ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ಷಟ್ಪದೀ ಕಾವ್ಯಗಳು

ವಿಕಿಸೋರ್ಸ್ದಿಂದ

ಕನ್ನಡದಲ್ಲಿ ಷಟ್ಪದಿ ಕಾವ್ಯಗಳು : - ಷಟ್ಪದಿ ಎನ್ನುವುದು ಆರು ಸಾಲಿನ ಪದ್ಯಜಾತಿಯೊಂದನ್ನು ನಿರ್ದೇಶಿಸುತ್ತದೆ. ಅದರಲ್ಲಿ 1, 2, 4, 5ನೆಯ ಪಾದಗಳು ಒಂದು ರೀತಿಯಾಗಿಯೂ 3, 6ನೆಯ ಪಾದಗಳು ಒಂದು ರೀತಿಯಾಗಿಯೂ ಇರುತ್ತವೆ. ಷಟ್ಪದಿ ಆರು ಬಗೆಯಾಗಿದೆ. ಶರ, ಕುಸುಮ, ಭೋಗ, ಭಾಮಿನಿ, ಪರಿವರ್ದಿನಿ ಮತ್ತು ವಾರ್ಧಕ. ಈ ಷಟ್ಪದಿಗಳು ಮಾತ್ರಾಗಣಗಳಿಂದ ಕೂಡಿದುವಾಗಿರುವುದರಿಂದ ಇವನ್ನು ಮಾತ್ರಾಷಟ್ಪದಿಗಳೆಂದು ಕರೆಯಬಹುದು. ಈ ಎಲ್ಲ ಮಾತ್ರಾಷಟ್ಪದಿಗಳಿಗೆ ಮೂಲವಾಗಿ ಒಂದು ಷಟ್ಪದಿಯಿತ್ತು. ಅದನ್ನು ಮೂಲಷಟ್ಪದಿ ಎಂದೋ ಅಂಶಷಟ್ಪದಿ ಎಂದೋ ಅಥವಾ ತೀ.ನಂ.ಶ್ರೀಕಂಠಯ್ಯನವರನ್ನನುಸರಿಸಿ ಷಟ್ಪದ ಎಂದೋ ನಿರ್ದೇಶಿಸಬಹುದು. ಈ ಮೂಲಷಟ್ಪದಿ ಅಥವಾ ಷಟ್ಪದ ಅಂಶಗಣಗಳಿಂದ ಕೂಡಿದ್ದು, ಈ ಲಕ್ಷಣವನ್ನು ಪಡೆದಿದ್ದಿತು (ವಿ- ವಿಷ್ಣುಗಣ : ರು- ರುದ್ರಗಣ). ವಿ | ವಿ | ವಿ | ವಿ | ವಿ | ವಿ | ರು || ವಿ | ವಿ | ವಿ | ವಿ | ವಿ | ವಿ | ರು || ನಾಗವರ್ಮ, ಜಯಕೀರ್ತಿಗಳು ತಮ್ಮ ಲಕ್ಷಣಗ್ರಂಥಗಳಲ್ಲಿ ಷಟ್ಪದಿಯ ಗುಣ ಲಕ್ಷಣಗಳನ್ನು ವರ್ಣಿಸಿರುವರಲ್ಲದೆ ಅದು ಅನೇಕ ಶಾಸನಗಳಲ್ಲೂ (ಉದಾ: ಅಮ್ಮಿನಬಾವಿ ಶಾಸನ) ಅನೇಕ ಚಂಪು ಕಾವ್ಯಗಳಲ್ಲಿಯೂ (ಉದಾ: ಸುಕುಮಾರ ಚರಿತೆ) ಕಾಣಿಸಿಕೊಂಡಿದೆ. ಚಾಳುಕ್ಯ ಚಕ್ರವರ್ತಿ 3ನೆಯ ಸೋಮೇಶ್ವರನ ಮಾನಸೋಲ್ಲಾಸದಲ್ಲಿಯೂ (ಸು.1129) ಅಂಶಗಣ ಘಟಿತವಾದ ಷಟ್ಪದ ಕಾಣಿಸಿಕೊಳ್ಳುತ್ತದೆ. ಆ ಕಾಲಕ್ಕಾಗಲೇ ಷಟ್ಪದರೂಪವಾದ ಕಥೆಗಳು ಹುಟ್ಟಿದ್ದುವೆಂಬುದಕ್ಕೆ ಆ ಕೃತಿಯಲ್ಲಿಯೇ ಆಧಾರವಿರುವುದಾದರೂ ನಮಗೆ ಷಟ್ಪದರೂಪದ ಯಾವ ಕಾವ್ಯವ ದೊರಕಿಲ್ಲ. ಎಂದರೆ 12ನೆಯ ಶತಮಾನದ ಮಧ್ಯದವರೆಗೆ ದೊರಕಿರುವ ಷಟ್ಪದಗಳೆಲ್ಲವ ಶಾಸನಗಳಲ್ಲಿ, ಕಾವ್ಯಗಳಲ್ಲಿ ಕಾಣಿಸಿಕೊಳ್ಳುವ ಬಿಡಿಪದ್ಯಗಳಾಗಿವೆ.

12ನೆಯ ಶತಮಾನದ ಮಧ್ಯಭಾಗದಲ್ಲಿ ಅಂಶಗಣಗಳ ಸ್ಥಾನದಲ್ಲಿ ಮಾತ್ರಾಗಣ ಗಳನ್ನು ತರುವ ರೂಢಿ ಪ್ರಬಲವಾದ ಮೇಲೆ ಮೂಲಷಟ್ಪದಿ ಅಥವಾ ಷಟ್ಪದ ಆರು ರೀತಿಯ ಮಾತ್ರಾಷಟ್ಪದಿಗಳಾಗಿ ವಿಕಾಸ ಹೊಂದಿತು. ಅವನ್ನೇ ಶರ, ಕುಸುಮ, ಭೋಗ, ಭಾಮಿನಿ, ಪರಿವರ್ಧಿನೀ ಮತ್ತು ವಾರ್ಧಕಗಳೆಂದು ಕರೆದಿರುವುದು. ಆಯಾ ಷಟ್ಪದಿಗಳ ಮೊದಲ ಪಾದದ ಲಕ್ಷಣ ಹೀಗಿರುತ್ತದೆ (ಮೂರನೆಯ ಪಾದ ಅದರ ಒಂದೂವರೆಯಷ್ಟು + 1 ಗುರು ಆಗಿರುತ್ತದೆ).

ಶರ (4 + 4) = 8 ಮಾತ್ರೆಗಳು ಕುಸುಮ (5 + 5) = 10 ಮಾತ್ರೆಗಳು ಭೋಗ (3 + 3 + 3 + 3) = 12 ಮಾತ್ರೆಗಳು ಭಾಮಿನಿ (3 + 4 + 3 + 4) = 14 ಮಾತ್ರೆಗಳು ಪರಿವರ್ಧಿನೀ(4 + 4 + 4 + 4) = 16 ಮಾತ್ರೆಗಳು ವಾರ್ಧಕ (5 + 5 + 5 + 5) = 20 ಮಾತ್ರೆಗಳು ಇವುಗಳಲ್ಲಿ ಭಾಮಿನಿ, ವಾರ್ಧಕಗಳು ಹೆಚ್ಚು ಪ್ರಚಾರದಲ್ಲಿದ್ದು, ಕನ್ನಡದ ಕೆಲವು ಅತ್ಯಂತ ಶ್ರೇಷ್ಠ ಕಾವ್ಯಗಳು ರಚಿತವಾಗಿವೆ. ಷಟ್ಪದಿ ಕಾವ್ಯಗಳ ಸಮಗ್ರ ಇತಿಹಾಸವನ್ನು ಕೊಡುವುದು ಇಲ್ಲಿ ಸಾಧ್ಯವಿಲ್ಲವಾದುದರಿಂದ ಕೆಲವು ಪ್ರಮುಖ ಕಾವ್ಯಗಳ ಪರಿಚಯವನ್ನು ಮಾತ್ರ ಕಾಲಾನುಕ್ರಮದಲ್ಲಿ ಕೊಡಲು ಪ್ರಯತ್ನಿಸಿದೆ.

1224ರ ಹರಿಹರದ ಶಾಸನದಲ್ಲಿ ಪೋಲಾಳ್ವದಂಡನಾಥನೆಂಬಾತ ಹರಿಚಾರಿತ್ರವೆಂಬ ಕಾವ್ಯವನ್ನು ಷಟ್ಪದಿರೂಪವಾಗಿ ರಚಿಸಿದನೆಂದು ಹೇಳಿದೆ. ಆ ಕಾವ್ಯ ದೊರೆತಿಲ್ಲವಾದ್ದರಿಂದ ಅದರ ಬಗ್ಗೆ ಇನ್ನೇನೂ ಹೇಳಲು ಸಾಧ್ಯವಿಲ್ಲ. ಆದಕಾರಣ ಅವನ ಸಮಕಾಲೀನನಾದ ರಾಘವಾಂಕನಿಂದ (ಸು.1230) ಷಟ್ಪದಿಕಾವ್ಯಗಳ ಇತಿಹಾಸವನ್ನು ಆರಂಬಿಸಬಹುದು.

ರಾಘವಾಂಕನ ಒಟ್ಟು ನಾಲ್ಕು ಕಾವ್ಯಗಳು ದೊರಕಿವೆ. ಹರಿಶ್ಚಂದ್ರಕಾವ್ಯ, ಸಿದ್ಧರಾಮಪುರಾಣ, ಸೋಮನಾಥ ಚಾರಿತ್ರ ಮತ್ತು ವೀರೇಶಚರಿತೆ (ಅವನ ಶರಭಚಾರಿತ್ರ ಮತ್ತು ಹರಿಹರ ಮಹತ್ತ್ವಗಳು ಅಲಭ್ಯ). ಇವುಗಳಲ್ಲಿ ಮೊದಲ ಮೂರು ವಾರ್ಧಕಷಟ್ಪದಿಯಲ್ಲಿದ್ದರೆ (5+5+5+5) ವೀರೇಶಚರಿತೆ ಉದ್ದಂಡ ಷಟ್ಪದಿಯಲ್ಲಿದೆ (4+4+4+4) ತನ್ನ ಬಹು ಶ್ರೇಷ್ಠ ಕೃತಿಗಳಿಂದಲೂ ನಮಗೆ ತಿಳಿದಮಟ್ಟಿಗೆ ಮೊದಲ ಷಟ್ಪದಿ ಕಾವ್ಯಗಳನ್ನು ಬರೆದ ಕವಿ ಆಗಿರುವುದರಿಂದಲೂ ರಾಘವಾಂಕ ಷಟ್ಪದಿ ಸಂಪ್ರದಾಯದ ಪ್ರವರ್ತಕನೆಂದು ಹೇಳಬಹುದು. ರಾಘವಾಂಕನ ಅನಂತರ ಷಟ್ಪದಿ ಕಾವ್ಯಗಳು ಹೆಚ್ಚು ಸಂಖ್ಯೆಯಲ್ಲಿ ಕಾಣಿಸಿಕೊಳ್ಳ ಲಾರಂಬಿಸುತ್ತವೆ. ಸು.1250-60ರಲ್ಲಿದ್ದ ಕುಮಾರಪದ್ಮರಸ ರಾಘವಾಂಕನ ಸಮಕಾಲೀನನೂ ತನ್ನ ತಂದೆಯೂ ಆದ ಕೆರೆಯಪದ್ಮರಸನ ಸಂಸ್ಕೃತ ಕೃತಿ ಸಾನಂದಚರಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾನೆ. ಇದರಲ್ಲಿ ಅನೇಕ ಬಗೆಯ ಷಟ್ಪದಿಗಳಿದ್ದರೂ ಕುಸುಮಷಟ್ಪದಿಯ ಬಾಹುಳ್ಯವನ್ನು ಇಲ್ಲಿ ಕಾಣಬಹುದು. ಸು.1275ರಲ್ಲಿದ್ದ ಕುಮುದೇಂದುವಿನ ಕುಮುದೇಂದು ರಾಮಾಯಣದಲ್ಲಿ ಶರ, ಭೋಗಗಳನ್ನು ಬಿಟ್ಟರೆ ಉಳಿದೆಲ್ಲ ಷಟ್ಪದಿಗಳೂ ಬಳಕೆಯಾಗಿವೆ. ಜೈನ ಸಂಪ್ರದಾಯದ ರಾಮಾಯಣದ ಕಥೆ ಇಲ್ಲಿ ಬಂದಿದೆ. ಕವಿ ತನಗಿಂತ ಹಿಂದಿದ್ದ ನಾಗಚಂದ್ರನನ್ನು ಯಥೇಷ್ಟವಾಗಿ ಅನುಕರಿಸಿರುವುದು ಕಂಡುಬರುತ್ತದೆ. ಸು.1369ರಲ್ಲಿದ್ದ ಕವಿಯ ಬಸವಪುರಾಣ ಒಂದು ಪ್ರಮುಖ ಕೃತಿ. ಬಸವಣ್ಣನವರನ್ನು ಕುರಿತಾದ ಕನ್ನಡ ಕಾವ್ಯಗಳಲ್ಲಿ ಇದು ಅತ್ಯಂತ ಜನಪ್ರಿಯವಾದುದು. ವಾಸ್ತವವಾಗಿ ಇದು ಸ್ವತಂತ್ರ ಕೃತಿಯಲ್ಲ. ಪಾಲ್ಕುರಿಕೆ ಸೋಮನಾಥನ ತೆಲುಗು ಬಸವಪುರಾಣದ ಪ್ರಾಮಾಣಿಕವಾದ ಕನ್ನಡ ಅನುವಾದವಷ್ಟೆ. ಇದು ಭಾಮಿನಿ ಷಟ್ಪದಿಯಲ್ಲಿ ರಚಿತವಾದ ಮೊಟ್ಟಮೊದಲ ಸಮಗ್ರ ಗ್ರಂಥ. ಸು.1400ರಲ್ಲಿದ್ದ ಪದ್ಮಣಾಂಕನ ಪದ್ಮರಾಜ ಪುರಾಣವೂ ಒಂದು ಗಮನಾರ್ಹ ಕೃತಿ. ವಾರ್ಧಕಷಟ್ಪದಿಯ ಈ ಕಾವ್ಯಕ್ಕೆ ಕೆರೆಯಪದ್ಮರಸನೇ ಕಥಾವಸ್ತು. ಹೀಗೆ ತಮಗಿಂತ ಹಿಂದೆ ಮನುಷ್ಯರಂತೆಯೇ ಬದುಕಿ, ಶಿವನ ಕೃಪೆಯನ್ನು ಪಡೆದ ಭಕ್ತರ ಕಥೆಗಳನ್ನು ಆರಿಸಿಕೊಂಡು ಕಾವ್ಯಗಳನ್ನು ರಚಿಸುವ ಹರಿಹರನ ಸಂಪ್ರದಾಯ ವಿಶೇಷವಾಗಿ ವೀರಶೈವಕವಿಗಳಲ್ಲಿ ಬೆಳೆದುಕೊಂಡು ಬಂದಿರುವುದು ಒಂದು ಮುಖ್ಯ ಸಂಗತಿಯಾಗಿದೆ. ಕುಮಾರವ್ಯಾಸ (ಸು.1400) ಕನ್ನಡದ ಅತ್ಯಂತ ಶ್ರೇಷ್ಠ ಕವಿಗಳಲ್ಲೊಬ್ಬ. ಇವನ ಕನ್ನಡ ಭಾರತ ಕನ್ನಡದ ಅತಿ ಜನಪ್ರಿಯ ಕಾವ್ಯಗಳಲ್ಲೊಂದು. ವ್ಯಾಸರ ಸಂಸ್ಕೃತ ಮಹಾಭಾರತವನ್ನು ಕನ್ನಡಕ್ಕೆ ಭಾಮಿನಿ ಷಟ್ಪದಿಗಳಲ್ಲಿ ಈತ ಯಶಸ್ವಿಯಾಗಿ ತಂದಿದ್ದಾನೆ. ಕುಮಾರವ್ಯಾಸನ ಪ್ರಭಾವ ಮುಂದಿನ ಕವಿಗಳ ಮೇಲೆ ಅಪರಿಮಿತವಾಗಿದೆ. ಉದಾಹರಣೆಗೆ 1424ರಲ್ಲಿದ್ದ ಭಾಸ್ಕರ ಎಂಬ ಜೈನಕವಿ ತನ್ನ ಜೀವಂಧರಚರಿತೆಯೆಂಬ ಭಾಮಿನಿ ಷಟ್ಪದಿ ಕಾವ್ಯದಲ್ಲಿ ಕುಮಾರವ್ಯಾಸನನ್ನು ಅನೇಕ ಕಡೆಗಳಲ್ಲಿ ಅನುಕರಿಸಿರುವುದು ಸುಸ್ಪಷ್ಟವಾಗಿದೆ.

ಚಾಮರಸನ (ಸು.1430) ಪ್ರಭುಲಿಂಗಲೀಲೆ ಅಲ್ಲಮಪ್ರಭುವನ್ನು ವಸ್ತುವಾಗಿ ಉಳ್ಳ ಶ್ರೇಷ್ಠ ಕಾವ್ಯ. ಇವನು ಭಾಮಿನಿಷಟ್ಪದಿಗಳನ್ನು ಬಳಸುವುದರಲ್ಲಿ, ಸೊಗಸಾದ ರೂಪಕಗಳನ್ನು ನಿರ್ಮಿಸುವುದರಲ್ಲಿ ಕುಮಾರವ್ಯಾಸನನ್ನು ಹೋಲುತ್ತಾನೆ. ಇವನ ಸಮಕಾಲೀನನಾಗಿದ್ದ ಲಕ್ಕಣ್ಣದಂಡೇಶ ಪ್ರೌಢದೇವರಾಯನ ಮಂತ್ರಿಯಾಗಿದ್ದು ಶಿವತತ್ತ್ವ ಚಿಂತಾಮಣಿಯೆಂಬ ವಾರ್ಧಕ ಷಟ್ಪದಿ ಕಾವ್ಯವನ್ನು ಬರೆದಿದ್ದಾನೆ. ಇದರಲ್ಲಿ ಅನೇಕ ಪುರಾತನ ಹಾಗೂ ನೂತನ ಶಿವಭಕ್ತರ ಕಥೆಗಳು ದೊರೆಯುತ್ತವೆ. ಇದೇ ಕಾಲದ ಗುರುಬಸವನ ಏಳುಕಾವ್ಯಗಳು ಸಪ್ತಕಾವ್ಯಗಳೆಂದು ಪ್ರಸಿದ್ಧವಾಗಿವೆ. ಅವುಗಳಲ್ಲಿ ಶಿವಯೋಗಾಂಗಭೂಷಣ ಪರಿವದಿರ್ನಿ ಯಲ್ಲಿಯೂ ವೃಷಭಗೀತೆ ಭೋಗಷಟ್ಪದಿಯಲ್ಲಿಯೂ ಮನೋವಿಜಯಕಾವ್ಯ ಕುಸುಮಷಟ್ಪದಿ ಯಲ್ಲಿಯೂ ರಚಿತವಾಗಿವೆ. ಅದೇ ಕಾಲದ ಬತ್ತಲೇಶ್ವರ ಎಂಬ ವೀರಶೈವ ಕವಿ ಬತ್ತಲೇಶ್ವರ ರಾಮಾಯಣವನ್ನು ಬರೆದಿದ್ದಾನೆ. ಷಟ್ಪದಿ ಕಾವ್ಯಗಳನ್ನು ಬರೆದ ಈ ಶತಮಾನದ ಇತರ ವೀರಶೈವ ಕವಿಗಳು - ಬೊಮ್ಮರಸ (ಸು.1450, ಸೌಂದರ ಪುರಾಣ); ನೀಲಕಂಠಾಚಾರ್ಯ (ಸು.1485, ಆರಾಧ್ಯ ಚಾರಿತ್ರ); ಚತುರ್ಮುಖ ಬೊಮ್ಮರಸ (ಸು.1500, ರೇವಣಸಿದ್ಧೇಶ್ವರ ಕಾವ್ಯ); ಸಿಂಗಿರಾಜ (ಸು.1500, ಅಮಲಬಸವಚಾರಿತ್ರ ಅಥವಾ ಸಿಂಗಿರಾಜ ಪುರಾಣ. ಇದರಲ್ಲಿ ಬಸವಣ್ಣನವರ ಕತೆ ನಿರೂಪಿತವಾಗಿದೆ. ಇದು ಬಸವಣ್ಣನವರ ಪವಾಡಗಳ ಬಗ್ಗೆ ಹೆಚ್ಚು ಒಲವನ್ನು ತೋರಿರುವ ಕೃತಿಯಾಗಿದೆ).

15ನೆಯ ಶತಮಾನದ ಜೈನಕವಿಗಳಲ್ಲಿ ಕಲ್ಯಾಣಕೀರ್ತಿ (1439) ಮತ್ತು ತೆರಕಣಾಂಬಿ ಬೊಮ್ಮರಸ (ಸು.1485) ಉಲ್ಲೇಖಾರ್ಹರು. ಬೊಮ್ಮರಸನ ಸನತ್ಕುಮಾರಚರಿತೆ ಭಾಮಿನಿ ಷಟ್ಪದಿಯ ಕಾವ್ಯ. ವಡ್ಡಾರಾಧನೆಯಲ್ಲಿ ಗದ್ಯರೂಪವಾಗಿ ಕಾಣಿಸಿಕೊಂಡಿದ್ದ ಸನತ್ಕುಮಾರನ ಕಥೆಯನ್ನು ಇಲ್ಲಿ ಕಾವ್ಯರೂಪದಲ್ಲಿ ಸೊಗಸಾಗಿ ನಿರೂಪಿಸಲಾಗಿದೆ.

ಕುಮಾರವ್ಯಾಸನ ಸಂಪ್ರದಾಯದಲ್ಲಿ ರಾಮಾಯಣವನ್ನು ವಸ್ತುವನ್ನಾಗಿ ಮಾಡಿಕೊಂಡು ಕಾವ್ಯರಚನೆ ಮಾಡಿದ ನರಹರಿ ಅಥವಾ ಕುಮಾರವಾಲ್ಮೀಕಿಯ (ಸು.1500) ತೊರವೆ ರಾಮಾಯಣ ಅಂಥ ಉತ್ತಮ ಕಾವ್ಯವಲ್ಲದಿದ್ದರೂ ಕಥಾವಸ್ತುವಿನಿಂದಾಗಿ ಅತ್ಯಂತ ಜನಪ್ರಿಯ ಕೃತಿಗಳಲ್ಲೊಂದಾಗಿದ್ದಿತು.

ಮೂರನೆಯ ಮಂಗರಸನ (1508) ಜಯನೃಪಕಾವ್ಯ ಪರಿವದಿರ್ನಿಯಲ್ಲಿದೆ. ಗುಬ್ಬಿಮಲ್ಲಣಾರ್ಯನ (1513) ಭಾವಚಿಂತಾರತ್ನ ಚಮತ್ಕಾರಗಳಿಂದ ಕೂಡಿದ ಪ್ರೌಢರಚನೆಯ ಕಾವ್ಯ. ಪಂಚಾಕ್ಷರೀ ಮಂತ್ರದ ಮಹಿಮೆಯನ್ನು ಸಾರುವ ಸುಪ್ರಸಿದ್ಧ ಸತ್ಯೇಂದ್ರಚೋಳನ ಕಥೆ ಇದರ ವಸ್ತು. ಇವನ ವೀರಶೈವಾಮೃತ ಮಹಾಪುರಾಣ ದೊಡ್ಡ ಗಾತ್ರದ ವಾರ್ಧಕ ಷಟ್ಪದಿ ಕಾವ್ಯ. ಸು.1550ರಲ್ಲಿದ್ದ ಗುರುಲಿಂಗವಿಭುವಿನ ಭಿಕ್ಷಾಟನ ಚರಿತೆಯಲ್ಲಿನ ಶಿವನ ಅದೇ ಹೆಸರಿನ ಲೀಲೆಯೊಂದನ್ನು ನಿರೂಪಿಸಿದೆ. ಅವನ ಸಮಕಾಲೀನನಾದ ಚನ್ನಬಸವಾಂಕನ ಮಹಾದೇವಿಯಕ್ಕನ ಪುರಾಣದಲ್ಲಿ ಅಕ್ಕಮಹಾದೇವಿಯ ಕಥೆ ಹಲವು ಬಗೆಯ ಷಟ್ಪದಿಗಳಲ್ಲಿ ವರ್ಣಿತವಾಗಿದೆ.

ಈ ಶತಮಾನದ ಪ್ರಮುಖ ಷಟ್ಪದಿ ಕವಿಗಳೆಂದರೆ ಲಕ್ಷ್ಮೀಶ (ಸು.1550), ಕನಕದಾಸ (ಸು.1550) ಮತ್ತು ವಿರೂಪಾಕ್ಷಪಂಡಿತ (1584). ಕುಮಾರವ್ಯಾಸ ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಕನ್ನಡಕ್ಕೆ ತಂದಿದ್ದರೆ, ತಿಮ್ಮಣ್ಣ (ಸು.1510) ಅದರ ಮುಂದಿನ ಎಂಟು ಪರ್ವಗಳನ್ನು ಕನ್ನಡದಲ್ಲಿ ನಿರೂಪಿಸಿದ. ಲಕ್ಷ್ಮೀಶನ ಜೈಮಿನಿಭಾರತ ಕೌರವನ ಸಾವಿನ ಬಳಿಕ ಪಾಂಡವರು ರಾಜ್ಯದಲ್ಲಿ ಪ್ರತಿಷ್ಠಿತರಾದ ಮೇಲಿನ ಕಥೆಯನ್ನು ವಸ್ತುವಾಗಿ ಪಡೆದ ಒಂದು ಅತ್ಯಂತ ಜನಪ್ರಿಯ ಕಾವ್ಯ. ಕನಕದಾಸ ಮನೋಹರವಾದ ಕೀರ್ತನೆಗಳನ್ನು ರಚಿಸಿದ ಭಕ್ತಶ್ರೇಷ್ಠ. ಇವನ ರಾಮಧಾನ್ಯಚರಿತೆ ರಾಗಿಯ ಶ್ರೇಷ್ಠತೆಯನ್ನು ಸ್ಥಾಪಿಸಲಿಕ್ಕಾಗಿ ಹುಟ್ಟಿದ ಕಾಲ್ಪನಿಕ ಕಥೆಯೊಂದನ್ನು ಹೇಳುತ್ತದೆ. ಇವನ ನಳಚರಿತ್ರೆ ಕನ್ನಡದ ಜನಪ್ರಿಯ ಕಾವ್ಯಗಳಲ್ಲೊಂದು. ವಾರ್ಧಕ ಷಟ್ಪದಿಗಳನ್ನು ಬರೆಯುವುದರಲ್ಲಿ ಲಕ್ಷ್ಮೀಶನಿಗೆ ಹೆಗಲೆಣೆಯಾದ ಕವಿ ವಿರೂಪಾಕ್ಷಪಂಡಿತ. ಇವನ ಚನ್ನಬಸವಪುರಾಣ ನೆಪಕ್ಕೆ ಮಾತ್ರ ಚನ್ನಬಸವಣ್ಣನ ಕಥೆಯನ್ನು ಆಶ್ರಯಿಸಿದೆ. ಆದರೆ ಅದರ ತುಂಬ ಶಿವನ ಅನೇಕ ಲೀಲೆಗಳು, ವೀರಶೈವ ಧರ್ಮದ ತತ್ತ್ವಗಳು, ಕಾಲಜ್ಞಾನಗಳು ಸೇರಿಕೊಂಡು ಕಾವ್ಯವನ್ನು ಹಿಗ್ಗಿಲವೆ. ಇದೇ ಶತಮಾನದ ಇನ್ನೊಬ್ಬ ಉಲ್ಲೇಖಾರ್ಹನಾದ ಕವಿಯಂದರೆ ಕನ್ನಡ ಭಾಗವತವನ್ನು ಬರೆದ ಚಾಟುವಿಠ್ಠಲನಾಥ (ಸು.1530). ಈ ಕೃತಿ ತೊರವೆ ರಾಮಾಯಣದಂತೆಯೇ ಕೇವಲ ಕಥಾವಸ್ತುವಿನ ಕಾರಣದಿಂದಾಗಿ ಜನಪ್ರಿಯತ್ವವನ್ನು ಪಡೆದಿದ್ದ ಇನ್ನೊಂದು ಕಾವ್ಯ.

16ನೆಯ ಶತಮಾನಕ್ಕೆ ಉತ್ತಮ ಷಟ್ಪದಿ ಕಾವ್ಯಗಳ ಕಾಲ ಮುಗಿಯಿತೆಂದು ಭಾವಿಸಬಹುದು. ರಕ್ಕಸತಂಗಡಿ ಯುದ್ಧದಲ್ಲಿ (ಸು.1565) ವಿಜಯನಗರ ಸಾಮ್ರಾಜ್ಯ ಒಡೆದ ಮೇಲೆ ಸಾಹಿತ್ಯಕ್ಕಿದ್ದ ರಾಜಾಶ್ರಯ ತಪ್ಪಿತು. ಜನಜೀವನ ಅಸ್ತವ್ಯಸ್ತವಾಯಿತು. ಮುಂದೆ ಮೈಸೂರು, ಕೆಳದಿ ಮುಂತಾದ ಅರಸರು ಆಶ್ರಯವನ್ನು ಕೊಟ್ಟರೂ ಒಟ್ಟಿನಲ್ಲಿ ಯಾವುದೇ ರೀತಿಯ ಶ್ರೇಷ್ಠ ಕಾವ್ಯಗಳ ಕಾಲ ಅಲ್ಲಿಗೆ ಮುಗಿಯಿತೆಂದೂ ಅಲ್ಲಿಂದ ಏನಿದ್ದರೂ ಆಧುನಿಕ ಯುಗಕ್ಕೆ ಬಂದಾಗಲೇ ಉತ್ತಮ ಕೃತಿಗಳನ್ನು ಕಾಣಲು ಸಾಧ್ಯವೆಂದೂ ಹೇಳಬಹುದು. 17ನೆಯ ಶತಕದಿಂದೀಚೆಗೆ ಹುಟ್ಟಿದ ಕೆಲವು ಕೃತಿಗಳು ಹೀಗಿವೆ: ಸು.1606ರಲ್ಲಿದ್ದ ಎಳಂದೂರ ಹರೀಶರನು ಪ್ರಭುದೇವರ ಪುರಾಣವನ್ನು ಬರೆದಿದ್ದಾನೆ. ಇದರಲ್ಲಿ ಅಲ್ಲಮಪ್ರಭುವಿನ ಕಥೆಯ ಜೊತೆಗೆ ಬೇರೆ ಭಕ್ತರ ಕಥೆಗಳೂ ದೊರಕುತ್ತವೆ. ಸು.1650ರಲ್ಲಿದ್ದ ಸಿದ್ಧನಂಜೇಶ ಅಥವಾ ಚಿಕ್ಕ ನಂಜೇಶನ ಎರಡು ವಾರ್ಧಕ ಷಟ್ಪದಿ ರೂಪದ ಕೃತಿಗಳಿವೆ: ಗುರುರಾಜ ಚಾರಿತ್ರ ಮತ್ತು ರಾಘವಾಂಕ ಚರಿತೆ. ಕವಿ ರಾಘವಾಂಕನ ಬಗ್ಗೆ ನಮಗೆ ತಿಳಿದಿರುವ ಸಂಗತಿಗಳಿಗೆ ಇದು ಮುಖ್ಯ ಆಕರ. ಜೊತೆಗೆ, ಸಿದ್ಧನಂಜೇಶ ರಾಘವಾಂಕನ ಎಲ್ಲ ಕಾವ್ಯಗಳ ಸಾರಾಂಶವನ್ನು ಕೊಡುವಂತೆ ಹರಿಹರಮಹತ್ತ್ವ ಎಂಬ ಕೃತಿಯ ಸಾರಾಂಶವನ್ನೂ ಕೊಟ್ಟಿದ್ದಾನೆ. ರಾಘವಾಂಕನ ಈ ಕೃತಿ ಇಂದು ಅಲಭ್ಯ ವಾಗಿದೆಯಾದರೂ ಅದರ ಕಥಾ ಸಾರಾಂಶ ನಮಗೆ ದೊರಕುವುದರಿಂದಾಗಿ, ಹರಿಹರನ ವೈಯಕ್ತಿಕ ಜೀವನದ ಕೆಲವಾದರೂ ಪ್ರಮುಖ ಘಟನೆಗಳು ತಿಳಿದುಬರುವುದು ಇದರಿಂದ ಸಾಧ್ಯ ವಾಗಿದೆ. ಗೋವಿಂದ (ಸು. 1650, ನಂದಿ ಮಾಹಾತ್ಮ್ಯ), ಲಕ್ಷ್ಮಕವಿ(1723, ಭಾರತ), ಬಬ್ಬೂರುರಂಗ (1750, ಅಂಬಿಕಾ ವಿಜಯ), ಕೋನಯ್ಯ (ಸು.1750, ಗಯಚರಿತ್ರೆ)- ಇವರೆಲ್ಲರೂ ಕುಮಾರ ವ್ಯಾಸನಿಂದ ಪ್ರಭಾವಿತರಾದ ಕವಿಗಳು. ಸಹ್ಯಾದ್ರಿ ಖಂಡ ತೀರ್ಥಕ್ಷೇತ್ರಗಳ ಮಹಿಮೆಯನ್ನು ಭಾಮಿನಿಷಟ್ಪದಿಯಲ್ಲಿ ನಿರೂಪಿಸುವ ಒಂದು ಬೃಹತ್ಕಾವ್ಯ. ಮಹಲಿಂಗರಂಗನ (ಸು.1675) ಅನುಭವಾಮೃತ ಅದ್ವೈತ ತತ್ತ್ವಗಳನ್ನು ಸುಲಭಶೈಲಿಯಲ್ಲಿ ಬೋದಿಸುವ ಒಂದು ಜನಪ್ರಿಯ ಕೃತಿ. ದ್ವೈತ ತತ್ತ್ವಗಳನ್ನು ಬೋದಿಸುವ ಜಗನ್ನಾಥದಾಸರ (ಸು.1775) ಹರಿಕಥಾಮೃತಸಾರ ಇನ್ನೊಂದು ಜನಪ್ರಿಯ ಗ್ರಂಥವಾಗಿದೆ.

ಷಟ್ಪದಿ ಗ್ರಂಥಗಳ ಮಾಲಿಕೆಯಲ್ಲಿ ಕೊನೆಯದಾಗಿ ಮುದ್ದಣನ (1869-1901) ಹೆಸರನ್ನು ಹೇಳಬಹುದು. ಇವನು ಹಳೆಯ ಮತ್ತು ಹೊಸ ಸಾಹಿತ್ಯಗಳ ಸಂದಿಕಾಲದಲ್ಲಿದ್ದ ಕವಿ. ಇವನ ಗದ್ಯಕೃತಿಗಳಾದ ರಾಮಾಶ್ವಮೇಧ ಮತ್ತು ಅದ್ಭುತರಾಮಾಯಣಗಳು ಪ್ರಖ್ಯಾತವಾಗಿವೆ. ಅಷ್ಟೊಂದು ಪ್ರಸಿದ್ಧವಲ್ಲದ ಇವನ ಕೃತಿ ಶ್ರೀರಾಮಪಟ್ಟಾಬಿಷೇಕ ವಾರ್ಧಕದಲ್ಲಿ ರಚಿತವಾಗಿರುವ ಸುಂದರ ಕಾವ್ಯ. ಮುದ್ದಣನಾದ ಮೇಲೂ ಹಲವರು ಷಟ್ಪದಿ ಕಾವ್ಯಗಳನ್ನು ಮುಂದುವರಿಸಿದ್ದುಂಟು. ಬಹು ಹಿಂದಿನಿಂದ ಷಟ್ಪದಿ ಕಾವ್ಯಗಳು ಅತ್ಯಂತ ಜನಪ್ರಿಯವಾಗಿವೆ. ರಾಘವಾಂಕನ ಹರಿಶ್ಚಂದ್ರಕಾವ್ಯ, ಕುಮಾರವ್ಯಾಸ ಮತ್ತು ಲಕ್ಷ್ಮೀಶರ ಭಾರತಗಳು, ಕನಕದಾಸರ ನಳಚರಿತ್ರೆ ಇವು ಇದಕ್ಕೆ ಉದಾಹರಣೆಗಳು. ಇವನ್ನು ಇಂದಿಗೂ ಗಮಕಿಗಳು ವಾಚನಮಾಡಿ ಶ್ರೋತೃಗಳನ್ನು ತಣಿಸುತ್ತಾರೆ. ಇವು ಕವಿತೆಯ ದೃಷ್ಟಿಯಿಂದಲೂ ಉನ್ನತಮಟ್ಟದವು ಎಂಬುದರಲ್ಲಿ ಸಂದೇಹವಿಲ್ಲ. ಇವುಗಳ ವಸ್ತು ಸುಪ್ರಸಿದ್ಧ; ಭಾಷೆ ಸರಳ, ಜೊತೆಗೆ ರಾಗವಾಗಿ ಹಾಡಲೂ ಅನುಕೂಲ. ಅನುಭವಾಮೃತದಂಥ ವೇದಾಂತ ಗ್ರಂಥವ ಷಟ್ಪದೀರೂಪವಾಗಿದೆಯೆಂಬುದನ್ನು ಇಲ್ಲಿ ಸ್ಮರಿಸಬಹುದು.

20ನೆಯ ಶತಮಾನದಲ್ಲಿ ಷಟ್ಪದಿ ರಚನೆಯನ್ನು ಬಹುಯಶಸ್ವಿಯಾಗಿ ಬಳಸಿಕೊಂಡವರೆಂದರೆ ಜಿ.ಪಿ.ರಾಜರತ್ನಂ. ಇವರು ತಮ್ಮ ಮಹಾಕವಿ ಪುರುಷ ಸರಸ್ವತಿ ಎಂಬ ವಿಡಂಬನ ಗ್ರಂಥದಲ್ಲಿ ಹೊಸ ಮಾದರಿಯಲ್ಲಿ ಷಟ್ಪದಿ ರಚನೆಯನ್ನು ಕನ್ನಡಾಂಗ್ಲಭಾಷಾ ಮಿಶ್ರಣದಲ್ಲಿ ವಿಶಿಷ್ಟವಾಗಿ ಬಳಸಿಕೊಂಡಿದ್ದಾರೆ. ಮಹಾಕವಿ ಪುರುಷ ಸರಸ್ವತಿಯ ಗುಣಕಥನ ಮಾಡುವಾಗಲಾಗಲಿ, ಕುಕವಿನಿಂದೆ, ಸತ್ಕವಿಪ್ರಶಂಸೆ ಮಾಡುವಾಗಲಾಗಲಿ, ಹಾರ್ಮೋನಿಯಂ ಹರಣದಂತೆ ಕರ್ಣಕಥೆಯನ್ನು ಹೇಳುವಾಗಲಾಗಲಿ ತನಿಯಾದ ಹಾಸ್ಯ ವ್ಯಂಗ್ಯ ಬಹು ಸಹಜವಾಗಿ, ಅದ್ಭುತವಾಗಿ ಮೂಡಿನಿಂತಿದೆ. *