ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಂತ ಮುದ್ರಣ

ವಿಕಿಸೋರ್ಸ್ದಿಂದ
 ಮೂಲದೊಡನೆ ಪರಿಶೀಲಿಸಿ


ಕಾಂತ ಮುದ್ರಣ

 ಕಾಂತೀಕರಿಸಿದ ಫೆರ್ರೋ ಕಾಂತೀಯ ಚೂರ್ಣಲೇಪಿತ ಕಾಗದದ ಇಲ್ಲವೇ ಪ್ಲಾಸ್ಟಿಕ್ ಆಧಾರಿತ ಪಟ್ಟಿಯ ಮೇಲೆ ಅಥವಾ ಕಾಂತೀಕರಿಸಿದ ತಂತಿಯ ಮೇಲೆ ಸಮಾಚಾರವನ್ನು ಮುದ್ರಿಸುವ ವಿಧಾನ (ಮ್ಯಾಗ್ನೆಟಿಕ್ ರೆಕಾರ್ಡಿಂಗ್). ಧ್ವನಿಮುದ್ರಣದಲ್ಲಿ ಇದರ ಬಳಕೆ ಅಧಿಕ. ಗಣಕಯಂತ್ರಗಳ ದತ್ತಾಂಶಗಳಿಗೆ, ಟಿಲಿವಿಷóನ್ ಚಿತ್ರಗಳಿಗೆ ಹಾಗೂ ರೇಡಿಯೋ ಸಂದೇಶಗಳಿಗೆ ಸಂಬಂಧಿಸಿದ ಸಂಜ್ಞೆಗಳನ್ನು ಮುದ್ರಿಸುವಲ್ಲಿ ಸಹ ಈ ವಿಧಾನದ ಉಪಯೋಗ ಗಮನಾರ್ಹವಾಗಿದೆ. ಇಂಥ ಎಲ್ಲ ಮುದ್ರಣಗಳನ್ನೂ ಬೇಕೆಂದಾಗ ಮರುನುಡಿಸಬಹುದು (ಪ್ಲೇ ಬ್ಯಾಕ್).

ಅಮೆರಿಕದ ಪ್ರಖ್ಯಾತ ಯಂತ್ರವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಪೊನೋಗ್ರಾಫನ್ನು ನಿರ್ಮಿಸಿದಾಗಲೇ (1877) ಧ್ವನಿಮುದ್ರಣ ಕಾರ್ಯವೂ ಪ್ರಾರಂಭವಾಯಿತು.  ಮನುಷ್ಯ ಅಥವಾ ಯಾವುದಾದರೂ ಆಕರದ ಶಬ್ದವನ್ನು ಒಂದು ಸೂಜಿಯ ಕಂಪನಗಳನ್ನಾಗಿ ಪರಿವರ್ತಿಸಿ ಆ ಮೂಲಕ ಅದನ್ನು ಒಂದು ಉರುಳೆಯ (ಸಿಲಿಂಡರ್) ಮೇಲೆ ಮುದ್ರಣ ಮಾಡಿ ಮತ್ತೆ ಸೂಜಿಯನ್ನು ಆ ಮುದ್ರಣದ ಮೇಲೆಯೇ ಓಡಿಸುವುದರಿಂದ ಮೊದಲಿನ ಧ್ವನಿಯನ್ನೇ ಎಡಿಸನ್ ಪುನಃ ಸೃಷ್ಟಿಸಿದ.  ಡಿಕ್ಟಾಪೋನ್ ಎಂದು ಮೊದಲಾಗಿ ಹೆಸರುಗಳನ್ನುಳ್ಳ ಅನೇಕ ಧ್ವನಿಮುದ್ರಣ ಯಂತ್ರಗಳಲ್ಲಿ ಇದೇ ತತ್ತ್ವವನ್ನು ಬಳಸಲಾಗಿದೆ.

ಎಡಿಸನ್ನನ ಉಪಜ್ಞೆ (ಇನ್‍ವೆನ್ಷನ್) ಆದ (21) ವರ್ಷಗಳ ತರುವಾಯ ಡೆನ್ಮಾರ್ಕಿನ ವಾಲ್ಡೆ ಮಾರ್ ಪೌಲ್ಸನ್ ಟೆಲಿಗ್ರಾಫೋನ್ ಎಂಬ ಯಂತ್ರವನ್ನು ನಿರ್ಮಿಸಿದ (1898). ಇದೇ ಇಂದಿನ ತಂತಿ ಮತ್ತು ಪಟ್ಟಿ ಮುದ್ರಿಕೆಗಳ ಮೂಲವಾಗಿದೆ. ಪೌಲ್ಸನನ ಯಂತ್ರದಲ್ಲಿ ಒಂದು ಪೀಪಾಯಿಯ ಸುತ್ತಲೂ ಉಕ್ಕಿನ ತಂತಿಯನ್ನು ಸುತ್ತಲಾಗಿತ್ತು.  ಕಾಂತಶಿರದಲ್ಲಿ (ಮ್ಯಾಗ್ನೆಟಿಕ್ ಹೆಡ್) ಒಂದು ತಂತಿಯ ಸುರುಳಿಯೊಳಗೆ ಕಬ್ಬಿಣದ ತೆಳ್ಳನೆಯ ಪದರಗಳು (ಲ್ಯಾಮಿನೇಷನ್ಸ್) ಇದ್ದುವು. ಪೀಪಾಯಿಗೆ ಸಮಾಂತರವಾಗಿ ಶಿರ ಚಲಿಸುತ್ತಿತ್ತು.  ಸೂಕ್ಷ್ಮಧ್ವನಿವರ್ಧಕದಿಂದ ಬಂದ ಧ್ವನಿರೂಪದ ವಿದ್ಯುತ್ಪ್ರವಾಹ ಸುರುಳಿಯಲ್ಲಿ ಹರಿದಾಗ ಅದಕ್ಕನುಗುಣವಾಗಿ ಪದರಗಳಿಗೆ ಅಂದರೆ ಪಟಲ ಬಂಧನಕ್ಕೆ ತಗಲಿಕೊಂಡಿದ್ದ ಉಕ್ಕಿನ ತಂತಿ ಕಾಂತೀಕೃತವಾಗುತ್ತಿತ್ತು.  ಪೀಪಾಯಿ ಸುತ್ತಿದಾಗ ಶಿರವೂ ಮುಂದೆ ಚಲಿಸುತ್ತಿತ್ತು.  ಧ್ವನಿಯನ್ನು ಪುನಃ ಕೇಳಬೇಕಾದಾಗ ಅದೇ ಸುರುಳಿಗೆ ಒಂದು ಹೆಡ್‍ಫೋನನ್ನು ಜೋಡಿಸಲಾಗುತ್ತಿತ್ತು.  ಈ ಯಂತ್ರ ನಯವಾಗಿರಲಿಲ್ಲ.  ಇದರಲ್ಲಿ ಆಧುನಿಕ ಕಾಂತಧ್ವನಿಮುದ್ರಣದಲ್ಲಿರುವ ತತ್ತ್ವದ ಉಪಯೋಗವನ್ನು ಕಾಣಬಹುದು.

ಜರ್ಮನಿಯ ಮಿಕ್ಸ್ ಮತ್ತು ಗೆನೆಸ್ಟ್ ಎಂಬುವರು (1900)ರಲ್ಲಿ ಕಾಂತ ಧ್ವನಿಮುದ್ರಕವನ್ನು (ಮ್ಯಾಗ್ನೆಟಿಕ್  ವಯರ್ ರೆಕಾರ್ಡರ್) ತಯಾರಿಸಿದರು.  ಇದರಲ್ಲಿ ತಂತಿ ಸೆಕೆಂಡಿಗೆ 200 ಸೆಮೀ. ವೇಗದಲ್ಲಿ ಚಲಿಸುತ್ತಿತ್ತು.  ಧ್ವನಿಮುದ್ರಣವಾಗುತ್ತಿದ್ದ ಕಾಲ ಬಹಳ ಕಡಿಮೆ.  ಸುಮಾರು ಒಂದು ಮಿನಿಟ್ ಕಾಲ ಮಾತ್ರ.  ಅನಂತರ ಉಕ್ಕಿನ ತೆಳ್ಳಗಿನ ಪಟ್ಟಿಯನ್ನು ಉಪಯೋಗಿಸಿ ಹಲವು ಯಂತ್ರಗಳ ರಚನೆಯಾಯಿತು.  ನೂರಾರು ಮೀಟರ್ ಉದ್ದದ ಪಟ್ಟಿಯನ್ನು ಉಪಯೋಗಿಸಿ ಸುಮಾರು ಅರ್ಧಗಂಟೆಯ ಕಾಲ ಧ್ವನಿಮುದ್ರಣ ಮಾಡಬಹುದಾಗಿತ್ತು.  ರೇಡಿಯೋ ಕವಾಟಗಳ ಉಪಯೋಗ ಹೆಚ್ಚಾಗಿ ಬಳಕೆಗೆ ಬಂದ ಮೇಲೆ (1919) ಇವುಗಳ ಪ್ರಭಾವ ಕಾಂತ ಧ್ವನಿಮುದ್ರಣದ ಮೇಲೆಯೂ ಆಯಿತು.  ಈ ಕವಾಟಗಳ ಸಹಾಯದಿಂದ ಅತಿ ಸೂಕ್ಷ್ಮ ಶಬ್ದವನ್ನೂ ಪ್ರವರ್ಧಿಸುವುದು ಸಾಧ್ಯ.  ಮುಂದೆ ಹಲವು ವಿಧದ ಧ್ವನಿಮುದ್ರಕಗಳು ತಯಾರಾದುವು.  ಗ್ರಾಮಾಫೋನ್ ತಟ್ಟೆಯ ಆಕಾರದ (121\2)ಸೆಂಮೀ. ಅಗಲದ ಉಕ್ಕಿನ ತಟ್ಟೆಯೊಂದನ್ನು ಉಪಯೋಗಿಸಿದ ಯಂತ್ರವೊಂದಿತ್ತು.  ಅಮೆರಿಕದ ಕಾರ್ಲಸನ್ ಮತ್ತು ಕಾರ್ಪೆಂಟರ್ ಎಂಬುವರು ಹೆಚ್ಚಿನ ಆವೃತ್ತಿ ಸಂಖ್ಯೆಯ (ಹೈಫ್ರೀಕ್ವೆನ್ಸಿ) ಒಂದು ವಿದ್ಯುತ್ಪ್ರವಾಹವನ್ನು ಮೊದಲು ಪಟ್ಟಿಯ ಮೇಲೆ ಪ್ರಯೋಗಿಸಿದರೆ ಹಿನ್ನೆಲೆಯ ಇತರ ಸದ್ದು ಅಡಗಿ ಸ್ಫುಟವಾದ ಧ್ವನಿಮುದ್ರಣ ದೊರೆಯುವುದೆಂದು ಕಂಡುಹಿಡಿದರು (1927).  ಈ ತತ್ತ್ವ ಇಂದು ಸಾರ್ವತ್ರಿಕವಾಗಿ ಉಪಯೋಗದಲ್ಲಿದೆ. ಎರಡನೆಯ ಮಹಾಯುದ್ಧದ ಅನಂತರ ಪ್ಲಾಸ್ಟಿಕ್ಕಿನ ಪಟ್ಟಿಗಳು ಉಪಯೋಗಕ್ಕೆ ಬಂದುವು.  ಉಕ್ಕಿನ ತಂತಿ ಮತ್ತು ಪಟ್ಟಿಗಳ ಉಪಯೋಗ ಈಗ ನಿಂತೇ ಹೋಗಿದೆ ಎನ್ನಬಹುದು.

ಕಾಂತೀಕರಣ (ಮ್ಯಾಗ್ನೆಟೈಸೇóಷನ್): ಮುದ್ರಿಸಬೇಕಾದ ಧ್ವನಿಯನ್ನು ಮೊದಲು ಒಂದು ವಿದ್ಯುತ್ಪ್ರವಾಹವನ್ನಾಗಿ (ಇ) ರೂಪಾಂತರಿಸಿಕೊಂಡು ಅನಂತರ ಅದನ್ನು ಒಂದು ತಾಮ್ರದ ತಂತಿಯ ಸುರುಳಿಯಲ್ಲಿ ಹರಿಸಲಾಗುತ್ತದೆ.  ಸುರುಳಿಯ ಮಧ್ಯಭಾಗದಲ್ಲೆ ಮೆದು ಕಬ್ಬಿಣದ ದಿಂಡು ಅ (ಕೋರ್) ಇದೆ (ಚಿತ್ರ 1). ದಿಂಡು ಉಂಗುರದ ಆಕಾರದಲ್ಲಿದೆ. ಅದರ ಒಂದು ಭಾಗವನ್ನು ಕತ್ತರಿಸಿದೆ.  ವಿದ್ಯುತ್ಪ್ರವಾಹದ ಪ್ರಭಾವದಿಂದ ಕಬ್ಬಿಣ ಕಾಂತವಾಗಿ ಮಾರ್ಪಡುತ್ತದೆ.  ಕತ್ತರಿಸಿದ ಭಾಗದಲ್ಲೆ ಅಂದರೆ ಗಾಳಿಯ ಸಂದಿಯಲ್ಲಿ (ಏರ್‍ಗ್ಯಾಪ್) ಪ್ರವಾಹದ ಬಲಕ್ಕೆ ಅನುಗುಣವಾಗಿ ಒಂದು ಕಾಂತಕ್ಷೇತ್ರ (ಊ) ಏರ್ಪಡುತ್ತದೆ. ಧ್ವನಿಯನ್ನು ಅನುಸರಿಸಿ ವಿದ್ಯುತ್ಪ್ರವಾಹ ಏರಿಳಿದ ಹಾಗೆಲ್ಲ ಕಾಂತಕ್ಷೇತ್ರ ಸಹ ಅದೇ ರೀತಿಯಲ್ಲಿ ಏರಿಳಿಯುತ್ತದೆ. ಹೀಗೆ ಧ್ವನಿ ವಿದ್ಯುತ್ಪ್ರವಾಹವನ್ನು ಕಾಂತಕ್ಷೇತ್ರವನ್ನಾಗಿ ಪರಿವರ್ತಿಸುವ ಈ ಉಪಕರಣವೇ ಮುದ್ರಣ ಶಿರ (ರೆಕಾರ್ಡಿಂಗ್ ಹೆಡ್).

ಃ-ಊ ರೇಖೆ : ಕಾಂತಕ್ಷೇತ್ರ ಊ ಬದಲಾದಂತೆ ಉಂಟಾದ ಕಾಂತೀಕರಣ ಃ ಹೇಗೆ ಬದಲಾಗುತ್ತದೆ ಎನ್ನುವುದನ್ನು  ಃಊ ನಕ್ಷೆಯ (ಗ್ರಾಫ್) ಮೂಲಕ ಅರಿತುಕೊಳ್ಳಬಹುದು.  ಮೊದಲು ಕಾಂತಕ್ಷೇತ್ರವಿಲ್ಲದಿದ್ದಾಗ ಊ=0 ಆಗಿರುತ್ತದೆ.

 

ಚಿತ್ರ-1

 

ಆಗ ಃ ಕೂಡ 0 ಆಗಿರುವುದು. ಕ್ಷೇತ್ರವನ್ನು 0 ಯಿಂದ +ಊ1 ವರೆಗೆ ಹೆಚ್ಚಿಸಿದಾಗ ಃ ಯ ಬೆಲೆ ಕ್ರಮವಾಗಿ 0 ಯಿಂದ ಂ ವರೆಗೆ ಹೆಚ್ಚುತ್ತದೆ.  ಈಗ ಊ ನ ಬೆಲೆಯನ್ನು +ಊ ನಿಂದ ಮತ್ತೆ 0ಗೆ ತಂದಾಗ ಃ ತನ್ನ ಮೊದಲಿನ ದಾರಿಯನ್ನು ಪುನಃ ಕ್ರಮಿಸುವುದರ ಬದಲು ಂ ಯಿಂದ ಃ ಗೆ ಬರುತ್ತದೆ.  ಹೀಗೆಯೇ ಃಅಆಇಈಂಃ ದಾರಿ ಮುಂದುವರಿಯುತ್ತದೆ.  ಂಃಅಆಇಈಂ ಸುತ್ತಿಗೆ ಜಡತ್ವ ಕುಣಿಕೆ (ಹಿಸ್ಟರಿಸಸ್ ಲೂಪ್) ಎಂದು ಹೆಸರು. ಇದರ ರೂಪದಿಂದ ಒಂದು ಪದಾರ್ಥದ ಕಾಂತೀಕರಣ ಸ್ವಭಾವ ನಮಗೆ ಚೆನ್ನಾಗಿ ಗೊತ್ತಾಗುತ್ತದೆ.  (ನೋಡಿ- ಕಾಂತೀಯ-ವಸ್ತುಗಳು)

 

ಚಿತ್ರ-2

 

ಪಕ್ಷಪಾತ (ಬಯಾಸ್): ಕಾಂತಧ್ವನಿಮುದ್ರಣ ಮಾಡುವ ಮೊದಲು ಕಾಂತಪದಾರ್ಥವನ್ನು ಇರಿಸಿದ ಕಾಂತೀಕರಣ ಸ್ಥಿತಿಗೆ ಪಕ್ಷಪಾತ ಎಂದು ಹೆಸರು.  ಮೊದ ಮೊದಲು ಇದನ್ನು ಏಕಮುಖ ವಿದ್ಯುತ್ (ಡೈರೆಕ್ಟ್ ಕರೆಂಟ್-ಡಿ.ಸಿ.) ಅಥವಾ ಶಾಶ್ವತ ಕಾಂತದ ಸಹಾಯದಿಂದ ಮಾಡಲಾಗುತ್ತಿತ್ತು. ಇದಕ್ಕೆ ಡಿ.ಸಿ. ಪಕ್ಷಪಾತ ಎಂದು ಹೆಸರು. ಃಊ ಸುತ್ತಿನ ಯಾವುದಾದರೂ ನೇರವಾದ ಭಾಗದ ಮಧ್ಯದಲ್ಲಿ ಬರುವಂಥ ಃ ಬೆಲೆಯನ್ನು ಪಕ್ಷಪಾತವನ್ನಾಗಿ ಮಾಡಬೇಕು.  ಇಲ್ಲದಿದ್ದರೆ ಧ್ವನಿಮುದ್ರಣ ವಿಕೃತರೂಪವನ್ನು ತಾಳುವುದು.

ಪರ್ಯಾಯ ವಿದ್ಯುತ್ ಪ್ರವಾಹದ ಪಕ್ಷಪಾತ (ಆಲ್ಟರ್‍ನೇಟಿಂಗ್ ಕರೆಂಟ್-ಎ.ಸಿ. ಬಯಾಸ್): ಡಿ.ಸಿ. ಪಕ್ಷಪಾತವನ್ನು ಹಿಡಿತದಲ್ಲಿಟ್ಟುಕೊಂಡು ಕೆಲಸ ಮಾಡುವುದು ಸ್ವಲ್ಪ ಕಷ್ಟವಾದುದು.  ಆದ್ದರಿಂದ ಪರ್ಯಾಯ ವಿದ್ಯುತ್ ಪ್ರವಾಹದ ಪಕ್ಷಪಾತವನ್ನು ಬಳಸಲಾಗುತ್ತದೆ.  ಚಿತ್ರ 1ರ ತಂತಿಯಲ್ಲಿ ಪರ್ಯಾಯ ವಿದ್ಯುತ್ಪ್ರವಾಹವನ್ನು ಹರಿಸಿದಾಗ ಕಾಂತಕ್ಷೇತ್ರ ಊ+ ಮತ್ತು - ದಿಶೆಗಳ ನಡುವೆ ಬದಲಾಗುತ್ತ ಇರುತ್ತದೆ.  ಇದನ್ನೇ ಅನುಸರಿಸಿ ಃ ಸಹ + ಮತ್ತು - ಬೆಲೆಗಳ ನಡುವೆ ಓಲಾಡುತ್ತದೆ.  ಈ ಪರ್ಯಾಯ ವಿದ್ಯುತ್ಪ್ರವಾಹದ ಆವೃತ್ತಿಗಳು ಶ್ರವಣಾತೀತವಾಗಿವೆ : ಸೆಕೆಂಡಿಗೆ 35,000 ದಿಂದ 1, 00,000 ಆವೃತ್ತಿ ಸಂಖ್ಯೆಗಳನ್ನುಳ್ಳದ್ದು. ಪರ್ಯಾಯ ವಿದ್ಯುತ್ಪ್ರವಾಹದ ಪಕ್ಷಪಾತದಿಂದ ಧ್ವನಿಮುದ್ರಣದ ಕೆಲಸ ಚೆನ್ನಾಗಿ ನಡೆಯುತ್ತದೆ.  ಇದನ್ನು ಉಪಯೋಗಿಸುವುದು ಸುಲಭ.

ಅಳಿಸುವಿಕೆ (ಇರೇಸಿóಂಗ್): ಹೊಸ ಶಬ್ದವನ್ನು ಧ್ವನಿಮುದ್ರಿಸುವ ಮೊದಲು ಹಿಂದಿದ್ದ ಶಬ್ದವನ್ನು ಅಳಿಸಬೇಕು. ಈ ಕಾರ್ಯಕ್ಕೆ ಡಿ.ಸಿ. ವಿದ್ಯುತ್ಪ್ರವಾಹವನ್ನು ಉಪಯೋಗಿಸುವುದು ಬಲು ಕಷ್ಟ.  ಬದಲು, ಎ.ಸಿ. (ಪರ್ಯಾಯ) ವಿದ್ಯುತ್ತನ್ನು ಉಪಯೋಗಿಸಿ ಅಳಿಸಲಾಗುತ್ತದೆ.  ಸಾಮಾನ್ಯವಾಗಿ ಅಳಿಸುವುದಕ್ಕೆ ಬೇರೊಂದು ಅಳಿಸುವ ಶಿರ (ಇರೇಜಿûಂಗ್ ಹೆಡ್) ಇರುವುದು.

 

ಚಿತ್ರ-3

 

ಇದರ ತಂತಿಯಲ್ಲಿ ಪಕ್ಷಪಾತ ಆವರ್ತ ಸಂಖ್ಯೆಯದೇ ಪ್ರವಾಹವನ್ನು (ಸೆಕೆಂಡಿಗೆ 35,000-1,00,000) ಹರಿಸಲಾಗುತ್ತದೆ.  ಅನಂತರ ಇದನ್ನು ಟೇಪಿನ ಗಾಳಿಯ ಸಂದಿಯ ಮೂಲಕ ಹಾಯಿಸಲಾಗುತ್ತದೆ.  ಆಗ ಅದರ ಮೇಲೆ ಪರ್ಯಾಯ ಕಾಂತಕ್ಷೇತ್ರ ಊ ನ ಪರಿಣಾಮ ಕಡಿಮೆಯಾಗಿದ್ದು ಅನಂತರ ಹೆಚ್ಚಾಗಿ ಪುನಃ ಕಡಿಮೆಯಾಗುತ್ತದೆ.

ಪಟ್ಟಿಯ ತೆರಪಿನ ಮುಂದೆ ಹಾಯುವಾಗ ಅದರ ಬೆಲೆ ಹಲವು ಸಲ ಋಣಧನ ಚಿಹ್ನೆಗಳನ್ನು  ಬದಲಿಸುವಷ್ಟು ಹೆಚ್ಚಿನ ಆವೃತ್ತಿಯ ಪ್ರವಾಹವನ್ನು ಉಪಯೋಗಿಸಬೇಕು. ಊ ಕಡಿಮೆಯಾಗುವಾಗ ಕಾಂತೀಕರಣವೂ ಕಡಿಮೆಯಾಗುತ್ತ ಬಂದು ಕೊನೆಗೆ ಊ ಮತ್ತು ಃ ಎರಡೂ ಸೊನ್ನೆಯಾಗಿ ಹೋಗುವುವು.  ಸಾಮಾನ್ಯವಾಗಿ ಅಳಿಸುವಿಕೆಗೂ ಪಕ್ಷಪಾತಕ್ಕೂ ಒಂದೇ ವೇಗವರ್ಧಕದಿಂದ ಪರ್ಯಾಯ ವಿದ್ಯುತ್ಪ್ರವಾಹವನ್ನು ಒದಗಿಸಲಾಗುತ್ತದೆ.

ಒಂದು ಪಟ್ಟಿಯ ಸುರುಳಿಯನ್ನು (ರೀಲ್) ಅಳಿಸಲು ಬಲ್ಬ್ ಇರೇಜûರ್ ಎಂಬ ಯಂತ್ರವನ್ನು ಉಪಯೋಗಿಸಲಾಗುತ್ತದೆ. ಇದರಲ್ಲಿ ಶಕ್ತಿಯುತವಾದ ಒಂದು ದೊಡ್ಡ ವಿದ್ಯುತ್ಕಾಂತವಿದೆ.

 

ಚಿತ್ರ-4

 

ಇದರ ಮೂಲಕ ಪರ್ಯಾಯ ವಿದ್ಯುತ್ಪ್ರವಾಹವನ್ನು ಹರಿಸಿದಾಗ ಉಂಟಾಗುವ ಪರ್ಯಾಯ ಆವರ್ತಕ್ಷೇತ್ರದ ಸಹಾಯದಿಂದ ಸುರುಳಿಗಳನ್ನು ಕ್ಷಿಪ್ರದಲ್ಲಿಯೇ ಅಳಿಸಬಹುದು. ಇದು ಪಟ್ಟಿಯ ಬೇರೆ ಬೇರೆ ಭಾಗಗಳನ್ನು ಬೇರೆ ಬೇರೆಯಾಗಿ ಅಳಿಸುವುದಕ್ಕಿಂತ ಉತ್ತಮವಾದ ಕ್ರಮ.

ಪಟ್ಟಿ ಧ್ವನಿಮುದ್ರಕ (ಟೇಪ್ ರೆಕಾರ್ಡರ್): ಇದರ ಮುಖ್ಯವಾದ ಭಾಗಗಳಿವು-ಧ್ವನಿಮುದ್ರಿಸುವ ಭಾಗ, ಮರುನುಡಿಸುವ ಭಾಗ, ಪಟ್ಟಿ ಮತ್ತು ಅದನ್ನು ಓಡಿಸುವ ಭಾಗ.

 

ಚಿತ್ರ-5

 

ಮುದ್ರಿಸುವ ವಿಧಾನ : ಯಾವುದೇ ರೀತಿಯಲ್ಲಾದರೂ ಉಂಟಾದ ಧ್ವನಿಯನ್ನು ಸೂಕ್ಷ್ಮ ಧ್ವನಿವರ್ಧಕ  ವಿದ್ಯುತ್ತಿನ ವೋಲ್ಟೇಜಾಗಿ ಪರಿವರ್ತಿಸಲಾಗುತ್ತದೆ.  ಈ ವೋಲ್ಟೇಜುಗಳ ವ್ಯತ್ಯಾಸರೂಪ ಮೂಲ ಶಬ್ದದ ರೂಪವನ್ನೇ ಹೊಂದಿರುತ್ತದೆ. ಆದರೆ ಇವುಗಳ ಶಕ್ತಿ ಕಡಿಮೆಯಾದ್ದರಿಂದ ಎಲೆಕ್ಟ್ರಾನ್ ಕೊಳವೆ ಅಥವಾ ಟ್ರಾನ್ಸಿಸ್ಟರುಗಳಿಂದ ಕೂಡಿದ ಒಂದು ಪ್ರವರ್ಧಕದ ಸಲಕರಣೆಯನ್ನು ಉಪಯೋಗಿಸಿ ವೋಲ್ಟೇಜನ್ನು ಪ್ರವರ್ಧಿಸಲಾಗುತ್ತದೆ.  ಈ ಹೆಚ್ಚಿನ ಶಕ್ತಿಯ ವೋಲ್ಟೇಜ್ ತಕ್ಕಮಟ್ಟಿನ ವಿದ್ಯುತ್ಪ್ರವಾಹವನ್ನು ಒಂದು ತಂತಿಯ ಸುರುಳಿಯಲ್ಲಿ ಹರಿಸುತ್ತದೆ.  ಉಂಗುರದ ಒಂದು ಭಾಗದಲ್ಲಿ ಅದನ್ನು ಕತ್ತರಿಸಿ ಗಾಳಿಯ ತೆರಪನ್ನುಂಟುಮಾಡುತ್ತಾರೆ.  ಈ ಸ್ಥಳದಿಂದ ಮೊದಲಿನ ಶಬ್ದದ ರೂಪವನ್ನೇ ಅನುಸರಿಸಿ ಬದಲಾಗುತ್ತಿರುವ ಕಾಂತಕ್ಷೇತ್ರ ಉಂಟಾಗುತ್ತದೆ. ಗಾಳಿ ತೆರಪಿನ ಮುಂದೆ ಒಂದೇ ವೇಗದಿಂದ ಹಾಯುತ್ತಿರುವ ಪಟ್ಟಿಯ ಮೇಲೆ ಸವರಿರುವ ಕಾಂತಸಾಮಗ್ರಿ ಬದಲಿಸುತ್ತಿರುವ ಕ್ಷೇತ್ರವನ್ನು ಅನುಸರಿಸಿ ವಿವಿಧ ಮಟ್ಟದಲ್ಲಿ ಕಾಂತೀಕೃತವಾಗುತ್ತದೆ.  ಇದೇ ಧ್ವನಿಮುದ್ರಣ.  ಪಟ್ಟಿಯ ಮೇಲೆ ಮುದ್ರಣವಾಗುವ ಮೊದಲು ಅದು ಇನ್ನೊಂದು ಸುರುಳಿಯಲ್ಲಿರುವ ಕಬ್ಬಿಣದ ಉಂಗುರದ ಗಾಳಿ ತೆರಪಿನ ಮೂಲಕ ಹಾದುಹೋಗಿರುತ್ತವೆ.  ಈ ಉಂಗುರಕ್ಕೆ ಅಳಿಸುವ ಶಿರ ಎಂದು ಹೆಸರು.  ಇದರ ತಂತಿಯಲ್ಲಿ ಶ್ರವಣಾತೀತ (ಅಲ್ಟ್ರಸಾನಿಕ್) ಶಬ್ದದ ಅಂದರೆ ಸೆಕೆಂಡಿಗೆ 20,000 ಕ್ಕೂ ಹೆಚ್ಚಿನ ಆವರ್ತ ಸಂಖ್ಯೆಯ ವಿದ್ಯುತ್ಪ್ರವಾಹ ಹರಿಯುವುದರಿಂದ ಪಟ್ಟಿಯಲ್ಲಿ ಹಿಂದೆ ಇದ್ದ ಕಾಂತೀಕರಣಗಳು ಈಗ ಹೊಸ ಧ್ವನಿಮುದ್ರಣವನ್ನು ಸ್ವೀಕರಿಸಲು ಸಿದ್ಧವಾಗುತ್ತವೆ.

ಧ್ವನಿಯ ಮರುನುಡಿಸಿಕೆಯ ವಿಧಾನ : ಧ್ವನಿಮುದ್ರಣವಾದ ಪಟ್ಟಿಯಿಂದ ಧ್ವನಿಯನ್ನು ಹೊರಡಿಸುವುದರಲ್ಲಿ ಈಗ ಮಾಡಿದ ಕಾರ್ಯವನ್ನೇ ತಿರುಗುಮುರುಗು ಮಾಡಬೇಕಾಗುತ್ತದೆ.  ಧ್ವನಿಮುದ್ರಿತವಾದ ಪಟ್ಟಿಯನ್ನು ಮರುನುಡಿಸುವ ಶಿರ (ಪ್ಲೇಬ್ಯಾಕ್ ಹೆಡ್) ಎಂಬ ಮೆದು ಕಬ್ಬಿಣದ ಉಂಗುರದ ಗಾಳಿ ತೆರಪಿನ ಮುಂದೆ ಸರಿಸಿದರೆ ಆಗ ಉಂಗುರವನ್ನು ಸುತ್ತಿರುವ ತಂತಿಯಲ್ಲಿ ವಿದ್ಯುತ್ಪ್ರವಾಹಗಳು ಉದ್ಭವಿಸುತ್ತವೆ ; ಇವುಗಳ ರೂಪ ಪಟ್ಟಿಯಲ್ಲಿರುವ ಕಾಂತೀಕರಣದ ಶಕ್ತಿಯ ರೂಪವನ್ನೇ ಬಿಂಬಿಸುತ್ತದೆ. ಈ ವಿದ್ಯುತ್ಪ್ರವಾಹವನ್ನು ಪ್ರವರ್ಧಿಸಿ ಒಂದು ಧ್ವನಿವರ್ಧಕದ ಮೂಲಕ ಹರಿಸಿದರೆ ಆಗ ಮೊದಲಿನ ಶಬ್ದವನ್ನೇ ಅನುಕರಿಸುವ ಶಬ್ದ ಧ್ವನಿವರ್ಧಕದಲ್ಲಿ ಉಂಟಾಗುತ್ತದೆ.

ಕಾಂತ ಪಟ್ಟಿ (ಟೇಪ್) : ಸಾಮಾನ್ಯವಾಗಿ ಕಾಂತೀಕರಿಸಲು ಸಾಧ್ಯವಾಗುವ ಎಲ್ಲ ವಸ್ತುಗಳನ್ನೂ (ತಂತಿ, ಕಾಗದದ  ಪಟ್ಟಿ, ಫಿಲ್ಮ್, ಪ್ಲಾಸ್ಟಿಕ್ ಪಟ್ಟಿ ಇತ್ಯಾದಿ) ಧ್ವನಿಮುದ್ರಣ ಮಾಡುವ ಮಾಧ್ಯಮವನ್ನಾಗಿ ಉಪಯೋಗಿಸಲಾಗಿದೆ.  ಆದರೆ ಈಗ ಪ್ಲಾಸ್ಟಿಕ್ ಪಟ್ಟಿ ಬಂದು ಇವೆಲ್ಲವನ್ನೂ ಸಂಪೂರ್ಣವಾಗಿ ಮೂಲೆಗೆ ಒತ್ತಿದೆಯೆನ್ನಬಹುದು.  ಪಟ್ಟಿಯಲ್ಲಿ ಸಾಮಾನ್ಯವಾಗಿ ಸೆಲ್ಲುಲೋಸ್ ಅಸಿಟೇಟ್ ಎಂಬ ಪಾಲಿಮರಿನಿಂದ ತಯಾರಾದ ವಸ್ತುವೊಂದಿದೆ.

 

ಚಿತ್ರ-6

 

ತಯಾರಾದಾಗ ಇದು 15 ಸೆಂಮೀ. ಅಥವಾ 60 ಸೆಂಮೀ. ಅಗಲದ ಸುರುಳಿ ಸುತ್ತಿನ ರೂಪದಲ್ಲಿರುತ್ತದೆ.  ಅನಂತರ ಇದನ್ನು ಸಣ್ಣ ಅಗಲದ ರಾಟೆಯನ್ನಾಗಿ ಕತ್ತರಿಸುತ್ತಾರೆ.  ಇದರ ದಪ್ಪ ಒಂದು ಮಿಮೀ. ಗೂ ಕಡಿಮೆ. ಕಾಂತೀಕೃತವಾಗುವ ವರ್ಣದ್ರವ (ಪಿಗ್‍ಮೆಂಟ್) ವಸ್ತುವನ್ನು ಮೂಲ ಪಟ್ಟಿಯ ಮೇಲೆ ಲೇಪನ ಮಾಡಲಾಗುತ್ತದೆ.  ಇದರಲ್ಲಿ ಫೆರ್ರಿಕ್ ಆಕ್ಸೈಡಿನ ಸಣ್ಣ ಸೂಜಿಯಾಕಾರದ ಕಣಗಳಿವೆ.  ಇವನ್ನು ಪಟ್ಟಿಯ ಉಪಯೋಗಕ್ಕಾಗಿಯೇ ವಿಶೇಷವಾಗಿ ತಯಾರು ಮಾಡುತ್ತಾರೆ. ಕಣಗಳು ಸಣ್ಣದಾದಷ್ಟು ಉತ್ತಮ.  ಫೆರ್ರಿಕ್ ಆಕ್ಸೈಡನ್ನು ಅಂಟುಪದಾರ್ಥ ಕರಗಿಸುವ ಪದಾರ್ಥ ಮತ್ತು ಮೃದುಚಾಲಕ ಎಣ್ಣೆ (ಲೂಬ್ರಿಕೆಂಟ್) ಇವುಗಳೊಡನೆ ಬೆರೆಸಿ ಮೂಲ ಪಟ್ಟಿಯ ಮೇಲೆ ಲೇಪನ ಮಾಡಲಾಗುತ್ತದೆ.  ಆಕ್ಸೈಡಿನ ಲೇಪನದ ದಪ್ಪ ಮೂಲ ಪಟ್ಟಿಯ ಸುಮಾರು (1\3)ರಷ್ಟಿರುತ್ತದೆ.

ಪಟ್ಟಿಯನ್ನು ಓಡಿಸುವ ವಿಧಾನ: ಪಟ್ಟಿಯನ್ನು ಸುತ್ತಿರುವ ಸುರುಳಿ ತಟ್ಟೆಯೂ ಅದನ್ನು ಪಡೆಯುವ ತಟ್ಟೆಯೂ ಏಕವೇಗದಿಂದ ಒಂದೇ ದಿಶೆಯಲ್ಲಿ ಆವರ್ತಿಸುವ ಏರ್ಪಾಡು ಇದೆ.  ಪಟ್ಟಿ ಹೀಗೆ ಚಲಿಸುವಾಗ ಅದರ ಒಂದೊಂದು ಅಂಶವೂ ಕಾಂತಶಿರಗಳ ಮುಂದೆ ಬರುವಂಥ ವ್ಯವಸ್ಥೆ ಉಂಟು.

 

ಚಿತ್ರ-7

 

ಉಪಯೋಗಗಳು : ಕಾಂತ ಧ್ವನಿಮುದ್ರಣದ ಕೆಲವು ಮುಖ್ಯ ಉಪಯೋಗಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ.

ಸಂಗೀತ ಮತ್ತಿತರ ಕಾರ್ಯಕ್ರಮಗಳನ್ನು ಪೂರ್ವಭಾವಿಯಾಗಿ ಧ್ವನಿಮುದ್ರಿಸಿ ಅನಂತರ ರೇಡಿಯೋದಲ್ಲಿ ಅಥವಾ ಟೆಲಿವಿಷóನ್ನಿನಲ್ಲಿ ಪ್ರಸಾರ ಮಾಡಬಹುದು. ಹಲವು ಧ್ವನಿ ಮರುನುಡಿಸುವಿಕೆ ಯಂತ್ರಗಳಲ್ಲಿ ಉಪಯೋಗಿಸಿ ಇವುಗಳಲ್ಲಿ ಉದ್ಭವವಾದ ಶಬ್ದಗಳನ್ನು ಕಲೆಸಿದರೆ ಆಗ ಮರುಧ್ವನಿಯ ತರಹೆಯ ಶಬ್ದ ಉಂಟಾಗುತ್ತದೆ. ನಾಟಕಗಳಲ್ಲಿ ಈ ತರಹೆಯ ಕೃತಕ ಧ್ವನಿಗಳನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ದೊಡ್ಡ ದೊಡ್ಡ ಸಭಾಂಗಣಗಳಲ್ಲಿ ಧ್ವನಿವರ್ಧಕ ವ್ಯವಸ್ಥೆ ಮಾಡಲು ಸುತ್ತುತ್ತಿರುವ ಕಾಂತ ತಟ್ಟೆಯನ್ನು ಉಪಯೋಗಿಸುತ್ತಾರೆ.  ಉಪನ್ಯಾಸವನ್ನು ಪ್ರವರ್ಧಕದಿಂದ ನೇರವಾಗಿ ಹಲವು ಧ್ವನಿವರ್ಧಕಗಳಿಗೆ ಕೊಟ್ಟರೆ ನೇರವಾದ ಧ್ವನಿಗೂ ಧ್ವನಿವರ್ಧಕದ ಧ್ವನಿಗೂ ಕಾಲವ್ಯತ್ಯಾಸವಿರುವುದರಿಂದ ಕೇಳುವವರಿಗೆ ಬೆರಕೆಯ ಶಬ್ದದ ಪರಿಣಾಮ ಆಗುತ್ತದೆ. ಆದ್ದರಿಂದ ನೇರವಾದ ಶಬ್ದ ಒಂದು ಧ್ವನಿವರ್ಧಕದ ಸ್ಥಳಕ್ಕೆ ಬರಲು ಎಷ್ಟು ಕಾಲ ಬೇಕೋ ಅಷ್ಟು ಕಾಲ ವಿಳಂಬದ ತರುವಾಯ ಧ್ವನಿವರ್ಧಕಕ್ಕೆ ಧ್ವನಿ ಬರುವಂತೆ ಈ ತಟ್ಟೆ ಅವಕಾಶ ಮಾಡಿಕೊಡುತ್ತದೆ.  ದೂರವೀಕ್ಷಣ (ಟೆಲಿವಿಷóನ್) ಕಾರ್ಯಕ್ರಮದಲ್ಲಿ ಎರಡು ಅಥವಾ ಹೆಚ್ಚು ಮೆಗಾಹಟ್ರ್ಸ್‍ಗಳಷ್ಟು ಆವೃತ್ತಿ ಸಂಖ್ಯೆಯ ಸಂಜ್ಞೆಗಳನ್ನು ಧ್ವನಿಮುದ್ರಣ ಮಾಡಬೇಕಾಗುತ್ತದೆ.  ಇದಕ್ಕಾಗಿ ವಿಶೇಷವಾದ ಉಪಕರಣಗಳು ಬೇಕಾಗುತ್ತವೆ.

ಸಂಪರ್ಕ ಸಾಧನಗಳಲ್ಲಿ ಧ್ವನಿಮುದ್ರಕದ ಕೆಲವು ಉಪಯೋಗಗಳು ಹೀಗಿವೆ. ರಹಸ್ಯದ ಮಾತುಗಳನ್ನು ಬೆರೆಸಿ ಮತ್ತೆ ಆರಿಸಿ ಬೇರೆಯವರಿಗೆ ಸುದ್ದಿ ಗೊತ್ತಾಗದೆ ತಲುಪಬೇಕಾದವರಿಗೆ ಮಾತ್ರ ಗೊತ್ತಾಗುವಂತೆ ಮಾಡುವ ಸಾಧನಗಳು; ದೀರ್ಘಕಾಲ ಒಂದೇ ಸಮನೆ ಮುದ್ರಣ ಮಾಡುವುದು ; ದೂರವಾಣಿಯನ್ನು ಉತ್ತರಿಸುವ ಯಂತ್ರ ; ಚಿತ್ರಗಳನ್ನು ಕಾಂತ ರೂಪದಲ್ಲಿ ಮುದ್ರಿಸುವುದು ; ಆಸ್ಪತ್ರೆಗಳಲ್ಲಿ ರೋಗಿಗಳ ಚರಿತ್ರೆಯ ಧ್ವನಿಮುದ್ರಣ ; ಮನಶಾಸ್ತ್ರ ಸಂಬಂಧವಾದ ರೋಗಿಗಳ ಮಾತುಕತೆಗಳ ಧ್ವನಿಮುದ್ರಣ ; ಇತ್ಯಾದಿ. ವಿದ್ಯಾಭ್ಯಾಸ ಮತ್ತು ಕಲೆಯಲ್ಲಿ ಮಾತುಗಾರಿಕೆಯನ್ನು ಕಲಿಸಲು, ಭಾಷೆಗಳನ್ನು ಕಲಿಸಲು, ಸಂಗೀತವನ್ನು ಕಲಿಸಲು, ನಾಟಕದ ಅಭ್ಯಾಸದಲ್ಲಿ ಧ್ವನಿಮುದ್ರಕದ ಉಪಯೋಗ ಉಂಟು.

ವೈಜ್ಞಾನಿಕ ಸಂಶೋಧನೆಯಲ್ಲಿ ಅಂಕಿ-ಅಂಶಗಳು ಮತ್ತು ಸಮಾಚಾರಗಳನ್ನು ಸೂತ್ರರೂಪದಲ್ಲಿ ಧ್ವನಿಮುದ್ರಿಸಿಕೊಳ್ಳಲಾಗುವುದು. ಗಣಕಯಂತ್ರಗಳಲ್ಲಿ ಅತಿ ಮುಖ್ಯವಾದ ಜ್ಞಾಪಕಯಂತ್ರ ಎಂದರೆ ಒಂದು ಕಾಂತ ಧ್ವನಿಮುದ್ರಕ ಪೀಪಾಯಿ. ಗಲಭೆ ಗೊಂದಲದ ಮಧ್ಯೆ ಹುದುಗಿರುವ ಕ್ಷೀಣವಾದ ಆವಶ್ಯಕ ಸಮಾಚರವನ್ನು ಅದು ನಿರ್ದಿಷ್ಟ ಅವಧಿಯಲ್ಲಿ ಪುನರುಚ್ಚಾರವಾಗುತ್ತಿದ್ದರೆ ಅದನ್ನು ಕಂಡುಹಿಡಿಯಬಹುದು.

ಕಾರ್ಖಾನೆಗಳಲ್ಲಿ ಯಂತ್ರಗಳಿಗೆ ಸ್ವಯಂಚಾಲಿತವಾಗಿ ಕೆಲಸ ಮಾಡಲು ಆಜ್ಞೆಗಳನ್ನು ಸೂತ್ರರೂಪದಲ್ಲಿ ಧ್ವನಿಮುದ್ರಿತವಾಗಿಸಬಹುದು. ವಸ್ತುಗಳ ಪರೀಕ್ಷೆಯ ಸುತ್ತುಗಳನ್ನು ನಿರ್ಬಂಧಿಸಬಹುದು. ಮುಖ್ಯವಾದ ಮಾತುಕತೆಗಳನ್ನು ಧ್ವನಿಮುದ್ರಿಸಿಕೊಳ್ಳಬಹುದು.      

                                                                      (ಎನ್.ಕೆ.ಎಸ್.)

(ಪರಿಷ್ಕರಣೆ: ಹೆಚ್.ಆರ್.ಆರ್)