ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಸುಮ ರೋಗ
ಕುಸುಮ ರೋಗ
ಗಾಯವಾದಲ್ಲಿ ರಕ್ತ ಒಡನೆಯೇ ಹೆಪ್ಪುಗಟ್ಟದೆ ದೀರ್ಘಕಾಲ ರಕ್ತಸ್ರಾವವಾಗಲು ಕಾರಣವಾದ ಆನುವಂಶಿಕ ವ್ಯಾಧಿ (ಹೀಮೋಫೀಯ) ರಕ್ತದಲ್ಲಿ ಸ್ವಾಭಾವಿಕವಾಗಿ ಇರಬೇಕಾದ ಕುಸುಮರೋಗನಿವಾರಣಾ ಗ್ಲಾಬ್ಯುಲಿನ್ (ಏಂಟಿಹೀಮೋಫೀಲಿಕ್ ಗ್ಲಾಬ್ಯುಲಿನ್) ಕೊರತೆಯೇ ಈ ರೋಗದ ಕಾರಣ. ಇಂಥ ವಸ್ತು ಇರುವ ರಕ್ತವನ್ನು ಒಂದು ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಿ ಇಟ್ಟರೆ ಅದು 5-10 ಮಿನಿಟುಗಳ ಅಂತರದಲ್ಲಿ ಹೆಪ್ಪುಗಟ್ಟುತ್ತದೆ. ಕುಸುಮ ರೋಗಿಗಳಲ್ಲಿ ಅದೇ ರೀತಿ ಮಾಡಿದರೆ ರಕ್ತ ಅರ್ಧಗಂಟೆಯಾದರೂ ಹೆಪ್ಪಾಗದೆ ಅನೇಕ ಗಂಟೆಗಳಾದರೂ ಹೆಪ್ಪುಗಟ್ಟದೆ ಇರಬಹುದು. ಆದರೂ ಆ ರಕ್ತದಲ್ಲಿ ತಕ್ಕಷ್ಟು ರಕ್ತದ ಸೂಕ್ಷ್ಮತರ ಕಣಗಳು ಇದ್ದಲ್ಲಿ, ಅದಕ್ಕೆ ನೂತನ ರಕ್ತದ್ರವವನ್ನು ಸೇರಿಸಿದರೆ ಅದು ಹೆಪ್ಪುಗಟ್ಟುತ್ತದೆ. ರಕ್ತದ ಸೂಕ್ಷ್ಮತರ ಕಣಗಳು ಈಗ ವಿಳಂಬವಿಲ್ಲದೆ ಛಿದ್ರವಾಗಿ ಹೆಪ್ಪುಗಟ್ಟುವಿಕೆಯ ವಿಧಾನವನ್ನು ಪ್ರಾರಂಭಿಸುತ್ತವೆ. ಕುಸುಮ ರೋಗಿಗಳಲ್ಲಿ ರಕ್ತದ ಸೂಕ್ಷ್ಮತರ ಕಣಗಳು ಬಹಳ ನಿಧಾನವಾಗಿ ಛಿದ್ರಗೊಳ್ಳುವಂತೆ ಕಾಣುತ್ತದೆ. ರಕ್ತ ಸ್ವಾಭಾವಿಕವಾಗಿ ಹೆಪ್ಪುಗಟ್ಟಲಾರದ ಈ ಸ್ಥಿತಿ ಕುಸುಮರೋಗಿಗಳನ್ನು ಬಹಳ ಅನುಕೂಲತೆಗೆ ಎಡೆಮಾಡಿದೆ. ಅಗಣನೀಯ ಕೊಯ್ತ ಅಥವಾ ಅಗೆಯುವುದು, ಕಾಲ್ಚೆಂಡು ಆಡುವಂಥ ಸಾಧಾರಣ ಚಟುವಟಿಕೆಯಲ್ಲಿ ಆಗುವ ಘಾತ ಸಹ ಹತೋಟಿಗೆ ಬಾರದೆ ಪ್ರಾಯಶಃ ದಿನಗಟ್ಟಲೆ ಆಗುವ ರಕ್ತಸ್ರಾವದಿಂದ ಅವರು ನರಳಬೇಕಾಗುತ್ತದೆ. ಇಂಥವರಲ್ಲಿ ಶಸ್ತ್ರವೈದ್ಯವಿರಲಿ, ದಂತನಿರ್ಮೂಲನ ಸಹ ಪ್ರಾಣಾಂತಿಕವೇ ಆಗಬಹುದು. ದಂತವೈದ್ಯರು ಸ್ವಾಭಾವಿಕವಾಗಿಯೇ ಕುಸುಮ ರೋಗಗಳಿಗೆ ದಂತರೋಗ ಚಿಕಿತ್ಸೆ ಮಾಡಲು ಹಿಂಜರಿಯುತ್ತಾರೆ. ಅಂಥ ರೋಗಿಗಳಲ್ಲಿ ಹಲ್ಲು ಹುಳುಕು ಬೀಳುವುದು ಸಾಮಾನ್ಯ. ಬಹು ಜನರಿಗೆ ಸಾಧಾರಣವಾಗಿ ಅಗಣನೀಯವಾಗಿಯೇ ಇರುವ ಸಂದರ್ಭ ಕೂಡ ಯಾವ ಕ್ಷಣದಲ್ಲಿಯಾದರೂ ಪ್ರಾಣಾಂತಿಕವಾಗಬಹುದಾದ್ದರಿಂದ ಕುಸುಮರೋಗಿ ಸದಾ ಕಾಲವು ಘಾಸಿಗೆ ಒಳಪಟ್ಟವನೇ. ಓಡಾಡುವ ಹುಡುಗ ಬಿದ್ದು ಮಂಡಿ ಮೊಳಕೈಯನ್ನು ಒಡೆದುಕೊಂಡರೆ ಆ ಕೀಲುಗಳಲ್ಲಿ ಯಥೇಚ್ಛವಾಗಿ ರಕ್ರ ಸ್ರಾವವಾಗುತ್ತದೆ. ಶೈಶವದಿಂದ ಪದೇ ಪದೇ ಆಗುವ ಈ ರಕ್ತಸ್ರಾವ ಪ್ರಸಂಗಗಳು ಕೀಲುಗಳ ದೀರ್ಘಕಾಲಿಕ ಊತವನ್ನುಂಟು ಮಾಡಿ, ಪ್ರೌಢಾವಸ್ಥೆಗೆ ಬರುವುದರೊಳಗೆ ಈ ಪೀಡೆನೆಯ ಫಲಗಳು ಅಂಗವಿಕಲತೆಯಾಗಿ ಪರಿಣಮಿಸುತ್ತವೆ. ಕುಸುಮ ರೋಗಿಗಳು ಸಾಮಾನ್ಯವಾಗಿ ಅಲ್ಪಾಯುಗಳು. ಮಕ್ಕಳನ್ನು ಪಡೆಯುವಷ್ಟು ದೀರ್ಘ ವಯಸ್ಕರಾಗುವುದು ವಿರಳ. ಇದರ ಫಲವಾಗಿ ಮನೆತನದಿಂದ ಮತ್ತು ಜನತೆಯಿಂದಲೇ ಈ ರೋಗ ಅದೃಶ್ಯವಾಗುವ ಸಂದರ್ಭ ಸದಾ ಇರುತ್ತದೆ. ಹೀಗಾಗಿ ಕುಸುಮರೋಗ ಸಾಮಾನ್ಯವಾಗಿ ಮೂರು ತಲೆಮಾರುಗಳಲ್ಲಿ ನಿರ್ನಾಮವಾಗಬೇಕು. ಆದರೆ ಅನೇಕವೇಳೆ ಕುಸುಮರೋಗರಹಿತ ಮನೆತನಗಳಲ್ಲಿ ಇದ್ದಕಿದ್ದಂತೆ ಈ ರೋಗ ಮೂಡುವುದರಿಂದ ಜನತೆಯಲ್ಲಿ ಈ ರೋಗದ ಮರುಸೃಷ್ಟಿ ಆಗುತ್ತಲೇ ಇರುತ್ತದೆ. ಕುಸುಮರೋಗದ ಈ ಹೊಸ ಉದ್ಭವ ಮಿಕ್ಕ ಆನುವಂಶಿಕ ರೋಗಗಳ ಉದ್ಭವಕ್ಕಿಂತ ಹೆಚ್ಚಾಗಿ ಕಾಣಬರುತ್ತದೆ.
ಕುಸುಮರೋಗ ಪಾಶ್ಚಾತ್ಯರಲ್ಲಿ ಬೈಬಲ್ ಕಾಲದಿಂದಲೂ ಗಣನೆಗೆ ಬಂದಿದೆ. ಹೀಬ್ರೂ ಗ್ರಂಥಕಾರರ ಟಾಲ್ಮುಡ್ ಗ್ರಂಥದಲ್ಲಿ, ಶಿಶ್ನದ ಮುಂದೊಗಲನ್ನು ತೆಗೆಯುವ ಕರ್ಮ ಸಂಬಂಧದಲ್ಲಿ ಈ ರೋಗ ಉಕ್ತವಾಗಿದೆ. ಆಯುರ್ವೇದದಲ್ಲಿ ಇದನ್ನು ವಿಶೇಷರೀತಿಯ ರಕ್ತಸ್ರಾವವೆಂದು ಪರಿಗಣಿಸಿರುವುದು ಕಾಣುವುದಿಲ್ಲ. ಅಮೆರಿಕ ಸಂಯುಕ್ತಸಂಸ್ಥಾನದ ಫಿಲಡೆಲ್ಪಿಯದ ಜಾನ್.ಸಿ. ಆಟ್ಟೊ ಎಂಬುವನು ಮೊದಲಬಾರಿಗೆ (1803) ಈ ರೋಗದ ಪರಿಮಿತಿಯನ್ನು- ಕೆಲವು ಮನೆತನಗಳಲ್ಲಿ ಗಂಡಸರಲ್ಲಿ ಮಾತ್ರ ಕಾಣಬರುವ ಆದರೆ ತಾವೇ ನಿರುಪದ್ರವಿಗಳಾದ ಹೆಂಗಸರಿಂದ ಅವರ ಗಂಡುಮಕ್ಕಳಿಗೆ ದತ್ತಕವಾಗುವ ರಕ್ತಸ್ರಾವಸ್ವಭಾವ ಎಂದೂ ಖಚಿತಪಡಿಸಿದ್ದಾನೆ. ಸಕಾರಣವಾಗಿಯೇ ಇದನ್ನು ರಕ್ತಸ್ರಾವಿಗಳ ವ್ಯಾಧಿ ಎಂದು ಕರೆದಿದ್ದಾರೆ. ಯೂರೋಪಿನಲ್ಲಿ 19ನೆಯ ಶತಮಾನದ ಕೊನೆ 20ನೆಯ ಶತಮಾನದ ಪ್ರಾರಂಭ ಕಾಲದಲ್ಲಿದ್ದು ಒಳಸಂಬಂಧವನ್ನೇ ಬೆಳಸುತ್ತಿದ್ದ ರಾಜಮನೆತನಗಳಲ್ಲಿ ಈ ರೋಗ ಅಧಿಕವಾಗಿ ಕಾಣಬಂದದ್ದರಿಂದ ಇದನ್ನು ರಾಜರೋಗವೆಂದೂ ಕರೆದಿದ್ದಾರೆ. ಈ ರೋಗ ಆನುವಂಶಿಕವೇ ಆಗದೆ ಒಂದು ಮನೆತನದಲ್ಲಿ ಮೊಟ್ಟಮೊದಲಿಗೆ ಇದ್ದಕಿದ್ದ ಹಾಗೆ ಮೂಡಬಹುದು. ಆನುವಂಶಿಕವೇ ಆಗಿ ಆ ಸಂಸಾರದ ಗಂಡುಮಕ್ಕಳಲ್ಲಿ ರೋಗ ಕಂಡುಬಂದಿದ್ದರೆ ಅದು ತಾಯಿಯ ಅಪ್ಪನೋ ಅಪ್ಪನ ಸಹೋದರರೋ ಸೋದರಮಾವಂದಿರೋ ಅಥವಾ ಅವಳ ಸಹೋದರರೋ ಈ ರೋಗದಿಂದ ಪೀಡಿತರಾಗಿರುವ ಮನೆತನದಿಂದ ಎನ್ನುವುದು ಸ್ಪಷ್ಟ. ಆ ತಾಯಿಗೆ ಮಾತ್ರ ಯಾವ ರಕ್ತಸ್ರಾವವೈಚಿತ್ರ್ಯವೂ ಇರುವುದಿಲ್ಲ. ಕುಸುಮರೋಗ ತಂದೆ ಮತ್ತು ನಿರೋಗಿ ತಾಯಿಯ ಗಂಡುಮಕ್ಕಳೆಲ್ಲ ಮತ್ತು ಅವರ ಮಕ್ಕಳು ಕುಸುಮ ರೋಗರಹಿತರಾಗಿಯೇ ಇರುತ್ತಾರೆ.
ಉಪಶಮನ : ಕುಸುಮರೋಗಿಗಳ ಗಾಯದಿಂದ ಆಗುವ ರಕ್ತಸ್ರಾವ ಥ್ರಾಂಬಿನ್ ಥ್ರಾಂಬೋಪ್ಲಾಸ್ಟಿನ್ ಅಥವಾ ಇದನ್ನುಳ್ಳ ಮಂಡಲ ಹಾವಿನವಿಷವನ್ನು (ಅದಕ್ಕೆ 10,000 ದಷ್ಟೂ ಇನ್ನೂ ಹೆಚ್ಚಾಗಿಯೋ ನೀರು ಬೆರೆಸಿರುವುದು) ಸ್ಥಳಿಕವಾಗಿ ಉಪಯೋಗಿಸಿದರೆ ನಿಂತುಕೊಳ್ಳುತ್ತದೆ. ಒಗ್ಗುವ ರೋಗರಹಿತರ ನೂತನ ರಕ್ತ ಅಥವಾ ನೂತನ ರಕ್ತದ್ರವವನ್ನು ಬೇಕಾದಷ್ಟು ಸಾರಿ ಚುಚ್ಚು ಕ್ರಮದಲ್ಲಿ ಕೊಟ್ಟಲ್ಲಿ, ರೋಗಿಯಲ್ಲಿ ಲೋಪವಾಗಿರುವ ಕುಸುಮರೋಗನಿವಾರಣಾ ಗ್ಲಾಬ್ಯುಲಿನ್ ಒದಗುತ್ತದೆ ಮತ್ತು ರಕ್ತಹೆಪ್ಪುಗಟ್ಟುವಿಕೆಯ ಕಾಲವನ್ನು ಕಡಿಮೆ ಮಾಡಿ ರಕ್ತಸ್ರಾವದ ಉಪಶಮನಕ್ಕೆ ಸಹಾಯವಾಗುತ್ತದೆ. ಇದರ ಮುಖ್ಯ ಘಟಕವಾದ ಕುಸುಮರೋಗ ನಿವಾರಣಾ ಗ್ಲಾಬ್ಯುಲಿನನ್ನು ಹಂದಿ ಮತ್ತು ದನಗಳ ರಕ್ತದಿಂದ ಬೇರ್ಪಡಿಸಿ, ಚುಚ್ಚುಕ್ರಮದಲ್ಲಿ 100ರಿಂದ 300 ಮಿಲಿಗ್ರಾಂ ಪ್ರಮಾಣದಲ್ಲಿ ಕೊಟ್ಟರೆ ಪರಿಣಾಮಕಾರಿಯಾಗಿರುವಷ್ಟು ಶುದ್ಧಪಡಿಸಿ ಇಟ್ಟುಕೊಳ್ಳಬಹುದು. ಪರಿಣಾಮಖಾತರಿಯಾದ ವಸ್ತು ಹೆಚ್ಚಿಗೆ ಒದಗುವ ಹಾಗಿದ್ದರೆ, ಮಧುಮೂತ್ರರೋಗಿ ತನ್ನ ರಕ್ತದ ಶರ್ಕರಪ್ರಮಾಣವನ್ನು ಕಡಿಮೆಮಾಡಲು ಇನ್ಸುಲಿನ್ ಮದ್ದನ್ನು ಸ್ವತಃ ಚುಚ್ಚು ಕ್ರಮದಿಂದ ತೆಗದುಕೊಳ್ಳುವಂತೆಯೇ ಕುಸುಮರೋಗಿಯೂ ತನಗೆ ಬೇಕಾದಾಗ ಬೇಕಾದಷ್ಟು ವಸ್ತುವನ್ನು ಸ್ವತಃ ಚುಚ್ಚು ಕ್ರಮದಿಂದ ತೆಗದುಕೊಳ್ಳಬಹುದು. ಆದರೆ ಈ ವಸ್ತು ದೇಹಕ್ಕೆ ಹೊರತಾದ ಸಸಾರಜನಕ ಪದಾರ್ಥವಾದ್ದರಿಂದ ಅದನ್ನು ತೆಗೆದುಕೊಂಡಾಗ ರೋಗಿಯ ದೇಹದಲ್ಲಿ ಅದಕ್ಕೆ ಪ್ರತಿರೋಧಕ ವಸ್ತುಗಳು ಉತ್ಪತ್ತಿಯಾಗುವ ಅವಕಾಶವಿದೆ. ಹಾಗಾದಲ್ಲಿ ಚುಚ್ಚು ಕ್ರಮದಿಂದ ತೆಗದುಕೊಂಡ ಕುಸುಮರೋಗನಿವಾರಣ ಗ್ಲಾಬ್ಯುಲಿನ್ ಅದರ ಉಪಯುಕ್ತತೆಯನ್ನು ಕಳೆದುಕೊಳ್ಳುವುದೇ ಅಲ್ಲದೆ ಪ್ರಾಣಾಂತಕವಾಗುವಷ್ಟು ಕಂಟಕಕಾರಿಯೂ ಆಗಬಹುದು. ಆದ್ದರಿಂದ ಕುಸುಮರೋಗ ನಿವಾರಣ ಗ್ಲಾಬ್ಯುಲಿನ್ನನ್ನು ಸರ್ವೇಸಾಧಾರಣವಾಗಿ ತೆಗೆದುಕೊಳ್ಳುವ ಬದಲು ಪ್ರಾಣಸಂರಕ್ಷಣ ಸನ್ನಿವೇಶದಲ್ಲಿ ಮಾತ್ರ ತೆಗೆದುಕೊಳ್ಳುವುದು ಉತ್ತಮ.
ಕುಸುಮರೋಗಿಗಳಲ್ಲಿ ರಕ್ತಸ್ರಾವ ಸ್ವಭಾವ ಮೇಲೆಯೇ ಹೇಳಿದಂತೆ ಸ್ವತಃ ನಿರುಪದ್ರವಿಗಳಾದ ಹೆಂಗಸರಿಂದ ಅವರ ಗಂಡುಸಂತಾನಗಳಿಗೆ ದತ್ತಕವಾಗುತ್ತದೆ. ಈ ಆನುವಂಶಿಕತೆ ಮೆಂಡೆಲನ ಆನುವಂಶಿಕ ತತ್ತ್ವಗಳಿಗೆ ಪೂರ್ಣಾನುಸಾರವಾಗಿ ಇದ್ದು ಅನೇಕ ತಲೆಮಾರುಗಳಲ್ಲಿ ಕಂಡುಬರಬಹುದು. ಕುಸುಮರೋಗ ಸ್ವಭಾವ ರೋಗಿಷ್ಟ ವ್ಯಕ್ತಿಯಲ್ಲಿ ಘಿ ಕ್ರೋಮೊಸೋಮಿನಲ್ಲಿ ಒಯ್ಯಲ್ಪಡುವ ಅಪ್ರಮುಖ ಗುಣ. ಮತ್ತು ಜೊತೆಗಾರ ಕ್ರೋಮೊಸೋಮಿನಲ್ಲಿ ಅದಕ್ಕೆ ವ್ಯತಿರಿಕ್ತ ಪ್ರಮುಖ ಗುಣದ ಗೈರುಹಾಜರಿಯಲ್ಲಿ ಮಾತ್ರ ಈ ಗುಣ ವ್ಯಕ್ತವಾಗುತ್ತದೆ. ವ್ಯತಿರಿಕ್ತ ಪ್ರಮುಖ ಗುಣಹೀನವಾದ ಙ ಕ್ರೋಮೊಸೋಮೇ ಜೊತೆಗಾರ ಕ್ರೋಮೊಸೋಮಾಗಿರುವ ಗಂಡಸರಲ್ಲಿ ಮಾತ್ರ ಕುಸುಮರೋಗ ವ್ಯಕ್ತವಾಗಿರುವುದಕ್ಕೆ ಕಾರಣ. ರೋಗವಾಹಕ ಸ್ತ್ರೀಯಲ್ಲಿ ಜೊತೆಗಾರ ಕ್ರೋಮೊಸೋಮ್ ಆದ ಇನ್ನೊಂದು ಘಿ ಕ್ರೋಮೊಸೋಮ್ ಪ್ರಮುಖ ಗುಣವನ್ನು ಹೊಂದಿರುವುದರಿಂದ ಕುಸುಮ ರೋಗ ಆಕೆಯಲ್ಲಿ ವ್ಯಕ್ತವಾಗಿರದೆ ಅವ್ಯಕ್ತಸ್ಥಿತಿಯಲ್ಲಿರುತ್ತದೆ. ಅಪೂರ್ವವಾಗಿ ಸ್ತ್ರೀಯರಲ್ಲಿ ಜೋಡಿಯ ಎರಡು ಕ್ರೋಮೊಸೋಮಗಳು ಅಪ್ರಮುಖ ಗುಣವನ್ನೇ ಹೊಂದಿರಬಹುದು. ಅಂಥ ಸಂದರ್ಭದಲ್ಲಿ ಸ್ತ್ರೀಯೂ ರಕ್ತಸ್ರಾವ ಸ್ವಭಾವವನ್ನು ವ್ಯಕ್ತಪಡಿಸಬೇಕು.
ಕುಸುಮರೋಗದ ಆನುವಂಶಿಕತೆಯನ್ನು ಈ ಕೆಳಕಂಡ ನಕ್ಷೆಗಳಿಂದ ಅರಿಯಬಹುದು.
ಚಿತ್ರ-ಉದಾಹರಣೆ-1
2 ಮತ್ತು 4ನೆಯ ಚಿತ್ರಗಳಿಂದ ತಂದೆ ನಿರೋಗಿಯಾಗಿರಲಿ ಕುಸುಮರೋಗಿಯಾಗಿರಲಿ ವಾಹಕಸ್ತ್ರೀಯ ಗಂಡುಮಕ್ಕಳ ಪೈಕಿ ಅರ್ಧಜನ ಕುಸುಮರೋಗಿಯಾಗಿಯೇ ತೀರುತ್ತಾರೆ. ಉಳಿದ ಅರ್ಧಜನ ನಿರೋಗಿಗಳಾಗಿರುತ್ತಾರೆ. ತಂದೆ ನಿರೋಗಿಯಾಗಿದ್ದರೆ ಹೆಣ್ಣು ಮಕ್ಕಳ ಪೈಕಿ ಅರ್ಧಜನ ತಾಯಂದಿರಂತೆಯೇ ವಾಹಕರಾಗಿರುತ್ತಾರೆ. ಉಳಿದ ಅರ್ಧಜನ ನಿರೋಗಿಗಳಾಗಿರುತ್ತಾರೆ. ತಂದೆಯೂ ಕುಸುಮರೋಗಿಯಾಗಿದ್ದರೆ ಹೆಣ್ಣುಮಕ್ಕಳಲ್ಲೆಲ್ಲ ರೋಗಗುಣ ಇದ್ದು ಲೆಕ್ಕಾಚಾರದ ಪ್ರಕಾರ ಅರ್ಧಜನರಲ್ಲಿ ಅದು ಅವ್ಯಕ್ತವಾಗಿದ್ದು ಅವರು ವಾಹಕರಾಗಿಯೂ ಉಳಿದರ್ಧ ಜನರಲ್ಲಿ ಅವರು ಹೆಂಗಸರಾದಾಗ್ಯೂ ಕುಸುಮರೋಗ ವ್ಯಕ್ತವಾಗಿರಬೇಕಾಗಿರುವುದೂ ಕಾಣಬಹುದು. ಆದರೆ ಇಂಥ ಸ್ತ್ರೀ ಕುಸುಮರೋಗಿಗಳ ಹುಟ್ಟುವುದೇ ಅಪೂರ್ವ. ಏಕೆಂದರೆ ಅಂಥ ಸಂತತಿಗಳು ಸಾಧಾರಣವಾಗಿ ಗರ್ಭಧಾರಣ ಕಾಲದಲ್ಲಿಯೇ ನಾಶವಾಗಿ ಬಿಡುತ್ತವೆ. ಹಾಗೆ ಹುಟ್ಟಿದರೆ ಚಿಕ್ಕ ವಯಸ್ಸಿನಲ್ಲಿ ಕುಸುಮರೋಗದಿಂದಲೋ ಬೇರೆ ರೋಗದಿಂದಲೋ ಮರಣಹೊಂದುತ್ತಾರೆ. 3ನೆಯ ಚಿತ್ರ ತೋರಿಸುವಂತೆ ಕುಸುಮರೋಗಿ ತಂದೆಯಿಂದ ನಿರೋಗಿ ತಾಯಿಯಲ್ಲಿ ಹುಟ್ಟುವ ಗಂಡುಮಕ್ಕಳೆಲ್ಲ ನಿರೋಗಿಗಳಾಗಿಯೂ ಹೆಣ್ಣು ಮಕ್ಕಳೆಲ್ಲ ವಾಹಕವಾಗಿಯೂ ಹುಟ್ಟುವುದನ್ನು ಕಾಣಬಹುದು. ಯೂರೋಪಿನ ರಾಜಮನೆತನಗಳಲ್ಲಿ ಒಳಸಂಬಂಧವೇ ರೂಢಿಯಾಗಿದ್ದುದರಿಂದ ರೋಗಿ ಗಂಡು ವಾಹಕ ಹೆಣ್ಣುಗಳ ಮಿಲನವೇ ಸಾಮಾನ್ಯವಾಗಿದ್ದು ಸಂತತಿಯಲ್ಲಿ ಅನೇಕ ತಲೆಮಾರುಗಳಾದರೂ ಕುಸುಮರೋಗ ವ್ಯಕ್ತವಾಗುತ್ತಿದ್ದುದನ್ನು 3 ನೆಯ ಚಿತ್ರದಿಂದ ಅರಿಯಬಹುದು. ಕುಸುಮರೋಗ ಅಂಗಸಂಬಂಧವಾದ ಅಪ್ರಮುಖ ಸ್ವಭಾವದ ಆನುವಂಶಿಕತೆ ಪಡೆದಿರುವ ವಿಚಾರವೂ ಅಂತೆಯೇ ಮನದಟ್ಟಾಗುತ್ತದೆ.
ಕುಸುಮರೋಗದಂತೆಯೇ ಹೆಚ್ಚು ಕಡಿಮೆ ಆನುವಂಶಿಕ ರಕ್ತಸ್ರಾವ ಸ್ವಭಾವ ಪ್ಯಾರಾಹೀಮೋಫೀಲಿಯಾ ಎ (ಕ್ಸಿಸ್ಮಸ್ ರೋಗ) ಮತ್ತು ಪ್ಯಾರಾಹೀಮೋಫೀಲಿಯಾ ಬಿ ಎಂಬ ರೋಗಗಳಲ್ಲಿ ಕಾಣಬರುತ್ತದೆ. ಪ್ಯಾರಾಹೀಮೋಫೀಯಾಗಳಲ್ಲಿ ಕುಸುಮರೋಗ ನಿವಾರಣಗ್ಲಾಬ್ಯುಲಿನ್ ಸ್ವಾಭಾವಿಕವಾಗಿ ಇರುವಂತೆಯೇ ಇರುತ್ತದೆ. ಆದರೆ ರಕ್ತದಲ್ಲಿ ಅದರಂತೆಯೇ ಸ್ವಾಭಾವಿಕವಾಗಿ ಇದ್ದು ರಕ್ತ ಹೆಪ್ಪುಗಟ್ಟುವುದಕ್ಕೆ ಸಹಾಯಕವಾಗಿರುವ ಪಿ.ಟಿ.ಸಿ. ಎಂಬ ವಸ್ತು ಪ್ಯಾರಾಹೀಮೋಫೀಲಿಯಾ ಎ ಯಲ್ಲಿಯೂ, ಪಿ.ಟಿ.ಎ. ಎಂಬ ವಸ್ತು ಪ್ಯಾರಾಹೀಮೋಫೀಲಿಯಾ ಬಿ ಯಲ್ಲಿಯೂ ಲೋಪವಾಗಿರುತ್ತದೆ. ಆದ್ದರಿಂದ ಇವುಗಳಲ್ಲಿ ರಕ್ತಸ್ರಾವ ಸ್ವಭಾವ ಕಂಡುಬರುತ್ತದೆ. ಪ್ಯಾರಾಹೀಮೋಫೀಲಿಯಾ ಎಯ ಆನುವಂಶಿಕತೆ ಕುಸುಮರೋಗದಂತೆಯೇ ಇರುವುದು. ಇದನ್ನು ಕ್ರಿಸ್ಮಸ್ ಎಂಬಾತನಲ್ಲಿ ಮೊದಲಿಗೆ ಗುರುತಿಸಿದಾಗ ಈ ರೋಗಕ್ಕೆ ಕ್ರಿಸ್ಮಸ್ ರೋಗವೆಂದು ಹೆಸರಾಯಿತು. ಪ್ಯಾರಾಹೀಮೋಫೀಯಾ ಬಿ ತಂದೆ ತಾಯಿ ಇಬ್ಬರಿಂದಲೂ ದತ್ತಕವಾಗುವ ರೋಗ. ಪ್ಯಾರಾಹೀಮೋಫೀಲಿಯಾಗಳು ಕುಸುಮರೋಗದಷ್ಟು ಹೇರಳವಾಗಿಯಾಗಲಿ ಅದರಷ್ಟು ಘಾಸಿಮಾಡುವಂತೆಯಾಗಲಿ ಸಾಮಾನ್ಯವಾಗಿ ಇರುವುದಿಲ್ಲ.
(ಎಸ್.ಆರ್.ಆರ್.)