ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಸ್ತೂರಿ ರಂಗ ಐಯ್ಯಂಗಾರ್

ವಿಕಿಸೋರ್ಸ್ದಿಂದ

ಕಸ್ತೂರಿ ರಂಗ ಐಯ್ಯಂಗಾರ್

 1859-1923. ಭಾರತೀಯ ಪತ್ರಿಕೋದ್ಯಮಿ, ವಕೀಲ, ರಾಜಕಾರಣಿ. ತಂಜಾವೂರಿನ ಅರಸರ ಖಾಸಾಸೇವೆಯಲ್ಲಿದ್ದ ಶೇಷ ಐಯಂಗಾರ್ಯರ ಮೂರನೆಯ ಮಗ. ಜನನ: 1859ರ ಡಿಸೆಂಬರ್ 15. ಪ್ರಾಥಮಿಕ ವಿದ್ಯಾಭ್ಯಾಸ ಇಣಂಬೂರು ಮತ್ತು ಕಪಿಸ್ಥಳಂ ಗ್ರಾಮಗಳಲ್ಲಿ. ಕುಂಭಕೋಣಂ ಪ್ರಾಂತೀಯ ಶಾಲೆಯಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆ ಮಾಡಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜು ಸೇರಿ 1879 ರಲ್ಲಿ ಬಿ.ಎ. ಪಧವೀಧರರಾದರು. 1881 ರಲ್ಲಿ ಸಬ್-ರಿಜಿಸ್ಟ್ರಾರ್ ಕೆಲಸಕ್ಕೆ ಸೇರಿ ಅಲ್ಲಿದ್ದುಕೊಂಡೇ ಬಿ.ಎಲ್. ಪರೀಕ್ಷೆ ಮಾಡಿದರು. ತರುವಾಯ ಕೆಲಸಕ್ಕೆ ರಾಜಿನಾಮೆ ಕೊಟ್ಟು, ಪ್ರಸಿದ್ಧ ವಕೀಲರಾಗಿದ್ದ ವಿ. ಭಾಷ್ಯಂ ಐಯಂಗಾರ್ಯರಲ್ಲಿ ವಕೀಲಿ ತರಬೇತಿ ಪಡೆಯಲು ಮದ್ರಾಸಿನಲ್ಲಿ ನಿಂತರು. ಅಲ್ಲಿದ್ದ ಕಾಲದಲ್ಲಿ ಅವರಿಗೆ ರಾಜಕೀಯದಲ್ಲಿ ಅಭಿರುಚಿ ಹುಟ್ಟಿತು. 1884ರಲ್ಲಿ ಸ್ಥಾಪನೆಯಾದ ಮದ್ರಾಸು ಮಹಾಜನ ಸಭೆಯ ನಿರ್ಮಾಪಕರಲ್ಲಿ ಅವರೂ ಒಬ್ಬರು. ವೈಸ್‍ರಾಯ್ ರಿಪನ್ ಕಾಲದಲ್ಲಿ ಈ ಸಂಸ್ಥೆ ಜನಾಭಿಪ್ರಾಯವನ್ನು ವ್ಯಕ್ತಪಡಿಸುವುದರಲ್ಲಿ ಬಲಯುತವಾಗಿತ್ತು.

 ಕಸ್ತೂರಿ ರಂಗ ಐಯಂಗಾರ್ಯರು ವಕೀಲವೃತ್ತಿ ನಡೆಸಲು ಕೊಯಮತ್ತೂರಿನಲ್ಲಿ ನೆಲಸಿದರು. ಹಿಂದೂ ಯುವಕನೊಬ್ಬನನ್ನು ಮತಾಂತರಗೊಳಿಸಿದ ಸಂಬಂಧವಾದ ಪಾದ್ರಿ ಮೊಕದ್ದಮೆಯಲ್ಲಿ ಅವರು ಆಪಾದಿತರನ್ನು ಬಯಲಿಗೆಳೆದು ತಮ್ಮ ವೃತ್ತಿಯಲ್ಲಿ ಖ್ಯಾತಿ ಗಳಿಸಿದರು. 9 ವರ್ಷ ಕೊಯಮತ್ತೂರಿನಲ್ಲಿದ್ದು, ಹೈಕೋರ್ಟಿನಲ್ಲಿ ವೃತ್ತಿ ಮುಂದುವರಿಸಲು 1894ರಲ್ಲಿ ಮದ್ರಾಸಿಗೆ ತೆರಳಿದರು; ಅಲ್ಲಿ ರಾಜಕೀಯದಲ್ಲಿ ಸಿಲುಕಿದ್ದರಿಂದ ಅವರಿಗೆ ವೃತ್ತಿಯನ್ನು ವೃದ್ಧಿಗೊಳಿಸಲಾಗಲಿಲ್ಲ. ತಮ್ಮ ಅಣ್ಣ ದಿವಾನ್ ಬಹದ್ದೂರ್ ಶ್ರೀನಿವಾಸರಾಘವರನ್ನು ಬರೋಡ ಮಹಾರಾಜರು ದಿವಾನರನ್ನಾಗಿ ನೇಮಿಸಿಕೊಂಡ ಎರಡು ಸಂದರ್ಭಗಳಲ್ಲೂ ಕಸ್ತೂರಿ ರಂಗ ಐಯಂಗಾರ್ಯರು ಅಣ್ಣನ ಪರವಾಗಿ ಮಾತುಕತೆ ನಡೆಸಲು ಬರೋಡಕ್ಕೆ ಹೋಗಿಬಂದರು.

 ಕಸ್ತೂರಿ ರಂಗ ಐಯಂಗಾರ್ಯರು 1895ರಿಂದ ಹಿಂದೂ ಪತ್ರಿಕೆಯ (ನೋಡಿ- ಹಿಂದೂ) ನ್ಯಾಯ ವಿಷಯ ಸಲಹೆಗಾರರಾಗಿದ್ದು ಆಗಾಗ್ಗೆ ಪತ್ರಿಕೆಗೆ ಲೇಖನಗಳನ್ನೂ ಬರೆಯುತ್ತಿದ್ದರು. 1905ರಲ್ಲಿ ಪತ್ರಿಕೆ ಆರ್ಥಿಕ ಮುಗ್ಗಟ್ಟಿಗೆ ಸಿಕ್ಕಿದ್ದ ಕಾಲದಲ್ಲಿ ಅದನ್ನು ತಾವೇ ಕೊಂಡು, ತಮ್ಮ ನೆರವಿಗಾಗಿ ನಂಟ ಎ. ರಂಗಸ್ವಾಮಿ ಐಯಂಗಾರ್ಯರನ್ನು ಸಹ ಸಂಪಾದಕರನ್ನಾಗಿ ನೇಮಿಸಿಕೊಂಡರು. ಅಂದಿನಿಂದ ಹಿಂದೂ ಪತ್ರಿಕೆಯೊಂದಿಗೆ ಅವರ ಜೀವನ ಹಾಸುಹೊಕ್ಕಾಗಿ, ದೇಶಸೇವೆ ಅವರ ಏಕೈಕ ಗುರಿಯಾಯಿತು.

 ಕಸ್ತೂರಿ ರಂಗ ಐಯಂಗಾರ್ಯರು ರಾಯಿಟರ್ ವಾರ್ತಾ ಸಂಸ್ಥೆಯ ಚಂದಾದಾರರಾಗಿ ವಿಶ್ವವಾರ್ತೆಯನ್ನು ತಮ್ಮ ಪತ್ರಿಕೆಯನ್ನು ಪ್ರಕಟಿಸುತ್ತಿದ್ದುದಲ್ಲದೆ, ದೇಶದ ನಾನಾ ಕಡೆ ಸಂಭವಿಸುತ್ತಿದ್ದ ಘಟನೆಗಳ ಪ್ರಕಟಣೆಗೆ ವಿಶೇಷ ಗಮನಕೊಟ್ಟರು. ಇಂಗ್ಲೆಂಡಿನ ಪಾರ್ಲಿಮೆಂಟಿನಲ್ಲಿ ನಡೆಯುತ್ತಿದ್ದ ಚರ್ಚೆಯನ್ನು ಪಾರ್ಲಿಮೆಂಟಿನಲ್ಲಿ ಭಾರತ ಎಂಬ ವಿಭಾಗದಲ್ಲಿ ಪ್ರಕಟಿಸುತ್ತಿದ್ದರು. ಬ್ರಿಟಿಷರ ದಬ್ಬಾಳಿಕೆಯನ್ನು ಅವರು ನಿರ್ಭೀತಿಯಿಂದ ಪ್ರಕಟಿಸುತ್ತಿದ್ದರು. 1906ರಲ್ಲಿ ಬ್ರಿಟಿಷರ ಮಾಲೀಕತ್ವದಲ್ಲಿದ್ದ ಆರ್ಬತ್‍ನಾಟ್ ಸಂಸ್ಥೆ ಕುಸಿದು ಸಾವಿರಾರು ಜನ ನಷ್ಟಕ್ಕೊಳಗಾದಾಗ, ಬ್ರಿಟಿಷ್ ಸರ್ಕಾರ ಅವರಿಗೆ ಪರಿಹಾರ ನೀಡದೆ ಆಪಾದಿತರನ್ನು ರಕ್ಷಿಸಲು ಮಾಡಿದ ಪ್ರಯತ್ನಗಳನ್ನು ಅವರು ಕಟುವಾಗಿ ಟೀಕಿಸಿದರು.

 1857ರ ಕ್ರಾಂತಿಯ ತರುವಾಯ ಭಾರತೀಯರಲ್ಲಿ ರಾಷ್ಟ್ರೀಯ ಭಾವನೆ ಬಲವಾಗಿ ಬೇರೂರಿತು. ಬಂಗಾಳ ವಿಭಜನೆಯ ಬಗ್ಗೆ ಕಸ್ತೂರಿ ರಂಗ ಐಯಂಗಾರ್ಯರು ತಮ್ಮ ಪತ್ರಿಕೆಯನ್ನು ಬರೆದು, ಬಂಗಾಳ ವಿಭಜನೆ ಭಾರತದ ಏಕತೆಗೆ ತಳಪಾಯ ಹಾಕಿರುವುದಲ್ಲದೆ, ಜನರ ಆಕಾಂಕ್ಷೆಗಳನ್ನು ಮುರಿಯಲು ಲಾರ್ಡ್ ಕಜರ್ûನ್ ಮಾಡಿರುವ ಪ್ರಯತ್ನ ಭಾರತೀಯರ ಸ್ವಾತಂತ್ರ್ಯಕ್ಕೆ ಅವಕಾಶ ಕಲ್ಪಿಸಿದೆ ಎಂದು ಘೋಷಿಸಿದರು. ಬ್ರಿಟಿಷರ ನೌಕಾ ವ್ಯಾಪಾರದ ವಿರುದ್ಧ ಭಾರತೀಯರು ನಡೆಸಿದ ಪೈಪೋಟಿಯಿಂದ ತಿರುನಲ್ವೇಲಿಯಲ್ಲಿ ಉಂಟಾದ ಭಾರಿ ಗಲಭೆಗೆ ಬ್ರಿಟಿಷರ ಅಸೂಯೆಯೇ ಕಾರಣವೆಂದು ತಿಳಿಸಿ, ಸರ್ಕಾರ ಮದ್ರಾಸಿನ ಹಲವಾರು ಪತ್ರಿಕೆಗಳ ಸಂಪಾದಕರನ್ನು ಬಂಧಿಸಿದಾಗ ಪತ್ರಿಕೆಗಳ ದಮನ ಕಾರ್ಯದಲ್ಲಿ ಹೊಸ ಯುಗ ಪ್ರಾರಂಭವಾಗಿದೆ ಎಂದು ಅವರು ಲೇಖಿಸಿದರು. ಬ್ರಿಟಿಷರ ದಬ್ಬಾಳಿಕೆ ಚಂಗಲ್‍ಪೇಟೆ ಸಲಾಂ ಘಟನೆಯಲ್ಲಿ ಮತ್ತೆ ವ್ಯಕ್ತವಾಯಿತು. ತನಗೆ ಅಸಭ್ಯರೀತಿಯಲ್ಲಿ ಸಲಾಂ ಹಾಕಿದನೆಂದು ಹುಡುಗನೊಬ್ಬನ ಬಗ್ಗೆ ಚಂಗಲ್‍ಪೇಟೆಯ ಮ್ಯಾಜಿಸ್ಟ್ರೆಟ್ ತಮ್ಮ ಅಧಿಕಾರಗಳನ್ನು ದುರುಪಯೋಗಿಸಿ ಜುಲ್ಮಾನೆ ವಿಧಿಸಿದಾಗ ಕಸ್ತೂರಿ ರಂಗ ಐಯಂಗಾರ್ಯರು ಮ್ಯಾಜಿಸ್ಟ್ರೇಟರ ವರ್ತನೆಯನ್ನು ಖಂಡಿಸಿದರು. ರೆವಿನ್ಯೂ ಮಂಡಲಿಯ ನಿಯಮ ಗಳನ್ನು ಮದ್ರಾಸು ಸರ್ಕಾರ ಹೊರಡಿಸಿದಾಗ, ಆ ನಿಯಮಗಳು ಅನುಸರಣೆಗಿಂತ ಉಲ್ಲಂಘನೆಯಲ್ಲಿಯೇ ಅಸ್ತಿತ್ವದಲ್ಲಿವೆ ಎಂದು ಹೇಳಿ ರೆವಿನ್ಯೂ ಅಧಿಕಾರಿಗಳ ಭ್ರಷ್ಟಾಚರಣೆಯನ್ನು ಸಾಕ್ಷ್ಯಗಳ ಸಮೇತ ಬಹಿರಂಗಪಡಿಸಿದರು.

 ರಾಜಕೀಯದಲ್ಲಿ ತಿಲಕರ ಉಗ್ರಗಾಮಿ ಗುಂಪಿಗೆ ಸೇರಿದ ಕಸ್ತೂರಿ ರಂಗ ಐಯಂಗಾರ್ಯರು ಲಾಲಾ ಲಜಪತರಾಯ್ ಅವರ ಗಡೀಪಾರು, ಪತ್ರಿಕಾಸಂಪಾದಕರ ಮತ್ತು ವಿದ್ಯಾರ್ಥಿಗಳ ಮೇಲೆ ಕಾನೂನು ಕ್ರಮ, ಸಭೆಗಳನ್ನು ನಿಷೇಧಿಸಲು ತಂದ ಕಾನೂನುಗಳು-ಇವೆಲ್ಲ ಸರ್ಕಾರದ ದಬ್ಬಾಳಿಕೆಯ ಫಲವೆಂದು ತಿಳಿಸಿ, ಸ್ವದೇಶಿ ಚಳವಳಿಗೆ ಬೆಂಬಲವಿತ್ತರು. ತಿಲಕರನ್ನು ಬಂಧಿಸಿ ದೂರದ ಮಾಂಡಲೆಗೆ ಗಡಿಪಾರು ಮಾಡಿದಾಗ, ರಾಜಕೀಯ ಪ್ರಗತಿಯನ್ನೂ ಉತ್ತಮ ಸರ್ಕಾರವನ್ನೂ ಬಯಸುವ ಪ್ರತಿಯೊಬ್ಬರೂ ತಿಲಕರ ಬಂಧನದಿಂದ ವಿಸ್ಮಿತರಾಗಲೇಬೇಕು ಎಂದು ಹಿಂದೂ ಪತ್ರಿಕೆ ಅಭಿಪ್ರಾಯಪಟ್ಟಿತು. ಮಾರ್ಲೆ-ಮಿಂಟೊ ಸುಧಾರಣೆಗಳು ಜಾರಿಗೆ ಬಂದಾಗ ಅವನ್ನು ಕಸ್ತೂರಿ ರಂಗ ಐಯಂಗಾರ್ಯರು ಸ್ವಾಗತಿಸಿದರೂ ಬ್ರಿಟಿಷ್ ಸರ್ಕಾರ ಕೊಟ್ಟದ್ದನ್ನು ದೇಶದ ಪ್ರಾಂತೀಯ ಸರ್ಕಾರಗಳು ಕಸಿದುಕೊಳ್ಳಬಹುದೆಂದು ಶಂಕೆ ವ್ಯಕ್ತ ಪಡಿಸಿದರು. 1911 ರಲ್ಲಿ ನಡೆಯಲಿದ್ದ ದೆಹಲಿ ದರ್ಬಾರಿನಲ್ಲಿ ಪಾಶ್ಚಾತ್ಯ ಮತ್ತು ಭಾರತೀಯ ಪತ್ರಿಕೋದ್ಯಮಿಗಳ ಬಗ್ಗೆ ತಾರತಮ್ಯ ತೋರಿಸಲಾಗುವುದಿಲ್ಲವೆಂಬ ಭರವಸೆಯ ಮೇಲೆಯೇ ಅವರು ತಮ್ಮ ಪತ್ರಿಕೆಯನ್ನು ಪ್ರತಿನಿಧಿಸಲು ದೆಹಲಿಗೆ ಹೋದದ್ದು.

 1912ರಲ್ಲಿ ತಿಯಾಸೊಫಿಕ್ ಸೊಸೈಟಿಯ ಬಗ್ಗೆ ತಮ್ಮ ಪತ್ರಿಕೆಯಲ್ಲಿ ಪ್ರಕಟವಾದ ವಿಷಯದ ಸಂಬಂಧದಲ್ಲಿ ಕಸ್ತೂರಿ ರಂಗ ಐಯಂಗಾರ್ಯರು ಸಂಬಂಧಪಟ್ಟವರಿಗೆ ಮಾನನಷ್ಟಕ್ಕಾಗಿ ಪರಿಹಾರ ಕೊಡಬೇಕಾದ ಪ್ರಸಂಗ ಬಂತು. ಈ ವ್ಯವಹಾರದಿಂದ ಅವರಿಗೂ ಶ್ರೀಮತಿ ಬೆಸಂಟರಿಗೂ ವೈಮನಸ್ಯವುಂಟಾದರೂ ಮುಂದಿನ ದಿನಗಳಲ್ಲಿ ಬೆಸಂಟರ ಸ್ನೇಹ ಅವರಿಗೆ ಲಭಿಸಿತು. 1913ರಲ್ಲಿ ಇಸ್ಲಿಂಗ್‍ಟನ್ ಆಯೋಗ ಸರ್ಕಾರಿ ಸೇವೆಗಳ ಸುಧಾರಣೆಯ ಬಗ್ಗೆ ಅಭಿಪ್ರಾಯಸಂಗ್ರಹಣೆಗೆ ಬಂದಾಗ ಅವರು ಐ.ಸಿ.ಎಸ್. ಪರೀಕ್ಷೆಯನ್ನು ಏಕಕಾಲದಲ್ಲಿ ಇಂಗ್ಲೆಂಡ್ ಮತ್ತು ಭಾರತಗಳಲ್ಲಿ ಏರ್ಪಡಿಸಬೇಕೆಂದೂ ಆಡಳಿತಾಂಗ ಮತ್ತು ಶಾಸಕಾಂಗಗಳನ್ನು ಪ್ರತ್ಯೇಕಿಸಿ ನ್ಯಾಯ ಇಲಾಖೆಯ ಉನ್ನತ ಹುದ್ದೆಗಳಿಗೆ ಭಾರತೀಯರನ್ನು ಸಹ ನೇಮಿಸಿಕೊಳ್ಳಬೇಕೆಂದೂ ಆಯೋಗಕ್ಕೆ ತಿಳಿಸಿದರು.

 1914ರಲ್ಲಿ ಮಹಾಯುದ್ಧ ಪ್ರಾರಂಭವಾದಾಗ ಕಸ್ತೂರಿ ರಂಗ ಐಯಂಗಾರ್ಯರು ಯುದ್ಧದ ಬಗ್ಗೆ ಹಿಂದೂ ಪತ್ರಿಕೆಯಲ್ಲಿ ಕೊಡುತ್ತಿದ್ದ ವಾರದ ಪಕ್ಷಿನೋಟವನ್ನು ಜನ ಕುತೂಹಲದಿಂದ ಓದುತ್ತಿದ್ದರು. ಆವರೆಗೆ ತಮ್ಮ ಪತ್ರಿಕೆಯಲ್ಲಿ ಕೆಲಸಮಾಡುತ್ತಿದ್ದ ಎ. ರಂಗಸ್ವಾಮಿ ಐಯಂಗಾರ್ಯರು ಸ್ವದೇಶ ಮಿತ್ರನ್ ಪತ್ರಿಕೆಯ ಸಂಪಾದಕರಾಗಲು 1915ರಲ್ಲಿ ಹೊರಟಾಗ, ತಮ್ಮ ಮಗ ಕೆ. ಶ್ರೀನಿವಾಸನ್ ಅವರನ್ನು ಪತ್ರಿಕೆಯ ಮೇಲ್ವಿಚಾರಣೆಗೆ ನೇಮಿಸಿದರು. ತಿಲಕರು ಸೆರೆವಾಸದಿಂದ ಹಿಂತಿರುಗಿದ ಮೇಲೆ ಬೆಸಂಟರ ಸಲಹೆಯಂತೆ ಸ್ವರಾಜ್ಯ ಚಳವಳಿಗಾಗಿ `ಹೋಂ ರೂಲ್ ಲೀಗ್` ಸ್ಥಾಪಿಸಿದಾಗ ಕಸ್ತೂರಿ ರಂಗ ಐಯಂಗಾರ್ಯರು ಈ ಸಂಘಕ್ಕೆ ಪೂರ್ಣ ಬೆಂಬಲವಿತ್ತರು. ಪ್ರಬಲವಾಗುತ್ತಿದ್ದ ಸ್ವರಾಜ್ಯ ಚಳವಳಿಯ ಬಗ್ಗೆ ಮದ್ರಾಸು ಗವರ್ನರ್ ವಿಧಾನ ಪರಿಷತ್ತಿನಲ್ಲಿ ಮಾಡಿದ ಭಾಷಣವನ್ನು ಟೀಕಿಸಿ ಗವರ್ನರರ ಭಾಷಣ ಸರ್ಕಾರದ ಭೀತಿಯನ್ನು ಸೂಚಿಸುತ್ತದೆ ಎಂದು ಐಯಂಗಾರ್ಯರು ತಿಳಿಸಿದರು. 1916ರಲ್ಲಿ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಒಟ್ಟುಗೂಡಿ, ಆಡಳಿತಾಂಗ ಶಾಸಕಾಂಗದ ಅಧೀನವಾಗಿರಬೇಕೆಂದು ತಂದ ನಿರ್ಣಯದಲ್ಲಿ ಅವರು ಪ್ರಮುಖ ಪಾತ್ರವಹಿಸಿದರು. ಸ್ವರಾಜ್ಯ ಚಳವಳಿಯಲ್ಲಿ ಶ್ರೀಮತಿ ಬೆಸಂಟರು ಬಂಧಿತರಾಗಲು ದಕ್ಷಿಣ ಭಾರತಕ್ಕೆ ನಾಯಕರಿಲ್ಲದಂತಾಯಿತು. ಇಂಥ ವಿಹ್ವಲ ವೇಳೆಯಲ್ಲಿ ಕಸ್ತೂರಿ ರಂಗ ಐಯಂಗಾರ್ಯರು ತಮ್ಮ ಪತ್ರಿಕೆಯ ಕೆಲಸದೊಂದಿಗೆ ಪ್ರಾಂತೀಯ ಕಾಂಗ್ರೆಸಿನಲ್ಲಿ ಅಲ್ಲದೆ ಅಖಿಲ ಭಾರತ ಹಂತದಲ್ಲೂ ಸೇವೆ ಸಲ್ಲಿಸಲಾರಂಭಿಸಿದರು. ಬೆಸಂಟರನ್ನು ಬಂಧನದಿಂದ ಬಿಡಿಸಲು ಸತ್ಯಾಗ್ರಹವೇ ಬಲವಾದ ರಾಜಕೀಯ ಆಯುಧವೆಂದು ಅವರು ನಂಬಿದ್ದರು.

 ಯುದ್ಧಕಾಲದಲ್ಲಿ ಜನರ ಮೇಲೆ ಪ್ರತಿಬಂಧಕಗಳನ್ನು ತರುವ ಕಾರ್ಯನೀತಿ ಹೊಂದಿದ್ದ ಬ್ರಿಟಿಷರು, ರಾಜದ್ರೋಹ ಚಳವಳಿಗಳ ಬಗ್ಗೆ ಸಾಕ್ಷ್ಯ ಸಂಗ್ರಹಿಸಲು ಜಸ್ಟಿಸ್ ರೌಲತನ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ನೇಮಿಸಿದಾಗ ಕಸ್ತೂರಿ ರಂಗ ಐಯಂಗಾರ್ಯರು ರೌಲತ್ ಸಮಿತಿಯ ವಿರುದ್ಧ ಪ್ರಚಾರಮಾಡಲು ಭಾರತೀಯ ಪೌರ ಹಕ್ಕು ಸಮಿತಿಯನ್ನು (ಇಂಡಿಯನ್ ಸಿವಿಲ್ ರೈಟ್ಸ್ ಕಮಿಟಿ) ಏರ್ಪಡಿಸಿದರು. ಯುದ್ಧಪರಿಸ್ಥಿತಿಯನ್ನು ವೀಕ್ಷಿಸಲು ಇಂಗ್ಲೆಂಡ್ ಸರ್ಕಾರ ಆಹ್ವಾನಿಸಿದ ಪತ್ರಿಕೋದ್ಯಮಿಗಳಲ್ಲಿ ಕಸ್ತೂರಿ ರಂಗ ಐಯಂಗಾರ್ಯರೂ ಒಬ್ಬರು. ಲಂಡನಿನಲ್ಲಿದ್ದಾಗ ಅವರು ಬ್ರಟಿಷ್ ರಾಜದಂಪತಿಗಳನ್ನು ಕಂಡರು. ಪತ್ರಿಕೋದ್ಯಮಿಗಳ ಸಂಘದಲ್ಲಿ ಮಾತನಾಡಿ, ಇಂಗ್ಲಿಷ್ ಜನ ಭಾರತದ ಪತ್ರಿಕೆಗೆ ಅಭಿಪ್ರಾಯಗಳಿಗೆ ಗಮನಕೊಡುತ್ತಿಲ್ಲವೆಂದು ವಿಷಾದಿಸಿದರು. ಆಗ ಹಿಂದೂ ಪತ್ರಿಕೆಗೆ ಇಂಗ್ಲೆಂಡಿನಲ್ಲಿ ಪ್ರವೇಶವಿಲ್ಲದಿದ್ದುದನ್ನು ಕುರಿತು `ಮರಾಠ' ಪತ್ರಿಕೆ ಬರೆಯುತ್ತ, ಇಂಗ್ಲೆಂಡ್ ಸರ್ಕಾರ ಕಸ್ತೂರಿ ರಂಗ ಐಯಂಗಾರ್ಯರ ಲೇಖನಗಳನ್ನು ಬಹಿಷ್ಕರಿಸಿದರೂ ಅವರ ಭಾಷಣಗಳನ್ನು ತಿರಸ್ಕರಿಸಲಿಲ್ಲ ಎಂದಿತು.

 ರೌಲತ್ ಸಮಿತಿಯ ವರದಿಯ ಮೇರೆಗೆ ರಚಿಸಿದ ಕಾನೂನುಗಳು ಲಷ್ಕರಿ ಮಾದರಿಯ ಸರ್ಕಾರಕ್ಕೆ ಎಡೆಕೊಡುತ್ತವೆ ಎಂದು ಹಿಂದೂ ಪತ್ರಿಕೆ ಬರೆಯಿತು. ಗಾಂಧೀಜಿ ಸತ್ಯಾಗ್ರಹ ಹೂಡಲು ನಿರ್ಧರಿಸಿದಾಗ ಅವರ ನಿಲುವನ್ನು ಜನತೆಗೆ ಪರಿಚಯ ಮಾಡಿಸಲು ಕಸ್ತೂರಿ ರಂಗ ಐಯ್ಯಂಗಾರ್ಯರು ಅವರನ್ನು ಮದರಾಸಿಗೆ ಆಹ್ವಾನಿಸಿದರು. 1919ರ ಏಪ್ರಿಲ್ 6 ರಂದು ದೇಶದಾದ್ಯಂತ ಹರತಾಳ ನಡೆಯಿತು. ಅದೇ ತಿಂಗಳು 14 ರಂದು ಜನರಲ್ ಓಡ್ವೆಯರನ ಕ್ರೌರ್ಯದಿಂದ ನೂರಾರು ಜನ ಜಲಿಯನ್ ವಾಲಾ ಬಾಗ್ ಪ್ರಕರಣದಲ್ಲಿ ಗುಂಡಿನೇಟಿಗೆ ತುತ್ತಾದರು. ಅಮೃತಸರದ ಈ ದುರಂತದ ಬಗ್ಗೆ ವಿಚಾರಣೆ ನಡೆಯಬೇಕೆಂದು ಹಿಂದೂ ಪತ್ರಿಕೆ ಒತ್ತಾಯಮಾಡಿತು. ಮದ್ರಾಸು ಸರ್ಕಾರ ಪತ್ರಿಕೆಯ ಮೇಲೆ ಕ್ರಮ ಜರುಗಿಸಿ ಜಾಮೀನು ಕೇಳಲು, ಪತ್ರಿಕೆಗಳ ಮೇಲೆ ಪ್ರತಿಬಂಧಕ ಹಾಕಿದರೆ ಸತ್ಯವಾದಿ ಪತ್ರಿಕೆಗಳೇ ನಾಶವಾಗುವುವು ಎಂದು ಕಸ್ತೂರಿರಂಗ ಐಯಂಗಾರ್ಯರು ಉತ್ತರಿಸಿದರು.

1920 ರಲ್ಲಿ ಕಸ್ತೂರಿ ರಂಗ ಐಯಂಗಾರ್ಯರಿಗೆ ಅರವತ್ತು ವರ್ಷ ತುಂಬಿತು. ತಿಲಕರು ಇದೇ ವರ್ಷ ನಿಧನರಾಗಲು ದೇಶದ ನಾಯಕತ್ವ ಗಾಂಧೀಜಿಯವರ ಮೇಲೆ ಬಿದ್ದಿತು. ಅಸಹಕಾರ ಚಳವಳಿಯಲ್ಲಿ ಕಸ್ತೂರಿ ರಂಗ ಐಯಂಗಾರ್ಯರು ಗಾಂಧಿಯವರಿಗೆ ಬೆಂಬಲವಿತ್ತರೂ ಮಕ್ಕಳನ್ನು ಶಾಲೆಯಿಂದ ನಿಲ್ಲಿಸುವ ಮತ್ತು ವಕೀಲರು ತಮ್ಮ ವೃತ್ತಿಯನ್ನು ಬಿಡುವ ಬಗ್ಗೆ ಗಾಂಧೀಜಿಯವರ ಸಲಹೆಯನ್ನು ಒಪ್ಪಲಿಲ್ಲ. ತಮ್ಮ ಆಪ್ತಮಿತ್ರ ಸಿ. ಶಂಕರನಾಯರ್ ಅಭಿಪ್ರಾಯಭೇದದಿಂದ ಕಾಂಗ್ರೆಸ್ಸಿಗೆ ರಾಜಿನಾಮೆ ಕೊಟ್ಟಾಗ ಅವರು ಸ್ನೇಹ ಮತ್ತು ಕರ್ತವ್ಯಗಳ ನಡುವೆ ತಿಕ್ಕಾಟಕ್ಕೊಳಗಾದರೂ ನಾಯರ್ ಅವರ ವರ್ತನೆಯನ್ನು ನಿಷ್ಪಕ್ಷಪಾತವಾಗಿ ಟೀಕಿಸಿದರು.

ಯುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಪತ್ರಿಕೋದ್ಯಮದಲ್ಲಿ ಯೋಗ್ಯ ಮಾರ್ಗದರ್ಶನ ನೀಡುವುದು ಕಸ್ತೂರಿ ರಂಗ ಅಯ್ಯಂಗಾರ್ಯರ ಒಂದು ವಿಶೇಷ ಗುಣ.

ಮೈಸೂರಿನಲ್ಲಿ ದಿವಾನ್ ವಿ.ವಿ.ಮಾಧವರಾಯರು 1908ರಲ್ಲಿ ಜಾರಿಗೆ ತಂದ ಪತ್ರಿಕಾ ನಿರ್ಬಂಧದ ಕಾನೂನನ್ನು ಪ್ರತಿಭಟಿಸಿ ಬೆಂಗಳೂರು ಮತ್ತು ಮೈಸೂರಿನ ಪತ್ರಿಕೆಗಳು ಪ್ರಕಟಣೆ ನಿಲ್ಲಿಸಿದವು. ಯುವ ಪತ್ರಕರ್ತ ಡಿ.ವಿ.ಗುಂಡಪ್ಪನವರು ಸ್ಯಾಂಡರ್ಡ್ ಪತ್ರಿಕೆಯ ಸಂಪಾದಕರಾದ ಎಂ. ಸ್ರೀನಿವಾಸ ಅಯ್ಯಂಗಾರ್ಯರರ ಜೊತೆಯಲ್ಲಿ ಮದರಾಸಿಗೆ ಹೋಗಿ 'ಪ್ರೆಸ್ ----ಇನ್ ಮೈಸೂರು. ಮೈಸೂರಿನಲ್ಲಿ ಪತ್ರಿಕೆಗಳ ಎಂಬ ಪುಸ್ತಕವನ್ನು ಅಚ್ಚು ಮಾಡಿಸಿದರು. ಆ ಸಂದರ್ಭದಲ್ಲಿ ಕಸ್ತೂರಿ ರಂಗ ಅಯ್ಯಂಗಾರ್ಯರನ್ನೂ ಭೇಟಿಯಾಗಿ ಅವರು ನೀಡಿದ ಮಾರ್ಗದರ್ಶನವನ್ನು ತಮ್ಮ 'ವೃತ್ತಪತ್ರಿಕೆ' ಯಲ್ಲಿ ವಿವರಿಸಿದ್ದಾರೆ.

'ನಾನು ಮದರಾಸಿನಲ್ಲಿದ್ದಾಗ ಇಟ್ಟುಕೊಂಡಿದ್ದ ಇನ್ನೊಂದು ಉಪವೃತ್ತಿ “ಹಿಂದೂ” ಪತ್ರಿಕೆಗೂ “ಇಂಡಿಯನ್ ಪೇಟ್ರಿಯಟ್” ಪತ್ರಿಕೆಗೂ ಪುಡಿ ಬರವಣಿಗೆಗಳನ್ನು ಬರೆಯುತ್ತಿದ್ದದು.

“ಹಿಂದೂ” ಪತ್ರಿಕೆಯ ಸಂಪಾದಕರು ಕಸ್ತೂರಿರಂಗಯ್ಯಂಗಾರ್ಯರು. ಅವರು ಮಿತಭಾಷಿಗಳು, ಗಂಭೀರ ಸ್ವಭಾವದವರು. ಹೊರಗಡೆಗೆ ಬೆಣಚುಕಲ್ಲು, ಒಳಗಡೆ ಬೆಣ್ಣೆ. ನಾನು ಹೋದಾಗ ಒಂದು ದೊಡ್ಡ ರಿಪೋರ್ಟ್‍ನ್ನು ಮುಂದಿಟ್ಟು “ಇದನ್ನು ಸಂಗ್ರಹ ಮಾಡಿ ತಾ,” “ಈ ಎರಡು ಪುಟಗಳ ಲೇಖನವನ್ನು ಅರ್ಧ ಪುಟಕ್ಕೆ ಇಳಿಸು”-ಎನ್ನುವರು. ನಾನು ಬರೆದ ಲೇಖನದಲ್ಲಿ ಮಾತುಗಳನ್ನು ನೀಲಿ ಸೀಸದ ಕಡ್ಡಿಯಿಂದ ಹೊಡೆದುಹಾಕಿ “ಈಗ ನೋಡು” ಎನ್ನುವರು. ಹೀಗೆ ತಿದ್ದಿದವರು ಅವರು.

“ಇಂಡಿಯನ್ ಪೇಟ್ರಿಯಟ್” ನಡಸುತ್ತಿದವರು ಕರುಣಾಕರ ಮೆನನ್. ಇವರು ಒಳ್ಳೆಯ ವಾಗ್ಮಿ, ಜನಾನುರಾಗಿ ಇವರಲ್ಲಿ ನಾನು ಬರೆದ ಲೇಖನ ಹೆಚ್ಚು ಬದಲಾವಣೆಯಿಲ್ಲದೆ ಅಂಗೀಕೃತವಾಗುತ್ತಿತ್ತು.

ನಾನು ಬರೆಯುತ್ತಿದ್ದದ್ದು ವಿಶೇಷವಾಗಿ ಮೈಸೂರಿನ ರಾಜಕೀಯವನ್ನು ಕುರಿತು. ಕೊಂಚ ಒರಟೊರಟಾಗಿಯೇ, ಹಸಿಹಸಿಯಾಗಿಯೇ ಬರೆಯುತ್ತಿದ್ದೆನೆಂದು ತೋರುತ್ತದೆ. ಆದದ್ದರಿಂದಲೇ ಕಸ್ತೂರಿರಂಗಯ್ಯಂಗಾರ್ಯರು ಅಂಕುಶವಿಡುತ್ತಿದ್ದರಬೇಕು. ಕರುಣಾಕರ ಮೇನನ್ ರವರು “ ಅದೂ ಒಂದು ದೃಷ್ಟಿಯ ಜನಾಭಿಪ್ರಾಯ” ಎನ್ನುತ್ತಿದ್ದರು. ಕಸ್ತೂರಿರಂಗಯ್ಯಂಗಾರ್ಯರದು ತಿದ್ದಿ ಸಂಸ್ಕಾರ ಪಡಿಸುವ ಉದ್ದೇಶ. ಕರುಣಾಕರ ಮೇನನ್‍ರವರದು ಪ್ರೋತ್ಸಾಹಪಡಿಸುವ ಉದ್ದೇಶ. 18-20ರವಯಸ್ಸಿನಲ್ಲಿರುವವನಿಗೆ ಪ್ರೋತ್ಸಾಹ, ತಿದ್ದಾವಣೆ ಎರಡೂ ಅವಶ್ಯವಾದವೇ ತಾನೇ?”

 ಸತ್ಯಾಗ್ರಹ ಪ್ರಚಾರಕಾರ್ಯದಲ್ಲಿ ಕಸ್ತೂರಿ ರಂಗ ಐಯಂಗಾರ್ಯರು ದೇಶದ ನಾನಾ ಭಾಗಗಳಲ್ಲಿ ಸಂಚಾರ ಮಾಡಿ ಬಂದರು. ಆ ಹೊತ್ತಿಗೆ ಅವರ ಆರೋಗ್ಯ ಕೆಟ್ಟಿತ್ತು. 1923 ರಲ್ಲಿ ಹಿಂದೂ ದಿನಪತ್ರಿಕೆಯ ಪ್ರಸಾರ 17,000 ಕ್ಕೆ ಏರಿತ್ತು. ಮದ್ರಾಸಿನಲ್ಲಿ ಪ್ರಪ್ರಥಮ ರೋಟರಿ ಮುದ್ರಣ ಯಂತ್ರವನ್ನು ಸ್ಥಾಪಿಸಿದ್ದು ಹಿಂದೂ ಪತ್ರಿಕೆಯ ಮುದ್ರಣಕ್ಕಾಗಿ. ಐಯಂಗಾರ್ಯರ ದೇಹಸ್ಥಿತಿ ಸುಧಾರಿಸುವಂತಿರಲಿಲ್ಲವಾದರೂ ಅವರು ರೋಗಶಯ್ಯೆಯಿಂದಲೇ ಕಾಂಗ್ರೆಸ್ ಮತ್ತು ಹಿಂದೂ ಪತ್ರಿಕೆಯ ಕೆಲಸಗಳ ಬಗ್ಗೆ ಸಲಹೆಗಳನ್ನು ನೀಡುತ್ತಿದ್ದರು. 1923ರ ಡಿಸೆಂಬರ್ 12 ರಂದು ಬೆಳಗ್ಗೆ 5-45ರ ಸಮಯದಲ್ಲಿ ಅವರು ನಿಧನರಾದರು. 'ಟೈಂಸ್' ಪತ್ರಿಕೆ ಅವರನ್ನು ಪ್ರಭಾವಶಾಲಿ ಹಾಗೂ ಕ್ರಾಂತಿಕಾರ ಪತ್ರಿಕೋದ್ಯಮಿಗಳಲ್ಲಿ ಒಬ್ಬರು ಎಂದು ಶ್ಲಾಘಿಸಿತು. ಪತ್ರಿಕೋದ್ಯಮದಲ್ಲಿ ಏನೇನು ಶ್ರೇಷ್ಠವೊ ಅವನ್ನೆಲ್ಲ ಕಸ್ತೂರಿ ರಂಗ ಐಯಂಗಾರ್ಯರು ಹಿಂದೂ ಪತ್ರಿಕೆಗೆ ದೊರಕಿಸಿ ಅದನ್ನು ಅಂದಗೊಳಿಸಿದರು; ಶ್ರೇಷ್ಠಮಟ್ಟದ ಪತ್ರಿಕೆಯಾಗಿ ಮಾಡಿದರು.         

 (ವಿ.ಜಿ.ಕೆ.)