ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ಶತಕ ಸಾಹಿತ್ಯ

ವಿಕಿಸೋರ್ಸ್ದಿಂದ

ಕನ್ನಡದಲ್ಲಿ ಶತಕಸಾಹಿತ್ಯ : ಕನ್ನಡದ ಚಂಪು, ಷಟ್ಪದಿ, ವಚನ, ತ್ರಿಪದಿ, ಸಾಂಗತ್ಯ ಮೊದಲಾದ ಸಾಹಿತ್ಯ ಪ್ರಕಾರಗಳಂತೆ ಶತಕ ಸಾಹಿತ್ಯವೂ ಒಂದು. ನೂರು ಪದ್ಯಗಳಿಂದ ಕೂಡಿದ ಗ್ರಂಥವನ್ನು ಶತಕ ಎಂಬ ಹೆಸರಿನಿಂದ ಕರೆಯುತ್ತಾರೆ. ಕಂದ, ವೃತ್ತ, ಷಟ್ಪದಿ, ಸಾಂಗತ್ಯ ಮೊದಲಾದ ಛಂ"ದಸ್ಸಿನಲ್ಲಿ ರಚಿತವಾಗಿರುತ್ತವೆ. ಇದು ಆತ್ಮನಿಷ್ಠವಾದ, ಭಾವನಿಷ್ಠವಾದ ಒಂದು ಕಾವ್ಯ ಪ್ರಕಾರ. ಮಹಾಕಾವ್ಯ, ಖಂಡಕಾವ್ಯಗಳಂತೆ ವಸ್ತುನಿಷ್ಠವಲ್ಲ, ಕಥಾವಸ್ತುವನ್ನೊಳಗೊಂಡಿರುವುದಿಲ್ಲ. ಕವಿಯ ಮನೋಲಹರಿ ಹರಿದಂತೆ ಹಲವಾರು ಸಂದರ್ಭಗಳಲ್ಲಿ ರಚಿತವಾದ ಪದ್ಯಗಳು ಒಂದು ವಿಷಯದ ಏಕಸೂತ್ರಕ್ಕೆ ಒಳಗಾಗಿರುತ್ತವೆ. ಆದುದರಿಂದ ಶತಕಗಳನ್ನು ಪ್ರಾಚೀನ ಕಾಲದ ಭಾವಗೀತೆಗಳು ಎನ್ನಬಹುದು. ಭಕ್ತಿ, ಜ್ಞಾನ, ವೈರಾಗ್ಯ, ನೀತಿಗಳನ್ನು ಪ್ರತಿಪಾದಿಸುವುದು ಶತಕಗಳ ಸಾಮಾನ್ಯ ಲಕ್ಷಣ ಎನ್ನಬಹುದು. ನೂರು ಪದ್ಯಗಳಿಂದ ಕೂಡಿದ ಗ್ರಂಥವನ್ನು ಶತಕವೆಂದು ಕರೆವ ವಾಡಿಕೆ ಇದ್ದರೂ ಕನ್ನಡದಲ್ಲಿ 100 ರಿಂದ 128 ಪದ್ಯಗಳಿರುವ ಶತಕಗಳೂ ಕಂಡುಬರುತ್ತವೆ.

ಕನ್ನಡದ ಶತಕ ಸಾಹಿತ್ಯಪ್ರಕಾರ ಸಂಸ್ಕೃತ ಸಾಹಿತ್ಯದ ಪ್ರೇರಣೆಯಿಂದ ಬಂದದ್ದು. ಸಂಸ್ಕೃತದಲ್ಲಿ ನ್ಯಾಯಶತಕ, ಭರ್ತೃಹರಿಯ ಶತಕತ್ರಯ, ಮಯೂರನ ಸೂರ್ಯಶತಕ ಮೊದಲಾದವು ಪ್ರಸಿದ್ಧವಾಗಿವೆ. ಕನ್ನಡದಲ್ಲಿ ನಾನೂರಕ್ಕೂ ಹೆಚ್ಚು ಶತಕಗಳಿವೆಯೆಂದು ವಿದ್ವಾಂಸರು ಹೇಳುತ್ತಾರೆ. ಇವುಗಳಲ್ಲಿ ಕೆಲವು ಶತಕಗಳ ಕರ್ತೃಗಳು ಯಾರೆಂದು ತಿಳಿಯುವುದಿಲ್ಲ.

ನಾಗವರ್ಮಾಚಾರ್ಯನ (ಸು.1071) "ಚಂದ್ರಚೂಡಾಮಣಿ ಶತಕ" ಕನ್ನಡದ ಮೊಟ್ಟಮೊದಲನೆಯ ಶತಕ ಗ್ರಂಥ. ಇದಕ್ಕೆ ಜ್ಞಾನಸಾರ ಎಂಬ ಹೆಸರೂ ಇದೆ. ಕೃತಿಯ ವಸ್ತು ವೈರಾಗ್ಯ ಪ್ರತಿಪಾದನೆ. ಬಂಧ ಲಲಿತವಾಗಿಯೂ ಗಂಬೀರವಾಗಿಯೂ ಇದೆಯೆಂದು ವಿದ್ವಾಂಸರು ಅಬಿಪ್ರಾಯಪಟ್ಟಿದ್ದಾರೆ. ಅನಂತರ ಕೊಂಡುಗುಳಿ ಕೇಶಿರಾಜನ (ಸು.1160) ಷಡಕ್ಷರಕಂದ ಕಂಡುಬರುತ್ತದೆ. ಇದೇ ಕಾಲದಲ್ಲಿ ಕವಿಕಾಮ (ಸು.1200) ಸ್ತನಶತಕವೆಂಬ ಗ್ರಂಥವನ್ನು ರಚಿಸಿರುವುದಾಗಿ ಪಾರ್ಶ್ವನಾಥ ಪುರಾಣದಿಂದ ತಿಳಿದುಬರುತ್ತದೆ. ಆದರೆ ಗ್ರಂಥ ಉಪಲಬ್ಧವಿಲ್ಲ. ಇದು ಬಹುಶಃ ಸಂಸ್ಕೃತದ ‘ವಕ್ಷೋಜಶತಕ’ದ ಹಾಗೆ ವರ್ಣನಾತ್ಮಕ ವಾಗಿರಬೇಕು.

ಕನ್ನಡದ ಶತಕ ಸಾಹಿತ್ಯದಲ್ಲಿ ಹರಿಹರನ ಪಾತ್ರ ಪ್ರಮುಖವಾದದ್ದು. ಇವನ ಪಂಪಾಶತಕ, ರಕ್ಷಾಶತಕಗಳು ಉನ್ನತ ಕಾವ್ಯಗುಣಗಳಿಂದ, ಭಾವಗೀತೆಯ ಲಕ್ಷಣಗಳಿಂದ ಕೂಡಿದ್ದು ಸಹೃದಯರ ಮನಸೆಳೆದಿವೆ. ಪಂಪಾಶತಕದಲ್ಲಿ ಈ ಕವಿಯ ಹೃದಯ ತುಡಿದಿರುವಷ್ಟು, ವಿರೂಪಾಕ್ಷನನ್ನು ಸ್ತುತಿಸಿರುವಷ್ಟು, ಆತ್ಮವನ್ನು ಅರ್ಪಿಸಿ ಹಿಗ್ಗಿರುವಷ್ಟು ಮತ್ತಾವ ಕವಿಯ ಹೃದಯವೂ ತುಡಿದಿಲ್ಲ, ಸ್ತುತಿಸಿಲ್ಲ, ಹಿಗ್ಗಿಲ್ಲ. ರಕ್ಷಾಶತಕದಲ್ಲಿ ಕವಿ ತನ್ನ ತಪ್ಪುಒಪ್ಪುಗಳನ್ನೆಲ್ಲ ತೋಡಿಕೊಂಡು ನಿರ್ಲಿಪ್ತನಾಗಿ, ಶಾಂತನಾಗಿ ತನ್ನ ಅಂತರಂಗವನ್ನೆಲ್ಲ ಶೋದಿಸಿಕೊಂಡಿದ್ದಾನೆ. ಸಂಸಾರದ ಸುಳಿಗೆ ಸಿಕ್ಕ ಜೀವ ಅದರಿಂದ ಹೊರಬರಲು ನಡೆಸಿರುವ ಮನಸ್ಸಿನ ಹೋರಾಟ ಸೂಕ್ಷ್ಮವಾಗಿ ಇದರಲ್ಲಿ ಪ್ರಕಟಗೊಂಡಿದೆ.

ಸು.16ನೆಯ ಶತಮಾನಕ್ಕೆ ಸೇರಿದ ಪುಲಿಗೆರೆ ಸೋಮನ ‘ಸೋಮೇಶ್ವರ ಶತಕ’ ಕನ್ನಡ ನೀತಿಶತಕಗಳಲ್ಲಿ ಅಗ್ರಸ್ಥಾನವನ್ನು ಪಡೆದು ಜನಪ್ರಿಯವಾಗಿದೆ. ನೀತಿ ಪ್ರತಿಪಾದನೆ ಕೆಲವೆಡೆ ಕಾವ್ಯಾತ್ಮಕವಾಗಿ ನಿರೂಪಿತವಾಗಿರುವುದು ಈ ಶತಕದ ಹೆಗ್ಗಳಿಕೆಗೆ ಕಾರಣವಾಗಿದೆ. ಕೆಲವಂ ಬಲ್ಲವರಿಂದ ಕಲ್ತು, ರವಿಯಾಕಾಶಕೆ ಭೂಷಣಂ, ಚರಿಪಾರಣ್ಯದ ಪಕ್ಷಿಗೊಂದು ತರುಗೊಡ್ಡಾಗಲ್ ಮುಂತಾದ ಪದ್ಯಗಳು ಜನಮನದಲ್ಲಿ ನೆಲಸಿವೆ. ಶೈಲಿ ಅನುಭವದ ನುಡಿಗಳಿಂದ, ಗಾದೆ ಮಾತುಗಳಂಥ ಸೂಕ್ತಿಗಳಿಂದ, ಜನಸಾಮಾನ್ಯರ ಹೃದಯಕ್ಕೆ ನೇರವಾಗಿ ತಾಗುವಂತಿವೆ. ದೇಪರಾಜ (ಸು.1410) ಪರಿವರ್ದಿನಿ ಷಟ್ಪದಿಯಲ್ಲಿ ಸಂಸ್ಕೃತ ಅಮರುಕ ಶತವನ್ನು ಕನ್ನಡಿಸಿದ್ದಾನೆ. ಇದೇ ಅಮರುಕವನ್ನು ಚಿಕುಪಾಧ್ಯಾಯ (ಸು.1672) ಅನುವಾದ ಮಾಡಿದ್ದಾನೆ. ಚಂದ್ರಕವಿ (ಸು.1430) ಗುರುಮೂರ್ತಿ ಶಂಕರಶತಕವನ್ನು ರಚಿಸಿದ್ದಾನೆ. ಮಗ್ಗೆಯ ಮಾಯಿದೇವನ (ಸು.1430) ಶಿವಾಧವ, ಶಿವಾವಲ್ಲಭ, ಮಹದೈಪುರೀಶ್ವರ ಶತಕಗಳು ಕ್ರಮವಾಗಿ ಭಕ್ತಿ, ಜ್ಞಾನ, ವೈರಾಗ್ಯವನ್ನು ಪ್ರತಿಪಾದಿಸುತ್ತವೆ. ಈ ಶತಕತ್ರಯ ಜನಪ್ರಿಯವಾಗಿದ್ದರೂ ಶಾಸ್ತ್ರ ಮತ್ತು ಪಾಂಡಿತ್ಯ ಭಾರದಿಂದ ಕುಸಿಯುತ್ತವೆ. ಹರಿಹರನಲ್ಲಿ ಕಾಣುವಂತೆ ಭಾವತೀವ್ರತೆಯಾಗಲೀ ಕಲ್ಪನಾಶಕ್ತಿಯಾಗಲೀ ಸರಳವಾದ ರಮ್ಯಶೈಲಿಯಾಗಲೀ ಇವನಲ್ಲಿ ಕಂಡುಬರುವುದಿಲ್ಲ. ಆದರೆ ಜನತೆಯ ಆಚಾರವಿಚಾರ ಹೇಳುವೆಡೆ ಮಾತ್ರ ಸೊಗಸು ಕಂಡುಬರುತ್ತದೆ.

ಹತ್ತಕ್ಕೂ ಹೆಚ್ಚು ಶತಕಗಳು 16ನೆಯ ಶತಮಾನದಲ್ಲಿ ರಚಿತವಾಗಿವೆ. ಗುಮ್ಮಟಾರ್ಯ (ಸು.1500), ಸಿರಿನಾಮಧೇಯ (ಸು.1550), ಚೆನ್ನಮಲ್ಲಿಕಾರ್ಜುನ (ಸು1560) - ಇವರು ಒಂದೊಂದು ಶತಕವನ್ನೂ ವೀರಭದ್ರರಾಜ (ಸು.1530) ಐದು ಶತಕಗಳನ್ನೂ ರಚಿಸಿದ್ದಾರೆ. ರತ್ನಾಕರವರ್ಣಿ ಈ ಶತಮಾನದ ಪ್ರಮುಖ ಶತಕ ಕರ್ತೃ. ಇವನು ರತ್ನಾಕರ ಶತಕ, ಅಪರಾಜಿತೇಶ್ವರ ಶತಕ, ತ್ರಿಲೋಕ ಶತಕಗಳನ್ನು ರಚಿಸಿದ್ದಾನೆ. ರತ್ನಾಕರ ಶತಕದಲ್ಲಿ ನೀತಿಬೋಧೆಗಿಂತ ಹೆಚ್ಚು ವೈರಾಗ್ಯಬೋಧೆ ಕಂಡುಬರುತ್ತದೆ. ಕೆಲವು ವೃತ್ತಗಳ ಬಂಧ ಮಧುರವಾಗಿದೆ. ಅಪರಾಜಿತೇಶ್ವರ ಶತಕದಲ್ಲಿ ಜೈನದೃಷ್ಟಿ ಪ್ರಧಾನವಾಗಿದ್ದರೂ ಆರ್ತಭಕ್ತನ ವಾಣಿ ನುಡಿಯುತ್ತದೆ. ಅನುಭವ ಭಾವರೂಪಿಯಾಗಿ ತೀವ್ರತೆಯಿಂದ ಹೊಮ್ಮುತ್ತದೆ. ಈತನ ತ್ರಿಲೋಕ ಶತಕ ಜೈನಾಗಮದಲ್ಲಿ ಹೇಳಿರುವ ಭೂಗೋಳ ವಿವರಗಳಿಂದ ಕೂಡಿದೆ. ಕನಕದಾಸರ ಹರಿಭಕ್ತಿಸಾರ ವಿಷ್ಣುಸ್ತುತಿ ಪರವಾದ ಶತಕ. ಭಕ್ತಿ ಪ್ರತಿಪಾದನೆ ಈ ಶತಕದ ವಸ್ತು.

17ನೆಯ ಶತಮಾನದಲ್ಲಿ ಶಾಂತವೀರದೇಶಿಕ, ಶಂಕರದೇವ, ಹಿರಿಯೂರುರಂಗ, ತಿರುಮಲಾರ್ಯ ಮೊದಲಾದವರು ಶಕತಗಳನ್ನು ರಚಿಸಿದ್ದಾರೆ. ಸಮಾದಿ ಸಿದ್ಧೇಶ್ವರನೆಂಬುವನ ಶಿಷ್ಯ ಶಾಂತಾಚಾರ್ಯ (ಸು.1700) ಸ್ಕಾಂದಪುರಾಣದ ಆಧಾರದ ಮೇಲೆ ಮರಣಮಣಿದರ್ಪಣ ಶತಕ ಎಂಬ ಕೃತಿಯನ್ನು ರಚಿಸಿದ್ದಾನೆ. ಚಿಕುಪಾಧ್ಯಾಯನ ಶೃಂಗಾರಶತಕ ಸಾಂಗತ್ಯ, ರಂಗಧಾಮಶತಕ ಸಾಂಗತ್ಯಗಳು ಸಾಂಗತ್ಯ ಛಂದಸ್ಸಿನಲ್ಲಿರುವುದು ಗಮನಾರ್ಹ.

18 ಮತ್ತು 19ನೆಯ ಶತಮಾನಗಳಲ್ಲಿ ವೃತ್ತಕಂದಗಳಲ್ಲಿ ಮಾತ್ರವಲ್ಲದೆ ಬಗೆಬಗೆಯ ಷಟ್ಪದಿಗಳಲ್ಲೂ ಹೇರಳವಾಗಿ ಶತಕಗಳು ರಚಿತವಾದುವು. ಕೇಶವನು ತಿರುವೇಂಗಡಾಚಾರ್ಯ ಶತಕ ಎಂಬ ಪಂಚಶತಕವನ್ನು ಬರೆದಿದ್ದಾನೆ. ಇದರಲ್ಲಿ 597 ಪದ್ಯಗಳಿವೆ. ಶಾಲ್ಯದ ಕೃಷ್ಣರಾಜನು ಸದಾಶಿವಶತಕ, ಅಪ್ರಸ್ತುತಪ್ರಶಂಸಾಶತಕಗಳನ್ನು ರಚಿಸಿದ್ದಾನೆ. ದೇವಲಾಪುರದನಂಜುಂಡನು ಕೃಷ್ಣರಾಜಶೃಂಗಾರಶತಕ, ತಿಪ್ಪಾಂಬಿಕಾಶತಕಗಳನ್ನು ರಚಿಸಿದ್ದಾನೆ. ಅಳಿಯ ಲಿಂಗರಾಜನ ಮಹಾಲಿಂಗಶತಕ, ಮುಮ್ಮಡಿ ಕೃಷ್ಣಭೂಪಾಲನ ಸಿರಿನಂಜುಂಡಶತಕ ಸರಳಸುಂದರವಾಗಿವೆ. ಕಪ್ಪಿನಿಯ (ಸು.1800) ನಂಜುಂಡಶತಕ ಕಂದದಲ್ಲಿ ರಚಿತವಾಗಿದೆ. ಚಾಮಸೂನು ಶ್ರೀಕಂಠಕಲಕಂಠಶತಕವನ್ನೂ ಪರ್ವತಕವಿ ಚಂದ್ರಲೇಖಾವಸಂತಶತಕವನ್ನೂ ರಚಿಸಿದ್ದಾರೆ. 19 ಮತ್ತು 20ನೆಯ ಶತಮಾನದ ಆದಿಯಲ್ಲಿ ಗುರುಗಳ, ರಾಜರ ಜೀವನವನ್ನು ನಿರೂಪಿಸುವ ಇನ್ನೊಂದು ಬಗೆಯ ಶತಕಗಳನ್ನು ಕಾಣಬಹುದು. ಕೃಷ್ಣರಾಜವರ್ಧಂತಿಶತಕ, ಚಾಮರಾಜಶತಕ, ಮುಳಬಾಗಿಲರ ಚರಿತ್ರಶತಕ, ಶ್ರೀಮದ್ಯುವರಾಜ ಕಂಠೀರವ ಕಲ್ಯಾಣಶತಕಂ - ಇವು ಇಂಥ ಕೃತಿಗಳು. ಕೆ.ರಾಮಸ್ವಾಮಿ ಅಯ್ಯಂಗಾರ್ ಅವರ ದಾರಿದ್ರ್ಯಶತಕ, ಕೆರೋಡಿ ಸುಬ್ಬರಾಯರ ಗಂಭೀರ ಶೃಂಗಾರಶತಕ- ಇವು ಗಮನಾರ್ಹವಾದವು. ಭರ್ತೃಹರಿಯ ಶತಕತ್ರಯವನ್ನು ಬಸವಪ್ಪಶಾಸ್ತ್ರಿಗಳು ಕನ್ನಡದಲ್ಲಿ ಪ್ರೌಢವಾಗಿ ಭಾಷಾಂತರಿಸಿದ್ದಾರೆ. ಭರ್ತೃಹರಿ ಯನ್ನು ಎಸ್.ವಿ.ಪರಮೇಶ್ವರಭಟ್ಟ ಹಾಗೂ ಎ.ಕೆ.ಪುಟ್ಟರಾಮು ಕನ್ನಡಕ್ಕೆ ಅನುವಾದಿಸಿದ್ದಾರೆ. ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗ, ಪರಮೇಶ್ವರ ಭಟ್ಟರ ಇಂದ್ರಚಾಪ ಮೊದಲಾದವು ನೂರರ ಮಿತಿಯುಳ್ಳ ಶತಕಗಳಲ್ಲದಿದ್ದರೂ ಸಪ್ತಶತಿಯಂತೆ ಶತಕಸಾಹಿತ್ಯದಲ್ಲಿ ಸೇರಿಸಬಹುದು.

ಶತಕಸಾಹಿತ್ಯ ಕನ್ನಡದಲ್ಲಿ ಒಂದು ಸಾವಿರ ವರ್ಷದ ಹರಹನ್ನು ಪಡೆದಿದೆ. ನಾನೂರಕ್ಕೂ ಹೆಚ್ಚು ಶತಕಗಳಿದ್ದರೂ ಜನಪ್ರಿಯವಾದವು, ಉತ್ತಮವಾದವು ಕೆಲವು ಮಾತ್ರ. ನೂರು ಪದ್ಯವಿದ್ದರೆ ಸಾಕು, ಏನು ಬರೆದರೂ ಸಲ್ಲುತ್ತದೆ ಎಂದು ಹೊರಟ ಕಾರಣ ಶತಕವೆಂದರೆ ಶುಷ್ಕ ಎಂಬ ಭಾವನೆ ಬೆಳೆದಿದೆ. ಶೃಂಗಾರ ಶತಕಗಳು ಒಂದೆರಡು ಮಾತ್ರ ಇವೆ. ಬಹುಪಾಲು ಕನ್ನಡ ಶತಕಗಳು ಸ್ತೋತ್ರ, ದೈವನಾಮಾವಳಿಗಳಿಂದ ತುಂಬಿ ಸಾಹಿತ್ಯವೆಂಬ ಹೆಸರಿಗೆ ಹೊರತಾಗಿವೆ. ಹರಿಹರ, ರತ್ನಾಕರವರ್ಣಿಯಂಥ ಒಬ್ಬಿಬ್ಬರು ಮಾತ್ರ ಸಂಸ್ಕೃತ ಶತಕಸಾಹಿತ್ಯಕ್ಕೆ ಹೆಗಲೆಣೆಯಾಗಿ ನಿಲ್ಲಬಲ್ಲ ಕವಿಗಳಾಗಿದ್ದಾರೆ. (ಎಂ.ಎಚ್.ಕೆ.)