ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾರ್ಬೆಟ್, ಜಿಮ್
ಕಾರ್ಬೆಟ್, ಜಿಮ್
1875-1955, ಭಾರತದಲ್ಲಿ ನೆಲಸಿದ್ದ ಇಂಗ್ಲಿಷ್ ಷಿಕಾರಿದಾರರಲ್ಲಿ ಈತ ಪ್ರಸಿದ್ಧ. ಈತನ ಹುಟ್ಟೂರು ಕಾಲಧುಂಗಿ. ಇದು ಕುಮಾಂವ್ ಬೆಟ್ಟಗಳ ಸಾಲಿನಲ್ಲಿ ಉತ್ತಮ ಆರೋಗ್ಯಧಾಮವಾದ ನೈನಿತಾಲಿಗೆ ಇಪ್ಪತ್ತು ಮೈಲಿ ದೂರದಲ್ಲಿದೆ. ಕಾಲಧುಂಗಿಯಲ್ಲಿ ಈತನಿಗೆ ಅನೇಕ ಎಕರೆ ಜಮೀನಿತ್ತು. ಅಲ್ಲದೆ ಈತ ಮೊಕಾಮ್ಹೆ ಘಾಟ್ ರೈಲುನಿಲ್ದಾಣದಲ್ಲಿ ಇಪ್ಪತ್ತೊಂದು ವರ್ಷಗಳ ಕಾಲ ಸಾಮಾನು ಸಾಗಿಸುವ ಕಂಟ್ರಾಕ್ಟರ್ ಉದ್ಯೋಗದಲ್ಲಿದ್ದುದಲ್ಲದೆ ಎರಡನೆಯ ಮಹಾಯುದ್ಧದಲ್ಲಿ ಕಂಟ್ರಾಕ್ಟ್ ಕೆಲಸವನ್ನು ಆಳುಗಳಿಗೆ ವಹಿಸಿ ನಾಲ್ಕು ವರ್ಷ ಸೈನ್ಯದಲ್ಲಿದ್ದು ಯುದ್ಧಭೂಮಿಗೂ ಹೋಗಿಬಂದ.
ಜಿಮ್ ಕಾರ್ಬೆಟ್ ತನ್ನ ಜೀವಿತದ ಬಹುಕಾಲವನ್ನು ಹಿಮಾಲಯ ಪರ್ವತದ ಶ್ರೇಣಿಯ ದಕ್ಷಿಣದ ಬೆಟ್ಟಗಳ ಸಾಲಿನಲ್ಲಿ ಕಳೆದ. ಕಾಡಿನಲ್ಲೇ ಹುಟ್ಟಿ ಕಾಡಿನಲ್ಲೇ ನೆಲಸಿದ್ದ ಈತನಿಗೆ ಕಾಡಿನ ಸೊಬಗು, ಕಾಡಿನ ರಹಸ್ಯ, ವನ್ಯಜಂತುಗಳ ಸ್ವಭಾವ, ಕಾಡಿನಲ್ಲಿ ಕಷ್ಟಕಾರ್ಪಣ್ಯಗಳನ್ನು ಅನುಭವಿಸುವ ಬಡಜನ-ಇವೆಲ್ಲದರ ಸೂಕ್ಷ್ಮವಾದ ಅನುಭವವಿತ್ತು. ಕುಮಾಂವ್ ಬೆಟ್ಟಗಳ ಸಾಲಿನಲ್ಲಿದ್ದ ಅನೇಕ ನರಭಕ್ಷಕ, ಗೋಭಕ್ಷಕ ಹುಲಿಚಿರತೆಗಳನ್ನು ಕೊಂದು ಸಂತ್ರಸ್ತ ಜನರಿಗೆ ಉಪಕಾರವನ್ನೂ ಬಡಜನರಿಗೆ ಅನೇಕ ರೀತಿಯಲ್ಲಿ ಯಥೋಚಿತವಾದ ಸಹಾಯವನ್ನೂ ಈತ ಮಾಡಿದ. ದೀನದಲಿತರ ಬಗ್ಗೆ ಈತನಿಗಿದ್ದ ಪ್ರೀತಿ ಔದಾರ್ಯಗಳು ಮೆಚ್ಚುವಂಥವು.
ಕುಮಾಂವ್ ನರಭಕ್ಷಕಗಳು, ರುದ್ರಪ್ರಯಾಗದ ನರಭಕ್ಷಕ ಚಿರತೆ, ದೇವಾಲಯದ ಹುಲಿ ಮತ್ತು ಇನ್ನಷ್ಟು ಕುಮಾಂವ್ ನರಭಕ್ಷಕಗಳು, ನನ್ನ ಭಾರತ, ಕಾಡಿನ ಚರಿತ್ರೆ-ಈ ಪುಸ್ತಕಗಳನ್ನು ಕಾರ್ಬೆಟ್ ಬರೆದಿದ್ದಾನೆ. ಕುಮಾಂವ್ ನರಭಕ್ಷಕಗಳು, ರುದ್ರಪ್ರಯಾಗದ ನರಭಕ್ಷಕ ಚಿರತೆ, ದೇವಾಲಯದ ಹುಲಿ ಮತ್ತು ಇನ್ನಷ್ಟು ಕುಮಾಂವ್ ನರಭಕ್ಷಕಗಳು-ಈ ಗ್ರಂಥಗಳಲ್ಲಿ ತಾನು ಮಾಡಿದ ನರಭಕ್ಷಕ ಹುಲಿಚಿರತೆಗಳ ಬೇಟೆಯ ಕಥೆಗಳನ್ನು ಕಾರ್ಬೆಟ್ ಹೃದಯಂಗಮವಾಗಿ ವಿವರಿಸಿದ್ದಾನೆ. ಹುಲಿಚಿರತೆಗಳ ಹಾವಳಿ, ಅವನ್ನು ಕೊಲ್ಲಲು ಮಾಡಿದ ಸಾಹಸಗಳು, ಕೆಲವು ಸಲ ತಾನು ಕೊಂದ ದೇಹದ ಬಳಿಗೆ ಮತ್ತೆ ಬಾರದ ದುಷ್ಟಪ್ರಾಣಿಯನ್ನು ಅರಸುತ್ತ ಪಟ್ಟಪಾಡು, ತೋರಿದ ಧೈರ್ಯೋತ್ಸಾಹಗಳು-ಸ್ವಾನುಭವಪೂರ್ಣವಾಗಿದ್ದು ರೋಮಾಂಚಕಾರಿಯಾಗಿವೆ. ಈ ಗ್ರಂಥಗಳಲ್ಲಿ ಲೇಖಕನ ಅರಣ್ಯಜಗತ್ತಿನ ಪೂರ್ಣ ಪರಿಚಯವನ್ನೂ ಹವ್ಯಾಸ ಆಸಕ್ತಿಗಳನ್ನೂ ಕಾಣಬಹುದಾಗಿದೆ. ಕಾಡಿನಲ್ಲಿ ಅಲೆಯುವುದು, ಮೃಗಪಕ್ಷಿಗಳ ಮರ್ಜಿ ಸ್ವಭಾವಗಳನ್ನು ಅಭ್ಯಸಿಸುವುದು, ಅವುಗಳ ಕೂಗು ಗರ್ಜನೆಗಳನ್ನು ಅನುಕರಿಸುವುದು ಕಾರ್ಬೆಟ್ಟನಿಗೆ ಬಾಲ್ಯದಿಂದಲೂ ಹವ್ಯಾಸವಾಗಿತ್ತು. ಮೃಗಯಾ ಸಾಹಿತ್ಯದಲ್ಲಿ ಕಾರ್ಬೆಟ್ಟನದು ಎತ್ತಿದ ಕೈ. ಅಲ್ಲದೆ ಮೃಗಯಾ ಸಾಹಿತ್ಯವನ್ನು ನಿಜವಾದ ಸಾಹಿತ್ಯದ ಮಟ್ಟಕ್ಕೆ ಏರಿಸಿದ ಕೀರ್ತಿ ಇವನದಾಗಿದೆ.
ನನ್ನ ಭಾರತ ಎಂಬ ಗ್ರಂಥದಲ್ಲಿ ಬಡ ಭಾರತೀಯರ ಸತ್ಯ, ನಿಷ್ಠೆ, ಸರಳತನ, ಕಷ್ಟದ ದುಡಿಮೆಗಳನ್ನೂ ತನ್ನ ಹವ್ಯಾಸ ಉದ್ಯೋಗಗಳನ್ನೂ ಲೇಖಕ ಕಥೆಗಳಾಗಿ ಬಣ್ಣಿಸಿದ್ದಾನೆ. ಕಾಡಿನ ಚರಿತ್ರೆ ಎಂಬ ಪುಸ್ತಕದಲ್ಲಿ ತನ್ನ ಬಾಲ್ಯ, ಬಾಲ್ಯದಲ್ಲಿ ಮಾಡಿದ ಷಿಕಾರಿ ಮೊದಲಾದ ಜೀವನಾನುಭವಗಳನ್ನು ತಿಳಿಸಿದ್ದಾನೆ. ಜಿಮ್ ಕಾರ್ಬೆಟ್ ಷಿಕಾರಿದಾರ ಮಾತ್ರವಲ್ಲದೆ ಸಮಾಜಸುಧಾರಕನೂ ಬಡವರ ಬಂಧುವೂ ಅಗಿದ್ದನೆಂಬುದು ತಿಳಿಯುತ್ತದೆ. ತನ್ನ ವಿಶಿಷ್ಟ ಗುಣಗಳಿಂದ ಈತ ಕುಮಾಂವ್ ಬೆಟ್ಟಗಳ ಸಾಲಿನ ಹಳ್ಳಿಗರಿಗೆಲ್ಲ ಪರಿಚಿತನಾಗಿದ್ದಂತೆ ತನ್ನ ಗ್ರಂಥಗಳ ಮೂಲಕ ಜಗತ್ತಿನ ಮೃಗಯಾ ಸಾಹಿತ್ಯದ ಓದುಗರಿಗೆಲ್ಲ ಪರಿಚಿತನಾಗಿದ್ದಾನೆ.
ಕುಮಾಂವ್ ನರಭಕ್ಷಕಗಳು ಎಂಬ ಈತನ ಪುಸ್ತಕದ ಆಧಾರದ ಮೇಲೆ ರಮ್ಯ ವರ್ಣ ರಂಜಿತ ಚಲನಚಿತ್ರವೊಂದು ತಯಾರಾಗಿದೆ.
(ಎಸ್.ಕೆ.ಆರ್.ಎ.)