ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡ ಚಂಪುಸಾಹಿತ್ಯ
ಕನ್ನಡ ಚಂಪೂಸಾಹಿತ್ಯ : ಸಂಸ್ಕೃತ ಕನ್ನಡಗಳಲ್ಲಿಯೂ ಇತರ ಕೆಲವು ಭಾರತೀಯ ಭಾಷೆಗಳಲ್ಲಿಯೂ ಚಂಪೂ (ಚಂಪು) ಎಂಬುದು ಪ್ರಾಚೀನವೂ ಪ್ರಸಿದ್ಧವೂ ಆದ ಒಂದು ಸಾಹಿತ್ಯಪ್ರಕಾರ. ಸಾವಿರ ವರ್ಷಗಳಿಗೆ ಮೇಲ್ಪಟ್ಟ ಇತಿಹಾಸ ಇದಕ್ಕಿದೆ. ಆಯಾ ಭಾಷೆಯಲ್ಲಿ ಬಹುಕಾಲ ನಿಲ್ಲುವ ಉತ್ಕೃಷ್ಟವಾದ ಸಾಹಿತ್ಯ ಈ ಪ್ರಕಾರದಲ್ಲಿ ನಿರ್ಮಿತವಾಗಿದೆ. ಕನ್ನಡದ ಮಟ್ಟಿಗೆ ಹೇಳುವುದಾದರೆ, ಮೊದಮೊದಲಿನ ಶ್ರೇಷ್ಠಕವಿಗಳು ಈ ಪ್ರಕಾರವನ್ನು ಯಶಸ್ವಿಯಾಗಿ ಬಳಸಿಕೊಂಡು ಉತ್ತಮ ಸಾಹಿತ್ಯವನ್ನು ನಿರ್ಮಾಣ ಮಾಡಿದ್ದು, ಮುಂದೆ ಅದು ವಿಶೇಷವಾಗಿ ಪ್ರಬಲಿಸಿ ಕನ್ನಡ ಸಾಹಿತ್ಯದಲ್ಲಿ ಗಣ್ಯವೂ ಸುಸ್ಥಿರವೂ ಆದ ನೆಲೆಯನ್ನು ಗಳಿಸಿ ಕೊಳ್ಳುವಂತಾಯಿತು.
ಚಂಪೂವಿನ ಲಕ್ಷಣವನ್ನು ದಂಡಿಯ (ಸು.650) ಕಾವ್ಯಾದರ್ಶವೆಂಬ ಸಂಸ್ಕೃತ ಭಾಷೆಯ ಲಕ್ಷಣಗ್ರಂಥದಲ್ಲಿ ಮೊದಲು ನಿರೂಪಿಸಿದೆ. ಅನಂತರದಲ್ಲಿ ಹೇಮಚಂದ್ರ (1088-1172), ವಿಶ್ವನಾಥ (14ನೆಯ ಶ.), ವಿದ್ಯಾನಾಥ (14ನೆಯ ಶ.) ಮುಂತಾದವರು ತಮ್ಮ ಅಲಂಕಾರ ಗ್ರಂಥಗಳಲ್ಲಿ ಹೇಳಿದ್ದಾರೆ. ಹಾಗೆಯೇ ಕನ್ನಡದಲ್ಲಿಯೂ ನಾಗವರ್ಮ II, ಉದಯಾದಿತ್ಯ ಇವರ ಅಲಂಕಾರಗ್ರಂಥಗಳಲ್ಲಿ ಆ ವಿಷಯದ ಉಲ್ಲೇಖವಿದೆ. ದಂಡಿ ಚಂಪುವಿನ ಲಕ್ಷಣವನ್ನು ಗದ್ಯಪದ್ಯಮಯೀ ಕಾಚಿಚ್ಚಂಪುರಿತ್ಯಭಿಧೀಯತೇ ಎಂದು ಹೇಳಿದ್ದಾನೆ. ಚಂಪುಪ್ರಧಾನವಾಗಿ ಗದ್ಯಪದ್ಯಮಯಿಯಾದದ್ದು ಎಂಬುದು ಇಲ್ಲಿ ಸ್ಫುರಿಸಿರುವ ಅದರ ಲಕ್ಷಣ, ಹೆಚ್ಚಿನ ವಿವರಗಳಾಗಲಿ ವ್ಯತ್ಯಾಸವಾಗಲಿ ಇಲ್ಲದೆ ಇದೇ ಲಕ್ಷಣವನ್ನು ಈಚಿನವರು ಅನುವಾದ ಮಾಡಿದ್ದಾರೆ. ಚಂಪು ಎಂಬ ಪದದ ಮೂಲ ಅನಿರ್ದಿಷ್ಟವಾದುದು. ಅದರ ನಿಷ್ಟತ್ತಿಯನ್ನು ಬೇರೆ ಬೇರೆ ರೀತಿಯಲ್ಲಿ ವಿದ್ವಾಂಸರು ವಿವರಿಸಿದ್ದಾರೆ. ಈ ಸಾಹಿತ್ಯ ಪ್ರಕಾರ ಸಂಸ್ಕೃತ ಮೂಲವಾದುದು ಎಂದು ಗ್ರಹಿಸುವವರು ಒಂದು ರೀತಿಯಾಗಿಯೂ ಕನ್ನಡ ಮೂಲವಾದುದು ಎಂದು ಗ್ರಹಿಸುವವರು ಇನ್ನೊಂದು ರೀತಿಯಾಗಿಯೂ ಹೇಳುವುದು ಕಾಣುತ್ತದೆ. ಈ ಬಗೆಗೆ ವಿಚಾರಮಾಡುವುದು ಪ್ರಕೃತ ಲೇಖನದ ಉದ್ದೇಶವಲ್ಲ. ಚಂಪು ಮಾತೂ ರೀತಿಯೂ ಕನ್ನಡದ್ದೇ ಎಂದು ಹೇಳುವವರ ವಾದವನ್ನು ಮಾತ್ರ ಸಂಗ್ರಹವಾಗಿ ತಿಳಿಸಿ ಕನ್ನಡ ಚಂಪುಸಾಹಿತ್ಯದ ಪರಿಚಯವನ್ನು ಇಲ್ಲಿ ನಿವೇದಿಸಲಾಗುತ್ತದೆ. ಚಂಪುವಿನ ಎಲ್ಲ ವಿವರಗಳಿಗೆ (ನೋಡಿ- ಚಂಪು).
ಚಂಪುವಿಗೆ ಕನ್ನಡ ಮೂಲವನ್ನು ಹೇಳುವವರ ಅಭಿಪ್ರಾಯ ಹೀಗೆ : ಪ್ರಾಚೀನವಾದ ಸಂಸ್ಕೃತ ವಾಙ್ಮಯದಲ್ಲಿ ಚಂಪು ಸಾಹಿತ್ಯಪ್ರಕಾರ ಅಷ್ಟೇನೂ ಪ್ರಾಚೀನವಾದುದಲ್ಲ. ಈಚೆಗೆ ಕಾಣಿಸಿಕೊಂಡದ್ದು. ಆ ಭಾಷೆಯಲ್ಲಿ ಆ ರೀತಿಯ ಸಾಹಿತ್ಯ ಕಣ್ಣಿಗೆ ಬೀಳುವುದು ಪ್ರ.ಶ.10ನೆಯ ಶತಮಾನದಿಂದ. ತ್ರಿವಿಕ್ರಮಭಟ್ಟನ (ಪ್ರ.ಶ. ಸು.915) ದಮಯಂತೀ ಕಥೆ ಅಥವಾ ನಳಚಂಪು ಮತ್ತು ಸೋಮದೇವನ ಯಶಸ್ತಿಲಕ ಚಂಪು (ಪ್ರ.ಶ.959)-ಇವು ಈಗ ತಿಳಿದಮಟ್ಟಿಗೆ ಆ ಭಾಷೆಯಲ್ಲಿಯ ಆದ್ಯ ಚಂಪು ಕೃತಿಗಳು. ಇವು ರಚನೆಯಾದದ್ದು ಕರ್ನಾಟಕದಲ್ಲಿ ಹಾಗೂ ಕನ್ನಡ ರಾಜರ ಆಶ್ರಯ ಪಡೆದ ಕವಿಗಳಿಂದ. ಇವರು ಆ ವೇಳೆಗಾಗಲೇ ಕನ್ನಡ ನಾಡಿನ ಕನ್ನಡ ಜೈನಕವಿಗಳು ಕಲ್ಪಿಸಿ ರೂಢಿಸಿದ್ದ ಚಂಪು ಮಾರ್ಗವನ್ನು ಅನುಸರಿಸಿದರೆಂದು ತೋರುತ್ತದೆ. ಕನ್ನಡದಲ್ಲಿ ಚಂಪುಗ್ರಂಥಗಳು 8-9ನೆಯ ಶತಮಾನಗಳಲ್ಲಿಯೇ ಕಾಣಿಸಿಕೊಂಡಿದ್ದವೆಂದು ತಿಳಿಯುವುದಕ್ಕೆ ಆಧಾರಗಳಿವೆ. ಆದರೆ ಪ್ರ.ಶ.ಸು. 7ನೆಯ ಶತಮಾನದ ದಂಡಿ ಚಂಪುವಿನ ಲಕ್ಷಣವನ್ನು ಹೇಳಿದ್ದಾನಲ್ಲದೆ, ಆತನ ಕಾಲದಲ್ಲಿಯೂ ಅದಕ್ಕೆ ಮೊದಲಲ್ಲಿಯೂ ಸಂಸ್ಕೃತ ಚಂಪುಗ್ರಂಥಗಳು ಇಲ್ಲದೆ ಹೀಗೆ ಹೇಳಿರುವುದು ಸಾಧ್ಯವೇ-ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ. ದಂಡಿಗೆ ಪರಿಚಿತವಾಗಿದ್ದ ಚಂಪುಸಾಹಿತ್ಯ ಪುರ್ತಿಯಾಗಿ ನಷ್ಟವಾಗಿದೆ ಎಂಬುದು ತೃಪ್ತಿಕರವಾದ ಉತ್ತರವಲ್ಲ. ಆತ ದಾಕ್ಷಿಣಾತ್ಯನಾದುದರಿಂದ, ಆ ಕಾಲಕ್ಕೆ ದಕ್ಷಿಣದಲ್ಲಿ ಪ್ರಚಲಿತವಾಗಿದ್ದ ಕನ್ನಡ, ತಮಿಳು ಭಾಷೆಗಳಲ್ಲಿಯ ಚಂಪುಕೃತಿಗಳನ್ನು ನೋಡಿದ್ದಿರಬಹುದು. ಒಂದು ಪಕ್ಷ ಚಂಪು ಮೂಲತಃ ಸಂಸ್ಕೃತದ್ದೆಂದು ತೀಳಿದರೂ ಅದು ಕನ್ನಡ ಸಾಹಿತ್ಯದಲ್ಲಿ ಪಡೆದ ರೂಪ ಸಂಸ್ಕೃತದ ಅನುಕರಣೆಯ ಫಲವಲ್ಲ, ಅದಕ್ಕೆ ಅದರದೇ ಆದ ಒಂದು ವೈಶಿಷ್ಟ್ಯವಿದೆ. -ಇದಿಷ್ಟೂ ಒಟ್ಟಿನಲ್ಲಿ ಒಬ್ಬ ವಿದ್ವಾಂಸರ ವಿಚಾರಸರಣಿ.
ಇನ್ನೊಬ್ಬ ವಿದ್ವಾಂಸರು ಹೀಗೆಯೇ, ಸಂಸ್ಕೃತ ಸಾಹಿತ್ಯದಲ್ಲಿ ಚಂಪುಸಾಹಿತ್ಯದ ಅರ್ವಾಚೀನತೆ, ಸಂಸ್ಕೃತದ ಪ್ರಾಚೀನ ಲಾಕ್ಷಣಿಕರಲ್ಲಿ ದಾಕ್ಷಿಣಾತ್ಯನಾದ ದಂಡಿಯೊಬ್ಬನೇ ಅದನ್ನು ಹೆಸರಿಸಿರತಕ್ಕವನು ಎಂಬ ಸಾಕ್ಷ್ಯ, ಚಂಪು ಶಬ್ದಕ್ಕೆ ಸಂಸ್ಕೃತದಲ್ಲಿ ಸ್ವರಸವಾದ ರೂಪನಿಷ್ಟತ್ತಿಯನ್ನು ಹೇಳುವುದರ ಅಶಕ್ಯತೆ, ತಮಿಳು ಭಾಷೆಯ ಪ್ರಾಚೀನ ಕಾವ್ಯವಾದ ಶಿಲಪ್ಪದಿಕಾರದ ಅನೇಕ ಸರ್ಗಗಳು ಗದ್ಯಪದ್ಯಾತ್ಮಕಗಳಾಗಿರುವುದು-ಇವನ್ನು ಗಮನಿಸಿ ಚಂಪುಕಾವ್ಯರೂಪ ಭಾರತೀಯ ಸಾಹಿತ್ಯಕ್ಕೆ ದಕ್ಷಿಣ ಭಾರತದ ಕೊಡುಗೆಯಾಗಿರಬೇಕೆಂದು ಭಾವಿಸಬಹುದು-ಎಂದಿದ್ದಾರೆ. ಅಲ್ಲದೆ ಕನ್ನಡದ ಮಟ್ಟಿಗೆ ಹೇಳುವುದಾದರೆ, ಹಿಂದಿನಿಂದ ಪ್ರಚುರವಾಗಿದ್ದ ಚತ್ತಾಣದಲ್ಲಿ ಗದ್ಯಖಂಡಗಳು (ವಚನಗಳು) ನಡುನಡುವೆ ಸೇರಿ ಚಂಪು ತಲೆಯೆತ್ತಿರಬಹುದು-ಎಂಬುದಾಗಿ ಕನ್ನಡದಲ್ಲಿ ಚಂಪುವಿನ ಉಗಮವನ್ನು ಗುರುತಿಸಲು ಯತ್ನಿಸಿದ್ದಾರೆ, (ಚೆತ್ತಾಣ ಎಂಬುದರ ಸ್ವರೂಪವನ್ನು ಅವರು ಹೀಗೆ ಹೇಳಿದ್ದಾರೆ : ಕವಿರಾಜ ಮಾರ್ಗದಲ್ಲಿ ಉಕ್ತವಾದ, ಅದಕ್ಕೆ ಹಿಂದಿನ ಕಾಲದಿಂದಲೂ ಕನ್ನಡದಲ್ಲಿ ಪ್ರಚಲಿತವಾಗಿದ್ದ ಕಾವ್ಯರೂಪ. ಇದು ಬಾಜನೆ ಗಬ್ಬ, ವಾಚಿಸತಕ್ಕದ್ದು, ಇದರಲ್ಲಿ ಕಂದ, ಹಲವು ಬಗೆಯ ಸಂಸ್ಕೃತ ವೃತ್ತಗಳು, ದೇಶೀಯ ಪದ್ಯಜಾತಿಗಳು-ಇವೆಲ್ಲ ಬರುತ್ತವೆ ; ಪದ್ದಳಿಯೂ ಬರಬಹುದು, ಇದು ಅಖಿಲ ವರ್ಣನೆಗಳಿಂದ ಕೂಡಿದ ಕಾವ್ಯ; ಆದ ಕಾರಣವೇ ಬಹುಶಃ ದೀರ್ಘವಾಗಿರುತ್ತದೆ.) ಅಂತೂ ಚಂಪುವಿನ ಉಗಮದ ವಿಷಯದಲ್ಲಿ ಭಿನ್ನಮತವಿರುವುದೂ ಅನಿರ್ದಿಷ್ಟತೆಯಿರುವುದೂ ಇದರಿಂದ ಸ್ಪಷ್ಟವಾಗಿ ತೋರುತ್ತದೆ. ಸಂಶೋಧನೆಯಿಂದ ಹೊಸ ಸಂಗತಿಗಳು ಬೆಳಕಿಗೆ ಬಂದ ಹೊರತು ಈ ವಿಷಯದಲ್ಲಿ ಯಾವ ನಿರ್ಣಯಕ್ಕೂ ಬರುವುದು ಸಾಧ್ಯವಿಲ್ಲ. ಕನ್ನಡದಲ್ಲಿ ಚಂಪುಸಾಹಿತ್ಯವನ್ನು ಗಮನಿಸುವ ಮೊದಲು ಕನ್ನಡ ಚಂಪುವಿನ ಸಾಮಾನ್ಯ ಚೌಕಟ್ಟನ್ನು ಸ್ವಲ್ಪ ಗಮನಿಸಬೇಕು. ಕನ್ನಡ ಚಂಪುವನ್ನು ರೂಢಿಯಲ್ಲಿ ವಸ್ತುಕ, ಓದುಗಬ್ಬ, ಮಾರ್ಗ ಕವಿತ್ವ ಎಂದು ಹೇಳುವುದುಂಟು. ಅದರಲ್ಲಿ ಪ್ರತಿಪಾದಿತವಾಗುವ ವಸ್ತು ಲೌಕಿಕ, ಧಾರ್ಮಿಕ ಅಥವಾ ಐತಿಹಾಸಿಕವಾಗಿರುತ್ತದೆ. ರಾಮಾಯಣ ಭಾರತಗಳು, ವೈದಿಕ ಜೈನಪುರಾಣಗಳು, ಕಲ್ಪಿತ ಕಥಾವಸ್ತುವುಳ್ಳ ಕಾವ್ಯಗಳು, ಐತಿಹಾಸಿಕ ವೃತ್ತಾಂತಗಳು-ಇವು ವಸ್ತುವಿಗೆ ಪ್ರಮುಖವಾದ ಆಕರಗಳು. ಪ್ರಾಚೀನ ಸಂಸ್ಕೃತ ಕಾವ್ಯಪರಂಪರೆಯಲ್ಲಿ ಕಾಣುವಂತೆ, ಉದಾತ್ತ ನಾಯಕನ ಮಹಿಮಾತಿಶಯ ನಿರೂಪಣೆ, ನಾಯಕ ಪ್ರತಿನಾಯಕ ಸಂಘರ್ಷ, ಇಷ್ಟದೈವ, ದೈವಭಕ್ತ, ಧಾರ್ಮಿಕ ಕ್ಷೇತ್ರಾದಿಗಳ ಉತ್ಕರ್ಷ ಸಾಧನೆ ಮತ್ತು ಮಹಿಮೆ ಮುಂತಾದವುಗಳ ಕಥನ, ಮತಪ್ರಸಾರ, ತತ್ತ್ವಪ್ರಸಾರ, ಮನೋರಂಜನೆ-ಇವು ಇಲ್ಲಿಯೂ ಕಾಣುತ್ತವೆ. ಸಂಸ್ಕೃತ ಸಾಹಿತ್ಯದ ಪ್ರೌಢಕವಿಗಳ ರೀತಿಯಲ್ಲಿ ಇರುವಂತೆಯೇ ವಿವಿಧ ಸಾಂಪ್ರದಾಯಿಕ ವರ್ಣನೆಗಳ ಪ್ರಾಚುರ್ಯ, ಅಲಂಕಾರಪ್ರಿಯತೆ, ವಿಭಿನ್ನ ರಸದೃಷ್ಟಿ-ಇವು ಎದ್ದುಕಾಣುವಂತಿರುತ್ತವೆ. ಸಾಮಾನ್ಯವಾಗಿ ಕಥೆಗಿಂತಲೂ ಕವಿ ಸಮಯಕ್ಕೆ ಹೆಚ್ಚು ಅವಕಾಶ ದೊರೆತಿರುತ್ತದೆ. ದೇಸೀಯವಾದ ಮಾತುಗಾರಿಕೆ, ಮತ್ತು ಸಂಸ್ಕೃತಭೂಯಿಷ್ಠವಾದ ಆಲಂಕಾರಿಕ ಪದರಚನೆ-ಇವುಗಳಲ್ಲಿ ಒಮ್ಮೆ ಅದು ಒಮ್ಮೆ ಇದು ಮೇಲುಗೈಯಾಗಿರುತ್ತದೆ. ವಿಶೇಷವಾಗಿ ಎರಡನೆಯದರ ಪ್ರಾಬಲ್ಯವೇ ಹೆಚ್ಚು. ಒಮ್ಮೊಮ್ಮೆ ಆಯೆರಡರ ಹಿತಮಿತವಾದ ಮಿಶ್ರಣವಿರುತ್ತದೆ.
ಕನ್ನಡ ಚಂಪುವಿನಲ್ಲಿ, ಲಕ್ಷಣಾನುಸಾರವಾಗಿ, ಗದ್ಯಪದ್ಯಗಳ ಸಮಪ್ರಾಚುರ್ಯ ಸಾಮಾನ್ಯವಾಗಿರುತ್ತದೆ. ಆದರೆ ಪದ್ಯ ಗದ್ಯಕ್ಕಿಂತ ಹೆಚ್ಚಾಗಿ ಬರುವುದೇ ಸಾಮಾನ್ಯ ಗದ್ಯಪದ್ಯಗಳು. ಇಷ್ಟೇ ಪ್ರಮಾಣದಲ್ಲಿ ಇಂಥದೇ ವಿಷಯಕ್ಕಾಗಿ, ಹೀಗೆಯೇ ಯೋಜನೆಗೊಂಡಿರಬೇಕೆಂಬ ನಿಶ್ಚಿತವಾದ ನಿಯಮವೇನಿಲ್ಲ. ಆದರೆ ವರ್ಣನೆಗಳು, ಇತಿ ವೃತ್ತಾತ್ಮಕ ವಿವರಣೆಗಳು ಸಂಬಂಧ ಸೂಚನೆಗಳು ಗದ್ಯದಲ್ಲಿರುವುದುಂಟು. ಕೃತಿ ಸಾಮಾನ್ಯವಾಗಿ ಆಶ್ವಾಸಗಳಾಗಿ ವಿಭಾಗವಾಗಿರುತ್ತದೆ; ಆಶ್ವಾಸ ಸಂಖ್ಯೆ 14 ಅಥವಾ 16 ಇರಬಹುದು; ಮುಂದೆ ಮುಂದೆ ಈ ಸಂಖ್ಯೆಯಲ್ಲಿ ಹೆಚ್ಚುಕಡಿಮೆಗಳಾಗಿವೆ. ಅವುಗಳ ಆದ್ಯಂತಗಳಲ್ಲಿ ಒಂದು ಗೊತ್ತಾದ ರೀತಿಯ ಪದ್ಯಬಂಧ ಮತ್ತು ಗದ್ಯಬಂಧಗಳಿರುತ್ತವೆ. ಕೃತಿಯ ಉಪಕ್ರಮದಲ್ಲಿ ಇಷ್ಟದೇವತಾಸ್ತುತಿ, ಕೃತಿ ಕರ್ತೃವಿನ, ಪೋಷಕನ ವಿಚಾರ-ಇತ್ಯಾದಿ ಸಾಂಪ್ರದಾಯಿಕ ಸರಣಿಯ ವಿವರಗಳೂ ಉಪಸಂಹಾರದಲ್ಲಿ ಫಲಶ್ರುತಿಯೂ ಬರುತ್ತವೆ. ಛಂದಸ್ಸಿನ ದೃಷ್ಟಿಯಿಂದ, ಕಂದಪದ್ಯಗಳೂ ಅವಕ್ಕೆ ಸ್ವಲ್ಪ ಕಡಿಮೆಯಾಗಿ ಖ್ಯಾತ ಕರ್ಣಾಟಕಗಳೆಂದು ರೂಢಿಯಾಗಿರುವ ಆರು ವರ್ಣವೃತ್ತಗಳೂ ಹೆಚ್ಚು ಸಂಖ್ಯೆಯಲ್ಲಿರುತ್ತವೆ. ಇವಲ್ಲದೆ ವಿರಳವಾಗಿ ತರಳ, ಮಲ್ಲಿಕಾಮಾಲೆ ಮುಂತಾದ ಇನ್ನೂ ಕೆಲವು ವರ್ಣವೃತ್ತಗಳೂ ಪ್ರಾಕೃತ ಪ್ರಭಾವದ ರಗಳೆಯ ಪ್ರಭೇದಗಳೂ ದೇಶೀಯಗಳಾದ ಅಕ್ಕರ ತ್ರಿಪದಿ ಮುಂತಾದವೂ ಕೃತಿಯ ಮೈಯಲ್ಲಿ ಅಲ್ಲಲ್ಲಿ ಸೇರಿಕೊಂಡಿರುತ್ತವೆ. ಒಟ್ಟಿನಲ್ಲಿ ಕಂದವೃತ್ತಗಳು ವಿರಳವಾಗಿ ಇತರ ಪದ್ಯಜಾತಿಗಳೂ ನಡುನಡುವೆ ಗದ್ಯವೂ ಹಾಸುಹೊಕ್ಕಾಗಿ ಸೇರಿಕೊಂಡು ಕೃತಿಯ ರೂಪದಲ್ಲಿ ನಾದಗಳಲ್ಲಿ ವೈವಿಧ್ಯ ಸಾಧಿತವಾಗಿರುತ್ತದೆ. ಕೃತಿವಸ್ತು ಇವುಗಳಲ್ಲಿ ಅನುಸ್ಯೂತವಾಗಿ ಹರಿದುಕೊಂಡು ಹೋಗುತ್ತದೆ. ಒಮ್ಮೊಮ್ಮೆ, ಒಂದೇ ಪದ್ಯದಲ್ಲಿ ಅಥವಾ ಗದ್ಯಭಾಗದಲ್ಲಿ ಮುಗಿಯದ ಒಂದು ಸಂಗತಿಯೋ ಭಾವವೋ ಮುಂದಿನ ಪದ್ಯಕ್ಕೋ ಗದ್ಯಕ್ಕೋ ಮುಂದುವರಿಯುವುದುಂಟು. ಕೃತಿಯ ಛಂದಸ್ಸಿನ ವೈವಿಧ್ಯ ಒಂದೇ ಬಗೆಯ ಛಂದಸ್ಸಿನ ಬಳಕೆಯಿಂದುಂಟಾಗುವ ಗತಾನುಗತಿಕತೆಯನ್ನೂ ನಿಷ್ಠುರ ನಿಯಮ ಬದ್ಧತೆಯನ್ನೂ ನಿವಾರಿಸುವುದಲ್ಲದೆ, ಕವಿಗೆ ಹೆಚ್ಚಿನ ರಚನಾಸ್ವಾತಂತ್ರ್ಯವೂ ಸೌಲಭ್ಯವೂ ಇದರಿಂದ ದೊರೆಯುವಂತಾಗಿದೆ. ರಚನೆಯ ಸೌಕರ್ಯಕ್ಕೆ ಹಾಗೂ ರಸಭಾವಗಳ ವೈವಿಧ್ಯಕ್ಕೆ ತಕ್ಕಂತೆ ಹೀಗೆ ವಿವಿಧ ಪದ್ಯಜಾತಿಗಳನ್ನೂ ಗದ್ಯವನ್ನೂ ಬಳಸುವುದು ಕಾವ್ಯಪುಷ್ಟಿಗೆ ಅನುಕೂಲವೇ ಆಗಿದೆ. ಕನ್ನಡದಲ್ಲಿ ಚಂಪು ಸಾಹಿತ್ಯಪದ್ಧತಿಗೆ ಮೊದಲು, ಚತ್ತಾಣ ಮತ್ತು ಬೆದಂಡೆ ಎಂಬ ಪ್ರಕಾರದ ಕಾವ್ಯಗಳು ಪ್ರಸಿದ್ಧವಾಗಿದ್ದವೆಂದು ಕವಿರಾಜಮಾರ್ಗದ ಉಲ್ಲೇಖದಿಂದ ತಿಳಿಯುತ್ತದೆ. ಆ ಗ್ರಂಥದಲ್ಲಿ ಉಕ್ತರಾದ ಪದ್ಯಕವಿಗಳು ಕೆಲವರಾದರೂ ಅಂಥ ಕಾವ್ಯಗಳನ್ನು ರಚಿಸಿರಬೇಕೆಂದು ತಿಳಿಯುವುದಕ್ಕೆ ಅಲ್ಲಿಯೇ ಅವಕಾಶವಿದೆ. ಆ ಕಾವ್ಯ ಪ್ರಕಾರಗಳ ಸ್ವರೂಪವನ್ನು ಅಲ್ಲಿ ವಿವರಿಸಿದೆ. ಆ ಲಕ್ಷಣಗ್ರಂಥ ಮುಖ್ಯವಾಗಿ ದಂಡಿಯ ಕಾವ್ಯಾದರ್ಶವನ್ನು ಅನುಸರಿಸಿಯೂ ಚಂಪುವಿನ ಹೆಸರನ್ನೆತ್ತದಿರುವುದುನ್ನು ಗಮನಿಸಿದರೆ, ಆತನಿಗೆ ಪುರ್ವದಲ್ಲಿಯೂ ಆತನ ಕಾಲದಲ್ಲಿಯೂ ಈ ಚತ್ತಾಣ, ಬೆದಂಡೆಗಳ ರೂಪದಲ್ಲಿ ಕೃತಿರಚನೆ ನಡೆಯುತ್ತಿದ್ದಿರಬೇಕೆಂಬ ಭಾವನೆಯುಂಟಾಗುತ್ತದೆ. ಕವಿರಾಜಮಾರ್ಗದ ಕಾಲದಿಂದೀಚೆಗೆ ಚತ್ತಾಣದಲ್ಲಿ ನಡುನಡುವೆ ಗದ್ಯಭಾಗಗಳು ಕೂಡಿ ಚಂಪು ರೀತಿ ಕನ್ನಡ ಸಾಹಿತ್ಯದಲ್ಲಿ ಕಾಣಿಸಿಕೊಂಡಿರಬಹುದು.
ಕನ್ನಡ ಚಂಪುಸಾಹಿತ್ಯಕ್ಕೆ ಉಜ್ಜ್ವಲವೂ ಸುದೀರ್ಘವೂ ಆದ ಇತಿಹಾಸವಿದೆ. ಉಳಿದ ಕಾವ್ಯಪದ್ಧತಿಗಳಿಗಿಂತ ಅದು ಕವಿಜನರಿಗೆ ಹೆಚ್ಚು ಆದರಣೀಯವೂ ವಿದ್ವನ್ಮಾನ್ಯವೂ ಆಗಿದ್ದುದು ಅದರಿಂದ ತಿಳಿಯುತ್ತದೆ. ಚಂಪುಸಾಹಿತ್ಯ ಕನ್ನಡದಲ್ಲಿ ಎಂದಿನಿಂದ ರಚನೆಯಾಗುತ್ತ ಬಂದಿದೆ, ಆರಂಭಕಾಲದ ಚಂಪುಕೃತಿಗಳು ಯಾವುವು ಎಂಬ ವಿಷಯಗಳು ನಮಗೆ ತಿಳಿದಿಲ್ಲ. ದೊರೆತವುಗಳಲ್ಲಿ ಪಂಪಕವಿಯ (ಪ್ರ.ಶ. 941) ಆದಿಪುರಾಣ ಮತ್ತು ವಿಕ್ರಮಾರ್ಜುನವಿಜಯಗಳೇ ಅತ್ಯಂತ ಪ್ರಾಚೀನವಾದವು. ಅವುಗಳ ಚೌಕಟ್ಟನ್ನು ಪರಿಶೀಲಿಸಿದರೆ ಅವು ಆ ಪದ್ಧತಿಯ ಪರಿಣತ ರಚನೆಗಳೇ ಆಗಿರುವಂತೆ ತೋರುತ್ತವೆ. ಶ್ರೇಷ್ಠ ಕವಿಯಾದ ಪಂಪ ಚಂಪು ರೀತಿಯನ್ನು ಕೌಶಲದಿಂದಲೂ ಸಾಮರ್ಥ್ಯದಿಂದಲೂ ನಿರ್ವಹಿಸಿದ್ದಾನೆ. ಆ ಪದ್ಧತಿ ಆತನಿಗೆ ಸ್ವಲ್ಪ ಹಿಂದಿನಿಂದಲೂ ಬೆಳೆದುಕೊಂಡು ಬಂದಿದ್ದು ಆ ಸಿದ್ಧರೂಪಕ್ಕೆ ಬಂದಿರುವುದು ಸಾಧ್ಯ. ಪಂಪ ಪುರ್ವಕಾಲದ ಕವಿ ಒಂದನೆಯ ಗುಣವರ್ಮ (ಪ್ರ.ಶ. ಸು. 900) ಬರೆದಿದ್ದಂತೆ ತಿಳಿದಿರುವ ಎರಡು ಕೃತಿಗಳಲ್ಲಿ ಶೂದ್ರಕ ಎಂಬುದು ಒಂದು ಚಂಪು ಕಾವ್ಯವಾಗಿರಬೇಕು; ಆ ಕಾವ್ಯದ ಕೆಲವು ಪದ್ಯಗಳ ಜೊತೆಗೆ ಒಂದು ಗದ್ಯಭಾಗವೂ ಅಭಿನವವಾದಿ ವಿದ್ಯಾನಂದನ ಕಾವ್ಯಸಾರದಲ್ಲಿ ದೊರೆಯುತ್ತಿರುವುದು ಅದಕ್ಕೆ ಸಾಕ್ಷಿ. ಪಂಪ, ರನ್ನ ಮೊದಲಾದ ಜೈನಕವಿಗಳ ಉತ್ತರಕಾಲೀನ ಕಾವ್ಯಸಂಪ್ರದಾಯವನ್ನು ಗಮನಿಸಿ, ಗುಣವರ್ಮನ ಲೌಕಿಕ ಕಾವ್ಯ ಚಂಪು ಆಗಿದ್ದಂತೆ, ಆತನ ಧಾರ್ಮಿಕ ಕಾವ್ಯ ಹರಿವಂಶ ಕೂಡ ಚಂಪು ಆಗಿದ್ದಿರಬೇಕು ಎಂದು ತಿಳಿದರೆ ತಪ್ಪಾಗಲಾರದು. ಈಚೆಗೆ 3ನೆಯ ಮಂಗರಸ (1508) ತನ್ನ ನೇಮಿಜಿನೇಶ ಸಂಗತಿಯಲ್ಲಿ ಶ್ರೀವಿಜಯನೆಂಬ ಕವಿ ಚಂದ್ರಪ್ರಭ ಪುರಾಣವನ್ನು ಚಂಪುರೂಪವಾಗಿ ರಚಿಸಿದ್ದಂತೆ ಹೇಳಿದ್ದಾನೆ. ಈ ಸಂಗತಿಯನ್ನು ಗಮನಿಸಿ ಕವಿರಾಜಮಾರ್ಗದಲ್ಲಿ ಉಲ್ಲೇಖವಾಗಿರುವ ಪ್ರಾಚೀನ ಪದ್ಯಕವಿಗಳಲ್ಲಿ ಒಬ್ಬನಾದ ಶ್ರೀವಿಜಯನೇ (ಸು. 850) ಆ ಪುರಾಣಕರ್ತೃ ಎಂಬುದಾಗಿ ಕೆಲವರು ಭಾವಿಸಿದ್ದಾರೆ. ಇದು ನಿಜವಾದರೆ ಕನ್ನಡ ಚಂಪುಸಾಹಿತ್ಯದ ಇತಿಹಾಸವನ್ನು 9ನೆಯ ಶತಮಾನದ ಪುರ್ವ ಅಥವಾ ಮಧ್ಯಭಾಗದಿಂದಲೇ ಮೊದಲು ಮಾಡಲು ಸಾಧ್ಯವಾಗುತ್ತದೆ. ಆದರೆ ಕವಿರಾಜಮಾರ್ಗದಲ್ಲಿ ಉಕ್ತನಾಗಿರುವ ಶ್ರೀವಿಜಯನೇ ಚಂದ್ರಪ್ರಭಪುರಾಣಕರ್ತೃ ಎನ್ನುವುದಕ್ಕೆ ಪ್ರಬಲವಾದ ಆಧಾರಗಳಿಲ್ಲ. ಕವಿರಾಜಮಾರ್ಗದಲ್ಲಿ ಉಕ್ತರಾದ ಇತರ ಕವಿಗಳ ಕೃತಿವಿಚಾರ ನಮಗೆ ಸರಿಯಾಗಿ ಏನೂ ತಿಳಿಯದು. ಇನ್ನು ಅಸಗ ಕವಿ (853) ಕನ್ನಡದಲ್ಲಿ ಕರ್ಣಾಟ ಕುಮಾರಸಂಭವ ಕಾವ್ಯವನ್ನು ರಚಿಸಿದ್ದಂತೆ ನಿಶ್ಚಯವಾಗಿ ತಿಳಿದಿದೆಯಾದರೂ ಅದು ಯಾವ ರೂಪದಲ್ಲಿತ್ತು ಎಂಬುದನ್ನು ತಿಳಿಯಲು ನಮಗೆ ಆ ಗ್ರಂಥ ದೊರೆತಿಲ್ಲ. ಚಂಪು ಆಗಿದ್ದಿರುವುದು ಅಸಂಭವವೇನಲ್ಲ.
ಅಂತೂ ಕನ್ನಡದಲ್ಲಿ ಚಂಪುವಿನ ಇತಿಹಾಸ, ಈಗ ತಿಳಿದಮಟ್ಟಿಗೆ, ಒಂದನೆಯ ಗುಣವರ್ಮನಿಂದ (ಪ್ರ.ಶ. ಸು. 900) ಆರಂಭವಾದಂತೆ ಇಟ್ಟುಕೊಳ್ಳುವುದು ಸೂಕ್ತ. ಸು. 10ನೆಯ ಶತಮಾನದಿಂದ 12ನೆಯ ಶತಮಾನದ ಮಧ್ಯಭಾಗದವರೆಗೆ ಕನ್ನಡದಲ್ಲಿ ಚಂಪುಸಾಹಿತ್ಯ ವಿಶೇಷವಾಗಿ ರಚನೆಯಾಗಿದೆ. ಈ ಕಾಲವನ್ನು ಚಂಪುಯುಗ ಎನ್ನುವುದುಂಟು. 10ನೆಯ ಶತಮಾನವಂತೂ ಆ ಕಾಲದ ಉತ್ಕೃಷ್ಟ ಚಂಪು ಕಾವ್ಯಗಳ ರಚನೆಯಿಂದಾಗಿ ಕನ್ನಡ ಸಾಹಿತ್ಯದ ಸ್ವರ್ಣಯುಗವೆಂದು ಖ್ಯಾತವಾಗಿದೆ. ಈ ಅವಧಿಯ (10-12 ಶ.) ಚಂಪು ಸಾಹಿತ್ಯದ ಒಂದು ಸಾಮಾನ್ಯ ಸಮೀಕ್ಷೆಯನ್ನು ಈಗ ನೋಡಬಹುದು.
ಚಂಪು ಸಾಹಿತ್ಯಕ್ಕೆ ಭದ್ರವಾದ ನೆಲೆಗಟ್ಟು ಹಾಕಿದವ ಪಂಪಕವಿ. ಆತನ ಎರಡು ಕೃತಿಗಳು ಆದಿಪುರಾಣ ಮತ್ತು ವಿಕ್ರಮಾರ್ಜುನವಿಜಯ. ಅವುಗಳಲ್ಲಿ ಚಂಪುಮಾರ್ಗದ ಸಿದ್ಧರೂಪ ಕಣ್ಣಿಗೆ ಕಟ್ಟಿ ನಿಲ್ಲುತ್ತದೆ; ಅದರ ಗಾಂಭೀರ್ಯ, ಸೊಗಸು ಸೌಲಭ್ಯಗಳು ಮನವರಿಕೆಯಾಗುತ್ತವೆ. ವಸ್ತು ಮತ್ತು ರೀತಿ ಎರಡು ದೃಷ್ಟಿಗಳಿಂದಲೂ ಆತನ ಚಂಪು ಕಾವ್ಯಗಳು ಉತ್ತರಕಾಲೀನ ಚಂಪು ಕವಿಗಳಿಗೆ ಅನುಕರಣೀಯವಾದ ಆದರ್ಶವಾಗಿಯೂ ಮಾದರಿಯಾಗಿಯೂ ಪರಿಣಮಿಸಿದುವು. ಪಂಪನನ್ನು ಗೌರವದಿಂದ ನೆನೆಯುವ, ಆತನ ವಸ್ತುವನ್ನೂ ಭಾವವನ್ನೂ ಉಕ್ತಿಯನ್ನೂ ನಿರೂಪಣ ವಿಧಾನವನ್ನೂ ಕೊಳ್ಳುವ, ಕವಿಗಳ ಚರ್ಯೆಯನ್ನು ಪರಿಶೀಲಿಸಿದರೆ ಈ ವಿಷಯ ಚೆನ್ನಾಗಿ ಮನದಟ್ಟಾಗುತ್ತದೆ. ಮುಂದಿನ ಕವಿಗಳು ಅನುಸರಿಸುವ ಚಂಪುವಿನ ಚೌಕಟ್ಟು ಒಟ್ಟಿನಲ್ಲಿ ಪಂಪನ ಚಂಪುವಿನ ಚೌಕಟ್ಟನ್ನೇ ಹೋಲುತ್ತದೆ. ಕವಿಯ ದೃಷ್ಟಿವಿಶೇಷಕ್ಕೆ ಅನುಸಾರವಾಗಿ, ಕಾಲಧರ್ಮಕ್ಕೆ ಅನುಸಾರವಾಗಿ ಆಗಾಗ ಕೆಲವು ವೈಲಕ್ಷಣ್ಯಗಳು ಹೊಸದಾಗಿ ತೋರಿರುವುದೂ ಉಂಟು. ಪಂಪನ ಆದಿಪುರಾಣ ಆದಿತೀರ್ಥಂಕರನ ಚರಿತೆ; ವಿಕ್ರಮಾರ್ಜುನವಿಜಯ (ಪಂಪಭಾರತ) ಮಹಾಭಾರತದ ಕಥೆಯನ್ನು ಒಳಗೊಂಡದ್ದು. ಪೊನ್ನನ (ಪ್ರ.ಶ. ಸು. 950) ಶಾಂತಿಪುರಾಣ 16ನೆಯ ತೀರ್ಥಂಕರನಾದ ಶಾಂತಿನಾಥನ ಚರಿತೆ. ಆತನ ಅನುಪಲಬ್ಧವಾದ ಭುವನೈಕರಾಮಾಭ್ಯುದಯ ಪ್ರಾಯಃ ರಾಮಾಯಣ ಕಥಾವಸ್ತುವನ್ನುಳ್ಳ ಚಂಪು. 1ನೆಯ ನಾಗವರ್ಮನ (ಸು. 990) ಕರ್ಣಾಟಕ ಕಾದಂಬರಿ ಕಲ್ಪಿತ ಕಥಾವಸ್ತುವನ್ನುಳ್ಳ ಬಾಣನ ಕಾದಂಬರಿಯ ಚಂಪು ರೂಪ. ರನ್ನನ (ಪ್ರ.ಶ. 993) ಅಜಿತಪುರಾಣ 2ನೆಯ ತೀರ್ಥಂಕರನಾದ ಅಜಿತನಾಥನ ಚರಿತೆ; ಸಾಹಸಭೀಮವಿಜಯ (ಗದಾಯುದ್ಧ) ಗದಾಸೌಪ್ತಿಕ ಪರ್ವಗಳ ಭಾರತದ ಕಥೆ; ಪಂಪಭಾರತದ 13-14ನೆಯ ಆಶ್ವಾಸಗಳಿಂದ ಪ್ರಭಾವಿತವಾದ್ದು. ದುರ್ಗಸಿಂಹನ (ಪ್ರ.ಶ. 1031) ಪಂಚತಂತ್ರ ವಸುಭಾಗಭಟ್ಟನ ಪಂಚತಂತ್ರವನ್ನು ಅನುಸರಿಸಿದ ನೀತಿಕಾವ್ಯ. ಶ್ರೀಧರಾಚಾರ್ಯನ (ಪ್ರ.ಶ. 1049) ಅನುಪಲಬ್ಧವಾದ ಚಂದ್ರಪ್ರಭಚರಿತೆ 8ನೆಯ ತೀರ್ಥಂಕರ ಚಂದ್ರಪ್ರಭನ ಚರಿತೆಯನ್ನೊಳಗೊಂಡ ಚಂಪುವಾಗಿರಬೇಕು. ಶಾಂತಿನಾಥನ (ಪ್ರ.ಶ. 1068) ಸುಕುಮಾರ ಚರಿತೆ ಜೈನ ಮಹಾಪುರುಷರಲ್ಲಿ ಉಪಸರ್ಗ ಕೇವಲಿಯೊಬ್ಬನ ಚರಿತೆ. ನಯಸೇನನ (ಪ್ರ.ಶ. 1112) ಧರ್ಮಾಮೃತ ಕಥಾರೂಪವಾಗಿ ಜೈನತತ್ತ್ವಗಳನ್ನು ಪ್ರತಿಪಾದಿಸಿರುವ ಕೃತಿ. ನಾಗಚಂದ್ರನ (ಪ್ರ.ಶ. ಸು. 1140) ಮಲ್ಲಿನಾಥಪುರಾಣ 19ನೆಯ ತೀರ್ಥಂಕರನಾದ ಮಲ್ಲಿನಾಥನ ಚರಿತೆ ; ರಾಮಚಂದ್ರಚರಿತಪುರಾಣ (ಪಂಪರಾಮಾಯಣ) ವಿಮಲಸೂರಿ-ರವಿಷೇಣರ ಸಂಪ್ರದಾಯದ ಜೈನರಾಮಾಯಣ. ಕರ್ಣಪಾರ್ಯನ (ಪ್ರ.ಶ. ಸು. 1160-70) ನೇಮಿನಾಥಪುರಾಣ 22ನೆಯ ತೀರ್ಥಂಕರನಾದ ನೇಮಿನಾಥನ ಚರಿತೆ. ನೇಮಿಚಂದ್ರನ (ಪ್ರ.ಶ. ಸು. 1180) ನೇಮಿನಾಥಪುರಾಣ (ಅರ್ಧನೇಮಿಪುರಾಣ) ಅದೇ ವಸ್ತುವನ್ನುಳ್ಳದ್ದು. ಆತನ ಲೀಲಾವತಿ ಕಲ್ಪಿತಕಥಾಕಾವ್ಯ. ರುದ್ರಭಟ್ಟನ (ಪ್ರ.ಶ.ಸು. 1185) ಜಗನ್ನಾಥ ವಿಜಯ ಮುಖ್ಯವಾಗಿ ವಿಷ್ಣುಪುರಾಣದ ಆಧಾರದ ಮೇಲೆ ರಚಿತವಾಗಿರುವ ಕೃಷ್ಣಕಥೆ. ಅಗ್ಗಳನ (ಪ್ರ.ಶ. ಸು. 1189) ಚಂದ್ರಪ್ರಭಪುರಾಣ ಆ ತೀರ್ಥಂಕರನ ಕಥೆ. ಆಚಣ್ಣನ (ಪ್ರ.ಶ. 1189-1205) ವರ್ಧಮಾನಪುರಾಣ 24ನೆಯ ತೀರ್ಥಂಕರನಾದ ವರ್ಧಮಾನನ ಚರಿತೆ.
ಈ ಅವಧಿಯಲ್ಲಿ ಇನ್ನೂ ಕೆಲವು ಚಂಪುಕೃತಿಗಳು ರಚಿತವಾಗಿರುವ ಹಾಗೆ ತೋರುತ್ತದೆ. ಆದರೆ ಇವು ಯಾವುವೂ ಈವರೆಗೆ ನಮಗೆ ದೊರೆತಿಲ್ಲ. ವಿವರಗಳೂ ಸರಿಯಾಗಿ ತಿಳಿದಿಲ್ಲ. ಹೀಗೆ 10 ರಿಂದ 12ನೆಯ ಶತಮಾನದವರೆಗೆ, ವೀರಶೈವ ವಚನಕಾರರೂ ಕವಿಗಳೂ ಕಾಣಿಸಿಕೊಂಡು ವಚನಗಳನ್ನೂ ರಗಳೆ ಷಟ್ಪದಿ ಮೊದಲಾದ ಛಂದಸ್ಸುಗಳಲ್ಲಿ ಕಾವ್ಯಗಳನ್ನೂ ರಚಿಸಲು ಆರಂಭಿಸುವವರೆಗೆ, ಚಂಪುಸಾಹಿತ್ಯ ರಚನೆ ಉತ್ಕರ್ಷದಲ್ಲಿತ್ತು. ಈ ಕಾಲದ ಚಂಪುವಿನ ಕೆಲವು ವೈಲಕ್ಷಣ್ಯಗಳನ್ನು ಈಗ ನೋಡಬಹುದು.
ಕನ್ನಡ ಸಾಹಿತ್ಯದಲ್ಲಿ ಚಂಪುವಿನ ಪ್ರಥಮ ಪುರಸ್ಕರ್ತರು ಜೈನಕವಿಗಳು. ಅವರಲ್ಲಿ ಆದ್ಯರೂ ಅನಂತರದವರೂ ಸಂಸ್ಕೃತ (ಮತ್ತು ಪ್ರಾಕೃತ) ಭಾಷೆಯಲ್ಲಿ ರಚಿತವಾಗಿರುತ್ತಿದ್ದ ಪುರ್ವಾಚಾರ್ಯರ ಪದ್ಯರೂಪದ ಜೈನ ಮಹಾಪುರಾಣ, ಹರಿವಂಶಪುರಾಣ ಮೊದಲಾದವನ್ನು ಅಥವಾ ಅವುಗಳ ಭಾಗಗಳನ್ನು ಯಥೋಚಿತವಾಗಿ ಸಂಗ್ರಹಿಸಿ ಅಥವಾ ವಿಸ್ತರಿಸಿ ಚಂಪುರೂಪದಲ್ಲಿ ತಮ್ಮ ಜೈನ ಪುರಾಣಗಳನ್ನು ರಚಿಸಿದರು. ಹಾಗೆಯೇ ಅವರು ರಚಿಸಿದ ಲೌಕಿಕ ಕಾವ್ಯಗಳು ಕೂಡ ಪದ್ಯರೂಪದ ಸಂಸ್ಕೃತ (ಮತ್ತು ಪ್ರಾಕೃತ) ಭಾರತ ರಾಮಾಯಣಗಳ ಚಂಪುರೂಪಗಳಾಗಿದ್ದು, ಅವುಗಳಲ್ಲಿಯೇ ಸಂಸ್ಕೃತ ನಾಟಕಗಳ ಹಾಗೂ ಕಾವ್ಯಸಾಹಿತ್ಯದ ವಸ್ತು ಶೈಲಿಗಳೂ ಅಳವಟ್ಟಿರುವುದು ಕಂಡುಬರುತ್ತದೆ. ಕಾಳಿದಾಸಾದ್ಯರ ಸಂಸ್ಕೃತ ಮಹಾಕಾವ್ಯಗಳ ಸಾಂಪ್ರದಾಯಿಕ ಲಕ್ಷಣಗಳು, ವರ್ಣನೆಗಳು, ಅಲಂಕಾರ, ನಿರೂಪಣ ವಿಧಾನ, ಕಥಾಂಶ, ನಾಯಕವ್ಯಕ್ತಿ-ಇತ್ಯಾದಿ ಆ ಕಾವ್ಯಗಳಲ್ಲಿ ಗಭ್ಙೀಕೃತವಾಗಿವೆ. ತೀರ್ಥಂಕರ ಚರಿತೆಗಳಲ್ಲಿ ಆಯಾ ತೀರ್ಥಂಕರನ (ಮತ್ತು ಸಹಚರ ಜೀವರ) ಪುರ್ವಭವಾವಳಿಗಳು ಮತ್ತು ಪಂಚಕಲ್ಯಾಣದ ವಿವರಗಳು ಬರುತ್ತವೆ; ಲೌಕಿಕ ಕಾವ್ಯಗಳಲ್ಲಿ ಪೌರಾಣಿಕ ಮತ್ತು ತತ್ಕಾಲೀನ ಚಾರಿತ್ರಿಕ ವ್ಯಕ್ತಿಗಳ ಸಮೀಕರಣ ಮೂಲಕವಾದ ವಸ್ತುಕಥನವಿರುತ್ತದೆ. ಇನ್ನು ಕಲ್ಪಿತಕಥಾವಸ್ತುವಿನ ಸಂಸ್ಕೃತ ಗದ್ಯಕಾವ್ಯಗಳನ್ನು ಕನ್ನಡಕ್ಕೆ ತಂದುಕೊಳ್ಳುವಾಗ, ಚಂಪು ಪದ್ಧತಿಗೆ ಅಳವಡಿಸಿಕೊಂಡು ನಿರೂಪಿಸುವ ಸಂಪ್ರದಾಯವನ್ನು ಮೊದಲು ಹೂಡಿದ ಕವಿ ನಾಗವರ್ಮ 1. ಆತ ತನ್ನ ಕೃತಿ ಕರ್ಣಾಟಕ ಕಾದಂಬರಿಯಲ್ಲಿ, ಕಲ್ಪಿತಕಥೆಯನ್ನು ಕಾವ್ಯವಸ್ತುವನ್ನಾಗಿ ಮಾಡಿಕೊಂಡದ್ದು ಹಾಗೂ ಗದ್ಯರೂಪದ ಕೃತಿಯನ್ನು ಚಂಪುರೂಪಕ್ಕೆ ತಿರುಗಿಸಿದ್ದು ಒಂದು ವೈಶಿಷ್ಟ್ಯಪುರ್ಣವಾದ ಸಾಹಸ. ಈ ಪರಂಪರೆ ಮುಂದೆ ನೇಮಿಚಂದ್ರ, ದೇವಕವಿ ಮತ್ತು ಚೌಂಡರಸರ ಕೈಯಲ್ಲಿ ಮುಂದುವರಿಯಿತು. ಮೂಲ ಶುದ್ಧವಾಗಿ ಪದ್ಯದಲ್ಲಿರಲಿ ಅಥವಾ ಗದ್ಯದಲ್ಲಿರಲಿ, ಅದನ್ನು ಚಂಪುವಿಗೆ ತಿರುಗಿಸುವ ಈ ಪ್ರಯತ್ನ ಕನ್ನಡ ಸಾಹಿತ್ಯದಲ್ಲಿ ಚಂಪುವಿನ ಪ್ರಾಬಲ್ಯವನ್ನೂ ಕನ್ನಡ ಕವಿಗಳ ಒಲವು, ಸಂಪ್ರದಾಯ ಶ್ರದ್ಧೆಗಳನ್ನೂ ಎತ್ತಿ ತೋರಿಸುತ್ತದೆ.
ಒಂದನೆಯ ನಾಗವರ್ಮನ ಕರ್ಣಾಟಕ ಕಾದಂಬರಿ ಅಖಂಡವಾದ ಕಥಾಸೂತ್ರವುಳ್ಳ ಚಂಪುವಾದರೆ, ದುರ್ಗಸಿಂಹನ ಪಂಚತಂತ್ರ ಹಲವು ಕಥೆಗಳ ಚಂಪು. ದೇಸಿ ಮಾರ್ಗಗಳೆರಡರಲ್ಲಿಯೂ ನಡೆಯುವ ಗದ್ಯಪದ್ಯಗಳು, ದೀರ್ಘತರ ಸಮಾಸ ರಚನೆ, ಶಬ್ದಾಲಂಕಾರಪ್ರಿಯತೆ-ಈತನ ಪ್ರೌಢಶೈಲಿಯ ಚಂಪುವಿನ ವೈಶಿಷ್ಟ್ಯಗಳು. ಕಥಾಸಂಬಂಧಿಯಾದ ಚಂಪುಗದ್ಯದ ಸ್ವರೂಪ ಹೇಗಿರಬಹುದೆಂದು ತಿಳಿಯುವುದಕ್ಕೆ ಇಲ್ಲಿ ಅವಕಾಶವಿದೆ. ಹಲವು ಕಥೆಗಳ ಚಂಪುವಿನ ಈ ಪದ್ಧತಿ ಮುಂದೆ ನಯಸೇನ ಮೊದಲಾದವರ ಕೈಯಲ್ಲಿ ಪ್ರಬಲಿಸಿತು. ಶಾಂತಿನಾಥನ ಸುಕುಮಾರಚರಿತೆ ಪದ್ಧತಿಯಂತೆ ತೀರ್ಥಂಕರ ಚರಿತೆಯಾಗಿರದೆ ಉಪಸರ್ಗ ಕೇವಲಿಯೊಬ್ಬನ ಕಥೆಯಾಗಿರುವುದು ವಸ್ತುವಿನ ದೃಷ್ಟಿಯಿಂದ ಒಂದು ವಿಶೇಷ. ಆತನ ಚಂಪುವಿನ ಚೌಕಟ್ಟಿನಲ್ಲಿ ರಗಳೆ ಮತ್ತು ದೇಸಿ ಛಂದಸ್ಸಿನ ಪ್ರಭೇದಗಳನ್ನು ಮನಸೆಳೆಯುವಂತೆ ಬಳಸಿದೆ. ಈವರೆಗೆ ಬೆಳೆದು ಬಂದ ಪ್ರೌಢ ಚಂಪು ಮಾರ್ಗ ನಯಸೇನನ ಕಾಲದಲ್ಲಿ, ಆತ ದೇಸಿಗೆ ಕೊಟ್ಟ ಮಹತ್ತ್ವದಿಂದ, ಸುಧಾರಣೆಗೊಂಡು ಸರಳವಾದ ರೂಪರೇಷೆಗಳನ್ನು ಪಡೆದುಕೊಂಡಿತು. ಸ್ವಲ್ಪಮಟ್ಟಿಗೆ ದುರ್ಗಸಿಂಹನ ಕೃತಿಯಲ್ಲಿಯೇ ಇದನ್ನು ಗುರುತಿಸಬಹುದು. ಚಂಪುವಿನ ವಸ್ತು, ಭಾಷೆ ಮತ್ತು ಶೈಲಿ ಜನಸಾಮಾನ್ಯನ ಹೃದಯಕ್ಕೆ ಮೆಚ್ಚಾಗುವಂತೆ ಆಕರ್ಷಕವೂ ಅರ್ಥಯುಕ್ತವೂ ಆಯಿತು. ವ್ಯಾಪಕವಾದ ಜನಜೀವನದ ಸಂಸ್ಕೃತಿಯನ್ನೂ ಭಾಷೆಯನ್ನೂ ಹೃದಯಂಗಮವಾಗಿ ಪ್ರತಿಬಿಂಬಿಸಿರುವ ಈ ಚಂಪು ಕೃತಿಯ ಶೈಲಿ ವಿಶಿಷ್ಟವಾದುದು. ನಾಗಚಂದ್ರನ ಚಂಪುಕೃತಿಗಳ ಮುಖ್ಯ ಲಕ್ಷಣಗಳು ಎಂದರೆ ಸಾಂಪ್ರದಾಯಿಕ ವರ್ಣನೆಗಳ ಪ್ರಾಚುರ್ಯ ಮತ್ತು ಶೈಲಿಯ ಸೌಕುಮಾರ್ಯ. ಇದಕ್ಕೆ ಪ್ರತಿಯಾಗಿ ಎನ್ನುವಂತೆ ಕರ್ಣಪಾರ್ಯನ ಕೃತಿ ಅದರ ವಿಶಾಲವಾದ ಕಥಾಭಿತ್ತಿಯಿಂದಾಗಿ ಸಾಂಪ್ರದಾಯಿಕ ವರ್ಣನೆಗಳ ಗೋಜುಗೊಂದಲವಿಲ್ಲದೆ ರಚಿತವಾಗಿರುವ ಒಂದು ಸರಳಶೈಲಿಯ ಚಂಪುಕಾವ್ಯ. ನೇಮಿಚಂದ್ರನ ಕೃತಿಗಳು ಕಥೆಗಿಂತ ವರ್ಣನೆಗಳಿಗೆ, ಚಮತ್ಕಾರವಾದ ಕಲ್ಪನೆಯ ಚಿತ್ರಗಳಿಗೆ, ಅಲಂಕಾರವೈಖರಿಗೆ ಗಮನ ಕೊಟ್ಟಿರತಕ್ಕವು. ರುದ್ರಭಟ್ಟನಲ್ಲಿಯೂ ಈ ಗುಣಗಳನ್ನು ಕಾಣಬಹುದು. ಆಚಣ್ಣ ತನ್ನ ಕೃತಿ ವರ್ಧಮಾನಪುರಾಣದಲ್ಲಿ ಚಂಪುವಿನ ಸಾಂಪ್ರದಾಯಿಕ ಲಕ್ಷಣಗಳೊಡನೆ ಚಿತ್ರಕವಿತ್ವದ ವೈಲಕ್ಷಣ್ಯಗಳನ್ನೂ ಜೊತೆಗೂಡಿಸಿದ್ದಾನೆ. 12ನೆಯ ಶತಮಾನದ ಉತ್ತರಾರ್ಧದಲ್ಲಿ ಕನ್ನಡ ಸಾಹಿತ್ಯ ಹೊಸ ತಿರುವನ್ನು ಪಡೆದುಕೊಂಡಿತು. ಈ ಅವಧಿಯಲ್ಲಿ ಕನ್ನಡ ಸಾಹಿತ್ಯ ಹೆಚ್ಚು ಹೆಚ್ಚು ಜನಸಮ್ಮುಖ ವಾಗತೊಡಗಿತು. ವಚನ ಸಾಹಿತ್ಯದ ಕಾಲದಿಂದೀಚೆಗೆ ದೇಶ್ಯಛಂದಸ್ಸುಗಳು ಹುರುಪುಗೊಂಡು ಕಾವ್ಯವಾಹಕಗಳಾದುವು. ಅವುಗಳಿಗೆ ಜೊತೆಜೊತೆಯಾಗಿ ಚಂಪುಪದ್ಧತಿ ಮುನ್ನಡೆಯಿತಲ್ಲದೆ ಕ್ಷೀಣಿಸಲಿಲ್ಲ. ವಸ್ತು ಮತ್ತು ಶೈಲಿಯಲ್ಲಿ ಕಾಲಧರ್ಮಕ್ಕೆ ಅನುಸಾರವಾಗಿ ಸರಳತೆ ತಲೆದೋರಿತು. ಆದರೆ ಸಂಪ್ರದಾಯ ಶ್ರದ್ಧೆಯಿಂದ ಹುಟ್ಟಿದ ಪ್ರೌಢ ಚಂಪುವಿನ ರಚನೆಯೇನೂ ನಿಲ್ಲಲಿಲ್ಲ. ನಯಸೇನನ ಮಾರ್ಗಕ್ಕಿಂತ ನೇಮಿಚಂದ್ರ ರುದ್ರಭಟ್ಟರ ಮಾರ್ಗವೇ ಚಂಪು ಕವಿಗಳಿಗೆ ಹೆಚ್ಚು ಮೆಚ್ಚಾಯಿತು. 12ರಿಂದ 15ನೆಯ ಶತಮಾನದ ವರೆಗಿನ ಚಂಪು ಸಾಹಿತ್ಯ ಅದರ ಇತಿಹಾಸದಲ್ಲಿ ಎರಡನೆಯ ಘಟ್ಟ. ಈ ಅವಧಿಯ ಕೃತಿಗಳ ಒಂದು ಸಾಮಾನ್ಯ ಸಮೀಕ್ಷೆಯನ್ನು ಈಗ ನೋಡಬಹುದು.
ಬಂಧುವರ್ಮನ (ಪ್ರ.ಶ. ಸು. 1200) ಹರಿವಂಶಾಭ್ಯುದಯ ಮುಖ್ಯವಾಗಿ ನೇಮಿನಾಥ ಚರಿತ್ರೆ. ಆತನ ಜೀವಸಂಬೋಧನೆ ಜೈನಮತದ ದ್ವಾದಶಾನುಪ್ರೇಕ್ಷೆಗಳನ್ನು ಕಥಾರೂಪವಾಗಿ ಪ್ರತಿಪಾದಿಸುವ ಕೃತಿ. ದೇವಕವಿಯ (ಪ್ರ.ಶ. ಸು.1200) ಕುಸುಮಾವಳಿ ಒಂದು ಕಲ್ಪಿತಕಥಾಕಾವ್ಯ. ಹರಿಹರನ ಗಿರಿಜಾಕಲ್ಯಾಣ (ಪ್ರ.ಶ. ಸು.1200) ಶಿವಪಾರ್ವತಿಯರ ವಿವಾಹವನ್ನು ಕುರಿತದ್ದು. ಪಾಶರ್ವ್‌ಪಂಡಿತನ ಪಾಶರ್ವ್‌ನಾಥಪುರಾಣ (ಪ್ರ.ಶ. ಸು. 1222) 23ನೆಯ ತೀರ್ಥಂಕರನಾದ ಪಾಶರ್ವ್‌ನಾಥನ ಚರಿತೆಯನ್ನು ಒಳಗೊಂಡದ್ದು. ಸೋಮರಾಜನ ಉದ್ಭಟಕಾವ್ಯ (ಪ್ರ.ಶ. 1222 ?) ಉದ್ಭಟದೇವನೆಂಬ ಶಿವಭಕ್ತನ ಕಥೆ. ಜನ್ನನ ಅನಂತನಾಥಪುರಾಣ (ಪ್ರ.ಶ. 1230) 14ನೆಯ ತೀರ್ಥಂಕರನಾದ ಅನಂತನಾಥನ ಚರಿತೆ. ಕಮಲಭವನ ಶಾಂತೀಶ್ವರ ಪುರಾಣ (ಪ್ರ.ಶ. ಸು. 1235) 16ನೆಯ ತೀರ್ಥಂಕರನಾದ ಶಾಂತಿನಾಥನ ಚರಿತೆ. ಆಂಡಯ್ಯನ ಕಬ್ಬಿಗರ ಕಾವ್ಯ (ಪ್ರ.ಶ. ಸು. 1235) ವೈದಿಕ ಕಥಾಮೂಲದ ಶಿವಮನ್ಮಥರ ವಿರಸವೃತ್ತಾಂಥ. 2ನೆಯ ಗುಣವರ್ಮನ (ಪ್ರ.ಶ. 1255) ಪುಷ್ಪದಂತ ಪುರಾಣ 9ನೆಯ ತೀರ್ಥಂಕರನಾದ ಪುಷ್ಪದಂತನ ಚರಿತೆ. ಮಹಾಬಲನ ನೇಮಿನಾಥ ಪುರಾಣ (ಪ್ರ.ಶ. 1254) ನೇಮಿತೀರ್ಥಂಕರನ ಚರಿತೆ. ಚೌಂಡರಸನ (ಪ್ರ.ಶ. ಸು. 1300) ಅಭಿನವ ದಶಕುಮಾರ ಚರಿತೆ ಕಲ್ಪಿತ ಕಥಾಕಾವ್ಯ. ನಾಗರಾಜನ ಪುಣ್ಯಾಸ್ರವ ಚಂಪು (ಪ್ರ.ಶ. 1331) ಜೈನತತ್ತ್ವಗಳನ್ನು ಕಥಾರೂಪದಲ್ಲಿ ಪ್ರತಿಪಾದಿಸುವ ಕೃತಿ. ವೃತ್ತ ವಿಲಾಸನ (ಸು. 1350) ಧರ್ಮಪರೀಕ್ಷೆ ಜೈನಮತೋತ್ಕರ್ಷವನ್ನು ಕಥಾರೂಪದಲ್ಲಿ ನಿರೂಪಿಸುವ ಕೃತಿ. ಬಾಹುಬಲಿ ಪಂಡಿತನ ಧರ್ಮನಾಥ ಪುರಾಣ (ಪ್ರ.ಶ. 1352) ಮತ್ತು ಮಧುರನ (ಪ್ರ.ಶ. ಸು. 1400) ಧರ್ಮನಾಥ ಪುರಾಣ 15ನೆಯ ತೀರ್ಥಂಕರನಾದ ಧರ್ಮನಾಥನ ಚರಿತೆಗಳಾಗಿವೆ. ಆಯತವರ್ಮನ (ಕ್ರಿ. ó. ಸು. 1400) ಕನ್ನಡ ರತ್ನಕರಂಡಕ ಜೈನಮತದ ರತ್ನತ್ರಯಗಳನ್ನು ಕುರಿತ ಕೃತಿ. ಕವಿಮಲ್ಲನೆಂಬುವನ (ಪ್ರ.ಶ. ಸು. 1400) ಮನ್ಮಥವಿಜಯವೆಂಬ ಕೃತಿ ಪ್ರಾಯಃ ಶೃಂಗಾರಪ್ರತಿಪಾದಕವಾದುದು. ಈ ಕಾಲದ ಚಂಪುವಿನ ಕೆಲವು ವೈಲಕ್ಷಣ್ಯಗಳು ಹೀಗಿವೆ : ಬಂಧುವರ್ಮ, ಪಾಶರ್ವ್‌ಪಂಡಿತ, ಜನ್ನ, ಕಮಲಭವ, 2ನೆಯ ಗುಣವರ್ಮ, ಮಹಾಬಲ, ಬಾಹುಬಲಿ ಪಂಡಿತ ಮತ್ತು ಮಧುರ ಈ ಜೈನಕವಿಗಳು ತೀರ್ಥಂಕರ ಚರಿತೆಗಳನ್ನು ಚಂಪು ರೂಪದಲ್ಲಿ ರಚಿಸಿದ್ದಾರೆ. ಇವು ಈ ಮೊದಲೇ ಸಂಪ್ರದಾಯಸಿದ್ಧವಾಗಿ ರಚಿತವಾಗುತ್ತ ಬಂದಿದ್ದ ತೀರ್ಥಂಕರಚರಿತೆಗಳ ಮಾದರಿಯಲ್ಲೇ ಬಲುಮಟ್ಟಿಗೆ ರಚಿತವಾಗಿರತಕ್ಕವು. ಕಥೆಗಿಂತ ವರ್ಣನೆಗಳು, ಸರಳತೆಗಿಂತ ಪ್ರೌಢಿಮೆ, ದೇಸಿಗಿಂತ ಮಾರ್ಗ-ಇವುಗಳ ಕಡೆಗೆ ಕವಿಗಳ ಒಲವು ಕಾಣುತ್ತದೆ. ಪ್ರಾಯಃ ಒಂದೆರಡನ್ನು ಬಿಟ್ಟರೆ, ಉಳಿದ ತೀರ್ಥಂಕರರ ಚರಿತೆಗಳಲ್ಲಿ ಕಥಾಭಿತ್ತಿಯೇ ಅಲ್ಪವಾಗಿದ್ದು ಸಾಂಪ್ರದಾಯಿಕವಾದ ಕಾವ್ಯಾಂಗಗಳ ವರ್ಣನೆಗಳಿಂದಲೂ ಪುರಾಣಲಕ್ಷಣಗಳಿಂದಲೂ ಅದನ್ನು ಹಿಗ್ಗಿಸಿರುವುದು ಕಾಣುತ್ತದೆ. ಪಾಂಡಿತ್ಯ ಪ್ರದರ್ಶನದ ಕಾಂಕ್ಷೆ ತಲೆದೋರಿದೆ. ಹರಿಹರ ಮತ್ತು ಸೋಮರಾಜ ವೀರಶೈವ ಚಂಪು ಕೃತಿಗಳೂ ಬಲು ಮಟ್ಟಿಗೆ ಅವೇ ವೈಲಕ್ಷಣ್ಯಗಳನ್ನು ಒಳಗೊಂಡಿವೆ. ಆದರೆ ವೀರಶೈವ ಚಂಪುಗಳಲ್ಲಿ ಹರಿಹರನ ಗಿರಿಜಾಕಲ್ಯಾಣ ಉತ್ಕೃಷ್ಟವಾದುದಾಗಿ, ಅನಂತರದ ಕವಿಗಳು ಆತನಿಂದ ಪ್ರಭಾವಿತವಾದುದು ಕಾಣುತ್ತದೆ. ಸೋಮರಾಜನ ಕೃತಿ ವಸ್ತುವಿನ ಆಯ್ಕೆಯ ದೃಷ್ಟಿಯಿಂದಲೂ ಅದರಲ್ಲಿಯ ಛಂದೋವೈವಿಧ್ಯದ ದೃಷ್ಟಿಯಿಂದಲೂ ಗಮನಿಸತಕ್ಕದ್ದಾಗಿದೆ.
ಗದ್ಯರೂಪವಾಗಿರುವ ಕಲ್ಪಿತಕಥಾಕಾವ್ಯವನ್ನು ಚಂಪುವಿಗೆ ತಿರುಗಿಸುವ ನಾಗವರ್ಮನ ಕಾವ್ಯಪದ್ಧತಿ ದೇವಕವಿ, ಚೌಂಡರಸರ ಮೂಲಕ ಮುಂದುವರಿದಿದೆ. ದೇವಕವಿಯ ಕುಸುಮಾವಳಿ ಕಾವ್ಯ ಸುಬಂಧು, ಬಾಣರ ಗದ್ಯಕಾವ್ಯಗಳ ಪ್ರಭಾವದಿಂದಾದುದು; ಚೌಂಡರಸನ ಅಭಿನವ ದಶಕುಮಾರಚರಿತೆ ದಂಡಿಯ ಗದ್ಯಕಾವ್ಯ ದಶಕುಮಾರಚರಿತೆಯ ಪರಿವರ್ತನೆ. ಇಲ್ಲಿಯೂ ಕಥೆಗಾರಿಕೆ, ರಸದೃಷ್ಟಿಗಳಿಗಿಂತ ವರ್ಣನೆಯ ದೃಷ್ಟಿ ಪ್ರಬಲವಾಗಿದೆ. ಇನ್ನು ಜೈನಮತ ತತ್ತ್ವಗಳನ್ನು ಕಥೆಗಳ ರೂಪದಲ್ಲಿ ಪ್ರತಿಪಾದಿಸುವ ನಯಸೇನನ ಕಾವ್ಯಪದ್ಧತಿ ಬಂಧುವರ್ಮ, ನಾಗರಾಜ, ವೃತ್ತ ವಿಲಾಸ ಇವರ ಕೈಯಲ್ಲಿ ಮುಂದುವರಿಯಿತು. ಬಂಧುವರ್ಮನ ಜೀವಸಂಬೋಧನೆಯ ಚಂಪುವಿನ ಚೌಕಟ್ಟು ಸ್ವಾರಸ್ಯಕರವಾದುದು. ಆಂಡಯ್ಯನ ಕಬ್ಬಿಗರ ಕಾವ ದೇಶ್ಯ ಮತ್ತು ತದ್ಭವ ಶಬ್ದಗಳನ್ನು ಮಾತ್ರ ಬಳಸಿದ ಹಾಗೂ ಪರಿಮಾಣದಲ್ಲಿ ಚಿಕ್ಕದಾಗಿರುವ ಚಂಪು. ಆಯತವರ್ಮನ ಕನ್ನಡ ರತ್ನಕರಂಡಕ ಕೇವಲ ತಾತ್ತ್ವಿಕ ವಿಷಯವನ್ನುಳ್ಳ ಚಂಪು. ಹೀಗೆ ಈ ಅವಧಿಯ ಚಂಪು ರೂಪದಲ್ಲಿ ಪೌರಾಣಿಕ ವ್ಯಕ್ತಿಚರಿತ್ರೆ, ಕಥೆ, ತತ್ತ್ವ - ಇವು ಅವಕಾಶ ಪಡೆದಿವೆ.
15ರಿಂದ 17ನೆಯ ಶತಮಾನದವರೆಗಿನ ಕಾಲ ಚಂಪು ಸಾಹಿತ್ಯದ ಇತಿಹಾಸದಲ್ಲಿ ಇಳಿಗಾಲ. ಈ ಅವಧಿಯಲ್ಲಿ ಷಟ್ಪದಿ ಸಾಂಗತ್ಯ ಮೊದಲಾದ ಛಂದಸ್ಸುಗಳಲ್ಲಿ ರಚಿತವಾದ ಕಾವ್ಯಗಳು ಹೆಚ್ಚಾಗಿ ಬಂದವು. ಅವುಗಳ ಕರ್ತೃಗಳು ಆ ಕಾವ್ಯಗಳಲ್ಲಿಯೇ ಹಿಂದಿನ ಚಂಪುಕಾವ್ಯಗಳ ವಸ್ತು ಮತ್ತು ಶೈಲಿಗಳ ಕೆಲವು ಲಕ್ಷಣಗಳನ್ನು ಅಳವಡಿಸಿದರು. ಚಂಪುಕಾವ್ಯ ಪದ್ಧತಿಯ ಉತ್ತಮವಾದ ಮಾದರಿಗಳು ಸು. 10-12ನೆಯ ಶತಮಾನದಲ್ಲಿಯೇ ಬಂದು ಹೋಗಿದ್ದು, ಈಚಿನವು ಹೆಚ್ಚಿನ ಮಟ್ಟಿಗೆ ಅವುಗಳ ಶುಷ್ಕ ಅನುಕರಣಗಳಾಗಿ ತೋರುತ್ತವೆ. ಮಧುರ ಕವಿಯ (1377-1404) ಧರ್ಮನಾಥಪುರಾಣ ಚಂಪುಶೈಲಿಯ ಅವಸಾನದ ಹಂಸಗೀತೆ.
ಚಂದ್ರಕವಿಯ (ಸು. 1430) ಪಂಪಾಸ್ಥಾನವರ್ಣನ ಹಂಪೆಯ ವಿರೂಪಾಕ್ಷ ದೇವರ ಆಸ್ಥಾನ ವರ್ಣನೆಯನ್ನು ಕುರಿತಿದೆ. ಸುರಂಗಕವಿಯ (ಸು. 1500) ತ್ರಿಷಷ್ಟಿ ಪುರಾತನಚರಿತ್ರ ತಮಿಳುನಾಡಿನ 63 ಶಿವಭಕ್ತರ ಕಥೆಗಳನ್ನೊಳಗೊಂಡಿದೆ. ಕಥೆಯ ಒಂದು ಎಳೆಗೂ ಎಡೆಯಿಲ್ಲದಂತೆ ಕೇವಲ ವರ್ಣನೆಗಳಿಂದಲೇ ಕಾವ್ಯವನ್ನು ಕಟ್ಟಿರುವ ಚಂದ್ರಕವಿಯ ಕೌಶಲ ಕುತೂಹಲಕರವಾದುದು; ಈವರೆಗಿನ ಚಂಪು ಪದ್ಧತಿಯಲ್ಲಿ ನವೀನವಾದುದು. ಕನ್ನಡದ ಅತಿ ಪುಟ್ಟ ಚಂಪುಕಾವ್ಯಗಳಲ್ಲಿ ಒಂದಾದ ಈ ಕೃತಿಯಲ್ಲಿ, ಇರುವ ಅಲ್ಪಾವಕಾಶದಲ್ಲಿಯೇ ಸಾಂಪ್ರದಾಯಿಕ ವರ್ಣನೆಗಳು ಯಥೋಚಿತವಾಗಿ ಎಡೆ ಪಡೆದಿವೆ. ಸುರಂಗಕವಿಯ ಕೃತಿ, ಅದಕ್ಕೆ ಪ್ರತಿಯಾಗಿ ಎನ್ನುವಂತೆ, ಕನ್ನಡದ ಅತಿ ದೊಡ್ಡ ಚಂಪು ಕಾವ್ಯಗಳಲ್ಲಿ ಒಂದಾಗಿದ್ದು, ಹರಿಹರನ ಕಥಾಮೂಲವನ್ನೂ ಚಂಪುಮಾರ್ಗವನ್ನೂ ಬಲುಮಟ್ಟಿಗೆ ಅನುಸರಿಸಿದ್ದು ಹರಿಹರನ ಅನಂತರದ ವೀರಶೈವ ಚಂಪುಗ್ರಂಥಗಳಲ್ಲಿ ಗಣ್ಯವಾದದ್ದಾಗಿದೆ.
ಕಳೆದೆರಡು ಶತಮಾನಗಳಲ್ಲಿ ಸ್ಥಗಿತಗೊಂಡಿದ್ದ ಚಂಪುಸಾಹಿತ್ಯರಚನೆ 17 ರಿಂದ 19ನೆಯ ಶತಮಾನದ ಅವಧಿಯಲ್ಲಿ ಪುನರುಜ್ಜೀವನಗೊಂಡಿತು. ಈ ಅವಧಿಯಲ್ಲಿ ವೀರಶೈವ ಕವಿಗಳೇ ಅಧಿಕ ಸಂಖ್ಯೆಯಲ್ಲಿ ಚಂಪುಕೃತಿಗಳನ್ನು ರಚಿಸಿದರು. ಜೈನ ಕವಿಗಳು ಕಾರಣಾಂತರಗಳಿಂದ ಚಂಪುಪದ್ಧತಿಯನ್ನು ಬಿಟ್ಟು ದೇಸಿ ಕಾವ್ಯಗಳ ರಚನೆಗೆ ತೊಡಗಿದರು. ಈ ಅವಧಿಯ ಚಂಪು ಸಾಹಿತ್ಯದ ಒಂದು ಸಾಮಾನ್ಯವಾದ ಸಮೀಕ್ಷೆ ಹೀಗಿದೆ :
ಪ್ರಭುಗನ (ಪ್ರ.ಶ. ಸು. 1520) ಚೂಡನಾಸ್ಥಾನ ಮತ್ತು ವೈಭೋಗರಾಜಾಸ್ಥಾನಗಳು ಈಶ್ವರನ ಆಸ್ಥಾನದ ವರ್ಣನೆಯನ್ನು ಒಳಗೊಂಡಂಥವು. ವೀರಭದ್ರರಾಜನ (ಪ್ರ.ಶ. ಸು. 1530) ವೀರಭದ್ರವಿಜಯ ವೀರೇಶನ ಚರಿತೆ. ಸದಾಶಿವಯೋಗಿಯ ರಾಮನಾಥವಿಲಾಸ (ಪ್ರ.ಶ. 1554) ವೀರಶೈವ ಮತೋತ್ಕರ್ಷವನ್ನು ಮಾಡಿದ ರಾಮನಾಥಚಾರ್ಯನ ಚರಿತ್ರೆ. ಮುರಿಗೆ ದೇಶಿಕೇಂದ್ರನ (ಸು. 1560) ಹಮ್ಮೀರ ಕಾವ್ಯ ಶಿವಭಕ್ತನಾದ ಹಮ್ಮೀರರಾಜನ ಚರಿತೆ. ಸಿದ್ಧಲಿಂಗ ಶಿವಯೋಗಿಯ (ಸು. 1600) ಭೈರವೇಶ್ವರಪುರಾಣ ಶಿವಭಕ್ತನಾದ ಭೈರವರಾಜನ ಕಥೆ. ಶಾಂತವೀರ ದೇಶಿಕನ (ಸು. 1650) ನನ್ನಯ್ಯಗಳ ಚರಿತ್ರೆ ಶಿವಭಕ್ತನಾದ ನನ್ನಯ್ಯನ ಚರಿತೆ. ಷಡಕ್ಷರಿಯ ರಾಜಶೇಖರವಿಲಾಸ (ಪ್ರ.ಶ. 1655) ಸತ್ಯೇಂದ್ರ ಚೋಳನ ಮಗನಾದ ರಾಜಶೇಖರನ ಕಥೆ; ಬಸವರಾಜ ವಿಜಯ ಅಥವಾ ವೃಷಭೇಂದ್ರ ವಿಜಯ (ಪ್ರ.ಶ. 1677) ಬಸವಣ್ಣನವರ ಚರಿತ್ರೆ, ಶಬರಶಂಕರವಿಲಾಸ ಮಹಾಭಾರತದ ಕಿರಾತಾರ್ಜುನೀಯ ಪ್ರಸಂಗವನ್ನು ಕುರಿತದ್ದು.
16-17ನೆಯ ಶತಮಾನದ ವೀರಶೈವ ಕವಿಗಳ ಈ ಚಂಪುಸಾಹಿತ್ಯ ಮುಖ್ಯವಾಗಿ ಶಿವನನ್ನೂ ಶಿವಭಕ್ತರ ಪುಣ್ಯಕಥೆಗಳನ್ನೂ ಆಧಾರವಾಗಿಟ್ಟುಕೊಂಡು ರಚಿತವಾಗಿದೆ. ವಸ್ತು, ಶೈಲಿ ಮತ್ತು ಉದ್ದೇಶಗಳಲ್ಲಿ ಹರಿಹರನ ಕಾವ್ಯಮಾರ್ಗದ ಪ್ರಭಾವ ಇದರಲ್ಲಿ ಕಾಣುತ್ತದೆ. ಎಂದಿನಂತೆ ಇಲ್ಲಿಯೂ ವರ್ಣನೆ, ಅಲಂಕಾರ, ಕವಿಸಮಯಗಳಲ್ಲಿ ಕನ್ನಡ ಚಂಪುಕಾವ್ಯ ಪರಂಪರೆ ಮುನ್ನಡೆದಿದೆ. ಪ್ರಭುಗನ ಶಿವಾಸ್ಥಾನ ವರ್ಣನೆಯ ಚಿಕ್ಕ ಚಂಪುಗ್ರಂಥಗಳು ಒಂದೊಂದೂ 101 ಪದ್ಯಗಳನ್ನು ಒಳಗೊಂಡಿರುವುದರಿಂದ ಪ್ರಾಯಃ ಶತಕ ಚಂಪು ಆಕೃತಿಯನ್ನು ತಳೆದಂತೆ ಭಾವನೆಯುಂಟಾಗುತ್ತದೆ. ಅಲ್ಲದೆ ಇಲ್ಲಿ ಚಂದ್ರಕವಿಯ ಸಂಪ್ರದಾಯ ಮುನ್ನಡೆದಿದೆ. ವೀರಭದ್ರನ ಕೃತಿ ವರ್ಣನಾಭಾಗ ಹೆಚ್ಚಾಗಿರುವ ಚಂಪು. ಸದಾಶಿಯೋಗಿಯ ಕೃತಿಯಲ್ಲಿ ಷಟ್ಪದಿಗಳು ಬಳಕೆಯಾಗಿವೆ. ಇನ್ನು ವೀರಶೈವ ಚಂಪು ಕಾವ್ಯಕರ್ತತೃಗಳ ಪರಂಪರೆಯಲ್ಲಿ ಬಹು ಸಮರ್ಥನಾದವನೆಂದರೆ ಷಡಕ್ಷರಿ. ಒಳ್ಳೆಯ ಕವಿತ್ವಶಕ್ತಿಯೊಡನೆ ಪಾಂಡಿತ್ಯ ದೃಷ್ಟಿಯೂ ಸಂಪ್ರದಾಯ ನಿಷ್ಠೆಯೂ ಈತನಲ್ಲಿ ವಿಶೇಷವಾಗಿತ್ತು. ಈತನ ಚಂಪುಕೃತಿಗಳಲ್ಲಿ ಪ್ರಾಚೀನ ಕಾಲದ ಪ್ರೌಢ ಚಂಪುಕಾವ್ಯಗಳ ಗುಣಲಕ್ಷಣಗಳು ಪ್ರತಿಬಿಂಬಿತವಾಗಿವೆ. ಚಂಪುಶೈಲಿಯ ಆಕರ್ಷಣೆ ಬಿಟ್ಟೂ ಬಿಡದಂತೆ ಕನ್ನಡ ಕವಿಗಳ ಮನಸ್ಸನ್ನು ಸೆರೆ ಹಿಡಿದಿದ್ದು, ಅವರ ಪ್ರತಿಭೆ ಪಾಂಡಿತ್ಯಗಳ ಪರೀಕ್ಷೆಗೆ ಒಳ್ಳೆಯ ನಿಕಷವಾಗಿತ್ತು. ಷಡಕ್ಷರಿಯಂಥ ಕವಿ ಆ ಪರೀಕ್ಷೆಯಲ್ಲಿ ಹೆಮ್ಮೆಯಿಂದ ಪಾಲುಗೊಂಡು, ಯಶಸ್ವಿಯಾಗಿರುವುದು ಕಾಣುತ್ತದೆ. ಕಥೆಯನ್ನು ನಿಮಿತ್ತವಾಗಿ ಮಾಡಿಕೊಂಡು, ಮುಖ್ಯವಾಗಿ ವರ್ಣನ ವೈಚಿತ್ರ್ಯಗಳನ್ನೂ ಕಲ್ಪನಾಚಾತುರ್ಯ ಮತ್ತು ಅಲಂಕಾರ ವೈಖರಿಗಳನ್ನೂ ತನ್ನ ಕೃತಿಗಳಲ್ಲಿ ಈತ ಮೆರೆದಿದ್ದಾನೆ.
17ನೆಯ ಶತಮಾನದ ಉತ್ತರಾರ್ಧದಲ್ಲಿ, ಮೈಸೂರರಸರಲ್ಲಿ ಪ್ರಖ್ಯಾತನಾದ ಚಿಕ್ಕದೇವರಾಯನ (ಪ್ರ.ಶ. 1672-1704) ಆಶ್ರಯದಲ್ಲಿ ಕೆಲವರು ಬ್ರಾಹ್ಮಣ ಕವಿಗಳು ಚಂಪುಸಾಹಿತ್ಯದ ಬೆಳೆವಣಿಗೆಗೆ ತುಂಬ ನೆರವಾದರು. ಚಿಕ್ಕದೇವರಾಜನ ಕಾಲದ ಹಾಗೂ ಅವನ ಪೋಷಣೆ ಪಡೆದ ಕವಿಸಮೂಹದಲ್ಲಿ ತಿರುಮಲಾರ್ಯ, ಚಿಕುಪಾಧ್ಯಾಯ, ತಿಮ್ಮಕವಿ, ಮಲ್ಲಿಕಾರ್ಜುನ, ಮಲ್ಲರಸ-ಇವರು ಚಂಪುಕೃತಿಗಳನ್ನು ರಚಿಸಿದರು. ಇವರಲ್ಲಿ ಕೆಲವರ ಕಾವ್ಯಮಾರ್ಗದ ಮೇಲೆ ಷಡಕ್ಷರಿಯ ಪ್ರಭಾವವಾಗಿರುವುದು ಸಾಧ್ಯ. ತಿರುಮಲಾರ್ಯ (1645-1706) ಚಿಕದೇವರಾಜವಿಜಯ ಆ ದೊರೆಯ ಪುರ್ವಜರ ವಿಷಯವನ್ನೂ ಆತನ ಜನನ ಬಾಲ್ಯಾದಿಗಳನ್ನೂ ಕುರಿತಿದೆ. ಚಿಕುಪಾಧ್ಯಾಯನ (1672) ಹಸ್ತಿಗಿರಿಮಾಹಾತ್ಮ್ಯ (1679) ಬ್ರಹ್ಮಾಂಡಪುರಾಣದ ತೀರ್ಥಕಾಂಡಕಾಲಿದ್ದ ಉಕ್ತವಾದ ಕಂಚಿಯ ಮಾಹಾತ್ಮ್ಯವನ್ನು ಕುರಿತದ್ದು. ಕಮಲಾಚಲ ಮಾಹಾತ್ಮ್ಯ (1680) ಭವಿಷ್ಯೋತ್ತರ ಪುರಾಣದ ತೀರ್ಥಕಾಂಡದಲ್ಲಿ ಉಕ್ತವಾದ ಹಿಮವದ್ಗೋಪಾಲಸ್ವಾಮಿ ಬೆಟ್ಟದ ಮಾಹಾತ್ಮ್ಯವನ್ನು ಕುರಿತದ್ದು. ರುಕ್ಮಾಂಗದ ಚರಿತೆ (1681) ಏಕಾದಶೀವ್ರತದ ಮಹಿಮೆಯನ್ನು ಹೇಳುತ್ತದೆ. ವಿಷ್ಣುಪುರಾಣ ಸಂಸ್ಕೃತ ವಿಷ್ಣುಪುರಾಣದ ಪರಿವರ್ತನೆ. ದಿವ್ಯಸೂರಿಚರಿತೆ 12 ಮಂದಿ ಆಳ್ವಾರರ ಚರಿತ್ರೆ. ಸಾತ್ತ್ವಿಕಬಹ್ಮವಿದ್ಯಾವಿಲಾಸ ಮತ್ತು ಅರ್ಥಪಂಚಕಗಳು ವಿಶಿಷ್ಟಾದ್ವೈತ ಮತಸಿದ್ಧಾಂತ ಗ್ರಂಥಗಳು. ತಿಮ್ಮಕವಿಯ (1677) ಯಾದವಗಿ ಮಾಹಾತ್ಮ್ಯವನ್ನು (1677) ನಾರದೀಯ ಪುರಾಣೋಕ್ತವಾದ ಯಾದವಗಿರಿಯ (ಮೇಲುಕೋಟೆಯ) ಮಾಹಾತ್ಮ್ಯವನ್ನು ಕುರಿತದ್ದು. ಪಶ್ಚಿಮ ರಂಗಮಾಹಾತ್ಮ್ಯ ಶ್ರೀರಂಗಪಟ್ಟಣದ ಮಾಹಾತ್ಮ್ಯವನ್ನು ಕುರಿತದ್ದು. ವೆಂಕಟಗಿರಿಮಾಹಾತ್ಮ್ಯ (1679) ತಿರುಪತಿಯ ಮಾಹಾತ್ಮ್ಯವನ್ನು ಹೇಳುತ್ತದೆ. ಮಲ್ಲಿಕಾರ್ಜುನನ (ಪ್ರ.ಶ. 1678) ಶ್ರೀರಂಗ ಮಾಹಾತ್ಮ್ಯ ಬ್ರಹ್ಮಾಂಡಪುರಾಣದಲ್ಲಿನ ಶ್ರೀರಂಗಕ್ಷೇತ್ರದ ಮಾಹಾತ್ಮ್ಯವನ್ನು ಕುರಿತದ್ದು. ಮಲ್ಲರಸನ (ಪ್ರ.ಶ. ಸು. 1680) ದಶಾವತಾರ ಚರಿತೆಯಲ್ಲಿ ವಿಷ್ಣುವಿನ ಹತ್ತು ಅವತಾರಗಳ ಕಥನವಿದೆ. ಕೃಷ್ಣಶರ್ಮನ (ಸು. 1700) ಸರಜಾ ಹನುಮೇಂದ್ರಚರಿತೆ ತರೀಕೆರೆ ಪ್ರಭು ಸರಜಾ ಹನುಮೇಂದ್ರನ ಚರಿತ್ರೆಯಾಗಿದೆ.
ಚಿಕ್ಕದೇವರಾಯನ ಕಾಲದಿಂದೀಚೆಗೆ ಕೂಡ ಕೆಲವು ಚಂಪುಕೃತಿಗಳು ರಚಿತವಾಗಿವೆ. ಅವುಗಳ ಒಂದು ಸಾಮಾನ್ಯ ಸಮೀಕ್ಷೆ ಹೀಗಿದೆ : ಇಮ್ಮಡಿ ಮುರಿಗೆಯ ಸ್ವಾಮಿಯ ಹಾಲಾಸ್ಯಪುರಾಣ (ಪ್ರ.ಶ. 1720) ಮಧುರೆಯ ಸುಂದರೇಶ್ವರ 64 ಲೀಲೆಗಳನ್ನು ನಟಿಸಿದ ಕಥಾವೃತ್ತಾಂತವನ್ನು ಕುರಿತಿದೆ. ವೆಂಕಟೇಶನ (ಸು. 1740) ಹಾಲಾಸ್ಯ ಮಾಹಾತ್ಮ್ಯವೂ ಶಿವಲೀಲಾಪರವಾದುದು. ಲಿಂಗಣ್ಣನ (ಸು. 1750) ಕೆಳದಿ ನೃಪವಿಜಯ ಕೆಳದಿಯ ಅರಸರ ಚರಿತ್ರೆ. ವೆಂಕಾಮಾತ್ಯನ (ಸು. 1770) ರಮಾಭ್ಯುದಯ ಕಾವ್ಯ ಲಕ್ಷ್ಮೀದೇವಿಯ ಅವತಾರವೇ ಮೊದಲಾದ ಪೌರಾಣಿಕ ಕಥೆಗಳನ್ನು ಒಳಗೊಂಡದ್ದು. ದೇವಚಂದ್ರನ ರಾಮಕಥಾವತಾರದಲ್ಲಿ (ಪ್ರ.ಶ. 1797) ಜೈನ ಸಂಪ್ರದಾಯದ ರಾಮಾಯಣ ಕಥೆ ಬಂದಿದೆ. ಚಾರುಕೀರ್ತಿ ಪಂಡಿತನ (ಚಂದ್ರಸಾಗರ ವರ್ಣಿಯ?) ಭವ್ಯಜನಚಿಂತಾಮಣಿ (1815) ಜಿನಪುಜಾಮಹಿಮೆಯಿಂದ ಸದ್ಗತಿ ಪಡೆದವರ ಕಥೆಗಳನ್ನು ಒಳಗೊಂಡಿದೆ. ತಮ್ಮಯ ಕವಿಯ ರಾಜವಂಶರತ್ನಪ್ರಭೆ (ಪ್ರ.ಶ. 1834) ಮೈಸೂರು ಅರಸರ ಚರಿತ್ರೆ. ಅಳಿಯ ಲಿಂಗರಾಜನ ನಳಕೂಬರ ವಿಲಾಸ (ಪ್ರ.ಶ. 1851) ಪೌರಾಣಿಕ ವ್ಯಕ್ತಿಯಾದ ನಳಕೂಬರನ ಕಥೆ. ನರಪತಿಚರಿತ ಅಲಂಕಾರಗ್ರಂಥ. ವೆಂಕಟರಮಣಯ್ಯನ ಗಯೋಪಾಖ್ಯಾನ (1857) ಕೃಷ್ಣಾರ್ಜುನರ ಸಂಗ್ರಾಮದ ಪೌರಾಣಿಕ ಕಥೆ. ಹಿರಣ್ಯಗರ್ಭನ (ಸು. 1860) ಸರಸ್ವತೀ ಪ್ರಬಂಧ ಶ್ರೀ ಸರಸ್ವತೀದೇವೀ ಕಥೆಯೆಂಬ ಪುರ್ವಕಥೆ. ಬಸವಪ್ಪಶಾಸ್ತ್ರಿಗಳ (19ನೆಯ ಶ.) ದಮಯಂತೀಸ್ವಯಂವರ ಮಹಾಭಾರತದ ನಳೋಪಾಖ್ಯಾನವನ್ನು ಕುರಿತದ್ದು.
17 ರಿಂದ 19ನೆಯ ಶತಮಾನದವರೆಗೆ ರಚಿತವಾಗಿರುವ ಈ ಚಂಪುಸಾಹಿತ್ಯದ ವೈಲಕ್ಷಣ್ಯಗಳನ್ನು ಈಗ ಗಮನಿಸಬಹುದು; ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ಆತನ ಪ್ರೇರಣೆಯಂತೆ ಆತನ ಪೋಷಣೆಯ ಹಲವರು ಕವಿಗಳೂ ಆ ಕವಿಗಳ ಪ್ರಚೋದನೆಯಿಂದ ಇತರ ಕೆಲವರೂ ಕೆಲವು ಚಂಪುಕೃತಿಗಳನ್ನು ರಚಿಸಿದರು. ಹಲವು ಗ್ರಂಥಗಳ ಕರ್ತೃ ಚಿಕುಪಾಧ್ಯಾಯ ಸ್ವತಃ ಆರೇಳು ಚಂಪುಕೃತಿಗಳನ್ನು ಬರೆದುದಲ್ಲದೆ ತಿಮ್ಮಕವಿ, ಮಲ್ಲಿಕಾರ್ಜುನ ಮೊದಲಾದವರ ಕೃತಿರಚನೆಗೆ ಪ್ರೇರಕನಾದ. ತಿರುಮಲಾರ್ಯ ಶುದ್ಧವಾದ ಐತಿಹಾಸಿಕ ವಸ್ತುವನ್ನು ಆಧರಿಸಿ ಮೊದಲ ಬಾರಿಗೆ ಚಂಪುಗ್ರಂಥವನ್ನು ಬರೆದ ಮೇಲೆ, ಆ ಸಂಪ್ರದಾಯ ವೇಣುಗೋಪಾಲ ವರಪ್ರಸಾದಿ, ಕೃಷ್ಣಶರ್ಮ, ಲಿಂಗಣ್ಣ, ತಮ್ಮಯ ಕವಿ-ಇವರ ಮೂಲಕವಾಗಿ ಮುಂದುವರಿಯಿತು. ತಿರುಮಲಾರ್ಯನ ಕೃತಿಯಲ್ಲಿ ತ್ರಿಪದಿಗಳ ಜೊತೆಗೆ ಸಾಂಗತ್ಯಗಳೂ ಹಾಡುಗಳೂ ಸೇರಿವೆಯೆಂಬುದು ಒಂದು ವಿಶೇಷ. ಚಿಕುಪಾಧ್ಯಾಯ ಪುರಾಣೋಕ್ತವಾದ ಕ್ಷೇತ್ರಮಾಹಾತ್ಮ್ಯಗಳನ್ನು ಚಂಪು ರೂಪದಲ್ಲಿ ಅಳವಡಿಸಿ, ತಿಮ್ಮಕವಿ, ಮಲ್ಲಿಕಾರ್ಜುನ ಮೊದಲಾದವರಿಗೆ ಮಾರ್ಗದರ್ಶಕನಾದ. ಆತನ ಚಂಪುಕೃತಿಗಳಲ್ಲಿ ಕ್ಷೇತ್ರಮಾಹಾತ್ಮ್ಯ, ಪೌರಾಣಿಕ ಕಥೆ, ಪುರಾಣಾನುವಾದ, ಆಚಾರ್ಯರ ಚರಿತ್ರೆ, ಹಾಗೂ ಮತಸಿದ್ಧಾಂತ-ಈ ವಸ್ತುವೈವಿಧ್ಯ ಅಳವಟ್ಟಿದೆ. ಈ ಚಂಪುಕಾಲದ ಚಂಪುಪದ್ಧತಿಯ ಪುನರುಜ್ಜೀವನಕರ್ತರಲ್ಲಿ ಈತ ಪ್ರಮುಖನಾಗಿದ್ದಾನೆ. ಈತನ ದಿವ್ಯಸೂರಿಚರಿತೆ ಮತ್ತು ಅರ್ಥಪಂಚಕಗಳು ತಮಿಳು ಮೂಲದ ಗ್ರಂಥಗಳನ್ನು ಅನುಸರಿಸಿರುವಂತೆ ತಿಳಿಯುತ್ತದೆ. ಕೃಷ್ಣಶರ್ಮನ ಕೃತಿಯಲ್ಲಿ ಅಲ್ಲಲ್ಲಿ ಸಾಂಗತ್ಯಗಳನ್ನೂ ಷಟ್ಪದಿಗಳನ್ನೂ ಬಳಸಿದೆಯಲ್ಲದೆ ವರ್ಣನೆಗೆ ಪ್ರಾಶಸ್ತ್ಯವಿದೆ. ಲಿಂಗಣ್ಣನ ಕೆಳದಿನೃಪವಿಜಯದಲ್ಲಿ ಗದ್ಯದ ಪ್ರಾಚುರ್ಯ ಕಾಣುತ್ತದೆ. ತಮ್ಮಯ ಕವಿಯ ಕೃತಿ ರುಚಿಪ್ರಚಾರ ಎಂಬ ಐದು ವಿಭಾಗಗಳನ್ನು ಒಳಗೊಂಡಿರುವುದಲ್ಲದೆ, ಅದರಲ್ಲಿ ಕೆಲವು ಸೀಸಪದ್ಯಗಳೂ ಇವೆ. ಅಳಿಯ ಲಿಂಗರಾಜನ ನರಪತಿಚರಿತ ಲಕ್ಷಣಗ್ರಂಥ ವಾಗಿದ್ದರೂ ಚಂಪುವಿನಲ್ಲಿದೆ. ವೆಂಕಟರಮಣಯ್ಯನ ಗಯೋಪಾಖ್ಯಾನದಲ್ಲಿ ಕೆಲವು ಷಟ್ಪದಿಗಳನ್ನು ಬಳಸಿದೆ. ಹೀಗೆ ಈ ಅವಧಿಯ ಚಂಪುಕೃತಿಗಳು ವಸ್ತುವಿನಲ್ಲಿಯೂ ರೂಪದಲ್ಲಿಯೂ ಕೆಲಮಟ್ಟಿಗೆ ಹೊಸತಾಗಿದ್ದರೂ ಒಟ್ಟಿನಲ್ಲಿ ತನ್ನ ಸಾಂಪ್ರದಾಯಿಕ ಸ್ವರೂಪದಲ್ಲಿಯೇ ಮುನ್ನಡೆದಿರುವುದೂ ಮಾರ್ಗಕವಿತ್ವವನ್ನೂ ಹಳಗನ್ನಡ ಭಾಷೆಯನ್ನೂ ಜೀವಂತವಾಗಿಡಲು ಪ್ರಯತ್ನಿಸಿರುವುದೂ ಸ್ಪಷ್ಟವಾಗಿ ಗೋಚರಿಸುತ್ತದೆ. 19ನೆಯ ಶತಮಾನವನ್ನು ದಾಟಿಬಂದಿರುವ ಈ ಕಾಲದಲ್ಲಿಯೂ ಚಂಪುರೂಪದಲ್ಲಿ ಕೃತಿರಚನೆ ಮಾಡುವ ಪ್ರಯತ್ನ ಕ್ವಚಿತ್ತಾಗಿ ನಡೆಯುತ್ತಿದೆ. ಇದು ಆ ಸಾಹಿತ್ಯ ಪ್ರಕಾರದ ಪ್ರಭಾವವನ್ನೂ ಅದರಲ್ಲಿ ಕವಿಗಳಿಗಿರುವ ಅಭಿಮಾನವನ್ನೂ ಎತ್ತಿ ತೋರಿಸತಕ್ಕದ್ದಾಗಿದೆ.
20ನೆಯ ಶತಮಾನದಲ್ಲಿ ಚಂಪು ರೀತಿಯ ಭವಿಷ್ಯವೇನು ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ. ಸಾಂಪ್ರದಾಯಿಕ ರೀತಿಯಲ್ಲಿ ರಚಿತವಾದ ಚಂಪುಕಾವ್ಯಗಳು ಕೇವಲ ಅಲ್ಲೊಂದು ಇಲ್ಲೊಂದು ಹೊರಬಂದಿರುವುದುಂಟು. ಸೋಸಲೆ ಅಯ್ಯಶಾಸ್ತ್ರಿಗಳು ಈ ಶತಮಾನದ ಆದಿಯಲ್ಲಿ ಮಹೀಶೂರ ಮಹಾರಾಜ ಚರಿತಂ ಎಂಬೊಂದು ಗ್ರಂಥವನ್ನು ರಚಿಸಿದ್ದಾರೆ. ಅನಂತರ 1950 ರಿಂದ ಈಚೆಗೆ ಟಿ. ಕೇಶವಭಟ್ಟರು ಸತ್ತ್ವಾವಲೋಕನಂ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ಇದು ಶ್ರೀಕೃಷ್ಣನನ್ನು ಕುರಿತ ಕಥೆ. ಇಲ್ಲಿ ಅಗತ್ಯವಾಗಿ ಸೂಚಿಸಬೇಕಾಗಿರುವ ಇನ್ನೆರಡು ಗ್ರಂಥಗಳೆಂದರೆ ವಿನಾಯಕರಚಿತ ತ್ರಿವಿಕ್ರಮರ ಆಕಾಶಗಂಗೆ ಮತ್ತು ಇಂದಲ್ಲ ನಾಳೆ. ಮೊದಲ ಕೃತಿ ಆತ್ಮಚರಿತ್ರರೂಪವಾದುದು. ಆದರೂ ಆತ್ಮವಿಕಾಸವನ್ನೇ ಪ್ರಧಾನವಾಗಿ ಚಿತ್ರಿಸುವಂಥದು. ಎರಡನೆಯದು ಪುರ್ವ ಮತ್ತು ಪಶ್ಚಿಮ ಸಂಸ್ಕೃತಿ ಮತ್ತು ಜೀವನ ಕ್ರಮಗಳ ಸಮೀಕ್ಷಾರೂಪವಾದುದು. ಎರಡರಲ್ಲಿಯೂ ಹೊಸಗನ್ನಡ ಛಂದಸ್ಸಿನ ಪದ್ಯದೊಂದಿಗೆ ಹೊಸಗನ್ನಡ ಗದ್ಯ ಹಾಸುಹೊಕ್ಕಾಗಿ ಬರುತ್ತದೆ. ಇಲ್ಲಿನ ಚಂಪು ಶೈಲಿಯ ಪ್ರಯೋಗ ಗಮನಾರ್ಹವಾದದು. (ಟಿ.ವಿ.ವಿ.; ಎಚ್.ಪಿ.ಎನ್.)