ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡ ಭಾಷೆ

ವಿಕಿಸೋರ್ಸ್ದಿಂದ

ಕನ್ನಡ ಭಾಷೆ :- ಭಾರತದ ಸಂವಿಧಾನದಲ್ಲಿ ಮಾನ್ಯತೆಪಡೆದ 22 ಭಾಷೆಗಳಲ್ಲಿ ಒಂದಾಗಿಯೂ ಕರ್ನಾಟಕ ರಾಜ್ಯದ ಜನರ ಮನೆಮಾತಾಗಿಯೂ ಇರುವ ಕನ್ನಡ ಭಾಷೆ ದ್ರಾವಿಡ ಭಾಷಾ ಪರಿವಾರದ ನಾಲ್ಕು ಪ್ರಮುಖ ಪ್ರಾಚೀನ ಭಾಷೆಗಳಲ್ಲೊಂದು. ಸು. 2,500 ವರ್ಷಗಳ ಸಾಹಿತ್ಯ ಹಾಗೂ ಶಿಲಾಶಾಸನಗಳ ಚರಿತ್ರೆಯನ್ನು ಹೊಂದಿದ ಈ ಭಾಷೆ ಸುಸಂಸ್ಕೃತ ಜನಾಂಗವೊಂದರ ಆಡುನುಡಿಯಾಗಿಯೂ ಸಾಹಿತ್ಯರಚನೆಗೆ ಮಾಧ್ಯಮವಾಗಿಯೂ ವಿಕಾಸಗೊಂಡು ವಿಶ್ವಸಾಹಿತ್ಯಕ್ಕೆ ಅಮೂಲ್ಯ ಕಾಣಿಕೆಗಳನ್ನು ಸಲ್ಲಿಸಿದೆ. ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾಗಲು ಮತ್ತು ಮೈಸೂರು ಜನತೆಯ ಶಿಕ್ಷಣಮಾಧ್ಯಮವಾಗಲು ಸಮರ್ಥವಾಗಿದೆ.

2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ 6,11,30,704 ಜನರ ಮಾತೃಭಾಷೆ ಕನ್ನಡ. ಭಾರತದಲ್ಲಿ 3,25,90177 ಜನರಿಗೆ ಇದು ಮಾತೃಭಾಷೆ. ಕರ್ನಾಟಕದಲ್ಲೇ ಅಲ್ಲದೆ ಕರ್ನಾಟಕದ ಗಡಿಯಾಚೆಗಿರುವ ಕಾಸರಗೋಡು, ಮಂಜೇಶ್ವರ, ಸೊಲ್ಲಾಪುರ, ಅಕ್ಕಲಕೋಟೆ, ಹೊಸೂರು, ತಾಳವಾಡಿ, ಆದವಾನಿ ಮುಂತಾದ ಪ್ರದೇಶಗಳಲ್ಲಿಯೂ ಮುಂಬೈ, ಚೆನ್ನೈ, ದೆಹಲಿ, ಕೋಲ್ಕತ್ತ, ಹೈದರಾಬಾದು ಮುಂತಾದ ಪ್ರಮುಖ ಪಟ್ಟಣ ಗಳಲ್ಲಿಯೂ ಇದ್ದಾರೆ. ಇದಲ್ಲದೆ ಇತರ ಭಾಷೆಗಳನ್ನಾಡುವ ಜನರಲ್ಲಿ 3,550,642 ಜನ ಕನ್ನಡವನ್ನು ತಮ್ಮ ಎರಡನೆಯ ಭಾಷೆಯಾಗಿ ಮಾತಾಡುತ್ತಾರೆಂದೂ ಜನಗಣತಿಯಿಂದ ತಿಳಿದುಬಂದಿದೆ.ಇಂಗ್ಲೆಂಡ್, ಅಮೇರಿಕ,ದುಬೈ, ಆಸ್ಟ್ರೇಲಿಯ ಇನ್ನು ಮುಂತಾದ ವಿದೇಶಗಳಲ್ಲಿ ಕನ್ನಡ ಭಾಷೆಯ ಜನರು ಇದ್ದಾರೆ.

ಕನ್ನಡ ಎಂಬ ಶಬ್ದ ಈ ಭಾಷೆಯ ಹೆಸರನ್ನು ಸೂಚಿಸುವಂತೆ ಈ ಭಾಷೆಯನ್ನಾಡುವ ಜನ ವಾಸಿಸುವ ಪ್ರದೇಶವನ್ನೂ ಸೂಚಿಸುತ್ತಿತ್ತೆಂದು ಪ್ರಾಚೀನ ಗ್ರಂಥಗಳಿಂದ ತಿಳಿದುಬರುತ್ತದೆ. 'ಕವಿರಾಜಮಾರ್ಗದಲ್ಲಿ ಕಾವೇರಿಯಿಂದಮಾ ಗೋದಾವರಿಯ ವರಮಿರ್ದ ನಾಡದಾ ಕನ್ನಡದೊಳ್ ಎಂದೂ ಕಬ್ಬಿಗರ ಕಾವದಲ್ಲಿ- ಕನ್ನಡಮೆನಿಪ್ಪಾ ನಾಡು' ಎಂದೂ ಉಕ್ತವಾಗಿದೆ. ಕವಿರಾಜಮಾರ್ಗದಲ್ಲಿ ಕಾವೇರಿಯಿಂದ ಗೋದಾವರಿಯವರೆಗೆ ವಿಸ್ತರಿಸಿತ್ತು ಎನ್ನಲಾದ ಈ ಪ್ರದೇಶ ಈಗ ತುಂಬ ಸಂಕುಚಿತವಾಗಿ ಬೆಳಗಾಂ ಬೀದರ್ ಪ್ರದೇಶದಿಂದ ಕೊಡಗು ಚಾಮರಾಜನಗರದವರೆಗೂ ಅರಬ್ಬೀ ಸಮುದ್ರತೀರದಿಂದ ಕೋಲಾರ ಬಳ್ಳಾರಿವರೆಗೂ ಸೀಮಿತವಾಗಿದೆ.

ಕರ್ಣಾಟಕ:- ಈ ಶಬ್ದದ ರೂಪನಿಷ್ಪತ್ತಿಯ ವಿಚಾರದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಕನ್ನಡವನ್ನು ಸಂಸ್ಕೃತಜನ್ಯವೆಂದು ನಂಬಿದ ವಿದ್ವಾಂಸರು ಈ ಶಬ್ದ ಕರ್ಣಾಟ ಅಥವಾ ಕರ್ಣಾಟಕ ಎಂಬ ಸಂಸ್ಕೃತ ಶಬ್ದದಿಂದ ಬಂದಿದೆ ಎನ್ನುತ್ತಾರೆ. ಪ್ರಸಿದ್ದ ವೈಯಾಕರಣಿಯಾದ ಕೇಶಿರಾಜನೂ ಇದೇ ಅಭಿಪ್ರಾಯವನ್ನು ಹೊಂದಿದ್ದ. ಕರ್ಣಾಟಕ ಎಂಬ ಶಬ್ದ ಕರುನಾಡಗಂ ಎಂಬ ದ್ರಾವಿಡ ಮೂಲ ಪದದ ಸಂಸ್ಕೃತ ರೂಪವೆಂದೂ ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಹೀಗೆ ಸಂಸ್ಕೃತ ರೂಪವನ್ನು ಪಡೆದ ಮೇಲೆ ಅದರ ನಿಷ್ಪತ್ತಿಯೂ ಕರ್ಣೇಷು ಆಟತಿ ಸರ್ವೇಷಾಂ ಕರ್ಣೇಷು ಭ್ರಮತೀತಿ-ಯಾವ ದೇಶದ ಪ್ರಸಿದ್ದ ಜನರ ಕಿವಿಯಲ್ಲಿ ಮೊಳಗುತ್ತಿರುವುದೋ ಆ ದೇಶ-ಎಂದಾಯಿತು. ಆರ್. ನರಸಿಂಹಾಚಾರ್ಯರು ಕಮ್ಮಿತು ಎಂದರೆ ಸುವಾಸನೆಯುಳ್ಳ ಎಂದರ್ಥ. ಗಂಧದ ಮರಗಳಿಂದ ಕೂಡಿದ ಈ ರಾಜ್ಯಕ್ಕೆ ಇದು ಅನ್ವರ್ಥನಾಮವಾಗಬಹುದು. ಅಥವಾ ಕನ್ನಡಿಗರ ಅಭಿಮಾನಸೂಚಕವೂ ಆಗಬಹುದು. ಗುಡರ್ಟ್ ಮತ್ತು ಕಾಲ್ಡ್‌ವೆಲ್ ಅವರ ಅಭಿಪ್ರಾಯದಂತೆ ಜೋಳ ಮತ್ತು ಹತ್ತಿಯ ಬೆಳೆವಣಿಗೆಗೆ ಅನುಗುಣವಾದ ಕಪ್ಪು ಮಣ್ಣಿನ ಪ್ರದೇಶಕ್ಕೆ ಕರ್ ನಾಡು ಅಥವಾ ಕಪ್ಪು ಮಣ್ಣಿನ ಪ್ರದೇಶ ಎಂಬ ಹೆಸರು ಬಂತು. ಆದರೆ ಈ ಕಪ್ಪು ಮಣ್ಣು ಕರ್ನಾಟಕ ರಾಜ್ಯದ ದಕ್ಷಿಣ ಪ್ರದೇಶದಲ್ಲಿಲ್ಲ ಎಂಬುದು ಗಮನಾರ್ಹ. ಇನ್ನು ಕೆಲವರು ಕರುನಾಡು ಎಂಬ ಶಬ್ದಕ್ಕೆ ದೊಡ್ಡ ಪ್ರದೇಶ ಅಥವಾ ಮಹಾರಾಷ್ಟ್ರ ಎನ್ನುವ ನಿಷ್ಪತ್ತಿ ತೋರಿಸುವ ಪ್ರಯತ್ನವನ್ನೂ ಮಾಡಿದ್ದಾರೆ.

ಕನ್ನಡ ಭಾಷೆಯನ್ನಾಡುವವರು ದ್ರಾವಿಡ ಜನಾಂಗಕ್ಕೆ ಸೇರಿದವರು. ಆರ್ಯರು ಭಾರತಕ್ಕೆ ಬರುವ ಮುಂಚೆಯೇ ಇವರು ಇಲ್ಲಿಗೆ ಬಂದವರು. ಜಗತ್ತಿನಲ್ಲಿ ನಾಗರಿಕತೆಯ ವಿಕಾಸ ಪ್ರಾರಂಭದಿಂದಲೇ ಇವರು ಭಾರತದಲ್ಲಿ ನೆಲೆಸಿದ್ದರು. ಆಮೇಲೆ ಉತ್ತರದಲ್ಲಿ ಆರ್ಯರ ಪ್ರಾಬಲ್ಯ ಹೆಚ್ಚಾಗಿ ದ್ರಾವಿಡರು ದಕ್ಷಿಣದ ಕಡೆಗೆ ಬಂದಿರಬೇಕು ಎಂದು ಇತಿಹಾಸತಜ್ಞರ ಅಭಿಪ್ರಾಯ. ಭಾರತಕ್ಕೆ ಬರುವ ಮೊದಲು ಈ ಜನಾಂಗದವರು ಭಾರತದ ಉತ್ತರದಲ್ಲಿ ಆರ್ಯರ ಪ್ರಾಬಲ್ಯ ಹೆಚ್ಚಾಗಿ ದ್ರಾವಿಡರು ದಕ್ಷಿಣದ ಕಡೆಗೆ ಬಂದಿರಬೇಕು ಎಂದು ಇತಿಹಾಸತಜ್ಞರ ಅಭಿಪ್ರಾಯ. ಭಾರತಕ್ಕೆ ಬರುವ ಮೊದಲು ಈ ಜನಾಂಗದವರು ಭಾರತದ ಉತ್ತರದಲ್ಲಿ ಸೈಬೀರಿಯದ ಕಡೆಯಲ್ಲಿದ್ದರೆಂದು ಹಂಗೇರಿ, ಫಿನಿಶ್ ಮುಂತಾದ ಭಾಷೆಗಳಲ್ಲಿ ಕಂಡುಬರುವ ಕೆಲವು ದ್ರಾವಿಡ ಶಬ್ದಗಳ ಆಧಾರದಿಂದ ಊಹಿಸಬಹುದು. ಸಿಥಿಯನ್ ಹಾಗೂ ಸುಮೇರಿಯನ್ ಭಾಷೆಗಳನ್ನಾಡುವ ಜನಾಂಗದೊಡನೆ ಮೂಲ ದ್ರಾವಿಡ ಜನಾಂಗ ಸಂಪರ್ಕ ಹೊಂದಿತ್ತೆಂದು ಊಹಿಸಲು ಹಲವು ಆಧಾರಗಳಿವೆ. ಮಧ್ಯ ಹಾಗೂ ಪಶ್ಚಿಮ ಏಷ್ಯದಲ್ಲಿನ ಈ ದ್ರಾವಿಡ ಜನ ಬಲೂಚಿಸ್ತಾನದ ಮಾರ್ಗವಾಗಿ ಸಿಂಧ್ ಕಣಿವೆಯ ಮೂಲಕ ಇಲ್ಲಿಗೆ ಬಂದು ಪುರ್ವದಲ್ಲಿ ಬಿಹಾರದವರೆಗೂ ದಕ್ಷಿಣದಲ್ಲಿ ಶ್ರೀಲಂಕದವರೆಗೂ ವಿಸ್ತರಿಸಿ ನೆಲೆಸಿದರೆಂಬುದನ್ನು ಬಲೂಚಿಸ್ತಾನದಲ್ಲಿ ಇನ್ನೂ ಆಡುನುಡಿಯಾಗಿ ಉಳಿದಿರುವ ಬ್ರಾಹು ಈ ಭಾಷೆ, ಹರಪ್ಪ ಮೊಹೆಂಜದಾರೊ ಅವಶೇಷಗಳು, ಬಿಹಾರ್ ಪ್ರದೇಶದಲ್ಲಿ ಪ್ರಚಾರದಲ್ಲಿರುವ ಕುಡುಖ್ ಮಾಲ್ಟೋ ಭಾಷೆಗಳು ಹಾಗೂ ಶ್ರೀಲಂಕದವರೆಗೆ ಹಬ್ಬಿದ ತಮಿಳು ಭಾಷೆ ಮುಂತಾದವುಗಳ ಆಧಾರದಿಂದ ತಿಳಿಯಬಹುದು. ಈ ಜನಾಂಗದ ಮೂಲಭಾಷೆಯನ್ನು ಮೂಲದ್ರಾವಿಡ ಎಂದು ಕರೆಯಬಹುದು. ಜನಾಂಗ ಕವಲು ಕವಲಾಗಿ ಒಡೆದು ಹೋದಾಗ ಈ ಕರ್ಣಾಟಕ ಪ್ರದೇಶದಲ್ಲಿ ನೆಲೆಸಿದ ಗುಂಪಿನ ಉಪಭಾಷೆಯಲ್ಲಿ ಉಂಟಾದ ಮಾರ್ಪಾಡುಗಳಿಂದಾಗಿ ಅದು ಇತರ ಉಪಭಾಷೆಗಳಿಂದ ಪ್ರತ್ಯೇಕವಾಗಿ ಕನ್ನಡವೆನಿಸಿತು ಎಂದು ಹೇಳಬಹುದು.

ಹೀಗೆ ಪ್ರತ್ಯೇಕಿಸಲ್ಪಟ್ಟ ಆಡುನುಡಿ ಯಾವ ಶತಮಾನದಿಂದ ಸ್ವತಂತ್ರ ಭಾಷೆಯಾಗಿ ಪರಿವರ್ತನೆಗೊಂಡಿತು ಎಂದು ನಿಶ್ಚಿತವಾಗಿ ಹೇಳಬರುವುದಿಲ್ಲ. ಒಂದು ಭಾಷೆಯಲ್ಲಿ ಸಾಹಿತ್ಯ ಸೃಷ್ಟಿಯಾಗುವುದಕ್ಕಿಂತ ಎಷ್ಟೋ ಶತಮಾನ ಹಿಂದೆಯೇ ಆ ಭಾಷೆ ಆಡುನುಡಿಯಾಗಿ ಬಳಕೆಯಲ್ಲಿರಬಹುದು. ಆದರೂ ಉಪಲಬ್ದ ಸಾಹಿತ್ಯ, ಶಾಸನ ಹಾಗೂ ಇತರ ಭಾಷೆಗಳಲ್ಲಿನ ಉಲ್ಲೇಖದಿಂದ ಈ ಭಾಷೆ ಇಂಥ ಶತಮಾನಕ್ಕಿಂತ ಹಿಂದೆಯೇ ಬಳಕೆಯಲ್ಲಿದ್ದಿರಬೇಕೆಂದು ಮಾತ್ರ ಖಚಿತವಾಗಿ ಹೇಳಬಹುದು.

ವೇದಕಾಲದಲ್ಲಿಯೂ ಕನ್ನಡ ಭಾಷೆ ಪ್ರಚಾರದಲ್ಲಿತ್ತೆಂದು ಊಹಿಸಲು ಕೆಲವು ಆಧಾರಗಳುಂಟು. ಛಾಂದೋಗ್ಯ ಉಪನಿಷತ್ತಿನಲ್ಲಿ ಮಟಚಿ ಮೊದಲಾದ ಕನ್ನಡ ಶಬ್ದಗಳಿವೆ. ಪದ್ಮ ಹಾಗೂ ಮಾರ್ಕಂಡೇಯ ಪುರಾಣಗಳಲ್ಲಿ ಕರ್ನಾಟಕದ ಪ್ರಸ್ತಾಪವಿದೆ. ಪ್ರ.ಶ. 2ನೆಯ ಶತಮಾನದ್ದೆನ್ನಲಾದ ಒಂದು ಗ್ರೀಕ್ ಪ್ರಹಸನದಲ್ಲಿ ಕನ್ನಡ ಮಾತುಗಳಿರುವುದನ್ನು ಕಂಡು ಪ್ರ.ಶ. 2ನೆಯ ಶತಮಾನಕ್ಕಿಂತ ಮುಂಚೆಯೇ ದಕ್ಷಿಣ ಕನ್ನಡದ ಸಮುದ್ರ ತೀರದಲ್ಲಿ ಕನ್ನಡ ವ್ಯವಹಾರದಲ್ಲಿತ್ತು ಎಂದು ಗೋವಿಂದ ಪೈ ಮುಂತಾದ ವಿದ್ವಾಂಸರು ಸಾಧಿಸಿದ್ದಾರೆ. ಇದೂ ಅಲ್ಲದೆ ರಾಮಾಯಣ ಮಹಾಭಾರತಾದಿ ಗ್ರಂಥಗಳಲ್ಲಿ ಬರುವ ವಿವರಗಳಿಂದಲೂ ಪ್ರ.ಶ. 2ನೆಯ ಶತಮಾನದ ತಮಿಳು ಗ್ರಂಥ ಶಿಲಪ್ಪದಿಗಾರಂದಲ್ಲಿ ಬರುವ ಕರುನಾಡರ್ ಎಂಬ ಪ್ರಯೋಗದಿಂದಲೂ ಪ್ರಸಕ್ತಶಕದ ಆರಂಭಕ್ಕಿಂತ ಮುಂಚೆಯೇ ಕನ್ನಡ ಭಾಷೆ ಈ ಪ್ರಾಂತ್ಯದ ಜನರ ಆಡುನುಡಿಯಾಗಿತ್ತೆಂದು ಊಹಿಸಬಹುದು. ಮೊಹೆಂಜದಾರೊ ಮತ್ತು ಹರಪ್ಪಗಳ ಅವಶೇಷಗಳ ಸಂಶೋಧನೆಯಿಂದ ಈ ಊಹೆಗೆ ಮತ್ತಷ್ಟು ಪುಷ್ಟಿ ದೊರಕಿದೆ. ಅಲ್ಲಿ ಕಾಣಬರುವ ಸಂಸ್ಕೃತಿ ಆರ್ಯರಿಗೂ ಹಿಂದಿದ್ದ ದ್ರಾವಿಡ ಸಂಸ್ಕೃತಿ ಎಂದು ಹೇಳುವ ವಿದ್ವಾಂಸರ ವಾದದಲ್ಲಿ ಹುರುಳಿಲ್ಲದಿಲ್ಲ.

ಪ್ರ.ಶ. 5ನೆಯ ಶತಮಾನದ ಶಾಸನಗಳೂ 9ನೆಯ ಶತಮಾನದ ಸಾಹಿತ್ಯ ಗ್ರಂಥಗಳೂ ನಮಗೆ ಸಿಕ್ಕಿದ ಲಿಖಿತ ಪುರಾವೆಗಳಲ್ಲಿ ಅತ್ಯಂತ ಪ್ರಾಚೀನವಾದವುಗಳು. ಪ್ರ.ಶ. 450 ಹಲ್ಮಿಡಿ ಶಾಸನ ನಮಗೆ ಸಿಕ್ಕಿದ ಶಾಸನಗಳಲ್ಲಿ ಅತ್ಯಂತ ಪ್ರಾಚೀನವೆನಿಸಿದೆ. ಇದರ ಭಾಷೆಯನ್ನು ನೋಡಿದರೆ ಆ ಸಮಯಕ್ಕಾಗಲೇ ಕನ್ನಡದಲ್ಲಿ ಪ್ರೌಢವಾದ ಗದ್ಯದ ಬಳಕೆಯಿತ್ತೆಂದೂ ಸಂಸ್ಕೃತ ಭಾಷೆಯ ಪ್ರಭಾವ ಕನ್ನಡದ ಮೇಲೆ ಸಾಕಷ್ಟಾಗಿತ್ತೆಂದೂ ತಿಳಿಯಬಹುದು. ಆ ತರುವಾಯ ಸಿಕ್ಕಿದ 9-10ನೆಯ ಶತಮಾನಗಳ ಕವಿರಾಜಮಾರ್ಗ, ವಡ್ಡಾರಾಧನೆ, ಪಂಪಭಾರತ ಮುಂತಾದ ಗ್ರಂಥಗಳಲ್ಲಿ ಹಿಂದಿನ ಕವಿಗಳನ್ನು, ಕಾವ್ಯಪ್ರಕಾರಗಳನ್ನು ಸ್ಮರಿಸಿರುವುದರಿಂದಲೂ ಕವಿರಾಜಮಾರ್ಗಕಾರ ತನಗಿಂತ ಹಿಂದಿದ್ದ ಕನ್ನಡವನ್ನು ಹಳಗನ್ನಡ ಎಂದು ಕರೆದಿರುವುದರಿಂದಲೂ ಈ ಕವಿಗಳಿಗಿಂತಲೂ ಶಾಸನಕಾರರಿಗಿಂತಲೂ ಎಷ್ಟೋ ಶತಮಾನಗಳ ಹಿಂದೆಯೇ ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಕೃಷಿಯಾಗಿತ್ತೆಂದು ನಿಸ್ಸಂದೇಹವಾಗಿ ಹೇಳಬಹುದು. ಹೀಗಾಗಿ ಪ್ರಸಕ್ತಶಕದ ಆರಂಭ ಕಾಲದಿಂದಲೇ ಕನ್ನಡ ಭಾಷೆ ಸುಸಂಸ್ಕೃತರಾದ ಕನ್ನಡಿಗರ ಆಡುನುಡಿಯಾಗಿತ್ತೆಂದೂ ಅವರು ಅದನ್ನು ಸಾಹಿತ್ಯ ಶಾಸನಾದಿಗಳನ್ನು ಬರೆಯಲು ಉಪಯೋಗಿಸುತ್ತಿದ್ದರೆಂದೂ ನಿರ್ವಿವಾದವಾಗಿ ಹೇಳಬಹುದು.

ನಮಗೆ ಸಿಕ್ಕಿರುವ ಪ್ರಾಚೀನ ದಾಖಲೆಗಳಲ್ಲಿಯೂ ಮುಂದಿನ ಕನ್ನಡ ಸಾಹಿತ್ಯದಲ್ಲಿಯೂ ಸಂಸ್ಕೃತದ ಪ್ರಭಾವ ತುಂಬ ಕಂಡುಬಂದರೂ ಚಾರಿತ್ರಿಕವಾಗಿ ಸಂಸ್ಕೃತ ಅಥವಾ ಇತರ ಆರ್ಯಭಾಷೆಗಳಿಂದ ಕನ್ನಡ ಜನಿಸಲಿಲ್ಲ. ಇದರ ಧ್ವನಿವ್ಯವಸ್ಥೆ, ವ್ಯಾಕರಣ ವ್ಯವಸ್ಥೆ ಮತ್ತು ವಾಕ್ಯರಚನಾ ಕ್ರಮ ಆರ್ಯಭಾಷೆಗಳಿಂದ ಭಿನ್ನವಾಗಿದ್ದು ತಮಿಳು ತೆಲುಗು ಇತ್ಯಾದಿ ಭಾಷೆಗಳೊಡನೆ ಹೋಲುವುದರಿಂದಲೇ ಈ ಭಾಷೆಗಳು ದ್ರಾವಿಡವೆಂಬ ಬೇರೆ ಬುಡಕಟ್ಟಿಗೆ ಸೇರಿದವು ಎಂದು ಹೇಳುವುದು. ಆರ್ಯ ಭಾಷೆಗಳಲ್ಲಿಲ್ಲದ ಹ್ರಸ್ವ ಎ, ಒ ಕಾರಗಳು, ಅ ಳ, ಅ ವ್ಯಂಜನಗಳು ದ್ರಾವಿಡ ಭಾಷೆಗಳಲ್ಲಿವೆ. ಆರ್ಯಭಾಷೆಗಳಲ್ಲಿರುವ ಮಹಾಪ್ರಾಣಗಳೂ ಶ. ಷ ವ್ಯಂಜನಗಳೂ , ಒ, ಓ ಸ್ವರಗಳೂ ದ್ರಾವಿಡ ಭಾಷೆಯ ಮೂಲ ಶಬ್ದಗಳಲ್ಲಿಲ್ಲ. ಸ್ವರಾಂತಪದಗಳ ಬಾಹುಳ್ಯ ಮತ್ತು ಶಬ್ದಾದಿಯ ವ್ಯಂಜನ ಗುಚ್ಛಗಳ ಅಭಾವವೂ ದ್ರಾವಿಡ ಭಾಷೆಗಳ ವೈಶಿಷ್ಟ್ಯವೆನ್ನಬಹುದು. ಆರ್ಯಭಾಷೆಗಳಲ್ಲಿರುವಂಥ ಲಿಂಗ ವ್ಯವಸ್ಥೆಯಾಗಲಿ, ಕರ್ಮಣಿ ಪ್ರಯೋಗವಾಗಲಿ, ವಿಶೇಷಣಗಳಲ್ಲಿ ಲಿಂಗವಿವಕ್ಷೆಯಾಗಲಿ, ತರತಮ ಭಾವವಾಗಲೀ ದ್ರಾವಿಡ ಭಾಷೆಗಳಲ್ಲಿಲ್ಲ. ದ್ರಾವಿಡ ಭಾಷೆಗಳಲ್ಲಿ ಆರ್ಯಭಾಷೆ ಗಳಲ್ಲಿಲ್ಲದಿರುವ ಕ್ರಿಯಾಪದದ ನಿಷೇಧ ರೂಪಗಳು ಕೆಲವು ವಿಶಿಷ್ಟ ಪ್ರಯೋಗದ ಕೃದ್ವಾಚಿಗಳೂ ಕ್ರಿಯಾಧಾತುವನ್ನು ನಾಮಪದವಾಗಿ ಉಪಯೋಗಿಸುವ ಸಂಪ್ರದಾಯವೂ ಉತ್ತಮ ಪುರುಷ ಬಹುವಚನ ಸರ್ವನಾಮದಲ್ಲಿ ಕೇಳುವವನನ್ನು ಸೇರಿಸಿ ಹೇಳುವ ಅಥವಾ ಬಿಟ್ಟು ಹೇಳುವ ಸಮಾವಿಷ್ಟ ಮತ್ತು ಅಸಮಾವಿಷ್ಟ ರೂಪಗಳೂ ಇವೆ. ಅಲ್ಲದೆ ಈ ಎರಡು ಬುಡಕಟ್ಟುಗಳಿಗೆ ಸೇರಿದ ಭಾಷೆಗಳ ಕ್ರಿಯಾರೂಪಗಳ ವ್ಯವಸ್ಥೆಯಲ್ಲಿಯೂ ನಾಮಪದಗಳ ವಿಭಕ್ತಿ ಪ್ರತ್ಯಯ ವ್ಯವಸ್ಥೆಯಲ್ಲಿಯೂ ತುಂಬ ವ್ಯತ್ಯಾಸಗಳಿವೆ. ಹಾಗೆ ರಚನಾತ್ಮಕವಾಗಿ ಆರ್ಯಭಾಷೆಗಳಿಗಿಂತ ಭಿನ್ನವಾಗಿದ್ದರೂ ಕೆಲವು ಚಾರಿತ್ರಿಕ ಹಾಗೂ ಸಾಮಾಜಿಕ ಕಾರಣ ಗಳಿಂದಾಗಿ ಎಷ್ಟೋ ಸಂಸ್ಕೃತ ಶಬ್ದಗಳಲ್ಲಿ ಕನ್ನಡವೇ ಮೊದಲಾದ ದ್ರಾವಿಡ ಭಾಷೆಗಳಲ್ಲಿ ಸೇರಿಕೊಂಡಿವೆ. ಸಂಸ್ಕೃತದಷ್ಟು ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ದ್ರಾವಿಡ ಭಾಷೆಗಳು ಸಂಸ್ಕೃತದ ಭಂಡಾರಕ್ಕೆ ತಮ್ಮ ಕೊಡುಗೆಗಳನ್ನು ನೀಡಿವೆಯೆಂಬುದನ್ನು ಇಲ್ಲಿ ಸ್ಮರಿಸಬಹುದು.

ಹೀಗೆ ಸಂಸ್ಕೃತ ಹಾಗೂ ಇತರ ಆರ್ಯ ಭಾಷೆಗಳಿಂದ ಭಿನ್ನವಾದ ಈ ದ್ರಾವಿಡ ಭಾಷಾ ಪರಿವಾರಕ್ಕೆ ಸೇರಿದ 25ಕ್ಕೂ ಮಿಕ್ಕಿದ ಭಾಷೆಗಳನ್ನು ಭೌಗೋಳಿಕವಾಗಿ ಮತ್ತು ಚಾರಿತ್ರಿಕವಾಗಿ ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಬಿಹಾರದ ಕುಡುಖ್, ಮಾಲ್ಟೋ ಮತ್ತು ಬಲೂಚಿಸ್ತಾನದ ಬ್ರಾಹು ಈ ಭಾಷೆಗಳನ್ನು ಉತ್ತರ ದ್ರಾವಿಡ ಭಾಷೆಗಳೆಂದೂ ದಕ್ಷಿಣದ ತಮಿಳು, ಮಲೆಯಾಳ, ಕನ್ನಡ, ತುಳು ಇತ್ಯಾದಿಗಳನ್ನು ದಕ್ಷಿಣ ದ್ರಾವಿಡ ಭಾಷೆಗಳೆಂದೂ ವರ್ಗೀಕರಿಸಬಹುದು. ದ್ರಾವಿಡ ಭಾಷೆಗಳನ್ನಾಡುವ ಜನರ ಸಂಖ್ಯೆ ಸು. 13 ಕೋಟಿಯಿದೆ. ಅವರಲ್ಲಿ ಸು. 1/6 ಭಾಗದಷ್ಟು ಜನಕ್ಕೆ ಕನ್ನಡ ಆಡುಮಾತಾಗಿದೆ ಎಂದು ಸ್ಥೂಲವಾಗಿ ಹೇಳಬಹುದು.

ಹೀಗೆ 25ಕ್ಕೂ ಹೆಚ್ಚಾಗಿ ಒಡೆದ ದ್ರಾವಿಡ ಭಾಷಾ ಪ್ರಭೇದಗಳಲ್ಲೊಂದಾದ ಕನ್ನಡದ ಮುಖ್ಯ ಲಕ್ಷಣಗಳೇನು. ಅದು ತನ್ನ ಮೂಲದ್ರಾವಿಡದ ರೂಪದಿಂದ ಯಾವ ರೀತಿ ವ್ಯತ್ಯಾಸಗಳನ್ನು ಪಡೆದಿದೆ. ಆಮೇಲೆ ತನ್ನ ಎರಡು ಸಾವಿರ ವರ್ಷಗಳ ಸಾಹಿತ್ಯ ಹಾಗೂ ಆಡುನುಡಿಯ ಚರಿತ್ರೆಯಲ್ಲಿ ಏನೇನು ಬದಲಾವಣೆಗಳನ್ನು ಮಾಡಿಕೊಂಡಿದೆ. ಇದರ ಆಧುನಿಕ ಸ್ವರೂಪದ ವೈಶಿಷ್ಟ್ಯಗಳೇನು-ಎಂಬುದನ್ನು ಇಲ್ಲಿ ಸ್ಥೂಲವಾಗಿ ನಿರೂಪಿಸಬಹುದು.

2 ಸಾವಿರ ವರ್ಷಗಳ ಇತಿಹಾಸವಿರುವ ಆಡುನುಡಿಯಲ್ಲಿ ನಡೆದ ಮಾರ್ಪಾಡುಗಳನ್ನು ಗುರುತಿಸಲು ಬೇರೆ ಬೇರೆ ಶತಮಾನಗಳ ಆಡುನುಡಿಯ ಸ್ವರೂಪಕ್ಕೆ ದಾಖಲೆಗಳಿಲ್ಲ. ಆದರೆ ಶಾಸನ ಹಾಗೂ ಸಾಹಿತ್ಯಗ್ರಂಥಗಳ ಸಹಾಯದಿಂದ ಲಿಖಿತ ಭಾಷೆಯಲ್ಲಿ ಯಾವ ರೀತಿಯ ಪರಿವರ್ತನೆ ನಡೆದಿದೆ ಎಂದು ತಿಳಿಯಬಹುದು. ಭಾಷೆಯ ವಿಕಾಸದ ಆಧಾರದ ಮೇಲೆ ಕನ್ನಡ ಸಾಹಿತ್ಯದ ಚರಿತ್ರೆಯನ್ನು ಕೆಲವು ಯುಗಗಳಾಗಿ ವಿಂಗಡಿಸಬಹುದು-ಈ ವಿಭಜನೆಯಲ್ಲಿ ರೈಸ್, ಕಿಟ್ಟೆಲ್, ಬಿ.ಎಂ.ಶ್ರೀ. ಅವರಲ್ಲಿ ಮತಭೇದವಿದೆ. ಸಾಮಾನ್ಯವಾಗಿ ನಾವು ನಾಲ್ಕು ಕಾಲಗಳನ್ನು ಗುರುತಿಸಬಹುದು. 5, 6, 7ನೆಯ ಶತಮಾನಗಳವರೆಗಿನ ಶಾಸನದ ಭಾಷೆಯನ್ನು ಪುರ್ವದ ಹಳಗನ್ನಡ ಎಂದೂ ಅಲ್ಲಿಂದ 13ನೆಯ ಶತಮಾನದ ವರೆಗಿನ ಜೈನ ಕವಿಗಳ ಕಾವ್ಯದ ಭಾಷೆಯನ್ನು ಹಳಗನ್ನಡ ಎಂದು ಅಲ್ಲಿಂದ 16, 17ನೆಯ ಶತಮಾನಗಳವರೆಗಿನ ವೀರಶೈವ ಹಾಗೂ ವೈಷ್ಣವ ಸಾಹಿತ್ಯದ ಭಾಷೆಯನ್ನು ನಡುಗನ್ನಡ ವೆಂದೂ ಅಲ್ಲಿಂದೀಚೆಗೆ ಸಾಹಿತ್ಯದ ಭಾಷೆಯನ್ನು ಹೊಸಗನ್ನಡ ಎಂದೂ ಹೇಳಬಹುದು. ಹೊಸಗನ್ನಡದ ಆಡುಮಾತನ್ನು ಭೌಗೋಳಿಕ ಹಾಗೂ ಸಾಮಾಜಿಕ ಪ್ರಭೇದಗಳಾಗಿ ವಿಂಗಡಿಸಿ ಅವುಗಳ ಸ್ವರೂಪವನ್ನು ತಿಳಿಯಬಹುದು. ಕನ್ನಡಿಗರ ಆಡುನುಡಿ ಹಿಂದೆ ಹೇಗಿತ್ತೆಂಬ ಬಗ್ಗೆ ದಾಖಲೆಗಳು ಇಲ್ಲದಿರುವುದರಿಂದ ಲಿಖಿತಭಾಷೆಯ ಚಾರಿತ್ರಿಕ ಸ್ವರೂಪವನ್ನು ಮಾತ್ರ ತಿಳಿಯಲು ಸಾಧ್ಯ. ಲಿಖಿತ ಭಾಷೆಯ ಸ್ವರೂಪವನ್ನು ತಿಳಿಯಲು ಕನ್ನಡ ಕವಿಗಳ ಕಾವ್ಯಗಳನ್ನೂ ನಾಗವರ್ಮ, ಕೇಶಿರಾಜ, ಭಟ್ಟಾಕಳಂಕರು ಬರೆದ ವ್ಯಾಕರಣ ಗ್ರಂಥಗಳನ್ನೂ ಪರಿಶೀಲಿಸಬೇಕು. 12ನೆಯ ಶತಮಾನದ ನಾಗವರ್ಮ ಶಬ್ದಸ್ಮೃತಿ ಛಂದೋವಿಚಿತಿ ಎಂಬ ವ್ಯಾಕರಣವನ್ನು ಕನ್ನಡದಲ್ಲಿಯೂ ಕರ್ಣಾಟಕ ಭಾಷಾಭೂಷಣ ಎಂಬ ವ್ಯಾಕರಣ ಗ್ರಂಥವನ್ನು ಸಂಸ್ಕೃತದಲ್ಲಿಯೂ ಬರೆದಿದ್ದಾನೆ. 13ನೆಯ ಶತಮಾನದ ಕೇಶಿರಾಜ ಶಬ್ದಮಣಿದರ್ಪಣವೆಂಬ ವ್ಯಾಕರಣ ಗ್ರಂಥವನ್ನು ಕನ್ನಡದಲ್ಲಿ ಬರೆದಿದ್ದಾನೆ. 17ನೆಯ ಶತಮಾನದ ಭಟ್ಟಾಕಳಂಕ ಬರೆದ ಶಬ್ದಾನುಶಾಸನ ಸಂಸ್ಕೃತದಲ್ಲಿದೆ ಇವುಗಳಲ್ಲಿ ಶಬ್ದಮಣಿದರ್ಪಣವೇ ಎಲ್ಲಕ್ಕಿಂತ ಪ್ರಸಿದ್ಧವಾಗಿದೆ.

ಕನ್ನಡ ವರ್ಣಮಾಲೆಯಲ್ಲಿ ಒಟ್ಟು 47 ಅಕ್ಷರಗಳಿವೆ. ಸಂಸ್ಕೃತ ವರ್ಣಮಾಲೆಯ 52 ಅಕ್ಷರಗಳಲ್ಲಿ ಋ, , ಒ, ಓ ಎಂಬ ಸ್ವರಗಳು, ಶ, ಷ, ಳ ಎಂಬ ವ್ಯಂಜನಗಳು ಮೂರು ಯೋಗವಾಹಗಳು ಸೇರಿ ಹತ್ತು ಅಕ್ಷರಗಳು ಕನ್ನಡದಲ್ಲಿಲ್ಲ. ಅವಕ್ಕೆ ಬದಲಾಗಿ ಎ. ಒ, ವ ವಿ ಕುಳ ಎಂಬ ಐದು ದೇಶೀಯ ಅಕ್ಷರಗಳನ್ನು ಸೇರಿಸಿದರೆ 47 ಅಕ್ಷರಗಳಾಗುತ್ತವೆ. ಆಗ ಕನ್ನಡ ವರ್ಣಮಾಲೆ ಈ ರೂಪ ತಾಳುತ್ತದೆ.

ಸ್ವರಗಳು : ಅ ಆ ಇ ಈ ಉ ಊ ಎ ಏ ಐ ಒ ಓ ಔ
ವ್ಯಂಜನಗಳು :
ವರ್ಗೀಯ :
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಆವರ್ಗೀಯ : ಯ ರ ಲ ವ ಸ ಹ ಳ
ಅನುಸ್ವಾರ :ಂ

ಈ ನಲವತ್ತೇಳರಲ್ಲೂ ಹತ್ತು ಮಹಾಪ್ರಾಣಗಳು ಸಂಸ್ಕೃತ ತತ್ಸಮ ಪದಗಳಲ್ಲಿ ಮಾತ್ರ ಕಂಡುಬರುವುದರಿಂದ ಇವು ಕನ್ನಡದ ಜಾಯಮಾನಕ್ಕೆ ಸೇರಿದವುಗಳಲ್ಲ ಎನ್ನಬಹುದು. ಕನ್ನಡದ ಒಂದೆರಡು ಸಂಖ್ಯಾವಾಚಕ ಶಬ್ದಗಳಲ್ಲಿ ಹಾಗೂ ಅನುಕರಣ ವಾಚಕಗಳಲ್ಲಿ ಮಾತ್ರ ಮಹಾಪ್ರಾಣಗಳು ಕಾರಣಾಂತರದಿಂದ ಸೇರಿಹೋಗಿವೆ. ಐ ಔ ಗಳೂ ಕನ್ನಡಕ್ಕೆ ಅವಶ್ಯವಲ್ಲ. ಅವುಗಳನ್ನು ಅಯ್ ಅವ್ ಎಂದೂ ಬರೆಯಬಹುದು. ಸಂಸ್ಕೃತ ಶಬ್ದಗಳನ್ನು ಬರೆಯಲಿಕ್ಕಾಗಿ ಖು ಎಂಬ ಸ್ವರವನ್ನು ಶ, ಷ, ವಿಸರ್ಗ ಮುಂತಾದ ವ್ಯಂಜನಗಳನ್ನು ಸೇರಿಸಬೇಕಾಗುತ್ತದೆ. ಆಧುನಿಕ ಕನ್ನಡದಲ್ಲಿ ಆಂಗ್ಲ ಭಾಷೆಯ ಪದಗಳೂ ಸೇರಿರುವುದರಿಂದ ಅವುಗಳನ್ನು ಬರೆಯಲಿಕ್ಕೆ ಫ಼ (ಈ) ಜ಼ (ಚ) ಮುಂತಾದ ವರ್ಣಗಳನ್ನು ಕಲ್ಪಸಿಕೊಳ್ಳಬೇಕಾಗುತ್ತದೆ. ಕನ್ನಡದ ನಾಮಪದಗಳಲ್ಲಿ ಲಿಂಗ, ವಚನ, ವಿಭಕ್ತಿಗಳ ವಿವಕ್ಷೆಯಿದೆ. ನಾಮಪದಕ್ಕೆ ಲಿಂಗ, ವಚನವನ್ನು ಸೂಚಿಸುವ ಪ್ರತ್ಯಯ ಮತ್ತು ವಿಭಕ್ತಿಪ್ರತ್ಯಯ ಸೇರುತ್ತವೆ. ಕನ್ನಡದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗಗಳೆಂಬ ಮೂರು ಲಿಂಗಗಳೂ ಏಕವಚನ, ಬಹುವಚನಗಳೆಂಬ ಎರಡು ವಚನಗಳೂ ಐದು ವಿಭಕ್ತಿಗಳೂ ಇವೆ. ಉತ್ತಮಪುರುಷ ಹಾಗೂ ಮಧ್ಯಮಪುರುಷ ಸರ್ವನಾಮಗಳಲ್ಲಿ ಲಿಂಗ ವಿವಕ್ಷೆ ಇಲ್ಲ. ಪ್ರಥಮಪುರುಷ ಸರ್ವನಾಮ ಹಾಗೂ ಇತರ ನಾಮಪದಗಳಲ್ಲಿ ಮಹತ್, ಅಮಹತ್ ಅಥವಾ ಮೇಲು ಜಾತಿ ಮತ್ತು ಕೀಳು ಜಾತಿ ಎಂಬ ಭೇದವನ್ನು ಕಾಣಬಹುದು. ಮನುಷ್ಯವಾಚಕ ಮತ್ತು ವಿವೇಚನಾಶಕ್ತಿಯುಳ್ಳ ಜೀವಿಗಳನ್ನು ಹೇಳುವ ಶಬ್ದಗಳನ್ನು ಮೇಲು ಜಾತಿ ಎಂದೂ ಇತರ ಪ್ರಾಣಿವಾಚಕ ಹಾಗೂ ನಿರ್ಜೀವ ವಸ್ತುಗಳನ್ನು ದ್ಯೋತಿಸುವ ಶಬ್ದಗಳನ್ನು ಕೀಳು ಜಾತಿ ಎಂದೂ ಕರೆಯಬಹುದು. ಮಹತ್ ಶಬ್ದಗಳಲ್ಲಿ ನೈಸರ್ಗಿಕ ಲಿಂಗಭೇದಕ್ಕನುಸಾರವಾಗಿ ಪುಲ್ಲಿಂಗ, ಸ್ತ್ರೀಲಿಂಗವೆಂಬ ಭೇದವಿದೆ. ಅಮಹತ್ ಶಬ್ದ ಯಾವಾಗಲೂ ನಪುಂಸಕ ಲಿಂಗವಾಗಿರುತ್ತದೆ. ಪುಂಸ್ತ್ರೀಭೇದವನ್ನು ಏಕವಚನದಲ್ಲಿ ಅನ್ ಆಳ್ ಪ್ರತ್ಯಯಗಳೂ ಬಹುವಚನದಲ್ಲಿ ಆರ್, ಇರ್, ದಿರ್, ವಿರ್ ಪ್ರತ್ಯಯಗಳೂ ಸೂಚಿಸುತ್ತವೆ. ನಪುಂಸಕಲಿಂಗ ಸೂಚಕವಾಗಿ ಕೆಲವೊಮ್ಮೆ ಅಮ್ ಪ್ರತ್ಯಯವೂ ಬಹುವಚನದಲ್ಲಿ ಗಳ ಪ್ರತ್ಯಯವೂ ಸೇರುತ್ತವೆ. ಸರ್ವನಾಮದಲ್ಲಿ ನಪುಂಸಕ ಲಿಂಗ ಪ್ರತ್ಯಯಗಳು ಏಕವಚನ ಬಹುವಚನಗಳಲ್ಲಿ ಅನುಕ್ರಮವಾಗಿ ದು, ವು ಎಂದಿರುತ್ತವೆ. ಆಧುನಿಕ ಕನ್ನಡ ನಾಮಪದಗಳಲ್ಲಿ ಏಕವಚನ ಪ್ರತ್ಯಯವೂ ನಪುಂಸಕ ಲಿಂಗದಲ್ಲಿ ಬಹುವಚನ ಪ್ರತ್ಯಯವೂ ಲೋಪವಾಗುತ್ತವೆ.

ಕನ್ನಡದಲ್ಲಿ ಐದು ವಿಭಕ್ತಿಗಳಿವೆ. ಸಂಸ್ಕೃತದ ಪ್ರಥಮಾ ಮತ್ತು ಪಂಚಮೀ ಕನ್ನಡದಲ್ಲಿಲ್ಲ ಎನ್ನಬಹುದು. ಪ್ರಥಮಾ ವಿಭಕ್ತಿಯ ಅರ್ಥದಲ್ಲಿ ಪ್ರತ್ಯಯವಾವುದೂ ಬರದೆ ಪ್ರಕೃತಿಮಾತ್ರವೇ ಪ್ರಯೋಗದಲ್ಲಿದೆ. ಪಂಚಮೀವಿಭಕ್ತಿಯ ಅರ್ಥದಲ್ಲಿ ಪ್ರತ್ಯೇಕವಾದ ವಿಭಕ್ತಿ ಪ್ರತ್ಯಯವಿರದೆ ದೆಸೆ, ಅತ್ತ ಎಂಬ ಶಬ್ದಗಳನ್ನು ಸೇರಿಸಿ ಅದರ ಮೇಲೆ ತೃತೀಯ ವಿಭಕ್ತಿ ಪ್ರತ್ಯಯವಾದ ಇಂದವನ್ನು ಸೇರಿಸುವುದು ವಾಡಿಕೆ. ಹಳಗನ್ನಡದ ಮ್ ಎಂಬುದನ್ನು ಪ್ರಥಮಾವಿಭಕ್ತಿ ಪ್ರತ್ಯಯವೆಂದು ಪರಿಗಣಿಸಿದ್ದರೂ ಅದು ವಿಭಕ್ತಿ ಪ್ರತ್ಯಯವಲ್ಲವೆಂದೂ ಲಿಂಗಸೂಚಕವೆಂದೂ ಹೇಳಬಹುದು. ಹೊಸಗನ್ನಡದಲ್ಲಿ ಅದು ಕೂಡ ಲೋಪವಾಗಿದೆ. ದ್ವ್ವಿತೀಯಾವಿಭಕ್ತಿ ಪ್ರತ್ಯಯದ ರೂಪ ಹಳಗನ್ನಡದಲ್ಲಿ ಆಂ, ಅಂ ಎಂದೂ ನಡುಗನ್ನಡದಲ್ಲಿ ಅಂ, ಅನು ಎಂದೂ ಆಗುತ್ತದೆ. ತೃತೀಯಾ ವಿಭಕ್ತಿ ಪ್ರತ್ಯಯವನ್ನು ಹಳಗನ್ನಡ ನಡುಗನ್ನಡದಲ್ಲಿ ಇಂ, ಇಂದಂ ಎಂದೂ ಹೊಸಗನ್ನಡದಲ್ಲಿ ಇಂದ ಎಂದೂ ಕಾಣುತ್ತೇವೆ. ಚತುರ್ಥಿ ವಿಭಕ್ತಿಪ್ರತ್ಯಯ ಕೆ ಅಥವಾ ಗೆ. ಷಷ್ಠೀವಿಭಕ್ತಿ ಪ್ರತ್ಯಯ ಅ. ಸಪ್ತಮೀವಿಭಕ್ತಿ ಪ್ರತ್ಯಯ ಒಳ್, ಒಳಗೆ ಅಥವಾ ಅಲ್ಲಿ. ಈ ವಿಭಕ್ತಿ ಪ್ರತ್ಯಯಗಳೆಲ್ಲ ಮೊದಲು ಸ್ವತಂತ್ರ ಶಬ್ದಗಳಾಗಿದ್ದುವೆಂದೂ ಕಾಲಕ್ರಮದಲ್ಲಿ ಪ್ರತ್ಯಯಗಳಾಗಿ ಮಾರ್ಪಟ್ಟುವೆಂದೂ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಉತ್ತಮಪುರುಷ ಸರ್ವನಾಮಗಳು ಹಳಗನ್ನಡದಲ್ಲಿ ಅನ್ ಆಮ್ ಎಂದಿದ್ದು ನಡುಗನ್ನಡದ ಕಾಲಕ್ಕೆ ನಾನ್ ನಾಮ್ ಆದುವು. ಮಧ್ಯಮಪುರುಷ ಸರ್ವನಾಮಗಳು ನೀನ್ ಮತ್ತು ನೀಮ್. ಪ್ರಥಮಪುರುಷ ಸರ್ವನಾಮಗಳು ಆ, ಇ, ಉ ಎಂಬ ಸ್ಥಾನನಿರ್ದೇಶಿಗಳಿಗೆ ಪುಲ್ಲಿಂಗ ಸ್ತ್ರೀಲಿಂಗ ನಪುಂಸಕಲಿಂಗ ಪ್ರತ್ಯಯಗಳು ಸೇರಿ ಅವನ್ ಇವನ್ ಅದು ಇತ್ಯಾದಿ ರೂಪಗಳು ಸಿದ್ಧಿಸಿವೆ. ಆ ಎಂಬುದು ದೂರವನ್ನೂ ಇ ಎಂಬುದು ಸಮೀಪವನ್ನೂ ಉ ಎಂಬುದು ಎರಡಕ್ಕೂ ಮಧ್ಯವನ್ನೂ ನಿರ್ದೇಶಿಸುತ್ತವೆ. ಉ ಕಾರದಿಂದ ಪ್ರಾರಂಭವಾಗುವ ಸರ್ವನಾಮಗಳು ಹಳಗನ್ನಡದಲ್ಲಿ ಕೆಲವಡೆ ಮಾತ್ರ ಪ್ರಯೋಗದಲ್ಲಿದ್ದು ಆಮೇಲೆ ಕಾಣಬರುವುದಿಲ್ಲ. ಉದಾ : ಆತ ಈತ ಊತ. ಆಕೆ ಈಕೆ ಊಕೆ, ಅದು ಇದು ಉದು, ಪ್ರಶ್ನಾರ್ಥಕ ಸರ್ವನಾಮಗಳು ಆವನ್ ಆವಳ್ ಇತ್ಯಾದಿಗಳಾಗಿದ್ದು ಹೊಸಗನ್ನಡದಲ್ಲಿ ಅವುಗಳ ಆದಿ ಆ ಕಾರದ ಮುಂದೆ ಯ ಕಾರ ಬಂದು ಯಾವನ್ ಯಾವನು ಇತ್ಯಾದಿಗಳಾಗಿವೆ.

ಕನ್ನಡ ಭಾಷೆಯ ಕ್ರಿಯಾಪದಗಳು ಗುಣವಾಚಕ ವಿಶೇಷಗಣಗಳಾಗಿಯೂ ನಾಮಪದಗಳಾಗಿಯೂ ಉಪಯೋಗಿಸಲ್ಪಡುತ್ತವೆ. ಕ್ರಿಯಾಪದಕ್ಕೆ ಹತ್ತುವ ಪುರುಷ ವಚನಸೂಚಕ ಪ್ರತ್ಯಯಗಳೂ ಸರ್ವನಾಮಗಳ ರೂಪಗಳೇ ಎಂಬುದನ್ನು ಗಮನಿಸಬಹುದು. ಉತ್ತಮಪುರುಷ ಏಕವಚನ ಎನ್, ಎನು ಮತ್ತು ಎ. ಬಹುವಚನ ಎಮ್, ಎವು; ಮಧ್ಯಮಪುರುಷ ಏಕವಚನ ಆಯ್, ಎ ಬಹುವಚನ ಇರ್, ಇರಿ; ಪ್ರಥಮಪುರುಷ ಏಕವಚನ ಅನ್, ಆಳ್, ಬಹುವಚನ ಆರ್ ; ನಪುಂಸಕಲಿಂಗ ಏಕವಚನ ಉದು, ಉತ್ತು, ಬಹುವಚನ ಉವು. ಈ ಎಲ್ಲ ಪ್ರತ್ಯಯಗಳೂ ಮೇಲೆ ಹೇಳಿದ ಸರ್ವನಾಮಗಳ ಸವೆದ ರೂಪಗಳೆಂದು ತೋರಿಸುವುದು ಕಷ್ಟವಲ್ಲ. ಈ ಪ್ರತ್ಯಯಗಳನ್ನು ಧಾತುವಿನ ಕೃದ್ವಾಚಿಗಳಿಗೆ ಸೇರಿಸಿ ಬೇರೆ ಬೇರೆ ಕ್ರಿಯಾರೂಪಗಳನ್ನು ಸಿದ್ಧಿಸಿಕೊಳ್ಳಬಹುದು. ಕನ್ನಡದ ಕ್ರಿಯಾಪದಗಳಲ್ಲಿ ಭೂತ ಮತ್ತು ಭವಿಷ್ಯದ್ವರ್ತಮಾನ ಎಂಬ ಎರಡೇ ಕಾಲಗಳಿವೆ. ಭೂತಕಾಲದಲ್ಲಿ ಧಾತುವಿಗೆ ದ ಪ್ರತ್ಯಯ ಮತ್ತು ಭವಿಷ್ಯತ್ಕಾಲದಲ್ಲಿ ಬ ಅಥವಾ ವ ಪ್ರತ್ಯಯ ಸೇರುತ್ತವೆ. ಹಳಗನ್ನಡದ ವರ್ತಮಾನ ಕಾಲ ಪ್ರತ್ಯಯದಲ್ಲಿ ಕಾಣಬರುವ ದಪ್ಪ ಅಥವಾ ದಪ ಪ್ರತ್ಯಯದಲ್ಲಿನ ಅಪ್ಪ ಅಪ ರೂಪ ಆಗು ; ಧಾತುವಿನ ಭವಿಷ್ಯದ್ರೂಪ. ಹೀಗೆ ಸಿದ್ಧಿಸಿದ ರೂಪ ವರ್ತಮಾನ ಹಾಗೂ ಭವಿಷ್ಯದರ್ಥವನ್ನೂ ಸಂದೇಹಾರ್ಥವನ್ನೂ ಸೂಚಿಸುತ್ತಿತ್ತು. ನಡುಗನ್ನಡದಲ್ಲಿ ಈ ದಪ್ಪ ದಹವಾಯಿತು. ಹೊಸಗನ್ನಡದಲ್ಲಿ ಈ ರೀತಿಯ ವರ್ತಮಾನಕಾಲ ರೂಪ ಮಾಯವಾಗಿ ಉತ್ತ ಎನ್ನುವ ಕೃದ್ವಾಚಿಗೆ ಪುರುಷವಾಚಕ ಪ್ರತ್ಯಯಗಳನ್ನು ಸೇರಿಸಿ ಮಾಡಿದ ಹೊಸತೊಂದು ರೀತಿಯ ವರ್ತಮಾನಕಾಲ ರೂಪಗಳು ಪ್ರಚಾರಕ್ಕೆ ಬಂದುವು. ಆದರೆ ಈ ಉತ್ತ ಪ್ರತ್ಯಯಕ್ಕೆ ಸೇರುವ ಪುರುಷವಾಚಕ ಪ್ರತ್ಯಯಗಳಲ್ಲಿ ಹಲ ಕೆಲವು ಮಾರ್ಪಾಡುಗಳಾಗಿವೆ ಎಂಬುದನ್ನು ಗಮನಿಸಬಹುದು.

ಧಾತುವಿಗೆ ಅ ಅಥವಾ ಅದೆ ಪ್ರತ್ಯಯ ಸೇರುವುದರಿಂದಲೂ ಕ್ರಿಯಾಪದಕ್ಕೆ ಅಲ್ಲ ಇಲ್ಲ ರೂಪಗಳನ್ನು ಸೇರಿಸುವುದರಿಂದಲೂ ನಿಷೇಧಕ್ರಿಯೆ ಸಿದ್ಧಿಸುತ್ತದೆ. ಧಾತುವಿನ ಮೂಲರೂಪ ವಿಧ್ಯರ್ಥಕ ಮಧ್ಯಮ ಪುರುಷ ಏಕವಚನವಾಗಿ ಬಳಸಲ್ಪಡುತ್ತದೆ. ಇದರ ಬಹುವಚನ ರೂಪ ಸಿದ್ಧಿಸಲಿಕ್ಕೆ ಹಳಗನ್ನಡದಲ್ಲಿ ಇಮ್ ಪ್ರತ್ಯಯವೂ ನಡುಗನ್ನಡ ಹೊಸಗನ್ನಡಗಳಲ್ಲಿ ಇ, ಇರಿ ಪ್ರತ್ಯಯಗಳೂ ಸೇರುತ್ತವೆ. ವಿಧ್ಯರ್ಥಕ ಉತ್ತಮಪುರುಷ ಬಹುವಚನ ಸಿದ್ಧಿಸಲಿಕ್ಕೆ ಹಳಗನ್ನಡದಲ್ಲಿ ವಮ್ ಅಥವಾ ಅಮ್ ಪ್ರತ್ಯಯವನ್ನೂ ಹೊಸಗನ್ನಡದಲ್ಲಿ ಓಣ ಪ್ರತ್ಯಯವನ್ನೂ ಸೇರಿಸುತ್ತಾರೆ. ಪ್ರಥಮಪುರುಷ ರೂಪ ಸಿದ್ಧಿಸಲಿಕ್ಕೆ ಹಳಗನ್ನಡದಲ್ಲಿ ಕೆ, ಗೆ ಪ್ರತ್ಯಯವನ್ನೂ ಹೊಸಗನ್ನಡದಲ್ಲಿ ಅಲಿ ಪ್ರತ್ಯಯವನ್ನೂ ಸೇರಿಸುತ್ತಾರೆ. ವರ್ತಮಾನಕಾಲ ವಾಚಕ ಕೃದ್ವಾಚಿ ಅಥವಾ ಅಸಂಪುರ್ಣ ಕ್ರಿಯೆ ಧಾತುವಿಗೆ ಉತ್ ಸೇರಿಸುವುದರಿಂದಲೂ ಭೂತಕಾಲವಾಚಕ ಅಸಂಪುರ್ಣ ಕ್ರಿಯೆ ದು ಅಥವಾ ಮ ಸೇರುವುದರಿಂದಲೂ ಸಿದ್ಧಿಸುತ್ತವೆ. ಉಕಾರಾಂತ ಧಾತುಗಳಿಗೆ ಮಾತ್ರ ದು ಅಥವಾ ತು ಪ್ರತ್ಯಯ ಬರುವುದಿಲ್ಲ. ಅದಕ್ಕೆ ಬದಲಾಗಿ ಧಾತುವಿನ ಅಂತ್ಯ ಉಕಾರ ಲೋಪವಾಗಿ ಇ ಕಾರ ಸೇರುತ್ತದೆ (ಮಾಡಿ, ಹೋಗಿ-ಇತ್ಯಾದಿ).

ಕನ್ನಡ ಭಾಷೆಯ ಧ್ವನಿ ಮತ್ತು ವ್ಯಾಕರಣ ವ್ಯವಸ್ಥೆಯ ಸ್ಥೂಲವಾದ ಪರಿಚಯವನ್ನು ಮಾಡಿಕೊಂಡ ಮೇಲೆ ಈಗ ಈ ಭಾಷೆ ಮೂಲದ್ರಾವಿಡದಿಂದ ಬೇರ್ಪಟ್ಟಾಗ ಏನೇನು ಬದಲಾವಣೆಗಳು ನಡೆದಿವೆ ಎಂಬುದನ್ನು ಪರಿಶೀಲಿಸೋಣ. ಕನ್ನಡದಲ್ಲಿ ಮೂಲ ದ್ರಾವಿಡದಲ್ಲಿದ್ದಂತೆ ಅ ಇ ಉ ಎ ಒ ಎಂಬ ಐದು ಹ್ರಸ್ವಸ್ವರಗಳೂ ಅವುಗಳ ದೀರ್ಘರೂಪಗಳೂ ಇವೆ. ಆದರೆ ಅವು ಬರಬಹುದಾದ ಸನ್ನಿವೇಶಗಳಲ್ಲಿ ಕೆಲವು ವ್ಯತ್ಯಾಸಗಳನ್ನು ಕಾಣಬಹುದು. ಮೂಲದ್ರಾವಿಡದಲ್ಲಿ ಪದಾಂತ್ಯದಲ್ಲಿ ಅ ಇ ಉ ಗಳು ಮಾತ್ರ ಬರಬಲ್ಲವು. ಆದರೆ ಕನ್ನಡದಲ್ಲಿ ಪದಾಂತ್ಯದಲ್ಲಿ ಎ ಕೂಡ ಬರಬಹುದು. ಮೂಲದ್ರಾವಿಡದಲ್ಲಿ ಶಬ್ದದ ಆದ್ಯಕ್ಷರದಲ್ಲಿ ಬರುವ ಎ ಉ ಕಾರಗಳು ಕನ್ನಡದಲ್ಲಿ ಅವುಗಳ ಮುಂದೆ ಒಂದು ವ್ಯಂಜನವಿದ್ದು ಆಮೇಲೆ ಪ್ರಕೃತಿ ಸಾಧಕವಾದ ಮತ್ತು ಆ ಕಾರದಿಂದ ಪ್ರಾರಂಭವಾಗುವ ಪ್ರತ್ಯಯ ಪರವಾದಾಗ ಅನುಕ್ರಮವಾಗಿ ಎ, ಒ ಕಾರಗಳಾಗುತ್ತವೆ. ಉದಾ : ಇರ್-ಎರಡು, ಸುಡು-ಸೊಡರು ಇತ್ಯಾದಿ. ಇದೇ ರೀತಿ ಇಯಲ್ ಉಡಲ್ ಮುಂತಾದ ಶಬ್ದಗಳ ಆದಿ ಇ, ಉ ಕಾರಗಳು ಎ, ಒ ಕಾರಗಳಾಗಿ ಎಲೆ, ಒಡಲು ಎಂದಾಗಿರುವುದನ್ನು ಗಮನಿಸಬಹುದು.

ಮೂಲ ದ್ರಾವಿಡದಲ್ಲಿ ಪ, ತ, ಟ ಚ, ಕ ಮತ್ತು (ವತ್ಸರ್ಯ್‌ ಸ್ಪರ್ಶ) ಎಂಬ ಆರು ಸ್ಪರ್ಶ ವ್ಯಂಜನಗಳೂ ಮ, ನ, ಣ, ಞ ಎಂಬ ನಾಲ್ಕು ಅನುನಾಸಿಕಗಳೂ ರ ಎಂಬ ರೇಘವೂ ಲ, ಳ ಎಂಬ ಎರಡು ಪಾಶಿರ್ವ್‌ಕಗಳೂ ವ, ವಿ, ಯ ಎಂಬ ಮೂರು ಆಂತಸ್ಥಗಳೂ ಸೇರಿ ಹದಿನಾರು ವ್ಯಂಜನಗಳಿದ್ದುವು. (ಇದರ ಜೊತೆಗೆ ಆಯ್ದಂ ಎಂಬ ಮತ್ತೊಂದು ಧ್ವನಿಯೂ ಇತ್ತೆಂಬ ಕಲ್ಪನೆಗೂ ಅವಕಾಶವಿದೆ). ಕನ್ನಡದಲ್ಲಿ ಪ, ತ, ಟ, ಚ, ಕ ಎಂಬ ಐದು ಸ್ಪರ್ಶಗಳು ಘೋಷ ಮತ್ತು ಅಘೋಷಗಳಾಗಿ ಒಡೆದು ಹತ್ತು ಸ್ಪರ್ಶಗಳಾಗಿವೆ. ಮೂಲ ದ್ರಾವಿಡದಲ್ಲಿ ಈಗ ತಮಿಳಿನಲ್ಲಿರುವಂತೆ ಈ ಘೋಷ-ಅಘೋಷಭೇದ ಸನ್ನಿವೇಶಶಬ್ದ ಮಾತ್ರವಾಗಿತ್ತು. ಕನ್ನಡದಲ್ಲಿ ಪ, ತ, ಟ, ಚ, ಕ ಇವುಗಳಲ್ಲದೆ ಬ, ದ, ಡ, ಜ, ಗ ಇವುಗಳೂ ಪ್ರತ್ಯೇಕ ಧ್ವನಿಮಗಳಾದುವು. ವ್ಸತರ್ಯ್‌ ಸ್ಪರ್ಶವೆನ್ನಲಾದ ಎಂಬ ವಿಶಿಷ್ಟ ಧ್ವನಿ ಸ್ವರಮಧ್ಯದಲ್ಲಿ ಶಕಟರೇಫವಾಗಿಯೂ ಉಳಿದೆಡೆಗಳಲ್ಲಿ ಮುಂದೆ ಬರುವ ಧ್ವನಿಗೆ ಅನುಸಾರವಾಗಿ ಕ, ದ ಅಥವಾ ರ ಆಗಿಯೂ ಬದಲಾವಣೆ ಹೊಂದಿದೆ. ಮೂಲ ದ್ರಾವಿಡದಲ್ಲಿ ಪದಮಧ್ಯದಲ್ಲಿ ಬರುವ ಸ್ಪರ್ಶಗಳು ಕನ್ನಡದಲ್ಲಿ ಘೋಷ ಸ್ಪರ್ಶಗಳಾಗಿಯೇ ಉಳಿದಿವೆ. ಆದರೆ ಪದಮಧ್ಯದ ಚ ಕಾರ ಸ ಕಾರವಾಗಿಯೂ ಪ ಕಾರ ವ ಕಾರವಾಗಿಯೂ ಪರಿಣಮಿಸಿವೆ ಎಂದು ಬೀಸು, ಕವುಚು ಮುಂತಾದ ಉದಾಹರಣೆಗಳಿಂದ ತಿಳಿಯಬಹುದು. ಅನುನಾಸಿಕಕ್ಕೆ ಪರವಾಗಿ ಬರುವ ಸ್ಪರ್ಶಗಳೂ ಮೂಲದ್ರಾವಿಡದಂತೆ ಕನ್ನಡದಲ್ಲಿಯೂ ಘೋಷವಾಗಿಯೇ ಉಳಿದಿವೆ. ಆದರೆ ಕಾರ ಮಾತ್ರ ಈ ಸನ್ನಿವೇಶದಲ್ಲಿ ದ ಕಾರವಾಗಿದೆ. ಒನ್ ಎಂಬುದು ಒಂದು ಎಂದಾಗಿದೆ. ಮೂಲ ದ್ರಾವಿಡದ ಸ್ಪರ್ಶವ್ಯಂಜನಗಳಲ್ಲಿ ಪ, ತ, ಚ ಮತ್ತು ಕ ಗಳು ಮಾತ್ರ ಶಬ್ದದ ಆದಿಯಲ್ಲಿ ಬಂದು ಅಘೋಷಗಳಾಗಿ ಉಚ್ಚರಿಸಲ್ಪಡುತ್ತಿದ್ದುವು. ಕನ್ನಡದಲ್ಲಿಯೂ ಇವುಗಳಲ್ಲಿ ಹೆಚ್ಚಿನವು ಅಘೋಷಗಳಾಗಿಯೇ ಉಳಿದರೂ ಕೆಲವು ಮಾತ್ರ ಘೋಷಗಳಾಗಿಯೂ ಬದಲಾವಣೆಗೊಂಡಿವೆ. ಉದಾಹರಣೆಗೆ ದಟ್ಟ, ಆರು, ಗಂಡು ಮುಂತಾದ ಶಬ್ದಗಳನ್ನು ಗಮನಿಸಬಹುದು. ಆದಿ ಚ ಕಾರ ಮಾತ್ರ ಕೆಲವೆಡೆ ಸ ಕಾರವಾಗಿಯೂ (ಸುಡು, ಸಾಲು ಇತ್ಯಾದಿ) ಕೆಲವೆಡೆ ಲೋಪವಾಗಿಯೂ ಪರಿಣಾಮ ಹೊಂದಿದೆ (ಉಪ್ಪು, ಆರು ಇತ್ಯಾದಿ ಶಬ್ದಗಳಲ್ಲಿ ಆದಿ ಚ ಕಾರವಿತ್ತೆಂದು ವಿದ್ವಾಂಸರ ಅಭಿಪ್ರಾಯ), ಮೂಲದ ದ್ವಿಸ್ಪರ್ಶಗಳು ಕನ್ನಡದಲ್ಲಿ ದೀರ್ಘಸ್ವರಕ್ಕೆ ಪರವಾಗಿ ಬಂದಾಗ ದ್ವಿತ್ವವನ್ನು ಕಳೆದುಕೊಂಡಿವೆ. ಹೀಗಾಗಿ ಆಟ್ಟಂ ಇದ್ದುದು ಆಟ ಆಗಿದೆ. ವತ್ಸರ್ಯ್‌ ಸ್ಪರ್ಶವಾದ ¾ ಮೂಲದಲ್ಲಿ ದ್ವಿತ್ವರೂಪದಲ್ಲಿಲದ್ದುದು ಕನ್ನಡಕ್ಕೆ ಬರುವಾಗ ಹ್ರಸ್ವಸ್ವರದ ಪರದಲ್ಲಿ ದ್ವಿತ್ವ ತ ಕಾರವಾಗಿಯೂ ದೀರ್ಘಸ್ವರಕ್ಕೆ ಪರವಾದಾಗ ಏಕ ತ ಕಾರವಾಗಿಯೂ ಪರಿಣಮಿಸಿದೆ. ಎ ಎಂದಿದ್ದುದು ಎತ್ತು ಎಂದೂ ಏ ಎಂದಿದ್ದುದು ಏತ ಎಂದೂ ಆಗಿವೆ. ಮೂಲ ಯ ಕಾರ ಶಬ್ದಾದಿಯಲ್ಲಿ ಲೋಪವಾಗಿದೆ. ಯಾನಯ್ ಇದ್ದುದು ಆನೆಯಾಗಿದೆ. ಊ ಉದಾಹರಣೆಯಿಂದಲೇ ಶಬ್ದಾಂತ್ಯದಲ್ಲಿರುವ ಯ ಕಾರ ಲೋಪವಾಗಿ ಅದಕ್ಕೆ ಹಿಂದಿನ ಅ ಕಾರ ಎ ಕಾರವಾಗಿದೆ ಎಂದೂ ತಿಳಿಯಬಹುದು.

ಮೂಲದ್ರಾವಿಡದ ಕ್ರಿಯಾಧಾತುಗಳು ಏಕಾಕ್ಷರಿಗಳಾಗಿದ್ದು ಕನ್ನಡದಲ್ಲಿ ಅವುಗಳಲ್ಲಿ ಕೆಲವು ಏಕಾಕ್ಷರಿಗಳಾಗಿಯೇ ಉಳಿದು ಇನ್ನು ಕೆಲವು ಉಚ್ಚಾರಣಾಸೌಕರ್ಯಕ್ಕಾಗಿ ಸೇರಿದ ಉ ಕಾರದಿಂದಾಗಿಯೂ ಕೆಲವು ಪ್ರಕೃತಿಸಾಧಕ ಪ್ರತ್ಯಯಗಳನ್ನು ಸೇರಿಸಿದ್ದರಿಂದಲೂ ಎರಡು ಅಥವಾ ಮೂರು ಅಕ್ಷರಗಳನ್ನು ಪಡೆದಿವೆ. ಏಕಾಕ್ಷರಿಗಳಿಗೆ ಉದಾಹರಣೆಯಾಗಿ ತಿನೆ ಆಳ್ ಎಂಬ ಧಾತುಗಳ್ನೂ ದ್ವ್ಯಕ್ಷರಿಗೆ ಆಡು ಕಟ್ಟು ಇತ್ಯಾದಿಗಳನ್ನೂ ತ್ರ್ಯಕ್ಷರಿಗೆ ತಿರುಗು ತುಕು ಇತ್ಯಾದಿಗಳನ್ನೂ ನೋಡಬಹುದು. ಮೂಲದ್ರಾವಿಡ ಕ್ರಿಯಾಧಾತುಗಳಲ್ಲಿ ಸಕರ್ಮಕ ಆಕರ್ಮಕ ವಿವಕ್ಷೆ ಇತ್ತೆಂದೂ ಅಕರ್ಮಕ ಪ್ರಕೃತಿಯಲ್ಲಿರುವ ಅನುನಾಸಿಕಯುಕ್ತ ಸ್ಪರ್ಶವ್ಯಂಜನ ಸಕರ್ಮಕವಾದಾಗ ದ್ವಿಸ್ಪರ್ಶವಾಗುತ್ತದೆಯೆಂದೂ ಹೇಳಬಹುದು. ಈ ಪ್ರವೃತ್ತಿ ಕನ್ನಡದಲ್ಲಿ ಸುಂದು, ಸುತ್ತು ಮುಂತಾದ ಕೆಲವು ಧಾತುಗಳಲ್ಲಿ ಉಳಿದುಕೊಂಡಿದ್ದರೂ ಹೆಚ್ಚಿನ ಕಡೆ ಈ ಭೇದ ಕಂಡುಬರುವುದಿಲ್ಲ. ಕ್ರಿಯಾಧಾತುಗಳಿಗೆ ಮೂಲದ್ರಾವಿಡದಲ್ಲಿ ಭೂತ ಮತ್ತು ಭವಿಷ್ಯದರ್ಥವನ್ನು ಸೂಚಿಸುವ ಎರಡು ಪ್ರತ್ಯಯಗಳಿದ್ದಿರಬೇಕು. ಅವುಗಳಲ್ಲಿ ಭವಿಷ್ಯತ್ಸೂಚಕ ಪ್ರತ್ಯಯ ಕನ್ನಡದಲ್ಲಿ ವ, ಪ ಮತ್ತು ಬ ಎಂದು ಪರಿವರ್ತನೆ ಹೊಂದಿದೆ. ಭೂತಕಾಲಸೂಚಕ ಪ್ರತ್ಯಯ ಮೂಲದ್ರಾವಿಡದಲ್ಲಿ ನ್ತ ಎಂದಿದ್ದು ಕನ್ನಡದಲ್ಲಿ ಅನುನಾಸಿಕ ಲೋಪವಾಗಿ ದ ಎಂಬುದಾಗಿ ಪರಿಣಾಮಗೊಂಡು ಈ ಆಕಾರ ಸನ್ನಿವೇಶಕ್ಕನುಸಾರವಾಗಿ ದ, ಡ, ಟ, ತ, ಕ ಎಂದು ಬೇರೆ ಬೇರೆ ರೂಪದಲ್ಲಿ ಬರುತ್ತದೆ. ಕನ್ನಡದಲ್ಲಿ ಪ್ರತ್ಯೇಕವಾದ ವರ್ತಮಾನಕಾಲ ಹುಟ್ಟಿಕೊಂಡ ಬಗೆಯನ್ನು ಆಗಲೇ ಸೂಚಿಸಿದೆ, ಉತ್ತಮಪುರುಷ ಬಹುವಚನ ಸರ್ವನಾಮದಲ್ಲಿ ಸಮಾವಿಷ್ಟ (ಯಾರೊಡನೆ ಮಾತನಾಡುತ್ತಿರುವೆವೋ ಅವರನ್ನು ಸೇರಿಸಿ) ಮತ್ತು ಅಸಮಾವಿಷ್ಟ (ಮಾತನಾಡುತ್ತಿರುವವರನ್ನು ಬಿಟ್ಟು) ಎಂಬ ಎರಡು ರೂಪಗಳಿದ್ದು ಕನ್ನಡದಲ್ಲಿ ಈ ವ್ಯತ್ಯಾಸ ಲೋಪವಾಗಿದೆ.

ಮೂಲದ್ರಾವಿಡದ ಉಪಭಾಷೆಗಳಿಂದ ಕನ್ನಡ ಬೇರ್ಪಟ್ಟು ಸ್ವತಂತ್ರ ಭಾಷೆಯಾಗುವ ಕಾಲಕ್ಕೆ ನಡೆದ ಕೆಲವು ಮುಖ್ಯವಾದ ಪರಿವರ್ತನೆಗಳ್ನು ಸ್ಥೂಲವಾಗಿ ಹಿಂದೆ ನಿರೂಪಿಸಿದೆ. ಇನ್ನು ಈ ಭಾಷೆಯ ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ, ಹೊಸಗನ್ನಡಗಳೆಂಬ ನಾಲ್ಕು ಹಂತಗಳಲ್ಲಿ ನಡೆದ ಕೆಲವು ಪ್ರಮುಖವಾದ ಬದಲಾವಣೆಗಳನ್ನು ಪರಿಶೀಲಿಸಬಹುದು.

ಶಾಸನಗಳಲ್ಲಿ ಕಾಣಬರುವ ಪೂರ್ವದ ಹಳಗನ್ನಡ ಪಂಪ, ಕವಿರಾಜಮಾರ್ಗಾದಿ ಗ್ರಂಥಗಳಲ್ಲಿ ಕಾಣಬರುವ ಕನ್ನಡಕ್ಕಿಂತ ಎಷ್ಟೋ ಭಿನ್ನವಾಗಿದೆ. ಅದರಲ್ಲಿ ಮೂಲ ವಕಾರ ವಕಾರವಾಗಿಯೇ ಉಳಿದಿದೆ (ಮುಂದಿನ ಶತಮಾನಗಳಲ್ಲಿ ವಕಾರ ಬಕಾರ ವಾಗಿದೆ) ವಿತ್ತು-ಬಿತ್ತು, ವೆಟ್ಟ-ಬೆಟ್ಟ ಮುಂತಾದ ಉದಾಹರಣೆಗಳನ್ನು ನೋಡಬಹುದು. ಮೂಲದ್ರಾವಿಡದ ಆದ್ಯಕ್ಷರದಲ್ಲಿ ಎ ಕಾರ ಇಲ್ಲವೆ ಒ ಕಾರವಿದ್ದು ಅದಕ್ಕೆ ಪರವಾಗಿ ಇ ಕಾರ ಇಲ್ಲವೆ ಉ ಕಾರ ಬಂದರೆ ಶಾಸನಗಳ ಕನ್ನಡದ ಎ ಕಾರ ಒ ಕಾರಗಳಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಆದರೆ ಮುಂದಿನ ಶತಮಾನಗಳ ಕನ್ನಡದಲ್ಲಿ ಎ ಒ ಕಾರಗಳು ಇ ಉ ಕಾರಗಳಾಗಿ ಮಾರ್ಪಡುತ್ತವೆ. ಶಾಸನದ ಕನ್ನಡದ ಎôದು, ಕೆಡುಗೆ ಶಬ್ದಗಳು ಹಳಗನ್ನಡದಲ್ಲಿ ಇಂದು ಕಿಡುಗೆ ಎಂದಾಗುತ್ತದೆ. ಪೂರ್ವದ ಹಳಗನ್ನಡದ ಪ್ರಥಮಪುರುಷ ಪ್ರತ್ಯಯ, ನಿಷೇಧಾರ್ಥ ಪ್ರತ್ಯಯ, ದ್ವಿತೀಯಾವಿಭಕ್ತಿ ಪ್ರತ್ಯಯ, ಷಷ್ಠೀವಿಭಕ್ತಿ ಪ್ರತ್ಯಯ ಮುಂತಾದುವುಗಳಲ್ಲಿ ದೀರ್ಘರೂಪವಿರುವುದನ್ನು ಸ್ವರ್ಗಾಗ್ರಮಾನೇರಿದಾನ್, ವೆಳೆಯಾದೆ ಕೆಡುಗೆ, ಪ್ರಾಸಾದಾಂತರಮಾನ್, ಭಟಾರರಾ ದತ್ತಿ ಮುಂತಾದ ಉದಾಹರಣೆಗಳಿಂದ ಕಾಣಬಹುದು. ಸಪ್ತಮೀವಿಭಕ್ತಿ ಪ್ರತ್ಯಯ ಈ ಕಾಲದಲ್ಲಿ ಉಳ್ ಎಂಬ ರೂಪದಲ್ಲಿತ್ತು.

ಪೂರ್ವದ ಹಳಗನ್ನಡದ ಕಾಲವನ್ನು ದಾಟಿ ಪಂಪರನ್ನಾದಿ ಕವಿಗಳ ಹಳಗನ್ನಡದ ಕಾಲಕ್ಕೆ ಬಂದಾಗ ವ ಕಾರ ಬ ಕಾರವಾಗುವುದೂ ಮುಂದಿನ ಅಕ್ಷರದಲ್ಲಿ ಇ, ಉ ಎಂಬ ಉಚ್ಚಸ್ವರ ಬಂದಾಗ ಎ ಒ ಎಂಬ ಮಧ್ಯಸ್ವರ ಉಚ್ಚಸ್ವರವಾಗುವುದೂ ಕಂಡುಬರುತ್ತದೆ. ಈ ಕಾಲದಲ್ಲಿ ಲ ಗಳ ಸ್ವರೂಪದಲ್ಲೇನೂ ಬದಲಾವಣೆಯಾದದ್ದು ಕಂಡುಬರುವುದಿಲ್ಲ. ಆದರೆ ಜನರ ಉಚ್ಚಾರಣೆಯಲ್ಲಿ ಳ ಮತ್ತು ಲ ಗಳ ನಡುವಿನ ಭೇದ ಕಡಿಮೆಯಾಗಿತ್ತೆಂದು ತೋರುತ್ತದೆ. ನಡುಗನ್ನಡಕ್ಕೆ ಬರುವಾಗ ಲ ಮತ್ತು ಳ ಗಳ ಜನರ ಉಚ್ಚಾರಣೆಯಿಂದ ಲೋಪವಾಯಿತೆನ್ನಬಹುದು. ಲ ಕಾರ ಬರೆಹದಲ್ಲಿಯೂ ಲೋಪವಾಯಿತು. ಆದರೆ ¾ ಕಾರ ಮಾತ್ರ ಬರೆಹದಲ್ಲಿ ಸು. 16ನೆಯ ಶತಮಾನದವರೆಗೆ ಬಳಕೆಯಲ್ಲಿದ್ದುದು ಕಂಡುಬರುತ್ತದೆ. ಪ ಕಾರ ಹ ಕಾರವಾಗಿ ಮಾರ್ಪಾಟಾಯಿತು. ಹೊಸಗನ್ನಡದಲ್ಲಿ ವ್ಯಂಜನ ಗುಚ್ಚಗಳಲ್ಲಿರುವ ರ, ಲ ಮತ್ತು ¾ ಕಾರಗಳು ಲೋಪವಾಗಿವೆ. ಈ ಪ್ರವೃತ್ತಿ ಕೇಶೀರಾಜನ ಕಾಲದಲ್ಲಿಯೇ ಇತ್ತೆಂದು ಊಹಿಸಬಹುದು. ದೀರ್ಘಸ್ವರಕ್ಕೆ ಪರದಲ್ಲಿರುವಾಗ ಇವು ಲೋಪವಾಗುತ್ತವೆ. ಹ್ರಸ್ವಸ್ವರಕ್ಕೆ ಪರದಲ್ಲಿದ್ದಾಗ ಈ ರ¿ ಗಳು ಲೋಪವಾಗಿ ಅವುಗಳ ಪದದಲ್ಲಿರುವ ವ್ಯಂಜನ ದ್ವಿತ್ವವನ್ನು ಪಡೆಯುತ್ತದೆ. ಉದಾ ; ಬಾರ್ಚು-ಬಾಚು, ಸೊರ್ಕು-ಸೊಕ್ಕು. ಅನುನಾಸಿಕಯುಕ್ತವಾದ ವ್ಯಂಜನ ಗುಚ್ಚಗಳು ದೀರ್ಘಸ್ವರಕ್ಕೆ ಪರವಾದಾಗ ಅಥವಾ ಶಬ್ದದ ಎರಡನೆಯ ಹ್ರಸ್ವಸ್ವರಕ್ಕೆ ಪರವಾದಾಗ ಅನುನಾಸಿಕ ಲೋಪವಾಗುತ್ತದೆ. ಉದಾ: ನಾಂಟು-ನಾಲಟು, ಕಲಂಕು-ಕಲಕು ಇತ್ಯಾದಿ. ಹೊಸಗನ್ನಡದಲ್ಲಿ ಕ್ರಿಯಾಪದದ ಭವಿಷ್ಯತ್ಕಾಲ ರೂಪಗಳೂ ನಿಷೇಧಾರ್ಥರೂಪಗಳೂ ಲೋಪವಾಗಿವೆ ಎನ್ನಬಹುದು. ಹಳಗನ್ನಡದ ದಪ್ಪ ಪ್ರತ್ಯಯಯುಕ್ತವಾದ ವರ್ತಮಾನಕಾಲ ರೂಪಗಳು ಲೋಪವಾಗಿ ಅದರ ಸ್ಥಾನದಲ್ಲಿ ಹೊಸದೊಂದು ರೀತಿಯ ವರ್ತಮಾನಕಾಲ ರೂಪ ಹುಟ್ಟಿದರ ಬಗ್ಗೆ ಹಿಂದೆಯೇ ಪ್ರಸ್ತಾಪಿಸಿದೆ. ಆಧುನಿಕ ಕನ್ನಡದ ಆಡುನುಡಿಗಳ ಸಾಮಾಜಿಕ ಮತ್ತು ಭೌಗೋಳಿಕ ಪ್ರಭೇದಗಳನ್ನು ಪರಿಶೀಲಿಸುವಾಗ ಬಡಗರು ಮತ್ತು ಸೋಲಿಗರು ಬಳಸುವ ಎರಡು ಉಪಭಾಷೆಗಳು ಮೊದಲು ನಮ್ಮ ಗಮನ ಸೆಳೆಯುತ್ತವೆ. ಇವು ಕನ್ನಡದ ಇತರ ಪ್ರಭೇದಗಳಿಗಿಂತ ತೀರ ಭಿನ್ನವಾಗಿವೆ. ಪ್ರತಿವೇಷ್ಟಿತ ಸ್ವರ (ರೆಟ್ರೊಫ್ಲೆಕ್ಸ್‌ ವೊವೆಲ್ಸ್‌) ಗಳಿರುವುದು ಈ ಭಾಷೆಗಳ ವೈಶಿಷ್ಟ್ಯ. ಕನ್ನಡದಲ್ಲಿ ಲೋಪವಾದ ಮಧ್ಯಮಪುರುಷ ಸಮಾವಿಷ್ಟ ಮತ್ತು ಅಸಮಾವಿಷ್ಟ ಉತ್ತಮಪುರುಷ ಬಹುವಾಚನ ಸರ್ವನಾಮಗಳು ಬಡಗದಲ್ಲಿವೆ. ಕ್ರಿಯಾಧಾತುಗಳಲ್ಲಿ ಸಕರ್ಮಕ-ಅಕರ್ಮಕ ವಿವಕ್ಷೆಯೂ ಅದರಲ್ಲಿದೆ. ಹೊಸಗನ್ನಡದಲ್ಲಿ ಲೋಪವಾದ ರ ¾ ವ್ಯತ್ಯಾಸ ಸೋಲಿಗರ ಕನ್ನಡದಲ್ಲಿ ಕಾಣಬರುತ್ತದೆ. ಳ ಕಾರಕ್ಕೆ ಕೆಲವೆಡೆ ಲ ಕಾರದ ಉಚ್ಚಾರಣೆಯೂ ಅದರಲ್ಲಿ ಕಂಡುಬರುತ್ತದೆ.

ಆಧುನಿಕ ಕನ್ನಡದ ಆಡುಮಾತಿನ ಇತರ ಪ್ರಭೇದಗಳನ್ನು ಭೌಗೋಳಿಕವಾಗಿ ಕರಾವಳಿ ಕನ್ನಡ ಮತ್ತು ಒಳನಾಡಿನ ಕನ್ನಡವೆಂದು ವಿಭಜಿಸಬಹುದು. ಒಳನಾಡಿನ ಕನ್ನಡವನ್ನು ಉತ್ತರದ (ಧಾರವಾಡದ ಕಡೆಯ) ಕನ್ನಡ ಮತ್ತು ದಕ್ಷಿಣದ (ಮೈಸೂರು ಕಡೆಯ) ಕನ್ನಡವೆಂದು ಸ್ಥೂಲವಾಗಿ ವಿಭಜಿಸಬಹುದು. ಕರಾವಳಿ ಪ್ರದೇಶದ ಗೌಡ, ಹವ್ಯಕ, ಕೋಟ, ಹಾಲಕ್ಕಿ ಮುಂತಾದ ಪ್ರಭೇದಗಳಲ್ಲಿ ಒಳನಾಡಿನ ಕನ್ನಡಕ್ಕಿಂತ ತುಂಬ ಬೇರೆಯಾದ ಮತ್ತು ಹಳಗನ್ನಡಕ್ಕೆ ಸಮೀಪವಾದ ರೂಪಗಳು ಕಂಡುಬರುತ್ತವೆ. ಮೇಲೆ ವಿವರಿಸಿದಂತೆ ಎ, ಒ ಕಾರಗಳು ಇ, ಉ ಕಾರಗಳಾಗುವುದಾಗಲೀ ದೀರ್ಘಸ್ವರಕ್ಕೆ ಪರವಾಗಿ ಬರುವ ಅನುನಾಸಿಕ ಮತ್ತು ಸ್ಪರ್ಶಗುಚ್ಛದಿಂದ ಅನುನಾಸಿಕ ಲೋಪವಾಗುವುದಾಗಲೀ ಈ ಪ್ರಭೇದಗಳಲ್ಲಿ ಕಂಡುಬರುವುದಿಲ್ಲ. ಉದಾಹರಣೆಗೆ ಕೆಮಿ (ಕಿವಿ) ಕೊಡಿ (ಕುದಿ) ದಾಂಟು (ದಾಟು) ಶಬ್ದಗಳನ್ನು ನೋಡಬಹುದು. ಕ್ರಿಯಾಪದದ ಭವಿಷ್ಯತ್ ಮತ್ತು ನಿಷೇಧಾರ್ಥಕ ರೂಪಗಳು ನಷ್ಟವಾಗಿಲ್ಲ. ಮೂಲದ್ರಾವಿಡದ ಸಮಾವಿಷ್ಟ ಅಸಮಾವಿಷ್ಟ ಭೇದ ಸರ್ವನಾಮದಲ್ಲಿ ಉಳಿದಿದೆ. ಒಳನಾಡಿನ ಕನ್ನಡದಂತೆ ವರ್ತಮಾನ ಮತ್ತು ಭೂತಕಾಲಗಳಿಗೆ ಪ್ರತ್ಯೇಕವಾದ ಪುರುಷವಾಚಕ ಪ್ರತ್ಯಯಗಳಿಲ್ಲ. (ಕುಡಿತ್ತೆ ವರ್ತಮಾನಕಾಲ, ಮುಂದಿನ ಕುಡುದೆ ಭೂತಕಾಲ). ಒಳನಾಡಿನ ಕನ್ನಡದ ಉತ್ತರ ಮತ್ತು ದಕ್ಷಿಣ ಪ್ರಭೇದಗಳಲ್ಲಿನ ವೈಶಿಷ್ಟ್ಯಗಳಲ್ಲಿ ಪ್ರಮುಖವಾದುವು ಹೀಗಿವೆ : ಉತ್ತರದ ಪ್ರಭೇದಗಳಲ್ಲಿ ಎ ಕಾರಾಂತ ಶಬ್ದಗಳು ಇ ಕಾರಂತವಾಗಿವೆ (ಮನೆ-ಮನಿ); ಉಕಾರಾಂತ ಶಬ್ದಗಳು ಅ ಕಾರಾಂತವಾಗಿವೆ (ಉಗುರು-ಉಗುರ). ಆಕಾರ ಉತ್ತರದ ಪ್ರಭೇದದಲ್ಲಿ ಸಂವೃತ ಆಕಾರ (ಉಚ್ಚ ಆಕಾರ) ಮತ್ತು ವಿವೃತ ಆಕಾರಗಳಾಗಿ (ನಿಮ್ನ ಆಕಾರ) ಒಡೆದಿದೆ. ಅಲ್ಲಿನ ಚ ಕಾರ ಜ ಕಾರಗಳು; ಪಶ್ವಸ್ವರಗಳಾದ ಉ, ಒ, ಅ ಕಾರಗಳ ಮುಂದೆ ಬಂದಾಗ ವತ್ಸರ್ಯ್‌ಗಳಾಗಿ (ತ್ಸ ದ್ಸ ಗಳಂತೆ) ಉಚ್ಚರಿಸಲ್ಪಟ್ಟು ಬೇರೆ ಕಡೆ ತಾಲವ್ಯಗಳಾಗಿ ಉಚ್ಚರಿಸಲ್ಪಡುತ್ತವೆ ಸಪ್ತಮೀ ವಿಭಕ್ತಿ ಪ್ರತ್ಯಯ ಉತ್ತರದಲ್ಲಿ ಆಗ ಎಂದೂ ದಕ್ಷಿಣದಲ್ಲಿ ಅಲ್ಲಿ ಎಂದೂ ಬಳಕೆಯಲ್ಲಿದೆ. ಉತ್ತರದ ಪ್ರಭೇದಗಳಲ್ಲಿ ಶಬ್ದಾದಿಯ ಹ ಕಾರ ಲೋಪವಾಗುವುದಿಲ್ಲ. ದಕ್ಷಿಣದ ಹೆಚ್ಚಿನ ಸಾಮಾಜಿಕ ಪ್ರಭೇದಗಳಲ್ಲಿ ಹ ಕಾರ ಲೋಪವಾದದ್ದು ಕಂಡುಬರುತ್ತದೆ.

ಹೀಗೆ ಕರಾವಳಿ ಕನ್ನಡ, ಉತ್ತರ ಕರ್ನಾಟಕದ ಕನ್ನಡ, ದಕ್ಷಿಣ ಕರ್ನಾಟಕ ಅಥವಾ ಮೈಸೂರಿನ ಕನ್ನಡ ಎಂದು ಸ್ಥೂಲವಾಗಿ ಹೇಳಬಹುದಷ್ಟೆ, ಈ ಒಂದೊಂದು ಪ್ರದೇಶದಲ್ಲಿಯೂ ಭೌಗೋಳಿಕ ಹಾಗೂ ಸಾಮಾಜಿಕವಾಗಿ ಹತ್ತು ಹಲವಾರು ಪ್ರಭೇದಗಳನ್ನು ಗುರುತಿಸಬಹುದು. ಕೆಲವೇ ಕಿಮೀ ಗಳ ಅಂತರದಲ್ಲಿ ಬಳಕೆಯಲ್ಲಿರುವ ಆಡುನುಡಿಗಳಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ಹಾಗೆಯೇ ಒಂದೇ ಹಳ್ಳಿಯಲ್ಲಿ ಬಳಕೆಯಲ್ಲಿರುವ ಬೇರೆ ಬೇರೆ ಜಾತಿ ಪಂಗಡಗಳ ಭಾಷೆಯಲ್ಲಿ ಗಮನಾರ್ಹವಾದ ವ್ಯತ್ಯಾಸಗಳು ಇವೆಯೆಂಬುದು ಜನಸಾಮಾನ್ಯರಿಗೂ ತಿಳಿದೇ ಇದೆ. ಬ್ರಾಹ್ಮಣರ ಭಾಷೆ, ಗೌಡರ ಭಾಷೆ, ಹರಿಜನರ ಭಾಷೆ ಎಂದು ಮುಂತಾಗಿ ಹಲವಾರು ಪ್ರಭೇದಗಳನ್ನು ಗಮನಿಸಬಹುದು. ಈ ಎಲ್ಲ ಪ್ರಭೇದಗಳ ಅಧ್ಯಯನ ಇನ್ನೂ ನಡೆದಿಲ್ಲವಾದರೂ ಕೆಲವು ಪ್ರಮುಖ ಪ್ರದೇಶ ಹಾಗೂ ಪಂಗಡಗಳ ಆಡುನುಡಿಯ ವ್ಯಶಿಷ್ಟಗಳನ್ನು ಇಲ್ಲಿ ಗುರುತಿಸಬಹುದು. ಕರಾವಳಿಯ ಕನ್ನಡ ಪ್ರಭೇದಗಳಲ್ಲಿ ಅನೇಕ ರೀತಿಯ ಸಾದೃಶ್ಯಗಳಿದ್ದರೂ ದಕ್ಷಿಣ ಕನ್ನಡದ ಹವ್ಯಕ, ಗೌಡ, ಕುಂದಾಪುರ ಮತ್ತು ಕೋಟ ಹಾಗೂ ಉತ್ತರ ಕನ್ನಡದ ಹಾಲಕ್ಕಿ ಮುಂತಾದ ಪ್ರಭೇದಗಳು ತಮ್ಮದೇ ಆದ ವೈಶಿಷ್ಟ್ಯಗಳಿಂದ ಕೂಡಿವೆ. ಗೌಡ ಮತ್ತು ಹವ್ಯಕದಲ್ಲಿ ಗಳು ಎನ್ನುವ ವಚನ ಪ್ರತ್ಯಯಗಳು ಲೋಪವಾಗಿ ಗ ಮಾತ್ರ ಉಳಿದಿದೆ. ಈ ಪ್ರಭೇದಗಳಲ್ಲಿ ದ್ವಿತೀಯ ಮತ್ತು ಷಷ್ಟೀ ವಿಭಕ್ತಿ ಪ್ರತ್ಯಯಗಳು ಒಂದೇ ಆಗಿವೆ. ಗೌಡ ಕನ್ನಡದಲ್ಲಿ ಸ, ಶ, ಷ ಕಾರಗಳು ಒಂದೂಗೂಡಿ ಸಕಾರ ಮಾತ್ರ ಉಳಿದರೆ ಹಾಲಕ್ಕಿಯಲ್ಲಿ ಚ-ಸಕಾರಗಳೂ ನ-ಣ ಗಳೂ ಲ-ಳಗಳೂ ಒಂದುಗೂಡಿವೆ. ಕುಂದಾಪುರದ ಕೆಲವು ಪ್ರಭೇದಗಳ ಕ್ರಿಯಾಪದಗಳ ಪ್ರಥಮ ಪುರುಷ ಏಕವಚನದಲ್ಲಿ ಪುಲ್ಲಿಂಗ ಸ್ತ್ರೀಲಿಂಗ ನಪುಂಸಕಲಿಂಗ ವಿವಕ್ಷೆಯೂ ಬಹುವಚನದಲ್ಲಿ ಪುಂ-ಸ್ತ್ರೀ ಮತ್ತು ನಪುಂಸಕವೆಂಬ ಎರಡು ರೂಪಗಳೂ ಇವೆ. ಆದರೆ ಇತರ ಪ್ರಭೇದಗಳಲ್ಲಿ ಪುಲ್ಲಿಂಗ ಸ್ತ್ರೀಲಿಂಗ ವ್ಯತ್ಯಾಸ ಕಂಡುಬರದೆ ಪುಲ್ಲಿಂಗ ಮತ್ತು ಪುಲ್ಲಿಂಗೇತರ ಎಂಬ ವಿವಕ್ಷೆಯಿದೆ. ಬಹುವಚನದಲ್ಲಿ ಈ ವಿವಕ್ಷೆಯೂ ಇಲ್ಲದೆ ಒಂದೇ ರೂಪವಿರುವುದು ಗೌಡ, ಹಾಲಕ್ಕಿ ಮುಂತಾದ ಪ್ರಭೇದಗಳಲ್ಲಿ ಕಂಡುಬರುತ್ತದೆ. ಉದಾ: ಗೌಡ ಕನ್ನಡ ಅವು ಬಂದೊ (ಅವರು ಬಂದರು, ಅವು ಬಂದುವು) ಈ ರೂಪವೇ ಉತ್ತಮ ಮತ್ತು ಮಧ್ಯಮ ಪುರುಷ ಬಹುವಚನಗಳಲ್ಲಿಯೂ ಕಂಡು ಬರುತ್ತದೆ. ಕರಾವಳಿ ಪ್ರಭೇದಗಳ ಕೆಲವು ವಿಶಿಷ್ಟ ಶಬ್ದಗಳೂ ಪ್ರಯೋಗಗಳೂ ಈ ರೀತಿ ಇವೆ-ಹೌದಾ, ಮಾರಾಯಾ, ಉಂಟು. (ಇದೆ ಎಂಬ ಅರ್ಥದಲ್ಲಿ) ಆಯ್ತು (ಆಗಲಿ) ಕೂಗು (ಅಳು) ಕ್ರಯ (ಬೆಲೆ) ಮದ್ದು (ಔಷಧಿ) ಅತ್ಲಾಗಿ (ಆ ಕಡೆ) ತೋರ (ದಪ್ಪಗೆ) ಸಪುರ (ತೆಳ್ಳಗೆ) ಪದಾರ್ಥ (ಪಲ್ಯ) ಮಾಡುವ (ಮಾಡೋಣ) ಸೈಕಲ್ ಬಿಡು (ಸೈಕಲ್ ಹೊಡೆ) ಬೀಡಿ ಎಳೆ (ಬೀಡಿ ಸೇದು) ನಿದ್ದೆ ತೆಗಿ (ನಿದ್ದೆ ಮಾಡು) ಕ್ರಯಕ್ಕೆ ತಕ್ಕೊಳ್ಳು (ಕೊಂಡುಕೊಳ್ಳು).

ಒಳನಾಡಿನ ಕನ್ನಡದ ಉತ್ತರದ ಪ್ರಭೇದಗಳಲ್ಲಿ ಧಾರವಾಡ, ಬೆಳಗಾಂ, ಬಿಜಾಪುರ, ಬೀದರ್-ಗುಲ್ಬರ್ಗ, ಬಳ್ಳಾರಿ ಮುಂತಾದ ಪ್ರಭೇದಗಳು ಪ್ರಮುಖವಾದವು. ಧಾರವಾಡದಲ್ಲಿ ಚತುರ್ಥಿ ವಿಭಕ್ತಿಯ ರೂಪ ಗ ಎಂದಿದ್ದರೆ ಬೆಳಗಾಂನಲ್ಲಿ ಗಿ ಎಂದಿದೆ. ಉ ಕಾರಾಂತ ಶಬ್ದಗಳು ಧಾರವಾಡದಲ್ಲಿ ಆ ಕಾರಂತವಾದರೆ ಬೆಳಗಾಂನಲ್ಲಿ ಆ ಕಾರಾಂತವಾಗುತ್ತವೆ. ಹಾಲಾ (ಹಾಲು) ಮೊಸರಾ (ಮೊಸರು) ಇತ್ಯಾದಿ. ಅಲ್ಲಿನ ಕ್ರಿಯಾಪದಗಳಲ್ಲಿ ಹಾಕಿಳು, ಮಾಡಿಳು, ತರತೇತಿ, ತಂದೇತಿ, ತೈಂದಾನ, ಹೌಂದು ಮಾಡತೀನ, ತಿನ್ಲಾಕ್ (ತಿನ್ನಲಿಕ್ಕೆ) ಮುಂತಾದ ರೂಪಗಳು ಕಂಡುಬರುತ್ತವೆ ಇಲ್ಲಿನ ಕನ್ನಡದಲ್ಲಿ ಧಾರವಾಡ ಕನ್ನಡದಲ್ಲಿ ಧಾರವಾಡ ಕನ್ನಡಕ್ಕಿಂತಲೂ ಮರಾಠೀ ಪ್ರಭಾವ ಜಾಸ್ತಿಯಿದ್ದು ಮರಾಠೀ-ಕನ್ನಡ ಮಿಶ್ರಿತ ರೂಪಗಳು ತುಂಬ ಕಂಡುಬರುತ್ತವೆ. ಉದಾ: ವಾಚಾಸತ್ಯಾನ (ಓದುತ್ತಾನೆ) ಲಾಜಾಸ್ಥಾಳ (ನಾಚುತ್ತಾಳೆ). ಬಿಜಾಪುರದ ಕನ್ನಡದಲ್ಲಿ ಅಲ್ಲಿ, ಇಲ್ಲಿ, ಎಲ್ಲಿ ಮುಂತಾದ ಕಡೆ ಕಲ್ಲಿ ಕಿಲ್ಲಿ ಕೆಲ್ಲಿ ರೂಪಗಳೂ ಹಾಗೆ, ಹೀಗೆ ಎಂಬ ಕಡೆ ಖಾಂಗ, ಖೀಂಗ ರೂಪಗಳೂ ಕಂಡುಬರುತ್ತವೆ. ಇರು ಧಾತುವಿನ ವರ್ತಮಾನ ಕಾಲ ರೂಪಗಳಾಗಿ ಹೀನಿ, ಹೀವಿ, ಹೀದಿ, ಹೀರಿ, ಹಾನ, ಹಾಳ, ಹಾರ, ಅರ ಅವ ರೂಪಗಳೂ ಕುಡಿತುನು, ಕುಡೀತಾತಿ ಮುಂತಾದ ಕ್ರಿಯಾರೂಪಗಳೂ ಕುಡೀವೆಲ್ನಿ, ಕುಡೀವಲ್ಲವಿ ಮುಂತಾದ ನಿಷೇಧಾರ್ಥ ಕ್ರಿಯಾಪದಗಳೂ ಈ ಪ್ರಭೇದದ ವೈಶಿಷ್ಟ್ಯಗಳು. ಧಾರವಾಡ, ಬೆಳಗಾಂ ಬಿಜಾಪುರದ ಹೆಚ್ಚಿನ ಪ್ರಭೇದಗಳಲ್ಲಿ ಚತುರ್ಥಿ ವಿಭಕ್ತಿ ದ್ವಿತೀಯ ವಿಭಕ್ತಿಯ ಅರ್ಥದಲ್ಲಿ ಉಪಯೋಗಿಸಲ್ಪಡುವುದರಿಂದ ಅವನಿಗೆ ಕರಿ, ಅವನಿಗೆ ನೋಡು ಮುಂತಾದ ರೂಪಗಳು ದೊರೆಯುತ್ತವೆ. ಈ ಪ್ರಭೇದಗಳ ಶಬ್ದಭಂಡಾರದಲ್ಲಿ ಮರಾಠೀ ಶಬ್ದಗಳು ಅಧಿಕ ಸಂಖ್ಯೆಯಲ್ಲಿ ತುಂಬಿವೆ. ಸಂಖ್ಯಾವಚಿ ಶಬ್ದಗಳಲ್ಲಿಯೂ ಮರಾಠಿ ಶಬ್ದಗಳೇ ಜಾಸ್ತಿ, ಅಲ್ಲಿಯ ಜನರಿಗೆ ಸಾಡೇ ದಹಾ ಬಡಿತು ಎಂದರೆ ಅರ್ಥವಾಗುತ್ತದೆಯೇ ಹೊರತು ಹತ್ತುವರೆ ಗಂಟೆ ಆಯಿತು ಎಂದರೆ ಅರ್ಥವಾಗುವುದಿಲ್ಲ. ನೆಟ್ಟಗಿಲ್ಲ (ಚೆನ್ನಾಗಿಲ್ಲ) ಅಗದಿ (ತುಂಬ) ಛಲೋ (ಚೆನ್ನಾಗಿ) ಜಳಕ (ಸ್ನಾನ) ಗಂಗಾಳ (ತಟ್ಟೆ) ಖರೆ (ನಿಜ) ಮಂದಿ (ಜನ) ಅವ್ವ (ಅಮ್ಮ) ಪಗಾರ (ಸಂಬಳ) ಒದರು (ಹೇಳು) ಹಿಂದಾಕಡೆ (ಆಮೇಲೆ) ಲಗೂನೆ (ಬೇಗನೆ) ಮುಂತಾದ ಶಬ್ದಗಳನ್ನು ಈ ಪ್ರಭೇದಗಳನ್ನಾಡುವ ಜನರಿಂದ ಯಾವಾಗಲೂ ಕೇಳಬಹುದು.

ಧಾರವಾಡ, ಬೆಳಗಾಂ ಕಡೆಯ ಭಾಷೆಯ ಮೇಲೆ ಮರಾಠಿಯ ಪ್ರಭಾವ ಬಿದ್ದಂತೆಯೇ ಗುಲ್ಬರ್ಗ, ಬೀದರ ಕಡೆಯ ಆಡುನುಡಿಯಲ್ಲಿ ಉರ್ದು ಭಾಷೆಯ ಪ್ರಭಾವವನ್ನು ಗುರುತಿಸಬಹುದು. ಉರ್ದು ಭಾಷೆ ಅಲ್ಲಿನ ಶಬ್ದಭಂಡಾರದ ಮೇಲೆ ಮಾತ್ರವಲ್ಲದೆ ವಾಕ್ಯರಚನೆಯ ಮೇಲೂ ತನ್ನ ಪ್ರಭಾವವನ್ನು ಬೀರಿದೆ. ಪ್ರಧಾನ ವಾಕ್ಯಾಂಶವನ್ನು ಮೊದಲು ಹೇಳಿ ಕಿ ಎಂಬ ಸಂಯೋಜಕಾವ್ಯಯವನ್ನು ಸೇರಿಸಿ ಉದ್ದೈತ ವಾಕ್ಯಾಂಶವನ್ನು ಹೇಳುವ ಉರ್ದು ಭಾಷೆಯ ಪದ್ದತಿ ಇಲ್ಲಿನ ಕನ್ನಡದಲ್ಲಿಯೂ ಕಂಡುಬರುತ್ತದೆ. ಉದಾ: ಅವ ಅಂದ ಕಿ ನಾನ್ ಭೀ ನಿಮಿ ಸರಿ ಬರ್ತೆ (ಉಸ್ ನೇ ಕಹಾ ಕೀ ಮೈಭೀ ತುಮ್ಹಾರೇ ಸಾಥ್ ಆವೂಂಗಾ) ಉರ್ದು-ಕನ್ನಡ ವಿಶ್ರಿತ ಸಮಾಸ ಶಬ್ದಗಳು, ಉರ್ದು ಶಬ್ದಕ್ಕೆ ಕನ್ನಡ ಇಸು ಪ್ರತ್ಯಯ ಅಥವಾ ಮಾಡು ಸೇರಿಸಿ ಮಾಡಿದ ಧಾತುಗಳು ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತವೆ. ಥೋಲ್ ಮಂದಿ (ತುಂಬ ಮಂದಿ) ಬಾಜೀಮನಿ (ನೆರೆಮನೆ) ಹಠಾಯಿತು (ದೂರಮಾಡು) ರುಕಾಯಿಸು (ತಡೆ) ಡಕಾಸು (ದಣಿಯುವುದು) ಸಕಾಸು (ಸಾಧ್ಯವಾಗು)-ನಿಕಾಲ್ಮಾಡು (ಹೊರಡಿಸು) ಇತ್ಯಾದಿ. ಎಷ್ಟೋ ಉರ್ದು ಪ್ರತ್ಯಯಗಳೂ ಆವ್ಯಯಗಳೂ ಇಲ್ಲಿನ ಆಡುನುಡಿಯಲ್ಲಿ ಸೇರಿಕೊಂಡಿವೆ. ಘರ್ ಬರ್ ಕಾ ಮಂದಿ (ಮನೆಯ ಜನರು) ಬೆಣ್ಣೆ ಕಾ ಭಾವ (ಬೆಣ್ಣೆಯ ಬೆಲೆ) ಬಗೀಚೇ ಕಾ ಅಗಿ (ತೋಟದ ಗಿಡ) ಹರ್ ಮನುಷ್ಯ (ಪ್ರತಿಯೊಬ್ಬ ಮನುಷ್ಯ) ಅದರ್ ಬಾದ್ (ಆಮೇಲೆ) ಇತ್ಯಾದಿ ಹ್ರಸ್ವ ಅ ಕಾರಾಂತ ಶಬ್ದಗಳೂ ಕೆಲವು ಕ್ರಿಯಾರೂಪಗಳೂ ವ್ಯಂಜನಾಂತವಾಗಿವೆ. ಉದಾ : ಮಾಡ್ತದ್ (ಮಾಡುತ್ತದೆ). ಗಿಂತ ಪ್ರತ್ಯಯ ಇಲ್ಲಿ ಕಿನ ಆಗಿದೆ. ಅವನ್ಕಿನ (ಅವನಿಗಿಂತ), ಖೂನಾ (ಪರಿಚಯ) ಬಕ್ಕಳ (ಬಹಳ) ಹಳ್ಳಗ (ನಿಧಾನವಾಗಿ) ಧಮ್ಮಗ (ಜೋರಾಗಿ) ಹಿನಾ (ಇನ್ನೂ) ಫೇಕಿ (ಸಲ) ಸರಿಹೋಗು (ಸಾಯು) ಹತ್ತಿದೆ (ಪ್ರಾರಂಭಿಸಿದೆ) ಪಾರ (ಹುಡುಗ) ಕಳ್ವಿ (ಬತ್ತ) ಮುಂತಾದ ಎಷ್ಟೋ ಶಬ್ದಗಳು ಕನ್ನಡದ ಈ ಪ್ರಭೇದದ ಜಾಯಮಾನಕ್ಕೆ ಸೇರಿ ಹೋಗಿವೆ.

ಒಳನಾಡಿನ ಕನ್ನಡದ ದಕ್ಷಿಣದ ಪ್ರಭೇದಗಳಲ್ಲಿ ಕೊಡಗು, ಮೈಸೂರು, ಕೋಲಾರ ಮುಂತಾದ ಕೆಲವು ಮುಖ್ಯವಾದ ಪ್ರಭೇದಗಳನ್ನು ನಾವು ಗುರುತಿಸಬಹುದು. ಕೊಡಗಿನ ಜೇನುಕುರುಬರು ಆಡುವ ಮಾತಿನಲ್ಲಿ ಮೂರಕ್ಷರದ ಶಬ್ದಗಳಲ್ಲಿ ಎರಡನೆಯ ಅಕ್ಷರದ ಆಕಾರ ದೀರ್ಘವಾಗುವುದು ಕಂಡುಬರುತ್ತದೆ. ಉದಾ: ಜಗಾಲಿ (ಜಗಲಿ) ಕೂದಾಲು (ಕೂದಲು) ಕೆಚ್ಚಾಲು (ಕೆಚ್ಚಲು) ಇತ್ಯಾದಿ. (ಕನ್ನಡದ ಇತರ ಪ್ರಭೇದಗಳಲ್ಲಿ ಈ ಸ್ವರವು ಲೋಪವಾಗುವುದು ಕಂಡುಬರುತ್ತದೆ. ಉದಾ : ಜಗ್ಲಿ ಕೂದ್ಲು, ಇತ್ಯಾದಿ). ಇಲ್ಲಿನ ಆಡುನುಡಿಯಲ್ಲಿ ಚ ಕಾರ, ಸ ಕಾರದೊಂದಿಗೆ ವಿಲೀನಗೊಂಡಿದೆ. ಸೇಳು (ಚೇಳು) ಸಿನ್ನ (ಚಿನ್ನ) ಸಂದ (ಚಂದ) ಇತ್ಯಾದಿ. ಮಚ್ಚ (ಮಂಚ) ಬಿಕ್ಕಿ (ಬಿಂಕಿ) ಮಿಚ್ಚು (ಮಿಂಚು) ಗಿತ್ತ (ಗಿಂತ) ಕುಕ್ಕುಮ (ಕುಂಕುಮ) ಮುಂತಾದುವುಗಳಲ್ಲಿ ಅನುನಾಸಿಕ ಲೋಪ ಗಮನಾರ್ಹವಾಗಿದೆ. ಕ್ರಿಯಾಧಾತುಗಳ ಉ ಕಾರ ವರ್ತಮಾನ ಕಾಲ ಪ್ರತ್ಯಯದ ಮುಂದೆ ಇ ಕಾರವಾಗುತ್ತದೆ. ಕ್ರಿಯಾಧಾತುಗಳ ಉ ಕಾರ ವರ್ತಮಾನ ಕಾಲ ಪ್ರತ್ಯಯದ ಮುಂದೆ ಇ ಕಾರವಾಗುತ್ತದೆ. ಉದಾ ; ಇಡಿತೀನಿ (ಇಡುತ್ತೇನೆ). ಇ ಕಾರಾಂತ ಧಾತುಗಳ ಭೂತಕಾಲ ರೂಪದಲ್ಲಿ ದ ಪ್ರತ್ಯಯದ ಬದಲಿಗೆ ಎಷ್ಟೋ ಕಡೆ ತ ಪ್ರತ್ಯಯ ಕಂಡುಬರುತ್ತದೆ. ಕುಡ್ತೆ (ಕುಡಿದೆ) ಕ್ರಿಯಾಪದಗಳಲ್ಲಿ ಪುರುಷ ಮತ್ತು ವಚನಸೂಚಕ ಪ್ರತ್ಯಯಗಳಿದ್ದರೂ ವಾಡಿಕೆಯಲ್ಲಿ ಹೆಚ್ಚಾಗಿ ಇಗೆ ಎಂಬ ಒಂದೇ ಪ್ರತ್ಯಯವಿದೆ. ನಾನು ಕುಡಿತಿಗೆ, ನಾವು ಕುಡಿತಿಗೆ, ನೀವು ಕುಡಿತಿಗೆ ಅವ ಕುಡಿತಿಗೆ ಇತ್ಯಾದಿ. ಸಪ್ತಮೀ ವಿಭಕ್ತಿ ರೂಪ ಲು ಎಂದಿದ್ದು ದೇಶಾಲು (ದೇಶದಲ್ಲಿ) ಗಾಡೀಲು (ಗಾಡಿಯಲ್ಲಿ) ಮುಂತಾದ ರೂಪಗಳಿವೆ.

ಮೈಸೂರಿನ ಆಸುಪಾಸು ಪ್ರದೇಶದ ಆಡುನುಡಿಯಲ್ಲಿ ನಿಷೇಧಾರ್ಥ ಕ್ರಿಯಾರೂಪದ ಲ ಕಾರಕ್ಕೆ ಬದಲಾಗಿ ನ ಕಾರ ಕಂಡುಬರುತ್ತದೆ. ಉದಾ : ಬರ್ನಿಲ್ಲ (ಬರಲಿಲ್ಲ) ಹೋಗ್ನಿಲ್ಲ (ಹೋಗಲಿಲ್ಲ) ಇತ್ಯಾದಿ. ಕೊಳ್ಳು ಎನ್ನುವ ಕ್ರಿಯಾಪದದ ಭೂತಕಾಲ ರೂಪದಲ್ಲಿ ಮೂರ್ಧನ್ಯ ಧ್ವನಿ ಕಂಡುಬರುವುದಿಲ್ಲ. ಮಾಡ್ಕಂದೆ (ಮಾಡಿಕೊಂಡೆ) ತಗಂದು (ತೆಗೆದುಕೊಂಡು). ಓಣ ಪ್ರತ್ಯಯಕ್ಕೆ ಬದಲಾಗಿ ಮ ಪ್ರತ್ಯಯವಿದೆ. ಹಾಕ್ಮ (ಹಾಕೋಣ) ಹೋಗ್ಮ (ಹೋಗೋಣ) ಇತ್ಯಾದಿ. ಉ ಕಾರಾಂತ ಭೂತ ಕೃದಂತ ಇಲ್ಲಿ ಇ ಕಾರವಾಗಿದೆ. ಕೊಟ್ಟಿ (ಕೊಟ್ಟು) ತಿಂದಿ ಬಂದೆ (ತಿಂದು ಬಂದೆ) ಇತ್ಯಾದಿ, ಇ, ಎ ಕಾರಗಳು ಪರವಾದಾಗ ಕ ಕಾರವು ಚ ಕಾರವಾಗುವುದೂ ಗ ಕಾರ ಜ ಕಾರ ವಾಗುವುದೂ ಇಲ್ಲಿನ ಕೆಲವು ಪ್ರಭೇದಗಳಲ್ಲಿ ಕಂಡುಬರುತ್ತವೆ. ಚಿವಿ (ಕಿವಿ) ಜಿಣಿ (ಗಿಣಿ) ಜೆಲ್ಲು (ಗೆಲ್ಲು) ಇತ್ಯಾದಿ. ಸ ಕಾರ ಇ ಕಾರ ಎ ಕಾರಗಳು ಪರವಾದಾಗ ಶ ಕಾರವಾಗುವುದೂ ಕೆಲವಡೆ ಕಾಣಬರುತ್ತದೆ. ಶಿಟ್ಟು (ಸಿಟ್ಟು), ಶಿಮ್ಮ (ಸಿಂಹ) ಇತ್ಯಾದಿ, ಙ ಕಾರ ಸ್ವರಗಳ ಮಧ್ಯದಲ್ಲಿಯೂ ಬಂದು ಮಙ (ಮಗ) ನೊಙ (ನೊಗ) ಮುಂತಾದ ರೂಪಗಳು ಸಿದ್ಧಿಸುತ್ತವೆ.

ಕೋಲಾರ ಜಿಲ್ಲೆ ಕರ್ನಾಟಕದ ದಕ್ಷಿಣ ಭಾಗದಲ್ಲಿದ್ದರೂ ಅಲ್ಲಿನ ಆಡುನುಡಿಯಲ್ಲಿ ಉತ್ತರದ ಕರ್ನಾಟಕದಂತೆ ಚ ಕಾರ ಜ ಕಾರಗಳಲ್ಲಿ ವತ್ಸರ್ಯ್‌ ಧ್ವನಿಯನ್ನು ಗಮನಿಸಬಹುದು. ಕ್ರಿಯಾಪದದ ಭೂತಕಾಲ ರೂಪದ ಪುರುಷವಾಚಕ ಪ್ರತ್ಯಯಗಳಲ್ಲಿನ ನ ಕಾರ ಉಳಿದಿದೆ. ಮಾಡಿದ್ನು, ಬಂದ್ನು ಬನ್ನು ಇತ್ಯಾದಿ ಇ ಕಾರಾಂತ ಧಾತುಗಳ ಅಂತ್ಯ ಇಕಾರವು ವರ್ತಮಾನ ಕಾಲಪ್ರತ್ಯಯ ಪರವಾದಾಗ ಉ ಕಾರವಾಗುತ್ತದೆ. ಕುಡುತಿನಿ (ಕುಡಿಯುತ್ತೇನೆ) ಬರಲಿಕ್ಕೆ, ಇಡಲಿಕ್ಕೆ ಮುಂತಾದೆಡೆಗಳಲ್ಲಿ ಬರುಕು ಇಡುಕ ರೂಪಗಳಿವೆ. ಕೊಯ್ಯು, ಬಯ್ಯ ಮುಂತಾದ ಧಾತುಗಳ ಯ ಕಾರಗಳು ವ ಕಾರಗಳಾಗುತ್ತವೆ. ಉದಾ: ಕೊವ್ತಿನಿ, ಬಪ್ತಿನಿ ಇತ್ಯಾದಿ. ನಿಷೇಧಾರ್ಥ ಕ್ರಿಯಾಪದ ತೆಲುಗಿನಂತೆ, ತೆಳೀದು (ತಿಳಿಯದು) ಎಂಬ ರೂಪದಲ್ಲಿದೆ. ಸಹಾಯಕ ಕ್ರಿಯಾಪದವಾಗಿ ಇಕ್ಕು ಅಟ್ಟು ಧಾತುಗಳು ಬಳಕೆಯಲ್ಲಿವೆ. ಮಾಡಿಕ್ಕಿದ್ನಿ ಇತ್ಯಾದಿ. ದ್ವಿತೀಯ ವಿಭಕ್ತಿ ಪ್ರತ್ಯಯ ವ ಎಂದಾಗಿದೆ. ಮನೆವ ನೋಡ್ದ್ನಿ, (ಮನೆಯನ್ನು ನೋಡಿದೆನು). ತುಲನಾತ್ಮಕ ಪ್ರತ್ಯಯ ಇಂಥ ಪ್ರಭೇದದಲ್ಲಿ ಕಾನ ಎಂದಾಗಿದೆ. ಅವನ್ಕಾನ (ಅವನಿಗಿಂತ) ತೆಲುಗು ಶಬ್ದಗಳು ಇಲ್ಲಿನ ಆಡುನುಡಿಯಲ್ಲಿ ತುಂಬಾ ಸಂಖ್ಯೆಯಲ್ಲಿ ಸೇರಿಕೊಂಡಿದೆ ಎಂಬುದಕ್ಕೆ ಗೋರು (ಉಗುರು) ಪೆದುವು (ತುಟಿ) ಸದು (ಓದು) ಎಕ್ಕು (ಏರು) ಎದುಕು (ಹುಡುಕು) ಮುಂತಾದ ಹಲವಾರು ಉದಾಹರಣೆಗಳನ್ನು ಕೊಡಬಹುದು. ಹೀಗೆ ದೇಶ, ಕಾಲ ಮತ್ತು ಸಮಾಜಕ್ಕನುಗುಣವಾಗಿ ಆಡುನುಡಿಯಲ್ಲಿ ನೂರಾರು ಪ್ರಭೇದಗಳಿರುವುದು ಜೀವಂತ ಭಾಷೆಯ ಲಕ್ಷಣ. ಆಡುನುಡಿಯ ವೈವಿಧ್ಯಗಳಿಂದ ಕನ್ನಡ ಭಾಷೆ ಶೋಭಿತವಾಗಿದೆಯೆಂದು ನಿಸ್ಸಂದೇಹವಾಗಿ ಹೇಳಬಹುದು. (ಯು.ಪಿ.ಯು.)