ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾರ್ಪೊರೇಷನ್ ಬ್ಯಾಂಕ್
ಕಾರ್ಪೊರೇಷನ್ ಬ್ಯಾಂಕ್
ಆರಂಭ
ಕರ್ನಾಟಕದ ಹಿಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹಳೆಯ ಬ್ಯಾಂಕಿಂಗ್ ಸಂಸ್ಥೆಯಾಗಿರುವ ಹಾಗೂ ಭಾರತದ ಅತ್ಯಂತ ಹಳೆಯ ಬ್ಯಾಂಕುಗಳಲ್ಲೊಂದಾಗಿರುವ ಕಾರ್ಪೊರೇಷನ್ ಬ್ಯಾಂಕ್, 1906ರಲ್ಲಿ ಉಡುಪಿಯಲ್ಲಿ ಸ್ಥಾಪಿಸಲ್ಪಟ್ಟಿತು. ಆ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರಿನ ನಂತರದ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಉಡುಪಿಯಲ್ಲಿ ಯಾವುದೇ ಬ್ಯಾಂಕಿಂಗ್ ಸೌಲಭ್ಯವಿಲ್ಲದೆ ಇಂತಹ ಒಂದು ಬ್ಯಾಂಕ್ ಸ್ಥಾಪನೆಯ ಅವಶ್ಯಕತೆಯು ಬಹಳವಾಗಿದ್ದಿತು. ಸ್ಥಳಿಯ ಬ್ಯಾಂಕಿಂಗ್ ವ್ಯವಸ್ಥೆಯು ಹೆಚ್ಚಾಗಿ ಕೆಲವು ಶ್ರೀಮಂತ ಖಾಸಗಿ ವ್ಯಕ್ತಿಗಳ ಕೈಯಲ್ಲಿದ್ದು ಜನಸಾಮಾನ್ಯರಿಗೆ ಅವರ ಕಪಿಮುಷ್ಠಿಯಿಂದ ಬಿಡುಗಡೆ ಒದಗಿಸಲು ಏನನ್ನಾದರೂ ಮಾಡಬೇಕಿತ್ತು. ಜಿಲ್ಲೆಯಲ್ಲಿ ಸ್ಥಾಪಿತವಾದ ಆಧುನಿಕ ಬ್ಯಾಂಕಿನ ಪ್ರಥಮ ಶಾಖೆಯೆಂದರೆ ಮುಖ್ಯವಾಗಿ ತೋಟಗಾರಿಕಾ ಉತ್ಪನ್ನಗಳ ರಫ್ತು ವ್ಯವಹಾರದಲ್ಲಿ ತೊಡಗಿದ್ದ ಕೆಲವು ಬ್ರಿಟಿಷ್ ಸಂಸ್ಥೆಗಳ ವ್ಯಾಪಾರದ ಅಗತ್ಯಗಳನ್ನು ಪೂರೈಸಲು 1868ರಲ್ಲಿ ಮಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟ ಮೂರು ಪ್ರೆಸಿಡೆನ್ಸಿ ಬ್ಯಾಂಕುಗಳಲ್ಲೊಂದಾಗಿದ್ದ ಬ್ಯಾಂಕ್ ಆಫ್ ಮದ್ರಾಸ್‍ನ ಶಾಖೆಯಾಗಿದ್ದಿತು. ಉಡುಪಿಯಲ್ಲಿ ಬ್ಯಾಂಕಿಂಗ್ ನಡೆಸಲು ಹದಿನೈದು ದಿನಗಳಿಗೊಂದಾವರ್ತಿ ಈ ಬ್ಯಾಂಕಿನ ಏಜೆಂಟ್ ಕರಾವಳಿ ಮಾರ್ಗವಾಗಿ ಮಂಗಳೂರಿನಿಂದ ಉಡುಪಿಗೆ ಬರಬೇಕಾದರೆ ನಾಲ್ಕು ನದಿಗಳನ್ನು ದಾಟಬೇಕಾಗಿತ್ತು. ಹಣದ ರವಾನೆಯನ್ನು ಕೇವಲ ಅಂಚೆ ಮಾಧ್ಯಮದ ಮೂಲಕವೇ ಮಾಡಬೇಕಿತ್ತು. ಈ ಕೊರತೆಗಳನ್ನು ನಿವಾರಿಸಲು ಮತ್ತು ಜಿಲ್ಲೆಗೆ ಹಾಗೂ ವಿಶೇಷವಾಗಿ ಉಡುಪಿಗೆ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸಲು ಖಾನ್ ಬಹಾದುರ್ ಹಾಜಿ ಅಬ್ದುಲ್ಲ ಹಾಜಿ ಕಾಸಿಮ್ ಸಾಹೇಬ್ ಬಹಾದುರ್‍ರವರ ನೇತೃತ್ವದಲ್ಲಿ ಉದಾರ ಮನೋಭಾವದ ಜನೋಪಕಾರಿ ಸದ್ಗøಹಸ್ಥರ ಗುಂಪೊಂದು ಈ ಸಂಸ್ಥೆಯನ್ನು ಆರಂಭಿಸುವ ಸಾಹಸ ಮಾಡಿತು. ಅವರಿಗೆ ಸ್ಫೂರ್ತಿ ನೀಡಿದ್ದು 19ನೇ ಫೆಬ್ರವರಿ 1906ರಂದು ಸ್ಥಾಪಕರು ಸಾರ್ವಜನಿಕರಿಗೆ ಮಾಡಿದ ಮನವಿಯಲ್ಲಿ ನಿರೂಪಿಸಿದಂತಹ ಸ್ವದೇಶೀಯತೆಯ ಕೆಚ್ಚು. ಕಾರ್ಪೊರೇಷನ್ ಬ್ಯಾಂಕಿನ ಸ್ಥಾಪಕ ಅಧ್ಯಕ್ಷರಾದ ಖಾನ್ ಬಹಾದುರ್ ಹಾಜಿ ಅಬ್ದುಲ್ಲ ಹಾಜಿ ಸಾಹೇಬ್ ಬಹಾದುರ್‍ರವರು ದಖನಿ ಮುಸ್ಲಿಮರಾಗಿದ್ದು, ಅವರ ಕುಟುಂಬದವರು ದಖನ್ ಪ್ರದೇಶದಿಂದ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗೆ ವಲಸೆ ಬಂದವರಾಗಿದ್ದರು. ಅವರ ಕುಟುಂಬದವರು ದಕ್ಷಿಣ ಕನ್ನಡದಲ್ಲಿ ಕಾರ್ಕಳ ಮತ್ತು ಉಡುಪಿಗಳಲ್ಲಿ ವಿಶಾಲವಾದ ಕೃಷಿಭೂಮಿಯ ಮಾಲಿಕತ್ವವನ್ನು ಹೊಂದಿದ್ದರೆಂದು ದಾಖಲೆಗಳು ಹೇಳುತ್ತವೆ. ಅಬ್ದುಲ್ಲ ಸಾಹೇಬರು ಓರ್ವ ವ್ಯಾಪಾರಿಯೂ ಆಗಿದ್ದು ಸಂಪೂರ್ಣ ಮದ್ರಾಸ್ ಪ್ರಾಂತ್ಯದಲ್ಲಿ ವಿಮ್‍ಕೊ ಬೆಂಕಿಪೆಟ್ಟಿಗೆಗಳ ಏಕೈಕ ವಿತರಣಾದಾರರಾಗಿದ್ದರು. ಅವರು ಒಣ ಹಣ್ಣುಹಂಪಲುಗಳ ವ್ಯಾಪಾರವನ್ನು ಮಾಡುತ್ತಿದ್ದರು. ಅವರು ಸ್ಥಳೀಯರ ಅವಶ್ಯಕತೆಗಳನ್ನು ಪೂರೈಸುವಂತಹ ಒಂದು ಹಣಕಾಸು ಸಂಸ್ಥೆಯನ್ನು ಹುಟ್ಟುಹಾಕುವ ಪ್ರಕ್ರಿಯೆಗೆ ಚಾಲನೆ ನೀಡಿ 1906ರಲ್ಲಿ `ದಿ ಕೆನರಾ ಬ್ಯಾಂಕಿಂಗ್ ಕಾರ್ಪೊರೇಷನ್ (ಉಡುಪಿ) ಲಿಮಿಟೆಡ್' ಅನ್ನು ಸ್ಥಾಪಿಸಿದರು. ಮುಂದೆ ಇದು ಕಾರ್ಪೊರೇಷನ್ ಬ್ಯಾಂಕ್ ಎಂದು ಪುನರ್ನಾಮಕರಣಗೊಂಡಿತು. ಹಾಜಿ ಅಬ್ದುಲ್ಲರವರು ಎಸ್.ಎಸ್.ಎಲ್.ಸಿ.ಯ ತನಕ ಕಲಿತಿದ್ದರೆಂದು ಪ್ರತೀತಿ. ಸಾಕಷ್ಟು ಓದಿಕೊಂಡಿದ್ದ ಅವರು, ಜಿಲ್ಲೆಯ ಅಭಿವೃದ್ಧಿಯಲ್ಲಿ ಆಳವಾದ ಆಸಕ್ತಿಯನ್ನು ಹೊಂದಿ ಅದರಲ್ಲಿ ಸಕ್ರಿಯರಾಗಿದ್ದರು. ಮತ್ತು ವಿಧಾನ ಪರಿಷತ್ತಿನ ಸದಸ್ಯರೂ ಆಗಿದ್ದರು. ಅವರು 1929ರ ತನಕ ಕಾರ್ಪೊರೇಷನ್ ಬ್ಯಾಂಕಿನ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅಗೋಸ್ತ್ 12, 1935ರಂದು ಕೇವಲ 53 ವರ್ಷ ವಯಸ್ಸಿನಲ್ಲಿ ಅವರು ಕೊನೆಯುಸಿರೆಳೆದರು.
ರೂ. 5,000/-ದ ಆರಂಭಿಕ ಬಂಡವಾಳ ಮತ್ತು ಪ್ರಥಮ ದಿನಾಂತ್ಯಕ್ಕೆ 38 ರೂ. 13 ಆಣೆ ಮತ್ತು 2 ಪೈಸೆಗಳ ವ್ಯವಹಾರದೊಡನೆ "ದಿ ಕೆನರಾ ಬ್ಯಾಂಕಿಂಗ್ ಕಾರ್ಪೊರೇಷನ್ (ಉಡುಪಿ) ಲಿಮಿಟೆಡ್" ಒಂದು ಸಣ್ಣ ನಿಧಿಯ ರೂಪದಲ್ಲಿ ಕಾರ್ಯಾಚರಣೆ ಆರಂಭಿಸಿತು. ಆರಂಭದ ಪ್ರಥಮ ದಶಕಾಂತ್ಯಕ್ಕೆ ಬ್ಯಾಂಕಿನ ಈರ್ವರು ಸ್ಥಾಪಕ ನಿರ್ದೇಶಕರಾದ ಸುಜೀರ್ ಆನಂದರಾವ್ ಮತ್ತು ಬೈಂದೂರ್ ನಾರಾಯಣ ರಾವ್‍ರವರ ಅವಿಶ್ರಾಂತ ಪ್ರಯತ್ನಗಳ ಫಲಸ್ವರೂಪವಾಗಿ ಸಂಗ್ರಹಿತವಾದ 396 ಶಾಶ್ವತ ಷೇರುಗಳು ಬ್ಯಾಂಕಿಂಗೆ ಸುದೃಢವಾದ ಅಡಿಪಾಯವನ್ನೊದಗಿಸಿದವು.
ದಿ ಕೆನರಾ ಬ್ಯಾಂಕಿಂಗ್ ಕಾರ್ಪೊರೇಷನ್ ಲಿ., ನ ಸ್ಥಾಪನೆಯು ಸಹಕಾರಿ ಬ್ಯಾಂಕಿಂಗ್ ಮತ್ತು ಜಿಲ್ಲೆಯ ಇತರೆಡೆಗಳಲ್ಲಿ ವ್ಯವಸ್ಥಿತ ಬ್ಯಾಂಕಿಂಗ್‍ಗೆ ಉತ್ತೇಜನೆ ನೀಡಿದ್ದಂತೂ ನಿಜ. 1909 ಮತ್ತು 1917ರ ಮಧ್ಯಾವಧಿಯಲ್ಲಿ ಆರು ಸಹಕಾರಿ ಬ್ಯಾಂಕುಗಳು ಅಸಿತ್ವಕ್ಕೆ ಬಂದವು ಮತ್ತು ಪ್ರಥಮ ಜಾಗತಿಕ ಯುದ್ಧಾನಂತರದ (1914-18) ಮೊದಲನೆಯ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಸುಮಾರು ಎಂಟರಷ್ಟು ಬ್ಯಾಂಕುಗಳಿಗೆ ಜನ್ಮ ನೀಡಿತು. ಎರಡು ಜಾಗತಿಕ ಯುದ್ಧಗಳು, ಆರ್ಥಿಕ ಕುಸಿತ ಮತ್ತು ತೀವ್ರ ಸ್ಪರ್ಧೆಯ ನಡುವೆಯೂ ಈ ಬ್ಯಾಂಕು ಉಳಿದುಕೊಂಡದ್ದೇ ಅಲ್ಲದೆ ತೃಪ್ತಿಕರವಾದ ಪ್ರಗತಿಯನ್ನೂ ಸಾಧಿಸಿದುದು ಸ್ತುತ್ಯರ್ಹ.
ಉಡುಪಿಯಲ್ಲಿ ಬೇರುಬಿಟ್ಟ ಈ ಬ್ಯಾಂಕ್, ತನ್ನ ಪ್ರಥಮ ಶಾಖೆಯನ್ನು 1923ರಲ್ಲಿ ಕುಂದಾಪುರದಲ್ಲಿ ತೆರೆಯಿತು. ಬ್ಯಾಂಕಿನ ಎರಡನೆಯ ಶಾಖೆಯು ಮಂಗಳೂರಿನ ರಥಬೀದಿಯಲ್ಲಿ 1926ರಲ್ಲಿ ತೆರೆಯಲ್ಪಟ್ಟಿತು. 1934ರಲ್ಲಿ ಮಡಿಕೇರಿಯಲ್ಲಿ ತನ್ನ ಏಳನೇ ಶಾಖೆಯನ್ನು ಆರಂಭಿಸುವ ಮೂಲಕ ಬ್ಯಾಂಕು ಕೊಡಗು ಜಿಲ್ಲೆಯಲ್ಲಿ ಕಾಲೂರಿತು. 1936ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ 1934ನೇ ನಿಬಂಧನೆಯ ಎರಡನೇ ಅನುಬಂಧದಲ್ಲಿ ಸೇರಿಸಲ್ಪಟ್ಟಿತು. 1939ರಲ್ಲಿ ಬ್ಯಾಂಕಿನ ಹೆಸರನ್ನು `ದಿ ಕೆನರಾ ಬ್ಯಾಂಕಿಂಗ್ ಕಾರ್ಪೊರೇಷನ್ (ಉಡುಪಿ) ಲಿಮಿಟೆಡ್' ನಿಂದ `ಕೆನರಾ ಬ್ಯಾಂಕಿಂಗ್ ಕಾರ್ಪೊರೇಷನ್ ಲಿ.,' ಎಂದು ಬದಲಾಯಿಸಲಾಯಿತು.
1945ರಲ್ಲಿ ಬ್ಯಾಂಕಿನ ಒಟ್ಟು ಶಾಖೆಗಳ ಸಂಖ್ಯೆ 28ಕ್ಕೇರಿದಾಗ, ಬ್ಯಾಂಕು ಪ್ರಾದೇಶಿಕ ಬ್ಯಾಂಕಾಗಿ ಪರಿವರ್ತಿತವಾಯಿತು. 1954ರಲ್ಲಿ ದೇಶದಲ್ಲಿಯೇ ಮೂರನೇ ಬ್ಯಾಂಕಾಗಿ ಇದು ಒಂದು ಅನುಸೂಚಿತ ಬ್ಯಾಂಕ್ ಎಂದು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಪರವಾನಗಿಯನ್ನು ಪಡೆದುಕೊಂಡಿತು. 1961ರಲ್ಲಿ 'ಬ್ಯಾಂಕ್ ಆಫ್ ಸಿಟಿಜನ್ಸ್, ಬೆಳಗಾಂ' ಅನ್ನು ತನ್ನೊಳಗೆ ಸೇರಿಸಿಕೊಂಡಿತು. ಅದೇ ವರ್ಷ ಬ್ಯಾಂಕಿನ ಆಡಳಿತ ಕಛೇರಿಯು ಉಡುಪಿಯಿಂದ ಮಂಗಳೂರಿಗೆ ವರ್ಗಾಯಿಸಲ್ಪಟ್ಟತು.
1972ರಲ್ಲಿ ಎರಡನೆಯ ಸಲ ಬ್ಯಾಂಕಿನ ಹೆಸರನ್ನು `ಕೆನರಾ ಬ್ಯಾಂಕಿಂಗ್ ಕಾರ್ಪೊರೇಷನ್ ಲಿಮಿಟೆಡ್' ಎಂದು ಪರಿವರ್ತಿಸಲಾಯಿತು. 1973ರಲ್ಲಿ ಬ್ಯಾಂಕು ವಿದೇಶೀ ವಿನಿಮಯ ವ್ಯವಹಾರದ ಕ್ಷೇತ್ರವನ್ನು ಪ್ರವೇಶಿಸಿತು. 1976ರಲ್ಲಿ ಬ್ಯಾಂಕು ತನ್ನ ಅಮೃತ ಮಹೋತ್ಸವವನ್ನು ಆಚರಿಸಿತು. ಮತ್ತು ಈ ಸಂದರ್ಭದಲ್ಲಿ ಅದರ ನೂತನ ಆಡಳಿತ ಕಛೇರಿಯು ಮಂಗಳೂರಿನ ಪಾಂಡೇಶ್ವರದಲ್ಲಿ ಉದ್ಘಾಟನೆಗೊಂಡಿತು. 1980ರಲ್ಲಿ ಖಾಸಗಿ ವಲಯದ ಇತರ 5 ಬ್ಯಾಂಕುಗಳೊಂದಿಗೆ ಈ ಬ್ಯಾಂಕು ರಾಷ್ಟ್ರೀಕೃತವಾಯಿತು.
ರಾಷ್ಟ್ರೀಕರಣದ ನಂತರ ಬ್ಯಾಂಕು ತ್ವರಿತಗತಿಯಲ್ಲಿ ಬೆಳೆಯಿತು ಮತ್ತು ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಿತು. ತಂತ್ರಜ್ಞಾನವನ್ನು ಮೊದಲಾಗಿ ಅಳವಡಿಸಿದ ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲೊಂದಾಗಿ 1989ರಷ್ಟು ಹಿಂದೆಯೇ ತನ್ನ ಸಾಂಸ್ಥಿಕ ಕಛೇರಿಯಲ್ಲಿ ಸ್ಥಳೀಯ ಸಂಪರ್ಕ ಜಾಲ(ಲ್ಯಾನ್)ವನ್ನು ಅಳವಡಿಸಿದ ಅಗ್ಗಳಿಕೆ ಈ ಬ್ಯಾಂಕಿನದು. ಅತ್ಯಾಧುನಿಕ ತಂತ್ರಜ್ಞಾನದಲ್ಲಿ ತ್ವರಿತ ಮುನ್ನಡೆಯನ್ನು ಸಾಧಿಸಲು ಇದು ದಾರಿಯಾಯಿತು. ಈ ಅವಧಿಯುದ್ದಕ್ಕೂ ಕಾರ್ಪೊರೇಷನ್ ಬ್ಯಾಂಕ್ "ಸರ್ವೇ ಜನಾಃ ಸುಖಿನೋ ಭವಂತು" ಎಂಬ ತನ್ನ ಧ್ಯೇಯವಾಕ್ಯಕ್ಕೆ ನಿಷ್ಠವಾಗಿಯೇ ನಡೆದುಕೊಂಡಿತು. ಸ್ಥಾಪನೆಯಾದಂದಿನಿಂದ 99 ವರ್ಷಗಳ ದೀರ್ಘಾವಧಿಯಲ್ಲಿ ನಿರಂತರವಾಗಿ ಲಾಭಾಂಶವನ್ನು ನೀಡುತ್ತಾ ಬಂದಿರುವುದು ಬ್ಯಾಂಕಿನ ಒಂದು ಸಾಧನೆಯಾಗಿದೆ. ಇಂದು ತನ್ನ ಅತ್ಯಾಧುನಿಕ ತಂತ್ರಜ್ಞಾನ - ಆಧಾರಿತ ಉತ್ಪನ್ನಗಳು ಮತ್ತು ಸೇವೆಗಳು ಹಾಗೂ ದೇಶಾದ್ಯಂತ ಹಬ್ಬಿರುವ ಶಾಖೆಗಳು ಮತ್ತು ಎಟಿಎಂಗಳಿಂದ ಕಾರ್ಪೊರೇಷನ್ ಬ್ಯಾಂಕ್ ದೇಶದ ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ ಮಹತ್ತ್ವಪೂರ್ಣ ಸ್ಥಾನವನ್ನು ಪಡೆದಿದೆ.
ಹಣಕಾಸು ಕ್ಷೇತ್ರದಲ್ಲಿ ಕಾರ್ಪೋರೇಷನ್ ಬ್ಯಾಂಕ್ ಉತ್ತುಂಗ ಸಾಧನೆಯನ್ನು ಮೆರೆಯುತ್ತ ತ್ವರಿತಗತಿಯಲ್ಲಿ ಮನ್ನಡೆಯುತ್ತಿದೆ.
· ಡಿಸೆಂಬರ್ 2004ರಲ್ಲಿ ರೂ. 40,541 ಕೋಟಿಗಳಷ್ಟಿದ್ದ ಬ್ಯಾಂಕಿನ ಒಟ್ಟು ವ್ಯವಹಾರವು 31 ಡಿಸೆಂಬರ್ 2005ರಂದು ರೂ. 51,787 ಕೋಟಿಗಳಿಗೇರಿ 27.7 ಶೇಕಡಾ ಹೆಚ್ಚಳವನ್ನು ಸಾಧಿಸಿತು.
· 31 ಡಿಸೆಂಬರ್ 2004ರಂದು ರೂ. 24,175 ಕೋಟಿಗಳಷ್ಟಿದ್ದ ಬ್ಯಾಂಕಿನ ಒಟ್ಟು ಠೇವಣಿಗಳು ರೂ. 29,702 ಕೋಟಿಗಳಿಗೇರಿ 22.86 ಶೇಕಡಾ ವೃದ್ಧಿ ದಾಖಲಿಸಿದವು.
· 31.12.2004ರಂದು ರೂ. 16,366 ಕೋಟಿಗಳಷ್ಟಿದ್ದ ಮುಂಗಡಗಳು 31.12.2005ರಂದು ರೂ. 22,084 ಕೋಟಿಗಳಷ್ಟಾಗಿ 34.9 ಶೇಕಡಾದಷ್ಟು ಗಮನಾರ್ಹ ಪ್ರಗತಿಯನ್ನು ದಾಖಲಿಸಿದವು.
· ಆದ್ಯತಾ ರಂಗಗಳ ಸಾಲಗಳು ಮಾರ್ಚ್ 2005ರ ಮಟ್ಟದಲ್ಲಿ 20 ಶೇಕಡಾ ಹೆಚ್ಚಳವನ್ನು ದಾಖಲಿಸಿ ರೂ. 7792 ಕೋಟಿಗಳಷ್ಟಾದವು. ಡಿಸೆಂಬರ್ 2005ರ ಕೊನೆಯ ಶುಕ್ರವಾರದಂದು ಆದ್ಯತಾ ರಂಗಗಳಿಗೆ ನೀಡಿದ ಸಲಗಳು ನಿವ್ವಳ ಮುಂಗಡಗಳ 42.32 ಶೇಕಡಾದಷ್ಟಾಗಿದ್ದವು. ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳುಗಳಲ್ಲಿ ಕೃಷಿಗೆ ನೀಡಿದ ಸಾಲುಗಳು 32 ಶೇಕಡಾದಷ್ಟು ವೃದ್ಧಿಸಿದರೆ, ಸಣ್ಣ ಕೈಗಾರಿಕೆಗಳಿಗೆ ನೀಡಿದ ಸಾಲಗಳು 26 ಶೇಕಡಾದಷ್ಟು ಹೆಚ್ಚಳ ಸಾಧಿಸದವು.
· ಬಂಡವಾಳ ಪರ್ಯಾಪ್ತತೆಯ ಅನುಪಾತವು ಡಿಸೆಂಬರ್ 2004ರಲ್ಲಿ 20.27 ಶೆಕಡಾದಷ್ಟಿದ್ದದ್ದು 31 ಮಾರ್ಚ್ 2005ರಂದು 16.23 ಶೇಕಡಾದಷ್ಟಾಗಿ 31 ಡಿಸೆಂಬರ್ 2005ರಂದು 14.91 ಶೇಕಡಾದ ತೃಪ್ತಿಕರ ಮಟ್ಟವನ್ನು ತಲಪಿತು.
· 31 ಡಿಸೆಂಬರ್ 2004ರಂದು 4.45 ಶೇಕಡಾದಷ್ಟಿದ್ದ ಒಟ್ಟು ಅನುತ್ಪಾದಕ ಆಸ್ತಿಗಳು 3.02 ಶೇಕಡಾದಷ್ಟು ಇಳಿದರೆ, 31.12.2004ರಂದು 1.49 ಶೇಕಡಾದಷ್ಟಿದ್ದ ನಿವ್ವಳ ಅನುತ್ಪಾದಕ ಆಸ್ತಿಗಳು 31.12.2005ರಂದು 0.80 ಶೇಕಡಾಕ್ಕೆ ಜಾರಿತು. 31.12.2005ರಂದು ಮುಕ್ತಾಯಗೊಂಡ ಒಂಬತ್ತು ತಿಂಗಳುಗಳ ಅವಧಿಗೆ ರೂ. 153 ಕೋಟಿಗಳನ್ನು ಅನುತ್ಪಾದಕ ಆಸ್ತಿಗಳಿಂದಾಗಿತೆಗೆದಿರಿಸಲಾಗಿದ್ದರೆ, ಅದರ ಹಿಂದಿನ ವರ್ಷ ಅಷ್ಟೇ ಅವಧಿಗೆ ರೂ. 78 ಕೋಟಿಗಳನ್ನು ತೆಗೆದಿರಿಸಲಾಗಿತ್ತು.
ಠೇವಣಿ ಸೌಲಭ್ಯಗಳು
ಉಳಿತಾಯ ಖಾತೆ : ಕಾರ್ಪೊರೇಷನ್ ಬ್ಯಾಂಕಿನಲ್ಲಿ ಒಂದು ಉಳಿತಾಯ ಖಾತೆ ತೆರೆದರೆ ಕಾರ್ಪ್ ಕನ್ವೀನಿಯನ್ಸ್ ಇಂಟರ್‍ನ್ಯಾಷನಲ್ ಡೆಬಿಟ್/ಎ.ಟಿ.ಎಂ. ಕಾರ್ಡು ದೊರೆಯುತ್ತದೆ. ಉಚಿತವಾಗಿ ಇಂಟರ್‍ನೆಟ್ ಮೂಲಕ ನಿಮ್ಮ ಖಾತೆಯಲ್ಲಿ ವ್ಯವಹರಿಸುವ ಸೌಲಭ್ಯ, ಟೆಲಿಫೋನ್‍ನಲ್ಲಿ ದಿನದ ಯಾವ ಸಂದರ್ಭದಲ್ಲೂ ಖಾತೆಯ ಬಗ್ಗೆ ವಿವರಗಳನ್ನು ಪಡೆಯಲು ಕಾರ್ಪ್ ಡಯಲ್ ಸೌಲಭ್ಯವೂ ದೊರೆಯುತ್ತದೆ. ಕಾರ್ಪ್ ಕನ್ವೀನಿಯನ್ಸ್ ಕಾರ್ಡ್ ಹೊಂದುವುದೊಂದಿಗೆ ನಿಮಗೆ ವೈಯುಕ್ತಿಕ ಅಪಘಾತ ವಿಮೆಯ 1 ಲಕ್ಷದ ವ್ಯಾಪ್ತಿ ದೊರಯುವುದು ಅಲ್ಲದೆ, ಕಾರ್ಪ್ ಬ್ಯಾಂಕಿನ ಉಳಿತಾಯ ಖಾತೆಯ ಪ್ರತಿ ಗ್ರಾಹಕರಿಗೂ 1 ಲಕ್ಷ ರೂ.ಗಳ ವ್ಯಾಪ್ತಿಯುಳ್ಳ ಕನಿಷ್ಟ ಪ್ರೀಮಿಯಂ ಉಳ್ಳ ವಿಶಿಷ್ಟ ಜೀವ ವಿಮಾ ಪಾಲಿಸಿಯ ಲಾಭವೂ ದೊರೆಯುತ್ತದೆ.
ಸಾಲಸೌಲಭ್ಯಗಳು
ಕಾಪ್ ಹೋಮ್ (ಕಾರ್ಪ್ ಜೀವನ ಗೃಹ ರಕ್ಷಾ ಸಹಿತ) : ಹೊಸಮನೆ ಕಟ್ಟಲು, ಹಳೆಯದನ್ನು ನವೀಕರಿಸಲು, ವಿಸ್ತರಿಸಲು, ಬ್ಯಾಂಕಿಂಗ್ ಕ್ಷೇತ್ರದಲ್ಲೇ ಅತ್ಯುತ್ತಮವಾದ ಕೊಡುಗೆ. ಈ ಗೃಹಸಾಲ ಯೋಜನೆಯಲ್ಲಿ ಸರಳ, ಸುಲಭ, ಕಾರ್ಪ್ ಜೀವನ ಗೃಹ ರಕ್ಷಾ ಎಂಬ ಏಕ ಕಂತಿನ ಗುಂಪು ಜೀವ ವಿಮಾ ಸೌಲಭ್ಯವೂ ದೊರೆಯುತ್ತದೆ.
ಕಾರ್ಪ್ ಫ್ಲೆಕ್ಸಿ : ಸಮಾನ ಕಂತುಗಳ ಬದಲು ಸಣ್ಣ ಕಂತುಗಳಿಂದ ಪ್ರಾರಂಭವಾಗಿ ಉತ್ತರೋತ್ತರ ಅಧಿಕಗೊಳ್ಳುವ ಕಂತುಗಳ ಗೃಹಸಾಲ. ಕಾರ್ಪ್ ಮೊಬೈಲ್ : ಸ್ಪರ್ಧಾತ್ಮಕ ಬಡ್ಡಿದರ, ಕಡಿಮೆ ಮೊತ್ತದ ಕಂತುಗಳ ವ್ಯವಸ್ಥೆಯುಳ್ಳ ಅತ್ಯುತ್ತಮವಾದ ವಾಹನ (ದ್ವಿಚಕ್ರ, ಚತುಶ್ಚಕ್ರ) ಸಾಲ ಯೋಜನೆ.
ಕಾರ್ಪ್ ಪ್ರೊಫೆಷನಲ್ : ವೃತ್ತಿನಿರತ ವೈದ್ಯ/ಇಂಜಿನಿಯರ್/ವಕೀಲರಿಗಾಗಿ ಹೊಸ ಕ್ಲಿನಿಕ್, ಚಿಕಿತ್ಸಾಲಯ, ಕಛೇರಿ ಹೊಂದಲು ಸುಲಭ ದರಗಳ ಸಾಲ ಯೋಜನೆ.
ಕಾರ್ಪ್ ಮೆಡಿಟೆಕ್ : ವೈದ್ಯಕೀಯ ಬಳಕೆಗಾಗಿ ಹಾರ್ಡ್‍ವೇರ್ ಸಾಫ್ಟ್‍ವೇರ್ ಸಹಿತ, ಆಧುನಿಕ ಪರಿಕರಗಳ ಖರೀದಿಗೆ ಸಾಲಯೋಜನೆ.
ಕಾರ್ಪ್ ವಿದ್ಯಾ : ವಿದ್ಯಾರ್ಥಿಗಳಿಗೆ ದೇಶದೊಳಗೆ ಅಥವಾ ವಿದೇಶದಲ್ಲಿ ವಿದ್ಯಾಭ್ಯಾಸಕ್ಕಾಗಿ ಸಾಲ ಸೌಲಭ್ಯ, ಶುಲ್ಕ, ಪುಸ್ತಕ, ಉಪಕರಣ, ಕಂಪ್ಯೂಟರ್, ಅಧ್ಯಯನ ಸಾಮಗ್ರಿ, ಪ್ರೊಜೆಕ್ಟ್ ವೆಚ್ಚ ಮತ್ತು ಪ್ರಯಾಣ ಖರ್ಚುಗಳಿಗೆ ನೆರವು. ಭಾರತದಲ್ಲಿ 7.5 ಲಕ್ಷ ಮತ್ತು ದೇಶದ ಹೊರಗೆ ಅಧ್ಯಯನಕ್ಕೆ 15 ಲಕ್ಷಗಳ ವರೆಗಿನ ಮಿತಿ.
ಕಾರ್ಪ್ ವ್ಯಾಪಾರ : ವ್ಯಾಪಾರಿ ಸ್ನೇಹಿ, ಅಲ್ಪಾವಧಿ ವಹಿವಾಟು ಸಾಲ.
ಕಾರ್ಪ್ ಮಹಿಳಾ ಗೋಲ್ಡ್ : ಉದ್ಯೋಗಸ್ಥ ಯಾ ಉದ್ಯೋಗಸ್ಥರಲ್ಲದ ಮಹಿಳೆಯರಿಗಾಗಿ ಚಿನ್ನ ಆಭರಣ ಕೊಳ್ಳಲು ಸಾಲ.
ಕಾರ್ಪ್ ಪರ್ಸನಲ್ : ವೈಯುಕ್ತಿಕ ಅಗತ್ಯಗಳಿಗಾಗಿ ಒಂದು ಸ್ನೇಹಶೀಲ ಸಾಲ ಯೋಜನೆ. ಭದ್ರತೆ ಅಗತ್ಯವಿಲ್ಲ.
ಕಾರ್ಪ್ ಮೋರ್ಗೇಜ್ : ಆಸ್ತಿ ಅಡವಿನ ಸಾಲ, ವೈಯುಕ್ತಿಕ ಹಣದ ಅಗತ್ಯಗಳಿಗಾಗಿ.
ಕಾರ್ಪ್ ರೆಂಟಲ್ : ಮುಂದೆ ವಸೂಲಾಗಲಿರುವ ಬಾಡಿಗೆಗಳ ಮೇಲೆ ಸರಳ ಸಾಲ ಯೋಜನೆ.
ಬ್ಯಾಂಕ್-ವಿಮಾ ವ್ಯವಸ್ಥೆ
ಕಾರ್ಪ್ ಜೀವನ ರಕ್ಷಾ : ಠೇವಣಿ ಮತ್ತು ಸೇವಿಂಗ್ಸ್ ಬ್ಯಾಂಕ್ ಖಾತೆದಾರರಿಗಾಗಿ, ಕಡಿಮೆ ಮೊತ್ತದ ಕಂತಿನಲ್ಲಿ ರೂ. 1 ಲಕ್ಷದ ಜೀವ ವಿಮಾ ಯೋಜನೆ.
ಕಾರ್ಪ್ ಜೀವನ ಗೃಹ ರಕ್ಷಾ : ಗೃಹಸಾಲಗಳ ಬಾಕಿ ಇರುವ ಮೊತ್ತದ ಮೇಲೆ ಕಡಿಮೆ ಮೊತ್ತದ ಕಂತಿನಲ್ಲಿ ಎಲ್.ಐ.ಸಿ. ಯ ಜೀವ ವಿಮಾ ರಕ್ಷಣೆ.
ಬ್ಯಾಂಕು, ಎಲ್‍ಐಸಿ ಮತ್ತು ನ್ಯೂ ಇಂಡಿಯಾ ಎಶ್ಯೂರೆನ್ಸ್ ಕಂಪನಿಗಳ ವಿಮಾ ಯೋಜನೆಗಳಿಗೆ ಸಮಗ್ರ ಕಾರ್ಪೋರೇಟ್ ಪ್ರತಿನಿಧಿ (ಏಜೆಂಟ್) ಆಗಿದೆ.
ಗ್ರಾಮೀಣಾಭಿವೃದ್ಧಿಗೆ ಕಾರ್ಪೊರೇಷನ್ ಬ್ಯಾಂಕಿನ ಕೊಡುಗೆ
ಮಂಗಳೂರಿನಲ್ಲಿ ತನ್ನ ಪ್ರಧಾನ ಕಾರ್ಯಾಲಯವನ್ನು ಹೊಂದಿರುವ, ದೇಶದ ಒಂದು ಪ್ರಮುಖ ಸಾರ್ವಜನಿಕ ರಂಗದ ಬ್ಯಾಂಕ್ ಆಗಿರುವ ಕಾರ್ಪೊರೇಷನ್ ಬ್ಯಾಂಕ್, 2006ರ ವೇಳೆಗೆ ನೂರು ವರ್ಷಗಳ ತನ್ನ ಅಸ್ತಿತ್ವವನ್ನು ಆಚರಿಸಲು ತನ್ನ ಶತಮಾನೋತ್ಸವದ ವರ್ಷದಲ್ಲಿ ಕೆಲವು ವಿಶಿಷ್ಟ ಯೋಜನೆಗಳನ್ನು ಹಮ್ಮಿಕೊಂಡಿದೆ. ತನ್ನ ಸಾಮಾಜಿಕ ಕಳಕಳಿ ಹಾಗೂ ಸಕ್ರಿಯ ಸಮಾಜ ಕಲ್ಯಾಣ ಚಟುವಟಿಕೆಗಳಿಗೆ ಖ್ಯಾತವಾಗಿರುವ ಬ್ಯಾಂಕ್, ಗ್ರಾಮೀಣ ಪ್ರದೇಶಗಳಲ್ಲಿ 25 ಗ್ರಂಥಾಲಯಗಳನ್ನು ಆರಂಭಿಸುವ ತನ್ನ ಯೋಜನೆಯ ಪ್ರಥಮ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಪ್ರಥಮ ಹಂತದಲ್ಲಿ ಗ್ರಂಥಾಲಯ ಸ್ಥಾಪನೆಗೆ ಗುರುತಿಸಲ್ಪಟ್ಟಿರುವ 25 ಗ್ರಾಮೀಣ ಪ್ರದೇಶಗಳಲ್ಲಿ 15 ಕರ್ನಾಟಕದಲ್ಲಿದ್ದರೆ, 7 ಮತ್ತು 3 ಅನುಕ್ರಮವಾಗಿ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿವೆ.
ಈ ಗ್ರಂಥಾಲಯಗಳನ್ನು ಸ್ಥಳಾವಕಾಶ ಹಾಗೂ ಇತರ ಕನಿಷ್ಠ ಮೂಲಭೂತ ಸೌಕರ್ಯಗಳ ಲಭ್ಯತೆಗೆ ಅನುಗುಣವಾಗಿ ಗ್ರಾಮ ಪಂಚಾಯತ್‍ಗಳಲ್ಲಿ ಅಥವಾ ಊರ ಶಾಲೆಗಳಲ್ಲಿ ಆರಂಭಿಸಲಾಗಿದೆ. ಯೋಜನೆಯ ಅಂಗವಾಗಿ ಬ್ಯಾಂಕು ಪ್ರತಿಯೊಂದು ಗ್ರಂಥಾಲಯಕ್ಕೆ ಸಾಕಷ್ಟು ಪುಸ್ತಕಗಳನ್ನೂ, ಅವುಗಳನ್ನಿಡಲು ಬೀರುಗಳನ್ನೂ ಒದಗಿಸುತ್ತದೆ. ಮುಂದೆ ವರ್ಷಂಪ್ರತಿ ಈ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ನೀಡಲಾಗುವುದು.
ಗ್ರಂಥಾಲಯಗಳನ್ನು ಪ್ರಾಯೋಜಿಸುವ ಬ್ಯಾಂಕಿನ ಯೋಜನೆಗೆ ಸ್ಥಳೀಯ ಆಡಳಿತ/ಜನರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಸ್ಥಳೀಯರು ಈ ಸೌಲಭ್ಯದ ಗರಿಷ್ಠ ಲಾಭ ಪಡೆಯುವುದು ಸುನಿಶ್ಚಿತಗೊಳಿಸಲಾಗಿದೆ. ಗ್ರಂಥಾಲಯವನ್ನು ಸ್ಥಾಪಿಸುವ ಗ್ರಾಮ ಪಂಚಾಯತ್ ಅಥವಾ ಶಾಲೆಗಳಲ್ಲಿ ಅದಕ್ಕೆ ತಕ್ಕಂತೆ ಅಗತ್ಯವಾದ ಸ್ಥಳ ಮತ್ತು ಮೂಲಭೂತ ಸೌಲಭ್ಯಗಳನ್ನು ಲಭ್ಯವಾಗಿಸಲಾಗಿದೆ. ಅಲ್ಲದೆ ಗ್ರಂಥಾಲಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ವ್ಯವಸ್ಥೆಯನ್ನು ಮಾಡುವುದಾಗಿ ಗ್ರಾಮ ಪಂಚಾಯತ್‍ಗಳು/ಶಾಲೆಗಳು ತಾವಾಗಿ ಒಪ್ಪಿಕೊಂಡಿವೆ.
ಗುರುತಿಸಲ್ಪಟ್ಟಿರುವ ಈ 25 ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕು ಕೈಗೊಂಡಿರುವ ಶತಮನೋತ್ಸವದ ಇನ್ನೊಂದು ಯೋಜನೆಯೆಂದರೆ ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತರಾದ ಅರ್ಹ 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳ ನೀಡಿಕೆ. ಈ ಯೋಜನೆಯಡಿ 2004-05ನೇ ಸಾಲಿನ 10ನೇ ತರಗತಿಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು ಅದೇ ವರ್ಷ ಪಿ.ಯು.ಸಿ/ಡಿಪ್ಲೊಮಾ ಕೋರ್ಸುಗಳಿಗೆ ಪ್ರವೇಶ ಪಡೆದಿರುವ ಮತ್ತು ಅರ್ಹತೆಗೆ ನಿಗದಿಪಡಿಸಿರುವ ಎಲ್ಲ ನಿಬಂಧನೆಗಳನ್ನು ಪೂರೈಸಿದ 100 ವಿದ್ಯಾರ್ಥಿಗಳಿಗೆ ಕಾರ್ಪ್‍ಬ್ಯಾಂಕ್ ಶತಮಾನೋತ್ಸವ ವಿದ್ಯಾರ್ಥಿವೇತನಗಳನ್ನು ನೀಡಲಾಗುವುದು.
ದುರ್ಬಲ ವರ್ಗದವರು ಹಾಗೂ ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆಯುವುದನ್ನು ಉತ್ತೇಜಿಸುವಂತೆ ಈ ಯೋಜನೆಯ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಾಯಿತು. ಅದರಂತೆ 100 ವಿದ್ಯಾರ್ಥಿಗಳಲ್ಲಿ ಕಡಿಮೆ ಪಕ್ಷ 25 ವಿದ್ಯಾರ್ಥಿಗಳು ಹುಡುಗಿಯರು ಹಾಗೂ 25 ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ/ವರ್ಗಗಳಿಗೆ ಸೇರಿದವರಾಗಿರುವಂತೆ ಕಾಳಜಿ ವಹಿಸಲಾಗಿದೆ.
ವರ್ಷದಿಂದ ವರ್ಷಕ್ಕೆ ಬ್ಯಾಂಕು ಶಿಕ್ಷಣಕ್ಕೆ ನೀಡುತ್ತ ಬಂದಿರುವ ಒತ್ತಾಸೆಯೇ ಈ ಎರಡೂ ಯೋಜನೆಗಳು ರೂಪಿಸಲ್ಪಡುವಂತೆ ಮಾಡಿದ ಚಾಲನ ಶಕ್ತಿ. ಈ ಯೋಜನೆಗಳ ಮೂಲಕ ಗ್ರಾಮೀಣ ಪ್ರದೇಶಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಬ್ಯಾಂಕು ತನ್ನ ಪಾಲಿನ ಕೊಡುಗೆಯನ್ನು ನೀಡುತ್ತಿದೆ.
(ಜಿ.ಎನ್.ಎನ್)