ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಂಡಲಿನಿ

ವಿಕಿಸೋರ್ಸ್ದಿಂದ

ಕುಂಡಲಿನಿ

  ಮನುಷ್ಯಶರೀರದಲ್ಲಿ ಸುಪ್ತವಾಗಿರುವ ಪರಮಾಶಕ್ತಿಗೆ ಈ ಹೆಸರಿದೆ. ಬೆನ್ನುಮೂಳೆಯ ಕೆಳಗಿರುವ ಅಧಾರಚಕ್ರದಲ್ಲಿ ಈ ಶಕ್ತಿ ಹಾವಿನ ಹಾಗೆ ಸುತ್ತಿಕೊಂಡು ಬ್ರಹ್ಮದ್ವಾರವೆನಿಸಿದ ಸುಷುಮ್ನಾ ನಾಡಿಯನ್ನು ತನ್ನ ಬಾಯಿಂದ ಮುಚ್ಚಿ ಸುಪ್ತವಾಗಿರುತ್ತದೆ. ಷಟ್ಚಕ್ರನಿರೂಪಣದ ಹನ್ನೆರಡನೆಯ ಶ್ಲೋಕ ಕುಂಡಲಿಯನ್ನು ನಾದಶಕ್ತಿರೂಪದಲ್ಲಿರುವ ಪರಮಾಕಲೆಯೆಂದೂ ಪರಮೇಶ್ವರಿಯೆಂದೂ ನಿತ್ಯಪ್ರಬೋಧನವನ್ನು ಉಂಟುಮಾಡುವವಳೆಂದೂ ತಿಳಿಸುತ್ತದೆ. ಸೂಕ್ಷ್ಮಾತಿಸೂಕ್ಷ್ಮಳಾದ ಈ ದೇವಿ ನಿರ್ಗುಣಬ್ರಹ್ಮದಿಂದ ಹರಿಯುವ ಅಮೃತಧಾರೆಯನ್ನು ಧರಿಸಿರುತ್ತಾಳೆ. ಇವಳಿಗೆ ವಿದ್ಯಾಶಕ್ತಿ ಅವಿದ್ಯಾಶಕ್ತಿ ಎಂಬ ಎರಡು ಹೆಸರುಗಳುಂಟು; ಏಕೆಂದರೆ ಹಠಯೋಗಪ್ರದೀಪಿಕಾ ಹೇಳುವಂತೆ, ದೇವಿಯೋಗಿಗಳಿಗೆ ಮೋಕ್ಷವನ್ನೂ ಅಜ್ಞಾನಿಗಳಿಗೆ ಬಂಧನವನ್ನೂ ನೀಡುತ್ತಾಳೆ.

 ಸಾಧಕ ಮುಚ್ಚಿಕೊಂಡಿರುವ ಸುಷುಮ್ನಾ ನಾಡಿಯ ಬಾಗಿಲನ್ನು ತೆರೆದು ಆಧಾರ ಚಕ್ರದಲ್ಲಿ ಸುಪ್ತವಾಗಿರುವ ಕುಂಡಲಿನೀಶಕ್ತಿಯನ್ನು ಯೋಗಬಲದಿಂದ ಎಬ್ಬಿಸಿ ಮೇಲೆಮೇಲಿರುವ ಸ್ವಾಧಿಷ್ಠಾನ, ಮಣಿಪೂರ, ಅನಾಹುತ, ಅಶುದ್ಧ, ಅಜ್ಞಾ ಎಂಬ ಚಕ್ರಗಳ ಮೂಲಕ ಒಯ್ದು ಸಹಸ್ರಾರದಲ್ಲಿರುವ ಪರಮಶಿವನೊಂದಿಗೆ ಐಕ್ಯಮಾಡಬೇಕು. ಜೀವರೂಪದಲ್ಲಿರುವ ಕುಂಡಲಿನಿ ಪರಮಶಿವನೊಂದಿಗೆ ಐಕ್ಯವನ್ನು ಪಡೆದಾಗ ಯೋಗಿ ಮುಕ್ತನಾಗುತ್ತಾನೆ. ಈ ಯೋಗಕ್ಕೆ  ಷಟ್ಚಕ್ರಭೇದವೆಂದು ಹೆಸರು.    (ನೋಡಿ- ಚಕ್ರಗಳು-(ಯೋಗದಲ್ಲಿ))        

(ಎಸ್.ಡಬ್ಲ್ಯು.ಎ.)