ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರ್ಣಾಟಕದಲ್ಲಿ ಸ್ವಾತಂತ್ರ್ಯ ಚಳವಳಿ

ವಿಕಿಸೋರ್ಸ್ದಿಂದ

ಕರ್ಣಾಟಕದಲ್ಲಿ ಸ್ವಾತಂತ್ರ್ಯ ಚಳವಳಿ

ಬ್ರಿಟಿಷರ ಆಕ್ರಮಣ ಕಾಲದಿಂದಲೇ ಒಂದು ದೃಷ್ಟಿಯಲ್ಲಿ ಆರಂಭವಾಗಿ, 19ನೆಯ ಶತಮಾನದ ನಡುಗಾಲದಿಂದ ಕ್ರಮೇಣ ತೀವ್ರವಾಗಿ, 20ನೆಯ ಶತಮಾನದಲ್ಲಿ ವ್ಯಾಪಕವಾಗಿ ಹಬ್ಬಿ, 1947ರಲ್ಲಿ ಯಶಸ್ವಿಯಾಗಿ ಪರ್ಯವಸಾನ ಹೊಂದಿನ ಭಾರತೀಯ ಸ್ವಾತಂತ್ರ್ಯ ಚಳವಳಿಯ ಅಂಗವಾಗಿದ್ದೂ ವಿಶಿಷ್ಟವಾಗಿ ವಿಕಾಸಗೊಂಡ ಕರ್ಣಾಟಕ ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಸ್ಥೂಲವಾಗಿ ಮೂರು ಕಾಲಗಳಾಗಿ ವಿಂಗಡಿಸಬಹುದಾಗಿದೆ. ಅಂತರರಾಷ್ಟ್ರೀಯವೆನ್ನಬಹುದಾದ ರೀತಿಯಲ್ಲಿ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನರು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟಗಳದು ಮೊದಲನೆಯ ಘಟ್ಟ. ಬ್ರಿಟಿಷರು ಭಾರತದಲ್ಲಿ ಭದ್ರವಾಗಿ ನೆಲೆಗೊಳ್ಳುತ್ತಿದ್ದ ಕಾಲದಲ್ಲಿ ಇವರ ಆಡಳಿತವನ್ನು ಪ್ರತಿಭಟಿಸಿ ಅಲ್ಲಲ್ಲಿ ಸಂಭವಿಸಿದ ಸಶಸ್ತ್ರ ಬಂಡಾಯಗಳದು ಎರಡನೆಯ ಘಟ್ಟ. ಮುಂದೆ, ಸುಮಾರು ಮುಕ್ಕಾಲು ಶತಮಾನದ ಅನಂತರ, ಸಾರ್ವತ್ರಿಕವಾಗಿ ಪರಿಣಮಿಸಿ ಬ್ರಿಟಿಷರ ಉಚ್ಛಾಟಣೆಗೆ ಕಾರಣವಾದ ಅಹಿಂಸಾತ್ಮಕ ಸಮರದ್ದು ಮೂರನೆಯ ಘಟ್ಟ. ಈ ಮೂರು ಘಟ್ಟಗಳನ್ನೂ ಈ ಲೇಖನದಲ್ಲಿ ವಿವೇಚಿಸಲಾಗಿದೆ.

18ನೆಯ ಶತಮಾನ ಮುಗಿಯುವ ವೇಳೆಗೆ ಆಗಲೇ ಬ್ರಿಟಿಷರು ಭಾರತದ ಭಾವೀ ಆಡಳಿತಗಾರರು ಎಂಬ ಅಂಶ ಸ್ಪಷ್ಟವಾಗಿತ್ತು. 16-17ನೆಯ ಶತಮಾನಗಳಲ್ಲಿ ಸಮಗ್ರ ಭಾರತವನ್ನಾಳಿ (ದಕ್ಷಿಣದ ಕೆಲವು ಪ್ರದೇಶಗಳು ಹೊರತು) ಮೆರೆದ ಮೊಗಲ್ ಸಾಮ್ರಾಜ್ಯ 18ನೆಯ ಶತಮಾನದ ಆರಂಭ ಕಾಲಕ್ಕೇ ಕ್ಷೀಣಿಸಿತು. ಮರಾಠರು ಆ ಸಾಮ್ರಾಜ್ಯದ ಉತ್ತರಾಧಿಕಾರಿಗಳಾಗಲೆತ್ನಿಸಿ ವಿಫಲರಾದರು; ಮೂರನೆಯ ಪಾಣಿಪಟ್ ಕದನದಲ್ಲಿ (1761) ಅವರ ಪ್ರಯತ್ನಗಳೆಲ್ಲ ಮಣ್ಣುಗೂಡಿದುವು. ವ್ಯಾಪಾರಕ್ಕಾಗಿ ಭಾರತಕ್ಕೆ ಬಂದಿದ್ದ ಇಂಗ್ಲಿಷರು ಭಾರತದ ರಾಜಕೀಯ ಗೊಂದಲವನ್ನು ತಮ್ಮ ಲಾಭಕ್ಕಾಗಿ ಉಪಯೋಗಿಸಿಕೊಂಡರು. 1757ರಲ್ಲಿ ನಡೆದ ಪ್ಲಾಸಿ ಕದನದ ಅನಂತರ ಬಹು ಬೇಗ ಬಂಗಾಳ ಅವರ ಸ್ವಾಧೀನವಾಯಿತು. ದಕ್ಷಿಣ ಭಾರತದಲ್ಲೂ ಅವರು ದೇಶೀಯರ ಪಕ್ಷ-ಪ್ರತಿಪಕ್ಷ ಹೋರಾಟಗಳಲ್ಲಿ ಭಾಗವಹಿಸಿದರು. 1760ರಲ್ಲಿ ನಡೆದ ವಂಡಿವಾಷ್ ಕದನದಲ್ಲಿ ಅವರು ಗಳಿಸಿದ ವಿಜಯದ ಫಲವಾಗಿ ಅಲ್ಲೂ ಅವರೇ ಆಳರಸರಾಗುವುದು ಖಂಡಿತವೆಂಬುದು ಸ್ಪಷ್ಟವಾಯಿತು. ಕರ್ಣಾಟಕದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಗೆ ಈ ಘಟನೆಗಳೇ ಹಿನ್ನೆಲೆಯೆನ್ನಬಹುದು.

ಕೊಂಚಕೊಂಚವಾಗಿ ಪ್ರಬಲಿಸಿ ಇಡೀ ಭಾರತವನ್ನೇ ಸ್ವಾಧೀನಪಡಿಸಿಕೊಳ್ಳುತ್ತಿದ್ದ ಬ್ರಿಟಿಷರನ್ನು ಹೊಡೆದೋಡಿಸುವ ಪ್ರಯತ್ನದಲ್ಲಿ 18ನೆಯ ಶತಮಾನದ ಉತ್ತರಾರ್ಧ ಕಾಲದಲ್ಲೇ ನಿರತರಾಗಿದ್ದವರೆಂದರೆ ಮೈಸೂರಿನ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್ ಮೊದಮೊದಲು ಹೈದರನಿಗೆ ಇಂಗ್ಲಿಷರ ಬಗ್ಗೆ ದ್ವೇಷವೇನೂ ಇರಲಿಲ್ಲ. ಆದರೆ ಮೊಗಲ್ ಶಕ್ತಿಯ ದಿವಾಳಿತನದಿಂದಾಗಿ ಛಿದ್ರವಾಗಿದ್ದ ಪ್ರದೇಶಗಳನ್ನು ಗೆದ್ದುಕೊಳ್ಳುವುದರಲ್ಲಿ ಆಸಕ್ತರಾಗಿದ್ದ ದೇಶೀಯ ಅಧಿಪತಿಗಳ ಶಕ್ತಿವರ್ಧನವನ್ನು ಇಂಗ್ಲಿಷರು ಸಹಿಸಲಿಲ್ಲ. ಇಂಗ್ಲಿಷರ ಪ್ರಾಬಲ್ಯದಿಂದ ಸಂಭವಿಸಲಿದ್ದ ವಿಪತ್ತನ್ನು ಹೈದರ್ ಕಂಡುಕೊಂಡ. ಇಂಗ್ಲಿಷರನ್ನೆದುರಿಸಿ ಕಾದಾಡಲು ಹೈದರಾಬಾದಿನ ನಿeóÁಮನೊಂದಿಗೂ ಮರಾಠರೊಂದಿಗೂ ಸಹಕರಿಸಲು ಹೈದರ್ ಸಿದ್ದನಾಗಿದ್ದನಾದರೂ ಅವರು ಮೊದಲು ಇವನ ಸ್ನೇಹಹಸ್ತವನ್ನು ಸ್ವೀಕರಿಸಲಿಲ್ಲ. ಆದರೂ ಹೈದರ್ ಉಪಾಯದಿಂದ ಅವರನ್ನು ಇಂಗ್ಲಿಷರಿಂದ ಬೇರ್ಪಡಿಸಿ ತನ್ನತ್ತ ಸೆಳೆದುಕೊಂಡ. ನಿeóÁಮನೊಂದಿಗೆ ಸೇರಿ ಇಂಗ್ಲಿಷರನ್ನು ಕದನವೊಂದರಲ್ಲಿ ಸೋಲಿಸಿದ. ಆದರೆ ಈ ವಿಜಯ ತಾತ್ಕಾಲಿಕವಾಯಿತು. ನಿeóÁಮ ಜಾರಿಕೊಂಡು ಬ್ರಿಟಿಷರೊಂದಿಗೆ ರಾಜಿ ಮಾಡಿಕೊಂಡ. ಹೈದರನೂ ವಿಧಿಯಿಲ್ಲದೆ ಅವರೊಂದಿಗೆ ಕೌಲು ಮಾಡಿಕೊಳ್ಳಬೇಕಾಯಿತು. ಏತನ್ಮಧ್ಯೆ ಹೈದರನ ಸೇನೆಗಳು ಮರಾಠರೊಂದಿಗೆ ಯುದ್ಧಮಾಡಬೇಕಾಗಿ ಬಂದಾಗ ಇಂಗ್ಲಿಷರು ಅವನಿಗೆ ಸಹಾಯ ಮಾಡಬೇಕಾಗಿತ್ತು. ಆದರೆ ಇಂಗ್ಲಿಷರು ದ್ರೋಹ ಬಗೆದರು. ಕೌಲಿನ ಷರತ್ತನ್ನು ಮುರಿದರು. ಮರಾಠರು ದೇಶವನ್ನು ಕೊಳ್ಳೆಹೊಡೆದು ಹಿಂದುರಿಗಿದರು. ಇಂಗ್ಲಿಷರ ಬಗ್ಗೆ ಹೈದರನಿಗೆ ಯಾವ ಪ್ರೀತಿಯೂ ಉಳಿಯುವುದು ಸಾಧ್ಯವಿರಲಿಲ್ಲ. ಅವನು ಇಂಗ್ಲಿಷರ ಕಡುದ್ವೇಷಿಯಾದ. ಅವರನ್ನು ಇಲ್ಲಿಂದ ಓಡಿಸುವುದೇ ಅವನ ಮುಖ್ಯ ಸಂಕಲ್ಪವಾಯಿತು. ಮುಂದೆ ಹೈದರ್ ಮತ್ತೆ ನಿeóÁಮನನ್ನೂ ಮರಾಠರನ್ನೂ ಸೇರಿಸಿಕೊಂಡು ಇಂಗ್ಲಿಷರನ್ನು ಓಡಿಸಲುದ್ಯುಕ್ತನಾದ. ಆದರೆ ಆ ವೇಳೆಗೆ ಯೂರೋಪಿನಲ್ಲಿ ಇಂಗ್ಲೆಂಡಿಗೂ ಫ್ರಾನ್ಸಿಗೂ ನಡುವೆ ಆರಂಭವಾದ ಯುದ್ಧದಿಂದಾಗಿ ಭಾರತದಲ್ಲೂ ಈ ಎರಡು ಪಕ್ಷಗಳೂ ಕಾದಾಡಲಾರಂಭಿಸಿದುವು. ಇಂಗ್ಲಿಷರ ಕೈ ಮೇಲಾಯಿತು. ಭಾರತದಲ್ಲಿ ಫ್ರೆಂಚರು ದುರ್ಬಲರಾದುದರಿಂದ ಹೈದರನಿಗಿದ್ದ ಆಸರೆ ತಪ್ಪುವಂತಾಯಿತು. ಆದರೂ ಹೈದರ್ ಚಾಣಾಕ್ಷತನದಿಂದ ನಿeóÁಮನೊಂದಿಗೂ ಮರಾಠರೊಂದಿಗೂ ಸಖ್ಯ ಬೆಳೆಸಿ ಇಂಗ್ಲಿಷರನ್ನೆದುರಿಸುತ್ತಲೇ ಇದ್ದ. ಇಂಗ್ಲಿಷರೂ ಇವರ ಸಂಘಟನೆಯನ್ನು ಮುರಿಯಲು ನಾನಾ ತಂತ್ರಗಳನ್ನು ಬಳಸಿ ಗೆದ್ದರು. ಇಂಗ್ಲಿಷರನ್ನು ಉಚ್ಚಾಟಿಸಬೇಕೆಂಬ ತನ್ನ ಕನಸು ನನಸಾಗಿಯೇ ಹೈದರ್ ಅಕಾಲ ಮರಣಕ್ಕೀಡಾದ.

ಆದರೆ ಅನಂತರ ಟಿಪ್ಪು ತನ್ನ ತಂದೆಯ ಹೋರಾಟವನ್ನು ಮುಂದುವರಿಸಿದ. ಹಿಂದೂಸ್ತಾನವನ್ನು ಇಂಗ್ಲಿಷರ ಹಿಡಿತದಿಂದ ತಪ್ಪಿಸಬೇಕೆಂಬುದೇ ಟಿಪ್ಪುವಿಗೆ ಹೈದರನ ಚರಮಸಂದೇಶವಾಗಿತ್ತು. ಆದರೆ 1783ರಲ್ಲಿ ಯೂರೋಪಿನಲ್ಲಿ ಸಹಿ ಹಾಕಲಾದ ವರ್ಸೇಲ್ಸ್ ಕೌಲಿನಿಂದ ಫ್ರೆಂಚರಿಗೂ ಇಂಗ್ಲಿಷರಿಗೂ ನಡುವಣ ವೈರ ಕೊನೆಗೊಂಡಿತ್ತು. ಟಿಪ್ಪುವೂ ನಿeóÁಮನೂ ಮರಾಠರೂ ಒಂದಾಗಿ ಹೋರಾಡಲಾರದೆ ಹೋದರು. ಪರಸ್ಪರ ದ್ವೇಷಾಸೂಯೆಗಳೂ ಇಂಗ್ಲಿಷರು ಯಶಸ್ವಿಯಾಗಿ ಅನುಸರಿಸಿದ ಒಡೆದು ಆಳುವ ತಂತ್ರವೂ ಇವರ ಸಂಘಟನೆಯ ವೈಫಲ್ಯಕ್ಕೆ ಮುಖ್ಯ ಕಾರಣ. ಇಂಗ್ಲಿಷರೊಂದಿಗೆ ಆತ ಏಕಾಕಿಯಾಗಿ ಹೋರಾಡಬೇಕಾಗಿ ಬಂತು. ಟಿಪ್ಪು ಮೂರನೆಯ ಮೈಸೂರು ಯುದ್ಧದಲ್ಲಿ ಸೋತು ಅರ್ಧರಾಜ್ಯವನ್ನೇ ಬ್ರಿಟಿಷರಿಗೆ ಕೊಡಬೇಕಾಯಿತು. ಬ್ರಿಟಿಷರ ಬೆಂಬಲಿಗರಾಗಿದ್ದ ನಿeóÁಮನಿಗೂ ಮರಾಠರಿಗೂ ಕೆಲವು ಪ್ರಾಂತ್ಯಗಳನ್ನು ಕೊಡಬೇಕಾಯಿತು. ಅದಕ್ಕಿಂತಲೂ ಹೆಚ್ಚು ಅಪಮಾನಕರ ಪ್ರಸಂಗವೆಂದರೆ, ಮೂರು ಕೋಟಿ ಮೂವತ್ತು ಲಕ್ಷ ರೂಪಾಯಿಗಳ ಪರಿಹಾರದ್ರವ್ಯವನ್ನು ಕೊಡಲೊಪ್ಪಿ, ಅದರರ್ಧವನ್ನು ಆಗಲೇ ಸಲ್ಲಿಸಿ, ಉಳಿದರ್ಧಕ್ಕಾಗಿ ತನ್ನೆರಡು ಮಕ್ಕಳನ್ನು ಇಂಗ್ಲಿಷರಿಗೆ ಒತ್ತೆಯಾಗಿ ಒಪ್ಪಿಸಬೇಕಾದದ್ದು. ಈ ತೇಜೋವಧೆಯನ್ನು ಟಿಪ್ಪು ಸಹಿಸಲಾರದೆ ಹೋದ. ಹೇಗೊ ಆ ಹಣವನ್ನು ಅವರಿಗೆ ಸಲ್ಲಿಸಿ ಮಕ್ಕಳನ್ನು ಕರೆಸಿಕೊಂಡ. ಆದರೆ ಇಂಗ್ಲಿಷರ ಮೇಲೆ ಸೇಡು ತೀರಿಸಿಕೊಳ್ಳಬೇಕೆಂಬ ಹಠ ಬೆಳೆಯಿತು. ಇದರ ಪರಿಣಾಮವೇ ನಾಲ್ಕನೆಯ ಮೈಸೂರು ಯುದ್ಧ ಮತ್ತು ಟಿಪ್ಪುವಿನ ಮರಣ (1799). ಅವನ ಸಾವಿನಿಂದ ಮೈಸೂರು ಹರಿದು ಹಂಚಿಹೋಯಿತು.

ಸಶಸ್ತ್ರ ಬಂಡಾಯಗಳು

ಕರ್ಣಾಟಕದ ಇತರ ಕಡೆಗಳಲ್ಲಿ ಪ್ರತಿಭಟನೆ ಮುಂದುವರಿಯಿತು : ಉತ್ತರ ಕರ್ಣಾಟಕದಲ್ಲಿ ಬ್ರಿಟಿಷರನ್ನು ಮೊದಲು ಪ್ರತಿಭಟಿಸಿದವನು ಧೋಂಡಿಯ ವಾಘ್. ಈತ ಶಿವಮೊಗ್ಗ ಜಿಲ್ಲೆಯ ಚನ್ನಗಿರಿಯವ, ಶೂರ, ಸಾಹಸಿ ; ಚಿಕ್ಕವಯಸ್ಸಿನಲ್ಲೇ ಯುದ್ಧವಿದ್ಯೆ ಕಲಿತು ಎಲ್ಲರ ಮೆಚ್ಚುಗೆ ಗಳಿಸಿದ. 1780ರಲ್ಲಿ ಹೈದರನ ಸೈನ್ಯಕ್ಕೆ ಸೇರಿದ. ಕೊಂಚ ಕಾಲ ಅಲ್ಲಿದ್ದು ತರಬೇತಿ ಪಡೆದ. ಅಲ್ಲಿಂದ ತಪ್ಪಿಸಿಕೊಂಡು ಧಾರವಾಡ ಜಿಲ್ಲೆಗೆ ಹೋಗಿ ಅಲ್ಲಿ ಒಂದು ಸಣ್ಣ ಪಾಳೆಯಪಟ್ಟನ್ನು ನಿರ್ಮಿಸಿಕೊಳ್ಳಲೆತ್ನಿಸಿದ. ಅವನ ಧೈರ್ಯಸಾಹಸಗಳ ವಿಷಯ ಟಿಪ್ಪುವಿನ ಕಿವಿಗೆ ಬಿದ್ದು, ಅವನು ಧೋಂಡಿಯನನ್ನು ತನ್ನ ಸೈನ್ಯಕ್ಕೆ ಆಹ್ವಾನಿಸಿದ. ಶ್ರೀರಂಗಪಟ್ಟಣಕ್ಕೆ ಹೋದಾಗ ಅವನನ್ನು ಬಲಾತ್ಕಾರದಿಂದ ಇಸ್ಲಾಂ ಮತಕ್ಕೆ ಸೇರಿಸಿಬಿಟ್ಟರು. 1799ರ ಗೊಂದಲದಲ್ಲಿ ಆತ ಅಲ್ಲಿಂದ ತಪ್ಪಿಸಿಕೊಂಡು ಬಿದನೂರಿಗೆ ಬಂದ. ಅಲ್ಲಿ ಒಂದು ಸಣ್ಣ ಸಂಸ್ಥಾನವನ್ನು ಆಕ್ರಮಿಸಿಕೊಂಡು ಎರಡು ಲೋಕಗಳಿಗೊಡೆಯ ಎಂಬ ಬಿರುದು ಧರಿಸಿ ಇಂಗ್ಲಿಷರೊಂದಿಗೆ ಹೋರಾಡಲು ಅವರ ವೈರಿಗಳಿಗೆ ಕರೆ ನೀಡಿದ. ಆಗ ಇಂಗ್ಲಿಷರು ಸುಮ್ಮನಿರಲಾಗಲಿಲ್ಲ. ಆರ್ಥರ್ ವೆಲೆಸ್ಲಿ ಸೈನ್ಯದೊಂದಿಗೆ ಸಿದ್ಧನಾದ. ಕೋಣಗಲ್ಲಿನಲ್ಲಿ ಕದನ ನಡೆದು ಧೋಂಡಿಯ ಹತನಾದ. 1819ರಲ್ಲಿ ರಾಯಚೂರು ಜಿಲ್ಲೆಯಲ್ಲಿರುವ ಕೊಪ್ಪಳದಲ್ಲೂ ಮರುವರ್ಷ ಬಿದರೆಯಲ್ಲೂ ಸಣ್ಣ ಬಂಡಾಯಗಳು ನಡೆದುವು. ಅವುಗಳನ್ನು ಅಡಗಿಸಲಾಯಿತು.

ಕಿತ್ತೂರು : ಕಿತ್ತೂರಿನಲ್ಲಿ ನಡೆದ ಪ್ರತಿಭಟನೆ ದೊಡ್ಡದು. ಅದರ ದೊರೆ (ದೇಸಾಯಿ) ಶಿವಲಿಂಗರುದ್ರಸರ್ಜನ 1824ರ ಸೆಪ್ಟೆಂಬರ್ 11ರಂದು ಕಾಲವಾದ. ಅವನಿಗೆ ಮಕ್ಕಳಿರಲಿಲ್ಲ. ಆದರೆ ಹಿಂದಿನ ದೇಸಾಯಿಯ ಕಾಲದಲ್ಲೇ ಶಿವಲಿಂಗಪ್ಪನನ್ನು ದತ್ತು ತೆಗೆದುಕೊಳ್ಳಲಾಗಿತ್ತು. ಆ ದತ್ತು ಸ್ವೀಕಾರಕ್ಕೆ ಒಪ್ಪಿಗೆ ದೊರಕದಂತೆ ದಖನಿನ ಕಮಿಷನರ್ ಆಗಿದ್ದ ಚಾಪ್ಲಿನನೂ ರಾಜಕೀಯ ನಿಯೋಗಿಯಾಗಿದ್ದ ಥ್ಯಾಕರೆಯೂ ಸನ್ನಾಹ ನಡೆಸಿದರು. ವಾರಸುದಾರರಿಲ್ಲವೆಂಬ ನೆಪದಿಂದ ಕಿತ್ತೂರು ಸಂಸ್ಥಾನವನ್ನು ಸ್ವಾಧೀನಪಡಿಸಿಕೊಳ್ಳುವುದೇ ಅವರ ಉದ್ದೇಶವಾಗಿತ್ತು. ಶಿವಲಿಂಗರುದ್ರಸರ್ಜನ ಮಲತಾಯಿ ರಾಣಿ ಚೆನ್ನಮ್ಮ ಈ ಬಿಕ್ಕಟ್ಟನ್ನು ಶಾಂತಿಯಿಂದ ಪರಿಹರಿಸಲೆತ್ನಿಸಿದಳು ; ಆದರೆ ಅವಳ ಪ್ರಯತ್ನ ಫಲಿಸಲಿಲ್ಲ. ಕೊನೆಗೆ ಕಿತ್ತೂರಿನ ಜನ ಪ್ರತಿಭಟಿಸಿ ನಿಂತರು. ಥ್ಯಾಕರೆಯ ಅವಿಚಾರವರ್ತನೆಯಿಂದ ಪರಿಸ್ಥಿತಿ ಹದಗೆಟ್ಟಿತು. ಆತ ಹತನಾದ. ಕ್ಯಾಪ್ಟನ್ ಬ್ಲಾಕನನ್ನೂ ಕೊಂದರು. ಮದ್ರಾಸು, ಬೊಂಬಾಯಿ, ಷೋಲಾಪುರ, ಮೈಸೂರುಗಳಿಂದ ಬ್ರಿಟಿಷ್ ಪಡೆಗಳು ಕಿತ್ತೂರಿನ ಕಡೆ ನುಗ್ಗಿದುವು. 1824ರ ಡಿಸೆಂಬರ್ 24ರಂದು ಕಾಳೆಗ ನಡೆಯಿತು. ಬ್ರಿಟಿಷರು ಗೆದ್ದರು. ಚೆನ್ನಮ್ಮನನ್ನು ಸೆರೆಹಿಡಿದು ಬೈಲಹೊಂಗಲದಲ್ಲಿ ಬಂಧಿಸಿಟ್ಟರು. ಶಾಂತಿಯನ್ನರಿಸಿ, ಅದು ದೊರೆಕದಂತಾದಾಗ ದಿಟ್ಟತನದಿಂದ ಹೋರಾಡಿದ ಚೆನ್ನಮ್ಮನನ್ನು ಕನ್ನಡಿಗರೆಲ್ಲ ಇಂದಿಗೂ ಸ್ಮರಿಸುತ್ತಾರೆ. ಅವಳ ಧೈರ್ಯ ಸ್ಥೈರ್ಯಗಳನ್ನು ಮನ ನಾಟುವಂತೆ ಚಿತ್ರಿಸುವ ಲಾವಣಿಗಳನ್ನು ಹಾಡುತ್ತಾರೆ ; ನಾಟಕಗಳನ್ನಾಡುತ್ತಾರೆ. ಆಕೆಯ ಜೀವನವನ್ನು ಕುರಿತ ಚಲನಚಿತ್ರವೂ ತಯಾರಾಗಿದೆ. (ನೋಡಿ- ಚೆನ್ನಮ್ಮ,-ಕಿತ್ತೂರು-ರಾಣಿ)

ಸಂಗೊಳ್ಳಿ ರಾಯಣ್ಣ : ರಾಣಿ ಚೆನ್ನಮ್ಮನ ಬಂಧನದಿಂದ ಕಿತ್ತೂರಿನ ಪ್ರತಿಭಟನೆ ನಿಲ್ಲಲಿಲ್ಲ. ಚೌಕಿದಾರ ಸಂಗೊಳ್ಳಿ ರಾಯಣ್ಣ ಕಿತ್ತೂರಿನ ರಕ್ಷಣೆಗಾಗಿ ಹೋರಾಡಿ ಸೆರೆಸಿಕ್ಕಿ ಕೆಲಕಾಲ ಬಂಧನದಲ್ಲಿದ್ದ. ಯುದ್ಧ ಮುಗಿದ ಮೇಲೆ ಬಿಡುಗಡೆ ಹೊಂದಿ, ಶಿವಲಿಂಗಪ್ಪನ ಪರವಾಗಿ ಬ್ರಿಟಿಷರೊಡನೆ ಹೋರಾಡಲು ಪಣತೊಟ್ಟು ನಿಂತ. ರಾಯಣ್ಣನಿಗೆ ಬೆಂಬಲವಾಗಿ ಅನೇಕ ಯೋಧರು ದೊರಕಿದರು. ಮದ್ದುಗುಂಡುಗಳನ್ನು ಕೂಡಿಟ್ಟುಕೊಂಡು, ಮರಸುಕಾಳಗವನ್ನಾರಂಭಿಸಿದ. ಸರ್ಕಾರಿ ಕಟ್ಟಡಗಳು ಬೂದಿಯಾದುವು. ಖಜಾನೆಗಳ ಲೂಟಿಯಾಯಿತು. ಬ್ರಿಟಿಷ್ ಸೈನ್ಯದ ತುಕಡಿಗಳು ನಾಶವಾದುವು. ಆದರೆ ನುರಿತ ಸುಸಜ್ಜಿತ ಸೈನ್ಯದೆದುರು ರಾಯಣ್ಣನ ಸೈನ್ಯ ಹೆಚ್ಚು ಕಾಲ ನಿಲ್ಲಲಿಲ್ಲ. 1830ರ ಏಫ್ರಿಲ್ 8ರಂದು ಅವನು ಸೆರೆ ಸಿಕ್ಕಿದ. ನ್ಯಾಯಸ್ಥಾನದಲ್ಲಿ ವಿಚಾರಣೆ ನಡೆದು ಅವನಿಗೆ ಗಲ್ಲಿನ ಶಿಕ್ಷೆಯಾಯಿತು.

ಬಾದಾಮಿ: 1841ರಲ್ಲಿ ಬಾದಾಮಿಯಲ್ಲೂ ಹೀಗೆಯೇ ಒಂದು ಬಂಡಾಯ ಜರುಗಿತು. ಇದರ ನಾಯಕ ನರಸಿಂಗ ದತ್ತಾತ್ರೇಯ ಪೇಟ್ಕರ್ ಅಥವಾ ನರಸಿಂಗರಾವ್. ಈತ ಒಂದು ಸಾವಿರಕ್ಕೂ ಹೆಚ್ಚಿನ ದಳವೊಂದನ್ನು ಕೋಟೆಯ ಮೇಲೇರಿಸಿ ಆ ಕೋಟೆಯನ್ನು ವಶಪಡಿಸಿಕೊಂಡ. ಸಾತಾರದ ದೊರೆಯ ಧ್ವಜವನ್ನು ಕೋಟೆಯ ಮೇಲೇರಿಸಿ ತಾನು ಆ ದೊರೆಗೆ ಅಧೀನನೆಂದು ಸಾರಿಕೊಂಡ. ಧಾರವಾಡ ಮತ್ತು ಬೆಳಗಾಂವಿಗಳಿಂದ ಬ್ರಿಟಿಷ್ ಸೈನ್ಯ ಬಂದು ಅದನ್ನು ವಶಪಡಿಸಿಕೊಂಡಿತು. ನರಸಿಂಗರಾಯನನ್ನು ಬೆಳಗಾಂವಿಗೆ ಕರೆದುಕೊಂಡು ಹೋಗಿ ಅಲ್ಲಿ ವಿಚಾರಣೆಗೊಳಪಡಿಸಿ ಅವನಿಗೂ ಮರಣದಂಡನೆ ವಿಧಿಸಲಾಯಿತು. ಆದರೆ ಆತ ಕುರುಡನಾಗಿದ್ದುದರಿಂದ ಅದನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಿ ಅಹಮದಾಬಾದ್ ಜೈಲಿಗೆ ಕಳುಹಿಸಲಾಯಿತು.

ಹಲಗಲಿ : ಮುಧೋಳ ಸಂಸ್ಥಾನಕ್ಕೆ ಸೇರಿದ್ದ ಹಲಗಲಿಯ ಬೇಡರು ನೀಡಿದ ಪ್ರತಿಭಟನೆ ಹೃದಯಸ್ಪರ್ಶಿಯಾದದ್ದು, ಬ್ರಿಟಿಷರು ಸಿಪಾಯಿದಂಗೆ ಎಂದು ಕರೆದ 1857ರ ಬಂಡಾಯದಲ್ಲಿ ಭಾರತೀಯರ ಬ್ರಿಟಿಷ್ ವಿರೋಧ ರುದ್ರರೂಪ ತಾಳಿತ್ತು. ಭಾರತೀಯರು ಆಯುಧಗಳನ್ನಿಟ್ಟುಕೊಳ್ಳುವುದನ್ನೇ ನಿಷೇಧಿಸಿದರೆ ಬ್ರಿಟಿಷರ ವಿರುದ್ಧ ಹೋರಾಟ ನಿಲ್ಲಬಹುದೆಂಬ ಭಾವನೆಯಿಂದ 1857ರ ಸೆಪ್ಪೆಂಬರ್ 11ರಂದು ಅಸ್ತ್ರಗಳ ಕಾಯಿದೆಯೊಂದನ್ನು ಸರ್ಕಾರ ಜಾರಿಗೆ ತಂದಿತ್ತು. ಅಸ್ತ್ರಗಳನ್ನು ಹೊಂದಿದ್ದ ಭಾರತೀಯರೆಲ್ಲ ಅವನ್ನು ಸರ್ಕಾರಕ್ಕೆ ತೋರಿಸಿ ಅವರಿಂದ ಅಪ್ಪಣೆ ಚೀಟಿ (ಲೈಸೆನ್ಸ್) ಪಡೆಯಬೇಕಾಗಿತ್ತು. ತಮ್ಮ ಅಸ್ತ್ರಗಳು ಪವಿತ್ರವೆಂದು ಭಾವಿಸಿದ್ದ ಬೇಡರು ಈ ಕಾನೂನನ್ನು ಪ್ರತಿಭಟಿಸಿದರು. ಆಯುಧಗಳನ್ನು ಹೊಂದಿರುವುದು ತಮ್ಮ ಆಜನ್ಮಸಿದ್ಧ ಹಕ್ಕು ಎಂದು ವಾದಿಸಿದರು. ಹಲಗಲಿಯ ನೆರೆಯ ಹಳ್ಳಿಗಳಾದ ಮಂಟೂರು, ಭೋಧಾನಿ, ಅಲಗುಂಡಿಗಳಿಂದಲೂ ಬೇಡರು ತಂಡತಂಡವಾಗಿ ಬಂದು ಹಲಗಲಿಯಲ್ಲಿ ನಿಂತರು. ಬ್ರಿಟಿಷರ ಸೈನ್ಯವೇ ಬಂದರೂ ಎದುರಿಸಿ ಮಡಿಯಲು ಸಿದ್ಧರಾದರು. ಬಿಜಾಪುರದಿಂದ ಕುದುರೆಯ ದಂಡೊಂದು ಬಂತು. ಜೇಡರು ಮನೆಗಳೊಳಗೆ ಅಡಗಿಕೊಂಡು ಗುಂಡು ಹಾರಿಸತೊಡಗಿದರು. ಊರ ಮಧ್ಯದ ಚೌಕವನ್ನು ವಶಪಡಿಸಿಕೊಳ್ಳಲು ಸೈನ್ಯ ಮಾಡಿದ ಪ್ರಯತ್ನ ವಿಫಲವಾಯಿತು. ಪ್ರತಿಮನೆಯೂ ಒಂದು ಬುರುಜಾಯಿತು ; ಪ್ರತಿಯೊಬ್ಬ ಬೇಡನೂ ಆವೇಶದಿಂದ ಹೋರಾಡಿದ. ಈ ಪ್ರತಿಭಟನೆಯೆದುರು ಆ ಸುಸಜ್ಜಿತ ಸೈನ್ಯಕ್ಕೂ ಮುಂದುವರಿಯಲಾಗಲಿಲ್ಲ. ಕೊನೆಗೆ ಸೇನಾಧಿಪತಿ ಸೇಟರ್ ಕೆರ್ ಆ ಮನೆಗಳಿಗೆ ಬೆಂಕಿ ಹೊತ್ತಿಸಲು ಸೈನಿಕರಿಗೆ ಆಜ್ಞೆ ಮಾಡಿದ. ಮನೆಗಳು ಹತ್ತಿ ಉರಿಯತೊಡಗಿದುವು. ಹೊರಗೆ ಬಂದರೆ ಸಾವು ; ಅದಕ್ಕಿಂತ ಹೆಚ್ಚು ಅಸಹನೀಯವಾದ ಅಪಮಾನ- ಎಂದು ಭಾವಿಸಿ ಬೇಡರು ಯಾರೂ ಹೊರಗೆ ಬರಲೇ ಇಲ್ಲ. ಅವರೂ ಅವರ ಪರಿವಾರದವರೂ ಸುಟ್ಟು ಬೂದಿಯಾದರು. ಇದರಿಂದ ಒಳ್ಳೆಯದೇ ಆಯಿತು ; ಮುಂದೆ ಬ್ರಿಟಿಷರ ಅಧಿಕಾರವನ್ನು ಪ್ರತಿಭಟಿಸಿ ನಿಲ್ಲುವೆನೆನ್ನುವ ಭಾರತೀಯನಿಗೆ ಪಾಠ ಕಲಿಸಿದಂತಾಯಿತು - ಎಂದು ಸೇನಾಧಿಪತಿ ಸರ್ಕಾರಕ್ಕೆ ವರದಿ ಮಾಡಿದ.

ಸುರಪುರ : 1857-58. ಗುಲ್ಬರ್ಗ ಜಿಲ್ಲೆಯಲ್ಲಿ ಯಾದಗಿರಿಯಿಂದ ಮೂವತ್ತು ಮೈಲಿ ದೂರದಲ್ಲಿರುವ ಸುರಪುರ ಈಗ ಒಂದು ಸಣ್ಣ ಊರು. ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಇದು ಚೆನ್ನಾಗಿ ಬಾಳುತ್ತಿದ್ದ ಸಣ್ಣ ರಾಜ್ಯವಾಗಿತ್ತು. ಅಲ್ಲಿನ ಜನ ಹೆಚ್ಚಾಗಿ ಬೇಡರು. ಅವರು ಶೂರರು, ಸ್ವಾತಂತ್ರ್ಯ ಪ್ರಿಯರು. 14ನೆಯ ಶತಮಾನದಲ್ಲಿದ್ದ ನಂಜುಂಡಕವಿ ಬರೆದ ಕಂಪಿಲರಾಮನಾಥಚರಿತದಲ್ಲಿ ಅವರ ಸ್ವಭಾವ ಸಂಪನ್ನತೆಗಳ ವರ್ಣನೆಯಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಅವರು ಬಹುಸಂಖ್ಯೆಯಲ್ಲಿ ಅದರ ಸೈನ್ಯಕ್ಕೆ ಸೇರಿ ಉತ್ತರದ ಗಡಿಪ್ರಾಂತವನ್ನು ಮುಸ್ಲಿಮರ ದಾಳಿಯಿಂದ ಕಾಪಾಡಿದ್ದರು. ಮುಂದೆ ಅವರು ಸುರಪುರಕ್ಕೆ ಬಂದು ನೆಲಸಿದರು. ಔರಂಗeóÉೀಬ್ ಕಾಲವಾದ (1707) ಮೇಲೆ ಮರಾಠರು ಪ್ರಬಲರಾಗಿ ಸುರಪುರದ ನಾಯಕರಿಂದ ಕಪ್ಪ ವಸೂಲು ಮಾಡುತ್ತಿದ್ದರು. ಅನಂತರ ನಿeóÁಮನೂ ಮರಾಠರೊಂದಿಗೆ ಸೇರಿಕೊಂಡು ಅವರಿಂದ 50,000 ರೂ. ಕಸಿದುಕೊಂಡ. ಈ ಮಧ್ಯೆ ಬ್ರಿಟಿಷರೂ ಈ ವ್ಯವಹಾರಗಳಲ್ಲಿ ಕೈಹಾಕಿ ಲಾಭ ಗಳಿಸಿದರು. ಈ ವ್ಯವಹಾರಗಳ ಪರಿಣಾಮವಾಗಿ ಸುರಪುರದ ಖಜಾನೆ ಬರಿದಾಯಿತು.

1841ರಲ್ಲಿ ಸುರಪುರದ ರಾಜ ಕೃಷ್ಣಪ್ಪನಾಯಕ ಕಾಲವಾದಾಗ ಅವನ ಮಗ ವೆಂಕಟಪ್ಪನಾಯಕ ದೊರೆಯಾಗಿದ್ದ. ಮೆಡೋಸ್ ಟೇಲರನನ್ನು ರಾಜಕೀಯ ನಿಯೋಗಿಯಾಗಿ ಬ್ರಿಟಿಷ್ ಸರ್ಕಾರ ಸುರಪುರಕ್ಕೆ ಕಳುಹಿಸಿತು. ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ಉತ್ತಮಗೊಳಿಸುವುದಲ್ಲದೆ ದೊರೆಯ ವಿದ್ಯಾಭ್ಯಾಸದ ಮೇಲ್ವಿಚಾರಣೆ ನಡೆಸುವುದೂ ಟೇಲರನ ಕೆಲಸವಾಗಿತ್ತು. ಸಮರ್ಥನಾದ ಟೇಲರ್ ಆ ಎರಡು ಕಾರ್ಯಗಳನ್ನೂ ನೆರವೇರಿಸಿ ಎಲ್ಲರ ವಿಶ್ವಾಸವನ್ನೂ ಸಂಪಾದಿಸಿದ. ವೆಂಕಟಪ್ಪನಾಯಕ ಪ್ರಾಪ್ತವಯಸ್ಕನಾದ ಮೇಲೆ ಟೇಲರ್ ಹಿಂತಿರುಗಿದ (1853). ಆಗ ಗವರ್ನರ್-ಜನರಲ್ ಆಗಿದ್ದವನು ಡಾಲ್‍ಹೌಸಿ ; ಇನ್ನೂ ಕೆಲಕಾಲ ರಾಜ್ಯದ ಆಡಳಿತದ ಮೇಲ್ವಿಚಾರಣೆ ನಡೆಸಿ ಸೂಕ್ತ ಸಲಹೆ ಕೊಡುವುದಕ್ಕೆ ಒಬ್ಬ ಬ್ರಿಟಿಷ್ ಅಧಿಕಾರಿಯನ್ನು ಇಟ್ಟುಕೊಂಡಿರಬೇಕೆಂದು ಆತ ದೊರೆಗೆ ತಿಳಿಸಿದ. ಹೊಸ ಅಧಿಕಾರಿಗಾಗಿ ವರ್ಷಕ್ಕೆ 20,000 ರೂ. ಖರ್ಚು ಮಾಡುವುದು ಆಗಿನ ಹಣಕಾಸು ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲವೆಂಬುದು ದೊರೆಯ ಉತ್ತರವಾಗಿತ್ತು. ನಿರ್ದಾಕ್ಷಿಣ್ಯವಾಗಿ ಬರೆದಿದ್ದ ಈ ಉತ್ತರವನ್ನೋದಿ ಡಾಲ್‍ಹೌಸಿಗೆ ಅಸಮಾಧಾನವುಂಟಾಯಿತು. ಒಂದು ಕಡೆ ನಿeóÁಮನೂ ಇನ್ನೊಂದು ಕಡೆ ಬ್ರಿಟಿಷರೂ ಸುರಪುರ ರಾಜ್ಯದ ಕೆಲವು ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದುದರಿಂದ ವೆಂಕಟಪ್ಪನಾಯಕನ ಪೂರ್ವಿಕರು ಆಳುತ್ತಿದ್ದ ರಾಜ್ಯ ಆ ವೇಳೆಗಾಗಲೇ ಚಿಕ್ಕದಾಗಿತ್ತು. ಅವರ ಸುಲಿಗೆಯಿಂದಾಗಿ ಸುರಪುರದ ಖಜಾನೆಯೂ ಬರಿದಾಗಿತ್ತು. ಜನರಲ್ಲಿ ಬ್ರಿಟಿಷರ ಬಗ್ಗೆ ಅಸಮಾಧಾನ ವ್ಯಾಪಕವಾಗಿ ಬೆಳೆದಿತ್ತು. ಬ್ರಿಟಿಷರನ್ನು ಭಾರತದಿಂದ ಓಡಿಸಿದ್ದಲ್ಲದೆ ಉಳಿಗಾಲವಿಲ್ಲ ಎಂಬುದು 19 ವರ್ಷದ ಉತ್ಸಾಹಿ ಯುವಕ ವೆಂಕಟಪ್ಪನಾಯಕನಿಗೆ ಅರಿವಾಯಿತು. ಆತ ಸೈನ್ಯವನ್ನು ಬಲಗೊಳಿಸಲೆತ್ನಿಸಿದ. ರೋಹಿಲರು, ಅರಬರು ಮುಂತಾದವರನ್ನು ಸೈನ್ಯಕ್ಕೆ ಸೇರಿಸಿ ತರಬೇತಿ ಕೊಡಿಸಿದ. ನಾನಾ ಸಾಹೇಬನಿಗೆ ನಿಯೋಗ ಹೋಯಿತು. ಅಲ್ಲಿಂದಲೂ ನಿಯೋಗಿಗಳು ಸುರಪುರಕ್ಕೆ ಬಂದರು. ರಾಯಚೂರು ಮುಂತಾದ ಪ್ರದೇಶಗಳ ಪಾಳೆಯಗಾರರೂ ಜಮೀನ್ದಾರರೂ ಅವನಿಗೆ ನೆರವು ನೀಡುವ ಭರವಸೆಯಿತ್ತರು. ಸುರಪುರ ಪಿತೂರಿಯ ಕೇಂದ್ರವಾಯಿತು.

ಇದೆಲ್ಲವೂ ಬ್ರಿಟಿಷ್ ಅಧಿಕಾರಿಗಳಿಗೆ ತಿಳಿಯದಿರಲಿಲ್ಲ. ಲಿಂಗಸುಗೂರು, ಕರ್ನೂಲು, ಕಲಾದಗಿ ಧಾರವಾಡ ಮುಂತಾದ ಕಡೆಗಳಲ್ಲಿದ್ದ ಸೈನ್ಯಗಳಿಗೆ ಕರೆ ಹೋಯಿತು. ಕೆಲವು ದಿನಗಳಲ್ಲೇ ದೊಡ್ಡ ಸೈನ್ಯವೊಂದು ಸುರಪುರದ ಕೋಟೆಯೆದುರು ನಿಂತಿತು. ಆದರೆ ಅದನ್ನು ವಶಪಡಿಸಿಕೊಳ್ಳಲು ಬ್ರಿಟಿಷ್ ಸೈನ್ಯ ಮಾಡಿದ ಪ್ರಯತ್ನಗಳೆಲ್ಲ ವಿಫಲವಾದುವು. ಕೊನೆಗೆ ವಾಗನಗೇರಿ ಭೀಮರಾಯನೆಂಬ ದೇಶದ್ರೋಹಿ ಬ್ರಿಟಿಷರ ಸಹಾಯಕ್ಕೆ ದೊರಕಿದ. ಆತ ವೆಂಕಟಪ್ಪನಾಯಕನ ಆಪ್ತ ಸಲಹೆಗಾರ. ಕೋಟೆಯೊಳಕ್ಕೆ ಬರುವ ಗುಪ್ತದ್ವಾರವನ್ನು ಬ್ರಿಟಿಷರಿಗೆ ತೋರಿಸಿ, ಆ ಕೂಡಲೆ ವೆಂಕಟಪ್ಪನಾಯಕನ ಹತ್ತಿರ ಹೋಗಿ, ಶತ್ರುಗಳು ಒಳಗೆ ನುಗ್ಗಿದರು ; ತಪ್ಪಿಸಿಕೊಂಡು ಹೋಗು ಎಂದು ಸಲಹೆಯಿತ್ತ. ವೆಂಕಟಪ್ಪನಾಯಕ ಕೂಡಲೆ ಊರು ಬಿಟ್ಟು ಹೈದರಾಬಾದ್ ಕಡೆ ಹೊರಟ. ಅವನ ಜೊತೆ ಹೊರಟ ಭೀಮರಾಯ ದಾರಿಯಲ್ಲಿ ದೊರೆ ತಂದಿದ್ದ ಹಣ, ಜವಾಹಿರಿಯೆಲ್ಲವನ್ನೂ ಕದ್ದು ಪರಾರಿಯಾದ. ಹೈದರಾಬಾದ್ ತಲಪಿದ ಕೂಡಲೆ ವೆಂಕಟಪ್ಪನಾಯಕನ ಗುರುತು ಸಿಕ್ಕಿ, ಅವನನ್ನು ಸಿಕಂದರಾಬಾದಿನಲ್ಲಿ ಬಂಧನದಲ್ಲಿಟ್ಟರು. ವಿಚಾರಣೆ ನಡೆದು ಅವನಿಗೆ ನಾಲ್ಕು ವರ್ಷ ಸಜಾ ವಿಧಿಸಲಾಯಿತು. ವೆಂಕಟಪ್ಪನಾಯಕನನ್ನು ಜೈಲಿಗೆ ಕೊಂಡೊಯ್ಯುತ್ತಿದ್ದಾಗ ದಾರಿಯಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡ. 1861ರಲ್ಲಿ ಸುರಪುರವನ್ನು ನಿeóÁಂ ರಾಜ್ಯಕ್ಕೆ ಸೇರಿಸಲಾಯಿತು. (ನೋಡಿ- ವೆಂಕಟಪ್ಪನಾಯಕ-2)

ನರಗುಂದ: ಬಾಬಾ ಸಾಹೇಬ: ರಾಜರಾಗಲಿ ಜಮೀನ್ದಾರರಾಗಲಿ ದತ್ತುಸ್ವೀಕಾರಕ್ಕೆ ಸರ್ಕಾರದ ಅನುಮತಿ ಪಡೆಯಬೇಕು. ಹಾಗೆ ಮಾಡದಿದ್ದರೆ ದತ್ತು ಪುತ್ರ ಆಸ್ತಿಗೆ ಹಕ್ಕುದಾರನಾಗುವುದಿಲ್ಲ-ಎಂದು ಗವರ್ನರ್-ಜನರಲ್ ಡಾಲ್‍ಹೌಸಿ ಹೊರಡಿಸಿದ ನಿರೂಪಿಸಿದ ಪರಿಣಾಮವಾಗಿ ಜನರಲ್ಲಿ ಅಸಮಧಾನವುಂಟಾಗಿತ್ತು. ಧಾರ್ಮಿಕ ಸಂಪ್ರದಾಯವಾಗಿದ್ದ ದತ್ತುಸ್ವೀಕಾರಕ್ಕೂ ಬ್ರಿಟಿಷರು ಅಡ್ಡಿಯೊಡ್ಡುತ್ತಾರೆ; ಆಸ್ತಿ ಕಬಳಿಸುವುದೇ ಇವರ ಉದ್ದೇಶ-ಎಂದು ಜನ ಭಾವಿಸಿದ್ದರು. ನರಗುಂದದ ಭಾಸ್ಕರರಾವ್ ಅಥವಾ ಬಾಬಾಸಾಹೇಬ ತನಗೇ ಮಕ್ಕಳಿಲ್ಲದ್ದರಿಂದ ದತ್ತು ಸ್ವೀಕಾರಕ್ಕೆ ಅನುಮತಿ ಕೇಳಿದ. ಅದು ಅವನಿಗೆ ದೊರಕಲಿಲ್ಲ. ಅದರಿಂದ ಆತ ಕೆರಳಿ ಬ್ರಿಟಿಷರನ್ನು ದೇಶದಿಂದ ಹೊಡೆದಟ್ಟಲು ನಿರ್ಧರಿಸಿದ. ದೇಶದ ನಾನಾಕಡೆಗೆ ಗುಪ್ತದೂತರನ್ನು ಕಳುಹಿಸಿ, ಬಂಡಾಯಕ್ಕೆ ಕರೆಕೊಟ್ಟ. ಉತ್ತರ ಭಾರತದಲ್ಲಾಗಲೇ ಬ್ರಿಟಿಷರಿಗೆ ವೀರೋಧವಾಗಿ ಬಂಡಾಯ ಪ್ರಾರಂಭವಾಗಿತ್ತು. ದತ್ತುಸ್ವೀಕಾರಕ್ಕೆ ಅನುಮತಿ ದೊರಕದಿರಲು ಮುಖ್ಯ ಕಾರಣನಾದ ಬ್ರಿಟಿಷ್ ಅಧಿಕಾರಿ ಮ್ಯಾನ್‍ಸನ್ ಕೊಲೆಗೀಡಾದ. ಆದರೆ ಮ್ಯಾನ್‍ಸನನ ಹತ್ತಿರ ಇದ್ದ ಕಾಗದಪತ್ರಗಳನ್ನು ನೋಡಿದಾಗ, ತನ್ನ ಅನುಯಾಯಿಗಳಲ್ಲೇ ಕೆಲವರು ದ್ರೋಹಿಗಳಿದ್ದುದು ಬಾಬಾಸಾಹೇಬನಿಗೆ ತಿಳಿದುಬಂತು. ಸೇಡು ತೀರಿಸಿಕೊಂಡದ್ದಾಯಿತು. ಇನ್ನು ಅವನಿಗೆ ಉಳಿದಿದ್ದ ಒಂದೇ ವೂರ್ಗವೆಂದರೆ ನರಗುಂದದಲ್ಲಿ ನಿಂತು ಹೋರಾಡುವುದು. ಬ್ರಿಟೀಷ್ ಸೈನ್ಯ ನರಗುಂದದ ಕೋಟೆಗೆ ಮುತ್ತಿಗೆ ಹಾಕಿದಾಗ ಭೀಕರ ಕದನ ನಡೆಯಿತು. ಕೋಟೆ ಶತ್ರುಗಳ ಕೈವಶವಾಗುತ್ತದೆಂದು ತಿಳಿದಾಗ ಬಾಬಾ ಸಾಹೇಬ ಅಲ್ಲಿಂದ ತಪ್ಪಿಸಿಕೊಂಡ. ಆದರೆ ತೋರಗಲ್ ಕಾಡಿನಲ್ಲಿ ಹೋಗುತ್ತಿದ್ದಾಗ ಸೆರೆಸಿಕ್ಕಿದ. ಬೆಳಗಾಂವಿಯಲ್ಲಿ ವಿಚಾರಣೆ ನಡೆಸಿ ಅವನನ್ನು ಗಲ್ಲಿಗೇರಿಸಲಾಯಿತು.

ಮುಂಡರಗಿ ಭೀಮರಾವ್ ಇನ್ನೊಬ್ಬ ಬಂಡಾಯಗಾರ. ಈತ ಶ್ರೀಮಂತ ಮನೆತನದವನಲ್ಲ; ಸ್ವಶಕ್ತಿಯಿಂದ ಬಾಳುತ್ತಿದ್ದ ಮಧ್ಯಮವರ್ಗದ ಮನೆತನಕ್ಕೆ ಸೇರಿದ್ದವ; ಆದರೆ ಮೇಧಾವಂತ, ಶೂರ, ಸಾಹಸಿ, ಉತ್ತಮ ಬೇಟೆಗಾರನೆಂದು ಹೆಸರು ಪಡೆದಿದ್ದ. ವಿದ್ಯಾವಂತನಾಗಿ ಹರಪನಹಳ್ಳಿ., ಬಳ್ಳಾರಿ ಈ ಎರಡು ಕಡೆಗಳಲ್ಲಿ ತಹಸೀಲ್ದಾರನಾಗಿ ಕೆಲಸ ಮಾಡಿದ್ದ. ನಾಡಿನ ಪರಿಸ್ಥಿತಿ, ಉತ್ತರ ಭಾರತದಲ್ಲಿ ನಡೆಯುತಿದ್ದ ವಿದ್ಯಾಮಾನಗಳು-ಎಲ್ಲರನ್ನೂ ಅರಿತಿದ್ದ ಅವನಿಗೆ ಬ್ರಿಟಿಷ್ ಸರ್ಕಾರದ ನೌಕರನಾಗಿರಲು ಸಾಧ್ಯವಾಗಲಿಲ್ಲ. ಹೆಮ್ಮಿಗಿಯ ಕೆಂಚನಗೌಡ, ಸೊರಟೂರಿನ ದೇಸಾಯಿ ಮುಂತಾದ ನಾಯಕರನ್ನೂ ಅವರ ಅನುಯಾಯಿಗಳನ್ನೂ ಕೂಡಿಕೊಂಡು ಒಂದು ಪಡೆ ನಿರ್ಮಿಸಿ ಡಂಬಳದ ಖಜಾನೆಯನ್ನು ಲೂಟಿ ಮಾಡಿ ಕೂಪ್ಪಳಕ್ಕೆ ಹೋಗಿ ಅದರ ಕೋಟೆಯನ್ನು ವಶಪಡಿಸಿಕೊಂಡ. ಆಗ ಸರ್ಕಾರ ಎಚ್ಚತ್ತು ಹೈದರಾಬಾದ್, ರಾಯಚೂರು, ಧಾರವಾಡ ಮುಂತಾದ ಕಡೆಗಳಿಂದ ಸೈನ್ಯವನ್ನು ತರಿಸಿತು. ಕೊಪ್ಪಳದ ಸುತ್ತ ಭಾರಿ ಕದನ ನಡೆಯಿತು. ಮದ್ದುಗುಂಡು ತೀರಿ ಇನ್ನು ಗೆಲ್ಲುವ ಆಸೆಯಿಲ್ಲವೆಂದು ಕಂಡುಬಂದಾಗ ಭೀಮರಾವ್ ಆತ್ಮಹತ್ಯೆ ಮಾಡಿಕೊಂಡ.

ಅಸಹಾಕಾರ ಚಳುವಳಿ: ಬಲಪ್ರಯೋಗದಿಂದ ಬ್ರಿಟಿಷನ್ನು ದೇಶದಿಂದೋಡಿಸುವುದು ಸಾಧ್ಯವಿಲ್ಲವೆಂಬುದು ಖಚಿತವಾಯಿತು. ಇನ್ನು ಉಳಿದಿದದ್ದ ಮಾರ್ಗವೊಂದೇ: ಅವರು ದೇಶವನ್ನಾಳುವುದೇ ಸಾಧ್ಯವಿಲ್ಲದಂತೆ ಮಾಡಿ, ತಾವಾಗಿಯೇ ದೇಶವನ್ನು ಬಿಟ್ಟು ಹೋಗುವಂತೆ ಮಾಡುವುದು. ಬ್ರಿಟಿಷರ ಆದಳಿತ ಭಾರತದಲ್ಲಿ ಸ್ಥಿರವಾದಂತೆಲ್ಲಾ ಈ ನಿಟ್ಟಿನಲ್ಲಿ ಜನರ ಸಂಘಟನೆ ಬೆಳೆಯಲಾರಂಭಿಸಿತು.

ಬ್ರಿಟಿಷರು ಭಾರತದಲ್ಲಿ ತಮ್ಮ ಭಾಷೆ, ಧರ್ಮ ಸಂಸ್ಕøತಿಗಳನ್ನು ಹರಡಬೇಕೆಂಬ ಉದ್ದೇಶದಿಂದ ಇಂಗ್ಲಿಷ್ ವಿದ್ಯೆ ಹರಡುವಂತೆ ಪ್ರೋತ್ಸಾಹ ಕೊಟ್ಟರು. ಸಾವಿರಾರು ವರ್ಷಗಳಿಂದ ತಮ್ಮದೇ ಆದ ಸಂಸ್ಕøತಿಯನ್ನು ಬೆಳೆಸಿಕೊಂಡಿದ್ದ ಭಾರತೀಯರು ಪಾಶ್ಚಾತ್ಯರ ಭಾಷೆ ಸಾಹಿತ್ಯಗಳನ್ನು ಕಲಿತದ್ದೂ ಅಲ್ಲದೆ, ಬ್ರಿಟಿಷರು ತಮ್ಮ ದೇಶದಲ್ಲಿ ಅನುಸರಿಸುತ್ತಿದ್ದ ರಾಜಕೀಯ ನೀತಿ ತತ್ವಗಳಿಗೂ ಭಾರತದಲ್ಲಿ ಅವರ ರಾಜ್ಯನೀತಿಗೂ ಇದ್ದ ಭಿನ್ನತೆಯನ್ನು ಅರಿತುಕೊಂಡರು. ಇಂಗ್ಲೆಂಡಿನಲ್ಲಿದ್ದುದು ಉದಾರನೀತಿ; ಭಾರತದಲ್ಲಿ ಪ್ರಗತಿವಿರೋಧ ನೀತಿ. ಇಂಗ್ಲೆಂಡಿನಲ್ಲಿ ಪ್ರಜಾಭಿಪ್ರಾಯಕ್ಕೆ ಮನ್ನಣೆ ಇತ್ತು; ಭಾರತದಲ್ಲಿ ಅದು ಸಾಮ್ರಾಜ್ಯ ನೀತಿಯನ್ನನುಸರಿಸುತ್ತಿತ್ತು. ಇಂಡಿಯ ಕೌನ್ಸಿಲ್ ಸದಸ್ಯನಾಗಿದ್ದ ಸರ್ ಎರ್‍ಸ್ಕಿನ್ ಪೆರಿ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದ. ಇಂಗ್ಲೆಂಡಿನಲ್ಲಿ ಆಗ ಉದಾರವಾದಿ ಪಕ್ಷ ಜನಮನ್ನಣೆ ಪಡೆದಿತ್ತು. ಇಷ್ಟೂ ಅಲ್ಲದೆ ಸುರೇಂದ್ರನಾಥ ಬ್ಯಾನರ್ಜಿ. ದಾದಾಭಾಯಿ ನವರೋಜಿ ಮುಂತಾದ ಕೆಲವು ಪ್ರತಿಭಾವಂತ ಭಾರತೀಯರು ಬ್ರಿಟಿಷರ ಆಡಳಿತದಿಂದ ದೇಶಕೊದಗಿದ್ದ ಅನರ್ಥ ಪರಂಪರೆಗಳನ್ನು ತವi್ಮ ಭಾಷಣಗಳಲ್ಲಿ ಹೃದಯಂಗಮವಾಗಿ ಚಿತ್ರಿಸುತ್ತಿದ್ದರು. ಅಷ್ಟೂ ಅಲ್ಲದೆ, 1861 ರಿಂದ 1899ರ ವರೆಗಿನ ಅವಧಿಯಲ್ಲಿ, ಆರು ದೊಡ್ಡ ಕ್ಷಾಮಗಳೂ ಅನಾವೃಷ್ಟಿಯಿಂದ ಪದೇ ಪದೇ ಅಭಾವ ಪರಿಸ್ಥಿತಿಯೂ ಸಂಭವಿಸಿ ಜನ ಕಂಗೆಟ್ಟಿದ್ದರು. 1876-77ರ ಕ್ಷಾಮದಲ್ಲಿ ಬಳ್ಳಾರಿ ಜಿಲ್ಲೆಯಕರ್ಣಾಟಕದಲ್ಲಿ ಸ್ವಾತಂತ್ರ್ಯ ಚಳವಳಿ ನಾಲ್ಕರಲ್ಲೊಂದು ಭಾಗ ಜನ ಸತ್ತರು. ದಕ್ಷಿಣ ಭಾರತದಲ್ಲಿ ಈ ಕ್ಷಾಮಕ್ಕೆ ಬಲಿಯಾದವರ ಸಂಖ್ಯೆ ಐವತ್ತು ಲಕ್ಷ. ದೇಶ ಇಂಥ ಆಪತ್ತಿಗೆ ಈಡಾಗಿದ್ದಾಗ, ಸಾಮ್ರಾಜ್ಯವಾದಿ ವೈಸಾರಾಯ್ ಲಾರ್ಡ್ ಲಿಟನ್, ವಿಕ್ಟೋರಿಯ ರಾಣಿ ಭಾರತದ ಸಾಮ್ರಾಜ್ಞಿಯೆಂಬ ಬಿರುದನ್ನು ಧರಿಸಿದುದರ ಗೌರವಾರ್ಥವಾಗಿ ವೈಭವದ ದರ್ಬಾರ್ ನಡೆಸಿದ. ಈ ಆಡಂಬರಕ್ಕಾದ ಖರ್ಚಿನಿಂದ ಹೊಟ್ಟೆಗಿಲ್ಲದೆ ಸಾಯುತ್ತಿದ್ದ ಲಕ್ಷಾಂತರ ಭಾರತೀಯರಿಗೆ ಈ ಹಣದಿಂದ ಅನ್ನ ಒದಗಿಸಬಹುದಾಗಿತ್ತು.

ಕಾಂಗ್ರೆಸ್ ಸ್ಥಾಪನೆ: ಭಾರತೀಯರಿಗೆ ತವi್ಮ ಪರಿಸ್ಥಿತಿಯ ಅರಿವು ಹೆಚ್ಚಾದಂತೆ ಬ್ರಿಟಿಷರ ವಿಷಯದಲ್ಲಿ ಅಸಮಾಧಾನ ಬೆಳೆಯಿತು. ಊದಾರವಾದಿಗಳಾದ ಕೆಲವು ಬ್ರಿಟಿಷರೂ ಭಾರತೀಯರಲ್ಲಿ ಸಹಾನುಭೂತಿ ಹೊಂದಿದ್ದರು. ಕೊನೆಗೆ 1885ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಿತವಾಯಿತು. ರಾಷ್ಟ್ರದ ನಾನಾ ಕಡೆಗಳ ಜನ ಇದಕ್ಕೆ ಸದಸ್ಯರಾದರು. ಕಾಂಗ್ರೆಸ್ ತನ್ನ ಆರಂಭದೆಶೆಯಲ್ಲಿ ಭಾರತಕ್ಕೆ ಸಂಪೂರ್ಣ ಸ್ವಾತಂತ್ರ ದೊರಕಿಸಿಕ್ಕೊಳ್ಳಬೇಕೆಂಬ ಆಶೋತ್ತರವನ್ನೇನೂ ಇಟ್ಟುಕೊಂಡಿರಲಿಲ್ಲ. ಸರ್ಕಾರ ಕೂಡ ಮೊದಮೊದಲು ಈ ಸಂಸ್ಥೆಯ ಬಗ್ಗೆ ಸೌಹಾರ್ದಭಾವನೆಯನ್ನೇ ತಳೆದಿತ್ತು. ಕೇಂದ್ರದಲ್ಲೂ ಪ್ರಾಂತ್ಯಗಳಲ್ಲೂ ಸ್ವಯಮಾಡಳಿತವಿರಬೇಕು. ಪ್ರತಿಯೊಬ್ಬ ಭಾರತೀಯನಿಗೂ ವಿದ್ಯಾಭ್ಯಾಸ ದೊರಕಬೇಕು. ಸರ್ಕಾರದಲ್ಲಿ ಜವಾಬ್ದಾರಿಯ ಉದ್ಯೋಗಗಳು ಭಾರತೀಯರಿಗೆ ದೊರಕಬೇಕು, ಸೈನ್ಯದ ಎಲ್ಲಾ ಹುದ್ದೆಗಳಲ್ಲೂ ಭಾರತೀಯರಿಗೆ ಅವಕಾಶವಿರಬೇಕು. ಇಂಗ್ಲೆಂಡಿನಲ್ಲಿಯ ಇಂಡಿಯ ಕೌನ್ಸಿಲ್ ರದ್ದಾಗ ಬೇಕು. ಸರ್ಕಾರದ ಕಾರ್ಯಾಂಗ ನ್ಯಾಯಾಂಗಗಳನ್ನು ಪ್ರತ್ಯೇಕಿಸಬೇಕು. ಇವೇ ಆಗ ಕಾಂಗ್ರೆಸ್ಸಿನ ಮುಖ್ಯ ಬೇಡಿಕೆಗಳು. ಈ ಬೇಡಿಕೆಗಳನ್ನು ಕೂಡ ಸರ್ಕಾರ ಗಣನೆಗೆ ತೆಗೆದುಕೊಳ್ಳಲಿಲ್ಲ.

ಉತ್ತರ ಕರ್ಣಾಟಕದ ಬಹುಭಾಗ ಬೊಂಬಾಯಿ ಪ್ರಾಂತ್ಯಕ್ಕೆ ಸೇರಿಹೋಗಿ ಮಹಾರಾಷ್ಷ್ರದ ಮುಖಂಡರ ಪ್ರಭಾವಕ್ಕೊಳಗಾಗಿತ್ತು. ಅಲ್ಲಿ ಲೋಕಮಾನ್ಯ ಬಾಲ ಗಂಗಾಧರ ತಿಲಕರ ಸ್ಪೂರ್ತಿಯುತ ಭಾಷಣಗಳೂ ಅವರ ಕೇಸರಿ ಪತ್ರಿಕೆಯ ಲೇಖನಗಳೂ ಆ ಪ್ರಾಂತ್ಯದ ಕನ್ನಡಿಗರನ್ನು ಹುರಿದುಂಬಿಸಿದವು. ಭಯವನ್ನು ಬಿಡಬೇಕೆಂದೂ ನಿರುತ್ಸಾಹವನ್ನು ನೀಗಬೇಕೆಂದು ವೂತೃಭೂಮಿಯ ಹಿರಿಮೆ ಘನತೆ ಗೌರವಗಳಿಗೆ ತಕ್ಕಂತೆ ಬಾಳಬೇಕೆಂದೂ ಸ್ವಾಮಿ ವಿವೇಕಾನಂದರು ಎಲ್ಲಾರಿಗೂ ಕರೆಕೊಟ್ಟರು. ರಾಷ್ಟ್ರ ಪ್ರೇಮವನ್ನು ಕೆರಳಿಸಿ ಜನರಿಗೆ ನವೋತ್ಸಾಹವನ್ನು ನೀಡುವ ಭವಾನಿ ತಲಪಾರ್, ರಾಣಾಭೀಮದೇವ್ ಮುಂತಾದ ಅನೇಕ ನಾಟಕಗಳು ರಂಗಭೂಮಿಯ ಮೇಲೆ ಪ್ರಯೋಗವಾದವು. ಕೆಲವು ಕ್ರಾಂತಿಕಾರಕ ಚಟುವಟಿಕೆಗಳಲ್ಲಿ ರ್ಯಾಂಡ್, ಐರ್ಸ್ಟ ಎಂಬ ಬ್ರಿಟಿಷ್ ಅಧಿಕಾರಿಗಳನ್ನು ಕೊಲೆ ಮಾಡಿದವರು ಗಲ್ಲಿಗೆ ಗುರಿಯಾದರು. ಇದರಿಂದ ಜನ ಹೆಚ್ಚು ಕೆರಳಿದರು. ಜನರ ಬಾಯಿ ಮುಚ್ಚಿಸಲೂ ವೃತ್ತಪತ್ರಿಕೆಗಳ ಸ್ವಾತಂತ್ರ್ಯವನ್ನು ಕಸಿದುಕ್ಕೊಳ್ಳಲೂ ಹೊಸ ಕಾನೂನುಗಳು ಜಾರಿಗೆ ಬಂದವು. ಜನತೆ ಹೆಚ್ಚುತ್ತಿದ್ದ ಕಾಲದಲ್ಲಿ ಇಂಥ ದಮನನೀತಿಯ ಪರಿಣಾಮವೆಂದರೆ, ಜವಾಹರಲಾಲ್ ನೆಹರು ಹೇಳಿದಂತೆ ಮೊತ್ತಮೊದಲಿಗೆ ಭಾರತ ರಾಜಕೀಯದಲ್ಲಿ ಬಾಂಬಿನ ಪ್ರವೇಶ. ಬಂಗಾಳದ ವಿಭಜನೆ ಸಾಲದೆಂಬಂತೆ, ವೈಸರಾಯ್ ಕಜರ್óನ್ ಭಾರತೀಯರನ್ನು ತುಚ್ಚವಾಗಿ ಪರಿಗಣಿಸಿದ. ನನಗೆ ಇಬ್ಬರು ಹೆಂಡರು: ಒಬ್ಬಳು ಹಿಂದು, ಒಬ್ಬಳು ಮುಸಲ್ಮಾನ್. ಎರಡನೆಯವಳೇ ನನಗೆ ಅಚ್ಚುಮೆಚ್ಚು.-ಎಂದು ವಿಭಜಿತ ಬಂಗಾಳದ ಒಂದು ಭಾಗದ ಗವರ್ನರಾಗಿ ಫುಲ್ಲರ್ ಆಡಿದ ಅಸಭ್ಯ ನುಡಿಯನ್ನು ಜನ ಸಹಿಸದಾದರು. ಲೋಕಮಾನ್ಯರ ನಾಯಕತ್ವದಲ್ಲಿ ಕರ್ಣಾಟಕ ಜನತೆಯೂ ಸ್ವದೇಶಿ, ಬಹಿಷ್ಕಾರ (ಬಾಯ್‍ಕಾಟ್) ಮುಂತಾದ ಚಳುವಳಿಗಳನ್ನು ನಡೆಸಿತು. 1905-6ರಲ್ಲಿ ಲೋಕಮಾನ್ಯರು ಉತ್ತರ ಕರ್ಣಾಟಕದಲ್ಲಿ ಪ್ರವಾಸ ಮಾಡಿದರು. ನಿಮ್ಮ ಆರ್ಷೇಯ ಧರ್ಮ ಸಂಸ್ಕøತಿಗಳನ್ನು ನೆನೆಯಿರಿ. ಅವುಗಳ ಪುನರುಜ್ಜೀವನಕ್ಕೆ, ಭಾರತದ ಹಿರಿಮೆಯನ್ನು ಪುನಃ ಮೆರೆಯುವುದಕ್ಕೆ, ಸ್ವದೇಶಿ ಚಳುವಳಿ, ಬಹಿಷ್ಕಾರ, ದೇಶಿಯ ವಿದ್ಯಾಶಿಕ್ಷಣ, ಇವು ಮೂಲಸಾಧನಗಳು-ಎಂದು ಜನಕ್ಕೆ ಭೋಧಿಸಿದರು. ಅಲೂರು ವೆಂಕಟರಾಯರು, ಮುದವೀಡು ಕೃಷರಾಯರು ಸಕ್ಕರಿ ಬಾಳಾಚಾರ್ಯ ಮುಂತಾದ ಕನ್ನಡಿಗ ನಾಯಕರು ಕರ್ಣಾಟಕದಲ್ಲೆಲ್ಲ ಪ್ರವಾಸ ಮಾಡಿ ಸ್ವದೇಶೀ ಸ್ವರಾಜ್ಯಗಳ ಸಂಕೇತವನ್ನು ಹರಡಿದರು. ಸ್ವದೇಶಿ ಕೈಗಾರಿಕೆಗಳು ನಾನಾಕಡೆ ಸ್ದಾಪಿತವಾದವು; ಕಿತ್ತೂರಿನಲ್ಲೂ ಬಾದಾಮಿಯಲ್ಲೂ ನೇಯ್ಗೆ, ಧಾರವಾಡದಲ್ಲಿ ಬೆಂಕಿಕಡ್ಡಿ, ಲಕ್ಷ್ಮೇಶ್ವರದಲ್ಲಿ ಪಿಂಗಾಂಣಿ ಸಾಮಾನು- ಹೀಗೆ ನಾನಾ ಕಡೆಗಳಲ್ಲಿ ದಿನಬಳಕೆಯ ಸಾಮಾನು ತಯಾರಿಕೆ ಪ್ರಾರಂಭವಾಯಿತು. ಇದಕ್ಕೆ ಪೋಷಕವಾಗಿ ರಾಷ್ಟ್ರೀಯ ಬ್ಯಾಂಕ್‍ಗಳನ್ನೂ ಸ್ಥಾಪಿಸಿದರು. ರಾಣಿಬೆನ್ನೂರು ಮುಂತಾದ ಕಡೆಗಳಲ್ಲಿ ವಿದೇಶಿ ಬಟ್ಟೆಗಳನ್ನು ಸುಟ್ಟರು. ಧಾರವಾಡ, ಬೆಳಗಾಂವಿ, ನವಗುಂದ, ಹಾನಗಲ್ ಮುಂತಾದ ಅನೇಕ ಕಡೆಗಳಲ್ಲಿ ರಾಷ್ಟ್ರೀಯ ವಿದ್ಯಾಶಾಲೆಗಳು ಸ್ಥಾಪಿತವಾದವು.

ಲೋಕಮಾನ್ಯ ತಿಲಕರು ಕೇಸರಿ ಪತ್ರಿಕೆಯಲ್ಲಿ ಬರೆದಿದ್ದ ಒಂದು ಲೇಖನ ರಾಜದ್ರೋಹವೆಂದು ಅವರನ್ನು ನ್ಯಾಯಸ್ಥಾನದಲ್ಲಿ ವಿಚಾರಣೆಗೊಳಪಡಿಸಿ ಅವರಿಗೆ ಆರು ವರ್ಷ ಕಾರಾಗೃಹ ಶಿಕ್ಷೆವಿಧಿಸಿಧಾಗ ಇದಕ್ಕೆ ವಿರೋಧವಾಗಿ ಮೆರವಣಿಗೆಗಳೂ ಸಭೆಗಳು ದೇಶದ ನಾನಾಕಡೆ ಜರುಗಿದವು. ಇವುಗಳನ್ನಡಗಿಸುವುದಕ್ಕೆ ಲಾಠಿ ಪ್ರಯೋಗವೇ ಮುಂತಾದ ಕ್ರಮಗಳನ್ನು ಸರ್ಕಾರ ಕೈಗೊಂಡಿತು. ಕರ್ಣಾಟಕದಲ್ಲೂ ಸರ್ಕಾರಕ್ಕೆ ಪ್ರತಿಭಟನೆ ವ್ಯಾಪಕವಾಗಿತ್ತು. ದಕ್ಷಿಣ ಕನ್ನಡದಲ್ಲಿ ಅಮ್ಮೆಂಬಳ ಶ್ರೀನಿವಾಸ ಪೈ, ಸುಬ್ಬರಾಯ ಬಾಳಿಗ ಮುಂತಾದವರು. ಬಳ್ಳಾರಿಯ ಕಡೆ ಕೋಲಾಚಲಂ ವೆಂಕಟರಾವ್ ಮತ್ತು ಸಭಾಪತಿ ಮೊದಲಿಯಾರ್ ಮುಂತಾದವರು ಸರ್ಕಾರವನ್ನು ಖಂಡಿಸಿದಲ್ಲದೆ ಕಾಂಗ್ರೆಸ್ ಚಳುವಳಿಯನ್ನು ಮುಂದುವರೆಸಿದರು. 1909ರಲ್ಲಿ ಮಾರ್ಲೆ-ಮಿಂಟೋ ಸುಧಾರಣೆಗಳು ಬಂದಾಗ ಕಾಂಗ್ರೆಸ್ ಅದನ್ನು ವಿರೋಧಿಸಿತು.

1914ರಲ್ಲಿ ಯೂರೋಪಿನಲ್ಲಿ ಒಂದನೆಯ ಮಹಾಯುದ್ದ ಪ್ರಾರಂಭವಾಯಿತು. ಪ್ರಜಾಪ್ರಭುತ್ವದ ಉಳಿವಿಗಾಗಿ ಈ ಯುದ್ದ ನಡೆಯುತ್ತಿತ್ತೆಂಬುದಾಗಿ ಮಿತ್ರರಾಷ್ಟ್ರಗಳು ಘೋಷಿಸಿಕೊಂಡರೂ ಭಾರತದಲ್ಲಿ ಮಾತ್ರ ಅದನ್ನು ಸ್ಥಾಪಿಸುವ ಸೂಚನೆಗಳಿರಲಿಲ್ಲ. ಆದರೂ ಭಾರತ ಬ್ರಿಟನ್‍ಗೆ ನೀಡಿದ ನೆರವು ಅಪಾರ. ಇದರ ಫಲವಾಗಿ 1919ರ ಸುಧಾರಣೆಗಳು ಬಂದವು. ಆದರೆ ಇವು ಕಾಂಗ್ರೆಸ್ಸಿಗೆ ತೈಪ್ತಿಕೊಡಲಿಲ್ಲ. ಗಾಂಧೀಜಿಯವರಾಗಲೇ ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ಬಂದಿದ್ದರು. ಮುಂದೆ ಭಾರತದ ಹೋರಾಟ ನಿರ್ದಿಷ್ಟ ಮಾರ್ಗದಲ್ಲಿ ಮುಂದುವರಿಯಿತು.

ಬೆಳಗಾವಿಯ ಕಾಂಗ್ರೆಸ್ ಅಧಿವೇಶನ: ಅಖಿಲ ಭಾರತ ಕರ್ಣಾಟಕದ ಬೆಳಗಾಂವಿಯಲ್ಲಿ ಜರುಗುವುದೆಂಬ ತೀರ್ಮಾನವಾದಾಗ ಕನ್ನಡ ಜನ ಹೆಮ್ಮೆಯಿಂದಲೂ ಉತ್ಸಾಹದಿಂದಲೂ ಅದಕ್ಕೆ ಸಿದ್ಧತೆ ಮಾಡಿಕೊಂಡರು. ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಅಧಿವೇಶನ, ಬಿಜಾಪುರ ಜಿಲ್ಲಾ ಕಾಂಗ್ರೆಸ್ ಅಧಿವೇಶನ, ಕರ್ಣಾಟಕ ಖಿಲಾಫತ್ ಪರಿಷತ್, ಭಗಿನೀಮಂಡಲ ಪರಿಷತ್, ಕರ್ಣಾಟಕ ಸಾಹಿತ್ಯ ಸಮ್ಮೇಳನ, ಸ್ವಯಂಸೇವಕರ ಸಮ್ಮೇಳನ ಇವು ಬಿಜಾಪುರದಲ್ಲಿ ಜರುಗಿದವು. ಖಾದಿ ವಸ್ತು ಪ್ರದರ್ಶನ, ದನಗಳ ಜಾತ್ರೆ ಮತ್ತು ರಾಷ್ಟ್ರೀಯ ಗೀತೆಗಳ ಕಂಠಪಾಠ ಸ್ಪರ್ಧೆಗಳೂ ಸಾಂಗವಾಗಿ ನೇರವೇರಿದವು. ಕರ್ಣಾಟಕ ಪ್ರಾಂತೀಯ ಕಾಂಗ್ರೆಸ್ ಸಮ್ಮೇಳನಕ್ಕೆ ಸಿ. ರಾಜಗೋಪಾಲಚಾರಿಯವರೇ ಅಧ್ಯಕ್ಷರು. ಕಾರ್ನಾಡ್ ಸದಾಶಿವರಾವ್, ಹರ್ಡೇನರ್ ಮಂಜಪ್ಪ, ಎನ್.ಸಿ. ಕೇಳ್ಕರ್ ಮುಂತಾದ ಅಖಿಲಭಾರತ ಖ್ಯಾತಿಪಡೆದ ಅನೇಕರು ಅಧಿವೇಶನದಲ್ಲಿ ಹಾಜರಿದ್ದರು. ಆದರೆ ಎಲ್ಲಾಕ್ಕಿಂತ ಹೆಚ್ಚಾಗಿ, ಕರ್ಣಾಟಕದ ಭಾಗ್ಯವಿಶೇಷವೆಂಬಂತೆ ಗಾಂಧೀಜಿಯವರೇ ಬೆಳಗಾಂವಿಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರು.

ಗಾಂಧೀಜಿಯವರು ತಮ್ಮ ಅಧ್ಯಕ್ಷಭಾಷಣದಲ್ಲಿ ನಾಡಿನ ಐಕ್ಯಮತ್ಯ, ಅಸ್ಪøಶ್ಯತಾ ನಿವಾರಣೆ, ಖಾದಿಪ್ರಚಾರ, ಗ್ರಾಮೋದ್ಯೋಗ, ಸ್ವದೇಶಿ, ಅಹಿಂಸೆ-ಮುಂತಾದವುಗಳ ಬಗ್ಗೆ ಭಾಷಣ ಮಾಡಿದರು. ಈ ರಚಾನಾತ್ಮಕ ಕಾರ್ಯಗಳೂ ಸ್ವಾತಂತ್ರ್ಯ ಚಳುವಳಿಯಷ್ಟೆ ಮುಖ್ಯವೆಂದು ಒತ್ತಿ ಹೇಳಿದರು. ಕರ್ಣಾಟಕ ಜನತೆಯಲ್ಲಿ ಹೊಸ ಸ್ಪೂರ್ತಿ ಮೂಡಿತು. ನಾಡಿನ ಮುಖಂಡರೆ¯್ಲ ಕರ್ಣಾಟಕದ ನಾನಾ ಕಡೆ ಸಂಚರಿಸಿ ಗಾಂಧೀಜಿಯವರ ಸಂದೇಶವನ್ನು ಜನರಲ್ಲಿ ಹರಡಿದರು. ಮೈಸೂರು ಸಂಸ್ಥಾನದಲ್ಲಿ ಕೆಲವು ಕಡೆ ಮೆರವಣಿಗೆ ಭಾಷಣಗಳನ್ನು ಅಧಿಕಾರಿಗಳು ನಿಷೇಧಿಸಿದರೂ ರಚನಾತ್ಮಕ ಕಾರ್ಯಗಳಿಗೆ ಸರ್ಕಾರ ಅಡ್ಡಿ ಬರಲಿಲ್ಲ. ಆದರೆ ಕರ್ಣಾಟಕದ ಇತರ ಕಡೆಗಳಲ್ಲಿ ಚಳುವಳಿಗಾರರಿಗೂ ಅಧಿಕಾರಿಗಳಿಗೂ ಫರ್ಷಣೆ ಅನಿವಾರ್ಯವೆಂಬುದು ಸ್ಪಷ್ಟವಾಯಿತು. ಹೋರಾಟ ಮುಂದುವರಿಯಬೇಕಿತ್ತು. ಕರ್ಣಾಟಕದ ಜನರೂ ಸಿದ್ಧವಾಗಿದ್ದರು.

ಕಾನೂನುಭಂಗ ಚಳುವಳಿ: ಗಾಂಧೀಜಿಯವರು 1930ರ ಎಪ್ರಿಲ್ 6ರಂದು ದಂಡಿಯಾತ್ರೆ ಪ್ರಾರಂಭಿಸಿದರು. ಕರ್ಣಾಟಕದ ತಂಡದಲ್ಲಿ ಮೊದಲಿಂದ ಇದ್ದವರು ಮೈಲಾರ ಮಹದೇವಪ್ಪ ಮಾತ್ರ (ನೋಡಿ- ಮಹಾದೇವಪ್ಪ,-ಮೈಲಾರ). ಆದರೆ ಹುಬ್ಬಳ್ಳಿ, ಬೆಳಗಾಂವಿ, ಮಂಗಳೂರು ಮುಂತಾದ ಕಡೆಗಳಿಂದ ಸ್ವಯಂಸೇವಕರು ಬಂದು ಸೇರಿಕೊಂಡರು. ಸರ್ಕಾರದ ಮುಖಂಡರನ್ನು ಹಿಡಿದು ಶಿಕ್ಷೆಗೊಳಪಡಿಸಿತು. ವಿದ್ಯಾರ್ಥಿಗಳೂ ಬಂದು ಸೇರಿಕೊಂಡರು. ಸರ್ಕಾರದ ದಬ್ಬಾಳಿಕೆ ಹೆಚ್ಚಿದಂತೆ ಸತ್ಯಾಗ್ರಹಿಗಳ ಸಂಖ್ಯೆಯಾ ಹೆಚ್ಚಿತು. ಸ್ತ್ರೀಯರೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸತೊಡಗಿದರು. ಗಾಂಧೀಜಿಯವರು ದರ್ಶನದಲ್ಲಿದ್ದ ಉಪ್ಪಿನ ಉಗ್ರಾಣದ ಮೇಲೆ ಧಾಳಿ ನಡೆಸಿದಾಗ, ಕರ್ಣಾಟಕದ ತಂಡ ಸಾಣುಕಟ್ಟೆ ಉಗ್ರಾಣಕ್ಕೆ ಹೋಗಿ ನೂರಾರು ಪೌಂಡು ಉಪ್ಪನ್ನು ಸಾಗಿಸಿ ಕುಮುಟಾದಲ್ಲಿ ಮಾರಿತು. ಮೇ 4ರಂದು ಗಾಂಧೀಜಿಯವರನ್ನು ಬಂಧಿಸಿ ಯೆರವಾಡ ಸೆರೆಮನೆಗೆ ಕೊಂಡೋಯ್ದರು. ಹರತಾಳ ಖಂಡನಾಸಭೆ ಪ್ರದರ್ಶನಗಳು ಎಲೆಲ್ಲೂ ಜರುಗಿದವು. ಉಪ್ಪಿಗೆ ಮಾತ್ರ ಸೀಮಿತವಾಗಿದ್ದ ಕಾನೂನು ಉಲ್ಲಂಘನೆ ಆಗ ಇತರ ಕೆಲವು ವಸ್ತುಗಳಿಗೂ ಹರಡಿತು. ಸತ್ಯಾಗ್ರಹದ ಸಮಾಚಾರ ಹರಡದಂತೆ ಸರ್ಕಾರ ಹೊಸ ವೃತ್ತಪತ್ರಿಕಾ ಆಜ್ಞೆಗಳನ್ನು ಹೊರಡಿಸಿತು; ಜನ ಕಲ್ಲಚ್ಚಿನ ಪತ್ರಿಕೆಗಳನ್ನು ಹೊರಡಿಸಿ ಜನರಲ್ಲಿ ಹಂಚಿದರು. ಸತ್ಯಾಗ್ರಹಿಗಳಿಗೆ ಯಾವ ರೀತಿಯ ಆಶ್ರಯವನ್ನೂ ಕೊಡಬಾರದೆಂದು ಸರ್ಕಾರ ಆಜ್ಞೆ ಹೊರಟಿತು. ಗೃಹಿಣಿಯರು ಕೂಡ ಇದನ್ನು ಉಲ್ಲಂಘಿಸಿ ಅವರಿಗೆ ಆಶ್ರಯ ನೀಡಿದರು.

ಸತ್ಯಾಗ್ರಹ ವ್ಯಾಪಕವಾಯಿತು. ಹೊರದೇಶಗಳ ಬಟ್ಟೆಗಳಿಗೆ ಬಹಿಷ್ಕಾರ, ಅರಣ್ಯ ಸತ್ಯಾಗ್ರಹ, ಮದ್ಯದಂಗಡಿಗಳ ಮುಂದೆ ತಡೆಕಾವಲು, ಕರನಿರಾಕರಣೆ, ಮುಂತಾದ ಎಲ್ಲಾ ಚಟುವಟಿಕೆಗಳೂ ಕರ್ಣಾಟಕದಲ್ಲೂ ಪ್ರಾರಂಭವಾದವು. ಮೆೃಸೂರು ಸಂಸ್ಥಾನದಲ್ಲೂ ಸರ್ಕಾರ ಕಾಂಗ್ರೆಸ್ಸಿಗರ ಮೇಲೆ ಲಾಠಿ ಪ್ರಯೋಗಗಳೇ ಮುಂತಾದ ಕ್ರಮಗಳನ್ನು ಕೈಗೊಂಡಿತು. ಆದರೆ ಚಳುವಳಿ ಬೆಳೆಯುತ್ತಲೇ ಹೋಯಿತು. ಇಲ್ಲಿ ಒಂದು ಗಮನೀಯ ಅಂಶ ಮೊದಲ ಬಾರಿಗೆ ಕಂಡುಬಂತು. ಹರಿದು ಹಂಚಿಹೋಗಿದ್ದ ಕರ್ಣಾಟಕದ ಜನ ತಮ್ಮ ಶೋಚನೀಯ ಪರಿಸ್ಥಿತಿಯನ್ನರಿತರು. ಕನ್ನಡಿಗರೆಲ್ಲಾ ಒಂದಾಗಿ ಬಾಳಬೇಕೆಂಬ ಆಸೆ ಅವರಲ್ಲಿ ಬಲಗೊಂಡಿತು. ಕರ್ಣಾಟಕ ಪ್ರಾಂತ್ಯನಿರ್ಮಾಣಕ್ಕೆ ಈ ಹೋರಾಟದ ಕಾಲದಲ್ಲಿ ಬಲ ದೊರಕಿತು. ಈ ಹೋರಾಟಕ್ಕೆ ಪ್ರತಿಭಾವಂತರೂ ಸಮರ್ಥರೂ ಆದ ನಾಯಕರೂ ದೊರೆತರು. ಗಂಗಾಧರರಾವ್ ದೇಶಪಾಂಡೆ, ಕಡಪ ರಾಘವೇಂದ್ರರಾವ್, ಶ್ರೀನಿವಾಸರಾವ್ ಕೌಜಲಗಿ, ಹರ್ಡೇಕರ್ ಮಂಜಪ್ಪ, ಸದಾಶಿವರಾವ್ ಕಾರ್ನಾಡ್, ಎಸ್.ಎಸ್. ಸೆಟ್ಲೂರ್, ಆರ್. ಆರ್. ದಿವಾಕರ, ಶಿವಮೂರ್ತಿಶಾಸ್ತ್ರಿ ಇಂಥವರ ಮುಂದಾಳುತನದಲ್ಲಿ ಕರ್ಣಾಟಕವೂ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಗಣನೀಯ ಪಾತ್ರವಹಿಸಿತು. ಕರನಿರಾಕರಣೆಯಲ್ಲಿ ಅಂಕೋಲ, ಶಿರಸಿ ಸಿದ್ದಾಪುರ ಪ್ರಾಂತ್ಯಗಳು ಮಾಡಿದ ಬಲಿದಾನ ವೃತ್ತಾಂತವನ್ನು ಸರ್ದಾರ್ ಪಟೇಲರು ಕೇಳಿ, ಆ ನನ್ನದೇಶ ಬಾಂದವರ ತ್ಯಾಗ, ದೇಶಪ್ರೇಮ, ಅವರು ಅನುಭವಿಸಿದ ಕಷ್ಟನಷ್ಟಗಳು ಇವುಗಳಿಂದ ನಾನು ತುಂಬ ಮನನೊಂದಿದ್ದೇನೆ-ಎಂದರು. ಸ್ಕೂಲು ಕಾಲೇಜುಗಳಿಂದ ವಿದ್ಯಾಥಿರ್üಗಳು ಹೊರಬಂದು ಅಧಿಕ ಸಂಖ್ಯೆಯಲ್ಲಿ ಭಾಗವಹಿಸತೊಡಗಿದರು. ಸಂಸ್ಥಾನಗಳ ಪ್ರಜಾ ಸಮ್ಮೇಳನ, ಮೈಸೂರು ಯುವಕ ಸಮ್ಮೇಳನಗಳು 1930ರಲ್ಲಿ ಬೆಂಗಳೂರಿನಲ್ಲಿ ಜರುಗಿ ಮೈಸೂರಿನಲ್ಲೂ ಶಾಸನಬದ್ಧ ರಾಜಪ್ರಭುತ್ವವೇರ್ಪಡಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ಮಧ್ಯೆ ಬ್ರೀಟೀಷರೂ ಕಾಂಗ್ರೆಸನ್ನು ಒಲಿಸಿಕೊಳ್ಳಲು ಅರೆಮನಸ್ಸಿನ ಯತ್ನ ನಡೆಸಿದರು. ಮೂರು ಚಕ್ರಗೋಷ್ಠಿಗಳಾದವು. ಕಾಂಗ್ರೆಸ್ಸಿಗೆ ತೃಪ್ತಿಯಾಗುವ ಯಾವ ತೀರ್ಮಾನವನ್ನೂ ಕೈಗೊಳಲಾಗಲಿಲ್ಲ. ಆದರೂ ಸಂಧಾನಗಳ ಫಲವಾಗಿ 1934ರಲ್ಲಿ ಕಾಂಗ್ರೆಸ್ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ನಿಲ್ಲಿಸಿತು. 1935ರಲ್ಲಿ ಪ್ರಾತೀಯ ಸ್ವಯಮಾಧಿಪತ್ಯವನ್ನು ಭಾರತಕ್ಕೆ ಕೊಡಲಾಯಿತು. ಕಾಂಗ್ರೆಸ್ಸಿನ ಕೆಲವರಿಗೆ ಇದು ಇಷ್ಟವಿಲ್ಲದಿದ್ದರೂ ಉಳಿದವರು ಇದನ್ನು ಒಪ್ಪಿದದರು. 1937ರಲ್ಲಿ ಪ್ರಾಂತ್ಯಗಳಲ್ಲಿ ಹೊಸ ಸರ್ಕಾರಗಳನ್ನು ರಚಿಸಲಾಯಿತು. ಆದರೆ 1939ರಲ್ಲಿ ಎರಡನೆಯ ಮಹಾಯುದ್ಧ ಪ್ರಾರಂಭವಾದಾಗ, ಭಾರತವನ್ನು ಕೇಳದೆ ಬ್ರೀಟನ್ ಅದನ್ನು ಯುದ್ಧಕ್ಕೆ ಎಳೆದದ್ದು ತಪ್ಪು ಎಂಬ ಕಾರಣದಿಂದ ಪ್ರಾಂತೀಯ ಮಂತ್ರಿಮಂಡಲಗಳು ರಾಜಿನಾಮೆಯಿತ್ತವು. ಈ ಯುದ್ಧ ತಮ್ಮದಲ್ಲವೆಂದು ಹೇಳುವ ಸ್ವಾತಂತ್ರವೂ ಜನಕ್ಕಿರಲಿಲ್ಲವಾದ್ದರಿಂದ ಗಾಂಧೀಜಿಯವರು ವೆೃಯಕ್ತಿಕ ಸತ್ಯಾಗ್ರಹ ಪ್ರಾರಂಭಿಸಿದರು. ಯುದ್ಧವಿರೋಧಿ ಫೋಷಣೆಗಳನ್ನು ಕೂಗಿ ಸೆರೆಮನೆ ಸೇರುವ ಈ ವಿಶಿಷ್ಟ ಸತ್ಯಾಗ್ರಹದಲ್ಲಿ ಭಾಗವಹಿಸಿ ದಸ್ತಗಿರಿಯಾದ ನಿಷ್ಟಾವಂತ ಸತ್ಯಾಗ್ರಹಿಗಳಲ್ಲಿ ಕನ್ನಡಿಗರೂ ಇದ್ದರು.

1942ರಲ್ಲಿ ಬ್ರಿಟಿಷರನ್ನು ಭಾರತದಿಂದ ಉಚ್ಚಾಟಿಸುವ ಚಳವಳಿ ಆರಂಭವಾಯಿತು. ಗಾಂಧೀಜಿ ಆದಿಯಾಗಿ ಅನೇಕ ಮುಖಂಡರು ದಸ್ತಗಿರಿಯಾದಾಗ ರಂಗನಾಥ ದಿವಾಕರ, ಹುಕ್ಕೇಕರ, ಡಿ.ಪಿ.ಕರಮರಕರ, ಚೆನ್ನಬಸಪ್ಪ ಅಂಬಲಿ ಮುಂತಾದವರು ಬೊಂಬಾಯಿಯಲ್ಲಿ ಭೂಗತರಾಗಿ ಚಳುವಳಿಯನ್ನು ನಿರ್ದೇಶಿಸಿದರು. ಗಂಗಾಧರರಾವ್ ದೇಶಪಾಂಡೆ, ಎನ್.ಎಸ್. ಹರ್ಡೀಕರ, ಕಬ್ಬೂರ ಮುಂತಾದ ಅನೇಕರು ಬಂಧಿತರಾದರು. ಮೊದಲು ನಗರಕ್ಕೆ ಮಾತ್ರ ಸೀಮಿತವಾಗಿದ್ದ ಸಂಪು ಹಳ್ಳಿಗಳಿಗೂ ಹರಡಿತು. ಚಳವಳಿ ಉಗ್ರವಾಯಿತು. 1942ರ ಆಗಸ್ಟ್ 9ರಿಂದ ಒಂದು ವರ್ಷದಲ್ಲಿ ಕರ್ಣಾಟಕದ ವಿವಿಧ ಭಾಗಗಳಲ್ಲಿ ಬಂಧಿತರಾದವರ ಸಂಖ್ಯೆಯನ್ನು ಮುಂದೆ ಕೊಟ್ಟಿದೆ:

ಬೆಳಗಾಂವಿ 1,255 ಧಾರವಾಡ 1,147 ಉತ್ತರ ಕನ್ನಡ 515 ಬಿಜಾಪುರ 500 ದಕ್ಷಿಣ ಕನ್ನಡ 27 ಬಳ್ಳಾರಿ 112 ಮೈಸೂರು ಸಂಸ್ಥಾನ 2,500 ಕೊಡಗು 74

ಗೋಲಿಬಾರು ನಡೆದ ಕೆಲವು ಸ್ಥಳಗಳ ಹೆಸರು, ಸತ್ತವರ ಮತ್ತು ಗಾಯಗೊಂಡವರ ಸಂಖ್ಯೆ-ಇವನ್ನು ಮುಂದೆ ಕೊಟ್ಟಿದೆ: ಸತ್ತವರ ಸಂಖ್ಯೆ: ಗಾಯಗೊಂಡವರ ಸಂಖ್ಯೆ: ಬೈಲಹೊಂಗಲ 7 9 ನಿಪ್ಪಾಣಿ 2 8 ಶಿಲಾಪುರ 1 1 ಕೋಳೀಗುಡ್ಡ -- 2 ಖವಟಕೊಪ್ಪ 1 6 ಹುಬ್ಬಳ್ಳಿ 1 18 ಮೈಸೂರು ಸಂಸ್ಥಾನ 156 789

ಲಾಠಿ ಪ್ರಹಾರಗಳ ವಿವರ ಈ ರೀತಿ ಇದೆ: ಪ್ರಹಾರ ಸಂಖ್ಯೆ: ಗಾಯಗೊಂಡವರ ಸಂಖ್ಯೆ: ಬೆಳಗಾಂವಿ 6 65 ಗದಗ 3 3 ಹಾವೇರಿ 2 8 ತಾಳೀಕೋಟೆ 1 2 ಅಂಕೋಲ 2 -- ಮಂಗಳೂರು 6 50 ಕಾರ್ಕಳ 1 11 ಬೆಂಗಳೂರು 12 60


ಜನರನ್ನು ಚದುರಿಸಲು ಬೆಂಗಳೂರಿನ ಕಾಲ್ದಳ ಕುದುರೆಗಳನ್ನು ಬಳಸಲಾಗಿತ್ತು. ಚಳುವಳಿಯಲ್ಲಿ ಭಾಗವಹಿಸಿದ್ದವರನೇಕರಿಗೆ ಸರ್ಕಾರ ಬಗೆಬಗೆಯ ಉಗ್ರದಂಡನೆ ವಿಧಿಸುತ್ತಿತ್ತು. ಘಟಕೀ ಶಿಕ್ಷೆ ಇಂಥವುಗಳಲ್ಲೊಂದು. ಅಲ್ಲದೆ ಸಾಮೂಹಿಕ ದಂಡಕ್ಕೆ ಅನೇಕ ಹಳ್ಳಿಗಳ ಜನ ತುತ್ತಾದರು. ಬೆಳಗಾಂವಿಯ ಜಿಲ್ಲೆಯಲ್ಲಿ 8 ಹಳ್ಳಿಗಳ ಮೇಲೆ 1,78,000ರೂ.ಗಳನ್ನು ಧಾರವಾಡ ಜಿಲ್ಲೆಯಲ್ಲಿ 18 ಹಳ್ಳಿಗಳ ಮೇಲೆ 53,500ರೂ.ಗಳನ್ನು ಬಿಜಾಪುರ ಜಿಲ್ಲೆಯಲ್ಲಿ 2 ಹಳ್ಳಿಗಳ ಮೇಲೆ 30,000 ರೂ.ಗಳನ್ನೂ ಮೈಸೂರು ಸಂಸ್ಥಾನದಲ್ಲಿ 4 ಹಳ್ಳಿಗಳ ಮೇಲೆ 2,000 ರೂ.ಗಳನ್ನೂ ದಂಡವಾಗಿ ವಿಧಿಸಲಾಯಿತು. ಸತ್ಯಾಗ್ರಹಿಗಳಿಗೆ ಮಾರ್ಗದರ್ಶಕರಾಗಿ ಮುಖಂಡರಿಲ್ಲದಿದ್ದರೂ ಚಳುವಳಿಗಾರರ ಕಾರ್ಯಕ್ರಮಬದ್ದವಾಗಿ ಮುಂದುವರಿಯಿತು. ಕೊಂಚವೂ ಧೃತಿಕೆಡದೆ ಒಂದೇ ಸಮನಾಗಿ ಹೋರಾಡಿ ಕೊನೆಗೆ ಆತ್ಮಾರ್ಪಣೆ ಮಾಡಿದ ಮಹದೇವಪ್ಪ ಮೈಲಾರ, ಯಾರಿಗೂ ಹಿಂಸೆ ಕೊಡದೆ ಸರ್ಕಾರದ ಕಟ್ಟಡಗಳಿಗೆ ಬೆಂಕಿಯಿಡುವುದೇ ಮುಂತಾದ ವಿಧ್ವಂಸಕ ಕಾರ್ಯ ನಡೆಸಿದ ಚೆನ್ನಪ್ಪ ವಾಲಿ ಮತ್ತು ಸಂಗಡಿಗರು, ಸೈನ್ಯದ ತುಕಡಿಯೊಂದನ್ನು ತರುತ್ತಿದ್ದ ರೈಲನ್ನು ತಡೆಯಲು ಅದಕ್ಕೆ ಅಡ್ಡವಾಗಿ ಕಂಬಿಗಳ ಮಧ್ಯೆ ನಿಂತು ಸೈನ್ಯಾಧಿಕಾರಿಯ ಗುಂಡಿಗೆ ಬಲಿಯಾದ ದಾವಣಗೆರೆಯ ಹಲ್ಲೂರು ನಾಗಪ್ಪ, ಹುಬ್ಬಳ್ಳಿಯಲ್ಲಿ ಪೋಲಿಸರ ಗುಂಡು ತಗುಲಿ ಸಾಯವ ಸ್ದಿತಿಯಲ್ಲಿದ್ದಾಗ ಡಾಕ್ಟರು ಅನುಕಂಪದಿಂದ ಮಗು ನಿನಗೇನು ಬೇಕಪ್ಪ? ಎಂದು ಕೇಳಿದಾಗ ತನಗೆ ಸ್ವರಾಜ್ಯ ಬೇಕು ಎಂದು ದಿಟ್ಟತನದಿಂದ ಉತ್ತರ ಕೊಟ್ಟ 16 ವರ್ಷದ ಹುಡುಗ ನಾರಾಯಣ ದೋಣಿ-ಇಂಥ ಸತ್ಯಾಗ್ರಹಿಗಳು ಅನೇಕ. ಮೈಸೂರು ಹೈದರಾಬಾದು ಸಂಸ್ಥಾನಗಳಲ್ಲಿ ನಡೆದ ಚಳುವಳಿ ಇಬ್ಬಗೆಯಾದುದು: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದರ ಜೊತೆಗೆ ದೇಶಿಯ ಅರಸರು ಸಾಂಕುಶ ಪ್ರಭುಗಳಾಗಿರಲೊಪ್ಪಿ ಜವಾಬ್ದಾರಿ ಸರ್ಕಾರ ಸ್ಥಾಪಿಸುವಂತೆ ಮಾಡುವುದು. 1920ರಲ್ಲಿ ನಾಗಪುರದಲ್ಲಿ ಸೇರಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ದೇಶಿಯ ಸಂಸ್ಥಾನಗಳು ಕೂಡ ಅದರ ಕಕ್ಷೆಯೊಳಕ್ಕೆ ಬಂದವು. ಈ ಕಾಲದಲ್ಲಿ ಮೆೃಸೂರಿನಲ್ಲೂ ರಾಜಕೀಯ ಸಮ್ಮೇಳನಗಳು ನಡೆದು ಸಂಸ್ಥಾನ ಜನರ ಆಶೋತ್ತರಗಳು ಖಚಿತವಾದವು. 1924ರಲ್ಲಿ ಬೆಳಗಾಂವಿಯಲ್ಲಿ ಸೇರಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಮೈಸೂರಿನವರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 1927ರಲ್ಲಿ ಗಾಂಧೀಜಿಯವರು ಮೈಸೂರಿಗೆ ಭೇಟಿ ನೀಡಿದರು. ಇದರಿಂದ ಜನರಲ್ಲಿ ಜಾಗೃತಿ ಅಧಿಕವಾಯಿತು.

ಸಂಸ್ಥಾನ ಸರ್ಕಾರದ ನೀತಿಯೂ ಆಗ ಕಟುವಾಗಿಯೇ ಇತ್ತು. ಅನಾವೃಷ್ಷಿಯಿಂದಾಗಿ ಬೆಳೆಗಳು ಸರಿಯಾಗಿ ಆಗದಿದ್ದರೂ ಸರ್ಕಾರ ನಿರ್ದಯೆಯಿಂದ ಕಂದಾಯ ವಸೂಲು ಮಾಡುತ್ತಿದುದ್ದದನ್ನು ಪ್ರತಿಭಟಿಸಿ ಶಿವಮೊಗ್ಗ, ಶಿರಾಳಕೊಪ್ಪ ಮತ್ತು ಮಂಡ್ಯದ ರೈತರು ಕರನಿರಾಕರಣೆ ಚಳುವಳಿ ಕೈಗೊಂಡರು. ಕಾರ್ಮಿಕ ಚಳುವಳಿಯೂ ಬಲಗೊಂಡಿತು. 1928ರಲ್ಲಿ ಮೈಸೂರು ಸಂಸ್ಥಾನದಲ್ಲೂ ಕಾಂಗ್ರೆಸ್ ಸಂಸ್ಥೆ ಸ್ಥಾಪಿತವಾಯಿತು. 1930ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಮೈಸೂರಿನವರೂ ಭಾಗವಹಿಸಿದ್ದರು. ದೇಶಿಯ ಸಂಸ್ಥಾನಗಳ ಪ್ರತಿನಿಧಿಗಳ ಸಮ್ಮೇಳನಗಳು ಜವಾಬ್ದಾರಿ ಸರ್ಕಾರ ಹೋರಾಟಕ್ಕೆ ಪುಷ್ಟಿಕೊಟ್ಟವು. ಮೈಸೂರು ಸಂಸ್ಥಾನದ ಹೋರಾಟದ ಇತಿಹಾಸದಲ್ಲಿ 1937 ಇನ್ನೊಂದು ಮುಖ್ಯ ಫಟ್ಟ. ಮೈಸೂರಿನಲ್ಲಿದ್ದ ಎರಡು ಪ್ರಮುಖ ಪಕ್ಷಗಳಾದ ಪ್ರಜಾಪಕ್ಷವೂ ಕಾಂಗ್ರೆಸ್ಸೂ ಆಗ ಒಂದಾದುವು. ದೇಶಿಯ ಸಂಸ್ಥಾನಗಳಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪಿಸಲು ಹೋರಾಟ ನಡೆಸಲು ಅವಕ್ಕೆ ಪ್ರತ್ಯೇಕವಾದ ಕಾಂಗ್ರೆಸ್ ಸಂಸ್ಥೆ ಇರಬೇಕೆಂಬ ತತ್ವವನ್ನು ಭಾರತ ರಾಷ್ಟ್ರೀಯ ಕಾಂಗ್ರೆಸ್ಸೂ ಒಪ್ಪಿತು. 1938ರಲ್ಲಿ ಶಿವಪುರದಲ್ಲಿ ಸೇರಿದ್ದ ಮೈಸೂರು ಕಾಂಗ್ರೆಸ್ ಅಧಿವೇಶನದಿಂದ ಚಳುವಳಿ ಉಗ್ರವಾಯಿತು. 1942ರಲ್ಲಿ ಚಳುವಳಿಯ ಕಾಲದಲ್ಲಿ ಇದು ಅಖಿಲಭಾರತ ಚಳುವಳಿಯೊಂದಿಗೆ ಸಮಾವೇಶಗೊಂಡಿತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಸ್ವತಂತ್ರ್ಯರೆಂದು ಘೋಷಿಸಲ್ಪಟ್ಟ ಸಂಸ್ಥಾನಾಧೀಶರು ಭಾರತದ ಒಕ್ಕೂಟದಲ್ಲಿ ತಮ್ಮ ಸಂಸ್ದಾನವನ್ನು ವಿಲೀನಗೊಳಿಸಬೇಕೆಂದೂ ಜವಾಬ್ದಾರಿ ಸರ್ಕಾರ ಸ್ಥಾಪಿಸಬೇಕೆಂದೂ ಮೈಸೂರು ಚಲೋ ಚಳುವಳಿ ಅತ್ಯಂತ ಉಗ್ರವಾಗಿ ನಡೆಯಿತು. ಮೈಸೂರಿನಲ್ಲೂ ಪ್ರಜಾಪ್ರತಿನಿಧಿಗಳ ಸರ್ಕಾರ ಸ್ಥಾಪಿತವಾಯಿತು.

ಈಸೂರು ಪ್ರಕರಣ: ಮೈಸೂರು ಸಂಸ್ಥಾನದ ಸ್ವಾತಂತ್ರ್ಯ ಹೋರಾಟದಲ್ಲಿ ಚಿರಸ್ಮರಣಿಯವಾದದೆಂದರೆ ಈಸೂರು ಪ್ರಕರಣ. ಈಸೂರು ಶಿವಮೊಗ್ಗ ಜಿಲ್ಲೆಯಲ್ಲಿರುವ ಶಿಕಾರಿಪುರ ತಾಲ್ಲೂಕಿನ ಒಂದು ಸಣ್ಣ ಗ್ರಾಮ. ಇಲ್ಲಿಯ ಜನ ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರವೇರ್ಪಡಬೇಕು ಎಂದು 1929ರಲ್ಲಿ ಸಂಸ್ಥಾನದ ಪ್ರಜೆಗಳು ನಡೆಸಿದ ಚಳುವಳಿಯಲ್ಲಿ ಭಾಗವಹಿಸಿದ್ದರು. 1942ರ ಚಳುವಳಿಯಲ್ಲೂ ಮೊದಲಿನಿಂದ ಪಾಲುಗೊಂಡಿದ್ದರು. 1942ರ ಮಧ್ಯಕಾಲದಲ್ಲಿ ಅವರು ತಮ್ಮದೇ ಆದ ಒಂದು ವಿಶಿಷ್ಟ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು. ಸುಮಾರು ಇನ್ನೂರು ಜನರನ್ನು (ಅದರಲ್ಲಿ ಹೆಚ್ಚು ಮಂದಿ ತರುಣರೇ) ಒಳಗೊಂಡ ಒಂದು ಮೆರವಣಿಗೆ ಆ ಹಳ್ಳಿಯ ಬೀದಿಗಳಲ್ಲಿ ಪ್ರತಿನಿತ್ಯ ಹೊರಡುತ್ತಿತ್ತು. ಕಚೇರಿಗೆ ಬೆಂಕಿಯಿಟ್ಟು ಸುಡಿ, ಗೌಡರ ಶಾನುಭೋಗರ ಸರ್ಕಾರಿ ಲೆಕ್ಕಪುಸ್ತಕಗಳನ್ನು ಸುಟ್ಟುಹಾಕಿ, ಸರ್ಕಾರದ ನೌಕರರಿಗೆ ಎಂದ ಗೌರವವನ್ನೂ ಕೊಡಕೂಡದು, ಕೊಟ್ಟವರ ಮನೆಯನ್ನು ಸುಡುತ್ತೇವೆ, ತೇಗದ ಮರಗಳನ್ನು ಕಡಿದುರುಳಿಸಿ, ಯಾರೂ ಭೂಕಂದಾಯವನ್ನು ಕೊಡಕೂಡದು- ಇಂಥವೇ ಅವರ ಕೂಗುಗಳು. ಒಂದು ದಿನ ಅಲ್ಲಿಯ ಶ್ಯಾನುಭೋಗ ಮತ್ತು ಪಟೇಲ ಬಂದಾಗ ಅವರ ಸರ್ಕಾರಿ ಪುಸ್ತಕಗಳನ್ನೆಲ್ಲಾ ಅವರಿಂದ ಕಸಿದುಕೊಂಡರು. ಮಾರನೆಯ ದಿನವೇ ಆ ಹಳ್ಳಿಗೆ ಸ್ವತಂತ್ರಹಳ್ಳಿ ಎಂಬ ಹೆಸರಿಟ್ಟು ಒಂದು ಬೋರ್ಡನ್ನೂ ಬರೆದು ತಗಲುಹಾಕಿದರು. ಹೊಸ ಸರ್ಕಾರವನ್ನೇ ಸ್ಥಾಪಿಸಿದರು ಈ ಯುವಕರು. ಹತ್ತು ವರ್ಷದ ಹುಡುಗ ಜಯಪ್ಪ ಅಮಲ್ದಾರನಾಗಿ ನೇಮಕ ಹೊಂದಿದ. 12ವರ್ಷದ ಮಲ್ಲಪ್ಪಸರ್ವಾಧಿಕಾರಿಯಾದ. ಇತರ ಅಧಿಕಾರಿಗಳನ್ನೂ ನೇಮಿಸಲಾಯಿತು. ಎಲ್ಲರೂ ನಿಯಮಬದ್ದರಾಗಿ ಹುರುಪಿನಿಂದ ಕೆಲಸ ಮಾಡತೊಡಗಿದರು. ಪ್ರತಿಯೊಬ್ಬನೂ ಖಾದಿಟೋಪಿ ಧರಿಸಬೇಕೆಂಬ ನಿಯಮವನ್ನು ಜಾರಿಗೆ ತರಲಾಯಿತು. ಎಲ್ಲರೂ ಸೇರಿದಾಗ ಕರೆಗಂಟೆ ಬಾರಿಸುತ್ತಿದ್ದರು. ಹುಡುಗರ ಶಿಸ್ತು, ನಿಯಮ ಪಾಲನೆ ಎಲ್ಲರನ್ನು ಅಚ್ಚರಿಗೊಳಿಸಿತು. ಸೆಪ್ಪೆಂಬರ್ 28ರಂದು ಅಮಲ್ದಾರರು ತಕ್ಕಸಿಬ್ಬಂದಿಯೊಡನೆ ಈ ಸ್ವತಂತ್ರ್ಯ ಹಳ್ಳಿಗಳಿಗೆ ಬಂದರು. ಊರಿನ ಕರೆಗಂಟೆ ಬಾರಿಸಿತು. ಎಲ್ಲರೂ ಕಲೆತರು. ಅಮುಲ್ದಾರರಿಗೆ ಧರಿಸಲು ಖಾದಿ ಟೋಪಿ ಕೊಟ್ಟರು. ಅವರು ಶಾಂತರಾಗಿದ್ದರೂ ಅವರೊಂದಿಗೆ ಇದ್ದ ಪೋಲೀಸ್ ಅಧಿಕಾರಿಗೆ ಇದು ಸಹಿಸಲಿಲ್ಲ. ಲಾಠಿ ಹೊಡೆತ ಪ್ರಾರಂಭವಾಯಿತು. ಕಾಳಗವೇ ನಡೆಯಿತು. ಪೋಲೀಸ್ ಅಧಿಕಾರಿ, ಅಮಲ್ದಾರ ಇಬ್ಬರೂ ಸಾವಿಗೆ ಈಡಾದರು. ಸ್ವಲ್ಪ ಕಾಲದಲ್ಲೇ ಹೆಚ್ಚು ಪೋಲೀಸರಲ್ಲದೆ ಒಂದು ಸೈನ್ಯದ ತುಕಡಿಯೂ ಬಂದಿತು. ಇವರು ಅಮಾನುಷ ರೀತಿಯಲ್ಲಿ ಆ ಹಳ್ಳಿಯವರ ಮೇಲೆ ಸೇಡು ತೀರಿಸಿಕೊಂಡರು. ನಲವತ್ತೊಂದು ಮಂದಿ ನ್ಯಾಯಸ್ಥಾನದಲ್ಲಿ ವಿಚಾರಣೆಗೊಳಗಾದರು. ಅವರಲ್ಲಿ ಐದು ಜನಕ್ಕೆ ಮರಣದಂಡನೆ ವಿಧಿಸಲಾಯಿತು.

ಹೈದಾರಾಬಾದ್ ಕರ್ಣಾಟಕವೂ ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಹಿಂದೆ ಬಿದ್ದಿರಲಿಲ್ಲ. 1857ರ ಸಂಗ್ರಾಮದಲ್ಲಿ ಕೊಪ್ಪಳದ ಮುಂಡರಗಿ ಭೀಮರಾವ್, ಸುರಪುರದ ವೆಂಕಟಪ್ಪನಾಯಕ ಮುಂತಾದವರು ಬ್ರಿಟಿಷರೊಂದಿಗೆ ಹೋರಾಡಿ ಮಡಿದಿದ್ದರು. ತಿಲಕರ ರಾಜಕೀಯ ಆಂದೋಲನದಿಂದ ಈ ಜಾಗೃತಿ ಬೆಳೆಯಿತು: ಗಾಂಧೀಜಿಯವರ ಅಸಹಕಾರ ಚಳುವಳಿಯ ಸಮಯದಲ್ಲಿ ಖಚಿತವಾಗತೊಡಗಿತು. ನಿಜಾóಂ ಕನ್ನಡಿಗರ ಸರ್ವತೋಮುಖ ಏಳಿಗೆಗಾಗಿ ನಿಜಾóಂ ಕರ್ಣಾಟಕ ಪರಿಷತ್ತೊಂದನ್ನು ಸ್ಥಾಪಿಸಬೇಕೆಂದು 1934ರಲ್ಲಿ ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯಸಮ್ಮೇಳನದ ಸಮಯದಲ್ಲಿ ತಿರ್ಮಾನವಾಯಿತು. ಅದರಂತೆ 1937ರಲ್ಲಿ ಹೈದರಾಬಾದಿನಲ್ಲಿ ಪರಿಷತ್ತು ಸೇರಿತು. ಆಂಧ್ರ ಮಹಾರಾಷ್ಟ್ರ ವಿಭಾಗಗಳೂ ಇದೇ ಬಗೆಯ ಚಟುವಟಿಕೆಗಳನ್ನಾರಂಭಿಸಿದ್ದವು. ಹೈದಾರಾಬಾದ್ ಕರ್ಣಾಟಕದಲ್ಲಿ ರಾಜಕೀಯ ಚಟುವಟಿಕೆಗಳು ಅಧಿಕೃತವಾಗಿ ಪ್ರಾರಂಭವಾದದ್ದು ಆಗಲೇ. ಇದೇ ಕಾಲಕ್ಕೆ ಬಿರುಸಾಗಿ ನಡೆದ ವಂದೇ ಮಾತರಂ ಚಳುವಳಿಯಲ್ಲಿ ಅನೇಕ ಕನ್ನಡ ವಿದ್ಯಾಥಿರ್üಗಳು ಪಾತ್ರವಹಿಸಿದರು.

ಇಡೀ ಹೈದರಾಬಾದ್ ಸಂಸ್ಥಾನಕ್ಕೆ ಒಂದು ರಾಜಕೀಯ ಸಂಸ್ಥೆಯನ್ನು ಸ್ಥಾಪಿಸುವ ಉದ್ದೇಶದಿಂದ ಪ್ರಯತ್ನಗಳು ನಡೆದದ್ದು 1938ರಲ್ಲಿ. ಆದರೆ ಇದಕ್ಕೆ ಸರ್ಕಾರ ಅನುಮತಿ ಕೊಡಲಿಲ್ಲ. ಇದಕ್ಕಾಗಿ ಸತ್ಯಾಗ್ರಹ ಹೂಡಲಾಯಿತು. ಇದಕ್ಕೆ ಜಾತೀಯತೆಯ ಬಣ್ಣ ಬಳಿಯಲು ಸರ್ಕಾರ ಹವಣಿಸಿತು.

1940ರಲ್ಲಿ ಬಿದರೆಯಲ್ಲಿ ಕರ್ಣಾಟಕ ಪರಿಷತ್ತಿನ ಎರಡನೆಯ ಅಧಿವೇಶನ ಸೇರಿತು. ಅದು ಮುಗಿದ ಅನಂತರ ಕೆಲವು ಪುಂಡರು ಸೇರಿಕೊಂಡು ಆ ನಗರಕ್ಕೆ ಬೆಂಕಿಯಿಟ್ಟರು. ಜನ ಉಗ್ರವಾಗಿ ಪ್ರತಿಭಟಿಸಿದರು. ಸಂಸ್ಥಾನ ಕಾಂಗ್ರೆಸ್ಸಿನ ಮೇಲಿನ ಬಹಿಷ್ಕಾರ ತೆಗೆಯಬೇಕೆಂಬ ಚಳುವಳಿಯೂ ಸಾಗಿತು. 1942ರಲ್ಲಿ ಆರಂಭವಾದ ಅಖಿಲಭಾರತ ಸ್ವಾತಂತ್ರ್ಯ ಚಳುವಳಿಯ ಬಿಸಿ ಹೈದರಾಬಾದಿಗೂ ತಟ್ಟದೆ ಇರಲಿಲ್ಲ. ಆ ಸಮಯದಲ್ಲಿ ಕರ್ಣಾಟಕ ಪರಿಷತ್ತಿನ ಮೂರನೆಯ ಅಧಿವೇಶನ ಸುರಪುರದಲ್ಲಿ ಸೇರಿ ಜನರ ಜವಾಬ್ದಾರಿ ಸರ್ಕಾರದ ಬೇಡಿಕೆಗಳನ್ನು ಮುಂದಿಟ್ಟಿತು. ಆದರೆ ಸರ್ಕಾರ ಇದಕ್ಕೆ ಲಕ್ಷ್ಯ ಕೊಡಲಿಲ.್ಲ ಪರಿಷತ್ತಿನ ನಾಲ್ಕು, ಐದನೆಯ ಅಧೀವೇಶನಗಳೂ ಸೇರಿ ಹೊಣೆಗಾರ ಪ್ರಭುತ್ವ ಸ್ಥಾಪನೆಗಾಗಿ ಸರ್ಕಾರಕ್ಕೆ ಒತ್ತಾಯ ಹಾಕಿದವು. 946ರಲ್ಲಿ ಸೇರಿದ್ದ ಅಖಿಲಭಾರತ ದೇಶಿಯ ಸಂಸ್ಥಾನಗಳ ಪರಿಷತ್ತಿನ ಅಧಿವೇಶನ ಹೈದರಾಬಾದಿನ ಹೋರಾಟಕ್ಕೆ ನೈತಿಕ ಬೆಂಬಲ ನೀಡಿತಲ್ಲದೆ ಹೈದರಾಬಾದ್ ರಾಜ್ಯ ಕಾಂಗ್ರೆಸ್ಸಿನ ಮೇಲಿನ ನಿರ್ಬಂಧವನ್ನು ಸರ್ಕಾರ ತೆಗೆದುಹಾಕಬೇಕೆಂದೂ ಇಲ್ಲದಿದ್ದರೆ ಸತ್ಯಾಗ್ರಹ ಹೂಡಬೇಕೆಂದೂ ನಿರ್ಣಯ ಮಾಡಿತು. ಸರ್ಕಾರ ಈ ಕ್ರಮಕ್ಕೆ ಹೆದರಿ ನಿರ್ಬಂಧವನ್ನು ರದ್ದು ಮಾಡಿತು. ಅಲ್ಲಿಂದಾಚೆಗೆ ಹೋರಾಟ ಹೆಚ್ಚು ಬಿರುಸಿನಿಂದ ಸಾಗಿತು. 1947ರಲ್ಲಿ ರಾಜ್ಯ ಕಾಂಗ್ರೆಸ್ ಮೊದಲನೆಯ ಅಧಿವೇಶನ ಸೇರಿತು. ಆ ವರ್ಷದ ಆಗಸ್ಟಿನಲ್ಲಿ ಭಾರತ ಸ್ವತಂತ್ರ್ಯವಾದಾಗ ಸಂಸ್ದಾನದ ನಿಜಾóಮ ಭಾರತದಿಂದ ಪ್ರತ್ಯೇಕವಾಗಿರಬೇಕೆಂದು ಮಾಡಿದ ಪ್ರಯತ್ನ ವಿಫಲವಾಗೊಂಡಿತು. ಸ್ವತಂತ್ರ್ಯ ಭಾರತಸರ್ಕಾರದ ಪೋಲಿಸ್ ಕಾರ್ಯಾಚರಣೆಯಿಂದಾಗಿ ಹೈದರಾಬಾದಿನ ಜನರ ಆಶೋತ್ತರಗಳು ಪೂರೈಸಿದವು. ಈ ನಡುವೆ ಅಲ್ಲಿಯ ಜನ ಧೈರ್ಯಸಾಹಸಗಳಿಂದ ಹೋರಾಟ ನಡೆಸುತಿದ್ದರು. ಪ್ರತ್ಯೇಕ ಮುಸ್ಲಿಂ ರಾಜ್ಯದ ಕನಸುಕಟ್ಟಿ ಉನ್ನತ ಸಾಹಸದಿಂದ ಕ್ರೂರಕೃತ್ಯಗಳೆನ್ನೆಸಗುತ್ತಿದ್ದರಜಾóಕಾರರ ಹಿಂಸೆಗಳನ್ನೂ ಅವರು ಸಹಿಸಿ ಗೆದ್ದರು.

ಹೀಗೆ ಕರ್ಣಾಟಕದ ಎಲ್ಲಾ ಕಡೆಗಳಲ್ಲೂ ಜನರು ರಾಜಕೀಯ ಸ್ವಾತಂತ್ರ್ಯ ಗಳಿಸಿದರಾದರೂ ಅವರ ಹೋರಾಟ ಇನ್ನೂ ಮುಗಿದಿರಲಿಲ್ಲ. ಮುಂಬಯಿ, ಹೈದರಾಬಾದು, ಮದ್ರಾಸ್ ಪ್ರಾಂತ್ಯಗಳ ಕರ್ಣಾಟಕ ಭಾಗಗಳನ್ನೂ ಮೈಸೂರು ಕೊಡಗುಗಳನ್ನೂ ಒಂದುಗೂಡಿಸಿ ಅಖಂಡ ಕರ್ನಾಟಕವನ್ನು ಸ್ಥಾಪಿಸುವ ಕಾರ್ಯ ಉಳಿದಿತ್ತು. ಈ ಗುರಿ ಸಾಧಿಸಿದ್ದು 1956ರಲ್ಲಿ. ಆ ವರ್ಷದ ನವೆಂಬರ್ ಒಂದರಂದು ಕನ್ನಡ ರಾಜ್ಯೋದಯವಾಯಿತು. (ನೋಡಿ- ಕರ್ನಾಟಕ-ಏಕೀಕರಣ) (ಎ.ಎಂ.)