ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾವ್ಯಮಂಜರಿ

ವಿಕಿಸೋರ್ಸ್ದಿಂದ

ಕಾವ್ಯಮಂಜರಿ(ಆಂಥಾಲಜಿ)

ಒಂದು ಸಾಹಿತ್ಯದ, ಒಂದು ಕಾಲದ, ಒಂದು ಕಾವ್ಯ ಪ್ರಕಾರದ ಅಥವಾ ಒಬ್ಬ ಕವಿಯ ಅತ್ಯುತ್ತಮ ಹಾಗೂ ಅತ್ಯಂತ ಪ್ರಾತಿನಿಧಿಕ ಕವನಗಳ ಸಂಕಲನವೇ ಕಾವ್ಯಮಂಜರಿ (ಆಂಥಾಲಜಿ). ಕಾವ್ಯಸೌರಭವನ್ನು ಸೂಕ್ಷ್ಮವಾಗಿ ಪರಿಚಯ ಮಾಡಿಕೊಡುವ ಜನಪ್ರಿಯ ಸಾಧನಗಳಲ್ಲಿದೊಂದು. ಜೊತೆಗೆ ಆ ಸಾಹಿತ್ಯದ ಗುಣ, ಪ್ರಮಾಣಗಳನ್ನು ಗುರುತಿಸಲು ಇದು ಸಹಾಯಕಾರಿಯೂ ಹೌದು. ಕಾವ್ಯಮಂಜರಿಯ ಕಲ್ಪನೆ ಹೊಸದೇನಲ್ಲ. ಕ್ರಿ.ಪೂ. ಒಂದನೆಯ ಶತಮಾನದ ಆದಿಭಾಗದಲ್ಲಿ ಮೆಲೀಗರ್ ರಚಿಸಿದ ಸೆಫ್ಟಾನೊ (ಗಾರ್ಲಂಡ್) ಎಂಬ ಕೃತಿ ಮುಂದಿನ ಕಾವ್ಯಮಂಜರಿಗಳಿಗೆ ಪ್ರೇರಕವಾಯಿತು. ಗ್ರೀಕ್‍ಸಾಹಿತ್ಯದಿಂದ (ಕ್ರಿ. ಪೂ. 700.-ಕ್ರಿ.ಶ. 1000) ಆಯ್ದ ಸುಮಾರು 4,500 ತುಣುಕುಗಳ ಸಂಕಲನವೊಂದಿದೆ. ಅದು ಪ್ರಪಂಚದ ಪ್ರಥಮ ಕಾವ್ಯಮಂಜರಿಯೆಂದು ಹೇಳುತ್ತಾರಾದರೂ ಅದಕ್ಕೂ ಹಿಂದೆ ಕನ್‍ಫೂಷಸ್ ಸಂಕಲನ ಮಾಡಿದುದೆನ್ನಲಾದ ಷಿ-ಕಿಂಗ್ ಎಂಬೊಂದು ಕಾವ್ಯಮಂಜರಿ ಇದ್ದುದ್ದಾಗಿ ತಿಳಿಯಬಂದಿದೆ. ಆಂಥಾಲಾಜಿಯ ಎಂಬ ಗ್ರೀಕ್ ಪದದ ಮೂಲಾರ್ಥ ಪುಷ್ಪಮಂಜರಿ ಎಂದು. ಇಲ್ಲೂ ಪುಷ್ಪವೆಂದರೆ ಸಾಹಿತ್ಯ, ಕಾವ್ಯ ಎಂದೇ ಸೂಚ್ಯರ್ಥ.

 ಆಂಗ್ಲ ಭಾಷೆಯಲ್ಲಿ ಕಾವ್ಯಮಂಜರಿಗಳ ಬೆಳೆವಣಿಗೆ ಆರಂಭವಾದದ್ದು ಕ್ರಿ.ಶ. 19ನೆಯ ಶತಮಾನದಿಂದೀಚೆಗೆ. ಥಾಮಸ್ ಕ್ಯಾಂಪ್‍ಬೆಲ್‍ನ ಸ್ಪೆಸಿಮನ್ಸ್ ಆಫ್ ದಿ ಬ್ರಿಟಿಷ್ ಪೊಯಟ್ಸ್ 1819ರಲ್ಲಿ ಪ್ರಕಟವಾಯಿತು. ಎಫ್.ಟಿ.ಪಾಲ್ಗ್ರೆವನ ಗೋಲ್ಡನ್ ಟೆಷರೆ ಆಫ್ ಇಂಗ್ಲಿಷ್ ಸಾಂಗ್ಸ್ ಅಂಡ್ ಲಿರಿಕ್ಸ್ (1861) ಅತ್ಯಂತ ಶ್ರೇಷ್ಟ ಮತ್ತು ಜನಪ್ರಿಯ ಕಾವ್ಯಮಂಜರಿ; ಸಂಕಲನಕಾರರಿಗೆ ಒಂದು ಮಾದರಿಯೆಂದೇ ಹೇಳಬೇಕು. 1926ರಲ್ಲೂ 1965ರಲ್ಲೂ ಇನ್ನೂ ಹೆಚ್ಚಿನ ಕವನಗಳನ್ನು ಈ ಸಂಕಲನಕ್ಕೆ ಸೇರಿಸಲಾಗಿದೆ. (ಆರ್ಥರ್ ಕ್ವಿಲರ್ ಕೂಚ್ನ ಆಕ್ಸ್‍ಫರ್ಡ್ ಬುಕ್ ಆಫ್ ಇಂಗ್ಲಿಷ್ ವರ್ಸ್ (1900) ಮತ್ತೊಂದು ಪ್ರಮುಖ ಮೈಲಿಗಲ್ಲು; ಹೆಚ್ಚು ವಿಸ್ತಾರವಾದ್ದರಿಂದ ಕಾವ್ಯಪ್ರಿಯರ ವಿಶೇಷ ಮೆಚ್ಚುಗೆಯನ್ನಿದು ಪಡೆದಿದೆ. ಅನಂತರಕಾವ್ಯ ಮಂಜರಿಗಳಲ್ಲಿ ಹ್ಯಾರಿಯಟ್ ಮನ್ರೋ ಮತ್ತು ಎ.ಸಿ. ಹೆಂಡರ್‍ಸನ್ನರ ದಿ ನ್ಯೂ ಪೋಯಟ್ರಿ (1917) ನವ್ಯ ಕವಿತೆಯನ್ನೊಳಗೊಂಡಿರುವುದರಿಂದ ಐತಿಹಾಸಿಕವಾಗಿ ಮುಖ್ಯವಾದದ್ದು. ಆಯ್ಕೆಯ ಉತ್ತಮ ಅಭಿರುಚಿಗೆ ರಾಬರ್ಟ್ ಬ್ರಿಜಸ್‍ನ ದಿ ಸ್ಪಿರಿಟ್ ಆಫ್ ಮ್ಯಾನ್ (1916) ಒಳ್ಳೆಯ ನಿದರ್ಶನ. ಡಬ್ಲ್ಯೂ. ಪೀಕಾಕ್‍ನ ಐದು ಸಂಪುಟಗಳ ಇಂಗ್ಲಿಷ್ ವರ್ಸ್ (1928) ಆಂಗ್ಲಭಾಷೆಯ ದೊಡ್ಡ ಕಾವ್ಯಮಂಜರಿ. ಇತ್ತೀಚೆಗೆ ಬಂದ (1966) ಆಸ್ಕರ್ ವಿಲಿಯಮ್ಸ್‍ನ ಮಾಸ್ಟರ್ ಪೊಯಮ್ಸ್, ಪ್ರತಿಕವನದ ಮೇಲೂ ವಿಮರ್ಶ ಲೇಖನವಿರುವುದರಿಂದ ವೈಶಿಷ್ಟ್ಯ ಪೂರ್ಣವೆನಿಸಿದೆ.

ಅಮೆರಿಕೆಯಲ್ಲೂ ಕಾವ್ಯಮಂಜರಿಗಳು ವಿಫುಲವಾಗಿ ಪ್ರಕಟಗೊಂಡಿವೆ. ಅವುಗಳಲ್ಲಿ ಇ.ಸಿ.ಸ್ಪೆಡ್‍ಮನನ ಅಮೆರಿಕನ್ ಆಂಥಾಲಜಿ (1900), ಬ್ಲಿಸ್ ಕಾರ್ಮನನ ದಿ ಆಕ್ಸ್‍ಫರ್ಡ್ ಬುಕ್ ಆಫ್ ಅಮೆರಿಕನ್ ವರ್ಸ್ (1927), ಎಚ್.ಎಚ್. ಕ್ಲಾರ್ಕನ ಮೇಜರ್ ಅಮೇರಿಕನ್ ಪೊಯೆಟ್ಸ್ (1936)--ಇವು ಮುಖ್ಯವಾದುವು.

ಇಂಗ್ಲಿಷ್ ಸಾಹಿತ್ಯದಲ್ಲಿ ವಿವಿಧ ಮುಖಗಳಿಂದ ಕಾವ್ಯಸಂಗ್ರಹಗಳನ್ನು ಮಾಡಲಾಗಿದೆ. ಕಿರುಕವನಗಳು, ಕಥನಕವನಗಳು, ಐರಿಷ್ ಕವನಗಳು, ಕೆಲ್ಟಿಕ್ ಕವನಗಳು, ಧಾರ್ಮಿಕ ಅಥವಾ ಮತೀಯ ಕವನಗಳು, ಲಘುಕವನಗಳು, ಕ್ರೈಸ್ತ ಕವನಗಳು, ಸ್ಕಾಚ್ ಕವನಗಳು--ಹೀಗೆ ಅನೇಕ ಬಗೆಗಳನ್ನು ಚೆನ್ನಾಗಿ ಪ್ರತಿನಿಧಿಸುವ ಕಾವ್ಯಮಂಜರಿಗಳನ್ನು ಇಲ್ಲಿ ಕಾಣಬಹುದು.

(ಕೆ.ಎಸ್.ಬಿ.ಜಿ.; ಬಿ.ಎಚ್.ಎಸ್.)

ಕನ್ನಡ ಸಾಹಿತ್ಯದಲ್ಲಿ ಪ್ರಖ್ಯಾತ ಕಾವ್ಯಮಂಜರಿಗಳು ಕೆಲವಿವೆ. ಅವುಗಳಲ್ಲಿ ಮೊದಲನೆಯದು ಮಲ್ಲಿಕಾರ್ಜುನ ಪಂಡಿತನ ಸೂಕ್ತಿಸುಧಾರ್ಣವ. ಇದರಲ್ಲಿ ಅಷ್ಟಾದಶ ವರ್ಣನೆಗಳನ್ನು ಅಧ್ಯಯಗಳನ್ನಾಗಿ ಇಟ್ಟುಕೊಂಡು ಒಂದೊಂದು ಅಧ್ಯಾಯದಲ್ಲೂ ಪ್ರಸಿದ್ಧ ಕವಿಗಳ ಆಯ್ದ ಪದ್ಯಗಳನ್ನು ಕೊಡಲಾಗಿದೆ. ಉದಾಹರಿಸುವ ಪದ್ಯಗಳ ಆಕರಗಳನ್ನು ಸಂಪಾದಕ ಸೂಚಿಸಿಲ್ಲವಾಗಿ ಎಲ್ಲ ಪದ್ಯಗಳ ಕರ್ತೃಗಳನ್ನು ಈಗ ಗುರುತಿಸಲು ಸಾಧ್ಯವಾಗಿಲ್ಲ. ಎರಡನೆಯ ಸಂಕಲನ ಅಭಿನವವಾದಿ ವಿದ್ಯಾನಂದನ (ಸು. 1523) ಕಾವ್ಯಸಾರ. ಇದರಲ್ಲಿ 45 ಅಧ್ಯಾಯಗಳೂ 1,143 ಪದ್ಯಗಳೂ ಇವೆ. ಕನ್ನಡ ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ಈ ಎರಡು ಗ್ರಂಥಗಳಿಗೂ ಹೆಚ್ಚಿನ ಪ್ರಾಶಸ್ತ್ಯವಿದೆ. ಆರ್. ನರಸಿಂಹಾಚಾರ್ಯರ ಶಾಸನ ಪದ್ಯ ಮಂಜರಿಯಲ್ಲಿ ಅನೇಕಾನೇಕ ಕನ್ನಡ ಶಾಸನಗಳಿಂದ ಆಯ್ದ ಉತ್ತಮ ಪದ್ಯಗಳಿವೆ. ಈಚೆಗೆ ಬಂದ ಸಂಕಲನಗಳಲ್ಲಿ ಮುಖ್ಯವಾದುವು ಮೂರು : ಒಂದನೆಯದು ಡಿ.ಕೆ. ಭೀಮಸೇನರಾಯರು ಸಂಕಲಿಸಿದ ಹೂಮಾಲೆ. ಎರಡನೆಯದು ಪಿ. ಲಂಕೇಶ್ ಸಂಪಾದಿಸಿದ ಅಕ್ಷರ ಹೊಸ ಕಾವ್ಯ. ಮೂರನೆಯದು ರಂ. ಶ್ರೀ ಮುಗಳಿ ಸಂಪಾದಿಸಿರುವ ಕನ್ನಡ ಕಾವ್ಯಸಂಚಯ. ಎರಡನೆಯದರಲ್ಲಿ ಹೊಸ ಕವಿಗಳ ಪ್ರಾತಿನಿಧಿಕ ಕವನಗಳಿವೆ. ಮೂರನೆಯದನ್ನು ನವದೆಹಲಿಯ ಸಾಹಿತ್ಯ ಅಕಾಡೆಮಿಯವರು ಪ್ರಕಟಿಸಿದ್ದಾರೆ.