ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಮಾರವ್ಯಾಸ

ವಿಕಿಸೋರ್ಸ್ದಿಂದ

ಕುಮಾರವ್ಯಾಸ

 ಹದಿನೈದನೆಯ ಶತಮಾನದ ಉತ್ತರಾರ್ಧದಲ್ಲಿದ್ದು, ಜನಪ್ರಿಯ ಗದುಗಿನ ಭಾರತವನ್ನು ಬರೆದ ಕವಿ. ಈತ ಕನ್ನಡ ಸಾಹಿತ್ಯದ ಉನ್ನತೋನ್ನತ ಕವಿ: ಉನ್ನತೋನ್ನತರೆನ್ನಬಹುದಾದ ನಾಲ್ವರೊ ಐವರೊ ಮಹಾಕವಿಗಳಲ್ಲಿ ಒಬ್ಬ. ಕುಮಾರವ್ಯಾಸ ಎಂಬ ಪದ ಈಗ ಇವನ ಹೆಸರು ಎಂಬಂತೆ ಬಳಕೆಯಲ್ಲಿದೆ. ದಿಟ್ಟದಲ್ಲಿ ಇದು ಕವಿಯ ಕಾವ್ಯನಾಮ; ಪ್ರಾಯಶಃ ಮೊದಲಲ್ಲಿ ಬಿರುದಾಗಿ ಬಂದದ್ದು. ಕವಿ ತನ್ನನ್ನು ತಾನು ಕುಮಾರವ್ಯಾಸ ಎಂದು ಕರೆದುಕೊಂಡಿದ್ದರೆ ಅದನ್ನು ನಾವು ಕಾವ್ಯನಾಮ ಎನ್ನಬೇಕು; ಹಿರಿಯರು ಅಭಿಮಾನಿಗಳು ಅವನನ್ನು ಈ ಹೆಸರಿನಿಂದ ಹೊಗಳಿದರೆಂದು ತಿಳಿದೆವಾದರೆ ಅದು ಒಂದು ಬಿರುದು ಎನ್ನಬೇಕಾಗುತ್ತದೆ. ಕುಮಾರವ್ಯಾಸ ಎಂದು ಹೆಸರಾಗಿರುವ ಈ ಕವಿಯ ವಾಡಿಕೆಯ ಹೆಸರು ಏನಾಗಿತ್ತು ಎಂದು ಖಂಡಿತವಾಗಿ ಹೇಳುವಂತಿಲ್ಲ. ನಾರಣಪ್ಪ ಎಂದಿತ್ತು ಎಂದು ಪ್ರತೀತಿ. ಕವಿ ಗದುಗಿನ ವೀರನಾರಾಯಣದೇವರ ಉಪಾಸಕ: ಆ ದೇವರನ್ನು ತನ್ನ ಕಾವ್ಯದಲ್ಲಿ ನಾರಾಯಣ, ನಾರಾಯಣ , ನಾರಣ ಎಂದು ಕರೆದಿದ್ದಾನೆ. ಇದರ ಆಧಾರದ ಮೇಲೋ ಇಲ್ಲ ಪೂರ್ವದಿಂದ ಹಾಗೆಂದು ಬಂದದ್ದರಿಂದಲೋ ಜನ ಎಂದೋ ಇವನ ಹೆಸರು ನಾರಣಪ್ಪ ಎಂದು ನಿರ್ಧರಿಸಿದರು. ಈಗ ನಾವು ಈ ಭಾರತ ಗದುಗಿನ ನಾರಣಪ್ಪ ಬರೆದದ್ದು ಎಂದು ಹೇಳುತ್ತೇವೆ. ಇದರಲ್ಲಿ ತಪ್ಪೇನೂ ಇಲ್ಲ; ಆದರೆ ಇದಕ್ಕೆ ಸರಿಯಾದ ಆಧಾರ ಇಲ್ಲ ಎನ್ನುವುದು ನೆನಪಿನಲ್ಲಿರಬೇಕು. ಸ್ಥಳೀಯ ಪ್ರತೀತಿಯಂತೆ ಕುಮಾರವ್ಯಾಸ ಗದುಗಿನ ಬಳಿಯ ಕೋಳಿವಾಡದ ಕರಣಿಕರ ವಂಶಸ್ಥ, ಕೋಳಿವಾಡದ ಈ ಮನೆತನದವರ ಇತಿಹಾಸದಿಂದ ಮಾಧವ ಎಂಬ ಹಿರಿಯರೊಬ್ಬರ ಮಗ ಲಕ್ಷ್ಮಣ ಎಂಬಾತ ವಿಜಯನಗರದ ಅರಸರಲ್ಲಿ ಮಂತ್ರಿಯಾಗಿದ್ದನೆಂದೂ ಅವನ ಐದು ಜನ ಗಂಡುಮಕ್ಕಳಲ್ಲಿ ಹಿರಿಯವ ವೀರನಾರಾಯಣ ಎಂದೂ ತಿಳಿಯುತ್ತದೆ. ವಿಜಯನಗರದ ಅರಸರಲ್ಲಿ ಲಕ್ಷ್ಮಣ ಎಂಬ ಹೆಸರ ಮಂತ್ರಿ ಒಬ್ಬ ಇದ್ದದ್ದು ಒಂದನೆಯ ದೇವಾರಾಯನಲ್ಲಿ. ಅರಸ ತೀರಿಕೊಂಡ ಮೇಲೆ ಮಂತ್ರಿ ತನ್ನ ಉಂಬಳಿಯ ಕೋಳಿವಾಡಕ್ಕೆ ಬಂದನಂತೆ. ಈ ಅರಸ ತೀರಿಕೊಂಡದ್ದು 1424ರಲ್ಲಿ. ಎಂದರೆ ಕವಿ 1430 ಸುಮಾರಿನಲ್ಲಿ ಜೀವಿಸಿದ್ದನೆಂದು ಹೇಳಬಹುದು. ವೀರಶೈವ ಗ್ರಂಥ ಎರಡರಲ್ಲಿ ಈತ ಚಾಮರಸನ ತಂಗಿಯ ಗಂಡ, ವಿಜಯನಗರದ ಪ್ರೌಢದೇವರಾಯನ ಕಾಲದಲ್ಲಿ ಇಬ್ಬರೂ ಎರಡು ಭಾರತವನ್ನು ಬರೆದರು ಎಂದು ಮೊದಲಾಗಿ ಹೇಳುವ ಒಂದು ಕಥೆ ಇದೆ. ಈ ಕಥೆ ಈ ಕವಿಯೂ ಚಾಮರಸನೂ ಸಮಕಾಲಿಕರೆಂಬ ಊಹೆಯನ್ನು ಸಮರ್ಥಿಸುತ್ತದೆಯೆಂದು ಕವಿಚರಿತಕಾರರು ಅಭಿಪ್ರಾಯಟ್ಟಿದ್ದಾರೆ. ಚಾಮರಸನ ಕಾಲ ಸುಮಾರು 1430. ಈ ಕಥೆಯನ್ನು ಹೇಳುವ ಗ್ರಂಥಗಳು. ಚಾಮರಸನ ಅನಂತರ ಇನ್ನೂರು ಮುನ್ನೂರು ವರ್ಷಗಳ ಆಚೆಗೆ ಬರೆದ ಗ್ರಂಥಗಳು. ಭೋಜ, ಕಾಳಿದಾಸ, ಭವಭೂತಿ, ದಂಡಿ, ಅಭಿನವಪಂಪ, ಕಂತಿ. ಮುಂತಾದವರನ್ನು ಕುರಿತ ಹಲವು ಕಥೆಗಳಂತೆ ಇದು ಕವಿಗಳನ್ನು ಕುರಿತು ಆಮೇಲೆ ಜನ ಕಟ್ಟಿದ ಒಂದು ಸ್ವಾರಸ್ಯವಾದ ಕಥೆ ಅಷ್ಟೇ ಎಂದು ತೋರುತ್ತದೆ. ಕಾವ್ಯದಲ್ಲಿ ಬಂದಿರುವ ಸಂಗತಿಗಳನ್ನೂ ಪದಗಳನ್ನೂ ಪರಿಶೀಲಿಸಿ ಮಂಜೇಶ್ವರ ಗೋವಿಂದ ಪೈಗಳು ಈ ಕವಿ ಇದಕ್ಕಿಂತ ಎರಡು ಶತಮಾನದಷ್ಟು ಹಿಂದೆ ಆಗಿ ಹೋಗಿರಬೇಕೆಂದು ಊಹಿಸಿದ್ದಾರೆ. ಇಂಥ ಆಧಾರದ ಮೇಲೆ ಕಾವ್ಯದ ಕಾಲವನ್ನು ನಿರ್ಧರಿಸುವುದು ಅಸಾಧ್ಯ ಅಲ್ಲ; ಆದರೂ ಇದು ಸ್ವಲ್ಪ ಅತಂತ್ರ. ಕುಮಾರವ್ಯಾಸನ ಭಾರತ ಧರ್ಮರಾಜನ ಪಟ್ಟಾಭಿಷೇಕದಿಂದ ಮುಗಿಯುತ್ತದೆ. ಕೃಷ್ಣದೇವರಾಯನ ಆಸ್ಧಾನದ ತಿಮ್ಮಣ ಕವಿ ಇದರ ಕಥೆಯನ್ನು ಮುಂದುವರಿಸಿ ಇನ್ನೆಂಟು ಪರ್ವಗಳನ್ನು ರಚಿಸಿದ್ದಾನೆ. ಆ ಕಾವ್ಯದ ಪೀಠಿಕೆಯಲ್ಲಿ ಆತ ಮೊದಲು ಕುಮಾರವ್ಯಾಸನ ಕಾವ್ಯವನ್ನು ಪೂರ್ತಿ ಮಾಡು ಎಂದು ಅರಸ ಅಪ್ಪಣೆ ಮಾಡಿದ್ದಾಗಿ ಹೇಳಿದ್ದಾನೆ. ಕೃಷ್ಣದೇವರಾಯನ ಕಾಲ 1509-20. ಈ ಮಾತಿನ ಆಧಾರದ ಮೇಲೆ ರೈಸ್ ಮತ್ತು ಕಿಟ್ಟೆಲರು ಕುಮಾರವ್ಯಾಸ ಸುಮಾರು 1500ರ ಕಾಲಕ್ಕೆ ಜೀವಿಸಿದ್ದಿರಬಹುದೆಂದು ಊಹಿಸಿದರು. ಕೋಳಿವಾಡದ ಕರಣಿಕರ ಮನೆತನದ ಲಕ್ಕರಸನ ಹಿರಿಯ ಮಗ ವೀರನಾರಾಯಣ ಈ ಕಾವ್ಯವನ್ನು ರಚಿಸಿದ ಎನ್ನುವುದಾದರೆ ಕಾವ್ಯ 1430-1500ರ ಅಂತರದಲ್ಲಿ ರಚಿತವಾಯಿತೆನ್ನಬೇಕು. ದೊರೆ ಎಂಬತ್ತು ವರ್ಷಗಳ ಹಿಂದೆ ರಚಿತವಾಗಿದ್ದ ಗ್ರಂಥವನ್ನು ಪೂರ್ತಿಮಾಡು ಎಂದು ಹೇಳಿದನೆನ್ನುವುದು ದೂರಾನ್ವಯ. ಅದುತನ್ನ ಎಳೆತನದಲ್ಲಿ ರಚಿತವಾಗಿ ತನ್ನ ಪರಿಚಯಕ್ಕೆ ಬಂದಿದ್ದ ಗ್ರಂಥವಾಗಿರಬೇಕು ಎನ್ನುವುದು ಹೆಚ್ಚು ಸಂಭವನೀಯ. ಕುಮಾರವ್ಯಾಸನ ಕಾವ್ಯದಲ್ಲಿ ಅರಮನೆಯ ಜೀವನದ ಸಮೀಪ ಪರಿಚಯದ ಕುರುಹು ಇದೆ. ಅರಮನೆಯ ನಾಯ್ಗಳು ಎಂದು ಆತ ಒಂದು ಕಡೆ ಪ್ರಯೋಗಿಸಿರುವ ಶಬ್ದವನ್ನು ನೋಡಿದರೆ ಅವನಿಗೆ ಅರಮನೆಯನ್ನು ಕುರಿತು ಏನೋ ಕಾರಣದಿಂದ ಬೇಸರವೂ ಇದ್ದಿತು ಎಂದೂ ಕಾಣುತ್ತದೆ. ಕಾವ್ಯ ಸುಮಾರು 1480-90ರ ಸುಮಾರಿನಲ್ಲಿ ರಚಿತವಾಗಿದ್ದಿರಬಹುದು ಎಂದು ಊಹಿಸಬಹುದು. ಕವಿ ಜಾತಿಯಿಂದ ಬ್ರಾಹ್ಮಣ. ಮತ ವೈದಿಕ ಎಂದು ಊಹಿಸಬಹುದು. ಚಾಮರಸನ ತಂಗಿಯ ಗಂಡ ಎಂಬ ಕಥೆಯ ಆಧಾರದ ಮೇಲೆ ಇವನು ವೀರಶೈವನಾಗಿದ್ದಿರಬೇಕು ಎಂದು ಈಚೆಗೆ ಕೆಲವರು ಸೂಚಿಸಿದ್ದಾರೆ. ಇವನ ಜೊತೆಗೆ ಚಾಮರಸನೂ ಒಂದು ಭಾರತ ಬರೆದ ಎನ್ನುವುದಾದರೆ ಈ ಕಥೆ ಇವನು ವೀರಶೈವನಾಗಿದ್ದ ಎನ್ನುವುದಕ್ಕಿಂತ ಹೆಚ್ಚಾಗಿ ಚಾಮರಸ ಆಗ ಇನ್ನೂ ವೀರಶೈವನಾಗಿರಲಿಲ್ಲ ಎಂದು ಸೂಚಿಸುತ್ತದೆ. ಏಕೆಂದರೆ ಆತ ಪ್ರಭುಲಿಂಗಲೀಲೆಯನ್ನು ಬರೆದ ಮೇಲೆ ಭಾರತ ಸತ್ತವರ ಕಥೆ. ಪ್ರಭುಲಿಂಗಲೀಲೆ ಸಾಯದ ಪುಣ್ಯಾತ್ಮರ ಕಥೆ ಎಂದು ಹೇಳಿದನಂತೆ. ಕವಿ ನಾರಾಣಪ್ಪ ದಿನವೂ ವೀರನಾರಾಯಣ ದೇವಾಲಯದ ಆವರಣದಲ್ಲಿರುವ ಕೊಳದಲ್ಲಿ ಸ್ನಾನಮಾಡಿ ಒದ್ದೆಯಲ್ಲಿ ದೇವರೆದುರು ಕುಳಿತು ಕಾವ್ಯವನ್ನು ಹೇಳುತ್ತಿದ್ದನೆಂದು ಒಂದು ಸಂಪ್ರದಾಯದ ಮಾತು. ಒದ್ದೆಯಲ್ಲಿ ಕುಳಿತು ಎನ್ನುವುದು ಆಮೇಲಿನ ಜನ ಕಲ್ಪಿಸಿದ ಭಕ್ತಿಯ ಅತಿರೇಕ ಎಂದು ಕಾಣುತ್ತದೆ. ಬ್ರಾಹ್ಮಣ್ಯದಲ್ಲಿ ಒದ್ದೆಯಲ್ಲಿರುವುದೆನ್ನುವುದು ಪ್ರೇತಕಾರ್ಯದಲ್ಲಿ ಕಾಣುವ ಸಂಗತಿ; ದೇವತಾಕಾರ್ಯದಲ್ಲಿ ಅಲ್ಲ. ಕಾವ್ಯವನ್ನು ಓದಿದರೆ ಅದು ಕವಿ ದೈವಸನ್ನಿಧಿಯಲ್ಲಿ ಆವೇಶದಿಂದ ತುಂಬಿದ ವೇಳೆ ಬರೆದದ್ದಾಗಿರಬೇಕು ಎಂದು ತೋರುವುದು ದಿಟ. ಅಂತೇ ಈತ ಒಬ್ಬ ವಿಷ್ಣು ಭಕ್ತ. ಮಹಾಭಕ್ತ; ಹೀಗಿದ್ದೂ ಶಿವವಿರೋಧಿ ಅಲ್ಲ; ಶಿವನನ್ನೂ ರೂಪಗಳ ಐಕ್ಯ. ಸಮಾನತೆಗಳನ್ನು ಒಪ್ಪಿದ ಒಂದು ಪಂಥದವನಾಗಿರಬೇಕು. ಕರ್ಣಾಟಕದ ಭಾಗವತಪಂಥ ಇಂಥ ಒಂದು ಪಂಥ. ತೊರವೆಯ ರಾಮಾಯಣ. ವಿಠಲನಾಥನ ಭಾಗವತ, ಜೈಮಿನಿ ಭಾರತ ಗ್ರಂಥಗಳ ರಚಯಿತರು ಇದೇ ಪಂಥದ ಅನುಯಾಯಿಗಳು.

 ಕವಿಯನ್ನೂ ಕಾವ್ಯವನ್ನೂ ಕುರಿತ ಇದಿಷ್ಟು ವಿಚಾರ ಸಾಹಿತ್ಯದ ಅಭ್ಯಾಸದ ದೃಷ್ಟಿಯಿಂದ ಆವಶ್ಯಕ; ಆದರೆ ಅದರ ರಸದ ಅನುಭವದ ದೃಷ್ಟಿಯಿಂದ ಅವಾಂತರ. ಆಂಗ್ಲ ಸಾಹಿತ್ಯದ ವೇಳೆ ಕಲಿತ ಕ್ರಮವನ್ನು ಅನುಸರಿಸಿ ಈ ಐವತ್ತು ವರ್ಷಗಳೀಚಿನಲ್ಲಿ ಈ ವಿವರಗಳಿಗೆ ನಾವು ಹೆಚ್ಚು ಗಮನ ಕೊಡುತ್ತಿದ್ದೇವೆ. ಇದು ಸರಿಯೆ. ಆದರೆ ಇದು ಅತಿಯಾಗುವುದು ಸಾಧ್ಯ. ಇದರ ಕಾರಣದಿಂದಾಗಿ ಕಾವ್ಯವನ್ನು ಸರಿಯಾಗಿ ಅನುಭವಿಸದೆ ಹೋಗುವ ಅಪಾಯ ಇದೆ. ನಮ್ಮ ಪೂರ್ವಿಕರು ಇಂಥ ಮಾತಿಗೆ ಬಹಳ ಗಮನ ಕೊಡದೆ ಕಾವ್ಯವನ್ನು ಸವಿದು ಸಂತೋಷಪಟ್ಟರು. ನೀತಿ ಕಲಿತರು. ಭಕ್ತಿಯನ್ನನುಭವಿಸಿದರು, ಬಾಳನ್ನೇ ಹಸನು ಮಾಡಿಕೊಂಡರು. ಕುಮಾರವ್ಯಾಸನ ಕಾವ್ಯ ಈ ಎಲ್ಲವನ್ನೂ ಸಾಧಿಸಲು ಪರ್ಯಾಪ್ತವಾದ ಒಂದು ಸಾಧನೆ. ಅಕ್ಷರವಿದ್ಯೆ ಅಷ್ಟೇನೂ ಹರಡದಿದ್ದ ಅವನ ಕಾಲದಲ್ಲಿ, ಅವನಾಚಿನ ಕಾಲದ ನಾಲ್ಕು ಶತಮಾನಗಳಲ್ಲಿ ಜನತೆ ಈ ಕಾವ್ಯವನ್ನು ಪುರಾಣಶ್ರವಣ ಕ್ರಮದಲ್ಲಿ ಗಮಕಿಗಳಿಂದ ಕೇಳಿ ಅನುಭವಿಸಿತು. ನಮ್ಮಲ್ಲಿ ಉಪಾಧ್ಯಾಯ. ಶಿಷ್ಯ, ಕಾವ್ಯವನ್ನು ಪಾಠ ಹೇಳುತ್ತಿದ್ದದ್ದು ಕಲಿಯುತ್ತಿದ್ದದ್ದು ಗಮಕದ ಕ್ರಮದಲ್ಲಿಯೇ, ಕವಿಯೇ ಗಮಕಿಯೂ ಆಗಿದ್ದದ್ದು ಸಂಪ್ರದಾಯದಲ್ಲಿ ಉಂಟು. ಕುಮಾರವ್ಯಾಸ ತನ್ನ ಕಾವ್ಯವನ್ನು ಗಮಕದಲ್ಲಿ ಹೇಳುತ್ತಿದ್ದನೆಂದೇ ಗದುಗಿನ ಪ್ರಾಂತದಲ್ಲಿ ಪ್ರತೀತಿ. ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಹೆಸರಾಂತು ಬಾಳಿದ ಮಹಾಕವಿ ಬಸವಪ್ಪಶಾಸ್ತ್ರಿಗಳು ಈ ಗ್ರಂಥವನ್ನೂ ಇತರ ಗ್ರಂಥಗಳನ್ನೂ ಬಹು ಚೆನ್ನಾಗಿ ಓದಿ ಹೇಳುತ್ತಿದ್ದರಂತೆ. ಹೊಸ ಕಾಲದ ವಿದ್ಯೆಯಲ್ಲಿ ಗಮಕಕ್ಕೆ ಎಡೆ ದೊರೆಯದೆ ಗಮಕ ನಮ್ಮಲ್ಲಿ ಅಪೂರ್ವ ಆಯಿತು. ಆದರೆ ಸ್ವಾತಂತ್ರ್ಯದ ಭಾವ ಬೆಳೆದು ಸಂಸ್ಕøತಿಯ ಪುನರುಜ್ಜೀವನ ಒಂದು ಧ್ಯೇಯ ಆದ ಒಡನೆಯೇ ಗಮಕ ಕಲೆಗೆ ಮತ್ತೆ ಉಸಿರು ಬಂದಿತು. ಈ ಶತಮಾನದ ಮೂರನೆಯ ದಶಕದಲ್ಲಿ ಸಂ. ಗೋ. ಬಿಂದೂರಾಯರು ಈ ಕಾವ್ಯವನ್ನು ಸಭೆಗಳ ಮುಂದೆ ಓದಲು ಆರಂಭಿಸಿ ನಮ್ಮ ಜನತೆಗೆ ಅದರ ಆಸ್ತಿಯನ್ನು ಉಳಿಸಿಕೊಡುವ ಕಾರ್ಯವನ್ನು ಮೊದಲು ಮಾಡಿದರು. ಇಲ್ಲಿಂದೀಚೆಗೆ ಅನೇಕ ಪ್ರತಿಭಾವಂತರಾದ ಗಮಕಿ ಶ್ರೇಷ್ಠರು ಈ ಕಾವ್ಯವನ್ನೂ ಅತರ ಕಾವ್ಯಗಳನ್ನೂ ಸಭೆಗಳಲ್ಲಿ ಹಾಡಿ ಕಾವ್ಯಗಳನ್ನೂ ಜೊತೆಗೆ ಕಲೆಯನ್ನೂ ಉಳಿಸಿದ್ದಾರೆ. ಹೀಗಾಗಿ ಈ ನಲವತ್ತು ವರ್ಷದಲ್ಲಿ ಕುಮಾರವ್ಯಾಸ ಕವಿ ಕನ್ನಡ ಜನತೆಯ ಅತ್ಯಂತ ಜನಪ್ರಿಯ ವರಕವಿ, ಮಹಾಕವಿ ಆಗಿ ಮರಳಿ ಪ್ರತಿಷ್ಠಿತನಾಗಿದ್ದಾನೆ.

 ಇವನ ಕಾವ್ಯ ಜನರ ಮನಸ್ಸನ್ನು ಸೂರೆಗೊಂಡಿರುವುದರ ಮುಖ್ಯ ಕಾರಣ ಮೂರು. ಮೊದಲಾಗಿ ಅದು ಬಹುಪಾಲು ಓದುತ್ತಿದ್ದಂತೆ, ಕೇಳುತ್ತಿದ್ದಂತೆ. ಅರ್ಥವಾಗುತ್ತದೆ. ಎರಡನೆಯದಾಗಿ ವಿಸ್ತಾರವಾಗಿ ಒಂದು ಕಥೆಯನ್ನು ಹೇಳುವಲ್ಲಿ ಅದು ಮತ್ತೆ ಮತ್ತೆ ರಸಸ್ಥಾನಗಳನ್ನು ಮುಟ್ಟುತ್ತದೆ. ಮೂರನೆಯದಾಗಿ ಅದು ಜನರ ಮನೋಧರ್ಮದ ಹಲವು ಮುಖಗಳನ್ನು ಪ್ರತಿಬಿಂಬಿಸುತ್ತದೆ. ಕಾವ್ಯಸುಲಭವಾಗಿ ಅರ್ಥವಾಗುವುದಕ್ಕೆ ಕಾರಣ ಅದು ಷಟ್ಟದಿಯಲ್ಲಿರುವುದು, ಹತ್ತಿರ ಹತ್ತಿರ ಬಳಕೆಯ ಭಾಷೆಯಲ್ಲಿರುವುದು. ಪಂಪಭಾರತ ನಿಸ್ಸಂದೇಹವಾಗಿ ಮಹಾಕಾವ್ಯ. ಆದರೆ ಅದನ್ನು ವಿದ್ಯಾವಂತರು ಮಾತ್ರ ತಿಳಿದುಕೊಳ್ಳಬಹುದು; ಮೇಲಾಗಿ ಅದು ಎಂಥ ರಸಪೂರ್ಣ ಸನ್ನಿವೇಶವನ್ನೂ ಬೇಗ ಹೇಳಿ ಮುಗಿಸುತ್ತದೆ. ಅದರ ಪದ್ಧತಿ ಸೂಚನೆ ಪದ್ಧತಿ. ಕವಿ ಹೇಳಿದ ಎರಡು ಮಾತಿನಿಂದ ಓದುವವ ರಸವನ್ನು ಬೆಳೆಸಿಕೊಳ್ಳಬೇಕು. ಅಲ್ಲಿ ಕಣವಾಗಿ ಕಾಣಿಸಿಕೊಳ್ಳುವ ಕಸ್ತೂರಿ ಇಲ್ಲಿ ಪನ್ನೀರ ಸೋನೆಯಾಗಿ ಮೇಲೆ ಹಾಯುತ್ತದೆ. ಇದರ ಮೇಲೆ ಅಲ್ಲಿ ವ್ಯವಹಾರ ಮುಖ್ಯ ವಿಷಯ, ಇಲ್ಲಿ ಕೃಷ್ಣಭಕ್ತಿ ಮುಖ್ಯ ವಿಷಯ. ಕುಮಾರವ್ಯಾಸನ ಕಾಲ ನಾಡಿನಲ್ಲಿ ಶಿವಭಕ್ತಿ ವಿಷ್ಣುಭಕ್ತಿ ಮಹಾಪೂರವಾಗಿ ತುಂಬಿ ಬಂದ ಕಾಲ; ಶಿವಶರಣರ, ಹರಿದಾಸರ, ವಚನದಲ್ಲಿ ನಾಮಾಮೃತ ತುಂಬಿದ ಕಾಲ. ಇಂಥ ವಚನಗಳ ರಚನೆಯ ಪ್ರವೃತ್ತಿ, ಚದುರು, ಕುಮಾರವ್ಯಾಸನಲ್ಲಿ ಉಸಿರಾಟದಂತೆ ಸಹಜವಾಗಿತ್ತಲ್ಲದೆ ತುಂಬ ತುಂಬಿ ಮೇಲೆ ಹರಿಯಿತು. ಅವನ ಭಕ್ತಿ ಅವನ ಮಾತಿನಲ್ಲಿ ಹೊನಲಾಗಿ ಹರಿದಾಗ ಜನ ಆ ಭಕ್ತಿ ತಮ್ಮ ಹೃದಯವನ್ನು ತುಂಬಿರುವ ಭಕ್ತಿ ಎಂದು ಗುರುತಿಸಿದರು; ಅವನ ಮಾತು ತಾವು ಆಡಬಹುದಾಗಿದ್ದ, ಆದರೆ ಆಡಲು ಆಗದ, ಮಾತು ಎಂದು ಕಂಡರು. ಕವಿಯ ಕೃತಿ ಜನರ ಹೃದಯದ ಪ್ರತಿಬಿಂಬ ಆಯಿತು; ಅವನು ಅವರ ಸಂವೇದನೆಯನ್ನು ಪ್ರಕಟಿಸುವ ನಾಲಗೆ ಆದ. ಇಂಥ ಕಾವ್ಯಗಳಲ್ಲಿ ಕೃಷ್ಣಭಕ್ತಿ, ಶಿವಭಕ್ತಿ, ಇಂಥ ಹಿರಿಯ ವಸ್ತು ಆಗಿದೆ. ಆಧುನಿಕರಲ್ಲಿ ಕೆಲವರು ಇವು ಕಾವ್ಯಗಳೇ ಪುರಾಣಗಳೇ ಎಂದು ಕೇಳುತ್ತಾರೆ. ಪುರಾಣ ಆಗಿದ್ದು ಕಾವ್ಯ ಅಲ್ಲ ಎಂದು ಈ ಪ್ರಶ್ನೆಯ ಗ್ರಹಿಕೆ. ದಿಟದಲ್ಲಿ ಪುಣ್ಯಮಾಡಿ ಪುರಾಣಕವಿಯಾದವನ ಕೈಗೆ ಬಂದರೆ ಕಾವ್ಯವಾಗುತ್ತದೆ. ಕಾವ್ಯ ಕವಿಯಾದವನ ಕರ್ಮ; ರೀತಿ ಕಾವ್ಯದ ಆತ್ಮ ಎಂಬ ಪುರಾತನ ಸಾಹಿತ್ಯಸೂತ್ರಗಳ ಅರ್ಥ ಇದೇ. ಪಂಪನೂ ಭಾರತವನ್ನೇ ಬರೆದ. ಅದರಲ್ಲಿ ಲೌಕಿಕವನ್ನು ಬೆಳಗುವುದಾಗಿ ಹೇಳಿದ. ತನ್ನ ದಿನದ ಜನಜೀವನದ ನೂರು ಭಾವಗಳ ನೆಲೆಯಾಗಿ ಕವಿ ಆ ಜನದ ಒಂದು ಕನಸಿಗೆ, ಒಂದು ಧ್ಯೇಯಕ್ಕೆ, ಧರ್ಮಬುದ್ಧಿಗೆ, ಆಸೆ ಆಕಾಂಕ್ಷೆಗಳಿಗೆ, ವಿಲಾಸವಿನೋದಗಳಿಗೆ, ಉತ್ಕರ್ಷ ಉತ್ಧಾನಗಳಿಗೆ, ಒಂದು ಆಕಾರವನ್ನು ಕೊಡುತ್ತಾನೆ. ಅವನಲ್ಲಿ ಕಾವ್ಯಶಕ್ತಿ ಎಷ್ಟು ಹೆಚ್ಚು ಅಷ್ಟು ಹೆಚ್ಚಾಗಿ ಅವನ ಕೃತಿ ಆ ಜನದ ಜೀವನದ ಆದರ್ಶಬಿಂಬ ಆಗುತ್ತದೆ. ಈ ಅರ್ಥದಲ್ಲಿ ಕುಮಾರವ್ಯಾಸ ಕವಿ ಭಾರತದ ಕಥೆಯನ್ನು ಹೇಳ ಹೊರಟಿದ್ದರಲ್ಲಿಯೇ ಜನತೆಯ ಪ್ರತಿನಿಧಿಯೆನಿಸಿದ್ದಾನೆ. ಅವನು ಪುರಾಣದ ಸಂಗತಿಯನ್ನು ಹೇಳಿದ. ಅದನ್ನು ಕೃಷ್ಣಕಥೆ ಎಂದೇ ವರ್ಣಿಸಿದ. ಅದು 'ಚಾರುಕವಿತೆಯ ಬಳಕೆಯಲ್ಲ' ಎಂದು ಮೂದಲೆಯನ್ನೂ ನುಡಿದ. ಅದನ್ನು ನುಡಿವಲ್ಲಿಯೇ ವೀರನಾರಾಯಣನ ಕವಿ, ಲಿಪಿಕಾರ ಕುಮಾರವ್ಯಾಸ ಎಂದ; ತಾನು ಬರಿಯ ಬರೆದಾತ; ಕೃತಿಕಾರ ದೇವರು. ಅಂತೇ 'ಹರಿಯ ಬಸಿರೊಳಗಖಿಲ ಲೋಕದ ವಿರಡ ಅಡಗಿಹವೋಲು ಭಾರತ ಶರಧಿಯೊಳಗಡಗಿಹವು ಅನೇಕ ಪುರಾಣಶಾಸ್ತ್ರಗಳು' ; 'ಅರಸುಗಳಿಗಿದುವೀರ ದ್ವಿಜರಿಗೆ ಪರಮವೇದದ ಸಾರ ಯೋಗೀಶ್ತ್ವರರ ತತ್ತ ವಿಚಾರ, ಮಂತ್ರೀಜನಕೆ ಬುದ್ಧಿಗುಣ. ವಿರಹಿಗಳ ಶೃಂಗಾರ, ವಿದ್ಯಾಪರಿಣತರಲಂಕಾರ, ಕಾವ್ಯಕೆ ಗುರು' ಎಂದ. ಜಾರುಕವಿತೆಯ ಬಳಕೆಯಲ್ಲ; ಆದರೂ ಕಾವ್ಯಕೆ ಗುರು.

 ಮೂಲ ಭಾರತದ ಕಥೆಯನ್ನು ಕಾವ್ಯಕುಲಕ್ಕೆ ಗುರುವಾಗುವಂತೆ Àನ್ನಡಿಸುವಲ್ಲಿ ಕುಮಾರವ್ಯಾಸ ವ್ಯಾಸಮಹರ್ಷಿ ಹೇಳಿದ ವಿಷಯ ಅಷ್ಟನ್ನೇ ಸಂಗ್ರಹಿಸಿ ಮುಗಿಸಲಿಲ್ಲ. ಕಥೆಯನ್ನು ತನ್ನದಾಗಿ ಮಾಡಿಕೊಂಡು. ಅದನ್ನು ತನ್ನ ರುಚಿಯನ್ನನುಸರಿಸಿ ಮತ್ತೆ ಹೇಳಿದ; ಅದನ್ನು ಭಾರತಕಥಾಮಂಜರಿ ಎಂದು ಕರೆದ. ಈ ಪದ್ಧತಿ ಕನ್ನಡದಲ್ಲಿ ಹೊಸತಲ್ಲ; ಪಂಪ, ಅಭಿನವಪಂಪ ಹಿಂದೆ ಅನುಸರಿಸಿದ್ದೇ. ಮಹಾಭಾರತ ಮೂಲತಃ ಇಪ್ಪತ್ತುನಾಲ್ಕು ಸಾವಿರ ಶ್ಲೋಕಗಳ ಗ್ರಂಥ ಆಗಿದ್ದು ಆಮೇಲೆ ಅಖ್ಯಾನಗಳು ಇತರ ಸಂಗತಿಗಳು ಸೇರಿ ಒಂದು ಗ್ರಂಥ ಆಯಿತು ಎಂದು ಅದರಲ್ಲೇ ಉಕ್ತವಾಗಿದೆ. ಮಹಾಭಾರತವನ್ನು ಸಂಗ್ರಹಿಸುವಲ್ಲಿ ಕವಿ ಮುಖ್ಯವಾಗಿ ಮೂಲ ಭಾರತದ ಕಥೆಯನ್ನು, ಜೊತೆಗೆ ಕೃಷ್ಣನ ಮಹಿಮೆಯನ್ನು ಪ್ರಕಟಿಸುವ ಪ್ರಸಂಗಗಳನ್ನು ಎತ್ತಿಕೊಂಡಿದ್ದಾನೆ. ಸಂಗ್ರಹದ ಸುಮಾರು ಎಂಟುಸಾವಿರ ಷಟ್ಪದಿ ಮೂಲದ ಲಕ್ಷ ಶ್ಲೋಕದ ಎಂಟರಲ್ಲಿ ಒಂದು ಭಾಗ ಆಗುತ್ತದೆ. ಹೀಗಿದ್ದೂ ಕವಿ ಇಷ್ಟಪಟ್ಟಿರುವಲ್ಲಿ ಮೂಲಕ್ಕಿಂತ ವಿಸ್ತಾರವಾಗಿಯೇ ಕಥೆಯನ್ನು ವಿಸ್ತರಿಸುತ್ತಾನೆ. ದ್ರೌಪದೀ ಸ್ವಯಂವರದ ಪ್ರಸಂಗ, ಅರ್ಜುನ ಪಾಶುಪತಾಸ್ತ್ರವನ್ನು ಪಡೆದ ಕಥೆ. ಉತ್ತರನ ಪ್ರತಾಪದ ಕಥೆ, ಅಭಿಮನ್ಯುವಿನ ವಿವಾಹದ ಕಥೆ-ಇವು ಈ ವಿಸ್ತಾರಕ್ಕೆ ಉದಾಹರಣೆಗಳು. ಕೃಷ್ಣಭಕ್ತಿಯನ್ನು ಪ್ರಕಟಿಸಲು ಆರಿಸಿರುವ ಪ್ರಸಂಗಗಳ ಉದಾಹರಣೆಗಳು ಎಂದರೆ-ಶಿಶುಪಾಲವಧೆ, ದೌಪದೀವಸ್ತ್ರಾಪಹರಣ, ಸಂಧಾನಕ್ಕಾಗಿ ಬಂದ ಕೃಷ್ಣ ಹಸ್ತಿನಾಪುರವನ್ನು ಹೊಕ್ಕ ಸಂದರ್ಭ, ಸಂಧಾನವನ್ನು ನಡೆಸಿದ ಸಂದರ್ಭ-ಇವುಗಳ ಕಥನ. ಕೃಷ್ಣ ಸಭೆಯನ್ನು ಹೊಕ್ಕಾಗ ದುರ್ಯೋಧನ ಪೀಠದಿಂದ ಏಳಲಿಲ್ಲ. ಕೃಷ್ಣ ನೆಲವನ್ನು ಉಂಗುಟದಿಂದ ಮೀಟಿದ. ಪೀಠದ ಗೊಣಸು ಮುರಿದು ದುರ್ಯೋಧನ ಕೃಷ್ಣನ ಪಾದದ ಮೇಲೆ ಬಿದ್ದ. ಮಹಾಭಾರತದಲ್ಲಿಲ್ಲದ ಇಂಥ ಸಂಗತಿಗಳು ಜನರಲ್ಲಿ ಪ್ರಚಾರದಲ್ಲಿದ್ದವಾಗಿರಬಹುದು, ಇಲ್ಲ ಕವಿ ಕಲ್ಪಿಸಿದವೂ ಆಗಿರಬಹುದು. ಎಂದರೆ ಮೊತ್ತದ ಮಾತು ಇಷ್ಟು. ಕುಮಾರವ್ಯಾಸನ ಕಾವ್ಯ ವ್ಯಾಸನ ಕಾವ್ಯದ ಪ್ರತಿ ಮಾತ್ರ, ಸಂಗ್ರಹ ಮಾತ್ರ ಆಲ್ಲ, ವ್ಯಾಸನ ಕುಮಾರ ಎನ್ನಬಹುದಾದ ಒಬ್ಬ ಉದ್ದಾಮ ಕವಿಯ ಸುಸ್ವತಂತ್ರ ಕೃತಿ. ಮಗ ತಂದೆಯಂತೆ ಇದ್ದೂ ತಾನೇ ಪೂರ್ಣವ್ಯಕ್ತಿ ಆಗಿರುವಂತೆ ಭಾರತ ಕಥಾಮಂಜರಿ ಸುವ್ಯಕ್ತವಾಗಿ, ಮೂಲವನ್ನು ಕೇವಲ ಅವಲಂಬಿಸಿ ಬರೆದ ಸ್ವಸಂಪೂರ್ಣ ಕಾವ್ಯ.

 ಜನ್ಮತಃ ಕವಿ ಆದವನು ಮಹಾ ಅನುಭಾವಿಯಾಗಿ ಬರೆದ ಈ ಕಾವ್ಯದಲ್ಲಿ ಭಕ್ತಿ ಮುಖ್ಯ ರಸವಾಗಿ ಮತ್ತೆ ಮತ್ತೆ ಮಡುಗಟ್ಟಿ. ಮತ್ತೆ ಮತ್ತೆ ಹೊನಲಾಗಿ ಹರಿಯುವುದು ಸಹಜವಾಗಿದೆ. ಪಂಡಿತರ ಪ್ರಪಂಚವನ್ನು ಬಲ್ಲ ರಸಿಕಚೇತನ ಆದುದರಿಂದ ಇವನ ದೈವಸ್ತವಗಳಲ್ಲಿ ವೇದ ಉಪನಿಷತ್ತುಗಳ ಉಪದೇಶ ಕೆನೆ, ಗಿಣ್ಣು, ಜೇನು ಎಂಬಂತೆ ಸಿಹಿಯಾಗುತ್ತದೆ. ವಿಸ್ತಾರವೇ ಈ ಸ್ತವಗಳ ಹೃದಯ. ಗಾಯನದಲ್ಲಿ ಸಂಗತಿಗಳಂತೆ ಹೊಸ ವಿವರಗಳನ್ನು ಒಂದರ ಮೇಲೊಂದನ್ನು ಪೇರಿಸಿ ಪೇರಿಸಿ ಕವಿ ನಮ್ಮ ಮನಸ್ಸನ್ನು ಒಂದು ಮೋಡಿಗೆ ಅಧೀನ ಮಾಡುತ್ತಾನೆ. ಇದನ್ನು ಉದಾಹರಣೆಗಳಿಂದ ತೋರುವುದು ಸಾಧ್ಯವಲ್ಲ. ಉದಾಹರಣೆಯಾಗಿ ಅಲ್ಲ, ಕವಿಯಕ್ರಮದ ಕುರುಹಾಗಿ. ಈ ಪದ್ಯಗಳನ್ನು ಹೇಳಬಹುದು. ಭೀಷ್ಮ ಕೃಷ್ಣನನ್ನು ಬಣ್ಣಿಸುವ ಬಗೆ ಹೀಗಿದೆ: ಭೂತಭವ್ಯಭವತ್ಪ್ರಧಾನ ಖ್ಯಾತತತ್ತ್ವ ಪ್ರಕೃತಿ ಪುರುಷನೀತ ಸಚ್ಚಿನ್ಮಾತ್ರಲಿಂಗನು ಪರಶಿವಾತ್ಮಕನು ಸೋತ ನುಡಿ ಮನದೊಡನೆ ಮರಳಿದಡಾತ ಸತ್ಯಜ್ಞಾನಮಯ ನಿರ್ಧೂತ ಮಾಯಾತೀತನೀ ಹರಿ ಎಂದನಾ ಭೀಷ್ಮ'. ವಿಷ್ಣುಸಹಸ್ರನಾಮಸ್ತೋತ್ರದ ಭೂತಭವ್ಯಭವತ್ಪ್ರಭುಃ, ಉಪನಿಷತ್ತಿನ ಯತೋ ವಾಚೋ ವರ್ತಂತೇ ಅಪ್ರಾಪ್ಯ ಮನಸಾ ಸಹ ಎಂಬ ಭಾವನೆಗಳು ಇದರಲ್ಲಿ ಅಡಗಿರುವ ರೀತಿ ಗಮನಾರ್ಹ. ಹೀಗೆ ಕೃಷ್ಣನನ್ನು ಮುಖ್ಯಮೂರ್ತಿಯಾಗಿ ನಿಲ್ಲಿಸಿ ಕವಿ ಅವನ ಸುತ್ತ ಭೀಷ್ಮ, ಯುಧಿಷ್ಠಿರ, ಭೀಮ, ಅರ್ಜುನ,  ಧೃತರಾಷ್ಟ್ರ, ದುರ್ಯೋಧನ, ಶಕುನಿ, ಕರ್ಣ, ವಿದುರ, ಕುಂತಿ, ಗಾಂಧಾರಿ, ದ್ರೌಪದಿ ಮುಂತಾದವರನ್ನು ಕಲ್ಪಿಸಿದ್ದಾನೆ. ಇವರೆಲ್ಲ ಇವನೇ ಶಿಲ್ಪಿಸಿದ ಮೂರ್ತಿಗಳು. ಎಲ್ಲರೂ ಸಹಜವಾಗಿ ಸ್ವತಂತ್ರವಾಗಿ ವರ್ತಿಸುತ್ತಾರೆ. ಉತ್ತರೆಯ ವಿವಾಹಕ್ಕೆ ಕೃಷ್ಣನನ್ನು ಕರೆದು ಯುಧಿಷ್ಠಿರ ಬರೆದ ಓಲೆ ಕವಿಯ ದಿನದ ಬಲ್ಲ ಜನರ ನಯವನ್ನು ರೂಪಿಸುತ್ತದೆ. ಜನತೆಗೆ ಮೇಲ್ಪಂಕ್ತಿ ಹಾಕುತ್ತದೆ. ಸ್ವಸ್ತಿ ದಾನವರಾಯ ಕುಂಜರ ಮಸ್ತಕಾಂಕುಶ ಖೇಲನಾ ಪರಿಯಸ್ತ ಯದುಕುಲಸಿಂಹ ಸಂಹೃತಜನ್ಮ ದುರಿತಭಯ ಹಸ್ತಕಲಿತ ಸುದರುಶನೋಧ್ರ್ವಗಭಸ್ತಿಲವಶಮಿತಾರ್ಕ ಪರಿವೃಢ ವಿಸ್ತರಣ ಚಿತ್ತೈಸು ಕುಂತಿಯ ಸುತರ ಬಿನ್ನಪವ. ದೇವ ನಿಮ್ಮಡಿಗಳ ಕೃಪಾಸಂಜೀವನಿಯಲೆಮ್ಮಸುಗಳೊಡಲಿನ ಠಾವ ಮೆಚ್ಚಿದವೊದೆದು ಹಾಯ್ದೆವು ವಿಪಿನಮಂದಿರವ.... ಮದುವೆಯೆಂಬುದು ನೆವ ನಿಜಶ್ರೀಪದವ ತೋರಿಸಬೇಕು.... .... ಹದುಳವಿಟ್ಟೆಮ ಗುಚಿತವಚನದ ಹದವಳೆಯಲುತ್ಸಾಹ ಸಸಿಯನ್ನು ದೇವ ಸಲಹುವುದು.' ಇವನ ಕೃಷ್ಣಮೂರ್ತಿ ವಾತ್ಯಲ್ಯವೇ ಎರಕವಾದ ದಿವ್ಯಮಂಗಳ ಮೂರ್ತಿ; 'ಹೆತ್ತ ಮಕ್ಕಳು ನಿಲಲಿ. ಭಕ್ತರನಿತ್ತ ಕರೆ, ನೆನೆವರಿಗೆ ತನ್ನನ್ನು ತೆತ್ತು ಬದುಕುವ' ನೆಂಬ ಬೋಳೆಯ ರರಸ. ಭಕ್ತಿರಸದಷ್ಟೇ ಕವಿಗೆ ಹಾಸ್ಯವೂ ಸಹಜವಾಗಿ ಬಂದಿತ್ತು. ಅರ್ಜುನ ಮತ್ಸ್ಯಯಂತ್ರ ಭೇದನಕ್ಕೆ ಎದ್ದಾಗ ಜನ ಆಡಿದ, ಆಡಿಕೊಂಡ ಮಾತು ಇದಕ್ಕೆ ನಿದರ್ಶನ. ಧನುವನ್ನು ಹಿಡಿಯಲು ಎದ್ದ ವಿಪ್ರನನ್ನು ನೋಡಿ ಅವರು, 'ಧನು ತನಗೆ ನೆಗಹಲ್ಕೆ ಕೃಷ್ಣಾಜಿನವೊ ಸಾಲಗ್ರಾಮದೇವರೋ.... ......ಬಣಗು ವಿಪ್ರನ ನೆನಹ ನೋಡಿರೆ ಘನವಲಾ ದ್ರೌಪದಿಯ ಸೌಭಾಗ್ಯ.' ದ್ರೌಪದಿಯ ಪರಿವಾರದ ಹೆಣ್ಣುಮಕ್ಕಳು. ಎಲವೋ ಮಟ್ಟಿಯ ಮದನ. ದರ್ಭೆಯ ತಿಲದ ಮನ್ಮಧ. ವಿಮಲ ಧೋತ್ರದ ತಳಿರುಗಾಸೆಯ ಕಾಮ. ಕೃಷ್ಣಾಜಿನದ ಕಂದರ್ಪ, ನಳಿನ ಮುಖಿಯನು ವರಿಸು ಬಾ. ನಿನಗಳವಡುವನೆಲೆ ಅಕ್ಕ ಕೇಳೌ ತಲೆವಿಡಿವೆವಾವ್ನೋಡು ಎಂದರು ನಗುತ ಚಪಲೆಯರು.' ಸೌಗಂಧಿಕಾಹರಣ ಮಾಡಿದ ಅನಂತರ ಹಿಂದಿರುಗುವ ಮುನ್ನ ಭೀಮ ಅದರ ಕಾವಲ ಜನಕ್ಕೆ 'ನಿಮ್ಮ ಕೊಳ ಇಲ್ಲೇ ಇದೆ. ನಾವು ತೆಗೆದುಕೊಂಡು ಹೋಗಲಿಲ್ಲ ನಮ್ಮನ್ನು ದೂರಬೇಡಿ' ಎಂದನಂತೆ. ಅರ್ಜುನ ಉತ್ತರನಿಗೆ 'ಯುದ್ದದಲ್ಲಿ ಸಾಯಲು ಹಿಂಜರಿಯಬೇಡ. ಸ್ವರ್ಗದ ಸುಂದರಿಯರ ಸಹವಾಸ ದೊರೆಯುತ್ತದೆ' ಎನ್ನುತ್ತಾನೆ. ಅದಕ್ಕಿವನು 'ನನಗೆ ಸ್ವರ್ಗದ ಸುಂದರಿಯರು ಬೇಡ. ನಮ್ಮ ರಾಣೀವಾಸದ ಚೆಲುವೆಯರು ಸಾಕು' ಎಂದು ಉತ್ತರಿಸುತ್ತಾನೆ. ಇವನ ಮಾತು ಇಂಥವು ಹಲವು. ಈ ಪ್ರಸಂಗದಲ್ಲಿ. ಭಕ್ತಿಯಷ್ಟೆ ಹಾಸ್ಯದಷ್ಟೆ ಕರುಣ ಮಡುಗಟ್ಟುವುದು ವಸ್ತ್ರಾಪಹರಣ ಪ್ರಸಂಗದಲ್ಲಿ ಕಾಣುತ್ತದೆ. ಗಂಡಂದಿರು ರಕ್ಷಿಸುವರಲ್ಲ ಎಂಬುದನ್ನು ಕಂಡ ದ್ರೌಪದಿ ಭೀಷ್ಮ ಗುರು ಕೃಪರತ್ತ ಮರಳಿ ನೋಡಿದಳು. ಅಕಟ ಗಂಗಾ ವರಕುಮಾರ ದ್ರೋಣ ಕೃಪರೀ ಸೆರಗ ಬಿಡಿಸಿರೆ ತಂದೆಗಳಿರಾ ಎಂದೊರಲಿದಳು ತರಳೆ'. 'ಕ್ರೂರನಿವ ದುಶ್ಯಾಸನನು; ಗಾಂಧಾರಿ ಬಿಡಿಸೌ ಸೆರಗ; ಸೊಸೆ ಅಲ್ಲಾ? ಆರು ಹೇಳೌ ತಂಗಿಯಲ್ಲಾ ನಿಮಗೆ ಭಾನುಮತಿ? ವೀರ ಸೈಂಧವನರಸಿ, ರಾಜಕುಮಾರಿ. ನೀ ನಾದಿನಿಯಲಾ-ಖಳ ರೌರವದೊಳದ್ದುವನು; ಬಿಡಿಸು; ಎಂದೊರಲಿದಳು ತರಳೆ'. ಅವರು ಯಾರೂ ರಕ್ಷಿಸಲಿಲ್ಲವಾಗಿ ಅಬಲೆ ಕ್ರಷ್ಣನಿಗೆ ಮೊರೆಯಿಟ್ಟಳು. 'ಗತಿವಿಹೀನರಿಗಕಟ ನೀನೇ ಗತಿಯಲಲೈ ಗೋವಿಂದ ರಿಪುಬಾಧಿತರಿಗಬಲರಿಗಾರ್ತರಿಗೆ ನೀ ಪರಮ ಬಂಧುವಲಾ... ....ನಾಥರಿಲ್ಲದ ಶಿಶುಗಳಿಗೆ ನೀ ನಾಥನೈ ಗೋವಿಂದ ಸಲಹೈ... ...ನಾಥರಿಲ್ಲೆನಗಿಂದು ದೀನಾನಾಥಬಾಂಧವ ನೀನೆಲೈ ವರಮೈಥಿüಲೀ ಪತಿಮನ್ನಿಸೆಂದೊದರಿದಳು ಮೃಗನಯನೆ'. ವಸ್ತ್ರಾಪಹರಣದ ಕಥೆ ಮೂಲ ಭಾರತದಲ್ಲಿರಲಿಲ್ಲ, ಪ್ರಕ್ಷಿಪ್ತವಾಗಿ ಬಂದದು-ಎನಿಸುತ್ತದೆ. ಹೀಗಿದ್ದೂ ಈ ಭಾಗವನ್ನೋದಿದಾಗಲೆಲ್ಲ ತಟ್ಟನೆ ಕಣ್ಣಲ್ಲಿ ನೀರು ತುಂಬುತ್ತದೆ. ಕಲ್ಲೆದೆಯಾದರೆ ಎಂತೋ ಹೇಳುವಂತಿಲ್ಲ. ಕಲ್ಲೆದೆಯಾದರೂ ಇಲ್ಲಿಯ ಗೋಳಿಗೆ ಕರಗಲೇಬೇಕು-ಹಾಗಿದೆ ಈ ಕವಿಯ ರಸಸಾಮಥ್ರ್ಯ. ವೀರರಸದ ಮಾತನ್ನು ಬೇರೆಯಾಗಿ ಹೇಳಲೇನು? ಕಾವ್ಯದ ತುಂಬ ವೀರರಸ ತುಂಬಿದೆ. ಸೆಣಸುವಧಟರ ಗಂಡ, ಸಮರಾಂಗಣದತುಲಭೇರುಂಡ ದಿನಮಣಿಯ ಮಗ ಉದ್ದಂಡ ಕರ್ಣ ಕವಿಯ ಒಲುಮೆಯ ವೀರ, ಮಕ್ಕಳು ನೂರು ಮಂದಿಯಲ್ಲಿ ಒಬ್ಬ. ಇಷ್ಟೆಲ್ಲ ಸಂಗತಿಯನ್ನು ಇಷ್ಟು ವಿಸ್ತಾರವಾಗಿ ಹೇಳುವಲ್ಲಿ ಕಾವ್ಯದಲ್ಲಿ ಕಾಣುವ ಶಬ್ದ ಸಂಪತ್ತು ಈ ಕವಿಗೇ ಮೀಸಲು. ರಾಜನ ಅರಮನೆ. ಕಾಳೆಗದ ಕಣ, ಜೂಜಿನ ಆಟ, ಮದುವೆಯ ಸಂಭ್ರಮ, ಪಾಳೆಯದ ಬಾಳು, ಸ್ವಯಂವರ ಮಂಟಪ, ಮಲ್ಲಯದ್ಧ, ಮಕ್ಕಳಾಟ, ಬೇಟೆ, ರಥದ ಭಾಗಗಳು, ಆಯುಧಗಳ ಬಗೆಗಳು, ನಾಯಿ, ಕುದುರೆ-ಇವುಗಳ ಜಾತಿಗಳು, ವೀರವಸನ, ಇತ್ಯಾದಿ, ಇತ್ಯಾದಿ. ಈ ಕವಿತೆಯಲ್ಲಿ ಬರುವ ಸಂಗತಿ ಒಂದು ಸಾವಿರ. ಅದನ್ನು ಹೇಳುವುದಕ್ಕೆ ಲಕ್ಷ ಶಬ್ದ ಕವಿಯನ್ನು ಓಲೈಸುತ್ತಿವೆ. ಹಿಂದೆ ಒಬ್ಬರು ಕುಮಾರವ್ಯಾಸನ ಸಲುವಾಗಿಯೇ ಒಂದು ಶಬ್ದ ಕೋಶವನ್ನು ಮಾಡಿದ್ದರು; ಈಗ ಒಂದನ್ನು ಮಾಡುವುದು ಒಳಿತೆ. ಇವನ ನುಡಿ ಅಷ್ಟು ವಿಪುಲ ಅಷ್ಟು ವಿಶಿಷ್ಟ. ಇಷ್ಟು ವಿಷಯವನ್ನು ಹೀಗೆ ಹೇಳಿದವನಿಗೆ ಶಬ್ದ ಬೇಕಾಗುವುದಿಲ್ಲ. ಇಷ್ಟು ಶಬ್ದ ಇಲ್ಲದೆ ಇಷ್ಟು ವಿಷಯವನ್ನು ಹೀಗೆ ಹೇಳುವುದು ಸಾಧ್ಯವಲ್ಲ. ಪಂಪ, ರನ್ನ ಹರಿಹರ, ರತ್ನಾಕರವರ್ಣಿ-ಇವರು ವಾಕ್‍ಸಾರ್ವಭೌಮರು. ಶಬ್ದಾರ್ಣವರು, ಸರಸ್ವತಿಯ ಭಂಡಾರದ ಮುದ್ರೆಯನ್ನೊಡೆದ ಧೀರರು. ಅಡ್ಡಿ ಇಲ್ಲ. ಕುಮಾರವ್ಯಾಸ ಅಂತೇ ಸಾರ್ವಭೌಮ; ಅಂತೇ ಅರ್ಣವ. ಇಷ್ಟೇ ಭೇದ: ಇವನು ಭಂಡಾರದ ಮುದ್ರೆಯನ್ನೊಡೆಯ ಬೇಕಾಗಲಿಲ್ಲ. ಅದು ಇವನಿಗೆ ತೆರೆದೇ ಇತ್ತು. ಮೇಲಾಗಿ ಈ ಸಂಪತ್ತಿನಲ್ಲಿ ಇದು ಸಂಸ್ಕøತ, ಇದು ಕನ್ನಡ, ಇದು ಹೆಚ್ಚು, ಇದು ಕಡಿಮೆ ಎನ್ನದೆ ಸಮಸಮವಾಗಿ ಸೇರಿತ್ತು. ಇಲ್ಲಿ ಸಂಸ್ಕøತ ಸೇರಿರುವುದೂ ಹೀಗೇ ಇದೆ. ಮನೆಗೆ ಬಂದ ಸೊಸೆಯಂತೆ ಅದು ಕನ್ನಡದಲ್ಲಿ ಕನ್ನಡವಾಗಿ ಸೇರಿಹೋಗಿದೆ. ಕವಿಯ ಚತುರ ಉಕ್ತಿಯೋ ಧಾರಾಳವೆಂದರೆ ಧಾರಾಳ. ಅದರ ಬೀಸು ಅದರ ಹರಹು ಇವನದೇ. ಇವನ ವರ್ಣನೆಗಳ ಅಂದವೇ ಅಂದ. ಕವಿ ವಸಂತಕಾಲವನ್ನು ವರ್ಣಿಸುತ್ತಾನೆ: 'ತೆಗೆದುದಗ್ಗದ ತಂಪು' ಎಂದು ಆರಂಭಿಸಿ 'ಸೊಗಸಿದುವು ನೆಳಲುಗಳು ದೂರಕೆ ಸೆಗಳಿಗಳೇರಿದುವು ತಂಗಾಳಿಗೆ ವಿಹಾರಿಸಿ ಮೈಯ ತೆತ್ತುದು ಕೂಡೆ ಜನನಿಕರ' ಎಂದು ಆ ಕಾಲದ ನಾಲ್ಕು ವಿವರಗಳನ್ನು ಬರೆದು ಒಂದು ಚಿತ್ರವನ್ನು ಕವಿ ಕಟ್ಟುತ್ತಾನೆ. ಚೆಲುವೆಯನ್ನು ವರ್ಣಿಸುತ್ತಾನೆ-'ಹೊರೆಯ ಸಖಿಯರ ನೋಟ ಮೈಯಲಿ ಹರಿದು ಬಳಲದು. ಕಿವಿಗಳಿಗೆ ಮೆಲ್ನುಡಿಯ ಸವಿಸವಿದು ಅರುಚಿ ಆಗದು, ನಾಸಿಕವು ಮೈಪರಿಮಳದ ಪೂರದಲಿ ಗಂಧಾಂತರಕೆ ನೆರೆಯದು.' ವನವನ್ನು ವರ್ಣಿಸುತ್ತಾನೆ-'ಗಿಳಿಯ ತುಂಬಿಯ ಹಂಸೆಗಳ ಕೋಗಿಲೆಯ ಕೊರಲ್ವಕ್ಕಿಗಳ ಕೊಂಚೆಯ ಕೊಳಲುವಕ್ಕಿಯ ನವಿಲು ಪಾರಿವದ ಕಳ ರುಚಿಯ ಕರ್ಣಾಮೃತದ ತನಿಮಳೆಯ ಸುರಿದುದು ಯಾದವೇಂದ್ರನ ಬಳದ ಕಿವಿಯಲ್ಲಿ ಇಭಪುರಿಯ ಹೊರವಳೆಯದುದ್ಯಾನ' ಆ ಪುರಿಗೆ ಸಂಧಿಕಾರನಾಗಿ ಬಂದ ಕೃಷ್ಣನನ್ನು 'ಸಿರಿಮೊಗದ ಕಿರುಬೆಮರ, ತೇಜಿಯ ಖುರಪುಟದ ಕೆಂದೂಳಿ ಸೋಕಿದ ಸಿರಿಮುಡಿಯ ಕುಡಿಮೀಸೆಯಲಿ ಕೆಂಪಡರ್ದ ರೇಣುಗಳ ಖರಮರೀಚಿಯ ಝಳಕೆ ಬಾಡಿದ ತರುಣ ತುಳಸಿಯ ದಂಡೆ ಒಪ್ಪುವ ಗುರುವದೇವ ಎಂದು ವರ್ಣಿಸುತ್ತಾನೆ. ಇಲ್ಲಿಯ ಔಚಿತ್ಯ ಕೌಶಲ್ಯ ಹುಟ್ಟಾಚಿತ್ರಕಾರನಾದವನ ಲಕ್ಷಣಗಳು. ಎಳೆದದ್ದು ನಾಲ್ಕು ಗೆರೆ, ಆಗಿರುವುದು ಒಂದು ಮುಖ. ಈ ಕವಿತೆಯ ಶಕ್ತಿ ಇರುವುದು ಸಹಜೋಕ್ತಿಯಲ್ಲಿ. ಅಲಂಕಾರಕ್ಕೆ ಕಡಿಮೆ ಇಲ್ಲ: ಆದರೆ ಅದು ಮೇಲೆ ತೊಡಿಸಿದ ಆಭರಣವಲ್ಲ. ಮೈಯಲ್ಲಿ ತಳಿತ ಚೆಲುವು. ಉತ್ಪ್ರೇಕ್ಷ ಇದ್ದರೂ ಉತ್ಪ್ರೇಕ್ಷೆ ಎನ್ನಿಸುವುದಿಲ್ಲ. ಉಪಮೆ ಇರುತ್ತದೆ. ರೂಪಕವಾಗಿ ಮರೆಗಿರುತ್ತದೆ. ದುಷ್ಕøತಿಗೆ ಹಂಗಿಗರು, ವಿಧಿಯ ಕಣ್ಣಿಯ ಹುರಿ, ಸಿಡಿಲ ಶಿಷ್ಯ, ಆಲಿಯಲಿ ನುಂಗಿದನು. ಕಪಟದ ನಿರಿಗೆ, ಭಕುತಿಯ ಹೊರಿಗೆ; 'ಅಂಜದಿರು ಭಯಬೇಡ ನರರಿಗೆ ನಂಜು ಪಥ್ಯವೆ ಗಿಳಿಯ ಮರಿಗಳು ಮಂಜರನ ಮೇಲ್ವಾಯ್ದು ಬದುಕುವವೇ ಮಹೀಪತಿಯೇ ಮಂಜು ಮಧ್ಯಾಹ್ನದ ದಿನೇಶನನೆಂಜಲಿಸುವುದೇ?' ಉಪಮೆ ಉಪಮೆಯಾಗಿ ಕಂಡಿತೋ ವಿವರವಿವರದಲ್ಲಿ ಬಳುಕಿ ಕಾಣುತ್ತದೆ. ಕೌಸ್ತುಭಾಲಂಕೃತನಾದ ಕೃಷ್ಣ ಹೊನ್ನ ತೇರಿಂದ ಇಳಿದದ್ದು ಮಿಂಚಿನಿಂದ ಕೂಡಿದ ಕರಿಮುಗಿಲು ಹೊನ್ನ ಬೆಟ್ಟದಿಂದ ಇಳಿದಂತಿತ್ತು. ಮಗ ಸತ್ತ ಎಂದು ಧೀರ ಅತ್ತ ಕಣ್ಣಹನಿ ಉರಿಯುತ್ತಿರುವ ಹಸಿಯ ಮರದ ತುದಿಯಲ್ಲಿ ನೀರು ಕಾಣಿಸುವಂತಿತ್ತು. ಹಲವು ಕಾಲಮೇಲೆ ನಿಂತು. ಕುಂಟದೆ ಇರುವ ಈ ಉಪಮಾನಗಳು ವಾಲ್ಮೀಕಿ ಕಾಳಿದಾಸರ ಉಪಮೆಗಳಿಗೆ ಸಮನಾಗುತ್ತವೆ. ಇದರ ಮೇಲೆ ಈ ವಾಣಿಯ ವ್ಯಂಗ್ಯ-ಸಂಧಾನಕ್ಕೆಂದು ಬಂದ ಕೃಷ್ಣಕುಂತಿಗೆ ನಿನ್ನ ಮಕ್ಕಳಿಗೆ ಈ ಕುಠಾರನಲ್ಲಿ ಭಾಗಬೇಡುವ ವಿವೇಕದಲ್ಲಿ ಬಂದಿದ್ದೇನೆ-ಎನ್ನುತ್ತಾನೆ. ಇಲ್ಲಿ ಕೆಲವರು ಅವಿವೇಕ ಎಂದು ಸಂಧಿ ಬಿಡಿಸುವುದುಂಟು. ಈ ಮಾತನ್ನಾಡುವ ಕೃಷ್ಣನನ್ನು ಕಲ್ಪಿಸಿಕೊಂಡವರು ಹೀಗೆ ಮಾಡಲಾರರು. ಇಲ್ಲಿ ವಿವೇಕ ಶಬ್ದವೇ ಇರಬೇಕು. ಅದನ್ನು ಯುಕ್ತವಾದ ಧ್ವನಿಯಿಂದ ಹೇಳಬೇಕು. ಇಷ್ಟಾಗಿಯೂ ಈ ಕವಿತೆ ಸಾವಿರ ಪಂಕ್ತಿಯಲ್ಲಿ ಒಂದೊಂದು ಸಲ ಸ್ವರ ತಪ್ಪುತ್ತದೆಂದು ಹೇಳಬೇಕು. ವಿಪ್ರನಂತಿದ್ದ ಅರ್ಜುನ ಮತ್ಸ್ಯಯಂತ್ರ ಭೇದನಕ್ಕೆ ಎದ್ದಾಗ 'ಚಪಲೆಯರು' ಆಡಿದರೆಂದು ಈ ಮುನ್ನ ಉದ್ಧರಿಸಿರುವ ಪದ್ಯ ಇದಕ್ಕೆ ಉದಾಹರಣೆ. ಇವರು ಅವರು ಇದನ್ನು ಅದನ್ನು ಮಾಡಿದವರು ಎನ್ನುವಲ್ಲಿ ಕವಿ ಆಗಾಗ ಹೀಗ 'ನಗುತ' ಎಂಬ ಶಬ್ದವನ್ನು ಹಾಕುತ್ತಾನೆ. ಅಂಥಲ್ಲಿ ಆ ಪದಕ್ಕೆ ಏನೂ ಕೆಲಸವಿರುವುದಿಲ್ಲ; ಅದು ಕವಿಯ ಬಳಕೆ ಅಷ್ಟೆ. ಇವನ ದ್ರೌಪದಿ ಭೀಮನಿಗೆ ಐದು ಜನ ಒಬ್ಬಳನ್ನು ಆಳರಾರಿರಿ ನೀವು ಗಂಡರೋ ಭಂಡರೋ ಎನ್ನುತಾಳೆ. ಅರ್ಥ ಅಲ್ಲಿ ಸಾಧುವೆ; ಮಾತು ಆ ಮಹಾರಾಜ್ಞಿಯ ಪದವಿಗೆ ತಕ್ಕದಾಗಲಿಲ್ಲ. ಉತ್ತರ ಅಂಜಿ ಓಡಿದಾಗ ಅರ್ಜುನ ಅವನ ಹುಟ್ಟಿನ ಮಾತನ್ನೆತ್ತುತ್ತಾನೆ. ಇದು ಹಳ್ಳಿಗರ ಕೊಚ್ಚೆಮಾತು. ಅರ್ಜುನನಿಗೆ ತಗವುದಲ್ಲ. ಪ್ರಾಯಶಃ ಇಂಥ ಮಾತು ಬಂದದ್ದರ ಕಾರಣ ಕವಿ ಸ್ವತಃ ಹಳ್ಳಿಗನಾಗಿದ್ದದು ಎನ್ನಬಹುದು. ಹಲಗೆ ಬಳಪವ ಪಿಡೆಯದೊಂದಗ್ಗಳಿಕೆ ಬರೆದುದನು ಅಳಿಪದೊಂದಗ್ಗಳಿಕೆ, ಕವಿ ಹೇಳಿಕೊಂಡಿರುವ ಹಲವು ಅಗ್ಗಳಿಕೆಗಳಲ್ಲಿ ಎರಡು. ಎರಡೂ ಕೇವಲ ಆತ್ಮಪ್ರಶಂಸೆಯ ಮಾತುಗಳಲ್ಲ. ಒಂದೆರಡೆಡೆ ತಿದ್ದಿದ್ದರೆ ಇನ್ನೂ ಚೆನ್ನಾಗುತ್ತಿತ್ತು ಅನಿಸಿದರೂ ತಿದ್ದದಿರುವುದರಿಂದ ಕಾವ್ಯ ಎಲ್ಲೂ ಕೆಟ್ಟಿಲ್ಲ ಎಂಬ ಮಾತು ನಿಜ. ಇದು ವರಕವಿ ಲಕ್ಷಣ ಎಂದು ಕಾಣುತ್ತದೆ.

 ಕಾವ್ಯದಲ್ಲಿ ಉನ್ನತಿಯನ್ನು ಸಾಧಿಸಿ ತಮ್ಮ ದೇಶದಿಂದ ಹೊರಗೆ ಹೆಸರುಗಳಿಸಿರುವ ಕವಿಗಳನ್ನು ಲೋಕಕವಿ ಎಂದು ಹೊಗಳುವುದು ಈಚೆಗೆ ವಾಡಿಕೆಯಾಗಿದೆ. ಇತರ ದೇಶಗಳಲ್ಲಿ ಹೆಸರಾಗುವುದು ಕಾವ್ಯಕ್ಕೆ ಅಸ್ವಾಯತ್ತ. ಅದಕ್ಕೆ ಸ್ವಾಯತ್ತ ಅದರ ಉನ್ನತಿ. ಹೊರಗಿನ ಜನಕ್ಕೆ ತಿಳಿಯಲಿಲ್ಲವೆಂದಷ್ಟಕ್ಕೆ ಉನ್ನತಕಾವ್ಯ ಲೋಕಕಾವ್ಯ ಆಗದೆ ನಿಲ್ಲುವುದಿಲ್ಲ. ಉತ್ಕøಷ್ಟಕಾವ್ಯವೆಲ್ಲ ಒಂದಲ್ಲ ಒಂದು ಜನಾಂಗದ ಹೃದಯದ ಲೋಕೋತ್ತರ ಆವಿಷ್ಕರಣ. ಆ ಕಾರಣದಿಂದ ಅದರ ಕವಿ ಲೋಕಕವಿ, ಕುಮಾರವ್ಯಾಸ ಮಹಾಭಾರತದಿಂದ ದಿವ್ಯದೃಷ್ಟಿಯನ್ನು ಪಡೆದು ತನ್ನ ಒಳಗೆ ತನ್ನ ಹೊರಗೆ ಅದರ ಮಹಾಶಕ್ತಿಗಳನ್ನು ಕಂಡು ತನ್ನ ಪಾಲಿಗೆ ಬಂದ ಭಾಗವನ್ನು ತನ್ನ ಜನಕ್ಕೆ ಹಂಚಿದ ಉದೀರ್ಣ ಚೇತನ; ಉದಾತ್ತ ಭಾವುಕ. ಕನ್ನಡ ನಾಡಿನ ಸಂಸ್ಕøತಿ ಭರತವರ್ಷದ ಬೇರೆ ಯಾವ ಭಾಗದ ಸಂಸ್ಕøತಿಗೂ ಸಮವಾಗಿ ಮೇಲೇರಿತ್ತು. ಭರತವರ್ಷದ ಸಂಸ್ಕøತಿ ಬೇರೆ ಯಾವ ದೇಶದ ಸಂಸ್ಕøತಿಗೂ ಕಡಿಮೆಯನ್ನುವ ಕಾರಣವಿಲ್ಲ, ಎಂದು ಕುಮಾರವ್ಯಾಸ ತನ್ನ ಕಾವ್ಯದಿಂದ ಸಿದ್ಧಾಂತ ಮಾಡಿದ್ದಾನೆ. ಈ ಅರ್ಥದಲ್ಲಿ ಈತ ಲೋಕದ ಸಂಸ್ಕøತಿ ಈ ವರೆಗೆ ಮುಟ್ಟಿರುವ ಮಹಾಪೂರವೊಂದರ ಎತ್ತರವನ್ನು ಗುರುತಿಸುವ ಸಾಕ್ಷಿರೇಖೆಯಾಗಿದ್ದಾನೆ.     

(ಎಂ.ವಿ.ಐ.)