ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೃಷಿ ಅರ್ಥಶಾಸ್ತ್ರ
ಕೃಷಿ ಅರ್ಥಶಾಸ್ತ್ರ
ಅರ್ಥಶಾಸ್ತ್ರದ ನಿಯಮಗಳನ್ನು ಕೃಷಿಯ ಅಭಿವೃದ್ಧಿಗೆ ಅನ್ವಯಿಸುವ ಸುಸಂಬದ್ಧ ವಿಚಾರ ಸಂಕಲನ. ಕೃಷಿ ಮಾನವ ಸಮಾಜದ ಪ್ರಾಚೀನ ಹಾಗೂ ಮೂಲಭೂತ ಉದ್ಯಮ. ಜನತೆಗೆ ಆಹಾರೋತ್ಪನ್ನಗಳನ್ನೂ ಕೈಗಾರಿಕೆಗಳಿಗೆ ಕಚ್ಚಾ ಸಾಮಗ್ರಿಗಳನ್ನೂ ಒದಗಿಸುವ ಕೃಷಿ ಉದ್ಯಮ ವಿಶ್ವದ ಆರ್ಥಿಕ ಜೀವನದಲ್ಲಿ ಇಂದಿಗೂ ಪಾರಮ್ಯ ಹೊಂದಿದೆ.
ಮಾನವ ಕೃಷಿಯನ್ನು ಕಂಡುಹಿಡಿದ ಮೇಲೆ ಅನೇಕ ಶತಮಾನಗಳ ಕಾಲ ಕೃಷಿಯ ಮೂಲಧ್ಯೇಯ ಸರಳವಾಗಿತ್ತು. ತನ್ನ ಕುಟುಂಬದ ಜನರ ನಿರ್ವಹಣೆಗಾಗಿ ಆಹಾರವನ್ನು ಉತ್ಪಾದಿಸುವುದು ಪ್ರತಿ ರೈತನ ಪ್ರಧಾನ ಉದ್ದೇಶವಾಗಿತ್ತು. ಆದರೆ ಈಗ ಕೈಗಾರಿಕಾ ಕ್ರಾಂತಿ, ವಾಣಿಜ್ಯದ ಬೆಳೆವಣಿಗೆ ಮತ್ತು ಸಾರಿಗೆಸಂಪರ್ಕಗಳ ಅಭಿವೃದ್ಧಿಯ ದೆಸೆಯಿಂದಾಗಿ ಕೃಷಿಯ ಮೂಲಧ್ಯೇಯ ಬದಲಾಗಿದೆ. ಕೃಷಿಯ ವಾಣಿಜ್ಯವಾಗಿದೆ. ಆಹಾರ ಧಾನ್ಯಗಳು ಮತ್ತಿತರ ಕೃಷಿ ಉತ್ಪನ್ನಗಳನ್ನು ಅನುಕೂಲತಮ ಮಟ್ಟದಲ್ಲಿ ಉತ್ಪಾದಿಸಿ ಮಾರುಕಟ್ಟೆಗೆ ಸಾಗಿಸಿ ಅವುಗಳ ಮಾರಾಟದ ಮೂಲಕ ಗರಿಷ್ಠ ಆರ್ಥಿಕ ಲಾಭ ಪಡೆಯುವುದು ಇಂದು ಕೃಷಿಗಾರರ ಮುಖ್ಯ ಉದ್ದೇಶವಾಗಿದೆ. ಇತರ ಉದ್ಯಮಗಳ ಸಾಧನಸಂಪತ್ತುಗಳಂತೆ ಅತಿ ವಿರಳವಾಗಿರುವ ಕೃಷಿಯ ಸಾಧನಸಂಪತ್ತುಗಳನ್ನು ಅತ್ಯಂತ ದಕ್ಷತೆಯಿಂದ ಹಾಗೂ ಅತ್ಯಂತ ಲಾಭದಾಯಕವಾಗಿ ಉಪಯೋಗಿಸಿಕೊಳ್ಳುವುದು ಹೇಗೆಂಬುದನ್ನು ಕೃಷಿ ಅರ್ಥಶಾಸ್ತ್ರ ಅಭ್ಯಸಿಸುತ್ತದೆ.
ಕೈಗಾರಿಕೋದ್ಯಮಗಳ ಬೆಳೆವಣಿಗೆ ಹಾಗೂ ನಗರೀಕರಣ ಅವ್ಯಾಹತವಾಗಿ ಆಗುತ್ತಿರುವುದರಿಂದ ಕೃಷಿ ಕ್ಷೇತ್ರದಿಂದ ಹೊರಗಿರುವವರ ಸಂಖ್ಯೆ ಏರುತ್ತಿದೆ. ಆ ಜನಕ್ಕೆಲ್ಲ ಆಹಾರ ವಸ್ತುಗಳನ್ನೂ ಕೈಗಾರಿಕಾ ಉದ್ಯಮಗಳಿಗೆ ಕಚ್ಚಾಸಾಮಗ್ರಿಗಳನ್ನೂ ಹೆಚ್ಚು ಹೆಚ್ಚಾಗಿ ಕೃಷಿಕ್ಷೇತ್ರ ಒದಗಿಸಬೇಕಾಗುತ್ತದೆ. ಹಿಗ್ಗುತ್ತಿರುವ ಈ ಬೇಡಿಕೆಗಳನ್ನು ಪೂರೈಸಲು ಕೃಷಿ ಉದ್ಯಮವನ್ನು ಆಧುನಿಕಗೊಳಿಸಿ ಈ ಕ್ಷೇತ್ರದಲ್ಲಿ ಅನುಕೂಲತಮ ಮಟ್ಟದಲ್ಲಿ ಉತ್ಪಾದಿಸುವುದು ಅನಿವಾರ್ಯವಾಗಿದೆ. ಈ ಸಂಬಂಧವಾಗಿ ಕೈಗೊಳ್ಳಬೇಕಾದ ವೈಜ್ಞಾನಿಕ ಹಾಗೂ ತಾಂತ್ರಿಕ ಕ್ರಮಗಳು ಮತ್ತು ಎದುರಿಸಬೇಕಾದ ಸಮಸ್ಯೆಗಳು ವಿಶಿಷ್ಟವೂ ವ್ಯಾಪಕವೂ ಆಗಿವೆ. ವ್ಯವಸಾಯದಿಂದ ಪೂರ್ಣ ಆರ್ಥಿಕ ಪ್ರಯೋಜನ ಪಡೆಯಲು ಅನುವಾಗುವ ಮುಖ್ಯ ಅಂಶಗಳನ್ನು ಅರ್ಥಶಾಸ್ತ್ರ ಒಳಗೊಂಡಿದೆ.
ಕೃಷಿ ಅರ್ಥಶಾಸ್ತ್ರವನ್ನು ಕುರಿತ ಈ ಲೇಖನದ ವಿಂಗಡಣೆ ಈ ರೀತಿ ಇದೆ : 1 ಕೃಷಿ ಅರ್ಥಶಾಸ್ತ್ರದ ಬೆಳವಣಿಗೆ, 2. ಕೃಷಿ ಉತ್ಪನ್ನದ ಬೆಲೆಗಳು ಹಾಗೂ ವರಮಾನ, 3. ಜಮೀನಿನ ಮೌಲ್ಯಮಾಪನ, 4. ಕೃಷಿ ಸಾಲ, 5. ಕೃಷಿ ವಿಮೆ, 6. ಕೃಷಿ ತೆರಿಗೆಗಳು, 7. ಕೃಷಿ ಉತ್ಪನ್ನಗಳ ಮಾರಾಟ, 8. ಕೃಷಿ ಮತ್ತು ಸಹಕಾರ, 9. ಕೃಷಿ ಕಾರ್ಮಿಕರು ಮತ್ತು 10. ಕೃಷಿ ಕಾನೂನು. ಇವುಗಳಲ್ಲಿ ಮುಖ್ಯವಾದ ಕೆಲವು ವಿಭಾಗಗಳಿಗೆ ಸಂಬಂಧಿಸಿದಂತೆ ವಿವರವಾದ ಪ್ರತ್ಯೇಕ ಲೇಖನಗಳೂ ಇವೆ.
ಕೃಷಿ ಅರ್ಥಶಾಸ್ತ್ರದ ಬೆಳವಣಿಗೆ : ಕೃಷಿಯ ಆರ್ಥಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ 18 ಮತ್ತು 19ನೆಯ ಶತಮಾನಗಳಲ್ಲಿ ಇಂಗ್ಲಿಷ್ ಅರ್ಥಶಾಸ್ತ್ರಜ್ಞರಾದ ಆಡಂ ಸ್ಮಿತ್ ಮತ್ತು ರಿಕಾರ್ಡೋ ಹಾಗೂ ಫ್ರಾನ್ಸ್, ಜರ್ಮನಿ ಮತ್ತು ಆಸ್ಟ್ರಿಯಗಳ ಅರ್ಥಶಾಸ್ತ್ರಜ್ಞರು ತಮ್ಮ ಬರವಣಿಗೆಗಳಲ್ಲಿ ಸಾಕಷ್ಟು ಚರ್ಚೆ ನಡೆಸಿದ್ದರು. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 1890ರ ನಂತರ ಕೃಷಿ ಅರ್ಥಶಾಸ್ತ್ರದ ಅಧ್ಯಯನಕ್ಕೆ ಗಮನ ಕೊಡಲಾಯಿತು. 20ನೆಯ ಶತಮಾನದ ಆದಿಭಾಗದಲ್ಲಿ ಅಲ್ಲಿಯ ಕೆಲವು ವಿಶ್ವವಿದ್ಯಾಲಯಗಳಲ್ಲೂ ಹಾಗೂ ಲ್ಯಾಂಡ್ ಗ್ರಾಂಟ್ ಕಾಲೇಜುಗಳಲ್ಲೂ ಕೃಷಿ ಅರ್ಥಶಾಸ್ತ್ರದ ಅಧ್ಯಯನಕ್ಕೆ ವಿಶೇಷ ಪ್ರೋತ್ಸಾಹ ದೊರಕಿತು. ಹೆನ್ರಿ ಸಿ. ಟೇಲರ್ ಮತ್ತು ನಿಕ್ಸನ್ ಕಾರ್ವರ್ ಕೃಷಿ ಅರ್ಥಶಾಸ್ತ್ರದ ಬಗ್ಗೆ ಪ್ರಕಟಿಸಿದ ಪುಸ್ತಕಗಳು ಅದರ ಶಾಸ್ತ್ರೀಯ ಅಧ್ಯಯನಕ್ಕೆ ಸಹಾಯಕವಾದುವು. ಅನಂತರ ಕೃಷಿ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ವ್ಯಾಪಕವಾಗಿ ಬರೆವಣಿಗೆಗಳು ಬೆಳಕಿಗೆ ಬರತೊಡಗಿದವು. 1930ರ ಆರ್ಥಿಕ ಹಿಂಜರಿತ ಹಾಗೂ ಇಳಿತಗಳಿಂದ ಕೃಷಿಕ್ಷೇತ್ರದ ಮೇಲೆ ವಿಷಮ ಪರಿಣಾಮವುಂಟಾಯಿತು. ಈ ಆರ್ಥಿಕ ಮುಗ್ಗಟ್ಟಿನಿಂದ ಕೃಷಿಯನ್ನು ಮೇಲೆತ್ತಲು ಕೃಷಿ ಉತ್ಪನ್ನ ಬೆಲೆಗಳಿಗೆ ಬೆಂಬಲಕೊಡುವ ಅಗತ್ಯ. ಹೆಚ್ಚುವರಿ ಉತ್ಪನ್ನವನ್ನು ಕಡಿಮೆಗೊಳಿಸುವುದು, ಕೃಷಿ ವರಮಾನವನ್ನು ಹೆಚ್ಚಿಸುವುದು, ಕೃಷಿ ಭೂಮಿ ಬಳಕೆಯ ಬಗ್ಗೆ ಯೋಜನೆ, ಕೃಷಿಪರ ಧೋರಣೆ ತಾಳಲು ಸರ್ಕಾರದ ಮೇಲೆ ಒತ್ತಾಯ ಮುಂತಾದ ವಿಷಯಗಳಲ್ಲಿ ವಿಚಾರಗಳ ಬೆಳೆವಣಿಗೆ ಕಂಡುಬಂತು. ಈ ದೇಶಗಳಲ್ಲಿ ಕೃಷಿ ಹಿಡುವಳಿಗಳ ವ್ಯವಸ್ಥೆ, ಕೃಷಿ ಉತ್ಪನ್ನಕ್ಕೆ ಸಾಲದ ಸೌಲಭ್ಯ, ಖರ್ಚಿನ ಲೆಕ್ಕಾಚಾರ, ಬೆಲೆಗಳ ನಿಷ್ಕರ್ಷೆ ಈ ಬಗ್ಗೆ ವಿಚಾರಗಳ ಬೆಳವಣಿಗೆಯಾಯಿತಲ್ಲದೆ ಕೃಷಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನೀತಿನಿರೂಪಣೆಯ ಬಗ್ಗೆ ಸಹ ಚರ್ಚೆ ನಡೆಯಿತು.
ಎರಡನೆಯ ಮಹಾಯುದ್ಧದ ಅನಂತರ ಕೃಷಿ ಉತ್ಪನ್ನಗಳ ಬೇಡಿಕೆಗಳಲ್ಲಿ ಹೆಚ್ಚಳ, ಜನಸಂಖ್ಯೆಯ ಸ್ಫೋಟ ಇತ್ಯಾದಿ ಕಾರಣಗಳಿಂದಾಗಿ ಕೃಷಿ ಅರ್ಥಶಾಸ್ತ್ರದ ವಿಚಾರ ಮತ್ತು ಅನ್ವಯಕ್ಕೆ ಪ್ರಾಮುಖ್ಯತೆ ದೊರೆಯಿತು. ಏಷ್ಯದ ಅಭಿವೃದ್ಧಿಶೀಲ ರಾಷ್ಟ್ರಗಳ ಅನೇಕ ವಿದ್ವಾಂಸರು, ಸಂಶೋಧಕರು ಮತ್ತು ಆಡಳಿತಗಾರರು ಮುಂದುವರಿದ ರಾಷ್ಟ್ರಗಳಲ್ಲಿ ಕೃಷಿ ಅರ್ಥಶಾಸ್ತ್ರದಲ್ಲಿ ಪ್ರಾವೀಣ್ಯ ಹೊಂದಿದರು. ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ ಕೃಷಿ ಅರ್ಥಶಾಸ್ತ್ರದ ಬಗ್ಗೆ ಉಪಯುಕ್ತ ವಿಚಾರಗಳನ್ನೂ ಅಂಕಿ ಅಂಶಗಳನ್ನೂ ಕಾಲಕಾಲಕ್ಕೆ ಒದಗಿಸುತ್ತ ಬಂತು. ಎಲ್ಲ ಪ್ರಮುಖ ರಾಷ್ಟ್ರಗಳಲ್ಲೂ ಕೃಷಿ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ತಜ್ಞ ಸಂಸ್ಥೆಗಳು ಸಂಶೋಧನ ಪತ್ರಿಕೆಗಳನ್ನು ಪ್ರಕಟಿಸುತ್ತಿವೆ. ಇವುಗಳಲ್ಲಿ ಮುಖ್ಯವಾಗಿ ಗ್ರೇಟ್ ಬ್ರಿಟನಿನ ದಿ ಅಗ್ರಿಕಲ್ಚರಲ್ ಎಕನಾಮಿಕ್ಸ್ ಸೊಸೈಟಿ, ಅಮೆರಿಕ ಸಂಯುಕ್ತ ಸಂಸ್ಥಾನದ ಅಮೆರಿಕನ್ ಎಕನಾಮಿಕ್ ಅಸೋಸಿಯೇಷನ್ ಮತ್ತು ಭಾರತದ ಇಂಡಿಯನ್ ಸೊಸೈಟಿ ಆಫ್ ಅಗ್ರಿಕಲ್ಚರಲ್ ಎಕನಾಮಿಕ್ಸ್ ಈ ಸಂಸ್ಥೆಗಳು ಪ್ರಕಟಿಸುತ್ತಿರುವ ನಿಯತಕಾಲಿಕ ಪತ್ರಿಕೆಗಳು ಕೃಷಿ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಪ್ರಬುದ್ಧ ಸಂಶೋಧನ ಲೇಖನಗಳನ್ನು ಒಳಗೊಂಡಿರುತ್ತವೆ. ಮೂರು ವರ್ಷಗಳಿಗೊಮ್ಮೆ ಸೇರುವ ಅಂತರರಾಷ್ಟ್ರೀಯ ಕೃಷಿ ಅರ್ಥಶಾಸ್ತ್ರಜ್ಞರ ಸಮ್ಮೇಳನದಲ್ಲಿ ಕೃಷಿ ಆರ್ಥಿಕ ಮುನ್ನಡೆಗೆ ಸಂಬಂಧಿಸಿದಂತೆ ತಾಂತ್ರಿಕ ಮತ್ತು ಆರ್ಥಿಕ ವಿಚಾರಗಳ ಬಗ್ಗೆ ವಿವಿಧ ದೇಶಗಳ ಖ್ಯಾತ ತಜ್ಞರು ವಿಚಾರವಿನಿಮಯ ನಡೆಸುತ್ತಾರೆ.
ಭಾರತದ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಅರ್ಥಶಾಸ್ತ್ರದ ಪಠ್ಯಕ್ರಮದಲ್ಲಿ ಕೃಷಿ ಅರ್ಥಶಾಸ್ತ್ರದ ಅಧ್ಯಯನಕ್ಕೆ ಗಮನ ಕೊಡಲಾಗಿದೆ. ಕೃಷಿ ವಿಶ್ವವಿದ್ಯಾಲಯಗಳಲ್ಲೂ ಸ್ನಾತಕೋತ್ತರ ತರಗತಿಗಳಲ್ಲೂ ಕೃಷಿ ಅರ್ಥಶಾಸ್ತ್ರ ಮತ್ತು ಗ್ರಾಮೀಣ ಅರ್ಥಶಾಸ್ತ್ರದ ಆಳವಾದ ಅಧ್ಯಯನಕ್ಕೆ ಅವಕಾಶವಿದೆ.
ಕೃಷಿ ಉತ್ಪನ್ನದ ಬೆಲೆಗಳು ಮತ್ತು ವರಮಾನ : ಕೃಷಿ ಉತ್ಪನ್ನದ ಬೆಲೆಗಳಲ್ಲಿ ಅಸ್ಥಿರತೆ ಅತಿಯಾಗಿರುತ್ತದೆ. ಆದ್ದರಿಂದ ಕೃಷಿಯನ್ನೇ ನಂಬಿರುವವರ ವರಮಾನದಲ್ಲಿ ಅನಿಶ್ಚಿತ ಪರಿಸ್ಥಿತಿ ಸದಾ ಇರುತ್ತದೆ. ಸರ್ವೇಸಾಧಾರಣವಾಗಿ ಬೇಸಾಯಗಾರರ ವರಮಾನ ಇತರ ಉದ್ಯಮಿಗಳಿಗಿಂತ ಕಡಿಮೆ ಇರುತ್ತದೆ.
ಇತರ ಎಲ್ಲ ವಸ್ತುಗಳ ಬೆಲೆಗಳು ನಿರ್ಧರಿಸುವ ರೀತಿಯಲ್ಲೇ ವ್ಯವಸಾಯೋತ್ಪನ್ನಗಳ ಬೆಲೆಗಳೂ ನಿರ್ಧರಿಸಲ್ಪಡುತ್ತವೆ. ಸಾಮಾನ್ಯವಾಗಿ ಬೆಲೆಗಳ ನಿರ್ಣಾಯಕ ಅಂಶಗಳು ಯಾವುವೆಂದರೆ : 1. ವಸ್ತುಗಳಿಗೆ ಬೇಡಿಕೆ ಮತ್ತು ಅವುಗಳ ಸರಬರಾಜಿನ ಸ್ಥಿತಿ, 2. ಹಣದ ಚಲಾವಣೆಯ ಪರಿಮಾಣ ಮತ್ತು 3. ನಗದುರೂಪದಲ್ಲಿ ಹಣ ಇಟ್ಟಕೊಳ್ಳುವ ಬಗ್ಗೆ ಜನರ ಒಲವು.
ಕೃಷಿ ಉತ್ಪನ್ನಗಳ ಸರಬರಾಯಿ ಅವುಗಳಿಗೆ ಇರುವ ಬೇಡಿಕೆಗನುಗುಣವಾಗಿ ಕ್ಷಿಪ್ರದಲ್ಲಿ ಹೊಂದಿಕೊಳ್ಳವುದಿಲ್ಲ. ಒಂದು ವೇಳೆ ಬೇಡಿಕೆ ಕುಗ್ಗಿದರೆ ಉತ್ಪನ್ನದ ಪರಿಮಾಣ ಕೂಡಲೇ ಇಳಿಯಲು ಸಾಧ್ಯವಿಲ್ಲ. ಆದ್ದರಿಂದ ಬೇಡಿಕೆ ಇಳಿಮುಖವಾದಾಗ ಬೆಲೆಗಳ ಇಳಿತ ತೀವ್ರವಾಗಿ, ಕೃಷಿಗಾರರಿಗೆ ಬರುವ ವರಮಾನದಲ್ಲಿ ಕಡಿತ ಬೀಳುತ್ತದೆ. ಆರ್ಥಿಕ ಹಿಂಜರಿತ ಹಾಗೂ ಇಳಿತದ ಕಾಲದಲ್ಲಂತೂ ಕೈಗಾರಿಕೋತ್ಪನ್ನಗಳ ಬೆಲೆಗಳಿಗಿಂತ ಬೇಸಾಯದ ವಸ್ತುಗಳ ಬೆಲೆ ತೀವ್ರವಾಗಿ ಇಳಿದು ಕೃಷಿಗಾರರಿಗೆ ಆರ್ಥಿಕ ಸಂಕಷ್ಟ ಹೆಚ್ಚಾಗುತ್ತದೆ ; ವರಮಾನ ಕುಸಿಯುತ್ತದೆ.
ಸರ್ವೇಸಾಮಾನ್ಯವಾಗಿ ಕೃಷಿ ಉದ್ಯಮದಲ್ಲಿರುವ ದುಡಿಮೆಗಾರರ ಉತ್ಪನ್ನದ ಸಾಮಥ್ರ್ಯ ಕಡಿಮೆ ಇರುತ್ತದೆ. ಆದ್ದರಿಂದ ಅವರ ವರಮಾನವೂ ಕಡಿಮೆ. ಅಧಿಕ ಉತ್ಪನ್ನದ ಸಾಮಥ್ರ್ಯ ಪಡೆದಿರುವ ಮುಂದುವರಿದ ರಾಷ್ಟ್ರಗಳ ವ್ಯವಸಾಯೋದ್ಯಮಿಗಳೂ ಉನ್ನತಮಟ್ಟದ ವರಮಾನವನ್ನು ನಿರೀಕ್ಷಿಸಲಾಗುತ್ತಿಲ್ಲ. ಆ ದೇಶಗಳಲ್ಲಿ ರಾಷ್ಟ್ರಿಯ ವರಮಾನ ಏರಿ ತಲಾ ವರಮಾನದಲ್ಲಿ ಏರಿಕೆಯಾದರೂ ಹೆಚ್ಚುವರಿ ಆದಾಯಕ್ಕನುಗುಣವಾಗಿ ಆಹಾರಧಾನ್ಯಗಳಿಗೆ ಬೇಡಿಕೆ ಏರುವುದಿಲ್ಲ. ಆದಾಯದ ಹೆಚ್ಚಳವಾದಾಗಲೆಲ್ಲ ಕೈಗಾರಿಕಾ ವಸ್ತುಗಳು ಮತ್ತಿತರ ಭೋಗವಸ್ತುಗಳಿಗೆ ಬೇಡಿಕ ತೀವ್ರವಾಗಿ ಏರುತ್ತದೆ. ಆದ್ದರಿಂದ ಮುಂದುವರಿದ ದೇಶದಲ್ಲಾಗಲಿ ಹಿಂದುಳಿದ ದೇಶದಲ್ಲಾಗಲಿ ಕೃಷಿ ಉತ್ಪನ್ನಗಳ ಬೆಲೆಗಳಲ್ಲಿ ದೃಢತೆ ತರುವುದು ಮತ್ತು ಉತ್ಪಾದಕರಿಗೆ ನ್ಯಾಯೋಚಿತ ವರಮಾನ ದೊರಕಿಸುವುದು ಪ್ರಭುತ್ವದ ಆದ್ಯಕರ್ತವ್ಯವಾಗಿದೆ. ಈಚಿನ ವರ್ಷಗಳಲ್ಲಿ ಎಲ್ಲ ದೇಶಗಳ ಸರ್ಕಾರಗಳೂ ಈ ಕರ್ತವ್ಯವನ್ನು ಮನಗಂಡು ಬೆಲೆಗಳಿಗೆ ಅಧಿಕೃತ ಬೆಂಬಲ ಮತ್ತು ವರಮಾನದಲ್ಲಿ ದೃಢತೆಯ ಭರವಸೆ ಕೊಡುವ ಬಗ್ಗೆ ಹಲವಾರು ಕ್ರಮಗಳನ್ನು ಕೈಗೊಂಡಿವೆ.
1930ರ ಪೂರ್ವದಲ್ಲಿ ಸರ್ಕಾರಗಳೂ ಸಾಮಾನ್ಯವಾಗಿ ಆಹಾರಧಾನ್ಯಗಳನ್ನು ಪಟ್ಟಣಿಗರಿಗೆ ಒದಗಿಸುವ ಸಂಬಂಧವಾಗಿ ನೀತಿನಿರೂಪಣೆ ಮಾಡಿಕೊಳ್ಳುತ್ತಿದ್ದುವೇ ಹೊರತು ಬೇಸಾಯಗಾರರಿಗೆ ವರಮಾನದ ಭರವಸೆ ನೀಡುವ ಬಗ್ಗೆ ಯಾವ ಕ್ರಮವನ್ನೂ ಕೈಗೊಳ್ಳುತ್ತಿರಲಿಲ್ಲ. 1930ರ ಅನಂತರ ಉಂಟಾದ ಆರ್ಥಿಕ ಇಳಿತದ ಪರಿಣಾಮವಾಗಿ ಅನೇಕ ದೇಶಗಳಲ್ಲಿ ಕೃಷಿ ಉತ್ಪನ್ನಗಳ ಬೆಲೆಗಳಿಗೆ ಬೆಂಬಲ ಕೊಡುವ ನೀತಿಯನ್ನೂ ಕೃಷಿಯಲ್ಲಿ ತೊಡಗಿರುವವರಿಗೆ ವರಮಾನದ ಭದ್ರತೆಯನ್ನೂ ಒದಗಿಸುವ ಕ್ರಮಗಳನ್ನು ಸರ್ಕಾರಗಳು ಜಾರಿಗೆ ತಂದುವು. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 1933ರ ಬೇಸಾಯದ ಹೊಂದಾವಣಿ ಕಾಯಿದೆಯ ಪ್ರಕಾರ ಹತ್ತಿಯ ಬೆಳೆಯನ್ನು ಅದರ ಹಿಂದಿನ ವರ್ಷದ ಉತ್ಪನ್ನಕ್ಕಿಂತ ಸೇಕಡ 25ರಷ್ಟು, ತಂಬಾಕಿನ ಬೆಳೆಯನ್ನು ಶೇಕಡ 33ರಷ್ಟು ಕಡಿಮೆಯ ಮಟ್ಟಕ್ಕೆ ಕಡ್ಡಾಯವಾಗಿ ಇಳಿಸಲಾಯಿತು. ಗ್ರೇಟ್ ಬ್ರಿಟನಿನಲ್ಲಿ 1932-34ರಲ್ಲಿ ಆಲೂಗೆಡ್ಡೆ ಬೆಳೆಯುವ ಪ್ರದೇಶದ ವಿಸ್ತೀರ್ಣವನ್ನು ಕಡ್ಡಾಯವಾಗಿ ಇಳಿಸಿ ನಿಗದಿಗೊಳಿಸಲಾಯಿತು. ಬ್ರಜಿûಲಿನಲ್ಲಿ 1931 ರಿಂದ 1937 ರ ವರೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಸರಬರಾಜಾಗುತ್ತಿದ್ದ ಕಾಫಿ ಬೀಜದ ಪರಿಮಾಣವನ್ನು ಕಡ್ಡಾಯವಾಗಿ ಕಡಿಮೆ ಮಾಡುವ ಕ್ರಮವನ್ನು ಅಲ್ಲಿಯ ಸರ್ಕಾರ ಕೈಗೊಂಡಿತು. ಅಲ್ಲದೆ ಉತ್ಪನ್ನವನ್ನು ಕಡಿಮೆ ಮಾಡುವುದಕ್ಕೋಸ್ಕರ ಹೊಸದಾಗಿ ಕಾಫಿ ಬೆಳೆಯುವುದರ ಮೇಲೆ ನಿರ್ಬಂಧ ಹಾಕಿದ್ದಲ್ಲದೆ ದಾಸ್ತಾನಾಗಿದ್ದ ಕಾಫಿ ಬೀಜದಲ್ಲಿ ಗಣನೀಯ ಭಾಗವನ್ನು ನಾಶಮಾಡಲಾಯಿತು. ಅಂತರರಾಷ್ಟ್ರೀಯ ಮಾರುಕಟ್ಟೆಗೆ ಬರುತ್ತಿದ್ದ ದಿನಸಿಗಳ ಪರಿಮಾಣವನ್ನು ಕಡಿಮೆ ಮಾಡಿ ಅವುಗಳ ಬೆಲೆಗಳು ಚೇತರಿಸಿಕೊಳ್ಳುವಂತೆ ಮಾಡುವುದು ಈ ಎಲ್ಲ ಕ್ರಮಗಳ ಉದ್ದೇಶವಾಗಿತ್ತು. 1945ರ ಅನಂತರ ಜಾರಿಗೆ ಬಂದ ಅಂತರರಾಷ್ಟ್ರೀಯ ದಿನಸಿ ಯೋಜನೆಗಳ ಮೂಲಕ ಬೆಲೆಗಳ ದೃಢತೆಯನ್ನು ಸಾಧಿಸಲು ಯತ್ನಿಸಲಾಯಿತು. ಅಲ್ಲದೆ ಪ್ರತಿಯೊಂದು ದೇಶದಲ್ಲೂ ಕೃಷಿ ಉತ್ಪನ್ನಗಳ ಬೆಲೆಗಳನ್ನು ಗೊತ್ತಾದ ಮಟ್ಟದಲ್ಲಿ ಕಾಪಾಡಿಕೊಂಡು ಬರಲು ಮತ್ತು ಕೃಷಿ ಉದ್ಯಮಿಗಳಿಗೆ ವರಮಾನದ ಭರವಸೆ ಕೊಡಲು ಕ್ರಮಗಳನ್ನು ಜಾರಿಗೆ ತರಲಾಗಿದೆ. ಈ ನೀತಿಯ ಅನುಸರಣೆಯಲ್ಲಿ ದೇಶದಿಂದ ದೇಶಕ್ಕೆ ವ್ಯತ್ಯಾಸವುಂಟು. ಅಮೆರಿಕದಲ್ಲಿ ಪ್ರತಿಯೊಂದು ದಿನಸಿಯ ಬೆಲೆಗೂ ಬೆಂಬಲ ಕೊಡುವ ವ್ಯವಸ್ಥೆ ಇದ್ದರೆ, ಜರ್ಮನಿ, ಸ್ವಿಟ್ಜ್‍ರ್ಲೆಂಡ್ ಮತ್ತಿತರ ದೇಶಗಳಲ್ಲಿ ಕೃಷಿಯ ವರಮಾನವನ್ನು ಉತ್ತಮಪಡಿಸಲು ವಿಧಿವತ್ತಾದ ಕ್ರಮಗಳಿವೆ. ಮತ್ತೆ ಕೆಲವು ದೇಶಗಳಲ್ಲಿ ಕೃಷಿ ಕ್ಷೇತ್ರದಲ್ಲಿ ದುಡಿಯುವವರ ಗಳಿಕೆ ಕೈಗಾರಿಕಾಕ್ಷೇತ್ರದಲ್ಲಿರುವವರ ಗಳಿಕೆಗೆ ಸಮಾನವಾಗಿರಬೇಕೆಂಬ ನೀತಿಯನ್ನನುಸರಿಸಲಾಗುತ್ತಿದೆ. ದಿನಸಿಯ ಬೆಲೆಗಳು ಇಳಿಯುವುದನ್ನು ತಡೆಗಟ್ಟಲು ಸರ್ಕಾರ ಘೋಷಿಸುವ ಬೆಂಬಲದ ಬೆಲೆಗೆ ಅನುಗುಣವಾಗಿ ದಿನಸಿಗಳನ್ನು ಸರ್ಕಾರವೇ ಯಥೇಚ್ಛವಾಗಿಕೊಂಡು ದಾಸ್ತಾನು ಮಾಡುವ ವ್ಯವಸ್ಥೆ ಕೆಲವು ದೇಶಗಳಲ್ಲಿವೆ.
ಭಾರತದಲ್ಲಿ ಕೃಷಿ ಉತ್ಪನ್ನಗಳಿಗೆ ಸದೃಢ ಬೆಲೆಗಳನ್ನು ದೊರಕಿಸಿಕೊಡಲು ಈಚಿನ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿವೆ. ಆಹಾರಧಾನ್ಯಗಳಿಗೆ ಸೂಕ್ತ ಬೆಲೆ ದೊರಕಿಸಿಕೊಡುವ ಉದ್ದೇಶದಿಂದ 1964ರಲ್ಲಿ ದೇಶಾದ್ಯಂತ ಈ ವಸ್ತುಗಳ ಬೆಲೆಗಳಿಗೆ ಬೆಂಬಲ ಕೊಡುವ ನೀತಿಯನ್ನು ಜಾರಿಗೆ ತರಲಾಯಿತು. ಬೇಸಾಯದ ಉತ್ಪನ್ನ/ಪದಾರ್ಥಗಳ ಬೆಲೆಗಳನ್ನು ನಿಯಂತ್ರಣ ಮಾಡುವ ಸಂಬಂಧದಲ್ಲಿ ಸರಿಯಾದ ನೀತಿಯನ್ನು ನಿರೂಪಿಸಲು ಸಹಾಯವಾಗುವಂತೆ ಸರ್ಕಾರಕ್ಕೆ ಆಗಿಂದಾಗ್ಗೆ ಸಲಹೆ ಮಾಡಲು 1965ರಲ್ಲಿ ಕೃಷಿ ಬೆಲೆಗಳ ಆಯೋಗವನ್ನು ಕೇಂದ್ರ ಸರ್ಕಾರ ರಚಿಸಿತು. ಅದೇ ವರ್ಷ ಭಾರತದ ಆಹಾರ ಕಾಪೋರೇಷನ್ ಎಂಬ ಸಂಸ್ಥೆಯನ್ನು ಕೇಂದ್ರ ಸರ್ಕಾರ ಸ್ಥಾಪಿಸಿತು. ಹೆಚ್ಚುವರಿ ಬೆಳೆಯಾದ ವರ್ಷಗಳಲ್ಲಿ ಸರ್ಕಾರ ಘೋಷಿಸುವ ಬೆಂಬಲದ ಬೆಲೆಗೆ ಉತ್ಪನ್ನ/ಪದಾರ್ಥಗಳ ಈ ಸಂಸ್ಥೆ ಕೊಳ್ಳುತ್ತದೆ. ಅಭಾವದ ವರ್ಷಗಳಲ್ಲಿ ಸರ್ಕಾರ ತೀರ್ಮಾನ ಮಾಡುವ ಸಂಗ್ರಹಣ ಬೆಲೆಗೆ ಅನುಗುಣವಾಗಿ ಧಾನ್ಯಗಳನ್ನು ಕೊಳ್ಳುತ್ತದೆ.
ಆಹಾರಧಾನ್ಯಗಳಿಗಷ್ಟೇ ಅಲ್ಲದೆ ಕಬ್ಬು, ಸೆಣಬು ಮತ್ತು ಹತ್ತಿ-ಇವುಗಳಿಗೂ ಕನಿಷ್ಠ ಬೆಲೆಯ ಭರವಸೆ ಕೊಡುವ ನೀತಿಯನ್ನು ಕೈಗೊಳ್ಳಲಾಗಿದೆ. ಈಚಿನ ವರ್ಷಗಳಲ್ಲಿ ಒಟ್ಟಾರೆ ಅಭಾವ ಪರಿಸ್ಥಿತಿಯೇ ಪ್ರಧಾನವಾಗಿದ್ದುದರಿಂದಲೂ ಇತರ ಹಲವಾರು ಕಾರಣಗಳಿಂದಲೂ ವ್ಯವಸಾಯೋತ್ಪನ್ನಗಳ ಬೆಲೆಗಳು ಒಂದೇ ಸಮನೆ ಏರುತ್ತಿದ್ದು ಬೇಸಾಯಗಾರರ ವರಮಾನ ಹೆಚ್ಚುತ್ತಿದೆ.
ಜಮೀನಿನ ಮೌಲ್ಯಮಾಪನ : ವ್ಯಕ್ತಿಗಳು ಅಥವಾ ಸಂಸ್ಥೆಗಳು ಹೊಂದಿರುವ ಜಮೀನಿನ ಮೌಲ್ಯವನ್ನು ನಿರ್ಧಾರ ಮಾಡುವ ಕೆಲಸವನ್ನು ತಜ್ಞರು ನಿರ್ವಹಿಸುತ್ತಾರೆ. ಜಮೀನಿನ ಮೌಲ್ಯವೆಷ್ಟೆಂದು ನಿರ್ಧಾರ ಮಾಡುವ ಅವಶ್ಯಕತೆ ಉಂಟು. ಜಮೀನಿನ ಆಧಾರದ ಮೇಲೆ ಸಾಲ ಎತ್ತಬೇಕಾದರೆ ಅದರ ಮೌಲ್ಯದ ಅರಿವು ಇರಬೇಕು. ಭೂ ಆಸ್ತಿಯನ್ನು ಮಾರುವವರಿಗೂ ಕೊಳ್ಳುವವರಿಗೂ ಇದರ ಅಗತ್ಯವುಂಟು. ಸರ್ಕಾರ ಭೂ ಆಸ್ತಿಯ ಮೇಲೆ ತೆರಿಗೆ ಹಾಕಬೇಕಾದರೂ ಅದಕ್ಕೆ ಆಸ್ತಿಯ ಮೌಲ್ಯವನ್ನು ಆಧಾರವಾಗಿ ಇರಿಸಿಕೊಳ್ಳುತ್ತದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಕಾಸಗಿ ಜಮೀನನ್ನು ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಳ್ಳವುದಾದರೆ ಪರಿಹಾರವನ್ನು ನಿರ್ಧರಿಸಲು ಜಮೀನಿನ ಮೌಲ್ಯವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಈ ಎಲ್ಲ ಕಾರಣಗಳಿಂದ ಭೂ ಆಸ್ತಿಯ ಮೌಲ್ಯ ನಿಷ್ಕರ್ಷೆ ಮಾಡುವುದಕ್ಕಾಗಿಯೇ ವಿಶೇಷ ಶಿಕ್ಷಣ ಪಡೆದ ಪರಿಣತರು ಇರುತ್ತಾರೆ.
ಕೃಷಿ ಸಂಬಂಧದ ಸಾಲ : ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿರುವ ಉದ್ಯಮಿಗಳಿಗೆ ಸಾಲ ಹೇಗೆ ಅವಶ್ಯಕವೋ ಬೇಸಾಯಗಾರರಿಗೂ ಹಾಗೇ ಅವಶ್ಯಕ. ಸ್ವಂತ ಬಂಡವಾಳದ ಅಭಾವವಿರುವೆಡೆ ಸಾಲದ ಅಗತ್ಯ ಇರುತ್ತದೆ. ಬೇಸಾಯಗಾರರು ಸಾಮಾನ್ಯವಾಗಿ ಸಣ್ಣ ಹಿಡುವಳಿಗಳಲ್ಲಿ ಕೃಷಿ ಮಾಡುವುದರಿಂದ ಉತ್ಪನ್ನದ ಪರಿಮಾಣ ಕಡಿಮೆ ಇರುತ್ತದೆ. ಬಂದ ವರಮಾನದಲ್ಲಿ ಬಹುಭಾಗ ಇಲ್ಲವೇ ಪೂರ್ಣಭಾಗ ಕುಟುಂಬ ನಿರ್ವಹಣೆಗೇ ವೆಚ್ಚವಾಗುತ್ತದೆ. ಆದ್ದರಿಂದ ಅವರಲ್ಲಿ ಹಣವನ್ನು ಉಳಿಸಿ ಬಂಡವಾಳವನ್ನು ಕೂಡಿಸಿಕೊಳ್ಳುವ ಸಾಮಥ್ರ್ಯ ಕಡಿಮೆ ಇರುತ್ತದೆ. ಆರ್ಥಿಕವಾಗಿ ಹಿಂದುಳಿದ ದೇಶಗಳಲ್ಲಂತೂ ಈ ಸಮಸ್ಯೆ ತೀವ್ರವಾಗಿದೆ.
ಕೃಷಿ ಉದ್ಯಮಕ್ಕೆ ಸಾಕಷ್ಟು ಬಂಡವಾಳ ಹೂಡಿದ ಹೊರತು ಉತ್ಪನ್ನದ ಪರಿಮಾಣ ಏರುವುದಿಲ್ಲ. ಉತ್ಪನ್ನ ಏರದೆ ವರಮಾನ ಏರಲು ಸಾಧ್ಯವಿಲ್ಲ. ಸ್ವಂತ ಬಂಡವಾಳ ಇಲ್ಲದ ಕಡೆ ಸಾಲದ ಸೌಲಭ್ಯ ಇದ್ದರೆ ರೈತರು ಸಾಲ ಪಡೆದು ಉತ್ತಮ ಬೀಜ, ಸಾರಪೋಷಕಗಳು, ನೀರಾವರಿ ಸೌಲಭ್ಯ, ತಾಂತ್ರಿಕ ಸಹಾಯ ಇತ್ಯಾದಿಗಳನ್ನು ಉಪಯೋಗಿಸಿ ಕೃಷಿಯನ್ನು ಅಭಿವೃದ್ಧಿಪಡಿಸಬಹುದು. ಇದರಿಂದ ವರಮಾನ ಹೆಚ್ಚುತ್ತದೆ. ಹೆಚ್ಚಿದ ವರಮಾನದಲ್ಲಿ ಒಂದು ಭಾಗವನ್ನು ಸಾಲದ ಪಾವತಿಗೆ ಉಪಯೋಗಿಸಬಹುದು. ಇದರಿಂದ ಕೃಷಿ ಲಾಭದಾಯಕವಾಗುತ್ತದೆ.
ಬೇಸಾಯಗಾರರಿಗೆ ಮೂರು ರೀತಿಯ ಸಾಲ ಬೇಕಾಗುತ್ತದೆ. ಅವು ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳು. ವರ್ಷದ ಸಾಗುವಳಿಯ ಚಾಲ್ತಿ ಖರ್ಚಿನ ಪೂರೈಕೆಗೆ ಅಲ್ಪಾವಧಿ ಸಾಲ ಬೇಕಾಗುತ್ತದೆ. ಯಂತ್ರೋಪಕರಣಗಳನ್ನು, ಬೇಸಾಯದ ಎತ್ತುಗಳನ್ನು ಕೊಳ್ಳಲು ಮತ್ತು ಜಮೀನಿನ ಸುತ್ತ್ತ ಅಣೆ ಹಾಕಿಸಲು, ಚರಂಡಿ ತೋಡಿಸಲು ಮತ್ತಿತರ ದುರಸ್ತಿ ಕೆಲಸಗಳನ್ನು ಮುಗಿಸಲು ಮುಧ್ಯಮಾವಧಿ ಸಾಲ ಬೇಕಾಗುತ್ತದೆ. ಜಮೀನನ್ನು ಕೊಳ್ಳಲು, ಕಟ್ಟಡಗಳನ್ನು ನಿರ್ಮಿಸಲು ಅಥವಾ ಇರುವ ಜಮೀನಿನಲ್ಲಿ ಶಾಶ್ವತವಾದ ಉತ್ತಮ ಮಾರ್ಪಾಡು ಮಾಡಲು ಅಗತ್ಯವಾದ ವೆಚ್ಚವನ್ನು ಪೂರೈಸಲು ದೀರ್ಘಾವಧಿ ಸಾಲ ಬೇಕಾಗುತ್ತದೆ.
ಬೇಸಾಯಗಾರರಿಗೆ ಸಾಮಾನ್ಯವಾಗಿ ಕೆಳಕಂಡ ವರ್ಗದವರಿಂದ ಅಥವಾ ಸಂಸ್ಥೆಗಳಿಂದ ಸಾಲ ದೊರೆಯುತ್ತದೆ : 1. ವರ್ತಕರು 2. ಲೇವಾದೇವಿ ಮಾಡುವ ಸಾಹುಕಾರರು 3. ವಾಣಿಜ್ಯ ಬ್ಯಾಂಕುಗಳು 4. ಸಹಕಾರಿ ಸಂಸ್ಥೆಗಳು 5. ಸರ್ಕಾರಿ ಸಂಸ್ಥೆಗಳು.
ಅನೇಕ ದೇಶಗಳಲ್ಲಿ ಸಹಕಾರಿ ಮತ್ತು ಸರ್ಕಾರದ ಸಂಸ್ಥೆಗಳೂ ರೈತರಿಗೆ ಸಾಲ ಕೊಡುವ ಮುಖ್ಯ ಕೇಂದ್ರಗಳಾಗಿವೆ. ರೈತರಿಗೆ ಅಲ್ಪ ಬಡ್ಡಿ ದರದಲ್ಲಿ ಸಾಕಷ್ಟು ಸಾಲವನ್ನು ಒದಗಿಸಿ ತನ್ಮೂಲಕ ಕೃಷಿಯ ಅಭಿವೃದ್ಧಿ ಸಾಧಿಸುವುದು ಅನೇಕ ಸರ್ಕಾರಗಳ ಧ್ಯೇಯವಾಗಿದೆ.
ಐರೋಪ್ಯ ದೇಶಗಳಲ್ಲಿ ಸಹಕಾರ ಸಂಸ್ಥೆಗಳು ರೈತರಿಗೆ ಸಾಲ ನೀಡುವುದರಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಸಹಕಾರ ಆಂದೋಳನ ಹಿಂದೆ ಬಿದ್ದಿರುವ ಕೆಲವು ದೇಶಗಳಲ್ಲಿ ಸರ್ಕಾರದ ವತಿಯಿಂದ ಆದಷ್ಟು ಹೆಚ್ಚು ಸಾಲ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆ ಇದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಕೃಷಿ ಉದ್ಯಮಕ್ಕೆ ಸಾಲ ನೀಡಲು ಹಲವಾರು ಸಂಸ್ಥೆಗಳಿವೆ. ವಾಣಿಜ್ಯ ಬ್ಯಾಂಕುಗಳು, ಸಹಕಾರಿ, ಸಂಸ್ಥೆಗಳು, ಸರ್ಕಾರದಿಂದ ಪೋಷಿತವಾದ ಉದ್ದರಿ ಸಂಸ್ಥೆಗಳು, ವಿಮಾ ಸಂಸ್ಥೆಗಳು ಇತ್ಯಾದಿ ಮೂಲಗಳಿಂದ ಹೇರಳವಾಗಿ ಸಾಲ ದೊರೆಯುತ್ತದೆ.
ಭಾರತದಲ್ಲಿ ಕೃಷಿ ಉದ್ಯಮಕ್ಕೆ ಸಾಲ ಹಲವಾರು ಮೂಲಗಳಿಂದ ದೊರೆಯುತ್ತದೆ. ಮುಖ್ಯವಾಗಿ ಗ್ರಾಮದ ಸಾಹುಕಾರರು, ಲೇವಾದೇವಿ ಮಾಡುವವರು, ವರ್ತಕರು, ಪತ್ತಿನ ಸಹಕಾರ ಸಂಸ್ಥೆಗಳು ಮತ್ತು ವಾಣಿಜ್ಯ ಬ್ಯಾಂಕುಗಳು ಸಾಲ ಕೊಡುವ ವ್ಯವಸ್ಥೆ ಇದೆ. 1969ರಲ್ಲಿ ಬೇಸಾಯಗಾರರು ಮಾಡಿದ ಒಟ್ಟು ಸಾಲದಲ್ಲಿ ಶೇಕಡ 70ರಷ್ಟು ಸಾಲ ಸಾಹುಕಾರರು, ವರ್ತಕರು ಮತ್ತು ಖಾಸಗಿ ಲೇವಾದೇವಿ ಮಾಡುವ ಜನರು ಕೊಟ್ಟದ್ದಾಗಿತ್ತು. ಇನ್ನುಳಿದ ಶೇಕಡ 30ರಷ್ಟು ಸಾಂಸ್ಥಿಕ ಮೂಲಗಳಿಂದ ದೊರೆತಿತ್ತು. 1973-74ರ ಹೊತ್ತಿಗೆ ಭಾರತದಲ್ಲಿ ಕೃಷಿಗೆ ರೂ. 2.000 ಕೋಟಿಗಳಷ್ಟು ಅಲ್ಪಾವಧಿ ಸಾಲವನ್ನು ಒದಗಿಸುವ ಆವಶ್ಯಕತೆ ಇರುತ್ತದೆಂದು ಆಲ್ ಇಂಡಿಯ ರೂರಲ್ ಕ್ರೆಡಿಟ್ ರೆವ್ಯೂ ಕಮಿಟಿ (1969) ಅಂದಾಜು ಮಾಡಿದೆ. ನಾಲ್ಕನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಮಧ್ಯಮಾವಧಿಯ ಸಾಲದ ಅಗತ್ಯ ರೂ. 500 ಕೋಟಿ ಎಂದೂ ದೀರ್ಘಾವಧಿ ಸಾಲದ್ದು ರೂ. 1,500 ಕೋಟಿ ಎಂದೂ ಅಂದಾಜು ಮಾಡಲಾಗಿದೆ.
ಪತ್ತಿನ ಸಹಕಾರ ಸಂಘಗಳ ಮೂಲಕ 1969ರಲ್ಲಿ ಒದಗಿಸಿದ್ದ ಅಲ್ಪಾವಧಿ ಮತ್ತು ಮಧ್ಯಮಾವಧಿ ಸಾಲದ ಮೊತ್ತ ರೂ. 450 ಕೋಟಿ ಆಗಿತ್ತು. ಆ ಮೊತ್ತ 1974ರ ಹೊತ್ತಿಗೆ, ಅಂದರೆ ನಾಲ್ಕನೆಯ ಯೋಜನೆಯ ಅಂತ್ಯದ ಹೊತ್ತಿಗೆ, ರೂ. 750 ಕೋಟಿಗಳಿಗೆ ಏರುವ ಅಂದಾಜಿದೆ. ಅದೇ ರೀತಿ ಭೂ ಅಭಿವೃದ್ಧಿ ಬ್ಯಾಂಕುಗಳಿಂದ ದೊರೆಯುವ ದೀರ್ಘಾವಧಿ ಸಾಲದ ಮೊತ್ತ ರೂ. 700 ಕೋಟಿ ಆಗುವುದೆಂದು ಸೂಚಿಸಲಾಗಿದೆ.
ಭಾರತದ ವಾಣಿಜ್ಯ ಬ್ಯಾಂಕುಗಳು ವ್ಯವಸಾಯಕ್ಕೆ ನೇರವಾಗಿ ಕೊಡುತ್ತಿರುವ ಸಾಲದ ಪ್ರಮಾಣ ಏರುತ್ತಿದೆ. ಕೃಷಿಗೆ ಈ ಬ್ಯಾಂಕುಗಳು ಒದಗಿಸಿದ ಸಾಲ 1966-67ರಲ್ಲಿ ಕೇವಲ ರೂ. 5 ಕೋಟಿ ಇದ್ದುದ್ದು 1968-69ರಲ್ಲಿ ರೂ. 53 ಕೋಟಿಗಳಿಗೆ ಏರಿತ್ತು. ಪ್ರಮುಖ ವಾಣಿಜ್ಯ ಬ್ಯಾಂಕುಗಳ ರಾಷ್ಟ್ರೀಕರಣವಾದ ಮೇಲೆ ಇವುಗಳಿಂದ ಕೃಷಿ ಉದ್ಯಮಕ್ಕೆ ದೊರೆಯುತ್ತಿರುವ ಸಾಲದ ಪರಿಮಾಣ ವರ್ಷೇ ವರ್ಷೇ ಏರುತ್ತಿದೆ.
1963ರಲ್ಲಿ ಸ್ಥಾಪಿತವಾದ ಕೃಷಿ ಮರುಹಣಕಾಸು ಕಾರ್ಪೋರೇಷನಿನ್ನಿಂದ ಕೆಲವು ವಿಶಿಷ್ಟ ಕಾರ್ಯಕ್ರಮಗಳಿಗೆ ಅದರಲ್ಲೂ ಮುಖ್ಯವಾಗಿ ಸಣ್ಣ ನೀರಾವರಿ ಕಾರ್ಯಕ್ರಮಗಳಿಗೆ ಸಾಲದ ಪೂರೈಕೆ ಆಗುತ್ತಿದೆ.
ಭಾರತದಲ್ಲಿ ಕೃಷಿ ಸಂಬಂಧದ ಸಾಲದ ವಿಸ್ತರಣೆಗಾಗಿ ರಿಸರ್ವ್ ಬ್ಯಾಂಕು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಗಮನ ಕೊಡುತ್ತಿವೆ. (ನೋಡಿ- ಕೃಷಿ-ಉದ್ದರಿ-(ಸಾಲ))
ಕೃಷಿ ವಿಮೆ : ಕೃಷಿಯಲ್ಲಿ ತೊಡಗಿರುವವರು ಎದುರಿಸಬೇಕಾದ ಅಪಾಯ ಮತ್ತು ಅನಿಶ್ಚಿತ ಪರಿಸ್ಥಿತಿಗಳು ಅಪಾರವಾದವು. ಇವನ್ನು ಎದುರಿಸಲು ವಿಮಾ ಸೌಕರ್ಯಗಳು ನಿಧಾನಗತಿಯಲ್ಲಿ ಜಾರಿಗೆ ಬರುತ್ತಿವೆ. ಮುಂದುವರಿದ ದೇಶಗಳಲ್ಲಿ ಹಲವಾರು ರೀತಿಯ ವಿಮಾ ಯೋಜನೆಗಳು ಜಾರಿಯಲ್ಲಿವೆ. ಹಿಂದುಳಿದ ದೇಶಗಳಲ್ಲಿ ಕೃಷಿವಿಮಾ ಯೋಜನೆ ಬೆಳೆದಿಲ್ಲ.
ಕೃಷಿ ಕ್ಷೇತ್ರದಲ್ಲಿ ಸರ್ವೇ ಸಾಮಾನ್ಯವಾಗಿ ಅಗ್ನಿ ಅಪಘಾತ, ಬಿರುಗಾಳಿ, ಮಳೆ, ಪ್ರವಾಹ, ಅತಿವೃಷ್ಟಿ, ಅನಾವೃಷ್ಟಿ ಇತ್ಯಾದಿ ಪ್ರಕೃತಿ ವಿಕೋಪಗಳಿಂದ ಅಪಾಯ ಸಂಭವಿಸಿ ಬೆಳೆಗಳು ನಾಶವಾಗುತ್ತವೆ. ಇವಲ್ಲದೆ ದನಕರುಗಳಿಗೆ ತಗಲುವ ಸಾಂಕ್ರಾಮಿಕ ರೋಗಗಳು ರೈತರನ್ನು ನಷ್ಟಕ್ಕೆ ಗುರಿ ಮಾಡುತ್ತವೆ. ಉತ್ಪನ್ನಗಳ ಬೆಲೆಗಳಲ್ಲಿ ಸಂಭವಿಸುವ ಏರಿಳಿತಗಳು ಅನಿಶ್ಚಿತತೆಯನ್ನು ತಂದೊಡ್ಡಿ ನಷ್ಟದ ಅಪಾಯವನ್ನು ತರುತ್ತವೆ.
ಕೃಷಿ ವಿಮಾ ಯೋಜನೆಯಲ್ಲಿ ಅಂತರ್ಗತವಾಗಿರುವ ವಿಶಿಷ್ಟ ಆರ್ಥಿಕ ಅಪಾಯಗಳಿಂದಾಗಿ ವಿಮಾ ಸಂಸ್ಥೆಗಳು ಸ್ವಯಂಪ್ರೇರಿತ ಉತ್ಸಾಹದಿಂದ ಈ ಕ್ಷೇತ್ರಕ್ಕಿಳಿಯುವುದಿಲ್ಲ. ಆದ್ದರಿಂದ ಕೃಷಿ ವಿಮಾ ಯೋಜನೆ ಜಾರಿಗೆ ಬಂದಿರುವ ದೇಶಗಳಲ್ಲಿ ಸಾಮಾನ್ಯವಾಗಿ ಸರ್ಕಾರ ಸಹಾಯಧನ ಮತ್ತು ಇತರ ಸವಲತ್ತುಗಳನ್ನು ನೀಡಿ ವಿಮಾ ಸೌಕರ್ಯಗಳನ್ನು ವಿಸ್ತರಿಸಿವೆ.
ಸೋವಿಯತ್ ದೇಶದಲ್ಲಿ ಮುಖ್ಯ ಬೆಳೆಗಳಿಗೆ ಕಡ್ಡಾಯವಾದ ವಿಮಾಯೋಜನೆಯನ್ನು ಜಾರಿಗೆ ತರಲಾಗಿದೆ. ಅಲ್ಲಿ ವಿಮಾಯೋಜನೆ ಸರ್ಕಾರದ ಸ್ವಾಮ್ಯದಲ್ಲಿದೆ. ಯಥೇಚ್ಛವಾಗಿ ಬಾಳೆ ಫಸಲು ಇರುವ ಜಮೈಕದಲ್ಲಿ ಚಂಡಮಾರುತದ ಅಪಾಯದಿಂದ ರಕ್ಷಣೆ ಕೊಡಲು ಬಾಳೆಯ ಬೆಳೆಯನ್ನು ವಿಮೆ ಮಾಡಲು ಅವಕಾಶವಿದೆ. ಜಪಾನಿನಲ್ಲಿ ಬತ್ತದ ಬೆಳೆ ಮತ್ತು ರೇಷ್ಮೆ ಹುಳುಗಳ ಸಾಕಣೆ ಮೇಲೆ ಕಡ್ಡಾಯವಾಗಿ ವಿಮೆ ಮಾಡಬೇಕಾಗಿದೆ. ಇದು ದುಬಾರಿಯ ವಿಮೆ. ಆದ್ದರಿಂದ ವಿಮಾ ಕಂತಿನಲ್ಲಿ ಒಂದು ಭಾಗವನ್ನು ರೈತರೂ ಉಳಿದದ್ದನ್ನು ಸರ್ಕಾರವೂ ಕೊಡುವ ವ್ಯವಸ್ಥೆ ಇದೆ. ಈ ಸಂಬಂಧವಾಗಿ ಆಗಬಹುದಾದ ಆರ್ಥಿಕ ನಷ್ಟವನ್ನು ಸರ್ಕಾರವೇ ಭರಿಸುತ್ತದೆ. ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಸಕಲ ರೀತಿಯ ಬೆಳೆ ವಿಮಾ ಯೋಜನೆಗಳು ಜಾರಿಯಲ್ಲಿವೆ. (ನೋಡಿ- ಕೃಷಿ-ವಿಮೆ)
ಕೃಷಿ ಸಂಬಂಧವಾದ ತೆರಿಗೆಗಳು : ಪ್ರಾಚೀನ ಕಾಲದಿಂದಲೂ ಸರ್ಕಾರದ ಆದಾಯದ ಬಾಬ್ತಿನಲ್ಲಿ ಕೃಷಿಯ ಮೇಲಿನ ತೆರಿಗೆ ಮುಖ್ಯವಾಗಿದೆ. ಅನೇಕ ಶತಮಾನಗಳ ಕಾಲ ಎಲ್ಲ ದೇಶಗಳಲ್ಲೂ ಕೃಷಿ ಉತ್ಪನ್ನದಲ್ಲಿ ಒಂದು ಗೊತ್ತಾದ ಭಾಗವನ್ನು ದಿನಸಿಯ ರೂಪದಲ್ಲಿ ಸರ್ಕಾರಕ್ಕೆ ರೈತರು ಕಂದಾಯ ಕಟ್ಟುವ ಪದ್ಧತಿ ಇತ್ತು. ಭಾರತದಲ್ಲಿ ರೈತರು ತಾವು ಗಳಿಸಿದ ಉತ್ಪನ್ನದಲ್ಲಿ ಆರನೆಯ ಒಂದು ಭಾಗದಿಂದ ಮೂರನೆಯ ಒಂದು ಭಾಗದ ವರೆಗೆ ಸರ್ಕಾರಕ್ಕೆ ಕಂದಾಯ ಕೊಡುವ ಪದ್ಧತಿ ಮೊದಲಿನಿಂದಲೂ ಇತ್ತು.
ಕಾಲಕ್ರಮೇಣ ಹಣ ಚಲಾವಣೆ ಸಾರ್ವತ್ರಿಕವಾಗಿ ಜಾರಿಗೆ ಬಂದಂತೆ ಎಲ್ಲ ದೇಶಗಳಲ್ಲೂ ದಿನಸಿಯ ಬದಲಾಗಿ ಹಣದ ರೂಪದಲ್ಲಿ ಸರ್ಕಾರಕ್ಕೆ ಕಂದಾಯ ಮತ್ತು ತೆರಿಗೆಗಳನ್ನು ಕೊಡುವುದು ರೂಢಿಗೆ ಬಂತು. ಕೃಷಿಗೆ ಸಂಬಂಧಪಟ್ಟಂತೆ ಕಂದಾಯ, ತೆರಿಗೆ ಅಥವಾ ಕರಗಳನ್ನು ಭೂ ಆಸ್ತಿಯ ಮೌಲ್ಯ ಅಥವಾ ವಾರ್ಷಿಕ ಗೇಣಿಯ ಬೆಲೆ ಅಥವಾ ಸಾಮಾನ್ಯ ವರಮಾನಕ್ಕನುಗುಣವಾಗಿ ಗೊತ್ತುಪಡಿಸಲಾಗುತ್ತದೆ.
ಕೈಗಾರಿಕೆ, ವಾಣಿಜ್ಯ, ಆರ್ಥಿಕ ಸೇವಾಕ್ಷೇತ್ರಗಳು ಹೆಚ್ಚಿದಂತೆಲ್ಲ ಈ ಕ್ಷೇತ್ರಗಳ ಮೇಲೆ ಬೀಳುವ ತೆರಿಗೆ ಕ್ರಮವಾಗಿ ಏರುತ್ತ ಬಂದು ಆಧುನಿಕ ಸರ್ಕಾರಗಳ ಆದಾಯ ಬಾಬ್ತುಗಳಲ್ಲಿ ಇವು ಹೆಚ್ಚು ಪ್ರಾಮುಖ್ಯ ಪಡೆದಿವೆ. ಭೂ ಕಂದಾಯ ಮತ್ತು ಕೃಷಿ ಕ್ಷೇತ್ರದ ಮೇಲಿನ ಇತರ ತೆರಿಗೆಗಳಿಂದ ಸರ್ಕಾರಕ್ಕೆ ಬರುತ್ತಿರುವ ಆದಾಯ ಗಣನೀಯವಾಗಿದ್ದರೂ ಅದು ಮೊದಲಿನಷ್ಟು ಪ್ರಧಾನವಾಗಿಲ್ಲ.
ಎಷ್ಟೋ ದೇಶಗಳಲ್ಲಿ ಕೃಷಿ ಕ್ಷೇತ್ರದ ಮೇಲಿನ ತೆರಿಗೆಯಿಂದ ಬರುವ ಹಣ ಸ್ಥಳೀಯ ಸಂಸ್ಥೆಗಳ ನಿರ್ವಹಣೆಗೆ ಮೀಸಲಾಗಿರುವುದೂ ಉಂಟು.
ಕೆಲವು ದೇಶಗಳಲ್ಲಿ ಭೂಕಂದಾಯವನ್ನು ಪ್ರತ್ಯೇಕವಾಗಿ ವಿಧಿಸುವ ಪದ್ಧತಿ ಇದ್ದರೆ, ಮುಂದುವರಿದ ದೇಶಗಳಲ್ಲಿ ಸಾಮಾನ್ಯ ವರಮಾನ ತೆರಿಗೆ ಕೃಷಿ ಉದ್ಯಮಿಗಳ ವರಮಾನಕ್ಕೂ ಅನ್ವಯಿಸುತ್ತದೆ. ಗ್ರೇಟ್ ಬ್ರಿಟನ್ನಿನಲ್ಲಿ 1799ರಿಂದ ಕೃಷಿ ವರಮಾನವನ್ನು ವರಮಾನ ತೆರಿಗೆಗೆ ಅಳವಡಿಸುವ ಪದ್ಧತಿ ಜಾರಿಗೆ ಬಂದಿದ್ದರೂ ಬಹಳ ವರ್ಷಗಳ ಕಾಲ ಕೃಷಿ ಉದ್ಯಮಿಗಳಿಗೆ ರಿಯಾಯಿತಿ ದರದಲ್ಲಿ ವರಮಾನ ತೆರಿಗೆ ವಿಧಿಸುವ ಪದ್ಧತಿಯಿತ್ತು. ಆದರೆ 1948 ರಿಂದ ಈ ತಾರತಮ್ಯ ಹೋಗಿ ಇತರ ಉದ್ಯಮಿಗಳು ತೆರುವ ದರದಲ್ಲೇ ಕೃಷಿ ಉದ್ಯಮಿಗಳೂ ವರಮಾನ ತೆರಿಗೆ ಕೊಡುವುದು ರೂಢಿಗೆ ಬಂದಿದೆ. ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಫೆಡರಲ್ ಇನ್‍ಕಂ ಟ್ಯಾಕ್ಸ್ ರೀತ್ಯ ಯಾವ ತಾರತಮ್ಯವೂ ಇಲ್ಲದೆ ಬೇಸಾಯಗಾರರು ಇತರ ಕ್ಷೇತ್ರಗಳಲ್ಲಿರುವವರಂತೆಯೇ ವರಮಾನ ತೆರಿಗೆ ಕೊಡಬೇಕು.
ಭಾರತದಲ್ಲಿ ಭೂ ಕಂದಾಯ ಪ್ರಾಚೀನ ಕಾಲದಿಂದಲೂ ಸರ್ಕಾರದ ಮುಖ್ಯ ಆದಾಯ ಬಾಬ್ತು ಆಗಿದೆ. ಭಾರತದ ಸಂವಿಧಾನದ ಪ್ರಕಾರ ಭೂ ಕಂದಾಯ ಮತ್ತು ಕೃಷಿಕ್ಷೇತ್ರದ ಮೇಲೆ ವಿಧಿಸಬಹುದಾದ ಇತರ ಬಗೆಯ ತೆರಿಗೆ ಅಥವಾ ಕರಗಳನ್ನು ರಾಜ್ಯ ಸರ್ಕಾರಗಳ ಅಧಿಕಾರವ್ಯಾಪ್ತಿಗೆ ಬಿಡಲಾಗಿದೆ. ರಾಜ್ಯ ಸರ್ಕಾರಗಳ ಆದಾಯ ಬಾಬ್ತುಗಳಲ್ಲಿ ಮಾರಾಟ ತೆರಿಗೆ ಬಿಟ್ಟರೆ ಭೂ ಕಂದಾಯ ಎರಡನೆಯ ಮುಖ್ಯ ಆದಾಯದ ಬಾಬ್ತು ಆಗಿದೆ.
ಭೂ ಕಂದಾಯವನ್ನು ಲಾಭದಾಯಕವಲ್ಲದ ಸಣ್ಣ ಹಿಡುವಳಿಗಳಿಂದ ಹಿಡಿದು ಎಲ್ಲ ತರದ ಜಮೀನಿನ ಮೇಲೂ ವಿಧಿಸುವುದರಿಂದ ಅದು ಆರ್ಥಿಕವಾಗಿ ಅಸಮರ್ಥನೀಯವಾದ ಹಾಗೂ ಅನ್ಯಾಯವಾದ ಹೊರೆ ಎಂದು ಭಾವಿಸಲಾಗಿದೆ. ಈಚಿನ ವರ್ಷಗಳಲ್ಲಿ ಕೆಲವು ರಾಜ್ಯಗಳಲ್ಲಿ ಸಣ್ಣ ಹಿಡುವಳಿಗಳ ಮೇಲಿನ ಕಂದಾಯವನ್ನು ರದ್ದು ಮಾಡುವ ಕ್ರಮ ಕೈಗೊಳ್ಳಲಾಗಿದೆ. ಭೂ ಕಂದಾಯವನ್ನು ರದ್ದು ಮಾಡಿ ಕೃಷಿ ವರಮಾನ ತೆರಿಗೆ ಹಾಕಬೇಕೆಂಬುದು ಎಲ್ಲ ರಾಜಕೀಯ ಪಕ್ಷಗಳ ಘೋಷಿತ ನೀತಿಯಾಗಿದೆ. ಈಚೆಗೆ ಅನೇಕ ರಾಜ್ಯ ಸರ್ಕಾರಗಳು ಕೃಷಿ ವರಮಾನ ತೆರಿಗೆಯನ್ನು ವಿಧಿಸುತ್ತಿವೆ.
ಕೃಷಿ ಉತ್ಪನ್ನಗಳ ಮಾರಾಟ: ಬೇಸಾಯದ ಗುರಿ ರೈತನ ಕುಟುಂಬ ನಿರ್ವಹಣೆಗೆ ಆಹಾರವನ್ನುತ್ಪಾದಿಸುವುದು ಮಾತ್ರ ಆಗಿದ್ದಾಗ ಆ ಉತ್ಪನ್ನಗಳ ಮಾರಾಟದ ಪ್ರಶ್ನೆ ಇರಲಿಲ್ಲ. ಉಳಿದ ಅಲ್ಪಸ್ವಲ್ಪ ಹೆಚ್ಚುವರಿ ದಿನಸಿಗಳನ್ನು ಗ್ರಾಮದಲ್ಲಿಯೇ ಅದಲುಬದಲು ಮಾಡುವ ಮೂಲಕ ಇತರ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುತ್ತಿತ್ತು. ಈಗ ಆ ಪರಿಸ್ಥಿತಿ ಇಲ್ಲ. ಈಗ ಬೇರೆ ಉದ್ಯಮಗಳಂತೆಯೇ ಕೃಷಿ ಉದ್ಯಮದ ವಾಣಿಜ್ಯೀಕರಣ ಆಗಿದೆ. ಬೇಸಾಯಗಾರರು ಬೆಳೆದ ದಿನಸಿಗಳು ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ. ಆಧುನಿಕ ಕಾಲದ ಸಮಸ್ಯೆಯೆಂದರೆ ಮಾರುಕಟ್ಟೆಗಾಗಿ ಉತ್ಪನ್ನ ಮಾಡುವ ಕೃಷಿ ಉದ್ಯಮಿಗಳಿಗೆ ಅವರು ಉತ್ಪಾದನೆ ಮಾಡುವ ದವಸ ಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ದೊರಕಿಸಿ ಅವರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದಾಗಿದೆ. ರೈತರು ಬೆಳೆಯುವ ಉತ್ಪನ್ನ/ಪದಾರ್ಥಗಳನ್ನು ಅವರೇ ಖುದ್ದಾಗಿ ಮಾರಾಟ ಮಾಡಲು ಅಸಾಧ್ಯವಾಗುತ್ತದೆ. ಆದ್ದರಿಂದ ವರ್ತಕರು, ದಳ್ಳಾಳಿಗಳು ಮುಂತಾದ ಮಧ್ಯವರ್ತಿಗಳನ್ನೂ ಸಾರ್ವಜನಿಕ ಹಾಗೂ ಸಹಕಾರಿ ಮಾರಾಟ ಸಂಸ್ಥೆಗಳನ್ನೂ ಅವಲಂಬಿಸಬೇಕಾಗಿದೆ. ಖಾಸಗಿಯವರ ಮೂಲಕ ಮಾರಾಟ ಮಾಡಿದಾಗ ಲಾಭದ ಬಹುಪಾಲು ಮಧ್ಯವರ್ತಿಗಳಿಗೆ ಸಲ್ಲುವುದರಿಂದ ರೈತರಿಗೆ ಅನ್ಯಾಯವಾಗುತ್ತದೆ. ಅದನ್ನು ತಪ್ಪಿಸಲು ಅನೇಕ ದೇಶಗಳಲ್ಲಿ ಸರ್ಕಾರಗಳು ಸುಸಜ್ಜಿತ ಮಾರುಕಟ್ಟೆಗಳನ್ನು ಏರ್ಪಡಿಸಿ ಉತ್ಪನ್ನಕಾರರಿಗೆ ಲಾಭದಾಯಕ ಅಥವಾ ನ್ಯಾಯವಾದ ಬೆಲೆ ದೊರೆಯುವಂತೆ ಹಲವಾರು ಕ್ರಮಗಳನ್ನು ಕೈಗೊಂಡಿವೆ.
ಬೇಸಾಯದ ಉತ್ಪನ್ನಗಳಿಗೆ ಸರಿಯಾದ ಬೆಲೆಯನ್ನು ಒದಗಿಸಿಕೊಡುವ ದೃಷ್ಟಿಯಿಂದ ಉತ್ಪನ್ನಗಳ ಸಂಸ್ಕರಣ, ಗುಣಕ್ಕನುಗುಣವಾಗಿ ವಸ್ತುಗಳ ಶ್ರೇಣೀಕರಣ, ವಸ್ತುಗಳ ವ್ಶೆಜ್ಞಾನಿಕ ದಾಸ್ತಾನು-ಈ ಸಂಬಂಧವಾಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೃಷಿ ಉತ್ಪನ್ನದ ಮಾರಾಟಕ್ಕೆ ವಿಧಿಬದ್ಧ ಮಾರುಕಟ್ಟೆಗಳನ್ನೂ ಕೇಂದ್ರ ದಾಸ್ತಾನು ಕೋಠಿಗಳನ್ನೂ ಏರ್ಪಾಟು ಮಾಡುವುದರ ಮೂಲಕವೂ ಅಗತ್ಯ ಸಂದರ್ಭಗಳಲ್ಲಿ ನ್ಯಾಯೋಚಿತ ಬೆಲೆಗಳನ್ನು ಗೊತ್ತುಪಡಿಸುವುದರ ಮೂಲಕವೂ ಸರ್ಕಾರ ಸಹಾಯ ಮಾಡುತ್ತದೆ. ಸಹಕಾರ ಮಾರುಕಟ್ಟೆ ವ್ಯವಸ್ಥೆ ಬೆಳೆದಿರುವ ಕಡೆ ಸಹಕಾರಿ ಮಾರಾಟ ಸಂಸ್ಥೆಗಳು ಉತ್ಪನ್ನಗಳ ಸಂಸ್ಕರಣ, ದಾಸ್ತಾನು, ಮಾರಾಟ ಇತ್ಯಾದಿ ಎಲ್ಲ ಸೌಲಭ್ಯಗಳನ್ನೂ ಒದಗಿಸುತ್ತವೆ.
ಭಾರತದಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಮುಖ್ಯವಾಗಿ ಗ್ರಾಮಾಂತರ ಕೇಂದ್ರಗಳಲ್ಲಿ ವಾರಕ್ಕೊಮ್ಮೆ ಸೇರುವ ಸಂತೆಗಳಲ್ಲೂ ನಗರ ಮತ್ತು ಪಟ್ಟಣಗಳಲ್ಲಿರುವ ದಿನಸಿ ಮಂಡಿಗಳ ಮೂಲಕವೂ ಸಹಕಾರಿ ಮಾರಾಟ ಕೇಂದ್ರ ಮತ್ತು ನಿಯಂತ್ರಿತ ಮಾರುಕಟ್ಟೆಗಳ ಮೂಲಕವೂ ನಡೆಯುತ್ತದೆ. ಖಾಸಗಿ ಮಧ್ಯವರ್ತಿಗಳ ಮೂಲಕ ನಡೆಯುವ ಮಾರಾಟದಲ್ಲಿ ಬೇಸಾಯಗಾರರಿಗೆ ಸಾಕಷ್ಟು ಲಾಭದಾಯಕ ಬೆಲೆ ದೊರೆಯುವುದಿಲ್ಲ. ಆದ್ದರಿಂದ ಈಚಿನ ವರ್ಷಗಳಲ್ಲಿ ಸಹಕಾರಿ ಮಾರಾಟ ಕೇಂದ್ರಗಳ ಮೂಲಕವೂ ನಿಯಂತ್ರಿತ ಮಾರುಕಟ್ಟೆಗಳ ಮೂಲಕವೂ ಮಾರಾಟ ಮಾಡುವಂತೆ ರೈತರಿಗೆ ಪ್ರೋತ್ಸಾಹ ಕೊಡಲಾಗುತ್ತಿದೆ. ನಿಯಂತ್ರಿತ ಮಾರುಕಟ್ಟೆಗಳನ್ನು ರಚಿಸುವ ಬಗ್ಗೆ ಹೆಚ್ಚು ಕಡಿಮೆ ಎಲ್ಲ ರಾಜ್ಯಗಳಲ್ಲೂ ಕಾನೂನು ಮಾಡಲಾಗಿದೆ. 1969ರಲ್ಲಿ ಭಾರತಾದ್ಯಂತ ಒಟ್ಟು 1,844 ನಿಯಂತ್ರಿತ ಮಾರುಕಟ್ಟೆಗಳು ಹಾಗೂ ಉಪಮಾರುಕಟ್ಟೆ ಕೇಂದ್ರಗಳನ್ನು ಏರ್ಪಡಿಸಲಾಗಿತ್ತು. ಗುಣದ ಆಧಾರದ ಮೇಲೆ ಕೃಷಿ ಉತ್ಪನ್ನಗಳನ್ನು ಶ್ರೇಣೀಕರಣ ಮಾಡುವ ಕಾರ್ಯಕ್ರಮದಂತೆ 1969ರಲ್ಲಿ 450 ಗುಣ ನಿರ್ಧರಿಸಲು ಕೇಂದ್ರಗಳಿದ್ದುವು. ಅವುಗಳ ಸಂಖ್ಯೆಯನ್ನು ಕ್ರಮೇಣ ಏರಿಸುವ ಯೋಜನೆ ಇದೆ. ಆಹಾರ ಮತ್ತಿತ್ತರ ಕೃಷಿ ಉತ್ಪನ್ನಗಳ ಸಂಸ್ಕರಣ ಮತ್ತು ಸಂರಕ್ಷಣೆಗಾಗಿ ಸಂಘಸಂಸ್ಥೆಗಳು ಕಾರ್ಯನಿರತವಾಗಿವೆ.
(ನೋಡಿ- ಕೃಷಿ-ಉತ್ಪನ್ನ-ಮಾರಾಟ)
ಕೃಷಿ ಮತ್ತು ಸಹಕಾರ: ವಿಶ್ವವ್ಯಾಪಿಯಾಗಿರುವ ಸಹಕಾರ ಚಳವಳಿ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಾಯಕವಾಗಿದೆ. ಸ್ವಯಂಪ್ರೇರಿತ ಸಹಕಾರ, ಪ್ರಜಾತಂತ್ರ, ಪರಸ್ಪರ ಸಹಾಯ-ಈ ತತ್ತ್ವಗಳನ್ನು ಆಧಾರವಾಗುಳ್ಳ ಸಹಕಾರ ಪದ್ಧತಿ ಕೃಷಿ ಸಮುದಾಯಗಳ ಆರ್ಥಿಕ ಉನ್ನತಿಗೆ ಉತ್ತೇಜಕವಾಗಿದೆ. ಕೃಷಿ ಸಹಕಾರ ಸಂಸ್ಥೆಗಳು ಪ್ರಧಾನವಾಗಿ ಬೇಸಾಯಗಾರರಿಗೆ ಮೂರು ರೀತಿಯಲ್ಲಿ ಸಹಾಯ ಮಾಡುತ್ತವೆ :
1 ರೈತರಿಗೆ ಬೇಕಾದ ಉಪಕರಣಗಳನ್ನೂ ಸಾರಪೋಷಕಗಳನ್ನೂ ಸಾಲವನ್ನೂ ಸಮಯಕ್ಕೆ ಸರಿಯಾಗಿ ಒದಗಿಸುವುದು. 2 ರೈತರು ಉತ್ಪಾದನೆ ಮಾಡುವ ವಸ್ತುಗಳನ್ನು ಕೊಂಡು ದಾಸ್ತಾನು ಮಾಡಿ ಮಾರುಕಟ್ಟೆ ಬೆಲೆಗಳು ಲಾಭದಾಯಕವಾಗಿರುವಾಗ ಮಾರಾಟ ಮಾಡಿ ರೈತರಿಗೆ ಸೂಕ್ತ ಪ್ರತಿಫಲ ಬರುವಂತೆ ಮಾಡುವುದು. 3 ಕೃಷಿಯನ್ನು ಆಧುನಿಕ ರೀತಿಯಲ್ಲಿ ನಡೆಸಿಕೊಂಡು ಹೋಗುವಂತೆ ರೈತರಿಗೆ ಅಗತ್ಯ ಸೇವೆಗಳನ್ನು ಒದಗಿಸುವುದು.
ಸದಸ್ಯರ ಆರ್ಥಿಕ ಮತ್ತು ಸಾಮಾಜಿಕ ಉನ್ನತಿಗಾಗಿ ಸದಸ್ಯರುಗಳೇ ನಡೆಸುವ ಸಹಕಾರ ಸಂಘಗಳು ಪ್ರಜಾ ತಾಂತ್ರಿಕ ಸಂಸ್ಥೆಗಳಾಗಿರುತ್ತವೆ. ಮುಂದುವರಿದ ಪಾಶ್ಚಾತ್ಯ ದೇಶಗಳಲ್ಲಿ ಸರ್ಕಾರಗಳು ಸಾಮಾನ್ಯವಾಗಿ ಸಹಕಾರ ಸಂಸ್ಥೆಗಳ ವ್ಯವಹಾರಗಳಲ್ಲಿ ಪ್ರವೇಶ ಮಾಡುವುದಿಲ್ಲ. ಹಿಂದುಳಿದ ಅಥವಾ ಅಭಿವೃದ್ಧಿಪಥದಲ್ಲಿರುವ ದೇಶಗಳಲ್ಲಿ ಸರ್ಕಾರ ಅನಿವಾರ್ಯವಾಗಿ ಸಹಕಾರಿ ಸಂಸ್ಥೆಗಳ ವ್ಯವಹಾರದಲ್ಲಿ ಭಾಗವಹಿಸಬೇಕಾಗುತ್ತದೆ. ಸಹಕಾರಿ ಸಂಸ್ಥೆಗಳಿಗೆ ಸಾಕಷ್ಟು ಹಣಕಾಸಿನ ಮುಂಗಡಗಳನ್ನು ಒದಗಿಸಬೇಕಾಗಿರುವುದರಿಂದಲೂ ಅವುಗಳ ವಹಿವಾಟು ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾದ್ದರಿಂದಲೂ ಸರ್ಕಾರಗಳು ಸಹಕಾರ ಸಂಸ್ಥೆಗಳ ಮೇಲೆ ಹತೋಟಿ ಇಟ್ಟುಕೊಳ್ಳುವುದು ಅಗತ್ಯವೆಂದು ಭಾವಿಸಲಾಗಿದೆ. ಮುಂದುವರಿದ ದೇಶಗಳಲ್ಲಿ ಒಂದೊಂದು ಕೃಷಿ ಉತ್ಪನ್ನದ ಮಾರಾಟಕ್ಕಾಗಿಯೇ ಅಥವಾ ಒಂದೊಂದು ನಿರ್ದಿಷ್ಟ ಸೇವೆ ಒದಗಿಸುವ ದೃಷ್ಟಿಯಿಂದಲೇ ಪ್ರತ್ಯೇಕ ಸಹಕಾರ ಸಂಸ್ಥೆಗಳು ಇವೆ. ಇತರ ದೇಶಗಳಲ್ಲಿ ನಾಲ್ಕಾರು ಬಗೆಯ ಸೇವೆಗಳನ್ನು ನಿರ್ವಹಿಸುವ ವಿವಿಧೋದ್ದೇಶ ಅಥವಾ ಸೇವಾ ಸಹಕಾರ ಸಂಘಗಳು ಇವೆ. ಭಾರತದಲ್ಲಿ ಕೃಷಿ ಅಭಿವೃದ್ಧಿಯ ಧ್ಯೇಯದಿಂದಲೇ 20ನೆಯ ಶತಮಾನದ ಆದಿಭಾಗದಲ್ಲಿ ವಿಧಿವತ್ತಾಗಿ ಕೃಷಿ ಸಹಕಾರ ಸಂಘಗಳ ರಚನೆ ಆರಂಭವಾಯಿತು. ಮೊದ ಮೊದಲು ಪ್ರಧಾನವಾಗಿ ಗ್ರಾಮಗಳಲ್ಲಿ ಕೃಷಿಗೆ ಸಾಲ ನೀಡುವ ಪ್ರಾಥಮಿಕ ಸಹಕಾರ ಸಂಘಗಳು ಏರ್ಪಟ್ಟುವು. ಕ್ರಮೇಣ ಇತರ ಬಗೆಯ ಸೇವೆಗಳನ್ನು ಒದಗಿಸುವ ಸಹಕಾರ ಸಂಘಗಳು ಆರಂಭವಾದುವು. ಸ್ವಾತಂತ್ರ್ಯೋತ್ತರದಲ್ಲಿ ಪಂಚವಾರ್ಷಿಕ ಯೋಜನೆಗಳ ಕಾರ್ಯಕ್ರಮ ಆರಂಭವಾದ ಮೇಲೆ ಕೃಷಿ ಸಹಕಾರ ಸಂಸ್ಥೆಗಳಿಗೆ ಎಲ್ಲ ರೀತಿಯ ನೆರವನ್ನು ಕೊಡಲಾಗುತ್ತಿದೆ. ಗ್ರಾಮೀಣ ಭಾರತದ ವಿಶಿಷ್ಟ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗನುಗುಣವಾಗಿ ಸೇವಾ ಸಹಕಾರ ಸಂಘಗಳನ್ನು ಸ್ಥಾಪಿಸಲು ಆದ್ಯತೆ ಕೊಡಲಾಗುತ್ತಿದೆ. ಸಹಸ್ರಾರು ಸೇವಾ ಸಹಕಾರ ಸಂಘಗಳು ಕಾರ್ಯನಿರತವಾಗಿದ್ದು ರೈತರಿಗೆ ಬೀಜ, ವ್ಯವಸಾಯದ ಉಪಕರಣಗಳು, ಸಾರಪೋಷಕಗಳು, ಸಾಲ ಇತ್ಯಾದಿಗಳನ್ನು ಒದಗಿಸುವುದರ ಜೊತೆಗೆ ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುವ ಕೆಲಸಗಳನ್ನು ನಿರ್ವಹಿಸುತ್ತಿವೆ. ರೈತರಿಗೆ ದೀಘಾವಧಿ ಸಾಲ ಒದಗಿಸಲು ಭೂ ಅಡಮಾನ ಬ್ಯಾಂಕುಗಳು ಕಾರ್ಯ ನಿರತವಾಗಿವೆ. ಭಿನ್ನ ಭಿನ್ನ ಹಿಡುವಳಿಗಳನ್ನು ಸಂಘಟಿಸಿ ಬೇಸಾಯವನ್ನು ಲಾಭದಾಯಕವನ್ನಾಗಿ ಮಾಡುವ ದೃಷ್ಟಿಯಿಂದ ಸಹಕಾರಿ ಬೇಸಾಯ ಕೇಂದ್ರಗಳ ಉದ್ಯಮಕ್ಕೆ ವಿಶೇಷ ಪ್ರೋತ್ಸಾಹ ಕೊಡಲಾಗುತ್ತಿದೆ. (ನೋಡಿ- ಕೃಷಿ-ಸಹಕಾರ) ಕೃಷಿ ಕಾರ್ಮಿಕರು : ಕೃಷಿ ಕ್ಷೇತ್ರದಲ್ಲಿ ದುಡಿಮೆ ಮಾಡುವವರಲ್ಲಿ ಸಾಮಾನ್ಯವಾಗಿ ಮೂರು ಬಗೆಯ ಜನರನ್ನು ಗುರುತಿಸಬಹುದು : 1. ಭೂ ಹಿಡುವಳಿಯ ಮಾಲಿಕರಾಗಿದ್ದು ತಮ್ಮ ಸ್ವಂತ ಶ್ರಮದಿಂದ ಹಾಗೂ ತಮ್ಮ ಕುಟುಂಬದ ಸದಸ್ಯರ ಸಹಾಯದಿಂದ ಬೇಸಾಯ ಮಾಡುವವರು. 2. ಬೇರೆಯವರ ಹಿಡುವಳಿಗಳನ್ನು ಗೇಣಿ ಅಥವಾ ಗುತ್ತಿಗೆಯ ಆಧಾರದ ಮೇಲೆ ಪಡೆದುಕೊಂಡು ಕೃಷಿ ಮಾಡುವ ಗೇಣಿದಾರರು, 3. ಕೇವಲ ಕೂಲಿಗೋಸ್ಕರ ಬೇರೆಯವರ ಜಮೀನುಗಳಲ್ಲಿ ದುಡಿಯುವವರು. ಮೂರನೆಯ ವರ್ಗದ ಜನ ಕೃಷಿ ಕಾರ್ಮಿಕರೆನಿಸುತ್ತಾರೆ.
ಎಲ್ಲ ದೇಶಗಳಲ್ಲೂ ಕೃಷಿ ಕಾರ್ಮಿಕರು ಅನನುಕೂಲ ಪರಿಸ್ಥಿತಿಯಲ್ಲಿ ದುಡಿಮೆ ಮಾಡುತ್ತಾರೆ. ಮುಂದುವರಿದ ಅಮೆರಿಕ ಮತ್ತು ಐರೋಪ್ಯ ದೇಶಗಳಲ್ಲೂ ಕೃಷಿ ಕಾರ್ಮಿಕರ ವೇತನ ಮಟ್ಟ ಕೈಗಾರಿಕಾ ಕಾರ್ಮಿಕರ ವೇತನ ಮಟ್ಟಕ್ಕಿಂತ ಕಡಿಮೆ ಇರುತ್ತದೆ. ಏಷ್ಯದ ದೇಶಗಳಲ್ಲಂತೂ ಕೃಷಿ ಕಾರ್ಮಿಕರ ಸ್ಥಿತಿ ತೀರ ಕಾರ್ಪಣ್ಯದ್ದಾಗಿದೆ.
ಕೃಷಿ ಕಾರ್ಮಿಕರ ಸ್ಥಿತಿ ಅನನುಕೂಲವಾಗಿರುವುದಕ್ಕೆ ಮುಖ್ಯ ಕಾರಣಗಳು ಇವು ; 1. ಸಾಮಾನ್ಯವಾಗಿ ಕೃಷಿ ಕ್ಷೇತ್ರದಲ್ಲಿ ವರ್ಷ ಪೂರ್ತಿ ಕೆಲಸವಿರುವುದಿಲ್ಲ. ಇದು ಪ್ರಧಾನವಾಗಿ ಶ್ರಾಯೀಣ (ಸೀಸನಲ್) ಉದ್ಯಮ. ಈ ಉದ್ಯಮದ ಎಲ್ಲ ಘಟ್ಟಗಳಲ್ಲೂ ಒಂದೇ ಮಟ್ಟದಲ್ಲಿ ಕಾರ್ಮಿಕರ ಸೇವೆ ಅಗತ್ಯವಿರುವುದಿಲ್ಲ. ಕೃಷಿಯ ಕೆಲವು ಘಟ್ಟಗಳಲ್ಲಿ ಅಂದರೆ ಬಿತ್ತನೆ ಮಾಡುವಾಗ, ಕಳೆ ಕೀಳುವಾಗ, ಫಸಲು ಕುಯ್ಲು ಮಾಡುವಾಗ ಮಾತ್ರ ಹೆಚ್ಚು ಜನರ ಶ್ರಮ ಅಗತ್ಯವಾಗುತ್ತದೆ. ಅಂಥ ಸಂದರ್ಭಗಳಲ್ಲಿ ಭೂ ಮಾಲೀಕರು ಕೃಷಿ ಕಾರ್ಮಿಕರನ್ನು ಸಾಮಾನ್ಯವಾಗಿ ದಿನಗೂಲಿಯ ಮೇಲೆ ನೇಮಿಸಿಕೊಳ್ಳುತ್ತಾರೆ. ಆದ್ದರಿಂದ ಕೃಷಿ ಕಾರ್ಮಿಕರಿಗೆ ವರ್ಷಪೂರ್ತಿ ಪೂರ್ಣಕಾಲದ ಉದ್ಯೋಗ ಲಭಿಸುವುದಿಲ್ಲ. 2. ಕೃಷಿ ಕಾರ್ಮಿಕರು ಗ್ರಾಮಾಂತರ ಪ್ರದೇಶಗಳಲ್ಲಿ ಹಂಚಿ ಹೋಗಿರುವುದರಿಂದ ಅವರಲ್ಲಿ ಸಂಘಟನೆ ತುಂಬ ಕಷ್ಟ.. ಸಂಘಟನೆ ಇಲ್ಲದಿರುವಾಗ ಉದ್ಯೋಗದ ಸ್ಥಿತಿಗತಿಗಳನ್ನು ಉತ್ತಮಪಡಿಸಿಕೊಳ್ಳುವುದು ಸುಲಭವಲ್ಲ. 3. ಕೃಷಿ ಕಾರ್ಮಿಕರು ಸಾಮಾನ್ಯವಾಗಿ ಕುಶಲ ಕಾರ್ಮಿಕರಾಗಿರುವುದಿಲ್ಲ. ಆದ್ದರಿಂದ ಅವರಿಗೆ ದಕ್ಕುವ ವೇತನ ಕಡಿಮೆ.
ಕೃಷಿ ಕಾರ್ಮಿಕರ ದುಃಸ್ಥಿತಿಯನ್ನು ಹೋಗಲಾಡಿಸಲು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಕೆಲವು ನಿರ್ದಿಷ್ಟ ಕ್ರಮಗಳನ್ನು ಎಲ್ಲ ಸರ್ಕಾರಗಳಿಗೂ ಸೂಚಿಸಿದೆ. ಹಲವು ದೇಶಗಳಲ್ಲಿ ಕೃಷಿ ಕಾರ್ಮಿಕರಿಗೆ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಏರ್ಪಡಿಸುವ ಬಗ್ಗೆ ಕಾನೂನುಗಳನ್ನು ಮಾಡಲಾಗಿದೆ.
ಭಾರತದಲ್ಲಿ ಕೃಷಿ ಕಾರ್ಮಿಕರ ಸಂಖ್ಯೆ 1971ರ ಜನಗಣತಿಯ ಪ್ರಕಾರ ಸು. 454 ದಶಲಕ್ಷ ಇತ್ತು. ಗ್ರಾಮೀಣ ಕುಟುಂಬಗಳಲ್ಲಿ ಶೇಕಡ 24 ರಷ್ಟು ಕೃಷಿ ಕಾರ್ಮಿಕರ ಕುಟುಂಬಗಳೆಂದು ಅಂದಾಜು ಮಾಡಲಾಗಿದೆ.
ಭಾರತದಲ್ಲಿ ಕೃಷಿ ಕಾರ್ಮಿಕರು ಆರ್ಥಿಕವಾಗಿಯೂ ಸಾಮಾಜಿಕವಾಗಿಯೂ ತುಂಬ ಹಿಂದುಳಿದಿದ್ದಾರೆ. ಇವರಲ್ಲಿ ಬಹು ಮಂದಿ ದುರ್ಬಲ ವರ್ಗಗಳಿಗೆ ಸೇರಿದವರು. ಭಾರತ ಸರ್ಕಾರ 1960ರಲ್ಲಿ ಕೃಷಿ ಕಾರ್ಮಿಕರ ಬಗ್ಗೆ ರಚಿಸಿದ್ದ ಎರಡನೆಯ ತನಿಖಾ ಆಯೋಗದ ಪ್ರಕಾರ ಕೃಷಿ ಕಾರ್ಮಿಕರಿಗೆ ವರ್ಷದಲ್ಲಿ ಉದ್ಯೋಗ ದೊರೆಯುವುದು ಸರಾಸರಿ 197 ದಿನಗಳು ಮಾತ್ರ. 1956-57ರಲ್ಲಿ ಅವರ ಸರಾಸರಿ ತಲಾ ವಾರ್ಷಿಕ ವರಮಾನ ಕೇವಲ ರೂ. 99 ಆಗಿತ್ತು. ಅದೇ ವರ್ಷ ರಾಷ್ಟ್ರದ ಸರಾಸರಿ ತಲಾ ವಾರ್ಷಿಕ ವರಮಾನ ರೂ. 291 ಇತ್ತು. ಮತ್ತೆ ಈಚಿನ ವರ್ಷಗಳಲ್ಲಿ ಜನಸಂಖ್ಯೆಯ ಬೆಳವಣಿಗೆಯಿಂದ ಕೃಷಿ ಕಾರ್ಮಿಕರ ಸ್ಥಿತಿ ಇನ್ನೂ ಹದಗೆಟ್ಟಿದೆ.
ಭಾರತದಲ್ಲಿ ಕೃಷಿ ಕಾರ್ಮಿಕರ ಸ್ಥಿತಿಗತಿಗಳನ್ನು ಉತ್ತಮಪಡಿಸಲು ಅವರಿಗೆ ಅನ್ವಯವಾಗುವಂತೆ ಕನಿಷ್ಠ ವೇತನದ ಕಾನೂನು ಮಾಡಲಾಗಿದೆ. ಎಲ್ಲ ರಾಜ್ಯಗಳಲ್ಲೂ ಈ ಕಾನೂನು ಅಂಗೀಕೃತವಾಗಿದ್ದರೂ ಅದರ ಸಾರ್ಥಕ ಅನ್ವಯ ಆಗಿಲ್ಲ. ಕೃಷಿ ಕಾರ್ಮಿಕರ ಅಸಂಘಟಿತ ಪರಿಸ್ಥಿತಿ, ಅಜ್ಞಾನ, ಭೂ ಮಾಲೀಕರ ಉಪೇಕ್ಷೆ ಮತ್ತು ಸರ್ಕಾರದ ಕಾನೂನನ್ನು ಕಾರ್ಯಗತ ಮಾಡಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು- ಇವೇ ಇದಕ್ಕೆ ಕಾರಣ.
ಭೂ ಸುಧಾರಣೆಯಿಂದ ಲಭ್ಯವಾದ ಹೆಚ್ಚುವರಿ ಜಮೀನನ್ನು ಕೃಷಿ ಕಾರ್ಮಿಕರಿಗೆ ಹಂಚುವ ಧೋರಣೆ ಸರ್ಕಾರದ್ದಾಗಿದೆ. ವಿನೋಬಾ ಭಾವೆಯವರು ಭೂದಾನ ಗ್ರಾಮದಾನ ಚಳವಳಿಯ ಫಲವಾಗಿ ದೊರೆತ ಭೂಮಿಯನ್ನು ಬಹುಮಟ್ಟಿಗೆ ಭೂ ಹೀನ ಕೃಷಿ ಕಾರ್ಮಿಕರಿಗೆ ಹಂಚಲಾಗಿದೆ. (ನೋಡಿ- ಕೃಷಿ-ಕಾರ್ಮಿಕರು) ಕೃಷಿ ಕಾನೂನು : ಪ್ರತಿಯೊಂದು ದೇಶದಲ್ಲೂ ಕೃಷಿಗೆ ಸಂಬಂಧಿಸಿದಂತೆ ವ್ಯಾಪಕವಾದ ಕಾನೂನುಗಳಿವೆ. ಇವುಗಳಲ್ಲಿ ಮುಖ್ಯವಾಗಿ ಕೃಷಿ ಹಿಡುವಳಿಗಳ ಮಾಲೀಕತ್ವದ ಬಗ್ಗೆ, ಖಾತೆ ವರ್ಗಾವಣೆ ಬಗ್ಗೆ ನಿಯಮಗಳು, ಸಾಲಕ್ಕಾಗಿ ಭೂಸ್ವತ್ತನ್ನು ಅಡಮಾನ ಮಾಡುವ ಸಂಬಂಧದಲ್ಲಿ ನಿಬಂಧನೆಗಳು, ಮಾಲೀಕ-ಗೇಣಿದಾರರ ಸಂಬಂಧ, ಪೈರುಗಳ ರಕ್ಷಣೆ, ನೀರಾವರಿ ಹಕ್ಕುಗಳು, ಅತಿಕ್ರಮ ಪ್ರವೇಶದ ನಿರ್ಬಂಧ-ಇತ್ಯಾದಿ ವಿಷಯಗಳು ಕೃಷಿ ಸಂಬಂಧದ ಕಾನೂನಿನ ಕಡತದಲ್ಲಿ ಸೇರಿರುತ್ತವೆ.
ಭೂ ಸಂಪತ್ತಿನ ಪರಮಾವಧಿ ಉಪಯೋಗದ ದೃಷ್ಟಿಯಿಂದಲೂ ಕೃಷಿ ಕ್ಷೇತ್ರದಲ್ಲಿ ಖುದ್ದು ದುಡಿಯುವವರಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡುವ ದೃಷ್ಟಿಯಿಂದಲೂ ಭೂ ಸುಧಾರಣಾ ಕಾನೂನುಗಳನ್ನು ಮಾಡಲಾಗಿದೆ. ಭೂ ಮಾಲೀಕರು ಅನಿವಾರ್ಯವಾಗಿ ಗೇಣಿದಾರರಿಂದ ಬೇಸಾಯ ಮಾಡಿಸಬೇಕಾದ ಸಂದರ್ಭದಲ್ಲಿ ಕಾನೂನುಗಳನ್ನು ಮಾಡಲಾಗಿದೆ. ಇದರ ಉದ್ದೇಶ ಗೇಣಿದಾರರಿಗೆ ಬೇಸಾಯದ ಕೆಲಸದ ಭದ್ರತೆ ಒದಗಿಸುವುದು, ನ್ಯಾಯವಾದ ಗೇಣಿಯನ್ನು ಗೊತ್ತುಮಾಡುವುದು ಇತ್ಯಾದಿ.
ಭಾರತದಲ್ಲಿ ಕೃಷಿ ಸಂಬಂಧವಾದ ಕಾನೂನುಗಳು ಅನೇಕವಿದೆ. ಭೂಹಿಡುವಳಿಗಳ ಒಡೆತನದ ಹಕ್ಕು, ವರ್ಗಾವಣೆ, ಅಡಮಾನಕ್ಕೆ ಸಂಬಂಧಿಸಿದಂತೆ ವಿಪುಲವಾದ ಕಾನೂನುಗಳು ಜಾರಿಯಲ್ಲಿವೆ. ಸ್ವಾತಂತ್ರ್ಯೋತ್ತರದಲ್ಲಿ ಭೂ ಸುಧಾರಣೆ ಕಾರ್ಯಕ್ರಮದ ಅಂಗವಾಗಿ ಜಮೀನ್ದಾರಿ, ಜಹಗೀರುದಾರಿ ಮತ್ತು ಇನಾಂ ಪದ್ಧತಿಗಳನ್ನು ಅಂತ್ಯಗೊಳಿಸುವ ಕಾನೂನುಗಳು ಜಾರಿಗೆ ಬಂದುವು. ಖುದ್ದಾಗಿ ಬೇಸಾಯ ಮಾಡುವ ಲಕ್ಷಾಂತರ ಗೇಣಿದಾರರಿಗೆ ಸರ್ಕಾರದೊಡನೆ ನೇರ ಸಂಪರ್ಕ ಉಂಟುಮಾಡಿ ಅವರಿಗೆ ಒಡೆತನದ ಹಕ್ಕು ಇಲ್ಲವೇ ಸಾಗುವಳಿ ಹಕ್ಕನ್ನು ಕೊಡುವ ಕಾನೂನುಗಳನ್ನು ಜಾರಿಗೆ ತರಲಾಯಿತು. ಎಲ್ಲೆಲ್ಲಿ ಭೂ ಮಾಲೀಕರು ಅನಿವಾರ್ಯವಾಗಿ ಗೇಣಿದಾರರಿಂದ ವ್ಯವಸಾಯ ಮಾಡಿಸುತ್ತಾರೋ ಅಲ್ಲಲ್ಲಿ ಸಾಗುವಳಿದಾರರಿಗೆ ಭದ್ರತೆ ಮತ್ತು ಗೇಣಿಯ ಪರಿಮಾಣವನ್ನು ನಿಖರಗೊಳಿಸುವ ಕಾನೂನುಗಳಾಗಿವೆ. ಭೂ ಮಾಲೀಕರು ಸ್ವಯಂ ಬೇಸಾಯಕ್ಕಾಗಿ ಇಟ್ಟುಕೊಳ್ಳಬಹುದಾದ ಹಿಡುವಳಿಯ ಪರಮಾವಧಿ ಪರಿಮಾಣವನ್ನು ಗೊತ್ತುಪಡಿಸುವ ಕಾನೂನುಗಳನ್ನು ಸಾಮಾನ್ಯವಾಗಿ ಎಲ್ಲ ರಾಜ್ಯಗಳೂ ಮಾಡಿವೆ. (ನೋಡಿ- ಕೃಷಿ-ಕಾನೂನುಗಳು) ) (ಪರಿಷ್ಕರಣೆ : ಅರ್ಥಶಾಸ್ತ್ರ ವಿಭಾಗ ಶಿಲ್ಪಾ ಅರ್ಜುನ್ ಗೋಳ,ಗುಲ್ಬರ್ಗಾ ವಿಶ್ವ ವಿದ್ಯಾಲಯ