ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಮಾರ ಪದ್ಮರಸ

ವಿಕಿಸೋರ್ಸ್ದಿಂದ

ಕುಮಾರ ಪದ್ಮರಸ:- "ಸಾನಂದ ಚರಿತೆ"ಯನ್ನು ಬರೆದ ಕನ್ನಡ ಕವಿ. ಮಾದೇವಿ ಮತ್ತು ಕೆರೆಯ ಪದ್ಮರಸರ ಮಗ. ಕಾಲ ಸು. 1180 ಎಂದು ಕರ್ಣಾಟಕ ಕವಿ ಚರಿತೆಕಾರರು ಹೇಳಿದರೆ ಹದಿಮೂರನೆಯ ಶತಮಾನದ ಆದಿಭಾಗವೆಂದು ಬೇರೆ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಶರಣಕವಿಯೆಂಬ ಪರ್ಯಾಯನಾಮವನ್ನು ಪಡೆದಿದ್ದ ಈತ ವೀರಶೈವ ಕವಿ.

  ಈತನ ಏಕಮಾತ್ರ ಕೃತಿ ಸಾನಂದಚರಿತ್ರೆ ಸ್ಕಾಂದ ಪುರಾಣದಿಂದ ಆಯ್ದುದಾಗಿದೆ. ಪಂಚಾಕ್ಷರೀ ಮಹಿಮೆಯನ್ನು ಬಿತ್ತರಿಸುವುದೇ ಕೃತಿಯ ಉದ್ದೇಶ. ತಂದೆ ಸಂಸ್ಕಂತದಲ್ಲಿ ಬರೆದ ಸಾನಂದಚರಿತ್ರೆಯನ್ನೇ ಮಗ ಕನ್ನಡಿಸಿದನೆಂದೂ ಹೇಳುವವರಿದ್ದಾರೆ. ನಾನಾ ಷಟ್ಪದಿಗಳಲ್ಲಿ ಇದನ್ನು ಬರೆದಿದ್ದರೂ ಕುಸುಮ ಷಟ್ಪದಿ ವಿಶೇಷವಾಗಿದ್ದು ಎರಡು ರಗಳೆಗಳೂ ಇವೆಯೆಂದು ಕವಿಚರಿತೆಕಾರರು ಹೇಳಿದರೆ ಇದರಲ್ಲಿ ಕುಸುಮ ಭಾಮಿನೀ ಷಟ್ಪದಿಗಳನ್ನು ಮಾತ್ರ ಬಳಸಲಾಗಿದೆಯೆಂದು ಡಿ.ಎಲ್. ನರಸಿಂಹಾಚಾರ್ಯರು ಹೇಳಿದ್ದಾರೆ.

 ರಾಘವಾಂಕ ಬಳಸದ ಇತರ ಷಟ್ಪದಿಗಳೂ ಸಾನಂದಚರಿತ್ರೆಯಲ್ಲಿ ದೊರೆಯುತ್ತಿರುವುದು ಅದಕ್ಕೊಂದು ವೈಶಿಷ್ಟ್ಯವನ್ನು ತಂದಿದೆ. ಅಲ್ಲದೆ ಪಂಚಾಕ್ಷರೀ ಮಂತ್ರ ಮಹಿಮೆಯನ್ನು ಪ್ರಪ್ರಥಮವಾಗಿ ಕನ್ನಡದಲ್ಲಿ ಬಣ್ಣಿಸಿದ ಹೆಗ್ಗಳಿಕೆಯೂ ಅದಕ್ಕಿದೆ. ಸಂಕ್ರಮಣ ಯುಗದ ಕವಿಯಾದ ಕುಮಾರ ಪದ್ಮರಸನ ಈ ಕೃತಿಯಲ್ಲಿ ಆ ಯುಗದ ಗತಿಶೀಲತೆಯ ಗುರುತು ಸಿಕ್ಕುತ್ತಿರುವುದೂ ಸಹಜವಾದುದೇ.

 ಒಂಬತ್ತು ಸಂಧಿಗಳನ್ನೂ ಏಳುನೂರ ತೊಂಬತ್ತೊಂದು ಪದ್ಯಗಳನ್ನೂ ಎರಡು ರಗಳೆಗಳನ್ನೂ ಒಳಗೊಂಡಿರುವ ಈ ಕೃತಿಯ ಶೈಲಿ ಸುಕುಮಾರವಾಗಿದೆ. ತಂದೆಯೂ ಗುರುವೂ ಆಗಿದ್ದ ಕೆರೆಯ ಪದ್ಮರಸನ ಪ್ರೇರಣೆಯಿಂದ ರಚಿತವಾದ ಈ ಕಾವ್ಯದಲ್ಲಿ ಕನ್ನಡ ಛಂದಸ್ಸಿನ ದೇಶೀಯ ಪ್ರಭೆ ಪ್ರಕಟವಾಗಿದೆ. ಈ ಕೃತಿ ಇನ್ನೂ ಪ್ರಕಟವಾಗಿಲ್ಲ.

 ಕವಿಯೇ ಹೇಳಿಕೊಂಡಿರುವಂತೆ ಇದು ಪಂಚಾಕ್ಷರೀ ಮಹಿಮೆಯ ಚರಿತೆ:

 ಚರಿತೆ ಸಾನಂದೇಶ | ಚರಿತೆ ಜಗದಾನಂದ | ಚರಿತೆ ಪಂಚಾಕ್ಷರೀ ವರ ಮಹಿಮೆಯ ||

 ಚರಿತೆ ಶಿವಭಕ್ತಿಗಿದು | ಚರಿತೆ ಗುರುನಿಷ್ಠೆಗಿದು | ಚರಿತೆ ಸತ್ಪಥಕೆ ತಾನೆಂತೆಂತೆನೆ ||

 ಮುಂದೆ ಇವನ ವಂಶದಲ್ಲಿಯೇ ಉದಿಸಿದ ಪದ್ಮಣಾಂಕ (ಸು.1385) ಸಾನಂತ ಚರಿತ್ರೆ 'ಶ್ರುತಿಸ್ಮøತಿ ವಿಮಳ ಪುರಾಣಾಗಮೋಪನಿಷತ್ಪ್ರಭೃತಿ ಶಾಸ್ತ್ರಕುಳದ ಸಾರಂದೆಗೆದು ದೃಷ್ಟಕೆ ಬರೆದು ಸರ್ವರಂಯೆ ಕರ್ಣಾಟಮಾಗಿ ಅಲಘು ವರ್ಣಕ ರೀತಿಯಿಂರಸಂ ಮುಸುಕಿಯುಜ್ಜ್ವಳಿಪಂತೆ' ಬರೆದ 'ಸಾನಂದ ಚರಿತಾಖ್ಯಶಾಸ್ತ್ರ' ವೆಂದು ನಿರೂಪಿಸಿದ್ದಾನೆ. ತಂದೆಯ ಪರವಾಗಿ ತ್ರಿಭುವನ ತಾತನೊಡನೆ ವಾದ ಮಾಡಿ ಕುಮಾರ ಪದ್ಮರಸ ವಿಜಯಿಯಾದನೆಂದು ಪದ್ಮಪುರಾಣದಲ್ಲಿ ಹೇಳಿದೆ. ವೇದಾಗಮ ಪುರಾಣಗಳ ಜ್ಞಾನವೇ ಸಾಕಾರವಾದಂತಿದ್ದ ಘನ ಪಂಡಿತನೂ ಜ್ಞಾನ ರತ್ನಾಕರನೂ ಆಗಿದ್ದ ಪದ್ಮರಸ ತನ್ನ ಕೃತಿ ಪದ್ಮಣಾಂಕ ಹೇಳಿರುವಂತೆ 'ಸಾನಂದ ಚರಿತಾಖ್ಯಶಾಸ್ತ್ರ' ವಾಗಬೇಕೆಂದು ಬಯಸಿರಬಹುದಾದರೂ ಶಾಸ್ತ್ರವೂ ಸಾಹಿತ್ಯವಾಗುವಂತೆ' ರಸಂ ಮುಸುಕಿಯುಜ್ಜ್ವಳಿಪಂತೆ' ಕೃತಿರಚನೆ ಮಾಡಿ ಕೃತಕೃತ್ಯನಾಗಿರುವನೆಂದು ಹೇಳಬಹುದು. ಇದಕ್ಕೆ ನಿದರ್ಶನವಾಗಿ ಸಾನಂದ ನರಕಕ್ಕೆ ಹೋದುದರ ವರ್ಣನೆಯನ್ನೂ ಪಂಚಾಕ್ಷರೀ ಮಹಿಮೆಯ ನಿರೂಪಣೆಯನ್ನೂ ನೋಡಬಹುದಾಗಿದೆ. ಧರೆಯೊಳು ಒಳುಗನ್ನಡದಿ ಪಸರಿಸಲೆಂದು ಸ್ತ್ರೀಬಾಲಸಾಧ್ಯವಾಗುವಂತೆ ಕೃತಿರಚನೆ ಮಾಡುವ ಸಂಕಲ್ಪದಿಂದ ಹೊರಟ ಕುಮಾರ ಪದ್ಮರಸ ಉದ್ದೇಶಿತ ಸಂಕಲ್ಪದಲ್ಲಿ ಬಹುಮಟ್ಟಿಗೆ ಸಫಲನಾಗಿರುವನೆಂದು ಹೇಳಬಹುದು.         

(ಎಸ್.ಪಿ.ಯು.)