ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಂದಹಾರ್

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಕಾಂದಹಾರ್

 ಆಫ್ಪಾನಿಸ್ತಾನದ ಎರಡನೆಯ ನಗರ: ಅದೇ ಹೆಸರಿನ ಪ್ರಾಂತ್ಯದ ಮುಖ್ಯಸ್ಥಳ, ಸಮುದ್ರಮಟ್ಟಕ್ಕಿಂತ 3,300 ಎತ್ತರದಲ್ಲಿ, ಕಾಬೂಲಿನ ನೈಋತ್ಯಕ್ಕೆ 320 ಮೈ, ದೂರದಲ್ಲಿದೆ. ಪಾಕಿಸ್ತಾನದ ಕೆಟ್ಟ ಇರುವುದು. ಇಲ್ಲಿಗೆ 130 ಮೈ, ದೂರದಲ್ಲಿ-ಆಗ್ನೇಯಕ್ಕೆ. ಕಾಂದಹಾರದ ಜನಸಂಖ್ಯೆ 1,20, 000 (1960ರ ಅಂದಾಜು). ಕಾಂದಹಾರದ ಸುತ್ತಮುತ್ತಣ ಸೀಮೆಯಲ್ಲಿರುವಂತೆ ಇಲ್ಲೂ ಪಠಾಣರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಪಠಾಣರ ಇನ್ನೊಂದು ಪ್ರಬಲ ಕೇಂದ್ರವೆಂದರೆ ಪಾಕಿಸ್ತಾನದಲ್ಲಿರುವ ಪೆಷಾವರ್. ಪೆಷಾವರಿನ ಜನ ಆಡುವ ಭಾಷೆಗಿಂತ (ಪಖ್ತು) ಕಾಂದಹಾರದವರದು (ಪಷ್ಟೂ) ಹೆಚ್ಚು ಮೃದು.

 ಆಧುನಿಕ ಕಾಂದಹಾರ್ ನಗರದಲ್ಲಿ ಶಾಲೆ, ಕಾಲೇಜು, ಚಿತ್ರಮಂದಿರಗಳೇ ಮುಂತಾದ ಅನೇಕ ನೂತನ ಭವನಗಳಿವೆ. ಜನನಿಬಿಡವಾದ ಹಳೆಯ ನಗರವಿರುವುದು ಇದಕ್ಕೆ ಪೂರ್ವದಲ್ಲಿ. ಅದನ್ನು ನಿರ್ಮಿಸಿದಾತ ಅಹಮದ್ ಷಾ ದುರಾನಿ (1724-73). ಹಳೆಯ ನಗರವನ್ನು ಬಳಸಿದ್ದ ಆಯಾಕಾರದ ಮಣ್ಣಿನ ಕೋಟೆ ಬಹುತೇಕ ಬಿದ್ದು ಹೋಗಿದೆ. ಆದರೂ ಅದರ ಕುರುಹುಗಳನ್ನು ಈಗಲೂ ಕಾಣಬಹುದು. ಅಹಮದ್ ಷಾನ ಸಮಾಧಿಯಿರುವುದು ಈಶಾನ್ಯ ಮೂಲೆಯಲ್ಲಿ. ನಗರದಲ್ಲಿರುವ ಸ್ಮಾರಕಶಿಲ್ಪ ಇದೊಂದೇ. ಪ್ರವಾದಿ ಮಹಮ್ಮದನ ಬಟ್ಟೆಯಿದೆಯೆಂದು ಹೇಳಲಾದ ಮಸೀದಿ ಇರುವುದು ಇದರ ಪಕ್ಕದಲ್ಲಿ.

ಈಗಿನ ನಗರಕ್ಕೆ ಪಶ್ಚಿಮದಲ್ಲಿ 4 ಮೈ, ಅಂತರದಲ್ಲಿ ಬೆಟ್ಟದ ಪಾಶ್ರ್ವದಲ್ಲಿ ಹಳೆಯ ಕಾಂದಹಾರದ ಅವಶೇಷಗಳಿವೆ. 1738ರಲ್ಲಿ ನಾದಿರ್ ಷಾ ಅದನ್ನು ಕೊಳ್ಳೆಹೊಡೆದು ನಾಶಪಡಿಸಿದ. ಅದರ ನಡುವೆ ಇರುವ ಬಾಬಾವಾಲಿಯ ಉದ್ಯಾನವೂ ಈಗಲೂ ಯಾತ್ರಿಕರ ಆಕರ್ಷಣೆಯಾಗಿರುವ ಒಂದು ದೇವಮಂದರಿವೂ ಇವೆ. ಇಲ್ಲಿಯ ಬೆಟ್ಟದಲ್ಲಿ ಮೊಗಲ್ ಚಕ್ರವರ್ತಿಗಳಾದ ಬಾಬರ್ ಮತ್ತು ಅಕ್ಬರರ ಶಾಸನಗಳಿವೆ. ಅಶೋಕನದೊಂದು ಶಿಲಾಶಾಸನವೂ ಸನಿಯದಲ್ಲೇ ಸಿಕ್ಕಿದೆ. ಇದುವರೆಗೆ ದೊರಕಿರುವ ಅಶೋಕಶಾಸನಗಳಲ್ಲಿ ಇದೇ ಅತ್ಯಂತ ಪಶ್ಚಿಮದ್ದು.

 ಕಾಂದಹಾರದ ಸ್ಥಾನ ಮಹತ್ತ್ವಪೂರ್ಣವಾದದ್ದು. ವಾಯವ್ಯ ಆಫ್ಘಾನಿಸ್ತಾನದ ಹೆರಾತಿನಿಂದ ಭಾರತ-ಪಾಕಿಸ್ತಾನ್ ಉಪಖಂಡಕ್ಕೆ ಹೋಗುವ ಹಾದಿ ಸಾಗುವುದು. ಇದರ ಮೂಲಕವೇ, ಪಾಕಿಸ್ತಾನಕ್ಕೂ ಇದಕ್ಕೂ ರೈಲು ಮತ್ತು ರಸ್ತೆ ಸಂಪರ್ಕವಿದೆ. ಕಾಂದಹಾರದಿಂದ ಹೆರಾತಿನ ಮೂಲಕ ಸೋವಿಯತ್ ದೇಶಕ್ಕೂ ಕಾಬೂಲಿಗೂ ಮಾರ್ಗಗಳಂಟು. ತೆಹರಾನ್-ದೆಹಲಿಗಳ ನಡುವೆ ಇರುವ ಕಾಂದಹಾರದಲ್ಲಿ 1960ರಲ್ಲಿ ಒಂದು ವಿಮಾನ ನಿಲ್ದಾಣವನ್ನು ನಿರ್ಮಿಸಲಾಯಿತು.

 ಕಾಂದಹಾರ್ ಆಫ್ಘಾನಿಸ್ತಾನದ ಮುಖ್ಯ ವ್ಯಾಪಾರಕೇಂದ್ರ. ಇಲ್ಲಿಯ ಉಣ್ಣೆ ಅತ್ಯಂತ ಪ್ರಸಿದ್ಧ. ಇಲ್ಲೊಂದು ಆಧುನಿಕ ಉಣ್ಣೆ ಗಿರಣಿಯುಂಟು. ಇದು ಉತ್ಪಾದಿಸುವ ಬಟ್ಟೆ ಬಹುತೇಕ ಆಫ್ಘಾನಿಸ್ತಾನದಲ್ಲೇ ಮಾರಾಟವಾಗುತ್ತದೆ. ದ್ರಾಕ್ಷಿ, ಸೇಬು, ದಾಳಿಂಬೆ ಮುಂತಾದ ಹಣ್ಣುಗಳು ಹೇರಳವಾಗಿ ಇಲ್ಲಿಂದ ರಫ್ತಾಗುತ್ತವೆ. ಹತ್ತಿ, ಮಂಜಿಷ್ಟ, ಜೀರಿಗೆ ಮತ್ತು ಇಂಗು ಇತರ ರಫ್ತುಗಳು. ಇಲ್ಲಿಯ ಪೇಟೆಬೀದಿಗಳಲ್ಲಿರುವ ಅಂಗಡಿಗಳಲ್ಲಿ ವಿಶ್ವದ ಎಲ್ಲ ಕಡೆಗಳಿಂದ ಬಂದ ಸರಕುಗಳನ್ನು ಪ್ರದರ್ಶಿಸಿರುವುದನ್ನು ಕಾಣಬಹುದು.

(ಕೆ.ಆರ್.ಆರ್.)

 ಕಾಂದಹಾರ್ ಪ್ರಾಂತ್ಯದ ಜನಸಂಖ್ಯೆ 9, 27,855 (1954). ಉತ್ತರ ದಕ್ಷಿಣವಾಗಿ ಹeóÁರಾ ಪರ್ವತ ಪ್ರದೇಶದಿಂದ ರೆಜಿಸ್ತಾನ್ ಮರುಭೂಮಿ ಮತ್ತು ಪಾಕಿಸ್ತಾನದ ಗಡಿಯವರೆಗೂ ಪೂರ್ವಪಶ್ಚಿಮವಾಗಿ ಕಲಾತ್-ಇ-ಫಿಲ್ಜಾಯಿಯಿಂದ ಹೆಲ್ಮಂಡ್ ನದಿಯ ಸನಿಯದವರೆಗೂ ಈ ಪ್ರಾಂತ್ಯ ಹಬ್ಬಿದೆ. ಪ್ರಾಂತ್ಯದ ವಾಯುಗುಣ ಅತ್ಯಂತ ಹಿತಕರವಾಗಿರುವುದು ವಸಂತ ಋತುವಿನಲ್ಲಿ.  ಸಹಿಸಲಾಸಾಧ್ಯವಾದ ಚಳಿಯೇನೂ ಇಲ್ಲಿಲ್ಲ. ಆದರೆ ಬೇಸಗೆ ಮಾತ್ರ ಬಲು ತಾಪಕರ; ಆಗ ಒಣ ಹವೆಯಿರುತ್ತದೆ.  ನದಿಯಿರುವೆಡೆಯಲ್ಲಿ ನೀರಾವರಿ ಸೌಲಭ್ಯವುಂಟು. ಇಲ್ಲದಲ್ಲಿ ಬೆಟ್ಟದ ಬುಡದ ನೀರಿನ ಆಸರೆಯಿಂದ ನೆಲದಡಿಯಲ್ಲೇ ಕಾಲುವ ರಚಿಸಿ ನೀರು ಹಾಯಿಸಿಕೊಳ್ಳುವುದೂ ಉಂಟು. ಕಾಂದಹಾರದ ಮಧ್ಯಪ್ರದೇಶ ಫಲವತ್ತಾದುದ್ದು, ಕಾಂದಹಾರದ ದಕ್ಷಿಣಕ್ಕೂ ಪೂರ್ವಕ್ಕೂ ಇರುವ ಪ್ರದೇಶ ನೀರಾವರಿ ಬೇಸಾಯಕ್ಕೊಳಪಟ್ಟಿದೆ. ಕಜಕೈ ಮತ್ತು ಆರ್ಗಂದಾಬ್ ಕಟ್ಟೆಗಳಿಂದ ಕಲ್ಪಿಸಲಾದ ನೀರಾವರಿ ಸೌಲಭ್ಯದಿಂದ ಕಾಂದಹಾರ್ ಪ್ರಾಂತ್ಯದಲ್ಲಿ ಕೃಷಿಯನ್ನು ಅಭಿವೃದ್ಧಿಪಡಿಸಲಾಗಿದೆಯಲ್ಲದೆ ಕಾಂದಹಾರ್ ನಗರಕ್ಕೆ ವಿದ್ಯುತ್ ಸರಬರಾಜೂ ಆಗುತ್ತದೆ. ಹೊಸದಾಗಿ ಬೇಸಾಯಕ್ಕೊಳಪಡಿಸಿದ ನೆಲದಲ್ಲಿ ಆಫ್ಫನ್ ಅಲೆಮಾರಿಗಳನ್ನೂ ಕುಚಿ ಜನರನ್ನೂ ನೆಲೆಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಹಣ್ಣು, ಉಣ್ಣೆ, ಗೋದಿ, ಬಾರ್ಲಿ, ಬೇಳೆ, ಮಂಜಿಷ್ಟ (ಮಾಡರ್), ಇಂಗು, ಕುದುರೆ ಮಸಾಲೆ ಸೊಪ್ಪು, (ಆಲ್ಫಾಲ್ಫ), ಕ್ಲೋವರ್, ಹೊಗೆಸೊಪ್ಪು-ಇವು ಮುಖ್ಯ ಬೆಳೆಗಳು.

 ಇತಿಹಾಸ: ಮಧ್ಯ ಏಷ್ಯ, ಕಾಬೂಲ್ ಮತ್ತು ಭಾರತಗಳ ನಡುವೆ ಇರುವೆ ಕಾಂದಹಾರದ ಸ್ಥಾನಮಹತ್ತ್ವದಿಂದಾಗಿ ಅದರ ಇತಿಹಾಸ ಅನೇಕ ಘಟನೆಗಳಿಂದ ತುಂಬಿದ್ದಾಗಿದೆ. ಪರ್ಷಿಯನ್ ದೊರೆ 1ನೆಯ ದರೈಯಸ್ (ಆಚಿಡಿius) (ಕ್ರಿ.ಪೂ. 528-486) ಈ ಪ್ರದೇಶವನ್ನು ತನ್ನ ಸಾಮ್ರಾಜ್ಯದಲ್ಲಿ ಸೇರಿಸಿಕೊಂಡಿದ್ದ. ಕ್ರಿ.ಪೂ. 329ರಲ್ಲಿ ಅಲೆಕ್ಸಾಂಡರ್ ಅದನ್ನು ಗೆದ್ದುಕೊಂಡ. ಸಿರಿಯದ ದೊರೆ ಸೆಲ್ಯೂಕಸನಿಂದ ಅದು ಕ್ರಿ.ಪೂ. 305ರಲ್ಲಿ ಚಂದ್ರಗುಪ್ತ ಮೌರ್ಯನ ವಶಕ್ಕೆ ಬಂತು. ಅಶೋಕ ಇಲ್ಲೊಂದು ಶಿಲಾಶಾಸನ ಸ್ಥಾಪಿಸಿ ಅದಕ್ಕೆ ಇತಿಹಾಸದಲ್ಲಿ ಮರ್ಯಾದೆಯ ಸ್ಥಾನ ದೊರಕಿಸಿಕೊಟ್ಟ. ಅಲ್ಲಿಂದೀಚೆಗೆ ಅದು ಕ್ರಮವಾಗಿ ಗ್ರೀಕೋ-ಬ್ಯಾಕ್ಟ್ರಿಯನರ, ಪಾರ್ಥಿಯನರ, ಶಕರ, ಕುಶಾನರ ಮತ್ತು ಸಸಾನಿಯನರ ಒಡೆತನಕ್ಕೆ ಒಳಪಟ್ಟತ್ತು.  7ನೆಯ ಶತಮಾನದಲ್ಲಿ ಅದನ್ನು ಅರಬರು ವಶಪಡಿಸಿಕೊಂಡರು.  8ನೆಯ ಶತಮಾನದಲ್ಲಿ ಅಬ್ಬಾಸಿದ್ ಕಲೀಫ್ ಅಲ್-ಮನ್ಸೂರ್ ತನ್ನ ಒಡೆತನ ಸ್ಥಾಪಿಸಿದ. 9ನೆಯ ಶತಮಾನದಲ್ಲಿ ಇದು ಸಫರಿದ್ ರಾಜ್ಯಕ್ಕೂ 977ರಲ್ಲಿ ಫಜ್ನವೀಡ್ ಆಡಳಿತಕ್ಕೂ ಒಳಪಟ್ಟಿತ್ತು. ಕಾಂದಹಾರ್ ನಗರಕ್ಕೆ ಪ್ರತಿಸ್ಪರ್ಧಿಯಾಗಿದ್ದ ಬಸ್ತ್ ನಗರವನ್ನು 1150ರಲ್ಲಿ ಅಲ್ಲಾ ಉದ್-ದೀನ್ ಫೋರಿ ನಾಶಪಡಿಸಿದಾಗ ಕಾಂದಹಾರದ ಪ್ರಾಮುಖ್ಯ ಹೆಚ್ಚಿತು.  1383ರಲ್ಲಿ ತೈಮೂರ್ ಆ ಸುತ್ತಣ ಪ್ರದೇಶವನ್ನೆಲ್ಲ ಗೆದ್ದುಕೊಂಡು ಅಲ್ಲಿ ರಾಜ್ಯಪಾಲನ್ನೊಬ್ಬನನ್ನು ನೇಮಿಸಿದ. 15ನೆಯ ಶತಮಾನದಲ್ಲಿ ಅದು ಹೆರಾತಿನ ದೊರೆ ಹುಸೇನ್ ಬೇಕಾರನಿಗೆ ಸೇರಿತ್ತು.

 1522ರ ವೇಳೆಗೆ ಅದರ ಮೇಲೆ ಮೊಗಲ್ ಚಕ್ರವರ್ತಿ ಬಾಬರನ ಒಡೆತನ ಸ್ಥಾಪಿತವಾಗಿತ್ತು. ಅನಂತರ ಅದಕ್ಕಾಗಿ ಮೊಗಲರಿಗೂ ಪರ್ಷಿಯನ್ ಸಫಾವಿದರಿಗೂ ಸ್ಪರ್ಧೆ ನಡೆದಿತ್ತು. 1545ರಲ್ಲಿ ಹುಮಾಯೂನ್ ದೇಶಭ್ರಷ್ಟನಾಗಿದ್ದಾಗ, ಅವನ ಪರ್ಷಿಯನ್ ಮಿತ್ರರು ಅದನ್ನು ವಶಪಡಿಸಿಕೊಂಡಿದ್ದರು. ಅನಂತರ ಹುಮಾಯೂನ್ ಅದನ್ನು ತನ್ನ ಅಧೀನಕ್ಕೆ ತೆಗೆದುಕೊಂಡ. ಹುಮಾಯೂನ್ ಮರಾಣಾನಂತರ, 1558ರಲ್ಲಿ, ಅಕ್ಬರ್ ಇನ್ನೂ ಚಿಕ್ಕವನಾಗಿದ್ದಾಗ, ಷಾ ತಹಮಾಸ್ಟ್ ಕಾಂದಹಾರನ್ನು ಆಕ್ರಮಿಸಿಕೊಂಡ.  1585ರಲ್ಲಿ ಸಿಂಧ್ ಪ್ರದೇಶವನ್ನು ಅಕ್ಬರ್ ಗೆದ್ದುಕೊಂಡಾಗಲೇ ಕಾಂದಹಾರವೂ ಅವನ ಪುನರ್ವಶವಾದದ್ದು. 1622ರಲ್ಲಿ ಮೊಗಲರ ದೃಷ್ಟಿ ದಖನಿನ ಕಡೆಗೆ ಹರಿದಿದ್ದಾಗ ಷಾ ಅಬ್ಬಾಸ್ ಕಾಂದಹಾರನ್ನು ಕಬಳಿಸಿದ. ಆದರೆ 1638ರಲ್ಲಿ ಅಲ್ಲಿದ್ದ ಪರ್ಷಿಯನ್ ರಾಜ್ಯಪಾಲ ಅಲಿಮರ್ದಾನ್ ಖಾನ್ ಮೊಗಲರ ಕಡೆ ಸೇರಿಕೊಂಡಿದ್ದರಿಂದ ಕಾಂದಹಾರ್ ಮತ್ತೆ ಮೊಗಲರದಾಯಿತು. 1649ರಲ್ಲಿ 2ನೆಯ ಷಾ ಅಬ್ಬಾಸ್ ಕಾಂದಹಾರದ ಮೇಲೇರಿ ಹೋಗಿ ಅದನ್ನು ಗೆದ್ದುಕೊಂಡನಲ್ಲದೆ 1649, 1652 ಮತ್ತು 1653ರಲ್ಲಿ ಅವರ ಸೈನ್ಯಗಳನ್ನು ಎದುರಿಸಿದ.

 ಆದರೆ ಪರ್ಷಿಯನರು ಬಹುಕಾಲ ಅದನ್ನು ಇಟ್ಟುಕೊಳ್ಳಲಾಗಲಿಲ್ಲ. ಘಿಲ್ಜೈಯಲ್ಲಿ ಅವರ ರಾಜ್ಯಪಾಲನಾಗಿದ್ದ ಮೀರ್ ವೇಸ್ 1709ರಲ್ಲಿ ಅದನ್ನು ತನ್ನದನ್ನಾಗಿ ಮಾಡಿಕೊಂಡ. ಅವನ ವಂಶಸ್ಥರು ಪರ್ಷಿಯದ ಬಹುಭಾಗವನ್ನು ಗೆದ್ದರು. ಅನಂತರ ನಾದಿರ್ ಷಾ ದೀರ್ಘ ಕಾಲ ಹೋರಾಟ ನಡೆಸಿ 1738ರಲ್ಲಿ ಕೊನೆಗೂ ಕಾಂದಹಾರದ ಮೇಲೆ ಪರ್ಷಿಯನರ ಅಧಿಕಾರವನ್ನು ಪುನಃಸ್ಥಾಪಿಸಿದ. ಆದರೆ ಅವನ ಮರಣಾನಂತರ ಕಾಂದಹಾರ್ ಮತ್ತೆ ಹಸ್ತಾಂತರಗೊಂಡಿತು. ಆಫ್ಫನ್ ಸೇನಾನಿ ಅಹಮದ್ ಷಾ ಕಾಂದಹಾರದ ಹೊಸ ನಗರ ಮಾಡಿ ಅದನ್ನು ದುರಾನಿ ಮನೆತನದ ರಾಜ ಧಾನಿಯಾನ್ನಾಗಿ ಮಾಡಿದ. ಅವನ ಮಗ ತೈಮೂರ್ ತನ್ನ ರಾಜಧಾನಿಯನ್ನು ಕಾಬೂಲಿಗೆ ವರ್ಗಾಯಿಸಿದನಾದರೂ ಕಾಂದಹಾರ್ ಮಾತ್ರ ಕೈಚೆಂಡಿನಂತೆ ಅರಸರ ನಡುವೆ ಪದೇಪದೇ ತಾಕಲಾಡುತ್ತಿತ್ತು.

 ಪ್ರಾಬಲ್ಯ ಗಳಿಸುತ್ತಿದ್ದ ರಷ್ಯಕ್ಕೆ ತಡೆಯೊಡ್ಡಲು ಭಾರತದಲ್ಲಿದ್ದ ಬ್ರಿಟಿಷ್ ಸರ್ಕಾರ ಕಾಂದಹಾರದತ್ತ ಕಣ್ಣು ಹಾಯಿಸಿತು. 1839ರಲ್ಲಿ ಷಾ ಪೂಜನ ಸೈನ್ಯ ಕಾಂದಹಾರವನ್ನಾಕ್ರಮಿಸಿಕೊಂಡಾಗ ಅವನಿಗೆ ಬ್ರಿಟಿಷ್ ಬೆಂಬಲವಿತ್ತು. ಅದು ಮೊದಲನೆಯ ಆಫ್ಫನ್ ಯುದ್ಧ. 1842ರಲ್ಲಿ ಜನರಲ್ ವಿಲಿಯಂ ಕಾಬೂಲಿನ ಆಕ್ರಮಣ ಮಾಡಲು ಕಾಂದಹಾರವೇ ನೆಲೆವಾಗಿ ಪರಿಣಮಿಸಿತು. ಎರಡನೆಯ ಆಫ್ಫನ್ ಯುದ್ಧಕಾಲದಲ್ಲಿ ಬ್ರಿಟಿಷರು ಮತ್ತೆ ಕಾಂದಹಾರದ ಮೇಲೆ ಆಕ್ರಮಣ ನಡೆಸಿದರು (1879). ಬ್ರಿಟಿಷರು ಆಫ್ಫಾನಿಸ್ತಾನವನ್ನು ಛಿದ್ರಗೊಳಿಸಲು ಬಗೆಬಗೆಯ ಹಂಚಿಕೆ ನಡೆಸಿದರು. ಅಬ್ದುಲ್ ರಹಮಾನನನ್ನು ಆಫ್ಫಾನಿಸ್ತಾನದ ವಜೀರನೆಂದು ಪರಿಗಣಿಸಿ ಕಾಂದಹಾರವನ್ನು ಅವನಿಗೆ ಒಪ್ಪಿಸಿದರು. ಅನಂತರ ಅವನಿಗೂ ಅಯೂಬ್ ಖಾನನಿಗೂ ನಡೆದ ಹೋರಾಟಗಳಲ್ಲಿ ಕಾಂದಹಾರ್ ಮತ್ತೆ ಕೈ ಬದಲಾಯಿಸಿತ್ತು. 1881ರಲ್ಲಿ ಖಾಯವಾಗಿ ಅಬ್ದುರ್ ರಹಮಾನನ ವಶಕ್ಕೆ ಬಂತು. ಅಲ್ಲಿಂದೀಚೆಗೆ ಕಾಂದಹಾರ್ ಬಹುತೇಕ ನೆಮ್ಮದಿಯ ನೆಲೆಯಾಗಿದೆ.