ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾರ್ಯಕಾರಣಭಾವ

ವಿಕಿಸೋರ್ಸ್ದಿಂದ

ಕಾರ್ಯಕಾರಣಭಾವ  

  ಎಲ್ಲ ಘಟನೆಗಳ ಆಗುಹೋಗಿಗೂ ಒಂದು ಕಾರಣ ಇರಲೇಬೇಕೆಂಬ ನಿಯಮಕ್ಕೆ ಈ ಹೆಸರಿದೆ (ಕಾಸ್ಯಾಲಿಟಿ). ಕಾರಣವಿಲ್ಲದೆ ಕಾರ್ಯ ಇಲ್ಲವೆನ್ನುವುದು ತಾತ್ತ್ವಿಕವೂ ಹೌದು, ವ್ಯೆಜ್ಞಾನಿಕವೂ ಹೌದು. ಇದನ್ನು ಲ್ಯಾಟಿನ್ ಭಾಷೆಯಲ್ಲಿ ಎಕ್ಸ್ ನಿಹಿಲೊ ನಿಹಿಲ್ ಫಿಟ್ ಎನ್ನುತ್ತಾರೆ. ಎಂದರೆ ಶೂನ್ಯದಿಂದ ಶೂನ್ಯವಲ್ಲದೆ ಬೇರೇನೂ ಬರಲಾರದು ಎಂದು. ಈ ಕಾರ್ಯಕಾರಣಗಳ ಬಂಧಸೂತ್ರ ಎಲ್ಲ ರೀತಿಯ ಆಕಸ್ಮಿಕತ್ವವಾದವನ್ನೂ (ಆಕ್ಸಿಡೆಂಟಲಿಸಂ) ಅಹೇತುಕವಾದವನ್ನೂ (ನಾನ್ ಕಾಸ್ಯಾಲಿಟಿ) ನಿರಾಕರಿಸುತ್ತದೆ. ಕಾರ್ಯಕಾರಣಗಳ ಅನ್ವಯ ಬಾಹ್ಯ ವಿಶ್ವದ ಒಂದು ನಿಶ್ಚಿತ ಲಕ್ಷಣವನ್ನು ಸೂಚಿಸುವುದೊಂದೇ ಅಲ್ಲದೆ, ಆಂತರಿಕವೆನಿಸುವ ಜ್ಞಾನಸಂವರ್ಧನೆಗೂ ಮಾರ್ಗವನ್ನು ಹಾಕಿಕೊಡುತ್ತದೆ. ಖಚಿತವಾದ ಜ್ಞಾನ ಸಮೂದಾಯವೆನಿಸಿಕೊಳ್ಳುವ ಎಲ್ಲ ಶಾಸ್ತ್ರ್ರಗಳ ತಳಹದಿ ಎಂಬಂತೆ ಇರುವುದೇ ಈ ವಿಶ್ಲೇಷಣಾತ್ಮಕ, ಸಮನ್ವಯಾತ್ಮಕ ಕಾರ್ಯಕಾರಣಗಳ ಅನ್ವಯ.

 ಈ ಕಾರ್ಯಕಾರಣಗಳು ಕೇವಲ ಭೌತಿಕವೇ, ಸ್ವಾಭಾವಿಕವೇ ಅಥವಾ ಕಾರಣವೆನ್ನುವುದು ಅಭೌತಿಕ ಅಥವಾ ಅಧ್ಯಾತ್ಮಿಕವಾಗಿರಬಹುದೇ, ಎನ್ನುವ ಜಿಜ್ಞಾಸೆಯನ್ನನುಸರಿಸಿ ಭೌತಿಕವಾದ ಮತ್ತು ಆಧ್ಯಾತ್ಮಕವಾದಗಳು ಹುಟ್ಟುತ್ತವೆ. ಸಾಮಾನ್ಯವಾಗಿ ವಿಜ್ಞಾನ ತರ್ಕದ ಬಲದಿಂದ, ಪ್ರತ್ಯಕ್ಷ ಪ್ರಮಾಣದ ಮೇಲೆ ಎಲ್ಲ ಘಟನೆಗಳನ್ನೂ ಭೌತಿಕ ಅಥವಾ ಪ್ರಾಕೃತಿಕವೆಂದು ನಿರ್ಣಯಿಸಲು ತೊಡಗುತ್ತದೆ. ಈ ದೃಷ್ಟಿಯಿಂದ ಕಾರಣ-ಕಾರ್ಯಗಳೆರಡೂ ಭೌತಿಕ ಪ್ರವೃತ್ತಿಗಳೆನಿಸಿಕೊಳ್ಳುತ್ತವೆ. ಇಲ್ಲಿ ಎಲ್ಲವೂ ನಿರ್ಧರಿಸಲ್ಪಡುವಂಥವಾಗಿದ್ದು ಭೌತ-ಸಾಪೇಕ್ಷವಾಗಿರುತ್ತವೆ. ಆದರೆ ಅಭೌತಕಲ್ಪನೆಗಳಲ್ಲಿ ಇವುಗಳ ವಿಶ್ಲೇಷಣೆಯೇ ಬೇರೆಯಾಗಿರಬಹುದು. ಹೇಗೆಂದರೆ ಕಾರಣವೆನ್ನುವುದು ಅಭೌತಿಕವಾಗಿದ್ದು ಇಂದ್ರಿಯಾತೀತವಾಗಿ, ತರ್ಕ ಅಥವಾ ಅನುಮಾನಕ್ಕೂ ಸಿಗದ ಆತ್ಮಾನುಭವಕ್ಕೆ ವೇದ್ಯವಾಗುವಂಥದು ಎನ್ನುವುದನ್ನು ತತ್ತ್ವಶಾಸ್ತ್ರದ ಒಂದು ಭಾಗವಾದ ಚಿತ್ಪ್ರ್ರಧಾನವಾದವೂ (ಐಡಿಯಾಲಿಸಂ) ಹಾಗೂ ಮತ್ತೊಂದು ಭಾಗವಾದ ದೈವವಿಜ್ಞಾನವೂ (ಥಿಯಿಸಂ) ಅಂಗೀಕರಿಸುತ್ತವೆ. ಇಲ್ಲಿ ಕಾರ್ಯವೆನ್ನುವುದು ಭೌತವಾಗಿದ್ದು ಕಾರಣವೆನ್ನುವುದು ಅಭೌತವಾಗಿರಬಹುದು. ಕಾರ್ಯ ಸಾಪೇಕ್ಷವಾಗಿದ್ದು ಕಾರಣ ನಿರಪೇಕ್ಷವಾಗಿರಬಹುದು. ಕಾರ್ಯಕಾರಣಗಳ ಸಂಬಂಧದಲ್ಲಿ ವಿಜ್ಞಾನಕ್ಕೂ ತತ್ತ್ವಶಾಸ್ತ್ರಕ್ಕೂ ಇರುವ ವ್ಯತ್ಯಾಸಗಳನ್ನು ಇಲ್ಲಿ ಗಮನಿಸಬಹುದು.

ಎನೇ ಇರಲಿ, ವಿಶಾಲದೃಷ್ಟಿಯಲ್ಲಿ ಕಾರ್ಯಕಾರಣಗಳ ಸಂಬಂಧ ಸಮಸ್ತ ವಿಶ್ವ, ಎಂದರೆ, ಆಧ್ಯಾತ್ಮಿಕ, ಆಧಿಭೌತಿಕ ಮತ್ತು ಆಧಿದೈವಿಕ ವರ್ಗಗಳನ್ನು ಒಂದು ರಚನೆಯಲ್ಲಿ ಕೂಡಿಸುವ ಪ್ರಯತ್ನಗಳನ್ನು ಸೂಚಿಸುತ್ತದೆ. ಈ ಸಂಬಂಧದ ವಿಚಾರದಲ್ಲಿ ಪಾಶ್ಚಾತ್ಯ ಮತ್ತು ಪೌರಸ್ತ್ಯ ದೇಶಗಳಲ್ಲೂ ವಿಪುಲವಾದ ವಿಚಾರಸಾಹಿತ್ಯ ಬೆಳೆದಿದೆ.

 ಕ್ರಿ. ಪೂ. ಮೂರನೆಯ ಶತಮಾನದಲ್ಲಿದ್ದ ಗ್ರೀಕ್ ತತ್ತ್ವಜ್ಞನಾದ ಅರಿಸ್ಟಾಟಲ್ ಕಾರಣ ಎನ್ನುವುದನ್ನು ವಿಶ್ಲೇಷಿಸಿ, ಅದು ನಾಲ್ಕು ಬಗೆಯಲ್ಲಿರಬಹುದು ಎಂದು ಹೇಳಿದ್ದಾನೆ: 1 ಭೌತಿಕ ಅಥವಾ ಉಪಾದಾನ (ಮೆಟೀರಿಯಲ್), 2 ನಿಮಿತ್ತ (ಎಫಿಷಿಯೆಂಟ್), 3 ರೂಪವಿಶೇಷ (ಫಾರ್ಮಲ್) ಮತ್ತು 4 ಧ್ಯೇಯ ಅಥವಾ ಅಂತಿಮ ಫೈನಲ್). ಮೊದಲನೆಯದು, ಈ ಕಾರ್ಯಕ್ಕೆ ಅನುವುಮಾಡಿಕೊಡುವ ಮಾಧ್ಯಮವನ್ನು (ಕಲ್ಲು, ಮಣ್ಣು, ಮರ, ಲೋಹ ಇತ್ಯಾದಿ), ಎರಡನೆಯದು. ಈ ಮಾಧ್ಯಮವನ್ನು ರೂಪಿಸುವ ಚೆೃತನ್ಯ ಅಥವಾ ಮಾನವನನ್ನು (ಕಮ್ಮಾರ, ಕಲ್ಲುಕುಟಿಕ, ಶಿಲ್ಪಿ, ಕಲಾವಿದ ಇತ್ಯಾದಿ), ಮೂರನೆಯದು ವಸ್ತು ಅಥವಾ ಘಟಕ ಯಾವ ರೂಪವನ್ನು ತಾಳಿ ಯಾವುದೋ ನಾಮದಿಂದ ವಿಶಿಷ್ಟವಾಗಿ ಗುರುತಿಸಲ್ಪಡುತ್ತದೋ ಅಂಥವನ್ನು (ಬೆಂಚು, ಕುರ್ಚಿ, ಶಿಲ್ಪ, ಒಡವೆ ಇತ್ಯಾದಿ), ನಾಲ್ಕನೆಯದು ಎಲ್ಲದರ ಹಿಂದೆ ಅಡಗಿರುವ ಉದ್ದೇಶ ಅಥವಾ ಧ್ಯೇಯಗಳನ್ನು ಸೂಚಿಸುತ್ತವೆ. ಅರಿಸ್ಟಾಟಲನ ಹಿಂದಿನ ವಿಚಾರವಂತರು ಈ ನಾಲ್ಕರಲ್ಲಿ ಯಾವುದೋ ಒಂದೊಂದನ್ನು ಮಾತ್ರ ಪರಿಗಣಿಸಿದ್ದರೆ, ಈತ ಕಾರಣವೆಂಬುದರ ಪೂರ್ಣ ಅರ್ಥಕ್ಕೆ ಇವೆಲ್ಲ ಸಹಾಯ ಮಾಡುತ್ತವೆಂದು ವಿಶದ ಪಡಿಸುತ್ತಾನೆ. ಪ್ರತಿಯೊಂದು ವಸ್ತುವಿಗೂ (ಆಬ್ಜಕ್ಟ್, ಇವೆಂಟ್) ಈ ನಾಲ್ಕು ಅಂಶಗಳಿರುವುದನ್ನು ನಾವು ಗಮನಿಸಬಹುದು. ವಿಜ್ಞಾನಿಗಳಿಗೂ ತಾತ್ತ್ವಿಕರಿಗೂ ಇರುವ ವಿಚಾರಭೇದ ಕಾರ್ಯ ಅಥವಾ ಕಾರಣವೆಂಬುದರ ಸ್ವಭಾವವೇನೆಂಬುದನ್ನು ಕುರಿತುದೇ ಆಗಿದೆ.

 ಕಾರಣವೆನ್ನುವುದನ್ನು ಒಂದು ಕಾರ್ಯಕ್ಕೆ ಎಡೆಮಾಡಿಕೊಡುವ ಒಂದು ಶಕ್ತಿ (ಪೊಟೆನ್ಸಿ, ಎನರ್ಜಿ) ಎಂದೆಣಿಸಿಕೊಂಡರೆ, ಈ ಶಕ್ತಿಯ ರೂಪಾಂತರವೇ ಕಾರ್ಯವಾಗುತ್ತದೆ ಎನ್ನಬಹುದು. ಇವೆರಡರ ಸಂಬಂಧ ನಿಕಟ ಮತ್ತು ಅನ್ಯೋನ್ಯ (ಇಂಟಿಮೇಟ್), ಅಗತ್ಯ, ಸಮೀಪ ಆಗಿದ್ದರೆ ಮಾತ್ರ ಕಾರಣದಿಂದ ಕಾರ್ಯವೆನ್ನುವುದು ಸಿದ್ಧಿಸುತ್ತದೆ. ಇಲ್ಲಿ ಕಾರ್ಯವೆನ್ನುವುದರ ಪೂರ್ವಭಾವಿ (ಆಂಟೆಸಿಡೆಂಟ್) ಸ್ಥಿತಿಯಾಗಿರಬೇಕಲ್ಲದೆ, ತದನಂತರದ ಸ್ಥಿತಿಯಾಗಿರುವುದಿಲ್ಲ. ಇದು ಕಾಲದ (ಟೆಂಪೊರಲ್) ಪೂರ್ವಭಾವವೋ ತಾರ್ಕಿಕವಾದ ಪೂರ್ವಭಾವವೋ ಎನ್ನುವುದರಲ್ಲಿ ಜಿಜ್ಞಾಸೆಯಿದೆ. ಕಾಲದ ವಿಚಾರದಲ್ಲಿ ಕಾರಣ ಪೂರ್ವಸ್ಥಿತಿ ಎನ್ನುವುದಾದರೆ, ಅವೆರಡರ ಅಂತರ ಎಷ್ಟೆಂಬ ಪ್ರಶ್ನೆ ಏಳುತ್ತದೆ. ಈ ಅಂತರ ಕಡಿಮೆಯಾದಷ್ಟೂ ಕಾರ್ಯಕಾರಣ ಸಂಬಂಧ ಖಚಿತಗೊಳ್ಳುವುದೊಂದೇ ಅಲ್ಲದೆ ಅವೆರಡಕ್ಕೂ ಯಾವ ರೀತಿಯ ಭಿನ್ನತೆಯೂ ಇಲ್ಲವೆಂದಾಗುತ್ತದೆ. ಅದು ಎಕೈಕವಾಗಿದ್ದು ವಸ್ತು, ಘಟನೆ ಇತ್ಯಾದಿಗಳನ್ನು ನೋಡುವ ದೃಷ್ಟಿಭೇದದಿಂದ ಅವು ಬೇರೆಯೆಂದು ತೋರುವುವಲ್ಲದೆ ವಸ್ತುತಃ ಅವುಗಳಿಗೆ ಅಂತರವಿಲ್ಲವೆಂದಾಗುತ್ತದೆ. ದೃಷ್ಟಿಭೇದದಿಂದ ನಾಮ ಬೇರೆ ಎಂದಾಗುತ್ತದೆ. ಈ ರೀತಿಯ ವಿಚಾರವಾದದಲ್ಲಿ ಕಾಲ ಮತ್ತು ವಸ್ತು ಅಥವಾ ದೇಶ ಇವುಗಳ ಪ್ರತ್ಯೇಕತೆ ನಾಶವಾಗಿ ಅದ್ವ್ಯೆತದಲ್ಲಿ ಪರ್ಯಾವಸಾನವಾಗುತ್ತದೆ. ಈ ದೃಷ್ಟಿಯಲ್ಲಿ ಅಡಗಿರಬಹುದಾದ ದೊಡ್ಡ ತತ್ತ್ವವೇ ಆಧುನಿಕ ಕಾಲದಲ್ಲಿ ಐನ್‍ಸ್ಟೀನ್ ಎಂಬ ವಿಜ್ಞಾನಿ ಪ್ರತಿಪಾದಿಸಿರುವ ಸಾಪೇಕ್ಷತ್ಷಾವಾದದಲ್ಲಿ ಬರುವ ವಸ್ತುವೆನ್ನುವುದು ಕಾಲ-ದೇಶಗಳ ನಿರಂತರ ಪ್ರವಾಹದಲ್ಲಿ ಒದಗುವ ಒಂದು ಸನ್ನಿವೇಶ (ಇವೆಂಟ್) ಎನ್ನುವ ಕಲ್ಪನೆಯಲ್ಲಿ ಅಭಿವ್ಯಕ್ತಗೊಂಡಂತೆ ತೋರುತ್ತದೆ.

 ಕಾರ್ಯಕಾರಣಗಳ ಅಂತರ ಕಾಲದ ದೃಷ್ಟಿಯಿಂದ ಹೆಚ್ಚಿದಷ್ಟೂ ನಿರ್ದಿಷ್ಟವಾದ ಕಾರ್ಯಕ್ಕೆ ನಿರ್ದಿಷ್ಟವಾದ ಕಾರಣವಾವುದು ಎನ್ನುವುದನ್ನು ಸೂಚಿಸುವುದು ಕಷ್ಟವಾಗುತ್ತದೆ. ಆದ್ದರಿಂದಲೇ ಇವೆರಡರ ಮಧ್ಯೆ ಕಾಲದ ಅಂತರವೇ ಇಲ್ಲವೆನ್ನುವಂತೆ ಸಮೀಪದ ಲಕ್ಷಣವನ್ನು (ಇಮ್ಮೀಡಿಯಸಿ) ಹೇಳಿದೆ. ಅಲ್ಲದೆ, ಕಾರಣವೆನ್ನುವುದು ಅನೇಕ ಅಂಶಗಳ (ಕಂಡಿಷನ್ಸ್) ಸಮುದಾಯವಾಗಿದ್ದು, ಕಾರ್ಯದ ಸಿದ್ದಿಗೆ ಸಾಮೀಪ್ಯ ಹೊಂದಿದ್ದರೂ ಅಗತ್ಯ ಮತ್ತು ನಿಕಟ (ನೆಸಸರಿ ಮತ್ತು ಎಸೆನ್ಷಿಯಲ್) ಸಂಬಂಧವನ್ನು ಪಡೆಯದೆ ಇರಬಹುದು. ಆದ್ದರಿಂದ ಕಾರ್ಯಕಾರಣಸಂಬಂಧವನ್ನು ನಿಕಟ, ಅಗತ್ಯ, ಸಮೀಪ ಎನ್ನುವ ಲಕ್ಷಣಗಳಿಂದ ನಿರ್ದೇಶಿಸಿದೆ. ಕಾರಣ ಕಾರ್ಯಗಳ ಮಧ್ಯದಲ್ಲಿನ ಕಾಲದ ಅಂಶಗಳನ್ನು ಗುರುತಿಸಲು ಸಾಧ್ಯವಾಗದಷ್ಟು ಅವುಗಳ ಸಂಬಂಧ ಹತ್ತಿರವಿರುವುದರಿಂದ ಕಾರಣ ಕಾರ್ಯದ ಪೂರ್ವಸ್ಥಿತಿ ಎನ್ನುವುದನ್ನು ತರ್ಕಪ್ರಕ್ರಿಯೆ ಎಂದೇ ಗುರುತಿಸಬೇಕು. ಎಂದರೆ ಕಾರಣವೆನ್ನುವುದು ತಾರ್ಕಿಕವಾಗಿ ಕಾರ್ಯದ ಹಿನ್ನಲೆಯೆಂದೇ ಹೇಳಬೇಕಲ್ಲದೆ ಅನಂತರದ ಸ್ಥಿತಿ ಎಂದು ಹೇಳಲು ಸಾಧ್ಯವಿಲ್ಲ.

 ಆದರೆ ಇಲ್ಲೊಂದು ಪ್ರಶ್ನೆ ಉದ್ಭವವಾಗುತ್ತದೆ. ಅರಿಸ್ಟಾಟಲ್ ಹೇಳುವ ಅಂತಿಮ ಕಾರಣ (ಫೈನಲ್ ಕಾಸ್) ಎನ್ನುವಂಥದು ಯಾವುದೋ ಧ್ಯೇಯ ಅಥವಾ ಆದರ್ಶವನ್ನೂ ರೂಪಗೊಳಿಸುತ್ತದೆ. ಎನ್ನುವ ಮಾತು. ಈ ವಿಶೇಷ ಸಾಮಾನ್ಯವಾದ ದೃಷ್ಟಿರೂಪದ ಭೌತಿಕ ಘಟಕಗಳಿಗೆ ಅನ್ವಯವಾಗುವುದಾದರೆ ಅರ್ಥ ಸ್ಪಷ್ಟವಾಗಬಲ್ಲುದು. ಹೇಗೆಂದರೆ, ಮಣ್ಣಿನ ಮಡಕೆ ನೀರು ತುಂಬುವ ಉದ್ದೇಶದಿಂದ ರೂಪಗೊಂಡಿರುತ್ತದೆ-ಎಂದರೆ ಸರಿ. ಆದರೆ ಇದೇ ಆದರ್ಶ-ಕಾರಣವನ್ನು ಇಡೀ ವಿಶ್ವಕ್ಕೆ ಅಥವಾ ಸಮಷ್ಟಿಗೆ ಅನ್ವಯಗೊಳಿಸುವಾಗ ಪ್ರಶ್ನೆ ಕಠಿಣವಾಗುತ್ತದೆ. ಅಲ್ಲದೆ ಅರಿಸ್ಟಾಟಲನ ತತ್ತ್ವದ ಪ್ರಕಾರ ಅಣು ಅಥವಾ ಬ್ರಹ್ಮಾಂಡದ ಆದರ್ಶಕಾರಣ ದೇವರೇ ಎಂದು. ಎಂದರೆ ಈ ದೇವರೆಂಬ ಸ್ಥಿತಿ ಪ್ರತಿಯೊಂದು ಘಟಕದ ಭವಿಷ್ಯ ಎಂದಾಯಿತು. ಈ ಭವಿಷ್ಯವೆನ್ನುವುದು ಕಾಲದ ದೃಷ್ಟಿಯಿಂದ ಭವಿಷ್ಯವೋ ತಾತ್ತ್ವಿಕವಾಗಿ ಎನ್ನುವ ಜಿಜ್ಞಾಸೆ ಬರುತ್ತದೆ. ಕಾಲದ ದೃಷ್ಟಿಯಿಂದ ಯಾವ ಕಾರಣವೂ ಭವಿಷ್ಯವಾದಲ್ಲಿ ಕಾರ್ಯಕ್ಕೆ ಎಡೆಕೊಡಲಾರದೆಂದು ಮೇಲೆ ನೋಡಿದ್ದೇವೆ. ಅದು ತಾರ್ಕಿಕವಾಗಿ ಪ್ರಾಕ್‍ಸ್ಥಿತಿ ಎಂದು ತೀರ್ಮಾನಿಸಿದ್ದೇವೆ. ಇಲ್ಲೊಂದು ಜಿಜ್ಞಾಸಾಪರವಾದ ಸಂದರ್ಭ ಏರ್ಪಡುತ್ತದೆ. ತಾರ್ಕಿಕವಾದ ಪ್ರಾಕ್‍ಸ್ಥಿತಿಗೂ ತಾತ್ತ್ವಿಕವಾದ ಭವಿಷ್ಯಸ್ಥಿತಿಗೂ ಹೇಗೆ ಸಾಮಂಜಸ್ಯ ಏರ್ಪಟ್ಟೀತು? ಇಲ್ಲಿ ವಿಚಾರವಂತರ ಮುಂದೆ ಎದ್ದು ನಿಲ್ಲುವ ಸಂದಿಗ್ಧ ಹೀಗಿದೆ : ತಾರ್ಕಿಕವಾದದ್ದು ತಾತ್ತ್ವಿಕವಲ್ಲ, ತಾತ್ತ್ವಿಕವಾದದ್ದು ತಾರ್ಕಿಕವಲ್ಲ; ಈ ಪ್ರಶ್ನೆಯ ಇತ್ಯರ್ಥ ಇಲ್ಲಿ ಅನುಚಿತ.

 ಮತ್ತೊಂದು ಪ್ರಶ್ನೆ. ಯಾವುದೋ ಧ್ಯೇಯ ಅಥವಾ ಆದರ್ಶ ಎಲ್ಲವನ್ನೂ ರೂಪಗೊಳಿಸುತ್ತದೆ ಎನ್ನುವಾಗ, ಈ ಆದರ್ಶ ಭವಿಷ್ಯದಲ್ಲಿದ್ದುಕೊಂಡು ಘಟಕಗಳನ್ನು ರೂಪಿಸುವಂಥದೋ ಅಥವಾ ಭೂತವಾಗಿದ್ದುಕೊಂಡು ರೂಪಗಳನ್ನು ಹೊರಚೆಲ್ಲುವಂತಹುದೋ ಎನ್ನುವುದಕ್ಕೆ ಉತ್ತರ ಹೇಳಬೇಕಾಗುತ್ತದೆ. ಈ ಎರಡನೆಯ ವೃತ್ತಿ ಮಾನಸಿಕವಾಗಿ ಅಥವಾ ತಾರ್ಕಿಕವಾಗಿ ಅಷ್ಟು ತೊಡಕು ಕೊಡುವುದಿಲ್ಲ. ಇದು ವಿಕಾಸವಾದಕ್ಕೆ ಅನುಗುಣವಾಗಿಯೇ ಇದ್ದು ಕಾರ್ಯವೆನ್ನುವುದು ಕಾರಣವೆನ್ನುವುದರ ವಿಕಾಸ, ರೂಪ ಮತ್ತು ಈ ವಿಕಾಸದ ರೂಪರೇಷಗಳು ಕಾಲಾನುವರ್ತಿಯಾಗಿ, ಅಂಶಾನುವರ್ತಿಯಾಗಿ ತಿದ್ದಿಕೊಂಡು ಹೋಗುತ್ತಲೇ ಇರುತ್ತದೆ-ಎನ್ನುವವರ ವಾದಕ್ಕೆ ಸರಿಹೊಂದುತ್ತದೆ. ಸಾಮಾನ್ಯ ಮಾನವನ ಬುದ್ದಿಗೆ ಸಮಂಜಸವಾಗಿ ತೋರುವ ವಿವರಣೆ ಇದು. ಆದರೆ ತೊಡಕು ಬರುವುದು ಮೊದಲನೆಯದರ ವಿಚಾರವಾಗಿ. ಭವಿಷ್ಯ ಎಂದರೆ, ಈಗ ಇಲ್ಲದಿರುವುದು ಎಂದರ್ಥ. ಎಂದರೆ ಅದರ ಇರುವಿಕೆಯೇ ಮುಂದೆ ಆಗುವ, ಆಗಬಹುದಾದ ಘಟನೆ. ಎಂದರೆ ಅದು ಸಂಭೂತವೆನಿಸುವ ಒಂದು ಸ್ಥಿತಿ. ಅಂಥ ತಂತ್ರ ಕಾಲಗರ್ಭದಲ್ಲಿದ್ದರೆ ಮಾತ್ರ, ಹಿಂದಿನಿಂದ ಕಾರ್ಯಗಳೆನ್ನುವುದನ್ನು ಮುಂದೆ ಮುಂದೆ ನೂಕಬಲ್ಲದ್ದಾಗಿರುತ್ತದೆ. ಯಾವಾಗ ಅದಕ್ಕೆ ಸಂಭೂತವಾದದ್ದು ಎನ್ನಲಾಗುತ್ತದೋ ಆಗ ಅಂಥ ಸ್ಥಿತಿ ಕಾಲಗರ್ಭದಲ್ಲಿ ಇಲ್ಲದ, ಕಾಲಕ್ಕೆ ಅತೀತವಾದ ಒಂದು ಅಕಾಲಿಕವಾದ (ಸೂಪ್ರ-ಟೆಂಪೊರಲ್) ಒಂದು ಪರಿಸ್ಥಿತಿ. ಇಂಥ ಸ್ಥಿತಿ ಅಥವಾ ವಸ್ತು ಇರಬಹುದಾದರೆ ಅದು ಬುದ್ದ್ಯತೀತವಾದ, ಅಭೌತಿಕವಾದ ಸ್ಥಿತಿಯೇ ಆಗಿರಬೇಕು. ಅದು ಅಧಿಭೌತಿಕವಾಗದಿರುವುದರಿಂದ ಅದನ್ನು ಆಧ್ಯಾತ್ಮವೆಂದೇ ಕರೆಯಬೇಕು. ಈ ಆಧ್ಯಾತ್ಮಿಕವಾದ ಆದರ್ಶ ಅಥವಾ ಧ್ಯೇಯ ಕಾಲದ ಪರಿಮಿತಿಗೆ ಸಿಗದೆ ಕಾಲದ ಪರಿಮಿತಿಯಲ್ಲಿರಬಹುದಾದ ಎಲ್ಲ ಕಾರ್ಯ-ಕಾರಣಗಳನ್ನೂ ನಿಯೋಜಿಸಿಕೊಂಡು ತನ್ನ ಕಡೆಗೆ ಎಳೆದುಕೊಳ್ಳುತ್ತದೆ. ಈ ಅಭೌತಿಕ, ಅಲೌಕಿಕ, ಅಕಾಲಿಕ ಸ್ಥಿತಿಯ ಸೆಳೆತ ಅಸ್ವಾಭಾವಿಕವಾದದ್ದು ಎಂದರೂ ಪ್ರಪಂಚದ ರಚನೆ, ನಿಮಿಷ ನಿಮಿಷದ ಚಲನೆ ಇದರ ಚಲನೆಯನ್ನೇ ಅನುಸರಿಸದ ಒಂದು ವೃತ್ತಿ ಎಂದರಿವಾಗುತ್ತದೆ. ಪ್ರಪಂಚದ ಗತಿಯಲ್ಲಿ ಈ ಹಿನ್ನಲೆ ಅಥವಾ ಮುನ್ನೆಲೆ ನಮಗೆ ಕಾಣಲೇಬೇಕು. ಆದ್ದರಿಂದ ಈ 'ಕಾಲದಲ್ಲಿ ಇಲ್ಲದ' 'ಕಾಲವನ್ನು ಮೀರಿದ' ಸ್ಥಿತಿ ಅಪ್ರಾಕೃತಿಕವಾದರೂ ಅತಾತ್ತ್ವಿಕವೆಂದು ಕಂಡುಬರುವುದಿಲ್ಲ. ವಸ್ತುಸ್ಥಿತಿಯನ್ನು ಖಂಡ ಖಂಡವಾಗಿ ತಿಳಿಯುವ ದೃಷ್ಟಿಗೆ ಈ ಅಂತಿಮ ಕಾರಣ ಎನ್ನುವುದರ ಅರ್ಥವೂ ಆಗುವುದಿಲ್ಲ; ಅದರ ಸ್ವಭಾವದ ಲಕ್ಷಣವೂ ತಿಳಿಯುವುದಿಲ್ಲ. ವಿಶ್ವದ ಅಥವಾ ಅದಕ್ಕೂ ಮೂಲಭೂತವಾದ ಇರುವಿಕೆ ಎನ್ನುವುದರ ಪೂರ್ಣ ದೃಷ್ಟಿಗೆ ಕಾರ್ಯ-ಕಾರಣಗಳ ಸಂಬಂಧ ಕೇವಲ ದೇಶ-ಕಾಲಗಳಿಗೆ ಮಾತ್ರ ಸೀಮಿತವಾದದ್ದೆಂದು ಕಾಣದೆ, ನಿಗೂಢವಾದ ಸತ್ಯದ ರಚನೆಯಲ್ಲಿ ಅಡಗಿರುವ, ಅದರ ಪರಿಧಿಯಲ್ಲಿ ಆಗಬಹುದಾದ, ಪರಿವರ್ತಿತಗೊಳ್ಳುವ, ಸಂಭಾವ್ಯವಾದ ಅನುವರ್ತನ ಎಂದು ಗೋಚರಿಸುತ್ತದೆ. ಅಂತಿಮ ಕಾರಣ ಎನ್ನುವ ಪ್ರಕ್ರಿಯೆಯನ್ನು ಕೊಟ್ಟ ಅರಿಸ್ಟಾಟಲನ ಸಿದ್ದಾಂತದಲ್ಲಿ, ಇಷ್ಟೆಲ್ಲ ಅರ್ಥ ಇತ್ತೇ ಇಲ್ಲವೇ ಎನ್ನುವ ಪ್ರಶ್ನೆ ಬೇರೆ. ಆದರೆ ಅದರ ವಿವರಣೆ ಈ ರೀತಿ ಸ್ಪುಟಗೊಳ್ಳುತ್ತದೆ. ಭಾರತೀಯ ವೇದಾಂತ ದೃಷ್ಟಿಯಲ್ಲಿ ನಿಸ್ಸಂದೇಹವಾಗಿ ಈ ಅಂತಿಮ ಕಾರಣ ಎನ್ನುವಂಥದು ಸತ್, ಚಿತ್, ಆನಂದ ಎಂಬ ಪದಗಳಿಂದ ನಿರ್ವಚಿಸುವ ಪರಬ್ರಹ್ಮ ವಸ್ತು. ಕಾರ್ಯ ಕಾರಣಗಳಾಗಿ ತೋರುವ ಭೂತ, ಭವತ್, ಭವಿಷ್ಯತ್ ವಸ್ತುಗಳಿಗೂ ಆ ಪರಬ್ರಹ್ಮ ವಸ್ತುಬುನಾದಿ; ತ್ರಿಕಾಲಾತೀತವಾದ, ಅನಾದಿ ಮತ್ತು ಅನಂತವಾದ ಭೂಮ ತತ್ತ್ವ (ಇನ್‍ಫಿನಿಟಿ).

 ಈಗ ಮತ್ತೊಂದು ವಿಚಾರ. ಹೇಗೆ ಕಾರಣವೆಂಬ ಶಕ್ತಿ ಕಾರ್ಯವೆಂಬುದರಲ್ಲಿ ಪರ್ಯವಸಾನವಾಗುತ್ತದೆ ಅಥವಾ ಕಾರ್ಯವಾಗಿ ಪರಿವರ್ತನೆಗೊಳ್ಳುತ್ತದೆ ಎನ್ನುವುದರಲ್ಲಿ ಅವೆರಡರ ನಿಕಟ ಸಂಬಂಧವನ್ನು ಗ್ರಹಿಸಬಹುದೋ ಹಾಗೆಯೇ ಅವೆರಡರ ನಡುವೆ ಇರುವ ಶಕ್ತಿ ಪ್ರಮಾಣದಲ್ಲಿ ಸಾಮ್ಯವಿದೆ ಎನ್ನಬಹುದು. ಎಂದರೆ ಕಾರ್ಯ ರೂಪಗೊಳ್ಳಲು ಆವಶ್ಯಕವಾಗುವ ಶಕ್ತಿಯ ನಿಕ್ಷೇಪ ಕಾರಣವಾಗಿದ್ದು, ಅದಕ್ಕೆ ಪ್ರಮಾಣ ಪಟ್ಟಷ್ಟೇ ಕಾರ್ಯವೆನ್ನುವುದು ಕಾರ್ಯಗತವಾಗುತ್ತದೆ. ಎಂದರೆ, ಕಾರಣ-ಕಾರ್ಯಗಳ ನಡುವೆ ಇರುವ ಶಕ್ತಿಯ ಪ್ರಮಾಣ ಸರಿಸಮಾನವಾಗಿರುತ್ತದೆ. ಕಾರಣದ ಶಕ್ತಿ ಹೆಚ್ಚಿದ್ದು, ಕಾರ್ಯದಲ್ಲಿ ಅದು ಪರ್ಯವಸಾನವಾಗುವಾಗ ಶಕ್ತಿ ವ್ಯಯವಾಗದೆ, ಕಾರ್ಯರೂಪದಲ್ಲಿ ಅಭಿವ್ಯಕ್ತಿಗೊಳ್ಳುತ್ತದೆ. ಹಾಗೆಯೇ ಕಾರಣದ ಶಕ್ತಿ ಕಡಿಮೆಯಾಗಿದ್ದು ಕಾರ್ಯ ರೂಪಕ್ಕೆ ಬಂದಾಗ ಅದು ವರ್ಧಿಸುವುದಿಲ್ಲ. ಕಾರಣ-ಕಾರ್ಯಗಳ ಈ ಅನ್ಯೋನ್ಯ ಶಕ್ತಿ ಪ್ರಮಾಣದ ನಿಕಟ ತೂಕಕ್ಕೆ ಶಕ್ತಿ-ಸಂಗ್ರಹ ಎನ್ನುತ್ತಾರೆ. ಇದನ್ನೇ ಒಂದು ನಿಯಮರೂಪದಲ್ಲಿ ಹೇಳುವಾಗ ಶಕ್ತಿ-ಸಂಗ್ರಹ-ನಿಯಮ ಎನ್ನುತ್ತಾರೆ. ಈ ನಿಯಮದ ಪ್ರಕಾರ ಕಾರಣ ಕಾರ್ಯಗಳ ಪ್ರಮಾಣದಲ್ಲಿ ಯಾವ ಅಂತರವೂ ಇರುವುದಿಲ್ಲ.

 ಒಂದು ಕಾರ್ಯಕ್ಕೆ ಅನೇಕ ಕಾರಣಗಳು ಇರಬಹುದೇ ಎನ್ನುವುದು ಮತ್ತೊಂದು ಪ್ರಶ್ನೆ. ಇದು ನಿಜವಾದಲ್ಲಿ ಕಾರಣಗಳನ್ನು ನಿರ್ದಿಷ್ಟವಾಗಿ ಹುಡುಕಲು ಸಾಧ್ಯವಾಗುವುದಿಲ್ಲ. ಅಲ್ಲದೆ, ವಿಜ್ಞಾನದೃಷ್ಟಿಯಿಂದ, ಭೌತಿಕ ಕ್ಷೇತ್ರಕ್ಕೆ ಸಾಪೇಕ್ಷವಾದಂತೆ, ಸರಿಯೂ ಆಗಲಾರದು. ಒಂದು ಸಂದರ್ಭದಲ್ಲಿ ಂ ಎನ್ನುವುದು ಃ ಎನ್ನುವ ಕಾರ್ಯಕ್ಕೆ ಎಡೆಮಾಡಿಕೊಟ್ಟರೆ, ಅದೇ ಃ ಮತ್ತೊಮ್ಮೆ ಅ ಇಂದ ಇಲ್ಲವೆ ಆ ಇಂದ ಉತ್ಪನ್ನವಾಗುವುದೆಂದರೆ ಕಾರ್ಯಾಕಾರಣಗಳ ಸಂಬಂಧದ ವಿಚಾರದಲ್ಲಿ ನಿಶ್ಚಿತಜ್ಞಾನಕ್ಕೆ ಸಾಧ್ಯವೇ ಇರುವುದಿಲ್ಲ. ಉದಾಹರಣೆಗೆ ಎಳ್ಳಿನಿಂದ ಎಣ್ಣೆ ತೆಗೆದಿದ್ದಾರೆ, ಮಣ್ಣಿನಿಂದಲೂ ತೆಗೆಯಬಹುದು-ಎಂದಾಗುತ್ತದೆ. ಹೀಗಾಗಲು ಭೌತಪ್ರಪಂಚದಲ್ಲಿ ಸಾಧ್ಯವಿಲ್ಲ. ಒಂದು ಕಾರ್ಯಕ್ಕೆ ಒಂದೇ ಕಾರಣ, ಒಂದು ಕಾರಣ ಸರ್ವದಾ ಒಂದೇ ಕಾರ್ಯದಲ್ಲಿ ಪರ್ಯವಸಾನಗೊಳ್ಳುತ್ತದೆ. ಎನ್ನುವುದು ಕಾರ್ಯ-ಕಾರಣ ಸಂಬಂಧದಲ್ಲಿ ಮತ್ತೊಂದು ಸಾರ್ವತ್ರಿಕ ನಿಯಮ. ಪ್ರಕೃತಿ ಯಾವುದೋ ರೀತಿಯಲ್ಲಿ ನಿಯಮಬದ್ದವಾಗಿದ್ದುಕೊಂಡು ಏಕಪ್ರಕಾರವಾಗಿಯೇ ನಡೆಯುತ್ತಿರುವ ವಸ್ತುವಿಶೇಷ ಅಥವಾ ಕ್ರಿಯಾವಿಶೇಷ. ಈ ನಿಯಮಕ್ಕೆ ಪ್ರಕೃತಿಯ ಏಕರೂಪತಾ ನಿಯಮ ಎಂದು ಕರೆಯುತ್ತಾರೆ. ಎಲ್ಲ ಕಾರ್ಯಕ್ಕೂ ನಿಶ್ಚಿತವಾದ ಕಾರಣವೊಂದಿದೆ ಎನ್ನುವ ಕಾರಣಸಾಪೇಕ್ಷ ನಿಯಮ ಮತ್ತು ಮೇಲೆ ಹೇಳಿದ ಪ್ರಕೃತಿಯ ಏಕರೂಪತಾ ನಿಯಮ-ಈ ಎರಡು ನಿಯಮಗಳನ್ನು ಆಧರಿಸಿ ಪ್ರಕೃತಿಯ ಘಟನೆಗಳ ವಿಚಾರದಲ್ಲಿ ವಿಜ್ಞಾನ ಭವಿಷ್ಯವನ್ನು ನುಡಿಯಬಲ್ಲದು. ಪ್ರಕೃತಿವಿಜ್ಞಾನ ಅಥವಾ ಭೌತವಿಜ್ಞಾನ ಕ್ಷೇತ್ರವನ್ನು ಬಿಟ್ಟು ಸಾಮಾಜಿಕ ಕ್ಷೇತ್ರದಲ್ಲಿಯಾದರೋ ಒಂದು ಕಾರ್ಯಕ್ಕೆ ವಿವಿಧ ಕಾರಣಗಳು ಇರಬಹುದೇನೋ ಎನ್ನುವ ಸಂಶಯಬರುತ್ತದೆ. ಈ ಕ್ಷೇತ್ರದಲ್ಲಿ, ಕಾರ್ಯ-ಕಾರಣಗಳ ಪರಿವೃತ್ತಕ್ಕೆ ಅವಕಾಶವಿರಬಹುದು. ಇದನ್ನೇ ಅನ್ಯೋನ್ಯ ಕಾರಣತಾವಾದ (ರೆಸಿಪ್ರೋಸಿಟಿ ಆಫ್ ಕಾಸೇಷನ್) ಎಂದು ಹೇಳುತ್ತಾರೆ. ಉದಾಹರಣೆಗೆ ಬಡತನ ಚೌರ್ಯಕ್ಕೆ, ಚೌರ್ಯ ಬಡತನಕ್ಕೆ; ಮದ್ಯಪಾನ ಬಡತನಕ್ಕೆ, ಬಡತನ ಮದ್ಯಪಾನಕ್ಕೆ ಎಡೆಕೊಡುವಂತೆ. ಆದ್ದರಿಂದ, ಈ ಪ್ರಶ್ನೆಗೆ ಸಂಬಂಧಪಟ್ಟಂತೆ ಸಾಮಾಜಿಕಕ್ಷೇತ್ರದಲ್ಲಿ ವಿಜ್ಞಾನಕ್ಷೇತ್ರದಲ್ಲಿ ಕಂಡು ಬರುವಷ್ಟು ಖಚಿತ ಜ್ಞಾನ ಸಿಗುವುದು ಕಷ್ಟ.

 ಡೇವಿಡ್ ಹ್ಯೂಂ ಎಂಬ ತಾತ್ತ್ವಿಕ ಕಾರಣ ಸಾಪೇಕ್ಷನಿಯಮಕ್ಕೆ ಸಂಬಂಧಪಟ್ಟಂತೆ ಎತ್ತಿರುವ ವಿಮರ್ಶೆಯನ್ನು ನಾವು ಇಲ್ಲಿ ಗಮನಿಸಬೇಕಾಗಿದೆ. ಕಾರಣ-ಕಾರ್ಯಗಳ ನಡುವೆ ಯಾವ ಅಗತ್ಯವಾದ ಸಂಬಂಧವೂ ಇಲ್ಲ ಅಥವಾ ಅದನ್ನು ನಾವು ಗಮನಿಸಲಾರೆವು ಎಂದು ಆತನ ವಾದ. ಪ್ರಕೃತಿಯ ಏಕರೂಪತೆಗೆ, ಪ್ರಕೃತಿಯಲ್ಲಿನ ಕಾರ್ಯಕಾರಣಗಳ ಅನುವರ್ತನೆಗೆ ನಮಗೆ ಸಿಗುವ ಸುಳಿವು ಘಟನೆಗಳೆರಡರ ನಡುವೆ ಇರಬಹುದಾದ ನಿಕಟ ಅನುಸರಣೆ ಮಾತ್ರ.  ಅವುಗಳ ಅನ್ಯೋನ್ಯ ಅನುಸರಣೆ (ಯೂನಿಫಾರಂ ಸೀಕ್ವೆನ್ಸ್) ಮಾತ್ರದಿಂದ ಅವುಗಳ ಅಗತ್ಯ ಸಂಬಂಧಸೂತ್ರ ಸಿದ್ದಿಸುವುದಿಲ್ಲ-ಎನ್ನುತ್ತಾನೆ, ಅವನು. ಅನೇಕರಿಗೆ ಹ್ಯೂಮನ ವಾದ. ಆಕರ್ಷಕವಾಗಿ ಕಂಡರೂ ಆತನ ವಿಚಾರದೃಷ್ಟಿ ಸೀಮಿತವಾದದ್ದೆಂಬುದನ್ನು ನಾವು ಗಮನಿಸಲೇಬೇಕು. ಆತನ ಪ್ರಕಾರ ಘಟನೆಗಳೆರಡರ ಆಂತರಿಕ ಸಂಬಂಧ ನಮಗೆ ಭೌತಿಕವಾಗಿ ಕಾಣುವಂತಿಲ್ಲ. ಆದ್ದರಿಂದ ಕಾಣುವಂಥ ಅನುಸರಣೆ ಮಾತ್ರ ಮುಖ್ಯ. ಈ ವಾದ ಎಲ್ಲವನ್ನೂ ಭೌತಿಕವಾಗಿ ಪ್ರತ್ಯಕ್ಷ ಪ್ರಮಾಣದ ಆಧಾರದ ಮೇಲೆಯೇ ನಿರ್ಧರಿಸುವಂತಿದೆ. ಅನೇಕ ವಿಚಾರಗಳಲ್ಲಿ ಈ ತೆರನಾದ ಭೌತಿಕ ಸಾಕ್ಷಿಗಳು ಸಿಗುವಂತಿರುವುದಿಲ್ಲ. ಸೂಕ್ಷ್ಮಪ್ರಕೃತಿಯ ಅವಸ್ಥಾಂತರಗಳೆಲ್ಲ ನಮ್ಮ ಸ್ಥೂಲದೃಷ್ಟಿಗೆ ಗೋಚರಿಸಲೇಬೇಕು ಎನ್ನುವ ತತ್ತ್ವಪ್ರಣಾಳಿಕೆ ಕೇವಲ ಮಿತವಾದದ್ದೆಂದು ಮಾತ್ರ ಇಲ್ಲಿ ಹೇಳಿ, ಹ್ಯೂಮನ ಸಿದ್ದಾಂತ ಸಾರ್ವತ್ರಿಕವಾಗಿ ಅನ್ವಯವಾಗಲಾರದು ಎಂದು ತೀರ್ಮಾನಿಸಬಹುದು.

 ಅಣುಯುಗವೆನ್ನಲಾದ 20ನೆಯ ಶತಮಾನದಲ್ಲಿ ಕಾರಣ-ಕಾರ್ಯಗಳ ಸಿದ್ದಾಂತಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಹೊಸ ತರ್ಕ ಎದ್ದಿದೆ. ಎಂದರೆ ಅಣುಗರ್ಭದಲ್ಲಿ ಯಾವ ಕಾರಣ-ಕಾರ್ಯಗಳ ನಿಚ್ಚಳ ವ್ಯವಹಾರವೂ ಇರುವ ಹಾಗಿಲ್ಲ. ಕಾರಣ ಯಾವ ಕಾರಣ-ಕಾರ್ಯಗಳ ನಿಚ್ಚಳ ವ್ಯವಹಾರವೂ ಇರುವ ಹಾಗಿಲ್ಲ. ಕಾರಣವೆನ್ನುವುದು ಇಲ್ಲವೇ ಇಲ್ಲವೆಂಬಂತೆ ಅಣ್ವಂಶಗಳೆಂಬ ಎಲೆಕ್ಟ್ರಾನುಗಳು ವ್ಯವಹರಿಸುತ್ತವೆ. ಎಂದರೆ ಯಾವುದೋ ಅನಿಶ್ಚಿತತೆ ಅಲ್ಲಿ ಅಡಗಿರುವಂತೆ ತೋರುತ್ತದೆ. ಯದೃಚ್ಚತೆಯ ಅಥವಾ ಅಹೇತು ಪರಿಕಲ್ಪನೆಯ ಸತ್ಯತೆ ಎಲ್ಲಿ ಕಾಣುತ್ತದೆ. ಈ ಭಾವಗಳನ್ನು ಷ್ರೋಡಿಂಗರ್ ಎಂಬ ವಿಜ್ಞಾನಿ ಈ ರೀತಿ ವ್ಯಕ್ತಪಡಿಸಿದ್ದಾನೆ: ಅತ್ಯಂತ ಸೂಕ್ಷ್ಮವಾದ ಅಣ್ವಂಶಗಳು ಯಾವ ಒಂದು ನಿರ್ದಿಷ್ಟ ಪ್ರಕೃತಿನಿಯಮವನ್ನೂ ಅನುಸರಿಸದೆ ಸ್ವತಂತ್ರವಾಗಿ ವ್ಯವಹಾರಮಾಡುವಂತೆ ತೋರುತ್ತವೆ. ನಿಯಮಾವಳಿಗಳೆಲ್ಲ ಬೃಹತ್ ಪ್ರಮಾಣ ವಸ್ತುಗಳಿಗೆ ಮಾತ್ರ ಅನ್ವಯವಾಗುತ್ತದಲ್ಲದೆ, ಅಣುಪ್ರಮಾಣಕ್ಕಲ್ಲ. ಷ್ರೋಡಿಂಗರನ ಈ ಮಾತುಗಳು ಅಣ್ವಂಶವಾದ ಎಲೆಕ್ಟ್ರಾನಿನ ವರ್ತನೆಯನ್ನು ಕುರಿತದ್ದು. ಎಂದರೆ ಒಂದು ಅಣು ಎರಡು ರೀತಿಯ ವರ್ತನೆಯನ್ನು ಹೊಂದಿರುತ್ತದೆ-ಸಂಗ್ರಹಣ ಮತ್ತು ಸಂಪ್ರಸರಣ. ಒಂದೊಂದು ಅಣುವಿನ ಅಸ್ತಿತ್ವವನ್ನೂ ಈ ಎರಡು ಪ್ರವೃತ್ತಿಗಳ ಮೂಲಕವೇ ಊಹಿಸಬೇಕಾಗುತ್ತದೆ. ಅಣುಶಕ್ತಿಯನ್ನು ಸಂಗ್ರಹಣ ಮಾಡುವಾಗ ಅಣುಕೇಂದ್ರದ ಸುತ್ತ ಪರಿಭ್ರಮಣ ಮಾಡುವ ಎಲೆಕ್ಟ್ರಾನು ಒಳಪಥದಿಂದ ಹೊರಪಥಕ್ಕೆ ನೆಗೆಯುತ್ತದೆ. ಈ ನೆಗೆತಗಳಿಗೆ ಒಂದು ವಿಶಿಷ್ಟವಾದ ಗುಣವಿದೆ. ಏನೆಂದರೆ ಒಂದು ಪಥದಿಂದ ಇನ್ನೊಂದು ಪಥದಲ್ಲಿ ಕಾಣಿಸಿಕೊಳ್ಳುವಾಗ ಮಧ್ಯಂತರದ ಪ್ರದೇಶದಲ್ಲಿ ಹಾಯುವುದು ಕಾಣುವುದೇ ಇಲ್ಲ. ಮೊದಲಿದ್ದ ಪಥದಲ್ಲದು ಶೂನ್ಯಗೊಂಡು ಹೊಸ ಪಥದಲ್ಲಿ ಕಾಣಿಸಿಕೊಳ್ಳುತ್ತದೆ. ಇಷ್ಟೇ ಅಲ್ಲದೆ ಈ ನೆಗೆತಗಳು ಯಾವಾಗ ಮತ್ತು ಏಕೆ ಆಗುತ್ತವೆಂದು ನಿರ್ಧರಿಸಲು ಸಾಧ್ಯವಿಲ್ಲ.  ವಿಜ್ಞಾನ ಈಗ ಮುಂದುವರಿದ ಪರಿಸ್ಥಿತಿಯಲ್ಲಿ ಈ ಪ್ರವೃತ್ತಿಗಳು ಕಾರಣರಹಿತವಾಗಿಯೇ ಆಗುತ್ತವೆಂದು ತೀರ್ಮಾನಿಸಬಹುದು. ಇದೊಂದು ಅಹೇತುಕವಾದ ಪ್ರಕೃತಿ ವೃತ್ತಿ. ಮತ್ತೊಂದು ನಿದರ್ಶನ ಹೇಸನ್‍ಬರ್ಗ್ ಎಂಬ ವಿಜ್ಞಾನಿ ಹೇಳುವ ಅನಿಶ್ಚಿತತಾಸೂತ್ರದಲ್ಲಿ ವ್ಯಕ್ತವಾಗುತ್ತದೆ. ಇದರ ಪ್ರಕಾರ ಒಂದು ಎಲೆಕ್ಟ್ರಾನಿನ ಪರಿಭ್ರಮಣಕ್ಷೇತ್ರದಲ್ಲಿ ಅದರ ನೆಲೆಯನ್ನು ನಿರ್ಧರಿಸಿದರೆ ಅದರ ವೇಗ ಅನಿರ್ದಿಷ್ಟವಾಗಿರುತ್ತದೆ. ಅದರ ವೇಗ ನಿರ್ಧಾರವಾದಲ್ಲಿ ಅದರ ನೆಲೆಯೇ ಗೊತ್ತಾಗುವುದಿಲ್ಲ. ಹೀಗಿರುವಲ್ಲಿ ಪ್ರಕೃತಿಯ ಅತ್ಯಂತ ಸೂಕ್ಷ್ಮಸ್ಥಿತಿಯಲ್ಲಿ ಅನಿಶ್ಚಿತತೆ, ಅಹೇತುಕತೆ, ಯದೃಚ್ಛತೆಗಳೇ ಇರುವಂತೆ ತೋರುತ್ತದೆ. ಇದು ವಿಜ್ಞಾನ ಕ್ಷೇತ್ರದಲ್ಲಿ ಈಗಿರುವ ಅಭಿಪ್ರಾಯ.

 ಈ ವಿಚಾರವನ್ನು ಗಮನಿಸಿದಲ್ಲಿ ಈ ಮೊದಲು ಪ್ರಸ್ತಾಪ ಮಾಡಿರುವ ನಿಯಮಬದ್ಧತೆಗೂ ಎಲ್ಲಿನ ನಿಯಮರಾಹಿತ್ಯಕ್ಕೂ ಹೊಂದಾಣೆಕೆ ಬರುವ ಹಾಗೆಯೇ ಇಲ್ಲ. ಇದರ ಸಮಾಧಾನ ಏನೆಂದು ವಿಚಾರಿಸಬೇಕಾಗಿದೆ. ಕಾರ್ಯಕಾರಣಗಳ ವಿಚಾರ, ಸಾಮಾನ್ಯ ಸೂತ್ರಗಳು ನಮ್ಮ ಅನುಭವದ ಯಾವುದೋ ಕ್ಷೇತ್ರಕ್ಕೆ ಮಾತ್ರ ಸಾಪೇಕ್ಷ. ಪ್ರಕೃತಿಯ ಸೂಕ್ಷ್ಮಸ್ಥಿತಿಯಲ್ಲಿ ಕಂಡುಬರುವ ಅನಿಶ್ಚಿತತೆ ನಮ್ಮ ಬುದ್ಧಿಯ ಮಿತಿಯನ್ನು ಅಳೆಯವುದೆಂದೂ ಆ ಬುದ್ಧಿ ಬೆಳೆದಂತೆಲ್ಲ ಯಂತ್ರೋಪಕರಣಗಳು ಸೂಕ್ಷ್ಮವಾದಂತೆಲ್ಲ ಅನಿಶ್ಚಿತತೆ ಹೋಗಿ ಅಲ್ಲಿಯೂ ಒಂದು ನಿಯಮಬದ್ಧತೆ ಇರುವುದೆಂಬ ಅರಿವು ಉಂಟಾಗುವುದೆಂದೋ ಅಥವಾ ಕಾರ್ಯ-ಕಾರಣಗಳಿಗೆ ಅತೀತವಾದ ಒಂದು ಸ್ಥಿತಿ ಇರುವುದೆಂದೋ ತಿಳಿಯಬೇಕಾಗುತ್ತದೆ. ಇದು ಭಾರತೀಯ ವಿಚಾರ ದೃಷ್ಟಿಗೆ ಹತ್ತಿರಬರುವಂತಿದೆ. ವ್ಯಾವಹಾರಿಕ ನೆಲೆಯಲ್ಲಿ ವಿಜ್ಞಾನ ನಿಷ್ಠೆ ನಿಯಮಗಳನ್ನು ಹುಡುಕಬಹುದು, ಸಾಧಿಸಬಹುದು. ಆದರೆ ಅವ್ಯಾವಹಾರಿಕ ಕ್ಷೇತ್ರವೆಂಬ ಪಾರಮಾರ್ಥಿಕ ನೆಲೆಯಲ್ಲಿ ಈ ಕಾರ್ಯ ಕಾರಣಗಳು ಅನ್ವಯವಾಗಲಾರವು. ಪ್ರಕೃತಿ ಸ್ಥೂಲದೆಶೆಯನ್ನು ಬಿಟ್ಟು ಸೂಕ್ಷ್ಮದೆಶೆಯತ್ತ ತೆರಳಿದಂತೆಲ್ಲ ಅವ್ಯಾವಹಾರಿಕವಾಗಿ ಪಾರಮಾರ್ಥಿಕದ ಛಾಯೆಯಲ್ಲಿ ನುಸುಳಿಕೊಳ್ಳುವುದೆನ್ನುವುದು ಸತ್ಯವಾದಲ್ಲಿ ಅಣುಗರ್ಭದ ನಿಯಮ ಭೂಮದ ನಿಯಮವೇ ಆದೀತು. ಇಲ್ಲಿ ವಿಜ್ಞಾನಿಯ ವಿಶ್ಲೇಷಣ ದೃಷ್ಟಿಗಿಂತ ಅನುಭಾವಿಯ ತಾದಾತ್ಮ್ಯವೇ ಸತ್ಯಪ್ರತಿಷ್ಠಾನಕ್ಕೆ ಸಹಾಯಕವಾದೀತು.

 ಭಾರತೀಯ ದರ್ಶನಗಳಲ್ಲಿ ಕಾರ್ಯಕಾರಣಗಳ ಸಂಬಂಧದಲ್ಲಿ ವಿಪುಲವಾದ ಜಿಜ್ಞಾಸೆ ನಡೆದಿದೆಯೆಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬೇಕು. ಪಾಶ್ಚಾತ್ಯ ವಿಜ್ಞಾನಿಗಳ ಲೌಕಿಕದೃಷ್ಟಿಯಂತೆಯೇ ಇಲ್ಲಿಯೂ ಕಾರ್ಯವೆಂದರೇನು, ಕಾರಣವೆಂದರೇನು, ಅವುಗಳ ನಿರ್ವಚನವೇನು, ಅವುಗಳ ಪರಸ್ಪರ ಸಂಬಂಧವೇನು ಎನ್ನುವ ವಿಚಾರದಲ್ಲಿ ಬಹಳ ವಿನಿಮಯ ನಡೆದಿದೆ. ನ್ಯಾಯದರ್ಶನದಲ್ಲಿ ಬರುವ ಪ್ರಕ್ರಿಯೆಗಳು-ಉಪಾದಾನಕಾರಣ, ನಿಮಿತ್ತ ಕಾರಣ, ಸಮುದಾಯ ಅಸಮವಾಯಿ ಕಾರಣಗಳು, ನಿಯತಪೂರ್ವವೃತ್ತಿ, ಅನ್ಯಥಾಸಿದ್ದಿತ್ವ ಇತ್ಯಾದಿಗಳು ಪಾಶ್ಚಾತ್ಯ ತತ್ವವೇತ್ತನಾದ ಜೆ. ಎಸ್. ಮಿಲ್ಲನ ವಾದಸರಣಿಯಂತೆ ಕಂಡುಬರುತ್ತವೆ. ನೈಯ್ಯಾಯಿಕರು ಹೇಳುವ ಅಸತ್ಕಾರ್ಯವಾದ ಅಥವಾ ಆರಂಭವಾದಂತಯೇ ಇತರ ದರ್ಶನಗಳಲ್ಲೂ ಕಾರ್ಯ ಕಾರಣಗಳ ಜಿಜ್ಞಾಸೆ ಇದೆ. ಬೌದ್ಧರು ಅಸತ್ಕಾರಣವಾದವನ್ನು ಎತ್ತಿ ಹಿಡಿದರೆ, ಸಾಂಖ್ಯರು ಸತ್ಕಾರ್ಯವಾದವನ್ನು ಎತ್ತಿ ಹಿಡಿಯುತ್ತಾರೆ. ಅದ್ವೈತಿಗಳು ಸತ್ಕಾರಣವಾದವನ್ನು ಹೇಳುತ್ತಾರೆ. ಮೊದಲು ಮೂರು ವಾದಗಳು ವ್ಯಾವಹಾರಿಕ ಕ್ಷೇತ್ರದಲ್ಲಿ ಒಂದೊಂದು ಅಂಶವನ್ನು ಎತ್ತಿಹಿಡಿಯುವುದಾದರೆ ಕೊನೆಯದು ಪಾರಮಾರ್ಥಿಕವಾದ ಪರಿಹಾರವನ್ನು ನೀಡುತ್ತದೆ. ಭಾರತೀಯ ವೇದಾಂತದ ದೃಷ್ಟಿಯಲ್ಲಿ ಪಾರಮಾರ್ಥಿಕವೇ ಸತ್ಯವಾದದ್ದರಿಂದ ಕಾರ್ಯಕಾರಣಗಳ ಸಂಬಂಧ ಅಲ್ಲಿ ಹೇಗೆ ಅಸಂಗತವಾಗುತ್ತದೆ ಎಂದು ಅದ್ವೈತ ಹೇಳುತ್ತದೆ.

 ಉಪನಿಷತ್ ವೇದಾಂತದ ಪ್ರಕಾರ ಬ್ರಹ್ಮತತ್ತ್ವವೇ ಸಮಸ್ತ ವಿಶ್ವದ ಕಾರಣ ಮತ್ತು ಮೂಲ. ಅದು ಕಾರಣವೇ ಹೊರತು ಕಾರ್ಯ ಎಂದಿಗೂ ಅಲ್ಲ. ಅದನ್ನು ಅಕಾರಣವಾದ ಕಾರಣ ಎನ್ನುತ್ತಾರೆ. ಅರಿಸ್ಟಾಟಲನ ಅನ್‍ಮೂವ್ಡ್ ಮುವರ್' ಎನ್ನುವುದರ ತಾತ್ಪರ್ಯ ಇದು. ತಾನು ಅಚಲವಾಗಿ ಎಲ್ಲದರ ಚಲನೆಗೂ ಪ್ರೇರಕವಾದ ವಸ್ತು. ಇದು ಆಧ್ಯಾತ್ಮಿಕವಾದ ಕಾರಣ. ಇದನ್ನು ಪ್ರತಿಪಾದಿಸುವುದರಲ್ಲೇ ಭಾರತೀಯರ ದೃಷ್ಟಿ ವಿಶಿಷ್ಟವಾಗಿದೆ. ಅಂತಿಮ ಕಾರಣ ಎನ್ನುವುದು ಆಧ್ಯಾತ್ಮಿಕವೆನ್ನುವ ಭಾರತೀಯರ ವಿಚಾರ ದೃಷ್ಟಿ, ಪಾಶ್ಚಾತ್ಯ ವಿಜ್ಞಾನ ದೃಷ್ಟಿಗೆ ಹೊಂದಿಕೊಳ್ಳದೆ ಇರಬಹುದು. ಆದರೆ ಲೌಕಿಕ ಕ್ಷೇತ್ರದಲ್ಲಿ ಭಾರತೀಯರ ವಿಚಾರ ವಿಜ್ಞಾನ, ತರ್ಕಗಳ ಹಾದಿಯಲ್ಲೇ ನಡೆದಿದೆ ಎನ್ನುವುದನ್ನು ಮರೆಯಬಾರದು. ಅರಿಸ್ಟಾಟಲ್, ಹ್ಯೂಂ, ಮಿಲ್ ಮುಂತಾದವರ ತರ್ಕಗಳ ವಿಸ್ತøತ ಮಾತುಗಳ ಛಾಯೆ ಇಲ್ಲೂ ಕಂಡುಬರುತ್ತದೆ. ಆದರೆ ಆಧ್ಯಾತ್ಮದ ನಿರಂತರ ಆಸರೆಯಲ್ಲಿಯೇ ಎಲ್ಲವೂ ನಿಂತಿದೆ ಎನ್ನುವ ಅನುಭಾವದ ಪರಂಪರೆ ಭಾರತೀಯರದು. ಈ ದೃಷ್ಟಿಯಲ್ಲಿ ಈ ಆಧ್ಯಾತ್ಮ-ಕಾರಣ-ವಸ್ತುವನ್ನು ಮೂರ್ತರೂಪದ ಭಗವಂತನೆಂದರೂ ಒಂದೇ ಅಮೂರ್ತರೂಪದ ಬ್ರಹ್ಮನೆಂದರೂ ಒಂದೇ, ಪ್ರಾಪಂಚಿಕ, ಪ್ರಾಕೃತಿಕ ವ್ಯವಹಾರಿಕ ಕಾರ್ಯ ಅಥವಾ ಘಟನೆಗಳನ್ನು ಈ ಆಧ್ಯಾತ್ಮದ ಮೂಲದೊಂದಿಗೆ ಸಂಬಂಧಗೊಳಿಸುವ ಭಾರತೀಯರ ಉದ್ದೇಶ ಸಾಮಾನ್ಯ ವೈಜ್ಞಾನಿಕ ಕಾರ್ಯ-ಕಾರಣ ಸಂಬಂಧ ನಿರ್ದೇಶನಗಳಿಗಿಂತ ವಿಶಿಷ್ಟವಾಗಿದ್ದು, ಸೃಷ್ಟಿ, ಸ್ಥಿತಿ ಅಲ್ಲದೆ ಲಯಗಳನ್ನೂ ದೈವಾಂಶಗಳೆಂದು ಹೇಳಿ ಅವನ್ನು ಉದಾತ್ತೀಕರಿಸುವ ಆತ್ಮದ ಹಂಬಲವನ್ನು ವ್ಯಕ್ತಪಡಿಸುತ್ತದೆ. ಅಲ್ಲದೆ ಈ ಆಧ್ಯಾತ್ಮಿಕ ಕಾರಣವೆನ್ನುವ ಬ್ರಹ್ಮವಸ್ತುವನ್ನು ಕಾರ್ಯಕಾರಣಗಳ ಸಾಪೇಕ್ಷತಾ ನಿರ್ಬಂಧದಿಂದ ಹೊರತಾದ ತತ್ತ್ವವೆಂದೂ ಅದು ನಿರಪೇಕ್ಷವಾದ ಕಾರಣವಸ್ತುವೆಂದು ತೋರಿಸಿರುವುದು ತತ್ತ್ವಾನುಭೂತಿಯ ಅತ್ಯುನ್ನತ ಸಾಧನೆಯೆಂದೂ ಪ್ರತಿಪಾದಿಸಿರುವುದನ್ನು ನಾವು ಗಮನಿಸಬೇಕು.     

(ಕೆ.ಬಿ.ಆರ್.)