ ಕಾಲದ ವಿಮರ್ಶೆಯು ಇದನ್ನು ಗುರುತಿಸುತ್ತಾ ಸಮಾಜದ ವೈರುಧ್ಯಗಳಿಗೆ ಮುಖ ಮಾಡಿತು. ಪ್ರಗತಿಶೀಲ ವಿಮರ್ಶೆ ಸಂಸ್ಕೃತಿಯನ್ನು ಸ್ಪರ್ಶಿಸದೆ ಇದ್ದುದರಿಂದ ಶುಷ್ಕತೆಗೆ ಕಾರಣವಾಯಿತು. ಆದರೆ ದಲಿತ ಬಂಡಾಯದ ಸಂದರ್ಭದಲ್ಲಿ ಆ ಕೊರತೆ ನಿವಾರಣೆಯಾಯಿತು. ಆಯಾ ಜನವರ್ಗಗಳ ಹಿನ್ನೆಲೆಯಲ್ಲಿ ಕೃತಿವಿಮರ್ಶೆ ಮಾಡುವ ಧಾಟಿ ವ್ಯಕ್ತವಾಯಿತು. ಈ ದೃಷ್ಟಿಯಿಂದ ದಲಿತ ಲೇಖಕನ ಆತ್ಮಕಥನ ಆತನ ವಿವರಗಳನ್ನೆಲ್ಲ ಒದಗಿಸುತ್ತದೆಂದಾದ ಮೇಲೆ ಅದು ಆತನ ಬಗ್ಗೆ ಚರಿತ್ರೆಯೂ ಆಗುತ್ತದೆ. ಇತರ ಸಂಗತಿಗಳ ಬಗ್ಗೆ ವಿಮರ್ಶೆಯೂ ಆಗತೊಡಗಿತು. ಅಲ್ಲದೆ ಜಾತಿ ವ್ಯವಸ್ಥೆ, ಮಡಿವಂತಿಕೆ, ಆಹಾರ ಪದ್ಧತಿ, ಅಸಮಾನತೆ ಇತ್ಯಾದಿಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡುವುದರಿಂದ ಅದೊಂದು ವಿಮರ್ಶೆಯೂ ಆಗಿಬಿಟ್ಟಿತು. ಅರವಿಂದ ಮಾಲಗತ್ತಿಯವರ ಗೌರ್ಮೆಂಟ್ ಬ್ರಾಹ್ಮಣ, ಸಿದ್ಧಲಿಂಗಯ್ಯನವರ ಊರು ಕೇರಿ, ಗೋವಿಂದರಾಜು ಅವರ ಮನವಿಲ್ಲದವರ ಮಧ್ಯೆ, ರಾಮಯ್ಯನವರ ಮಣೆಗಾರ - ಇವು ಈ ದೃಷ್ಟಿಯಿಂದ ಮುಖ್ಯವೆನಿಸಿದ್ದವು. ಈ ಮಧ್ಯೆ ಮಹಿಳಾ ಬರೆಹಗಳ ಕುರಿತ ಅಧ್ಯಯನ ವಿಶೇಷವಾಗಿ ಜರುಗಿತ್ತು. ಸ್ತ್ರೀವಾದಿ ವಿಮರ್ಶೆಯಲ್ಲಿ ವಿಜಯಾದಬ್ಬೆ, ನೇಮಿಚಂದ್ರ, ವಿಜಯಶ್ರೀ, ಪ್ರತಿಭಾ ನಂದಕುಮಾರ್, ಎನ್.ಗಾಯತ್ರಿ, ತೇಜಸ್ವಿನಿ ನಿರಂಜನ, ಸುಮಿತ್ರಾಬಾಯಿ, ಬಿ.ಎಂ.ರೋಹಿಣಿ ಮುಂತಾದವರು ವಿಶೇಷವಾಗಿ ಕೆಲಸ ಮಾಡಿದರು. ಸ್ತ್ರೀವಾದಿ ಸಾಹಿತ್ಯ ವಿಮರ್ಶೆ (1994) (ತೇಜಸ್ವಿನಿ ನಿರಂಜನ, ಸೀಮಂತಿನಿ ನಿರಂಜನ) 1995ರಲ್ಲಿ ಬಂದ ಸ್ತ್ರೀವಾದಿ ಪ್ರವೇಶಿಕೆ (ಬಿ.ಎನ್.ಸುಮಿತ್ರಾಬಾಯಿ, ಎನ್.ಗಾಯಿತ್ರಿ), 1993ರಲ್ಲಿ ಹೊರಬಂದ ‘ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆ’ (ಸಂ:ಬರಗೂರು ರಾಮಚಂದ್ರಪ್ಪ), 1992ರಲ್ಲಿ ಹೊರಬಂದ ಕೇಶವಶರ್ಮರ ‘ಕ್ರಿಯೆ- ಪ್ರತಿಕ್ರಿಯೆ’, ಡಿ.ಆರ್.ನಾಗರಾಜರ ‘ಸಾಹಿತ್ಯ ಕಥನ’, ರಹಮತ್ ತರೀಕೆರೆ ಅವರ ‘ಮರದೊಳಗಣ ಕಿಚ್ಚು’, ವಿಜಯಾದಬ್ಬೆ ಅವರ ‘ಮಹಿಳೆ ಸಾಹಿತ್ಯ ಸಮಾಜ’ (1989), ಗಾಯಿತ್ರಿ ನಾವಡ ಅವರ ‘ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು’ (1999), ಧರಣೀದೇವಿ ಅವರ ಭಾರತೀಯತೆ ಮತ್ತು ಸ್ತ್ರೀವಾದ ಮುಂತಾದ ಕೃತಿಗಳು ಸ್ತ್ರೀವಾದಿ ಚಿಂತನೆಯ ದೃಷ್ಟಿಯಿಂದ ಗಮನಾರ್ಹವೆನಿಸಿದವು. ಒಟ್ಟಾರೆ 70ರ ದಶಕದಿಂದೀಚಿನ ಕನ್ನಡ ವಿಮರ್ಶೆಯನ್ನು ಗಮನಿಸಿದರೆ ಹಿಂದಿಗಿಂತಲೂ ಸಾಕಷ್ಟು ಬೆಳೆವಣಿಗೆಯನ್ನು ಹೊಂದಿದೆ ಎಂದೇ ಹೇಳಬಹುದು. ಕೃತಿಕೇಂದ್ರಿತ ವಿಮರ್ಶೆ, ಸಮಾಜ ಕೇಂದ್ರಿತ ವಿಮರ್ಶೆ, ಕರ್ತೃ ಕೇಂದ್ರಿತ ವಿಮರ್ಶೆ, ವಾಚಕ ಕೇಂದ್ರಿತ ವಿಮರ್ಶೆ ಇತ್ಯಾದಿ ಪಾಶ್ಚಾತ್ಯ ಮಾರ್ಗಗಳ ಪ್ರಭಾವಗಳಿಗೆ ಆಂತರ್ಯದಲ್ಲಿ ಸಂಘರ್ಷವನ್ನು ಒಡ್ಡುತ್ತಲೇ ಇತ್ತೀಚಿನ ವಿಮರ್ಶೆ ಬೆಳೆಯ ತೊಡಗಿತು. ನವ್ಯ ಮತ್ತು ಬಂಡಾಯದ ವಿಬಿನ್ನ ನೆಲೆಗಳಲ್ಲಿ ಇತಿಮಿತಿಗಳನ್ನು ಅಬಿವ್ಯಕ್ತಿಸುತ್ತಲೇ ಆರೋಗ್ಯಕರ ನಿಲುವುಗಳನ್ನು ವಿಮರ್ಶನ ವಲಯದಲ್ಲಿ ಸಾದರಪಡಿಸುವ ಪ್ರಯತ್ನಗಳೂ ಜರುಗಿದವು. ಶಾಂತಿನಾಥ ದೇಸಾಯಿ, ಕೆ.ವಿ.ನಾರಾಯಣ, ರಾಜೇಂದ್ರ ಚೆನ್ನಿ, ಜಿ.ರಾಜಶೇಖರ, ಜಿ.ಎಚ್.ನಾಯಕ, ಸಿ.ಎನ್.ರಾಮಚಂದ್ರನ್ ಮುಂತಾದವರು ವಿಮರ್ಶೆಯಲ್ಲಿ ಅಗತ್ಯ ನೆಲೆಗಳನ್ನು ಒದಗಿಸಿದರು. ಅನ್ಯ ಶಿಸ್ತುಗಳ ಅಧ್ಯಯನದಿಂದಲೂ ಕನ್ನಡ ವಿಮರ್ಶೆ ಅನುಕೂಲ ಪಡೆಯಿತು. ಕನ್ನಡ ವಿಮರ್ಶೆಯಲ್ಲಿ ಗಮನಾರ್ಹ ಕೆಲಸ ಮಾಡಿದವರು ಡಿ.ಆರ್.ನಾಗರಾಜ್. ಚರಿತ್ರೆ, ಸಮಾಜ, ಕೃತಿ, ಕೃತಿಕಾರ ಮುಂತಾದ ಪರಿಕಲ್ಪನೆಗಳ ಮೂಲಕ ಸೈದ್ಧಾಂತಿಕ ಚರ್ಚೆಗೆ ತೊಡಗಿದ ಇವರು ಸಂಸ್ಕೃತಿ ಮತ್ತು ಸಾಹಿತ್ಯದ ಚಲನಶೀಲತೆಗೆ ಕಾರಣರಾದರು. ಅಮೃತ ಮತ್ತು ಗರುಡ (1983), ಶಕ್ತಿ ಶಾರದೆಯ ಮೇಳ (1987), ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ (1990) ಇವುಗಳಲ್ಲಿ ಇವರ ವಿಮರ್ಶಾ ಪ್ರತಿಭೆ ಮೆರೆದಿದೆ.

ಸಿ.ಎನ್.ರಾಮಚಂದ್ರನ್ ಅವರು ಪಾಶ್ಚಾತ್ಯ ವಿಮರ್ಶೆಯ ಸಂದರ್ಭದಲ್ಲಿ ಸಾಹಿತ್ಯಾಧ್ಯಯನದ ಬೇರೆ ಬೇರೆ ವಿಧಾನ ಪರಿಕಲ್ಪನೆಗಳನ್ನು ಕನ್ನಡ ವಿಮರ್ಶೆಗೆ ಒದಗಿಸಿದರು. ‘ಸೀತಾಯಣ’ ವಿಮರ್ಶಾ ಕೃತಿಯ ಮೂಲಕ ಪೋಲಂಕಿ ರಾಮಮೂರ್ತಿಯವರು ಚಿಂತನೆಯಲ್ಲಿ ಹೊಸ ವಿವಾದ, ಎಚ್ಚರಗಳನ್ನು ಹುಟ್ಟು ಹಾಕಿದರು. ಅದರ ಮುಖಾಂತರ ದಲಿತ ಬಂಡಾಯದ ಪರ ನಿಲುವುಗಳನ್ನು ತಾಳಿದರು. ಸಾಹಿತ್ಯ ಸಂಪರ್ಕ (1986) ಮತ್ತು ಸಾಹಿತ್ಯ ಸಂದರ್ಭ (1991) ಗಳಲ್ಲಿ ಟಿ.ಪಿ.ಅಶೋಕ ಅವರು ಸಾಮಾಜಿಕ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಕೃತಿಯ ಸಾಧ್ಯಾಸಾಧ್ಯತೆಗಳನ್ನು ವಿಮರ್ಶಿಸಿದರು. ಹಾಗೆಯೇ ಎಚ್.ಎಸ್.ರಾಘವೇಂದ್ರರಾವ್ ಅವರ ನಿಲುವು (1989), ಹಾಡೆ ಹಾದಿಯ ತೋರಿತು (1998), ಅರವಿಂದ ಮಾಲಗತ್ತಿ ಯವರ ‘ದಲಿತ ಯುಗ ಮತ್ತು ಕನ್ನಡ ಸಾಹಿತ್ಯ’ (1999) ರಹಮತ್ ತರೀಕೆರೆ ಅವರ ಪ್ರತಿಸಂಸ್ಕೃತಿ, ಜಿ.ಎಸ್.ಆಮೂರರ ಸಮಕಾಲೀನ ಕತೆ ಕಾದಂಬರಿ- ಹೊಸ ಪ್ರಯೋಗಗಳು (1981), ಅರ್ಥಲೋಕ (1988), ಸಿ.ಪಿ.ಸಿದ್ಧಾಶ್ರಮ ಅವರ ಹೊಸ ಅಲೆ (1978), ನಿಕಷ (1987), ಕೆ.ವಿ.ನಾರಾಯಣರ ಬೇರು, ಕಾಂಡ, ಚಿಗುರು (1996), ಮಲ್ಲೇಪುರಂ ಜಿ.ವೆಂಕಟೇಶ್ ಅವರ ತಿಳಿವ ತೇಜದ ಮುಂದೆ (1996), ಬಿ.ದಾಮೋದರರಾವ್ ಅವರ ಆಯಾಮಗಳು (1992), ಓ.ಎಲ್.ನಾಗಭೂಷಣಸ್ವಾಮಿ ಅವರ ಇಂದಿನ ಹೆಜ್ಜೆ (1998), ಜಿ.ರಾಮಕೃಷ್ಣ ಅವರ ಆಯತನ (1984), ಸಿ.ಎನ್.ರಾಮಚಂದ್ರನ್ ಅವರ ವಸಾಹತೋತ್ತರ ಚಿಂತನೆ (1999), ತೌಲನಿಕ ಸಾಹಿತ್ಯ (1998), ಪುರುಷೋತ್ತಮ ಬಿಳಿಮಲೆಯವರ ಶಿಷ್ಟ ಪರಿಶಿಷ್ಟ, ಗಿರಡ್ಡಿ ಗೋವಿಂದರಾಜರ ವಚನ ವಿನ್ಯಾಸ (1997), ಜಿ.ಎಸ್.ಆಮೂರರ ಭುವನದ ಭಾಗ್ಯ (1991), ಜಿ.ಎಚ್.ನಾಯಕರ ನಿರಪೇಕ್ಷ (1984), ನಿಜದನಿ (1988), ಲಕ್ಷ್ಮೀಪತಿ ಕೋಲಾರ ಅವರ ಕಾಲುದಾರಿ (2001), ಚಂದ್ರಶೇಖರ ನಂಗಲಿ ಅವರ ನಾನಿಮ್ಮೊಳಗು (2001), ನಾ ನಿಲ್ಲುವಳಲ್ಲ, ಜಿ.ಆರ್.ತಿಪ್ಪೇಸ್ವಾಮಿ ಅವರ ಅಬಿಮುಖ (2000), ಕನ್ನಡ ದಲಿತ ಸಾಹಿತ್ಯದ ನೆಲೆ (2001), ಅರ್ಥ ಸುಗಂಧ (2003), ರಂಗಾರೆಡ್ಡಿ ಕೋಡಿರಾಂಪುರ ಅವರ ‘ಬಂಡಾಯ ಜಾನಪದ’, ಶಿವರಾಮಯ್ಯನವರ ಸಾಹಿತ್ಯ ಪರಿಸರ (1993), ‘ಉರಿಯ ಉಯ್ಯಲೆ’ (2002), ಆರ್.ಲಕ್ಷ್ಮೀನಾರಾಯಣರ ಆಹ್ಲಾದ (2002) ಮೊದಲಾದ ಕೃತಿಗಳು ಕನ್ನಡ ಸಾಹಿತ್ಯ ವಿಮರ್ಶೆ ತುಂಬ ಶಕ್ತಿಶಾಲಿಯಾಗಿ, ಬಹುಮುಖಿಯಾಗಿ ಮೂಡಿಬಂದಿದೆ ಎಂಬುದನ್ನು ಸಾಬೀತುಪಡಿಸುತ್ತವೆ.

ದಲಿತ ಬಂಡಾಯ ಸಾಹಿತ್ಯ ಚಳವಳಿಯ ಸೃಜನಶೀಲ ಕೃತಿಗಳಲ್ಲಿ ಸಾಮಾಜಿಕ ದೃಷ್ಟಿಕೋನ ಅಬಿವ್ಯಕ್ತವಾದರೆ, ಅದರ ವಿಮರ್ಶೆಯಲ್ಲಿ ಪ್ರತಿಸಂಸ್ಕೃತಿ ದೃಷ್ಟಿಕೋನ ಪ್ರಮುಖವಾಗಿ ಕೆಲಸ ಮಾಡಿತು. ಪ್ರಸ್ತುತ ಸಾಹಿತ್ಯವನ್ನು ಬಹುಶಿಸ್ತೀಯ ಅಧ್ಯಯನಕ್ಕೆ ಒಳಗುಮಾಡುವ ಕೆಲಸವೂ ನಡೆಯಿತು. ಸಾಹಿತ್ಯದ ಪುನರ್ ಮೌಲ್ಯೀಕರಣ ಪ್ರಕ್ರಿಯೆಗಳೂ ಜರುಗಿದಂತೆ ವಿಮರ್ಶೆ ಹೊಸ ಓದಿನತ್ತ ಮುಂದುವರಿದಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊರತಂದ ಪುನರ್ ಮೌಲ್ಯೀಕರಣ ಯೋಜನೆಯ ಹನ್ನೆರಡು ಪುಸ್ತಕಗಳು ನಿರ್ದಿಷ್ಟ ಪರಿಕಲ್ಪನೆಗಳ ನೆಲೆಯಿಂದ ನಡೆಸುವ ಅನ್ವೇಷಣೆಗೆ ಮಾದರಿಗಳಾಗಿವೆ. ಈ ರೀತಿಯ ಪುನರ್ ಮೌಲ್ಯೀಕರಣ ಶೋಧ ನಿರಂತರವಾಗಿ ಸಾಗತೊಡಗಿದೆ. ತಮ್ಮ ತಮ್ಮ ತಾತ್ವಿಕ ನಿಲುವುಗಳನ್ನು ಬಿಟ್ಟುಕೊಡದೆ ಸಾಹಿತ್ಯ ಪಂಥಗಳ ನಡುವೆ ವಾದ ವಿವಾದಗಳು ಜರುಗುತ್ತಲೇ ಇವೆ. ಆದರೆ ತಮ್ಮ ಪಂಥದ ಹೊರಗಿನ ಸಾಹಿತ್ಯದ ಬಗೆಗೂ ಚಿಂತನ ಮಂಥನ ಮಾಡುವ ಆರೋಗ್ಯಕರ ಬೆಳೆವಣಿಗೆಗಳೂ ಕಾಣಿಸಿಕೊಂಡವು. ನವೋದಯ, ನವ್ಯ ಬರೆಹಗಾರರನೇಕರ ಬಗೆಗೆ ಇತ್ತೀಚೆಗೆ ಅನೇಕ ವಿಮರ್ಶನ ಬರೆಹಗಳು ಪ್ರಕಟವಾಗಿವೆ. ಮಾಸ್ತಿ, ಬೇಂದ್ರೆ, ಕುವೆಂಪು, ನರಸಿಂಹಸ್ವಾಮಿ, ತರಾಸು, ನಿರಂಜನ, ಚದುರಂಗ, ಅಡಿಗ, ಅನಂತಮೂರ್ತಿ, ತೇಜಸ್ವಿ, ಶ್ರೀರಂಗ, ಸಿದ್ಧಲಿಂಗಯ್ಯ, ಕಾರ್ನಾಡ್, ಶಿವಪ್ರಕಾಶ್, ಗದ್ದರ್, ದೇವನೂರು, ಮಹಾದೇವ ಮುಂತಾದವರ ಸಾಹಿತ್ಯದ ಬಗೆಗೆ ವಿಮರ್ಶೆ ಹೆಚ್ಚಾಗಿ ನಡೆದಿದೆ. ಪ್ರಾಚೀನ ವಚನಕಾರರ ಬಗೆಗಿನ ಶೋಧವೂ ಗಮನಾರ್ಹವಾದುದು. ಕೆ.ಜಿ.ನಾಗರಾಜಪ್ಪನವರ ‘ಮರುಚಿಂತನ’ ದಲ್ಲಿ ತೊಡಗಿ ವೀರಶೈವಧರ್ಮ ಹಾಗೂ ಕನ್ನಡಸಾಹಿತ್ಯದ ಬಗೆಗೆ ಇದ್ದ ಪರಂಪರಾಗತವಾದ ಆಲೋಚನೆಗಳನ್ನು ನಿಕಷಕ್ಕೆ ಒಡ್ಡಿದರು. ಸಾಂಪ್ರದಾಯಿಕ ಆಲೋಚನೆಗಳನ್ನು ಬದಲಾಯಿಸಿದರು. ಬಸವರಾಜ ಕಲ್ಗುಡಿಯವರು ವಚನಕಾರರ ವಿಬಿನ್ನ ಆಶಯಗಳ ಹಿನ್ನೆಲೆಯಲ್ಲಿ ಮಧ್ಯಕಾಲೀನ ಸಾಹಿತ್ಯವನ್ನು ಶೋದಿಸುವ ಗಮನಾರ್ಹ ಕೆಲಸ ಮಾಡಿದರು. ಅದರ ಫಲವಾಗಿ ಮಧ್ಯಕಾಲೀನ ಭಕ್ತಿ ಮತ್ತು ಅನುಭಾವ ಸಾಹಿತ್ಯ ಹಾಗೂ ಚಾರಿತ್ರಿಕ ಪ್ರಜ್ಞೆ (1985) ಎಂಬ ಮೌಲಿಕ ಗ್ರಂಥಗಳನ್ನು ಹೊರತಂದರು. ಈ ನಡುವೆ ಅಮೃತ ಮತ್ತು ಗರುಡ (ಡಿ.ಆರ್.ನಾಗರಾಜು), ಕಾಗೋಡು ಸತ್ಯಾಗ್ರಹ, ಬ್ರೆಕ್ಟ್‌ (ಜಿ.ರಾಜಶೇಖರ), ಮುನ್ನೋಟ (ಜಿ.ರಾಮಕೃಷ್ಣ), ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳೆವಣಿಗೆ, 12ನೆಯ ಶತಮಾನದ ಕಾಯಕ ಜೀವಿಗಳ ಚಳವಳಿ (ಸಿ.ವೀರಣ್ಣ), ಸಂಸ್ಕೃತಿ, ಉಪಸಂಸ್ಕೃತಿ (ಬರಗೂರು ರಾಮಚಂದ್ರಪ್ಪ), ಮಾಕ್ರ್ಸ್‌ವಾದದ ವಿಮರ್ಶೆ (ಚಂದ್ರಶೇಖರ ನಂಗಲಿ), ಅನ್ವೇಷಣೆ (ಆರ್ಕೆ ಮಣಿಪಾಲ) ಮುಂತಾದ ಮಾಕ್ರ್ಸ್‌ವಾದಿ ಧೋರಣೆಯ ವಿಮರ್ಶಾ ಸಂಕಲನಗಳೂ ಹೊರಬಂದವು.

ಆಧುನಿಕ ಕನ್ನಡಸಾಹಿತ್ಯದ ಎಲ್ಲ ಮಾದರಿಗಳೂ ಸೃಜನಶೀಲತೆಯಲ್ಲಿ ಗೋಚರವಾದಂತೆ ಆಯಾ ಕಾಲಘಟ್ಟದಲ್ಲಿ ಬಳಕೆಗೆ ಬಂದ ವಿಮರ್ಶನ ಪದ್ಧತಿಗಳೂ ಹೆಚ್ಚು ಕಡಿಮೆ ಬಳಕೆಯಲ್ಲಿವೆ. ತಾತ್ತ್ವಿಕ ವಿಮರ್ಶೆ, ರಸವಿಮರ್ಶೆ, ಆನ್ವಯಿಕ ವಿಮರ್ಶೆ, ವಿವರಣಾತ್ಮಕ ವಿಮರ್ಶೆ, ವಸ್ತುನಿಷ್ಠ ವಿಮರ್ಶೆ, ಚಾರಿತ್ರಿಕ ವಿಧಾನ ವಿಮರ್ಶೆ, ಸಾಮಾಜಿಕ ವಿಮರ್ಶೆ, ಮಾಕ್ರ್ಸ್‌ವಾದಿ ವಿಮರ್ಶೆ, ಸ್ತ್ರೀವಾದಿ ವಿಮರ್ಶೆ, ಪ್ರಾಯೋಗಿಕ ವಿಮರ್ಶೆ, ಮನಶ್ಶಾಸ್ತ್ರೀಯ ವಿಮರ್ಶೆ ಮುಂತಾದವುಗಳೆಲ್ಲವ ಕನ್ನಡ ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ಹೆಚ್ಚು ಕಡಿಮೆ ಬಳಕೆಯಾಗುತ್ತಲೇ ಇವೆ. ಕಾವ್ಯ ಮೀಮಾಂಸೆಯ ಮೂಲತತ್ತ್ವಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಪತ್ರಿಕಾ ವಿಮರ್ಶೆ, ಪ್ರೌಢ ಪ್ರಬಂಧದ ವಿಮರ್ಶೆಗಳೂ ಇಂದಿನ ಕನ್ನಡ ವಿಮರ್ಶೆಯಲ್ಲಿ ಅಡಕಗೊಳ್ಳುತ್ತಿವೆ.

ಹಿರಿಯ ಬರೆಹಗಾರರಿಗೆ ವಿಶೇಷ ಸಂದರ್ಭಗಳಲ್ಲಿ ಅಬಿನಂದನ ಗ್ರಂಥಗಳನ್ನು, ಸ್ಮರಣ ಗ್ರಂಥಗಳನ್ನು ಸಮರ್ಪಿಸುವ ಪದ್ಧತಿ ರೂಡಿsಯಲ್ಲಿದೆ. ಸಂಬಂದಿಸಿದವರ ಬದುಕು ಬರೆಹಗಳನ್ನು ಕುರಿತ ಬರೆಹಗಳು ಅದರಲ್ಲಿ ಅಡಕವಾಗಿರುತ್ತವೆ. ಬದುಕಿನ ವಿವರಗಳನ್ನು ಕುರಿತ ಬರೆಹಗಳಲ್ಲಿ ಪ್ರಶಂಸೆಯ, ಆರಾಧನೆಯ ಮನೋಧರ್ಮಗಳೇ ಅದಿsಕವಾಗಿರುತ್ತದೆ. ಲೇಖಕನ ಸಾಹಿತ್ಯ ಕೃತಿಗಳನ್ನು ಕುರಿತಂತೆ ಮೂಡಿ ಬಂದ ಬರೆಹಗಳಲ್ಲಿ ವಿಮರ್ಶೆಯ ಲಕ್ಷಣಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಬಿ.ಎಂ.ಶ್ರೀಕಂಠಯ್ಯನವರಿಗೆ ಸಮರ್ಪಿಸಿದ ಸಂಭಾವನೆ (1941) ಈ ಪಂಕ್ತಿಯಲ್ಲಿ ಮೊದಲನೆಯದು. ಎ.ಆರ್.ಕೃಷ್ಣಶಾಸ್ತ್ರೀ, ಪಂಜೆ ಮಂಗೇಶರಾಯ, ಡಿ.ಎಲ್.ನರಸಿಂಹಾಚಾರ್, ತ.ಸು.ಶಾಮರಾಯ, ಸ.ಸ.ಮಾಳವಾಡ, ಮಂಜಯ್ಯ ಹೆಗ್ಗಡೆ, ಕುವೆಂಪು, ಮಾಸ್ತಿ, ಬೇಂದ್ರೆ, ವಿ.ಸೀ., ಕೆ.ಎಸ್.ನರಸಿಂಹಸ್ವಾಮಿ, ಸಿದ್ಧವ್ಪನಹಳ್ಳಿ ಕೃಷ್ಣಶರ್ಮ, ವಿ.ಕೃ.ಗೋಕಾಕ್, ಶಿವರಾಮಕಾರಂತ, ಎಸ್.ವಿ.ರಂಗಣ್ಣ, ಬೆಟಗೇರಿ ಕೃಷ್ಣಶರ್ಮ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ದಿನಕರ ದೇಸಾಯಿ, ತಿರುಮಲೆ ರಾಜಮ್ಮ, ಶಂ.ಬಾ.ಜೋಶಿ, ಎಂ.ಚಿದಾನಂದ ಮೂರ್ತಿ, ಹಂಪನಾ, ಜಿ.ಎಸ್.ಶಿವರುದ್ರಪ್ಪ, ದೇ.ಜ.ಗೌ., ಎಚ್.ತಿಪ್ಪೇರುದ್ರಸ್ವಾಮಿ, ಸಿದ್ಧಲಿಂಗಯ್ಯ, ಕೆ.ಆರ್.ಲಿಂಗಪ್ಪ, ಎಂ.ಎಸ್.ಸುಂಕಾಪುರ, ಸೋಮಶೇಖರ ಇಮ್ರಾಪುರ, ಬಸವರಾಜ ಕಟ್ಟೀಮನಿ, ನಿರಂಜನ, ಹಾ.ಮಾ.ನಾಯಕ, ಎಸ್.ಎಲ್ ಭೈರಪ್ಪ, ಕಮಲಾ ಹಂಪನಾ ಮುಂತಾದವರಿಗೆ ಅಬಿನಂದನ ಗ್ರಂಥಗಳು ಸಮರ್ಪಿತವಾಗಿವೆ. ಪಂಜೆ ಮಂಗೇಶರಾಯ, ಎ.ಕೆ.ರಾಮಾನುಜನ್, ಶಾಂತಿನಾಥ ದೇಸಾಯಿ, ಮೂರ್ತಿರಾವ್ ಮೊದಲಾದವರಿಗೆ ಸ್ಮರಣ ಸಂಪುಟಗಳು ಹೊರಬಂದಿವೆ.

ವಿಮರ್ಶೆಯನ್ನು ಪ್ರಕಟಿಸುವಲ್ಲಿ ಸಂವಾದಗಳನ್ನು ಏರ್ಪಡಿಸುವಲ್ಲಿ ಕನ್ನಡ ಪತ್ರಿಕೆಗಳು ಸಕ್ರಿಯವಾಗಿ ಪಾತ್ರವಹಿಸುತ್ತಿವೆ. ಜೊತೆಗೆ ವಿಮರ್ಶೆಯನ್ನು ಬೆಳೆಸುವ ವಾತಾವರಣವೂ ವಿಸ್ತೃತವಾಗುತ್ತಿದೆ. ವಿವಿಧ ಅಕಾಡೆಮಿಗಳು, ವಿಶ್ವವಿದ್ಯಾಲಯಗಳು, ಕನ್ನಡ ಸಾಹಿತ್ಯ ಪರಿಷತ್ತು, ಮೊದಲಾದ ಸಂಸ್ಥೆಗಳು ಸಂವಾದಗಳಿಗೆ, ಸಂಶೋಧನೆಗೆ ಅವಕಾಶ ಮಾಡಿಕೊಡುತ್ತಿವೆ. ಮಂಡಿಸಲ್ಪಟ್ಟ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಜವಾಬ್ದಾರಿಯನ್ನೂ ಹೊತ್ತಿವೆ. ಸಾಹಿತ್ಯ ಅಕಾಡೆಮಿ ಶತಮಾನದ ಸಾಹಿತ್ಯ ವಿಮರ್ಶೆ ಪ್ರಕಟಿಸಿದೆ. ಈ ನಿಟ್ಟಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿರುವ ಸುವರ್ಣ ಸಂಚಯ, ಚಿನ್ನದ ಗರಿ, ಕನ್ನಡ ಸಾಹಿತ್ಯ ಚರಿತ್ರೆ ಸಂಪುಟಗಳು, ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿರುವ ಶ್ರೀ ಸಾಮಾನ್ಯನಿಗೆ ಕನ್ನಡ ಸಾಹಿತ್ಯ ಚರಿತ್ರೆ, ಸಾಹಿತ್ಯ ಮತ್ತು ಸಾಮಾಜಿಕ ಮೌಲ್ಯ ಮೊದಲಾದ ಕೃತಿಗಳು ಗಮನಾರ್ಹವಾಗಿವೆ. ಹೊಸಗನ್ನಡ ಕಾವ್ಯದ ಎರಡು ಮಾರ್ಗಗಳು, ಕನ್ನಡ ನಾಟಕ ಪರಂಪರೆ ಮತ್ತು ಪ್ರಯೋಗ, ಕನ್ನಡ ವಿಮರ್ಶೆಯ ನೆಲೆ ಬೆಲೆ, ಕವಿ ಬೇಂದ್ರೆ, ಪ್ರಾಯೋಗಿಕ ವಿಮರ್ಶೆ ಮೊದಲಾದ ಕೃತಿಗಳು ಗಮನಾರ್ಹವಾಗಿವೆ.

ಕರ್ನಾಟಕ ವಿಶ್ವವಿದ್ಯಾಲಯ ಪ್ರಕಟಿಸಿರುವ ದಾಸ ಸಾಹಿತ್ಯ, ಕನ್ನಡ ರಂಗಭೂಮಿ ಅಂದು - ಇಂದು, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಆಯಾ ವರ್ಷದ ಸಾಹಿತ್ಯ ವಿಮರ್ಶೆ ಸಂಕಲನಗಳು, ಪುನರ್ ಮೌಲ್ಯೀಕರಣ ಯೋಜನೆಯ ಸಂಪುಟಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಚಿನ್ನದ ಬೆಳಸು, ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾದಿಕಾರದ ಪ್ರಕಟಣೆಗಳಲ್ಲಿ ಸಾಹಿತ್ಯ ವಿಮರ್ಶೆಗೆ ಸಂಬಂದಿಸಿದ ಅಮೂಲ್ಯ ಗ್ರಂಥಗಳಿವೆ.

ಸಾಮಾಜಿಕ ಬದಲಾವಣೆಯ ಸಂದರ್ಭದಲ್ಲಿ ನಿಜವಾದ ಬರೆಹಗಾರ ಎದುರಿಸುವ ಸಮಸ್ಯೆ ಸವಾಲುಗಳು ಹಲವಾರು. ಅಬಿವ್ಯಕ್ತಿ ವಿಧಾನದಲ್ಲೂ ಬದಲಾವಣೆ ಅನಿವಾರ್ಯ. ಸಾಹಿತ್ಯವನ್ನು ಬೇರೆ ಬೇರೆ ಶಾಸ್ತ್ರ ವಿಜ್ಞಾನ ವಿಚಾರಗಳ ಹಿನ್ನೆಲೆಯಲ್ಲಿ ನೋಡುವ ಪರಿಪಾಠವೂ ಬೆಳೆಯುತ್ತಿದೆ. 19ನೆಯ ಶತಮಾನದ ಕಡೆಯ ವೇಳೆಗೆ ಕನ್ನಡ ಸಾಹಿತ್ಯ ವಿಮರ್ಶೆ ಆರಂಭವಾಗಿ, 20ನೆಯ ಶತಮಾನದಲ್ಲಿ ಅನೇಕ ಪ್ರಭಾವಗಳಿಗೆ ಒಳಗಾಗುತ್ತಲೇ ಬಂದು, ಅದು 21ನೆಯ ಶತಮಾನದಲ್ಲೂ ಮುಂದುವರಿದಿದೆ. ವಿಮರ್ಶೆಯಲ್ಲಿ ಇನ್ನೂ ಹೊಸ ಮಟ್ಟದ ವೈಚಾರಿಕತೆಗೆ ಒತ್ತು ಬೀಳಬೇಕಾಗಿದೆ. (ಜಿ.ಆರ್.ಟಿ.)