ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾರುಗಹಳ್ಳಿಯ ಕಾಳಗ

ವಿಕಿಸೋರ್ಸ್ದಿಂದ

"ಕಾರುಗಹಳ್ಳಿಯ ಕಾಳಗ" ಮತ್ತು "ಪಾಳೆಯಗಾರ ಮಾರನಾಯಕ"

Idol of Karugahalli Palegar Maranayaka worshipping at Uttanahalli Temple, Mysore.


 ಮೈಸೂರಿನಲ್ಲಿ ಒಡೆಯರ್ ಮನೆತನದ ಸ್ಥಾಪನೆಯ ಇತಿಹಾಸಕ್ಕೆ ಸಂಬಂಧಪಟ್ಟ, ಸುಮಾರು 14ನೇ ಶತಮಾನದ ಕೊನೆಯಲ್ಲಿ ನಡೆದಿರಬಹುದಾದ ಒಂದು ಪ್ರಮುಖ ಘಟನೆಯನ್ನು ಸೂಚಿಸುವ ಕಾಳಗದ ಕಥೆ ಈ “ಕಾರುಗಹಳ್ಳಿ ಕಾಳಗ”. ಇದರ ಬಗ್ಗೆ ಜಾನಪದದಲ್ಲಿ ಬರುವ ವಿವರಗಳನ್ನಿಲ್ಲಿ ಕೊಡಲಾಗಿದೆ. ಕಾರುಗಹಳ್ಳಿ ಮತ್ತು ಹದಿನಾಡು ಅಕ್ಕಪಕ್ಕದ ಪಾಳೆಯಪಟ್ಟುಗಳು. ಕಾರುಗಹಳ್ಳಿಯಲ್ಲಿ  ತೊರೆಯರ್ ಕುಲ (ರಾಜ ಪರಿವಾರ ನಾಯಕರು)’ದ ಮಾರನಾಯಕನೂ, ಹದಿನಾಡಿನಲ್ಲಿ ಜಂಗಮ ಒಡೆಯರ್ ಕುಲದ (ಅರಸು) ಚಾಮರಾಜ ಒಡೆಯನು ಆಳುತ್ತಿದ್ದರು. ಹದಿನಾಡು ಪಾಳೆಯಗಾರನಿಗೆ ಅನಿರೀಕ್ಷಿತವಾಗಿ ಬುದ್ಧಿವಿಕಲ್ಪ ಉಂಟಾಗಿ ಮರಣ ಹೊಂದಿದ. ಈ ಸಮಯವನ್ನು ಉಪಯೋಗಿಸಿಕೊಂಡು ಹದಿನಾಡನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಮಹಾತ್ವಕಾಂಕ್ಷಿಯಾದ ಕಾರುಗಹಳ್ಳಿಯ ಪಾಳೇಗಾರ ಮಾರನಾಯಕನು ಹಂಚಿಕೆ ಹಾಕಿದ. ಅದರಂತೆ ಹದಿನಾಡು ಪಾಳೆಗಾರನ ಒಬ್ಬಳೇ ಮಗಳನ್ನು ತನಗೆ ಕೊಟ್ಟು ಮದುವೆ ಮಾಡಬೇಕೆಂದು ಹೇಳಿ ಕಳುಹಿಸಿದ. ಆದರೆ ಕಾರುಗಹಳ್ಳಿ ಪ್ರಬಲ ಸಂಸ್ಥಾನ. ಹಾಗೂ ಮೈಸೂರಿಗಿಂತಲೂ ಹಳೆಯದಾದ ಸಂಸ್ಥಾನ.  ತನ್ನ ಒಬ್ಬಳೇ ಮಗಳನ್ನು ಮಾರನಾಯಕನಿಗೆ ಮದುವೆ ಮಾಡಿಕೊಟ್ಟುಬಿಟ್ಟರೇ “ರಾಜ ಪರಿವಾರದವರಿಗೆ ಕೊಡುವಂಥ ತೆರವ್ಯಾಗೆ” ಎಂಬುದು ಹದಿನಾಡು ಪಾಳೇಗಾರನ ಪತ್ನಿಯ ಚಿಂತೆಯಾಗಿತ್ತು. ವರದಕ್ಷಿಣೆ ರೂಪದಲ್ಲಿ ತನ್ನ ರಾಜ್ಯವನ್ನೆಲ್ಲ ಮಾರನಾಯಕನಿಗೆ ಹಸ್ತಾಂತರಿಸಬೇಕಾಗುತ್ತದೆ ಎಂಬ ಕಾರಣದಿಂದ ಹದಿನಾಡು ಪ್ರದೇಶದ ಪಾಳೇಗಾರನ ಪತ್ನಿ ತನ್ನ ಮಗಳನ್ನು ಮಾರನಾಯಕನಿಗೆ ಕೊಡಲು ಒಪ್ಪಲಿಲ್ಲ. ಬದಲಾಗಿ ಮನೆ ಅಳಿಯನನ್ನು ತಂದುಕೊಂಡು ರಾಜ್ಯವನ್ನು ತನ್ನಲ್ಲೇ ಉಳಿಸಿಕೊಳ್ಳುವ ಯೋಚನೆ ಮಾಡಿದಳು.  ತನ್ನ ನಿರಾಕರಣೆಗೆ ಜಾತಿಯ ಕಾರಣ ಒಡ್ಡಿದಳು. ಇದರಿಂದ ಸ್ವಾಭಿಮಾನ ಕೆರಳಿ ಸಿಟ್ಟುಗೊಂಡ ಮಾರನಾಯಕ ಹದಿನಾಡನ್ನು ಸುಲಭವಾಗಿ ವಶಕ್ಕೆ ತೆಗೆದುಕೊಂಡನಲ್ಲದೆ, ರಾಜಪುತ್ರಿಯನ್ನು ತನಗೆ ಮದುವೆ ಮಾಡಿಕೊಡಲು ಏರ್ಪಾಡು ಮಾಡಿಕೊಡಬೇಕೆಂದು ಆಜ್ಞಾಪಿಸಿದ. ಮಾರನಾಯಕನನ್ನು ನೇರವಾಗಿ ಎದುರಿಸಲು ಆಗದ್ದರಿಂದ, ಹದಿನಾಡು ಪಾಳೆಯಗಾರನ ಪತ್ನಿಯು ತನ್ನ ಪರವಾಗಿರುವ ಕೆಲ ವೈದಿಕರ ಜೊತೆ ಸೇರಿ ಮಾರನಾಯಕನನ್ನು ಮುಗಿಸಲು ಒಳಗೊಳಗೆ ಸಂಚು ನಡೆಸಿದ್ದಳು. ಆದರೆ ಮಾರನಾಯಕ ಈ ಯಾವುದನ್ನೂ ಗಮನಿಸದೇ, ರಾಜ್ಯದ ಸುಧಾರಣೆಯಲ್ಲಿ ತೊಡಗಿದ್ದ. ಹೀಗಿರುವಾಗ ಉತ್ತರ ದೇಶದ ಕಡೆಯಿಂದ ಯಾದವ ವಂಶಸ್ಥರೆಂದುಕೊಂಡು ವಿಜಯ, ಕೃಷ್ಣ ಎಂಬ ಯುವಕರಿಬ್ಬರು ಹದಿನಾಡು ಪ್ರಾಂತ್ಯಕ್ಕೆ ಅಲೆಮಾರಿಗಳಾಗಿ ಬಂದರು. ಜಂಗಮವೋರ್ವನಿಂದ ಹಾಗೂ ಜನರಿಂದ ಅಲ್ಲಿನ ಪಾಳೇಗಾರರ ಮನೆಗೆ ಒದಗಿರುವ ಕಷ್ಟದ ಕತೆ ಕೇಳಿದರು. ಸಾಹಸಿಗಳಾದ ಅವರು ಈ ಸಂದರ್ಭವನ್ನು ಸದುಪಯೋಗಿಸಿಕೊಳ್ಳಲು ಯೋಚಿಸಿ, ಅರಮನೆಗೆ ರಹಸ್ಯವಾಗಿ ಹೇಳಿ ಕಳಿಸಿದರು. ಮಾರನಾಯಕನನ್ನು ಸಂಹರಿಸುವ ರಹಸ್ಯ ಯೋಜನೆಯೊಂದು ಹೀಗೆ ಸಿದ್ಧವಾಯಿತು. ಆಗ ಹದಿನಾಡು ನೇರವಾಗಿ ಯುದ್ಧದಲ್ಲಿ ಮಾರನಾಯಕನನ್ನು ಎದುರಿಸುವ ಸ್ಥಿತಿಯಲ್ಲಿ ಇರಲಿಲ್ಲ. ಎಲ್ಲವೂ ಸಿದ್ಧವಾದ ಮೇಲೆ ಮಾರನಾಯಕನನ್ನು ಅರಮನೆಗೆ ಭೋಜನಕ್ಕೆ ಆಹ್ವಾನಿಸಲಾಯಿತು. ಯಾವ ಆತಂಕವೂ ಇಲ್ಲದೆ ಊಟಕ್ಕೆಂದು ಕುಳಿತಿದ್ದ ಮಾರನಾಯಕನ ಮೇಲೆ, ಆ ಮೊದಲೇ ಬಂದು ಅರಮನೆಯಲ್ಲಿ ಅಡಗಿದ್ದ ವಿಜಯ ಮತ್ತು ಕೃಷ್ಣರು ಹಿಂದೆಯಿಂದ ಬಿದ್ದು ಕೊಂದುಹಾಕಿದರು. ಆಹಾರದಲ್ಲಿ ಮಾದಕವಸ್ತು ಸೇರಿಸಿಕೊಟ್ಟು ಪ್ರಜ್ಞೆ ತಪ್ಪಿದ ಮಾರನಾಯಕನ್ನು ಕೊಂದರು ಎಂಬ ಕತೆಯೂ ಉಂಟು. ಕೂಡಲೇ ವಿಜಯ, ಕೃಷ್ಣರು ಹದಿನಾಡನ್ನು ತಮ್ಮ ವಶಪಡಿಸಿಕೊಂಡುದಲ್ಲದೆ ಸೈನ್ಯಸಮೇತರಾಗಿ ಕಾರುಗಹಳ್ಳಿಗೆ ಧಾವಿಸಿ ಅದನ್ನೂ ತಮ್ಮ ಅಧೀನಕ್ಕೆ ತೆಗೆದುಕೊಂಡರು. ಹೀಗೆ ಮೈಸೂರು ಇತಿಹಾಸದಲ್ಲಿ ಮಾರನಾಯಕ ಓರ್ವ ದುರಂತ ನಾಯಕನಾಗಿ ಜನಮಾನಸದಲ್ಲಿ ಇಂದಿಗೂ ಉಳಿದುಕೊಂಡು ಬಂದಿದ್ದಾನೆ. ಇದು ಕಾರುಗಹಳ್ಳಿಯ ಕಾಳಗದ ಮೊದಲ ಭಾಗ.
ವಿಜಯನಗರ ಸಾಮ್ರಾಜ್ಯ ಬಲಗುಂದುತ್ತ ಬಂದಂತೆಲ್ಲ ಅದರ ಸಾಮಂತರು, ಪಾಳೇಗಾರರು ಸ್ವತಂತ್ರರಾಗುತ್ತ ಬಂದರು. ಕಡೆಗೆ ಒಬ್ಬೊಬ್ಬರಾಗಿ ತಮ್ಮ ಸ್ವಾತಂತ್ರ್ಯವನ್ನು ಘೋಷಿಸಿಕೊಂಡರು. ಅವರಲ್ಲಿ ಮೈಸೂರು ಅರಸರೂ ಸೇರುತ್ತಾರೆ. ಆಗ ಈ ಪ್ರಾಂತ್ಯದ ರಾಜಧಾನಿ ಶ್ರೀರಂಗಪಟ್ಟಣ. ಈ ಸುಸಂದರ್ಭವನ್ನು ಉಪಯೋಗಿಸಿಕೊಂಡ ಕಾರುಗಹಳ್ಳಿಯ ಪಾಳೇಗಾರ ತಾನು ಸ್ವತಂತ್ರ ರಾಜನೆಂದು ಸಾರಿಕೊಂಡ. ವಿಜಯನಗರ ಪತನಾನಂತರ ಮೈಸೂರು ಅರಸರು ಮತ್ತು ಅನೇಕ ಪಾಳೇಗಾರರು ಪ್ರಬಲರಾದರು. ಇದರಲ್ಲಿ ಕಾರುಗಹಳ್ಳಿಯೂ ಒಂದು. ಆದರೆ ಮೈಸೂರು ಪ್ರಾಂತ್ಯದ ಅರಸರು ಹೆಚ್ಚು ಹೆಚ್ಚು ಪ್ರಬಲರಾಗುತ್ತಿದ್ದರು. ಯದು ವಂಶದಲ್ಲಿ ಪ್ರಬಲನಾದ ರಾಜಾಒಡೆಯ ಈ ಹೊತ್ತಿಗೆ ಪ್ರಜ್ವಲವಾಗಿದ್ದ ಸುತ್ತಮುತ್ತಲಿನ ಅನೇಕ ಪಾಳೆಪಟ್ಟುಗಳನ್ನು ಸೋಲಿಸಿ ಮೈಸೂರು ಪ್ರಾಂತ್ಯದಲ್ಲಿ ವಿಲೀನಗೊಳಿಸುತ್ತ ನಡೆದಿದ್ದ. ಈ ಏಳಿಗೆಯನ್ನು ಹಾಗೇ ನಡೆಯ ಬಿಟ್ಟರೆ ತನ್ನ ಅಸ್ತಿತ್ವಕ್ಕೆ ಕುಂದುಬರುವುದೆಂಬ ಕಾರಣದಿಂದ ಕಾರುಗಹಳ್ಳಿಯ ವೀರರಾಜಯ್ಯ ನಾಯಕ ಮೈಸೂರಿನ ಮೇಲೆ ದಂಡೆತ್ತಿ ಬಂದ. ಅವನ ಸೇನೆ ಚಾಮುಂಡಿಬೆಟ್ಟದ ಆಚೆಯ ತಪ್ಪಲಿನ ವರೆಗೆ ಒತ್ತಿಕೊಂಡು ಬಂತು. ಆದರೆ ರಾಜಾಒಡೆಯ ಬೇರೆ ಬೇರೆ ಕಡೆ ಯುದ್ಧದಲ್ಲಿ ತೊಡಗಿದ್ದ ತನ್ನ ಸೈನ್ಯವನ್ನೆಲ್ಲ ಒಂದುಗೂಡಿಸಿ ಕಾರುಗಹಳ್ಳಿಯ ಸೇನೆಯ ಮೇಲೆ ಬಿದ್ದ. ಪ್ರಬಲವಾದ ಈ ಅನಿರೀಕ್ಷಿತ ಹೊಡೆತಕ್ಕೆ ಕಾರಗಹಳ್ಳಿಯ ಸೇನೆ ತತ್ತರಿಸಿಹೋಯಿತು. ರಾಜಾಒಡೆಯನ ಸೇನೆ, ಕಾರುಗಹಳ್ಳಿಯ ಕೋಟೆಯ ವರೆಗೆ ನುಗ್ಗಿ, ಕೋಟೆಗೆ ಮುತ್ತಿಗೆ ಹಾಕಿತು. ಆ ಭದ್ರವಾದ ಕೋಟೆಯನ್ನು ವಶಕ್ಕೆ ತೆಗೆದುಕೊಳ್ಳಲು ಮೈಸೂರು ಸೇನೆಗೆ ಬಹಳ ದಿನಗಳು ಬೇಕಾದುವಲ್ಲದೆ ಬಹಳ ಪ್ರಯಾಸವೂ ಆಯಿತು. ಕಡೆಗೆ ಕೋಟೆ ರಾಜಾಒಡೆಯನ ವಶವಾಯಿತು. ಇಂಥ ಒಂದು ಭದ್ರ ಕೋಟೆ ಎಂದಾದರೊಂದು ದಿನ ಮೈಸೂರಿಗೆ ಅಪಾಯ ಎಂದರಿತ ರಾಜ ಒಡೆಯ ಕಾರುಗಹಳ್ಳಿಯ ಕೋಟೆಯನ್ನು ನೆಲಸಮಮಾಡಿ ಹರಳು ನೆಡಿಸಿದನಂತೆ. ಈ ಎರಡು ಘಟನೆಗಳನ್ನು ಒಂದು ಮಾಡಿ ಹೇಳುತ್ತವೆ, ಜಾನಪದ ಕತೆಗಳು. ಆದರೆ ಚಾರಿತ್ರಿಕ ಆಧಾರಗಳು ಕಾರುಗಹಳ್ಳಿಯ ಈ ಎರಡೂ ಕಾಳಗಗಳು ಬೇರೆ ಬೇರೆ ಕಾಲದವೆಂಬುದನ್ನು ಸ್ಪಷ್ಟಪಡಿಸುತ್ತವೆ.

ಮಂಟೇಸ್ವಾಮಿ ಸಂಪ್ರದಾಯದ ನೀಲಗಾರರು ಕಾರುಗಹಳ್ಳಿಯ ಕಾಳಗ ಎಂಬ ಐತಿಹಾಸಿಕ ಲಾವಣಿಯನ್ನೇ ಕಟ್ಟಿ ಹಾಡುತ್ತಾರೆ. ಮಂಟೇಸ್ವಾಮಿಯ ಕತೆಯಲ್ಲಿಯೂ ಈ ಕಾಳಗದ ಪ್ರಸ್ತಾಪ ಬರುತ್ತದೆ. ಮಂಟೇಸ್ವಾಮಿಯ ಶಿಷ್ಯರಾದ ರಾಚಪ್ಪಾಜಿಯವರು ಕಾರುಗಹಳ್ಳಿಯ ಪಾಳೆಗಾರನನ್ನು ಗೆಲ್ಲಲು ರಾಜ ಒಡೆಯನಿಗೆ ಪ್ರೇರಕರಾಗಿ ನಿಂತರು ಎಂಬ ಸ್ವಾರಸ್ಯವಾದ ಕತೆ ಅಲ್ಲಿ ಬರುತ್ತದೆ. ಇವಿಷ್ಟು “ಕಾರುಗಹಳ್ಳಿ ಕಾಳಗ”ದಲ್ಲಿ ಬರುವ ಕಥೆಯಾದರೇ, ಮಾರನಾಯಕನ ಸಾವಿನ ನಂತರದ ಕೆಲ ಐತಿಹ್ಯಗಳು ಮೈಸೂರು-ಚಾಮರಾಜನಗರ ಜಿಲ್ಲೆಗಳಲ್ಲಿ ಈಗಲೂ ಲಭ್ಯವಿದೆ. ಅದರ ಪ್ರಕಾರ ತಮ್ಮ ನಾಯಕನ ಸಾವಿನ ಸುದ್ಧಿಯ ಕಲ್ಪನೆಯೂ ಇರದೆ ಇದ್ದ ತೊರೆಯರು, ತಮ್ಮ ಮೇಲೆ ಆದ ಅನಿರೀಕ್ಷಿತ ದಾಳಿಯಿಂದಾಗಿ ದಿಕ್ಕಪಾಲಾದರಲ್ಲದೇ, ಮಾರನಾಯಕನ ಮೃತದೇಹವನ್ನು ಗುಪ್ತವಾಗಿ ತೆಗೆದುಕೊಂಡು ಆತನ ಇಷ್ಟದೈವವಿದ್ದ ಇಂದಿನ ಚಾಮುಂಡಿಬೆಟ್ಟದ ಮೇಲಿರುವ ಮಹಾಬಲೇಶ್ವರ ದೇವಸ್ಥಾನದ ಮುಂದೆ ಸಮಾಧಿ ಮಾಡಿ ಅದರ ಮೇಲೆ ಸಂಪಿಗೆ ಗಿಡ ನೆಟ್ಟು, ಮಾರನಾಯಕನ ಭಕ್ತ ವಿಗ್ರಹವೊಂದನ್ನು ನಿಲ್ಲಿಸಿದರು (ಇದು ಈಗಲೂ ನೋಡಲು ಸಿಗುತ್ತದೆ). ಹದಿನಾಡಿನ ಪಾಳೆಯಗಾರನ ಪುತ್ರಿಗೆ ಮಾರನಾಯಕನನ್ನು ಕಂಡರೆ ಬಲು ಪ್ರೀತಿಯಿತ್ತು. ಹಾಗಾಗಿ ತನ್ನ ಕುಟುಂಬಂಸ್ಥರಿಂದ ಆತನ ಕೊಲೆಯಾದ ನಂತರ, ಅದರಿಂದ ಮನನೊಂದ ಆಕೆಯೂ ಮಾನಸಿಕವಾಗಿ ಮಾರನಾಯಕನೇ ತನ್ನ ಪತಿ ಎಂದುಕೊಂಡು ಆತನ ವಂಶಸ್ಥರಾದ ತೊರೆಯರ ಜೊತೆಗೆ ಹೊರಟುಹೋದಳು. ಈ ತೊರೆಯರು ಆಕೆಗೆ ತಾಯಿಯ ಸ್ಥಾನಮಾನವನ್ನು ಕೊಟ್ಟು, ಆಕೆಯ ಸಾವಿನ ನಂತರ ಗುಡಿಯೊಂದನ್ನು ನಿರ್ಮಿಸಿ “ಮಲೆಯಾಳದಮ್ಮ” ಎಂದು ಕರೆದು ಈಗಲೂ ಪೂಜೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ತೊರೆಯರ್ ಸಮುದಾಯದವರು ಮಾರನಾಯಕನ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ಪರ’ವನ್ನು ಆಯೋಜಿಸಿಕೊಂಡು ಬರುತ್ತಿದ್ದು, ಮಾರನಾಯಕನಿಗೆ, ಮಲೆಯಾಳದಮ್ಮಳಿಗೆ ಮತ್ತು ಮಾರನಾಯಕನ 60 ಜನ ಸಹಚರರಿಗೆ ಆ ದಿನ ಎಡೆ (ನೈವೇದ್ಯ) ಇಡುವ ಪದ್ಧತಿ ಹಿಂದಿನಿಂದಲೂ ಅನೂಚಾನಾಗಿ ನಡೆದುಕೊಂಡು ಬರುತ್ತಿದೆ. ಜೊತೆಗೇ, ಉತ್ತನಹಳ್ಳಿಯ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿಯೂ ಮಾರನಾಯಕನ ವಿಗ್ರಹವಿದ್ದು ಅದಕ್ಕೆ ಪ್ರತಿನಿತ್ಯ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ. ಈಗಲೂ ಮಾರನಾಯಕನ ವಂಶಸ್ಥರು ಮೈಸೂರು ನಗರದ ಸುತ್ತಮುತ್ತಲ ಕೆಲ ಹಳ್ಳಿಗಳಲ್ಲಿ ಕಂಡುಬರುತ್ತಾರೆ. ಹಳೇ ಮೈಸೂರು ಪ್ರಾಂತ್ಯದ ಹೆಮ್ಮೆ ಕಾರುಗಹಳ್ಳಿ ಪಾಳೆಯಗಾರ ಮಾರನಾಯಕ.

(ಎಚ್.ಕೆ.ಆರ್.ಜಿ.) 
(ಪಿ.ಡಿ.ಪಿ.ಎನ್.)