ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರ್ನಾಟಕ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಕರ್ನಾಟಕ ದಕ್ಷಿಣ ಭಾರತದ ರಾಜ್ಯಗಳಲ್ಲೊಂದು. ಇದರ ಹಿಂದಿನ ಹೆಸರು ಮೈಸೂರು ಸಂಸ್ಥಾನ. ಉತ್ತರದಲ್ಲಿ ಕೃಷ್ಣಾ ಮತ್ತು ದಕ್ಷಿಣದಲ್ಲಿ ಕಾವೇರಿ ನದಿ ವ್ಯವಸ್ಥೆಗಳಿಂದ ಕೂಡಿ ದಖನ್ ಪ್ರಸ್ಥಭೂಮಿಯ ನೈಋತ್ಯ ಭಾಗದಲ್ಲಿ, ಉ.ಅ. 11 ಡಿಗ್ರಿ 3' ನಿಂದ 18ಡಿಗ್ರಿ 45' ವರೆಗೂ ಪೂ.ರೇ. 74 ಡಿಗ್ರಿ 12' ನಿಂದ 78ಡಿಗ್ರಿ 40' ವರೆಗೂ ಹಬ್ಬಿರುವ ಈ ನಾಡಿಗೆ ಕರ್ನಾಟಕ, ಕನ್ನಡ ನಾಡು, ಕನ್ನಾಡು ಎಂಬ ಹೆಸರುಗಳೂ ಇವೆ. ವಾಯವ್ಯ ಮತ್ತು ಉತ್ತರ ದಿಕ್ಕುಗಳಲ್ಲಿ ಮಹಾರಾಷ್ಟ್ರ, ಪೂರ್ವದಲ್ಲಿ ಆಂಧ್ರಪ್ರದೇಶ, ಆಗ್ನೇಯ ದಕ್ಷಿಣಗಳಲ್ಲಿ ತಮಿಳುನಾಡು, ನೈಋತ್ಯದಲ್ಲಿ ಕೇರಳ, ಪಶ್ಚಿಮದಲ್ಲಿ ಅರಬ್ಬೀ ಸಮುದ್ರ ಇದರ ಮೇರೆಗಳು. ಪೂರ್ವಪಶ್ಚಿಮವಾಗಿ ಸು. 400 ಕಿಮೀ ಮತ್ತು ಉತ್ತರದಕ್ಷಿಣವಾಗಿ ಸು.700 ಕಿಮೀ ಹಬ್ಬಿರುವ ಕರ್ನಾಟಕದ ವಿಸ್ತೀರ್ಣ 1,91,791 ಚ.ಕಿಮೀ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೆಳಗಾಂವಿ, ಬಳ್ಳಾರಿ, ಬೀದರ್, ಬಿಜಾಪುರ, ಚಿಕ್ಕಮಗಳೂರು, ಚಿತ್ರದುರ್ಗ ಕೊಡಗು, ಧಾರವಾಡ, ಬಾಗಲಕೋಟೆ, ಗದಗ, ಕೊಪ್ಪಳ, ಗುಲ್ಬರ್ಗ, ಹಾಸನ, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಉತ್ತರ ಕನ್ನಡ, ರಾಯಚೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ, ಹಾವೇರಿ, ತುಮಕೂರು, ರಾಮನಗರ ಮತ್ತು ಚಿಕ್ಕಬಳ್ಳಾಪುರ, ಯಾದಗಿರಿ ಎಂಬ 30 ಜಿಲ್ಲೆಗಳಿವೆ. ರಾಜಧಾನಿ ಬೆಂಗಳೂರು. ರಾಜ್ಯದ ಜನಸಂಖ್ಯೆ 61,130,704 (2011).

ಮೇಲ್ಮೈ ಲಕ್ಷಣ[ಸಂಪಾದಿಸಿ]

ಕರ್ನಾಟಕದ ಬಹುಭಾಗ ದಖನ್ ಪ್ರಸ್ಥಭೂಮಿ ಪ್ರದೇಶದಲ್ಲಿದೆ. ಇದು ಭಾರತದಲ್ಲೇ ಅತ್ಯಂತ ಪುರಾತನವಾದ ನೆಲ. ಕರ್ನಾಟಕದ ಪಶ್ಚಿಮದಂಚಿನ ಕಿರಿದಾದ ನೆಲ ಮಾತ್ರ ತಗ್ಗುಪ್ರದೇಶ. ದಖನ್ನಿನ ಆಚೀಚೆ ಮಾಲೆಯಂತೆ ಹಬ್ಬಿರುವ ಪೂರ್ವ ಪಶ್ಚಿಮ ಘಟ್ಟಗಳು ಕರ್ನಾಟಕದ ದಕ್ಷಿಣದಲ್ಲಿ ನೀಲಗಿರಿಯಲ್ಲಿ ಸಂಧಿಸುತ್ತವೆ. ಪಶ್ಚಿಮ ಕರಾವಳಿಯಿಂದ ಕಡಿದಾಗಿ ಮೇಲೇರುವ ಪಶ್ಚಿಮಘಟ್ಟಗಳು ಪೂರ್ವಘಟ್ಟಗಳಗಿಂತ ಹೆಚ್ಚು ಎತ್ತರ. ಸು. 350 ಕಿಮೀ. ಉದ್ದದ ಪಶ್ಚಿಮದ ಕಡಲ ಕರೆ ಬಹುತೇಕ ನೇರ. ತೀರದಿಂದ ಸಮುದ್ರದತ್ತ ಚಾಚಿದಂತೆ 65-80 ಕಿಮೀ. ಖಂಡಾವರಣ ಪ್ರದೇಶದಲ್ಲಿ ಕಡಲ ಆಳ 180 ಮೀ. ಅಡಿಗಳಿಗಿಂತ ಕಡಿಮೆ. ಕಡಿದಾದ ಬೆಟ್ಟದಿಂದ ಕೆಳಗಿಳಿದು ಸಮುದ್ರ ಸೇರುವ ಹೊಳೆ ಝರಿಗಳು ಜಲರಾಶಿಯಲ್ಲಿ ಹೊತ್ತು ತರುವ ಆಹಾರವೂ ಕಿರಿ ಆಳದ ಕಡಲೂ ಕರ್ನಾಟಕದ ಮತ್ಸ್ಯ ಸಂಪತ್ತಿಗೆ ಮೂಲಾಧಾರ.

ಕರ್ನಾಟಕದ ಮಧ್ಯ ಭಾಗದಲ್ಲಿ 15ಲಿ ಉ. ಅ.ದ ಸನಿಯದಲ್ಲಿ ಹರಿಯುವ ತುಂಗಭದ್ರಾ ನದಿಯ ಉತ್ತರ ದಕ್ಷಿಣ ಭಾಗಗಳು ಕ್ರಮವಾಗಿ ಉತ್ತರ ಮತ್ತು ದಕ್ಷಿಣ ಕರ್ನಾಟಕಗಳೆಂದು ಹೆಸರಾಗಿವೆ. ಭೂ ರಚನೆ, ಮೇಲ್ಮೈಲಕ್ಷಣ, ಮಳೆಬೆಳೆ, ಜನರ ನಡೆ ನುಡಿ, ವ್ಯವಹಾರ, ಆಹಾರ, ಉಡಿಗೆತೊಡಿಗೆ ಇವುಗಳಲ್ಲಿ ಉತ್ತರ ದಕ್ಷಿಣಗಳಲ್ಲಿ ವೈಶಿಷ್ಟ್ಯಗಳುಂಟು. ಆದ್ದರಿಂದ ಪ್ರಾಕೃತಿಕವಾಗಿ ಕರ್ನಾಟಕವನ್ನು 3 ಪ್ರಮುಖ ವಿಭಾಗಗಳಾಗಿ ವಿಂಗಡಿಸಬಹುದು: 1. ಮಲೆನಾಡು 2. ಮೈದಾನ ಮತ್ತು 3. ಕರಾವಳಿ.

ಮಲೆನಾಡು[ಸಂಪಾದಿಸಿ]

ಇದು ಬೆಟ್ಟ ಗುಡ್ಡಗಳ ಬೀಡಾಗಿದ್ದರೂ ಕರ್ನಾಟಕದ ಸಂಪದ್ಭರಿತವಾದ ಪ್ರಾಕೃತಿಕ ವಿಭಾಗ. ರಾಜ್ಯದ ಪಶ್ಚಿಮಕ್ಕಿದ್ದು ಸಹ್ಯಾದ್ರಿ ಎಂದೇ ಪ್ರಸಿದ್ಧಿ. ಉತ್ತರ ದಕ್ಷಿಣವಾಗಿ 650 ಕಿಮೀ ಉದ್ದವಾಗಿ ಹಬ್ಬಿರುವ ಈ ಸಾಲುಗಳು ದಕ್ಷಿಣದತ್ತ ಸಾಗಿದಂತೆ ಹೆಚ್ಚು ಎತ್ತರವಾಗಿ, ಕೊನೆಗೆ ನೀಲಗಿರಿಯಲ್ಲಿ ಸಮಾವೇಶಗೊಳ್ಳುತ್ತವೆ. ರಾಜ್ಯದ ಸ್ಥಳವಿನ್ಯಾಸದ ಮೇಲೂ ಮೇಲ್ಮೈ ರಚನೆಯ ಮೇಲೂ ಇವುಗಳ ಪ್ರಭಾವ ಅತ್ಯಧಿಕ. ರಾಜ್ಯದ ಅನೇಕ ಮುಖ್ಯ ನದಿಗಳಿಗೆ ಈ ಸಹ್ಯಾದ್ರಿಯೇ ಉಗಮಸ್ಥಾನ. ಇದು ಪೂರ್ವಪಶ್ಚಿಮ ಜಲವಿಭಾಜಕ. ಉತ್ತರದಲ್ಲಿ ಈ ಶ್ರೇಣಿಗಳ ತಳದಲ್ಲಿ ಧಾರವಾಡ ಶಿಲಾವರ್ಗ ದಕ್ಷಿಣದಲ್ಲಿ ಗ್ರಾನೈಟ್ ಶಿಲೆಗಳೂ ಉಂಟು. ಸಹ್ಯಾದ್ರಿಯ ನೆತ್ತಿಯ ಮೇಲಣ ಗಟ್ಟಿ ಶಿಲೆಗಳು ಮಳೆಗಾಳಿಗಳೇ ಮುಂತಾದ ಪ್ರಾಕೃತಿಕ ಜಂಜಡಗಳನ್ನೆದುರಿಸಿ ನಿಂತು ಎತ್ತರವಾಗಿಯೇ ಉಳಿದುಕೊಂಡಿವೆ. ಮೃದು ಶಿಲೆಗಳು ಸವೆೆದುಹೋಗಿ ಬಾಯ್ದೆರೆದು, ಘಟ್ಟಗಳ ನಡುವೆ ಅಲ್ಲಲ್ಲಿ ಸೀಳುಗಳು ಸಂಭವಿಸಿವೆ. ಸಹ್ಯಾದ್ರಿಯ ಶ್ರೇಣಿಗಳಲ್ಲಿ ಅನೇಕ ಉತ್ತುಂಗ ಶಿಖರಗಳಿವೆ. ಈ ಭಾಗದಲ್ಲಿ ಕರ್ನಾಟಕದ ಅತ್ಯುನ್ನತ ಶಿಖರಗಳಿವೆ. ಸಹ್ಯಾದ್ರಿಯ ಬೃಹದ್ಬಾಹುಗಳಲ್ಲೊಂದಾದ ಚಂದ್ರದ್ರೋಣಪರ್ವತ ಅಥವಾ ಬಾಬಾಬುಡನ್ಗಿರಿಯಲ್ಲಿರುವ ಮುಳ್ಳಯ್ಯನಗಿರಿ ಶಿಖರದ ಎತ್ತರ ಸು. 1927 ಮೀ. ಇದು ರಾಜ್ಯದ ಅತ್ಯಂತ ಎತ್ತರದ ಶಿಖರ. ಕುದುರೆಮುಖ (1892 ಮೀ), ಕೊಡಚಾದ್ರಿ (1344 ಮೀ), ಪುಷ್ಪಗಿರಿ (1731 ಮೀ), ದತ್ತಗಿರಿ (1895 ಮೀ) ಮತ್ತು ಕಲ್ಹತ್ತಗಿರಿ (1877 ಮೀ)- ಇವು ಇತರ ಶಿಖರಗಳು. ಸಹ್ಯಾದ್ರಿಯ ಪೂರ್ವಭಾಗಕ್ಕಿಂತ ಪಶ್ಚಿಮಭಾಗ ಹೆಚ್ಚು ಕಡಿದಾದ ಶಿಲಾಮುಖ ಭೂಯಿಷ್ಠವೂ ಆದದ್ದು, ಸಹ್ಯಾದ್ರಿಯ ಎರಡು ಬದಿಗಳಲ್ಲೂ ಅಡ್ಡಲಾಗಿ ಹಬ್ಬಿದ ಬೆಟ್ಟದಸಾಲುಗಳಿವೆ. ಪಶ್ಚಿಮಸಾಲು ಕ್ರಮಬದ್ಧವಾಗಿಲ್ಲ. ಪಶ್ಚಿಮಘಟ್ಟಗಳು ಕಡಿದಾಗಿದ್ದರೂ ಇವುಗಳ ನಡುವೆ ಇರುವ ಕಣಿವೆ ಮಾರ್ಗಗಳು ಕರ್ನಾಟಕದ ಪೂರ್ವ ಪಶ್ಚಿಮ ಭಾಗಗಳ ನಡುವಣ ಸಂಪರ್ಕಮಾಧ್ಯಮವಾಗಿ, ರಾಜ್ಯದ ಸಾಂಸ್ಕೃತಿಕ ಬೆಳೆವಣಿಗೆಗೆ ಸಾಧಕವಾಗಿವೆ ಯೆನ್ನಬಹುದು. ಉತ್ತರ ಕರ್ನಾಟಕದ ಕೊಲ್ಲೂರ್ ಘಾಟಿ, ಶಿವಮೊಗ್ಗ - ಉಡುಪಿಗಳ ನಡುವೆ ಇರುವ ಆಗುಂಬೆ ಘಾಟಿ, ಚಿಕ್ಕಮಗಳೂರು-ಮಂಗಳೂರುಗಳ ನಡುವೆ ಚಾರ್ಮುಡಿ ಘಾಟಿ ಇವು ಪ್ರಮುಖವಾದವು. ಪಶ್ಚಿಮದಿಂದ ಪೂರ್ವದ ಕಡೆಗೆ ಇಳಿಜಾರಾಗಿರುವ ಪ್ರಸ್ಥಭೂಮಿಯ ಪೂರ್ವದಂಚಿನಲ್ಲಿ, ಈಶಾನ್ಯ ದಿಕ್ಕಿನಿಂದ ನೈಋತ್ಯಾಭಿಮುಖವಾಗಿ ಹಬ್ಬಿ, ನೀಲಗಿರಿಯಲ್ಲಿ ಪಶ್ಚಿಮ ಘಟ್ಟಗಳೊಂದಿಗೆ ಸಂಗಮಿಸುವ ಪೂರ್ವಘಟ್ಟಗಳು ಸಹ್ಯಾದ್ರಿ ಶ್ರೇಣಿಗಳಿಗಿಂತ ತಗ್ಗು, ಕೋಲಾರದಲ್ಲಷ್ಟೇ ಪ್ರಧಾನವಾಗಿ ಎದ್ದುನಿಂತಿರುವ ಈ ಶ್ರೇಣಿಗಳು ಒಟ್ಟಿನಲ್ಲಿ ಪ್ರಸ್ಥಭೂಮಿಯ ತಲಮಟ್ಟಕ್ಕಿಂತ ಅತಿ ಹೆಚ್ಚು ಎತ್ತರವಾಗೇನು ಇಲ್ಲ. ಇವುಗಳದು ಧಾರವಾಡ ಶಿಲಾವರ್ಗದ ರಚನೆ. ಉದ್ದ ಏಣಿನ ಬಂಡೆಗಲ್ಲುಗಳು ಇಲ್ಲಿಯ ವೈಶಿಷ್ಟ್ಯ.

ಮೈದಾನ[ಸಂಪಾದಿಸಿ]

ಪೂರ್ವಪಶ್ಚಿಮ ಘಟ್ಟಗಳ ನಡುವಣ ದಿಣ್ಣೆ ನೆಲವನ್ನು ಮೈದಾನವೆಂದು ವ್ಯವಹರಿಸುವುದು ವಾಡಿಕೆಯಾಗಿದೆ. ತುಂಗಭದ್ರೆಯ ಉತ್ತರಕ್ಕಿರುವ ಪ್ರದೇಶ ಕಪ್ಪು ಮಣ್ಣಿನಿಂದ ಕೂಡಿದ, ಅಲ್ಲಲ್ಲಿ ಮರಗಳನ್ನೊಳಗೊಂಡ, ಏಕಪ್ರಕಾರವಾಗಿ ಹಬ್ಬಿರುವ ದಿಣ್ಣೆನೆಲದಂತೆ ಕಾಣುತ್ತದೆ. ಆದರೆ ಈ ಪ್ರದೇಶದಲ್ಲೂ ಭೌತಿಕವಾಗಿ ಭಿನ್ನತೆಗಳಿಲ್ಲ. ಉತ್ತರ ಮೈದಾನದ ಮೂರನೆಯೆರಡು ಭಾಗ ಸು. 610 ಮೀ ಎತ್ತರವುಂಟು. ನಗ್ನೀಕೃತ ಬೆಟ್ಟಸಾಲುಗಳೂ ಅಗಲವೂ ಚಪ್ಪಟೆಯೂ ಆದ ಕಣಿವೆಗಳೂ ನದೀವನಗಳೂ ಇದನ್ನು ಅಲ್ಲಲ್ಲಿ ವಿಭಾಗಿಸಿವೆ. ಕೃಷ್ಣಾ , ಭೀಮಾ ಮತ್ತು ತುಂಗಭದ್ರಾ ನದಿಗಳು ಉದ್ದಕ್ಕೂ ಆಚೀಚೆ ಕನಿಷ್ಠ 16 ಕಿಮೀ ಅಗಲಕ್ಕಿರುವ ನೆಲಪಟ್ಟಿಗಳು ಉಳಿದ ನೆಲಕ್ಕಿಂತ ತಗ್ಗು. ಇವು ಪೂರ್ವದಲ್ಲಿ 365-400 ಮೀ ಎತ್ತರದ ವಿಸ್ತಾರವಾದ ಬಯಲಿನಲ್ಲಿ ಸಮಾವೇಶಗೊಳ್ಳುತ್ತವೆ. ಪೂರ್ವಭಾಗದ ಈ ನೆಲ ಅಲ್ಲಲ್ಲಿ ಥಟ್ಟನೆ ಕೆಳಕ್ಕೆ ಇಳಿದಿದೆ. ಕಿಲೋಮೀಟರ್ಗಳಷ್ಟು ಹಬ್ಬಿರುವ ಇಂಥ ಇಳುಕಲುಗಳ ಅಂಚಿನ ಕಡಿದುಬಂಡೆಗಳು ಯುಗಯುಗಗಳಿಂದ ಮಳೆಗಾಳಿಗೆ ಮೈಯೊಡ್ಡಿ ಬೆತ್ತಲೆಯಾಗಿ ನಿಂತಿವೆ. ತುಂಗಭದ್ರೆಗೆ ಉತ್ತರದ ಪ್ರದೇಶದಲ್ಲಿರುವ ಪರ್ಯಾಯದ್ವೀಪೀಯ ನೈಸ್ ಶಿಲಾಪದರಗಳಿಗೂ ಇವುಗಳು ನಡುನಡುವೆ ದಕ್ಷಿಣೋತ್ತರವಾಗಿ ಹಬ್ಬಿದ ಭಿನ್ನಸ್ತರಗಳ ಧಾರವಾಡ ಶಿಲೆಗಳಿಗೂ ಮೆತ್ತಿಕೊಂಡಂತೆ ಉತ್ತರದಲ್ಲಿ ಕಡಪ ಕರ್ನೂಲು ಮಾದರಿಯ ಮರಳು ಕಲ್ಲು, ಸುಣ್ಣಕಲ್ಲು ಮತ್ತು ಬುರುದೆಕಲ್ಲುಗಳ (ಮಡ್ಸ್ಟೋನ್) ಅಖಂಡ ಪಟ್ಟಿಕೆಯೊಂದು ಹಬ್ಬಿದೆ. ರಾಜ್ಯದ ಉತ್ತರದಂಚಿನಲ್ಲಿರುವ ಪ್ರದೇಶ ಜ್ವಾಲಾಮುಖಿಯ ಕಪ್ಪುಶಿಲೆಯಿಂದಲೂ ಘನೀಕೃತ ಶಿಲಾಪ್ರವಾಹಗಳಿಂದಲೂ ಕೂಡಿದೆಯೆನ್ನಬಹುದು. ದಕ್ಷಿಣ ಮೈದಾನ ಉತ್ತರದ್ದಕ್ಕಿಂತ ಭಿನ್ನ, ಉತ್ತರದಕ್ಕಿಂತ ಹೆಚ್ಚು ಎತ್ತರ. ಇದರ ರಚನೆÀ ಗ್ರಾನೈಟ್ ಮತ್ತು ಧಾರವಾಡ ಶಿಲಾಭಾಗಗಳಿಂದ ಕೂಡಿರುವುದರಿಂದ ಭೂಪ್ರದೇಶ ಹೆಚ್ಚು ವೈವಿಧ್ಯಪುರಿತ. ಊ ಆಕಾರದ ಉಬ್ಬು ನೆಲದಿಂದೊಡಗೂಡಿದಂತೆ ಇದರ ಲಕ್ಷಣ. ಈ ಅಕ್ಷರದ ಪಶ್ಚಿಮದ ಪಾದ ಮಲೆನಾಡಿನ ಪೂರ್ವತುದಿಯಲ್ಲಿ ಊರಿದಂತಿದೆ. ಅಲ್ಲಿ ಇದರ ಎತ್ತರ 915-975 ಮೀ ಬಿಳಿಗಿರಿರಂಗನ ಬೆಟ್ಟ, (1497 ಮೀ), ಗೋಪಾಲಸ್ವಾಮಿ ಬೆಟ್ಟ (1455 ಮೀ), ಶಿವಗಂಗಾ (1387 ಮೀ), ಸಾವನದುರ್ಗ (1226 ಮೀ), ಚಾಮುಂಡಿ ಬೆಟ್ಟ (1038 ಮೀ), ದೇವರಾಯನ ದುರ್ಗ (1187 ಮೀ), ನಂದಿದುರ್ಗ (1463 ಮೀ), ಇತ್ಯಾದಿ ದಕ್ಷಿಣ ಮೈದಾನದ ಪ್ರಮುಖ ಬೆಟ್ಟಗಳು. ಇದರ ಪೂರ್ವಪಾದವಿರುವುದು ಕೊಳ್ಳೆಗಾಲದ ದಕ್ಷಿಣಕ್ಕಿರುವ ಬಿಳಿಗಿರಿರಂಗನ ಬೆಟ್ಟದಿಂದ ರಾಮನಗರದ ಮೂಲಕ ಮಧುಗಿರಿ ಮತ್ತು ಪಾವಗಡ ವರೆಗೆ (1040-1100 ಮೀ) ಹಬ್ಬಿರುವ ಚಾರ್ನೊಕೈಟ್ ಅಥವಾ ಗ್ರಾನೈಟ್ ಶಿಲಾಶ್ರೇಣಿಯಲ್ಲಿ; ಅಲ್ಲಿಂದ ಇದು ವಾಯವ್ಯಾಭಿಮುಖವಾಗಿ ಹಾದು ಸಂಡೂರಿನ ಬಳಿಯ ಕಬ್ಬಿಣದ ಅದುರಿನ ಬೆಟ್ಟಗಳ ಮೇಲೆ ಸಾಗುತ್ತದೆ. ಊ ಅಕ್ಷರದ ಅಡ್ಡಪಟ್ಟಿ ಅಲ್ಲಲ್ಲಿ ಕತ್ತರಿಸಿದಂತಿದೆ. ಆದರೂ ಇದನ್ನು ಗುರುತಿಸುವುದು ಕಷ್ಟವಲ್ಲ. ರಾಮನಗರದಿಂದ ಹೊಳೆನರಸೀಪುರದವರೆಗೆ ಸಾಮಾನ್ಯ ವಾಗಿ 1000-1070 ಮೀ ಎತ್ತರವಾಗಿಯೂ ಇರುವ ಶ್ರೇಣಿಯುಂಟು. ಊ ಅಕ್ಷರದ ಕೆಳಅರ್ಧದ ಆವರಣದಲ್ಲಿರುವ ಭಾಗವೇ ಕಾವೇರಿ ಕಣಿವೆಯ ಮಧ್ಯ ಪ್ರದೇಶ. ಇದರ ಎತ್ತರ ಸಾಮಾನ್ಯವಾಗಿ 670-700 ಮೀ ತುಂಗಾಭದ್ರಾ ನದಿ ವ್ಯವಸ್ಥೆ ಇದರ ಉತ್ತರಾರ್ಧದಲ್ಲಿದೆ. ಆದರೂ ಊ ಅಕ್ಷರದ ನಡುಪಟ್ಟಿ ಕಾವೇರಿ-ತುಂಗಾಭದ್ರಾ ನದೀ ವ್ಯವಸ್ಥೆಗಳ ಜಲವಿಭಜನ ರೇಖೆಯೇನೂ ಅಲ್ಲ. ಕಾವೇರಿ ಕಣಿವೆಯ ದಕ್ಷಿಣಕ್ಕೆ ಬಿಳಿಗಿರಿರಂಗನ ಬೆಟ್ಟದ ಕವಲುಗಳು ಮುನ್ನಡೆದು ನೀಲಗಿರಿಯ ಉತ್ತರ ಪಾದದಲ್ಲಿ ಲೀನವಾಗುತ್ತವೆ. ರಾಮನಗರ-ಹೊಳೆನರಸೀಪುರ ನಡುಪಟ್ಟಿಯ ಉತ್ತರಕ್ಕಿರುವ ಪ್ರಸ್ಥಭೂಮಿಯ ಎತ್ತರ ಸಾಮಾನ್ಯವಾಗಿ 700-730 ಮೀ ಇಲ್ಲಿ ಬಿದ್ದ ಮಳೆ ನೀರು ಭಾಗಶಃ ಕಾವೇರಿ ಕಣಿವೆಗೂ ಉಳಿದದ್ದು ವೇದಾವತಿ-ತುಂಗಭದ್ರಾ ವ್ಯವಸ್ಥೆಗೂ ಜಾರಿಕೊಳ್ಳುತ್ತದೆ. ಈ ಪ್ರದೇಶದಲ್ಲಿ ಧಾರವಾಡ ಶಿಲಾ ಸರಣಿಯಿಂದ ಕೂಡಿದ, ಅಲ್ಲಲ್ಲಿ ಗ್ರಾನೈಟ್ ಭೂಯಿಷ್ಠವಾದ ಸಮಾಂತರ ಶ್ರೇಣಿಗಳುಂಟು. ಇವು ಅಲ್ಲಲ್ಲಿ ಮುರಿದಿವೆ. ಚಿಕ್ಕನಾಯಕನಹಳ್ಳಿಯ ಬಳಿಯಿಂದ ದಾವಣಗೆರೆಯನ್ನು ಹಾದು, ಉತ್ತರ ಮೈದಾನ ಪ್ರದೇಶದಲ್ಲಿ ಮುಂಡರಗಿರಿಯ ಬಳಿಯ ಡಂಬಳ ಬೆಟ್ಟಗಳವರೆಗೆ ಹರಿದಿರುವುದು ಒಂದು ಶ್ರೇಣಿ. ಇದರ ಪಶ್ಚಿಮಕ್ಕೆ 48-56 ಕಿಮೀ ದೂರದಲ್ಲಿ ಹಬ್ಬಿರುವ ಶ್ರೇಣಿ ಹೆಚ್ಚು ಸಂಕೀರ್ಣ. ಇದು ಕೃಷ್ಣರಾಜಪೇಟೆಯ ಬಳಿಯಿಂದ ವಾಯವ್ಯ ದಿಕ್ಕಿನಲ್ಲಿ ಹೊರಟು ಹೊನ್ನಾಳಿಯನ್ನು ದಾಟಿ ಹಬ್ಬಿದೆ. ಈ ಎರಡು ಶ್ರೇಣಿಗಳಲ್ಲೂ ಅನೇಕ ಖನಿಜಗಳುಂಟು. ಇವೆರಡರ ನಡುವಣ ನೆಲವನ್ನು ದಕ್ಷಿಣ ಮೈದಾನದ ಉಪಪ್ರದೇಶವೆನ್ನಬಹುದು. ಇಲ್ಲಿಯ ಬೇಸಾಯ ವಿಶಿಷ್ಟವಾದದ್ದು (ತೆಂಗು ಒಂದು ಮುಖ್ಯ ಬೆಳೆ). ದಕ್ಷಿಣ ಮೈದಾನದ ಪೂರ್ವಭಾಗ ಜಗಲಿಯಂತಿದ್ದು 915 ಮೀ ಎತ್ತರಕ್ಕೆ ಏರಿದೆ. ಬೆಂಗಳೂರಿನ ಸನಿಯದ ಈ ನೆಲದ ಉತ್ತರದ ಏಣು ಹೆಚ್ಚು ಎತ್ತರ. ಗುಡಿಬಂಡೆಯ ಬಳಿಯಿಂದ ಚಿಕ್ಕಬಳ್ಳಾಪುರದವರೆಗೆ ಹಬ್ಬಿರುವ ಬೆಟ್ಟಗಳಲ್ಲಿ ನಂದಿಬೆಟ್ಟವೂ ಒಂದು. ಈ ಶ್ರೇಣಿಯಿಂದ ಪಶ್ಚಿಮಾಭಿಮುಖವಾಗಿ ಸು. 24 ಕಿಮೀ ದೂರ ಸಾಗುವ ಬೆಟ್ಟಸಾಲು ಮೊದಲಿನವಕ್ಕಿಂತ ಕುಳ್ಳು. ಬಾಗೆಪಲ್ಲಿಯ ಪೂರ್ವದೆಡೆಯಿಂದ ಬಂಗಾರಪೇಟೆಯ ವರೆಗೆ ಇನ್ನೊಂದು ಶ್ರೇಣಿ ಹಬ್ಬಿದೆ. ಇಲ್ಲಿ ಕಲ್ಲುಬಂಡೆಗಳಿಂದ ಕೂಡಿದ ಬರಡು ಬೆಟ್ಟಗಳುಂಟು. ನಂದಿ ಬೆಟ್ಟದಿಂದ ಉತ್ತರದ ನೆಲ ಥಟ್ಟನೆ ಇಳಿಜಾರಾಗಿ ಸಾಗಿ ಪೆನ್ನಾರ್ ನದಿಯ ಬಳಿ ಎತ್ತರ 700-760 ಮೀ ಆಗಿದೆ. ದಕ್ಷಿಣ ಮೈದಾನದ್ದು ಪ್ರಧಾನವಾಗಿ ಕೆಂಪು ಮಣ್ಣಿನಿಂದ ಕೂಡಿದ ನೆಲ. ಕೆಲವು ಕಡೆಗಳಲ್ಲಿ, ಮುಖ್ಯವಾಗಿ 915 ಮೀ ಎತ್ತರದಲ್ಲಿ ನೆಲ ಕಬ್ಬಿಣಭರಿತವಾಗಿದೆ. ಭೂಸವೆತದಿಂದಾಗಿ ಬಂಡೆಗಳ ಮಣ್ಣಿನ ಹೊದಿಕೆ ಕಳೆದುಹೋಗಿ ನೆಲ ಬರಡಾಗಿದೆ. ಉಳಿದ ಕಡೆಯ ನೆಲ ಕೂಡ ಅರಣ್ಯವರ್ಜನದ ಪರಿಣಾಮವಾಗಿಯೂ ಶತಶತಮಾನಗಳ ಬೇಸಾಯದ ಫಲವಾಗಿಯೂ ತಮ್ಮ ಸಾರವಷ್ಟನ್ನೋ ಕಳೆದುಕೊಂಡಿವೆ. ಹೊಸದಾಗಿ ಬೇಸಾಯಕ್ಕೆ ತಂದ ನೆಲದ ಮಣ್ಣು ಕಪ್ಪಾಗಿರುತ್ತದೆ. ಆದರೆ ಕ್ರಮೇಣ ಅದೂ ಸಾರ ಕಳೆದುಕೊಂಡು ಅಕ್ಕಪಕ್ಕದ ನೆಲದ ಮಣ್ಣಿನಂತೆಯೇ ಪರಿಣಮಿಸಬಹುದು. ಹೊಸ ನೆಲದ ಕಪ್ಪಿಗೆ ಸುಟ್ಟ ಬೇರಿನ ಕರುಕೇ ಕಾರಣವೆಂದು ಕೆಲವರ ಅಭಿಪ್ರಾಯ. ಕಣಿವೆಗಳಲ್ಲಿಯ ನೆಲ ಆಳವಾದ ಸಾರಭೂತ ಮಣ್ಣಿನಿಂದ ಕೂಡಿದ್ದಾಗಿದೆ.

ಕರಾವಳಿ[ಸಂಪಾದಿಸಿ]

ಸಹ್ಯಾದ್ರಿ ಏಣಿನಿಂದ ಕಡಲ ತಡಿಯವರೆಗೆ ಇರುವುದು ಕರಾವಳಿ ಯೆನಿಸುತ್ತದೆ. ಸಹ್ಯಾದ್ರಿಯಿಂದ ಅಡ್ಡ ಹಾಯ್ದಿರುವ ಬೆಟ್ಟಗಳು ಮತ್ತು ಲ್ಯಾಟರೈಟ್ ಸಮಾವಿಷ್ಟ ಪ್ರಸ್ಥಭೂಮಿಗಳಿಂದಾಗಿ ಈ ಪ್ರದೇಶದಲ್ಲಿ ಭಿನ್ನತೆಗಳೇರ್ಪಟ್ಟಿವೆ. ಮರಳು ಗುಡ್ಡೆಗಳಿಂದ ಕೂಡಿದ ಕಡಲಂಚು. ತೆಂಗು, ಗೇರು, ಹಚ್ಚಹಸುರಿನ ಬತ್ತದಗದ್ದೆ; ಇವಕ್ಕೆ ಹಿನ್ನಲೆಯಾಗಿ ಪಶ್ಚಿಮಕ್ಕೆ ಅರಣ್ಯಾಚ್ಛಾದಿತ ಘಟ್ಟ ಸೋಪಾನ-ಇದು ಈ ಪ್ರದೇಶದ ಸಾಮಾನ್ಯ ದೃಶ್ಯ. ಈ ಪ್ರದೇಶದ ಉತ್ತರ ಭಾಗವನ್ನು (ಉತ್ತರ ಕನ್ನಡ) ಮಲೆನಾಡೆಂದು ಪರಿಗಣಿಸುವುದೂ ಉಂಟು. ಕಾರವಾರದ ಪೂರ್ವಕ್ಕೂ ದಕ್ಷಿಣಕ್ಕೂ ಇರುವ ಸು. 600 ಮೀ ಎತ್ತರದ ಪ್ರಸ್ಥಭೂಮಿ ಪ್ರದೇಶ ಸಮುದ್ರದ ಸನಿಯದವರೆಗೂ ಚಾಚಿಕೊಂಡಿದೆ. ಆದರೆ ಇದೂ ಅಖಂಡವಾಗಿಲ್ಲ. ಅಲ್ಲಲ್ಲಿ ಅಗಲ ಕಣಿವೆಗಳು ಇದನ್ನು ವಿಭಜಿಸುತ್ತವೆ. ಶಂಕುವಿನಂಥ ಬೆಟ್ಟಗಳು ಮಾತ್ರ 600 ಮೀ ಎತ್ತರವಿವೆಯೆನ್ನಬಹುದು. ಬೈಂದೂರಿನ ಉತ್ತರಕ್ಕೆ ಕಡಲಕರೆಯ ಮೈದಾನ ವಾಸ್ತವವಾಗಿ ಬಲು ಕಿರಿದು; ಅಲ್ಲಲ್ಲಿ ನದೀ ಅಳಿವೆಗಳ ಆಚೀಚೆ ಉದ್ದುದ್ದನೆಯ ಪಟ್ಟೆಗಳಂತೆ ಕಾಣುತ್ತದೆ. ಬೈಂದೂರಿನಿಂದ ಮಂಗಳೂರಿನವರೆಗೆ ಇದರ ಅಗಲ ಸ್ವಲ್ಪ ಹೆಚ್ಚು; 13-16 ಕಿಮೀ ಗಳಷ್ಟು ವಿಸ್ತರಿಸಿದೆ. ಅಲ್ಲಲ್ಲಿ ಸು. 60 ಮೀ ಎತ್ತರದ ಲ್ಯಾಟೆರೈಟಿಕ್ ಜಗಲಿಗಳನ್ನು ಕೊರೆದಿರುವ ಅಳಿವೆಗಳನ್ನೂ 16 ಕಿಮೀ ಹಬ್ಬಿರುವ ಮರಳಗುಡ್ಡಗಳನ್ನೂ ಕಾಣಬಹುದು. ಕೆಲವು ಅಳಿವೆಗಳು ಕಡಲುಪ್ಪು ನೀರಿನ ಸರೋವರಗಳಂತಿದ್ದು ಕೇರಳದ ಸನ್ನಿವೇಶವನ್ನು ಹೋಲುವುದೂ ಉಂಟು.

ಕಡಲ ಮಟ್ಟದ ಈ ನೆಲದ ಪೂರ್ವದ ಬದಿಗೆ ಕುಂದಾಪುರದಿಂದ ಮಂಗಳೂರಿನ ದಕ್ಷಿಣದಂಚಿನವರೆಗೆ 15-25 ಕಿಮೀ ಅಗಲವೂ, 60-90 ಮೀ ಎತ್ತರವೂ ಇರುವ ತಗ್ಗಿನ ಪ್ರಸ್ಥಭೂಮಿಯನ್ನು ಕಾಣಬಹುದು. ಕೆಲವೆಡೆಗಳಲ್ಲಿ ಇದರ ಕಡಿದಾದ ಬಂಡೆಗಳು ಕಡಲವರೆಗೆ ಚಾಚಿರುವುದೂ ನೇತ್ರಾವತಿಯಂಥ ಮುಖ್ಯ ನದಿಕಣಿವೆಗಳಿರುವೆಡೆಯಲ್ಲಿ ಈ ನೆಲ ಪಶ್ಚಿಮದ ಕಡೆಗೆ ಹೆಚ್ಚಾಗಿ ಹಬ್ಬಿರುವುದೂ ಉಂಟು. ಈ ಪ್ರಸ್ಥಭೂಮಿಯ ಪ್ರದೇಶ ಅಷ್ಟೇನು ಸವೆತಕ್ಕೊಳಗಾಗಿಲ್ಲ. ಆದರೆ ಉದ್ದಕ್ಕೂ ಇದನ್ನು ಸಮತಲದ, ಕಡಿದಾದ ದಂಡೆಯ ಅನೇಕ ಕಣಿವೆಗಳು ಅಡ್ಡಹಾಯ್ದಿವೆ. ಈ ಕಣಿವೆಗಳ ಅಗಲ ಸು. 2 ಕಿಮೀ ಕರಾವಳಿಯ ಹಾಗೂ ಮಲೆನಾಡಿನ ಲಕ್ಷಣಗಳೆರಡೂ ಇಲ್ಲಿ ಮಿಶ್ರವಾಗಿವೆ. ಒಟ್ಟಿನಲ್ಲಿ ಇದನ್ನು ಕರಾವಳಿಯ ತಗ್ಗುದಿಣ್ಣೆಯೆನ್ನುವುದು ಸಮಂಜಸವಾದೀತು.

ಕರಾವಳಿಯ ತಗ್ಗು ದಿಣ್ಣೆಯ ಪೂರ್ವದಲ್ಲಿ ಘಟ್ಟದೇಣಿನವರೆಗೆ ಇರುವ ಪ್ರದೇಶವನ್ನು ಕರಾವಳಿಯ ಮಲೆನಾಡು ಎನ್ನಬಹುದು. ಪುತ್ತೂರಿನ ಪೂರ್ವದಕ್ಷಿಣಗಳಲ್ಲಿ ಆರಂಭವಾಗಿ ಉತ್ತರದಲ್ಲಿ ಉಡುಪಿಯವರೆಗೂ ಹಬ್ಬಿರುವ ಪ್ರದೇಶದ ಎತ್ತರ ಸಾಮಾನ್ಯವಾಗಿ 300 ಮೀ ಗಿಂತ ಕಡಿಮೆ. ನಡುನಡುವೆ, ಎತ್ತರದ ಬೆಟ್ಟಪಂಕ್ತಿಗಳೂ ಉಂಟು. ಮತ್ತೆ ಕುಂದಾಪುರದ ಉತ್ತರದಲ್ಲಿ ಕರಾವಳಿಯ ಮಲೆನಾಡನ್ನು ಕಾಣಬಹುದು. ಇದು ಸ್ವರ್ಣಾ ನದಿಯ ಉತ್ತರಕ್ಕೆ ಹಬ್ಬಿ ಗೋವೆಯ ಎಲ್ಲೆಯವರೆಗೂ ಪಸರಿಸಿದೆ. ಘಟ್ಟಗಳ ಪೂರ್ವ ಭಾಗದಲ್ಲಿರುವ ನಿಜವಾದ ಮಲೆನಾಡಿಗೂ ಇದಕ್ಕೂ ಒಂದು ಮುಖ್ಯ ವ್ಯತ್ಯಾಸವುಂಟು. ಈ ಪ್ರದೇಶದಲ್ಲಿ 600 ಮೀ ಎತ್ತರವಿರುವ ಕೆಲವೇ ಬೆಟ್ಟತುಂಗಗಳಿವೆ. ಕಾಳಿನದಿ ಅಳಿವೆಯ ಉತ್ತರಕ್ಕೆ ಕಾಡು ಹಬ್ಬಿರುವ ವಿಸ್ತಾರವಾದ ತಗ್ಗುದಿಣ್ಣೆಯನ್ನು ಕಾಣಬಹುದು.

ವಾಯುಗುಣ[ಸಂಪಾದಿಸಿ]

ಕರ್ನಾಟಕ ಉಷ್ಣವಲಯದ ಮಾನ್ಸೂನ್ ವಾಯುಗುಣವನ್ನೊಳ ಗೊಂಡಿದೆ. ಶಾಖ ಮತ್ತು ತೇವಾಂಶವುಳ್ಳ ಬೇಸಗೆ ಮತ್ತು ತಂಪಾದ ಹಾಗೂ ಶುಷ್ಕ ಪರಿಸ್ಥಿತಿಯುಳ್ಳ ಚಳಿಗಾಲವು ಈ ವಾಯುಗುಣದ ಮುಖ್ಯ ಗುಣಲಕ್ಷಣಗಳು. ಆದರೆ ಕರ್ನಾಟಕದ ವಾಯುಗುಣ ವೈವಿಧ್ಯಪೂರ್ಣ. ಅದಕ್ಕೆ ಅಕ್ಷಾಂಶ, ಸಮುದ್ರ ಮಟ್ಟದಿಂದ ಎತ್ತರ, ಸಮುದ್ರ ಸಾಮೀಪ್ಯ, ಸ್ಥಳೀಯ ಮಾರುತಗಳು, ಸಸ್ಯವರ್ಗ, ಭೂಸ್ವರೂಪಗಳು ಮುಂತಾದವು ಕಾರಣವಾಗಿವೆ. ಕರಾವಳಿ ಪ್ರದೇಶ, ಮಲೆನಾಡು ಮತ್ತು ಸಹ್ಯಾದ್ರಿ ಘಟ್ಟಗಳ ಸರಣಿಗಳಲ್ಲಿ ಅಧಿಕ ಮಳೆಯಾಗುವುದರಿಂದ ಆರ್ದ್ರತೆಯುಳ್ಳ ವಾಯುಗುಣ ವಿರುತ್ತದೆ. ಒಳನಾಡು ಮತ್ತು ಉತ್ತರದ ಜಿಲ್ಲೆಗಳಲ್ಲಿ ಅರೆಶುಷ್ಕ ವಾಯುಗುಣವೂ, ಬಳ್ಳಾರಿ ಹಾಗೂ ಇತರ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಶುಷ್ಕವಾಯುಗುಣವೂ ಬಳ್ಳಾರಿ ಮತ್ತು ಬಿಜಾಪುರ ಪ್ರದೇಶದಲ್ಲಿ ಅತಿ ಸೆಕೆ ಮತ್ತು ಅತಿ ಶುಷ್ಕದ ವಾತಾವರಣವಿರುತ್ತದೆ. ತೀರಪ್ರದೇಶದಲ್ಲಿ ಸಮುದ್ರದ ಪ್ರಭಾವದಿಂದಾಗಿ ಬೇಸಗೆ ಮತ್ತು ಚಳಿಗಾಲದ ಉಷ್ಣಾಂಶ ಸಮತೋಲನಗೊಳ್ಳುತ್ತದೆ. ಸಮುದ್ರದ ಮಂದಮಾರುತಗಳು ಬೇಸಗೆಯ ತಾಪವನ್ನು ಉಪಶಮನ ಮಾಡುತ್ತವೆ. ಆದರೆ ಒಳನಾಡಿಗೆ ಹೋದೆಂತೆಲ್ಲಾ ಸಮುದ್ರದ ಪ್ರಭಾವವು ಕುಗ್ಗುತ್ತಾ ಹೋಗುವುದು. ಅರಬ್ಬಿ ಸಮುದ್ರಕ್ಕೆ ಹೊಂದಿಕೊಂಡಿರುವ ಕರಾವಳಿ, ಅದಕ್ಕೆ ಹೊಂದಿಕೊಂಡಿರುವ ಭಾಗಗಳಲ್ಲಿ, ಹೆಚ್ಚು ಮಳೆ ಬೀಳುವ ಹಾಗೂ ರಾಜ್ಯದ ಪೂರ್ವಭಾಗಗಳಲ್ಲಿರುವ, ಕಡಿಮೆ ಮಳೆ ಬೀಳುವ ಹಾಗೂ ಬರಪೀಡಿತ ಪ್ರದೇಶಗಳ ನಡುವೆ ಸಹ್ಯಾದ್ರಿ ಶ್ರೇಣಿ (ಪಶ್ಚಿಮ ಘಟ್ಟಗಳು) ಗಳು ವಿಭಾಜಕದಂತೆ ವರ್ತಿಸುವವು. ಇದು ಕರ್ನಾಟಕದ ವಾಯುಗುಣದ ಮೇಲೆ ಪ್ರಭಾವ ಬೀರುವ ಪ್ರಮುಖ ನೈಸರ್ಗಿಕ ಅಂಶಗಳಾಗಿವೆ. ಕರ್ನಾಟಕದ ಮೈದಾನಗಳು ಸಮುದ್ರ ಪ್ರಭಾವದಿಂದ ಹೊರತಾಗಿವೆ. ನೈಋತ್ಯ ಮಾನ್ಸೂನ್ ಮಾರುತಗಳು ಸಮುದ್ರದ ಕಡೆಯಿಂದ ಭೂಭಾಗದ ಕಡೆಗೆ ಬೀಸುವುದರಿಂದ ಮಳೆಯ ಹಂಚಿಕೆಯಲ್ಲಿ ವ್ಯತ್ಯಾಸವುಂಟಾಗುವುದು. ಪಶ್ಚಿಮದಿಂದ ಪೂರ್ವದ ಕಡೆಗೆ ಹೋದಂತೆ ಮಳೆಯ ಹಂಚಿಕೆ ಕಡಿಮೆಯಾಗುವುದು. ಈ ಎಲ್ಲಾ ಅಂಶಗಳನ್ನು ದೃಷ್ಟಿಯಲಿಟ್ಟುಕೊಂಡು ಕರ್ನಾಟಕದ ವಾಯುಗುಣವನ್ನು ಭಾರತದ ವಾಯುಗುಣದ ಕಾಲಗಳಂತೆಯೇ ನಾಲ್ಕು ಮುಖ್ಯ ಭಾಗಗಳನ್ನಾಗಿ ವಿಂಗಡಿಸಬಹದು. 1. ಚಳಿಗಾಲ (ಡಿಸೆಂಬರ್-ಫೆಬ್ರವರಿ) 2. ಬೇಸಗೆ ಕಾಲ (ಮಾರ್ಚಿ-ಮೇ) 3. ಮಳೆಗಾಲ (ಜೂನ್-ಸೆಪ್ಟೆಂಬರ್) 4. ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ (ಅಕ್ಟೋಬರ್-ನವೆಂಬರ್)

ಚಳಿಗಾಲ[ಸಂಪಾದಿಸಿ]

ಕಡಿಮೆ ಉಷ್ಣಾಂಶ ಮತ್ತು ಆರ್ದ್ರತೆ, ಅಲ್ಪಮಳೆ ಹಾಗೂ ನಿರ್ಮಲವಾದ ಆಕಾಶ, ಇವು ಚಳಿಗಾಲದ ವಿಶಿಷ್ಟವಾದ ಲಕ್ಷಣಗಳು. ಈ ಅವಧಿಯಲ್ಲಿ ಕರಾವಳಿ ಪ್ರದೇಶಗಳಲ್ಲಿ 27 ಡಿಗ್ರಿ ಸೆ. ಉಷ್ಣಾಂಶವಿದ್ದು, ಅದು ಮಲೆನಾಡು ಮತ್ತು ಮೈದಾನಗಳ ಕಡೆಗೆ ಹೋದಂತೆ ಕಡಿಮೆಯಾಗುವುದು. ಉತ್ತರ ಕರ್ನಾಟಕದ ಒಳನಾಡು ಭಾಗಗಳಲ್ಲಿನ ರಾತ್ರಿಯ ತಾಪಮಾನವು ಸರಾಸರಿಗಿಂತಲೂ ಕಡಿಮೆಯಿರುತ್ತದೆ. ಶೀತವಾದ ಗಾಳಿಯಿಂದ ಆಗಾಗ ಚಳಿಯಿರುತ್ತದೆ. ಈ ಕಾಲದಲ್ಲಿ ರಾಜ್ಯದ ಬಹುಭಾಗದಲ್ಲಿ 10 ಸೆಂಮೀ ಗಿಂತಲೂ ಕಡಿಮೆ ಮಳೆ ಬೀಳುವುದು. ಬದಲಿಗೆ ಈ ಅವಧಿಯಲ್ಲಿ ಶುಷ್ಕ ಹವೆಯುಳ್ಳ ಪರಿಸ್ಥಿತಿಯಿರುತ್ತದೆ. ಇದು ಕೃಷಿ ಬೆಳೆಗಳನ್ನು ಕಟಾವು ಮಾಡಲು ಅನುಕೂಲವಾದುದು. ಪ್ರಾತಃಕಾಲ ಕರಾವಳಿ ಹಾಗೂ ಎತ್ತರವಾದ ಭಾಗಗಳಲ್ಲಿ ಮಸುಕಿನ ಮಬ್ಬು ಮತ್ತು ಕಾವಳದ ಪರಿಸ್ಥಿತಿಯಿರುತ್ತದೆ.

ಬೇಸಗೆ ಕಾಲ[ಸಂಪಾದಿಸಿ]

ಮಾರ್ಚಿ ಅನಂತರ ರಾಜ್ಯದಾದ್ಯಂತ ಉಷ್ಣಾಂಶವು ಗಣನೀಯವಾಗಿ ಏರುತ್ತಾ ಹೋಗಿ ಏಪ್ರಿಲ್-ಮೇ ತಿಂಗಳುಗಳಲ್ಲಿ ಅದು ಗರಿಷ್ಠ ಮಟ್ಟವನ್ನು ತಲುಪುವುದು. ಉಷ್ಣಾಂಶವು ಕರಾವಳಿ ಪ್ರದೇಶದಲ್ಲಿ 31 ಡಿಗ್ರಿ ಸೆ. ವರೆಗೆ ಏರಿದರೆ, ರಾಜ್ಯದ ಈಶಾನ್ಯದ ಕೆಲ ಭಾಗಗಳಲ್ಲಿ 42 ಡಿಗ್ರಿ ಸೆ .ಗಳಿಗೆ ಏರುವುದು. ರಾತ್ರಿಯ ವೇಳೆ ಹಗಲಿಗಿಂತ ತಂಪಾಗಿರುತ್ತದೆ. ಈ ಅವಧಿಯ ಪ್ರಾರಂಭದಲ್ಲಿ ವಾಯುಮಂಡಲದ ತೇವಾಂಶವು ಕಡಿಮೆಯಿದ್ದರೂ ಮೇ ತಿಂಗಳ ಅನಂತರ ಅದು ಹೆಚ್ಚಾಗುತ್ತಾ ಹೋಗುವುದು. ಪರಿಣಾಮವಾಗಿ ಈ ವೇಳೆಯಲ್ಲಿ ಕೆಲಮೊಮ್ಮೆ ಗುಡುಗಿನಿಂದ ಕೂಡಿದ ಪರಿಸರಣ ಮಳೆಯು ಬೀಳುವುದು. ಆಗಾಗ ಮಳೆಯ ಜೊತೆ ಆಲಿಕಲ್ಲುಗಳು ಸುರಿಯುವುದು. ಇಂತಹ ಮಳೆಯು ಸಾಮಾನ್ಯವಾಗಿ ಅಪರಾಹ್ನದ ವೇಳೆಯಲ್ಲಿ ಸಂಭವಿಸುತ್ತದೆ. ಕರಾವಳಿ ಮತ್ತು ದಕ್ಷಿಣದ ಜಿಲ್ಲೆಗಳಲ್ಲಿ ಶಾಖ ಮತ್ತು ಸೆಕೆ, ಉತ್ತರ ಕರ್ನಾಟಕದಲ್ಲಿ ಶಾಖ ಮತ್ತು ಶುಷ್ಕವಾದ ಪರಿಸ್ಥಿತಿಯಿರುತ್ತದೆ.

ಮಳೆಗಾಲ[ಸಂಪಾದಿಸಿ]

ಇದನ್ನು ‘ನೈಋತ್ಯ ಮಾನ್ಸೂನ್ ಮಾರುತ’ಗಳ ಕಾಲವೆಂತಲೂ ಕರೆಯುವರು. ಈ ಅವಧಿಯಲ್ಲಿ ವಾಯುಮಂಡಲವು ಗರಿಷ್ಠ ಪ್ರಮಾಣದ ಆರ್ದ್ರತೆಯನ್ನು ಹೊಂದಿದ್ದು, ಕರಾವಳಿ, ಪ್ರಮಾಣದ ಆರ್ದ್ರತೆಯನ್ನು ಹೊಂದಿದ್ದು, ಕರಾವಳಿ, ಪಶ್ಚಿಮಘಟ್ಟಗಳು, ಮಲೆನಾಡುಗಳಲ್ಲಿ ಅತ್ಯಧಿಕ ಪ್ರಮಾಣದ ಮಳೆ ಬೀಳುವುದು. ಆದರೆ ಪೂರ್ವದ ಕಡೆಗೆ ಹೋದಂತೆ ಮಳೆಯ ಮಾರುತಗಳು ದುರ್ಬಲಗೊಂಡು ಉತ್ತರ ಮೈದಾನದ ಭಾಗಗಳಿಗೆ ಮಳೆಯ ಹಂಚಿಕೆ ವಿರಳವಾಗುವುದು. ಪರಿಣಾಮವಾಗಿ ಅವು ಮಳೆಯ ನೆರಳಿನ ಪ್ರದೇಶಗಳಾಗಿ ಪರಿಣಮಿಸುತ್ತವೆ. ಇದರಿಂದಾಗಿ ಆಗಾಗ್ಗೆ ಕ್ಷಾಮವು ತಲೆದೋರುವುದು. ಈ ಅವಧಿಯಲ್ಲಿ ರಾಜ್ಯದ ಮುಕ್ಕಾಲು ಭಾಗವು ಮಳೆಯನ್ನು ಪಡೆಯುವುದು. ಇದು ಮುಂಗಾರು ಬೆಳೆಗಳಿಗೆ ಪುರಕವಾಗಿದೆ. ಅಧಿಕ ಮಳೆಯಿಂದಾಗಿ ದೈನಿಕ ಉಷ್ಣಾಂಶವು ಕಡಿಮೆಯಾಗುವುದು. ವಾಯುವಿನ ತೇವಾಂಶವು ಹೆಚ್ಚಾಗುವುದು.

ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ[ಸಂಪಾದಿಸಿ]

ಇದನ್ನು ಈಶಾನ್ಯ ಮಾನ್ಸೂನ್ ಮಾರುತಗಳ ಕಾಲವೆಂತಲೂ ಕರೆಯುವರು. ಈ ಅವಧಿಯಲ್ಲಿ ಒತ್ತಡದ ಹಂಚಿಕೆಯಲ್ಲಿ ಬದಲಾವಣೆಯಾಗುತ್ತದೆ. ಭಾರತದ ಉತ್ತರ ಭಾಗದಲ್ಲಿ ಅಧಿಕ ಒತ್ತಡ ಕೋಶ ಉಂಟಾಗಿ ದಕ್ಷಿಣದಲ್ಲಿ ಒತ್ತಡ ಕಡಿಮೆಯಾಗುವುದು. ಇಂತಹ ತದ್ವಿರುದ್ಧವಾದ ಪರಿಸ್ಥಿತಿಯಲ್ಲಿ ನೈಋತ್ಯ ಮಾನ್ಸೂನ್ ಮಾರುತಗಳು ಹಿಂದಿರುಗುತ್ತವೆ. ಬಂಗಾಲ ಕೊಲ್ಲಿಯ ಮೇಲೆ ಬೀಸಿ ಬರುವಾಗ ಮಾರುತಗಳು ತೇವಾಂಶವನ್ನು ಒಯ್ಯುವುದರಿಂದ ದೇಶದ ಪೂರ್ವ ಕರಾವಳಿಗೆ ಸ್ವಲ್ಪ ಮಳೆಯಾಗುವುದು. ಇದೇ ಮಾರುತಗಳು ಪಶ್ಚಿಮಕ್ಕೆ ಮುಂದುವರಿದು ಕರ್ನಾಟಕವನ್ನು ತಲುಪುವ ವೇಳೆಗೆ ಅಲ್ಪಸ್ವಲ್ಪ ಮಳೆಯಾಗುವುದು. ಕೆಲವೊಮ್ಮೆ ಆವರ್ತ ಮಾರುತ ಪರಿಸ್ಥಿತಿಯು ಸಂಭವಿಸುತ್ತದೆ. ಒಟ್ಟಾರೆ ಈ ಅವಧಿಯಲ್ಲಿ ವಾಯುಗುಣದ ಪರಿಸ್ಥಿತಿ ಅನಿಶ್ಚಿತವಾಗಿರುತ್ತದೆ.

ಉಷ್ಣಾಂಶದ ಹಂಚಿಕೆ[ಸಂಪಾದಿಸಿ]

ಕರ್ನಾಟಕ ಉತ್ತರ ಗೋಳಾರ್ಧದಲ್ಲಿದ್ದರೂ ಸಮಭಾಜಕ ವೃತ್ತಕ್ಕೆ ಸಮೀಪದಲ್ಲಿದೆ. ವರ್ಷವಿಡೀ ಹೆಚ್ಚು ಕಡಿಮೆ ಸೂರ್ಯನ ಕಿರಣಗಳು ಲಂಬವಾಗಿ ಬೀಳುತ್ತವೆ. ಪರಿಣಾಮವಾಗಿ ರಾಜ್ಯದಾದ್ಯಂತ ಉಷ್ಣಾಂಶ ಹೆಚ್ಚಾಗಿರುತ್ತದೆ. ರಾಜ್ಯದ ದಕ್ಷಿಣ ಭಾಗವು ಸಮಭಾಜಕ ವೃತ್ತಕ್ಕೆ ಸಮೀಪವಾಗಿದ್ದು ಉಷ್ಣಾಂಶದ ತೀವ್ರತೆ ಉತ್ತರಕ್ಕಿಂತ ಹೆಚ್ಚಾಗಿರುತ್ತದೆ. ಈ ಭಾಗವು ಸಮುದ್ರಮಟ್ಟದಿಂದ ಹೆಚ್ಚು ಎತ್ತರವುಳ್ಳ ಭೂಸ್ವರೂಪವುಳ್ಳದ್ದಾಗಿದ್ದು, ತಾಪಮಾನದಲ್ಲಿ ಗಮನಾರ್ಹವಾದ ಬದಲಾವಣೆ ಕಾಣಬಹುದು. ಹೀಗಾಗಿ ಉತ್ತರ ಮೈದಾನದ ಜಿಲ್ಲೆಗಳಿಗಿಂತ ದಕ್ಷಿಣದಲ್ಲಿ ಉಷ್ಣಾಂಶದ ತೀಕ್ಷ್ಣತೆ ಕಡಿಮೆ. ಕರಾವಳಿ ಮತ್ತು ಮಲೆನಾಡಿನ ಉಷ್ಣಾಂಶದ ಹಂಚಿಕೆ. ಭಿನ್ನವಾದುದು ಸಾಮಾನ್ಯವಾಗಿ ಬಿಸಿಲಿನ ತಾಪ ಹೆಚ್ಚು. ಆದರೆ ಕೋಲಾರ ಜಿಲ್ಲೆಯ ನಂದಿಬೆಟ್ಟ, ಚಾಮರಾಜನಗರ ಜಿಲ್ಲೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಮತ್ತು ಬಿಳಿಗಿರಿರಂಗನ ಬೆಟ್ಟ ಚಿಕ್ಕಮಗಳೂರು ತಾಲ್ಲೂಕಿನ ಕೆಮ್ಮಣ್ಣು ಗುಂಡಿಗಳಲ್ಲಿ ತಂಪಾದ ಹವಾಮಾನವಿರುತ್ತದೆ.

ಸಮುದ್ರಮಟ್ಟಕ್ಕೆ ಸಮೀಪವಿರುವ ಕರಾವಳಿ ಪ್ರದೇಶದಲ್ಲಿ ಉಷ್ಣಾಂಶ ಹೆಚ್ಚಾಗಿರುವುದು ಸಹಜ. ಅದರಲ್ಲಿ ಹೆಚ್ಚು ಋತುಕಾಲಿಕ ವ್ಯತ್ಯಾಸವಿಲ್ಲ. ಸು. 240ಸೆ-300 ಸೆಲ್ಸಿಯಸ್ಗಳಾಗಿರುತ್ತದೆ. ಏಪ್ರಿಲ್-ಮೇ ಮಾಸಗಳಲ್ಲಿ ಉಷ್ಣಾಂಶ ರಾಜ್ಯದಾದ್ಯಂತ ಗರಿಷ್ಠ ಮಟ್ಟವನ್ನು ಮುಟ್ಟುತ್ತದೆ. ಸಮುದ್ರದ ಸನಿಯದ ಕರಾವಳಿ ಪ್ರದೇಶದಲ್ಲಿ ಕಡಲ್ಗಾಳಿ ಬೀಸುವುದರಿಂದ ತಾಪಮಾನವು ಶಮನವಾಗುವುದು. ಈ ಕಾಲದಲ್ಲಿ ಸ್ವಲ್ಪ ಮಳೆಬೀಳುವುದುಂಟು. ಮಳೆಗಾಲವು ಪ್ರಾರಂಭವಾದ ಮೇಲೆ ಉಷ್ಣಾಂಶ ಕಡಿಮೆಯಾಗುತ್ತದೆ. ನವೆಂಬರ್ ಮಾಹೆಯಲ್ಲಿ ತಟ್ಟನೆ ಬದಲಾಗುತ್ತದೆ. ನಿರ್ಗಮನ ಮಾನ್ಸೂನ್ ಪ್ರಭಾವದಿಂದ ದಕ್ಷಿಣ ಮೈದಾನದಲ್ಲಿ ಸ್ಪಲ್ಪ ಮಳೆಬೀಳುವುದುಂಟು. ಆಗ ಉಷ್ಣಾಂಶದಲ್ಲಿ ಬದಲಾವಣೆಯಿರುತ್ತದೆ. ಒಂದು ವೇಳೆ ಸೈಕ್ಲೋನ್ ಸಂಭವಿಸಿದರೆ ಇನ್ನೂ ಹೆಚ್ಚು ಬದಲಾವಣೆಯಾಗುವುದು. ಡಿಸೆಂಬರ್ ಮಾಹೆಯಲ್ಲಿ ಉತ್ತರ ಮೈದಾನದ ಉಷ್ಣತೆ ಕಡಿಮೆಯಾದರೂ ದಕ್ಷಿಣದಲ್ಲಿ ಕಡಿಮೆಯಾಗುವುದಿಲ್ಲ. ಮಳೆ ಕಡಿಮೆಯಾದಂತೆ ಹಾಗೂ ಈಶಾನ್ಯದಿಂದ ಬೀಸುವ ತಣ್ಣನೆ ಗಾಳಿಯನ್ನು ಸಹ್ಯಾದ್ರಿ ಸರಣಿಗಳು ತಡೆಯುತ್ತವೆ. ಹೀಗಾಗಿ ಜನವರಿಯಲ್ಲಿ ಉಷ್ಣಾಂಶ ಕನಿಷ್ಠಮಟ್ಟವನ್ನು ತಲುಪುತ್ತದೆ. ಮತ್ತೆ ಮಾರ್ಚಿಯಿಂದ ಉಷ್ಣಾಂಶ ಏರುತ್ತಾ ಹೋಗುವುದು. ಮಡಿಕೇರಿ ಸುತ್ತಮುತ್ತ ಕರಾವಳಿಪ್ರದೇಶಗಳಲ್ಲಿ ಚಳಿಗಾಲ ಮತ್ತು ಬೇಸಗೆಗಳ ನಡುವೆ ಹೆಚ್ಚು ಉಷ್ಣಾಂಶದ ವ್ಯತ್ಯಾಸವಿರುತ್ತದೆ. ಮಾರ್ಚಿ-ಏಪ್ರಿಲ್ ಮಾಹೆಗಳಲ್ಲಿ ಸೆಕೆ ಹೆಚ್ಚು (22o ರಿಂದ 24oಸೆ.) ಆ ಸಮಯದ ಹಗಲಿನ ಗರಿಷ್ಠ ಉಷ್ಣಾಂಶ 28o ರಿಂದ 30oಸೆ., ಚಳಿಗಾಲದಲ್ಲಿ ಬೇಸಗೆಗಿಂತ ಆರ್ದ್ರತೆಯ ಪ್ರಮಾಣ ಕಡಿಮೆ.

ಮಳೆಯ ಹಂಚಿಕೆ[ಸಂಪಾದಿಸಿ]

ಕರ್ನಾಟಕದ ಎಲ್ಲಾ ಭಾಗಗಳಲ್ಲೂ, ಮಳೆಯ ಹಂಚಿಕೆ ಸಮನಾಗಿಲ್ಲ. ಇದಕ್ಕೆ ಋತುಕಾಲಿಕ ಮಾನ್ಸೂನ್ ಮಾರುತಗಳು, ಮೇಲ್ಮೈಲಕ್ಷಣ, ಪರ್ಯಾಯ ಪ್ರಸ್ಥಭೂಮಿಯನ್ನಾವರಿಸಿರುವ ಸಮುದ್ರಗಳು ಪ್ರಮುಖ ಕಾರಣಗಳಾಗಿವೆ. ನೈಋತ್ಯ ಮತ್ತು ಈಶಾನ್ಯ ಮಾನ್ಸೂನ್ ಮಾರುತಗಳಿಂದ ರಾಜ್ಯದಾದ್ಯಂತ ಮಳೆ ಬೀಳುತ್ತದೆ. ಚಳಿಗಾಲ ಮತ್ತು ಬೇಸಗೆ ಅವಧಿಗಳಲ್ಲಿ ಸ್ವಲ್ಪವೇ ಮಳೆಯಾಗುವುದು. ವಾರ್ಷಿಕ ಮಳೆಯು ಪಶ್ಚಿಮ ಘಟ್ಟಗಳಲ್ಲಿ ಅತ್ಯಧಿಕವಾಗಿರುತ್ತದೆ. ಅಲ್ಲಿಂದ ಪೂರ್ವದ ಕಡೆಗೆ ಹೋದಂತೆಲ್ಲಾ ಕಡಿಮೆಯಾಗುವುದು. ಅದರಲ್ಲೂ ಮಲೆನಾಡಿನಲ್ಲಿ ಮಳೆಯು ಹೆಚ್ಚು. ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗಗಳಲ್ಲಿ ಅತ್ಯಧಿಕ ಮಳೆ ಬೀಳುವುದು. ಈ ಭಾಗಗಳಲ್ಲಿ ವರ್ಷಕ್ಕೆ ಸರಾಸರಿ 40 ಸೆಂಮೀ ಮಳೆ ಬೀಳುವುದು. ಇದೇ ಪ್ರದೇಶದಲ್ಲಿರುವ ಆಗುಂಬೆ ಪ್ರದೇಶಕ್ಕೆ ವರ್ಷದಲ್ಲಿ 500 ದಿಂದ 800 ಸೆಂಮೀ ಮಳೆಯಾಗುವುದು. ವಾಸ್ತವವಾಗಿ ಆಗುಂಬೆಯಲ್ಲಿ 828 ಸೆಂಮೀ ಮಳೆ ಬೀಳುವುದು. ಇದು ರಾಜ್ಯದಲ್ಲಿ ಅತ್ಯಂತ ಹೆಚ್ಚು ಮಳೆ ಬೀಳುವ ಸ್ಥಳ. ಇದನ್ನು ಕರ್ನಾಟಕದ ಚಿರಾಪುಂಜಿ ಎಂದು ಕರೆಯುವರು. ಕರ್ನಾಟಕದ ಮತ್ತೊಂದು ಅಧಿಕ ಮಳೆ ಬೀಳುವ ಪ್ರದೇಶವೆಂದರೆ ಕೊಡಗಿನ ಪೂರ್ವಭಾಗ. ಒಟ್ಟಾರೆ ಉತ್ತರ ಮತ್ತು ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ಬೆಳಗಾಂವಿಯ ನೈಋತ್ಯ ಭಾಗ, ಚಿಕ್ಕಮಗಳೂರಿನ ಪಶ್ಚಿಮ ಭಾಗ, ಹಾಸನದ ಸಕಲೇಶಪುರ ತಾಲ್ಲೂಕುಗಳು ಅತ್ಯಧಿಕ ಪ್ರಮಾಣದಲ್ಲಿ ಮಳೆ ಬೀಳುವ ಭಾಗಗಳಾಗಿವೆ.

ಪೂರ್ವದ ಕಡೆಗೆ ಹೋದಂತೆ ಮಳೆಯ ಪ್ರಮಾಣವು ಕಡಿಮೆಯಾಗುತ್ತಾ ಮೈದಾನದ ಕೆಲವೆಡೆ ಕನಿಷ್ಠ ಪ್ರಮಾಣದಲ್ಲಿ ಮಳೆ ಬೀಳುವುದು. ಬಿಜಾಪುರ, ರಾಯಚೂರು, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳು ಕಡಿಮೆ ಮಳೆಯಾಗುವ ಪ್ರದೇಶಗಳು. ಚಳ್ಳಕೆರೆಯು ಕರ್ನಾಟಕದಲ್ಲೇ ಅತ್ಯಂತ ಕಡಿಮೆ ಮಳೆ (46 ಸೆಂಮೀ) ಬೀಳುವ ಪ್ರದೇಶ. ಚಳ್ಳಕೆರೆಯ ವಾಯವ್ಯ ಭಾಗದಲ್ಲಿರುವ ನಾಯಕನ ಹಟ್ಟಿ ಮತ್ತು ಆಗ್ನೇಯ ದಿಕ್ಕಿನಲ್ಲಿರುವ ಧರ್ಮಪುರ ಎಂಬ ಸ್ಥಳಗಳು ಇನ್ನೂ ಕಡಿಮೆ ಪ್ರಮಾಣದ ಮಳೆಯಾಗುವ ಪ್ರದೇಶಗಳು.

ಭಾರತದ ನಾಲ್ಕು ಋತುಮಾನುಗಳನ್ನು ಗಣನೆಗೆ ತೆಗೆದುಕೊಂಡಾಗ ಕರ್ನಾಟಕಕ್ಕೆ ಹೆಚ್ಚು ಮಳೆಯಾಗುವ ಅವಧಿ ನೈಋತ್ಯ ಮಾನ್ಸೂನ್ ಕಾಲ. ನೈಋತ್ಯ ಮಾನ್ಸೂನ್ ಮಾರುತಗಳು ಕರಾವಳಿಯನ್ನು ತಲುಪುವುದಕ್ಕೂ ಮುಂಚೆ ಅರಬ್ಬಿ ಸಮುದ್ರದ ಮೇಲೆ ಹಾಯ್ದು ಬರುವಾಗ ಅವು ಸಾಕಷ್ಟು ತೇವಾಂಶವನ್ನು ಪಡೆದಿರುತ್ತವೆ. ಅವು ಪಶ್ಚಿಮ ಘಟ್ಟಗಳ ಮೇಲೇರಿದಂತೆಲ್ಲಾ ತಂಪಾಗಿ ಘನೀಕರಣದಿಂದ ದಟ್ಟವಾದ ಮೋಡಗಳು ರೂಪುಗೊಂಡು, ಹೆಚ್ಚು ಮಳೆ ಬೀಳುವುದಕ್ಕೆ ಕಾರಣವಾಗುತ್ತವೆ. ಆದರೆ ಮಳೆಯು ನಿರಂತರವಾಗಿ ಬೀಳುವುದಿಲ್ಲ. ಅದು ಅಕಾಲಿಕವಾಗಿರುತ್ತದೆ. ಹಾಗೆಯೇ ಮಳೆಯ ಹಂಚಿಕೆಯಲ್ಲಿಯೂ ಪ್ರಾದೇಶಿಕ ವ್ಯತ್ಯಾಸವಿರುತ್ತದೆ. ಕರಾವಳಿ ಮತ್ತು ಮಲೆನಾಡು ಭಾಗಗಳಿಗೆ ಹೆಚ್ಚು ಮಳೆಯಾದರೆ ರಾಜ್ಯದ ಪುರ್ವಾರ್ಧಕ್ಕೆ ಹೋದಂತೆ 40 ಸೆಂಮೀ ಗಿಂತಲೂ ಕಡಿಮೆ ಪ್ರಮಾಣದಲ್ಲಿ ಮಳೆ ಬೀಳುವುದು. ಆಗುಂಬೆ ಮತ್ತು ಭಾಗಮಂಡಲಗಳಲ್ಲಿ ಈ ಅವಧಿಯಲ್ಲಿ ಬೀಳುವ ಮಳೆ ಅನುಕ್ರಮವಾಗಿ 700 ಸೆಂಮೀ ಮತ್ತು 500 ಸೆಂಮೀ ಗಳಾದರೆ ಮೈಸೂರು ಜಿಲ್ಲೆಯ ಗುಂಡ್ಲುಪೇಟೆ ಹಾಗೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಗಳಲ್ಲಿ ಅನುಕ್ರಮವಾಗಿ 20 ಮತ್ತು 22 ಸೆಂಮೀ ಮಳೆಯನ್ನು ಪಡೆವ ಈ ಋತುವಿನ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶಗಳಾಗಿವೆ. ರಾಜ್ಯದ ವಾರ್ಷಿಕ ಮಳೆಯ ಹಂಚಿಕೆಯಲ್ಲಿ ಶೇ. 75ರಷ್ಟು ಮಳೆಯು ಈ ಅವಧಿಯಲ್ಲಿ ಬೀಳುತ್ತದೆ.

ಈಶಾನ್ಯ ಮಾನ್ಸೂನ್ ಮಾರುತಗಳ ಕಾಲದಲ್ಲಿ ಮಾರುತಗಳು ಭೂಭಾಗದಿಂದ ಬೀಸುವುದರಿಂದ ಅವು ಸಾಮಾನ್ಯವಾಗಿ ಒಣ ಗಾಳಿಗಳಾಗಿರುತ್ತವೆ. ಆದ್ದರಿಂದ ಅವು ಸಾಕಷ್ಟು ಮಳೆಯನ್ನು ಸುರಿಸಲಾರವು. ಆದರೆ ಬಂಗಾಳ ಕೊಲ್ಲಿಯ ಮೇಲೆ ಹಾಯ್ದು ಬರುವಾಗ ತೇವಾಂಶವನ್ನು ಪಡೆದುಕೊಳ್ಳುವುದರಿಂದ ಭಾರತದ ಪೂರ್ವ ಕರಾವಳಿಗೆ ಸ್ವಲ್ಪ ಮಳೆಯನ್ನು ಸುರಿಸುವವು. ಅವು ಕರ್ನಾಟಕವನ್ನು ತಲುಪುವ ವೇಳೆಗೆ ದುರ್ಬಲವಾಗುವುದರಿಂದ ಅಷ್ಟೊಂದು ಮಳೆಯನ್ನು ಸುರಿಸಲಾರವು. ಆದರೂ ರಾಜ್ಯದ ಬಯಲು ಪ್ರದೇಶಗಳಲ್ಲಿ ಸ್ವಲ್ಪ ಮಳೆಯಾಗುತ್ತದೆ. ಇದನ್ನು ಹಿಂಗಾರು ಮಳೆ ಎಂದು ಕರೆಯುವರು. ಮಳೆಯ ಪ್ರಮಾಣ ಮೈದಾನ ಭಾಗದಲ್ಲಿ ಉತ್ತರದಿಂದ ದಕ್ಷಿಣಕ್ಕೂ ಹಾಗೂ ಕರಾವಳಿಯ ಕಡೆಗೆ ಬಂದಂತೆ ಕಡಿಮೆಯಾಗುವುದು. ತುಮಕೂರಿನ ಪಶ್ಚಿಮ, ಹಾಸನ ಜಿಲ್ಲೆಯ ಪೂರ್ವಭಾಗ, ಮಂಡ್ಯ, ಮೈಸೂರು ಮತ್ತು ಕೋಲಾರ ಜಿಲ್ಲೆಗಳ ಪೂರ್ವ ಭಾಗಗಳಿಗೆ ವಾರ್ಷಿಕ ಮಳೆಯಲ್ಲಿ ಶೇ. 30ರಷ್ಟು ಈ ಅವಧಿಯಲ್ಲಿ ಬೀಳುತ್ತದೆ. ಬೀದರ್, ಗುಲ್ಬರ್ಗ ಮತ್ತು ಕರಾವಳಿಗಳಲ್ಲಿ ಕನಿಷ್ಠ ಪ್ರಮಾಣದಲ್ಲಿ ಮಳೆ ಬೀಳುವುದು. ಕರ್ನಾಟಕದ ಜಿಲ್ಲಾವಾರು ಮಳೆಯ ಹಂಚಿಕೆ, (ಸೆಂಮೀಗಳಲ್ಲಿ)


ಅ.ಕ್ರ.ಸಂಖ್ಯೆ ಜಿಲ್ಲೆ ವಾರ್ಷಿಕ ಸರಾಸರಿ ವಾಸ್ತವ ವಾರ್ಷಿಕ ಮಳೆ(2003)
1. ಉತ್ತರ ಕನ್ನಡ 421 396
2. ದಕ್ಷಿಣ ಕನ್ನಡ 393 353
3. ಉಡುಪಿ 284 243
4. ಶಿವಮೊಗ್ಗ 286 217
5. ಕೊಡಗು 280 215
6. ಚಿಕ್ಕಮಗಳೂರು 206 123
7. ಹಾಸನ 276 99
8. ಬೀದರ್ 89 72
9. ಬೆಳಗಾಂವಿ 83 67
10 . ಮೈಸೂರು 73 59
11. ಚಾಮರಾಜನಗರ 70 57
12. ಮಂಡ್ಯ 63 54
13. ಬೆಂಗಳೂರು (ಗ್ರಾ) 75 53
14. ಹಾವೇರಿ 75 53
15. ಬೆಂಗಳೂರು 73 52
16. ಕೋಲಾರ 84 49
17. ಗುಲ್ಬರ್ಗ 78 47
18. ದಾವಣಗೆರೆ 66 45
19. ಧಾರವಾಡ 77 43
20. ತುಮಕೂರು 54 42
21. ರಾಯಚೂರು 62 40
22. ಗದಗ 61 35
23. ಕೊಪ್ಪಳ 58 33
24. ಚಿತ್ರದುರ್ಗ 73 33
25. ಬಳ್ಳಾರಿ 61 32
26. ಬಿಜಾಪುರ 58 31
27. ಬಾಗಲಕೋಟೆ 68 24
28. ರಾಮನಗರ ಅಲಭ್ಯ ಅಲಭ್ಯ
29. ಚಿಕ್ಕಬಳ್ಳಾಪುರ ಅಲಭ್ಯ ಅಲಭ್ಯ
30. ಯಾದಗಿರಿ ಅಲಭ್ಯ ಅಲಭ್ಯ
ಒಟ್ಟಾರೆ 119 82ಚಳಿಗಾಲದಲ್ಲಿ ಅತ್ಯಲ್ಪ ಮಳೆಯಾಗುವುದು. ಬೇಸಗೆಯ ಕೊನೆಯ ಭಾಗದಲ್ಲಿ, ಅಂದರೆ ಮೇ ತಿಂಗಳಲ್ಲಿ ಪರಿಸರಣ ರೀತಿಯ ಮಳೆ ಬೀಳುವುದು. ಈ ಎರಡು ಋತುವಿನಲ್ಲಿ ಬೀಳುವ ಮಳೆಯ ಹಂಚಿಕೆಯು ರಾಜ್ಯಕ್ಕೆ ಅಷ್ಟೊಂದು ಮಹತ್ತ್ವದ್ದಾಗಿರುವುದಿಲ್ಲ. ಆದರೆ ಮೇ ತಿಂಗಳಲ್ಲಿ ಬೀಳುವ ಮಳೆಯು ಕಾಫಿ ಬೇಸಾಯಗಾರರಿಗೆ ಬಹಳ ಮಹತ್ತ್ವವುಳ್ಳದ್ದಾಗಿರುತ್ತದೆ. ಏಕೆಂದರೆ ಈ ಮಳೆಯು ಕಾಫಿ ಗಿಡಗಳು ಹೂವು ಬಿಡುವುದಕ್ಕೆ ಪುರಕವಾಗಿರುತ್ತದೆ. ಆದ್ದರಿಂದ ಬೇಸಗೆಯಲ್ಲಾಗುವ ಈ ಮಳೆಯನ್ನು ಕಾಫಿಯ ಹೂಮಳೆ ಎಂದು ಕರೆಯುವರು.

ಮಳೆಯ ಹಂಚಿಕೆಯನ್ನಾಧರಿಸಿ ಕರ್ನಾಟಕವನ್ನು ಮುಖ್ಯವಾಗಿ ಮೂರು ಪ್ರದೇಶಗಳನ್ನಾಗಿ ಈ ಕೆಳಕಂಡಂತೆ ವಿಂಗಡಿಸಬಹುದು:

1) ಅಧಿಕ ಮಳೆ ಬೀಳುವ ಪ್ರದೇಶ: ಈ ಪ್ರದೇಶ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಭಾಗ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಬೆಳಗಾಂವಿಯ ಪಶ್ಚಿಮ ಭಾಗ ಹಾಗೂ ಧಾರವಾಡ ಮತ್ತು ಮೈಸೂರು ಜಿಲ್ಲೆಗಳ ಕೆಲವೇ ಭಾಗಗಳನ್ನೊಳಗೊಂಡಿದೆ. ಈ ಪ್ರದೇಶದ ವಾರ್ಷಿಕ ಸರಾಸರಿ ಮಳೆ 250 ಸೆಂಮೀ ಕೆಲವು ಭಾಗಗಳಲ್ಲಿ 700 ಸೆಂಮೀ ಗಿಂತಲೂ ಹೆಚ್ಚು ಮಳೆಯಾಗುವುದು. ಆಗುಂಬೆಯು ಈ ಪ್ರದೇಶದಲ್ಲಿ ಬರುವುದು. ಈ ಪ್ರದೇಶವು ನೈಋತ್ಯ ಮಾನ್ಸೂನ್ ಮಾರುತಗಳ ಅಭಿಮುಖ ಭಾಗವಾಗಿದ್ದು ಅತ್ಯಧಿಕ ಪ್ರಮಾಣದಲ್ಲಿ ಆರೋಹಣ ಮಾದರಿ ಮಳೆಯನ್ನು ಪಡೆಯುವುದು. ಇಲ್ಲಿ ಬೀಳುವ ಮಳೆಯ ಹಂಚಿಕೆ ಮತ್ತು ಪ್ರಮಾಣಗಳೆರಡೂ ನಿಶ್ಚಿತವಾಗಿರುತ್ತವೆ.

2) ಸಾಧಾರಣ ಮಳೆ ಬೀಳುವ ಪ್ರದೇಶ: ಈ ಪ್ರದೇಶದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪೂರ್ವಭಾಗ, ಮೈಸೂರು ಜಿಲ್ಲೆ, ಧಾರವಾಡ, ಹಾವೇರಿ ಮತ್ತು ಬೆಳಗಾಂವಿ ಜಿಲ್ಲೆಗಳ ಹೃದಯ ಭಾಗ, ಹಾಸನ, ಮಂಡ್ಯ, ಬೆಂಗಳೂರು ಮತ್ತು ಬೀದರ್ ಜಿಲ್ಲೆಗಳು, ತುಮಕೂರು ಜಿಲ್ಲೆಯ ಉತ್ತರ ಭಾಗ ಮುಂತಾದವು ಸೇರುತ್ತವೆ. ಈ ಪ್ರದೇಶದ ವಾರ್ಷಿಕ ಸರಾಸರಿ ಮಳೆ 95 ಸೆಂಮೀ ಗಳಾಗಿರುತ್ತದೆ. ಆದರೆ ಪಶ್ಚಿಮದಿಂದ ಪೂರ್ವಕ್ಕೆ ಹೋದಂತೆಲ್ಲಾ ಮಳೆಯ ಪ್ರಮಾಣವು ಕಡಿಮೆಯಾಗುವುದು.

3) ಕಡಿಮೆ ಮಳೆ ಬೀಳುವ ಪ್ರದೇಶ: ಈ ಪ್ರದೇಶ ರಾಯಚೂರು ಬಳ್ಳಾರಿ, ಬಿಜಾಪುರ ಮತ್ತು ಚಿತ್ರದುರ್ಗ, ಗುಲ್ಬರ್ಗದ ದಕ್ಷಿಣ ಭಾಗ, ಬೆಳಗಾಂವಿ ಜಿಲ್ಲೆಯ ಪೂರ್ವಭಾಗ, ಕೋಲಾರ ಜಿಲ್ಲೆ, ತುಮಕೂರು ಜಿಲ್ಲೆಯ ಉತ್ತರ ಭಾಗ, ಮೈಸೂರು ಜಿಲ್ಲೆಯ ದಕ್ಷಿಣ ಭಾಗ ಮುಂತಾದವುಗಳನ್ನು ಒಳಗೊಂಡಿದೆ. ಇಲ್ಲಿ ಬೀಳುವ ವಾರ್ಷಿಕ ಸರಾಸರಿ ಮಳೆ 60 ಸೆಂಮೀ ಗಳು ಮಾತ್ರ. ಕೆಲವು ಭಾಗಗಳಾದ ಚಿತ್ರದುರ್ಗ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗಳಲ್ಲಿ ಸರಾಸರಿಗಿಂತಲೂ ಕನಿಷ್ಠ ಪ್ರಮಾಣದಲ್ಲಿ ಮಳೆಯಾಗುವುದು. ಜೊತೆಗೆ ಮಳೆ ಬೀಳುವುದು ಅನಿಶ್ಚಿತವಾಗಿರುತ್ತದೆ. ಪರಿಣಾಮವಾಗಿ ಈ ಪ್ರದೇಶಗಳು ಆಗಾಗ್ಗೆ ಬರಗಾಲಕ್ಕೆ ತುತ್ತಾಗುತ್ತವೆ. ಬರಪೀಡಿತ ಪ್ರದೇಶಗಳು: ಮಳೆಗಾಲದಲ್ಲಿ ಬೀಳುವ ಮಳೆ ಕಡಿಮೆಯಿದ್ದು, ಹಾಗೂ ಮಳೆಯ ಹಂಚಿಕೆಯಲ್ಲಿ ಹೆಚ್ಚು ಏರುಪೇರಿನಿಂದ ಕೂಡಿದ್ದರೆ ಅಂತಹ ಭಾಗಗಳನ್ನು ಬರಪೀಡಿತ ಪ್ರದೇಶಗಳೆಂದು ಕರೆಯುವರು. ಕರ್ನಾಟಕದಲ್ಲಿ ಅತೀವೃಷ್ಟಿಗಿಂತ ಅನಾವೃಷ್ಟಿ ಅಥವಾ ಬರವು ತಲೆದೋರುವುದು ಹೆಚ್ಚು. ಇದಕ್ಕೆ ಮಾನ್ಸೂನ್ ಮಾದರಿಯ ಮಳೆಯ ಹಂಚಿಕೆಯು ಪ್ರಮುಖವಾದ ಕಾರಣವಾಗಿರುತ್ತದೆ. ಇತ್ತೀಚೆಗೆ ರಾಜ್ಯದ ಮಳೆಯ ಹಂಚಿಕೆ ಯಲ್ಲಿ ತೀವ್ರವಾದ ಬದಲಾವಣೆ, ಅದರಲ್ಲಿಯೂ ಅನಾವೃಷ್ಟಿಯಿಂದ ಕೃಷಿ ವಲಯದಲ್ಲಿ ಗಂಭೀರವಾದ ಪರಿಸ್ಥಿತಿಯು ಸಂಭವಿಸುವುದು. ಜೊತೆಗೆ ಜಲವಿದ್ಯುಚ್ಛಕ್ತಿಯ ಕೊರತೆ ಉಲ್ಪಣಗೊಳ್ಳುವುದು. ಇಂತಹ ಪರಿಸ್ಥಿತಿಯು ಆಗಾಗ್ಗೆ ತಲೆದೋರುವುದಕ್ಕೆ ಅನೇಕ ಕಾರಣಗಳಿದ್ದರೂ, ಸಸ್ಯವರ್ಗವು ನಾಶವಾಗುತ್ತಿರುವುದು ಹಾಗೂ ವಾಯುಮಾಲಿನ್ಯಗಳು ಪ್ರಮುಖವಾದ ಕಾರಣಗಳಾಗಿವೆ.

ಎಪ್ಪತ್ತೈದು ವರ್ಷಗಳ ದೀರ್ಘಾವಧಿವರೆಗಿನ ರಾಜ್ಯದ 27 ಜಿಲ್ಲೆಗಳ ಮಳೆಯ ಹಂಚಿಕೆಯನ್ನು ಅಭ್ಯಸಿಸಿದಾಗ ಪ್ರತಿವರ್ಷವೂ ಒಂದಲ್ಲ ಒಂದು ಜಿಲ್ಲೆಯಲ್ಲಿ ಬರ ತಲೆದೋರಿರುವುದು ಕಂಡು ಬರುತ್ತದೆ. 1899, 1904, 1905, 1908, 1911, 1920, 1922, 1926, 1934, 1937, 1945, 1952, 1965, 1967, 1972 ಮತ್ತು 2003 ಪ್ರಮುಖ ಬರಪೀಡಿತ ವರ್ಷಗಳಾಗಿವೆ. ಸಾಮಾನ್ಯವಾಗಿ ದಕ್ಷಿಣದ ಜಿಲ್ಲೆಗಳಿಗಿಂತ ಉತ್ತರ ಜಿಲ್ಲೆಗಳಲ್ಲಿ ಬರ ಸಂಭವಿಸುವುದು ಸರ್ವೇ ಸಾಮಾನ್ಯವಾಗಿದೆ. ಉದಾ: ಬೀದರ್, ರಾಯಚೂರು, ಗುಲ್ಬರ್ಗ, ತುಮಕೂರು, ಚಿತ್ರದುರ್ಗ ಇತ್ಯಾದಿ. ಬೀದರ್ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಅತಿಹೆಚ್ಚು ಸಲ ಬರಗಳು ಸಂಭವಿಸಿವೆ. ಅಂದರೆ 75 ವರ್ಷಗಳಲ್ಲಿ 30 ಸಲ ಬರ ಸಂಭವಿಸಿದೆ. ಇಷ್ಟೇ ಅಲ್ಲದೆ ಕೆಲವು ಜಿಲ್ಲೆಗಳ ಭಾಗಗಳಲ್ಲಿಯೂ ಆಗಾಗ್ಗೆ ಬರ ಸಂಭವಿಸುತ್ತದೆ. ಉದಾ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮತ್ತು ಚಾಮರಾಜನಗರ, ಬೆಳಗಾಂವಿಯ ಅಥಣಿ, ಧಾರವಾಡದ ನರಗುಂದ, ಚಿಕ್ಕಮಗಳೂರಿನ ಕಡೂರು ಹಾಗೂ ಮಧುಗಿರಿ, ಬಂಗಾರಪೇಟೆ, ಗುಡಿಬಂಡೆ, ಬಾಗೆಪಲ್ಲಿ, ರಾಯಭಾಗ ಇತ್ಯಾದಿ.

ನದೀವ್ಯವಸ್ಥೆ[ಸಂಪಾದಿಸಿ]

ಕರ್ನಾಟಕದ ನದೀವ್ಯವಸ್ಥೆ ಅದರ ಮೇಲ್ಮೈಯ ಲಕ್ಷಣಕ್ಕೆ ಅನುಗುಣ ವಾಗಿದೆ. ರಾಜ್ಯದ ನೀರಿನ ಹರಿವು ಸ್ಥೂಲವಾಗಿ ಪಶ್ಚಿಮದಿಂದ ಪೂರ್ವದ ಕಡೆಗೆ ಹೆಚ್ಚು. ರಾಜ್ಯದ ಜಲವಿಭಾಜಕ ರೇಖೆಯಲ್ಲಿ ಬಲ್ಲಾಳರಾಯನದುರ್ಗದಿಂದ ನಂದಿದುರ್ಗಕ್ಕೆ ಒಂದು, ಅಲ್ಲಿಂದ ದಕ್ಷಿಣಾಭಿಮುಖವಾಗಿ ಆನೆಕಲ್ಲಿನವರೆಗೆ ಇನ್ನೊಂದು, ಹಾಗೂ ದೇವರಾಯನದುರ್ಗ ದಿಂದ ಪಾವಗಡಕ್ಕೆ ಮತ್ತೊಂದನ್ನೂ ಗುರ್ತಿಸಲಾಗಿದೆ. ಇದರಿಂದ ಕರ್ನಾಟಕದ ಮುಖ್ಯ ಜಲಾನಯನ ವ್ಯವಸ್ಥೆಗಳ ಎಲ್ಲೆಗಳನ್ನು ಗುರುತಿಸಿದಂತಾಗುತ್ತದೆ. ನಂದಿದುರ್ಗ ಮತ್ತು ಬಲ್ಲಾಳರಾಯನದುರ್ಗಗಳನ್ನು ಕೂಡಿಸುವ ಜಲವಿಭಾಜಕ ರೇಖೆಯ ಉತ್ತರಕ್ಕೆ ಹರಿಯುವ ಮುಖ್ಯ ನದಿಗಳು ತುಂಗಾ ಮತ್ತು ಭದ್ರಾ. ಇವು ಪಶ್ಚಿಮಘಟ್ಟಗಳ ಗಂಗಾಮೂಲದಲ್ಲಿ ಹುಟ್ಟಿ ಬೇರೆ ಬೇರೆ ದಿಕ್ಕುಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹರಿದು ಶಿವಮೊಗ್ಗದ ಕೂಡ್ಲಿಯಲ್ಲಿ ಸೇರುತ್ತವೆ. ಅಲ್ಲಿಂದ ಮುಂದೆ ತುಂಗಭದ್ರೆಯೆನಿಸಿಕೊಳ್ಳುವ ನದಿಗೆ ವೇದಾವತಿ ಮತ್ತು ವರದಾ ಎಂಬ ಎರಡು ಮುಖ್ಯ ಉಪನದಿಗಳು. ಕೃಷ್ಣನದಿಯ ಉಪನದಿಯಾದ ತುಂಗಭದ್ರಾ ಅಂತಿಮವಾಗಿ ಆಂಧ್ರಪ್ರದೇಶದ ಕರ್ನೂಲಿನ ಬಳಿ ಕೃಷ್ಣಾ ನದಿಯನ್ನು ಕೂಡಿಕೊಳ್ಳುತ್ತದೆ. ಮಹಾರಾಪ್ಟ್ರದ ಮಹಾಬಲೇಶ್ವರದಲ್ಲಿ ಹುಟ್ಟಿ ಕರ್ನಾಟಕದ ಉತ್ತರದಲ್ಲಿ ಹರಿದು ಆಂಧ್ರಪ್ರದೇಶಕ್ಕೆ ಹೋಗುವ ಮುಖ್ಯ ನದಿ ಕೃಷ್ಣಾ. ಭೀಮಾ ಇದರ ಮತ್ತೊಂದು ಮುಖ್ಯ ಉಪನದಿ. ಘಟಪ್ರಭಾ ಮಲಪ್ರಭಾ ಮತ್ತು ಡೋಣಿ ಇತರ ಉಪನದಿಗಳಲ್ಲಿ ಕೆಲವು. ಬಲ್ಲಾಳರಾಯನದುರ್ಗ ಮತ್ತು ನಂದಿದುರ್ಗಗಳ ನೇರಕ್ಕೆ ಹಬ್ಬಿರುವ ಬೆಟ್ಟಸಾಲುಗಳ ದಕ್ಷಿಣಕ್ಕಿರುವ ಮುಖ್ಯ ನದಿ ಕಾವೇರಿ. ದಕ್ಷಿಣ ಗಂಗಾವೆಂದೇ ಪ್ರಸಿದ್ಧಿ. ಕೊಡುಗು ಜಿಲ್ಲೆಯ ಬ್ರಹ್ಮಗಿರಿ ಶ್ರೇಣಿಯಲ್ಲಿ ಭಾಗಮಂಡಲದ ಬಳಿ (12 ಡಿಗ್ರಿ 25' ಉ.ಅ., 75 ಡಿಗ್ರಿ 34' ಪೂ.ರೇ.) ಇದು ಹುಟ್ಟುತ್ತದೆ. ಪಶ್ಚಿಮ ಘಟ್ಟಗಳ ತುತ್ತತುದಿಯಲ್ಲಿ ಅರಬ್ಬಿ ಸಮುದ್ರಕ್ಕೆ ಅನತಿದೂರದಲ್ಲಿ ಹುಟ್ಟುವ ಈ ನದಿ ಘಟ್ಟಗಳನ್ನು ದಾಟಿ ಪುರ್ವಾಭಿಮುಖವಾಗಿ ಹರಿಯುವುದು ಗಮನಾರ್ಹ. ಘಟ್ಟಗಳ ನೆತ್ತಿಗೆರೆಯ ಪಶ್ಚಿಮದ ಕಡೆಯ ಬೆಟ್ಟಸೀಮೆಯ ನೀರನ್ನೂ ಇದು ಸ್ವಲ್ಪಮಟ್ಟಿಗೆ ಕೂಡಿಸಿಕೊಳ್ಳುತ್ತದೆ. ಜೂನ್-ಸೆಪ್ಟೆಂಬರ್ ತಿಂಗಳುಗಳಲ್ಲಿ ಸುತ್ತ ಬೀಳುವ ಹೆಚ್ಚು ಮಳೆಯಿಂದ ಉಕ್ಕಿ ಹರಿಯುವ ಕಾವೇರಿ, ಘಟ್ಟಗಳ ಕೆಳಗಿನ ಬಯಲು ಸೀಮೆಗೆ ಸಮೃದ್ಧ ನೀರೊದಗಿಸುವ ಮುಖ್ಯ ಜಲಧಾರೆ. ಮೈಸೂರು, ಹಾಸನ, ಮಂಡ್ಯ ಜಿಲ್ಲೆಗಳ ಮೂಲಕ ಹರಿದು ಬೆಂಗಳೂರು ಜಿಲ್ಲೆಯ ದಕ್ಷಿಣದಂಚನ್ನು ಸೋಂಕಿ ಸಾಗಿ ತಮಿಳು ನಾಡಿಗೆ ಜಾರುವ ಈ ನದಿಯ ಉಪನದಿಗಳು ಅನೇಕ. ಹಾರಂಗಿ, ಯಗಚಿಯಿಂದೊಡಗೂಡಿದ ಹೇಮಾವತಿ, ಲಕ್ಷ್ಮಣತೀರ್ಥ, ಕಪಿಲ, ಸುವರ್ಣಾವತಿ, ಶಿಂಷಾ ಮತ್ತು ಅರ್ಕಾವತಿ-ಇವು ಕರ್ನಾಟಕದ ಇತರ ಕೆಲವು ಉಪನದಿಗಳು. ನುಗು ಮತ್ತು ಗುಂಡಲುಗಳು ಕಪಿಲಾವನ್ನೂ, ಕಣ್ವ ಶಿಂಷಾವನ್ನೂ ಸೇರುವ ಉಪನದಿಗಳು.

ಪಶ್ಚಿಮಘಟ್ಟಗಳಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುವ ಕರ್ನಾಟಕದ ನದಿಗಳೂ ಅಸಂಖ್ಯಾತ ತೊರೆಗಳೂ ಕಡಿದಾದ ಘಟ್ಟ ಪಾಶರ್ವ್‌ದಿಂದ ಥಟ್ಟನೆ ಇಳಿದು, ಜಲಪಾತಗಳನ್ನು ಸೃಷ್ಟಿಸಿ, ಕಿರಿದಾದ ನೆಲವನ್ನು ದಾಟಿ ಅರಬ್ಬಿ ಸಮುದ್ರದಲ್ಲಿ ಅದೃಶ್ಯವಾಗುತ್ತವೆ. ಪಶ್ಚಿಮ ಕರಾವಳಿ ಪ್ರದೇಶ ಹೆಚ್ಚು ಮಳೆ ಪಡೆಯುವುದರಿಂದ ಈ ನದಿಪಾತ್ರಗಳು ನೀರಾವರಿಗೆ ಅಷ್ಟೇನೂ ಉಪಯುಕ್ತವಲ್ಲ. ಆದರೆ ವಿದ್ಯುದುತ್ಪಾದನೆಗೆ ಇವು ಹೆಚ್ಚು ಉಪಯುಕ್ತ. ದೊಡ್ಡ ನದಿಗಳು ಸಮುದ್ರ ಸೇರುವೆಡೆಯಲ್ಲಿ ಅಳಿವೆಗಳನ್ನು ಸೃಷ್ಟಿಸಿ ದೋಣಿಸಂಚಾರಕ್ಕೆ ಅನುಕೂಲ ಕಲ್ಪಿಸಿವೆ. ಆದರೆ ದಕ್ಷಿಣೋತ್ತರವಾಗಿ ಸಂಚರಿಸಲು ಈ ನದಿಪಾತ್ರಗಳು ದೊಡ್ಡ ಅಡಚಣೆಗಳು. ಇವು ಘಟ್ಟಗಳಿಂದ ಸವೆಸಿ ತರುವ ಮೆಕ್ಕಲುಮಣ್ಣು ಫಲವತ್ತಾಗಿರುವುದರಿಂದ ಗದ್ದೆತೋಟಗಳಿಗೆ ಉಪಯುಕ್ತ. ಮಳೆಯಿಂದ ತೊಯ್ದ ಘಟ್ಟಗಳ ಜೀವಕೋಟಿಯ ಸಾರ ಗ್ರಹಿಸಿ ಸಮುದ್ರ ಸೇರುವ ಜಲರಾಶಿಯಲ್ಲಿ ಮೀನಿಗೆ ಸಮೃದ್ಧಿಯಾಗಿ ಆಹಾರ ಒದಗುತ್ತದೆ. ಇಡೀ ಭಾರತದಲ್ಲೇ ಕರ್ನಾಟಕದ ಕಡಲ ಮೀನು ಅತ್ಯಧಿಕ ಆಹಾರಾಂಶವುಳ್ಳದ್ಧು. ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿಯುವ ನದಿಗಳಲ್ಲಿ ಕಾಳಿ, ಗಂಗಾವಳಿ, ತದಡಿ, ಅಘನಾಶಿನಿ, ನೇತ್ರಾವತಿ, ವರಾಹಿ ಮತ್ತು ಶರಾವತಿ ಮುಖ್ಯ. ಶಿವಮೊಗ್ಗ ಜಿಲ್ಲೆಯ ಅಂಬುತೀರ್ಥದ ಬಳಿ ಉಗಮ ಹೊಂದುವ ಶರಾವತಿ ನದಿ ಘಟ್ಟದಿಂದ ಕೆಳಕ್ಕಿಳಿಯುವಾಗ ಗೇರುಸೊಪ್ಪೆಯಲ್ಲಿ ಭವ್ಯವಾದ ಜಲಪಾತ ಸೃಷ್ಟಿಸಿದೆ. ಕೊಡಗಿನಲ್ಲಿ ಹುಟ್ಟಿ ಕಾಸರಗೋಡಿನ ಸಮುದ್ರ ಸೇರುವ ಪಯಸ್ವಿನೀ ಸ್ವಲ್ಪ ದೂರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಿಯುತ್ತದೆ. ಕುದುರೆಮುಖದ ಬಲ್ಲಾಳರಾಯನ ದುರ್ಗದ ಬಳಿ ಉಗಮಿಸುವ ನೇತ್ರಾವತಿ ನದಿ, ಸುಬ್ರಹ್ಮಣ್ಯದ ಕಡೆಯಿಂದ ಜಾರಿ ಬರುವ ಕುಮಾರಧಾರೆಯನ್ನು ಉಪ್ಪಿನಂಗಡಿಯ ಬಳಿ ಕೂಡಿಸಿಕೊಂಡು ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಸೇರುತ್ತದೆ. ಉತ್ತರದಿಂದ ಆಗಮಿಸುವ ಗುರುಪುರ ಹೊಳೆಯೂ ನೇತ್ರಾವತಿಯೂ ಸಮುದ್ರ ಸೇರುವುದು ಒಂದೇ ಎಡೆಯಲ್ಲಿ. ಸ್ವರ್ಣಾ, ಸೀತಾ ನದಿಗಳು ಉಡುಪಿ ತಾಲ್ಲೂಕಿನಲ್ಲಿ ಸಂಚರಿಸಿ ಹಂಗರಕಟ್ಟೆಯಲ್ಲಿ ಸಮುದ್ರ ಸೇರುತ್ತವೆ. ಕುಂದಾಪುರ ತಾಲ್ಲೂಕಿನಲ್ಲಿ ಕವಲುಗೂಡುವ ಸಣ್ಣ ಹೊಳೆಗಳು ಆ ತಾಲ್ಲೂಕಿನ ಸೌಂದರ್ಯವರ್ಧಕಗಳು.

ನಂದಿದುರ್ಗದ ಪೂರ್ವಕ್ಕೆ ಹರಿಯುವ ನದಿಗಳದು ಇನ್ನೊಂದು ವ್ಯವಸ್ಥೆ. ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ ಮತ್ತು ಪಾಲಾರ್ ಮುಖ್ಯವಾದವು. ಉತ್ತರ ಪಿನಾಕಿನಿಗೆ ಚಿತ್ರಾವತಿ ಮತ್ತು ಪಾಪಘ್ನಿ ಎಂಬ ಉಪನದಿಗಳು ಸೇರುತ್ತವೆ.


ಸ್ವಾಭಾವಿಕ ಸಸ್ಯವರ್ಗ[ಸಂಪಾದಿಸಿ]

ಅತಿ ಶೈತ್ಯದಿಂದ ಬಹಳ ಒಣ ಹವೆಯವರೆಗೆ ವಿಧ ವಿಧದ ವಾಯುಗುಣಗಳೂ 1830 ಮೀ ಗಳಿಂದ ಸಮುದ್ರಮಟ್ಟದವರೆಗೆ ನಾನಾ ಎತ್ತರಗಳ ನೆಲಗಳೂ ಕರ್ನಾಟಕದಲ್ಲಿರುವುದರಿಂದ ಬಗೆಬಗೆಯ ಸಸ್ಯಗಳನ್ನು ಇಲ್ಲಿ ಕಾಣಬಹುದು. ವರ್ಷದಲ್ಲಿ 100 ಸೆಂಮೀ ಗಳಿಗಿಂತ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ನಿತ್ಯಹರಿದ್ವರ್ಣದ ಕಾಡುಗಳು ಹಬ್ಬಿವೆ. ಮಲೆನಾಡಿನ ಸ್ವಾಭಾವಿಕ ಸಸ್ಯದಲ್ಲಿ ಬಹುಭಾಗ ಈಗಲೂ ಉಳಿದುಕೊಂಡಿದೆ. ಇದು ಈಗಲೂ ಅರಣ್ಯಾವೃತ ಪ್ರದೇಶ. ಮಲೆನಾಡಿನ ತಾಲ್ಲೂಕುಗಳಲ್ಲಿ ಶೇ. 30ರಿಂದ 90 ಭಾಗಗಳು ಈಗಲೂ ಅರಣ್ಯಗಳು. ಇವುಗಳಲ್ಲಿ ಎಲ್ಲವೂ ಸ್ವಾಭಾವಿಕವೆಂದು ಹೇಳಲಾಗುವುದಿಲ್ಲ. ಮೀಸಲು ಅರಣ್ಯಗಳಲ್ಲಿಯ ಮರಗಳು ವಿಶೇಷ ಆರೈಕೆಯಿಂದ ಬೆಳೆದಿವೆ. ತೇಗ ಮುಂತಾದ ಮರಗಳನ್ನು ಕೆಲವೆಡೆಗಳಲ್ಲಿ ನೆಟ್ಟಿರುವುದರಿಂದ ಅಂಥವನ್ನು ಕಾಡುಗಳೆನ್ನುವುದಕ್ಕಿಂತ ನೆಡುತೋಟಗಳೆನ್ನಬಹುದು. ದಕ್ಷಿಣದಲ್ಲಿ ತ್ಯಜಿಸಲಾದ ಕಾಫಿ ತೋಟಗಳಲ್ಲಿ ಲಾಂಟಾನಾ ಬೆಳೆದಿದೆ. ಉರುವಲಿಗಿಂತ ಲಾಂಬಿಗಳಿಗಾಗಿ ಮರಗಳನ್ನು ಕಡಿಯುವುದೇ ಹೆಚ್ಚು. 150-300 ಸೆಂಮೀ ವಾರ್ಷಿಕ ಮಳೆಯಾಗುವ ಘಟ್ಟಗಳ ತಲೆಯೆಡೆಯ ಕೆಳಪಟ್ಟಿಯ ಸೋಪಾನಗಳಲ್ಲೂ ನೆರೆಯ ಕಣಿವೆಗಳಲ್ಲೂ ಇರುವ ದಟ್ಟವಾದ ನಿರಂತರ ಹಸುರೆಲೆಯ ಕಾಡುಗಳಲ್ಲಿ ಎತ್ತರದ ಗಟ್ಟಿ ಮರಗಳು ಬೆಳೆಯುತ್ತವೆ. ಮಲೆನಾಡಿನ ಉದ್ದನೆಯ ನಡುಪಟ್ಟಿಗಳಲ್ಲಿಯ ಮುಖ್ಯ ಮರಗಳೆಂದರೆ ತೇಗ, ಹೊನ್ನೆ, ಮತ್ತಿ, ನಂದಿ, ಬೀಟೆ ಮತ್ತು ಲಾರೆಲ್. ಪೂರ್ವದ ಅಂಚುಗಳಲ್ಲಿರುವ ಉಷ್ಣವಲಯದ ತೇವ ಪ್ರದೇಶದ ಎಲೆ ಉದುರುವ ಜಾತಿಯ ಮರಗಳ ಪೈಕಿ ಶ್ರೀಗಂಧ ಮುಖ್ಯ. ಎಲ್ಲೆಲ್ಲೂ ಬಿದಿರುಗಳು ಸಾಮಾನ್ಯ. ಅಡವಿಯ ಗಿಡಗಳನ್ನು ಸುಟ್ಟು ಸಾಗುವಳಿ ಮಾಡಿ, ಅದು ಸಾರ ಕಳೆದುಕೊಂಡಾಗ ಆ ಸ್ಥಳವನ್ನು ಬಿಟ್ಟು ಬೇರೆಡೆಯಲ್ಲಿ ಸಾಗುವಳಿ ಮಾಡುವ ಪೋಡು ಕೃಷಿವಿಧಾನ (ವರ್ಗಾವಣೆ ಬೇಸಾಯ) ಹಿಂದೆ ಸಾಮಾನ್ಯವಾಗಿತ್ತು. ಇದರಿಂದ ಬಂಜರಾದ ಸ್ಥಳಗಳಲ್ಲಿ ಬಿದಿರುಮೆಳೆಗಳು ದಟ್ಟವಾಗಿವೆ. ಅಂತೂ ಮಲೆನಾಡು ಪ್ರದೇಶದಲ್ಲಿ ಸುಮಾರು 4,000 ಬಗೆಯ ಗಿಡಮರಗಳುಂಟು. ಪಶ್ಚಿಮ ಕರಾವಳಿಯಲ್ಲಿ ಘಟ್ಟಗಳ ಅಂಚಿನಲ್ಲಿ 10 ರಿಂದ 100 ಕಿಮೀ ಅಗಲದ ಕಾಡುಗಳಿವೆ. ಘಟ್ಟ ಪ್ರದೇಶ ಮುಂಗಾರು ಮಳೆಗೆ ಸಂಬಂಧಿಸಿದಂತೆ ಇರುವ ಸನ್ನಿವೇಶಾನುಗುಣವಾಗಿ ಕಾಡಿನ ಲಕ್ಷಣ ವ್ಯತ್ಯಾಸವಾಗುತ್ತದೆ. ಉಷ್ಣತೆ, ಮಾರುತದ ವೇಗ, ನೆಲದ ಎತ್ತರ ಇವು ಪ್ರಭಾವ ಬೀರುವ ಅಂಶಗಳು. ಘಟ್ಟದ ಶಿಖರಗಳಲ್ಲೂ, ಕಡಿದಾದ ಇಳಿಜಾರಿನಲ್ಲೂ ಮಣ್ಣು ಹೆಚ್ಚು ಆಳವಿಲ್ಲ. ಆದ್ದರಿಂದ ಅಲ್ಲಿ ಅತಿ ಎತ್ತರದ ಮರಗಳು ಬೆಳೆಯಲು ಅನುಕೂಲಕರ. ಧೂಮ, ಕಲ್ಲುಹೊನ್ನೆ, ಬಲಗಿ, ಧೂಪ, ಸಟಗ, ಹಾಲಮಡ್ಡಿ, ಹಲಗೇರು ಮತ್ತು ಹಲಸು ಮುಂತಾದ ನಿತ್ಯ ಹಸುರು ಮರಗಳೂ ನಾರುಬೇರು, ಕಾಡಿಪಿಂಡಿ, ಕಂಟದ ಮರ ಮುಂತಾದ ಭಿನ್ನಜಾತಿಗಳೂ ಉಂಟು. ನಿತ್ಯ ಹಸುರು ಮರಗಳಿಗೆ ಮುಂದಿನ ಶ್ರೇಣಿಯಲ್ಲಿ 15 ರಿಂದ 20 ಮೀ ಎತ್ತರಕ್ಕೆ ಬೆಳೆಯುವ ಮರಗಳಿವೆ. ಕೂಟಗೇರು, ಬೈರಿ, ಬಿಳಿದೇವದಾರು, ಹೆಬ್ಬಲಸು, ಕಾಡು ಲವಂಗ, ಇಳಿಸಿಂಗಿ ಇವು ಮುಖ್ಯ. ಘಟ್ಟಗಳಿಂದ ಸ್ವಲ್ಪ ದೂರದಲ್ಲಿ ಮಳೆ ಕಡಿಮೆ ಬೀಳುವ ಎಡೆಗಳಲ್ಲಿ ಗಲವಾರ, ಸಪ್ತಪರ್ಣ, ಮಾಸ್ಸಿ, ದಿಂಡಿಗ, ಸಳ್ಲೆ, ಹೆಣ್ಣುಮತ್ತಿ. ಕಾಡುಕಣಗಿಲೆ, ಹೆಣ್ಣುಸಂಪಿಗೆ, ಮರ್ಕಿಮರ, ನಂದಿ, ವಿಷಮುಷ್ಟಿ ಮತ್ತು ಮತ್ತಿ ಬೆಳೆಯುತ್ತವೆ. ಇವು ತೇವಕಾಡಿನ ಎಲೆ ಉದುರುವ ಮರಗಳು, ಕೆಮದಾಳೆ, ಹಲಸು, ಪಾಚಿಗಿಡ, ದೊಡ್ಡಜಾಜಿ, ಕದಂಬ, ಪಾಟಗಾಣಿ, ಇವು ಘಟ್ಟಗಳಲ್ಲೆಯ ಮೂರನೆಯ ಸಾಲಿನ ಮರಗಳು. ಇವಲ್ಲದೆ ಎಲ್ಲೆಲ್ಲೂ ಪೊದೆಗಳೂ ಬಿದಿರುಗಳೂ ಬೆಳೆಯುತ್ತವೆ. ಘಟ್ಟದ ಪೂರ್ವಭಾಗದ ಅನೇಕ ಕಡೆಗಳಲ್ಲಿ ಪೊದರುಗಳು, ತೇಗ, ಜಾಲಿ, ಶ್ರೀಗಂಧ, ಬೂರುಗ, ಕಕ್ಕೆ, ಮುತ್ತಗ, ಜಗಳಗಂಟೆ, ಅಂಕೋಟೆ ಮತ್ತು ಬಿದಿರುಗಳುಂಟು, ಬಗನಿ, ಮಾವು, ಹುಣಿಸೆ ಮುಂತಾದವು ಕರ್ನಾಟಕದಲ್ಲಿ ಸಾಮಾನ್ಯ.

ಕರ್ನಾಟಕದ ಉತ್ತರ ಮೈದಾನದಲ್ಲಿ ಪೂರ್ವ ಪಶ್ಚಿಮದಂಚುಗಳಲ್ಲಿ ಉಷ್ಣವಲಯದ ಒಣಹವೆಯ ಎಲೆ ಉದುರುವ ಸಸ್ಯವನ್ನು ಕಾಣಬಹುದು. ನಡುಭಾಗದಲ್ಲಿ ಪೊದೆಮುಳ್ಳು ಬೆಳೆಯುತ್ತದೆ. ಒಟ್ಟು ಪ್ರದೇಶದ ಶೇ. 10ರಷ್ಟು ಭಾಗದಲ್ಲಿ ಮಾತ್ರ ಸ್ವಾಭಾವಿಕ ಸಸ್ಯವುಂಟು. ಕುರುಚಲು ಕಾಡುಗಳನ್ನು ಎತ್ತರದ ಗುಡ್ಡಗಳ ಪಾಶರ್ವ್‌ಗಳಲ್ಲಿ ಮಾತ್ರ ಕಾಣಬಹುದು.

ದಕ್ಷಿಣ ಮೈದಾನದ ಸ್ವಾಭಾವಿಕ ಸಸ್ಯವರ್ಗವು ಉಷ್ಣವಲಯದ ಶುಷ್ಕ ಹವೆಯ ಎಲೆ ಉದುರುವ ಜಾತಿಯದು. ಮಧ್ಯ ಮತ್ತು ಪೂರ್ವಭಾಗಗಳಲ್ಲಿ ಮುಳ್ಳುಪೊದೆಗಳಿವೆ. ಕಾಡುಗಳಿರುವುದೆಲ್ಲ ವಿಶೇಷವಾಗಿ ಬೆಟ್ಟಗಳ ಇಳಿಜಾರುಗಳಲ್ಲಿ. ಆದರೆ ಇವು ಹೆಸರಿಗೆ ಮಾತ್ರ ಕಾಡುಗಳು. ವಿಶಾಲ ಪ್ರಸ್ಥಭೂಮಿಯ ಬೆನ್ನ ಮೇಲೆ ಕುರುಚಲು ಹಬ್ಬಿದೆ. ಕನಕಪುರ-ತುಮಕೂರುಗಳ ನಡುವೆ ಅರ್ಧಭಾಗ ಇದರಿಂದ ತುಂಬಿದೆ. ಬಾಗೆಪಲ್ಲಿಯಿಂದ ಬಂಗಾರುಪೇಟೆಯವರೆಗಿನ ಬೆಟ್ಟದಗ್ರಗಳ ಪೂರ್ವದ ಕಡೆಯಲ್ಲೂ ಇದನ್ನು ಕಾಣಬಹುದು. ಸೌದೆ ಮರ ಸಾಮಾನ್ಯ. ಇದರ ಪುರೈಕೆಗಾಗಿ ಅನೇಕ ಕಡೆ ನಿರ್ದಯೆಯಿಂದ ಮರ ಪೊದೆಗಳನ್ನು ಕತ್ತರಿಸುವುದು ಕಂಡುಬಂದಿದೆ. ಸರ್ವೆ ಮತ್ತು ನೀಲಗಿರಿ ತೈಲ ಮರಗಳು ಇಲ್ಲಿಯ ಆಗಂತುಕ ಜಾತಿಗಳು. ಪ್ರಾಣಿಗಳು: ನೆಲ ಮಳೆ ಗಿಡಮರಗಳಂತೆ ಪ್ರಾಣಿವರ್ಗ ಕರ್ನಾಟಕದಲ್ಲಿ ವೈವಿಧ್ಯಮಯ. ಘಟ್ಟಸೀಮೆ, ಬಯಲುಸೀಮೆಗಳೆಂದು ಇವನ್ನು ಸ್ಥೂಲವಾಗಿ ವಿಂಗಡಿಸಬಹುದು. ಪಶ್ಚಿಮಘಟ್ಟದ ದಟ್ಟ ಕಾಡುಗಳಲ್ಲಿ ಕುಚ್ಚುಬಾಲದ ಕೋತಿ, ಮುಸುಕ ಮಂಗ, ಲಂಗೂರು, ಕಾಡುಪಾಪಗಳು. ಹುಲಿ, ಚಿರತೆ, ಮುಂಗುಸಿ, ಕಾಡುಬೆಕ್ಕು, ಕಿರುಬ, ತೋಳ, ನೀರುನಾಯಿ ಮತ್ತು ಕರಡಿಗಳು ಹೇರಳವಾಗಿ ಕಾಣಸಿಗುತ್ತವೆ. ಜಿಂಕೆ, ಕಾಡುಹಂದಿ, ಮುಳ್ಳಿಲಿ, ಬಾವಲಿ, ಅಳಿಲು, ಮೊಲ ಮತ್ತು ಮುಳ್ಳುಹಂದಿಗಳು ಲೆಕ್ಕವಿಲ್ಲದಷ್ಟಿವೆ. ಕಾಡುಗಳಲ್ಲಿರುವ ಅತ್ಯಂತ ದೊಡ್ಡ ಪ್ರಾಣಿಯೆಂದರೆ ಆನೆ. ಇದು ಹಾಸನ, ಮೈಸೂರು, ಚಾಮರಾಜನಗರ, ಕೊಡಗು, ಕಡೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಕಾಡುಗಳಲ್ಲಿವೆ. ಕಾಡುಕೋಣ ಇನ್ನೊಂದು ಪ್ರಾಣಿ. ಸಾಂಬಾರ್, ಸಾರಗ, ಕಾಡುಹಂದಿ, ಕೂರ್ಪಂದಿ, ನರಿ ಇವನ್ನೂ ಮಲೆನಾಡಿನ ಕಾಡುಗಳಲ್ಲಿ ಹೇರಳವಾಗಿ ಕಾಣಬಹುದು.

ಕ್ರಿಮಿ-ಕೀಟ ಮತ್ತು ಸಸ್ಯಾಹಾರಗಳು ಧಾರಾಳವಾಗಿ ದೊರಕುವ ಕಾಡುಗಳಲ್ಲಿ ಪಕ್ಷಿಗಳು ಅಸಂಖ್ಯಾತವಾಗಿವೆ. ಕಾಗೆ ಎಲ್ಲೆಲ್ಲೂ ಸಾಮಾನ್ಯ. ಮರದ ಪೈ ಸಾಮಾನ್ಯವಾಗಿ ಅರಣ್ಯದಲ್ಲಿವಾಸಿಸುತ್ತದೆ. ಟಟ್ಟಿಭ ಎಲ್ಲೆಡೆಯೂ ಉಂಟು. ಉಲಿಯಕ್ಕಿಗಳೂ ಅಷ್ಟೆ. ಇವುಗಳಲ್ಲಿ ನಾನಾ ವಿಧಗಳು ಉಂಟು. ಹರಟು ಹಕ್ಕಿ ಕರ್ನಾಟಕದ ಇನ್ನೊಂದು ಪಕ್ಷಿ. ಗಂಧರ್ವ ಪಕ್ಷಿ ಮತ್ತು ಬುಲ್ಬುಲ್ ಹಸುರುಕಾಡಿನ ಪ್ರಜೆಗಳು. ಬುಲ್ಬುಲಿನ ಕೆಲಜಾತಿಗಳು ಇತರೆಡೆಗಳಲ್ಲೂ ಇವೆ. ಕಣಿವೆಗಳಲ್ಲೂ ಬಿದಿರಮಳೆಗಳಲ್ಲೂ ಶ್ಯಾಮಲ ಹಕ್ಕಿಯನ್ನು ಕಾಣಬಹುದು. ತೆಂಕಣ ಕಪ್ಪಕ್ಕಿಗೂ ಕಣಿವೆಯೇ ತವರು. ಚಳಿಗಾಲದಲ್ಲಿ ಇದು ಬೆಚ್ಚನೆಯ ಬಯಲು ಸೀಮೆಗೆ ಬರುವುದುಂಟು. ಕಾಡುಕಡುಕ ಮತ್ತು ಕಳಿಂಗಪಕ್ಷಿಗಳ ವಿವಿಧ ಜಾತಿಗಳಲ್ಲಿ ಕೆಲವು ಕಾಡುಗಳಿಗೂ ಮತ್ತೆ ಕೆಲವು ಬಯಲು ಸೀಮೆಗೂ ವಿಶಿಷ್ಟವಾದವು. ಕೋಗಿಲೆ, ಉಲ್ಲಾಸದ ಸಿಳ್ಳುಹಕ್ಕಿ, ಮೈನಾ, ನೊಣಹಿಡುಕ, ಗೀಜಗ, ಗುಬ್ಬಚ್ಚಿ. ಬಾಗಕ್ಕಿ, ಗಿಳಿ, ಜೇನುಹುಕ್ಕ, ಮೀಂಚುಳ್ಳಿ, ಮಲೆಹಕ್ಕಿ, ಅಂಬಕ್ಕಿ. ಗಿಡುಗ, ಪಾರಿವಾಳ, ಕಪೋತ, ಕೊಕ್ಕರೆ, ಉಲ್ಲಂಗಿ, ನವಿಲು, ಕಾಡುಕೋಳಿ, ಬಾತು, ನಾಗಹಕ್ಕಿ-ಮುಂತಾದ ಒಂದೊಂದರಲ್ಲೂ ನಾನಾ ಬಗೆಯ ಹಕ್ಕಿಗಳು ಮಲೆನಾಡು ಬಯಲುಸೀಮೆ ಕರಾವಳಿ ಪ್ರದೇಶಗಳಲ್ಲಿ ಹರಡಿವೆ.

ಉರಗಗಳಲ್ಲೂ ನಾನಾ ವಿಧಗಳಿವೆ. ಮೊಸಳೆ, ಅಮೆ, ಹಲ್ಲಿ, ಹೆಬ್ಬಾವು, ತಾಳೆಹಾವು, ಹಸುರುಹಾವು, ಕಟ್ಟುಹಾವು, ನಾಗರಹಾವು, ಮಂಡಲದ ಹಾವು, ಹವಳದ ಹಾವು-ಇವು ಕೆಲವು.

ಕಪ್ಪೆಗಳಿಗೂ, ಮೀನುಗಳಿಗೂ ಕರ್ನಾಟಕದಲ್ಲಿ ಕೊರತೆಯಿಲ್ಲ. ಕಡಲ ತೀರದಲ್ಲಿ ಮೀನುಸಮೃದ್ಧವಾಗಿದೆ. ಸೊರಮೀನು, ಗರಗರಸ ಮೀನು, ಕಂಟಕ-ರಶ್ಮಿ , ಹಾವುಮೀನು, ಥೇಡೆ, ಹೆರ್ರಿಂಗ್, ಬಂಗಡ, ಸೀರ್, ಅಕ್ಕುಲೈ, ಪರ್ಚ, ಸೀಗಡಿ, ಲಾಡಿ, ಕೊಲಾಜಿ, ಮುಲ್ಲೆಟ್ ಮುಂತಾದ ಹಲವು ಬಗೆಗಳುಂಟು. ಒಳನಾಡಿನ ಅಸಂಖ್ಯಾತ ಕೆರೆ ಹಳ್ಳಗಳು ಮೀನುಗಳಿಗೆ ಅನುಕೂಲಕರ.

ಕುರಿ, ಆಡು, ದನಕರು, ಕುದುರೆ ಮುಂತಾದುವು ಸಾಕುಪ್ರಾಣಿಗಳು. ಉತ್ತರ ಬಯಲಿನಲ್ಲಿ ಎಮ್ಮೆಗಳ ಸಂಖ್ಯೆ ಗಮನಾರ್ಹ.

ಕೃಷಿ[ಸಂಪಾದಿಸಿ]

ವ್ಯವಸಾಯವೇ ಕರ್ನಾಟಕದ ಮುಖ್ಯ ಆರ್ಥಿಕ ಚಟುವಟಿಕೆ. ಸನ್ನಿವೇಶ, ವಾಯುಗುಣ, ಭೂಗುಣ, ನೀರಾವರಿ ಸೌಲಭ್ಯ-ಇವುಗಳಿಗೆ ಅನುಗುಣವಾಗಿ ವ್ಯವಸಾಯದ ಸ್ವರೂಪವೂ ಬೆಳೆಯೂ ಬದಲಾಗುತ್ತವೆ. ಕರಾವಳಿಯ ತಗ್ಗುಬಯಲು ಸಾಮಾನ್ಯವಾಗಿ ಫಲವತ್ತಾದ ಮಣ್ಣಿನಿಂದ ಕೂಡಿದ್ದು ಸಮೃದ್ಧವಾಗಿ ಮಳೆ ಪಡೆಯುವುದರಿಂದ ಬತ್ತ ಇಲ್ಲಿಯ ಮುಖ್ಯ ಬೆಳೆ. ಕವಿದು ಬಂದ ಮರಳ ಗುಡ್ಡೆಗಳನ್ನು ಅನೇಕ ಕಡೆಗಳಲ್ಲಿ ವಿಸ್ತರಿಸಲಾಗಿದೆ. ವರ್ಷದಲ್ಲಿ ಒಂದು ಬೆಳೆ ಬತ್ತ ತೆಗೆದ ಮೇಲೆ ಕಡಲೆ ಮುಂತಾದ ಕಾಳು ಬೆಳೆಯುವುದುಂಟು. ನೀರಿನ ವಸತಿ ಇರುವಲ್ಲಿ ಒಡ್ಡು ಕಟ್ಟಿಯೋ ಏತದಿಂದ ನೀರು ಹಾಯಿಸಿಯೋ ಬತ್ತದ ಎರಡು ಬೆಳೆಗಳನ್ನು-ಕೆಲವು ಕಡೆ ಮೂರು ಬೆಳೆಗಳನ್ನು ಕೂಡ ತೆಗೆಯುತ್ತಾರೆ. ತರಕಾರಿ ಮೆಣಸು ತೋಟಗಳೂ ಅಲ್ಲಲ್ಲಿ ಕಾಣಸಿಗುತ್ತವೆ. ಕಡಲ ದಂಡೆಗುಂಟ ತೆಂಗಿನ ಮರಗಳು ತಲೆ ಬೀಸುತ್ತ ಸಾವಿರಗಳ ಲೆಕ್ಕದಲ್ಲಿ ನಿಂತಿವೆ. ಮನೆ ಹಿತ್ತಲುಗಳಲ್ಲೂ ತೆಂಗನ್ನು ಬೆಳೆಸುತ್ತಾರೆ. ಎತ್ತರದ ಮತ್ತು ಮರಳ ನೆಲಗಳು ಅಷ್ಟೇನೂ ಫಲವತ್ತಲ್ಲ. ಅಲ್ಲಿ ಮರಳು ತೆಗೆದು ಬತ್ತವನ್ನೋ ತೆಂಗನ್ನೊ ಬೆಳೆಸುವುದುಂಟು. ಉತ್ತರ ಭಾಗದಲ್ಲಿ ಸಾಗುವಳಿ ನೆಲ ಕೆಳಗಿನ ಬಯಲಿನಲ್ಲಿದ್ದು ಹೊಲಮನೆಗಳು ದಿಬ್ಬದ ಮೇಲಿವೆ.

ಕಡಲಕರೆಯ ಮೈದಾನದ ಆರ್ಥಿಕ ಜೀವನ ಹಳ್ಳಿಯಿಂದ ಹಳ್ಳಿಗಳಿಗೆ ವ್ಯತ್ಯಾಸವಾಗುತ್ತದೆ. ವರ್ಷಕ್ಕೆ ಒಂದೇ ಬೆಳೆತೆಗೆಯುವ ಪ್ರದೇಶಗಳಿಗಿಂತ ಎರಡು-ಮೂರು ಬೆಳೆತೆಗೆಯುವವು ಹೆಚ್ಚು ಉತ್ತಮಸ್ಥಿತಿಯಲ್ಲಿವೆ. ಈ ಪ್ರದೇಶದಲ್ಲಿ ಜನಸಾಂದ್ರತೆಯ ಒತ್ತಡ ಬಹಳ ಹೆಚ್ಚು. ಸಣ್ಣಪುಟ್ಟ ನೀರಾವರಿ ವ್ಯವಸ್ಥೆಗಳ ಅಗತ್ಯವಿದೆ. ಸದಾಕಾಲದಲ್ಲೂ ನೀರಿರುವ ಸಣ್ಣಪುಟ್ಟ ಹೊಳೆಗಳನೇಕ ಇಲ್ಲಿ ಹರಿಯುವುದರಿಂದ ನೀರಾವರಿ ವಿಸ್ತರಿಸುವ ಸಾಧ್ಯತೆಯಿದೆ.

ಗೋಡಂಬಿ, ಹಣ್ಣು ಮತ್ತು ತರಕಾರಿ ಗಿಡಗಳೂ ಇಲ್ಲಿ ಬೆಳೆಯುತ್ತವೆ. ಇವನ್ನು ಹೆಚ್ಚಾಗಿ ಬೆಳೆಸುವುದಕ್ಕೂ ಕ್ರಮ ಕೈಕೊಳ್ಳಲಾಗಿದೆ. ಸೀ-ಐಲೆಂಡ್ ಹತ್ತಿ ಮತ್ತು ಕಬ್ಬು ಬೆಳೆಸುವ ಸಾಧ್ಯತೆಯೂ ಉಂಟು. ಇಷ್ಟೆಲ್ಲ ಆದರೂ ಇಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಬೇರೆ ಉದ್ಯೋಗಗಳನ್ನು ದೊರಕಿಸಿಕೊಡುವ ಅವಶ್ಯಕತೆಯಿದೆ. ಮೀನುಗಾರಿಕೆ, ದೋಣಿ ನಿರ್ಮಾಣ-ಇವುಗಳಲ್ಲದೆ ಮರಗೆಲಸ, ಕುಂಬಾರ ಕೆಲಸ ಮುಂತಾದ ಅನೇಕ ಹಳೆಯ ಕಸಬುಗಳು ಇಂದಿಗೂ ಅಲ್ಪಸ್ವಲ್ಪ ಜೀವಂತವಾಗಿವೆ.

ಕರಾವಳಿಯ ತಗ್ಗು ಪ್ರಸ್ಥಭೂಮಿಯಲ್ಲೂ ಅನೇಕ ಕಡೆಗಳಲ್ಲಿ ವರ್ಷಕ್ಕೆ ಎರಡು ಬೆಳೆ ತೆಗೆಯುವುದುಂಟು. ಏತ, ಪಂಪು, ಸಣ್ಣ ಅಣೆಕಟ್ಟೆ ಇವುಗಳಿಂದ ನೀರಾವರಿ ಸೌಲಭ್ಯ ಕಲ್ಪಿಸಿಕೊಳ್ಳಲಾಗಿದೆ. ಹೊಸ ಅಣೆಕಟ್ಟೆಗಳನ್ನು ಕಟ್ಟಿ ನೀರಾವರಿಯನ್ನು ವಿಸ್ತರಿಸಿ ಇನ್ನೂ ಹೆಚ್ಚು ಕಡೆಗಳಲ್ಲಿ ವರ್ಷಕ್ಕೆ ಎರಡು ಬೆಳೆ ತೆಗೆಯಬಹುದು. ಬತ್ತ ಮುಖ್ಯ ಬೆಳೆ. ಖುಷ್ಕಿ ಬೆಳೆಯಾಗಿ ಮೆಣಸಿನಕಾಯಿ ಬೆಳೆಯುವುದುಂಟು. ತೆಂಗಿನಕಾಯಿ, ಅಡಕೆ, ತಾಳೆ ಇವು ಆರ್ಥಿಕಬೆಳೆಗಳು. ಅಲ್ಲಲ್ಲಿ ಮೆಣಸಿನ ತೋಟಗಳೂ ಇವೆ. ದಕ್ಷಿಣದಲ್ಲಿ ನೀರಿನ ವಸತಿ ಕಡಿಮೆಯಿರುವೆಡೆಗಳಲ್ಲಿ ಗೇರುಬೀಜ ಒಂದು ಮುಖ್ಯ ಬೆಳೆ.

ಕರಾವಳಿಯ ಮಲೆನಾಡಿನ ಮುಖ್ಯ ಬೆಳೆ ಬತ್ತ. ವರ್ಷಕ್ಕೆ ಒಂದು ಬೆಳೆ ಸಾಮಾನ್ಯ. ಕಬ್ಬು ಬೆಳೆಯುವುದುಂಟು. ಇಲ್ಲಿಯ ಬೆಳೆ ಸಾಮಾನ್ಯವಾಗಿ ಮಳೆಯನ್ನೇ ಅವಲಂಬಿಸಿದೆ. ಕಣಿವೆಗಳ ತಳಗಳಲ್ಲೂ ಇಳಿಜಾರುಗಳಲ್ಲೂ ಮೆಟ್ಟಿಲುಮೆಟ್ಟಿಲಾಗಿ ಹಬ್ಬಿದ ಹಸುರು ಗದ್ದೆಗಳನ್ನೂ ಅವುಗಳ ಸುತ್ತ ಕೆಂಪು ಹಂಚಿನ ಮನೆಗಳನ್ನೂ ಕಾಣಬಹುದು. ಅಲ್ಲಲ್ಲಿ ಅಲ್ಪಸ್ವಲ್ಪ ನೀರಾವರಿ ವ್ಯವಸ್ಥೆಯುಂಟು. ಆಂಥೆಡೆಗಳಲ್ಲಿ ವರ್ಷಕ್ಕೆ ಎರಡು ಮೂರು ಬೆಳೆ ತೆಗೆಯುತ್ತಾರೆ. ದನಗಳ ಸಂಖ್ಯೆಯೂ ಹೆಚ್ಚಾಗಿದೆ. ತೆಂಗು, ಅಡಕೆ ವೀಳೆಯದೆಲೆ, ತಾಳೆ, ಮೆಣಸು, ಬಾಳೆ, ಮಾವು, ಹಲಸು ಇವು ತೋಟಗಳ ಬೆಳೆಗಳು. ನೆರೆಯ ಮಲೆನಾಡಿನಂತೆ ಇಲ್ಲೂ ಮಲೇರಿಯ ಮುಂತಾದ ವ್ಯಾಧಿಗಳಿಂದ ಜನಸಂಖ್ಯೆ ಇಳಿಮುಖವಾಗಿತ್ತು. ಈಚೆಗೆ ಈ ಪ್ರವೃತಿ ನಿಂತಿದೆ. ಅನೇಕ ಹಳ್ಳಿಗಳಲ್ಲಿ ಶೇ. 36-56 ಜನ ಗುತ್ತಿಗೆದಾರರು. ಭೂರಹಿತ ಶ್ರಮಜೀವಿಗಳು ಕೆಲಸವನ್ನರಸಿ ಅಪರೂಪವಾಗಿ ಹೊರಗೆ ಹೋಗಬಹುದು. ಅನೇಕರಿಗೆ ಸ್ಥಳೀಯ ತೋಟಗಳಲ್ಲೇ ಕೆಲಸ ದೊರಕುತ್ತದೆ. ಇಲ್ಲಿ ಜನಸಂಖ್ಯೆಯ ಒತ್ತಡ ಹೆಚ್ಚಾಗಿಲ್ಲ. ಇರುವ ಸಂಪನ್ಮೂಲಗಳನ್ನೆಲ್ಲ ಸಂಪೂರ್ಣವಾಗಿ ಇಲ್ಲಿ ಬಳಸಿಕೊಂಡಿಲ್ಲ.

ಮಲೆನಾಡಿನಲ್ಲಿ ವರ್ಷಕ್ಕೆ ಒಂದು ಬತ್ತದಬೆಳೆ ಸಾಮಾನ್ಯ. ಎರಡು ಬೆಳೆ ಉತ್ತರಾರ್ಧದಲ್ಲಿ ಹೆಚ್ಚು. ಅಲ್ಲಿ ಒಟ್ಟು ಸಾಗುವಳಿ ನೆಲದಲ್ಲಿ ಶೇ. 5-10 ಪ್ರದೇಶದಲ್ಲಿ ಎರಡು ಬೆಳೆ ತೆಗೆಯುವುದುಂಟು. ಮಳೆ ಸಮೃದ್ಧಿಯಾಗಿರುವ ಕಡೆಗಳಲ್ಲಿ ಹಳ್ಳಿಗಳು ತಮಗೆ ಸಾಕಾಗುವಷ್ಟು ಬತ್ತ ಬೆಳೆಯುತ್ತವೆ. ಕಡಿಮೆ ಮಳೆಯ ಪೂರ್ವದಂಚುಗಳಲ್ಲಿ ಒಮ್ಮೊಮ್ಮೆ ಅಕ್ಕಿಯ ಕೊರೆತೆ ಬರುವುದುಂಟು. ಅಡಕೆ, ವೀಳೆಯದೆಲೆ, ಮೆಣಸು, ಲವಂಗ, ಕಿತ್ತಳೆ, ಕಾಫಿ ಮುಖ್ಯ ಹಣಗಳಿಕೆ ಬೆಳೆಗಳು. ಕಾಫಿ (ಕೆಲವು ಕಡೆ ಚಹ), ಮೆಣಸು ಮುಂತಾದವು ನೆಡು ತೋಟದ (ಪ್ಲಾಂಟೇಷನ್) ಬೆಳೆಗಳು. ಕಾಫಿ ತೋಟಗಳು ದಕ್ಷಿಣದಲ್ಲಿವೆ. ಇವು ಬೃಹದ್ಗಾತ್ರದ ಬಂಡವಾಳ ಉದ್ಯಮಗಳು. ಕಾಫಿ ಬೆಳೆಯುವ ಪ್ರದೇಶ ಉಳಿದೆಡೆಗಳಿಗಿಂತ ಹೆಚ್ಚು ಅಭಿವೃದ್ಧಿಹೊಂದಿದೆ. ಇಲ್ಲಿ ಹಣದ ಪ್ರಸಾರ ಹೆಚ್ಚು. ರಸ್ತೆಗಳು ಬೆಳೆದಿವೆ. ಭೂಸಾರ ಕೊಚ್ಚಿ ಹೋಗಿ ತ್ಯಜಿಸಲಾದ ಕಾಫಿ ತೋಟಗಳೆಡೆಯಲ್ಲಿ ಲಂಟಾನಾ ವಿಶೇಷವಾಗಿ ಬೆಳೆದಿದೆ. ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಅವಶ್ಯವಾದ ಕಾರ್ಮಿಕರು ದಕ್ಷಿಣ ಕನ್ನಡ ಮತ್ತು ಕೇರಳಗಳಿಂದ ಅಧಿಕ ಸಂಖ್ಯೆಯಲ್ಲಿ ಬರುವರು. ಸ್ಥಳೀಯ ಜನರೂ ತೋಟಗಳಿಂದ ಆಕರ್ಷಿತವಾಗುವುದರಿಂದ ಸಾಮಾನ್ಯ ಬೇಸಾಯಕ್ಕೆ ಸಾಕಷ್ಟು ದುಡಿಮೆಗಾರರ ಅಭಾವ ಏರ್ಪಡುತ್ತದೆ. ದಕ್ಷಿಣ ಮಲೆನಾಡಿನಲ್ಲಿ ಬತ್ತದ ಎರಡು ಬೆಳೆ ತೆಗೆಯದಿರುವುದಕ್ಕೆ ಇದೂ ಒಂದು ಕಾರಣ. ದಕ್ಷಿಣದ ಎತ್ತರದ ಮಲೆನಾಡಿನಲ್ಲಿ ಸಾಗುವಳಿಯಾಗುವ ನೆಲದ ಕಾಲುಭಾಗದಿಂದ ಅರ್ಧಭಾಗದವರೆಗಿನ ಜಮೀನು ಕಾಫಿ ಮತ್ತು ಚಹಗಳಿಗೆ ಮೀಸಲು. ಉತ್ತರದಲ್ಲಿ ಎತ್ತರ ಪ್ರದೇಶಗಳಲ್ಲೂ ಕಾಫಿ ತೋಟಗಳು ಅಷ್ಟೇನೂ ಇಲ್ಲ. ದಕ್ಷಿಣಕ್ಕಿಂತ ಅಲ್ಲಿ ಮಳೆಗಾಲ ಒಂದು ತಿಂಗಳಷ್ಟು ಕಡಿಮೆ. ಕಾಫಿ ಹೂ ಬಿಡಲು ಅವಶ್ಯವಾದ ಬೇಸಗೆ ಮಳೆ ಬರುವ ನಚ್ಚುಗೆಯಿಲ್ಲ. ಬತ್ತ ಎಲ್ಲೆಲ್ಲೂ ಬೆಳೆಯುತ್ತದೆ. ಯಲ್ಲಾಪುರದಿಂದ ಮಡಿಕೇರಿಯವರೆಗಿನ ತಾಲ್ಲೂಕುಗಳಲ್ಲಿ ಮೆಣಸು ಬೆಳೆಯುವ ಪ್ರದೇಶ ಒಟ್ಟು ಸಾಗುವಳಿ ಜಮೀನಿನ ಶೇ. 10 ರಿಂದ 25ರ ವರೆಗಿರುತ್ತದೆ. ಪೂರ್ವದ ತಾಲ್ಲೂಕುಗಳಾದ ನರಸಿಂಹರಾಜಪುರ, ಶಿವಮೊಗ್ಗ ಮತ್ತು ಪಿರಿಯಾಪಟ್ಟಣಗಳಲ್ಲಿ ಶೇ. 5ಕ್ಕಿಂತ ಕಡಿಮೆ ನೆಲದಲ್ಲಿ ಮೆಣಸು ಬೆಳೆಯುತ್ತದೆ. ಮೆಣಸು ಬೆಳೆಯ ಜೊತೆಗೆ ಹಣ್ಣು ತರಕಾರಿ ಬೆಳೆಯುವುದೂ ಸಾಮಾನ್ಯ, ಪೂರ್ವದ ಕಡೆಗೆ ಸಾಗಿದಂತೆ ಮೆಣಸಿನ ಭೂಮಿ ಕಡಿಮೆಯಾಗಿ ಹಣ್ಣು ತರಕಾರಿ ಬೆಳೆ ಹೆಚ್ಚುತ್ತದೆ. ಕಡಿಮೆ ಮಳೆಯ ಪೂರ್ವ ಪ್ರದೇಶದಲ್ಲಿ ಎಣ್ಣೆಕಾಳುಗಳ ಬೆಳೆಯೂ ಮುಖ್ಯ. ನೆರೆಯ ಮೈದಾನದ ಬೆಳೆಯೇ ಇಲ್ಲೂ ಬೆಳೆಯುವುದು ಅಭ್ಯಾಸವಾಗಿದೆ.

ಅರೆಮಲೆನಾಡಿನ ನೆಲದಲ್ಲಿ ಸು. ಶೇ.50 ರಷ್ಟು ಭೂಮಿ ಬೇಸಾಯಕ್ಕೊಳಪಟ್ಟಿದೆಯೆಂದು ಸ್ಥೂಲವಾಗಿ ಹೇಳಬಹುದು. ಶಿಕಾರಿಪುರ ಹಾಸನಗಳಲ್ಲಿ ಬತ್ತ ಅತ್ಯಂತ ಮುಖ್ಯ ಬೆಳೆ. ರಾಗಿ, ಜೋಳ ಮುಂತಾದವೂ ಬೆಳೆಯುತ್ತವೆ. ಹಾಸನದ ದಕ್ಷಿಣದ ಪ್ರದೇಶದಲ್ಲಿ ಕಾಫಿಯನ್ನೂ ಸ್ವಲ್ಪ ಬೆಳೆಯುತ್ತಾರೆ. ಹಿರೇಕೆರೂರಿನ ಉತ್ತರಕ್ಕೆ ಹತ್ತಿಯ ಕಪ್ಪು ನೆಲದ ಬದಿಯ ನೆಲದಲ್ಲಿ ಜೋಳ, ಹತ್ತಿ, ತೊಗರಿ, ಎಣ್ಣೆಕಾಳು ಬೆಳೆಯುತ್ತವೆ. ಹಾಸನ ಮತ್ತು ದಕ್ಷಿಣದಲ್ಲಿ ಆಲೂಗೆಡ್ಡೆ, ಈರುಳ್ಳಿ, ಮಾವು, ಬಾಳೆ, ಕಿತ್ತಳೆ, ತೊಗರಿ, ಎಣ್ಣೆಕಾಳುಗಳು, ತೆಂಗು, ಕಡಲೆಕಾಯಿ ಬೆಳೆಯುವರು.

ಉತ್ತರ ಮೈದಾನದ ಹಳ್ಳಿಗಳು ಅಡಕವಾಗಿವೆ. ಜಮೀನು ಹಿಡುವಳಿಯ ಗಾತ್ರ ಹೆಚ್ಚು . ಭೂರಹಿತ ದುಡಿಮೆಗಾರರ ಪ್ರಮಾಣವೂ ಹೆಚ್ಚು. ಖುಷ್ಕಿ ನೆಲವೇ ಅಧಿಕವಾಗಿದೆ. ಇಲ್ಲಿ ಪರಮಾವಧಿ ಮಳೆ ಬೀಳುವುದು ತಡವಾಗಿಯಾದ್ದರಿಂದಲೂ ನೆಲಕ್ಕೆ ಹೆಚ್ಚು ಜಲಧಾರಣಶಕ್ತಿಯಿರುವುದರಿಂದಲೂ ಚಳಿಗಾಲದ ಬೆಳೆಗಳು(ರಾಬಿ)ಹೆಚ್ಚು. ಪಶ್ಚಿಮದ ಎತ್ತರ ಪ್ರಸ್ಥಭೂಮಿಯ ತಂಪು ಹವೆ ಗೋಧಿ ಬೆಳೆಗೆ ಅನುಕೂಲವಾಗಿದೆ. ಎಲ್ಲೆಡೆಗಳಲ್ಲೂ ಜೋಳ ಸಾಮಾನ್ಯ. ಹತ್ತಿ , ಬಾಜ್ರ , ಶೇಂಗ, ರಾಗಿ ಇತರ ಬೆಳೆಗಳು. ಹರಿಹರದಿಂದ ಹೊನ್ನಾಳಿಯವರೆಗಿನ ಪ್ರದೇಶ ಮಲೆನಾಡಿನ ಸೆರಗಿನಂತಿದೆ. ಇಲ್ಲಿ ಜೋಳ, ರಾಗಿ, ಎಣ್ಣೆಬೀಜ, ತೊಗರಿ, ಹತ್ತಿ, ಸಂಬಾರ ಪದಾರ್ಥ ಮತ್ತು ಬತ್ತ ಬೆಳೆಯುತ್ತವೆ. ಹರಿಹರದಲ್ಲಿ ಸಾಗುವಳಿಯ ನೆಲದಲ್ಲಿ ಶೇ. 39ರಷ್ಟೂ ಹೊನ್ನಾಳಿಯಲ್ಲಿ ಶೇ. 20ರಷ್ಟೂ ಪ್ರದೇಶ ಜೋಳಕ್ಕೆ ಮೀಸಲು. ಹರಿಹರ ಪ್ರದೇಶದಲ್ಲಿ ಎಣ್ಣೆ ಬೀಜಗಳೂ ಹೊನ್ನಾಳಿಯಲ್ಲಿ ತೊಗರಿ ರಾಗಿಗಳೂ ಅನಂತರದ ಮುಖ್ಯ ಬೆಳೆಗಳು. ಧಾರವಾಡ, ಸಂಪಗಾಂವ್, ಹುಬ್ಬಳ್ಳಿ, ಕುಂದಗೋಳ, ಶಿರಹಟ್ಟಿ ಪ್ರದೇಶಗಳಲ್ಲಿ ಜೋಳ, ಗೋಧಿ, ಬತ್ತ, ಹತ್ತಿ , ಬೇಳೆ, ಎಣ್ಣೆ ಬೀಜ, ಸಂಬಾರ ಪದಾರ್ಥ ಬೆಳೆಯುತ್ತವೆ. ಇವುಗಳ ಪೈಕಿ ಕುಂದಗೋಳವೊಂದನ್ನು ಬಿಟ್ಟರೆ ಉಳಿದೆಡೆಗಳಲ್ಲೆಲ್ಲ ಜೋಳ ಬೆಳೆಯುವ ನೆಲವೇ ಒಟ್ಟು ಸಾಗುವಳಿ ಪ್ರದೇಶದ ಶೇ. 25 ರಿಂದ 30ರ ವರೆಗೆ ಇದೆ. ಕುಂದಗೋಳದಲ್ಲಿ ಹತ್ತಿ ಬೆಳೆಯುವ ಪ್ರದೇಶದ ಶೇ. 38.3. ಶಿರಹಟ್ಟಿಯಲ್ಲಿ ಎಣ್ಣೆಬೀಜವೂ ಜೋಳದಷ್ಟೇ ಮುಖ್ಯ ಬೆಳೆ. ಹುಬ್ಬಳ್ಳಿಯಲ್ಲಿ ಹತ್ತಿಯೇ ಜೋಳಕ್ಕೆ ಎರಡನೆಯ ಬೆಳೆ. ಧಾರವಾಡ ಸಂಪಗಾಂವಗಳಲ್ಲಿ ಕಾಳುಗಳಿಗೆ ಎರಡನೆಯ ಸ್ಥಾನ. ಬೆಳಗಾಂವಿ ಪ್ರದೇಶದ ಕೃಷಿ ಭೂಮಿಯಲ್ಲಿ ಶೇ. 29ರಷ್ಟು ಭೂಮಿಯಲ್ಲಿ ಬತ್ತ ಬೆಳೆಯುತ್ತಾರೆ. ಜೋಳ ಕಾಳುಗಳೂ ತಕ್ಕಮಟ್ಟಿಗೆ ಬೆಳೆಯುತ್ತವೆ. ಗೋಧಿ, ಹತ್ತಿ, ಎಣ್ಣೆಬೀಜ, ಮೆಣಸು ಮುಂತಾದವು ಇತರ ಬೆಳೆಗಳು. ಚಿಕ್ಕೋಡಿ, ಹುಕ್ಕೇರಿಗಳಲ್ಲಿ ಜೋಳ ಬೆಳೆಯ ಪ್ರದೇಶ ಒಟ್ಟು ಸಾಗುವಳಿ ನೆಲದ ಶೇ. 28ರಷ್ಟು . ಚಿಕ್ಕೋಡಿಯಲ್ಲಿ ಎರಡನೆಯ ಸ್ಥಾನ ಹೊಗೆಸೊಪ್ಪಿಗೆ (ಶೇ. 16.9); ಹುಕ್ಕೇರಿಯಲ್ಲಿ ಎಣ್ಣೆಬೀಜದ್ದು ಎರಡನೆಯ ಸ್ಥಾನ (ಶೇ. 23.9). ಸಜ್ಜೆ, ತೊಗರಿ, ಹಣ್ಣು, ತರಕಾರಿ ಇತರ ಬೆಳೆಗಳು.

ಉತ್ತರ ಮೈದಾನದ ನಡುಪಟ್ಟೆಯ ಪ್ರದೇಶದಲ್ಲಿ ಒಟ್ಟಿನಲ್ಲಿ ಸಾಗುವಳಿಗೆ ಒದಗಿ ಬರದ ನೆಲ ಶೇ. 10ಕ್ಕಿಂತ ಕಡಿಮೆ. ಗದಗಿನ ಪಶ್ಚಿಮದಲ್ಲಿರುವ ಡಂಬಳ ಬೆಟ್ಟ ಮುಂತಾದ ಕೆಲವು ಪ್ರದೇಶಗಳಲ್ಲಿ ಮಾತ್ರ ಸಾಗುವಳಿ ಭೂಮಿ ಕಡಿಮೆ. ಮುಂಗಾರು (ಖರೀಫ್) ಮತ್ತು ಹಿಂಗಾರು (ರಾಬಿ) ಬೆಳೆಗಳೆರಡೂ ಬೆಳೆಯುವುದಾದರೂ ವರ್ಷಕ್ಕೆ ಎರಡು ಬೆಳೆ ತೆಗೆಯುವ ನೆಲ ಕಡಿಮೆ. ಉತ್ತರ ಗೋಕಾಕ, ಉತ್ತರ ಮುಧೋಳ, ಆಗ್ನೇಯ ಮತ್ತು ಉತ್ತರ ಜಮಖಂಡಿ, ರಾಯಬಾಗ್, ಉತ್ತರ ಅಥಣಿ, ಉತ್ತರ ಬಿಜಾಪುರ, ಬಾಗೇವಾಡಿಯ ನಡುಭಾಗ, ಮುದ್ದೇಬಿಹಾಳ, ಪಶ್ಚಿಮ ಸಿಂದಗಿ, ಇಂಡಿ ಬಹುಭಾಗ-ಇಲ್ಲೆಲ್ಲ ಬಾವಿಯ ನೀರಾವರಿ ವ್ಯವಸ್ಥೆಯುಂಟು. ಇಲ್ಲಿ ಬೇಸಾಯ ಬಹುತೇಕ ಜೀವನಾಧಾರಕ್ಕಾಗಿ, ಜೋಳ, ಸಜ್ಜೆ, ಗೋಧಿ, ಹತ್ತಿ, ಎಣ್ಣೆಬೀಜ, ತೊಗರಿ, ಮೆಣಸಿನಕಾಯಿ, ಬಾಳೆ, ಗೆಣಸು ಮತ್ತು ಈರುಳ್ಳಿ ಇವು ಇಲ್ಲಿಯ ಬೆಳೆಗಳು. ಮುಧೋಳ, ಬಾದಾಮಿ, ಗೋಕಾಕ, ರಾಮದುರ್ಗ, ಬಾಗಲಕೋಟೆ, ಹುನುಗುಂದ ಈ ಪ್ರದೇಶಗಳಲ್ಲಿ ಸಾಗುವಳಿಯಲ್ಲಿರುವ ಭೂಮಿಯಲ್ಲಿ ಶೇ. 25 ರಿಂದ ಶೇ. 40ರ ವರೆಗೆ ಜೋಳದ ಬೆಳೆಗೆ ಮೀಸಲಾಗಿದೆ. ಸಜ್ಜೆ, ಗೋಧಿ, ಹತ್ತಿ, ಎಣ್ಣೆಬೀಜ, ತೊಗರಿ, ಹಣ್ಣು ಮತ್ತು ತರಕಾರಿಗಳೂ ಬೆಳೆಯುತ್ತವೆ. ದಾವಣಗೆರೆ ಮತ್ತು ಹರಪನಹಳ್ಳಿಗಳಲ್ಲೂ ಜೋಳವೇ ಪ್ರಥಮ ಬೆಳೆ. ಹಡಗಲಿ, ಕೂಡ್ಲಿಗಿಗಳಲ್ಲಿ ಎಣ್ಣೆ ಬೀಜ ಪ್ರಧಾನ. ದಾವಣಗೆರೆಯಲ್ಲಿ ರಾಗಿಯೂ ಹರಪನಹಳ್ಳಿಯಲ್ಲಿ ಎಣ್ಣೆ ಬೀಜವೂ ಉಳಿದೆರಡು ಪ್ರದೇಶಗಳಲ್ಲಿ ಜೋಳವೂ ಎರಡನೆಯ ಸ್ಥಾನ ಗಳಿಸುತ್ತವೆ. ತೊಗರಿ, ಹತ್ತಿ, ಬತ್ತ, ಸಜ್ಜೆ, ಸಂಬಾರ, ಹಣ್ಣು ಮತ್ತು ತರಕಾರಿಗಳನ್ನೂ ಬೆಳೆಯುತ್ತಾರೆ. ಗದಗ ನರಗುಂದ, ನವಲಗುಂದಗಳಲ್ಲಿಯ ಬೆಳೆಗಳು ಹತ್ತಿ , ಜೋಳ, ಗೋಧಿ, ದ್ವಿದಳ ಧಾನ್ಯ, ಎಣ್ಣೆಬೀಜ, ಹಣ್ಣು , ತರಕಾರಿ.

ಉತ್ತರ ಮೈದಾನದ ಪೂರ್ವ ಪ್ರದೇಶದಲ್ಲಿ ಬೇಸಾಯಕ್ಕೊಳಪಡದ ಭೂಮಿಯ ಪ್ರಮಾಣ ಹೆಚ್ಚು (ಶೇ. 20 ರಿಂದ 59ರ ವರೆಗೆ). ಈಶಾನ್ಯ ಭಾಗದ ಚಿಂಚೋಳಿ ಯಾದಗಿರಿಗಳು ಜೋಳ, ಸಜ್ಜೆ, ಬತ್ತ, ಗೋಧಿ, ಹತ್ತಿ, ಎಣ್ಣೆಬೀಜ, ದ್ವಿದಳದಾನ್ಯ, ಸಂಬಾರ ಬೆಳೆಗಳನ್ನು ಬೆಳೆಯುತ್ತವೆ. ಶಾಂತಪುರ, ಭಾಲ್ಕಿ, ಹುಮನಾಬಾದ್, ಅಳಂದು, ಗುಲ್ಬರ್ಗ, ಚಿತ್ತಾಪುರ, ಸೆರÀಂಗಳಲ್ಲೂ ಮೊದಲ ಸ್ಥಾನ ಜೋಳಕ್ಕೆ, ದ್ವಿದಳದಾನ್ಯ, ಎಣ್ಣೆಬೀಜ ಅನಂತರದ ಮುಖ್ಯ ಬೆಳೆಗಳು. ಇತರ ಬೆಳೆಗಳೂ ಉಂಟು. ಆದರೆ ಹತ್ತಿಯಲ್ಲ. ತುಂಗಭದ್ರ ಪ್ರದೇಶದ ಹೊಸಪೇಟೆ, ಬಳ್ಳಾರಿ, ಸಿಂಧನೂರು, ಸಿರಗುಪ್ಪ, ಮಾನ್ವಿ, ರಾಯಚೂರುಗಳಲ್ಲಿ ಸಾಗುವಳಿ ಭೂಮಿಯ ಅರ್ಧ ಭಾಗದಲ್ಲಿ ಹತ್ತಿ ಬೆಳೆಯುತ್ತಾರೆ. ಉಳಿದ ಬೆಳೆಗಳನ್ನೆಲ್ಲ ಬೇರೆಯೆಡೆಗಳಂತೆಯೇ ಬೆಳೆಯುತ್ತಾರೆ. ಉತ್ತರ ಮೈದಾನದ ಕೆಲವು ದೊಡ್ಡ ಪಟ್ಟಣಗಳ ವಿನಾ ಉಳಿದೆಲ್ಲ ಪ್ರದೇಶಗಳಲ್ಲೂ ವ್ಯವಸಾಯಾವಲಂಬಿ ಜನರದೇ ಹೆಚ್ಚು ಸಂಖ್ಯೆ. ಎಲ್ಲ ಕಡೆಗಳಲ್ಲೂ ಶೇ. 57ಕ್ಕಿಂತ ಹೆಚ್ಚು (ಇಡೀ ರಾಜ್ಯದ ಪ್ರಮಾಣ ಶೇ. 76.4). ಉತ್ತರ ದಕ್ಷಿಣ ಮೈದಾನಗಳೆರಡರಲ್ಲೂ ಭೂಮಿ ಒಡೆತನವುಳ್ಳ ರೈತರ ಪ್ರಮಾಣವೇ ಅಧಿಕ. ಉತ್ತರ ಮೈದಾನದಲ್ಲಿ ಸಾಮಾನ್ಯವಾಗಿ ಎಲ್ಲ ಹಳ್ಳಿಗಳೂ ಆಹಾರ ವಿಚಾರದಲ್ಲಿ ಕೊರತೆಯ ಪ್ರದೇಶಗಳು. ಜೋಳದ ಬೆಳೆ ಚೆನ್ನಾಗಿ ಆದ ವರ್ಷಗಳಲ್ಲಿ ಪರಿಸ್ಥಿತಿ ಉತ್ತಮ. ಹತ್ತಿ ಮತ್ತು ಕಡಲೆಕಾಯಿಯಿಂದ ಬರುವ ಹಣದಿಂದ ಆಹಾರ ಪುರೈಕೆಯಾಗುತ್ತದೆ.

ದಕ್ಷಿಣ ಮೈದಾನ ಮುಖ್ಯವಾಗಿ ಕೆರೆಗಳ ಸೀಮೆ. ಇದು ಹಳೆಯ ಮೈಸೂರು ರಾಜ್ಯ ಪ್ರದೇಶ. ವಿದ್ಯುದುತ್ಪಾದನೆ, ಕೈಗಾರಿಕೆ ಮತ್ತು ನೀರಾವರಿ ಅಭಿವೃದ್ಧಿ ಕಾರ್ಯಗಳು ಹಿಂದಿನಿಂದಲೂ ಇಲ್ಲಿ ನಡೆದಿವೆ. ಶಿವಸಮುದ್ರದ ಬಳಿಯಿಂದ ಉತ್ತರಕ್ಕೆ ವಿಶ್ವೇಶ್ವರಯ್ಯ ನಾಲೆಯ ಗದ್ದೆ ಬಯಲುಗಳಲ್ಲಿ ಕಬ್ಬು ಬತ್ತಗಳೂ ಅಲ್ಲಲ್ಲಿ ತೆಂಗುಗಳೂ ಹಬ್ಬಿವೆ. ಕೆರೆಗಳ ಬೇಸಾಯ ಸಾರ್ವತ್ರಿಕ. ಕೆರೆಗಳ ಸೀಮೆ 51800 ಚ.ಕಿಮೀ ವಿಸ್ತಾರದಲ್ಲಿ ಹರಡಿದೆ. ಅನೇಕ ಕೆರೆಗಳ ದುರಸ್ತಿಯಲ್ಲಿಲ್ಲ. ಈ ಕೆರೆಗಳು ಹಿಂದಿನ ಶತಮಾನಗಳ ಸಾಮೂಹಿಕ ಕಾರ್ಯಶೀಲತೆಯ ಸಂಕೇತಗಳು. ದಕ್ಷಿಣ ಮೈದಾನ ಪ್ರದೇಶದಲ್ಲಿ ಸಾಗುವಳಿಗೆ ಒಳಪಡುವ ಭೂಮಿ ಸಾಮಾನ್ಯವಾಗಿ ಆರ್ಧದಷ್ಟಿದೆ. ಪಾವಗಡ, ಕೊಳ್ಳೇಗಾಲ ಮತ್ತು ಗುಬ್ಬಿಯಂಥ ಗುಡ್ಡನಾಡುಗಳಲ್ಲಿ ಶೇ. 90ರ ವರೆಗೂ ಇದು ಏರಿರುವುದುಂಟು. ಮೈಸೂರಿನ ಸುತ್ತಣ ಮೂರು ತಾಲ್ಲೂಕುಗಳಲ್ಲಿ ಮಾತ್ರ ಶೇ. 70ಕ್ಕಿಂತ ಹೆಚ್ಚು ಭೂಮಿ ಸಾಗುವಳಿಯಲ್ಲಿದೆ. ದಕ್ಷಿಣ ಮೈದಾನದ ದಕ್ಷಿಣಾರ್ಧದಲ್ಲಿ ಉತ್ತರಾರ್ಧದಲ್ಲಿರುವುದಕ್ಕಿಂತ ಕೆರೆಗಳ ಸಂಖ್ಯೆ ಹೆಚ್ಚು. ಅರೆಮಲೆನಾಡಿನ ಬಳಿಯ ಪಶ್ಚಿಮ ಭಾಗದಲ್ಲಿ ಪೂರ್ವ ಭಾಗಕ್ಕಿಂತ ಕಡಿಮೆ. ಬೆಟ್ಟಸೀಮೆಗಳಾದ ಕನಕಪುರ, ಬಂಗಾರಪೇಟೆ, ಚಿಂತಾಮಣಿ ತಾಲ್ಲೂಕುಗಳಲ್ಲೂ ಹೆಚ್ಚು ಕೆರೆಗಳಿಲ್ಲ. ಉತ್ತರ ಮಧ್ಯಭಾಗದಲ್ಲಿ ಗೌರಿಬಿದನೂರಿನಿಂದ ಚಿಕ್ಕನಾಯಕನಹಳ್ಳಿಯ ವರೆಗೆ ಇವು ಅಧಿಕ.

ದಕ್ಷಿಣ ವಿಶ್ವೇಶ್ವರಯ್ಯ ನಾಲೆಯ ಪ್ರದೇಶದ ದಕ್ಷಿಣ ಭಾಗದಲ್ಲೂ ಕಾವೇರಿ ಕಣಿವೆಯ ಬಹುಭಾಗದಲ್ಲೂ ಚನ್ನರಾಯಪಟ್ಟಣ ಮತ್ತು ನಾಗಮಂಗಲದ ಸುತ್ತಲೂ ತುಂಬ ಉತ್ತರದಲ್ಲೂ ವರ್ಷಕ್ಕೆ ಎರಡು ಬೆಳೆ ತೆಗೆಯುತ್ತಾರೆ. ಬೆಂಗಳೂರಿನ ಹತ್ತಿರದ ತರಕಾರಿ ಕ್ಷೇತ್ರಗಳನ್ನೂ ಚಿಕ್ಕಬಳ್ಳಾಪುರ ಪ್ರದೇಶದ ಆಲೂಗೆಡ್ಡೆ ಪ್ರದೇಶವನ್ನೂ ಈ ಗುಂಪಿಗೆ ಸೇರಿಸಬಹುದು.

ಸಾಗುವಳಿಗೆ ಒಳಪಟ್ಟ ನೆಲದಲ್ಲಿ ಹೊಲಗಳ ಪ್ರಮಾಣ ಅಧಿಕ. ಇಲ್ಲಿ ರಾಗಿ ಬೆಳೆಯುವುದೇ ಹೆಚ್ಚು. ಸಾಮಾನ್ಯವಾಗಿ ಜೋಳ, ಕಡಲೆ, ಅವರೆ, ತೊಗರಿ, ಎಳ್ಳು, ಹುಚ್ಚೆಳ್ಳು, ಮತ್ತು ಹರಳುಗಳೊಂದಿಗೆ ಇದನ್ನು ಬೆಳೆಯುತ್ತಾರೆ. ಇದರ ಬಿತ್ತನೆಯಾಗುವುದು ಜುಲೈ ತಿಂಗಳಲ್ಲಿ. ನಡುನಡುವಣ ಇತರ ಬೆಳೆಗಳ ಸಾಲುಗಳನ್ನು ಬಿಟ್ಟು ರಾಗಿಯನ್ನು ಕಟಾವು ಮಾಡುವುದು ಡಿಸೆಂಬರಿನಲ್ಲಿ. ಉಳಿದ ಬೆಳೆಯ ಫಸಲು ಸ್ವಲ್ಪ ನಿಧಾನ. ಜೋಳ ಮತ್ತು ಸಜ್ಜೆಯೂ ಮುಖ್ಯ ಬೆಳೆಗಳು. ನೆಲಗಡಲೆಯನ್ನೂ ಕೆಲವು ಕಡೆಗಳಲ್ಲಿ ಹೊಗೆಸೊಪ್ಪನ್ನೂ ಬೆಳೆಯುವುದುಂಟು. ಇವು ನಗದು ಬೆಳೆಗಳು. ತರಿ ಜಮೀನಿನ ಮುಖ್ಯ ಫಸಲೆಂದರೆ ಬತ್ತ. ಡಿಸೆಂಬರ್-ಜನವರಿ ಇದರ ಕೊಯ್ಲು ಕಾಲ. ಕಬ್ಬನ್ನೂ ಬೆಳೆಯುವುದುಂಟು. ಕೆಲವು ವಿಶಿಷ್ಟ ಪ್ರದೇಶಗಳಲ್ಲಿ ಹಿಪ್ಪುನೇರಳೆ ಮುಖ್ಯ ಬೆಳೆ. ಬತ್ತದ ಫಸಲು ತಗೆದ ಮೇಲೆ ಚಳಿಗಾಲದ ಬೆಳೆಯಾಗಿ ಕಡಲೆ, ಹುರುಳಿ ಮುಂತಾದವನ್ನು ಬೆಳೆಯಬಹುದು. ಆದರೆ ಇವು ಅಷ್ಟೇನೂ ಮುಖ್ಯವಲ್ಲ. ಕೆಲವು ಕಡೆಗಳಲ್ಲಿ ರಾಗಿಗೂ ನೀರಾವರಿಯನ್ನು ಬಳಸುವುದುಂಟು. ಇದರ ಫಸಲು ಇಳುವರಿ ಖುಷ್ಕಿ ರಾಗಿಗಿಂತ ಹೆಚ್ಚು. ಕೆರೆಯ ಅಥವಾ ಬಾವಿಯ ಕೆಳಗಿನ ತೋಟಗಳು ತೆಂಗು, ಅಡಕೆ, ವೀಳೆಯದೆಲೆ, ನಿಂಬೆ ಮತ್ತು ಮೆಣಸುಗಳಿಗೆ ಮೀಸಲು, ನದಿಪಾತ್ರದ ಒಣಮರುಳು ಬಯಲುಗಳಲ್ಲಿ ಕಲ್ಲಂಗಡಿ ಮುಂತಾದವನ್ನು ಬೆಳೆಯುವುದುಂಟು. ಇವು ನದಿಪಾತ್ರದ ಅಡಿಯ ನೀರನ್ನು ಬಳಸಿಕೊಳ್ಳುತ್ತವೆ. ಬೆಂಗಳೂರಿನಂಥ ನಗರ ಪ್ರದೇಶಗಳ ಸುತ್ತ ತರಕಾರಿಗಳಿಗಾಗಿ ನೀರಾವರಿ ಬಳಕೆಯುಂಟು.

ದಕ್ಷಿಣ ಮೈದಾನದ ಮುಖ್ಯ ಬೆಳೆ ರಾಗಿ ಬತ್ತಗಳಾದರೂ ಉತ್ತರ ಮೈದಾನದಲ್ಲಿ ಜೋಳವೂ ಪಶ್ಚಿಮ ಕರ್ನಾಟಕದಲ್ಲಿ ಬತ್ತವೂ ಸಾಮಾನ್ಯವಾಗಿ ಪ್ರಧಾನವಾಗಿರುವಷ್ಟು ಮಟ್ಟಿಗೆ ಇವು ಇಲ್ಲಿ ಪ್ರಧಾನವಾಗಿಲ್ಲ. ಕೆಲವು ಕಡೆಗಳಲ್ಲಿ ಜೋಳ ಮುಖ್ಯ ಧಾನ್ಯ ; ಮತ್ತೆ ಕೆಲವೆಡೆಗಳಲ್ಲಿ ಸಜ್ಜೆ ಮುಖ್ಯ. ಅಲ್ಲೆಲ್ಲ ರಾಗಿ, ಬತ್ತಗಳನ್ನೂ ಬೆಳೆಯುವುದುಂಟು. ದಕ್ಷಿಣ ಮೈದಾನದ ಉತ್ತರಾರ್ಧದಲ್ಲಿ ಉತ್ತರ ಮೈದಾನದ ಬೆಳೆಗಳು ಮುಖ್ಯ. ಅರಸಿಕೆರೆ, ಪಾವಗಡ, ಬಾಗೆಪಲ್ಲಿ ಮತ್ತು ಉತ್ತರದ ತಾಲ್ಲೂಕುಗಳಲ್ಲಿ ಜೋಳವೂ, ಹೊಸದುರ್ಗ, ಶಿಡ್ಲಘಟ್ಟ, ಚಿಂತಾಮಣಿಗಳಲ್ಲೂ ಅದಕ್ಕೆ ಉತ್ತರದಲ್ಲೂ ಸಜ್ಜೆಯೂ, ಹೊಸದುರ್ಗ-ಚಳ್ಳಕೆರೆ-ಪಾವಗಡಗಳ ನೇರಕ್ಕೂ ಉತ್ತರಕ್ಕೂ ಹತ್ತಿಯೂ ಬೆಳೆಯುತ್ತವೆ. ಇವು ಕಡಿಮೆ ಮಳೆಯ ಪ್ರದೇಶಗಳು. ನೈಋತ್ಯದಲ್ಲಿ ಜೋಳ, ಹತ್ತಿ, ಹೊಗೆಸೊಪ್ಪು ಬೆಳೆಯುವ ಅಖಂಡ ಪ್ರದೇಶ ಇಲ್ಲಿಯಷ್ಟು ವಿಸ್ತಾರವಾಗಿ ಕರ್ನಾಟಕದಲ್ಲಿ ಬೇರೆಲ್ಲೂ ಇಲ್ಲ. ಉತ್ತರ ವಾಯವ್ಯದಿಂದ ದಕ್ಷಿಣ ಆಗ್ನೇಯದವರೆಗೆ ಎರಡು ಮುಖ್ಯ ವೃಕ್ಷಬೆಳೆಗಳ ಪ್ರದೇಶಗಳನ್ನು ಕಾಣಬಹುದು. ಕಡೂರು ಹೊಸದುರ್ಗಗಳಿಂದ ಚನ್ನಪಟ್ಟಣ ಮದ್ದೂರುಗಳವರೆಗೆ ಈ ಪ್ರದೇಶ ವ್ಯಾಪಿಸಿದ್ದು, ಚಿಕ್ಕನಾಯಕನಹಳ್ಳಿಯಿಂದ ದಾವಣಗೆರೆಯವರೆಗೂ ಕೃಷ್ಣರಾಜಪೇಟೆಯಿಂದ ಹೊನ್ನಾಳಿಯವರೆಗೂ ಹಬ್ಬಿರುವ ಬೆಟ್ಟ ಶ್ರೇಣಿಗಳನ್ನೊಳಗೊಂಡಿದೆ. ಇಲ್ಲಿ ತೆಂಗು ಬೆಳೆಯುತ್ತದೆ. ಇದಕ್ಕೆ ಹೊಂದಿಕೊಂಡಂತೆ, ಸ್ವಲ್ಪ ಪೂರ್ವಕ್ಕೆ, ಅಡಕೆಯೂ ಬೆಳೆಯುತ್ತದೆ. ಇದರ ದಕ್ಷಿಣ ಪಾಶರ್ವ್‌ದಲ್ಲಿ ಗುಂಡ್ಲುಪೇಟೆ ಚಾಮರಾಜನಗರಗಳವರೆಗೆ ಇರುವ ಪ್ರದೇಶದಲ್ಲಿ ಬಾಳೆ ತೋಟಗಳಿವೆ. ಮಂಡ್ಯದ ಬಳಿ ಕಬ್ಬು ಗೌರಿಬಿದನೂರಿನ ಬಳಿ ಮತ್ತು ಶ್ರೀನಿವಾಸಪುರ ಮುಳಬಾಗಿಲುಗಳಲ್ಲಿ ಏತ ಮತ್ತು ವಿದ್ಯುತ್ ಪಂಪು ಬಾವಿ ನೀರಾವರಿಯಿಂದ ಕಬ್ಬು ಮತ್ತು ಹೊಗೆಸೊಪ್ಪು ಶಿಡ್ಲಘಟ್ಟ ಮತ್ತು ಮಾಗಡಿಯಿಂದ ಕನಕಪುರ ಮತ್ತು ಕೊಳ್ಳೆಗಾಲದವರೆಗಿನ ಪ್ರದೇಶದಲ್ಲಿ ಹಿಪ್ಪುನೇರಳೆಯೂ ದಕ್ಷಿಣ ಮೈದಾನದ ಪೂರ್ವಭಾಗದಲ್ಲಿ ಹಣ್ಣು ತರಕಾರಿಗಳೂ ಬೆಳೆಯುತ್ತವೆ.

ದಕ್ಷಿಣ ಮೈದಾನದ ದಕ್ಷಿಣ, ಮಧ್ಯ ಮತ್ತು ಪೂರ್ವಭಾಗಗಳಲ್ಲಿ ಸಾಕುಪ್ರಾಣಿಗಳ ಸಂಖ್ಯೆ ಉಳಿದ ಭಾಗಗಳಲ್ಲಿರುವುದಕ್ಕಿಂತ ಹೆಚ್ಚು. ಕೆರೆ ಪ್ರದೇಶದಲ್ಲಿ ದನಗಳ ಮೇವಿಗೆ ಅನುಕೂಲವಾದ ಸ್ಥಳ ಹೆಚ್ಚಾಗಿದೆ. ಹಸು, ಎಮ್ಮೆ, ಕುರಿ ಮತ್ತು ಆಡು ಮುಖ್ಯ. ಉತ್ತರಾರ್ಧದ ಕಪ್ಪು ಮಣ್ಣಿನ ಪ್ರದೇಶದಲ್ಲಿ ಕುರಿ ಕಡಿಮೆ. ಕೊಳ್ಳೆಗಾಲ ಪ್ರದೇಶದಲ್ಲಿ ಕುರಿ ಆಡುಗಳಿಗಿಂತ ದನ ಹೆಚ್ಚು. ಕೋಲಾರದ ಕಡೆ ಕಂಬಳಿ ನೇಯ್ಗೆ ಒಂದು ಮುಖ್ಯ ಕಸಬು. ರಾಗಿ-ಬತ್ತ ಬೆಳೆಯುವ ಪ್ರದೇಶದಲ್ಲಿ ಕೋಳಿ ಸಾಕಣೆಯೂ ಹೆಚ್ಚು.

ತೆಂಗು ಬೆಳೆಯುವ ಪ್ರದೇಶದಲ್ಲೂ ವಿಶ್ವೇಶ್ವರಯ್ಯ ನಾಲೆಯ ಬಳಿಯಲ್ಲೂ ಕಾವೇರಿ ಕಣಿವೆಯಲ್ಲೂ ವ್ಯವಸಾಯವಲಂಬಿತ ಜನರ ಸಂಖ್ಯೆ ಹೆಚ್ಚು (ಶೇ. 84-91) ನಂಜನಗೂಡಿನ ಬಳಿಯೂ ಅಧಿಕ. ಬೆಂಗಳೂರು ಮತ್ತು ಕೋಲಾರ ಚಿನ್ನದಗಣಿ ಪ್ರದೇಶದಲ್ಲೂ ಚಿತ್ರದುರ್ಗ, ದಾವಣಗೆರೆ, ಚನ್ನಪಟ್ಟಣ-ಈ ಪ್ರದೇಶದಲ್ಲೂ ಮೈಸೂರು ನಗರದಲ್ಲೂ ಬೆಳೆದಿರುವ ಕೈಗಾರಿಕೆಗಳಿಂದಾಗಿ ವ್ಯವಸಾಯಾವಲಂಬಿ ಜನರ ಪ್ರಮಾಣ ಕಡಿಮೆ.

ಕರ್ನಾಟಕದ ಕೃಷಿಗೆ ಸಂಬಂಧಿಸಿದ ಕೆಲವಿವರ, 2004-05

ವಿವರ ಕ್ಷೇತ್ರ (000 ಹೆ.) ಭೂ ವಿಸ್ತೀರ್ಣ 19049.8 ಕಾಡು 3070.3 ವ್ಯವಸಾಯೇತರ ಭೂಮಿ 1331.6 ಕೃಷಿ ಯೋಗ್ಯವಲ್ಲದ ಭೂಮಿ 788.0 ಖಾಯಂ ಗೋಮಾಳ ಇತ್ಯಾದಿ 952.2 ವಿವಿಧ ವೃಕ್ಷಾವೃತ ಭೂಮಿ 304.7 ಕೃಷಿ ಯೋಗ್ಯ ಬರಡು ನೆಲ 421.2 ಪಾಳು ಭೂಮಿ 2344.0 ಬಿತ್ತನೆಯ ಪ್ರದೇಶ 9837.6 ಒಂದಕ್ಕಿಂತ ಹೆಚ್ಚು ಬಿತ್ತನೆಯ ಪ್ರದೇಶ 1674.2 ನಿವ್ವಳ ನೀರಾವರಿ ಪ್ರದೇಶ 2450.4 ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಮತ್ತು ಉತ್ಪಾದನೆ, 2004-05 ಬೆಳೆ ವಿಸ್ತೀರ್ಣ ಉತ್ಪನ್ನ (ಹೆಕ್ಟೇರು) (ಟನ್ನುಗಳು) ಹಣ್ಣುಗಳು 260,733 416,4611 ತರಕಾರಿಗಳು 377,374 665,4105 ಸಾಂಬಾರು ಬೆಳೆ 244,501 496,933 ತೋಟದ ಬೆಳೆ 625,693 334,005 ವಾಣಿಜ್ಯ ಪುಷ್ಪಗಳು 20890 156,584 ಔಷಧೀಯಗಿಡಗಳು 381 4525 ಸುಗಂಧಿಕ ಗಿಡಗಳು 665 9144

ಕರ್ನಾಟಕದ ಪ್ರಮುಖ ಬೆಳೆಗಳ ವಿಸ್ತೀರ್ಣ ಮತ್ತು ಉತ್ಪನ್ನ, 2004-2005

ಬೆಳೆ ವಿಸ್ತೀರ್ಣ(000 ಹೆಕ್ಟೇರು) ಉತ್ಪನ್ನ(000 ಟನ್ನು)
ಆಹಾರಧಾನ್ಯಗಳು
ಬತ್ತ 1,308.2 5,556.5
ಜೋಳ 1,662.8 1,358.6
ಸಜ್ಜೆ 444.7 266.1
ಮುಸುಕಿನ ಜೋಳ 850.4 2,509.3
ರಾಗಿ 892.8 1,613.9
ತೃಣ ಧಾನ್ಯಬೆಳೆ 58.4 30.6
ಗೋಧಿ 242.0 206.3
ಒಟ್ಟು ಏಕದಳ ಧಾನ್ಯ 5459.2 9,691.1
ಕಡಲೆ 418.1 230.9
ತೊಗರಿ 562.1 291.1
ಇತರ ದ್ವಿದಳ ಬೆಳೆ 108.7 384.6
ಒಟ್ಟು ದ್ವಿದಳಧಾನ್ಯ ಬೆಳೆ 2,108.0 799.9
ಎಣ್ಣೆ ಬೀಜಗಳು
ನೆಲಗಡಲೆ 968.6 684.1
ಸೂರ್ಯಕಾಂತಿ 1135.5 436.8
ಹರಳು 17.3 15.7
ಹುಚ್ಚೆಳ್ಳು 27.4 5.2
ಎಳ್ಳು 58.5 25.9
ಕುಸುಬೆ 98.6 42.3
ಸಾಸಿವೆ, ರೇಪ್ ಬೀಜ 6.1 1.7
ಅಗಸೆ 12.9 1.0
ಒಟ್ಟು 2,267.4 934.1
ಇತರ ಉತ್ಪನ್ನಗಳು
ಹತ್ತಿ 521.8 624.6
ಕಬ್ಬು 177.9 13,993.2
ಮಾವು 119.2 109.8
ದ್ರಾಕ್ಷಿ 8.5 150.3
ಹೊಗೆಸೊಪ್ಪು 98.1 50.1
ಅರಿಸಿನ 10.2 65.6
ಆಲೂಗೆಡ್ಡೆ 44.7 575.8
ತೆಂಗು 412.7 38.7
ಗೋಡಂಬಿ 61.5 104.8
ಅಡಕೆ 132.3 169.9
ಕಾಫಿ 204.3 210.8
ಕೋಕೋ 1.9 22.8

ಪಶುಸಂಗೋಪನೆ[ಸಂಪಾದಿಸಿ]

ಕರ್ನಾಟಕದಲ್ಲಿ ಪಶುಸಂಗೋಪನೆ ಕೃಷಿಯ ಒಂದು ಭಾಗವಾಗಿ ಪುರಾತನ ಕಾಲದಿಂದಲೂ ರೂಢಿಯಲ್ಲಿದೆ. ಜಾನುವಾರುಗಳನ್ನು ಕ್ಷೀರೋತ್ಪನ್ನ, ತುಪ್ಪಳ, ಚರ್ಮ, ಗೊಬ್ಬರ, ಮಾಂಸ ಮುಂತಾದ ಉದ್ದೇಶಗಳಿಗಾಗಿ ಸಾಕಿದರೂ ಕೃಷಿ ಕಾರ್ಯಗಳಿಗೆ ಸಾಕುವುದೇ ಹೆಚ್ಚು. ಉದಾ: ಉಳುಮೆ ಮಾಡಲು, ಸರಕು ಸಾಗಿಸಲು ಇತ್ಯಾದಿ. ದನ, ಎಮ್ಮೆ, ಕುರಿ, ಮೇಕೆ ಮತ್ತು ಕೋಳಿಗಳನ್ನು ಹೆಚ್ಚು ಸಾಕಲಾಗುವುದು. ಇತರ ಪ್ರಾಣಿಗಳನ್ನು ಸಾಕಿದರೂ ಅವುಗಳ ಸಂಖ್ಯೆ ಕಡಿಮೆ. 2003ರಲ್ಲಿದ್ದಂತೆ ಕರ್ನಾಟಕದಲ್ಲಿ ಒಟ್ಟು 283.1 ಲಕ್ಷ ಜಾನುವಾರುಗಳಿದ್ದವು. ಅವುಗಳಲ್ಲಿ 95.4 ಲಕ್ಷ ದನಗಳು, 40 ಲಕ್ಷ ಎಮ್ಮೆ, 72.5 ಲಕ್ಷ ಕುರಿ, 44.8 ಲಕ್ಷ ಮೇಕೆ ಮತ್ತು 3 ಲಕ್ಷ ಹಂದಿಗಳಾಗಿದ್ದವು. ಬೆಳಗಾಂವಿ ಅಧಿಕ ಜಾನುವಾರುಗಳನ್ನೊಳಗೊಂಡ ಜಿಲ್ಲೆಯಾದರೆ ಕೊಡಗು ಕಡಿಮೆ ಜಾನುವಾರು ಗಳನ್ನೊಳಗೊಂಡ ಜಿಲ್ಲೆಯಾಗಿದೆ. 2003ರಲ್ಲಿ ರಾಜ್ಯದಲ್ಲಿದ್ದ ಜಾನುವಾರುಗಳ ಸಂಖ್ಯೆ (‘000ಗಳಲ್ಲಿ): ದನಕರು 9539.0 ಎಮ್ಮೆ 3991.0 ಕುರಿ 7256.0 ಆಡು 4484.0 ಹಂದಿ 312.0 ಇತರೆ 2730.0 ಕುಕ್ಕುಟ 25,592.8

ಹೈನುಗಾರಿಕೆ[ಸಂಪಾದಿಸಿ]

ಕೃಷಿ ಪ್ರಧಾನವಾದ ಕರ್ನಾಟಕದಲ್ಲಿ ಜಾನುವಾರು ಸಾಕಣೆಯಷ್ಟೆ ಹೈನುಗಾರಿಕೆಯೂ ಮುಖ್ಯ ಉದ್ಯಮ. 1950ರ ದಶಕಕ್ಕೂ ಮುಂಚೆ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಮತ್ತು ವಿತರಣೆ ಸೀಮಿತವಾಗಿತ್ತು. ಕೃಷಿ ಕ್ಷೇತ್ರಗಳಲ್ಲಿ ಸಾಕುತ್ತಿದ್ದ ಹಸು ಮತ್ತು ಎಮ್ಮೆಗಳ ಹಾಲನ್ನು ಸ್ಥಳೀಯವಾಗಿ ಬಳಕೆಮಾಡಲಾಗುತ್ತಿತ್ತು. ಕ್ರಮೇಣ ಗ್ರಾಮೀಣ ಪ್ರದೇಶಗಳಿಂದ ಪಟ್ಟಣ-ನಗರಗಳಿಗೆ ಹಾಲಿನ ಮಾರಾಟ ಪ್ರಾರಂಭವಾಯಿತು. ಪ್ರಥಮವಾಗಿ ಕೊಡಗು ಜಿಲ್ಲೆಯ ಕೂಡಿಗೆ (1955)ಯಲ್ಲಿ ಆಧುನಿಕ ಹೈನುಗಾರಿಕೆ ಪ್ರಾರಂಭವಾಯಿತು. 1965ರಲ್ಲಿ ಬೆಂಗಳೂರಿನಲ್ಲಿ ಡೈರಿ ಸಂಸ್ಥೆ ಅಸ್ಥಿತ್ವಕ್ಕೆ ಬಂದದ್ದು ರಾಜ್ಯದ ಹೈನುಗಾರಿಕೆಯ ಮಹತ್ವದ ಹೆಜ್ಜೆ. ಅದೇ ವರ್ಷ ಕರ್ನಾಟಕ ಕ್ಷೀರಾಭಿವೃದ್ಧಿ ಮಂಡಲಿ ಉಗಮವಾಯಿತು. ಇಂದು ಕರ್ನಾಟಕ ಹಾಲು ಮಹಾಮಂಡಲಿ ರಾಜ್ಯದಾದ್ಯಂತ ಹಾಲು ಸಂಗ್ರಹಿಸುವ ರಾಜ್ಯದ ಏಕೈಕ ಸಾರ್ವಜನಿಕ ಸಂಸ್ಥೆ. 2002ರಲ್ಲಿದ್ದಂತೆ ರಾಜ್ಯದಲ್ಲಿ ಒಟ್ಟು 8833 ನೋಂದಣಿ ಪಡೆದ ಹೈನುಗಾರಿಕಾ ಸಹಕಾರ ಸಂಘಗಳಿವೆ. ಇವುಗಳಲ್ಲಿ ನೋಂದಾಯಿಸಲ್ಪಟ್ಟ 16.6 ಲಕ್ಷ ಸದಸ್ಯರಿದ್ದಾರೆ. ಇವರಲ್ಲಿ ಸಣ್ಣ, ಅತಿ ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರೂ ಸೇರಿದ್ದಾರೆ. ರಾಜ್ಯದಲ್ಲಿ 13 ಹಾಲು ಒಕ್ಕೂಟಗಳಿವೆ ಮತ್ತು 17 ಕ್ಷೀರ ಕೇಂದ್ರಗಳಿವೆ. ಒಟ್ಟು 42 ಶೀತಲೀಕರಣ ಘಟಕಗಳಿವೆ. ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ಹಾಸನ, ಧಾರವಾಡ, ಬೆಳಗಾಂವಿ, ಬಿಜಾಪುರ, ಗುಲ್ಬರ್ಗ, ಮಂಗಳೂರು, ಶಿವಮೊಗ್ಗ, ರಾಯಚೂರು ಮತ್ತು ಕೋಲಾರಗಳು ಡೈರಿಕೇಂದ್ರಗಳು. ಈ ಕೇಂದ್ರಗಳು ಹಾಲು ಸಂಗ್ರಹಿಸುವುದು, ಸಂಸ್ಕರಿಸುವುದು ಹಾಗೂ ಮಾರಾಟಮಾಡುವುದಕ್ಕೆ ಸೀಮಿತವಲ್ಲ. ಇತರ ಕ್ಷೀರೋತ್ಪನ್ನಗಳನ್ನೂ ತಯಾರಿಸುತ್ತವೆ. ಉದಾ: ಕ್ರೀಮ್, ಮೊಸರು, ಬೆಣ್ಣೆ, ತುಪ್ಪ, ಮಜ್ಜಿಗೆ, ಸುವಾಸಿತ ವಿಶೇಷ ಬಗೆಯ ಹಾಲು, ಐಸ್ಕ್ರೀಮ್, ಪೇಡ, ಮೈಸೂರು ಪಾಕ್, ಕೆನೆರಹಿತ ಹಾಗೂ ಕೆನೆಬರಿತ ಹಾಲಿನ ಪುಡಿ, ಖೋವಾ, ರಸಗುಲ್ಲ ಮತ್ತು ಬರ್ಫಿ. ಮೀನುಗಾರಿಕೆ: ನೆಲದಲ್ಲಿ ಬೆಳೆಗಳಿಂದ ಪಡೆದುಕೊಳ್ಳುವಂತೆ ಜಲದಲ್ಲಿಯೂ ಆಹಾರ ಪಡೆಯಬಹುದು. ಅಂತಹ ಆಹಾರಗಳಲ್ಲಿ ಮೀನು ಮುಖ್ಯವಾದುದು. ಕರ್ನಾಟಕಕ್ಕೆ ನಿಸರ್ಗವು ನೀಡಿರುವ ಸಂಪನ್ಮೂಲಗಳಲ್ಲಿ ಮತ್ಸ್ಯ ಸಂಪನ್ಮೂಲ ಸೇರಿದೆ. ಕಡಲದಂಡೆಯಲ್ಲಿ ಬದುಕುವ ಜನರ ಮುಖ್ಯವೃತ್ತಿ ಮೀನುಗಾರಿಕೆ. ಇಲ್ಲಿ ಸಾಗರಿಕ ಮತ್ಸೋದ್ಯಮ ಅಭಿವೃದ್ಧಿಗೊಂಡಿದೆ. ಪುರಾತನ ಕಾಲದಿಂದಲೂ ರೂಢಿಗೆ ಬಂದಿರುವಂತಹ ವೃತ್ತಿ. ಭೌಗೋಳಿಕ ಪರಿಸ್ಥಿತಿ ಪುರಕವಾಗಿದ್ದರೂ ಇದೊಂದು ಸಣ್ಣ ಪ್ರಮಾಣದ ಹಾಗೂ ಋತುಕಾಲಿಕವಾದ ಉದ್ಯಮ. ಕರ್ನಾಟಕ 320 ಕಿಮೀ ಉದ್ದದ ಕರಾವಳಿಯನ್ನು ಹೊಂದಿರುವುದರೊಂದಿಗೆ 27,000 ಚ.ಕಿಮೀ ವಿಸ್ತೀರ್ಣವುಳ್ಳ ಖಂಡಾವರಣ ಪ್ರದೇಶವನ್ನು ಹೊಂದಿದೆ. ಜೊತೆಗೆ 5.03 ಲಕ್ಷ ಹೆ. ಒಳನಾಡಿನ ಜಲರಾಶಿ ಮತ್ತು 8000 ಹೆ. ಹಿನ್ನೀರು ಕ್ಷೇತ್ರವುಂಟು. ಇದು ಸೀಗಡಿ ಮೀನು ಕೃಷಿಗೆ ಉತ್ಕೃಷ್ಟ. ರಾಜ್ಯದಲ್ಲಿ ಸು. 7.6 ಲಕ್ಷ ಮೀನುಗಾರರಿದ್ದಾರೆ. ಅವರಲ್ಲಿ 2 ಲಕ್ಷ ಜನರು ಕರಾವಳಿಯಲ್ಲಿ ಮತ್ತು 5.6 ಲಕ್ಷ ಒಳನಾಡಿನಲ್ಲಿದ್ದು ಮೀನುಗಾರಿಕೆಯಲ್ಲಿ ತೊಡಗಿರುವರು. ಕರ್ನಾಟಕದಲ್ಲಿ ಕಡಲ ಮತ್ತು ಒಳನಾಡಿನ ಎರಡೂ ರೀತಿಯ ಮೀನುಗಾರಿಕೆ ರೂಢಿಯಲ್ಲಿದೆ. ಸಮುದ್ರ ತೀರವನ್ನು ಹೊಂದಿಕೊಂಡಂತಿರುವ ಉತ್ತರ ಕನ್ನಡ, ಉಡುÄಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಡಲ ಮೀನುಗಾರಿಕೆ ಮುಖ್ಯ. ಇವು ಸುಮಾರು 25000 ಚ.ಕಿಮೀ ಗಳಷ್ಟು ಖಂಡಾವರಣ ಪ್ರದೇಶವನ್ನಾವರಿಸಿದ್ದು 28 ಮೀನುಗಾರಿಕೆ ಕೇಂದ್ರಗಳು ಮತ್ತು 204 ಮೀನುಗಾರಿಕಾ ಹಳ್ಳಿಗಳಲ್ಲಿ ಸಾವಿರಾರು ಕುಟುಂಬಗಳು ಮೀನುಗಾರಿಕಾ ವೃತ್ತಿಯನ್ನಾಧರಿಸಿ ಬದುಕುತ್ತಿದ್ದಾರೆ. ಸಂಗ್ರಹಿಸುವ ಮೀನುಗಳೆಂದರೆ. ಸೀಗಡಿ, ಬಂಗೆಡೆ, ಸಾರ್ಡಿನ್, ತಾಟೆ, ತೊರಕೆ, ಗರಗಸಮೀನು, ಕೊಡ್ಬಾಯಿ, ಬಲ್ಪೆಧೋಡಿ, ಕೊದಾಡೆ, ಶೇಡೆ, ಕಡುವಾಯಿ, ತಿಡುಂಬ, ಸಾಂದಾಳ ಇತ್ಯಾದಿ. ಇವುಗಳಲ್ಲಿ ಮೊದಲ 3 ಪ್ರಬೇಧಗಳು ಮುಖ್ಯವಾದವು. ಕಾರವಾರ, ಅಂಕೋಲ, ಕುಮಟ, ಹೊನ್ನಾವರ, ಭಟ್ಕಳ, ಮಜಲಿ, ಬಿಂಗಿ, ಬಿಂದಿಯ, ಗಂಗೊಳ್ಳಿ, ಮಲ್ಪೆ, ಕಾರವಾರ, ಮಂಗಳೂರು ಮತ್ತು ಉರಿಯಾವರ ಪ್ರಮುಖ ಕಡಲ ಮೀನುಗಾರಿಕಾ ಕೇಂದ್ರಗಳು.

ಒಳನಾಡಿನ ಮೀನುಗಾರಿಕೆ[ಸಂಪಾದಿಸಿ]

6015 ದೊಡ್ಡ ಕೆರೆಗಳು, 19,697 ಸಣ್ಣಕೆರೆಗಳು, ಕೆಲವು ದೇವಾಲಯ ಪುಷ್ಕರಣಿಗಳು, ಪ್ರಮುಖ ನದಿಗಳಾದ ಕಾವೇರಿ, ತುಂಗಭದ್ರಾ, ಕೃಷ್ಣಾ ಮತ್ತು ಅವುಗಳ ಉಪನದಿಗಳಲ್ಲಿ ಕಂಡುಬರುತ್ತದೆ. ಜೊತೆಗೆ ಸು. 4000 ಹೆ. ಪ್ರದೇಶವುಳ್ಳ ಸೌಳು ನೀರಿನ ಕೊಲ್ಲಿ ಮತ್ತು ಹಿನ್ನೀರುಗಳು ಸಹ ಒಳನಾಡಿನ ಮೀನುಗಾರಿಕೆಗೆ ಲಭ್ಯ. ಆದರೂ ಈ ವಿಧದ ಮೀನುಗಾರಿಕೆ ಹಂಚಿಕೆ ಕಡಿಮೆ. ತುಂಗಭದ್ರಾ ಜಲಾಶಯ, ಭದ್ರಾ ಜಲಾಶಯ, ವಾಣಿ ವಿಲಾಸ ಸಾಗರ, ಶಾಂತಿ ಸಾಗರ, ನುಗು ಕಬಿನಿ, ನೀರಸಾಗರ, ಹೆಸರುಘಟ್ಟ, ಕೃಷ್ಣರಾಜಸಾಗರ, ಮುನಿರಾಬಾದ್ ಮತ್ತು ರಕ್ಕಸ ಕೊಪ್ಪ ಜಲಾಶಯಗಳು ಮುಖ್ಯ ಮೀನುತಳಿ ಮತ್ತು ಮೀನುಪಾಲನಾ ಕೇಂದ್ರಗಳು. ಮೂಗುಮಲ್ಲ, ಬಿಳಿಮೀನು, ಬಾಳೆಮೀನು, ಗೆಂಡೆಮೀನು, ರೂಹು, ಮೈಗಾಲ್ ಗೆಂಡೆ, ಹುಲ್ಲು ಮೀನು, ಬೆಳ್ಳಿಮೀನು, ಟೆಲಾಪಿಯಾ ಮುಂತಾದವು ಒಳನಾಡಿನ ಮೀನುಗಾರಿಕೆಯ ಮೀನುಗಳು. ರಾಜ್ಯ 2003-04ನೇ ಸಾಲಿನಲ್ಲಿ ಸು. 2 ಲಕ್ಷ ಟನ್ನು (ಶೇ. 76) ಕಡಲ ಮೀನು ಮತ್ತು 62 ಸಾವಿರ ಟನ್ನು ಒಳನಾಡಿನ ಮೀನುಗಳನ್ನು ಉತ್ಪಾದಿಸಿತ್ತು. ಉತ್ತರ ಮತ್ತು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಮೀನು ಉತ್ಪಾದನೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಹೊಂದಿವೆ. ರಾಜ್ಯದಲ್ಲಿ 45 ಮೀನು ಶೈತ್ಯೀಕರಣ ಉಗ್ರಾಣಗಳು ಮತ್ತು 222 ಶೈತ್ಯೀಕೃತ ಮೀನುಸಂಗ್ರಹಣ ಘಟಕಗಳಿವೆ. ಕರ್ನಾಟಕದಲ್ಲಿ ಮೀನು ಬಳಸುವವರ ಸಂಖ್ಯೆ ಕಡಿಮೆ. ಅಂದರೆ ಶೇ. 48 ಜನರು ಮಾತ್ರ ಮೀನು ಬಳಸುವರು. ಕರಾವಳಿ ಜಿಲ್ಲೆಗಳು ಹಾಗು ಅವುಗಳಿಗೆ ಸಮೀಪದ ಇತರ ಭಾಗಗಳಲ್ಲಿ ಮೀನಿನ ಬಳಕೆ ಹೆಚ್ಚು. ಕರ್ನಾಟಕದಿಂದ ಕೆಲವು ಪ್ರಭೇದದ ಮೀನುಗಳು ಹಾಗೂ ಮತ್ಸ್ಯ ಉತ್ಪನ್ನಗಳು ರಫ್ತಾಗುತ್ತವೆ. ರಾಜ್ಯದ ಸೀಗಡಿ ಮೀನುಗಳಿಗೆ ವಿದೇಶಗಳಲ್ಲಿ ಅಪಾರವಾದ ಬೇಡಿಕೆಯಿದೆ. ರಫ್ತಾಗುವ ಮೀನಿನ ಪ್ರಮಾಣದಲ್ಲಿ ಶೇ. 80 ಸೀಗಡಿ ಮೀನಿನಿಂದ ಕೂಡಿರುತ್ತದೆ.

ನೀರಾವರಿ, ವಿದ್ಯುದುತ್ಪಾದನೆ[ಸಂಪಾದಿಸಿ]

ಒಂದು ನದಿಯ ನೀರಿನ ಯಶಸ್ವೀ ಬಳಕೆಗೆ ಮುಖ್ಯವಾದ ಅಂಶಗಳು ನಾಲ್ಕು : ಮೇಲ್ಮೈ ಲಕ್ಷಣ, ವಾಯುಗುಣ, ಭೂರಚನೆ ಮತ್ತು ಸನ್ನಿವೇಶ. ಈ ನಾಲ್ಕು ಅಂಶಗಳೂ ಕರ್ನಾಟಕದಲ್ಲಿ ಅನುಕೂಲಕರವಾಗಿವೆ. ಅಂದಾಜೋಂದರ ಪ್ರಕಾರ ಕರ್ನಾಟಕದಲ್ಲಿ ಸು. 188.1 ಸಾವಿರಕೋಟಿ ಘನ ಮೀಟರ್ನಷ್ಟು ಸಂಭವನೀಯ ಜಲಸಂಪತ್ತಿದೆ ಎಂದು ತಿಳಿದಿದೆ. ಇದರಲ್ಲಿ ಮೇಲ್ಮೈ ಜಲ ಮತ್ತು ಅಂತರ್ಜಲಗಳು ಸೇರಿವೆ. ರಾಜ್ಯದ ನದಿಗಳಲ್ಲಿ ಸು. 1 ಕೋಟಿ ಹೆ.ಮೀನಷ್ಟು ನೀರು ಹರಿಯುತ್ತದೆಂದು ತಜ್ಞರ ಅಂದಾಜು. ಇದರಲ್ಲಿ 45-50 ಲಕ್ಷ ಹೆ.ಮೀ ಮೇಲ್ಮೈ ನೀರನ್ನು ಬಳಕೆ ಮಾಡಿಕೊಳ್ಳಬಹುದು. ಹಾಗೂ 42 ಲಕ್ಷ ಹೆ. ಭೂಮಿಗೆ ನೀರಾವರಿ ಸೌಲಭ್ಯ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಮೀಕ್ಷೆಯಂತೆ ಸು. 11,412.2 ದಶಲಕ್ಷ ಘನ ಮೀಟರ್ ನಷ್ಟು ಅಂತರ್ಜಲ ಸಂಪತ್ತು ರಾಜ್ಯದಲ್ಲಿ ಲಭ್ಯ. ಇದರಲ್ಲಿ 8,812.2 ದಶಲಕ್ಷ ಘನ ಮೀನಷ್ಟು ನೀರಾವರಿಗೆ ಬಳಸುವ ಹಾಗೂ ಸು. 10 ಲಕ್ಷ ಹೆ. ಭೂಮಿಗೆ ನೀರಾವರಿ ಸೌಲಭ್ಯ ಸಾಧ್ಯ. ಇತ್ತೀಚೆಗೆ ಕುಡಿಯುವ ನೀರಿಗಾಗಿ ಮತ್ತು ನೀರಾವರಿಗಾಗಿ ಅಂತರ್ಜಲವನ್ನು ಹೆಚ್ಚೆಚ್ಚು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮೇಲ್ಮೈ ಜಲಸಂಪತ್ತು ನೀಡುವ ನದಿಗಳಲ್ಲಿ ಕೃಷ್ಣ, ಕಾವೇರಿ ಮತ್ತು ಅವುಗಳ ಉಪನದಿಗಳು ಮಹತ್ವವುಳ್ಳವು. ಇವುಗಳಲ್ಲಿ ಸು. 3400 ಟಿ.ಎಂ.ಸಿ ನೀರು ಹರಿಯುತ್ತದೆ. ನೀರಾವರಿಗಲ್ಲದೆ ಈ ನದಿ ಜಲಗಳು ಜಲವಿದ್ಯುಚ್ಛಕ್ತಿ ಉತ್ಪಾದನೆಗೂ ಬಹು ಉಪಯುಕ್ತ. ಪಶ್ಚಿಮಕ್ಕೆ ಹರಿಯುವ ಶರಾವತಿ, ಕಾಳಿ, ವರಾಹಿ, ಬೇಡ್ತಿ, ಅಘನಾಶಿನಿ ಮತ್ತು ಬರಪೊಳೆ ನದಿಗಳು ನೀರಾವರಿಗಿಂತ ವಿದ್ಯುಚ್ಛಕ್ತಿ ಉತ್ಪಾದನೆಗೆ ಹೆಚ್ಚು ಉಪಯುಕ್ತ. ನೀರಾವರಿಯ ಜೊತೆಗೆ ವಿದ್ಯುದುತ್ಪಾದನೆಗೂ ಬಳಸಿಕೊಳ್ಳಲಾಗಿರುವ ಅಥವಾ ಬಳಸಿಕೊಳ್ಳಬಹುದಾದ ನದಿಗಳೆಂದರೆ ಕಾವೇರಿ, ಶಿಂಷಾ, ಭದ್ರಾ, ತುಂಗಭದ್ರಾ, ಕಪಿಲ, ಘಟಪ್ರಭಾ, ಕೃಷ್ಣ (ಮೇಲ್ದಂಡೆ) ಇವು ಮುಖ್ಯ. ಕರ್ನಾಟಕದ ವಿದ್ಯುತ್ ವಿಭವ (ಪವರ್ ಪೊಟೆನ್ಷಿಯಲ್) 60 ಲಕ್ಷ ಕಿವ್ಯಾ ಗಳಿಗಿಂತ ಹೆಚ್ಚು . ರಾಜ್ಯದ ನದಿ ನೀರನ್ನು ಬೇಸಾಯಕ್ಕಾಗಿ ಬಳಸಿಕೊಳ್ಳುವ ಪ್ರಯತ್ನ ಬಹಳ ಹಿಂದಿನ ಕಾಲದಿಂದಲೂ ನಡೆದುಬಂದಿದೆ. ಕರ್ನಾಟಕದ ಅನೇಕ ನದಿಗಳಿಗೆ ಅಡ್ಡಲಾಗಿ ಕಟ್ಟಿದ ಹಳೆಯ ಅಣೆಕಟ್ಟುಗಳೂ ಕಾಲುವೆಗಳೂ ಈಗಲೂ ನೀರಾವರಿಗೆ ಉಪಯುಕ್ತ. ರಾಜ್ಯದಲ್ಲಿರುವ 37,337 ಚಿಕ್ಕದೊಡ್ಡ ಕೆರೆಗಳ ಕೆಳಗಿರುವ 3,97,530 ಹೆ. ಗಳು ಸೇರಿ ನಾನಾ ಮೂಲಗಳಿಂದ ನೀರಾವರಿ ಸೌಲಭ್ಯ ಪಡೆದಿದ್ದ ಜಮೀನು 17 ಲಕ್ಷ ಎಕರೆ. ವೇದಾವತಿ ನದಿಗೆ ವಾಣಿವಿಲಾಸ ಸಾಗರವನ್ನು ಸುಮಾರು ಒಂದು ಶತಮಾನದ ಹಿಂದೆ (1907) ನಿರ್ಮಿಸಲಾಯಿತು. ಇದರಿಂದ ನೀರಾವರಿಗೆ ಒದಗಿ ಬಂದಿರುವ ವಿಸ್ತೀರ್ಣ 10 ಸಾವಿರ ಹೆ. ಮೈಸೂರಿನ ಬಳಿಯ ಕೃಷ್ಣರಾಜಸಾಗರದಿಂದ 1,09,375 ಹೆ. ಗಳಿಗೆ ನೀರು ಒದಗುವುದಲ್ಲದೆ ಶಿಂಷಾ ಮತ್ತು ಶಿವಸಮುದ್ರ ಜಲವಿದ್ಯುದ್ಯೋಜನೆಗಳಿಗೆ ನಿರಂತರ ಜಲಧಾರೆ ಏರ್ಪಟ್ಟಿದೆ. ಕೃಷ್ಣರಾಜಸಾಗರ ಕಟ್ಟೆಯ ಕೆಲಸ 1910ರಲ್ಲಿ ಪ್ರಾರಂಭವಾಗಿ 1931ರಲ್ಲಿ ಮುಗಿಯಿತು. ಕಾವೇರಿ ನೀರಿನ ಬಳಕೆಯ ಬಗ್ಗೆ ಆಗಿನ ಮದರಾಸು ಸರ್ಕಾರ ಅಡ್ಡಿ ಮಾಡದಿದ್ದರೆ ಇದು ಇನ್ನೂ ಬೇಗನೆ ಮುಗಿಯುತ್ತಿತ್ತು. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧ ಕಾಲದಲ್ಲಿ ಹಳೆಯ ಮೈಸೂರು ಸಂಸ್ಥಾನ ಸರ್ಕಾರದ ಆಸಕ್ತಿಯಿಂದಾಗಿ ಆ ಪ್ರದೇಶದಲ್ಲಿ ಅನೇಕ ಸಣ್ಣ ನೀರಾವರಿ ಕಾಮಗಾರಿಗಳು ನಡೆದುವು. ತುಂಗಭದ್ರೆಯ ನೀರನ್ನು ಅಡ್ಡಹಾಯಿಸಿಕೊಳ್ಳಲು ವಿಜಯನಗರದ ಕಾಲದಲ್ಲಿ ನಡೆದ ಕೆಲಸ ಗಮನಾರ್ಹವಾದದ್ದು. ರಾಯರ ಕಾಲುವೆಗಳೆಂದು ಅವು ಈಗಲೂ ಪ್ರಸಿದ್ಧವಾಗಿವೆ. ಹಂಪಿ, ಕಮಲಾಪುರ, ವಲ್ಲಭಪುರ ಮುಂತಾದೆಡೆಗಳಲ್ಲಿ ಅವುಗಳ ಗುರುತುಗಳಿವೆ. ಈಸ್ಟ್‌ ಇಂಡಿಯ ಕಂಪನಿಯವರು ಸುಂಕೇಪಾಲದ ಬಳಿ ಒಂದು ಅಣೆಕಟ್ಟನ್ನು ಕಟ್ಟಿದ್ದರು. ಕೃಷ್ಣರಾಜಸಾಗರ ನಿರ್ಮಾಣದಿಂದ ಜಲಾಂತರ್ಗತವಾದ ಕೆಲವು ನೀರಾವರಿ ವ್ಯವಸ್ಥೆಗಳು ಟಿಪ್ಪುವಿನ ಕಾಲದವು. ಹೀಗೆ ಕರ್ನಾಟಕದ ಜನ ಅನೇಕ ಶತಮಾನಗಳಿಂದ ನೀರಾವರಿಯ ಕ್ಷೇತ್ರದಲ್ಲಿ ತಕ್ಕಮಟ್ಟಿನ ಕೆಲಸ ಮಾಡಿದ್ದಾರೆ..

ಸ್ವತಂತ್ರ ಭಾರತದಲ್ಲಿ ಪಂಚವಾರ್ಷಿಕ ಯೋಜನೆಗಳು ಆರಂಭವಾದ ಮೇಲೆ ಅನೇಕ ನೀರಾವರಿ ಕಾರ್ಯಕ್ರಮಗಳು ಜಾರಿಗೆ ಬಂದುವು. ಭದ್ರಾಜಲಾಶಯ, ಬೆಳಗಾಂವಿಯ ಘಟಪ್ರಭಾ ಯೋಜನೆ ಮತ್ತು ಶಿವಮೊಗ್ಗದ ತುಂಗಾ ಅಣೆಕಟ್ಟೆ ಯೋಜನೆ ಮತ್ತು ಮೈಸೂರು ಜಿಲ್ಲೆಯ ನುಗು ಯೋಜನೆ ಇವುಗಳಲ್ಲಿ ಕೆಲವು. ತುಂಗ ಭದ್ರಾ ಯೋಜನೆಯ ಪ್ರಥಮ ಹಂತದ ಕಾರ್ಯವೂ ಆರಂಭವಾಗಿತ್ತು. ಇವಲ್ಲದೆ ಎಂಟು ಮಧ್ಯಮವರ್ಗದ ನೀರಾವರಿ ಯೋಜನೆಗಳೂ ಹಳೆಯ ಕೆರೆಗಳ ದುರಸ್ತಿಯೂ ಹೊಸ ಕೆರೆಗಳ ನಿರ್ಮಾಣಕಾರ್ಯವೂ ನಡೆದುವು. ಇವುಗಳಿಂದ ಲಾಭ ಪಡೆದ ಜಮೀನಿನ ವಿಸ್ತೀರ್ಣ 94,810 ಹೆ. ಇದರಲ್ಲಿ ಹೊಸದಾಗಿ ನೀರಾವರಿ ಸೌಲಭ್ಯ ಪಡೆದ ಜಮೀನು 6160 ಹೆ.

ಕಾವೇರಿ ಕಣಿವೆಯಲ್ಲಿ ಅನೇಕ ಹೊಸ ಕಾರ್ಯಕ್ರಮಗಳು ಜಾರಿಗೆ ಬಂದಿವೆ, ಅಥವಾ ಬರಲಿವೆ. ಹೇಮಾವತಿ, ಕಂಬದಕಡ, ಕಪಿಲ, ಹಾರಂಗಿ, ಸುವರ್ಣಾವತಿ, ಚಿಕ್ಕಹೊಳೆ, ಲಕ್ಷ್ಮಣತೀರ್ಥ ಮುಂತಾದವುಗಳ ನೀರನ್ನು ಬಳಸುವ ಯೋಜನೆಗಳು ಕಾರ್ಯಗತವಾಗಿವೆ. ಇವುಗಳ ಪೈಕಿ ಕಪಿಲ ಯೋಜನೆ ಮುಖ್ಯವಾದದ್ದು. ವರ್ಷಕ್ಕೆ 150-300 ಸೆಂಮೀ ಮಳೆ ಬೀಳುವ ಪ್ರದೇಶವಾದ ವೈನಾಡಿನ ಅನೇಕ ಹೊಳೆಗಳಿಂದ ಕೂಡಿ 230 ಕಿಮೀ ಹರಿದು ತಿರುಮಕೂಡಲು ನರಸೀಪುರದ ಬಳಿ ಕಾವೇರಿನದಿಯನ್ನು ಸೇರುವ ಈ ನದಿಗೆ ಹುಲ್ಲಹಳ್ಳಿಯ ಬಳಿ ಹಿಂದೆಯೇ ಅಣೆಕಟ್ಟು ಕಟ್ಟಿ 4,925 ಹೆ. ನೀರೊದಗಿಸಿಕೊಳ್ಳಲಾಗಿತ್ತು. ಈ ನದಿಯ ನೀರನ್ನು ಇನ್ನೂ ಹೆಚ್ಚಾಗಿ ಬಳಸಿಕೊಳ್ಳುವ ಯೋಚನೆ 1916 ರಿಂದಲೂ ಮೈಸೂರು ಸರ್ಕಾರಕ್ಕಿತ್ತು. ಮೈಸೂರು ನಗರಕ್ಕೆ 61 ಕಿಮೀ ದೂರದಲ್ಲಿ ನಿರ್ಮಿಸಲಾಗುವ ಹೊಸ ಜಲಾಶಯದ ಬಳಿ ನದಿಯ ಪಾತ್ರ ಸಮುದ್ರ ಮಟ್ಟಕ್ಕಿಂತ 672 ಮೀ ಎತ್ತರದಲ್ಲಿದೆ. ಈ ಜಲಾಶಯದ ಶೇಖರಣಾ ಸಾಮರ್ಥ್ಯ 19,200 ಮೆಟ್ರಿಕ್ ಘನ ಅಡಿ ಕಟ್ಟೆಯ ಎತ್ತರ ಅಡಿಪಾಯದಿಂದ 57.3 ಮೀ (ನದೀಪಾತ್ರದಿಂದ 26.8 ಮೀ); ಕನಿಷ್ಠ ಅಗಲ ಅಡಿಪಾಯದಲ್ಲಿ 49 ಮೀ ಮೇಲ್ತುದಿಯಲ್ಲಿ 7.3 ಮೀ ಎಡಬಲದಂಡೆಗಳ ನಾಲೆಗಳಿಂದ 19,450 ಕ್ಯುಸೆಕ್ಸ್‌ ನೀರು ಬಿಡಲಾಗುತ್ತದೆ. ಎಡದಂಡೆ ನಾಲೆಯಿಂದ 2298 ಹೆ. ಎಕರೆ ಜಮೀನೂ ಬಲದಂಡೆ ಕಾಲುವೆಯಿಂದ 9464 ಹೆ. ಜಮೀನೂ ತರಿ ಸಾಗುವಳಿಗೆ ಒದಗುತ್ತವೆ. ಒಟ್ಟು 30,010 ಹೆ. ಗಳಿಗೆ ಪ್ರಯೋಜನವಾಗುತ್ತದೆ. ಅನುಕೂಲ ಪಡೆಯುವ ತಾಲ್ಲೂಕುಗಳು ಮೈಸೂರು ಜಿಲ್ಲೆಯ ನಂಜನಗೂಡು, ತಿರುಮಕೂಡಲು ನರಸೀಪುರ, ಹೆಗ್ಗಡದೇವನಕೋಟೆ ಮತ್ತು ಚಾಮರಾಜನಗರ.

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ನೈಋತ್ಯದಲ್ಲಿ ನಂಜನಗೂಡಿಗೆ 24 ಕಿಮೀ ದೂರದಲ್ಲಿರುವ ನುಗು ಜಲಾಶಯ ಇನ್ನೊಂದು ಯೋಜನೆ. ಇದರ ಜಲಾನಯನ ಪ್ರದೇಶ ವಿಸ್ತೀರ್ಣ 984 ಚ.ಕಿಮೀ. ಇದರಿಂದ 73 ಸಾವಿರ ಎಕರೆಗಳಿಗೆ ನೀರು ಪುರೈಕೆಯಾಗುತ್ತದೆ. ಮೈಸೂರು ಜಿಲ್ಲೆಯ ಚಾಮರಾಜನಗರ ತಾಲ್ಲೂಕಿನ ಚಿಕ್ಕಹೊಳೆ ಜಲಾಶಯ ಯೋಜನೆ ಮಧ್ಯಮ ದರ್ಜೆಯದು. ಈ ಹೊಳೆ ಸುವರ್ಣಾವತಿಯ ಉಪನದಿ. ಇದರ ಇಳಿಮೇಡು ಪ್ರದೇಶ 394 ಚಕಿಮೀ. 2395 ಹೆ. ಜಮೀನಿಗೆ ಇದರಿಂದ ಪ್ರಯೋಜನ. ಕಪಿಲಾದ ಉಪನದಿಯಾದ ಹೆಬ್ಬಹಳ್ಳಕ್ಕೆ ಹೆಗ್ಗಡದೇವನಕೋಟೆಯ ಬಳಿ ಕಟ್ಟುವ ಕಟ್ಟೆಯ ಇಳಿಮೇಡು 180 ಚ.ಕಿಮೀ. ಕಾವೇರಿ ಕಣಿವೆಯ ಈ ನಾನಾ ಯೋಜನೆಗಳೆಲ್ಲ ಫಲಪ್ರದವಾದಾಗ ಒಟ್ಟು 44 ಲಕ್ಷ ಹೆ. ಗಳಿಗೆ ನೀರಾವರಿ ಸೌಲಭ್ಯ ಒದಗುವುದೆಂಬುದಾಗಿ ನಿರೀಕ್ಷಿಸಲಾಗಿದೆ. ಕಾವೇರಿ ನದಿನೀರಿನ ಬಳಕೆಯ ವಿಚಾರವಾಗಿ 1892ರಲ್ಲೂ 1924ರಲ್ಲೂ ಮೈಸೂರು ಮದ್ರಾಸು ಸರ್ಕಾರಗಳ ನಡುವೆ ಆದ ಒಪ್ಪಂದಗಳ ಪುನರ್ವಿಮರ್ಶೆ ನಡೆಯುತ್ತದೆ (1971).

ತುಂಗಾ, ಭದ್ರಾ, ತುಂಗಭದ್ರ ಯೋಜನೆಗಳಿಂದ ಈಗಾಗಲೇ 3.8 ಲಕ್ಷ ಹೆ. ಗಳಿಗೂ ಹೆಚ್ಚು ನೆಲಕ್ಕೆ ನೀರಾವರಿ ಸೌಲಭ್ಯ ಒದಗಿದೆ. ಇನ್ನು 0.58 ಲಕ್ಷ ಹೆ. ಗಳಿಗೆ ಈ ಸೌಲಭ್ಯ ವಿಸ್ತರಿಸಬಹುದು. ಹೊಸಪೇಟೆಯ ಬಳಿ ತುಂಗಭದ್ರ ನದಿಗೆ ಅಡ್ಡಲಾಗಿ ಕಟ್ಟೆಕಟ್ಟುವ ಕೆಲಸ ಆರಂಭವಾದದ್ದು 1945ರಲ್ಲಿ. ಇದೊಂದು ವಿವಿಧೋದ್ದೇಶ ಯೋಜನೆ. ಕರ್ನಾಟಕ ರಾಜ್ಯದಲ್ಲಿ 3.92 ಹೆ. ಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಇದು ಈ ರಾಜ್ಯದ ಅತ್ಯಂತ ದೊಡ್ಡ ನೀರಾವರಿ ಯೋಜನೆ. ಜೊತೆಗೆ ಇದು 1,72,500 ಕಿವ್ಯಾ ವಿದ್ಯುತ್ತನ್ನು ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಕಟ್ಟೆಯ ಎತ್ತರ 49.4 ಮೀ. ಅಗಲ 28.5 ಮೀ ಜಲಾಶಯದ ವಿಸ್ತೀರ್ಣ 482 ಚ.ಕಿಮೀ. ಇದರ ಮುಖ್ಯ ನಾಲೆಗಳಲ್ಲಿ ಎರಡು ಜಲಾಶಯದ ಬಲಗಡೆಯಿಂದಲೂ (ಕೆಳಮಟ್ಟ ಮತ್ತು ಮೇಲ್ಮಟ್ಟದ ನಾಲೆಗಳು) ಮತ್ತೊಂದು ಎಡಗಡೆಯಿಂದಲೂ ಹರಿಯುತ್ತವೆ. ಇದಲ್ಲದೆ ಸಣ್ಣ ಕಾಲುವೆಯೊಂದು ಇದೆ. ಬತ್ತ, ಕಬ್ಬು, ಹಣ್ಣು, ಹೊಗೆಸೊಪ್ಪುಗಳ ಬೆಳೆ ತೆಗೆಯಲು ನೀರು ಒದಗಿಸುವುದಲ್ಲದೆ, ಖುಷ್ಕಿ ಬೆಳೆಗೂ ಸೌಲಭ್ಯ ನೀಡುವುದು ಈ ಯೋಜನೆಯ ವೈಶಿಷ್ಟ್ಯ. 17,330 ಹೆ. ನೆಲದಲ್ಲಿ ಇಂಥ ಲಘು ನೀರಾವರಿ ಬೇಸಾಯಕ್ಕೆ ಇದು ನೆರವು ನೀಡುತ್ತದೆ. ಇದರಲ್ಲಿ ಅರ್ಧ ಭಾಗದಲ್ಲಿ ಹತ್ತಿ ಬೆಳೆಯಲಾಗುತ್ತದೆ. ಮೀನುಗಾರಿಕೆ, ತೋಟಗಾರಿಕೆಗಳಿಗೂ ಈ ಯೋಜನೆಯಿಂದ ಪ್ರೋತ್ಸಾಹ ದೊರಕಿದೆ.

ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿರುವ ಭದ್ರಾ ಜಲಾಶಯ ಯೋಜನೆಯಿಂದ ಈ ಎರಡು ಜಿಲ್ಲೆಗಳು ಹಾಗೂ ಚಿತ್ರದುರ್ಗ ಮತ್ತು ಬಳ್ಳಾರಿಗಳಿಗೂ ನೀರಾವರಿ ಸೌಕರ್ಯ ಒದಗುತ್ತದೆ. ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿಯ ಬಳಿ ಕಟ್ಟಲಾದ ಕಟ್ಟೆಗೆ ಎರಡು ಕಡೆಯೂ ನಾಲೆಗಳುಂಟು. ಇದರಿಂದ 89,020 ಹೆ. ಗಳಿಗೆ ನೀರಾವರಿ ಒದಗುತ್ತದೆ. ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ತು 25,000 ಕಿವ್ಯಾ ಈ ಕಟ್ಟೆಯ ಎತ್ತರ 59 ಮೀ. ಉದ್ದ 440 ಮೀ.

ಶಿವಮೊಗ್ಗದಿಂದ 10.6 ಕಿಮೀ. ದೂರದಲ್ಲಿ ಸಕ್ರೆಬೈಲಿನ ಹತ್ತಿರ ತುಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟೆಯ ಎರಡೂ ಬದಿಗಳ ನಾಲೆಗಳಿಂದ 7844 ಹೆ. ಗಳಿಗೆ ನೀರಾವರಿ ಸೌಲಭ್ಯ ದೊರಕುತ್ತದೆ. ಕಡಿಮೆ ಮಳೆ ಪಡೆಯುವ ಹೊನ್ನಾಳಿ ತಾಲ್ಲೂಕಿನ ರೈತರಿಗೆ ಈ ಯೋಜನೆಯಿಂದ ಹೆಚ್ಚು ಫಲ. ಅಣೆಕಟ್ಟೆಯ ಎತ್ತರ 12.2 ಮೀ. ಉದ್ದ 365.8 ಮೀ.

ನೀರಾವರಿಗೆ ಒಳಪಡಿಸಬಹುದಾದ ಅತಿ ವಿಶಾಲಪ್ರದೇಶ ಇರುವುದು ರಾಜ್ಯದ ಕೃಷ್ಣಾನದೀ ಕಣಿವೆಯಲ್ಲಿ. ನದಿಯ ಆರು ಉಪನದಿಗಳ ಪೈಕಿ ಘಟಪ್ರಭಾ ಮತ್ತು ಮಲಪ್ರಭಾ ನದಿಗಳ ನೀರನ್ನು ಬಳಸುವ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಮಲಪ್ರಭಾ ನದಿಯ ಮೇಲಣ ಕಟ್ಟೆಯ ಎತ್ತರ 55 ಮೀ ಮತ್ತು ಉದ್ದ 4575 ಮೀ ಇದರ ಬಲಭಾಗದ ನಾಲೆಯಿಂದ ಸೌಲಭ್ಯ ಪಡೆಯುವ ಪ್ರದೇಶ 1,77,780 ಹೆ. ಬೆಳಗಾಂವಿ, ಧಾರವಾಡ, ಬಿಜಾಪುರ ಜಿಲ್ಲೆಗಳ ಆಹಾರ ಪುರೈಕೆ ಇದರಿಂದ ಸಾಧ್ಯವಾಗುತ್ತದೆ. ಘಟಪ್ರಭಾ ನದಿಯ ಧೂಪದಾಳ ಕಟ್ಟೆಯಿಂದ 19 ಕಿಮೀ ಮೇಲೆ ಹಿಡ್ಕಲ್ನಲ್ಲಿ ಕಟ್ಟಲಾಗುವ ಕಟ್ಟೆಯ ಎಡಬಲ ನಾಲೆಗಳಿಂದ ಬೆಳಗಾಂವಿ ಜಿಲ್ಲೆಯ ಅಥಣಿ, ರಾಯಬಾಗ, ಗೋಕಾಕ, ಸವದತ್ತಿ ಮತ್ತು ರಾಮದುರ್ಗ ತಾಲ್ಲೂಕುಗಳಲ್ಲೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಮುಧೋಳ, ಬೀಳಗಿ ಬಾಗಲಕೋಟೆ, ಬಾದಾಮಿ ಮತ್ತು ಹುನಗುಂದ ತಾಲ್ಲೂಕುಗಳಲ್ಲೂ 2.17 ಲಕ್ಷ ಹೆ. ಗಳ ಸಾಗುವಳಿಗೆ ಸೌಲಭ್ಯ ಒದಗುತ್ತದೆ. ಇದು ರಾಜ್ಯದ ಮುಖ್ಯ ನೀರಾವರಿ ಯೋಜನೆಗಳಲ್ಲೊಂದು.

ಕೃಷ್ಣಾ ಕಣಿವೆ ಪ್ರದೇಶದ ಬಹುಭಾಗ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿದೆ. ಹಳೆಯ ಮುಂಬಯಿ ಮತ್ತು ಹೈದರಾಬಾದ್ ಕರ್ನಾಟಕದ ಅಭಾವ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಕೈಗೊಳ್ಳಲಾದ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಬಿಜಾಪುರ ಜಿಲ್ಲೆಯ ಬಾಗೇವಾಡಿ ತಾಲ್ಲೂಕಿನ ಆಲಮಟ್ಟಿ ಜಲಾಶಯ ಮತ್ತು ಗುಲ್ಬರ್ಗ ಶೋರಾಪುರ ತಾಲ್ಲೂಕಿನ ನಾರಾಯಣಪುರ ಜಲಾಶಯಗಳಿವೆ. ಆಲಮಟ್ಟಿ ಕಟ್ಟೆಯ ಎಡಭಾಗದ ನಾಲೆ ಬಿಜಾಪುರ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿಯ 2.0 ಲಕ್ಷ ಹೆ.ಗಳಿಗೂ ನಾರಾಯಣಪುರದ ಕಟ್ಟೆಯ ಎಡ ಮತ್ತು ಬಲದಂಡೆ ನಾಲೆಗಳು ಬಿಜಾಪುರ, ಗುಲ್ಬರ್ಗ ಮತ್ತು ರಾಯಚೂರು ಜಿಲ್ಲೆಗಳಲ್ಲಿ 5.6 ಲಕ್ಷ ಹೆ. ಗಳಿಗೂ ನೀರಾವರಿ ಸೌಲಭ್ಯ ಕಲ್ಪಿಸುತ್ತವೆ. ಇಡೀ ಯೋಜನೆಯಿಂದ ಸು. 4.37 ಲಕ್ಷ ಹೆ. ನೆಲಕ್ಕೆ ಪ್ರಯೋಜನವಾಗುತ್ತದೆ.

ಇವಲ್ಲದೆ ಮಧ್ಯಮ ವರ್ಗದ ನೀರಾವರಿ ಕಾರ್ಯಗಳೂ ಇಲ್ಲಿ ನಡೆದಿವೆ. ಬಿಜಾಪುರ, ಬಾಗಲಕೋಟೆ ಮತ್ತು ಬೆಳಗಾಂವಿ ಜಿಲ್ಲೆಗಳ ರಾಮನಹಳ್ಳಿ ಅರೆಶಂಕರ ಮತ್ತು ಕಲಾಸಕೋಪ್ ಕೆರೆಗಳು ಅನುಕ್ರಮವಾಗಿ 1751, 4764 ಮತ್ತು 1043 ಹೆ. ಗಳಿಗೆ ಅನುಕೂಲ, ಬೆಳಗಾಂವಿ ಜಿಲ್ಲೆಯ ಕೊಳಚಿ ಕೋಡಿ ಕಟ್ಟೆಯಿಂದ ನೀರಾವರಿ ಒದಗುವುದು 1149 ಹೆ. ಗಳಿಗೆ, ಬಿಜಾಪುರ ಜಿಲ್ಲೆಯ ಚಿತವಾಡಿ ಕೆರೆಯಿಂದ 803 ಹೆ.ಗಳಿಗೆ ಈ ಸೌಲಭ್ಯ ದೊರಕುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಯಮಗಳ್ಳಿ ಬಳಿ ಧರ್ಮಾನದಿಗೆ ಕಟ್ಟಲಾಗಿರುವ ಮಣ್ಣಿನ ಕಟ್ಟೆಯಿಂದ 10,000 ಎಕರೆಗಳಿಗೆ ನೀರಿನ ಸೌಕರ್ಯ ದೊರಕುತ್ತದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಮಂಗಳಗ್ರಾಮದ ಬಳಿ ನಾಗಿನ ನದಿಗೆ ಅಡ್ಡಲಾಗಿ ಕಟ್ಟಿದ ಮಣ್ಣಿನ ಕಟ್ಟೆಯ ಅಚ್ಚುಕಟ್ಟಿನಲ್ಲಿ 13,500 ಹೆ. ನೆಲ ನೀರಾವರಿಗೆ ಬರುತ್ತದೆ. ಇದರ ಪೈಕಿ 596 ಹೆ. ಗಳಿಗೆ ಎರಡು ಬೆಳೆಗಳ ಸೌಲಭ್ಯ ಲಭಿಸುವ ನಿರೀಕ್ಷೆಯುಂಟು. ಕರ್ನಾಟಕ ರಾಜ್ಯದ ವಿಸ್ತೀರ್ಣದಲ್ಲಿ 128 ಲಕ್ಷ ಹೆ. ವ್ಯವಸಾಯಯೋಗ್ಯ ಪ್ರದೇಶ. ಪಂಚವಾರ್ಷಿಕ ಯೋಜನೆಗಳ ಆರಂಭಕ್ಕೆ ಮೊದಲು ನೀರಾವರಿಗೆ ಒಳಪಟ್ಟಿದ್ದ ನೆಲದ ಪ್ರಮಾಣ ಶೇ. 4.9.

ಜಲವಿದ್ಯುಚ್ಛಕ್ತಿ[ಸಂಪಾದಿಸಿ]

ಕರ್ನಾಟಕ ರಾಜ್ಯದಲ್ಲಿ ಜಲವಿದ್ಯುತ್ ಅಭಿವೃದ್ಧಿ 1902ಕ್ಕೂ ಹಿಂದೆಯೇ ಆರಂಭವಾಯಿತು. ಕಾವೇರಿ ನದಿಗೆ ಶಿವಸಮುದ್ರದ ಬಳಿ 4,300 ಕಿವ್ಯಾ ಸ್ಥಾಪಿತ ಸಾಮರ್ಥ್ಯದ ಉತ್ಪಾದನಾಕೇಂದ್ರ ನಿರ್ಮಾಣವಾದದ್ದು ಆಗ. ಇದು ಭಾರತದ ಪ್ರಥಮ ದೊಡ್ಡ ಜಲವಿದ್ಯುದ್ಯೋಜನೆ. ಶಿವಸಮುದ್ರದಿಂದ ಕೋಲಾರ ಚಿನ್ನದ ಗಣಿಗಳಿಗೆ ಹಾಕಲಾದ ವಿದ್ಯುತ್ ಪ್ರೇಷಣ (ಪ್ರಸರಣ) ವ್ಯವಸ್ಥೆ ಇಡೀ ಪ್ರಪಂಚದಲ್ಲೇ ಆಗ ಅತ್ಯಂತ ಉದ್ದದ್ದಾಗಿತ್ತು. ಆ ಕೇಂದ್ರದ ವಿದ್ಯುದುತ್ಪಾದನಾ ಸಾಮರ್ಥ್ಯವನ್ನು ಮುಂದೆ 42,000 ಕಿವ್ಯಾ ಗಳಿಗೆ ಹೆಚ್ಚಿಸಲಾಯಿತು. ಶಿಂಷಾ ನದೀವಿದ್ಯುತ್ಕೇಂದ್ರ (17,200 ಕಿವ್ಯಾ) ನಿರ್ಮಾಣವಾದದ್ದು 1940ರಲ್ಲಿ.

ಶರಾವತಿ ವಿದ್ಯುದ್ಯೋಜನೆಯನ್ನು ರೂಪಿಸಿದ್ದು 1938ರಲ್ಲಿ. ಮಹಾತ್ಮಗಾಂಧಿ ಜಲವಿದ್ಯುತ್ಕೇಂದ್ರವನ್ನು ಆ ನದಿಯ ವಿದ್ಯುದ್ವಿಭವದ ಶೇ.10 ರಷ್ಟನ್ನು ಉತ್ಪಾದಿಸಲು ಯೋಜಿಸಲಾಯಿತು (1948). ನದಿಯ ಉಳಿದ ವಿಭವವನ್ನೂ ಬಳಸಿಕೊಳ್ಳಲು ಶರಾವತಿ ಕಣಿವೆ ಯೋಜನೆಯನ್ನು ಆರಂಭಿಸಲಾಯಿತು (1959). ಇದರ ಉತ್ಪಾದನಾ ಸಾಮರ್ಥ್ಯ 8,91,000 ಕಿವ್ಯಾ. 1965 ರಲ್ಲಿ ಈ ಯೋಜನೆಯ ಮೊದಲನೆಯ ಹಂತದ ಉತ್ಪಾದನೆ ಆರಂಭವಾದದ್ದು. ಭದ್ರಾ ಮತ್ತು ತುಂಗಭದ್ರಾ ಜಲಾಶಯಗಳ ಬಳಿಯೂ ವಿದ್ಯುದುತ್ಪಾದನೆಯಾಗುತ್ತದೆ. ಇವುಗಳ ಉತ್ಪಾದನ ಸಾಮರ್ಥ್ಯ 1,32,200 ಕಿವ್ಯಾ ರಾಜ್ಯದ ವಿವಿಧ ಜಲವಿದ್ಯುದ್ಯೋಜನೆಗಳ ವಿವರಗಳನ್ನು ಮುಂದೆ ಕೊಟ್ಟಿದೆ: ಯೋಜನೆಗಳು ನಿರೀಕ್ಷಿತ ವಿದ್ಯುದ್ವಿಭವ (ಮೆ.ವಾ.ಗಳಲ್ಲಿ) 1. ಶರಾವತಿ ಕಣಿವೆ ಜಲವಿದ್ಯುತ್ ಯೋಜನೆ 1300 2. ಕಾಳಿನದಿ ಜಲವಿದ್ಯುತ್ ಯೋಜನೆ 1350 3. ಬೇಡ್ತಿ ಜಲವಿದ್ಯುತ್ ಯೋಜನೆ 225 4. ಬೇಡ್ತಿ ಎರಡನೆಯ ಘಟ್ಟ 200 5. ವರಾಹಿ ಜಲವಿದ್ಯುತ್ ಯೋಜನೆ 250 6. ಅಘನಾಶಿನಿ ಜಲವಿದ್ಯುತ್ ಯೋಜನೆ 300 7. ಚಕ್ರಾನದಿ ಜಲವಿದ್ಯುತ್ ಯೋಜನೆ 75 8. ಬರಪೊಳೆ ಜಲವಿದ್ಯುತ್ ಯೋಜನೆ 125 9. ಮಹಾದಾಯಿ ಜಲವಿದ್ಯುತ್ ಯೋಜನೆ 30 10. ನೇತ್ರಾವತಿ ಜಲವಿದ್ಯುತ್ ಯೋಜನೆ 100 11. ತುಂಗಭದ್ರಾ ಎಡದಂಡೆ ನಾಲಾಕೇಂದ್ರ ವಿದ್ಯುತ್ ಅಭಿವೃದ್ಧಿ ಯೋಜನೆ 40 12. ಕಪಿಲಾ ಕಟ್ಟೆಯ ವಿದ್ಯುತ್ಗೃಹ ಯೋಜನೆ 16 13. ಹಿಡಕಲ್ ಕಟ್ಟೆಯ ವಿದ್ಯುತ್ಗೃಹ ಯೋಜನೆ 28 14. ಹೇಮಾವತಿ ಕಣಿವೆ ವಿದ್ಯುತ್ ಅಭಿವೃದ್ಧಿ ಕಾರ್ಯಕ್ರಮಗಳು 20 15. ಕೃಷ್ಣಾನದಿ ವಿದ್ಯುತ್ ಅಭಿವೃದ್ಧಿ ಕಾರ್ಯಕ್ರಮಗಳು 175 16. ಕಾವೇರಿ ಕಣಿವೆ ಜಲವಿದ್ಯುತ್ ಯೋಜನೆ 800

ಕರ್ನಾಟಕದಲ್ಲಿ ಜಲವಿದ್ಯುತ್ತಿನ ಉತ್ಪಾದನೆಯ ಭವಿಷ್ಯ ಉತ್ತಮವಾಗಿದೆ ಎನ್ನಲು ಕೆಲವು ಕಾರಣಗಳುಂಟು: 1. ಈಗಾಗಲೆ ಕಾರ್ಯಗತವಾಗಿರುವ ವಿದ್ಯುದುತ್ಪಾದನ ಕೇಂದ್ರಗಳಿಂದ ಬರುವ ವರಮಾನದಿಂದಲೇ ಮುಂದಿನ ಉತ್ಪಾದನ ಯೋಜನೆಗಳಿಗೆ ಹಣ ಹೂಡುವುದು ಸಾಧ್ಯವಾಗಬಹುದು. 2. ಇದುವರೆಗಿನ ಅನುಭವದ ಆಧಾರದ ಮೇಲೆ ಭವಿಷ್ಯದ ಯೋಜನೆಗಳಿಗೆ ಅವಶ್ಯವಾದ ತಾಂತ್ರಿಕ ಜ್ಞಾನವನ್ನು ಒದಗಿಸಬಹುದು. 3. ವಿದ್ಯುದುತ್ಪಾದನೆಗೆ ಬೇಕಾದ ಯಂತ್ರಗಳನ್ನು ಇಲ್ಲೇ ತಯಾರಿಸುವ ಸಾಧ್ಯತೆಯುಂಟು. 4. ಕೊನೆಯದಾಗಿ ಬೇಡಿಕೆ. ವಿದ್ಯುತ್ ಸರಬರಾಜು ಅಧಿಕವಾದಂತೆಲ್ಲ ಬೇಡಿಕೆಯೂ ಹೆಚ್ಚುವುದರಿಂದ ಉತ್ಪಾದನೆಗೆ ತಡೆಯುಂಟಾಗುವ ಸಂಭವವಿಲ್ಲ.

ಕರ್ನಾಟಕದಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ಇತರ ರಾಜ್ಯಗಳಿಗೂ ಸರಬರಾಜು ಮಾಡುವುದರಿಂದ ರಾಜ್ಯಕ್ಕೆ ಇದರಿಂದ ಲಾಭವೂ ಉಂಟು. ಅಲ್ಲದೆ ರಾಜ್ಯದ ವ್ಯವಸಾಯ ಮತ್ತು ಕೈಗಾರಿಕೆಗಳಿಗೆ ಅಗತ್ಯವಾದ ವಿದ್ಯುತ್ತು ಸರಬರಾಜಾಗುವ ಭರವಸೆಯಿಂದ ಆರ್ಥಿಕ ಪ್ರಗತಿ ಹೆಚ್ಚು ಸುಭದ್ರವಾಗುತ್ತದೆ.

ಕರ್ನಾಟಕದ ಎಲ್ಲಾ ವಿದ್ಯುದಾಗಾರಗಳ ಒಟ್ಟು ಜಲವಿದ್ಯುತ್ ಸ್ಥಾಪಿತ ಸಾಮರ್ಥ್ಯ1955-56ನೆ ಸಾಲಿನಲ್ಲಿ 179.2 ಮೆ.ವಾ ಗಳಾಗಿತ್ತು. ಅದು 2001-02 ರವೇಳೆಗೆ 3021 ಮೆವಾ ಗಳಿಗೆ ಹೆಚ್ಚಿತ್ತು. ಇಷ್ಟೆಲ್ಲ ಪ್ರಗತಿ ಕಂಡುಬಂದರೂ ರಾಜ್ಯದಲ್ಲಿ ವಿದ್ಯುಚ್ಛಕ್ತಿ ಅಭಾವ ಕಂಡುಬರುತ್ತಿದೆ.

ರಾಜ್ಯದ ಕೆಲಭಾಗಗಳಲ್ಲಿ ಜಲವಿದ್ಯುಚ್ಛಕ್ತಿ ಉತ್ಪಾದನೆ ಸಾಧ್ಯತೆಗಳಿವೆ. ಸಹ್ಯಾದ್ರಿ ಶ್ರೇಣಿಗಳಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುವ ಮಲೆನಾಡು ಮತ್ತು ದಕ್ಷಿಣ ಕರ್ನಾಟಕದಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುವ ಮಲೆನಾಡು ಮತ್ತು ದಕ್ಷಿಣ ಕರ್ನಾಟಕದಲ್ಲಿ ಹರಿಯುವ ನದಿಗಳಿಂದ ಹೆಚ್ಚು ಜಲ ವಿದ್ಯುಚ್ಛಕ್ತಿ ಉತ್ಪಾದನೆ ಸಾಧ್ಯ. ಈ ನದಿಗಳು ಹೆಚ್ಚು ಮಳೆಯಾಗುವ ಭಾಗಗಳಿಂದ ಹರಿದುಬರುವುದರ ಜೊತೆಗೆ ರಭಸ ಇಳಿತ ಮತ್ತು ಜಲಪಾತಗಳನ್ನು ಸೃಷ್ಟಿಸುತ್ತವೆ. ರಾಜ್ಯದ ಜಲವಿದ್ಯುಚ್ಛಕ್ತಿಯನ್ನು ವಿವಿಧ ಉದ್ದೇಶಗಳಿಗೆ ಬಳಸಲಾಗುವುದು. ಉದಾ: ಕೈಗಾರಿಕೆ, ಗೃಹಬಳಕೆ, ನೀರಾವರಿ, ಬೀದಿ ದೀಪ ಇತ್ಯಾದಿ. ಆದರೆ ಶೇ. 70 ಜಲವಿದ್ಯುಚ್ಛಕ್ತಿ ಕೈಗಾರಿಕೆಗಳಿಗೆ ಬಳಕೆಯಾಗುವುದು ವಿಶೇಷ ಸಂಗತಿ. ಕರ್ನಾಟಕ ವಿದ್ಯುತ್ ನಿಗಮವು ಹೊಸ ಜಲವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರಗಳ ನಿರ್ಮಾಣಕ್ಕೆ ಆಯೋಜಿಸುತ್ತಿದೆ.

ಕೈಗಾರಿಕೆಗಳು[ಸಂಪಾದಿಸಿ]

ಕರ್ನಾಟಕದಲ್ಲಿ ಸಣ್ಣದೊಡ್ಡ ಕೈಗಾರಿಕೆಗಳ ಬೆಳೆವಣಿಗೆಗೆ ಅನುಕೂಲಕರವಾದ ಪರಿಸ್ಥಿತಿಯುಂಟು. ವಿದ್ಯುತ್ತು, ಖನಿಜ ಸಂಪತ್ತು, ವ್ಯವಸಾಯೋತ್ಪನ್ನ, ವಾಯುಗುಣ, ಜನಬಲ-ಎಲ್ಲವೂ ಈ ರಾಜ್ಯದಲ್ಲಿ ಧಾರಾಳ. ವಿದ್ಯುತ್ ವಿಭವ ಹಾಗೂ ಉತ್ಪಾದನೆಗಳ ವಿಚಾರವನ್ನು ಹಿಂದೆಯೇ ವಿವೇಚಿಸಲಾಗಿದೆ. ಖನಿಜಗಳ ವಿಚಾರದಲ್ಲೂ ಕರ್ನಾಟಕಕ್ಕೆ ಕೊರತೆಯಿಲ್ಲ. ರಾಜ್ಯದ ಭೂಗರ್ಭದಲ್ಲಿ 200-250 ಕೋಟಿ ಟನ್ ಉತ್ತಮ ದರ್ಜೆಯ ಕಬ್ಬಿಣದ ಅದಿರು, 100-120 ಲಕ್ಷ ಟನ್ ಮ್ಯಾಂಗನೀಸ್, ಬಾಕ್ಸೈಟ್, ಮ್ಯಾಗ್ನಸೈಟ್, ಕ್ರೋಮೈಟ್, ಸುಣ್ಣಕಲ್ಲು, ಕೊರಂಡಂ, ಎಮರಿ, ಕಲ್ನಾರು, ಜೇಡಿಮಣ್ಣು ಮುಂತಾದವು ಇವೆ. ನೆಲದಿಂದ ತೆಗೆಯುತ್ತಿರುವ ಕಬ್ಬಿಣದ ಅದಿರು ಮತ್ತು ಮ್ಯಾಂಗನೀಸುಗಳಲ್ಲಿ ಬಹುಭಾಗ ಹೊರದೇಶಗಳಿಗೆ ನಿರ್ಯಾತವಾಗುತ್ತಿದೆ. ರಾಜ್ಯದ ಕಬ್ಬಿಣದ ಅದಿರನ್ನು ಉಪಯೋಗಿಸಿಕೊಂಡು ಉಕ್ಕು ತಯಾರಿಸುತ್ತಿರುವ ಉದ್ಯಮವೆಂದರೆ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ. ಫೆರೋ-ಮ್ಯಾಂಗನೀಸ್ ತಯಾರಿಸುವ 2 ಕಾರ್ಖಾನೆಗಳು ರಾಜ್ಯದಲ್ಲಿವೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿ ಜಿಂದಾಲ್ ಉಕ್ಕಿನ ಕಾರ್ಖಾನೆ ಇದೆ.

ಸುಣ್ಣಕಲ್ಲು ಮತ್ತು ಬಾಕ್ಸೈಟುಗಳನ್ನು ಕೈಗಾರಿಕೆಗಳಿಗೆ ಬಳಸಿಕೊಳ್ಳುವ ಪ್ರಯತ್ನವೂ ನಡೆದಿದೆ. ಕರ್ನಾಟಕದ ಸಿಮೆಂಟ್ ಕಾರ್ಖಾನೆಗಳ ವಾರ್ಷಿಕ ಉತ್ಪಾದನಾ ಸಾಮರ್ಥ್ಯ24ಲಕ್ಷ ಟನ್.

ಕರ್ನಾಟಕದಲ್ಲಿ ಕೈಗಾರಿಕೆಗಳಿಗೆ ಉಪಯುಕ್ತವಾದ ಎರಡು ಮುಖ್ಯ ವ್ಯವಸಾಯೋತ್ಪನ್ನಗಳೆಂದರೆ ಕಬ್ಬು ಮತ್ತು ಹತ್ತಿ. ರಾಜ್ಯದಲ್ಲಿ 33 ಕಾರ್ಯನಿರತ ಸಕ್ಕರೆ ಕಾರ್ಖಾನೆಗಳಿವೆ. ಇವುಗಳ ಸರಾಸರಿ ವಾರ್ಷಿಕ ಉತ್ಪಾದನೆ 2.9 ಲಕ್ಷ ಟನ್. ಇದು ಭಾರತದ ಒಟ್ಟು ಉತ್ಪನ್ನದಲ್ಲಿ ಶೇ. 6ರಷ್ಟಾಗುತ್ತದೆ. ಕಬ್ಬಿನ ಸಿಪ್ಪೆ (ಬಗ್ಯಾಸ್), ಕಾಕಂಬಿ (ಮೊಲ್ಯಾಸೆಸ್) ಇವು ಸಕ್ಕರೆ ಕೈಗಾರಿಕೆಯ ಎರಡು ಮುಖ್ಯ ಉಪೋತ್ಪನ್ನಗಳು. ಕಬ್ಬಿನ ಸಿಪ್ಪೆಯಿಂದ ಕಾಗದವನ್ನೂ ಕಾಕಂಬಿಯಿಂದ ಮದ್ಯಸಾರ (ಆಲ್ಕೊಹಾಲ್) ಮತ್ತು ದನಗಳ ಮೇವನ್ನೂ ತಯಾರಿಸಲಾಗುತ್ತದೆ.

ಕರ್ನಾಟಕದ ಕೈಗಾರಿಕೆಗಳ ಪೈಕಿ ಜವಳಿ ಉದ್ಯಮ ಮುಖ್ಯವಾದದ್ದು. ರಾಜ್ಯದಲ್ಲಿ 44 ದೊಡ್ಡ ಹತ್ತಿ ಗಿರಣಿಗಳಿವೆ. ಇವುಗಳ ಪೈಕಿ 32 ನೂಲು ತೆಗೆಯುವವು; ಉಳಿದವು (12) ಸಂಯೋಜಿತ (ಕಾಂಪೊಸಿಟ್) ಗಿರಣಿಗಳು, ಇವುಗಳ ಒಟ್ಟು ಕದಿರುಗಳ ಸಂಖ್ಯೆ 10,68,000; ಮಗ್ಗಗಳು 5434. ನೂಲಿನ ವಾರ್ಷಿಕ ಉತ್ಪನ್ನ ಸು. 67,000 ಟನ್; ಹತ್ತಿಯ ಬಟ್ಟೆ ಸು. 5.1 ದಶಲಕ್ಷ ಮೀ ಇವುಗಳಲ್ಲದೆ ಅನೇಕ ಸಣ್ಣ ವಿದ್ಯುತ್ ಮಗ್ಗಗಳೂ ಕೈಮಗ್ಗಗಳೂ ಹತ್ತಿ ಮತ್ತು ರೇಷ್ಮೆ ಬಟ್ಟೆಗಳ ಉತ್ಪಾದನೆಯಲ್ಲಿ ನಿರತವಾಗಿವೆ.

ಕರ್ನಾಟಕದ ಅರಣ್ಯೋತ್ಪನ್ನಗಳ ಪೈಕಿ ಕೈಗಾರಿಕೆಗಳಿಗೆ ಉಪಯುಕ್ತವಾದವು ಅನೇಕ. ತೇಗ, ಬೀಟೆ, ಶ್ರೀಗಂಧ, ಮೃದುಮರಗಳು, ಬಿದಿರು-ಇವು ಮುಖ್ಯ. ಶ್ರೀಗಂಧ ವಿಶಿಷ್ಟವಾದದ್ದು. ಸಾಬೂನು, ರಾಸಾಯನವಸ್ತು ಮತ್ತು ಕಾಂತಿವರ್ಧಕ ವಸ್ತು ತಯಾರಿಕೆಯಲ್ಲಿ ಉಪಯುಕ್ತವಾದ ಗಂಧದೆಣ್ಣೆಯನ್ನು ಇದರಿಂದ ತೆಗೆಯಲಾಗುತ್ತದೆ. ರಾಜ್ಯದಲ್ಲಿರುವ ಗಂಧದೆಣ್ಣೆ ಕಾರ್ಖಾನೆಗಳು ಎರಡು. ಇವುಗಳ ವಾರ್ಷಿಕ ಉತ್ಪನ್ನ ಇಡೀ ಭಾರತದ ಉತ್ಪನ್ನದ ಶೇ. 80ರಷ್ಟು..

ಇನ್ನೊಂದು ಮುಖ್ಯ ಅರಣ್ಯೋತ್ಪನ್ನವಾದ ಬಿದಿರನ್ನು ಆಧರಿಸಿ ಕಾಗದ ತಯಾರಿಸಬಹುದು. ರಾಜ್ಯದಲ್ಲಿ 14 ಕಾಗದ ಕಾರ್ಖಾನೆಗಳಿವೆ. ರೆಯಾನ್ ದರ್ಜೆಯ ಮರದ ತಿರುಳು ತಯಾರಿಕೆ ಇನ್ನೊಂದು ಉದಿತೋದಿತ ಕೈಗಾರಿಕೆ. ಮುದ್ರಣಕಾಗದ ತಯಾರಿಕೆಗೆ ರಾಜ್ಯದಲ್ಲಿ ಸೌಲಭ್ಯಗಳಿವೆ. ಪ್ಲೈವುಡ್, ಚಿಪ್ಬೋರ್ಡ್, ಮರ ಉಣ್ಣೆ ಮುಂತಾದವನ್ನು ತಯಾರಿಸುವ ಅನೇಕ ಕಾರ್ಖಾನೆಗಳುಂಟು. ರಾಜ್ಯದಲ್ಲಿ ಪ್ಲೈವುಡ್ಡಿನ ಉತ್ಪಾದನೆ 120 ಲಕ್ಷ ಘನ ಅಡಿ. ಇದರಲ್ಲಿ ಒಂದು ಭಾಗ ನಿರ್ಯಾತವಾಗುತ್ತದೆ.

ಲವಣ ಕೈಗಾರಿಕೆಯ ಬೆಳೆವಣಿಗೆಗೆ ಸಂದಿರುವ ಪ್ರಾಮುಖ್ಯ ಅಲ್ಪವೇನಲ್ಲ. ಅನೇಕ ರಸಾಯನ ಕೈಗಾರಿಕೆಗಳಿಗೆ ಇದು ಮೂಲ ಸಾಮಗ್ರಿಯಾದ್ದರಿಂದಲೇ ಇದಕ್ಕೆ ಈ ಪ್ರಾಶಸ್ತ್ಯ. ಕಾಸ್ಟಿಕ್ ಸೋಡ, ಹೈಡ್ರೊಕ್ಲೋರಿಕ್ ಆಮ್ಲ ಮುಂತಾದ ಅನೇಕ ಕೈಗಾರಿಕೆಗಳು ಸ್ಥಾಪಿತವಾಗುವ ಹಂತದಲ್ಲಿವೆ. ಕರ್ನಾಟಕ ರೇಷ್ಮೆ ಕೈಗಾರಿಕೆ ಪ್ರಾಚೀನವಾದದ್ದು. ಇದು ರಾಜ್ಯದ ಮುಖ್ಯ ಕೈಗಾರಿಕೆಗಳಲ್ಲೊಂದು. ರೇಷ್ಮೆ ಸುತ್ತುವ, ಬಟ್ಟೆ ನೇಯುವ ಕಾರ್ಖಾನೆಗಳೂ ರಾಜ್ಯದಲ್ಲಿವೆ. ರಾಜ್ಯದ ವಾರ್ಷಿಕ ರೇಷ್ಮೆ ಬಟ್ಟೆ ಉತ್ಪಾದನೆ 2.6 ಲಕ್ಷ ಟನ್ನು. ರಾಜ್ಯದಲ್ಲಿ ಸು. 22,800 ರೇಷ್ಮೆ ಕೈಮಗ್ಗಗಳು ಮತ್ತು 23,800 ಯಂತ್ರಚಾಲಿತ ಮಗ್ಗಗಳಿವೆ. ಇವೆಲ್ಲ ಸಾಧನಸಾಮಗ್ರಿ ಮೂಲವಾದ ಕೈಗಾರಿಕೆಗಳು. ಇವಲ್ಲದೆ ಎಲೆಕ್ಟ್ರಾನಿಕ್ಸ್‌, ವಿದ್ಯುತ್ ಎಂಜಿನಿಯರಿಂಗ್, ಯಂತ್ರೀಯ ಎಂಜಿನಿಯರಿಂಗ್ ಕೈಗಾರಿಕೆಗಳೂ ರಾಜ್ಯದಲ್ಲಿ ಬೆಳೆದಿವೆ. ಕರ್ನಾಟಕ ಕೆಲವು ಮುಖ್ಯ ಕೈಗಾರಿಕೆಗಳ ಉತ್ಪಾದನೆಯನ್ನು (2002-03) ಮುಂದೆ ಕೊಟ್ಟಿದೆ;

ಕರ್ನಾಟಕದಲ್ಲಿ ಆಯ್ದ ಕೈಗಾರಿಕೆಗಳ ಉತ್ಪಾದನೆ 2001-02 ಕೈಗಾರಿಕೆ ಘಟಕ ಉತ್ಪಾದನೆ ಅಲ್ಯೂಮಿನಿಯಂ (ಲಕ್ಷಟನ್ನುಗಳಲ್ಲಿ) 0.33 ಕಬ್ಬಿಣ ಮತ್ತು ಉಕ್ಕು 1.74 ಮಾರಾಟ ಉಕ್ಕು 0.87 ಗಟ್ಟಿ ಉಕ್ಕು 1.14 ಕಾಗದ 2.71 ಸಕ್ಕರೆ 2.88 ರಾಸಾಯನಿಕ ಗೊಬ್ಬರ 14.25 ಸಿಮೆಂಟ್ 49.60 ಸಿಗರೇಟ್ (ಮಿಲಿಯನ್ಗಳಲ್ಲಿ) 19378.00 ಕೈಗಡಿಯಾರಗಳು (ಲಕ್ಷಗಳಲ್ಲಿ) 2.02 ರೇಷ್ಮೆ ಬಟ್ಟೆ (ಲಕ್ಷ ಮೀ) 264.80 ಹತ್ತಿದಾರ (000 ಟನ್ನು) 67.00 ಹತ್ತಿ ಬಟ್ಟೆ (ದಶಲಕ್ಷ ಮೀ) 5.10 (ಆಧಾರ : ಆರ್ಥಿಕ ಸಮೀಕ್ಷೆ 2002-03)

ರಾಜ್ಯದ ಮುಖ್ಯ ಬೃಹದ್ಗಾತ್ರ ಕೈಗಾರಿಕೆಗಳನ್ನೂ ಅವುಗಳಿರುವ ಸ್ಥಳಗಳನ್ನೂ ಮುಂದೆ ಕೊಟ್ಟಿದೆ: ಕೈಗಾರಿಕೆ ಸ್ಥಳಗಳು ಜವಳಿ ಬೆಂಗಳೂರು, ದಾವಣಗೆರೆ, ಬಳ್ಳಾರಿ, ರಾಯಚೂರು, ಹುಬ್ಬಳ್ಳಿ, ಗದಗ, ಇಳಕಲ್, ಗುಳೇದಗುಡ್ಡ. ಗೋಕಾಕ, ಗುಲ್ಬರ್ಗ, ರಬಕವಿ, ಬಾದಾಮಿ, ಬಾಗಲಕೋಟೆ, ನಂಜನಗೂಡು, ಚಾಮರಾಜನಗರ ಎಂಜಿನಿಯರಿಂಗ್ ಬೆಂಗಳೂರು, ಹರಿಹರ ಖನಿಜ ಮತ್ತು ಲೋಹ ಬೆಂಗಳೂರು, ಭದ್ರಾವತಿ, ಬಳ್ಳಾರಿ, ಕೋಲಾರ, ಶಿವಮೊಗ್ಗ ಆಹಾರ, ಪಾನೀಯ, ಹೊಗೆಸೊಪ್ಪು ಬೆಂಗಳೂರು ರಾಸಾಯನಿವಸ್ತು, ಬಣ್ಣ ಮುಂತಾದವು ಬೆಂಗಳೂರು, ಮೈಸೂರು, ಮಂಗಳೂರು ಕಾಗದ, ಮುದ್ರಣ ಭದ್ರಾವತಿ, ನಂಜನಗೂಡು, ದಾಂಡೇಲಿ, ಮುಂಡಗೋಡ, ಮುನಿರಾಬಾದ, ಎಡೆಯೂರು, ಮಂಡ್ಯ, ಬೆಂಗಳೂರು ಮರ, ಕಲ್ಲು ಮತ್ತು ಗಾಜು ಕೆಲಸ ರಾಜ್ಯಾದ್ಯಂತ ತೊಗಲು, ಚರ್ಮ ಹದ, ಸರಕು ತಯಾರಿಕೆ ಬೆಂಗಳೂರು ಹತ್ತಿ ಬಿಡಿಸುವ, ಒತ್ತುವ ಕೈಗಾರಿಕೆ ದಾವಣಗೆರೆ, ಬೆಳಗಾಂವಿ, ಬಳ್ಳಾರಿ, ಧಾರವಾಡ, ಗುಲ್ಬರ್ಗ, ರಾಯಚೂರು ಮೀನುಗಾರಿಕೆ ಮಂಗಳೂರು, ಕಾರವಾರ. ರಾಜ್ಯ ಸರ್ಕಾರದ ಮುಖ್ಯ ಕೈಗಾರಿಕೆಗಳನ್ನೂ ಅವುಗಳ ಸ್ಥಳಗಳನ್ನೂ ಮುಂದೆ ಕೊಟ್ಟಿದೆ: ಕೇಂದ್ರಿಯ ಕೈಗಾರಿಕಾ ಕಾರ್ಯಾಗಾರ ಬೆಂಗಳೂರು ಸರ್ಕಾರಿ ಕೇಂದ್ರಿಯ ಕಾರ್ಯಾಗಾರ ಮಡಿಕೇರಿ ಸರ್ಕಾರಿ ವಿದ್ಯುತ್ ಕಾರ್ಖಾನೆ ಬೆಂಗಳೂರು ಜೈ ಹಿಂದ್ ಮರಕೊಯ್ಯುವ ಕಾರ್ಖಾನೆ ದಾಂಡೇಲಿ ಸರ್ಕಾರಿ ಸಾಬೂನು ಕಾರ್ಖಾನೆ ಬೆಂಗಳೂರು ಸರ್ಕಾರಿ ಪಿಂಗಾಣಿ ಕಾರ್ಖಾನೆ ಬೆಂಗಳೂರು ಸರ್ಕಾರಿ ಗಂಧದ ಎಣ್ಣೆ ಕಾರ್ಖಾನೆ ಮೈಸೂರು, ಶಿವಮೊಗ್ಗ ಸರ್ಕಾರಿ ಸ್ಪನ್ ರೇಷ್ಮೆ ಕಾರ್ಖಾನೆ ಚನ್ನಪಟ್ಟಣ ಮೈಸೂರು ರೇಷ್ಮೆ ಫಿಲೇಚರ್ ಕನಕಪುರ, ಕೊಳ್ಳೆಗಾಲ ಮೈಸೂರು ಮೈಸೂರು ಚರ್ಮ ಹದ ಮಾಡುವ (ಕ್ರೋಂಟ್ಯಾನಿಂಗ್) ಕಂಪನಿ ಬೆಂಗಳೂರು ಹಟ್ಟಿ ಚಿನ್ನದ ಗಣಿ ಹಟ್ಟಿ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ ಮೈಸೂರು ರೇಡಿಯೋ ಮತ್ತು ವಿದ್ಯುತ್ ತಯಾರಿಕೆ ಕಾರ್ಖಾನೆ ಬೆಂಗಳೂರು ಮೈಸೂರು ಸಕ್ಕರೆ ಕಂಪನಿ ಮಂಡ್ಯ ಸರ್ಕಾರದ ಹೊಸ ವಿದ್ಯುತ್ ಕಾರ್ಖಾನೆ ಬೆಂಗಳೂರು ಕೇಂದ್ರ ಸರ್ಕಾರದ ಉದ್ಯಮಗಳು ಭಾರತ ಅರ್ಥ್ ಮೂವರ್ಸ್‌ ಲಿಮಿಟೆಡ್ ಬೆಂಗಳೂರು ಭಾರತ ಎಲೆಕ್ಟ್ರಾನಿಕ್ಸ್‌ ಲಿ. ಬೆಂಗಳೂರು ಹಿಂದೂಸ್ತಾನ್ ಮಷೀನ್ ಟೂಲ್ಸ್‌ ಲಿ. ಬೆಂಗಳೂರು ಕೋಲಾರ ಚಿನ್ನದ ಗಣಿ ಉದ್ಯಮಗಳು ಕೋಲಾರ ಚಿನ್ನದ ಗಣಿ ಹಿಂದೂಸ್ತಾನ್ ಏರೊನಾಟಿಕ್ಸ್‌ ಲಿಮಿಟೆಡ್ ಬೆಂಗಳೂರು ಇಂಡಿಯನ್ ಟೆಲಿಪೋನ್ ಕೈಗಾರಿಕೆ ಲಿಮಿಟೆಡ್ ಬೆಂಗಳೂರು ಆಟೋಮೋಟಿವ್ ಆಕ್ಸಲ್ ಮೈಸೂರು ಸರ್ಕಾರಿ ಸ್ವಾಮ್ಯದ ಉಕ್ಕು ಪ್ರಾಧಿಕಾರ: ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಲಿಮಿಟೆಡ್ ಭದ್ರಾವತಿ ಬೆಂಗಳೂರಿನಲ್ಲಿ ಹಿಂದೂಸ್ತಾನ್ ಮಷೀನ್ ಟೂಲ್ಸ್‌ ಸಂಸ್ಥೆಯ ಅಂಗವಾಗಿ ಸ್ಥಾಪಿತವಾಗಿರುವ ಗಡಿಯಾರ ಕಾರ್ಖಾನೆ ವರ್ಷಕ್ಕೆ 5 ಲಕ್ಷ ಕೈಗಡಿಯಾರಗಳನ್ನು ತಯಾರಿಸುವ ಸಾಮರ್ಥ್ಯಹೊಂದಿರುವಂತೆ ಅದನ್ನು ಯೋಜಿಸಲಾಗಿತ್ತು. ಬೆಳಗಾಂವಿಯ ಬಳಿ ವರ್ಷಕ್ಕೆ 30,000 ಟನ್ ಅಲ್ಯೂಮಿನಿಯಂ ಗಟ್ಟಿ ತಯಾರಿಸುವ ಕಾರ್ಖನೆಯೊಂದನ್ನು ಸ್ಥಾಪಿಸಲಾಗುತ್ತದೆ. ಮಂಗಳೂರಿನ ಸೀಮೆಗೊಬ್ಬರ ಕಾರ್ಖಾನೆ ಇನ್ನೊಂದು ಮುಖ್ಯ ಉದ್ಯಮ. ಕರ್ನಾಟಕ ರಾಜ್ಯದಲ್ಲಿರುವ ಕುಶಲ ಕೈಗಾರಿಕೆಗಳೂ ಗೃಹ ಕೈಗಾರಿಕೆಗಳೂ ಅನೇಕ. ಕೆಲವು ಮುಖ್ಯ ಗೃಹ ಕೈಗಾರಿಕೆಗಳನ್ನೂ ಅವುಗಳ ಕೇಂದ್ರಗಳನ್ನೂ ಮುಂದೆ ಕೊಟ್ಟಿದೆ: ಮೆರಗು ಸರಕು (ಲ್ಯಾಕರ್ವೇರ್) ಚನ್ನಪಟ್ಟಣ, ಗೋಕಾಕ ನೆಲಮಂಗಲ ಚಿಕ್ಕಮಗಳೂರು ಶಿವಮೊಗ್ಗ ಗಂಧದ ಗುಡಿಗಾರಿಕೆ ಸಾಗರ, ಸೊರಬ ಮೈಸೂರು ದಂತ ಕೆಲಸ ಸಾಗರ, ಸೊರಬ ಮೈಸೂರು ಹಿತ್ತಾಳೆ ಸಾಮಾನು ತಯಾರಿಕೆ ನೆಲಮಂಗಲ ಬೆತ್ತದ ಕೆಲಸ ಮೈಸೂರು ಚಿಕ್ಕಮಗಳೂರು ಶಿವಮೊಗ್ಗ, ಸಾಗರ ಗಾಜಿನ ಬಳೆ ಯಶವಂತಪುರ ಪೋಡಗೇರಿ ಚಾಪೆ ಹೆಣಿಗೆ ಕಡಕೊಳ, ಕೆಂಗೇರಿ ಅಮೃತೂರು, ನಾಗಮಂಗಲ, ಹಾಸನ ಕುಂಬೂರು ಆನಂದಾಪುರ ಹಿರಿಯೂರು ಚರ್ಮದ ಹೊಲಿಗೆ ಬೀರೂರು, ಸಾಗರ ದೊಡ್ಡಸಿದ್ದವನಹಳ್ಳಿ ಇಂಡಿ, ರಾಮದುರ್ಗ ಅಶಾನಿ, ಸವದತ್ತಿ ಕಾರವಾರ ಮಡಕೆ ಕುಡಿಕೆ ರಾಮನಗರ ಖಾನಾಪುರ ಮಡಿಕೆಬೀಡು ಕೃಷ್ಣರಾಜಪುರ ಹೆಂಚು ಮಂಗಳೂರು ಹಗ್ಗ, ಹುರಿ ಪದಾರ್ಥ ಮಂಗಳೂರು ಕಾರವಾರ ಅಗರಬತ್ತಿ ಮೈಸೂರು ಬೆಂಗಳೂರು ಹತ್ತಿಯ ಹೆಣಿಗೆವಸ್ತು ಷಹಾಪುರ ಕಂಪ್ಯುಟರ್ ಟಿ.ವಿ. ಎಲೆಕ್ಟ್ರಾನಿಕ್ಸ್‌ ಬೆಂಗಳೂರು ಬೆಂಗಳೂರು, ಬೆಳಗಾಂವಿ, ತುಮಕೂರು, ಹುಬ್ಬಳ್ಳಿ, ಹೊಸಪೇಟೆ, ಭದ್ರಾವತಿ, ಮಂಗಳೂರು-ಇವು ಸಣ್ಣ ಕೈಗಾರಿಕೆಗಳ ಮುಖ್ಯ ಕೇಂದ್ರಗಳು. ಸೈಕಲ್ ಡೈನಮೊ ದೀಪ, ಕೇಂದ್ರ ಲೇತು, ಮರ ಗೆಲಸ ಯಂತ್ರ, ರಂಧ್ರ ಒತ್ತುಯಂತ್ರ ಇದ್ದಲಿನ ಇಸ್ತ್ರಿಪೆಟ್ಟಿಗೆ, ಕಬ್ಬಿಣೇತರ ಲೋಹಗಳ ಪೂಜಾ ಸಲಕರಣೆ, ಇವಕ್ಕೆ ಅಖಿಲ ಭಾರತ ಬೇಡಿಕೆಯಿದೆ. ಕೈಗಾರಿಕೆಗಳ ಪ್ರಗತಿಯಲ್ಲಿ ಭಾರತದ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಎಂಟನೆಯ ಸ್ಥಾನ. 2004ರಲ್ಲಿ ರಾಜ್ಯದಲ್ಲಿ 9625 ನೋಂದಣಿಯಾದ ಕಾರ್ಖಾನೆಗಳಿದ್ದುವು. ಕಾರ್ಮಿಕರ ಸಂಖ್ಯೆ 9.6 ಲಕ್ಷ. ಕರ್ನಾಟಕದ ಸ್ವಾಭಾವಿಕ ವಿಭಾಗಗಳಿಗೆ ಅನುಗುಣವಾಗಿ ಸಣ್ಣ ದೊಡ್ಡ ಕೈಗಾರಿಕೆಗಳ ಹಬ್ಬುಗೆಗಳ ರೀತಿಯನ್ನು ಮುಂದೆ ವಿವೇಚಿಸಲಾಗಿದೆ. ಕರಾವಳಿ ಪ್ರದೇಶದಲ್ಲಿ ಉತ್ತರಕ್ಕಿಂತ ದಕ್ಷಿಣ ಭಾಗದಲ್ಲೇ ಬೃಹದ್ಗಾತ್ರದ ಕೈಗಾರಿಕೆಗಳ ಸಂಖ್ಯೆ ಹೆಚ್ಚು. ಮಂಗಳೂರು, ಉಡುಪಿ, ಮಣಿಪಾಲಗಳಲ್ಲಿ ಅನೇಕ ದೊಡ್ಡ ಹಾಗು ಮಧ್ಯಮ ಗಾತ್ರದ ಮುದ್ರಣಾಲಯಗಳಿವೆ. ಮಂಗಳೂರಿನಲ್ಲಿರುವ ಲೋಹ ವಸ್ತು ತಯಾರಿಕಾ ಕೇಂದ್ರಗಳ ಜೊತೆಗೆ ಎಂಜಿನಿಯರಿಂಗ್ ಕೈಗಾರಿಕೆಗಳೂ ಇವೆ. ಉಡುಪಿ, ಕುಮಟಗಳಲ್ಲೂ ಸಣ್ಣ ಎಂಜಿನಿಯರಿಂಗ್ ಕೇಂದ್ರಗಳಿವೆ. ವ್ಯವಸಾಯಾಧಾರಿತ ಕೈಗಾರಿಕೆಗಳಿರುವುದು ಬಹುತೇಕ ದಕ್ಷಿಣದಲ್ಲೇ. ಮಂಗಳೂರಿನ ಗೋಡಂಬಿ ಮತ್ತು ಕಾಫಿó ಪರಿಷ್ಕರಣ ಹೊಗೆಸೊಪ್ಪು ಮತ್ತು ಬೀಡಿ ಕಾರ್ಖಾನೆಗಳನ್ನು ಇಲ್ಲಿ ಉಲ್ಲೇಖಿಸಬಹುದು. ಅಕ್ಕಿ ಮತ್ತು ಎಣ್ಣೆ ಗಿರಣಿಗಳೂ ಇವೆ. ಮಂಗಳೂರಿನಲ್ಲೂ ಉಡುಪಿಯಲ್ಲೂ ಕೆಲವು ಜವಳಿಯ ಉದ್ಯಮಗಳುಂಟು. ಮಂಗಳೂರಿನ ಇನ್ನೆರಡು ಸಣ್ಣ ಕೈಗಾರಿಕೆಗಳೆಂದರೆ ಸಾಬೂನು ಮತ್ತು ರಸಾಯನವಸ್ತು ತಯಾರಿಕೆ. ಹಂಚು ತಯಾರಿಕೆಯೇ ಕರಾವಳಿಯ ಅತ್ಯಂತ ಮುಖ್ಯವಾದ ದೊಡ್ಡ ಕೈಗಾರಿಕೆ. ಇಲ್ಲಿರುವ 45 ಹೆಂಚಿನ ಕಾರ್ಖಾನೆಗಳಿವೆ ಹಂಚುಗಳಿಗೆ ಇಡೀ ಕರ್ನಾಟಕ ರಾಜ್ಯದಲ್ಲೂ ಭಾರತದ ಪಶ್ಚಿಮ ತೀರದಲ್ಲೂ ಬೇಡಿಕೆಯಿರುವುದಲ್ಲದೆ ಇದು ಶ್ರೀಲಂಕ ಮುಂಬಯಿಯ ಮುಖಾಂತರವಾಗಿ ಪೂರ್ವ ಆಫ್ರಿಕ, ಇರಾನ್ ಮತ್ತು ಮಲೇಷ್ಯಗಳಿಗೂ ರಫ್ತಾಗುತ್ತದೆ. ಆದರೆ ಆಸ್ಬೆಸ್ಟಸ್ ತಗಡಿನೊಂದಿಗೂ ಕೇರಳದ ಹಂಚಿನೊಂದಿಗೂ ಇದು ಸ್ಪರ್ಧಿಸಬೇಕಾಗಿ ಬಂದಿರುವುದರಿಂದ ಇದರ ಉತ್ಪಾದನೆ ಈಚಿನ ವರ್ಷಗಳಲ್ಲಿ ಕುಗ್ಗಿದೆ, ಇದಕ್ಕೆ ಅಗತ್ಯವಾದ ಮಣ್ಣಿಗೆ ಕರಾವಳಿಯಲ್ಲಿ ಕೊರತೆಯಿಲ್ಲ. ಕಡಲ ಕಡೆಯ ಸಾರಿಗೆಸೌಲಭ್ಯ, ಸೌದೆ, ನೆರೆಯ ಮಾರುಕಟ್ಟೆಯ ಬೇಡಿಕೆ-ಇವು ಈ ಕೈಗಾರಿಕೆಯ ಬೆಳೆವಣಿಗೆಗೆ ಕಾರಣವಾದ ಮುಖ್ಯ ಅಂಶಗಳು. ಕರಾವಳಿಯ ಪಟ್ಟಣಗಳಲ್ಲಿ ಮರದಲಾಂಬಿಯ ಕೇಂದ್ರಗಳೂ ಉಂಟು, ಕರಾವಳಿಯಲ್ಲಿ ಸಣ್ಣ ಕೈಗಾರಿಕೆ, ಜವಳಿ ಕೈಗಾರಿಕೆ, ದೋಣಿ ನಿರ್ಮಾಣ, ಮರಗೆಲಸ ಮತ್ತು ಹಗ್ಗ ಹುರಿ ಸರಕು ತಯಾರಿಕೆ ಉಪ ಕಸಬುಗಳು. ಮೈಸೂರು-ಬೆಂಗಳೂರು-ಕೋಲಾರ ಚಿನ್ನದ ಗಣಿ ಪ್ರದೇಶದೊಂದಿಗಾಗಲಿ, ಹುಬ್ಬಳ್ಳಿ-ಧಾರವಾಡ-ಬೆಳಗಾಂವಿ ಪ್ರದೇಶದೊಂದಿಗಾಗಲಿ ಹೋಲಿಸಿದರೆ ಮಲೆನಾಡಿನಲ್ಲಿ ದೊಡ್ಡ ಕೈಗಾರಿಕೆಗಳು ಕಡಿಮೆ. ಈಗಾಗಲೇ ಬೆಳೆದಿರುವ ಕೈಗಾರಿಕೆಗಳನ್ನು ಇಲ್ಲಿ ವಿವೇಚಿಸಬಹುದು. ಭದ್ರಾವತಿಯ ಕಬ್ಬಿಣ-ಉಕ್ಕು ಕಾರ್ಖಾನೆ ಅತಿ ದೊಡ್ಡದು. ಪಕ್ಕದ ಕಾಗದದ ಕಾರ್ಖಾನೆಯೂ ದೊಡ್ಡದು. ದಾಂಡೇಲಿಯಲ್ಲಿ ಒಂದು ಕಾಗದದ ಕಾರ್ಖಾನೆಯೂ ಲೋಹ ಕಾರ್ಖಾನೆಯೂ ಇವೆ. ಚಿಕ್ಕಮಗಳೂರಿನಲ್ಲಿ ಕೆಲವು ಸಣ್ಣ ಎಂಜಿನಿಯರಿಂಗ್ ಉದ್ಯಮಗಳಿವೆ. ಭದ್ರಾವತಿ ಕಬ್ಬಿಣ-ಉಕ್ಕಿನ ಕೈಗಾರಿಕೆಯ ಸನ್ನಿವೇಶ ಅತ್ಯುತ್ತಮವಾದದ್ದು. ಕಬ್ಬಿಣದ ಅದಿರು, ಸುಣ್ಣಕಲ್ಲು, ವಿದ್ಯುಚ್ಛಕ್ತಿ ಯಾವುದಕ್ಕೂ ಕೊರತೆಯಿಲ್ಲ. ತಾಂಡವಾಳ, ಉಕ್ಕು ಗಟ್ಟಿ, ಕಬ್ಬಿಣ ಮಿಶ್ರ ಲೋಹಗಳು, ಉಕ್ಕಿನ ಪಟ್ಟಿ, ಬೇಲುಪಟ್ಟಿ ಮತ್ತು ಎರಕ ಕಬ್ಬಿಣ ಕೊಳವೆಗಳನ್ನು ಇದು ತಯಾರಿಸುತ್ತದೆ. ಇದು ಭಾರತದ ದೈತ್ಯಾಕಾರದ ಉಕ್ಕು ಕಾರ್ಖಾನೆಗಳಲ್ಲೊಂದಾಗುವ ನಿರೀಕ್ಷೆಯಿಲ್ಲ. ವಿಶಿಷ್ಟ ಉಕ್ಕುಗಳನ್ನೂ ಮಿಶ್ರಲೋಹಗಳನ್ನೂ ತಯಾರಿಸುವುದರಲ್ಲಿ ನೈಪುಣ್ಯ ಸಂಪಾದಿಸುವುದು ಇದರ ಉದ್ದೇಶ. ಫೆರೊ-ಸಿಲಿಕಾನ್ ಮತ್ತು ಫೆರೊ-ಮ್ಯಾಂಗನೀಸ್ ಉತ್ಪಾದನೆ ಒಂದು ವಿಶಿಷ್ಟ ಬೆಳೆವಣಿಗೆ. ದಾಂಡೇಲಿಯಲ್ಲಿ ಕಬ್ಬಿಣ ಮಿಶ್ರಲೋಹ ಯಂತ್ರಸ್ಥಾವರವಿದೆ.

ಭದ್ರಾವತಿ ಮತ್ತು ದಾಂಡೇಲಿಗಳ ಕಾಗದದ ಕಾರ್ಖಾನೆಗಳಿಗೆ ಸ್ಥಳೀಯವಾಗಿ ಕಚ್ಚಾಸಾಮಗ್ರಿ ಒದಗುತ್ತವೆ. ಜಲವಿದ್ಯುತ್ತಿಗೂ ಕೊರತೆಯಿಲ್ಲ. ಮೃದುತಿರುಳಿನ ಮರಗಳನ್ನು ಮಲೆನಾಡಿನಲ್ಲಿ ನೆಡುವುದರಿಂದ ಪ್ರಯೋಜನವುಂಟು. ಮುದ್ರಣ ಕಾಗದ ಕೈಗಾರಿಕೆಗೂ ಒಳ್ಳೆಯ ಭವಿಷ್ಯವಿದೆ. ಭದ್ರಾವತಿ-ದಾಂಡೇಲಿಗಳೆರಡೂ ಕರ್ನಾಟಕದ ಕೈಗಾರಿಕೆ ಬೆಳೆವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಬೇಕಾದ ಕೇಂದ್ರಗಳು. ಹಾಸನದ ವ್ಯವಸಾಯೋಪಕರಣ ಕಾರ್ಖಾನೆ ಸನ್ನಿವೇಶ ದೃಷ್ಟಿಯಿಂದ ಉಚಿತವಾದದ್ದು. ಉತ್ತರ ಮಲೆನಾಡಿನ ಪೂರ್ವಭಾಗದಲ್ಲಿ ಕೆಲವು ಹತ್ತಿ ಹಿಂಜುವ ಉದ್ಯಮಗಳಿವೆ. ಆದರೆ ಇವನ್ನು ವಾಸ್ತವವಾಗಿ ಉತ್ತರ ಮೈದಾನದ ಪಶ್ಚಿಮ ಪ್ರದೇಶದ ಜವಳಿ ಕೈಗಾರಿಕೆಗಳ ಗುಂಪಿಗೆ ಸೇರಿಸಬೇಕು.

ವ್ಯವಸಾಯಾಧಾರಿತ ಕೈಗಾರಿಕೆಗಳೆಂದರೆ ಅಕ್ಕಿ ಮತ್ತು ಎಣ್ಣೆಗಿರಣಿಗಳು. ಮೂಡಿಗೆರೆಯಲ್ಲಿ ಕೆಲವು ದೊಡ್ಡ ಅಕ್ಕಿ ಗಿರಣಿಗಳಿವೆ. ಬಹುತೇಕ ಅಕ್ಕಿ ಗಿರಣಿಗಳಿರುವುದು ಅರೆಮಲೆನಾಡಿನಲ್ಲಿ. ತೀರ್ಥಹಳ್ಳಿಯಲ್ಲೂ ಮಲೆನಾಡಿನ ಎಲ್ಲೆಗಿಂತ ಸ್ವಲ್ಪ ಆಚೆಗಿರುವ ಶಿಗ್ಗಾವಿಯಲ್ಲಿ ಹೊಗೆಸೊಪ್ಪಿನ ಸಣ್ಣ ಪರಿಷ್ಕರಣ ಕೇಂದ್ರಗಳಿವೆ. ದಕ್ಷಿಣದಲ್ಲಿ ಚಿಕ್ಕಮಗಳೂರು, ಹುಣಸೂರು ಮತ್ತು ಮೂಡಿಗೆರೆಗಳಲ್ಲಿ ಕಾಫಿó ಪರಿಷ್ಕರಣ ಕೇಂದ್ರಗಳನ್ನು ಕಾಣಬಹುದು. ಇವಲ್ಲದೆ ವಿವಿಧ ಬಗೆಯ ಇನ್ನು ಕೆಲವು ದೊಡ್ಡ ಕೈಗಾರಿಕೆಗಳು ಮಲೆನಾಡಿನಲ್ಲಿವೆ. ದಾಂಡೇಲಿಯ ಪ್ಲೈವುಡ್ ಕಾರ್ಖಾನೆ, ಮರ ಕೊಯ್ಯುವ ಕಾರ್ಖಾನೆ, ಭದ್ರಾವತಿಯ ಸಿಮೆಂಟ್ ಕಾರ್ಖಾನೆ ಮುಖ್ಯ. ಮರದ ದಿಮ್ಮಿ ಉದ್ಯಮಗಳು ತರೀಕೆರೆ, ಚಿಕ್ಕಮಗಳೂರು, ಬೇಲೂರು, ಹಾಸನ, ಹುಣಸೂರುಗಳಲ್ಲೂ ಇವೆ. ಈ ಪ್ರದೇಶದ ಹೊರಗಿರುವ ಅರಸೀಕೆರೆ, ಮೈಸೂರು, ನಂಜನಗೂಡುಗಳನ್ನು ಈ ಪಟ್ಟಿಯಲ್ಲಿ ಸೇರಿಸಬಹುದು. ಖಾನಾಪುರ, ಶಿರಾಳಕೊಪ್ಪ, ಸಾಗರ, ಶಿವಮೊಗ್ಗ ಮುಂತಾದೆಡೆಗಳಲ್ಲಿ ಇಟ್ಟಿಗೆ ಮತ್ತು ಹೆಂಚು ತಯಾರಿಕೆಯೂ ಶಿವಮೊಗ್ಗದಲ್ಲಿ ಸಾಬೂನು ಮತ್ತು ರಾಸಾಯನಿಕವಸ್ತು ತಯಾರಿಕೆಯೂ ಲೋಂಡದಲ್ಲಿ ಮೂಳೆ ಗೊಬ್ಬರ ತಯಾರಿಕೆಯೂ ಉಲ್ಲೇಖನಾರ್ಹ.

ಉತ್ತರ ಮೈದಾನದ ಹತ್ತಿ ಬೆಳೆಯುವ ಪ್ರದೇಶದಲ್ಲೆಲ್ಲ ತಲಾ 30 ರಿಂದ 50 ಜನ ಕೆಲಸ ಮಾಡುವ ಸಣ್ಣ ಹತ್ತಿ ಹಿಂಜುವ ಕಾರ್ಖಾನೆಗಳಿವೆ. ಇವು ಸ್ಥಾಪಿತವಾಗಿರುವುದು ಹತ್ತಿ ಸಂಗ್ರಹ ಕೇಂದ್ರಗಳ ಬಳಿಯಲ್ಲಿ. ಹುಬ್ಬಳ್ಳಿ, ಗದಗ, ಬಿಜಾಪುರ, ಅಣ್ಣಿಗೇರಿ, ನರಗುಂದ, ರೋಣ, ಬೈಲಹೊಂಗಲ ಮತ್ತು ಬಾಗಲಕೋಟೆ. ಈ ಸ್ಥಳಗಳಲ್ಲಿ ದೊಡ್ಡ ಉದ್ಯಮಗಳೂ ಉಂಟು. ತುಂಗಭದ್ರಾ ಹತ್ತಿ ಬೆಳೆಯ ಪ್ರದೇಶಕ್ಕೆ ಮುಖ್ಯವಾಗಿ ರಾಯಚೂರು ಹಿಂಜುವ ಕೇಂದ್ರ. ದೊಡ್ಡ ಹತ್ತಿ ಜವಳಿ ಕೈಗಾರಿಕೆ ಗೋಕಾಕ, ಹುಬ್ಬಳ್ಳಿ, ಗದಗ, ಬೆಳಗಾಂವಿ, ಹೊಸಪೇಟೆ ಮತ್ತು ಗುಲ್ಬರ್ಗಗಳಲ್ಲಿ ಕೇಂದ್ರಿಕೃತವಾಗಿದೆ. ಕೈಮಗ್ಗದ ಕೈಗಾರಿಕೆ ಅನೇಕ ಕಡೆಗಳಲ್ಲಿ ಹರಡಿದೆ. ಗುಳೇದ ಗುಡ್ಡ, ಇಳಕಲ್, ಅಮೀನಗಡ, ಹುನಗುಂದ, ಕಮತಗಿ, ರಬಕವಿ, ಪಾಚ್ಛಾಪುರಗಳಲ್ಲಿ ಇಂದಿಗೂ ಇದನ್ನು ಅಧಿಕವಾಗಿ ಕಾಣಬಹುದು. ಬೆಳಗಾಂವಿಯ ಸುತ್ತ ರೇಷ್ಮೆ ಕೈಗಾರಿಕೆಯುಂಟು.

ವ್ಯವಸಾಯೋತ್ಪನ್ನಗಳನ್ನಾಧರಿಸಿದ ದೊಡ್ಡ ಕೈಗಾರಿಕೆಗಳನ್ನು ವ್ಯಾಪಕವಾಗಿ ಕಾಣಬಹುದು. ಎಣ್ಣೆ ಅಕ್ಕಿ ಗಿರಣಿಗಳನ್ನು ಇಲ್ಲಿ ಹೆಸರಿಸಬಹುದು. ಬಾದಾಮಿ, ಯಾದಗಿರಿ ಮುಂತಾದ ಸ್ಥಳೀಯ ಮಾರುಕಟ್ಟೆಗಳಲ್ಲಿ ಇವು ಹೆಚ್ಚಾಗಿವೆ. ಬಿಜಾಪುರ, ರಾಯಚೂರು, ಬಾಗಲಕೋಟೆಗಳು ಮುಖ್ಯ ಕೇಂದ್ರಗಳು. ತುಂಗಭದ್ರಾ ನಾಲೆ ಬಯಲಿನಲ್ಲಿ ಹೊಸಪೇಟೆ, ಮುನಿರಾಬಾದ್ಗಳಲ್ಲಿ ಸಕ್ಕರೆ ಕಾರ್ಖಾನೆಗಳಿವೆ. ಬಾವಿ ನೀರಾವರಿ ಸೌಕರ್ಯವಿರುವ ವಾಯವ್ಯದ ಉಗಾರ್ಖುರ್ದ್ ಮತ್ತು ಕಣಬೂರಗಳು ಇನ್ನೆರಡು ಮುಖ್ಯ ಪ್ರದೇಶಗಳು. ಅಲ್ಲಿ, ಮುಖ್ಯವಾಗಿ ನಿಪ್ಪಾಣಿಯಲ್ಲಿ, ಮಧ್ಯಮಗಾತ್ರದ ಹೊಗೆಸೊಪ್ಪಿನ ಕೇಂದ್ರಗಳಿವೆ. ರಾಣಿಬೆನ್ನೂರು, ಸವಣೂರು, ಯಾದಗಿರಿಗಳಲ್ಲೂ ಹುಬ್ಬಳ್ಳಿಯಲ್ಲೂ ಇವನ್ನು ಕಾಣಬಹುದು. ಹುಬ್ಬಳ್ಳಿ ಒಂದು ಮುಖ್ಯ ಕೈಗಾರಿಕಾ ಕೇಂದ್ರ. ಹರಿಹರದಲ್ಲಿ ಯಂತ್ರೋಪಕರಣ ಕೈಗಾರಿಕೆಯೂ ಸಣ್ಣ ವ್ಯವಸಾಯೋಪಕರಣ ಕಾರ್ಖಾನೆಯೂ ಇವೆ. ಹುಬ್ಬಳ್ಳಿ ಎಂಜಿನಿಯರಿಂಗ್ ಕೈಗಾರಿಕೆಗಳಿಗೂ ಮುಖ್ಯವಾದದ್ದು. ಅಲ್ಲಿ ರೈಲ್ವೆ ಕಾರ್ಯಾಗಾರವಿದೆ. ಬೆಳಗಾಂವಿಯಲ್ಲಿರುವ ಸಣ್ಣ ಕೈಗಾರಿಕೆಗಳು ಬಗೆಬಗೆಯುವು. ಬಿಜಾಪುರದಲ್ಲೂ ಕೆಲವು ಸಣ್ಣ ಉದ್ಯಮಗಳುಂಟು.

ಬೆಳಗಾಂವಿಯ ಕೈಗಾರಿಕೆಗಳಲ್ಲಿ ಮರದ ದಿಮ್ಮಿ ಉದ್ಯಮ ಮುಖ್ಯವಾದದ್ದು. ಬಾಗಲಕೋಟೆ ಕಲಾದಗಿಗಳಲ್ಲಿ ಸಿಮೆಂಟ್ ಸಂಬಂಧವಾದ ಸಣ್ಣ ಉದ್ಯಮಗಳಿವೆ. ಮೈದಾನದ ಪಶ್ಚಿಮದಂಚಿನಲ್ಲಿ ಚರ್ಮದ ಕೈಗಾರಿಕೆಯೂ ಉಂಟು. ಗುಲ್ಬರ್ಗದ ದಕ್ಷಿಣಕ್ಕೆ ಶಾಹಬಾದಿನ ಸಿಮೆಂಟ್ ಕಾರ್ಖಾನೆ ದೊಡ್ಡದು. ಇದು ಬಹುತೇಕ ಯಾಂತ್ರೀಕೃತ. ಬಳ್ಳಾರಿ, ಬೆಳಗಾಂವಿಗಳಲ್ಲಿ ಸಾಬೂನು ಕೈಗಾರಿಕೆಯೂ ಸಣ್ಣ ಪ್ರಮಾಣದಲ್ಲಿ ನಡೆಯುತ್ತದೆ. ಬೆಂಗಳೂರು-ಪುಣೆÀ ರೈಲುಹಾದಿಯ ಉದ್ದಕ್ಕೂ ಅದರ ಸಮೀಪದಲ್ಲೂ ಕೈಗಾರಿಕೆಗಳು ಹೆಚ್ಚಾಗಿ ಗೊಂಚಲುಗಳಂತೆ ಸೇರಿಕೊಂಡಿರುವುದನ್ನು ಕಾಣಬಹುದು. ರಾಯಚೂರು-ಷೋರಾಪುರ ರೈಲುಮಾರ್ಗಗಳ ಪ್ರದೇಶದಲ್ಲೂ ತಕ್ಕಮಟ್ಟಿಗೆ ಇವು ಕಾಣಬರುತ್ತವೆ. ಪೂರ್ವಮಧ್ಯ ಪ್ರದೇಶದಲ್ಲಿ ಅಳಂದದಿಂದÀ ಹೊಸಪೇಟೆಯವರೆಗೆ ಇವು ಇಲ್ಲವೇ ಇಲ್ಲವೆನ್ನಬೇಕು. ಆದರೆ ಇಲ್ಲೆಲ್ಲ ಕೈಮಗ್ಗದಂಥ ಸಣ್ಣ ಕೈಗಾರಿಕೆಗಳು ಹಬ್ಬಿವೆ. ಬೀದರ್ನಲ್ಲಿ ಬೀದರಿ ಕೆಲಸ ನಡೆಯುತ್ತದೆ.

ಉತ್ತರ ಮೈದಾನ ಪ್ರದೇಶದ ಮುಖ್ಯ ಕೈಗಾರಿಕೆಯೆಂದರೆ ಜವಳಿ ತಯಾರಿಕೆ. ಬಿಜಾಪುರ, ಧಾರವಾಡ, ಬೆಳಗಾಂವಿ ಮತ್ತು ಬಳ್ಳಾರಿಯಲ್ಲಿ ಉಣ್ಣೆ ತಯಾರಿಕೆ, ಅಲ್ಪ ಪ್ರಮಾಣ ಕೇಂದ್ರೀಕರಿಸಿದ ರೇಷ್ಮೆಯ ಸಣ್ಣ ಉದ್ಯಮಗಳು ಬಿಜಾಪುರದಲ್ಲೂ ದೊಡ್ಡವು ಬೆಳಗಾವಿಯಲ್ಲೂ ಉಂಟು.

ಹತ್ತಿ ಹಿಂಜುವಿಕೆ, ಹತ್ತಿ ಮತ್ತು ರೇಷ್ಮೆ ಜವಳಿ ಕೈಗಾರಿಕೆಗಳು ದಕ್ಷಿಣ ಮೈದಾನದ ಕೆಲವು ಮುಖ್ಯ ಕೇಂದ್ರಗಳಲ್ಲಿವೆ. ಹತ್ತಿ ಹಿಂಜುವ ಕೇಂದ್ರಗಳು ಮುಖ್ಯವಾಗಿ ದಾವಣಗೆರೆ ಚಿತ್ರದುರ್ಗಗಳಲ್ಲಿ-ಇವೆ. ಹತ್ತಿ ಜವಳಿಯ ಮುಖ್ಯ ಕೇಂದ್ರಗಳು, ದಾವಣಗೆರೆ, ಮೈಸೂರು, ನಂಜನಗೂಡು ಮತ್ತು ಬೆಂಗಳೂರು. ಅತಿ ದೊಡ್ಡ ಗಿರಣಿಗಳಿರುವುದು ಬೆಂಗಳೂರಿನಲ್ಲೇ. ಅನೇಕ ಸಣ್ಣ ಉದ್ಯಮಗಳೂ ಅಲ್ಲುಂಟು. ರೇಷ್ಮೆ ಕೈಗಾರಿಕೆಯೂ ಬೆಂಗಳೂರಿನಲ್ಲೇ ಸಾಂದ್ರೀಕೃತವಾಗಿದೆ. ಮೈಸೂರು, ಚನ್ನಪಟ್ಟಣ, ಕನಕಪುರ, ತಿರುಮಕೂಡಲು ನರಸೀಪುರ, ನಂಜನಗೂಡು ಮತ್ತು ಮಾಂಬಳ್ಳಿ ಇತರ ಕೇಂದ್ರಗಳು, ಮೈಸೂರು ಬೆಂಗಳೂರುಗಳಲ್ಲಿ ಈ ಕೈಗಾರಿಕೆಗೆ ಅಗತ್ಯವಾದ ಸಾರಿಗೆ ಮತ್ತು ಕಾರ್ಮಿಕರ ಸೌಲಭ್ಯವುಂಟು.

ಬೆಂಗಳೂರು ಮೈಸೂರುಗಳಲ್ಲಿ ವ್ಯವಸಾಯೋತ್ಪನ್ನಗಳನ್ನವಲಂಬಿಸಿದ ಕೈಗಾರಿಕೆಗಳು ಮುಖ್ಯವಾಗಿ ಕೇಂದ್ರೀಕೃತವಾಗಿವೆ. ಕಾರ್ಮಿಕ ಸರಬರಾಜು, ಮಾರುಕಟ್ಟೆ-ಇವು ಎರಡು ಮುಖ್ಯ ಸೌಲಭ್ಯಗಳು. ಅಕ್ಕಿ ಗಿರಣಿಗಳು ಹೆಚ್ಚಾಗಿ ನಂಜನಗೂಡು, ಕೃಷ್ಣರಾಜನಗರ, ಪಾಂಡವಪುರ ಮತ್ತು ಹೊಳೆನರಸಿಪುರ, ಶಿರಾ, ಮಧುಗಿರಿ, ಚಿತ್ರದುರ್ಗ, ಮುಳಬಾಗಿಲು, ದಾವಣಗೆರೆ ಇತ್ಯಾದಿಗಳಲ್ಲಿವೆ. ಗೋಧಿ ಹಿಟ್ಟಿನ ತಯಾರಿಕೆ ಬೆಂಗಳೂರಿನಲ್ಲಿ ಮುಖ್ಯ. ಎಣ್ಣೆ ಉತ್ಪಾದನೆ ದಕ್ಷಿಣ ಮೈದಾನ ಪ್ರದೇಶದಲ್ಲೆಲ್ಲ ನಡೆಯುತ್ತದೆ. ಆದರೆ ಕೆಲವು ಕೇಂದ್ರಗಳಲ್ಲಿ ಹೆಚ್ಚು. ಉದಾ: ದಾವಣಗೆರೆ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಕುಡತಿನಿ, ಬಳ್ಳಾರಿ ತುಮಕೂರು, ಹಾಸನ, ಮುಳಬಾಗಿಲು, ಮೈಸೂರು, ಬೆಂಗಳೂರು ಇತ್ಯಾದಿ. ದಕ್ಷಿಣ ಮೈದಾನದಲ್ಲಿ ಸಕ್ಕರೆ ಕಾರ್ಖಾನೆಗಳಿವೆ. ಕೊಳ್ಳೆಗಾಲ, ಮಂಡ್ಯ, ಪಾಂಡವಪುರ ಹಾಗೂ ಇನ್ನು ಕೆಲವು ಕಡೆಗಳಲ್ಲಿ ಸಕ್ಕರೆ ಉದ್ಯಮವಿದೆ. ಉದಾ: ಕಾಳಮುದ್ದನದೊಡ್ಡಿ, ಸಮೀರವಾಡಿ, ಮುನಿರಾಬಾದ್, ಸಿರಗುಪ್ಪ, ಸರಗೂರು, ದಾವಣಗೆರೆ, ಹೊಸಪೇಟೆ, ಗಂಗಾವತಿ, ಹಳ್ಳಿಖೇಡ, ಮುಧೋಳ, ಗೋಕಾಕ, ಹುಕ್ಕೇರಿ, ಮುನವಳ್ಳಿ, ಹಾಸನ, ಸಂಕೇಶ್ವರ, ಚಿಕ್ಕೋಡಿ, ಚುಂಚನಕಟ್ಟೆ, ಗೌರಿಬಿದನೂರು, ಶಿವಮೊಗ್ಗ, ಕಂಪ್ಲಿ, ಹೊಸಕೋಟೆ. ದಕ್ಷಿಣ ಮೈದಾನದ ನೈಋತ್ಯ ಪ್ರದೇಶವಾದ ಮೈಸೂರು-ನಂಜನಗೂಡು-ಗುಂಡ್ಲುಪೇಟೆ-ಚಾಮರಾಜನಗರ ಸುತ್ತಿನಲ್ಲಿ ಹಲವು ಹೊಗೆಸೊಪ್ಪಿನ ಉದ್ಯಮಗಳಿವೆ. ಬೀಡಿ ಪ್ರಧಾನ ಉತ್ಪನ್ನ. ಬೆಂಗಳೂರಿನಲ್ಲೂ ಈ ಉದ್ಯಮ ಬೆಳೆದಿದೆ. ವೈಟ್ಫೀಲ್ಡ್‌, ರಾಮನಗರ, ಚನ್ನಪಟ್ಟಣ, ಗೌರಿಬಿದನೂರು, ತುಮಕೂರು, ಹೊಸಕೋಟೆ, ಆನೆಕಲ್ಲು, ಕೊರಟಗೆರೆ ಇವು ಇತರ ಕೇಂದ್ರಗಳು. ಈ ಉದ್ಯಮ ಉಳಿದ ಪ್ರದೇಶಗಳಿಗೂ ಹಬ್ಬುತ್ತಿದೆ. ಕಚ್ಚಾಸಾಮಗ್ರಿಯ ಸರಬರಾಜು ಮತ್ತು ಮಾರಾಟಗಳ ವಿಚಾರದಲ್ಲಿ ತೊಂದರೆಯಿಲ್ಲ. ಮೈಸೂರಿನ ಬಳಿಯ ಬೆಳಗೊಳದಲ್ಲಿದ್ದ ಕಾಗದದ ಕಾರ್ಖಾನೆ ಈಗ ಕಾರ್ಯನಿರ್ವಹಿಸುತ್ತಿಲ್ಲ. ಸಕ್ಕರೆ ಕಾರ್ಖಾನೆಯ ಉಪೋತ್ಪನ್ನ ಇದಕ್ಕೆ ಕಚ್ಚಾ ಸಾಮಗ್ರಿ.

ಎಂಜಿನಿಯರಿಂಗ್ ಕೈಗಾರಿಕೆಗಳಲ್ಲಿ ಬೆಂಗಳೂರು ಪ್ರಧಾನ. ಅನೇಕ ದೊಡ್ಡ ಕಾರ್ಖಾನೆಗಳನ್ನೂ ಅಸಂಖ್ಯಾತ ಸಣ್ಣ ಉದ್ಯಮಗಳ ನಿಬಿಡ ನೆಲೆಯನ್ನೂ ಅಲ್ಲಿ ಕಾಣಬಹುದು. ವಿಮಾನ, ದೂರವಾಣಿ, ಲೋಹಗಾರಿಕೆ, ಯಂತ್ರೋಪಕರಣ, ಕೈಗಡಿಯಾರ, ಎಲೆಕ್ಟ್ರಾನಿಕ್ಸ್‌, ವಿದ್ಯುದುಪಕರಣ, ವಿದ್ಯುದ್ದೀಪ, ರೇಡಿಯೋ ಮುಂತಾದ ಹಲವು ಕೈಗಾರಿಕೆಗಳ ಹಬ್ಬುಗೆಯೇ ಇದೆ. ಬೆಳೆಯುತ್ತಿರುವ ಈ ನಗರದಲ್ಲಿ ಕಾರ್ಮಿಕ ಸರಬರಾಜೂ ಮಾರಾಟ ಸೌಲಭ್ಯವೂ ಧಾರಾಳವಾಗಿದೆ. ಇಲ್ಲಿರುವ ಹಲವಾರು ಕೇಂದ್ರಿಯ ಬೃಹದ್ಗಾತ್ರ ಉದ್ಯಮಗಳು ನಗರದ ಬೆಳೆವಣಿಗೆಗೆ ಕಾರಣ. ಹಿಂದಿನ ಮೈಸೂರಿನ ಸರ್ಕಾರ ಹಾಕಿದ ತಳಹದಿ ಇಲ್ಲಿ ಕೈಗಾರಿಕೆಗಳ ಬೆಳೆವಣಿಗೆ ಮುಖ್ಯ ಕಾರಣ.

ರಾಸಾಯನಿಕಗಳು, ಸಾಬೂನು, ಊದುಬತ್ತಿ ಮುಂತಾದ ಉದ್ಯಮಗಳು ಮುಖ್ಯವಾಗಿ ಮೈಸೂರು ಬೆಂಗಳೂರುಗಳಲ್ಲಿವೆ. ಚಿಂತಾಮಣಿ, ಕೋಲಾರ, ಮುಂತಾದವು ಪರಿಮಳ ವಸ್ತುಗಳನ್ನು ತಯಾರಿಸುತ್ತವೆ. ಸಣ್ಣ ಎಂಜಿನಿಯರಿಂಗ್ ಉದ್ಯಮಗಳು ಮೈಸೂರು, ತುಮಕೂರು, ಗೂಳೂರು, ಕೋಲಾರ, ರಾಬರ್ಟ್ಸನ್ಪೇಟೆ, ಬಂಗಾರಪೇಟೆಗಳಲ್ಲಿವೆ. ಕೋಲಾರ ಚಿನ್ನದಗಣಿ ಪ್ರದೇಶದಲ್ಲಿ ಗಣಿ ಯಂತ್ರ ಮತ್ತು ಬಂಡೆ ಕೊರೆಯುವ ಯಂತ್ರ ತಯಾರಿಸಬಹುದಾದರೂ ಇದಕ್ಕೆ ಅವಶ್ಯವಾದ ಪರಿಣಿತ ಶ್ರಮ ಅಲ್ಲಿ ಬೆಳೆದಿಲ್ಲ. ಅನೇಕ ಬಗೆಯ ಸಣ್ಣ ಉದ್ಯಮಗಳಿಗೂ ಬೆಂಗಳೂರು ಕೇಂದ್ರವಾಗಿದೆ. ಚರ್ಮ ಕೈಗಾರಿಕೆ, ಕೃತಕ ವಸ್ತ್ರ-ಇವು ಮುಖ್ಯ. ಮೈಸೂರಿನಲ್ಲೂ ಚರ್ಮದ ಕೈಗಾರಿಕೆಯುಂಟು. ಇಟ್ಟಿಗೆ ಮತ್ತು ಹೆಂಚು ತಯಾರಿಕೆ ಸಣ್ಣ ಪ್ರಮಾಣದಲ್ಲಿ ತುಮಕೂರು, ಬಂಗಾರಪೇಟೆ ಮತ್ತು ಯಲಹಂಕಗಳಲ್ಲಿ ನಡೆಯುತ್ತದೆ. ಅಮ್ಮಸಂದ್ರದ ಸಿಮೆಂಟ್ ಕೈಗಾರಿಕೆ ದೊಡ್ಡಗಾತ್ರದ್ದು.

ಸಾರಿಗೆ-ಸಂಪರ್ಕ[ಸಂಪಾದಿಸಿ]

ಸಾರಿಗೆಯ ವಿಚಾರದಲ್ಲಿ ಕರ್ನಾಟಕಕ್ಕೆ ಅನೇಕ ಸೌಲಭ್ಯಗಳುಂಟು. ಅರಬ್ಬೀ ಸಮುದ್ರಾಭಿಮುಖವಾದ ಸು. 320 ಕಿಮೀ ಕರಾವಳಿಯ ಮೇಲೆ 19 ಸಣ್ಣ ಮತ್ತು ಮಧ್ಯಮ ವರ್ಗದ ಬಂದರುಗಳಿವೆ. ಮಂಗಳೂರು ಒಂದು ದೊಡ್ಡ ಬಂದರಾಗಿ ಅಭಿವೃದ್ದಿಗೊಳಿಸಲಾಗಿದೆ. ಇವುಗಳ ಹಿನ್ನಾಡು ಬಲು ಫಲವತ್ತಾದದ್ದು. ಕರ್ನಾಟಕದಲ್ಲಿ 2761 ಕಿಮೀ ಬ್ರಾಡ್ ಗೇಜ್ ಮತ್ತು 410 ಕಿಮೀ ಮೀಟರ್ ಗೇಜ್ ರೈಲುಮಾರ್ಗಗಳುಂಟು. ರಸ್ತೆಗಳ ಉದ್ದ 1,31,815 ಕಿಮೀ ಇದರಲ್ಲಿ 92,232 ಕಿಮೀ (ಶೇ.70) ಪಕ್ಕ ರಸ್ತೆ. ಉಳಿದ 39,583 ಕಿಮೀ ಕಚ್ಚಾ ರಸ್ತೆಯಾಗಿರುತ್ತದೆ. 13 ರಾಷ್ಟ್ರೀಯ ಹೆದ್ದಾರಿಗಳು ರಾಜ್ಯದಲ್ಲಿದ್ದು, ಇವುಗಳ ಉದ್ದ 3728 ಕಿಮೀ ಮುಂಬಯಿ ತಿರುವನಂತಪುರಗಳನ್ನು ಕೂಡಿಸುವ ಕರಾವಳಿ ರಸ್ತೆಯೂ ಕಬ್ಬಿಣ ಅದುರು ಸಾಗಿಸಲು ಅವಶ್ಯವಾದ 600 ಕಿಮೀ ರಸ್ತೆಗಳಿವೆ. ಬೆಂಗಳೂರು-ಸೇಲಂ, ಹಾಸನ-ಮಂಗಳೂರು ಮತ್ತು ಕೊಂಕಣ ರೈಲುದಾರಿಗಳು ಹೊಸವು. ಬೆಂಗಳೂರು, ಬೆಳಗಾಂವಿ ಮೈಸೂರು ಮತ್ತು ಮಂಗಳೂರುಗಳಲ್ಲಿ ಮುಖ್ಯ ವಿಮಾನ ನಿಲ್ದಾಣಗಳಿವೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಪರಿಗಣಿಸಲಾಗಿದ್ದು, ದೇವನ ಹಳ್ಳಿಯಲ್ಲಿ ಹೊಸ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯಮುಂದುವರಿದಿದೆ.

ಕರ್ನಾಟಕ ರಾಜ್ಯದ ಸಂಚಾರ ಮಾರ್ಗಗಳನ್ನು ಗಮನಿಸಿದಾಗ ಕೆಲವು ಮುಖ್ಯ ಅಂಶಗಳು ವ್ಯಕ್ತಪಡುವುವು. ವಿಜಯನಗರ ಪತನಾನಂತರ ತುಂಡಾದ ಕನ್ನಡ ನಾಡು ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಇಪ್ಪತ್ತೇಳು ಆಡಳಿತಗಳಲ್ಲಿ ಹಂಚಿಹೋಗಿತ್ತಾದ್ದರಿಂದ ಸಂಚಾರಸಂಪರ್ಕ ಬೆಳೆವಣಿಗೆ ವ್ಯವಸ್ಥಿತ ರೀತಿಯಲ್ಲಿ ಸಾಗಲಿಲ್ಲ. ರಾಜ್ಯದ ಹಲವು ಭಾಗಗಳು ರಾಜ್ಯದ ಕೇಂದ್ರದಿಂದ ವಿಮುಖವಾಗಿ ಇತರ ಪ್ರಾಂತ್ಯಗಳ ಅಂಚುಗಳಾಗಿದ್ದುದರಿಂದ ಸಂಚಾರಮಾರ್ಗಗಳ ಬೆಳೆವಣಿಗೆಯಾಗಲಿಲ್ಲ. ಉತ್ತರ ಕನ್ನಡ, ಬಿಜಾಪುರ ಮತ್ತು ಹೈದರಾಬಾದ್ ಪ್ರದೇಶಗಳು ಬಹಳ ಹಿಂದುಳಿದವು. ಉತ್ತರ ಕನ್ನಡ ಜಿಲ್ಲೆಯೂ ಅಷ್ಟೆ. ಮಂಗಳೂರು ಒಂದು ರೈಲು ಕೊನೆದಾಣ (ಟರ್ಮಿನಸ್). ಕೊಡಗಿನಲ್ಲಿ ರೈಲುಮಾರ್ಗವಿಲ್ಲ. ಬೆಂಗಳೂರು ಧಾರವಾಡ ಜಿಲ್ಲೆಗಳು ಉತ್ತಮ ರೈಲು ಸಂಪರ್ಕ ಹೊಂದಿವೆ. ಬೆಂಗಳೂರು ಹುಬ್ಬಳ್ಳಿಗಳು ರೈಲ್ವೆಕೇಂದ್ರಗಳು. ಹಳೆಯ ಮೈಸೂರು ರಾಜ್ಯದ ರೈಲುಮಾರ್ಗಗಳು ಕ್ರಮಬದ್ಧವಾಗಿ ನಿರ್ಮಿಸಿದಂಥವು. ಅವು ಬೆಂಗಳೂರಿಗೆ ಅಭಿಮುಖವಾದವು. ಉತ್ತರ ಕರ್ನಾಟಕದ ರೈಲುಮಾರ್ಗಗಳು ಹುಬ್ಬಳ್ಳಿಗೆ ಅಭಿಮುಖವಾಗಿವೆ. ಕರ್ನಾಟಕದಲ್ಲಿಯ ಎಲ್ಲಾ ರೈಲು ಮಾರ್ಗಗಳು ಇತ್ತೀಚೆಗೆ ಬ್ರಾಡ್ಗೇಜ್ಗೆ ಪರಿವರ್ತನೆಯಾಗುತ್ತಿವೆ.

ಕರ್ನಾಟಕದ ಏಕೀಕರಣ ಸಂಪೂರ್ಣವಾಗಬೇಕಾದರೆ, ಆರ್ಥಿಕ ಸಮಗ್ರತೆ ಏರ್ಪಡಬೇಕಾದರೆ, ಆಂತರಿಕ ಮಾರ್ಗಗಳು ಬೆಳೆಯಬೇಕು. ರೈಲುಮಾರ್ಗಗಳ ಕೊರತೆಯನ್ನು ರಸ್ತೆಗಳು ಬಹುತೇಕ ಪುರೈಸುತ್ತವೆ. ಬೆಂಗಳೂರಿನಿಂದ ಎಲ್ಲ ಜಿಲ್ಲೆಗಳ ಮುಖ್ಯ ಸ್ಥಳಗಳಿಗೂ ಉತ್ತಮ ರಸ್ತೆಗಳಿವೆ. ಇಡೀ ರಾಜ್ಯದ ಸಾರಿಗೆ ವ್ಯವಸ್ಥೆಯನ್ನು ಸ್ಥೂಲವಾಗಿ ವಿವೇಚಿಸಿದ ಮೇಲೆ ವಿವಿಧ ಸ್ವಾಭಾವಿಕ ವಿಭಾಗಗಳ ಪರಿಸ್ಥಿತಿಯನ್ನಷ್ಟು ಪರಿಶೀಲಿಸಬಹುದು. ಕರಾವಳಿಯಲ್ಲಿ ಮಂಗಳೂರೊಂದೇ ರೈಲ್ವೆ ಸಂಪರ್ಕ ಪಡೆದಿರುವ ಮುಖ್ಯ ಸ್ಥಳ. ಬ್ರಾಡ್ಗೇಜಿನ ರೈಲುಮಾರ್ಗಮೊಂದು ಪಾಲ್ಘಾಟಿನ ಮೂಲಕ ಸುತ್ತಿಕೊಂಡು ಚೆನ್ನೈ ತಲಪುತ್ತದೆ. ಮಂಗಳೂರಿನ ರೈಲ್ವೆ ಹಿನ್ನಾಡು ಕರ್ನಾಟಕದೊಳಗಿಲ್ಲ. ನಿರ್ಮಾಣವಾಗುತ್ತಿರುವ ಮಂಗಳೂರು-ಹಾಸನ ರೈಲ್ವೆಯಿಂದ ಮಂಗಳೂರಿನ ಸಮೃದ್ಧವಾದ ಹಿನ್ನಾಡಿಗೆ ಸಮುದ್ರಮುಖ ಲಭ್ಯವಾದಂತಾಗುತ್ತದೆ. ಕರಾವಳಿಯ ಉದ್ದಕ್ಕೂ ಘಟ್ಟದಾಚೆಗೂ ಹಲವಾರು ಬಸ್ ಸಂಚಾರ ಮಾರ್ಗಗಳುಂಟು. ಕಾರವಾರದಿಂದ ಅಂಕೋಲದ ಮೂಲಕ ಯಲ್ಲಾಪÀÅರ ಹುಬ್ಬಳ್ಳಿ ಧಾರವಾಡಗಳಿಗೂ ಕುಮಟದಿಂದ ಶಿರಸಿಗೂ ರಸ್ತೆ ಸೌಲಭ್ಯವಿದೆ. ಬೆಂಗಳೂರು-ಮೈಸೂರು-ಮಡಿಕೇರಿಗಳ ಮೂಲಕ ಸಾಗುವ ರಸ್ತೆಯೂ ಮುಖ್ಯ. ಹಾಸನ-ಮಂಗಳೂರು, ಮಂಗಳೂರು-ಚಿಕ್ಕಮಗಳೂರು ಮಾರ್ಗಗಳು ಇನ್ನೆರಡು. ಕುಂದಾಪುರ, ಉಡುಪಿ, ಪುತ್ತೂರು, ಮುಲ್ಕಿ, ಮಂಗಳೂರು ಮುಖ್ಯ ರಸ್ತೆಕೇಂದ್ರಗಳು. ಕುಂದಾಪುರ, ಉಡುಪಿ, ಪುತ್ತೂರು, ಮುಲ್ಕಿಗಳಿಂದ ಆಗುಂಬೆಯ ಮೂಲಕ ತೀರ್ಥಹಳ್ಳಿ, ಶಿವಮೊಗ್ಗ, ಕೊಪ್ಪ, ತರೀಕೆರೆಗಳಿಗೆ ಸಂಪರ್ಕವಿದೆ. ಘಟ್ಟದ ಆಚೀಚೆಯ ಸಾರಿಗೆ ಸಂಪರ್ಕ ಪ್ರಾಚೀನವಾದದ್ದು. ಮಂಗಳೂರಿನ ಹಿನ್ನಾಡು ರಸ್ತೆ ಸಮೃದ್ಧಪ್ರದೇಶ.

ಉತ್ತರ ದಕ್ಷಿಣ ಮಲೆನಾಡಿಗೂ ಮೈದಾನಕ್ಕೂ ನಡುವೆ ರೈಲ್ವೆ ಸಂಪರ್ಕವುಂಟು. ಬೆಂಗಳೂರು-ಪುಣೆ ರೈಲುಮಾರ್ಗದಲ್ಲಿ ಅರಸೀಕೆರೆಯಿಂದ ಒಂದು ಕವಲು ಹಾಸನದ ಮೂಲಕ ಮೈಸೂರಿಗೂ ಬೀರೂರಿನಿಂದ ಒಂದು ಕವಲು ಭದ್ರಾವತಿಯ ಮೂಲಕ ಶಿವಮೊಗ್ಗ-ತಾಳಗುಪ್ಪಗಳಿಗೂ ಸಾಗುತ್ತವೆ. ಬೆಂಗಳೂರು-ಪುಣೆ ಮಾರ್ಗ ಸಾಗುವುದು ಅರೆಮಲೆನಾಡಿನಲ್ಲಿ (ಧಾರವಾಡ-ಬೆಳಗಾಂವಿಗಳ ಮೂಲಕ). ಅಳಣಾವರದಿಂದ ದಾಂಡೇಲಿಗೂ ಲೋಂಡದಿಂದ ಕ್ಯಾಸಲ್ರಾಕಿಗೂ ಮರ್ಮಗೋವಕ್ಕೂ ಕವಲುಗಳಿವೆ. ಅರೆಮಲೆನಾಡಿನ ಒಂದು ತುಂಡಿನೊಡನೆ ಮೈಸೂರು-ಚಾಮರಾಜನಗರ ರೈಲ್ವೆ ಸಂಪರ್ಕವುಂಟು. ಒಟ್ಟಿನಲ್ಲಿ ಮಲೆನಾಡಿನ ಶೇ. 10 ಭಾಗ ಪ್ರದೇಶವನ್ನು ಮಾತ್ರ ರೈಲ್ವೆ ಮುಟ್ಟಲು ಸಾಧ್ಯವಾಗಿದೆಯೆನ್ನಬಹುದು. ಮಲೆನಾಡಿನ ಮೂಲಕ ಹಾದುಹೋಗುವ ರಸ್ತೆಗಳ ಬಗ್ಗೆ ಪ್ರಥಮವಾಗಿ ಗಮನ ಸೆಳೆಯುವ ಅಂಶವೆಂದರೆ ಪೂರ್ವ-ಪಶ್ಚಿಮವಾಗಿ ಹರಿಯುವ ಮಾರ್ಗಗಳ ಹೆಚ್ಚಳ. ಕರಾವಳಿ ಹೆದ್ದಾರಿಯಂತೆ ಮಲೆನಾಡು ಹೆದ್ದಾರಿಯೊಂದು ಬೆಳೆದಿಲ್ಲ. ಉತ್ತರ ಮಲೆನಾಡಿನಲ್ಲಿ ಯಲ್ಲಾಪುರ ಮತ್ತು ಶಿರಸಿ ಎರಡು ಮುಖ್ಯ ಕೇಂದ್ರಗಳು. ಯಲ್ಲಾಪುರಕ್ಕೂ ಕರಾವಳಿಯ ಅಂಕೋಲ-ಕಾರವಾರಗಳಿಗೂ ಸಂಪರ್ಕವುಂಟು. ಬೆಂಗಳೂರು-ಪುಣೆ ರೈಲುಮಾರ್ಗದೊಂದಿಗೆ ಈಶಾನ್ಯಾಭಿಮುಖವಾಗಿಯೂ ಹಾದಿ ಹರಿದಿದೆ. ಹಳಿಯಾಳ-ಅಳ್ನಾವರ ಜಂಕ್ಷನ್ ಮತ್ತು ಹುಬ್ಬಳ್ಳಿ ಜಂಕ್ಷನ್-ಧಾರವಾಡ ಮಾರ್ಗಗಳಿಗೂ ಸಂಪರ್ಕವಿದೆ. ರಸ್ತೆ ಮಾರ್ಗಗಳು, ಶಿರಸಿಯಿಂದ ಕುಮಟ, ಹಾನಗಲ್, ಹುಬ್ಬಳ್ಳಿ, ಬನವಾಸಿ, ಸಿದ್ಧಾಪುರಗಳಿಗೆ ಸುಲಭವಾಗಿ ಹೋಗಿ ಬರಬಹುದು. ಶಿರಸಿ ಒಂದು ಮುಖ್ಯ ವ್ಯಾಪಾರಸ್ಥಳ. ಮಲೆನಾಡಿ ಮೂಲಕ ಹಾಯ್ದು ಹೋಗುವ ಮೈಸೂರು-ಮಡಿಕೇರಿ-ಮಂಗಳೂರು, ಮಂಗಳೂರು-ಮೂಡಿಗೆರೆ-ಹಾಸನ, ಮಂಗಳೂರು-ಮೂಡಿಗೆರೆ-ಆಲೂರು-ಚಿಕ್ಕಮಗಳೂರು, ಚಿಕ್ಕಮಗಳೂರು-ಹಾಸನ-ಕಡೂರು, ಶಿವಮೊಗ್ಗ-ಭದ್ರಾವತಿ-ಚಿತ್ರದುರ್ಗ, ಭದ್ರಾವತಿ-ಕಡೂರು, ಕೊಪ್ಪ-ತರೀಕೆರೆ, ತೀರ್ಥಹಳ್ಳಿ-ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಮುಖ್ಯ ಕೇಂದ್ರಗಳು. ಉತ್ತರ ಮೈದಾನದ ಬಹು ವಿಶಾಲ ಪ್ರದೇಶಗಳಲ್ಲಿ ರೈಲುಮಾರ್ಗ ವಿರಳ. ಹಿಂದಿನ ಬೊಂಬಾಯಿ ಕರ್ನಾಟಕದ ಭಾಗಕ್ಕೂ ಹೈದರಾಬಾದ್ ಕರ್ನಾಟಕಕ್ಕೂ ನಡುವೆ ರಸ್ತೆ ಸಂಪರ್ಕ ಅಲ್ಲಲ್ಲಿ ಕಡಿದಿರುವುದನ್ನು ಕಾಣಬಹುದು. ಸಾವಿರಾರು ಚ.ಕಿಮೀ ಪ್ರದೇಶಗಳಲ್ಲಿ ಒಳ್ಳೆಯ ರಸ್ತೆಗಳಿಲ್ಲ. ಗುಂತಕಲ್-ಷೋಲಾಪುರ-ಮುಂಬಯಿ ಮಾರ್ಗಮೊಂದೇ ಬ್ರಾಡ್ಗೇಜ್ ರೈಲುಮಾರ್ಗವಾಗಿತ್ತು. ಈಗ ಇತರ ಮಾರ್ಗಗಳೂ ಬ್ರಾಡ್ಗೇಜ್ಗೆ ಪರಿವರ್ತನೆಯಾಗಿದೆ, ಆಗುತ್ತಿವೆ. ಬೆಂಗಳೂರು-ಪುಣೆ, ಹುಬ್ಬಳ್ಳಿ-ಗುಂತಕಲ್ ಮತ್ತು ಗದಗ್-ಷೆÆೕಲಾಪುರದವು ಇತರ ಮಾರ್ಗಗಳು. ಹೊಸಪೇಟೆಯಿಂದ ಕೊಟ್ಟೂರಿಗೂ ಮ್ಯಾಂಗನೀಸ್ ಪ್ರದೇಶಕ್ಕೂ ರೈಲುಸಂಪರ್ಕವುಂಟು. ಈ ಮಾರ್ಗಕ್ಕೆ ಸಾಮೆಹಳ್ಳಿ ಕೊನೆ. ಮ್ಯಾಂಗನೀಸ್ ಅದಿರು ಮುಂಬಯಿ-ವಿಶಾಖಪಟ್ಟಣ-ಚೆನ್ನೈಗಳಿಗೆ ಸಾಗುತ್ತದೆ. ಹೊಸಪೇಟೆಯಿಂದ ಹುಬ್ಬಳ್ಳಿಗೆ ರೈಲಿನಲ್ಲೂ ಅಲ್ಲಿಂದ ಕಾರವಾರಕ್ಕೆ ರಸ್ತೆಯ ಮೂಲಕವೂ ಕಬ್ಬಿಣದ ಅದಿರಿನ ಹರಿವುಂಟು. ಅದಿರು ಸಾಗಣೆ ಮಂಗಳೂರು ಬಂದರಿನ ಇನ್ನೊಂದು ಗುರಿ.

ರಾಣೆಬೆನ್ನೂರಿನಿಂದ ನಿಪ್ಪಾಣಿ ಶೇಡಬಾಳಗಳವರೆಗೆ ರಸ್ತೆಗಳು ಬಲೆಯಂತೆ ಹೆಣೆದುಕೊಂಡಿವೆ. ಹುಬ್ಬಳ್ಳಿ, ಧಾರವಾಡ, ಬೆಳಗಾಂವಿ, ಸಂಕೇಶ್ವರ, ನಿಪ್ಪಾಣಿ, ಚಿಕ್ಕೋಡಿ, ಗೋಕಾಕ, ಬೈಲಹೊಂಗಲ, ಬಿಜಾಪುರ, ಬಾಗಲಕೋಟೆ, ಜಮಖಂಡಿ, ರಾಣೆಬೆನ್ನೂರು, ಯಲಬರ್ಗ, ಮುದ್ದೇಬಿಹಾಳ, ಸಿಂದಗಿ ಮುಖ್ಯ ರಸ್ತೆಕೇಂದ್ರಗಳು, ರಾಯಚೂರು, ಗುಲ್ಬರ್ಗ, ಹುಮನಾಬಾದ್, ಬೀದರ್ ಇತರ ಕೆಲವು ಮುಖ್ಯ ಸ್ಥಳಗಳು. ಬೆಂಗಳೂರಿನಿಂದ ನೆಲಮಂಗಲ ಮಾರ್ಗವಾಗಿ ತುಮಕೂರು ಚಿತ್ರದುರ್ಗಗಳಿಗೂ ಹಾಸನಕ್ಕೂ ರಸ್ತೆಗಳಿವೆ. ಬೆಂಗಳೂರು-ಮೈಸೂರು-ಗುಂಡ್ಲುಪೇಟೆ ರಸ್ತೆ ಇನ್ನೊಂದು ಇದು ನೀಲಗಿರಿಯ ಕಡೆಗೆ ಸಾಗುತ್ತದೆ. ಇದು ಒಂದು ಹೆದ್ದಾರಿ. ಚಿಕ್ಕಬಳ್ಳಾಪುರ. ದೊಡ್ಡಬಳ್ಳಾಪುರ, ಕೋಲಾರ ಚಿನ್ನದ ಗಣಿ ಇತರ ಕೇಂದ್ರಗಳು. ಸಾಮಾನ್ಯವಾಗಿ ಎಲ್ಲ ಜಿಲ್ಲಾ ಮುಖ್ಯಸ್ಥಳಗಳಿಗೆ ಮತ್ತು ದೊಡ್ಡ ಊರುಗಳಿಗೆ ರಸ್ತೆ ಸಂಪರ್ಕವುಂಟು.

ಕರ್ನಾಟಕದಲ್ಲಿ ಜಲಮಾರ್ಗಗಳು ಅಷ್ಟೊಂದು ಮಹತ್ವ ಪಡೆದಿಲ್ಲ. ಅದು ಕೆಲವೇ ಭಾಗಗಳಲ್ಲಿ ಕಾಣಬಹುದು. ಉದಾ: ಉತ್ತರ ಮತ್ತು ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳು. ಇವು 312 ಕಿಮೀ ಉದ್ದದ ಒಳನಾಡಿನ ಜಲಮಾರ್ಗಗಳನ್ನು ಹೊಂದಿವೆ. ಸಮುದ್ರದ ಹಿನ್ನೀರು, ಖಾರಿಗಳು ಮತ್ತು ನದಿಗಳ ಕೆಲಮುಖ್ಯಭಾಗಗಳು ನೌಕಾಯಾನಕ್ಕೆ ಯೋಗ್ಯ.

ಅರಬ್ಬಿ ಸಮುದ್ರಕ್ಕೆ ಹೊಂದಿಕೊಂಡಂತೆ ರಾಜ್ಯದಲ್ಲಿ 25 ಕ್ಕೂ ಹೆಚ್ಚು ಬಂದರುಗಳಿವೆ. ಉದಾ: ಮಂಗಳೂರು, ಮಲ್ಪೆ, ನವಮಂಗಳೂರು, ಹಂಗರಕಟ್ಟೆ, ಕುಂದಾಪುರ, ಬೈಂದೂರು, ಭಟ್ಕಳ, ಶಿರಾಲಿ, ಮುರ್ಡೇಶ್ವರ, ಮಂಕಿ, ಹೊನ್ನಾವರ ಕುಮಟ ತದಡಿ, ಗಂಗಾವಳಿ, ಅಂಕೋಲ, ಕಾರವಾರ, ಮಾಚಾಳಿ ಇತ್ಯಾದಿ. ನವಮಂಗಳೂರು ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. ಇದು ಕರ್ನಾಟಕದ ಹೆಬ್ಬಾಗಿಲು ಎಂದೇ ಪ್ರಸಿದ್ಧಿ.

ಸಂಪರ್ಕ ಮಾಧ್ಯಮ[ಸಂಪಾದಿಸಿ]

ಕರ್ನಾಟಕದಲ್ಲಿ ಅಂಚೆ, ದೂರವಾಣಿ, ಆಕಾಶವಾಣಿ, ದೂರದರ್ಶನ, ವೃತ್ತ ಪತ್ರಿಕೆ, ಗಣಕ, ಯಂತ್ರ, ಇಂಟರ್ನೆಟ್, ಈಮೇಲ್ ಮುಂತಾದ ಸಂಪರ್ಕ ಮಾಧ್ಯಮಗಳಿವೆ. ಮಾರ್ಚ್ 2004, 31ರಲ್ಲಿದ್ದಂತೆ ರಾಜ್ಯದಲ್ಲಿ 9909 ಅಂಚೆ ಕಛೇರಿಗಳಿವೆ. ಇವುಗಳ ಸೌಲಭ್ಯ ಸುಧಾರಿಸಿದೆಯಾದರೂ ಜನಸಂಖ್ಯೆಗೆ ತಕ್ಕಷ್ಟು ಅಂಚೆಕಛೇರಿಗಳಿಲ್ಲ. ಪ್ರತಿ 1 ಲಕ್ಷ ಜನ ಸಂಖ್ಯೆಗೆ 18 ಅಂಚೆ ಕಛೇರಿಗಳಿವೆ. ಬೆಂಗಳೂರು, ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕವೆಂದು 3 ಅಂಚೆ ವೃತ್ತಗಳಿವೆ. ಪ್ರತಿದಿನ ಸರಾಸರಿ 23.74 ಲಕ್ಷ ಟಪಾಲುಗಳು ವಿತರಣೆಯಾಗುತ್ತಿವೆ. ಅವುಗಳಲ್ಲಿ ಸು. ಆರ್ಧದಷ್ಟು ಬೆಂಗಳೂರು ನಗರಮೊಂದರಲ್ಲೆ ಇವೆ. ಈ ನಗರದಲ್ಲಿ ದಿನಕ್ಕೆ ಮೂರು ಭಾರಿ ಟಪಾಲು ವಿತರಿಸುವ 17 ಮತ್ತು ಎರಡು ಬಾರಿ ವಿತರಿಸುವ 258 ಅಂಚೆ ಕಛೇರಿಗಳಿವೆ. ಇತ್ತೀಚೆಗೆ ಸ್ಪೀಡ್ ಪೋಸ್ಟ್‌ ವ್ಯವಸ್ಥೆ ರೂಢಿಗೆ ಬಂದಿದೆ. ರಾಜ್ಯದಾದ್ಯಂತ 27,348 ಗಳಿಗಿಂತಲೂ ಹೆಚ್ಚು ಅಂಚೆ ಪೆಟ್ಟಿಗೆ ಸೌಲಭ್ಯವಿದೆ. ಏಳು ಸಂಜೆ ವೇಳೆಯ ಅಂಚೆ ಸೇವಾಕೇಂದ್ರಗಳಿವೆ. ಈಗ ಅಂಚೆ ಸೇವೆಗೆ ಪರ್ಯಾಯವಾದ ಖಾಸಗಿ ವ್ಯವಸ್ಥೆ ಕೊರಿಯಾರ್ ಸೇವೆ ಹೆಚ್ಚು ಪ್ರಚಲಿತವಾಗುತ್ತಿದೆ. ಇವು ನಗರ ಪ್ರದೇಶಗಳಿಗೆ ಮಾತ್ರ ಲಭ್ಯ. ಗ್ರಾಮಾಂತರ ಪ್ರದೇಶಗಳಿಗಿಲ್ಲ.

ದೂರವಾಣಿ ಸಂಪರ್ಕ[ಸಂಪಾದಿಸಿ]

ಕರ್ನಾಟಕಕ್ಕೆ 19ನೆಯ ಶತಮಾನದ ಅಂತಿಮಾವಧಿಯಲ್ಲಿ ಪರಿಚಯ. 1881-82ರ ಸುಮಾರಿಗೆ ಬೆಂಗಳೂರಿನ ದಂಡು ಪ್ರದೇಶ ಹಾಗೂ 1889ರಲ್ಲಿ ಕಾಕನ ಕೋಟೆಯಲ್ಲಿ ನಡೆಯುತ್ತಿದ್ದ ಪ್ರಪಂಚವಿಖ್ಯಾತ ಖೆಡ್ಡಾ ಆಚರಣೆಯ ಸಲುವಾಗಿ ಈ ಸೌಲಭ್ಯ ಜಾರಿಗೆ ಬಂದಿತು. ಇಂದು ಅದು ರಾಜ್ಯದಲ್ಲಿ ಅವ್ಯಾಹಿತವಾಗಿ ಬೆಳೆದಿದೆ. ಮಾರ್ಚ್, 2004ರಲ್ಲಿದ್ದಂತೆ ರಾಜ್ಯದ ಒಟ್ಟು ದೂರವಾಣಿಗಳ ಸಂಖ್ಯೆ 27,52,060. ಸು. 2700ಕ್ಕೂ ಹೆಚ್ಚು ದೂರವಾಣಿ ವಿನಿಮಯ ಕೇಂದ್ರಗಳಿವೆ. ಇವುಗಳಲ್ಲಿ ಹೆಚ್ಚು ಕಂಪ್ಯುಟರ್ವ್ಯವಸ್ಥೆಯಿಂದ ಸುಸಜ್ಜಿತವಾಗಿವೆ. ತೀವೂಗತಿಯ ನಗರೀಕರಣದ ಫಲವಾಗಿ ಬೆಂಗಳೂರು ನಗರದಲ್ಲಿ ದೂರವಾಣಿ ಸೌಲಭ್ಯ ಹೆಚ್ಚು. ರಾಜ್ಯದ ಎಲ್ಲ ಜಿಲ್ಲಾಕೇಂದ್ರಗಳು, ತಾಲ್ಲೂಕು ಮತ್ತು ಹೋಬಳಿ ಹಾಗೂ ಪ್ರಮುಖ ಹಳ್ಳಿಗಳಿಗೂ ಎಸ್.ಟಿ.ಡಿ. ಮತ್ತು ಪಿ.ಸಿ.ಓ ವ್ಯವಸ್ಥೆ ಸೌಲಭ್ಯವಿದೆ. ಸಾರ್ವಜನಿಕರಿಗೆ ಸುಲಭ ದೂರವಾಣಿ ಸಂಪರ್ಕ ಕಲ್ಪಿಸುವ ಮೊಬೈಲ್ಗಳ ವ್ಯವಸ್ಥೆ ಈಗ ಹೆಚ್ಚು ಪ್ರಚಲಿತ. ಟೆಲೆಕ್ಸ್‌ ವ್ಯವಸ್ಥೆಯೂ ಉಂಟು. ಅನೇಕ ಖಾಸಗಿ ದೂರವಾಣಿ ಸಂಸ್ಥೆಗಳು ಕಾರ್ಯನಿರತವಾಗಿವೆ.

ಆಕಾಶವಾಣಿ[ಸಂಪಾದಿಸಿ]

ಮೈಸೂರು ವಿಶ್ವವಿದ್ಯಾನಿಲಯದ ಮನಃಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಎಂ.ವಿ. ಗೋಪಾಲಸ್ವಾಮಿಯವರಿಂದ 1935ರಲ್ಲಿ ಪ್ರಪಥಮವಾಗಿ ಮೈಸೂರಿನಲ್ಲಿ ಪ್ರಾರಂಭವಾಗುವುದರೊಂದಿಗೆ ಕರ್ನಾಟಕಕ್ಕೆ ಆಕಾಶವಾಣಿ ಪರಿಚಯವಾಯಿತು. ಇಲ್ಲಿಯೇ ಭಾರತದಲ್ಲಿ ಆಕಾಶವಾಣಿ ಎಂಬ ಹೆಸರನ್ನು ಮೊದಲ ಬಾರಿಗೆ ಬಳಸಲಾಯಿತು. ಈಗ ರಾಜ್ಯದಲ್ಲಿ 9 ದೊಡ್ಡ ಪ್ರಮಾಣದ ಆಕಾಶವಾಣಿ ಪ್ರಸಾರ ಕೇಂದ್ರಗಳಿವೆ. ಬೆಂಗಳೂರು, ಮೈಸೂರು, ಧಾರವಾಡ, ಗುಲ್ಪರ್ಗ, ಭದ್ರಾವತಿ, ಹಾಸನ, ಚಿತ್ರದುರ್ಗ, ಹೊಸಕೋಟೆ ಮತ್ತು ಮಂಗಳೂರು. ಬೆಂಗಳೂರು ಮತ್ತು ಧಾರವಾಡಗಳಲ್ಲಿ ತಲಾ ಎರಡು ಕೇಂದ್ರಗಳಿವೆ. ಈ ಎಲ್ಲ ಕೇಂದ್ರಗಳು ವಾರ್ತೆ, ಕೃಷಿ, ಕೈಗಾರಿಕೆ, ತೋಟಗಾರಿಕೆ, ಹೈನುಗಾರಿಕೆ, ಪರಿಸರ, ಆರೋಗ್ಯ, ಮನರಂಜನೆ ಇತ್ಯಾದಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಬಿತ್ತರಿಸುತ್ತವೆ. ದೂದರ್ಶನದ ಪ್ರಸರಣವು ಆಕಾಶವಾಣಿಯ ಪ್ರಾಮುಖ್ಯತೆ ಕಡಿಮೆ ಮಾಡಿದೆ.

ದೂರದರ್ಶನ[ಸಂಪಾದಿಸಿ]

ಕರ್ನಾಟಕಕ್ಕೆ ವಿಳಂಬವಾಗಿ ಬಳಕೆಗೆ ಬಂದರೂ ಅತ್ಯಂತ ಪರಿಣಾಮಕಾರಿ ಸಮೂಹ ಸಂಪರ್ಕ ಮಾಧ್ಯಮ. ಹೆಚ್ಚು ಆಕರ್ಷಣೀಯ. ರಾಜ್ಯದಲ್ಲಿ ಮೊದಲು 03-09-1977ರಲ್ಲಿ ದೂರದರ್ಶನ ಪ್ರಸಾರ ಗುಲ್ಬರ್ಗದಲ್ಲಿ ಉದ್ಘಾಟನೆಯಾಯಿತು. ಅನಂತರ 01-11-1981ರಲ್ಲಿ ತತ್ಕಾಲಿಕ ದೂರದರ್ಶನ ಕೇಂದ್ರ ಬೆಂಗಳೂರಿನಲ್ಲಿ ಪ್ರಾರಂಭಗೊಂಡು ವಾರದ ಕೆಲವೇ ದಿನಗಳಲ್ಲಿ ಕಾರ್ಯಕ್ರಮ ಪ್ರಸಾರವಾಗುತ್ತಿದ್ದವು. 1988ರಿಂದ ಪೂರ್ಣಪ್ರಮಾಣದ ಪ್ರಸಾರ ಪ್ರಾರಂಭವಾಯಿತು. ಇಂದು ಇದೊಂದು ಪ್ರಾದೇಶಿಕ ಕಾರ್ಯಕ್ರಮಗಳನ್ನು ಬಿತ್ತರಿಸುವ ಸುಸಜ್ಜಿತ ದೂರದರ್ಶನ ಕೇಂದ್ರ. ರಾಷ್ಟ್ರೀಯ ಪ್ರಾಮುಖ್ಯತೆಯುಳ್ಳ ಕಾರ್ಯಕ್ರಮಗಳನ್ನು ‘ಇನಸಾಟ್’ ಉಪಗ್ರಹದ ಮೂಲಕ ಪ್ರಸಾರ ಮಾಡಲಾಗುತ್ತದೆ. ರಾಜ್ಯದಾದ್ಯಂತ ಹಲವು ಟ್ರಾನ್ಸ್‌ ಮೀ ಗಳಿದ್ದು ಅವು ಬೆಂಗಳೂರು ದೂರದರ್ಶನ ಕೇಂದ್ರದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತವೆ. ಬೆಂಗಳೂರು ದೂರದರ್ಶನ ‘ಚಂದನ’ದಲ್ಲಿ ಪ್ರಾದೇಶಿಕ ಕನ್ನಡ ಕಾರ್ಯಕ್ರಮಗಳ ಪ್ರಸಾರವಾಗುತ್ತವೆ. ಕೇಬಲ್ ನೆಟ್ವರ್ಕ ಸೌಲಭ್ಯವಿರುವ ದೂರದರ್ಶನಗಳಲ್ಲಿ ಈಟಿವಿ, ಉದಯ ಟಿವಿ, ಉಷೆ ಟಿವಿ, ಯುಟಿವಿ ಚಾನೆಲ್ಗಳ ಮೂಲಕ ಕನ್ನಡ ಕಾರ್ಯಕ್ರಮಗಳೂ ಪ್ರಸಾರವಾಗುವುವು. ಜೊತೆಗೆ ವಿವಿಧ ಭಾಷಾ ವಿವಿಧ ದೇಶಗಳ ಕಾರ್ಯಕ್ರಮಗಳೂ ಲಭ್ಯವಿದೆ.

ಪತ್ರಿಕೋದ್ಯಮ[ಸಂಪಾದಿಸಿ]

ಕರ್ನಾಟಕದಲ್ಲಿ ಪತ್ರಿಕೋದ್ಯಮವು, ಪ್ರಥಮ ಕನ್ನಡ ವೃತ್ತಪತ್ರಿಕೆ ಮಂಗಳೂರ ಸಮಾಚಾರ 1843ರಲ್ಲಿ ಮಂಗಳೂರಿನಲ್ಲಿ ಪ್ರಾರಂಭಗೊಂಡಿತು. ಈ ವೃತ್ತಪತ್ರಿಕೆ ಸಂಪಾದಕ ಬಾಸೆಲ್ ಮಿಷನ್ ಸಂಸ್ಥೆಯ ಹರ್ಮನ್ ಮೊಗ್ಲಿಂಗ್. ಕರಾವಳಿಯಿಂದ ಆರಂಭಗೊಂಡ ರಾಜ್ಯದ ಪತ್ರಿಕೋದ್ಯಮ ತರುವಾಯ ಧಾರವಾಡ, ಮೈಸೂರು, ಬೆಂಗಳೂರುಗಳಲ್ಲಿದ್ದು, 19ನೆಯ ಶತಮಾನದ ಅಂತ್ಯದವೇಳೆಗೆ ವಿವಿಧ ಕೇಂದ್ರಗಳಿಂದ ವೃತ್ತ ಪತ್ರಿಕೆಗಳು ಪ್ರಾರಂಭಗೊಂಡವು. ಭಾರತೀಯ ಕಾಂಗ್ರೆಸ್ ಮತ್ತು ಮಹಾತ್ಮ ಗಾಂಧಿಯವರು ಸ್ವತಂತ್ರ ಚಳವಳಿ ಪ್ರವೇಶ ಇಡೀ ದೇಶದ ಪತ್ರಿಕೋದ್ಯಮದ ಮೇಲೆ ಪ್ರಭಾವ ಬೀರಿದವು. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಕರ್ನಾಟಕದ ಪತ್ರಿಕೋದ್ಯದಲ್ಲಿ ಸಾಕಷ್ಟು ಪೈಪೋಟಿಯಿದೆ. ಮುದ್ರಣ ಕ್ಷೇತ್ರದಲ್ಲಾದ ಕ್ರಾಂತಿಕಾರಕ ಬದಲಾವಣೆ, ಗಣಕಯಂತ್ರದ ಬಳಕೆ, ಕೃತಕ ಉಪಗ್ರಹ, ಇಂಟರ್ನೆಟ್ ವ್ಯವಸ್ಥೆ ಮುಂತಾದವು ಕರ್ನಾಟಕದ ಪತ್ರಿಕೋದ್ಯಮದಲ್ಲಿ ವಿಸ್ಮಯ ಲೋಕವನ್ನೇ ನಿರ್ಮಿಸಿವೆ. ಅತ್ಯಧಿಕ ಸಂಖ್ಯೆಯ ಕನ್ನಡ ಮತ್ತು ಇತರ ಭಾಷಾ ಪತ್ರಿಕೆಗಳು ರಾಜ್ಯದ ರಾಜಧಾನಿ ಹಾಗೂ ಭಾರತದ ಬೃಹನ್ನಗರವಾದ ಬೆಂಗಳೂರಿನಿಂದ ಪ್ರಕಟವಾಗುತ್ತವೆ. ಮೈಸೂರು, ಮಂಗಳೂರು, ಧಾರವಾಡ ಹಾಗೂ ಬೆಳಗಾಂವಿಗಳು ಇತರ ಪ್ರಮುಖ ಪತ್ರಿಕೋದ್ಯಮ ಕೇಂದ್ರಗಳು.

ತ್ರಿಶ್ರೇಣೀಯ ಪಂಚಾಯಿತಿ ರಾಜ್ಯ ವ್ಯವಸ್ಥೆ ರಾಜ್ಯದಲ್ಲಿ ಜಾರಿಗೆ ಬರುತ್ತ್ತಿದೆ. ರಾಜ್ಯದಲ್ಲಿ 5705 ಪಂಚಾಯಿತಿಗಳೂ 176 ತಾಲ್ಲೂಕು ಬೋರ್ಡುಗಳೂ ಉಂಟು. ಜಿಲ್ಲಾಭಿವೃದ್ಧಿ ಮಂಡಳಿಗಳ ಸಂಖ್ಯೆ 27. ನೂತನ ಕಾಯಿದೆಯ ಅಡಿಯಲ್ಲಿ ಈ ಸಲಹಾಮಂಡಲಿಗಳ ಬದಲು ಜಿಲ್ಲಾ ಪರಿಷತ್ತುಗಳನ್ನು ಸ್ಥಾಪಿಸಲಾಗಿದೆ.

ಆರೋಗ್ಯ[ಸಂಪಾದಿಸಿ]

ಕರ್ನಾಟಕದಲ್ಲಿ 28,058 ಹಾಸಿಗೆಗಳಿರುವ 177 ಸರ್ಕಾರಿ ಆಸ್ಪತ್ರೆಗಳೂ 1679 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದು ಅವುಗಳಲ್ಲಿ ರೋಗಿಗಳ ಹಾಸಿಗೆ ಸಂಖ್ಯೆ 17,828, ಪ್ರಾಥಮಿಕ ಆರೋಗ್ಯಗಳ ಘಟಕಗಳು 578, ಅವುಗಳಲ್ಲಿ ರೋಗಿ ಹಾಸಿಗೆ ಸಂಖ್ಯೆ 1229, ಭಾರತೀಯ ವೈದ್ಯಪದ್ಧತಿ ಆಸ್ಪತ್ರೆಗಳು 121, ಈ ಆಸ್ಪತ್ರೆಗಳಲ್ಲಿ ಹಾಸಿಗೆ ಸಂಖ್ಯೆ 8143, ಕುಟುಂಬಕಲ್ಯಾಣ ಕೇಂದ್ರಗಳು 8143, ಸಂತಾನ ಹರಣ ಶಸ್ತ್ರ ಚಿಕಿತ್ಸೆಯಾದವರ ಸಂಖ್ಯೆ 3.77 ಲಕ್ಷ (2003-04), ಕುಟುಂಬ ಕಲ್ಯಾಣ ಉಪ ಕೇಂದ್ರಗಳು 8143, ಔಷಧಿ ಅಂಗಡಿಗಳು 14,566, ಕುಷ್ಠರೋಗ ಚಿಕಿತ್ಸಾ ಘಟಕಗಳು 12, ಜಿಲ್ಲಾ ವೈದ್ಯಕೀಯ ಪ್ರಯೋಗಾಲಯಗಳು 12, ಯುನಾನಿ ಔಷಧಾಲಯಗಳು 71, ಹೋಮಿಯೋಪತಿ ಔಷಧಾಲಯಗಳು 10, ರಾಷ್ಟ್ರೀಯ ಮಲೇರಿಯಾ ನಿರ್ಮೂಲಯೋಜನೆ, ರಾಷ್ಟ್ರೀಯ ಫಿಲೇರಿಯ ನಿಯಂತ್ರಣ ಯೋಜನೆ, ರಾಷ್ಟ್ರೀಯ ಸಿಡುಬು ನಿರ್ಮೂಲ ಯೋಜನೆ, ಕುಷ್ಟರೋಗ ನಿಯಂತ್ರಣ ಯೋಜನೆ, ಬಿ.ಸಿ.ಜಿ. ವ್ಯಾಕ್ಸಿನೇಷನ್ ಯೋಜನೆ-ಇವು ರಾಜ್ಯದಲ್ಲಿ ಜಾರಿಗೆ ಬಂದಿರುವ ಕೆಲವು ಮುಖ್ಯ ಯೋಜನೆಗಳು.

ರಾಜ್ಯದಲ್ಲಿ 4 ಸರ್ಕಾರಿ ವೈದ್ಯಕೀಯ ಕಾಲೇಜುಗಳೂ 19 ಖಾಸಗಿ ವೈದ್ಯಕೀಯ ಕಾಲೇಜುಗಳೂ ಇವೆ (2004). ಭಾರತೀಯ ವೈದ್ಯಪದ್ಧತಿ ಕಾಲೇಜುಗಳು 66, ದಂತವೈದ್ಯಕಾಲೇಜುಗಳು 42, ವೈದ್ಯ ವಿದ್ಯಾಭ್ಯಾಸದ ನಾನಾ ಶಾಖೆಗಳಲ್ಲಿ ಸ್ನಾತಕೋತ್ತರ ಶಿಕ್ಷಣ ವ್ಯವಸ್ಥೆಗಳಿವೆ. ಮೈಸೂರಿನ ಅಂಗವಿಕಲರ ಸಂಸ್ಥೆ, ಬೆಂಗಳೂರಿನ ದಂತವೈದ್ಯ ಕಾಲೇಜು, ಅಖಿಲಭಾರತ ಮಾನಸಿಕ ಆರೋಗ್ಯ ಸಂಸ್ಥೆ ಇವು ಇನ್ನು ಕೆಲವು ಮುಖ್ಯ ಸಂಸ್ಥೆಗಳು.

ಶಿಕ್ಷಣ[ಸಂಪಾದಿಸಿ]

6 ರಿಂದ 11ರ ವರೆಗಿನ ವಯಸ್ಸಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣವುಂಟು. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಪ್ರಾಥಮಿಕದಿಂದ ಪ್ರೌಢ ಶಿಕ್ಷಣದವರೆಗೆ ಉಚಿತ. ರಾಜ್ಯದಲ್ಲಿ 9173 ಪ್ರೌಢ ಶಾಲೆ ಮತ್ತು 2554 ಪದವಿಪೂರ್ವ ಕಾಲೇಜುಗಳಿವೆ. ಈ ಯೋಜನೆಯೊಳಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಸು. 11 ಲಕ್ಷ. ರಾಜ್ಯದಲ್ಲಿ ಒಟ್ಟು 18 ವಿಶ್ವವಿದ್ಯಾನಿಲಯಗಳಿವೆ, ಇವುಗಳಲ್ಲಿ 6 ಸಾಮಾನ್ಯ, 2 ಕೃಷಿ, 1 ಕನ್ನಡ, 1 ಮುಕ್ತ, 1 ತಾಂತ್ರಿಕ, 1 ವೈದ್ಯಕೀಯ 3 ಮಹಿಳಾ ಹಾಗೂ 3 ಇತರೆ ವಿಶ್ವವಿದ್ಯಾನಿಲಯಗಳಾಗಿವೆ. ರಾಜ್ಯದಲ್ಲಿ (2001-02) 1000 ಪದವಿ ಕಾಲೇಜುಗಳಿವೆ. ಅವುಗಳಲ್ಲಿ 35 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇತರೆ ಕಾಲೇಜುಗಳ ಸಂಖ್ಯೆಗಳು ಹೀಗಿವೆ: ಎಂಜಿನಿಯರಿಂಗ್ ಕಾಲೇಜುಗಳು 122; ವೈದ್ಯಕೀಯ ಕಾಲೇಜುಗಳು 32; ನ್ಯಾಯಶಿಕ್ಷಣ ಕಾಲೇಜುಗಳು 67, ವಾಣಿಜ್ಯ ಕಾಲೇಜುಗಳು 13, ಕೃಷಿ ಕಾಲೇಜುಗಳು 2, ಪಶುವೈದ್ಯ ಕಾಲೇಜು 1, ವಿವಿಧ ತಾಂತ್ರಿಕ ಶಿಕ್ಷಣಾಲಯಗಳು (ಪಾಲಿಟೆಕ್ನಿಕ್) 184, ಶಿಕ್ಷಣ ತರಬೇತಿ ಕಾಲೇಜುಗಳು 19, ಆಟ್ರ್ಸ್‌ ಮತ್ತು ಸೈನ್ಸ್‌ ಕಾಲೇಜುಗಳು 916, ಫಾರ್ಮಸಿ ಕಾಲೇಜು 1, ಪ್ರಾಚ್ಯ ಶಿಕ್ಷಣ ಸಂಸ್ಥೆಗಳು 5, ಶರೀರ ಶಿಕ್ಷಣ ಕಾಲೇಜು 1, ಲಲಿತಕಲೆಗಳ ಕಾಲೇಜು 1, ಸಮುದ್ರ ಉತ್ಪನ್ನ ಮತ್ತು ಮತ್ಸ್ಯೋದ್ಯಮ ಶಿಕ್ಷಣ ಸಂಸ್ಥೆ 1, ವಾಕ್ಶ್ರವಣ ಚಿಕಿತ್ಸಾ ಸಂಸ್ಥೆ 1, ವಿದ್ಯಾರ್ಥಿಗಳ ಸಂಖ್ಯೆ: ಸಾಮಾನ್ಯ ಶಿಕ್ಷಣ ಕಾಲೇಜುಗಳಲ್ಲಿ 3523 ಸಾವಿರ, ಎಂಜಿನಿಯರಿಂಗ್ 42,729, ವೈದ್ಯಕೀಯ 3,955, ದಂತವೈದ್ಯಕೀಯ 2,800 ವಿದ್ಯಾರ್ಥಿಗಳು ಒಟ್ಟು ಶಾಲೆಗಳ ಸಂಖ್ಯೆ 54,520 ವಿದ್ಯಾರ್ಥಿಗಳು 78 ಸಾವಿರ.

ಮೈಸೂರಿನಲ್ಲಿ ಒಂದು ಪ್ರಾದೇಶಿಕ ಶಿಕ್ಷಣ ಕಾಲೇಜಿದೆ. ಇತರ ಸಂಸ್ಥೆಗಳು : ಅಖಿಲ ಭಾರತ ಮಾನಸಿಕ ಆರೋಗ್ಯ ಸಂಸ್ಥೆ, ಬೆಂಗಳೂರು; ಗ್ಯಾಸ್ ಟರ್ಬೈನ್ ಸಂಶೋಧನ ಪ್ರತಿಷ್ಠಾನ, ಬೆಂಗಳೂರು; ರಾಷ್ಟ್ರೀಯ ಏರೋನಾಟಿಕಲ್ ಪ್ರಯೋಗಾಲಯ, ಬೆಂಗಳೂರು; ರಾಷ್ಟ್ರೀಯ ಕ್ಷಯರೋಗ ಸಂಸ್ಥೆ, ಬೆಂಗಳೂರು ; ಕೇಂದ್ರೀಯ ಆಹಾರ ಸಂಶೋಧನಾಲಯ, ಮೈಸೂರು. ಜನಸಂಖ್ಯೆ, ಮುಖ್ಯ ಅಂಶಗಳು : ಕರ್ನಾಟಕದ ಜನಸಂಖ್ಯೆ 52,850,562 (2001). ಇವರ ಪೈಕಿ 34,889,033 ಜನ (ಶೇ.66.01) ಗ್ರಾಮ ವಾಸಿಗಳು; 17,961,529 ಮಂದಿ (ಶೇ. 33.98) ಪಟ್ಟಣವಾಸಿಗಳು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ 26,898,918 ಪುರುಷರು ಮತ್ತು 25,951,644 ಮಹಿಳೆಯರು 2001ರಲ್ಲಿದ್ದಂತೆ, ಇಡೀ ಭಾರತದ ಶೇ. 6.5ರಷ್ಟು ವಿಸ್ತೀರ್ಣವಿರುವ ರಾಜ್ಯದಲ್ಲಿ ಒಟ್ಟು ರಾಪ್ಟ್ರದ ಜನಸಂಖ್ಯೆಯ ಶೇ.5.13ರಷ್ಟು ಜನ ಇದ್ದಾರೆ (2001).

ರಾಜ್ಯದ ಒಟ್ಟು 29 ಜಿಲ್ಲೆಗಳಲ್ಲಿ ಬೆಂಗಳೂರು ಜನಭರಿತವಾದುದು. (65.37ಲಕ್ಷ). ಇದಕ್ಕೆ ಪ್ರತಿಯಾಗಿ ಕೊಡಗು ಅತಿ ಕಡಿಮೆ ಜನಸಂಖ್ಯೆಯುಳ್ಳ ಜಿಲ್ಲೆ (5.48 ಲಕ್ಷ). ರಾಜ್ಯದಲ್ಲಿ 1901 ರಿಂದ 2001ರವರೆಗೆ 39.7 ಮಿಲಿಯನ್ಗಳಷ್ಟು ಜನಸಂಖ್ಯೆ ಹೆಚ್ಚುವರಿಯಾಗಿದೆ. 1991-2001ರ ರಾಜ್ಯದ ಜನಸಂಖ್ಯಾ ಬೆಳವಣಿಗೆ ದರ ಶೇ 17.25 ಆಗಿತ್ತು. 2010ರವೇಳೆಗೆ ರಾಜ್ಯದ ಜನಸಂಖ್ಯೆ ಸು. 61.5 ದಶಲಕ್ಷಗಳಿಗೆ ಹೆಚ್ಚಾಗುವುದೆಂದು ಅಂದಾಜು ಮಾಡಲಾಗಿದೆ.

ಜನಸಾಂದ್ರತೆ[ಸಂಪಾದಿಸಿ]

2001ರ ಜನಗಣತಿಯಂತೆ ರಾಜ್ಯದ ಸರಾಸರಿ ಜನಸಾಂದ್ರತೆ ಪ್ರತಿ ಚ.ಕಿಮೀಗೆ 275 ಜನರು. ಭಾರತದ ಸರಾಸರಿಗಿಂತ ಕಡಿಮೆ. ಜಿಲ್ಲೆಗಳಲ್ಲಿ ಬೆಂಗಳೂರು ಅತ್ಯಧಿಕ ಜನಸಾಂದ್ರತೆ (2979) ವುಳ್ಳದ್ದು. ದಕ್ಷಿಣ ಕನ್ನಡ (416) ಮತ್ತು ಮೈಸೂರು (383) ಜಿಲ್ಲೆಗಳು ಅನುಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ಇದಕ್ಕೆ ಪ್ರತಿಯಾಗಿ ಉತ್ತರಕನ್ನಡ ಅತಿ ಕಡಿಮೆ (132) ಜನಸಾಂದ್ರತೆಯುಳ್ಳ ಜಿಲ್ಲೆ. ತರುವಾಯ ಕೊಡಗು (133) ಮತ್ತು ಚಿಕ್ಕಮಗಳೂರು (158) ಜಿಲ್ಲೆಗಳು ಬರುತ್ತವೆ.

ನಗರ-ಗ್ರಾಮೀಣ ಜನಸಂಖ್ಯೆ[ಸಂಪಾದಿಸಿ]

ಕರ್ನಾಟಕ ಹಳ್ಳಿ ಪ್ರಧಾನ ರಾಜ್ಯ. ಒಟ್ಟು ಜನಸಂಖ್ಯೆಯಲ್ಲಿ ಶೇ. 66 ಜನರು ಗ್ರಾಮಾಂತರ ಪ್ರದೇಶಗಳಲ್ಲಿಯೂ ಉಳಿದ ಶೇ. 44 ರಷ್ಟು ನಗರಗಳಲ್ಲಿ ವಾಸಿಸುತ್ತಿದ್ದಾರೆ. ರಾಜ್ಯದ ನಗರ ಜನಸಂಖ್ಯೆಯ ಪ್ರಮಾಣ ಭಾರತದ ಸರಾಸರಿಗಿಂತ ಹೆಚ್ಚು. ಬೆಂಗಳೂರು ರಾಜ್ಯದಲ್ಲೆ ಅತಿ ಹೆಚ್ಚು ನಗರ ಜನ ಸಂಖ್ಯೆಯುಳ್ಳ ಜಿಲ್ಲೆ. ಇದು ರಾಜ್ಯದ ಒಟ್ಟು ನಗರ ಜನಸಂಖ್ಯೆಯಲ್ಲಿ ಶೇ. 32.1 ರಷ್ಟನ್ನು ಹೊಂದಿದೆ. ರಾಜ್ಯದ ರಾಜಧಾನಿ, ದೇಶದ ಮಹಾನಗರಗಳಲ್ಲಿ ಒಂದಾಗಿದ್ದು ಕೈಗಾರಿಕಾ ಕೇಂದ್ರವಾಗಿರುವುದರಿಂದ ನಗರ ಜನಸಂಖ್ಯೆ ಅತ್ಯಧಿಕ. ಬೆಂಗಳೂರು ತರುವಾಯ ಬೆಳಗಾವಿ, ಮೈಸೂರು ಮತ್ತು ಧಾರವಾಡಗಳು ಅಧಿಕ ನಗರ ಜನಸಂಖ್ಯೆಯುಳ್ಳವು. ಕೊಡಗು ಅತಿ ಕಡಿಮೆ ನಗರ ಜನಸಂಖ್ಯೆಯುಳ್ಳ ಜಿಲ್ಲೆ. ಇದರ ನಂತರ ಚಾಮರಾಜನಗರ, ಕೊಪ್ಪಳ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ನಗರ ಜನಸಂಖ್ಯೆ ಕಡಿಮೆ. ರಾಜ್ಯದಲ್ಲಿ 1901ರಲ್ಲಿ ನಗರ ಜನಸಂಖ್ಯೆ ಶೇ. 12.6ರಷ್ಟು ಮಾತ್ರ. ಈಗ ಈ ಪ್ರಮಾಣವು ಹೆಚ್ಚಾಗಿದೆ. ಕರ್ನಾಟಕದ ಹತ್ತು ಜನಭರಿತ ನಗರಗಳು (2001) ನಗರ ಜನಸಂಖ್ಯೆ 1. ಬೆಂಗಳೂರು 56,86,844 2. ಮೈಸೂರು 7,85,800 3. ಹುಬ್ಬಳಿ-ಧಾರವಾಡ 7,86,018 4. ಮಂಗಳೂರು 6,01,079 5. ಬೆಳಗಾಂವಿ 4,56,999 6. ಗುಲ್ಬರ್ಗ 4,30,265 7. ದಾವಣಗೆರೆ 3,64,523 8. ಬಳ್ಳಾರಿ 3,16,766 9. ಬಿಜಾಪುರ 2,53,891 10. ಶಿವಮೊಗ್ಗ 2,74,352 __________________________________________________________

ಲಿಂಗಾನುಪಾತ[ಸಂಪಾದಿಸಿ]

2001 ಜನಗಣತಿಯಂತೆ ಕರ್ನಾಟಕದಲ್ಲಿ ಲಿಂಗಾನುಪಾತ ಪ್ರತಿ ಸಾವಿರ ಪುರುಷರಿಗೆ 964 ಮಹಿಳೆಯರು. ಇದು ಭಾರತದ ಸರಾಸರಿಗಿಂತ (933) ಹೆಚ್ಚು. ಉಡುಪಿ, ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಗಳಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚು. ಉಡುಪಿ ಜಿಲ್ಲೆಯಲ್ಲಿ ಪ್ರತಿ ಸಾವಿರ ಪುರುಷರಿಗೆ 1127 ಮಹಿಳೆಯರಿದ್ದಾರೆ. ಇದಕ್ಕೆ ಪ್ರತಿಯಾಗಿ ಬೆಂಗಳೂರು ಜಿಲ್ಲೆಯಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ. ಅಂದರೆ ಪ್ರತಿ ಸಾವಿರ ಪುರುಷರಿಗೆ 906 ಮಹಿಳೆಯರಿದ್ದಾರೆ.

ಸಾಕ್ಷರತೆ[ಸಂಪಾದಿಸಿ]

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 33 ರಷ್ಟು ಜನರು ಅನಕ್ಷರಸ್ಥರು (2001) ಇವರಲ್ಲಿ ಶೇ. 23.71 ರಷ್ಟು ಪುರುಷರು ಮತ್ತು ಶೇ. 42.55 ರಷ್ಟು ಮಹಿಳೆಯರು. ರಾಜ್ಯದ ಒಟ್ಟು ಸಾಕ್ಷರತೆ ಶೇ. 67. ಸಾಕ್ಷರತೆ ಗ್ರಾಮೀಣ ಜನರಲ್ಲಿ (ಶೇ. 60) ಕಡಿಮೆ ಮತ್ತು ನಗರಗಳಲ್ಲಿ ಹೆಚ್ಚು (ಶೇ. 81). ಒಟ್ಟಾರೆ ಭಾರತದ ಸರಾಸರಿಗಿಂತ (ಶೇ. 65.4) ಉತ್ತಮವಾಗಿದೆ. ಸಾಕ್ಷರತೆಯಲ್ಲಿ ಬೆಂಗಳೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಈ ಹಿಂದೆ ಮೊದಲ ಸ್ಥಾನ ಹೊಂದಿದ್ದ ದ.ಕನ್ನಡವು 2ನೇ ಸ್ಥಾನದಲ್ಲಿದೆ. ಉಡುಪಿಗೆ 3ನೇ ಸ್ಥಾನ. ಇದಕ್ಕೆ ಪ್ರತಿಯಾಗಿ ರಾಯಚೂರು ಅತಿ ಕಡಿಮೆ ಸಾಕ್ಷರತೆಯುಳ್ಳ ಜಿಲ್ಲೆ. ಚಾಮರಾಜನಗರ, ಕೊಪ್ಪಳ ಮತ್ತು ಬಿಜಾಪುರ ಜಿಲ್ಲೆಗಳಲ್ಲಿಯೂ ಸಾಕ್ಷರತೆ ದರ ಕಡಿಮೆ.

ಸ್ತ್ರೀ-ಪುರುಷರ ಸಾಕ್ಷರತೆ ಗಮನಿಸಿದಾಗ ಸ್ತ್ರೀಯರಿಗಿಂತ ಪುರುಷರಲ್ಲಿ ಸಾಕ್ಷರರು ಹೆಚ್ಚು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 76.3 ಭಾಗ ಪುರುಷರು ಮತ್ತು ಶೇ. 57.45 ಭಾಗ ಮಹಿಳೆಯರು ಸಾಕ್ಷರರಾಗಿರುತ್ತಾರೆ. ದ.ಕನ್ನಡದಲ್ಲಿ ಪುರುಷ ಸಾಕ್ಷರರು ಹೆಚ್ಚಾಗಿದ್ದರೆ ರಾಯಚೂರಿನಲ್ಲಿ ಕಡಿಮೆ. ಬೆಂಗಳೂರು ಜಿಲ್ಲೆಯ ಮಹಿಳಾ ಸಾಕ್ಷರರ ಪ್ರಮಾಣ ಹೆಚ್ಚು. ಇದಕ್ಕೆ ಪ್ರತಿಯಾಗಿ ಚಾಮರಾಜನಗರ, ಗುಲ್ಬರ್ಗ ಮತ್ತು ಕೊಪ್ಪಳಗಳಲ್ಲಿ ಕಡಿಮೆ. ಇದೇ ರೀತಿ ನಗರ-ಗ್ರಾಮೀಣರ ಸಾಕ್ಷರತೆ ನೋಡಿದಾಗ ಸ್ವಾಭಾವಿಕವಾಗಿ ನಗರಗಳಲ್ಲಿ ಸಾಕ್ಷರತೆ ಹೆಚ್ಚು. ಜಿಲ್ಲಾ ನಗರಗಳ ಸಾಕ್ಷರತೆಯನ್ನು ತೆಗೆದುಕೊಂಡರೆ ಕೊಡಗಿನಲ್ಲಿ ಹೆಚ್ಚು ಮತ್ತು ರಾಯಚೂರು ಜಿಲ್ಲೆಯಲ್ಲಿ ಅತಿ ಕಡಿಮೆ.

ವಯೋರಚನೆ[ಸಂಪಾದಿಸಿ]

ರಾಜ್ಯದ ವಯೋರಚನೆಯಲ್ಲಿ ಮಕ್ಕಳ ಪ್ರಮಾಣ ಹೆಚ್ಚು. ಅಂದರೆ ರಾಜ್ಯದ ಜನಸಂಖ್ಯೆಯಲ್ಲಿ 0-14 ವಯಸ್ಸಿನವರು ಶೇ. 24.6 ರಷ್ಟು ಬಾಲಕಬಾಲಕಿಯರು. ಜನಸಂಖ್ಯೆಯಲ್ಲಿ ಶೇ. 6.9 ಭಾಗ ಅರವತ್ತು ಮತ್ತು ಅದಕ್ಕಿಂತಲೂ ಹೆಚ್ಚು ವಯಸ್ಸಿನ ವೃದ್ಧರು. ಉಳಿವರು 15 ರಿಂದ 60 ವಯಸ್ಸಿನವರು. ಇವರನ್ನು ದುಡಿಯುವ ವರ್ಗವೆಂದು ಪರಿಗಣಿಸಲಾಗಿದೆ. ಅಂದರೆ ಒಟ್ಟು ಜನಸಂಖ್ಯೆಯಲ್ಲಿ ಶೇ. 56 ರಷ್ಟು ದುಡಿಮೆ ಮಾಡುವರಾಗಿದ್ದು, ಅವರನ್ನಾಧರಿಸಿ ಶೇ. 31.5ರಷ್ಟು ಮಕ್ಕಳು ಮತ್ತು ವೃದ್ಧರು ಬದುಕುವರು.

ಕೆಲಸಗಾರರು[ಸಂಪಾದಿಸಿ]

ರಾಜ್ಯದ ಜನಸಂಖ್ಯೆಯಲ್ಲಿ ಉದ್ಯೋಗಸ್ಥರು ಮತ್ತು ಉದ್ಯೋಗ ರಹಿತರೆಂದು ಎರಡು ವರ್ಗಗಳಿವೆ. ಮೊದಲ ವರ್ಗದವರು ಉತ್ಪಾದನೆ ಮತ್ತು ಸೇವಾ ಕಾರ್ಯಗಳಲ್ಲಿ ತೊಡಗಿದ ಕೆಲಸಗಾರರು. 2001 ಜನಗಣತಿಯಂತೆ 23,534, 791 ಜನರು ದುಡಿಯುವರು ಹಾಗೂ 29,315,771 ಜನರು ಕೆಲಸಗಾರರಲ್ಲದವರು. ಅಂದರೆ ಒಟ್ಟು ಜನಸಂಖ್ಯೆಯಲ್ಲಿ ಶೇ. 55 ಭಾಗ ಉದ್ಯೋಗಸ್ಥರಾಗಿರುತ್ತಾರೆ. ದುಡಿಯುವರಲ್ಲಿ 19,364,759 (82.4) ಪೂರ್ಣಕಾಲಿಕ ಕೆಲಸಗಾರರು ಮತ್ತು 41,70,032 (17.6) ಜನರು ಅರೆಕಾಲಿಕ ಕೆಲಸಗಾರರು. ಇವರು ಆರು ತಿಂಗಳಿಗಿಂತ ಕಡಿಮೆ ಕಾಲ ಸೇವೆಯಲ್ಲಿರುವಂತಹವರು. ರಾಜ್ಯದಲ್ಲಿ ಒಟ್ಟು 68.8 ಲಕ್ಷ ಕೃಷಿಗಾರರು ಮತ್ತು 62.3 ಲಕ್ಷ ಕೃಷಿಕಾರ್ಮಿಕರಿದ್ದಾರೆ ಒಟ್ಟು ಕೆಲಸಗಾರರಲ್ಲಿ ಶೇ. 60 ಭಾಗ ಕೃಷಿವಲಯದಲ್ಲಿ ದುಡಿಯುವವರು.

ಧರ್ಮ[ಸಂಪಾದಿಸಿ]

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ (ಶೇ. 83.86) ಹಿಂದು ಧರ್ಮಿಯರು ಮುಸ್ಲಿಮರು ಎರಡನೆಯ (ಶೇ. 12.23) ಸ್ಥಾನ ಮತ್ತು ಕ್ರೈಸ್ತರು (ಶೇ.1.9) ಮೂರನೆಯ ಸ್ಥಾನದಲ್ಲಿರುವರು. ಇನ್ನುಳಿದವರು ಜೈನರು, ಬೌದ್ಧರು, ಸಿಕ್ಕರು ಹಾಗೂ ಇತರ ಧರ್ಮಿಯರು. ಜೊತೆಗೆ ರಾಜ್ಯದಲ್ಲಿ ವಿವಿಧ ಜಾತಿ ಮತ್ತು ಉಪಜಾತಿಗಳಿವೆ. ಧರ್ಮಕ್ಕನುಸಾರ ಜನಸಂಖ್ಯೆ ಧರ್ಮ ಜನಸಂಖ್ಯೆ ಶೇಕಡಪ್ರಮಾಣ ಹಿಂದು 44,321,279 83.86 ಮುಸ್ಲಿಮ್ 6,463,127 12.23 ಕ್ರೈಸ್ತ 1,009,164 1.91 ಜೈನ 412,659 0.78 ಇತರೆ 644,333 1.22

ಭಾಷೆ[ಸಂಪಾದಿಸಿ]

ಕರ್ನಾಟಕದಲ್ಲಿ ಸು. 166 ಮಾತೃಭಾಷೆಗಳಿದ್ದು ಬಹುಭಾಷಾ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ. ಕನ್ನಡ ಪ್ರಮುಖ ಹಾಗೂ ಮಾತೃ ಭಾಷೆ. ರಾಷ್ಟ್ರೀಯ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇ. 68ರಷ್ಟು ಜನರು ಕನ್ನಡ ಮಾತನಾಡುವರು. ಕನ್ನಡದ ತರುವಾಯ ಉರ್ದು ಎರಡನೆಯದು (ಶೇ. 9). ಇದು ಭಾಷೆ ಮತ್ತು ಧರ್ಮಗಳ ಸಂಬಂಧ ಕಲ್ಪಿಸುತ್ತದೆ. ಮೂರನೆಯಸ್ಥಾನ ತೆಲುಗಿಗೆ ಸೇರುತ್ತದೆ. (ಶೇ. 8.21) ಮರಾಠಿ, ತುಳು, ತಮಿಳು, ಕೊಂಕಣಿ, ಮಲೆಯಾಳಂ ಮತ್ತು ಲಂಬಾಣಿ ಇತರ ಪ್ರಮುಖ ಭಾಷೆಗಳು. ಈ ಒಂಬತ್ತು ಭಾಷೆಗಳು ರಾಜ್ಯದ ಜನಸಂಖ್ಯೆಯಲ್ಲಿ ಶೇ. 99 ರಷ್ಟನ್ನು ಒಳಗೊಂಡಿದೆ.

ಒಂದೊಂದು ಭಾಷೆ ಒಂದೊಂದು ಜಿಲ್ಲೆಗಳಲ್ಲಿ ಪ್ರಧಾನ. ಹೆಚ್ಚು ಉರ್ದು ಮಾತನಾಡುವವರು ಬೆಂಗಳೂರು, ಬಿಜಾಪುರ, ಗುಲ್ಬರ್ಗ ಮತ್ತು ಧಾರವಾಡ (ಶೇ. 44) ಜಿಲ್ಲೆಗಳು ಹಾಗೂ ಬೆಂಗಳೂರು ಮತ್ತು ಕೋಲಾರಗಳಲ್ಲಿ ತೆಲುಗು (ಶೇ. 57), ಬೆಳಗಾಂವಿ ಮತ್ತು ಬೀದರ್ಗಳಲ್ಲಿ ಮರಾಠಿ (ಶೇ. 60), ದ.ಕನ್ನಡ ಜಿಲ್ಲೆಗಳಲ್ಲಿ ಕೊಂಕಣಿ (ಶೇ. 85) ಬಿಜಾಪುರ, ಬೀದರ್, ಗುಲ್ಬರ್ಗ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಲಂಬಾಣಿ (ಶೇ. 56) ಭಾಷೆ ಮಾತನಾಡುವವರಿದ್ದಾರೆ. ಇವೆಲ್ಲದರ ನಡುವೆ ಆಂಗ್ಲ ಭಾಷೆಯೂ ರೂಢಿಯಲ್ಲಿದೆ.

ಪ್ರಮುಖ ಸ್ಥಳಗಳು[ಸಂಪಾದಿಸಿ]

ಬೆಂಗಳೂರು ಕರ್ನಾಟಕದ ರಾಜಧಾನಿ. 17ನೆಯ ಶತಮಾನದಲ್ಲಿ ಸ್ಥಾಪಿತವಾದ ಈ ನಗರದಲ್ಲೂ ಅದರ ಸುತ್ತಮುತ್ತಲೂ ಅನೇಕ ಸರ್ಕಾರಿ ಮತ್ತು ಖಾಸಗಿ ಕೈಗಾರಿಕೆಗಳಿವೆ. ಕರ್ನಾಟಕದ ಆಗ್ನೇಯ ಭಾಗದಲ್ಲಿ ಎತ್ತರದ ನೆಲದ ಮೇಲಿರುವ ಈ ನಗರದ ವಾಯುಗುಣ ವರ್ಷಾದ್ಯಂತ ಹಿತಕರ. ನಗರದಲ್ಲಿ ಒಟ್ಟು 2188 ಕೈಗಾರಿಕೆಗಳಿದ್ದು, ಅವುಗಳಲ್ಲಿ 742 ಜವಳಿ, 176 ರಾಸಾಯನಿಕ, 1562 ಎಂಜಿನೀಯರಿಂಗ್ ಕೈಗಾರಿಕೆಗಳಾಗಿರುತ್ತವೆ. ರಾಜ್ಯದ ಒಟ್ಟು ಕೈಗಾರಿಕೆಗಳಲ್ಲಿ ಶೇ. 37 ರಷ್ಟು ಈ ನಗರದಲ್ಲಿ ಸಾಂದ್ರೀಕರಿಸಿವೆ. ಬಹು ರಾಷ್ಟ್ರೀಯ ಉದ್ಯಮಗಳು, ಐ.ಟಿ. ಬಿ.ಟಿ. ಸಂಸ್ಥೆಗಳು, ಹಲವು ಬಂದಿವೆ. ನಗರದಲ್ಲಿ ಕುಶಲ ಹಾಗೂ ಅಕುಶಲ ಕೆಲಸಗಾರರಿಗೇನೂ ಅಭಾವವಿಲ್ಲ. ಇವರ ದಕ್ಷತೆ ಶಿಸ್ತುಗಳೇ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಮುಖ್ಯ ಆಕರ್ಷಣೆ. ರಾಜಾಜಿನಗರದ ಕೈಗಾರಿಕಾ ಎಸ್ಟೇಟು ಸರ್ಕಾರದಿಂದ ಪ್ರವರ್ತಿತವಾದ ಈ ಬಗೆಯ ವ್ಯವಸ್ಥೆಗಳ ಪೈಕಿ ಭಾರತದಲ್ಲೇ ದೊಡ್ಡದು, ಅತ್ಯಂತ ದಕ್ಷವಾದದ್ದು. ಬೆಂಗಳೂರಿನ ಅನೇಕ ಮನೆಗಳಲ್ಲಿ ಪರಂಪರಾಗತವಾಗಿ ಬಂದ ನೇಯ್ಗೆ ಕೆಲಸ ಇಂದಿಗೂ ಪ್ರವರ್ಧಮಾನವಾಗಿದೆ. ಬೆಂಗಳೂರು ಒಂದು ಮುಖ್ಯ ವಾಣಿಜ್ಯ ಕೇಂದ್ರ, ರೈಲ್ವೆ ಮತ್ತು ವಿಮಾನ ಮಾರ್ಗಗಳ ಸಂಧಿಸ್ಥಳ, ಸೇನಾಕೇಂದ್ರ, ಟಿಪ್ಪುಸುಲ್ತಾನನ ಕೋಟೆ, ಲಾಲ್ಬಾಗ್, ಕಬ್ಬನ್ಪಾರ್ಕ್, ಅರಮನೆ, ಸರ್ಕಾರದ ಪೀಠವಿರುವ ವಿಧಾನಸೌಧ ಮುಂತಾದ ಪ್ರೇಕ್ಷಣೀಯ ಸ್ಥಳಗಳಲ್ಲದೆ ಅನೇಕ ಸಂಶೋಧನಾಗಾರಗಳೂ ವಿದ್ಯಾಸಂಸ್ಥೆಗಳೂ ಬೆಂಗಳೂರು ಮತ್ತು ಕೃಷಿ ವಿಶ್ವವಿದ್ಯಾನಿಲಯಗಳೂ ಇವೆ. ಬೆಂಗಳೂರು ನಗರ ಬೆಳೆಯಲು ಸ್ಥಳದ ಅಡಚಣೆಯೇನೂ ಇಲ್ಲ. ಇರುವ ಮುಖ್ಯ ತೊಂದರೆಯೆಂದರೆ ನೀರಿನದು. ಕಾವೇರಿಯಿಂದ ನೀರು ಸರಬರಾಜು ಮಾಡುವ ಯೋಜನೆ ಪುರೈಸಿದ ಮೇಲೆ ಈ ತೊಂದರೆಯ ನಿವಾರಣೆಯಾಗುತ್ತಿದೆ. ಇತ್ತೀಚೆಗೆ ನಿವೇಶನ, ವಸತಿಗಳ ಕೊರತೆ ತಲೆದೋರಿದೆ. ಕೊಳಗೇರಿಗಳ ಬೆಳೆವಣಿಗೆ ಹಾಗೂ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಸಂಚಾರ ಒತ್ತಡದಿಂದ ಅಪಘಾತಗಳು ಹೆಚ್ಚುತ್ತಿವೆ. ಆಡಳಿತ ನಿರ್ವಹಣೆ ಈ ಬೃಹನ್ನಗರದಲ್ಲಿ ಅಸಾಧ್ಯವಾಗುತ್ತಿದೆ. ಮೈಸೂರು ಭಾರತದ ಉದ್ಯಾನಗಳ ನಗರವೆಂಬ ಹೆಸರು ತಳೆದಿದೆ. ಬೆಂಗಳೂರಿಗೆ ನೈಋತ್ಯದಲ್ಲಿ 140 ಕಿಮೀ ದೂರದಲ್ಲಿದೆ. ವಿಶಾಲ ರಸ್ತೆಗಳೂ ಭವ್ಯ ಭವನಗಳೂ ಮನಮೋಹಕ ಉದ್ಯಾನಗಳೂ ತುಂಬಿರುವ ಈ ನಗರದಲ್ಲಿ ಕರ್ನಾಟಕದ ಅತ್ಯಂತ ಹಳೆಯ ಮೈಸೂರು ವಿಶ್ವವಿದ್ಯಾನಿಲಯ ಇದೆ. ವರ್ಷಕ್ಕೊಮ್ಮೆ ನಡೆಯುವ ದಸರ ಉತ್ಸವ ರಾಷ್ಟ್ರೀಯ ಅಂತಾರಾಷ್ಟ್ರೀಯ ಖ್ಯಾತಿಗಳಿಸಿದೆ. ಇಂಡೊ-ಸಾರ್ಸೆನಿಕ್ ಶೈಲಿಯ ಅರಮನೆ ಒಂದು ಆಕರ್ಷಣೆ. ಜಗನ್ಮೋಹನ ಬಂಗಲೆಯ ಕಲಾವಸ್ತು ಸಂಗ್ರಹಾಲಯ, ಲಲಿತಮಹಲ್, ಪ್ರಾಣಿ ಸಂಗ್ರಹಾಲಯ ಮುಂತಾದವೂ ನಗರದ ಆಗ್ನೇಯಕ್ಕಿರುವ ಚಾಮುಂಡಿ ಬೆಟ್ಟವೂ ಪ್ರೇಕ್ಷಣೀಯ. ಮೈಸೂರು ನಗರ ರಸ್ತೆ ಮತ್ತು ರೈಲುಮಾರ್ಗಗಳ ಸಂಧಿಸ್ಥಳ. ನಗರಕ್ಕೆ ಸಮೀಪದಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಸುಪ್ರಸಿದ್ಧವಾದ ಬಂಡೀಪುರ ಅಭಯಾರಣ್ಯವೂ ವನ್ಯಧಾಮವೂ, ರಂಗನತಿಟ್ಟಿನ ಪಕ್ಷಿಧಾಮವೂ ಇರುವುದು. ಇತಿಹಾಸ ಸುಪ್ರಸಿದ್ಧವಾದ ಪುಣ್ಯ ಕ್ಷೇತ್ರಗಳು, ಶ್ರೀರಂಗಪಟ್ಟಣ ತಲಕಾಡುಗಳು, ಹೊಯ್ಸಳ ಶಿಲ್ಪಾಗಾರಗಳಾದ ಸೋಮನಾಥಪುರ ಬೇಲೂರು ಹಳೇಬೀಡುಗಳು ಅತ್ಯಂತ ಉನ್ನತ ಏಕಶಿಲಾವಿಗ್ರಹವಾದ ಗೊಮ್ಮಟೇಶ್ವರವಿರುವ ಶ್ರವಣಬೆಳಗೊಳ, ಶಿವಸಮುದ್ರ ಮತ್ತು ಶಿಂಷ ಹೆಚ್ಚು ಆಕರ್ಷಣೆಗಳು. ಕೈಗಾರಿಕೆಗಳಿಗೆ ಅಗತ್ಯವಾದ ವಿದ್ಯುಚ್ಫಕ್ತಿ, ನೀರಿನ ಸೌಲಭ್ಯ, ಅಗ್ಗದ ಕಾರ್ಮಿಕ ಸರಬರಾಜು, ಸ್ಥಳಾನುಕೂಲ ಇವೆಲ್ಲ ಇದ್ದರೂ ಕೈಗಾರಿಕೆಯ ದೃಷ್ಟಿಯಿಂದ ಈ ನಗರ ಅಷ್ಟು ಮುಂದುವರಿದಿಲ್ಲ. ನಗರದಲ್ಲಿ ಕೆಲವು ದೊಡ್ಡ ಕೈಗಾರಿಕೆಗಳಿವೆ. ಇವುಗಳಲ್ಲಿ ನಾಲ್ಕು ಸರ್ಕಾರದವು. ಹುಬ್ಬಳ್ಳಿ-ಧಾರವಾಡ ಗುಂಪು ಜನಸಂಖ್ಯೆಯ ದೃಷ್ಟಿಯಿಂದ ಈಗ ಎರಡನೆಯದಾಗಿದೆ. ಹುಬ್ಬಳ್ಳಿ ಧಾರವಾಡಗಳು ಅವಳಿನಗರಗಳು. ಇವೆರಡರ ನಡುವೆ ಹೆಚ್ಚು ಅಂತರವಿಲ್ಲ. ಇವು ಒಂದಾಗುತ್ತಿವೆ. ಹುಬ್ಬಳ್ಳಿಯಲ್ಲಿ ಕೈಗಾರಿಕೆ, ವಾಣಿಜ್ಯಗಳು ಪ್ರಧಾನವಾಗಿವೆ; ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ ಕೇಂದ್ರ; ಕೃಷಿ ವಿಶ್ವವಿದ್ಯಾನಿಲಯ ಜಿಲ್ಲಾ ಆಡಳಿತ ಕೇಂದ್ರ, ಹುಬ್ಬಳ್ಳಿ ಸಂಚಾರಮಾರ್ಗಗಳ ಸಂಧಿಸ್ಥಳ. ಮಂಗಳೂರು ಕರಾವಳಿಯ ದೊಡ್ಡ ನಗರ; ರೇವು ಪಟ್ಟಣ. ಇಲ್ಲಿಯ ಬಂದರು ಕೇವಲ ಸಾಗರ ಮಾರ್ಗದ ಬದಿತಾಣವಾಗಿದ್ದು ಬಹುಕಾಲ ಮುಂಗಾರು ಮಳೆಗಾಲದಲ್ಲಿ ಅನುಪಯುಕ್ತವಾಗಿತ್ತು. ಇಡೀ ಕರ್ನಾಟಕ ಇದರ ಹಿನ್ನಾಡು. ಭಾರತದ ಕಾಫಿ ನಿರ್ಯಾತದ ಮುಕ್ಕಾಲು ಭಾಗ ಸಾಗುವುದು ಈ ಮೂಲಕ. ಕರ್ನಾಟಕದಿಂದ ಹೊರದೇಶಗಳಿಗೆ ಸಾಗುವ ಕಬ್ಬಿಣದ ಅದುರಿನ ಸಾಗಣೆಗೆ ದೃಷ್ಟಿಯಿಂದಲೂ ಇದು ಪ್ರಾಮುಖ್ಯ ತಳೆದಿದೆ. ಈಗ ಇದನ್ನು ಭಾರತದ ಪ್ರಧಾನ ಬಂದರುಗಳಲ್ಲೊಂದಾಗಿ ಅಭಿವೃದ್ಧಿಪಡಿಸಲಾಗಿದೆ. ವಿಶ್ವವಿದ್ಯಾನಿಲಯ ಮತ್ತು ಸ್ನಾತಕೋತ್ತರ ಕೇಂದ್ರವೂ ಅನೇಕ ಶಾಲಾ ಕಾಲೇಜುಗಳೂ ಇಲ್ಲಿವೆ. ನವಮಂಗಳೂರು ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದ್ದು, ಅದು ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿದೆ.

ಕೋಲಾರ ಚಿನ್ನದ ಗಣಿ ಇರುವುದು ಬೆಂಗಳೂರಿನಿಂದ ಸು. 96 ಕಿಮೀ ದೂರದಲ್ಲಿ. ವಿಶ್ವದ ಅತ್ಯಂತ ಆಳವಾದ (2,743 ಮೀ) ಚಿನ್ನದ ಗಣಿ ಇಲ್ಲಿಯದು. ಇದು ಈಗ ರಾಷ್ಟ್ರೀಕರಣಗೊಂಡ ಉದ್ಯಮ. ಇತ್ತೀಚೆಗೆ ಚಿನ್ನದ ನಿಕ್ಷೇಪವು ಮುಗಿದಿರುವುದರಿಂದ ಗಣಿ ಕಾರ್ಯಾಚರಣೆ ಸ್ಥಗಿತವಾಗಿವೆ.

ಬೆಳಗಾಂವಿ ಮರ್ಮಗೋವಕ್ಕೆ ಹೆಬ್ಬಾಗಿಲಿನಂತಿದೆ. ಉತ್ತರ ಮೈದಾನದ ಮುಖ್ಯ ರಸ್ತೆಗಳು ಇಲ್ಲಿ ಸಂಧಿಸಿ ಇಲ್ಲಿಂದಾಚೆಗೆ ಸಾಗುತ್ತವೆ. ಬೆಳೆಯುತ್ತಿರುವ ಹತ್ತಿ ಉದ್ಯಮದ ಕೇಂದ್ರವಿದು. ಇನ್ನೂ ಹಲವು ಕೈಗಾರಿಕೆಗಳಿವೆ. ಇದು ಕರ್ನಾಟಕದ ಎರಡನೆಯ ಸೇನಾಕೇಂದ್ರ. ವಿಶ್ರಾಂತಿದಾಣ.

ಕರ್ನಾಟಕದಲ್ಲಿ ಪ್ರೇಕ್ಷಣೀಯ ಹಾಗೂ ಯಾತ್ರಾಸ್ಥಳಗಳಿಗೇನೂ ಕೊರತೆಯಿಲ್ಲ. ನಿಸರ್ಗ ಸೌಂದರ್ಯದಿಂದ ಕೂಡಿದ ತಾಣಗಳೂ ಇತಿಹಾಸವನ್ನು ಕೆತ್ತಿದಂತಿರುವ ಕ್ಷೇತ್ರಗಳೂ ಅನೇಕ, ಕೊಡಗಿನಲ್ಲಿರುವ ಭಾಗಮಂಡಲ ಬಳಿಯ ತಲಕಾವೇರಿ ಹಿಂದೂಗಳಿಗೆ ಪವಿತ್ರ. ಧರ್ಮಸ್ಥಳ ಪುತ್ತೂರು ತಾಲ್ಲೂಕಿನಲ್ಲಿ ಮಂಗಳೂರಿಗೆ ಸು. 68 ಕಿಮೀ ದೂರದಲ್ಲಿರುವ ಒಂದು ಪವಿತ್ರ ಸ್ಥಳ. ಗೋಕರ್ಣ ಉತ್ತರ ಕನ್ನಡ ಜಿಲ್ಲೆಯ ಯಾತ್ರಾಸ್ಥಳ. ಇಲ್ಲಿಯ ಪವಿತ್ರ ಲಿಂಗ ಗೋವಿನ ಕಿವಿಯಂತಿದೆ. ಹಿಂದುಗಳ ಆರಾಧನಾ ಕೇಂದ್ರವಿದು. ಕಾರ್ಕಳ ಮಂಗಳೂರಿನ ಬಳಿ ಇದೆ. ಇಲ್ಲಿಯ ಗೊಮ್ಮಟೇಶ್ವರ ಶಿಲಾವಿಗ್ರಹ ಶ್ರವಣಬೆಳಗೊಳದಲ್ಲಿರುವುದಕ್ಕೆ ಎರಡನೆಯದು. ಮಂಡ್ಯ ಜಿಲ್ಲೆಯ ಮೇಲುಕೋಟೆ ಶ್ರೀವೈಷ್ಣವ ಕೇಂದ್ರ. ಬೆಟ್ಟದ ಮೇಲೆ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ನಡೆಯುವ ವೈರಮುಡಿಉತ್ಸವ ಹಿಂದೂ ಆಸ್ತಿಕರ ಆಕರ್ಷಣೆ. ಮೂಡಬಿದಿರೆ ಮಂಗಳೂರಿಗೆ ಸು. 35 ಕಿಮೀ ದೂರದಲ್ಲಿದೆ. ಇದು ಜೈನಕಾಶಿ. ಮೈಸೂರಿನ ಬಳಿ ಕಪಿಲಾ ನದಿ ದಂಡೆಯ ಮೇಲೆ ಇರುವ ನಂಜನಗೂಡು ಈಶ್ವರನ ಆವಾಸಸ್ಥಾನ. ತುಂಗಾನದಿ ದಡದಲ್ಲಿ ಮಲೆನಾಡಿನ ನಡುವೆ ಇರುವ ಶೃಂಗೇರಿಯ ಮಠ ಶಂಕರಾಚಾರ್ಯರಿಂದ ಸ್ಥಾಪಿತವಾದದ್ದು. ಈ ಊರು ನಿಸರ್ಗ ಸೌಂದರ್ಯದಿಂದ ಆವೃತ. ಬೆಳಗಾವಿ ಜಿಲ್ಲೆಯ ಸವದತ್ತಿ ಬಳಿಯ ಶ್ರೀ ರೇಣುಕ ಕ್ಷೇತ್ರಕ್ಕೆ ಎಲ್ಲಮ್ಮನ ಗುಡ್ಡವೆಂಬ ಹೆಸರಿದೆ. ಇಲ್ಲಿಯ ದೇವಸ್ಥಾನ ಪುರಾತನವಾದದ್ದು. ಸಿದ್ಧಗಂಗಾ ತುಮಕೂರಿನ ಬಳಿಯ ಕ್ಷೇತ್ರ. ಸುತ್ತಣ ಪ್ರಕೃತಿಯ ದೃಶ್ಯ ಚೆಲುವಿನದು. ಸುಬ್ರಹ್ಮಣ್ಯ ಪಶ್ಚಿಮ ಘಟ್ಟಗಳ ದಕ್ಷಿಣ ಭಾಗದಲ್ಲಿದೆ. ವರ್ಷಕ್ಕೊಮ್ಮೆ ನಡೆಯುವ ರಥೋತ್ಸವ, ದನಗಳ ಜಾತ್ರೆ ಸಾವಿರಾರು ಮಂದಿಗೆ ಆಕರ್ಷಣೆ. ಉಡುಪಿ ಭಾರತದ ಮುಖ್ಯ ಯಾತ್ರಾಸ್ಥಳಗಳಲ್ಲೊಂದು. ಇಲ್ಲಿ ಮಧ್ವಾಚಾರ್ಯರಿಂದ ಪ್ರತಿಷ್ಠಿತವಾದ ಕೃಷ್ಣನ ಮಂದಿರವಿದೆ. ಅಷ್ಟ ಮಠಗಳಿವೆ.

ಚಿತ್ರದುರ್ಗದ ಬಳಿಯಲ್ಲಿ ಇರುವ ಚಂದ್ರವಳ್ಳಿಯ ಉತ್ಖನನದಿಂದ ಗತಕಾಲದತ್ತ ಇಣುಕುನೋಟ ದೊರಕುತ್ತದೆ. ಕಿತ್ತೂರಿನ ಬಳಿಯ ದೇವಗಿರಿ ಮತ್ತು ದೇಗುಲಹಳ್ಳಿಗಳಲ್ಲಿ ಕದಂಬರ ಕಾಲದ ಶಿಲ್ಪವನ್ನೊಳಗೊಂಡ ದೇವಾಲಯಗಳನ್ನು ಕಾಣಬಹುದು. ತುಮಕೂರಿನ ಬಳಿ ಇರುವ ಕೈದಾಳದ ಚೆನ್ನಕೇಶವನ ದೇವಸ್ಥಾನ ಹೊಯ್ಸಳ ಶೈಲಿಯದು. ಬೆಳಗಾವಿಯ ಬಳಿಯ ಖಾನಾಪುರದಲ್ಲಿ ಪಿಂಗಾಣಿ ಕಾರ್ಖಾನೆಯಿದೆ. ಈ ಪ್ರದೇಶದಲ್ಲಿರುವ ಬಾಕ್ಸೈಟ್ ಮತ್ತು ಮ್ಯಾಂಗನೀಸ್ ನಿಕ್ಷೇಪಗಳು ಬಹು ಸಂಪದ್ಭರಿತವಾದವು. ಸುತ್ತಣ ನಿಸರ್ಗವೂ ಸುಂದರವಾದದ್ದು. ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಸ್ಥಳ ಕಿತ್ತೂರು. ಮಹೀಪಾಲಗಡವಿರುವುದು ಬೆಳಗಾಂವಿಯ ಬಳಿ. ವೈಜನಾಥ ಗುಹಾ ದೇವಾಲಯದಿಂದಾಗಿ ಇದು ಪ್ರಸಿದ್ಧ. ಮಡಿಕೇರಿ ಕೊಡಗು ಜಿಲ್ಲೆಯ ಮುಖ್ಯ ಪಟ್ಟಣ. ಹಿಂದಿನ ಕೊಡಗು ರಾಜ್ಯದ ರಾಜಧಾನಿ. ಇಲ್ಲಿ ಕೊಡಗಿನ ರಾಜರ ಕಾಲದ ಅನೇಕ ಸ್ಮಾರಕಗಳಿವೆ. ಮೈಸೂರಿಗೆ ಸಮೀಪ ಇರುವ ಶ್ರೀರಂಗಪಟ್ಟಣ ಮೈಸೂರು ದೊರೆಗಳ ಮುಂಚಿನ ರಾಜಧಾನಿಯಾಗಿತ್ತು. ಟಿಪ್ಪುಸುಲ್ತಾನನ ಸ್ಮಾರಕ, ದರಿಯಾದೌಲತ್ ಬೇಸಗೆ ಅರಮನೆ, ಕೋಟೆ ಮತ್ತು ಶ್ರೀರಂಗನಾಥನ ದೇವಾಲಯ ಇವೆ. ಕಾವೇರಿಯಿಂದ ನಿರ್ಮಿತವಾದ ಮೂರು ದೊಡ್ಡ ದ್ವೀಪಗಳಲ್ಲಿ ಶ್ರೀರಂಗಪಟ್ಟಣ ಮೊದಲನೆಯದು. ಎರಡನೆಯದಾದ ಶಿವಸಮುದ್ರವೂ ಕರ್ನಾಟಕದಲ್ಲೇ ಇದೆ.

ಕರ್ನಾಟಕದಲ್ಲಿ ಬೆಟ್ಟದಾಣಗಳೂ ವಿಶ್ರಾಂತಿಧಾಮಗಳೂ ಮೃಗಯಾವಿನೋದ ಪ್ರದೇಶಗಳೂ ವಿಹಾರ ಕೇಂದ್ರಗಳೂ ಅನೇಕ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿರುವ ಆಗುಂಬೆ ಒಂದು ಸಣ್ಣ ಹಳ್ಳಿ. ಅರಬ್ಬೀ ಸಮುದ್ರದ ಕಡೆ ಅಸ್ತಮಿಸುವ ಸೂರ್ಯನನ್ನು ಇಲ್ಲಿಂದ ವೀಕ್ಷಿಸಲು ಅನೇಕರು ಇಲ್ಲಿಗೆ ಬರುತ್ತಾರೆ. ಸುತ್ತಣ ಸನ್ನಿವೇಶ ರಮ್ಯವಾದದ್ದು. ಬಂಡೀಪುರ ಮೈಸೂರಿಗೆ ಸು. 80 ಕಿಮೀ ದೂರದಲ್ಲಿದೆ. ಬನ್ನೇರುಘಟ್ಟ ಬೆಂಗಳೂರಿಗೆ ಸು. 20 ಕಿಮೀ ದೂರದಲ್ಲಿ ಆನೆಕಲ್ಲು ರಸ್ತೆಯ ಬಳಿ ಇದೆ. ಬೆಟ್ಟದ ಬುಡದ ಸಂಪಂಗಿರಾಮಸ್ವಾಮಿ ದೇವಾಲಯ ಪ್ರಕೃತಿ ರಮ್ಯಸ್ಥಳದಲ್ಲಿದೆ. ನಾಗರಹೊಳೆಗೆ ಕೊಡಗಿನ ವಿರಾಜಪೇಟೆಯಿಂದ ಸು. 20 ಕಿಮೀ ದೂರ. ಇದು ಅಭಯಾರಣ್ಯ. ಬೆಂಗಳೂರಿಗೆ ಹತ್ತಿರದಲ್ಲೆ ಇರುವ ನಂದಿ ಬೆಟ್ಟ ವಿಶ್ರಾಂತಿಧಾಮ. ಶಿವಗಂಗಾ ಕೂಡ ಬೆಂಗಳೂರಿಗೆ ಹತ್ತಿರದಲ್ಲಿದೆ. ಇದೊಂದು ಚೆಲುವದಾಣ. ವಸಂತಪುರ ಬೆಂಗಳೂರಿನ ಬಳಿಯ ಪುಟ್ಟ ಬೆಟ್ಟ.

ಅಸಂಖ್ಯಾತ ಜಲಪಾತಗಳು ಕರ್ನಾಟಕದ ಇನ್ನೊಂದು ವೈಶಿಷ್ಟ್ಯ. ಶಿವಮೊಗ್ಗ ಜಿಲ್ಲೆಯ ತಾಳಗುಪ್ಪಕ್ಕೆ ಸು. 16 ಕಿಮೀ ದೂರದಲ್ಲಿ ಶರಾವತಿ ನದಿಯಿಂದಾಗಿರುವ ಜೋಗದ (ಗೇರುಸೊಪ್ಪೆ) ಜಲಪಾತ ಜಗತ್ಪ್ರಸಿದ್ಧ. ಮಂಡ್ಯಕ್ಕೆ ಸು. 80 ಕಿಮೀ ದೂರದಲ್ಲಿರುವ ಶಿವಸಮುದ್ರದ ಬಳಿ ಕಾವೇರಿ ಎರಡಾಗಿ ಕವಲೊಡೆದು ಧುಮ್ಮಿಕ್ಕುತ್ತದೆ. ಉತ್ತರದ ಕವಲು ಗಗನಚುಕ್ಕಿ, ದಕ್ಷಿಣದ್ದು ಭರಚುಕ್ಕಿ. ಭಾರತದಲ್ಲಿ ಮೊಟ್ಟಮೊದಲು ದೊಡ್ಡ ಪ್ರಮಾಣದಲ್ಲಿ ಜಲವಿದ್ಯುತ್ತಿನ ಉತ್ಪತ್ತಿ ಮಾಡಲಾರಂಭಿಸಿದ್ದು ಇಲ್ಲೇ. ಬೆಳಗಾಂವಿ ಜಿಲ್ಲೆಯ ಗೋಕಾಕದ ಘಟಪ್ರಭಾ ನದಿಯ ಗೋಕಾಕ ಜಲಪಾತ ಗೇರು ಸೊಪ್ಪೆಯಷ್ಟು ದೊಡ್ಡದಲ್ಲ. ಇಲ್ಲಿ ಭಾರತದ ಮೊಟ್ಟಮೊದಲಿನ ಜಲವಿದ್ಯುತ್ ಜನಕ ಯಂತ್ರ ಸ್ಥಾಪಿತವಾಯಿತು. ಗೋಕಾಕ ಜಲಪಾತಮೊಂದು ಸುಂದರ ತಾಣ. ಯಲ್ಲಾಪುರಕ್ಕೆ ಉತ್ತರದಲ್ಲಿರುವ ಕಾಳೀನದಿಯ ಲಾಲ್ಗುಳಿ, ಯಲ್ಲಾಪುರದ ದಕ್ಷಿಣದಲ್ಲಿ ಗಂಗಾವಳಿ ನದಿಯ ಮಾಗೋಡು, ಬೆಳಗಾವಿಗೆ ಈಶಾನ್ಯದಲ್ಲಿರುವ ಮಾರ್ಕಂಡೇಯ, ಶಿರಸಿಯ ಬಳಿಯ ಶಿವಗಂಗಾ, ಸಿದ್ದಾಪುರದ ಉಂಚಳ್ಳಿ, ಆಗುಂಬೆಯ ಬಳಿಯ ವರಹಿ- ಇವು ಇತರ ಕೆಲವು ಜಲಪಾತಗಳು.

ನದಿಗೆ ಅಡ್ಡಲಾಗಿ ಕಟ್ಟಿದ ಕಟ್ಟೆಗಳಿಂದ ನಿರ್ಮಿತವಾದ ಜಲಾಶಯಗಳೂ ಚೆಲುವುದಾಣಗಳೇ. ಮೈಸೂರಿನ ಹತ್ತಿರ ಇರುವ ಕೃಷ್ಣರಾಜಸಾಗರ ಅತ್ಯಂತ ಪ್ರಸಿದ್ಧವಾದ್ದು. ಇಲ್ಲಿರುವ ಬೃಂದಾವನಕ್ಕೆ ಅಂತರರಾಷ್ಟ್ರೀಯ ಖ್ಯಾತಿಯಿದೆ. ಪ್ರಾಚೀನ ಸರೋವರಗಳಲ್ಲಿ ರಾಣಿಬೆನ್ನೂರಿನ ಬಳಿಯ ಮದಗಮಸೂರ್ ಸರೋವರ ಪ್ರಸಿದ್ಧವಾದದು. ಇದರ ಶಿಲ್ಪ ವಿಶಿಷ್ಟವಾದ್ದು. ವಿಜಯನಗರ ಕಾಲದಲ್ಲಿ ಕಟ್ಟಿದ ಈ ಸರೋವರದ ಕಟ್ಟೆ ಮಣ್ಣಿನದು; ಒಂದು ಫರ್ಲಾಂಗ್ ಉದ್ದವಿದೆ. ಬೆಂಗಳೂರಿಗೆ ಸನಿಯದಲ್ಲಿ ಅರ್ಕಾವತಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತಿಪ್ಪಗೊಂಡನಹಳ್ಳಿ ಜಲಾಶಯಪ್ರದೇಶ ವಿಹಾರಿಗಳಿಗೊಂದು ಆಕರ್ಷಣೆ. ಮಲಪ್ರಭಾ ನದಿ ಘಟ್ಟಗಳನ್ನು ಕೊರೆದು ಹರಿದುಬರುವ ತಾಣ ನವಿಲುತೀರ್ಥ. ವಾಣಿವಿಲಾಸಸಾಗರ ಹಿರಿಯೂರಿನ ಬಳಿಯ ಕೃತಕ ಸರೋವರ. ತುಂಗಭದ್ರಾ ಕಟ್ಟೆಯ ಮೇಲಿನ ವಿಶಾಲ ಸಾಗರ ಈಚಿನ ಒಂದು ಆಕರ್ಷಣೆಯಾಗಿದೆ.

ಕರ್ನಾಟಕದ ಹಲವಾರು ಎಡೆಗಳಲ್ಲಿರುವ ಐತಿಹಾಸಿಕ ಸ್ಥಳಗಳೂ ಶಿಲ್ಪಕಲಾಕೃತಿಗಳೂ ಅಸಂಖ್ಯಾತ. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಉಲ್ಲೇಖಿಸಬಹುದಾಗಿದೆ. ಉತ್ತರ ಕರ್ನಾಟಕದಿಂದ ಆರಂಭ ಮಾಡುವುದಾದರೆ, ಬಿಜಾಪುರ ಮೊದಲನೆಯದು. ಪಟ್ಟಣದ ಸುತ್ತಣ ಕೋಟೆಯ ಉದ್ದ 13 ಕಿಮೀ. ಈಗಲೂ ಇದು ಒಳ್ಳೆಯ ಸ್ಥಿತಿಯಲ್ಲಿದೆ. ಇಲ್ಲಿಯ ಗೋಳಗುಮ್ಮಟ ತುಂಬ ಪ್ರಸಿದ್ಧವಾದ್ದು. ಇಲ್ಲಿರುವ ಮಸೀದಿ ಇಡೀ ದಕ್ಷಿಣ ಭಾರತದಲ್ಲೇ ದೊಡ್ಡದು. ಗುಲ್ಬರ್ಗ ಮತ್ತು ಬಿದರೆ ಇನ್ನೆರಡು ಸ್ಥಳಗಳು. ಗುಲ್ಬರ್ಗದ ಕೋಟೆ ಬತ್ತೇರಿಗಳು ದೊಡ್ಡ ಆಕರ್ಷಣೆಗಳು. ಇಲ್ಲಿಯ ಶರಣಬಸವ ದೇವಸ್ಥಾನಕ್ಕೆ ಯಾತ್ರಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ನಿಸರ್ಗದ ಮಡಿಲಲ್ಲಿರುವ ಬೀದರ್ನ ಪುರಾತನ ಕೋಟೆಗಳೂ ಭವನಗಳೂ ಹಿಂದೂ-ಮುಸ್ಲಿಂ ಕಲೆಗಳ ಸಂಗಮದ ಪ್ರತೀಕಗಳು. ಬಿದ್ರಿ ಕಲೆಗೆ ಈ ಊರು ಪ್ರಸಿದ್ಧ. ಬೀದರ್ಗೆ ಸು. 112 ಕಿಮೀ ದೂರದಲ್ಲಿರುವ ಕಲ್ಯಾಣ ಚಾಳುಕ್ಯರ ರಾಜಧಾನಿಯಾಗಿತ್ತು. ಹಿಂದೂ ಯುದ್ಧಶಿಲ್ಪದ ಪರಿಚಯ ಪಡೆಯಬೇಕೆನ್ನುವವರು ರಾಯಚೂರಿಗೆ ಭೇಟಿ ಕೊಡಬೇಕು. ಇದರ ಹತ್ತಿರದಲ್ಲೇ ಮಂತ್ರಾಲಯವಿದೆ. ಇದು ಹಿಂದೂಗಳಿಗೆ ಪವಿತ್ರಸ್ಥಳ; ಬಾದಾಮಿಯ ಗುಹೆಗಳೂ, ಪಟ್ಟದಕಲ್ಲು, ಐಹೊಳೆಗಳೂ, ಕರ್ನಾಟಕದ ಪ್ರಾಚೀನ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತವೆ. ಬಾದಾಮಿಯಲ್ಲಿ ಹುಟ್ಟಿದ ಚಾಳುಕ್ಯ ಕಲೆ ಗದುಗಿನಲ್ಲೂ ಬೆಳೆಯಿತು. ಈಗ ಗದಗ್ ಹತ್ತಿ ವ್ಯಾಪಾರಕೇಂದ್ರ. ಕನ್ನಡನಾಡಿನ ಶಿವಶರಣರ ಆಧ್ಯಾತ್ಮಿಕ ಸಾಮಾಜಿಕ ಕ್ರಾಂತಿಗೆ ಜನ್ಮ ನೀಡಿದ ಸ್ಥಳವೇ ಕೂಡಲಸಂಗಮ. ಗದಗಿನ ಸನಿಯದಲ್ಲೇ ಇರುವ ಲಕ್ಕುಂಡಿಯಲ್ಲೂ ಐಹೊಳೆಯಲ್ಲಿರುವಂತೆ ಅನೇಕ ಪ್ರಾಚೀನ ದೇಗುಲಗಳಿವೆ. ಇವು ಚಾಳುಕ್ಯ ಕಲೆಯ ವಿವಿಧ ಮಾದರಿಗಳು. ಈ ಪ್ರದೇಶವನ್ನು ಚಾಳುಕ್ಯ ವಾಸ್ತುಶಿಲ್ಪದ ತೊಟ್ಟಿಲು ಎಂದು ಫರ್ಗುಸನ್ ಕರೆದಿದ್ದಾನೆ. ಡಂಬಳ, ಅಣ್ಣಿಗೇರಿ, ಇಟಿಗಿ, ಕುಕ್ಕನೂರು, ಕುಂದಗೋಳ, ಹಾವೇರಿ, ಲಕ್ಷ್ಮೇಶ್ವರ, ತಿಳವಳ್ಳಿ ನೀರಲಿಗಿ, ಗಳಗನಾಥ, ಹಾವನೂರು, ಹರಳಹಳ್ಳಿ, ಹಾನಗಲ್, ಬಂಕಾಪುರ, ಬನವಾಸಿ, ಆನವಟ್ಟಿ, ಬಾಳಂ ಬೀಡು, ಉಣಕಲ್, ಗಂಜಿಗಟ್ಟಿ, ಕುರವತ್ತಿ, ಬಾಗಲಿ- ಇವೆಲ್ಲ ಕರ್ನಾಟಕದ ಪ್ರಾಚೀನ ಸಂಸ್ಕೃತಿಯನ್ನೂ ಇತಿಹಾಸವನ್ನೂ ಮಿಡಿಯುವ ನಾಡಿಗಳು.

ಇತಿಹಾಸದ ಹಲವಾರು ಸಂಪದ್ಯುಕ್ತ ಸ್ಮೃತಿಗಳು ಚೆಲ್ಲಾಡಿರುವುದು ಹಂಪಿಯಲ್ಲಿ. ಇದು ವಿಜಯನಗರ ಸಾಮ್ರಾಜ್ಯದ ಹೃದಯಪ್ರದೇಶವಾಗಿತ್ತು. ಭಾರತದಲ್ಲಿ ಕೊಟ್ಟ ಕೊನೆಯ ವೈಭವಯುತ ಸಾಮ್ರಾಜ್ಯವಾಗಿದ್ದ ವಿಜಯನಗರದ ಸಂಸ್ಕೃತಿ ನಾಗರಿಕತೆಗಳ ಸಂಕೇತವಾಗಿ ಅಲ್ಲಿ ಅನೇಕ ಭಗ್ನಾವಶೇಷಗಳಿವೆ. ಮಲೆಘಟ್ಟಗಳ ನಡುವಣ ಪಾಳು ಬಯಲಿನ ನಡುವೆ ನಿಂತ ಉಗ್ರನರಸಿಂಹ, ರಾಣಿಮಹಲ್, ಕಮಲಮಹಲ್, ಆನೆಸಾಲು, ಅರಮನೆಯ ಆಸ್ತಿಭಾರ, ಹಜಾರ ರಾಮನ ದೇವಸ್ಥಾನ ಮುಂತಾದ ಹಲವಾರು ಸ್ಮಾರಕಗಳು ವಿಜಯನಗರದ ಭವ್ಯ ಇತಿಹಾಸವನ್ನು ಸಾರುತ್ತವೆ. ಇದರ ಬಳಿಯೇ ಆಧುನಿಕ ಶಿಲ್ಪದ ಫಲವಾದ ತುಂಗಭದ್ರಾ ಕಟ್ಟೆಯಿದೆ.

ದಕ್ಷಿಣ ಮಲೆನಾಡಿನ ಸೆರಗಿನಲ್ಲಿರುವ ಬೇಲೂರು ಹಳೆಬೀಡುಗಳಲ್ಲಿ ಹೊಯ್ಸಳ ಶಿಲ್ಪದ ಮಹೋನ್ನತಿಯನ್ನು ಕಾಣಬಹುದು. ಇಲ್ಲಿಯ ದೇಗುಲಗಳು ವಿಶ್ವಪ್ರಸಿದ್ಧವಾದಂಥವು. ಇಲ್ಲಿ ಕಲ್ಲಿನಲ್ಲಿ ಕಾವ್ಯ ಹೆಪ್ಪುಗಟ್ಟಿದೆ. ಮೈಸೂರಿನ ಬಳಿಯ ಸೋಮನಾಥಪುರದ ದೇವಸ್ಥಾನವೂ ಇದೇ ಸಂಪ್ರದಾಯಕ್ಕೆ ಸೇರಿದ್ದು. ಶ್ರವಣಬೆಳಗೊಳದ ಗೊಮ್ಮಟ ವಿಗ್ರಹ ಬೃಹದಾಕಾರದ ಶಾಂತಿಮೂರ್ತಿ. ಹರಪನಹಳ್ಳಿ, ಕೂಡ್ಲಿಗಿ, ಚಿತ್ರದುರ್ಗ, ಹರಿಹರ, ನೀಲಗುಂದ, ಕೊಟ್ಟೂರು, ಉಚ್ಚಂಗಿ, ಚಂದ್ರವಳ್ಳಿ, ಬನವಾಸಿ, ಸೋಂದಾ-ಇವೂ ಇತಿಹಾಸದ ದೃಷ್ಟಿಯಿಂದ ಪ್ರೇಕ್ಷಣೀಯ. ಭದ್ರಾವತಿಯ ಬಳಿಯ ಕೆಮ್ಮಣ್ಣುಗುಂಡಿ ಬೇಸಗೆಯ ವಿಶ್ರಾಂತಿಧಾಮ. ಶಿರಸಿ ಕುಮಟಗಳ ನಡುವೆ ಇರುವ ಯಾಣ ಚೆಲುವಾದ ಯಾತ್ರಾಸ್ಥಳ. ಮೈಸೂರಿನ ಬಳಿಯ ಚಾಮುಂಡಿಬೆಟ್ಟದ ನಟ್ಟ ನಡುವಿನಲ್ಲಿರುವ ಕಲ್ಲು ಬಸವ ಪ್ರಪಂಚದಲ್ಲೇ ದೊಡ್ಡದು. ಹೀಗೆ ಕರ್ನಾಟಕದಲ್ಲಿ ನಿಸರ್ಗ ರಮ್ಯತೆಯೂ ಮಾನವ ನಿರ್ಮಿತ ಕಲೆಯೂ ಸಮರಸವಾಗಿ ಬೆರೆತುಕೊಂಡಿವೆ.

ರಫ್ತು ವ್ಯಾಪಾರ[ಸಂಪಾದಿಸಿ]

ಭಾರತದ ವಿದೇಶೀ ವ್ಯಾಪಾರದ ಭೂಪಟದಲ್ಲಿ ಕರ್ನಾಟಕಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಸ್ವಾತಂತ್ರ್ಯಪೂರ್ವ ದಿನಗಳ ಮೈಸೂರು ಸಂಸ್ಥಾನದಲ್ಲಿ ಕೈಗಾರಿಕೆಯ ಬೆಳೆವಣಿಗೆಯಂತೆಯೇ ರಫ್ತಿನ ಬೆಳೆವಣಿಗೆಗೂ ಹೆಚ್ಚಿನ ಗಮನ ಕೊಡಲಾಗಿತ್ತು. ಕರ್ನಾಟಕದ ಉತ್ಪನ್ನಗಳಾದ ಗಂಧದ ಎಣ್ಣೆ, ಗಂಧದ ಸಾಬೂನು, ರೇಷ್ಮೆ ಮುಂತಾದವಕ್ಕೆ ಹಿಂದೆ ವಿದೇಶೀ ಮಾರುಕಟ್ಟೆ ಇತ್ತು. ಸರ್ಕಾರ ಕೈಕೊಂಡ ಇಂಥ ನಾನಾ ಕ್ರಮಗಳಿಂದಾಗಿ ಕರ್ನಾಟಕದ ನಿರ್ಯಾತ ದೃಢವಾಗಿ ಹೆಚ್ಚಿದೆ. ವರ್ಷದಿಂದ ವರ್ಷಕ್ಕೆ ಕರ್ನಾಟಕದ ರಫ್ತು ವ್ಯಾಪಾರ ಅಧಿಕವಾಗುತ್ತಿದೆ. ರೇಷ್ಮೆ ವಸ್ತ್ರ, ಎಂಜಿನಿಯರಿಂಗ್ ಸಾಮಗ್ರಿ, ಗೋಡಂಬಿ, ಕಾಫಿ, ಕಬ್ಬಿಣದ ಅದಿರು ಇವಕ್ಕೆ ಬೇಡಿಕೆ ಹೆಚ್ಚುತ್ತಿದೆ.

ಕರ್ನಾಟಕದ ರಫ್ತು ವಸ್ತುಗಳಲ್ಲಿ ಕಬ್ಬಿಣದ ಅದಿರು ಮತ್ತು ಕಾಫಿó ಅತ್ಯಂತ ಮುಖ್ಯವಾದವು. ಎಂಜಿನಿಯರಿಂಗ್ ವಸ್ತುಗಳದು ಮೂರನೆಯ ಸ್ಥಾನ ನಾಲ್ಕನೆಯದು ಗೋಡಂಬಿ (1.56 ಕೋಟಿ ರೂ). ಇದರೊಂದಿಗೆ ನಾಲ್ಕನೆಯ ಸ್ಥಾನಕ್ಕಾಗಿ ಸ್ಪರ್ಧೆ ನಡೆಸಿರುವ ಪದಾರ್ಥ ಗಂಧದ ಎಣ್ಣೆ ಅಪ್ಪಟ ರೇಷ್ಮೆಯನ್ನು ಬಿಟ್ಟು ಉಳಿದ ಜವಳಿ ಪ್ರಾಮುಖ್ಯದ ದೃಷ್ಟಿಯಿಂದ ಆರನೆಯದು ಏಲಕ್ಕಿಯದು ಏಳನೆಯ ಸ್ಥಾನ. ಈ ಏಳು ಪದಾರ್ಥಗಳ ನಿರ್ಯಾತ ಮೌಲ್ಯ ಒಟ್ಟು ರಫ್ತಿನ ಮೌಲ್ಯದ ಶೇ. 85 ರಷ್ಟಾಗುತ್ತದೆ. ಶುದ್ಧ ರೇಷ್ಮೆ ಸಮುದ್ರಮೂಲ ಆಹಾರವಸ್ತು, ಮ್ಯಾಂಗನೀಸ್ ಅದಿರು, ಹೊಗೆಸೊಪ್ಪು, ಫಲೋತ್ಪನ್ನ, ಅಗರಬತ್ತಿ ಮತ್ತು ಕುಶಲ ವಸ್ತುಗಳು, ಗೋಡಂಬಿ, ಚಿಪ್ಪೆಣ್ಣಿ, ಮೂಳೆಪುಡಿ, ಗ್ರಾನೈಟ್ ಸಾಬೂನುಗಳು, ಪರಂಪರಾಗತವಾದ ಪದಾರ್ಥಗಳ ನಿರ್ಯಾತದ ಹೆಚ್ಚಳದ ಜೊತೆಗೆ ಹೊಸಹೊಸ ಕೈಗಾರಿಕೆಗಳ, ಪದಾರ್ಥಗಳು ವಿದೇಶೀ ಮಾರುಕಟ್ಟೆಗಳಲ್ಲಿ ಪ್ರಿಯವಾಗುತ್ತಿವೆ. ಕರ್ನಾಟಕದಿಂದ ರಫ್ತಾಗುವ ಪದಾರ್ಥಗಳು ಮತ್ತು ಅವನ್ನು ಆಮದು ಮಾಡಿಕೊಳ್ಳುವ ದೇಶಗಳನ್ನು ಮುಂದೆ ಕೊಟ್ಟಿದೆ: ಪದಾರ್ಥ ಆಮದು ಮಾಡಿಕೊಳ್ಳುವ ದೇಶಗಳು 1. ಅಗರಬತ್ತಿ ಬ್ರಿಟನ್, ಅಮೆರಿಕ, ಮಲೇಷ್ಯ, ಫ್ರಾನ್ಸ್‌, ಥೈಲೆಂಡ್, ಜಪಾನ್, ಘಾನ, ಫೀಜಿ, ಇಟಲಿ, ಹಾಂಗ್ಕಾಂಗ್, ದಕ್ಷಿಣ ಅಮೆರಿಕದ ದೇಶಗಳು, ಕೆನಡ, ಆಸ್ಟ್ರೇಲಿಯ, ಉಗಾಂಡ, ಅರೇಬಿಯ, ಇಥಿಯೋಪಿಯ, ಕೀನ್ಯ, ಇರಾಕ್, ಸ್ವೀಡನ್. 2. ಅಪ್ಪಟ ರೇಷ್ಮೆ ಜರ್ಮನಿ, ಆಸ್ಟ್ರೇಲಿಯ, ಅಮೆರಿಕ, ಫ್ರಾನ್ಸ್‌, ಬ್ರಿಟನ್, ಫಿನ್ಲೆಂಡ್, ಹಾಲೆಂಡ್, ಡೆನ್ಮಾರ್ಕ್, ಸ್ವೀಡನ್, ಸ್ವಿಟ್ಜರ್ಲೆಂಡ್, ಮಲೇಷ್ಯ, ಇಟಲಿ, ಕೆನಡ, ಇರಾನ್, ಬೆಲ್ಜಿಯಂ, ಜಪಾನ್, ಕೀನ್ಯ, ಮಲಾವಿ, ನೈಜಿರೀಯ, ಫೀಜಿ, ನಾರ್ವೇ. 3. ಎಂಜಿನಿಯರಿಂಗ್ ವಸ್ತುಗಳು ಅಮೆರಿಕ, ಕೆನಡ, ಪೋಲೆಂಡ್, ಬಲ್ಗೇರಿಯ, ಹಂಗರಿ, ನೈಜೀರಿಯ, ನ್ಯೂಜಿ಼ಲೆಂಡ್, ವಿಯೆಟ್ನಾಂ, ಇರಾಕ್, ಇರಾನ್, ಬೆಲ್ಜಿಯಂ, ದಕ್ಷಿಣ ಅಮೆರಿಕದ ದೇಶಗಳು, ಜರ್ಮನಿ, ಶ್ರೀಲಂಕ, ಐರ್ಲೆಂಡ್. 4. ಏಲಕ್ಕಿ ಇರಾಕ್, ಅರೇಬಿಯ, ಪರ್ಷಿಯನ್ ಖಾರಿ ದೇಶಗಳು, ಇರಾನ್, ಫಿನ್ಲೆಂಡ್, ಡೆನ್ಮಾರ್ಕ್. 5. ಕಬ್ಬಿಣದ ಅದಿರು ಜರ್ಮನಿ, ಜಪಾನ್, ಹಂಗರಿ. 6. ಕಬ್ಬಿಣ ಮತ್ತು ಉಕ್ಕು ಸಿಂಗಪುರ, ಶ್ರೀಲಂಕ, ಜಪಾನ್ 7. ಕಾಫಿ ಅಮೆರಿಕ, ಬೆಲ್ಜಿಯಂ, ಜರ್ಮನಿ, ನೆದರ್ಲೆಂಡ್ಸ್‌, ಬ್ರಿಟನ್, ಇರಾಕ್, ಪೋಲೆಂಡ್, ಕೆನಡ, ಸೌದಿ ಅರೇಬಿಯ, ಸ್ವೀಡನ್, ರಷ್ಯ 8. ಕೃತಕ ರೇಷ್ಮೆ ಮಲಾವಿ, ಬ್ರಿಟನ್. 9. ಗಂಧದ ಎಣ್ಣೆ ಅಮೆರಿಕ, ಬ್ರಿಟನ್, ನೆದರ್ಲೆಂಡ್ಸ್‌, ಫ್ರಾನ್ಸ್‌, ಜರ್ಮನಿ, ಜಪಾನ್, ಹಂಗೇರಿ, ಮಲೇಷ್ಯ, ಸೌದಿ ಅರೇಬಿಯ, ಸ್ವಿಟ್ಜರ್ಲೆಂಡ್, ಇಟಲಿ, ಆಸ್ಟ್ರೇಲಿಯ, ಶ್ರೀಲಂಕ, ಆಫ್ರಿಕ ದೇಶಗಳು, ಅರೇಬಿಯ, ಕೀನ್ಯ, ರಷ್ಯ, ಬಲ್ಗೇರಿಯ. 10. ಗೋಡಂಬಿ ಅಮೆರಿಕ, ಬೆಲ್ಜಿಯಂ, ಜರ್ಮನಿ, ನೆದರೆರ್ಲ್‌ಂಡ್ಸ್‌, ಬ್ರಿಟನ್, ಲೆಬನಾನ್, ಸೌದಿ ಅರೇಬಿಯ. 11. ಗೋಡಂಬಿ ಚಿಪ್ಪೆಣ್ಣೆ ಅಮೆರಿಕ, ಬ್ರಿಟನ್ 12. ಗ್ರಾನೈಟ್ ಜಪಾನ್, ಸ್ವಿಟ್ಜರ್ಲೆಂಡ್, ಬ್ರಿಟನ್, ಜರ್ಮನಿ, ಇಟಲಿ. 13. ಜವಳಿ ಅಮೆರಿಕ, ಬ್ರಿಟನ್, ಫ್ರಾನ್ಸ್‌, ಶ್ರೀಲಂಕ, ಇಂಡೊನೇಷ್ಯ, ಪೋಲೆಂಡ್, ಕೆನಡ, ಫೀಜಿ, ಹಾಂಗ್ಕಾಂಗ್, ಕೀನ್ಯ, ನಾರ್ವೇ, ಸಿಂಗಪುರ, ಉಗಾಂಡ, ಆಸ್ಟ್ರೇಲಿಯ, ಮಲಾವಿ, ಇರಾನ್, ಸೈಪ್ರಸ್. 14. ತೆಂಗಿನ ನಾರು, ಹುರಿ ಇರಾಕ್ 15. ಪ್ಲಾಸ್ಟಿಕ್ ಮತ್ತು ಲಿನೋಲಿಯಂ ಮಲೇಷ್ಯ, ಸಿಂಗಪುರ, ಬ್ರಿಟನ್, ಉಗಾಂಡ, ಕೀನ್ಯ, ಶ್ರೀಲಂಕ. 16. ಫಲೋತ್ಪನ್ನ ಬ್ರಿಟನ್, ಪರ್ಷಿಯನ್ ಖಾರಿಯ ದೇಶಗಳು, ಇರಾನ್, ರಷ್ಯ, ಸೌದಿ ಅರೇಬಿಯ, ಸಿಂಗಪುರ, ಅಮೆರಿಕ, ಜಪಾನ್, ಜರ್ಮನಿ, ಶ್ರೀಲಂಕ. 17. ಮರ ಮತ್ತು ದಿಮ್ಮಿ ಜಪಾನ್, ಶ್ರೀಲಂಕ, ಹಾಂಗ್ಕಾಂಗ್. 18. ಮೂಳೆ ಪುಡಿ ಬೆಲ್ಜಿಯಂ, ಬಲ್ಗೇರಿಯ, ಬ್ರಿಟನ್, ಫ್ರಾನ್ಸ್‌, ಜರ್ಮನಿ. 19. ರೇಷ್ಮೆ ರದ್ದಿ (ವೇಸ್ಟ್‌) ಇಟಲಿ, ಜಪಾನ್, ಸ್ವಿಟ್ಜರ್ಲೆಂಡ್. 20. ಸಮುದ್ರಮೂಲ ಆಹಾರ ಅಮೆರಿಕ, ಬ್ರಿಟನ್. 21. ಸಾಬೂನುಗಳು, ಅಂಗರಾಗಗಳು ಇರಾನ್, ಫೀಜಿ, ಅಮೆರಿಕ, ಸಿಂಗಪುರ, ಟಾನ್ಜಾನಿಯ, ಅರೇಬಿಯ, ಜರ್ಮನಿ, ಆಸ್ಟ್ರೇಲಿಯ, ಬ್ರಿಟನ್, ಫಿನ್ಲೆಂಡ್, ಥೈಲೆಂಡ್, ಕೆನಡ, ಬೆಲ್ಜಿಯಂ, ಸ್ವಿಟ್ಜರ್ಲೆಂಡ್. 22. ಹತ್ತಿ ಬೀಜ, ಎಣ್ಣೆ, ಹಿಂಡಿ ಬ್ರಿಟನ್, ಪೋಲೆಂಡ್, ರಷ್ಯ 23. ಹದ ಮಾಡಿದ ಚರ್ಮ ಬ್ರಿಟನ್, ನೆದರ್ಲೆಂಡ್ಸ್‌, ಫ್ರಾನ್ಸ್‌, ಹಂಗೇರಿ, ಸ್ವಿಟ್ಜರ್ಲೆಂಡ್, ಇಟಲಿ, ಜರ್ಮನಿ, ಬಲ್ಗೇರಿಯ, ಜರ್ಮನಿ, ಫ್ರಾನ್ಸ್‌. 24. ಹೊಗೆಸೊಪ್ಪು ಬೆಲ್ಜಿಯಂ, ಬ್ರಿಟನ್, ನೆದರ್ಲೆಂಡ್ಸ್‌. (ಎಚ್.ಎಸ್.ಕೆ.;ಪಿ.ಎಂ.)

ಕರ್ನಾಟಕದ ಅರಣ್ಯಗಳು[ಸಂಪಾದಿಸಿ]

ಕರ್ನಾಟಕ ಅತ್ಯಂತ ಮಹತ್ವವುಳ್ಳ ಸಮೃದ್ಧ ಕಾಡುಗಳನ್ನುಳ್ಳ ಭಾರತದ ರಾಜ್ಯ. ಸಹ್ಯಾದ್ರಿ ಘಟ್ಟಗಳು ಪ್ರಪಂಚದಲ್ಲಿ ಗುರ್ತಿಸಿರುವ ವಿಶಿಷ್ಟ್ಯ ಜೈವಿಕ ವೈವಿಧ್ಯತೆಯ 25 ಪ್ರಮುಖ ತಾಣಗಳಲ್ಲಿ ಒಂದಾಗಿದೆ. ವೃಕ್ಷರಾಶಿ ಮತ್ತು ಸಸ್ಯರಾಶಿಗಳಷ್ಟೇ ವನ್ಯಜೀವಿ ಸಂಪತ್ತು ರಾಜ್ಯದಲ್ಲಿದೆ. ರಾಜ್ಯದ ಒಟ್ಟು ಭೌಗೋಳಿಕ ಕ್ಷೇತ್ರದಲ್ಲಿ ಘೋಷಿತ ಅರಣ್ಯ ಪ್ರದೇಶ 38,724 ಚ.ಕಿಮೀ ಅಂದರೆ ಭೌಗೋಳಿಕ ಕ್ಷೇತ್ರದಲ್ಲಿ ಶೇ. 20.2 ಅರಣ್ಯ ಪ್ರದೇಶವೆಂದು ದಾಖಲಾಗಿದ್ದರೂ. ಶೇ. 11 ಪ್ರದೇಶ ಮಾತ್ರ ವೃಕ್ಷ ಆವೃತವಾದುದು. ಉಳಿದದ್ದು ಕ್ಷೀಣಿತ ಅರಣ್ಯ ಪ್ರದೇಶವಾಗಿದೆ. ಕರ್ನಾಟಕದ ಅರಣ್ಯ ಕ್ಷೇತ್ರದ ಶೇಕಡ ಪ್ರಮಾಣ ರಾಷ್ಟ್ರೀಯ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ. ರಾಷ್ಟ್ರೀಯ ಅರಣ್ಯ ನೀತಿ ನಿಗದಿಪಡಿಸಿರುವ (ಶೇ. 33.3) ಪ್ರಮಾಣಕ್ಕಿಂತ ಬಹಳ ಕಡಿಮೆ. ಈ ವ್ಯಾಪ್ತಿಗೆ ತರುವುದಕ್ಕಾಗಿ ಅರಣ್ಯೀಕರಣ ಯೋಜನೆಯಲ್ಲಿ ಶೀಘ್ರಗತಿಯಲ್ಲಿ ಬೆಳೆಯುವ ಮರಗಳ ಬೆಳವಣಿಗಾಗಿ ಹೊಸದಾಗಿ ಸಸಿ ನೆಡಲಾಗುತ್ತಿದೆ. 2001-02 ನೆಯ ಸಾಲಿನಲ್ಲಿ ಕರ್ನಾಟಕದ ಅರಣ್ಯ ಇಲಾಖೆಯ ಮೂಲಕ 49,755 ಹೆ. ಪ್ರದೇಶವನ್ನು ಹೆಚ್ಚುವರಿಯಾಗಿ ಅರಣ್ಯಪ್ರದೇಶದ ವ್ಯಾಪ್ತಿಗೆ ತರಲಾಗಿದೆ. ನಂತರವೂ ಇಂಥ ಕಾರ್ಯಕ್ರಮವು ಮುಂದುವರಿದಿದೆ. ವೃಕ್ಷ ಬೆಳೆಗಾರರ ಸಹಕಾರ ಸಂಘ, ಗ್ರಾಮ ಅರಣ್ಯ ಸಮಿತಿಗಳು ಹಾಗೂ ಸ್ವಯಂ ಸೇವಾ ಸಂಘಗಳನ್ನು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಾಗಿದೆ. ರಾಜ್ಯದ ಎಲ್ಲ ಅರಣ್ಯ ವಿಭಾಗಗಳನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ದೂರ ಸಂವೇದಿ (ರಿಮೋಟ್ ಸೆನ್ಸಿಂಗ್) ಹಾಗೂ ಭೂಮಾಹಿತಿ ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಇತ್ತೀಚೆಗೆ ಕೋಕೊ ಮತ್ತು ರಬ್ಬರ್ ತೋಟಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನವೂ ಸಾಗಿದೆ.

ಕರ್ನಾಟಕದ ಅರಣ್ಯಗಳು ಅಗಲವಾದ ಎಲೆಗಳುಳ್ಳ ರೀತಿಯವು. ರಾಷ್ಟ್ರೀಯ ಪ್ರಾಮುಖ್ಯವುಳ್ಳ ಅನೇಕ ಬೆಲೆಬಾಳುವ ಮರಗಳು ಇಲ್ಲಿವೆ. ತೇಗ, ಬೀಟೆ, ಮತ್ತಿ, ಬಾಗೆ, ಪಡಾಕ್ ಅನೇಕ ಪ್ರಭೇದದ ಮರಗಳು ಹೇರಳವಾಗಿವೆ. ಶ್ರೀಗಂಧವಂತೂ ಸಂಪೂರ್ಣವಾಗಿ ಕರ್ಣಾಟಕದ್ದೇ ಆಗಿದೆ.

ಸಾಮಾನ್ಯವಾಗಿ ವಿವಿಧ ರೀತಿಯ ಅರಣ್ಯಗಳ ವಿತರಣೆ ಮತ್ತು ಬೆಳೆವಣಿಗೆಗಳು ಮುಖ್ಯವಾಗಿ ವಾಯುಗುಣ, ಭೂಗುಣ ಮತ್ತು ಭೂಸ್ವರೂಪಗಳು ಹಾಗೂ ಐತಿಹಾಸಿಕ ಕಾರಣಗಳನ್ನು ಅವಲಂಬಿಸಿರುತ್ತವೆ. ಈಗ ಬಂಜರಾಗಿ ಅರಣ್ಯಪ್ರದೇಶವಿಲ್ಲದಿರುವ ಅನೇಕ ಭಾಗಗಳು (ಉದಾ. ಮಂಡ್ಯ ಜಿಲ್ಲೆ) 18ನೆಯ ಶತಮಾನದ ಕೊನೆಯಲ್ಲಿ ಸಾಧಾರಣ ಗಾತ್ರದ ಮರಗಳನ್ನು ಪಡೆದಿದ್ದುವೆಂದು ತಿಳಿದುಬಂದಿದೆ. ಅನೇಕ ಯುದ್ಧಗಳು, ವ್ಯವಸಾಯದ ಬೆಳೆವಣಿಗೆ, ಜನಸಂಖ್ಯೆಯ ಹೆಚ್ಚಳ, ಮನೆಕಟ್ಟಲು, ಸೌದೆ ಇದ್ದಲುಗಳು ಮತ್ತಿತರ ಸಾಮಗ್ರಿಗಳ ಬಗ್ಗೆ ಮಾನವನ ಹೆಚ್ಚಿನ ಅವಶ್ಯಕತೆಗಳು ಇವೆಲ್ಲವುಗಳಿಂದ ಒಂದು ಕಾಲದಲ್ಲಿ ಶ್ರೀಮಂತವಾಗಿದ್ದ ಅರಣ್ಯಪ್ರದೇಶಗಳು ಇಂದು ಬಂಜರಾಗಿವೆ. ಇಂದಿನ ಅರಣ್ಯಗಳಾದರೂ ಹಾಗೆಯೇ ಉಳಿದು ಬಂದಿರುವುದಕ್ಕೆ ಒಂದು ಮುಖ್ಯ ಕಾರಣವೆಂದರೆ ಅವು ಪ್ರವೇಶಿಸಲಸಾಧ್ಯವಾಗಿರುವುದು. ಆದರೆ ಈಗಿನ ಒಳ್ಳೆಯ ರಸ್ತೆಗಳು ಬುಲ್ಡೋಜರುಗಳು, ಜೀಪ್ ಹಾಗೂ ಲಾರಿಗಳು ಇವನ್ನೂ ಹಾಳು ಮಾಡಲು ದಾರಿ ಮಾಡಿ ಕೊಟ್ಟಿವೆ. ನಮ್ಮ ಕೈಗಾರಿಕೆಗಳಾದ ಕಾಗದ, ಮರದ ತಿರುಳು, ರೇಯಾನ್, ಪ್ಲೈವುಡ್, ಚಿಪ್ಬೋಡ್ರ್ಸ್‌, ವಿನೀರ್ಸ್ ಮುಂತಾದುವೆಲ್ಲ ಮುಖ್ಯವಾಗಿ ಅರಣ್ಯವೃಕ್ಷಗಳನ್ನೇ ಅವಲಂಬಿಸಿವೆ.

ಕರ್ನಾಟಕದ ಅರಣ್ಯಗಳು ಉತ್ತರ ದಕ್ಷಿಣವಾಗಿ ವಿತರಣೆಗೊಂಡಿವೆ. ಇವುಗಳ ಬೆಳೆವಣಿಗೆ ಮತ್ತು ಅಭಿವೃದ್ಧಿಗಳಲ್ಲಿ ಮಳೆ ಹಂಚಿಕೆಯ ಪಾತ್ರ ಬಹು ಹಿರಿದಾದದ್ದು. ಸಂಪತ್ಕುಮಾರನ್ ಅವರು ಈ ಅರಣ್ಯಗಳನ್ನು ಮೂರು ಬಗೆಯವನ್ನಾಗಿ ವಿಂಗಡಿಸಿದ್ದಾರೆ.

1. ನಿತ್ಯ ಹರಿದ್ವರ್ಣದ ಅರಣ್ಯಪ್ರದೇಶ: ವಾರ್ಷಿಕ ಮಳೆ 150-300 ಸೆಂಮೀ. ವಿತರಣೆ ರಾಜ್ಯದ ಪಶ್ಚಿಮ ಭಾಗಗಳಲ್ಲಿ (ಕೊಡಗು, ಹಾಸನ, ಶಿವಮೊಗ್ಗ, ದ.ಕ., ಉ.ಕ., ಧಾರವಾಡ ಮತ್ತು ಬೆಳಗಾಂವಿ ಜಿಲ್ಲೆಗಳು). 2. ಮಿಶ್ರ ಎಲೆಯುದುರುವ ಸಸ್ಯ (ಡೆಸಿಡ್ಯುಯಸ್) ಪ್ರದೇಶ: ವಾರ್ಷಿಕ ಮಳೆ 60-150 ಸೆಂಮೀ. ಹಿಂದೆ ಹೇಳಿದ ಅರಣ್ಯಪ್ರದೇಶದ ಪೂರ್ವಭಾಗದಲ್ಲಿದೆ. 3. ಶುಷ್ಕ ಪ್ರದೇಶದ ಸಸ್ಯಗಳು ಮತ್ತು ಕುರುಚಲು ಪ್ರದೇಶ: ವಾರ್ಷಿಕ ಮಳೆ 50 ಸೆಂಮೀ ಗಿಂತ ಕಡಿಮೆ. ಪೂರ್ವದ ಎಲ್ಲ ಜಿಲ್ಲೆಗಳಲ್ಲೂ ಕಂಡುಬರುತ್ತದೆ. ಮೇಲೆ ಹೇಳಿದ ಮೂರು ವಿವಿಧ ರೀತಿಯವುಗಳಲ್ಲೂ ಇರುವ ಅನೇಕ ಪ್ರಭೇದಗಳು ಬೇರೆ ಬೇರೆಯವೇ ಆದರೂ ಅವುಗಳ ನಡುವೆ ನಿಖರವಾದ ಎಲ್ಲೆಗಳನ್ನು ಎಳೆಯಲಾಗುವುದಿಲ್ಲ. ಏಕೆಂದರೆ ಪಶ್ಚಿಮದಿಂದ ಪೂರ್ವಕ್ಕೆ ಒಂದು ರೀತಿಯ ಅರಣ್ಯ ಮತ್ತೊಂದು ರೀತಿಯದಕ್ಕೆ ನಿಧಾನವಾಗಿ ಎಡೆಗೊಡುತ್ತದೆ.

ನಿತ್ಯ ಹರಿದ್ವರ್ಣದ ಅರಣ್ಯ ಪ್ರದೇಶ[ಸಂಪಾದಿಸಿ]

ಪಶ್ಚಿಮ ಘಟ್ಟಗಳ ಸಹ್ಯಾದ್ರಿಗಳ ಉದ್ದಕ್ಕೂ 10-70 ಕಿಮೀಗಳ ಅಗಲಕ್ಕೆ ಹರಡಿಕೊಂಡಿದೆ. ಪ್ರಪಂಚದ ಅನೇಕ ಕಡೆಗಳಲ್ಲಿ ಕಂಡುಬರುವ ಉಷ್ಣವಲಯದ ತೇವಪುರಿತ ಅರಣ್ಯಗಳ ಅವಶೇಷಗಳನ್ನು ಇಲ್ಲಿಯ ಕಡಿದಾದ ಕಣಿವೆಗಳು, ಪರ್ವತಗಳ ಹಳ್ಳತಿಟ್ಟುಗಳು ಮತ್ತು ಪ್ರಪಾತಗಳಲ್ಲಿ ಕಾಣಬಹುದು. ರಸ್ತೆಗಳ ಅಭಾವ ಮತ್ತು ದಟ್ಟವಾಗಿ ಬೆಳೆದಿರುವ ಸಸ್ಯವರ್ಗದಿಂದಾಗಿ ಈ ಅರಣ್ಯಗಳ ಪ್ರವೇಶ ಅತಿ ದುರ್ಗಮವಾಗಿದೆ. ಇಲ್ಲಿನ ಸಸ್ಯವರ್ಗ ಮುಖ್ಯವಾಗಿ ಮೂರು ಸ್ತರಗಳಲ್ಲಿ ಕಂಡುಬರುತ್ತದೆ. ಪ್ರತಿ ಸ್ತರದಲ್ಲೂ ಕಂಡುಬರುವ ಪ್ರಭೇದಗಳು ಸಾಮಾನ್ಯವಾಗಿ ಬೇರೆಯವೇ ಆಗಿವೆ. ಈ ಒಂದೊಂದು ಸ್ತರಕ್ಕೂ ನಡುವಿನ ಅಂತರದಲ್ಲಿ ಉಷ್ಣತೆ ಹಾಗೂ ಆರ್ದ್ರತೆಯ ವ್ಯತ್ಯಾಸಗಳಿವೆ. ಇವು ದಟ್ಟವಾದ ಅಡವಿಗಳಾದ್ದರಿಂದ ಸೂರ್ಯರಶ್ಮಿ ಭೂಮಿಯನ್ನು ಸೋಕುವುದೇ ಕಷ್ಟ. ಆದ್ದರಿಂದ ಅರಣ್ಯದ ಒಳಗೆ ಉಷ್ಣತೆ ಬಹು ಕಡಿಮೆ (ಮರಗಳ ಮೇಲಿನ ಒಣಗಾಳಿಯ ಉಷ್ಣತೆಗೆ ಹೋಲಿಸಿದರೆ). ಮಾನ್ಸೂನಿನ ಪ್ರಬಲ ಗಾಳಿಗಳಿಗೆ ಎದುರಾಗಿರುವ ಬೆಟ್ಟಗಳ ಮೇಲೆ ಬೆಳಯುವ ಮರಗಳ ಬೆಳೆವಣಿಗೆ ಕುಂಠಿತವಾಗಿದ್ದು ಅವು ಕುಳ್ಳಾಗಿ ವಿರೂಪಗೊಂಡಿರುತ್ತವೆ. ಅನೇಕ ವೇಳೆ ದಕ್ಷಿಣ ಪಶ್ಚಿಮ ಮಾನ್ಸೂನಿನ ಪ್ರಬಲವಾದ ಮಳೆಯಿಂದ ಕೂಡಿದ ಗಾಳಿಗಳು ಇಲ್ಲಿ ಪ್ರಭೇದಗಳ ವಿತರಣೆಯನ್ನು ನಿಯಂತ್ರಿಸುವುದುಂಟು. ಹಾವಸೆಗಳು, ತೆರ್ಮೆಗಳು, ಕಲ್ಲುಹೂಗಳು ಮತ್ತು ಇತರ ಅಪ್ಪು ಗಿಡಗಳು ಇಲ್ಲಿ ಸಮೃದ್ಧವಾಗಿ ಬೆಳೆಯುತ್ತವೆ.

ಈ ಅರಣ್ಯಗಳ ಮೇಲಿನ ಸ್ತರದಲ್ಲಿ ನೆಲದಿಂದ 60-70 ಮೀ ಗಳಷ್ಟು ಎತ್ತರದ ನಿತ್ಯಹರಿದ್ವರ್ಣ ವೃಕ್ಷಗಳು ಇವೆ. ಇವುಗಳ ಮೇಲೆ ಆರ್ಕಿಡ್ ಸಸ್ಯಗಳು, ಕೆಸುವಿನ ಜಾತಿಯ ಸಸ್ಯಗಳು ಮತ್ತು ತೆರ್ಮೆಗಳು ಹೇರಳವಾಗಿ ಬೆಳೆದಿವೆ. ಈ ಕೆಳಗಿನ ಕೆಲವು ಮುಖ್ಯ ಮರಗಳು ಮೇಲಿನ ಸ್ತರದಲ್ಲಿ ಕಂಡುಬರುತ್ತವೆ : ಉದಾ: ವಾಲಿಮರ, ಧೂಪ, ಎಣ್ಣೆಮರ, ಬಾಗೆ, ನಾಗಸಂಪಿಗೆ, ಸುರಹೊನ್ನೆ, ಸಾಲ್ ಇತ್ಯಾದಿ. ಮಧ್ಯಮಸ್ತರದಲ್ಲಿ ಮೇಲಿನ ಸ್ತರದ ನೆರಳನ್ನು ಸಹಿಸಿಕೊಳ್ಳುವ ಮಧ್ಯಮ ಗಾತ್ರದ ವೃಕ್ಷಗಳಿವೆ. ವೃಕ್ಷಗಳ ದಪ್ಪ ಕಡಿಮೆ, ಎತ್ತರ 20-60 ಮೀ ಮೇಲಿನ ಸ್ತರ ನಿರ್ಮಿಸಿರುವ ಸೂಕ್ಷ್ಮವಾತಾವರಣದಲ್ಲಿ ಇವು ಚೆನ್ನಾಗಿ ಬದುಕಬಲ್ಲವು. ಈ ಮರಗಳ ಮೇಲೂ ಹಾವಸೆಗಳು ಹಾಗೂ ತೆರ್ಮೆಗಳು ಮುಂತಾದ ಅಪ್ಪುಗಿಡಗಳಿರುತ್ತವೆ. ಇಲ್ಲಿನ ಕೆಲವು ಮುಖ್ಯ ವೃಕ್ಷಗಳೆಂದರೆ-ರುದ್ರಾಕ್ಷಿ, ರಾಮನದಿಕೆ, ಕುಟುಗೇರಿ, ಹೈಗ, ಬಿಳಿದೇವದಾರು, ಹೆಬ್ಬಲಸು ಮಂಡ ಧೂಪ, ಚಿಟ್ಟು ತಂದ್ರಿಮರ, ಗೊಬ್ಬನೇರಳೆ ಇತ್ಯಾದಿ.

ಕೆಳಗಿನ ಸ್ತರದ ಮರಗಳ ಎತ್ತರ 10-20 ಮೀ ವರೆಗೆ ಇದೆ. ಅವುಗಳಲ್ಲಿ ಮುಖ್ಯವಾದ ಮರಗಳೆಂದರೆ ಸಗದೆ, ಹಲಸು, ಕಿಲಾರ್ ಭೋಗಿ, ಕನಾನಿ, ದಾಲ್ಚಿನ್ನಿ, ಎಲ್ಲಗ, ಕೆಂದಾಳ, ಅರದಳ ಕೂರ, ಕಾಡು ಕುಂಬಳ, ಸೊಟಿಗೆಮರ, ಲೊಡ್ಡಗಿನಮರಜ ಇತ್ಯಾದಿ.

ನಿತ್ಯಹರಿದ್ವರ್ಣ ಅರಣ್ಯಗಳು ಬಹುಪಾಲು ಎಲ್ಲ ಸ್ತರವನ್ನು ಆಕ್ರಮಿಸಿಕೊಂಡಿರುತ್ತವೆ. ಇವುಗಳ ತಳಭಾಗದಲ್ಲಿ ಪೊದೆಯಂತೆ ಬೆಳೆದುಕೊಳ್ಳುವ ಸಸ್ಯಗಳು ಕೆಳಗಿನಂತಿವೆ: ಉದಾ; ಹಾಸಿಗೆ ಮರ, ಕುಂಕುಮದ ಮರ, ಬಿಳಿ ದಾಳೆ, ಕಿಸ್ಕಾರ, ಬೆಂಡು ಮರ, ಪಾವಚೆ, ಆಥಿರ್ರ್‌, ದತ್ತಲೆ, ಕಾಡು ಅಡಿಕೆ, ಅಡರುಬಳ್ಳಿಗಳು : ನೀಟಮ್ ಉಲ, ಸ್ಪತೋಡಿಯ ರಾಕ್ಸ್‌ಬರ್ಗಿಯೈ, ದಾಲ್ಬರ್ಜಿಯ ಸಿಂಪತೆಟಿಕ, ಬಾಹಿನಿಯ ವಾಹ್ಲಿ (ಹೆಪ್ಪರಿಗೆ) ಸ್ಟ್ರಿಕ್ನಾಸ್ ಕಾಲಂಬ್ರಿನ (ನಾಗಮುಷ್ಠಿ), ಲವಂಗ ಎಲ್ಯೂತೆರಾಂಡ್ರ (ಲವಂಗ ಲತೆ), ಡಯಸ್ಕೋರಿಯ ಏಲೇಟ (ತೂನಗೆಣಸು) ಮತ್ತು ಎಂಟಾಡ ಪರ್ಸಿಯಥ. ನಿತ್ಯಹರಿದ್ವರ್ಣ ಅರಣ್ಯಗಳ ಬೇರೆ ರೂಪಾಂತರಗಳಾದ ಷೋಲಾ ಅರಣ್ಯಗಳು 1000 ಮೀ ಗಳಿಗಿಂತಲೂ ಎತ್ತರವಿರುವ ಪರ್ವತ ಪ್ರದೇಶಗಳಲ್ಲಿ ಝರಿಗಳ ಎರಡು ಕಡೆಗಳಲ್ಲೂ ಬೆಳೆದುಕೊಂಡಿವೆ. ವಾಯುರಕ್ಷಿತ ಪ್ರದೇಶಗಳಲ್ಲಿ ಮಾತ್ರ ಇವು ಇದ್ದು ತೀರ ಮೇಲಕ್ಕೆ ಗಾಳಿಯ ಹೊಡೆತಕ್ಕೆ ಸಿಕ್ಕಿರುವ ಪರ್ವತಾಗ್ರಗಳಿಗೆ ಹೋದಂತೆಲ್ಲ ಹುಲ್ಲುಗಾವಲುಗಳಿವೆ. ಈ ಉಪೋಷ್ಣವಲಯದ ಅರಣ್ಯಗಳಲ್ಲಿ ಉಷ್ಣವಲಯದ ಮತ್ತು ಸರಿಸುಮಾರು ಸಮಶೀತೋಷ್ಣವಲಯದ ಪ್ರಭೇದಗಳು ಮಿಶ್ರವಾಗಿದ್ದು ಜೊತೆಗೂಡಿ ಬೆಳೆಯುತ್ತಿರುತ್ತವೆ. ಬಾಬಾಬುಡನ್, ಬಿಳಿಗಿರಿರಂಗನ ಬೆಟ್ಟ, ಕುದುರೆಮುಖ ಮುಂತಾದ ಬೆಟ್ಟ ಪ್ರದೇಶಗಳಲ್ಲಿ ಎತ್ತರದ ಭಾಗಗಳಲ್ಲಿ ಷೋಲಾ ಅರಣ್ಯಗಳು ಕಂಡುಬರುತ್ತವೆ. ವಿಶೇಷವೆಂದರೆ ಇಲ್ಲಿನ ಮರಗಳು ಅಷ್ಟು ಎತ್ತರಕ್ಕೆ ಬೆಳೆಯುವುದಿಲ್ಲ ಮತ್ತು ಬೇರುಗಳು ಆಳವಾಗಿರುವುದಿಲ್ಲ. ಮರಗಳ ಮೇಲೆ ಹಾವಸೆಗಳು ಬೆಳೆದುಕೊಂಡಿರುತ್ತವೆ.

ಇವುಗಳಲ್ಲಿ ಗ್ಲಾಕಿಡಿಯನ್ ಆರ್ಬೋರಿಯಮ್, ಲಿಟ್ಸಿಯ ಗ್ಲಾಬ್ರೇಟ, ಪಿಟೋಸ್ಪೋರಮ್ ಟೆಟ್ರಸ್ಪರ್ಮಮ್, ಕುಂಪೋಲಿ, ನೀರುಜಪ್ಲೆ, ಕಲ್ಬಿಕ್ಕಿ ಕ್ಯಾಲಿಕಾರ್ಪ ಟೊಮೆಂಟೋಸ, ಕ್ಯಾಂತಿಯಮ್ ಡೈಕಾಕಮ್ ವೈರೈಟಿ ಅಂಬೆಲೇಟಮ್, ಬೀಗದಮರ, ದಾಲ್ಚಿನ್ನಿ ಮೀಲಿಯೋಸ್ಮ ಮೈಕ್ರೊಕಾರ್ಪ, ಹೊನ್ನೆ, ಚಂಗ, ಶೆಫ್ಲೆರ ಕ್ಯಾಪಿಟೇಟ, ಕಂಡಗರಿಗೆ ಮತ್ತು ಷೋಲಾ ಇಳಿಜಾರುಗಳ ಹೊರಭಾಗದಲ್ಲಿ ಆರ್ಟಿಮಿಸಿಯ ಪಾರ್ವಿಪ್ಲೋರ, ಚಿನ್ನದಾವರೆ ಮತ್ತು ಕಿರು ಈಚಲು ಇವು ಮುಖ್ಯವಾದವು. ಷೋಲಾ ಅರಣ್ಯಗಳು ವಾಯುಪೀಡಿತ ಪರ್ವತಾಗ್ರಗಳಲ್ಲಿ ಹುಲ್ಲುಗಾವಲುಗಳಿಗೆ ಎಡೆಗೊಟ್ಟಿದ್ದು ಕೆಳಗೆ ಬಂದಂತೆಲ್ಲ ನಿಧಾನವಾಗಿ ಉಷ್ಣವಲಯದ ತೇವಪುರಿತ ಪರ್ಣಪಾತಿ ಸಸ್ಯದ ಅರಣ್ಯಗಳೊಂದಿಗೆ ಕೂಡಿಕೊಳ್ಳುತ್ತವೆ.

ಪರ್ವತಾಗ್ರಗಳ ಮೇಲೆ ಬೆಳೆಯುವ ಮೂಲಿಕೆಗಳ ಸಸ್ಯವರ್ಗ ಋತುಗಳಿಗೆ ತಕ್ಕಂತೆ ಬೇರೆ ಬೇರೆಯೇ ಆಗಿರುತ್ತದೆ. ಇಲ್ಲಿರುವ ಹುಲ್ಲುಗಳು ಹಾಗೂ ಮೂಲಿಕೆಗಳಿಗೆ ಉಷ್ಣತೆಯ ವೈಪರೀತ್ಯಗಳು, ಸೂರ್ಯನ ಗಾಢಪ್ರಖರತೆ ಮುಂತಾದುವನ್ನೆಲ್ಲ ತಡೆದುಕೊಳ್ಳುವ ಶಕ್ತಿ ಇದೆ. ಒಮ್ಮೊಮ್ಮೆ ಹುಲ್ಲುಗಾವಲುಗಳಲ್ಲಿ ಬೆಳೆವಣಿಗೆ ಕುಂಠಿತಗೊಂಡ, ಅಗಲ ಕಡಿಮೆ ಇರುವ ಎಲೆಗಳ, ಕಡಿಮೆ ಎತ್ತರದ ಮರಗಳು ಕಂಡು ಬರುವುವು. ಓಲಿಯ, ವೆಂಡ್ಲ್ಯಾಂಡಿಯ, ಆಲೋಫಿಲಸ್, ಯೂಜೀನಿಯ, ಸಿಂಪ್ಲೊಕಾಸ್ ಮತ್ತು ಲೊನಿಸೆರ ಇವೇ ಆ ಜಾತಿಯವು. ಕುರಂಜಿಗಿಡದ ಪೊದೆಗಳಂತೂ ಸಮೃದ್ಧವಾಗಿ ಬೆಳೆದಿರುತ್ತವೆ. ಇಲ್ಲಿರುವ ಪ್ರಧಾನ ಹುಲ್ಲುಗಳು: ಆಂಡ್ರೋ ಪೋಗಾನ್ ಪರ್ಟುಸಸ್, ಇಶೀಮಮ್ ಪೈಲೋಸಮ್ (ಕುಂದರಕಡ್ಡಿಹುಲ್ಲು), ತಿಮಿಡ ಇಂಬರ್ಬಿಸ್, ಸಿಂಬೊಪೋಗಾನ್ ಪಾಲಿನ್ಯೂರೋಸ್ ಮತ್ತು ಎರಾಗ್ರಾಸ್ಟಿಸ್ ನೈಗ್ರ.

ಮಿಶ್ರ ಎಲೆ ಉದುರುವ ಸಸ್ಯ ಪ್ರದೇಶ[ಸಂಪಾದಿಸಿ]

ಘಟ್ಟ ಪ್ರದೇಶಗಳ ಪೂರ್ವಭಾಗದಲ್ಲಿದೆ. ಇಲ್ಲಿ ಬಿದಿರು, ತೇಗಗಳ ಜೊತೆಗೆ ನಿತ್ಯಹರಿದ್ವರ್ಣ ಹಾಗೂ ಪರ್ಣಪಾತಿ ಸಸ್ಯ ಪ್ರಭೇದಗಳು ಮಿಶ್ರಗೊಂಡು ಬೆಳೆಯುತ್ತವೆ. ಈ ಪ್ರದೇಶದ ಅಗಲ ಪಶ್ಚಿಮದಿಂದ ಪೂರ್ವಕ್ಕೆ 35-50 ಕಿಮೀ ಗಳಷ್ಟಿದೆ. ಈ ಅರಣ್ಯಗಳನ್ನು ಸುಲಭವಾಗಿ ಪ್ರವೇಶಿಸಬಹುದಾದ್ದರಿಂದ ಸರ್ಕಾರಕ್ಕೆ ಇವುಗಳಿಂದ ಒಳ್ಳೆಯ ಆದಾಯ ಬರುತ್ತದೆ. ಬೀಳುವ ಮಳೆಯ ಪ್ರಮಾಣಕ್ಕನುಗುಣವಾಗಿ ತೇವಪುರಿತ ಹಾಗೂ ಒಣ ಪರ್ಣಪಾತಿ ಸಸ್ಯದ ಅರಣ್ಯಗಳು ಇಲ್ಲಿ ಬೆಳೆಯುತ್ತವೆ. ಇವೆರಡಕ್ಕಿರುವ ಮುಖ್ಯ ವ್ಯತ್ಯಾಸವೆಂದರೆ ಮೊದಲಿನದರಲ್ಲಿ ಮರಗಳ ಬೆಳೆವಣಿಗೆ ಬಲು ಹುಲುಸಾಗಿರುವುದು. ಇಲ್ಲೂ ಸಸ್ಯವರ್ಗದಲ್ಲಿ ವಿವಿಧಸ್ತರಗಳು ಕಂಡುಬಂದರೂ ಅವು ನಿತ್ಯಹರಿದ್ವರ್ಣ ರೀತಿಯದರಷ್ಟು ಸ್ಪಷ್ಟವಾಗಿರುವುದಿಲ್ಲ. ಮರಗಳು ಅಷ್ಟು ಎತ್ತರವಾಗಿರುವುದಿಲ್ಲ ಮತ್ತು ಅಲ್ಲಲ್ಲಿ ತೆರೆದ ಸ್ಥಳಗಳಿರುತ್ತವೆ. ಸ್ಥಳ ಮತ್ತು ತೇವಗಳಿಗನುಗುಣವಾಗಿ ಸಸ್ಯವರ್ಗ ವೈವಿಧ್ಯಪೂರ್ಣವಾಗಿದೆ. ಈ ಅರಣ್ಯಗಳಿರುವ ಕಣಿವೆಗಳಲ್ಲಿ ಮರಗಳ ಎತ್ತರ 30-40 ಮೀ. ಇಲ್ಲಿನ ಮುಖ್ಯ ಮರಗಳೆಂದರೆ - ಹೆತ್ತೇಗ, ಬಿಲ್ವಾರ, ಪಾದ್ರಿ, ನಂದಿ, ಜಂಬೆ, ತೇಗ, ಬೆಂಡೆಮರ, ಹೊನ್ನೆ ಮುಂತಾದವು. ಇವುಗಳ ಪೈಕಿ ಅನೇಕ ಮರಗಳಿಗೆ ಸುತ್ತಳತೆ 3-5 ಮೀ ಗಳಿಷ್ಟಿರುತ್ತದೆ. ಮೇಲಿನ ಅರಣ್ಯಗಳ ಸ್ಥಳೀಯ ರೂಪಾಂತರಗಳಲ್ಲಿ ಈ ಕೆಳಗಿನ ಸಸ್ಯಗಳೂ ಕಂಡುಬರುತ್ತವೆ : ಉದಾ: ಮಡಿಮರ, ಗೋಮಜ್ಜಿಗೆ, ಕೂಲಿ, ಜಂಬುನೇರಳೆ ಇತ್ಯಾದಿ. ಇವುಗಳ ಜೊತೆಗೆ ಕಿರುಬಿದಿರು ಮತ್ತು ಹೆಬ್ಬಿದಿರುಗಳ ಬೆಳೆದಿರುತ್ತವೆ. ಒಣಪರ್ಣಪಾತಿ ಅರಣ್ಯ ಶಕ್ತಿಯುಡುಗಿನ ತೇವಪುರಿತ ಅರಣ್ಯದ ರೂಪಾಂತರ. ಇದರ ಮೇಲಿನ ಸ್ತರದಲ್ಲಿ ತೇಗವಿರುತ್ತದೆ. ಅದರ ಜೊತೆಗೇ ಮತ್ತಿ, ನಂದಿ ಮತ್ತು ದಿಂಡಿಗಗಳಿರುತ್ತವೆ. ಎರಡನೆಯ ಸ್ತರವೇನಾದರೂ ಕಂಡುಬಂದಲ್ಲಿ ಅದರಲ್ಲಿ ನೆಲ್ಲಿ, ಕಾವಲ್, ಮುರ್ಕಲಿ ಮುಂತಾದ ಮರಗಳಿರುತ್ತವೆ. ಇಲ್ಲಿ ಅನೇಕ ಅಡರುಬಳ್ಳಿಗಳೂ ಇರುತ್ತವೆ. ಅವುಗಳಲ್ಲಿ ಮುಖ್ಯವಾದವು ಕಂಗೋಂದಿ ಬಳ್ಳಿ, ಕಾಡು ಹಂಬು ತಾವರೆ ಮತ್ತು ಮರ್ಸದ ಬಳ್ಳಿ.

ಶುಷ್ಕ ಪ್ರದೇಶದ ಸಸ್ಯಗಳು ಮತ್ತು ಕುರುಚಲು ಪ್ರದೇಶ[ಸಂಪಾದಿಸಿ]

ಈ ಪ್ರದೇಶ ವಿಶಾಲವಾದುದು ಮತ್ತು ಉಳಿದ ರೀತಿಯ ಅರಣ್ಯಗಳ ಪೂರ್ವಕ್ಕೆ ಇದು ಹಬ್ಬಿದೆ. ಕರ್ನಾಟಕದ ಶೇ. 80-85 ಭೂಪ್ರದೇಶಗಳನ್ನು ಇದು ಆವರಿಸಿದೆ. ಇದರ ಸಸ್ಯವರ್ಗ ಎಂದೂ ಅರಣ್ಯದಂತೆ ಕಾಣಲಾರದು. ಇಲ್ಲಿನ ವಾರ್ಷಿಕ ಮಳೆ ಅತಿ ಕಡಿಮೆಯಾದ್ದರಿಂದ ಮರಗಳು ಬೆಳೆಯುವುದು ಬಹಳ ಕಷ್ಟ. ಆಕಸ್ಮಾತ್ತಾಗಿ ಮರಗಳೇನಾದರೂ ಬೆಳೆದರೆ ಅವು ಅಲ್ಲೊಂದು ಇಲ್ಲೊಂದರಂತೆ ವಿತರಣೆಗೊಂಡಿದ್ದು ಬಹುಸಣ್ಣ ಪ್ರಮಾಣದವಾಗಿರುತ್ತವೆ. ಇಲ್ಲಿ ಅನಾವೃಷ್ಟಿಯನ್ನು ಸಹಿಸಿಕೊಳ್ಳಬಲ್ಲ ವೈವಿಧ್ಯ ಪೂರ್ಣವಾದ ಮತ್ತು ಮುಳ್ಳುಗಳಿರುವ ಅನೇಕ ಪ್ರಭೇದಗಳಿವೆ. ಇಲ್ಲಿ ಬೆಳೆಯುವ ಮುಖ್ಯ ಮರಗಳೆಂದರೆ - ತಂಡರಸಿ, ಕಾಚಿನ ಮರ, ಜಾಲಿ, ಕಡುವಲೆ, ದಿಂಡಿಗ, ಕಾರಾಚ, ಶ್ರೀಗಂಧ, ಅರಚಿನಬೂರಗ, ಕಕ್ಕೆ, ಎಬನಿ ಮುತ್ತುಗ, ಅಂಕೋಲೆ ಇತ್ಯಾದಿ.

ಕೆಲವು ಜಿಲ್ಲೆಗಳಲ್ಲಿ ಸಣ್ಣ ಗುಡ್ಡಗಳಲ್ಲಿ ಮುಂಡುಗಳ್ಳಿ, ಕರೀಉಪ್ಪಿಗಿಡ ಮುಂತಾದವು ಇವೆ. ವಿಶಾಲವಾದ ಬಯಲುಗಳಲ್ಲಿ ಮರಗಳ ಮಧ್ಯೆ ಅನೇಕ ಜಾತಿಯ ಹುಲ್ಲುಗಳಿವೆ. ಸುಂಕರೀಹುಲ್ಲು, ದೊಡ್ಡ ಹಂಚೀಹುಲ್ಲು, ಕುಂತಿಹುಲ್ಲು ಮತ್ತು ಅಪ್ಲುಡ ಮ್ಯೂಟಿಕಗಳು ಇವುಗಳಲ್ಲಿ ಕೆಲವು.

ಮೇಲಿನ ಮೂರು ಮುಖ್ಯ ರೀತಿಯ ಅರಣ್ಯಪ್ರದೇಶಗಳ ಪೈಕಿ ನಿತ್ಯಹರಿದ್ವರ್ಣಕಾಡುಗಳನ್ನು ಕಡ್ಡಾಯವಾಗಿ ಸಂರಕ್ಷಿಸಬೇಕು. ಎರಡನೆಯ ರೀತಿಯದನ್ನು ದುರುಪಯೋಗಗೊಳಿಸಿಕೊಳ್ಳದೆ ಸೂಕ್ತವಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಮೂರನೆಯ ರೀತಿಯ ಅರಣ್ಯಪ್ರದೇಶವಿರುವ ವಿಶಾಲಪ್ರದೇಶದಲ್ಲಿ ವನಮಹೋತ್ಸವ ಕಾರ್ಯಕ್ರಮಗಳನ್ನು ನಡೆಸಿ ಅರಣ್ಯಾಭಿವೃದ್ಧಿಯಾಗುವಂತೆ ಮಾಡುವುದು ಒಳ್ಳೆಯದು. ಮರದ ಕೈಗಾರಿಕೆಗಳಿಗೆ ಬೇಕಾದ ಮರವನ್ನು ಶೀಘ್ರಗತಿಯಲ್ಲಿ ಒದಗಿಸುವ ಪ್ರಭೇದಗಳನ್ನು ಈ ಭಾಗದ ಪ್ರದೇಶಗಳಲ್ಲಿ ಬೆಳೆಸಬೇಕು. (ಬಿ.ಎ.ಆರ್.)


ಕರ್ನಾಟಕದ ಭೂವಿಜ್ಞಾನ[ಸಂಪಾದಿಸಿ]

ಕರ್ನಾಟಕದ ಭೂವೈಜ್ಞಾನಿಕ ಅಧ್ಯಯನ ಪ್ರಾಕೃತಿಕ ವಿಭಾಗಗಳಷ್ಟೇ ಮುಖ್ಯವಾದುದು. ಭೂರಚನೆ ಭೂಸ್ವರೂಪವನ್ನು ರೂಪಿಸುತ್ತದೆ. ಜೊತೆಗೆ ಖನಿಜ, ಶಿಲೆ ಹಾಗೂ ಮಣ್ಣುಗಳ ಹಂಚಿಕೆಯನ್ನೂ ನಿರ್ಧರಿಸುತ್ತದೆ. ಭಾರತದ ಪರ್ಯಾಯ ಪ್ರಸ್ಥಭೂಮಿಯ ಒಂದು ಭಾಗದಲ್ಲಿ ಕರ್ನಾಟಕವೂ ವಿಸ್ತರಿಸಿದ್ದು, ಅದು ಪುರಾತನ ಭೂ ಇತಿಹಾಸ ಮತ್ತು ಶಿಲಾ ಪರಂಪರೆಯನ್ನು ಹೊಂದಿದೆ. ಬಾಹ್ಯಶಕ್ತಿಗಳ ಕಾರ್ಯಾಚರಣೆಯಿಂದಾಗಿ ಶಿಲೆಗಳು ರೂಪಾಂತರಗೊಂಡಿರುತ್ತವೆ. ರಾಜ್ಯದ ಪ್ರಸ್ತುತ ಶಿಲಾ ಸಮೂಹವನ್ನು ಕುರಿತು ಭೂವಿಜ್ಞಾನಿಗಳು ಅಧ್ಯಯನ ಮಾಡಿ ಬರೆದಿದ್ದಾರೆ. ಭೂ ಇತಿಹಾಸದ ಮೊಟ್ಟಮೊದಲ ಅಧ್ಯಯನ ಕ್ಯಾಪ್ಟನ್ ಬಿ.ಜೆ. ಬೋಲ್ಡ್‌ ಎಂಬ ಭೂವಿಜ್ಞಾನಿಯಿಂದ ಪ್ರಾರಂಭ (1880). ಅವರ ಪ್ರಕಾರ ಕರ್ನಾಟಕದ ಭೂವಿಸ್ತೀರ್ಣದಲ್ಲಿ ಶೇ. 70 ಭಾಗ ಸೂಕ್ಷ್ಮ ಗೆರೆಗಳುಳ್ಳ ಬೂದು ಬಣ್ಣದ ಗ್ರಾನೈಟ್-ನೈಸ್ ಶಿಲೆಗಳಿಂದಲೂ ಉಳಿದ ಭಾಗದಲ್ಲಿ ಶೇ. 20 ಭಾಗವು ಹಸುರುಬಣ್ಣದ ಭಿನ್ನಸ್ತರದ (ಶಿಸ್ಟ್‌) ಶಿಲೆಗಳಿರುವುದು ತಿಳಿದು ಬಂದಿತು. ಇನ್ನೂ ಹಲವು ಭೂವಿಜ್ಞಾನಿಗಳು ರಾಜ್ಯದ ಭೂ ಇತಿಹಾಸವನ್ನು ಅಧ್ಯಯನ ಮಾಡಿ 2,700 ದಶಲಕ್ಷ ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಇಲ್ಲಿನ ಶಿಲಾ ಸಮುದಾಯ “ಆರ್ಷೇಯ ಯುಗಕ್ಕೆ” ಸೇರಿರುತ್ತದೆಂದು ಅಭಿಪ್ರಾಯಪಟ್ಟಿರುವರು. ಇವುಗಳನ್ನು ಎರಡು ಪ್ರಧಾನಗುಂಪುಗಳಾಗಿ ವಿಂಗಡಿಸಲಾಗಿದೆ.

1. ಕಣರಚನೆಯ ಪದರು ಶಿಲೆಗಳು (ಶಿಸ್ಟ್) : ಧಾರವಾಡ ಶಿಲಾವರ್ಗವೆಂದು ಇವುಗಳ ಹೆಸರು. ಬ್ರೂಸ್ ಫೂಟ್ ಭೂವಿಜ್ಞಾನಿ ಪ್ರಥಮ ಬಾರಿಗೆ ಧಾರವಾಡದ ಬಳಿ ಶೋಧನೆ ಮಾಡಿದುದರಿಂದ ಇವುಗಳಿಗೆ ಧಾರವಾಡದ ಶಿಸ್ಟ್‌ ಎಂದು ಹೆಸರಿಸಲಾಗಿದೆ. ರೂಪಾಂತರ ಹೊಂದಿದ ಜಲಜಶಿಲೆಗಳು ಮತ್ತು ಜ್ವಾಲಾಮುಖಿಜನ್ಯಶಿಲೆಗಳೂ ಆಂಫಿಬೊಲೈಟ್, ಪೆಂಡೊಟೈಟ್, ಡನೈಟ್ ಮುಂತಾದ ಅಲ್ಪಸಿಲಿಕಾಂಶ (ಬೇಸಿಕ್) ಶಿಲೆಗಳೂ ಇವುಗಳಲ್ಲಿ ಸೇರಿವೆ. ವ್ಯಾಪ್ತಿ ಸು. 20,700 ಚ.ಕಿಮೀ.

2. ಗ್ರಾನೈಟ್ ಮತ್ತು ನೈಸ್ ಶಿಲಾವಿಧಗಳು: ಈ ಶಿಲೆ ರಾಜ್ಯದಲ್ಲಿ ಅಧಿಕವಾಗಿವೆ. ರಾಜ್ಯದ ದಕ್ಷಿಣಕ್ಕೆ ಇವುಗಳ ಹಂಚಿಕೆ ಹೆಚ್ಚು. ಅನೇಕ ಕಡೆ ಧಾರವಾಡ ಪದರು ಶಿಲೆಗಳನ್ನು ಛೇದಿಸಿಕೊಂಡು ಹೊರಬಂದಿರುವುದರಿಂದ (ಅಂತಸ್ಸರಣ) ಧಾರವಾಡ ಶಿಲಾವರ್ಗವೇ ಈ ರಾಜ್ಯದಲ್ಲಿ ಅತ್ಯಂತ ಪುರಾತನವಾದುದೆಂದು ಪರಿಗಣಿಸಲಾಗಿದೆ.

ಈಗ ಹೊರಕಾಣುತ್ತಿರುವ ಧಾರವಾಡ ಶಿಲಾವರ್ಗಗಳು ಹಲವಾರು ಉದ್ದವಲಯಗಳಾಗಿ ಉತ್ತರದಕ್ಷಿಣದುದ್ದಕ್ಕೂ ಹಬ್ಬಿವೆ. ಇವುಗಳ ಸುತ್ತ ಗ್ರಾನೈಟ್ ಮತ್ತು ನೈಸ್ ಶಿಲೆಗಳು ಹೆಚ್ಚುಕಡಿಮೆ ಸಮಾಂತರವಾಗಿ ಮೂರು ದೊಡ್ಡ ವಲಯಗಳಲ್ಲಿ ಹರಡಿವೆ. ಪಶ್ಚಿಮದಿಂದ ಪೂರ್ವಕ್ಕೆ ಹಾದುಹೋಗುವಾಗ ಧಾರವಾಡ ಶಿಲಾವಲಯಗಳನ್ನು ಒಂದಾದಮೇಲೊಂದರಂತೆ ಕಾಣಬಹುದು. ಇವನ್ನು ಬಿ.ರಾಮರಾಯರು ಕೆಳಕಂಡಂತೆ ವಿಂಗಡಿಸಿದ್ದಾರೆ (1940).

1. ಪಶ್ಚಿಮ ವಲಯ : ಕ್ಯಾಸಲ್ರಾಕ್, ಕೊಡಚಾದ್ರಿ, ಆಗುಂಬೆ, ಕುದುರೆಮುಖ ಮತ್ತು ಮಡಿಕೇರಿ ಶಿಲಾಪ್ರದೇಶಗಳನ್ನೊಳಗೊಂಡಿದೆ.

2. ಪಶ್ಚಿಮ ಮಧ್ಯವಲಯ : ಧಾರವಾಡಕ್ಕೆ ಸ್ವಲ್ಪ ಉತ್ತರದಲ್ಲಿ ಪ್ರಾರಂಭವಾಗಿ ದಕ್ಷಿಣದಲ್ಲಿ ಕಾವೇರಿ ನದಿಯ ತೀರದವರೆಗೆ ಸು. 435 ಕಿಮೀ ಉದ್ದವಾಗಿ ಹಬ್ಬಿದೆ. ಇದರಲ್ಲಿ ಮುಖ್ಯವಾಗಿ ಶಿವಮೊಗ್ಗ, ಹೊಳೆನರಸೀಪುರ ಮತ್ತು ಕೃಷ್ಣರಾಜಪೇಟೆ ಪದರು ಶಿಲಾವಲಯಗಳು ಸೇರಿವೆ. ಪಶ್ಚಿಮ ಮತ್ತು ಪಶ್ಚಿಮ ಮಧ್ಯ ಹರವಿನ ಒಟ್ಟು ವಿಸ್ತೀರ್ಣ ಸು. 11,650 ಚ.ಕಿಮೀ.

3. ಮಧ್ಯವಲಯ : ಉತ್ತರದಲ್ಲಿ ಗದಗ ಡಂಬಳದಿಂದ ಪ್ರಾರಂಭವಾಗಿ ಸ್ವಲ್ಪ ದೂರ ಆಗ್ನೇಯಾಭಿಮುಖವಾಗಿ ದಕ್ಷಿಣದತ್ತ ಹರಡಿದೆ. ಇದು ಚಿತ್ರದುರ್ಗ, ಚಿಕ್ಕನಾಯಕನ ಹಳ್ಳಿ, ನಾಗಮಂಗಲ ಮತ್ತು ನುಗ್ಗೇಹಳ್ಳಿ ಮುಂತಾದ ಪದರುಶಿಲಾಪ್ರದೇಶಗಳನ್ನೊಳಗೊಂಡಿದೆ.

4. ಪೂರ್ವ ಮಧ್ಯವಲಯ : ಅನೇಕ ಚಿಕ್ಕ ಪ್ರದೇಶಗಳನ್ನೊಳಗೊಂಡಿದೆ. ಇವುಗಳಲ್ಲಿ ಬ್ಯಾಂಡೈಟ್ ಶಿಲಾವರ್ಗ, ಕೋಡಮೈಟ್ ಶಿಲಾವರ್ಗ ಮತ್ತು ಸಾಕರ್ಸನೈಟ್ ಶಿಲಾವರ್ಗಗಳು ಮುಖ್ಯವಾದವು.

5. ಪೂರ್ವವಲಯ : ಕೋಲಾರ ಜಿಲ್ಲೆಯಲ್ಲಿದೆ. ಇದಕ್ಕೆ ಕೋಲಾರ ಶಿಲಾವಲಯವೆಂದು ಹೆಸರು. ಈ ಶಿಲೆಗಳು ಉತ್ತರದಕ್ಷಿಣವಾಗಿ ಹಬ್ಬಿವೆ. ಸು. 260 ಚ.ಕಿಮೀ ಗಳು. ಭಾರತದ ಚಿನ್ನದ ಉತ್ಪತ್ತಿಗೆ ಇದೇ ಮುಖ್ಯ ಕೇಂದ್ರ.

ಶಿಲಾ ಓಟ[ಸಂಪಾದಿಸಿ]

ಧಾರವಾಡ ಶಿಲೆಗಳ ಪ್ರಾದೇಶಿಕ ಶಿಲಾ ಓಟ (ಸ್ಟ್ರೈಕ್) ಉತ್ತರ ಭಾಗದಲ್ಲಿ ಉತ್ತರವಾಯವ್ಯ ಮತ್ತು ದಕ್ಷಿಣಾಆಗ್ನೇಯವಾಗಿಯೂ ದಕ್ಷಿಣಕ್ಕೆ ಬಂದಂತೆಲ್ಲ ಉತ್ತರ ದಕ್ಷಿಣವಾಗಿಯೂ ದಕ್ಷಿಣದ ಎಲ್ಲೆಯ ಹತ್ತಿರ ಈಶಾನ್ಯ ನೈಋತ್ಯವಾಗಿಯೂ ಇವೆ.

ಶಿಲಾವಿಭಜನೆ[ಸಂಪಾದಿಸಿ]

ಧಾರವಾಡ ಶಿಲಾಸಮುದಾಯಗಳನ್ನು ಬಹುಕಾಲದಿಂದ ಹಲವಾರು ಭೂ ವಿಜ್ಞಾನಿಗಳು ವಿಂಗಡಿಸಲು ಪ್ರಯತ್ನಿಸಿದ್ದಾರೆ. ಇವರಲ್ಲಿ ಮೊದಲಿಗರು ಸಂಪತ್ ಐಯ್ಯಂಗಾರ್ (1906) ಅನಂತರ ಡಬ್ಲ್ಯು.ಎಫ್. ಸ್ಮಿತ್ (1916). ಬಿ.ರಾಮರಾಯರು 1940 ರಲ್ಲಿ ಇದನ್ನು ವಿಂಗಡಿಸಿದ್ದಾರೆ.

ಧಾರವಾಡ ಶಿಲೆಗಳ ಉತ್ಪತ್ತಿ[ಸಂಪಾದಿಸಿ]

ಇದೊಂದು ಆಸಕ್ತಿಯನ್ನುಂಟುಮಾಡುವ ವಿಚಾರ. ಕಾರಣ ಈ ಶಿಲೆಗಳು ಸಮುದ್ರದ ಅಡಿಯಲ್ಲಾದ ಇತರ ಶಿಲೆಗಳಂತಲ್ಲ. ಈವರೆಗೆ ಅನೇಕ ಭೂವಿಜ್ಞಾನಿಗಳು ಇವುಗಳ ಉತ್ಪತ್ತಿಯ ಬಗ್ಗೆ ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಶಿಲೆಗಳು ಸಮಕಾಲೀನ ಶಿಲಾರಸಪ್ರವಾಹ ಹಾಗೂ ಸಿಲಿಕಾಂಶರಹಿತ ಅಗ್ನಿಶಿಲೆಗಳಿಂದಾಗಿರುವ ಮತ್ತು ನೈಸ್ ತಳದ ಶಿಲಾತೊಡಕಿನ ಮೇಲೆ ಅನನುರೂಪತೆಯಿಂದಿರುವ ತೀವ್ರ ರೂಪಾಂತರ ಜಲಜ ಶಿಲೆಗಳೆಂದು ರಾಬರ್ಟ್ ಬ್ರೂಸ್ಫುಟ್ ಹೇಳಿದ್ದಾನೆ (1896). ಆದರೆ ಡಬ್ಲ್ಯು.ಎಫ್. ಸ್ಮಿತ್ನ ಅಭಿಪ್ರಾಯದಲ್ಲಿ ಈ ಶಿಲೆಗಳೆಲ್ಲವೂ ಅಗ್ನಿಶಿಲೆಗಳಿಂದಾದವುಗಳೇ ವಿನಾ ಜಲಜಶಿಲೆಗಳ ರೂಪಾಂತರದಿಂದಾದವುಗಳಲ್ಲ (1911). ಸು. ಎರಡು ದಶಕಗಳ ತರುವಾಯ ಬಿ.ರಾಮರಾವ್ ಮತ್ತು ಸಹೋದ್ಯೋಗಿಗಳು ಧಾರವಾಡ ಪದರು ಶಿಲಾವರ್ಗದಲ್ಲಿ ಅಲೆಯ ಗುರುತುಗಳು, ಪ್ರವಾಹಸ್ತರಗಳು ಮುಂತಾದ ನಿರ್ದಿಷ್ಟ ಜಲಜಶಿಲಾರಚನೆಗಳನ್ನು ಕಂಡು ಇವು ಜಲಜಶಿಲಾಜನ್ಯವೆಂದು ಅಭಿಪ್ರಾಯಪಟ್ಟರು. ಸಿ. ಎಸ್. ಪಿಚ್ಚಮುತ್ತು ಮತ್ತು ಇತರ ಸಂಶೋಧಕರ ಅಭಿಪ್ರಾಯದಲ್ಲಿ ಧಾರವಾಡ ಪದರುಶಿಲಾವರ್ಗದ ಅನೇಕ ಶಿಲಾವಿಧಗಳು ಜಲಜನ್ಯವೆಂದಿದೆ.

ಶಿಲಾವರ್ಣನೆ[ಸಂಪಾದಿಸಿ]

ಈ ವರ್ಗದಲ್ಲಿರುವ ಅನೇಕ ಶಿಲಾವಿಧಗಳನ್ನು ಸ್ಥೂಲವಾಗಿ ನಾಲ್ಕು ಗುಂಪುಗಳಾಗಿ ವಿಂಗಡಿಸಬಹುದು.

1. ಸಿಲ್ ಮತ್ತು ಡೈಕುಗಳನ್ನೊಳಗೊಂಡ ಜ್ವಾಲಾಮುಖಜಶಿಲೆಗಳು : ಧಾರವಾಡ ಪದರುಶಿಲೆಗಳ ಕೆಳಭಾಗದಲ್ಲಿ ರೂಪಾಂತರ ಹೊಂದಿರುವ ಜ್ವಾಲಾಮುಖಿ ಶಿಲೆಗಳಿವೆ. ಇವುಗಳ ಕಾಲದ ಬಗ್ಗೆ ಬಲು ತೊಡಕಿದೆ. ಇವುಗಳಲ್ಲಿ ಕೆಲವು ಅಧಿಕ ಸಿಲಿಕಾಂಶ, ಮಧ್ಯವರ್ತಿ (ಮಿತ ಸಿಲಿಕಾಂಶ) ಮತ್ತು ಅತ್ಯಲ್ಪ ಸಿಲಿಕಾಂಶ ಶಿಲೆಗಳು. ಇವು ಲಾವಾ ಪ್ರವಾಹಗಳು, ಸಿಲ್ಲುಗಳು, ಪದರಗಳು, ಡೈಕುಗಳು- ಈ ರೂಪಗಳಲ್ಲಿಯೂ ಜ್ವಾಲಾಮುಖಿ ಬೂದಿ, ಟುಫ್ ಮತ್ತು ಕಾಂಗ್ಲಾಮರೇಟುಗಳಾಗಿಯೂ ಇವೆ. ಅಧಿಕ ಸಿಲಿಕಾಂಶದ ಜ್ವಾಲಾಮುಖಿಜನ್ಯ ಶಿಲೆಗಳು ರೂಪಾಂತರಿಸಿ ಒಪಾಲ್ಸೆಂಟ್ ಬೆಣಚಿನಿಂದ ಕೂಡಿದ ಶಿಲೆಗಳಾಗಿವೆ. ಇವು ಚಿತ್ರದುರ್ಗ ಜಿಲ್ಲೆಯ ಮಲೆಬೆನ್ನೂರು ಮತ್ತು ತೆಕ್ಕಲುವಟ್ಟಿ ಬಳಿ ಸಿಗುವುವು. ಮಿತ ಸಿಲಿಕಾಂಶ ಮತ್ತು ಅಲ್ಪ ಸಿಲಿಕಾಂಶ ಶಿಲೆಗಳು ರೂಪಾಂತರದಿಂದ ಪದರು ರಚನೆಪಡೆದು ತಿಳಿ ಹಸಿರುಬಣ್ಣದ ಕ್ಲೋರೈಟ್ ಪದರು ಶಿಲೆಗಳಾಗಿವೆ. ಇವುಗಳಿಗೆ ಸಣ್ಣಕಣರಚನೆ ಇದೆ. ಇವು ಶಿವಮೊಗ್ಗ ಮತ್ತು ಚಿತ್ರದುರ್ಗಶಿಲಾಪ್ರದೇಶಗಳಲ್ಲಿವೆ.

2. ಕಣರಚನೆಯ ಪದರು ಶಿಲೆಗಳು : ಧಾರವಾಡ ಶಿಲಾವರ್ಗದ ಬಹುಭಾಗ ವಿವಿಧ ಕಣರಚನೆಯಿಂದ ಕೂಡಿರುವ ಪದರುಶಿಲೆಗಳಿಂದಲೂ ಕಣಕ ಶಿಲೆಗಳಿಂದಲೂ ಕೂಡಿದೆ. ಇವುಗಳಲ್ಲಿ ಮುಖ್ಯವಾದವು : (i) ಕ್ಲೋರೈಟ್ ಪದರುಶಿಲೆ; (ii) ಮೈಕಾ ಪದರುಶಿಲೆ; (iii) ಕಪ್ಪು ಹಾರ್ನ್ಬ್ಲೆಂಡ್ ಪದರುಶಿಲೆ; (iv) ಟ್ರಿಮೊಲೈಟ್ ಆಕ್ಟಿನೊಲೈಟ ಪದರುಶಿಲೆ; (v) ಕ್ಯಾಲ್ಕ್‌ಪೈರಾಕ್ಸೀನ್ ಕಣಕ ಶಿಲೆಗಳು; (vi) ಕಯನೈಟ್ ಸ್ಟಾರೊಲೈಟ್ ಪದರುಶಿ¯; (vii) ಕಾರ್ಡಿಯರೈಟ್ ಸಿಲಿಮನೈಟ್ ಪದರುಶಿಲೆ; (viii) ಟಾಲ್ಕ್‌ ಬಂiೆÆಟೈಟ್ ಪದರುಶಿಲೆ, (ix) ಕಯನೈಟ್ ಸಿಲಿಮನೈಟ್ -ಗ್ರಾಫೈಟ್ ಪದರುಶಿಲೆ.

3. ವಿರೂಪ ಜಲಜಶಿಲೆಗಳು : ಈ ಶಿಲೆಗಳು ಇತರ ಶಿಲೆಗಳಿಗಿಂತ ಕಡಿಮೆಯಿದ್ದರೂ ಉತ್ಪತ್ತಿಯ ರೀತಿಯಿಂದ ಬಹುಮುಖ್ಯವೆನಿಸಿವೆ. ಇವು ಅನೇಕ ಭೂವೈಜ್ಞಾನಿಕ ಕಾರಣಗಳಿಂದಾಗಿ ವಿರೂಪಹೊಂದಿರುವುವು. ಇವುಗಳಲ್ಲಿ ಮುಖ್ಯವಾದವು: (i) ಕಂಗ್ಲಾಮರೇಟುಗಳು; (ii) ಕ್ವಾರ್ಟ್ಜೈಟುಗಳು; (iii) ಪೆರುಜಿನಸ್ ಕ್ವಾರ್ಟ್ಜೈಟುಗಳು; (iv) ಫಿಲ್ಲೈಟುಗಳು ಮತ್ತು ಅರ್ಜಿಲೈಟುಗಳು; (v) ಗ್ರೇವಾಕುಗಳು; (vi) ಸುಣ್ಣಶಿಲೆಗಳು. ಇವುಗಳಲ್ಲದೆ ಅತ್ಯಲ್ಪ ಸಿಲಿಕಾಂಶ (ಅಲ್ಟ್ರ ಬೇಸಿಕ್) ಶಿಲೆಗಳು ದೊಡ್ಡ ಪರಿಮಾಣದಲ್ಲಿ ಪದರುಶಿಲೆಗಳನ್ನು ಭೇದಿಸಿವೆ. ಇವನ್ನು ಟ್ರಾಸ್ ಶಿಲೆಗಳೆಂದೂ ಕರೆಯುವುದುಂಟು.

ಗ್ರಾನೈಟ್ ಮತ್ತು ನೈಸುಗಳು[ಸಂಪಾದಿಸಿ]

ಕರ್ನಾಟಕ ರಾಜ್ಯದ ಬಹುಭಾಗವನ್ನಾವರಿಸಿರುವ ಈ ಶಿಲೆಗಳಲ್ಲಿ ಸ್ಮಿತ್ ನಾಲ್ಕು ಬಗೆಯ ಶಿಲೆಗಳನ್ನು ಗುರುತಿಸಿ ಇವು ವಿವಿಧ ಅಂತಸ್ಸರಣ ಕಾಲಗಳಿಗೆ ಸಂಬಂಧಿಸಿದುವೆಂದು ತೋರಿಸಿದ್ದಾನೆ (1916). 1. ಚಾಂಪಿಯನ್ ನೈಸ್, 2. ಪೆನಿನ್ಸುಲಾರ್ ನೈಸ್, 3. ಚಾರ್ನಕೈಟ್, 4. ಕ್ಲೋಸ್ಪೇಟೆ ಗ್ರಾನೈಟ್. ಈ ನಾಲ್ಕು ಶಿಲಾಗುಂಪುಗಳಲ್ಲಿಯೂ ಅನೇಕ ಪ್ರಭೇದಗಳಿವೆ. ಇವು ಆಳದಲ್ಲಿ ವಿವಿಧ ಕಾಲಗಳಲ್ಲಿ ಮಾತೃಶಿಲಾದ್ರವದಿಂದ ಹೊರಬಂದವು. ಸ್ಮಿತ್ ಮಾಡಿರುವ ಈ ವಿಂಗಡಣೆ ಈಗಲೂ ಬಳಕೆಯಲ್ಲಿದೆ. 1. ಚಾಂಪಿಂಯನ್ ನೈಸ್ ಶಿಲೆಗಳು ಗ್ರಾನಿಟಿಕ್ ಶಿಲೆಗಳಲ್ಲಿ ಅತ್ಯಂತ ಪುರಾತನವಾದವು; ಕೋಲಾರ ಚಿನ್ನದ ಗಣಿಪ್ರದೇಶ, ಶೃಂಗೇರಿ ಮತ್ತು ಭದ್ರಾವತಿ ಸಮೀಪದಲ್ಲಿ ಹರಡಿವೆ. ಇವನ್ನು ಮೊಟ್ಟಮೊದಲು ಕೋಲಾರ ಪದರು ಶಿಲಾವಲಯದಲ್ಲಿ ಗುರುತಿಸಲಾಯಿತು. ಹೆಚ್ಚು ಅಭ್ರಕದಿಂದ ಕೂಡಿದ್ದು ಬೂದು ಬಣ್ಣದ ಒಪಾಲಸೆಂಟ್ ಬೆಣಚು ಇರುವುದು ಇವುಗಳ ವಿಶೇಷ ಲಕ್ಷಣ. ಇವು ಪೆನಿನ್ಸುಲಾರ್ ನೈಸುಗಳಿಗಿಂತ ಹಿರಿಯವು. ಆದರೆ ಪೆನಿನ್ಸುಲಾರ್ನೈಸಿನ ಕೆಲವು ಶಿಲಾವಿಧಗಳನ್ನು ಈ ಗುಂಪಿನ ಶಿಲೆಗಳಿಂದ ಗುರುತಿಸುವುದು ಬಹಳ ಕಷ್ಟ. 2. ಕರ್ನಾಟಕದ ಬಹುಭಾಗವನ್ನಾಕ್ರಮಿಸಿರುವ ನೈಸ್ ಮತ್ತು ಗ್ರಾನೈಟ್ ಶಿಲಾತೊಡಕನ್ನು ಪೆನಿನ್ಸುಲಾರ್ನೈಸ್ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಮುಖ್ಯ ಶಿಲಾವಿಧಗಳೆಂದರೆ ಗ್ವಾನೋಡಯೊರೈಟ್, ನೈಸಿಕ್ ಗ್ರಾನೈಟ್ ಮತ್ತು ಕಲಬೆರಕೆ ನೈಸುಗಳು ಇವೆಲ್ಲ ಬಹುಮಟ್ಟಿಗೆ ಒಂದೇ ಅಂತಸ್ಸರಣ ಕಾಲದವೇ ಅಥವಾ ಬೇರೆ ಬೇರೆ ಕಾಲಗಳಿಗೆ ಸೇರಿವೆಯೇ ಎಂದು ಹೇಳುವುದು ಕಷ್ಟ. ಅಂತೂ ಇವು ಚಾಂಪಿಯನ್ ನೈಸುಗಳಿಗಿಂತ ಕಿರಿಯವೆಂದು ಸ್ಮಿತ್ ಅಭಿಪ್ರಾಯ ಪಟ್ಟಿದ್ದಾನೆ. 3. ಚಾರ್ನಕೈಟ್ ಶಿಲೆಗಳು ಧಾರವಾಡ ಶಿಲಾವರ್ಗವನ್ನು ಭೇದಿಸುವ ಮೂರನೆಯ ಅಂತಸ್ಸರಣ ಶ್ರೇಣಿ. ಬಿಳಿಗಿರಿರಂಗನಬೆಟ್ಟದ ಸಾಲು, ಪಿರಿಯಾಪಟ್ಟಣದ ಪಶ್ಚಿಮಭಾಗ ಮತ್ತು ಕೊಡಗು ಪ್ರದೇಶಗಳಲ್ಲಿ ಈ ಶಿಲಾಸಮೂಹ ಇದೆ. ಇದಲ್ಲದೆ ರಾಮನಗರ, ಮದ್ದೂರು, ಮಳವಳ್ಳಿ, ಹಲಗೂರು ಮತ್ತು ಇತರ ಪ್ರದೇಶಗಳಲ್ಲಿ ಹೈಪರಸ್ತೀನ್ ಇರುವ ಅಥವಾ ಇಲ್ಲದಿರುವ ಕಣಶಿಲಾವಿಧಗಳಿವೆ. ಚಾರ್ನಕೈಟುಗಳ ಉತ್ಪತ್ತಿಯ ಬಗ್ಗೆ ವಿವಾದವಿದೆ. ಇವುಗಳ ಉತ್ಪತ್ತಿಯ ಬಗ್ಗೆ ಅನೇಕ ಭೂವಿಜ್ಞಾನಿಗಳು ಸಂಶೋಧನೆ ಮಾಡಿದ್ದರೂ ಏಕಾಭಿಪ್ರಾಯ ಮೂಡಿಲ್ಲ. 4. ರಾಮನಗರ ಗ್ರಾನೈಟುಗಳು ಅತ್ಯಂತ ಕಿರಿಯ ಅಂತಸ್ಸರಣ ಶಿಲೆಗಳು. ಇವೂ ಬಳ್ಳಾರಿ ಬಳಿ ಇರುವ ಗ್ರಾನೈಟ್ ಶಿಲಾವಿಧಗಳೂ ಒಂದೇ ತೆರನಾಗಿರುವುದರಿಂದ ಬಿ.ರಾಮರಾಯರು ಇವನ್ನು ಬಳ್ಳಾರಿನೈಸ್ ಎಂದು ಕರೆದಿರುವರು. ಈ ಶಿಲೆಗಳು ಅನೇಕ ಕಡೆ ಇವುಗಳಿಗಿಂತ ಹಿರಿಯ ವಯಸ್ಸಿನ ಪೆನಿನ್ಸುಲಾರ್ ನೈಸ್ ಮತ್ತು ಇತರ ಗ್ರಾನೈಟ್ನೈಸ್ ಶಿಲಾವರ್ಗಗಳನ್ನು ಭೇದಿಸಿರುವುದು ಸ್ಪಷ್ಟವಾಗಿದೆ. ಇವು ದಕ್ಷಿಣದಲ್ಲಿ ಶಿವನಸಮುದ್ರದಿಂದ ಉತ್ತರದಲ್ಲಿ ಬಳ್ಳಾರಿಯವರೆಗೆ ಹಬ್ಬಿವೆ. ಈ ಶಿಲೆಗಳಿಗೆ ಸಾಮಾನ್ಯವಾಗಿ ದಪ್ಪಕಣ ರಚನೆ ಇದೆ. ಅಲ್ಲಲ್ಲಿ ಪಾರ್ಫಿರಿಟಿಕ್ ರಚನೆಯಿರುವ ಪ್ರಭೇದಗಳಿವೆ. ಇವುಗಳಲ್ಲಿರುವ ಫೆಲ್ಸ್‌ಪಾರ್ಕಣಗಳು ತಿಳಿಗುಲಾಬಿ ಬಣ್ಣ ಅಥವಾ ಮಾಂಸಖಂಡದ ಕೆಂಪು ಬಣ್ಣದಿಂದ ಕೂಡಿರುವ ಕಾರಣ ಗುಲಾಬಿ ಮತ್ತು ಬೂದುಬಣ್ಣದ ಶಿಲಾವಿಧಗಳುಂಟಾಗಿವೆ. ಕ್ಲೋಸ್ಪೇಟೆ (ಈಗ ರಾಮನಗರ) ಪ್ರದೇಶದ ದಕ್ಷಿಣ ಭಾಗದಲ್ಲಿ ಅಧಿಕ ಸಿಲಿಕಾಂಶದ ಪಾರ್ಫಿರಿಟಿಕ್, ಫೆಲ್ಸೈಟ್, ಲ್ಯಾಂಪ್ರೊಫೈರ್ ಮತ್ತು ಇತರ ಡೈಕ್ ವಿಧಗಳು ಈ ಗ್ರಾನೈಟುಗಳನ್ನು ಛೇದಿಸಿವೆ. ಕ್ಲೋಸ್ಪೇಟೆ ಗ್ರಾನೈಟ್ ನಿರ್ದಿಷ್ಟವಲಯದ ಹೊರಗೆ, ಇದೇ ರೀತಿಯ ಶಿಲೆಗಳು ಚಿತ್ರದುರ್ಗ, ಹೊಸದುರ್ಗ, ಅರಸೀಕೆರೆ, ಬಾಣಾವರ, ಕೈವಾರ (ಚಿಂತಾಮಣಿ ಬಳಿ) ಮತ್ತು ಮೈಸೂರು (ಚಾಮುಂಡಿಬೆಟ್ಟ) ಹಾಗೂ ಹೆಗ್ಗಡದೇವನಕೋಟೆ ಬಳಿ ಇವೆ.

ಡೈಕ್ ಶಿಲೆಗಳು[ಸಂಪಾದಿಸಿ]

ಆರ್ಷೇಯ ಭೂ ಕಲ್ಪದ ಶಿಲಾವಿಧಗಳನ್ನೆಲ್ಲ ಛೇದಿಸಿರುವ ಅನೇಕ ವಿಧವಾದ ಡೈಕ್ ಸಮೂಹಗಳನ್ನು ಕೆಳಗೆ ಸೂಚಿಸಿದೆ. 1. ಕಪ್ಪು ಹಾರ್ನ್ಬ್ಲೆಂಡ್ ಡೈಕುಗಳು : ತುಮಕೂರಿಗೆ ಪಶ್ಚಿಮ ಭಾಗಮತ್ತು ಹಾಸನದ ಪೂರ್ವಭಾಗದಲ್ಲಿ ಹರಡಿವೆ. ತಿಪಟೂರಿಗೆ ಉತ್ತರ ಮತ್ತು ದಕ್ಷಿಣದಲ್ಲಿ ಅತಿ ಒತ್ತಾಗಿ ಹರಡಿವೆ. 2. ನೊರೈಟ್ ಡೈಕುಗಳು : ಬಿಡದಿ, ಹಾರೋಹಳ್ಳಿ, ಮಧ್ಯೆ, ಹುಣಸೂರಿಗೆ ಪಶ್ಚಿಮ ಮತ್ತು ನೈಋತ್ಯ ದಿಕ್ಕಿನಲ್ಲಿ ಹೆಚ್ಚಾಗಿವೆ. 3. ಫೆಲ್ಸೈಟ್ ಮತ್ತು ಪಾರ್ಫಿರಿ ಡೈಕುಗಳು : ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸುತ್ತಮುತ್ತಲೂ ಕ್ಲೋಸ್ಪೇಟೆ ಗ್ರಾನೈಟ್ ಶಿಲೆಗಳಲ್ಲಿಯೂ ಇವೆ. 4. ಡಾಲರೈಟ್ ಮತ್ತು ಎನ್ಸ್ಟಟೈಟ್ ಡೈಕುಗಳು : ಕ್ಲೋಸ್ಪೇಟ್ ಗ್ರಾನೈಟುಗಳೊಂದಿಗಿರುವ ಫೆಲ್ಸೈಟ್ ಮತ್ತು ಪಾರ್ಫಿರಿಗಳನ್ನು ಛೇದಿಸಿವೆ. ಇವು ಆರ್ಷೇಯ ಕಲ್ಪದಲ್ಲಿ ಅತ್ಯಂತ ಕಿರಿಯಶಿಲಾವಿಧಗಳಾದ್ದರಿಂದ ಈ ಕಲ್ಪವಾದ ತರುವಾಯ ಅಂತಸ್ಸರಣಗೊಂಡಿರಬಹುದೆಂದು ಪರಿಗಣಿಸಲಾಗಿದೆ.

ಪುರಾಣಯುಗ (ಪ್ರೀಕೇಂಬ್ರಿಯನ್) ಕಲಾದಗಿ ಶಿಲಾಶ್ರೇಣಿ[ಸಂಪಾದಿಸಿ]

ಕರ್ಣಾಟಕದ ಉತ್ತರಭಾಗದಲ್ಲಿ ಬಿಜಾಪುರ ಜಿಲ್ಲೆಯಲ್ಲಿ ಬೆಳಗಾವಿ ಮತ್ತು ಕಲಾದಗಿಗಳ ಮಧ್ಯೆ ಸು. 260 ಕಿಮೀ ಉದ್ದ ಹಾಗು 65-100 ಕಿಮೀ ಅಗಲವಿದ್ದು ಪೂರ್ವಪಶ್ಚಿಮವಾಗಿ ಹಬ್ಬಿರುವ ರೂಪಾಂತರಿತ ಜಲಜಶಿಲಗಳಿವೆ. ಈ ಶಿಲಾವಿಧಗಳಿಗೆ ಕಲಾದಗಿ ಶಿಲಾಶ್ರೇಣಿಯೆಂದು ಹೆಸರು. ಇವು ಸಮತಲವಾಗಿ ಧಾರವಾಡ ಪದರುಶಿಲೆಗಳ ಮೇಲೆ ಅನನುರೂಪತೆಯಿಂದ ಹರಡಿವೆ. ಇವುಗಳ ಮಂದ ಸು. 3050-4575 ಮೀ. ಇವನ್ನು ಕೆಳ ಕಲಾದಗಿ ಮತ್ತು ಮೇಲು ಕಲಾದಗಿ ಎಂದು ಎರಡು ವರ್ಗಗಳಾಗಿ ವಿಭಜಿಸಿದ್ದಾರೆ. ಈ ಶಿಲೆಗಳ ಇಳಿಜಾರು ಉತ್ತರ ಪಶ್ಚಿಮವಾಗಿದೆ. ಮುಖ್ಯವಾಗಿ ಕಂಗ್ಲಾಮರೇಟು, ಮರಳುಶಿಲೆ, ಬೆಣಚು, ಬ್ರೆಕ್ಷಿಯ, ಚೆರ್ಟ್, ಸುಣ್ಣಶಿಲೆ, ಜೇಡುಶಿಲೆ ಮತ್ತು ಹಾರನ್ ಸ್ಟೋನುಗಳಿಂದ ಕೂಡಿದೆ. ಈ ಶ್ರೇಣಿಯ ಬೆಣಚು ಮತ್ತು ಮರಳುಶಿಲೆಗಳಲ್ಲಿ ಅಲೆಗುರುತು ಹಾಗೂ ಪ್ರವಾಹ ಪದರು ರಚನೆಗಳು ಇವೆ. ಬಾದಾಮಿ ಗುಹೆಗಳಲ್ಲಿ ಪ್ರವಾಹಪದರ ಬೆಣಚುಗಳನ್ನು ಉಪಯೋಗಿಸಿ ದೇವಾಲಯಗಳೂ ಹಾಗೂ ಸುಂದರಮೂರ್ತಿಗಳನ್ನು ಕೆತ್ತಿದ್ದಾರೆ.

ಭೀಮಾಶಿಲಾಶ್ರೇಣಿ[ಸಂಪಾದಿಸಿ]

ಈ ಶಿಲಾಶ್ರೇಣಿ ಬಿಜಾಪುರ ಮತ್ತು ಗುಲ್ಬರ್ಗ ಜಿಲ್ಲೆಯಲ್ಲಿ ಕೃಷ್ಣಾನದಿಯ ಉಪನದಿ ಭೀಮಾನದಿಯ ಪಾತ್ರದಲ್ಲಿ ಚೆನ್ನಾಗಿ ಹೊರಕಾಣುತ್ತದೆ. ವಿಸ್ತಾರ ಸು. 5200 ಕಿಮೀ. ಇವು ಆರ್ಷೇಯ ಕಲ್ಪದ ಶಿಲಾವಿಧಗಳ ಮೇಲೆ ಅನನುರೂಪತೆಯಿಂದ ಹರಡಿವೆ. ಈ ಶ್ರೇಣಿಯಲ್ಲಿ ಕಂಗ್ಲಾಮರೇಟ್, ಮರಳುಶಿಲೆ ಊದಾ ಜೇಡುಶಿಲೆ ಮತ್ತು ಸುಣ್ಣಶಿಲೆಗಳು ಮುಖ್ಯವಾದವು. ಇದನ್ನು ಡಬ್ಲ್ಯು ಕಿಂಗ್ ಮತ್ತು ಆರ್.ಬ್ರೂಸ್ಫೂಟ್ ಅವರು ಮೇಲು ಮತ್ತು ಕೆಳ ಎಂದು ವಿಂಗಡಿಸಿದರು. ಆದರೆ ಸಿ.ಮಹದೇವನ್ ಮೂರು ವಿಭಾಗಗಳಾಗಿ ವಿಂಗಡಿಸಿದರು. ಈ ಶ್ರೇಣಿಯ ಶಿಲೆಗಳು ಕರ್ನೂಲು ಶಿಲಾಸಮುದಾಯಕ್ಕೆ ಸಮಕಾಲೀನ (ಸು. 1,450 ದಶಲಕ್ಷವರ್ಷಗಳು) ವಯಸ್ಸನ್ನು ಸೂಚಿಸುತ್ತವೆ. ಇಲ್ಲಿ ಹೇರಳವಾಗಿ ದೊರೆಯುವ ಸಣ್ಣ ಶಿಲೆಗಳನ್ನು ಸಿಮೆಂಟ್ ತಯಾರಿಸಲು ಉಪಯೋಗಿಸುತ್ತಾರೆ.

ಆರ್ಷೇಯೋತ್ತರಕಾಲದ ಅತ್ಯಲ್ಪ ಸಿಲಿಕಾಂಶದ ಡೈಕ್ ಶಿಲೆಗಳು : ಇವು ಆರ್ಷೇಯ ಕಾಲದ ತರುವಾಯ ಮೈದೋರಿವೆ. ಈ ಸಮೂಹದಲ್ಲಿ ಡಾಲರೈಟ್, ಆಲಿವೀನ್ ಡಾಲರೈಟ್, ಎನ್ಸ್ಟಟೈಟ್ ಡಾಲರೈಟ್, ಡಯೋರೈಟ್, ಬಸಾಲ್ಟ್ ಮುಂತಾದ ಶಿಲೆಗಳ ಡೈಕುಗಳಿವೆ. ಇವು ಸಾಮಾನ್ಯವಾಗಿ ಕಪ್ಪು ಗುಂಡುಗಳಂತೆ ಹೊರಕಾಣುತ್ತವೆ. ಅಲ್ಲದೆ ಪುರಾತನ ಶಿಲೆಗಳಾದ ನೈಸ್ (ಗೀರುಶಿಲೆ) ಗ್ರಾನೈಟ್ ಶಿಲೆಗಳನ್ನು ಛೇದಿಸಿಕೊಂಡು ಹೊರಬಂದಿವೆ. ಇವನ್ನು ಕಡಪ ಶಿಲಾವರ್ಗದ ಕಾಲ ಅಥವಾ ದಖನ್ ಟ್ರಾಪ್ ಕಾಲಕ್ಕೆ ಸೇರಿಸಲಾಗಿದೆ.


ದಖನ್ ಟ್ರಾಪುಗಳು[ಸಂಪಾದಿಸಿ]

ಈ ಶಿಲೆಗಳನ್ನು ದಖನ್ ಜ್ವಾಲಾಮುಖಿಜನ್ಯ ಶಿಲೆಗಳೆಂದೂ ಪ್ರಸ್ಥಭೂಮಿಯಂತೆ ಎತ್ತರವಾದ ಸ್ಥಳವನ್ನು ಆವರಿಸಿರುವುದರಿಂದ ಪ್ರಸ್ಥಭೂಮಿ ಬಸಾಲ್ಟ್‌ ಎಂದೂ ಕರೆಯುವುದುಂಟು. ಮಧ್ಯಜೀವಿಯುಗದ ಅಂತ್ಯಕಾಲದಲ್ಲಿ (ಅಂದರೆ ಹಿಮಾಲಯ ಪರ್ವತಸ್ತೋಮ ರೂಪುಗೊಳ್ಳುವುದಕ್ಕೆ ಮುಂಚೆ) ಉಂಟಾದ ಭೂ ಚಲನೆಯಿಂದ ಭೂಮಿಯ ಹೊರಮೈಯ್ಯಲ್ಲಾದ ಬಿರುಕುಗಳ ಮೂಲಕ ಅತ್ಯಧಿಕ ಪ್ರಮಾಣದ ಶಿಲಾರಸ ಹೊರಹೊಮ್ಮಿ ದಖನ್ ಟ್ರಾಪುಗಳು ಇಂಥ ಪ್ರದೇಶದಲ್ಲಿ ವ್ಯಾಪಿಸಿವೆ. ಈ ಶಿಲೆಗಳ ಹೊರಸ್ತರ ಹಂತಹಂತವಾಗಿ ಕಾಣುವುದರಿಂದ ಇವುಗಳಿಗೆ ಟ್ರಾಪ್ ಶಿಲೆಗಳೆಂದು ಹೆಸರುಬಂದಿದೆ. ಕೆÀಲವು ಪ್ರದೇಶಗಳಲ್ಲಿ ಟ್ರಾಪ್ಸ್ತರಗಳ ಅಡಿಯಲ್ಲಿ, ಮಧ್ಯದಲ್ಲಿ ಮತ್ತು ಮೇಲೆ ಜಲಜ ಶಿಲಾವಿಧಗಳಿವೆ. ಇವುಗಳಿಗೆ ಅನುಕ್ರಮವಾಗಿ ಟ್ರಾಪ್ ಕೆಳಸ್ತರ, ಅಂತರ ಟ್ರಾಪ್ಸ್ತರ ಟ್ರಾಪ್ ಮೇಲುಸ್ತರಗಳೆಂದು ಹೆಸರು. ಇವುಗಳಲ್ಲಿರುವ ಜೀವಾವಶೇಷಗಳ ಆಧಾರದ ಮೇಲೆ ಟ್ರಾಪ್ ವಯಸ್ಸು ಕ್ರಿಟೇಷಸ್ಸಿನಿಂದ ಇಯೋಸೀನ್ವರೆಗೆ ವ್ಯಾಪಿಸಿದೆ ಎಂದು ಅಭಿಪ್ರಾಯಪಡಲಾಗಿದೆ. ಕರ್ನಾಟಕದಲ್ಲಿ ಬೆಳಗಾವಿ, ಬಿಜಾಪುರ ಮತ್ತು ಗುಲ್ಬರ್ಗದ ಹಲವಾರು ಭಾಗಗಳಲ್ಲಿ ಒಟ್ಟು ಸು. 25,900 ಚ.ಕಿಮೀ ಗಳಷ್ಟು ಪ್ರದೇಶದಲ್ಲಿ ಟ್ರಾಪ್ಶಿಲೆಗಳ ವ್ಯಾಪ್ತಿ ಉಂಟು. ಮಂದ ಸು. 60 ಮೀ. ಈ ಶಿಲೆಗಳು ಅನೇಕ ಹಳೆಯ ಶಿಲಾಸಮುದಾಯಗಳ ಮೇಲೆ ಅನನುರೂಪತೆಯಾಗಿ ವಿಸ್ತರಿಸಿವೆ. ಸತತ ಸವೆತದಿಂದ ದಖನ್ ಟ್ರಾಪ್ ಶಿಲೆಗಳು ಮತ್ತು ಲ್ಯಾಟರೈಟ್ ಎಂಬ ನಿಕ್ಷೇಪಗಳಾಗಿವೆ. ಇವುಗಳಿಗೆ ಶೇಷ ನಿಕ್ಷೇಪಗಳೆಂದು ಹೆಸರು. ಸಾಧಾರಣ ರೀತಿಯಲ್ಲಿ ಶಿಲೆ ಶಿಥಿಲವಾಗಿ ಕಪ್ಪು ಮಣ್ಣು ಉಂಟಾಗುತ್ತದೆ. ಇಂಥ ಮಣ್ಣು ಬಹಳ ಫಲವತ್ತಾಗಿರುತ್ತದೆ.

ತೃತೀಯ ಭೂ ಕಾಲಯುಗದ ಶಿಲಾಸಮುದಾಯಗಳು: ಲ್ಯಾಟರೈಟ್ : ಈ ನಿಕ್ಷೇಪಗಳು ಭೂಮಿಯ ಹೊರಪದರದ ಶಿಲೆಗಳ ಬದಲಾವಣೆಯಿಂದಾಗಿವೆ. ಇಂಥ ಬದಲಾವಣೆಗಳು ಭಾರತ ಮತ್ತೆ ಹಲವು ಉಷ್ಣವಲಯದ ದೇಶಗಳಲ್ಲಿನ ಗ್ರಾನೈಟ್, ನೈಸ್ ಪದರುಶಿಲೆ ಮತ್ತು ಬಸಾಲ್ಟ್‌ ಇತ್ಯಾದಿ ಶಿಲೆಗಳ ಬದಲಾವಣೆಯಿಂದಾಗುವುವು. ಕಬ್ಬಿಣ, ಮ್ಯಾಂಗನೀಸ್ ಮತ್ತು ಅಲ್ಯೂಮಿನಿಯಂ ಖನಿಜಗಳು ಹೆಚ್ಚಾಗಿರುವ ಲ್ಯಾಟರೈಟ್ ಉತ್ತಮ ಅದುರು ನಿಕ್ಷೇಪಗಳೆನಿಸಿವೆ. ಲೋಹಾಂಶವನ್ನು ಅನುಸರಿಸಿ ಇವುಗಳ ಬಣ್ಣ ಹಳದಿಮಿಶ್ರಿತ ಕೆಂಪು ಬೂದು ಮತ್ತು ಕಪ್ಪು ಕಂದು. ಕರ್ನಾಟಕದಲ್ಲಿ ಇವು ಕೋಲಾರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಹಾಗೂ ಬೆಳಗಾಂವಿ ಜಿಲ್ಲೆಯಲ್ಲಿ ಅನೇಕ ಕಡೆ ಇವೆ. ಲ್ಯಾಟರೈಟುಗಳನ್ನು ಮಲೆನಾಡು ಮುಂತಾದ ಕಡೆ ಅಗೆದು ಹೊರತೆಗೆದು ದೊಡ್ಡ ದೊಡ್ಡ ಇಟ್ಟಿಗೆ ರೂಪದಲ್ಲಿ ಕತ್ತರಿಸಿ ಗೋಡೆಗಳನ್ನು ಕಟ್ಟಲು ಉಪಯೋಗಿಸುತ್ತಾರೆ.

ಇತ್ತೀಚಿನ ಕಾಲದ ಶಿಲಾಸಮುದಾಯಗಳು[ಸಂಪಾದಿಸಿ]

ಇತ್ತೀಚಿನ ಶಿಲಾಸಮುದಾಯಗಳಲ್ಲಿ ತೀರಪ್ರದೇಶದ ನಿಕ್ಷೇಪಗಳು, ಮೆಕ್ಕಲು ನಿಕ್ಷೇಪಗಳು ಮತ್ತು ಮಣ್ಣುಗಳು ಮುಖ್ಯವಾದವು.

ತೀರಪ್ರದೇಶದ ನಿಕ್ಷೇಪಗಳು[ಸಂಪಾದಿಸಿ]

ಕರ್ನಾಟಕದ ಪಶ್ಚಿಮಭಾಗದ ಸಮುದ್ರತೀರದಲ್ಲಿ ಮಂಗಳೂರಿಗೆ ಸ್ವಲ್ಪ ದಕ್ಷಿಣದಿಂದ ಕಾರವಾರದವರೆಗೆ ಇವು ಹಬ್ಬಿವೆ. ಇವುಗಳಲ್ಲಿ ಬಹುಶಃ ಲ್ಯಾಟರೈಟುಗಳೂ ಸೇರುತ್ತವೆ. ಇವು ಪ್ಲೀಸ್ಟೋಸೀನ್ ಕಾಲದಿಂದ ಇತ್ತೀಚಿನ ಕಾಲದವು.

ಮೆಕ್ಕಲು ನಿಕ್ಷೇಪಗಳು[ಸಂಪಾದಿಸಿ]

ನದಿಗಳ ಇಕ್ಕೆಲಗಳಲ್ಲಿಯೂ ಅಳಿವೆಯ ಗಾಳಿಯಿಂದ ತೂರಿಬಂದ ಮತ್ತು ಇತರ ಶಿಲಾವಿಧಗಳು ಸೇರಿವೆ. ಇವು ವ್ಯವಸಾಯಕ್ಕೆ ಫಲವತ್ತಾದ ಪ್ರದೇಶಗಳು.

ಮಣ್ಣುಗಳು[ಸಂಪಾದಿಸಿ]

ವಿವಿಧ ಶಿಲೆಗಳ ಸತತವಾದ ಶಿಥಿಲತೆಯಿಂದಾದ ಹಲವಾರು ಬಗೆಯ ಮಣ್ಣುಗಳ ಉತ್ಪತ್ತಿಯಾಗಿವೆ. 1. ಕಪ್ಪು ಮಣ್ಣು ಅಥವಾ ಎರೆಮಣ್ಣು ಚಿತ್ರದುರ್ಗದ ಜಿಲ್ಲೆ, ಚಾಮರಾಜನಗರ, ಗುಂಡ್ಲುಪೇಟೆ ಮತ್ತು ನಂಜನಗೂಡು ತಾಲ್ಲೂಕು, ಸ್ವಲ್ಪ ಭಾಗ ಮಂಡ್ಯ ಜಿಲ್ಲೆಯಲ್ಲಿಯೂ ಕಾಣಬರುತ್ತದೆ. 2. ಹಳದಿಮಣ್ಣು ಬಲು ನುಣುಪು. ಇದು ಷಿಕಾರಿಪುರ, ಕುಂಸಿ, ಸೊರಬ ತಾಲ್ಲೂಕುಗಳಲ್ಲಿ ಅನೇಕ ಕಡೆ ಮತ್ತು ಪದರು ಶಿಲಾವಲಯಗಳಲ್ಲಿದೆ. 3. ಕೆಂಪು ಮಣ್ಣು. ಇದು ಗ್ರಾನೈಟ್, ನೈಸುಗಳು ಶಿಥಿಲವಾಗಿ ಉತ್ಪತ್ತಿಯಾಗುತ್ತದೆ. 60-130 ಸೆಂಮೀ ಆಳದವರೆಗೆ ಇರುವುದು. ಇದನ್ನು ಬೆಂಗಳೂರು, ತುಮಕೂರು, ಕೋಲಾರ ಇತ್ಯಾದಿ ಪ್ರದೇಶಗಳಲ್ಲಿ ಕಾಣಬಹುದು. 4. ಉಪ್ಪು ಮತ್ತು ಕ್ಷಾರ ಮಣ್ಣುಗಳು. ಮೈಸೂರು, ಮಂಡ್ಯ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕೆಲವೆಡೆ ಇವೆ. ಇವನ್ನು ಚೌಳುಪ್ಪು ಎಂದು ಸಾಮಾನ್ಯವಾಗಿ ಕರೆಯುತ್ತಾರೆ. ಗ್ರಾನೈಟ್ ಅಥವಾ ನೈಸ್ ವಲಯಗಳಲ್ಲಿ ತಗ್ಗಾದ ಜೌಗು ಪ್ರದೇಶದಲ್ಲಿ ಮಳೆಗಾಲದಲ್ಲಿ ಈ ಮಣ್ಣುಗಳ ಉತ್ಪತ್ತಿ ಆಗುವುದು. 5. ಕಂಕರ್ ಮತ್ತು ಕಂಕರ್ ಮಣ್ಣುಗಳು. ===ಗ್ರಾನಿಟಿಕ್ ನೈಸುಗಳು=== ಪದರುಶಿಲೆಗಳು ಮತ್ತು ಕರಿಕಲ್ಲುಗಳಿಂದ (ಡಾಲರೈಟ್) ಇವು ಉತ್ಪತ್ತಿಯಾಗುತ್ತವೆ. ಇವು ಉಂಡೆಯಾಕಾರದ ಕೆಳದರ್ಜೆಯ ಸುಣ್ಣಕಲ್ಲುಗಳು.

ಕರ್ನಾಟಕದ ಶಿಲೆಗಳ ವಯಸ್ಸು[ಸಂಪಾದಿಸಿ]

ಶಿಲೆಗಳ ವಯೋನಿರ್ಧಾರ ಸಾಧಾರಣ ಜಲಜಶಿಲೆಗಳಂತೆ ಸುಲಭವಲ್ಲ. ಕಾರಣ ಅತಿ ಪುರಾತನಕಾಲದವು. ಅವು ಉತ್ಪತ್ತಿಯಾದ ಅನಂತರ ಹಲವಾರು ಭೂಕ್ರಿಯೆಗಳಿಂದಾಗಿ ಅನೇಕ ರೀತಿಯಲ್ಲಿ ಮಾರ್ಪಟ್ಟಿವೆ. ಮೇಲಾಗಿ ಈ ಶಿಲೆಗಳಲ್ಲಿ ಪ್ರಾಚೀನ ಶಿಲೆಗಳ ಅವಶೇಷಗಳಿಲ್ಲದಿರುವುದು ಮತ್ತಷ್ಟು ತೊಡಕನ್ನೊಡ್ಡಿದೆ. ಈ ರಾಜ್ಯದ ಶಿಲೆಗಳನ್ನು ಅಂತರರಾಷ್ಟ್ರೀಯ ಭೂ ಇತಿಹಾಸ ಕಾಲ ಪ್ರಮಾಣದ ಪಟ್ಟಿಗೆ ಹೋಲಿಸಿ ಈ ಕೆಳಗಿನ ಪಟ್ಟಿಯಲ್ಲಿ ಬರೆದಿದೆ.

ಹಲವಾರು ಭೂವಿಜ್ಞಾನಿಗಳು ಕರ್ನಾಟಕದ ಶಿಲಾವಿಧಗಳ ವಯೋನಿರ್ಧಾರ ಮಾಡಲು ಪ್ರಯತ್ನಿಸಿದ್ದಾರೆ. ಆ ಪ್ರಕಾರ ಈ ಶಿಲಾವಿಧಗಳ ವಯಸ್ಸು ಸು. 1,500-2,000 ದಶಲಕ್ಷವರ್ಷಗಳೆಂದು ಪರಿಗಣಿಸಲಾಗಿದೆ. ಆರ್ಥರ್ ಹೋಮ್ಸನ ಪ್ರಕಾರ (1956) ಭಾರತದ ಆರ್ಷೇಯ ಕಾಲದ ಶಿಲಾವಿಧಗಳ ವಯಸ್ಸು 4,500 ದಶಲಕ್ಷವರ್ಷಗಳು ಮತ್ತು ಧಾರವಾಡ ಪದರುಶಿಲಾವರ್ಗದ ವಯಸ್ಸು ಸು. 3,500 ದಶಲಕ್ಷವರ್ಷಗಳು. ಇತ್ತೀಚೆಗೆ ಎ.ಆರ್.ಕ್ರಾಫರ್ಡ್ ಎಂಬುವರು ಧಾರವಾಡ ಶಿಲಾಸಮುದಾಯಗಳ ವಯಸ್ಸು ಅನಿಶ್ಚಿತವಾದರೂ ರುಬಿಡಿಯಂ (ಖb) ಮತ್ತು ಸ್ಟ್ರಾನ್ಷಿಯಂ (Sಡಿ) ಪ್ರಮಾಣದ ಆಧಾರದ ಮೇಲೆ ಚಿತ್ರದುರ್ಗದ ಬಳಿ ಇರುವ ಲಾವಾ ಶಿಲಾಸ್ತರಗಳ ವಯಸ್ಸು 2,400 ರಿಂದ 2,450 ದಶಲಕ್ಷ ವರ್ಷಗಳು ಮತ್ತು ಕ್ಲೋಸ್ಪೇಟೆ (ರಾಮನಗರ) ಗ್ರಾನೈಟ್ ವಯಸ್ಸು ಸು. 2,400 ರಿಂದ 2,450 ದಶಲಕ್ಷವರ್ಷಗಳೆಂದು ನಿರ್ಧರಿಸಿದ್ದಾರೆ (1969). (ಎಂ.ಎನ್.ಎಂ.)

ಕರ್ನಾಟಕದ ಶಿಲಾವರ್ಗಗಳು[ಸಂಪಾದಿಸಿ]

ಕರ್ನಾಟಕ ರಾಜ್ಯದ ಬಹುಭಾಗ ಅತ್ಯಂತ ಪ್ರಾಚೀನವಾದ ಶಿಲೆಗಳಿಂದ ಆವೃತವಾಗಿದೆ. ಇವುಗಳನ್ನು ಎರಡು ಮುಖ್ಯ ವಿಭಾಗಗಳಾಗಿ ವಿಂಗಡಿಸಿದ್ದಾರೆ. 1. ಬೆಳ್ಳಿ, ಬಂಗಾರ, ತಾಮ್ರ, ಕಬ್ಬಿಣದ ಸಂಬಂಧದ ಲೋಹಗಳನ್ನೊಳಗೊಂಡಿರುವ ಧಾರವಾಡ ಶಿಲಾಸ್ತೋಮ 2. ಗ್ರಾನೈಟ್ ಸಂಬಂಧದ ನೈಸ್ ಶಿಲಾಸ್ತೋಮ.

ದಕ್ಷಿಣ ಕರ್ನಾಟಕದಲ್ಲಿನ ಶಿಲೆಗಳು ಭೂಮಿಯ ಹುಟ್ಟಿನ ಆದಿಕಾಲದಲ್ಲಿ ರೂಪುಗೊಂಡ ಅತಿ ಪ್ರಾಚೀನ ವರ್ಗಕ್ಕೆ ಸೇರಿದುವೆಂದು ಪ್ರಸಿದ್ಧಿಯಾಗಿವೆ. ಇವುಗಳು ರೂಪುಗೊಂಡ ಕಾಲ ಮೂರು ಸಾವಿರ ಮಿಲಿಯ (ಮುನ್ನೂರು ಕೋಟಿ) ವರ್ಷಗಳಿಗೂ ಹಳೆಯದು. ಈ ಬಗೆಯ ಶಿಲೆಗಳನ್ನು ಸರಗೂರು, ಕೋಲಾರ, ನುಗ್ಗೇಹಳ್ಳಿ, ಹಟ್ಟಿ ಬಳಿ ಗುರುತಿಸಿದ್ದಾರೆ.

ಈ ಪುರಾತನ ಕಾಲದ ಅಗ್ನಿ ಮತ್ತು ರೂಪಾಂತರ ಶಿಲೆಗಳನ್ನು ಛೇದಿಸಿ, ತುಂಡರಿಸಿ, ಅವುಗಳನ್ನು ಬಹುಶಃ ಜೀರ್ಣಿಸಿಕೊಂಡು ಬಹುವ್ಯಾಪಿ ಯಾಗಿರುವ ನೈಸ್ ಶಿಲೆಗಳು ರಾಜ್ಯದ ಬಹುಭಾಗವನ್ನು ಆವರಿಸಿವೆ. ಈ ವರ್ಗದ ಕಲ್ಲುಗಳನ್ನು ಬೆಂಗಳೂರು ಸುತ್ತ ನೋಡಬಹುದು. ನೈಸ್ಗಳಿಂದ ಆವೃತವಾದ ಬಯಲು ಸೀಮೆಯಲ್ಲಿ ಅಲ್ಲಲ್ಲಿ ಬೋರಲಿಟ್ಟ ಬಟ್ಟಲುಗಳಂತೆ ಕಲ್ಲುಗುಂಡುಗಳಿಂದ ನಿಬಿಡವಾಗಿ ಎದ್ದುನಿಂತ ಗುಡ್ಡಸಾಲುಗಳನ್ನು ನೋಡಬಹುದು. ಶಿವಗಂಗೆ, ಸಾವನದುರ್ಗ, ದೇವರಾಯನದುರ್ಗ, ಮಧುಗಿರಿ ಮತ್ತು ಕೊರಟಗೆರೆ ಸುತ್ತಲಿನ ಬೆಟ್ಟಗಳು, ಹಂಪೆಯ ಸುತ್ತಲಿನ ಬೆಟ್ಟಸಾಲುಗಳು ಈ ಬಗೆಯ ಗ್ರಾನೈಟ್ಗಳಿಂದ ನಿರ್ಮಿತವಾದವು. ಕರ್ನಾಟಕದಲ್ಲಿ ಎಲ್ಲಿ ಹೋದರಲ್ಲಿ ಎದ್ದು ನಿಂತ ಬಗೆಬಗೆಯ ಆಕಾರವನ್ನು ತೋರುವ ಗುಡ್ಡಸಾಲುಗಳು ತಮ್ಮದೇ ಆದ ಒಂದು ನಿಸರ್ಗ ರಮಣೀಯತೆಯನ್ನು ಪಡೆದುಕೊಂಡಿವೆ.

ಈ ನೈಸುಗಳ ಮೇಲೆ ಒರಗಿದಂತೆ ಸಾವಿರಾರು ಅಡಿ ಮಂದದ ಪದರು ಶಿಲೆಗಳು, ದಕ್ಷಿಣದಲ್ಲಿ ಶ್ರೀರಂಗಪಟ್ಟಣದಿಂದ ಹಿಡಿದು ಉತ್ತರದಲ್ಲಿ ಬೆಳಗಾಂವಿಯವರೆಗೂ ಹಬ್ಬಿವೆ. ಧಾರವಾಡದ ಬಳಿ ವಿಸ್ತಾರವಾಗಿ ಹರಡಿರುವುದರಿಂದ ಈ ಶಿಲಾವರ್ಗವನ್ನು ಧಾರವಾಡ ಶಿಲಾವರ್ಗ ಎಂದು ಗುರುತಿಸಿದ್ದಾರೆ. ರಾಜ್ಯದಲ್ಲಿ ದೊರೆಯುವ ಖನಿಜ ಸಂಪತ್ತಿಗೆಲ್ಲ ಈ ಧಾರವಾಡ ಪದರುಶಿಲಾ ಸಮುದಾಯವೇ ಆಕರವಾಗಿದೆ. ಪಶ್ಚಿಮ ಘಟ್ಟದ ಸಹ್ಯಾದ್ರಿ ಪರ್ವತ, ಬಾಬಾಬುಡನ್ ಪರ್ವತ ಶ್ರೇಣಿ, ಕೊಡಚಾದ್ರಿ, ಚಿಕ್ಕನಾಯಕನಹಳ್ಳಿ, ಚಿತ್ರದುರ್ಗ, ಗದಗ, ರಾಯಚೂರು, ಹಟ್ಟಿ ಈ ಸುತ್ತಲಿನ ಶಿಲೆಗಳೆಲ್ಲವೂ ಧಾರವಾಡ ಶಿಲಾವರ್ಗಕ್ಕೆ ಸೇರಿದುವು. ಈ ವರ್ಗದ ಶಿಲೆಗಳಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದುರುಗಳು, ತಾಮ್ರ, ಸೀಸ, ಚಿನ್ನ, ಬೆಳ್ಳಿ ಮುಂತಾದ ಲೋಹಗಳ ಅದುರುಗಳು ದೊರೆಯುತ್ತವೆ. ಮೈಸೂರು ಜಿಲ್ಲೆಯ ದಕ್ಷಿಣ ಭಾಗದಲ್ಲಿ ಬಿಳಿಗಿರಿರಂಗನ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ, ನೀಲಗಿರಿ ಬೆಟ್ಟ ಸಾಲುಗಳಲ್ಲಿ ಬೂದು ಬಣ್ಣದ ಒಂದು ವಿಶೇಷ ರೀತಿಯ ಗ್ರಾನೈಟ್ ಶಿಲೆಗಳು ದೊರೆಯುತ್ತವೆ. ಇವುಗಳನ್ನು ಚಾರ್ನೊಕೈಟ್ ಎಂದು ಗುರುತಿಸಿದ್ದಾರೆ.

ದಕ್ಷಿಣದಲ್ಲಿ ಶಿವಸಮುದ್ರದಿಂದ ಹಿಡಿದು ಉತ್ತರದಲ್ಲಿ ತುಂಗಭದ್ರೆಯ ದಕ್ಷಿಣ ದಂಡೆಯವರೆಗೆ ಒಂದೇ ಸಮನೆ ಹಬ್ಬಿರುವ ಕಲ್ಲುಗುಂಡುಗಳಿಂದ ನಿಬಿಡವಾದ ಗುಡ್ಡ ಸಾಲು ಕಾಣಿಸುತ್ತದೆ. ಸಾವನದುರ್ಗ, ಕಬ್ಬಾಳದುರ್ಗ, ಶಿವಗಂಗೆ, ಮಧುಗಿರಿ, ಕೊರಟಗೆರೆ ಬೆಟ್ಟಗಳು, ಮಿಡಿಗೇಶಿ, ಪಾವಗಡ, ಮೊಳಕಾಲ್ಮೂರು, ಹಂಪೆ ಈ ಸುತ್ತಲಿನ ಬೆಟ್ಟಗಳೆಲ್ಲವೂ ಒರಟುಒರಟಾದ, ಅಗಲ ಹರಳುಗಳುಳ್ಳ ಕೆಂಪು ಬಣ್ಣದ ಗ್ರಾನೈಟ್ಗಳಿಂದ ರೂಪಿತವಾದುವು. ಇವುಗಳನ್ನು ರಾಮನಗರ ಗ್ರಾನೈಟ್ ಎಂಬ ಹೆಸರಿನಿಂದ ಕರೆಯುತ್ತಾರೆ. ರಾಮನಗರ ಸುತ್ತಲಿನ ಬೃಹದಾಕಾರದ ಬಂಡೆಗಳಿಂದ ಕೂಡಿರುವ ಬೆಟ್ಟಗಳೆಲ್ಲವೂ ಈ ಗ್ರಾನೈಟ್ನಿಂದ ರೂಪಿತವಾದುವು.

ಮೇಲೆ ವಿವರಿಸಿದ ಶಿಲೆಗಳೆಲ್ಲವೂ ಅತಿ ಪ್ರಾಚೀನವಾದುವು. ಅವು ತಮ್ಮ ಮೊದಲ ರೂಪವನ್ನು ಬದಲಾಯಿಸಿ ರೂಪಾಂತರ ಹೊಂದಿರುತ್ತವೆ. ಇಂಥ ಶಿಲೆಗಳ ಮೇಲೆ ಹಾಸಿದಂತೆ ಈಚಿನ ಇನ್ನೊಂದು ಶಿಲಾವರ್ಗ ಬೆಳಗಾಂವಿಯ ಪೂರ್ವಭಾಗದಿಂದ ಹಿಡಿದು ಬಾಗಲಕೋಟೆಯವರೆಗೆ ಹರಡಿರುವುದು ಕಾಣುತ್ತದೆ. ಈ ವರ್ಗದ ಕಲ್ಲುಗಳಲ್ಲಿ ಸುಣ್ಣಕಲ್ಲಿನ ಶಿಲೆಗಳೆ ಪ್ರಮುಖವಾದವು. ಕಲಾದಗಿಯ ಬಳಿ ಇವು ಬಹುವಾಗಿ ಹರಡಿರುವುದರಿಂದ ಈ ವರ್ಗದ ಶಿಲೆಗಳಿಗೆ ಕಲಾದಗಿ ಶಿಲಾವರ್ಗ ಎಂದು ಹೆಸರಿಸಿದ್ದಾರೆ. ಘಟಪ್ರಭಾ ಮತ್ತು ಕೃಷ್ಣಾ ನದಿಗಳು ಬೆಳಗಾಂವಿ ಬಿಜಾಪುರ ಜಿಲ್ಲೆಗಳಲ್ಲಿ ಈ ಶಿಲೆಗಳನ್ನು ಹಾದುಹೋಗಿರುತ್ತವೆ. ಬಾದಾಮಿ, ಪಟ್ಟದಕಲ್ಲಿನ ದೇವಸ್ಥಾನಗಳು ಈ ಕಲಾದಗಿ ಶಿಲೆಗಳಿಂದ ಕಡೆದವು.

ಇವಕ್ಕೂ ಸ್ವಲ್ಪ ಈಚಿನ ಶಿಲೆಗಳು ಮುಖ್ಯವಾಗಿ ಗುಲ್ಬರ್ಗ ಜಿಲ್ಲೆಯ ಭೀಮಾನದಿಯ ಇಕ್ಕೆಲಗಳಲ್ಲಿ ಕಾಣುತ್ತವೆ. ಇವೂ ಬಹುವಾಗಿ ಸುಣ್ಣಕಲ್ಲಿನಿಂದ ಕೂಡಿದವು. ಇವುಗಳಿಗೆ ಭೀಮಾ ಶಿಲಾಸ್ತೋಮ ಎಂದು ಹೆಸರು. ಇವು ಮುಖ್ಯವಾಗಿ ಮುದ್ದೇಬಿಹಾಳ, ತಾಳಿಕೋಟೆ, ಶಾಹಬಾದ, ವಾಡಿ, ಚಿತ್ತಾಪುರ, ಸೇಡಂ, ಚಿಂಚೋಳಿ ಈ ಸ್ಥಳಗಳಲ್ಲಿ ಕಾಣುತ್ತವೆ. ಇಲ್ಲಿಯ ಸುಣ್ಣಕಲ್ಲನ್ನು ಉಪಯೋಗಿಸಿ ಮೂರು ದೊಡ್ಡಪ್ರಮಾಣದ ಸಿಮೆಂಟ್ ತಯಾರಿಕಾ ಕಾರ್ಖಾನೆಗಳು ಗುಲ್ಬರ್ಗ ಜಿಲ್ಲೆಯಲ್ಲಿದ್ದು ಹೇರಳವಾಗಿ ಸಿಮೆಂಟನ್ನು ತಯಾರಿಸುತ್ತವೆ.

ಮೇಲೆ ವಿವರಿಸಿದ ಎಲ್ಲ ಶಿಲೆಗಳೂ ಅತಿ ಪ್ರಾಚೀನ ಕಾಲಕ್ಕೆ ಸೇರಿದ ಜೀವ ಚಿಹ್ನೆ ಅಷ್ಟಾಗಿ ಕಾಣದ ಶಿಲಾವರ್ಗಗಳಿಗೆ ಸೇರಿದುವು. ಈ ಎಲ್ಲ ವರ್ಗದ ಶಿಲೆಗಳ ಮೇಲೂ ಸು. 5 ಕೋಟಿ ವರ್ಷಗಳ ಹಿಂದೆ ಅಗಾಧ ಪ್ರಮಾಣದಲ್ಲಿ ಶಿಲಾಲಾವ ಪ್ರವಾಹ ರೂಪದಲ್ಲಿ ಹರಿದು ಮಂದವಾದ ಹೊದಿಕೆಯಂತೆ ಕುಳಿತಿದೆ. ಬೆಳಗಾಂವಿ ಜಿಲ್ಲೆಯ ಉತ್ತರಭಾಗ, ಬಿಜಾಪುರ, ಗುಲ್ಬರ್ಗ ಮತ್ತು ಬೀದರ್ ಜಿಲ್ಲೆಗಳು ದಖನ್ಲಾವಾ ಪ್ರವಾಹದಿಂದ ಮುಚ್ಚಿಹೋಗಿವೆ. ಇವು ಮಟ್ಟವಾಗಿದ್ದು ಬಹುದೂರ ಹರಡಿರುತ್ತವೆ. ಇಲ್ಲಿಯ ಬೆಟ್ಟಗಳು ಮೇಜಿನಾಕಾರದಲ್ಲಿದ್ದು, ಶಿಖರಗಳಿರುವುದಿಲ್ಲ. ಈ ಬಗೆಯ ಶಿಲೆಗಳನ್ನು ದಖನ್ಲಾವಾಗಳೆಂದು ಗುರುತಿಸುತ್ತಾರೆ. ಇವು ಬೀಳುಬಿದ್ದಾಗ ಅದರಿಂದುಂಟಾದ ಮಣ್ಣು ಕಪ್ಪುಛಾಯೆಯನ್ನು ಹೊಂದಿರುತ್ತದೆ. ಈ ಎರೆಮಣ್ಣಿನ ಪ್ರದೇಶ ಫಲವತ್ತಾದುದು. ನೂರಾರು ಮೈಲುಗಳಷ್ಟು ಏರು ತಗ್ಗೂ ಇಲ್ಲದ ಕಪ್ಪುಮಣ್ಣಿನಿಂದ ಆವೃತವಾದ ಅಗಾಧ ಬಯಲು ಕಾಣುತ್ತದೆ. ದಖನ್ಲಾವಾಗಳಿಂದ ಆವೃತವಾದ ಪ್ರದೇಶ ಈ ಬಗೆಯ ಬಯಲು ಭೂಮಿಗೆ ಉತ್ತಮ ನಿದರ್ಶನ. ಬೆಳಗಾಂವಿ ಜಿಲ್ಲೆಯ ಪಶ್ಚಿಮಕ್ಕೆ ಮತ್ತು ಬೀದರ್ ಜಿಲ್ಲೆಯ ಬೀದರ್, ಹುಮನಾಬಾದ ಮತ್ತು ಬಸವಕಲ್ಯಾಣ ತಾಲ್ಲೂಕುಗಳಲ್ಲಿ ಬಹು ವ್ಯಾಪಿಯಾಗಿ ರಂಧ್ರಮಯವಾಗಿರುವ ಕೆಮ್ಮಣ್ಣು ಬಣ್ಣದ, ಮಣ್ಣುರೂಪಿನ ಆದರೂ ಬಹು ಗಡುಸಾದ ಒಂದು ಬಗೆಯ ಶಿಲೆ ದೊರೆಯುತ್ತದೆ. ಇದೇ ಬಗೆಯ ಶಿಲೆ ಪಶ್ಚಿಮ ಕರಾವಳಿಯ ಉದ್ದಕ್ಕೂ ಕಾಣುವುದುಂಟು. ಇದನ್ನು ಲ್ಯಾಟರೈಟ್ ಎಂದು ಕರೆಯುತ್ತಾರೆ. ಇದನ್ನು ಜಂಬಿಟ್ಟಿಗೆ, ಇಟ್ಟಿಗೆ ಕಲ್ಲು ಎಂದೂ ಕರೆಯುತ್ತಾರೆ. ಕರಾವಳಿಯ ಕಟ್ಟಡಗಳೆಲ್ಲವೂ ಈ ಕಲ್ಲಿನಿಂದ ಕಟ್ಟಿದುವು. ಬೀದರ್, ಬೆಳಗಾಂವಿ ಸುತ್ತಲೂ ಈ ಕಲ್ಲಿನಿಂದ ಕಟ್ಟಿದ ಮನೆಗಳನ್ನು ಗುರುತಿಸಬಹುದು. ಈ ಬಗೆಯ ಶಿಲೆಗಳಲ್ಲಿರುವ ಅಲ್ಯೂಮಿನಿಯಂ ಅಂಶ ಹೆಚ್ಚಾದಾಗ ಅವು ಬಾಕ್ಸೈಟ್ ಅದಿರಾಗಿ ಮಾರ್ಪಡುತ್ತವೆ. ಅವುಗಳಿಂದ ಅಲ್ಯೂಮಿನಿಯಂ ಲೋಹವನ್ನು ಪಡೆಯಬಹುದು. ದಖನ್ಲಾವಾಗಳನ್ನು ಮತ್ತು ಅದರ ಮೇಲೆ ರೂಪುಹೊಂದಿದ ಜಂಬಿಟ್ಟಿಗೆಯನ್ನು ಬಿಟ್ಟರೆ ಇನ್ನುಳಿದಿರುವುದು ಕಡಲ ಅಂಚಿನಲ್ಲಿ ಶೇಖರವಾಗಿರುವ ಈಚಿನ ಮರಳು ಶಿಲೆಗಳು, ಮೆಕ್ಕಲು ಮಣ್ಣು.ಕರ್ನಾಟಕದಲ್ಲಿ ಚಿನ್ನದ ಗಣಿಗಾರಿಕೆ[ಸಂಪಾದಿಸಿ]

ಕರ್ನಾಟಕದ ಚಿನ್ನದ ಗಣಿಗಾರಿಕೆಗೆ ಅತ್ಯಂತ ಪ್ರಾಚೀನ ಇತಿಹಾಸವಿದೆ. ಪ್ರ.ಶ.ಪು. ವರ್ಷಗಳಲ್ಲೇ ನಮ್ಮ ನಾಡಿನಲ್ಲಿ ಚಿನ್ನವನ್ನು ಗಣಿ ಮಾಡಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಚಿನ್ನ ದೊರೆಯುವ ಶಿಲೆಗಳ ಬಗ್ಗೆ ಪ್ರಾಚೀನರಿಗೆ ಸ್ಪಷ್ಟ ತಿಳಿವಿತ್ತು. ಈ ಹಿನ್ನೆಲೆಯಲ್ಲಿ ಭೂಮಿಯೊಳಗೆ ಕೂಪ ತೋಡಿ, ಆಳವಾದ ಭಾಗಗಳನ್ನು ಪರಿಶೋಧಿಸಿ ಚಿನ್ನವನ್ನು ಗಣಿ ಮಾಡಿದ್ದಾರೆ. ಹಾಗೆಯೇ ಮೆಕ್ಕಲು ಚಿನ್ನವನ್ನು ಸೋಸಿ ತೆಗೆದಿದ್ದಾರೆ. ಬ್ರಹ್ಮಗಿರಿಯ ಅಶೋಕನ ಶಾಸನದಲ್ಲಿ ಪ್ರಸ್ತಾಪಿಸಿರುವ ಸುವರ್ಣಗಿರಿ ಎನ್ನುವ ಹೆಸರು ರಾಯಚೂರಿನ ಮಸ್ಕಿಯ ಬಳಿಯ ಸ್ವರ್ಣಭರಿತ ಗುಡ್ಡಗಳನ್ನು ಕುರಿತೇ ಇರಬಹುದೆಂದು ಆಲ್ಚಿನ್ ಎಂಬ ಇತಿಹಾಸಕಾರರ ಅಭಿಪ್ರಾಯ. ಬಹುಶಃ ನವಶಿಲಾಯುಗದಲ್ಲಿ ಎಂದರೆ ಪ್ರ.ಶ.ಪು. 3ನೆಯ ಸಹಸ್ರಮಾನದ ಕೊನೆಯಲ್ಲಿ ಪ್ರಾರಂಭವಾಗಿ 1ನೆಯ ಸಹಸ್ರಮಾನದ ಮೊದಲರ್ಧದವರೆಗೆ ಸಣ್ಣ ಪ್ರಮಾಣದಲ್ಲಿ ಚಿನ್ನದ ಗಣಿಗಾರಿಕೆ ಪ್ರಾರಂಭವಾಗಿರಬಹುದು ಅನಂತರ ಮೌರ್ಯರು ದಖನ್ ಪ್ರಾಂತ್ಯವನ್ನು ಆಳುವ ಹೊತ್ತಿಗೆ ಚಿನ್ನದ ಗಣಿಗಾರಿಕೆ ದೊಡ್ಡ ಪ್ರಮಾಣದಲ್ಲಿ ನಡೆದಿರಲು ಸಾಧ್ಯ. ಮಸ್ಕಿ, ಮುದಗಲ್, ಸಿಂಗಸಗೂರು, ಕೋಟೆಗಲ್ಲು, ವಾಟೆಗಲ್ಲು ಮುಂತಾದೆಡೆ ನವ ಶಿಲಾಯುಗದ ಅನೇಕ ಕುರುಹುಗಳು ಪತ್ತೆಯಾಗಿವೆ. ಹಟ್ಟಿ ಸುತ್ತಮುತ್ತಲಿರುವ ಪುರಾತನ ಚಿನ್ನದ ಗಣಿಗಳನ್ನು ಕುರಿತು ಹೈದರಾಬಾದ್ ನಿಜಾಮ್ ಸರ್ಕಾರಕ್ಕೆ ಭೂವಿಜ್ಞಾನ ಸಲಹೆಗಾರನಾಗಿದ್ದ ಕ್ಯಾಪ್ಟನ್ ಲಿಯೋನಾರ್ಡ್ಮನ್ ಎಂಬಾತ ಸಮೀಕ್ಷೆ ನಡೆಸಿ ಗಣಿಗಳ ಪ್ರಾಚೀನ ಇತಿಹಾಸ ಸಾರುವ ಅಮೂಲ್ಯ ಮಾಹಿತಿಯನ್ನು ನೀಡಿದ್ದಾನೆ.

ದಕ್ಷಿಣ ಭಾರತದಲ್ಲಿರುವ ಪ್ರಾಚೀನ ಚಿನ್ನದ ಗಣಿಗಳಿಂದ ಒಂದು ಅಂಶ ನಿಚ್ಚಳವಾಗಿ ತಿಳಿಯುತ್ತದೆ. ಎಲ್ಲೆಲ್ಲಿ ಚಿನ್ನಭರಿತ ಶಿಲೆಗಳಿವೆಯೋ ಅಲ್ಲೆಲ್ಲೆ ತಾಂತ್ರಿಕ ತೊಂದರೆ ಗಣಿಗಾರಿಕೆಯನ್ನು ಅರ್ಧಕ್ಕೆ ಕೈ ಬಿಟ್ಟಿರುವ ನಿದರ್ಶನಗಳಿವೆ. ಆದರೆ ಹಟ್ಟಿಯ ಸುತ್ತಮುತ್ತ ಅತ್ಯಂತ ಆಳವಾದ ಪ್ರಾಚೀನ ಚಿನ್ನದ ಗಣಿಗಳಿವೆ. ಮೆಕ್ಲರಾನ್ ಎಂಬ ಭೂವಿಜ್ಞಾನಿ ಹಟ್ಟಿಯ ಸುತ್ತಮುತ್ತ 300ಕ್ಕಿಂತಲೂ ಮಿಗಿಲು ಪ್ರಾಚೀನ ಚಿನ್ನದ ಗಣಿಗಳಿವೆ ಎಂದು ತಿಳಿಸಿದ್ದಾನೆ. ಹಟ್ಟಿಯ ಗಣಿಗಳಲ್ಲಿ ಪ್ರಾಚೀನರು ಬಳಸಿದ ಕಬ್ಬಿಣದ ಬಾಣಲೆ, ಕಲ್ಲಿನ ಪೀಠ, ಮಡಕೆಯ ಚೂರುಗಳು ಮುಂತಾದವು ದೊರೆತಿವೆ. ಈ ಪುರಾವೆಗಳನ್ನು ಆಧರಿಸಿ ಪ್ರಾಚ್ಯ ಸಂಶೋಧಕರು ಇವು ಮೊದಲನೇ ಸಂಸ್ಥಾನಕ್ಕೆ ಸೇರಿವೆ ಎಂದು ಕಾಲನಿರ್ಣಯ ಮಾಡಿದ್ದಾರೆ. ಇದೇ ಬಗೆಯ ಗಣಿ ಸಾಮಗ್ರಿಗಳು, ಮಡಕೆ ಚೂರುಗಳು ಕೋಲಾರದ ಚಿನ್ನದ ಗಣಿಗಳಲ್ಲಿ ಒಂದಾದ ಮೈಸೂರು ಗಣಿಯನ್ನು ಅಳವಡಿಸುವಾಗ ದೊರೆತವು. ಅಲ್ಲಿನ ಗಣಿ ವಸ್ತು ಸಂಗ್ರಹಾಲಯದಲ್ಲಿ ಇವುಗಳನ್ನು ರಕ್ಷಿಸಿ ಇಟ್ಟಿದ್ದಾರೆ. ರಾಟೆಗಳ ಮೂಲಕ ಚಿನ್ನದ ಅದಿರನ್ನು ಎತ್ತಿ ಹೊರತೆಗೆದು ಕಲ್ಲಿನ ಮೇಲೆ ಅರೆದು ಸಣ್ಣಗೆ ಪುಡಿ ಮಾಡುವ ತಂತ್ರವನ್ನು ಪ್ರಾಚೀನರು ಅನುಸರಿಸಿದ್ದಾರೆ. ಕರ್ನಾಟಕದಾದ್ಯಂತ ಪ್ರಾಚೀನದ ಗಣಿಗಳ ಸುತ್ತಮುತ್ತ ಚಿನ್ನದ ಅದಿರನ್ನು ಪುಡಿಮಾಡಲು ಬಳಸುತ್ತಿದ್ದ ರುಬ್ಬುಗುಂಡುಗಳು, ಬಂಡೆಗಳ ಮೇಲೆ ಮೂಡಿಸಿರುವ ಕುಳಿಗಳು ಸಾಕಷ್ಟು ಲಭ್ಯವಿವೆ. ಹತ್ತಿರದ ಹೊಳೆಯ ಬಳಿ ಪುಡಿ ಮಾಡಿದ ಅದುರನ್ನು ಜಾಲಿಸಿ, ಚಿನ್ನವನ್ನು ಸಾಂದ್ರತೆಯ ಆಧಾರದ ಮೇಲೆ ಸುಲಭವಾಗಿ ಸಂಗ್ರಹಿಸುತ್ತಿದ್ದರು. ವಿಶೇಷವಾಗಿ ಹಟ್ಟಿ ಚಿನ್ನದ ಗಣಿಗಳಲ್ಲಿ ಪ್ರಾಚೀನ ಗಣಿಗಾರಿಕೆಯ ಅನೇಕ ಕುರುಹುಗಳು ಪತ್ತೆಯಾಗಿವೆ. ಅದಿರನ್ನು ಮೇಲೆ ಎಳೆದುಕೊಳ್ಳಲು ಬಳಸುತ್ತಿದ್ದ ಹಗ್ಗಗಳಿಂದ ಶಿಲಾ ಭಿತ್ತಿಯ ಮೇಲೆ ಮೂಡಿರುವ ಗುರುತುಗಳು ಈಗಲೂ ಉಳಿದಿವೆ. ಗಣಿ ಕುಸಿದು ಬೀಳದಂತೆ ಆಸರೆಗಾಗಿ ಬಳಸುತ್ತಿದ್ದ ಗೊಬ್ಬಳಿ ಮರದ ತುಂಡುಗಳೂ ಪತ್ತೆಯಾಗಿವೆ. ಕೆಲವು ದಿಮ್ಮಿಗಳು ಗರಗಸದಿಂದ ಕೊಯ್ಯಲಾರದಷ್ಟು ಗಟ್ಟಿಯಾಗಿವೆ.

ಕರ್ನಾಟಕದ ಸ್ಥಳನಾಮಗಳ ವೈಶಿಷ್ಟ್ಯವನ್ನು ಪರಿಗಣಿಸಿದಾಗ ಮತ್ತೊಂದು ಅಂಶವೂ ವಿಶೇಷವಾಗಿ ಗಮನ ಸೆಳೆಯುತ್ತದೆ. ಹೊನ್ನು ಹೆಸರಿನ ಅನೇಕ ಸ್ಥಳಗಳು ನಮ್ಮಲ್ಲಿವೆ.. ಹೊನ್ನಗಲ್ಲು, ಹೊನ್ನಾಳಿ, ಹೊನ್ನಬೆಟ್ಟ, ಹೊನ್ನೇಬಾಗಿ, ಹೊನ್ನೆಹಟ್ಟಿ, ಹೊನ್ನೆಕುಣಿ, ಹೊನ್ನದೋಣಿ ಈ ಸ್ಥಳಗಳಲ್ಲಿ ಪುರಾತನ ಚಿನ್ನದ ಗಣಿಗಳಿವೆ. ಪ್ರಾಚೀನ ಚಿನ್ನದ ಗಣಿಗಳೆಲ್ಲವೂ ಈಗ ಸುಸ್ಥಿತಿಯಲ್ಲಿಲ್ಲ. ಅನೇಕ ಗಣಿಗಳು ಗುರುತೂ ಸಿಕ್ಕದಷ್ಟು ಮುಚ್ಚಿ ಹೋಗಿದೆ.

ಕರ್ನಾಟಕದ ಚಿನ್ನದ ಗಣಿಗಳ ಪ್ರಾಚೀನತೆಯನ್ನು ಪ್ರಸಿದ್ಧ ಪ್ರಾಚ್ಯ ಸಂಶೋಧಕ ವೀಲರ್, ಸಿಂಧೂನದಿಯ ಸಂಸ್ಕೃತಿಯವರೆಗೆ ವಿಸ್ತರಿಸಿದ್ದಾರೆ. ಆಲ್ಚಿನ್ ಎಂಬ ವಿದ್ವಾಂಸ ಈ ಕುರಿತು ಇನ್ನಷ್ಟು ಪುರಾವೆಗಳನ್ನು ಮುಂದಿಟ್ಟಿದ್ದಾರೆ. ಸಿಂಧೂ ನಾಗರಿಕತೆಯಲ್ಲಿ ಬಳಸಿರುವ ಬಹುಪಾಲು ಚಿನ್ನ ಬೆಳ್ಳಿಯ ಅಂಶದಿಂದಾದ ಬಿಳಿಚಿನ್ನ (ಎಲೆಕ್ಟ್ರಮ್). ಈ ಬಗೆಯ ಚಿನ್ನ ದೊರೆಯುವುದು ಗಣಿಗಳ ಮೂಲದಿಂದಲೇ ಹೊರತು ಮೆಕ್ಕಲಿನಿಂದಲ್ಲ. ಹಟ್ಟಿಯ ಚಿನ್ನ ಈ ಬಗೆಯದು. ಇದರ ಜೊತೆಗೆ ನವಶಿಲಾಯುಗದ ಅನೇಕ ಅವಶೇಷಗಳು ಹಟ್ಟಿ ಗಣಿಯ ಸುತ್ತಮುತ್ತ ಪತ್ತೆಯಾಗಿರುವುದನ್ನು ಇವರು ಉಲ್ಲೇಖಿಸಿದ್ದಾರೆ. ಕೋಲಾರ ಮತ್ತು ಹಟ್ಟಿ ಚಿನ್ನದ ಗಣಿಗಳಲ್ಲಿ ಪ್ರಾಚೀನರು ಬಳಸಿದ್ದ ಮರದ ಕಂಬಗಳನ್ನು ಕಾರ್ಬನ್ 14 ಕಾಲನಿರ್ಣಯಕ್ಕೆ ಒಳಪಡಿಸಿದ್ದಾರೆ. ಈ ಅಧ್ಯಯನದ ಹಿನ್ನೆಲೆಯಲ್ಲಿ ಕೋಲಾರದ ಚಿನ್ನದ ಗಣಿಗಳನ್ನು ಈಗ್ಗೆ 700 ವರ್ಷಗಳಷ್ಟು ಮೊದಲೇ ಪ್ರಾಚೀನರು ಆಳಪಡಿಸಿದ್ದಾರೆಂಬ ಅಂಶ ಹೊರಬಿದ್ದಿದೆ.

ನಮ್ಮ ನಾಡಿನಾದ್ಯಂತ ಚಿನ್ನಕ್ಕಾಗಿ ವ್ಯವಸ್ಥಿತ ಶೋಧನೆ ಮಾಡಿರುವ ಪ್ರಾಚೀನರು ಸ್ಥಳೀಯರೇ ಅಥವಾ ಹೊರಗಿನವರೆ ಎಂಬುದರ ಬಗ್ಗೆ ಸ್ಪಷ್ಟವಾದ ದಾಖಲೆಗಳಿಲ್ಲ. ಲಿಯೋನಾರ್ಡ್ಮನ್ ಎಂಬ ಭೂವಿಜ್ಞಾನಿ 1939ರಲ್ಲಿ ಈ ಕುರಿತು ದೀರ್ಘ ಅಧ್ಯಯನ ಮಾಡಿದ. ಆಗಿನ ಮೈಸೂರು ಪ್ರಾಂತ್ಯದಲ್ಲಿ ಮಾಡಿರುವ ಗಣಿಗಾರಿಕೆ ಆಪಿs್ರಕದಲ್ಲಿ ಚಿನ್ನದ ಗಣಿಗಳನ್ನು ಮಾಡಲು ಪ್ರೇರಣೆ ನೀಡಿರಬಹುದೆಂದು ಊಹಿಸಿದ. ರೊಡೀಷಿಯದಲ್ಲಿ ಮೈಸೂರು ಪ್ರಾಂತ್ಯದಲ್ಲಿರುವಂತೆ ಪ್ರಾಚೀನ ಚಿನ್ನದ ಗಣಿಗಳಿಗೆ ಹೋಲಿಕೆಯಿದೆ. ಈ ಚಿನ್ನದ ಗಣಿಗಳ ಸುತ್ತಮುತ್ತಲಿನ ಕಾಡುಹತ್ತಿ, ಹುಣಿಸೇ ಮರ, ಕಾಡು ನಿಂಬೆ, ಸ್ಥಳೀಯವಲ್ಲವೆಂದೂ, ಇವೆಲ್ಲ ಹಿಂದಿನ ಮೈಸೂರು ಪ್ರಾಂತ್ಯದಿಂದ (ಆಗಿನ ಹೈದರಾಬಾದು ಕರ್ನಾಟಕ ಪ್ರಾಂತ್ಯ) ಬಂದಿರಬಹುದೆಂದು ರೋಡಿಷಿಯದ ಭೂವಿಜ್ಞಾನ ಸರ್ವೇ ಸಂಸ್ಥೆಯ ಸದಸ್ಯ ಮೇಜರ್ ಲೈತ್ಫುಟ್ ಎಂಬ ತಜ್ಞ, ಕ್ಯಾಪ್ಟನ್ ಲಿಯೋನಾರ್ಡ್ಮನ್ಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾನೆ.

ಕೋಲಾರದ ಚಿನ್ನದ ಗಣಿಗಳ ಇತಿಹಾಸದಲ್ಲಿ ಅತ್ಯಂತ ಕುತೂಹಲಕಾರಿ ಪ್ರಸಂಗ ಒಂದಿದೆ. ಬೆಂಗಳೂರಿನ ದಂಡು ಪ್ರದೇಶದಲ್ಲಿ ವಾಸವಾಗಿದ್ದ ಐರಿಷ್ ಸೈನಿಕ ಮೈಕೇಲ್ ಲ್ಯಾವೆಲ್ಲೆ ಎಂಬಾತ ನ್ಯೂಜಿಲೆಂಡಿನಲ್ಲಿ ಮಯೋರಿ ಯುದ್ಧದಲ್ಲಿ ಪಾಲ್ಗೊಂಡು ಬೆಂಗಳೂರಿಗೆ ವಾಪಸ್ಸಾದ ಅನಂತರ ಚಿನ್ನದ ಗಣಿಗಾರಿಕೆಯಲ್ಲಿ ಆಸಕ್ತಿ ತಳೆದ. 1871ರಲ್ಲಿ ಕೋಲಾರದ ಚಿನ್ನದ ಗಣಿ ಪ್ರದೇಶವನ್ನು ಗೋಪ್ಯವಾಗಿ ಅಧ್ಯಯನ ಮಾಡಿದ. 1873ರಲ್ಲಿ ಆಗಿನ ಮೈಸೂರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಕೋಲಾರ ಪ್ರದೇಶದಲ್ಲಿ ಕಲ್ಲಿದ್ದಲು ಗಣಿ ಮಾಡಲು ಪರವಾನಗಿ ಕೇಳಿದ್ದ. 1875ರಲ್ಲಿ ಸರ್ಕಾರವನ್ನು ವಂಚಿಸಿ ಮೂರು ವರ್ಷಗಳ ಕಾಲ ಗುತ್ತಿಗೆ ಪಡೆದ. 1876ರಲ್ಲಿ ತನ್ನ ಹಕ್ಕನ್ನು ಮದ್ರಾಸ್ ಸ್ಟಾಫ್ ಕ್ವಾರ್ಟರ್ಸ್ನ ಜನರಲ್ ಬೆರಿಸ್ಫರ್ಡ್ ಎಂಬುವನಿಗೆ ಮಾರಿಕೊಂಡ. ಮುಂದೆ ಈತ ಒಂದು ಸಿಂಡಿಕೇಟನ್ನು ಮಾಡಿಕೊಂಡು ಕೋಲಾರ್ ಕನ್ಸೇಷನರೀಸ್ ಎಂದು ಹೆಸರಿಟ್ಟು ಅದಕ್ಕೆ ಐದು ಸಾವಿರ ರೂಪಾಯಿ ಬಂಡವಾಳ ಹೂಡಿದ. ಈ ಸಿಂಡಿಕೇಟ್, ಆಸ್ಟ್ರೇಲಿಯದ ಇಬ್ಬರು ಗಣಿ ತಜ್ಞರನ್ನು ಬರಮಾಡಿಕೊಂಡು ಚಿನ್ನದ ಗಣಿಗಾರಿಕೆ ಪ್ರಾರಂಭಿಸಿತು. 1879ರಲ್ಲಿ ಸ್ವಲ್ಪಪ್ರಮಾಣದ ಚಿನ್ನವೂ ದೊರೆಯಿತು. ಇದರಿಂದ ಪ್ರೇರಿತವಾಗಿ ಅತ್ತ ವೈನಾಡಿನಲ್ಲಿ ಚಿನ್ನದ ಮೇಲೆ ಹಣ ಹೂಡಿದ್ದ ಅನೇಕ ಕಂಪನಿಗಳು ಮೈಸೂರು ಪ್ರಾಂತ್ಯದತ್ತ ಸಾರಾಸಗಟಾಗಿ ಬಂದವು. 1880ರಲ್ಲಿ ಮೈಸೂರು ಗಣಿ ಕಂಪನಿ ಅಸ್ತಿತ್ವಕ್ಕೆ ಬಂದಿತು. ಅನಂತರ ನಂದಿದುರ್ಗ ಕಂಪನಿ ತಲೆಯೆತ್ತಿತು. ಇವುಗಳ ಆಡಳಿತ ಕೇಂದ್ರ ಲಂಡನ್ನಿನಲ್ಲಿತ್ತು. 1881ರ ಹೊತ್ತಿಗೆ ಕೋಲಾರದ ಚಿನ್ನದ ಗಣಿಗಳಲ್ಲಿ 13 ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದವು. 1880ರಲ್ಲೇ ಉರಿಗಾಂ ಕಂಪನಿ 40 ಟನ್ನು ಚಿನ್ನದ ಅದಿರನ್ನು ಅರೆದು 42 ಔನ್ಸ್‌ ಚಿನ್ನವನ್ನು ಸಂಗ್ರಹಿಸಿ ಆಧುನಿಕ ಗಣಿ ಉದ್ಯಮಕ್ಕೆ ಬುನಾದಿ ಹಾಕಿತು. ಪ್ರಾರಂಭಿಕ ಸ್ಥಿತಿ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಇಲ್ಲಿನ ಚಿನ್ನದ ಗಣಿ ಉದ್ಯಮದ ಬಗ್ಗೆ ಬ್ರಿಟನ್ನಿನ ಗಣಿಗಳು ಮತ್ತು ಖನಿಜ ಎಂಬ ವರದಿಯಲ್ಲಿ ರಾಲ್ಧ್‌ ಸ್ಟೋಕ್ಸ್‌ ಎಂಬ ತಜ್ಞ ಬರೆದ ಮಾತುಗಳಿವು: ಮೊದಲ ದುರದೃಷ್ಟ ಗಣಿಗಳಲ್ಲಿ ಕೋಲಾರದ ಗಣಿಗಳ ಹೆಸರು ಎದ್ದು ಕಾಣುತ್ತದೆ. ಇಲ್ಲಿ ಪ್ರಾಚೀನರು ಬಹು ಹಿಂದೆಯೇ ಚಿನ್ನವನ್ನು ಪತ್ತೆ ಹಚ್ಚಿ ಗಣಿಗಳನ್ನು ಮಾಡಿದ್ದರು. ಹೊಸ ನಿಕ್ಷೇಪವನ್ನು ಪತ್ತೆ ಹಚ್ಚಲು ಆಳವಾದ ಗಣಿಗಳನ್ನು ತೋಡುವುದು ಅನಿವಾರ್ಯವಾಯಿತು.

ಆಗಿನ ಪರಿಸ್ಥಿತಿಯೂ ಅಷ್ಟೇ ನಿರಾಶಾದಾಯಕವಾಗಿತ್ತು. ಕೋಲಾರದ ಸುತ್ತಮುತ್ತ ಸಾಂಕ್ರಾಮಿಕ ರೋಗ ಉಲ್ಬಣಿಸಿತ್ತು. ಗಣಿಗಳಿಗಂತಿರಲಿ, ಕುಡಿಯುವ ನೀರಿಗೆ ಎಂದೂ ಅಲ್ಲಿ ಬವಣೆ ತಪ್ಪೇ ಇರಲಿಲ್ಲ. 1882ರ ಹೊತ್ತಿಗೆ ಗಣಿ ಕಾರ್ಯಾಚರಣೆ ತೀರಾ ಕೆಳಮಟ್ಟಕೆ ಕುಸಿದು ಇನ್ನೇನು ಗಣಿಗಳನ್ನು ಮುಚ್ಚದೆ ಬೇರೆ ಮಾರ್ಗವೇ ಇಲ್ಲ ಎಂಬ ತೀರ್ಮಾನ ತೆಗೆದುಕೊಳ್ಳುವ ಹಂತವನ್ನು ತಲಪಿತು. 1880ರಿಂದ 1902ರವರೆಗೆ ಕೋಲಾರದ ಚಿನ್ನದ ಗಣಿಗಾರಿಕೆಯ ಮುಖ್ಯಸ್ಥನಾಗಿದ್ದ ಜಾನ್ ಟೇಲರ್, ಕೋಲಾರದ ಪುರಾತನ ಚಿನ್ನದ ಗಣಿಗಳನ್ನು ಆಳಕ್ಕೆ ಇಳಿಸಿ ಪರಿಶೋಧಿಸಬೇಕೆಂದು ಸಲಹೆ ನೀಡಿದ. ಕ್ಯಾಪ್ಟನ್ ಪ್ಲಮರ್ ಎಂಬಾತ ಗಣಿಯನ್ನು ಆಳಪಡಿಸುತ್ತಿದ್ದಾಗ ಪ್ರಾಚೀನರು ಬಿಟ್ಟಿದ್ದ ಚಿನ್ನದ ಅದಿರಿನ ಶಿಲ್ಕು ದೊರೆಯಿತು.

ಕೋಲಾರದ ಚಿನ್ನದ ಗಣಿ ಪ್ರದೇಶದ ಭೂವಿಜ್ಞಾನ[ಸಂಪಾದಿಸಿ]

ಬೆಂಗಳೂರಿನಿಂದ 80 ಕಿಮೀ ಪೂರ್ವಕ್ಕೆ, ಉತ್ತರ ದಕ್ಷಿಣವಾಗಿ ಸು. 80 ಕಿಮೀ ದೂರ ಹಾಯುವ ಕೋಲಾರದ ಪದರ ಶಿಲಾ ಜಾಡಿಗೆ ಕರ್ನಾಟಕದ ಭೂವಿಜ್ಞಾನದಲ್ಲಿ ವಿಶೇಷ ಸ್ಥಾನವಿದೆ. ಇದರ ಅಗಲ ಸರಾಸರಿ ಆರು ಕಿಮೀ ದಕ್ಷಿಣದಲ್ಲಿ ಕಾಮಸಮುದ್ರದಿಂದ ಮುಂದಕ್ಕೆ ಚಾಚಿ ಎರಡು ಕವಲಾಗಿ ಹಂಚಿಹೋಗಿದೆ. ಉತ್ತರದಲ್ಲಿ ಶ್ರೀನಿವಾಸಪುರದವರೆಗೂ ಇದು ವಿಸ್ತರಿಸಿದೆ. ಈ ಶಿಲಾ ಸಮೂಹವನ್ನು ಧಾರವಾಡ ಶಿಲಾ ಸಮೂಹದ ಒಂದು ಭಾಗ ಎಂದು ಪರಿಗಣಿಸಲಾಗಿದೆ. ಕರ್ನಾಟಕದಲ್ಲಿ ಈ ಬಗೆಯ ಶಿಲೆಗಳನ್ನು ಹಸುರು ಶಿಲಾ ಪಟ್ಟಿ ಎಂಬ ಗುಂಪಿಗೆ ಸೇರಿಸಲಾಗಿದೆ. ಚಿನ್ನವಿರುವ ವಲಯ ಈ ಶಿಲಾ ಪಟ್ಟಿಯಲ್ಲಿದೆ. ಸು. ಎಂಟು ಕಿಮೀ ವ್ಯಾಪಿಸಿದೆ. ಇಲ್ಲಿನ ಹಾರ್ನ್‌ಬ್ಲೆಂಡ್ ಪದರ ಶಿಲೆ, ಸ್ವರ್ಣಭರಿತ ಸಿರಗಳಿಗೆ ಮಾತೃವಾಗಿದೆ. ಮೂಲತಃ ಅಗ್ನಿಶಿಲೆಯಾಗಿದ್ದು ಅನಂತರ ರೂಪಾಂತರಣವಾಗಿದೆ. ಪಶ್ಚಿಮ ಅಂಚಿನಲ್ಲಿ ಕಬ್ಬಿಣಯುಕ್ತ ಕ್ವಾರ್ಟ್ಜೈಟ್ ಶಿಲೆಗಳಿವೆ ಪೂರ್ವದ ಅಂಚಿನಲ್ಲಿ ಜರ್ಜರಿತವಾದ ಶಿಲೆಗಳಿವೆ. ಕೋಲಾರದ ಪದರು ಶಿಲಾ ಜಾಡಿನಲ್ಲಿ ಅಲ್ಲಲ್ಲೇ ಗ್ರಾನೈಟ್ ಶಿಲೆ ಅಂತಸ್ಸರಣಗೊಂಡಿದೆ. ಸ್ವರ್ಣಭರಿತ ಬೆಣಚು ಸಿರಗಳು ಹಾರ್ನ್‌ಬ್ಲೆಂಡ್ ಶಿಲೆಗಳಲ್ಲಿರುವ ಸ್ತರಭಂಗದಿಂದಾದ ಬಿರುಕುಗಳನ್ನು ತುಂಬಿ ರೂಪುಗೊಂಡಿವೆ ಎಂದು ಭೂವೈಜ್ಞಾನಿಕ ಅಧ್ಯಯನದಿಂದ ತಿಳಿದುಬಂದಿದೆ. ಬಹುಶಃ ಗ್ರಾನೈಟ್ ಶಿಲೆ, ನಾಡಶಿಲೆಯಲ್ಲಿ ಅಂತಸ್ಸರಣಗೊಂಡ ಕಾಲಕ್ಕೆ ಶಿಲಾ ಪಾಕದೊಂದಿಗೆ ಬಂದ ಬೆಣಚು ಚಿನ್ನವನ್ನು ಹೊತ್ತು ತಂದು ಈ ಬಿರುಕುಗಳಲ್ಲಿ ತುಂಬಿರಬಹುದು.

ಇಡೀ ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ಪ್ರಮುಖವಾಗಿ 26 ಸ್ವರ್ಣಭರಿತ ಸಿರಗಳಿವೆ. ಇವುಗಳಲ್ಲಿ ಪ್ರಧಾನವಾಗಿ ಎರಡು ಬಗೆ. ಸಲ್ಫೈಡ್ ಖನಿಜಗಳು ಬೆರೆತಿರುವ ಪಶ್ಚಿಮ ಸಿರಗಳು ಮತ್ತು ನೇರವಾಗಿ ಯಂತ್ರಕ್ಕೆ ಕೊಟ್ಟು ಚಿನ್ನವನ್ನು ಸಂಗ್ರಹಿಸಬಹುದಾದ ಪೂರ್ವ ಸಿರಗಳು. ಇವುಗಳಲ್ಲೆಲ್ಲ ಛಾಂಪಿಯನ್ ಸಿರದ ಮೇಲೆ ಅತ್ಯಂತ ಆಳವಾದ ಗಣಿಯಿದೆ. ಕೋಲಾರದ ಚಿನ್ನದ ಗಣಿಗಳ ಪೈಕಿ ಇದು ಅತ್ಯಂತ ಹೆಚ್ಚಿನ ಚಿನ್ನವನ್ನು ಉತ್ಪಾದಿಸಿದೆ. ದಕ್ಷಿಣದಲ್ಲಿ ಮೈಸೂರು ಗಣಿ, ಮಧ್ಯದಲ್ಲಿ ಛಾಂಪಿಯನ್ ಗಣಿ, ವಾಯವ್ಯದಲ್ಲಿ ನಂದಿದುರ್ಗ ಗಣಿಗಳಿವೆ. 1880ರಿಂದ ಪ್ರಾರಂಭಿಸಿ 1990ರವರೆಗೆ ಈ ಎಲ್ಲ ಗಣಿಗಳಿಂದ ಒಟ್ಟು 800 ಟನ್ನು ಚಿನ್ನ ಉತ್ಪಾದನೆಯಾಗಿದೆ. 3320 ಮೀ ಆಳದವರೆಗೆ ವಿಸ್ತರಿಸಿರುವ ಈ ಗಣಿಗಳ ಎಲ್ಲ ಕೂಪಗಳನ್ನು ಸಾಲಿಗೆ ಪೋಣಿಸಿದರೆ 63 ಕಿಮೀ ಉದ್ದದ ಕೂಪಗಳಾಗುತ್ತವೆ. ಹಾಗೆಯೇ ಎಲ್ಲ ಸುರಂಗಗಳನ್ನು ಒಂದರ ಹಿಂದೆ ಒಂದು ಪೋಣಿಸಿದರೆ ಅವು 650 ಕಿಮೀ ಉದ್ದದ ಸುರಂಗವಾಗುತ್ತದೆ.

ಛಾಂಪಿಯನ್ ಸಿರ ಸಮೂಹ[ಸಂಪಾದಿಸಿ]

ಕೋಲಾರದ ಚಿನ್ನದ ಗಣಿಗಳಲ್ಲಿ ಅತ್ಯಂತ ಸ್ವರ್ಣಭರಿತವಾದ ಛಾಂಪಿಯನ್ ಸಿರ ಸಮೂಹ ಅತಿ ಹೆಚ್ಚಿನ ಪ್ರಮಾಣದ ಮೆಗ್ನೀಸಿಯಮ್ ಮತ್ತು ನಿಕ್ಕಲ್ ಧಾತುಗಳಿರುವ ಬಸಾಲ್ಟ್‌ ಲಾವಾ ಶಿಲೆಗಳಲ್ಲಿದೆ. ಉತ್ತರಕ್ಕೆ ಬಲ್ಗಾಟ್ ಗಣಿವರೆಗೆ, ದಕ್ಷಿಣಕ್ಕೆ ಕೋಲಾರ ಗಣಿವರೆಗೆ ಹಬ್ಬಿರುವ ಈ ಸಿರದಲ್ಲಿ ತಿಳಿ ಬೂದುಬಣ್ಣದ ಸಣ್ಣ ಸಣ್ಣ ಬೆಣಚಿನ ಎಳೆಗಳು ಸ್ವರ್ಣಭರಿತವಾಗಿವೆ. ಪುರಾತನ ಚಿನ್ನದ ಗಣಿಗಳು ಈ ಎಳೆಗಳನ್ನು ಆಧರಿಸಿ ಸಾಕಷ್ಟು ಆಳಕ್ಕೆ ಇಳಿದಿವೆ. ಛಾಂಪಿಯನ್ ಸಿರವನ್ನು ಅನುಸರಿಸಿ 102ನೆಯ ಹಂತದವರೆಗೆ ಚಿನ್ನವನ್ನು ತೆಗೆದಿದ್ದಾರೆ. ಈ ಹಂತ 3230 ಮೀ ಆಳದಲ್ಲಿದೆ. ಸಣ್ಣ ಸಣ್ಣ ಸ್ವರ್ಣಭರಿತ ಎಳೆಗಳ ಒಟ್ಟೂ ಅಗಲ ಸು. 200 ಮೀ. 8 ಕಿಮೀ ಉದ್ದಕ್ಕೂ ಕೋಲಾರದ ಪದರ ಶಿಲಾಜಾಡಿನಲ್ಲಿ ಇವು ವ್ಯಾಪಿಸಿವೆ.

ಪಶ್ಚಿಮ ಸ್ವರ್ಣ ಸಿರಗಳು[ಸಂಪಾದಿಸಿ]

ಓರಿಯೆಂಟಲ್ ಸಿರ ಸೇರಿದಂತೆ ಪಶ್ಚಿಮದ ಸ್ವರ್ಣ ಸಿರಗಳು ಬಹುತೇಕ ಪಟ್ಟೆರೂಪದ ಚರ್ಟ್ ಮತ್ತು ಜ್ವಾಲಾಮುಖಿ ಜನ್ಯ ಟುಫ್ ಸ್ತರಗಳಿಗೆ ಸೀಮಿತವಾಗಿದೆ. ಚಿನ್ನದೊಂದಿಗೆ ಸಲ್ಪ್ಧೈಡ್ ಖನಿಜಗಳು ಬೆರೆತಿರುವುದು ಈ ಸಿರಗಳ ವೈಶಿಷ್ಟ್ಯ. ಛಾಂಪಿಯನ್ ಸಿರ ಸಮೂಹಕ್ಕೆ 400 ರಿಂದ 500 ಮೀ ಪಶ್ಚಿಯದಲ್ಲಿರುವ ಈ ಸಿರಗಳ ಒಟ್ಟೂ ಉದ್ದ 4700 ಮೀ ಸು. 300 ಮೀ ಅಗಲ ಸಿರಗಳೂ ವ್ಯಾಪಿಸಿವೆ. ಕೋಲಾರ ಗಣಿಗಳ ಚಿನ್ನದ ಉತ್ಪಾದನೆಯಲ್ಲಿ ಇವುಗಳ ಪಾಲು ಶೇ. 2.5 ಭಾಗ ಮಾತ್ರ. ಬಿಡಿ ಸ್ವರ್ಣಸಿರ ಕೇವಲ 2 ಮೀ ಅಗಲವಾಗಿದೆ. ಈ ಗಣಿಯ ಮೇಲಿನ ಭಾಗವನ್ನು ಹೆಚ್ಚು ಗಣಿ ಮಾಡದೆ ಇರುವುದರಿಂದ ಇದರಲ್ಲೂ ಚಿನ್ನದ ಅದುರು ಗಣನೀಯ ಪ್ರಮಾಣದಲ್ಲಿದೆ.

1956ರಲ್ಲಿ ಕರ್ನಾಟಕ ಸರ್ಕಾರ ಕೋಲಾರದ ಚಿನ್ನದ ಗಣಿಗಳನ್ನು ರಾಷ್ಟ್ರೀಕರಣ ಮಾಡಿತು. 1962ರಲ್ಲಿ ಭಾರತ ಸರ್ಕಾರ ಇದನ್ನು ವಹಿಸಿಕೊಂಡಿತು. 1965ರಲ್ಲಿ ಮೈಸೂರು ಗಣಿ ಛಾಂಪಿಯನ್ ಗಣಿಯೊಂದಿಗೆ ವಿಲೀನವಾಯಿತು. 1972ರಲ್ಲಿ ಕೋಲಾರದ ನಾಲ್ಕೂ ಗಣಿ ಕಂಪನಿಗಳನ್ನು ವಿಲೀನ ಮಾಡಿ ಕೋಲಾರ್ ಗೋಲ್ಡ್‌ ಮೈನಿಂಗ್ ಅಂಡರ್ಟೇಕಿಂಗ್ ಸಂಸ್ಥೆಯನ್ನು ಭಾರತ್ ಗೋಲ್ಡ್‌ ಮೈನಿಂಗ್ ಸಂಸ್ಥೆ ಎಂದು ಮರುನಾಮಕರಣ ಮಾಡಲಾಯಿತು.

ಈಗ ಕೋಲಾರದ ಚಿನ್ನದ ಗಣಿಗಳಕಾರ್ಯ ಬಹುತೇಕ ಸ್ಥಗಿತವಾಗಿದೆ. ಆಳ ಗಣಿ ಮಾಡಿದಷ್ಟೂ ವೆಚ್ಚ ಏರುತ್ತಿದೆ. ಅಲ್ಲದೆ, ಮೊದಲಿನಂತೆ ಗಣಿಯಲ್ಲಿ ಉತ್ಕ ೃಷ್ಟ ಅದಿರು ಲಭ್ಯವಿಲ್ಲ. 1905ರಲ್ಲಿ ಕೋಲಾರದ ಚಿನ್ನದ ಗಣಿಯಿಂದ ಒಂದೇ ವರ್ಷದಲ್ಲಿ 19 ಟನ್ನು ಚಿನ್ನ ಉತ್ಪಾದನೆಯಾಗಿ ಅದೊಂದು ದಾಖಲೆಯಾಯಿತು. 1984-85 ರಿಂದೀಚೆಗೆ ನಿರಂತರವಾಗಿ ಉತ್ಪಾದನೆ ಕುಗ್ಗಿತು. ಒಂದು ಹಂತದಲ್ಲಿ ಸರ್ಕಾರ ಈ ಗಣಿಗಳನ್ನು ಮುಚ್ಚುವ ಯೋಚನೆಯನ್ನೂ ಮಾಡಿತ್ತು. ಹಾಗೆಂದೊಡನೆ ತಜ್ಞರು ನಿರಾಶರಾಗಿಲ್ಲ. ಹಿಂದೆಲ್ಲ ಉತ್ಕ ೃಷ್ಟ ದರ್ಜೆಯ ಅದಿರನ್ನು ಮಾತ್ರ ಗಣಿ ಮಾಡಿ ತ್ವರಿತ ಲಾಭ ಗಳಿಸುವುದೇ ಗುರಿಯಾಗಿತ್ತು. ಆಗ ಒಂದು ಟನ್ನು ಅದಿರಿನಲ್ಲಿ 15 ಗ್ರಾಂಗಿಂತ ಕಡಿಮೆ ಚಿನ್ನವಿದ್ದರೆ ಅಂಥ ಅದಿರನ್ನು ನಿಕೃಷ್ಟ ಎಂದು ಪರಿಗಣಿಸಿ ಅಲಕ್ಷಿಸುತ್ತಿದ್ದರು. ಈಗ ತಂತ್ರಜ್ಞಾನದಲ್ಲಿ ಭಾರಿ ಸುಧಾರಣೆಯಾಗಿದೆ. ತೆರೆದ ಗಣಿ ಕಾರ್ಯಾಚರಣೆ ಮಾಡಿ 1 ರಿಂದ 2.5 ಗ್ರಾಂ ಚಿನ್ನವಿದ್ದರೂ ಸಾಕು ಲಾಭದಾಯಕವಾಗಿ ಗಣಿ ಮಾಡಬಹುದೆಂದು ಪ್ರಾಯೋಗಿಕವಾಗಿ ಕಂಡುಕೊಳ್ಳಲಾಗಿದೆ. ಅದರಲ್ಲೂ ಓರಿಯೆಂಟಲ್ ಸ್ವರ್ಣ ಸಿರದ ಬಹುಭಾಗವನ್ನು ಗಣಿ ಮಾಡದೆಯೇ ಮೇಲು ಭಾಗದಲ್ಲಿ ಹಾಗೆಯೇ ಉಳಿಸಿದ್ದಾರೆ. ಇಂಥ ಸಿರಗಳು ತೆರೆದ ಗಣಿ ಮಾಡಲು ಯುಕ್ತ ಎಂದು ತಜ್ಞರು ಭಾವಿಸಿದ್ದಾರೆ. ಇದಲ್ಲದೆ ಕೆ.ಜಿ.ಎಫ್ ಪಟ್ಟಣದ ಸುತ್ತ ಗುಡ್ಡದಂತೆ ರಾಶಿ ಹಾಕಿರುವ ಸಂಸ್ಕರಿಸಿದ ಅದಿರಿನ ವ್ಯರ್ಥ ರಾಶಿ (ಸೈನೈಡ್ ಗುಡ್ಡ) ಮೂವತ್ತು ಕೋಟಿ ಟನ್ನುಗಳಷ್ಟಿದೆಯೆಂದು ಅಂದಾಜು. ಈ ರಾಶಿಯಲ್ಲಿ ಕನಿಷ್ಠ ಶೇ. 0.5 ಭಾಗ ಅತಿ ಸೂಕ್ಷ್ಮ ಚಿನ್ನದ ಕಣಗಳಿವೆ. ಇದನ್ನು ಮರು ಸಂಸ್ಕರಣೆಗೆ ಒಳಪಡಿಸಿದರೆ ಅತ್ಯಂತ ಕನಿಷ್ಠವೆಂದರೂ 25 ಟನ್ನು ಚಿನ್ನ ಉತ್ಪಾದಿಸಲು ಸಾಧ್ಯ. ಈ ರಾಶಿಯಲ್ಲಿರುವ ಶೇ. 60 ಭಾಗ ಚಿನ್ನವನ್ನು ಮರುಪಡೆಯಬಹುದೆಂದು ಗಣನೆ ಮಾಡಲಾಗಿದೆ. ಇದಲ್ಲದೆ ಭಾರತ್ ಗೋಲ್ಡ್‌ ಮೈನ್ಸ್‌ ಸಂಸ್ಥೆ ಇತ್ತೀಚೆಗೆ ವರದಿ ಮಾಡಿರುವಂತೆ ಟನ್ನಿಗೆ 5 ಗ್ರಾಂ ಚಿನ್ನವಿರುವ 40 ಲಕ್ಷ ಟನ್ನು ಅದಿರಿನ ಮೀಸಲು ನಿಕ್ಷೇಪ ಇನ್ನೂ ಗಣಿಯಲ್ಲಿದೆ. ಈ ಅಂಶಗಳನ್ನೆಲ್ಲ ಪರಿಗಣಿಸಿ ಕಾರ್ಯೋನ್ಮುಖವಾದರೆ ಕೋಲಾರದ ಚಿನ್ನದ ಗಣಿಗಳಿಗೆ ಇನ್ನಷ್ಟು ಕಾಲ ಜೀವದಾನ ಬರುತ್ತದೆ.

ಹಟ್ಟಿ ಚಿನ್ನದ ಗಣಿಗಳು[ಸಂಪಾದಿಸಿ]

ಕೋಲಾರದ ಚಿನ್ನದ ಗಣಿಗಳನ್ನುಳಿದರೆ ಅತ್ಯಂತ ಹೆಚ್ಚಿನ ಚಿನ್ನದ ಗಣಿಗಾರಿಕೆ ನಡೆಯುತ್ತಿರುವುದು ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಗಳಲ್ಲಿ. ಕೋಲಾರದ ಚಿನ್ನದ ಗಣಿ ಪ್ರಾರಂಭವಾದ ಕಾಲಕ್ಕೆ ಹಟ್ಟಿ ಚಿನ್ನದ ಗಣಿಗಳಲ್ಲೂ ಚಿನ್ನ ತೆಗೆಯುವ ಕೆಲಸ ಪ್ರಾರಂಭವಾಯಿತು. 1887 ರಿಂದ 1920ರವರೆಗೆ ಇಲ್ಲಿ 7.5 ಟನ್ನು ಚಿನ್ನವನ್ನು ಗಣಿ ಮಾಡಲಾಗಿದೆ. ಇದಕ್ಕಾಗಿ 3,85,000 ಟನ್ನು ಅದಿರನ್ನು ಅರೆಯಲಾಗಿದೆ. ಆಗಿನ ಅದಿರಿನ ಚಿನ್ನದ ಅಂಶ ಟನ್ನಿಗೆ 19 ಗ್ರಾಂ ಇತ್ತು. ಮೆಯ್ನ್‌ ರೀಫ್ ಎಂಬ ಸ್ವರ್ಣ ಸಿರಕ್ಕೆ ಮಾತ್ರ ಗಣಿಗಾರಿಕೆ ಸೀಮಿತವಾಗಿತ್ತು.

ಹಟ್ಟಿ ಚಿನ್ನದ ಗಣಿಗಳಿರುವುದು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನಲ್ಲಿ. ಹಟ್ಟಿ, ಹಳ್ಳಿಯ ಹೆಸರು. ಅದರ ಪಕ್ಕದಲ್ಲೇ ಪುರಾತನರು ನೂರಾರು ಸಣ್ಣ ಪುಟ್ಟ ಚಿನ್ನದ ಗಣಿಗಳನ್ನು ತೋಡಿದ್ದರು. ಇಲ್ಲಿ 195 ಮೀ ಆಳದ ಗಣಿಗಳಿವೆ. ರಾಯಚೂರಿನಿಂದ 80 ಕಿಮೀ ಮತ್ತು ಕೃಷ್ಣಾನದಿಯಿಂದ 16 ಕಿಮೀ ದೂರದಲ್ಲಿದೆ. ಹಟ್ಟಿ-ಮಸ್ಕಿ ಶಿಲಾ ಜಾಡೆಂದೇ ಹೆಸರಾಗಿರುವ ಈ ಜಾಗ ಸು. 750 ಚ.ಕಿಮೀ ಪ್ರದೇಶವನ್ನು ಆಕ್ರಮಿಸಿಕೊಂಡಿದೆ.

ಪ್ರ.ಶ.ಪು. 1880ರ ಸು.ನಲ್ಲಿ ಕೋಲಾರದ ಚಿನ್ನದ ಗಣಿಗಳು ಪ್ರಖ್ಯಾತಿ ಪಡೆದ ಕಾಲದಲ್ಲೇ ರಾಯಚೂರಿನ ಈ ಹಟ್ಟಿ ಗಣಿಗಳು ಗಮನ ಸೆಳೆದವು. 1874ರಲ್ಲಿ ಬ್ರೂಸ್ಫೂಟ್, ಈ ಭಾಗಗಳಲ್ಲಿ ಚಿನ್ನದ ಸಿರಗಳ ವಿವರಣೆ ನೀಡಿದ. 1877ರ ಹೊತ್ತಿಗೆ ಹೈದರಾಬಾದಿನ ಡೆಕ್ಕನ್ ಕಂಪನಿ 2590 ಚ.ಕಿಮೀ ಜಾಗವನ್ನು ಗುತ್ತಿಗೆಗೆ ಪಡೆದು ರಾಯಚೂರು ದೊಅಬ್ ಗೋಲ್ಡ್‌ ಪಿsೕಲ್ಡ್‌ ಹೆಸರಿನಲ್ಲಿ ಸುರಪುರ ತಾಲ್ಲೂಕನ್ನು ಒಳಗೊಂಡಂತೆ ಸಮೀಕ್ಷೆ ನಡೆಸಿ ಚಿನ್ನ ಶೋಧಿಸಲು ಪ್ರಾರಂಭಿಸಿತು. ಭಾರತೀಯ ಭೂವಿಜ್ಞಾನ ಸಂಸ್ಥೆಯ ಪರಿಣತ ಭೂವಿಜ್ಞಾನಿಗಳು ಈ ಕಾರ್ಯವನ್ನು ಕೈಗೆತ್ತಿಕೊಂಡರು. ಹಟ್ಟಿ ಹಳ್ಳಿಗೆ ಅರ್ಧ ಕಿಮೀ ಪಶ್ಚಿಮದಲ್ಲಿ ಉಳುಮೆ ಭೂಮಿಯಲ್ಲಿ ತೇಲುತ್ತಿದ್ದ ಬೆಣಚುಕಲ್ಲಿನಲ್ಲಿ ಮೊದಲು ಚಿನ್ನವನ್ನು ಪತ್ತೆ ಹಚ್ಚಲಾಯಿತು. ಇದು ಅಲ್ಲಿನ ಪುರಾತನ ಚಿನ್ನದ ಗಣಿಗಳನ್ನು ಪತ್ತೆ ಹಚ್ಚಲು ನೆರವಾಯಿತು. ಹಟ್ಟಿಗೆ 20 ಕಿಮೀ ಪರಿಧಿಯಲ್ಲೇ 1887-1900ರ ನಡುವೆ ಅನೇಕ ಕಂಪನಿಗಳು ಚಿನ್ನದ ಪರಿಶೋಧನೆಗೆ ತೊಡಗಿದವು. ವಂಡಳ್ಳಿಯಲ್ಲಿ ಇದೇ ಕಂಪನಿಗೆ ಸೇರಿದ ಶಾಖೆ 1898ರಲ್ಲಿ ಗಣಿಯನ್ನು ಪ್ರಾರಂಭಿಸಿತು. 373 ಕಿಗ್ರಾಂ ಚಿನ್ನವನ್ನು ಉತ್ಪಾದಿಸಿ ಹೇಳಿಕೊಳ್ಳುವ ಲಾಭ ಪಡೆಯದೆ ಕಂಪನಿ ಮುಚ್ಚಿತು. 1901ರಲ್ಲಿ ನಿಜಾಮ್ ಹಟ್ಟಿ ಗೋಲ್ಡ್‌ ಮೈನ್ಸ್‌ ಲಿಮಿಟೆಡ್ ಹಟ್ಟಿಯ ಮುಖ್ಯ ಗಣಿಯ ಕಾರ್ಯಾಚರಣೆ ಪ್ರಾರಂಭಿಸಿತು. 1903-20ರ ನಡುವೆ ಅದು 7371 ಕಿಗ್ರಾಂ ಚಿನ್ನವನ್ನು ಉತ್ಪಾದಿಸಿತು. ಇದರಂತೆ ಕೆಂಪನದೊಡ್ಡಿಯ ಬಳಿ ಇದೇ ಕಂಪನಿ 1905ರಲ್ಲಿ 66 ಕಿಗ್ರಾಂ ಚಿನ್ನ ಉತ್ಪಾದಿಸಿ 1908ರಲ್ಲಿ ಮುಚ್ಚಿಹೋಯಿತು. 1937ರಲ್ಲಿ ಹೈದರಾಬಾದ್ ಸರ್ಕಾರ ಹೈದರಾಬಾದ್ ಗೋಲ್ಡ್‌ ಡೆವಲಪ್ಮೆಂಟ್ ಸಿಂಡಿಕೇಟ್ ಮತ್ತು ಜಾನ್ ಟೇಲರ್ ಕಂಪನಿ, ಹಟ್ಟಿಯ ಪುರಾತನ ಚಿನ್ನದ ಗಣಿಗಳ ಕೂಲಂಕಷ ಅಧ್ಯಯನದಲ್ಲಿ ತೊಡಗಿದವು. ಆಗ ಚಿನ್ನದ ಬೆಲೆ ಹೆಚ್ಚಾಗುವುದರ ಜೊತೆಗೆ ರಾಯಚೂರು ಜಿಲ್ಲೆ ಬರ ಪೀಡಿತ ಪ್ರದೇಶವಾಗಿತ್ತು. ಪರಿಹಾರೋಪಾಯವಾಗಿ ಗಣಿ ಕಾರ್ಯವನ್ನು ಸರ್ಕಾರ ಕೈಗೆತ್ತಿಕೊಂಡಿತು. ಹಟ್ಟಿ ಚಿನ್ನದ ಗಣಿಗಳ ಅಭಿವೃದ್ಧಿಗೆ ಈ ಯೋಜನೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿತು. ಎರಡನೇ ಮಹಾಯುದ್ಧದ ಸಮಯದಲ್ಲಿ ಹಟ್ಟಿ ಚಿನ್ನದ ಗಣಿಯ ಕಾರ್ಯಾಚರಣೆ ಸ್ಥಗಿತವಾಯಿತು. 1947ರವರೆಗೂ ಗಣಿ ಕಾರ್ಯಾಚರಣೆ ಮುಂದುವರಿಯಲಿಲ್ಲ. ಮುಂದೆ ಹೈದರಾಬಾದ್ ಗೋಲ್ಡ್‌ ಮೈನ್ಸ್‌ ಕಂಪನಿ ಲಿಮಿಟೆಡ್ ಮತ್ತೆ ಚಿನ್ನವನ್ನು ಉತ್ಪಾದಿಸಲು ತೊಡಗಿತು (1948).

ಕರ್ನಾಟಕದ ಏಕೀಕರಣವಾದುದರಿಂದ ಹೈದರಾಬಾದಿನ ಆಡಳಿತದಿಂದ ರಾಯಚೂರು ಜಿಲ್ಲೆ ಕರ್ನಾಟಕದ ವ್ಯಾಪ್ತಿಗೆ ಬಂದದ್ದರಿಂದ ಗಣಿಯ ಸ್ವಾಮ್ಯವು ಕರ್ನಾಟಕಕ್ಕೆ ಬಂತು (1956). ಈಗ ಹಟ್ಟಿ ಗೋಲ್ಟ್‌ ಮೈನ್ಸ್‌ ಕಂಪನಿ ಇಲ್ಲಿ ಚಿನ್ನವನ್ನು ಉತ್ಪಾದಿಸುತ್ತಿದೆ. ಕೋಲಾರದಲ್ಲಿರುವಂತೆ ಇಲ್ಲಿನ ಗಣಿಗಳಿಗೂ ತಮ್ಮದೇ ಆದ ತಾಂತ್ರಿಕ ಅನುಕೂಲಗಳಿವೆ. ಚಿನ್ನವನ್ನು ಸಂಸ್ಕರಿಸುವ ಸ್ಥಾವರವಿದೆ. ಕೃಷ್ಣಾ ನದಿಯ ಜಲ ವಿದ್ಯುತ್ ಪುರೈಕೆ ಇದೆ. ದಿನಮೊಂದರಲ್ಲಿ 910 ಟನ್ನು ಅದಿರನ್ನು ನಿರ್ವಹಿಸುವ ಸಾಮರ್ಥ್ಯಇಲ್ಲಿನ ಸ್ಥಾವರಗಳಿಗಿದೆ.

1995ರವರೆಗೆ ಹಟ್ಟಿ ಚಿನ್ನದ ಗಣಿಗಳು ಮೂವತ್ತೆಂಟು ಟನ್ನು ಚಿನ್ನ ಉತ್ಪಾದಿಸಿವೆ. ಮಾರುಕಟ್ಟೆಗೆ ಬಿಟ್ಟು ನೇರವಾಗಿ ಮಾರಾಟ ಮಾಡಿದ್ದರೆ ಈ ಗಣಿಗಳು ಹೇರಳ ಲಾಭ ಸಂಪಾದನೆ ಮಾಡುತ್ತಿದ್ದವು. ಚಿನ್ನದ ನಿಯಂತ್ರಣ ಕಾಯಿದೆಯಿಂದಾಗಿ 1963ರಿಂದ ಚಿನ್ನದ ಉತ್ಪಾದನೆಗೆ ತಕ್ಕ ಬೆಲೆ ಸಿಕ್ಕದೆ ಉಸಿರು ಬಿಗಿ ಹಿಡಿಯುವ ಪರಿಸ್ಥಿತಿಯುಂಟಾಗಿತ್ತು. ಉತ್ಪಾದನೆಯಾದ ಚಿನ್ನವನ್ನು ಸರ್ಕಾರಕ್ಕೆ ಮಾರಬೇಕು. ಆದರೆ ಉತ್ಪಾದಿಸಿದ ಎಲ್ಲ ಮೊತ್ತದ ಚಿನ್ನವನ್ನು ಸರ್ಕಾರ ಕೊಂಡುಕೊಳ್ಳುತ್ತಿರಲಿಲ್ಲ. 1958ರವರೆಗೆ ಇಲ್ಲಿಯ ಚಿನ್ನವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರುವ ಅವಕಾಶವಿತ್ತು. ಅಂದಿನ ಮಾರುಕಟ್ಟೆ ಬೆಲೆಗೆ ಸರ್ಕಾರ ಚಿನ್ನವನ್ನು ಕೊಳ್ಳುತ್ತಿತ್ತು. ಚಿನ್ನದ ನಿಯಂತ್ರಣ ಕಾಯ್ದೆಯ ರೀತ್ಯಾ ಚಿನ್ನವನ್ನು ಸೀಮಿತ ಕೈಗಾರಿಕೆ ಬಳಕೆಗೆ ಮಾರುವ ಅವಕಾಶ ಇತ್ತು. 1978-79ರಲ್ಲಿ ಹಟ್ಟಿ ಚಿನ್ನದ ಸಂಸ್ಥೆಯಿಂದ ಸರ್ಕಾರ ಕೊಂಡ ಚಿನ್ನ ಕೇವಲ 881 ಕಿಗ್ರಾಂ ಆ ವರ್ಷ ಗಣಿ ಉತ್ಪಾದಿಸಿದ ಚಿನ್ನ 960 ಕಿಗ್ರಾಂ ಇಂಥ ನೀತಿಯಿಂದಾಗಿ ಗಣಿ ಸಂಸ್ಥೆಗಳು ನಷ್ಟ ಅನುಭವಿಸಬೇಕಾಗಿ ಬಂತು. 1948ರಿಂದ ಹಟ್ಟಿ ಗಣಿಗಳಲ್ಲಿ ತೋಡಿರುವ ಸುರಂಗಗಳನ್ನು ಸಾಲಾಗಿ ಜೋಡಿಸಿದರೆ 123.5 ಕಿಮೀ ದೂರ ಸಾಗುತ್ತದೆ. ಎಂದರೆ ಕೋಲಾರದ ಚಿನ್ನದ ಗಣಿಗಳ ಹತ್ತನೆಯ ಒಂದು ಭಾಗದಷ್ಟು. ಹಟ್ಟಿಯ ಸುತ್ತ ಮುತ್ತ ಒಟ್ಟು ಒಂಬತ್ತು ಚಿನ್ನದ ಸಿರಗಳಿವೆ. ಇದರಲ್ಲಿ ಮುಖ್ಯ ಸಿರದ ಮೇಲೆ ತೋಡಿರುವ ಗಣಿ 1140 ಮೀ ಆಳಕ್ಕಿಳಿದಿದೆ.

ಹಟ್ಟಿ ಚಿನ್ನದ ಗಣಿ ಪ್ರದೇಶದ ಭೂವಿಜ್ಞಾನ[ಸಂಪಾದಿಸಿ]

ಕೋಲಾರದ ಚಿನ್ನದ ನಿಕ್ಷೇಪಗಳಂತೆಯೇ ಹಟ್ಟಿ ಚಿನ್ನದ ನಿಕ್ಷೇಪಗಳಿಗೂ ಜ್ವಾಲಾಮುಖಿ ಜನ್ಯ ಥೋಲಿಯೈಟ್ ಎಂಬ ಶಿಲೆಗಳೇ ಮೂಲ. ಇಲ್ಲಿನ ಶಿಲೆಗಳು ಭಾರಿ ಪ್ರಮಾಣದಲ್ಲಿ ರೂಪಾಂತರಗೊಂಡಿವೆ. ಸ್ವರ್ಣ ಸಿರಗಳಿರುವುದು ಬಿರುಕು, ಸೀಳುಗಳಿಂದ ಛಿದ್ರವಾದ ಕ್ಷಾರ ಶಿಲೆಗಳಲ್ಲಿ. ಬಿರುಕುಗಳೇ ಖನಿಜೀಕರಣವನ್ನು ನಿಯಂತ್ರಿಸಿದೆ. ಮೆಯ್ನ್‌ ರೀಫ್, ಓಕ್ಲೆ ರೀಫ್, ವಿಲೇಜ್ ರೀಫ್ ಮುಂತಾಗಿ ಒಂಬತ್ತು ಸ್ವರ್ಣ ಸಿರಗಳಿದ್ದರೂ ಮುಖ್ಯ ಗಣಿ ಅಭಿವೃದ್ಧಿಯಾಗಿದ್ದು ಮೆಯ್ನ್‌ ರೀಫ್ನಲ್ಲಿ. 1895ರಿಂದ 1919ರವರೆಗೂ ಈ ಭಾಗದ ಗಣಿ ಹೆಚ್ಚು ಅಭಿವೃದ್ದಿಯಾಗಿದೆ. ಹಿಂದೆ ಟನ್ನೊಂದಕ್ಕೆ 19 ಗ್ರಾಂ ಚಿನ್ನವಿರುವ ಬೆಣಚನ್ನು ಮಾತ್ರ ಗಣಿ ಮಾಡಿದ್ದಾರೆ, ಸಲ್ಫೈಡ್ ಖನಿಜಗಳಿರುವ ನಿಕೃಷ್ಟ ದರ್ಜೆಯ ಬೆಣಚನ್ನು ಗಣಿ ಮಾಡದೆ ಬಿಟ್ಟಿದ್ದಾರೆ. ಈಗ ಉಳಿದ ಸ್ವರ್ಣ ಸಿರಗಳ ಅಭಿವೃದ್ಧಿ ಮಾಡಿದರೆ 750 ಮೀ ಆಳದವರೆಗೆ ಮೂವತ್ತು ದಶಲಕ್ಷ ಟನ್ನು ಚಿನ್ನದ ಅದಿರಿನ ಮೀಸಲು ನಿಕ್ಷೇಪವಿದೆಯೆಂದು ಸಮೀಕ್ಷೆಗಳು ದೃಢಪಡಿಸಿವೆ. ಈ ಪೈಕಿ ಟನ್ನಿಗೆ 6.3 ಗ್ರಾಂ ಚಿನ್ನವಿರುವ ಆರು ದಶಲಕ್ಷ ಟನ್ನು ಅದಿರನ್ನು ಈಗಾಗಲೇ ಹೊರ ತೆಗೆಯಲಾಗಿದೆ.

ಗದಗದ ಚಿನ್ನದ ನಿಕ್ಷೇಪಗಳು[ಸಂಪಾದಿಸಿ]

ಗದಗ ಬಹು ಹಿಂದಿನಿಂದ ಮೆಕ್ಕಲು ಚಿನ್ನಕ್ಕೆ ಹೆಸರುವಾಸಿ. ಈ ಪ್ರಾಂತ್ಯದಲ್ಲಿ ಹನ್ನೆರಡನೆಯ ಶತಮಾನದಲ್ಲಿ ಜಾಲಗಾರರು ಚಿನ್ನ ಸೋಸುತ್ತಿದ್ದ ಉದ್ಯಮವನ್ನು ತಿಳಿಸುವ ಶಾಸನಮೊಂದು ದೊರೆತಿದೆ. ಜರಗಿನ ತೆರೆ ಎಂಬ ಕರವನ್ನು ಚಿನ್ನ ಸೋಸುವ ಉದ್ಯಮಕ್ಕೆ ಹಾಕಲಾಗುತ್ತಿತ್ತು. ಅದರ ಮೇಲ್ವಿಚಾರಕ ಜರಗಿನ ತೆರೆಯ ಅಧಿಕಾರಿ. ಗದಗ ತಾಲ್ಲೂಕಿನ ಕುರ್ತುಕೋಟಿಯ ವಿರೂಪಾಕ್ಷ ದೇವಾಲಯದ ಕಂಬದಲ್ಲಿ ದೇವರ ಸೇವೆಗೆಂದು ಜರಗಿನ ತೆರೆಯಲ್ಲಿ ಒಂದು ದೋಣಿಯ ತೆರೆಯನ್ನು ಬಿಡಲಾಗಿದೆ ಎಂದು ನಮೂದಿಸಿದೆ. ಅಲ್ಲಿ ಚಿನ್ನವನ್ನು ಸೋಸುವ ಉದ್ಯಮ ಸಾಕಷ್ಟು ಪ್ರಸಿದ್ಧಿಯಾಗಿತ್ತೆಂಬುದನ್ನು ಇದು ತೋರಿಸುತ್ತದೆ. (ಬೊಂಬಾಯಿ ಕರ್ನಾಟಕ ಶಾಸನ ನಂ. 200, 1926).

ಗದಗಿನ ಕಪ್ಪತ್ತಗುಡ್ಡದ ಪ್ರದೇಶ ಚಿನ್ನಭರಿತವಾದದ್ದು. ಶಿರಹಟ್ಟಿ ತಾಲ್ಲೂಕನ್ನೊಳಗೊಂಡು ದಕ್ಷಿಣದಲ್ಲಿ ತುಂಗಭದ್ರಾ ನದಿಯವರೆಗೂ ಸು. ಅರವತ್ತು ಕಿಮೀ ದೂರ ಹಾಯುವ ಈ ರಮಣೀಯ ಗಿರಿಸಾಲು ಸ್ವರ್ಣಭರಿತ ಶಿಲೆಯಿಂದ ಕೂಡಿದೆ. ಈ ಪ್ರದೇಶದ ಹರವು 50 ಚ.ಕಿಮೀ ಗಿಂತಲೂ ಮಿಗಿಲು. 1840ರಲ್ಲಿ ದೋಣಿ ಮತ್ತು ಸುರಟೂರಿನ ತೊರೆಗಳಿಂದ ವರ್ಷಕ್ಕೆ ಸು. ಆರು ಕಿಗ್ರಾಂ ಚಿನ್ನವನ್ನು ಸೋಸಿ ತೆಗೆಯುತ್ತಿದ್ದ ವರದಿಗಳಿವೆ. ಗದಗಿನ ಕಪ್ಪತ್ತಗುಡ್ಡದ ಸುತ್ತಮುತ್ತ ಪ್ರಾಚೀನರು ಚಿನ್ನವನ್ನು ಅರೆಯಲು ಬಳಸಿದ ಕಲ್ಲುಗಳು, ಒರಳುಕಲ್ಲು, ಕುಟ್ಟುವ ಕಲ್ಲು ಹಲವಾರು ದೊರೆತಿವೆ. ಧಾರವಾಡ ಗೋಲ್ಡ್‌ ಕಂಪನಿ, ಕಳೆದ ಶತಮಾನದ ಕೊನೆಯಲ್ಲಿ 1,70,000 ಪೌಂಡ್ ಬಂಡವಾಳ ಹೂಡಿ ಅತ್ತಿಕಟ್ಟೆ ಬಳಿ ಗಣಿ ತೋಡಿತು. ಅತ್ತಿಕಟ್ಟೆಯ ದಕ್ಷಿಣದ ಸ್ವರ್ಣಭರಿತ ಬೆಣಚು ಸಿರವನ್ನು ಸಾಂಗ್ಲಿ ಗೋಲ್ಡ್‌ ಮೈನ್ಸ್‌ ಕಂಪನಿ ಗಣಿ ಮಾಡಿತು.

ಕೋಲಾರದ ಛಾಂಪಿಯನ್ ರೀಫ್ ಕಂಪನಿ ಗದಗಿನ ಹೊಸೂರು ಬಳಿ ಗಣಿ ಆರಂಭಿಸಿ ಕಬುಲಿಯಾತ್ ಕಟ್ಟೆಯಲ್ಲಿ ಗಣಿ ಕಾರ್ಯಾಚರಣೆ ನಡೆಸಿತು (1911). ಸು. ನೂರ ಅರವತ್ತು ಮೀ ಆಳ ಅಭಿವೃದ್ಧಿ ಪಡಿಸಿತು. ಇದರ ಬಳಿಯೇ ಚಿನ್ನವನ್ನು ಶುದ್ಧೀಕರಿಸುವ ಸಯನೈಡ್ ಸ್ಥಾವರವನ್ನು ತೆರೆದು ಒಟ್ಟಾರೆ 666 ಕಿಗ್ರಾಂ ಚಿನ್ನವನ್ನು ಗದಗಿನ ಚಿನ್ನದ ಗಣಿಗಳು ಉತ್ಪಾದಿಸಿವೆ. ಕಪ್ಪತ್ತಗುಡ್ಡದ ಪಶ್ಚಿಮಕ್ಕೆ ಮಾಲಿಂಗಪುರ, ಹೊಸೂರು, ಶಿರೂರು, ಎಲೆಶಿರೂರು ಈ ಭಾಗಗಳಲ್ಲಿ ಗಣಿ ಕಾರ್ಯಾಚರಣೆ ತೀವ್ರ ಗತಿಯಲ್ಲಿ ನಡೆದಿದೆ. 1939ರಲ್ಲಿ ನಾರಾಯಣದಾಸ್ ಗಿರಿಧರ ದಾಸ್, 1950ರಲ್ಲಿ ಮೆಸರ್ಸ್‌ ಆಕ್ಲೆ ಡಂಕನ್ ಕಂಪನಿ, ಗದಗಿನ ಹೊಸೂರು ಬಳಿಯ ಗಣಿಯನ್ನು ಅಭಿವೃದ್ಧಿ ಮಾಡಿದವು. ಕಬುಲಿಯಾತ್ ಕಟ್ಟೆ ಗಣಿ 527 ಕಿಗ್ರಾಂ ಚಿನ್ನವನ್ನು ಕೊಟ್ಟಿದೆ. ಇದರ ದಕ್ಷಿಣಕ್ಕಿರುವ ಅತ್ತಿಕಟ್ಟೆ ಗಣಿ ಮಾಡುವ ಮೊದಲು ಅಲ್ಲಿನ ಬೆಣಚು ಕಲ್ಲಿನಲ್ಲಿ ಹೊಳೆಯುತ್ತಿದ್ದ ಚಿನ್ನದ ರೇಖುಗಳನ್ನು ಕಾಣಬಹುದಾಗಿತ್ತೆಂದು ಬ್ರೂಸ್ಫುಟ್ ವರದಿ ಮಾಡಿದ್ದಾನೆ. ಇಲ್ಲಿ ಎರಡು ಕೂಪಗಳು 120.4 ಹಾಗೂ 52.75 ಮೀ ಆಳ ಇಳಿದಿವೆ. ಮೂರು ಹಂತದಲ್ಲಿ ಗಣಿ ಕಾರ್ಯಾಚರಣೆ ನಡೆದಿದೆ. ಅತ್ತಿಕಟ್ಟೆಯ ಗಣಿಗೆ ದಕ್ಷಿಣಕ್ಕಿರುವ ಮೈಸೂರು ಗಣಿಗಳಲ್ಲಿ ನಾಲ್ಕು ಕೂಪಗಳನ್ನು 106 ಮೀ ಆಳದವರೆಗೆ ಗಣಿ ಮಾಡಿದ್ದಾರೆ. ಈ ಗಣಿಯೊಳಗೆ ಚಿನ್ನವನ್ನು ಹೊಂದಿರುವ ಮೂರು ಬೆಣಚುಕಲ್ಲಿನ ಸಿರಗಳು ಪತ್ತೆಯಾಗಿವೆ. ಗಣಿಯೊಳಗೆ ಸುರಂಗಗಳೂ ವಿಸ್ತರಿಸಿವೆ. ಸಾಂಗ್ಲಿ ಗೋಲ್ಡ್‌ ಮೈನಿಂಗ್ ಕಂಪನಿ ಗಣಿ ಮಾಡಿರುವ ಸಾಂಗ್ಲಿ ಗಣಿಗಳು ಮೈಸೂರು ಗಣಿಗಳ ದಕ್ಷಿಣಕ್ಕಿವೆ. ಕಬುಲಿಯಾತ್ ಕಟ್ಟೆಯ ಪಶ್ಚಿಮಕ್ಕೆ ಆರು ಕಿಮೀ ದೂರವಿರುವ ಹೊಸೂರು ಛಾಂಪಿಯನ್ ರೀಫ್ ಗಣಿಗಳು ಉತ್ಕೃಷ್ಟ ಚಿನ್ನದ ಅದಿರನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಕಪ್ಪತ್ತಮಲ್ಲಯ್ಯನ ಮಠವಿರುವ ಬಳಿ ಹರಿಯುವ ಹಳ್ಳದಲ್ಲಿ ಹಾಗೂ ಸುರಟೂರಿನ ಬಳಿ ಜಾಲಗಾರರ ತಂಡೋಪತಂಡಗಳು 1874ರಲ್ಲೇ ಚಿನ್ನವನ್ನು ದೊಡ್ಡ ಪ್ರಮಾಣದಲ್ಲಿ ಸೋಸುತ್ತಿದ್ದವು. ಇದರಂತೆ ಸುರಟೂರು ದೋನಿ, ಜೆಲಿಗಾಂ ಮುಂತಾದ ಕಪ್ಪತ್ತಗುಡ್ಡದ ಪಶ್ಚಿಮ ಇಳಿಜಾರಿನ ತೊರೆಗಳಲ್ಲಿ ಮೆಕ್ಕಲು ಚಿನ್ನ ಧಾರಾಳವಾಗಿ ದೊರೆತಿದೆ. ಗದುಗಿನ ಮೈಸೂರು ಗಣಿಯನ್ನು ಹಟ್ಟಿ ಚಿನ್ನದ ಕಂಪನಿ ಸಾಂಗ್ಲಿ ಗಣಿಗಳನ್ನು ರಾಷ್ಟ್ರೀಯ ಖನಿಜಾಭಿವೃದ್ಧಿ ಕಾರ್ಪೊರೇಷನ್, ಹೊಸೂರು ಗಣಿಗಳನ್ನು ಭಾರತ ಗೋಲ್ಡ್‌ ಮೈನಿಂಗ್ ಕಂಪನಿ ಈಗ ಅಭಿವೃದ್ಧಿ ಪಡಿಸುತ್ತಿವೆ.

ಸ್ವರ್ಣ ಸಿರಗಳು[ಸಂಪಾದಿಸಿ]

ಗದಗಿನ ಪದರ ಶಿಲಾ ಜಾಡಿನಲ್ಲಿ ಪ್ರಮುಖವಾಗಿ ಮೂರು ಸಿರಗಳು ಸ್ವರ್ಣಭರಿತವಾಗಿವೆ. ಪಶ್ಚಿಮ ಸಿರ, ಮಧ್ಯ ಹಾಗೂ ಪೂರ್ವ ಸಿರ ಸಮೂಹಗಳು. ಇವುಗಳ ಪೈಕಿ ಪಶ್ಚಿಮ ಸಿರ ರೂಪಾಂತರಿತ ಬಸಾಲ್ಟ್‌ ಮತ್ತು ಆಮ್ಲೀಯ ಜ್ವಾಲಾಮುಖಿ ಶಿಲೆಯಲ್ಲಿದೆ. ಮಧ್ಯದ ಸಿರ ಜ್ವಾಲಾಮುಖಿ ಶಿಲೆ ಮತ್ತು ರೂಪಾಂತರಿತ ಜಲಜ ಶಿಲೆಗಳ ಸಂಪರ್ಕ ಭಾಗದಲ್ಲಿದೆ. ಪೂರ್ವ ಸಿರ ಸಂಪೂರ್ಣವಾಗಿ ಗ್ರೆವೇಕ್ ಎಂಬ ಜಲಜ ಶಿಲೆಗಳಲ್ಲಿ ನೆಲೆಯಾಗಿದೆ. ಈ ಎಲ್ಲ ಸಿರಗಳ ಒಟ್ಟು ಉದ್ದ 32 ಕಿಮೀ.

ಪಶ್ಚಿಮ ಸಿರ ಸಮೂಹದಲ್ಲಿ ಹೊಸೂರು, ಛಾಂಪಿಯನ್, ಎಲ್ಸಿರೂರು, ವೆಂಕಟಾಪುರ ಗಣಿಗಳಿವೆ. ಮಧ್ಯದ ಸಿರದಲ್ಲಿ ಕಬುಲಿಯಾತ್ ಕಟ್ಟೆ, ಅತ್ತಿ ಕಟ್ಟೆ, ಸಾಂಗ್ಲಿ, ಮೈಸೂರು ಗಣಿಗಳಿವೆ. ಪೂರ್ವ ಸಿರದಲ್ಲಿ ಸಂಕತೊಡಕ ಗಣಿ ಇದೆ. ಈ ಪೈಕಿ ಹೊಸೂರು ಛಾಂಪಿಯನ್ ಸಿರ 4.238 ಟನ್ನು ಚಿನ್ನವಿರುವ 1630 ದಶಲಕ್ಷ ಟನ್ನು ಅದಿರನ್ನು. ಮೈಸೂರು ಗಣಿ 0.690 ಟನ್ನು ಚಿನ್ನವಿರುವ 0.230 ದಶಲಕ್ಷ ಟನ್ನು ಅದಿರನ್ನು, ಸಾಂಗ್ಲಿ ಗಣಿ 4.143 ಟನ್ನು ಚಿನ್ನವಿರುವ 1.099 ದಶಲಕ್ಷ ಟನ್ನು ಅದಿರನ್ನು ಹೊಂದಿರುವುದಾಗಿ ಪರಿಶೋಧನೆಗಳಿಂದ ಖಚಿತವಾಗಿದೆ. ಪ್ರಮುಖ ಚಿನ್ನದ ಜಾಡುಗಳಲ್ಲದೆ ಕರ್ನಾಟಕದಲ್ಲಿ ಕಂಡು ಬಂದಿರುವ, ಆಧುನಿಕ ಖನಿಜ ಪರಿಶೋಧಕರ ಗಮನ ಸೆಳೆದಿರುವ ಕೆಲವು ಪ್ರಾಚೀನ ಗಣಿಗಳ ಸಂಕ್ಷಿಪ್ತ ವಿವರಣೆ:

ಬೆಳ್ಳಾರ ಚಿನ್ನದ ಗಣಿಗಳು[ಸಂಪಾದಿಸಿ]

ತುಮಕೂರು ಜಿಲ್ಲೆಯಲ್ಲಿ ಬೆಳ್ಳಾರ ಗಣಿಗಳು ಮತ್ತು ಅಜ್ಜನಹಳ್ಳಿ ಚಿನ್ನದ ಗಣಿಗಳಿವೆ. ಈ ಎರಡೂ ಗಣಿಗಳನ್ನು ಆಧುನಿಕವಾಗಿಯೂ ಸಾಕಷ್ಟು ಶೋಧಿಸಿ ಚಿನ್ನವನ್ನು ಪಡೆಯಲಾಗಿದೆ.

ಬೆಳ್ಳಾರ ಗಣಿ ಇರುವುದು ಸಿರಾ ಹುಳಿಯಾರು ರಸ್ತೆಯಲ್ಲಿ ಎರಡು ಕಿಲೋ ಮೀಟರು ಈಶಾನ್ಯಕ್ಕೆ. ಸು. ಎರಡು ಸಾವಿರ ವರ್ಷಗಳ ಹಿಂದೆಯೇ ಪ್ರಾಚೀನರು ಇಲ್ಲಿ ಚಿನ್ನಕ್ಕಾಗಿ ಗಣಿ ಮಾಡಿದ್ದಾರೆ ಎಂಬ ಅಭಿಪ್ರಾಯವನ್ನು ಪ್ರಾಚ್ಯ ಸಂಶೋಧಕರು ವ್ಯಕ್ತಪಡಿಸಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಈ ಗಣಿಯನ್ನು ತೋಡಿರುವುದರಿಂದ ಇಂಡಿಯನ್ ಮೈನ್ಸ್‌ ಡೆವಲಪ್ಮೆಂಟ್ ಸಿಂಡಿಕೇಟ್ ಎಂಬ ಗಣಿಗಾರಿಕೆ ಸಂಸ್ಥೆ 1900-08ರ ನಡುವೆ ಮತ್ತಷ್ಟು ಗಣಿ ಕಾರ್ಯ ಮಾಡಿತು. ಬೆಳ್ಳಾರ ಸಿರದಲ್ಲಿರುವ ಕೂಪಗಳು 70 ಮೀ ಆಳಕ್ಕೆ ಇಳಿದಿವೆ. ಕೆರೆಯ ಸಿರದಲ್ಲಿ ಇವುಗಳ ಆಳ 122 ಮೀ.

ಹಳೆಯ ಗಣಿಗಳನ್ನು ಆಧರಿಸಿ ಮೈಸೂರು ಭೂವಿಜ್ಞಾನ ಇಲಾಖೆ 1944-54ರ ವರೆಗೆ ಇಲ್ಲಿ ತೀವ್ರ ಪರಿಶೋಧನಾ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿತು. ಕೆರೆಯ ಸಿರವನ್ನು ಎರಡು ಹಂತಗಳಲ್ಲಿ ಶೋಧಿಸಿ ಬೆಣಚು ಎಳೆಯನ್ನು ಛೇದಿಸಿದರೂ ಉತ್ತಮ ದರ್ಜೆಯ ಅದಿರು ದೊರೆಯಲಿಲ್ಲ. 1954ರಲ್ಲಿ ಜಾನ್ ಟೇಲರ್ ಕಂಪನಿ ಇಲ್ಲಿನ ಗಣಿಗಾರಿಕೆ ಲಾಭದಾಯಕವಲ್ಲವೆಂದು ವರದಿ ಮಾಡಿತು. ಮತ್ತೆ ದೊಡ್ಡ ಪ್ರಮಾಣದ ಗಣಿಗಾರಿಕೆ ಇಲ್ಲಿ ಮುಂದುವರಿಯಲಿಲ್ಲ. 1944-54ರ ವರೆಗೆ ಬೆಳ್ಳಾರದ ಚಿನ್ನದ ಗಣಿಗಳು 62 ಕಿಗ್ರಾಂ ಚಿನ್ನವನ್ನು ಉತ್ಪಾದಿಸಿದೆ. ಹಿಂದೆ ಗಣಿ ಮಾಡಿ ವ್ಯರ್ಥ ಪದಾರ್ಥವೆಂದು ಶೇಖರಿಸಿದ್ದ ಶಿಲಾ ಪುಡಿಯಲ್ಲಿ ಸಾಕಷ್ಟು ಚಿನ್ನವಿತ್ತು. ಅದನ್ನು ಜಾಲಿಸಿ 1000 ತೊಲ ಚಿನ್ನವನ್ನು ಗಣಿ ಇಲಾಖೆ ಸಂಗ್ರಿಹಿಸಿತ್ತು.

ಬೆಳ್ಳಾರದ ಗಣಿಗಳೂ ಕೂಡ ಚಿತ್ರದುರ್ಗ ಹಸುರು ಪದರ ಶಿಲಾವಲಯದ ಮಧ್ಯ ಇವೆ. ಅದೇ ಜಾಡಿನಲ್ಲಿ ಉತ್ತರಕ್ಕೆ ಆನೆಸಿದ್ರಿ ಎಂಬ ಬಳಿಯೂ ಪುರಾತನ ಚಿನ್ನದ ಗಣಿಗಳಿವೆ. ಈ ವಲಯ ಸಾಕಷ್ಟು ಬಿರುಕಾಗಿದ್ದು ಅಲ್ಲಿ ಚಿನ್ನ ಸಂಗ್ರಹಣೆಗೆ ಅನುಕೂಲವಾಗಿದೆ.

ಅಜ್ಜನಹಳ್ಳಿ ಗಣಿಗಳು[ಸಂಪಾದಿಸಿ]

ಬೆಳ್ಳಾರದಿಂದ 12 ಕಿಮೀ ಉತ್ತರಕ್ಕಿರುವ ಅಜ್ಜನಹಳ್ಳಿ ಗಣಿ ಕೂಡ ಉತ್ತರ ದಕ್ಷಿಣವಾಗಿ ವಿಸ್ತರಿಸಿರುವ ಛಿದ್ರ ವಲಯದಲ್ಲಿ ನೆಲೆಯಾಗಿದೆ. ಚಿತ್ರದುರ್ಗದ ಹಸುರು ಶಿಲಾ ಪಟ್ಟಿಯಲ್ಲಿರುವ ಪಟ್ಟೆ ರೂಪದ ಕಬ್ಬಿಣ ಶಿಲೆಯಲ್ಲಿ ಚಿನ್ನ ದೊರೆಯುವುದು ಈ ಗಣಿಗಳ ವಿಶೇಷ. ಬರಿಗಣ್ಣಿಗೆ ಇಲ್ಲಿ ಚಿನ್ನ ಕಾಣಿಸುವುದಿಲ್ಲ. ಆದರೂ ಪ್ರಾಚೀನರು ಇವು ಸ್ವರ್ಣಭರಿತ ಶಿಲೆಗಳೆಂದು ಗುರುತಿಸಿ ಗಣಿಗಳನ್ನು ತೋಡಿ ಚಿನ್ನವನ್ನು ಸಂಗ್ರಹಸಿದ್ದಾರೆ. ಈ ಪ್ರಾಚೀನ ಗಣಿಗಳನ್ನು ಆಧರಿಸಿ ಇಂಡಿಯನ್ ಮೈನ್ಸ್‌ ಡೆವಲಪ್ಮೆಂಟ್ ಸಿಂಡಿಕೇಟ್ ಸಂಸ್ಥೆ ಅನೇಕ ಸುರಂಗಗಳನ್ನು ತೆಗೆದು 1907-08ರ ವರೆಗೆ ಗಣಿ ಕಾರ್ಯಾಚರಣೆ ನಡೆಸಿತು. ಇಲ್ಲಿ 90 ಮೀ ಆಳದವರೆಗೆ ಗಣಿಗಳು ಇಳಿದಿವೆ. ಗವಿ ಗುಡ್ಡ ಎಂಬ ಬೆಟ್ಟದ ಮೇಲೆ ಚಿನ್ನದ ಗಣಿಗಳಿವೆ. ಯುರೋಪಿನ ಸಂಸ್ಥೆಗಳು ಪರಿಶೋಧಿಸಿ ಟನ್ನಿಗೆ 13.6 ಗ್ರಾಂ ಚಿನ್ನವಿರುವ ಅನೇಕ ವಲಯಗಳನ್ನು ಇಲ್ಲಿ ಗುರುತಿಸಿದುವು. ಛಿದ್ರವಾಗಿರುವ ಪಟ್ಟೆ ಕಬ್ಬಿಣ ಶಿಲೆಯಲ್ಲಿ ಬೆಣಚಿನ ಸಿರಗಳು ಮತ್ತು ಕಾರ್ಬೊನೇಟ್ ಅಂಶವಿರುವ ಭಾಗಗಳು ಸ್ವರ್ಣಭರಿತವಾಗಿವೆ. ಇಲ್ಲಿ ಚಿನ್ನವಿರುವ ಸು. ಆರು ಸಮಾನಾಂತರ ವಲಯಗಳನ್ನು ಗುರುತಿಸಲಾಗಿದೆ. ಇಲ್ಲಿ ಚಿನ್ನವು ಪಿರ್ಹೋಟೈಟ್, ಆರ್ಸೆನೋ ಪೈರೈಟ್, ಚಾಲ್ಕೋಪೈರೈಟ್ ಖನಿಜಗಳೊಂದಿಗೆ ದೊರೆಯುತ್ತದೆ. ಭಾರತೀಯ ಭೂವಿಜ್ಞಾನ ಸರ್ವೇಕ್ಷಣ ಸಂಸ್ಥೆ ಈಚೆಗೆ ದೊಡ್ಡ ಪ್ರಮಾಣದಲ್ಲಿ ಇಲ್ಲಿ ಪರಿಶೋಧನೆ ನಡೆಸಿ, ಟನ್ನಿಗೆ 3.5 ಗ್ರಾಂ ಚಿನ್ನವಿರುವ 30 ಲಕ್ಷ ಟನ್ನು ಚಿನ್ನದ ಅದಿರಿರುವುದಾಗಿ ವರದಿ ಮಾಡಿದೆ. ಹಟ್ಟಿ ಚಿನ್ನದ ಕಂಪನಿ ಪ್ರಯೋಗಾರ್ಥವಾಗಿ ಇಲ್ಲಿ ತೆರೆದ ಗಣಿ ಕಾರ್ಯಾಚರಣೆ ಕೈಗೊಂಡಿದೆ. ಇಲ್ಲಿನ ಅದಿರನ್ನು ಚಿತ್ರದುರ್ಗದ ತಾಮ್ರದ ಅದಿರು ಸಂಸ್ಕರಿಸುವ ಘಟಕಕ್ಕೆ ಕಳಿಸಿ ಚಿನ್ನವನ್ನು ಸಂಸ್ಕರಣೆ ಮಾಡಲಾಗುತ್ತಿದೆ.

ಕೆಂಪಿನಕೋಟೆ ಗಣಿಗಳು[ಸಂಪಾದಿಸಿ]

ಹಾಸನ ಜಿಲ್ಲೆಯ ನುಗ್ಗೇಹಳ್ಳಿ ಪದರು ಶಿಲಾ ಪಟ್ಟಿಯಲ್ಲಿ ದಕ್ಷಿಣದ ತುದಿಯಲ್ಲಿರುವ ಕೆಂಪಿನಕೋಟೆ ಗ್ರಾಮದ ಬಳಿ ಪುರಾತನ ಚಿನ್ನದ ಗಣಿಗಳಿವೆ. ಹಳೆಯ ಗಣಿಗಳ ಪೈಕಿ ಒಂದು 200 ಮೀ ಉದ್ದವಿದೆ. ಏಷ್ಯದ ಪ್ರಾಚೀನ ಚಿನ್ನದ ಗಣಿಗಳ ಪೈಕಿ ಇದೇ ಅತ್ಯಂತ ದೊಡ್ಡದು ಎಂದು ರಾಬರ್ಟ್ ಬ್ರೂಸ್ಫುಟ್ ಎಂಬ ವಿಜ್ಞಾನಿ ಈ ಭಾಗವನ್ನು ಸಮೀಕ್ಷೆ ಮಾಡಿ ವರದಿ ಮಾಡಿದ (1986). ಈ ಗಣಿಗಳ ಕುರಿತು ಮೊದಲು ವರದಿ ಮಾಡಿದ ಲ್ಯಾವೆಲ್ಲರ್ ಎಂಬ ವಿಜ್ಞಾನಿ ಬಹುಶಃ 17ನೆಯ ಶ. ಚನ್ನರಾಯಪಟ್ಟಣವನ್ನು ಆಳುತ್ತಿದ್ದ ಪಾಳೆಯಗಾರರು ತಮ್ಮ ಟಂಕಸಾಲೆಗಾಗಿ ಈ ಗಣಿಗಳನ್ನು ನಿರ್ವಹಿಸುತ್ತಿದ್ದರೆಂದು ವರದಿ ಮಾಡಿದ್ದಾನೆ. 1893-96ರವರೆಗೆ ಕೆಂಪಿನಕೋಟೆ ಗೋಲ್ಡ್‌ ಪಿsೕಲ್ಡ್‌ ಎಂಬ ಕಂಪನಿ 155 ಮೀ ಆಳದವರೆಗೆ ಕೂಪವನ್ನು ತೋಡಿತ್ತು. ಇಲ್ಲಿ ಹಾರ್ನ್‌ಬ್ಲೆಂಡ್ ಮತ್ತು ಅಲ್ಟ್ರಾಮೆಪಿsಕ್ ಶಿಲೆಗಳ ಬೆಣಚಿನ ಎಳೆಗಳಲ್ಲಿ ಚಿನ್ನ ದೊರೆಯುತ್ತದೆ. ಹೆಚ್ಚು ಸಲ್ಫೈಡ್ ಖನಿಜಗಳು ಬೆರೆತಿಲ್ಲದಿರುವುದರಿಂದ ಚಿನ್ನವನ್ನು ಪ್ರತ್ಯೇಕಿಸುವುದು ಸುಲಭ. 1886ರಲ್ಲಿ ಪ್ರಾಯೋಗಿಕವಾಗಿ 1000 ಟನ್ನು ಅದಿರನ್ನು ಅರೆದು, 1440 ಗ್ರಾಂ ಚಿನ್ನವನ್ನು ಸಾರೀಕರಿಸಲಾಗಿತ್ತು. 1890ರಲ್ಲಿ ಆರ್ಥಿಕ ಕೊರತೆಯಿಂದಾಗಿ ಗಣಿಯನ್ನು ಮುಚ್ಚಬೇಕಾಯಿತು. ಇತ್ತೀಚೆಗೆ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆ ಮತ್ತು ಖನಿಜ ಪರಿಶೋಧನಾ ನಿಗಮ, ಸ್ವರ್ಣಭರಿತ ಸಿರಗಳ ವ್ಯಾಪ್ತಿಯನ್ನು ಅರಿಯಲು ಪರಿಶೋಧನಾ ಬೈರಿಗೆ ಕಾರ್ಯಾಚರಣೆ ನಡೆಸಿವೆ. ಕೆಂಪಿನಕೋಟೆ ಚಿನ್ನದ ಗಣಿಗಳಲ್ಲಿ ಟನ್ನಿಗೆ 7.46 ಗ್ರಾಂ ಚಿನ್ನವಿರುವ 3,32,000 ಟನ್ನು ಅದಿರು ಇದೆ ಎಂದು ವರದಿ ಮಾಡಿದೆ.

ಅಂಬಳೆ- ವಳಗೆರೆ ಗಣಿಗಳು[ಸಂಪಾದಿಸಿ]

ಮೈಸೂರಿನ ನಂಜನಗೂಡು ತಾಲ್ಲೂಕಿನಲ್ಲಿರುವ ಅಂಬಳೆ-ವಳಗೆರೆ ಗಣಿಗಳು, ಗಾರ್ನೆಟ್ ಖನಿಜವಿರುವ ಆಂಪಿsಬೊಲೈಟ್ ಎಂಬ ರೂಪಾಂತರಿತ ಶಿಲೆಗಳಲ್ಲಿವೆ. ಅಂಬಳೆಯ ಬಳಿ ಪುರಾತನ ಗಣಿಗಳಿರುವುದನ್ನು 1895ರಲ್ಲಿ ಪತ್ತೆಹಚ್ಚಲಾಯಿತು. 1899-01ರ ನಡುವೆ ಇಲ್ಲಿ ಕೂಪ ತೋಡಿ 60 ಮೀ ಆಳಕ್ಕೆ ಗಣಿಗಳನ್ನು ಮಾಡಿದ್ದಾರೆ. ಬೆಣಚು ಸಿರದಲ್ಲಿ ಚಿನ್ನದ ಎಳೆಗಳಿದ್ದು, ಟನ್ನಿಗೆ 0.8-7.7 ಗ್ರಾಂ ವರೆಗೆ ಲೋಹವನ್ನು ನೀಡಿದೆ. ಗಣಿ ಕಾರ್ಯಾಚರಣೆಯನ್ನು ಮತ್ತೆ ಮುಂದುವರಿಸಲಿಲ್ಲ.

ಅಂಬಳೆಯ ಉತ್ತರಕ್ಕೆ ಅದೇ ಜಾಡಿನಲ್ಲಿ ನಾಲ್ಕು ಕಿಮೀ ದೂರದಲ್ಲಿರುವ ವಳಗೆರೆ ಬಳಿ ಬಹು ದೊಡ್ಡ ತೆರೆದ ಗಣಿ ಇದೆ. ಇಲ್ಲಿ 30 ಮೀ ಆಳಕ್ಕೆ ತೋಡಿದ ಕೂಪದಲ್ಲಿ ಉತ್ಕೃಷ್ಟ ದರ್ಜೆಯ ಅದಿರು ದೊರೆತಿತ್ತು. 1905ರಲ್ಲಿ ಈ ಗಣಿಯನ್ನು ನಂಜನಗೂಡು ಗೋಲ್ಡ್‌ ಕಂಪನಿ ವಹಿಸಿಕೊಂಡಿತ್ತು. ಹೆಚ್ಚು ಸಲ್ಫೈಡ್ ಖನಿಜವಿರುವ ಸಿರ ಆಳದಲ್ಲಿ ಸುಮಾರು ಏಳು ಮೀಟರು ಅಗಲವಾಗಿದೆ ಎಂದು ತಿಳಿದು ಬಂದಿದೆ. ಟನ್ನಿಗೆ 9.6 ಗ್ರಾಂ ಚಿನ್ನವಿರುವ ಅದಿರನ್ನು ಹಿಂದೆ ಇಲ್ಲಿ ಸಂಸ್ಕರಿಸಲಾಗಿದೆ. ಭಾರತೀಯ ಭೂವೈಜ್ಞಾನಿಕ ಸಂಸ್ಥೆ ಇಲ್ಲಿ ವ್ಯಾಪಕ ಗಣಿ ಪರಿಶೋಧನೆಯನ್ನು ಕೈಗೆತ್ತಿಕೊಂಡಿದೆ.

ಸಿದ್ದರಹಳ್ಳಿ[ಸಂಪಾದಿಸಿ]

ಚಿಕ್ಕಮಗಳೂರು ಜಿಲ್ಲೆಯ ಸಿದ್ದರಹಳ್ಳಿಯ ಬಳಿ, ಅಷ್ಟೇನೂ ಎತ್ತರವಲ್ಲದ ಗುಡ್ಡದ ಮೇಲೆ 1907-09ರ ನಡುವೆ ಚಿನ್ನಕ್ಕಾಗಿ ಕೂಪ ತೋಡಿದ್ದಾರೆ. ಕ್ಲೋರೈಟ್ ಪದರ ಶಿಲೆಯನ್ನು ಹಾಯುವ ಬೆಣಚು ಕಲ್ಲಿನಲ್ಲಿ ಸು. 30 ಮೀ ಆಳದಲ್ಲಿ ತೋಡಿರುವ ಅಡ್ಡ ಸುರಂಗದಲ್ಲಿ ಸ್ವರ್ಣಭರಿತ ಶಿಲೆಗಳು ದೊರೆತಿವೆ. ಒಂದು ಟನ್ನು ಅದಿರಿಗೆ ಆಗಿನ ವರದಿಯಂತೆ 14.7 ಗ್ರಾಂ ಚಿನ್ನವಿದೆ ಎಂದು ತಿಳಿದುಬಂದಿದೆ. ಆಳ ಇಳಿದಂತೆ ಈ ಸ್ವರ್ಣಸಿರ ಕಿರಿದಾಗುತ್ತ ಬಂದಿದ್ದರಿಂದ ಗಣಿ ಕಾರ್ಯಾಚರಣೆಯನ್ನು ನಿಲ್ಲಿಸಬೇಕಾಯಿತು (1913).

ನಂದಿ ಮತ್ತು ಸಿದ್ದರಹಳ್ಳಿಯ ನಡುವೆ ಎರಡು ಪ್ರಾಚೀನ ಚಿನ್ನದ ಗಣಿಗಳಿವೆ. ಒಂದು 40 ಮೀ ಇನ್ನೊಂದು 70 ಮೀ ಆಳವಿದೆ. ಅಷ್ಟೇನೂ ಉತ್ಕೃಷ್ಟ ದರ್ಜೆಯ ಅದುರು ದೊರೆಯದ ಕಾರಣ ಗಣಿ ಕಾರ್ಯಾಚರಣೆ ಉತ್ತೇಜನಕಾರಿಯಾಗಲಿಲ್ಲ.

ಅಜ್ಜಂಪುರದ ಪಶ್ಚಿಮಕ್ಕೆ ನಾಲ್ಕು ಕಿಮೀ ದೂರದಲ್ಲಿ ತರೀಕೆರೆ ಗ್ರಾನೈಟ್ ಇರುವ ಅಂಚಿನಲ್ಲಿ ಕ್ಲೋರೈಟ್ ಪದರ ಶಿಲೆಯಲ್ಲಿ ಎರಡು ಪ್ರಾಚೀನ ಗಣಿಗಳಿವೆ. ಒಂದರ ಹೆಸರು ಹೊನ್ನದೋಣಿ, ಇನ್ನೊಂದು ಹಕ್ಕಿದೋಣಿ. ನೂರು ಮೀ ಆಳದವರೆಗೆ ತೋಡಿರುವ ಬಾಗಿದ ಕೂಪ ಹಕ್ಕಿ ದೋಣಿಯಲ್ಲಿದೆ. ಹಿಂದೆ ಈ ಗಣಿಗಳಿಂದ ಎಷ್ಟು ಚಿನ್ನ ಉತ್ಪಾದನೆಯಾಗಿದೆ ಎಂಬ ಬಗ್ಗೆ ಸ್ಪಷ್ಟ ವಿವರಗಳಿಲ್ಲ. ಕುದುರೆಕೊಂಡ ಪಲ್ಲವನಹಳ್ಳಿ ಗಣಿಗಳು : ಹೊನ್ನಾಳಿ-ಸವಳಂಗ ಹೆದ್ದಾರಿಯಲ್ಲಿರುವ ಕುದುರೆಕೊಂಡ ಮತ್ತು ಪಲ್ಲವನಹಳ್ಳಿ ಸುತ್ತಮುತ್ತ ಮೆಕ್ಕಲು ಚಿನ್ನ ದೊರೆಯುವುದರ ಬಗ್ಗೆ ಹಿಂದಿನಿಂದಲೂ ಸಾಕಷ್ಟು ವರದಿಗಳಿವೆ. 1880-85ರ ವರೆಗೆ ಈ ಭಾಗದಲ್ಲಿ 80 ಮೀ ಆಳದ ಕೂಪ ತೋಡಿ ಚಿನ್ನದ ಸಿರವನ್ನು ಗಣಿ ಮಾಡಲಾಗಿದೆ. ಹೊನ್ನಾಳಿ ಸ್ವರ್ಣಕ್ಷೇತ್ರ ಎಂದೇ ಈ ಭಾಗಕ್ಕೆ ಹೆಸರು. ಹೊನ್ನಾಳಿ ಗ್ರಾನೈಟ್ ಮತ್ತು ಈಶಾನ್ಯದಲ್ಲಿ ಸೌಲಂಗ ಗ್ರಾನೈಟ್ ನಡುವಿನ ಕ್ಲೋರೈಟ್ ಪದರ ಶಿಲೆಯಲ್ಲಿ ಸ್ವರ್ಣ ಸಿರಗಳು ಹಾಯ್ದಿವೆ. ಕುದುರೆಕೊಂಡ, ಪಲ್ಲವನಹಳ್ಳಿ, ಸುರಹೊನ್ನೆ, ನ್ಯಾಮತಿ ಭಾಗಗಳಲ್ಲಿ ಮಣ್ಣಿನಲ್ಲಿ ತೇಲಿದಂತೆ ಆಗಾಗ ಚಿನ್ನದ ಗಟ್ಟಿ ದೊರೆಯುತ್ತವೆ. ಕುದುರೆಕೊಂಡದ ಗಣಿಗಳನ್ನು ಎರಡನೇ ಮಹಾಯುದ್ಧದ ಸಮಯದಲ್ಲಿ ಮುಚ್ಚಬೇಕಾಯಿತು.

ಹೊನ್ನೇಹಟ್ಟಿ ಗಣಿಗಳು[ಸಂಪಾದಿಸಿ]

ಭದ್ರಾವತಿಯ ದಕ್ಷಿಣಕ್ಕೆ ಭದ್ರಾ ನದಿಗೆ ಸಮೀಪವಿರುವ ಹೊನ್ನೇಹಟ್ಟಿ ಹೆಸರೇ ತಿಳಿಸುವಂತೆ ಹೊನ್ನಿನ ಕ್ಷೇತ್ರ. 1887-90ರ ವರೆಗೆ ಇಲ್ಲಿ ಚಿನ್ನಕ್ಕಾಗಿ ವ್ಯಾಪಕ ಪರಿಶೋಧನೆ ನಡೆಸಲಾಗಿದೆ. ಬೆಣಚು ಸಿರಗಳಲ್ಲಿ ಚಿನ್ನದೊಂದಿಗೆ ಪೈರೈಟ್ ಖನಿಜ ಬೆರೆತಿದ್ದು ಹೊನ್ನೇಗುಡ್ಡದ ಮೇಲೆ ಕೂಪಗಳನ್ನು ತೋಡಲಾಗಿದೆ. ಸ್ವರ್ಣಭರಿತ ಸಿರದಿಂದ ಸಂಗ್ರಹಿಸಿದ ಮಾದರಿಯಲ್ಲಿ ಟನ್ನಿಗೆ 4.3 ಗ್ರಾಂ ಚಿನ್ನವಿದ್ದುದಾಗಿ ವರದಿಗಳು ತಿಳಿಸುತ್ತವೆ. ಬೆಟ್ಟದ ಪಾದದಲ್ಲೂ ಅನೇಕ ಪ್ರಾಚೀನ ಗಣಿಗಳಿವೆ. ಆದರೆ ಇವು ಅಷ್ಟೇನೂ ಆಳವಲ್ಲ. ಸಣ್ಣ ಪ್ರಮಾಣದ ಗಣಿ ಕಾರ್ಯಾಚರಣೆಗೆ ಇವು ಯುಕ್ತವೆಂದು ತಜ್ಞರು ಶಿಫಾರಸು ಮಾಡಿದ್ದಾರೆ. ಜಾಲಗಾರ ಗುಂಡಿ : ಸ್ಥಳನಾಮಗಳನ್ನು ಆಧಾರವಾಗಿಟ್ಟುಕೊಂಡು ಕೆಲವು ಸ್ಥಳಗಳನ್ನು ಪರಿಶೋಧಿಸಿದರೆ ಕರ್ನಾಟಕದ ಬಹಳಷ್ಟು ಸ್ಥಳಗಳಿಗೆ ಯುಕ್ತ ಹೆಸರನ್ನು ಪ್ರಾಚೀನರು ನೀಡಿರುವುದು ಸುಸ್ಪಷ್ಟ. ಇಂಥ ಹೆಸರುಗಳಲ್ಲಿ ಜಾಲಗಾರ ಗುಂಡಿಯೂ ಒಂದು. ಶಿವಮೊಗ್ಗ ಜಿಲ್ಲೆಯ ಈ ಸ್ಥಳ ಮೊದಲಿನಿಂದಲೂ ಚಿನ್ನ ಸೋಸುವ ಉದ್ಯಮದಲ್ಲಿ ಪರಿಚಿತ ಹೆಸರು. ಟಾಲ್ಕ್‌ ಪದರ ಶಿಲೆಯಲ್ಲಿ 70 ಮೀ ಆಳಕ್ಕೆ ತೋಡಿರುವ ಗಣಿಗಳು ಇಲ್ಲಿವೆ. ಈ ಶಿಲೆಗಳನ್ನು ಹಾಯ್ದಿರುವ ಸಿರ ಬೆಣಚುಯುಕ್ತವಾಗಿವೆ. ಇಲ್ಲಿ ಸಣ್ಣ ಪ್ರಮಾಣದ ಗಣಿ ಕಾರ್ಯಾಚರಣೆ ಮಾಡಿದಾಗ ಪ್ರತಿ ಟನ್ನು ಅದಿರಿನಲ್ಲಿ 15.5 ಗ್ರಾಂ ಚಿನ್ನವಿರುವುದಾಗಿ ತಿಳಿಯಿತು (1913). ಸ್ವರ್ಣಸಿರದ ಜೊತೆಗೆ ಕ್ಯಾಲ್ಸೈಟ್, ಕ್ಲೋರೈಟ್, ಪಟ್ಟೆರೂಪದ ಬೆಣಚು ಪದರ ಶಿಲೆ, ಕಬ್ಬಿಣದ ಆಕ್ಸೈಡ್ ಬೆರೆತಿದೆ. ಇದರಲ್ಲಿರುವ ಪೈರೈಟ್ ಖನಿಜದಲ್ಲೂ ಚಿನ್ನವಿರುವುದಾಗಿಯೂ ತಿಳಿದು ಬಂದಿದೆ. ಮೂಕನಗವಿ ಗಣಿಗಳು : ಗುಲ್ಬರ್ಗ ಜಿಲ್ಲೆಯ ಕೃಷ್ಣಾನದಿಯ ಉತ್ತರಕ್ಕೆ ಮತ್ತು ಸುರಪುರದ ಪಶ್ಚಿಮಕ್ಕೆ ಅನೇಕ ಪ್ರಾಚೀನ ಚಿನ್ನದ ಗಣಿಗಳಿವೆ. ಮಂಗಳೂರಿನಿಂದ ವಾಯವ್ಯಕ್ಕೆ ಐದು ಕಿಮೀ ದೂರದಲ್ಲಿರುವ ಮೂಕನಗವಿ ಗಣಿ ತುಂಬ ಪ್ರಸಿದ್ಧ. ಇಲ್ಲಿ, ಛಿದ್ರವಾಗಿರುವ ಆಂಪಿsಬೋಲೈಟ್ ಎಂಬ ರೂಪಾಂತರಿತ ಅಗ್ನಿಶಿಲೆಗಳಲ್ಲಿ ಹಾಯುವ ಬೆಣಚು ಶಿಲೆಗಳಲ್ಲಿ ಚಿನ್ನ ಸಂಗ್ರಹವಾಗಿದೆ. ಚಿನ್ನದೊಡನೆ ಪೈರೈಟ್, ಪಿರ್ಹೋಟೈಟ್ ಮತ್ತು ಆರ್ಸೆನೋಪೈರೈಟ್ ಖನಿಜಗಳು ಬೆರೆತಿವೆ. ಸು. 600 ಮೀ ಉದ್ದದವರೆಗೆ ಸ್ವರ್ಣಸಿರ ವಿಸ್ತರಿಸಿದೆ. 1980-94 ನಡುವೆ ಹಟ್ಟಿ ಚಿನ್ನದ ಗಣಿ ಸಂಸ್ಥೆ ಈ ಭಾಗವನ್ನು ಪರಿಶೋಧಿಸಿ 32,087 ಟನ್ನು ಅದಿರನ್ನು ಸಾಗಿಸಿ ಹಟ್ಟಿಯ ಸ್ಥಾವರದಲ್ಲಿ ಸಂಸ್ಕರಿಸಿ 117.44 ಕಿಗ್ರಾಂ ಚಿನ್ನವನ್ನು ಸಾರೀಕರಿಸಿತು.

ಚಿನ್ನದ ಪರಿಶುದ್ಧತೆ[ಸಂಪಾದಿಸಿ]

ಚಿನ್ನದ ಪರಿಶುದ್ಧತೆಯನ್ನು ಅಳೆಯಲು ಕ್ಯಾರೆಟ್ ಎಂಬ ಮಾನವನ್ನು ಬಳಸುತ್ತೇವೆ. ಗುಲಗಂಜಿಯನ್ನು ನಮ್ಮಲ್ಲಿ ಚಿನ್ನದ ತೂಕ ಮಾಡಲು ಬಹು ಹಿಂದಿನಿಂದಲೂ ಅಕ್ಕಸಾಲಿಗರು ಬಳಸುತ್ತ ಬಂದಿದ್ದಾರೆ. ಮಧ್ಯಯುಗದಿಂದಲೂ ಯುರೋಪಿನಲ್ಲಿ ಕ್ಯಾರೋಬ್ ಮರದ ಬೀಜ ಬಳಸಿ ಚಿನ್ನವನ್ನು ತೂಕ ಮಾಡುತ್ತಿದ್ದುದುಂಟು. ಕ್ಯಾರೆಟ್ ಎಂಬ ಪದ ಇದರಿಂದ ನಿಷ್ಪತ್ತಿಯಾಗಿದೆ. ಕ್ಯಾರೆಟ್ ಎಂದರೆ ಈಗ ಇಷ್ಟು ಗುಲಗಂಜಿ ತೂಕ ಎಂಬ ಅರ್ಥವಲ್ಲ. ಚಿನ್ನದ ಪರಿಶುದ್ಧತೆಯ ಪ್ರಮಾಣ. ಪರಿಶುದ್ಧ ಚಿನ್ನವನ್ನು 24 ಕ್ಯಾರೆಟ್ ಎನ್ನುತ್ತಾರೆ. ಆದರೆ ನಿಸರ್ಗದಲ್ಲೂ ಪರಿಶುದ್ಧ ಚಿನ್ನ ದೊರೆಯುವುದಿಲ್ಲ. ಅಪರಂಜಿ ಚಿನ್ನವೂ 24 ಕ್ಯಾರೆಟ್ ಇರುವುದಿಲ್ಲ. ಸ್ವಲ್ಪ ಪ್ರಮಾಣದ ಇತರ ಲೋಹಗಳೂ ಬೆರೆತಿರುತ್ತವೆ. 24 ಕ್ಯಾರೆಟ್ ಎಂದರೆ 22 ಭಾಗ ಚಿನ್ನ ಉಳಿದ 2 ಭಾಗ ತಾಮ್ರ, ಬೆಳ್ಳಿ, ಸತುವು, ಪ್ಲಾಟಿನಮ್ ಪೆಲ್ಲಾಡಿಯಮ್ ಈ ಯಾವುದೇ ಧಾತುಗಳಿಂದ ಕೂಡಿರಬಹುದು ಇಲ್ಲವೇ ಆಭರಣ ತಯಾರಕರು ಈ ಧಾತುಗಳನ್ನು ಮಿಶ್ರಣ ಮಾಡುತ್ತಾರೆ. ಏಕೆಂದರೆ ಅಪರಂಜಿ ಚಿನ್ನ ತುಂಬ ಮೃದು. ಚಾಕುವಿನಿಂದ ಗೀರಬಹುದು ಅಂತಹ ಚಿನ್ನದಿಂದ ನೇರವಾಗಿ ಆಭರಣ ತಯಾರಿಸಲಾಗುವುದಿಲ್ಲ. ಸಾಮಾನ್ಯವಾಗಿ ಆಭರಣಕ್ಕಾಗಿ 22 ಕ್ಯಾರೆಟ್ ಶುದ್ಧತೆಯ ಚಿನ್ನವನ್ನು ಬಳಸುತ್ತಾರೆ. ಚಿನ್ನದಲ್ಲಿ ಬೆಳ್ಳಿಯ ಪ್ರಮಾಣ ಹೆಚ್ಚಿದಷ್ಟೂ ಅದು ಬಿಳಿ ಚಿನ್ನವಾಗುತ್ತದೆ (ಎಲೆಕ್ಟ್ರಮ್) ಹಾಗೆಯೇ ಬಿಸ್ಮತ್ ಬೆರೆತಿದ್ದರೆ ಅದು ಕಪ್ಪು ಚಿನ್ನ. (ಬಿ.ಸಿ.ಕೆ.)