ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡನುಡಿ
ಕನ್ನಡ ನುಡಿ : ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸುತ್ತಿರುವ ಕನ್ನಡದ ಚಳವಳಿಗಾಗಿ ಮೀಸಲಾದ ಮಾಸ ಪತ್ರಿಕೆ. ಬಿ.ಎಂ.ಶ್ರೀಯವರ ಅಪೇಕ್ಷೆಯಂತೆ 1938 ಅಕ್ಟೋಬರ್ ತಿಂಗಳಲ್ಲಿ ಅ.ನ.ಕೃ. ಅವರ ಸಂಪಾದಕತ್ವದಲ್ಲಿ ಕನ್ನಡ ನುಡಿ ವಾರಪತ್ರಿಕೆಯಾಗಿ ಜನ್ಮ ತಾಳಿತು. 1949ರಲ್ಲಿ ಪಕ್ಷಪತ್ರಿಕೆಯಾಯಿತು. 1950 ಆಗಸ್ಟ್‌ನಿಂದ ಮಾಸಪತ್ರಿಕೆಯಾಗಿ ಪರಿವರ್ತಿತವಾಯಿತು. 1969 ನವೆಂಬರಿನಿಂದ ಮತ್ತೆ ಪಕ್ಷಪತ್ರಿಕೆಯಾಯಿತು. 1991ರಿಂದ ಪುನಃ ಮಾಸಪತ್ರಿಕೆಯಾಗಿ ಪ್ರಕಟಗೊಳ್ಳುತ್ತಿದೆ. ಅ.ನ.ಕೃಷ್ಣರಾಯ, ಬಿ.ವೆಂಕೋಬ ರಾವ್, ಬಿ.ಎಂ.ಶ್ರೀ., ಎಂ.ಜಿ.ನಂಜುಂಡಾರಾಧ್ಯ, ಮೋಟಗಾನಹಳ್ಳಿ ಸುಬ್ರಹ್ಮಣ್ಯಶಾಸ್ತ್ರಿ, ಎಸ್.ಕೃಷ್ಣಶರ್ಮ, ಡಿ.ಸಿ.ಸುಬ್ಬರಾಯಪ್ಪ, ವಿ.ಸೀ., ಸಿ.ಕೆ.ವೆಂಕಟರಾಮಯ್ಯ, ಎಂ.ಆರ್.ಶ್ರೀ., ಎಂ.ವಿ.ಸೀತಾರಾಮಯ್ಯ, ಬಿ.ಶಿವಮೂರ್ತಿಶಾಸ್ತ್ರೀ, ಡಿ.ಆರ್.ರಾಮಯ್ಯ, ಜಿ.ವೆಂಕಟಸುಬ್ಬಯ್ಯ, ಹಿ.ಮ.ನಾಗಯ್ಯ, ಅನಂತ ಪದ್ಮನಾಭರಾವ್, ರಾಮಣ್ಣ ಕೋಡಿಹೊಸಹಳ್ಳಿ, ಡಿ.ವಿ.ನಾಗರಾಜು, ಸಿ.ಸಿದ್ಧಲಿಂಗಪ್ಪ, ಚಂದ್ರಕಾಂತ ಪಡೇಸೂರ, ಜಿ.ವಿ.ಶಿವಸ್ವಾಮಿ, ಅ.ರಾ.ಚಂದ್ರಹಾಸಗುಪ್ತ, ಐ.ಎಂ.ವಿಠ್ಠಲಮೂರ್ತಿ, ಸಾ.ಶಿ.ಮರುಳಯ್ಯ, ವಿಜಯಾಸುಬ್ಬರಾಜ್, ನಲ್ಲೂರು ಪ್ರಸಾದ, ಅಗ್ರಹಾರ ಕೃಷ್ಣಮೂರ್ತಿ, ಟಿ.ಸಿ.ಪುರ್ಣಿಮಾ, ಎಚ್.ಎಸ್.ಪಾರ್ವತಿ, ಸಿ.ಕೆ.ಪರಶು ರಾಮಯ್ಯ, ಎಚ್.ಪಿ.ಪಿsಲೋಮಿನಾ, ವರದಾ ಶ್ರೀನಿವಾಸ್, ಎಸ್.ವಿ.ಶ್ರೀನಿವಾಸರಾವ್ ಮೊದಲಾದವರು ಕನ್ನಡ ನುಡಿಯ ಸಂಪಾದಕರಾಗಿದ್ದರು. ಮಹದೇವ ಪ್ರಕಾಶ್ ಈಗಿನ ಸಂಪಾದಕರು (2005).
ಕನ್ನಡ ನುಡಿಯಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಗಳಿಗೆ ಮತ್ತು ವಿದ್ಯಾಭ್ಯಾಸಕ್ಕೆ ಸಂಬಂದಿsಸಿದ ಸರ್ವಜನೋಪಯುಕ್ತ ಲೇಖನಗಳು ಬರುತ್ತವೆ. ಪರಿಷತ್ತು ನಡೆಸುವ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಪ್ರಬಂಧಗಳೂ
ಸಣ್ಣಕಥೆಗಳೂ ಏಕಾಂಕ ನಾಟಕಗಳೂ ಪ್ರಕಟವಾಗುತ್ತವೆ. ದತ್ತಿಗಳಿಂದಲೂ ವಿಶೇಷೋತ್ಸವಗಳಲ್ಲೂ ನಡೆಯುವ ಉಪನ್ಯಾಸಗಳ ಸಂಗ್ರಹವನ್ನು ಕೊಡಲಾಗುತ್ತದೆ. ಪ್ರಾಚೀನ ಸಾಹಿತ್ಯದ ಉದ್ಗ್ರಂಥಗಳ ಪರಿಚಯ,
ಆಧುನಿಕ ಸಾಹಿತ್ಯದ ಉತ್ತಮ ಕೃತಿಗಳ ಪರಿಚಯ, ವೈe್ಞÁನಿಕ ವಿಚಾರ, ಕಾವ್ಯಾವಲೋಕನ, ಅಂಗಸಂಸ್ಥೆಗಳಾದ ಕರ್ನಾಟಕ ಸಂಘಗಳ ಕಾರ್ಯಕಲಾಪಗಳ ಸುದ್ದಿಗಳಿರುತ್ತವೆ. ಮಾಸ್ತಿಯವರು ಕನ್ನಡ ನುಡಿ ಪರಿಷತ್ತಿನ ತಕ್ಕುದೊಂದು ಮುಖವಾಗಬೇಕೆಂದೂ ಬಿ.ಎಂ.ಶ್ರೀಯವರು ಅದು ಕರ್ನಾಟಕದ ಗೆಸೆಟಿಯರ್ ಆಗಬೇಕೆಂದೂ ಆಶಿಸಿದ್ದರು. ಅದರಂತೆ ಕನ್ನಡ ನುಡಿಯ ಅನೇಕ ಸಂಪುಟಗಳು ಹೊರಬಂದಿವೆ. ದ.ಕೃ. ಭಾರದ್ವಾಜ, ಸ.ಸ.ಮಾಳವಾಡ, ಬಿ.ಶಿವಮೂರ್ತಿಶಾಸ್ತ್ರೀ, ವೆಂಕಟೇಶ ಸಾಂಗಲಿ ಮೊದಲಾದವರು ಕೀರ್ತಿವಂತ ಕನ್ನಡಿಗರು, ಕನ್ನಡನುಡಿಯ ಭಕ್ತರು ಮುಂತಾದ ಶೀರ್ಷಿಕೆಗಳ ಅಡಿಯಲ್ಲಿ ಚಿತ್ರಿಸಿರುವ ವ್ಯಕ್ತಿಚಿತ್ರಗಳು, ಶಿಲಾಶಾಸನ, ಕನ್ನಡಿಗರ ಜೀವನ ಕುರಿತ ತಿ.ತಾ. ಶರ್ಮರ ಲೇಖನಗಳು, ಅ.ನ.ಕೃ. ಬರೆದ ಸಂಗೀತಗಾರರ ಮತ್ತು ಚಿತ್ರಕಲಾವಿದರ ನೆನಪುಗಳು, ರೋರಿಕ್ ಸಂದರ್ಶನಾರ್ಥ ಎಂಬ ಲೇಖನ ಮಾಲಿಕೆ, ನನ್ನ ಜೀವನ ದರ್ಶನ ಎಂಬ ಶೀರ್ಷಿಕೆಯಲ್ಲಿ ಜಿ.ಪಿ.ರಾಜರತ್ನಂ ಹಾಗೂ ಅಡಿಗರ ಲೇಖನಗಳು ವಿಚಾರಪುರ್ಣವಾಗಿವೆ. ಭಾಷಾವಿಹಾರ, ಪದಶುದ್ಧಿ ಎಂಬ ಶಿರೋನಾಮೆಯ ಬರೆಹಗಳಲ್ಲಿ ಡಿ.ಎಲ್.ನರಸಿಂಹಾಚಾರ್, ಪಿ.ಬಿ.ದೇಸಾಯಿ, ಶಂ.ಬಾ.ಜೋಶಿ, ದ.ರಾ.ಬೇಂದ್ರೆ, ಎ.ಕೆ.ಪುಟ್ಟರಾಮು ಮೊದಲಾದವರು ಶಬ್ದಜಿe್ಞÁಸೆ ನಡೆಸಿದ್ದಾರೆ. ಮುದ್ದಣನಿಗೆ ಸಂಬಂದಿsಸಿದಂತೆ 1944ರಲ್ಲಿ ಪ್ರಕಟಗೊಂಡಿರುವ ಎರಡು ಹೇಳಿಕೆಗಳು, 1947ರಲ್ಲಿ ಕನ್ನಡ ಲಿಪಿ ಸುಧಾರಣೆಯ ವಿಷಯವಾಗಿ ಬಿ.ಎಂ.ಶ್ರೀ., ದೇವುಡು, ಕಾಶಿಯ ಜಂಗಮವಾಡಿ ಮಠದ ಶರ್ಮರು ನಡೆಸಿರುವ ಚರ್ಚೆ, ಹುಲ್ಲೂರು ಶ್ರೀನಿವಾಸ
ಜೋಯಿಸರು ಬರೆದಿರುವ ಕನ್ನಡದ ಊರುಗಳು ಎಂಬ ಲೇಖನಗಳೂ ಸೀಬಂiÀÄ್ಯ, ಬಿ.ಆರ್.ಶೇಷಾಚಾರ್ ಮೊದಲಾದವರ ವಿಜ್ಞಾನ ಲೇಖನಗಳೂ ಕನ್ನಡ ನುಡಿಯಲ್ಲಿ ಪ್ರಕಟವಾಗಿ ಜನಪ್ರಿಯತೆ ಗಳಿಸಿವೆ.
ಕನ್ನಡ ನುಡಿಯ ವಿಶೇಷ ಸಂಚಿಕೆಗಳಲ್ಲಿ 1957ರ ಸನ್ಮಾನೋತ್ಸವ ಸಂಚಿಕೆ ಮತ್ತು 1963ರಲ್ಲಿ ಪ್ರಕಟವಾದ ಒಂದು ನೂರು ಪುಟಗಳ ಬೆಳ್ಳಿ ಸಂಚಿಕೆ, ರವೀಂದ್ರ ಸಂಚಿಕೆ, ಕುವೆಂಪು ಲೇಖನಮಾಲೆ, ಎಂ.ಆರ್.ಶ್ರೀ ಬಾಷ್ಪಾಂಜಲಿ ಸಂಚಿಕೆ (1953), ತೀ.ನಂ.ಶ್ರೀ. ಸ್ಮರಣ ಸಂಚಿಕೆ (1966), ಡಿ.ಎಲ್.ಎನ್.ಸ್ಮರಣ ಸಂಚಿಕೆ (1971), ತಿ.ತಾ.ಶರ್ಮ ಮತ್ತು ಸಿದ್ಧವನಹಳ್ಳಿ ಕೃಷ್ಣಶರ್ಮರ ಸ್ಮರಣ ಸಂಚಿಕೆ (1974)- ಇವು ಮುಖ್ಯವಾದವು. ಸಾಹಿತ್ಯ ಸಮ್ಮೇಳನಗಳ ನೆನಪಿಗೆ ಪ್ರಕಟವಾಗುವ ಕನ್ನಡ ನುಡಿಯ ವಿಶೇಷಾಂಕಗಳು ವೈಶಿಷ್ಟ್ಯ ಪುರ್ಣವಾಗಿವೆ. (ಎ.ಆರ್.ಎಂ.)