ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೃಷ್ಣ

ವಿಕಿಸೋರ್ಸ್ದಿಂದ

ಕೃಷ್ಣ

ನಿಗಮದ ನಾರಾಯಣ ವಿಷ್ಣು; ವಾಸುದೇವ; ಮಹಾಭಾರತದ ದಿವ್ಯಪುರುಷ; ಭಾಗವತ ಪುರಾಣದ ದೇವರು; ಭಗವದ್ಗೀತೆಯ ಗುರು; ಭಾಗವತ ಧರ್ಮದ ಅಧಿದೈವ; ಅಸುರ ಸದೃಶರಾದ ಮದಿಷ್ಟ ಅರಸರನ್ನೆಲ್ಲಾ ತನ್ನವರೆನ್ನದೆ ಅನ್ಯರೆನ್ನದೆ ಕೊಂದು ಸಾಮಾನ್ಯ ಜನಕ್ಕೆ ಕ್ಷೇಮವನ್ನು ತಂದ ದೈತ್ಯಾಂತಕ; ಸಾಧುಸಂತರ ಮನಸ್ಸನ್ನು ಸೂರೆಗೊಂಡು; ಇಂದಿಗೂ ಸೂರೆಗೊಳ್ಳುತ್ತಿರುವ ಪ್ರೇಮಮೂರ್ತಿ. ಇಂದಿಗೂ ಜನ ಅಕ್ಕರೆಯಿಂದ ನೆನೆದು ಪೂಜಿಸಿ ಸುಖ ಕಾಣುತ್ತಿರುವ ಅವತಾರ ಪುರುಷ. ಮಂತ್ರದಂತಿರುವ ಶ್ರೀಕೃಷ್ಣನೆಂಬ ಹೆಸರನ್ನು ಹಿಂಜಿ ಎಳೆಎಳೆಯಾಗಿ ಬಿಡಿಸಿ ಇದು ಸಂಕೇತಿಸುವ ಪರಮಸತ್ವದ ಐತಿಹಾಸಿಕಾಂಶವೆಷ್ಟು ಆಧ್ಯಾತ್ಮಿಕಾಂಶವೆಷ್ಟು ಎಂಬುದನ್ನು ಬಿಡಿಸಿ ಸುಲಭವಾಗಿ ಹೇಳಲಾಗುವುದಿಲ್ಲ. ಕೃಷ್ಣನದು ತುಂಬಾ ಹಳೆಗಾಲಕ್ಕೆ ಸೇರಿದ ಹೆಸರು. ಮಹಾಭಾರತದ ಯುದ್ಧದ ಕಾಲ ಕ್ರಿ.ಪು. 3,000 ವರ್ಷಗಳಿಂದ 1400 ವರ್ಷಗಳವರೆಗೂ ವಿದ್ವಾಂಸರ ಜಿಜ್ಞಾಸೆಯಲ್ಲಿ ಅಂದೋಲಿತವಾಗುತ್ತಿದೆ. ಶ್ರೀಕೃಷ್ಣನ ಜೀವಿತ ಕಾಲ ಇದರೊಂದಿಗೆ ಸಮ್ಮಿಳಿತವಾಗಿದೆ. ಹೀಗೆ ಸುಮಾರು ಕನಿಷ್ಠ ಪಕ್ಷ ಮೂರು ಸಾವಿರದ ಐದುನೂರು ವರ್ಷಗಳ ಹಿಂದೆ ಬದುಕಿದ್ದನೆಂದು ಊಹಿಸಬಹುದಾದ ಈ ಮಹಾಪುರುಷನನ್ನು ನಮ್ಮ ಭಾವನಾ ದೃಷ್ಟಿಗೆ ಲೌಕಿಕ ಬುದ್ಧಿಯನ್ನು ಅಳವಡಿಸಿ, ನೋಡಿದರೆ ಶ್ರೀಕೃಷ್ಣನೆಂಬ ಒಬ್ಬ ಐತಿಹಾಸಿಕ ಪುರುಷ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾನೆ. ಜೊತೆಗೆ ಈತ ದೈವ ಪಟ್ಟಕ್ಕೆ ಏರಿರುವುದು ಗೋಚರಿಸುತ್ತಿರುತ್ತದೆ. ಮಹಾಭಾರತ ಪುರಾಣಗಳಲ್ಲದೆ ವೇದದಲ್ಲೂ ಬೌದ್ಧ, ಜೈನ, ಸಾಹಿತ್ಯಗಳಲ್ಲೂ ಕೃಷ್ಣನ ಹೆಸರು ಪರಮಪೂಜ್ಯ ಸ್ಥಾನದಲ್ಲಿ ಕಾಣಸಿಕ್ಕುತ್ತದೆ.

ಋಗ್ವೇದ ಮತ್ತು ಕೌಶೀತಕಿ ಬ್ರಾಹ್ಮಣಗಳಲ್ಲಿ ಕೃಷ್ಣ ಆಂಗೀರಸನೆಂಬ ಮಂತ್ರ ದೃಷ್ಟಾರನ ಉಲ್ಲೇಖವಿದೆ. ಐತರೇಯ ಅರಣ್ಯಕದಲ್ಲಿ ಕೃಷ್ಣ ಹಾರೀತನೆಂಬ ಆಚಾರ್ಯನ ಹೆಸರು ಕಂಡುಬರುತ್ತದೆ. ಛಾಂದೋಗ್ಯ ಉಪನಿಷತ್ತಿನಲ್ಲಿ ಕೃಷ್ಣನ ಹೆಸರು ದೇವಕೀ ಪುತ್ರನೆಂಬ ವಿಶೇಷಣದೊಂದಿಗೆ ಗೋಚರಿಸುತ್ತದೆ. ಮಹಾಭಾರತದಲ್ಲಾಗಲೀ, ಪುರಾಣದಲ್ಲಾಗಲೀ, ಕೃಷ್ಣ ಆಂಗೀರಸ, ಕೃಷ್ಣ ಹಾರೀತರ ಹೆಸರುಗಳು ಬಾರವು. ದೇವಕೀ ಪುತ್ರನಾದ ಕೃಷ್ಣನೇನೋ ಈ ಇತಿಹಾಸ ಪುರಾಣಗಳಲ್ಲಿ ಗೋಚರಿಸುತ್ತಾನೆ. ಆದರೆ ಉಪನಿಷತ್ತಿನ ಕೃಷ್ಣ ಘೋರ ಆಂಗೀರಸನ ಶಿಷ್ಯ. ಇತಿಹಾಸ ಪುರಾಣಗಳಲ್ಲಿ ಕೃಷ್ಣ ಸಾಂದೀಪಿನಿ ಗರ್ಗರ ಶಿಷ್ಯ. ಭಗವದ್ಗೀತೆಯ ಉಪದೇಶಕ್ಕೂ ಛಾಂದೋಗ್ಯದ ಉಪದೇಶಕ್ಕೂ ಕೆಲವು ಸಾಮ್ಯಗಳಿವೆ ಎಂಬ ಕಾರಣದಿಂದ ಆ ದೇವಕೀ ಪುತ್ರ ಕೃಷ್ಣನೇ ಭಗವದ್ಗೀತೆಯ ಕೃಷ್ಣನೆಂದು ಕೆಲವರು ಊಹಿಸಲು ಅವಕಾಶವಿದೆ. ಆದರೆ ಗೀತೆಯಲ್ಲಿ ಎಲ್ಲೂ ಘೋರ ಆಂಗೀರಸನ ಮಾತು ಬರುವುದಿಲ್ಲ. ತನ್ನ ಗುರುವಿನ ಉಪದೇಶವನ್ನೇ ಕೃಷ್ಣ ಪ್ರಸರಿಸುತ್ತಿರುವಾಗ ಆ ಗುರುವನ್ನು ಸ್ಮರಿಸದೇ ಇರುವುದು ಸೋಜಿಗವೇ ಸರಿ. ಅಲ್ಲದೇ ಗೀತೆಯಲ್ಲಿ ಎಲ್ಲಾ ಉಪನಿಷತ್ತುಗಳ ಸಾರವು ಕಂಡುಬರುತ್ತದೆ. ಆದುದರಿಂದ ಇವರಿಬ್ಬರು ಒಂದೇ ಎನ್ನುವ ವಿಷಯದಲ್ಲಿ ತಕ್ಕಷ್ಟು ಸಾಕ್ಷ್ಯ ಒದಗಿಲ್ಲ ಎನ್ನಬೇಕು. ಆದರೆ ತೈತ್ತರೀಯ ಅರಣ್ಯಕದಲ್ಲಿ ವಾಸುದೇವನೆಂಬ ಹೆಸರು ನಾರಾಯಣ ಮತ್ತು ವಿಷ್ಣುಗಳ ಹೆಸರುಗಳೊಂದಿಗೆ ಮಿಳಿತವಾಗಿದೆ. ಭಗವದ್ಗೀತೆ, ಘಟಜಾತಕ, ಜೈನರ ಉತ್ತರಾಧ್ಯಯನ ಸೂತ್ರ-ಇವೆಲ್ಲವೂ ವಾಸುದೇವ ವೃಷ್ಣಿ ಕುಲಸಂಭೂತನಾದ ಕೃಷ್ಣನೆಂದು ಹೇಳುತ್ತವೆ. ಮಹಾಭಾರತವೂ ಇದನ್ನೇ ಘೋಷಿಸುತ್ತದೆ. ಆದುದರಿಂದ ನಿಗಮದಲ್ಲೂ ಸ್ತುತ್ಯವಾದ ದೈವ ಶ್ರೀಕೃಷ್ಣನೆಂದು ಹೇಳಬಹುದು.

ಬ್ರಹ್ಮ, ವಿಷ್ಣು, ಭಾಗವತ, ಬ್ರಹ್ಮವೈವತ್ರ್ತ, ಪುರಾಣಗಳಲ್ಲೂ ಗೋಪ ಹರಿವಂಶವೆಂಬ ಮಹಾಭಾರತದ ಪರಿಶಿಷ್ಟ ಕಾವ್ಯದಲ್ಲೂ ಗೋಚರಿಸುವ ಕೃಷ್ಣ ಹಾಗೂ ಮಹಾಭಾರತದ ಪಾಂಡವಸಖ ಕೃಷ್ಣ ಇವರ ವಿಷಯದಲ್ಲೂ ಜಿಜ್ಞಾಸೆ ಏಳದಿಲ್ಲ. ಮಹಾಭಾರತದಲ್ಲಿ ಕೃಷ್ಣನ ಪೂರ್ವ ಚರಿತ್ರೆಯ ವರ್ಣನೆ ಇಲ್ಲ. ಮೇಲೆ ಹೇಳಿದ ಪುರಾಣಗಳು, ಭಾಗವತದಲ್ಲಿ ಅಷ್ಟಿಷ್ಟು ಹೊರತು, ಕೃಷ್ಣನ ಮಹಾಭಾರತ ಪ್ರಸಂಗಗಳ ವಿಷಯದಲ್ಲಿ ಮೌನ ವಹಿಸುತ್ತವೆ. ಭಗವದ್ಗೀತೆಯಲ್ಲಿ ಬಹು ಉದಾತ್ತವಾದ ಮೌಲಿಕ ತತ್ವಗಳನ್ನು ಉಪದೇಶಿಸಿದ ಯೋಗೀಶ್ವರ ಭಗವಾನ್ ಕೃಷ್ಣ ಮತ್ತು ಪಾಂಡವ ಪಕ್ಷಪಾತಿಯೂ ದ್ವಾರಕಾಪತಿಯೂ ಕಪಟ ನಾಟಕ ಸೂತ್ರಧಾರಿಯೂ ಆದ ಕೃಷ್ಣ , ಅಲ್ಲದೆ ಭಾಗವತದ ಗೋಪೀವಲ್ಲಭ ಕೃಷ್ಣ ಇವರೆಲ್ಲ ಒಂದೇ ವ್ಯಕ್ತಿ ಎಂದು ಒಪ್ಪುವುದಕ್ಕೆ ಕೆಲವರು ಜಿಜ್ಞಾಸುಗಳು ಕ್ಲೇಶಪಟ್ಟಿದ್ದಾರೆ. ಆದರೆ ಮಹಾಭಾರತಕ್ಕೆ ಕೃಷ್ಣನ ಪೂರ್ವಚರಿತ್ರೆಯ ಪರಿಚಯವಿಲ್ಲದೆಯೇ ಇಲ್ಲ. ಅದರ ಅತ್ಯಂತ ಪ್ರಾಚೀನ ಭಾಗದಲ್ಲೂ ಸಹ ಕೃಷ್ಣನ ಬಾಲಚರಿತೆಯ ಉಲ್ಲೇಖವಿದೆ. ಗೋಕುಲದಿಂದ ಬಂದು ಸಭಾಭವನದಲ್ಲಿ ಕಂಸನನ್ನು ಕೊಂದ ಕೃಷ್ಣನೇ ಪಾಂಡವಮಿತ್ರನಾಗಿ ಅವರಿಂದ ಜರಾಸಂಧನನ್ನು ಕೊಲ್ಲಿಸಿದ ಎಂಬ ಮಾತು ಬರುತ್ತದೆ. ಅಲ್ಲದೆ ರಾಜಸೂಯಗದಲ್ಲಿ ಕೃಷ್ಣನಿಗೆ ಅಗ್ರಪೂಜೆಯನ್ನು ಕೊಡಬೇಕೆಂಬ ಸೂಚನೆ ಹೊರಟ ಸಂದರ್ಭದಲ್ಲಿ ಅದನ್ನು ಪ್ರತಿಭಟಿಸಿ ನಿಂತ ಶಿಶುಪಾಲ ಕೃಷ್ಣನ ಬಾಲವೃತ್ತಾಂತಗಳನ್ನು ಪುರಾಣಗಳಲ್ಲಿ ಹೇಳಿರುವ ಪ್ರಕಾರವೇ ಎತ್ತಿಕೊಂಡು ಆಡುತ್ತಾನೆ. ಅಪ್ರಸಕ್ತವಾದುದರಿಂದ ಕೃಷ್ಣನ ಪೂರ್ವವೃತ್ತಾಂತ ಮಹಾಭಾರತದಲ್ಲಿ ಬಂದಿಲ್ಲವಷ್ಟೇ. ಅಲ್ಲದೇ ಮಹಾಭಾರತದ ಕೃಷ್ಣ ಚರಿತೆಯನ್ನು ಕೈಬಿಟ್ಟು ಆತನ ಮಿಕ್ಕ ಚರಿತೆಯನ್ನು ವಿವರಿಸುವುದಕ್ಕಾಗಿಯೇ ಹರಿವಂಶ ಎಂಬ ಪರಿಶಿಷ್ಟ ಭಾಗ ನಿರ್ಮಿತವಾಗಿ ಆ ಕೊರತೆಯನ್ನು ಪೂರೈಸಿದೆ. ಪುರಾಣಗಳೂ ಸಹ ಇದೇ ಮಾರ್ಗವನ್ನು ಹಿಡಿದಿವೆ. ಆದುದರಿಂದ ಅಲ್ಲಿನ ಕೃಷ್ಣನೇ ಇಲ್ಲಿನ ಕೃಷ್ಣ ಎಂಬುದರಲ್ಲಿ ಸಂದೇಹ ಪಡುವುದು ಯುಕ್ತ ಎನಿಸುವುದಿಲ್ಲ. ಹಾಗೆಯೇ ಸೂಕ್ಷವಾಗಿ ವಿಮರ್ಶೆ ಮಾಡಿ ನೋಡಿದರೆ ಭಗವದ್ಗೀತೆಯ ಉದಾತ್ತ ಕೃಷ್ಣ ತನ್ನ ಉದಾತ್ತತೆಯನ್ನು ಮಿಕ್ಕ ಪ್ರಸಂಗಗಳಲ್ಲಿ ಕಳೆದುಕೊಂಡಂತೆ ಕಾಣುವುದಿಲ್ಲ. ಆತನ ಯಾವ ಕಾರ್ಯಗಳು ಭಗವದ್ಗೀತೆಯಲ್ಲಿನ ಈ ಶ್ಲೋಕಕ್ಕೆ ಅಳವಡದೇ ಇಲ್ಲ. ಯಸ್ಯ ನಾಹಂ ಕೃತೋಭಾವೋ ಬುದ್ಧರ್ಯಸ್ಯ ನಾಲಿಪ್ಯತೇ, ಹತ್ವಾಪಿ ಸ ಇಮಾನ್ ಲೋಕಾನ್ ನ ಹಂತಿ ನ ನಿಬಧ್ಯತೇ.' ಆತ ಯಾವ ಸಮಯದಲ್ಲೂ ನಿರಹಂಕಾರವೂ ಸ್ವಾರ್ಥದೂರವೂ ಅನಾಸಕ್ತವೂ ಲೋಕಕ್ಷೇಮಕರವೂ ಧರ್ಮನಿಷ್ಠವೂ ಆದ ಕರ್ಮದಲ್ಲಿ ಆಸಕ್ತ, ಫಲವಿರಕ್ತ, ಆತನ ಕಾರ್ಯಗಳೆಲ್ಲವೂ ಪರಮತತ್ತ್ವವಿದ ಯೋಗೀಶ್ವರನ ಕಾರ್ಯವೇ ಹೊರತು ಅಜ್ಞಾನಿಯೂ ಅಹಂಕಾರಿಯೂ ಅರಿಷಡ್ವರ್ಗಭೂಯಿಷ್ಠನೂ ಆದ ಸ್ವಾರ್ಥಿಯದಲ್ಲ. ಆದುದರಿಂದ ಭಗವದ್ಗೀತೆಯ ಕೃಷ್ಣನೂ ಪುರಾಣೇತಿಹಾಸಗಳು ವರ್ಣಿಸಿರುವ ಕೃಷ್ಣನೂ ಬೇರೆಬೇರೆ ಎಂದು ಹೇಳುವುದು ಉಚಿತವಲ್ಲವೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ಶ್ರೀಕೃಷ್ಣಚರಿತ್ರೆಯಲ್ಲಿನ ಮುಖ್ಯ ಪ್ರಸಂಗಗಳನ್ನು ಈ ರೀತಿಯಾಗಿ ಸಂಗ್ರಹಿಸಬಹುದು.

ಕೃಷ್ಣ ಚಂದ್ರವಂಶದ ಯಾದವ ಕ್ಷತ್ರಿಯ ಪಂಗಡಕ್ಕೆ ಸೇರಿದವನೆಂದೂ ಮನುವಿನಿಂದ 24ನೆಯ ತಲೆಯವನೆಂದೂ ಪುರಾಣಗಳಿಂದ ತಿಳಿದುಬರುತ್ತದೆ. ಯಾದವರು ಸೂರ್ಯವಂಶದವರೆಂದೂ ಪುರಾಣಗಳಿಂದ ತಿಳಿದುಬರುತ್ತದೆ. ಯಾದವರು ಸೂರ್ಯವಂಶದವರೆಂದೂ ಹರಿವಂಶ ಹೇಳುತ್ತದೆ ಎಂದರೆ ಶ್ರೀಕೃಷ್ಣ ಈ ಎರಡು ಪ್ರಸಿದ್ಧ ವಂಶಗಳಿಗೂ ಸೇರಿದವನೆಂದ ಹಾಗಾಯಿತು. ಭಾಗವತ ಪುರಾಣದ ಪ್ರಕಾರ ಶ್ರೀಕೃಷ್ಣ ಸುಮಾರು 5,000 ವರ್ಷಗಳ ಕೆಳಗೆ ಹುಟ್ಟಿದನೆಂದೂ 125 ವರ್ಷಗಳ ಕಾಲ ಜೀವಿಸಿದ್ದನೆಂದೂ ತಿಳಿದುಬರುತ್ತದೆ. ಮಹಾಭಾರತದ ಪ್ರಕಾರ ಶ್ರೀಕೃಷ್ಣ ಅರ್ಜುನನಿಗಿಂತ ಮೂರು ತಿಂಗಳು ದೊಡ್ಡವ. ಅರ್ಜುನ ಯುಧಿಷ್ಠಿರನಿಗಿಂತ ಎರಡು ವರ್ಷ, ಭೀಮನಿಗಿಂತ ಒಂದು ವರ್ಷ ಚಿಕ್ಕವ. ಧರ್ಮರಾಜ 108 ವರ್ಷ ಬದುಕಿದ್ದ. ಆದುದರಿಂದ ಕೃಷ್ಣನ ಜೀವಿತಕಾಲ 105-6ಕ್ಕೆ ಇಳಿಯುತ್ತದೆ.

ಶ್ರೀಕೃಷ್ಣ ಯಾದವರ ವಸುದೇವ ಮತ್ತು ಮಧುರೆಯ ಅರಸನಾದ ಉಗ್ರಸೇನನ ತಮ್ಮ ದೇವಕನ ಮಗಳು ದೇವಕಿಯರ ಮಗ; ಮಧುರಾ ನಗರದ ಸೆರೆಮನೆಯಲ್ಲಿ ಅವರ ಎಂಟನೆಯ ಮಗನಾಗಿ ಜನಿಸಿದ. ಕಾವಲಿನವರ ಸಹಕಾರದಿಂದ ವಸುದೇವ ಶಿಶುವನ್ನು ಸೆರೆಮನೆಯಿಂದ ಕೊಂಡೊಯ್ದು ತನ್ನ ಸ್ನೇಹಿತ ನಂದಗೋಪನ ಹೆಂಡತಿ ಯಶೋದೆಯ ಮಗ್ಗುಲಲ್ಲಿ ಮಲಗಿಸಿ ಬಂದ. ಹೀಗೆ ಕಂಸನಿಗೆ ತಿಳಿಯದೆ ಕೃಷ್ಣ ಗೋಕುಲದಲ್ಲಿ ಬೆಳೆಯುವಂತಾಯಿತು. ಅಲ್ಲಿಯೇ ವಸುದೇವನ ಮತ್ತೊಬ್ಬಳು ಹೆಂಡತಿಯಾದ ರೋಹಿಣಿ ಬಲರಾಮನೆಂಬ ಶಿಶುವನ್ನು ಹೆತ್ತಿದ್ದಳು. ಈ ಇಬ್ಬರು ಅಣ್ಣ ತಮ್ಮಂದಿರೂ ಬಹಳ ಅನ್ಯೋನ್ಯವಾಗಿದ್ದುಕೊಂಡು ಮಹಾಕಾರ್ಯಗಳನ್ನೆಸಗುತ್ತ ದೇವಾಂಶಸಂಭೂತರೆನಿಸಿ ಕಡೆಯವರೆಗೂ ಬಾಳಿದರು.

ಕ್ಷತ್ರಿಯರಿಗೆ ದುರ್ಲಭವಾದ ಸಾಮಾನ್ಯ ಸರಳಜೀವಿಗಳ ಸಂಪರ್ಕ ಹೀಗೆ ಶ್ರೀಕೃಷ್ಣನಿಗೆ ದೊರೆತದ್ದು ಆತನಿಗೂ ಭಾರತದ ಜನಕ್ಕೂ ಒಂದು ಮಹಾಭಾಗ್ಯ ಎನ್ನಬೇಕು. ಅವರ ಉದಾರಪ್ರೇಮದಿಂದ ಆತನ ತೇಜಸ್ಸು ಇನ್ನಿಲ್ಲದಂತೆ ವರ್ಧಿಸಿತು. ಭಾರತದ ತಾಯಿತಂದೆಗಳು ತಮ್ಮ ಮಕ್ಕಳನ್ನು ದೇವರೆಂದೇ ಭಾವಿಸಿ ಹಾಡುಹಸೆಗಳಲ್ಲಿ ಸಂತೋಷಗೊಳ್ಳವಂತಾದುದು ಗೋಕುಲದಲ್ಲಿ ಗೋಪಿಯರಿಂದ ಪರಿಭಾವಿತನಾದ ಈ ಕೃಷ್ಣನಿಂದ. ಮಗುವಾಗಿ ಕೃಷ್ಣ ಅನೇಕ ಗಂಡಾಂತರಗಳಿಗೆ ಈಡಾಗಿ ಪಾರಾದ. ಪೂತನಿ ಎಂಬ ರಕ್ಕಸಿ ಮೊಲೆಯೂಡ ಬಂದಳು. ಕೃಷ್ಣ ಆಕೆಯ ಅಸುವನ್ನೇ ಹೀರಿ ಬಿಟ್ಟ. ಮಗುವಿನ ಕಾಲೊದೆತಕ್ಕೆ ಬಂಡಿ ಅದರ ಮೇಲೆ ಉರುಳಿತು. ಮಗು ಯಾವ ಗಾಸಿಯನ್ನೂ ಹೊಂದದೆ ಬದುಕಿತು. ಸುಂಟರಗಾಳಿ ಅದನ್ನು ಮೇಲಕ್ಕೆ ಹಾರಿಸಿಕೊಂಡು ಹೋಗಿ ಕೆಡವಿತು. ಮಗು ಸಾಯದೆ ಉಳಿಯಿತು. ಈ ತುಂಟ ಮಗುವಿನ ಕಾಟ ತಾಳಲಾರದೆ ಯಶೋದೆ ಅದನ್ನು ಹಗ್ಗದಿಂದ ಒರಳಿಗೆ ಬಿಗಿದಳು. ಆ ಒರಳನ್ನೇ ಅದು ಎಳೆದುಕೊಂಡು ಹೋಗಿ ಅವಳಿಜವಳಿಯಾಗಿ ಬೆಳೆದಿದ್ದ ಅರ್ಜುನ ವೃಕ್ಷಗಳ ನಡುವೆ ತೂರಿ ತಾಟಿಸಲು ಆ ಮರಗಳೇ ಬಿದ್ದುಹೋದವು. ಅವುಗಳ ನಡುವೆ ಮಗು ನಗುತ್ತ ಕುಳಿತಿತ್ತು. ಈ ಮರಗಳು ಬಿದ್ದದ್ದು ಊರಿನವರಿಗೆ ಅಪಶಕುನ ಎನಿಸಿತು. ಜೊತೆಗೆ ತೋಳಗಳು ಹೆಚ್ಚಿ ಕಿರುಕುಳ ಕೊಟ್ಟವು. ನಂದಗೋಪಾದಿಗಳು ಗೋಕುಲವನ್ನು ಬಿಟ್ಟು ಬೃಂದಾವನಕ್ಕೆ ತೆರಳಿದರು.

ಶ್ರೀಕೃಷ್ಣ ಬಹು ಮನೋಹರಮೂರ್ತಿ. ಆತನ ಮೈಬಣ್ಣ ಅಸಾಧಾರಣವಾದ ಶ್ಯಾಮವರ್ಣ. ಆತ ಬಹು ಸುಂದರ, ದೃಢಗಾತ್ರ, ತೇಜಸ್ವಿ, ಮಹಾಬಲಶಾಲಿ, ಏತಕ್ಕೂ ಅಂಜದ ದಿಟ್ಟ, ಉಪಾಯಕುಶಲಿ, ವನಮಾಲಿಯೂ ಪೀತಾಂಬರಧಾರಿಯೂ ಬರ್ಹಿಪಿಂಛಾವ ತುಸನೂ ಆದ ಆತನನ್ನು ಕಂಡರೆ ಮರುಳುಗೊಳ್ಳದವರೇ ಇಲ್ಲ. ಜೊತೆಗೆ ಕೊಳಲು ಬಾರಿಸುವುದರಲ್ಲಿ ಅದ್ವಿತೀಯ ಪರಿಣತಿಯನ್ನು ಹೊಂದಿ ತಾನಿಚ್ಚಿಸಿದ ರಾಗಭಾವಗಳನ್ನು ಕೇಳುವವರ ಹೃದಯದಲ್ಲಿ ಆತ ಉಕ್ಕಿಸುತ್ತಿದ್ದ. ಬಂದ ಕೇಡುಗಳನ್ನು ಧೃತಿಗೆಡದೆ ಎದುರಿಸಿ ಗೆಲ್ಲುವುದರಲ್ಲೂ ತನ್ನ ಸುತ್ತ ಮಮತೆ ಹರ್ಷಗಳನ್ನು ಹರಡುವುದರಲ್ಲೂ ಆತನಿಗೆಣೆಯನ್ನೇ ಕಾಣೆವು. ಬೃಂದಾವನದಲ್ಲಿ ರಾಮಕೃಷ್ಣರು ಅನೇಕ ದುಷ್ಟರನ್ನು ನಾಶಪಡಿಸಿ ಗೋಪರಿಗೆ ಆ ಜಾಗವನ್ನು ಸುರಕ್ಷಿತವಾಗಿ ಮಾಡಿದರು. ಆ ಪ್ರಸಂಗಗಳಲ್ಲಿ ಮುಖ್ಯವಾದವು-ಬಕ, ವೃಷ, ಧೇನುಕಾದಿಗಳ ವಧೆ; ಕಾಳೀಯನಾಗನ ದಮನ, ಇಂದ್ರನ ದರ್ಪವನ್ನು ಗೋವರ್ಧನೋದ್ಧರಣದಲ್ಲಿ ಮುರಿದುದು; ವೇಣುಗಾನ; ರಾಸಲೀಲೆ ಬಲರಾಮನಿಂದ ಪ್ರಲಂಬಾಸುರ ವಧೆ, ಕೃಷ್ಣನಿಂದ ವೃಷಭಾಸುರ, ಕೇಶಿಗಳ ವಧೆ-ಇವು. ಕಾಳೀಯ ದಮನದಲ್ಲಿ ನಾಗಕುಲದ ಕಾಳೀಯನೆಂಬವನನ್ನು ಪರಿವಾರ ಸಮೇತ ಆ ನೆಲದಿಂದ ಹೊರಗೆ ಅಟ್ಟಿದ್ದ ಐತಿಹಾಸಿಕ ಪ್ರಸಂಗವೊಂದನ್ನು ವಿದ್ವಾಂಸರು ಊಹಿಸುತ್ತಾರೆ. ಗೋವರ್ಧನೋದ್ಧರಣದಲ್ಲಿ ಶ್ರೀಕೃಷ್ಣ ಪರಂಪರೆಯಾಗಿ ಬಂದ ಇಂದ್ರಮುಖದ ಆಚರಣೆಯನ್ನು ಬಿಟ್ಟು ತಮ್ಮ ವೃತ್ತಿಗೆ ಆಧಾರಗಳಾದ ಗೋವುಗಳನ್ನೂ ಗೋವರ್ಧನ ಪರ್ವತವನ್ನೂ ಪೂಜಿಸುವಂತೆ ಸ್ವಜನರನ್ನು ಪ್ರೇರಿಸಿ, ಆ ಮೂಲಕ ಇಂದ್ರನನ್ನು ಕೆರಳಿಸಿ, ಆತ, ತಂದ ಪ್ರಳಯಕಾಲದ ಮಳೆಯನ್ನು ಗೋವರ್ಧನಗಿರಿಯನ್ನು ಕಿರುಬೆರಳಿನಲ್ಲಿ ಎತ್ತಿ ತಡೆದು ಗೋಪರನ್ನೂ ಗೋವುಗಳನ್ನೂ ಕಾಪಾಡಿದ ಗಿರಿಧರ ಎನಿಸಿದ, ಆಧ್ಯಾತ್ಮಿಕ ಭಾವನೆಗಳು ವಿಚಾರ-ವಿಮರ್ಶೆಗಳನ್ನು ಅವಲಂಬಿಸಬೇಕೇ ಹೊರತು ಕೇವಲ ಕುರುಡು ಸಂಪ್ರದಾಯವನ್ನಲ್ಲ ಎಂಬುದನ್ನು ಕೃಷ್ಣ ಬಲು ದಿಟ್ಟತನದಿಂದ ಆದರೆ ಕುಶಲ ತರ್ಕದ ದಾರಿಹಿಡಿದು ಹಿರಿಯರಿಗೆ ತಿಳಿಯಹೇಳಿದಂತಿದೆ. ಭಗವದ್ಗೀತೆಯಲ್ಲಿ ಈ ತತ್ತ್ವ ಪರಿಪೂರ್ಣತೆಯನ್ನು ಪಡೆಯುತ್ತದೆ. ರಾಸಲೀಲೆಯಲ್ಲಿ ಮುರಲೀಧರ ಕೃಷ್ಣನೊಂದಿಗೆ ಯಮುನಾತೀರದಲ್ಲಿ ಗೋಪಸ್ತ್ರೀಯರು ಹಾಡುಕುಣಿತಗಳಲ್ಲಿ ಮೈಮರೆಯುತ್ತಿದ್ದ ಪ್ರಸಂಗ ವರ್ಣಿತವಾಗಿದೆ. ಹೀಗೆ ಕನ್ಯೆಯರೊಂದಿಗೂ ಗೃಹಿಣಿಯರೊಂದಿಗೂ ಬೆರೆಯುತ್ತಿದ್ದ ಕೃಷ್ಣನನ್ನು ಸ್ವೈರಿಯೆಂದೂ ಕಾಮುಕನೆಂದೂ ನಿಂದಿಸುವುದುಂಟು. ಆದರೆ ಯಾವ ಭಾಗವತ ರಾಸಲೀಲೆಯನ್ನು ವರ್ಣಿಸುತ್ತದೋ ಅದೇ ಭಾಗವತ ಕೃಷ್ಣ ವೃಂದಾವನದಲ್ಲಿದ್ದುದು ಕೇವಲ 11 ವರ್ಷಗಳು ಮಾತ್ರ ಎನ್ನುತ್ತದೆ. ಆತ ಬೃಂದಾವನವನ್ನು ತೊರೆದಾಗ ಇನ್ನೂ ಕಿಶೋರ. ಗೊಲ್ಲರ ನಡುವೆ ಆತ ಸೊಂಪಾಗಿ ಬೆಳೆದು ತರುಣನಂತೆ ಕಂಡಿರಬಹುದು. ಗೋಪಸ್ತ್ರೀಯರಿಗೆ ಆತನ ರೂಪವನ್ನು ಕಂಡು ಕಾಮವೂ ಹುಟ್ಟಿರಬಹುದು. ಆದರೆ ಆತನ ಪ್ರೀತಿ, ವರ್ತನೆ ಬೇರೆ ತರದ್ದು. ತನ್ನ ರೂಪವಾಕ್ಕøತಿಗಳಿಂದ ಎಲ್ಲರ ಮನಸ್ಸನ್ನೂ ಅಪಹರಿಸಿದ ಜಾಯಮಾನ ಆತನದು. ಆತನನ್ನು ಕಾಮಿಸುವುದು ಕಾಮವಲ್ಲ. ಮೊದಲು ಆ ರೂಪದಲ್ಲಿ ತೋರಿದರೂ ಅದು ಪ್ರೇಮವಾಗಿ ಪರಿಣಾಮ ಹೊಂದುತ್ತಿತ್ತು. ಪ್ರೌಢ, ಸಂಗೀತವನ್ನು ಆಲಿಸುತ್ತಿರುವಾಗ ಅನೇಕ ರಾಗಗಳ ಉದ್ಬೋಧನವಾಗುತ್ತದೆ. ಆದರೆ ಅವೆಲ್ಲ ತೇಜೋಜ್ಜ್ವಲವಾದ ದಿವ್ಯ ಶಾಂತಿಯಲ್ಲಿ ಮುಗಿಯುತ್ತವೆ. ಕೃಷ್ಣನ ಮೋಹಗಾನದಿಂದಲೂ ದರ್ಶನ ಸ್ಪರ್ಶಾದಿಗಳಿಂದಲೂ ಗೋಪಿಯರು ಅನೇಕ ರಾಗಗಳಿಗೆ ಪಕ್ಕಾಗಿ ಅವುಗಳ ಸಹಾಯದಿಂದ ತಮ್ಮ ಬಾಳುವೆಯ ಅತ್ಯಂತ ಉನ್ನತ ಸ್ತರಕ್ಕೇರಿ ಅಲ್ಲಿ ತಮ್ಮ ಜೀವ ತೇಜೋಜ್ಜ್ವಲವೂ ಸಕಲ ಕಾಮ ಸಂತೃಪ್ತವೂ ಶಾಂತವೂ ಆಗುವ ಸ್ಥಿತಿಯನ್ನು ಮುಟ್ಟುತ್ತಿದ್ದರು ಎಂದು ಹೇಳಬೇಕು. ಭಾಗವತವನ್ನು ಆಲಿಸಿದ ಪರೀಕ್ಷಿತ್ ರಾಜನೇ ಈ ನೀತಿಯ ಪ್ರಶ್ನೆಯನ್ನು ಶುಕನಿಗೆ ಹಾಕಿ ಸದುತ್ತರ ಪಡೆಯುತ್ತಾನೆ. ಕೃಷ್ಣನ ಮಾತೂ ಈ ವಿಷಯದಲ್ಲಿನ ನಮ್ಮ ಸಂದೇಹವನ್ನು ನಿವಾರಿಸುತ್ತದೆ. ಆತನೆನ್ನುತ್ತಾನೆ; 'ನನ್ನಲ್ಲಿ ಮನಸ್ಸನ್ನು ನೆಟ್ಟವರ ಕಾಮ ಕಾಮವಾಗಿ ಪರಿಣಮಿಸದು; ಹೊಟ್ಟು ಬಿಡಿಸಿದ ಅಥವಾ ಬೇಯಿಸಿದ ಧಾನ್ಯದಿಂದ ಪೈರು ಹುಟ್ಟದು (ಭಾಗವತ). ರಾಸಲೀಲೆಯೊಂದಿಗೆ ಗೋಪೀವಸ್ತ್ರಾಪಹರಣದ ಪ್ರಸಂಗವನ್ನೂ ಉಲ್ಲೇಖಿಸಬಹುದು. ಕೃಷ್ಣನೇ ತಮಗೆ ಗಂಡನಾಗಬೇಕೆಂದು ಕೋರಿ ಗೋಪಕನ್ಯೆಯರು ಕಾಳಿಂದೀನದಿಯಲ್ಲಿ ಬೆಳಗಿನ ಜಾವದಲ್ಲಿ ಮಿಂದು ಕಾತ್ಯಾಯಿನಿ ಪೂಜೆಯ ವೃತವನ್ನು ಕೈಗೊಳ್ಳುತ್ತಾರೆ. ಒಂದು ದಿನ ಕೃಷ್ಣ ಅವರು ನೀರನಲ್ಲಿ ಜಲಕ್ರೀಡೆಯಾಡುತ್ತಿದ್ದಾಗ ಅವರ ಸೀರೆಗಳನ್ನೆಲ್ಲ ಎತ್ತಿಕೊಂಡು ಹತ್ತಿರದ ಮರವನ್ನೇರಿ ಕುಳಿತುಕೊಳ್ಳುತ್ತಾನೆ. ಅವರು ಹೊರಗೆ ಬಂದು ಲಜ್ಜೆಯನ್ನೆಲ್ಲ ತೊರೆದು ಎರಡೂ ಕೈಗಳನ್ನು ಎತ್ತಿ ಬೇಡಿದ ಹೊರತು ಕೃಷ್ಣ ಅವರಿಗೆ ಅವರ ದುಕೂಲಗಳನ್ನು ಕೊಡುವುದಿಲ್ಲ. ಲಜ್ಜೆ ಕಾಮಸೂಚಕ. ಕೃಷ್ಣ ಅವರಿಂದ ಬಯಸಿದುದು ಕಾಮವನ್ನಲ್ಲ, ನಿಷ್ಕಲಷವೂ ಪ್ರಕಾಂತಿಕವೂ ಆದ ಪ್ರೇಮವನ್ನು ಇದೇ ಜಾಗದಲ್ಲಿ ಋಷಿಪತ್ನಿಯರು ಕೃಷ್ಣನಿಗೂ ಅವನ ಸ್ನೇಹಿತರಿಗೂ ತಮ್ಮ ಕರ್ಮನಿಷ್ಠರಾದ ಋಷಿಪತಿಗಳ ಇಷ್ಟವನ್ನು ಮೀರಿ ಉಣಬಡಿಸಿದುದನ್ನೂ ನೆನೆಯಬಹುದು. ಅವರ ಈ ಅತಿವರ್ತನೆಗೆ ಸಮಾಧಾನವನ್ನು ಅವರೇ ಹೇಳುತ್ತಾರೆ: ಯಾರ ಸಂಪರ್ಕದಿಂದ ಪ್ರಾಣ, ಬುದ್ಧಿ, ಮನಸ್ಸು, ಆತ್ಮ, ದಾರಾಪತ್ಯ, ಧನಾದಿಗಳು ಪ್ರಿಯವಾಗಿ ಆಗುತ್ತವೋ ಆತನಿಗಿಂತ ಮತ್ತಾರೂ ಪ್ರಿಯರು (ಭಾಗವತ). ಹೀಗೆ ಕೃಷ್ಣನಿಂದ ಪ್ರೇಮದ ಪರಾಕಾಷ್ಠೆಯನ್ನು ಮುಟ್ಟಿ ಸಂತುಷ್ಟರಾದವರು ಗೋಪಸ್ತ್ರೀಯರು ಮಾತ್ರವಲ್ಲ. ಆತ ಮುಂದೆ ವರಿಸಿದ ಅಷ್ಟಮಹಿಷಿಯರು ಮತ್ತು ಹದಿನಾರು ಸಹಸ್ರ ರಾಜಕುಮಾರಿಯರೂ. ಪ್ರೇಮ ನಿಧಿಯೇ ಕೃಷ್ಣರೂಪವನ್ನು ತಾಳಿ ಬಂದಿದೆ. ಆದ್ದರಿಂದ ಪತಿ-ಪುತ್ರಾದಿ ಪ್ರೇಮದ ಕಾಲುವೆಗಳು ಹೊರಟು ಜೀವಜೀವಗಳನ್ನು ತಣಿಸುತ್ತಿವೆ-ಎಂಬುದು ಇಲ್ಲಿನ ಮಥಿತಾರ್ಥ. ಇದರ ಜೊತೆಗೆ ರಾಧೆಯ ವೃತ್ತಾಂತ ಬ್ರಹಂವೈವರ್ತದಲ್ಲಿ ಮಾತ್ರ ಗೋಚರಿಸುತ್ತದೆ. ರಾಧಾಕೃಷ್ಣರ ಪ್ರೇಮಸಂಕೇತವನ್ನು ಕುರಿತೇ ಈ ಪುರಾಣ ಪ್ರವೃತ್ತವಾಗಿದೆ ಎನ್ನಬೇಕು. ಈ ಪ್ರಣಯ ಒಂದು ಆಧ್ಯಾತ್ಮಿಕ ಪಂಥವಾಗಿ ಪರಿಣಮಿಸಿ ವಲ್ಲಭ, ಚೈತನ್ಯ ಮೊದಲಾದ ಮಹಾತೇಜಸ್ವೀ ಭಕ್ತರ ಮನಸ್ಸನ್ನು ಸೂರೆಗೊಂಡಿದೆ. ಇಲ್ಲೂ ಕಾಮವಲ್ಲ, ಪ್ರೇಮವೇ ಪ್ರಧಾನಾಂಶ. ಬೃಂದಾವನದಲ್ಲಿ ಕೃಷ್ಣ ಹೆಚ್ಚು ಕಾಲವಿರಲಿಲ್ಲ. ಮಧುರೆಯಲ್ಲಿ ಕೃಷ್ಣನಿಂದ ಕುವಲಯಾಪೀಡವೆಂಬ ಆನೆ ಮತ್ತು ಮುಷ್ಟಿಕ ಚಾಣೂರಾದಿ ಜಟ್ಟಿಗಳ ವಧೆ, ಕೊನೆಗೆ ಕಂಸನನಾಶ-ಇವು ಜರುಗಿ ಉಗ್ರಸೇನನಿಗೆ ಮರಳಿ ಸಿಂಹಾಸನ ದೊರೆಯುತ್ತದೆ (ನೋಡಿ- ಕಂಸ-1). ಮುಂದೆ ಈ ಬಾಲಕರಿಗೆ ಉಪನಯನವಾಗಿ ಕಾಶಿಯ ಹತ್ತಿರದ ಆವಂತೀಪುರದಲ್ಲಿದ್ದ ಸಾಂದೀಪಿನಿ ಎಂಬಾತನಲ್ಲಿ ಗುರುಕುಲವಾಸ ಒದಗುತ್ತದೆ. ಅಲ್ಲಿ ಕೇವಲ ಅರವತ್ತು ನಾಲ್ಕು ದಿನಗಳಲ್ಲಿ ವೇದವೇದಾಂಗಗಳೊಡನೆ ಲೇಖನ, ಗಣಿತ, ವೈದ್ಯ ವಿದ್ಯೆಗಳನ್ನು ಹನ್ನೆರಡು ದಿನಗಳಲ್ಲಿ ಗಜವಿದ್ಯೆ, ಅಶ್ವವಿದ್ಯೆಗಳನ್ನು 50 ದಿನಗಳಲ್ಲಿ ಧನುರ್ವಿದ್ಯೆ ಮತ್ತು ದಶಶಾಖೆಗಳೊಡನೆ ಯುದ್ದ ವಿದ್ಯೆಗಳನ್ನು ಕಲಿತರೆಂದು ಮಹಾಭಾರತ ಹೇಳುತ್ತದೆ. ಕೃಷ್ಣನಿಗೆ ಸುಧಾಮನ (ನೋಡಿ- ಕುಚೇಲ) ಸ್ನೇಹವಾದುದು ಅಲ್ಲಿಯೇ. ಮುಂದೆ ಈತ ತನ್ನ ಬಡತನವನ್ನು ಕೃಷ್ಣಪ್ರಸಾದದಿಂದ ನೀಗಿಕೊಂಡ ಕಥೆ ಬಹು ಮನೋಹರವಾಗಿದೆ. ಈ ನಡುವೆ ಕಂಸನ ಮಾವ ಜರಾಸಂಧ ಮಧುರೆಯ ಮೇಲೆ ದಂಡೆತ್ತಿ ಬರಲು ಯಾದವರು ರಾಮಕೃಷ್ಣರನ್ನು ಗುರುಕುಲದಿಂದ ಕರೆಸಿಕೊಳ್ಳುತ್ತಾರೆ. ಮಗಧರಾಜನಾದ ಜರಾಸಂಧನೊಡನೆ ಕೃಷ್ಣ ಹದಿನೇಳು ಸಲ ಯುದ್ಧ ಮಾಡಿ ಆತನನ್ನು ಸೋಲಿಸಿ ಮರಳಿಸುತ್ತಾನೆ. ಹದಿನೆಂಟನೇ ಸಲ ಆತ ಕಾಲಯವನನೆಂಬ ಪ್ರಬಲ ರಾಜನೊಡನೆ ಸ್ನೇಹ ಮಾಡಿಕೊಂಡು ಕೃಷ್ಣನ ಮೇಲೆ ಇಬ್ಬರೊಂದಾಗಿ ಕವಿದು ಬರಲು, ಕೃಷ್ಣ ಉಪಾಯದಿಂದ ಮುಚುಕುಂದನ ಮೂಲಕ ಕಾಲಯವನನ್ನು ಸಂಹರಿಸಿ ಜರಾಸಂಧನೊಡನೆ ತತ್‍ಕ್ಷಣದಲ್ಲಿ ಯುದ್ಧ ಮಾಡಿದರೆ ಜಯ ಲಭಿಸದೆಂದು ಪಶ್ಚಿಮ ಸಮುದ್ರ ತೀರದಲ್ಲಿರುವ ದ್ವಾರಕೆಗೆ ತನ್ನವರೊಂದಿಗೆ ವಲಸೆ ಹೋಗುತ್ತಾನೆ. ಆತನಿಂದ ದ್ವಾರಕೆ ಭವ್ಯನಗರವಾಗಿ ರೂಪುಗೊಳ್ಳುತ್ತದೆ. ಅಲ್ಲಿರುವಾಗ ವಿದರ್ಭ ದೇಶದ ಭೀಷ್ಮಕನ ಮಗಳು ರುಕ್ಮಿಣಿ ತನಗೆ ತನ್ನ ಅಣ್ಣ ಗೊತ್ತು ಮಾಡಿದ್ದ ಛೇದಿಯ ಅರಸ ಶಿಶುಪಾಲನೊಂದಿಗೆ ಮದುವೆಯಾಗಲು ಒಪ್ಪದೇ ತಾನೊಲಿದ ಕೃಷ್ಣನಿಗೆ ಬ್ರಾಹ್ಮಣನೊಬ್ಬನ ಮೂಲಕ ವರ್ತಮಾನ ಕಳುಹಿಸುತ್ತಾಳೆ. ಕೃಷ್ಣ ಬಲರಾಮನೊಂದಿಗೆ ಬಂದು ಗೌರಿಯ ಪೂಜೆಯನ್ನು ಮುಗಿಸಿಕೊಂಡು ಹೊರಗೆ ಬರುತ್ತಿದ್ದ ವಧುವನ್ನು ಎಲ್ಲರ ಕಣ್ಣೆದುರಿಗೆ ಅಪಹರಿಸಿಕೊಂಡು ಮದುವೆಯಾಗುತ್ತಾನೆ.

ಬೃಂದಾವನವನ್ನು ಬಿಟ್ಟ ಮೇಲೆ ಗೋಪ ಗೋಪಿಯರನ್ನು ಕೃಷ್ಣ ಅಷ್ಟಾಗಿ ಮನಸ್ಸಿಗೆ ಹಚ್ಚಿಕೊಂಡಂತೆ ಕಾಣಲಿಲ್ಲ. ತಾನೆಯೇ ಅವರನ್ನು ಪುನ: ಕಂಡದ್ದು ಗೋಚರಿಸುವುದಿಲ್ಲ. ಉದ್ದವನ ಮೂಲಕ ನಂದಗೋಪಾದಿಗಳಿಗೆ ತನ್ನ ಪ್ರೇಮ ವಿಶ್ವಾಸಗಳನ್ನು ನೆನೆಕೆಗಳನ್ನು ಕಳುಹಿಸಿ ಅವರನ್ನು ಸಮಾಧಾನಗೊಳಿಸಿದನಷ್ಟೇ. ಬಲರಾಮನನ್ನು ಅವರಲ್ಲಿಗೆ ಹೋಗಿ ಒಂದೆರಡು ತಿಂಗಳು ಇದ್ದು ಬರುವಂತೆ ಪ್ರೇರಿಸುತ್ತಾನೆಯೇ ಹೊರತು ತಾನೇ ಹೋಗ. ನಡುವೆ ಸೂಯೋಪರಾಗದ ಸಮಯದಲ್ಲಿ ಭಾರತೀಯರೆಲ್ಲರೂ ಪೀಡಾ ಪರಿಹಾರಕ್ಕಾಗಿ ಸಮಂತ ಪಂಚಕದಲ್ಲಿ ನೆರೆಯುವಾಗ ನಂದಗೋಪ ಯಶೋದಾದಿಗಳು ಅಲ್ಲಿಗೆ ಬಂದು ಯಾದವರೊಡನೆ ಸಂಗಮಿಸುತ್ತಾರೆ. ಕೃಷ್ಣ ಅವರನ್ನು ತುಂಬಾ ಮಮತೆಯಿಂದ ಕಂಡು ಮಾತಾಡಿಸಿದನೆಂದು ಭಾಗವತ ಹೇಳುತ್ತದೆ. ಕೃಷ್ಣನಿಗೆ ಬಿಡುವಿಲ್ಲದ ಕೆಲಸವಿದ್ದುದರಿಂದ ತನ್ನ ಬಾಲ್ಯದ ಜೊತೆಗಾರರನ್ನು ಸಾಕು ತಾಯಿ ತಂದೆಗಳನ್ನು ನೆನೆದು ಕೊರಗುವಷ್ಟು ಅವಕಾಶವಿರಲಿಲ್ಲವೆನ್ನಬೇಕು. ಮಹಾಕಾರ್ಯಗಳನ್ನು ಎಸಗಲು ಬಂದ ಮಹಾಪುರುಷರಿಗೆ ನಿರ್ವಿಕಾರ ಬುದ್ದಿ ಸಹಜ. ಹೀಗೆಯೇ ಸಮಂತ ಪಂಚಕದಲ್ಲಿ ಕುಂತಿ ಅಣ್ಣ ವಸುದೇವನನ್ನು ಕುರಿತು "ಕಷ್ಟ ದೆಸೆಯಲ್ಲಿರುವ ನೆಂಟರನ್ನು ಎಲ್ಲರೂ ಕೈಬಿಡುತ್ತಾರೆ. ನೀವು ನನ್ನ ವಿಚಾರವನ್ನೇ ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ ಅಣ್ಣಯ್ಯ" ಎಂದಾಗ ವಸುದೇವ "ನಮಗೂ ಕಷ್ಟಗಳಿಲ್ಲದಿಲ್ಲ. ತಂಗಿ, ಶತ್ರುಗಳ ದೆಸೆಯಿಂದ ಯಾದವರೆಲ್ಲ ಚಲ್ಲಾಪಿಲ್ಲಿಯಾಗಿ ಚದುರಿ ಹೋದೆವು; ನೆಲೆ ಕಾಣುವುದೇ ಕಷ್ಟವಾಯಿತು ಎನ್ನುತ್ತಾನೆ". ಈ ಯಾದವರನ್ನೆಲ್ಲ ಅವರ ಕಷ್ಟಗಳಿಂದ ತಪ್ಪಿಸಿ ಒಂದು ನೆಲೆಗೆ ಕೂಡಿಸಿ ಒಂದು ಭವ್ಯವಾದ ನಗರದಲ್ಲಿ ನೆಲೆಸುವಂತೆ ಮಾಡಿದವ ಕೃಷ್ಣ. ಈ ಮಹತ್ಕಾರ್ಯದಲ್ಲಿ ಮಗ್ನನಾದ ಆತ ತನ್ನ ಸಾಕು ನೆಲವನ್ನು ಮನಸ್ಸಿಗೆ ಅಷ್ಟಾಗಿ ಹಚ್ಚಿಕೊಳ್ಳದಿದ್ದುದು ಸಹಜವೇ ಎನಿಸುತ್ತದೆ. ಕೃಷ್ಣ ದ್ವಾರಕೆಯಲ್ಲಿ ರುಕ್ಮಣಿಯ ಜೊತೆಗೆ ಸತ್ಯಭಾಮೆ, ಜಾಂಬವತಿ, ಕಾಲಿಂದಿ, ಮಿತ್ರವಿಂದೇ, ಸತ್ಯೇ, ಭದ್ರೇ, ಲಕ್ಷ್ಮಣೀ ಎಂಬ ಏಳು ಜನ ರಾಜಕನ್ಯೆಯರನ್ನು ವೀರಶುಲ್ಕವಾಗಿಯೇ ಜಯಿಸಿ ಮದುವೆಯಾಗುತ್ತಾನೆ. ಮುರನರಕಾದಿಗಳನ್ನು ಕೊಂದು ನರಕನ ಸೆರೆಯಲ್ಲಿದ್ದ ಹದಿನಾರು ಸಾವಿರ ರಾಜಕನ್ಯೆಯರನ್ನು ಅವರ ಇಷ್ಟದಂತೆ ಮದುವೆಯಾಗುತ್ತಾನೆ. ಇವರೆಲ್ಲ ಕೃಷ್ಣನ ಸಾನಿಧ್ಯ, ಕೈಂಕಂiÀರ್iಗಳಿಗೆ ಆಸೆ ಪಟ್ಟು ಕೃತಾರ್ಥರಾದವರು. ಕಾಮಿಗಳನ್ನು ಪ್ರೇಮಿಗಳನ್ನಾಗಿ ಮಾಡುವ ದೈವೀ ಸಂಪತ್ತು ಕೃಷ್ಣನದು.

ಮಹಾಭಾರತದಲ್ಲಿ ಕೃಷ್ಣ ದ್ರೌಪದಿಯ ಸ್ವಯಂವರದಲ್ಲಿ ಮೊದಲು ಕಾಣಿಸಿಕೊಳ್ಳುತ್ತಾನೆ. ಇಂದ್ರಪ್ರಸ್ಥದಲ್ಲಿ ದ್ರೌಪದಿಯೊಡನೆ ಪಾಂಡವರು ನೆಲಸಲು ಸಹಾಯಕನಾಗುತ್ತಾನೆ. ಅರ್ಜುನನಿಂದ ಖಾಂಡವವನವನ್ನು ಸುಡಿಸುತ್ತಾನೆ. ಆಗ ಮಯನೆಂಬ ದಾನವಶಿಲ್ಪಿಯನ್ನು ಕಾಪಿಟ್ಟು ಆತನಿಂದ ದಿವ್ಯವಾದ ಸಭೆಯೊಂದನ್ನು ಪಾಂಡವರಿಗಾಗಿ ಕಟ್ಟಿಸಿಕೊಡುತ್ತಾನೆ. ತೀರ್ಥಯಾತ್ರೆಯನ್ನು ಮಾಡುತ್ತ ಪ್ರಭಾಸಕ್ಕೆ ಬಂದ ಅರ್ಜುನನ್ನು ಕಂಡು ದ್ವಾರಕೆಗೆ ಬರಮಾಡಿಕೊಂಡು, ತನ್ನ ಅಣ್ಣ ಬಲರಾಮ ದುರ್ಯೋಧನನಿಗೆ ಕೊಡಬೇಕಾಗಿದ್ದ ತಂಗಿ ಸುಭದ್ರೆಯನ್ನು ಅಪಹರಿಸಿಕೊಂಡು ಹೋಗುವಂತೆ ಅರ್ಜುನನನ್ನು ಪ್ರೇರಿಸುತ್ತಾನೆ. ಇವರು ಹೀಗೆ ಮದುವೆಯಾಗಿ ಹುಟ್ಟಿದ ಮಗ ಅಭಿಮನ್ಯು. ಈತನಿಂದಲೇ ಪಾಂಡವರ ಖ್ಯಾತಿ ಮುಂದೆ ಬೆಳೆಯುವಂತಾದುದು. ಕೃಷ್ಣ ಧರ್ಮರಾಯನನ್ನು ರಾಜಸೂಯ ಯಾಗವನ್ನು ನಡೆಸುವಂತೆ ಪ್ರೇರಿಸಿ ಅದು ನಿರ್ವಿಘ್ನವಾಗಿ ನಡೆಯಲು ಭೀಮನಿಂದ ಜರಾಸಂಧನನ್ನು ಉಪಾಯವಾಗಿ ಕೊಲ್ಲಿಸುತ್ತಾನೆ. ರಾಜಸೂಯಯಾಗದಲ್ಲಿ ಆ ಕಾಲದ ಪ್ರಮುಖ ರಾಜರೆಲ್ಲರೆದುರು ಭೀಷ್ಮ ಕೃಷ್ಣನೇ ಅಗ್ರಪೂಜೆಗೆ ಅರ್ಹನೆಂದು ಉದ್ಘೋಷಿಸಲು ರುಕ್ಮಣೀ ವಂಚಿತನಾದ ಚೇದಿರಾಜ ಶಿಶುಪಾಲ ಪ್ರತಿಭಟಿಸಿ ಕೃಷ್ಣನನ್ನು ನಿಂದಿಸಿ ಅವನ ಚಕ್ರಕ್ಕೆ ಬಲಿಯಾಗುತ್ತಾನೆ. ರಾಜಸೂಯ ಯಾಗ ನಿರ್ವಿಘ್ನವಾಗಿ ನಡೆಯುತ್ತದೆ. ಅಗ್ರಪೂಜೆಯಿಂದ ಗರ್ವಿತನಾಗದೆ ಕೃಷ್ಣ ಸಹಜವಿನಯದಿಂದಲೇ ಅತಿಥಿಗಳನ್ನು ಆದರಿಸುತ್ತಾನೆ. ಮಯನಿರ್ಮಿತ ಸಭೆಯಲ್ಲಿ ದುರ್ಯೋಧನನ ನೀರಿರುವೆಡೆಯನ್ನು ನೆಲವೆಂದೂ ನೆಲವಿರುವೆಡೆಯನ್ನು ನೀರೆಂದೂ ಭ್ರಮಿಸಿ ಎಲ್ಲರ ನಗೆಗೀಡಾಗುತ್ತಾನೆ. ಇದು ಧರ್ಮರಾಯ ಜೂಜಾಟದಲ್ಲಿ ಸೋತು ತನ್ನ ಸರ್ವಸ್ವವನ್ನೂ ಕೌರವರಿಗೆ ಕಳೆದುಕೊಳ್ಳುವುದರಲ್ಲಿ ಮುಗಿಯುತ್ತದೆ. ಸೋತ ಪಾಂಡವರೆದುರು ದುಶ್ಯಾಸನ ದಾಸಿಯೆಂದು ದ್ರೌಪದಿಯ ಸೀರೆಯನ್ನೆಳೆದು ಮಾನ ತೆಗೆಯಲು ಹವಣಿಸುತ್ತಾನೆ. ಆಗ ಆಕೆ ಶ್ರೀಕೃಷ್ಣನನ್ನು ನೆನೆದು ಅಕ್ಷಯ ವಸ್ರ್ರಳಾಗುತ್ತಾಳೆ. ಈ ಪ್ರಸಂಗ ಮೂಲ ಭಾರತದಲ್ಲಿಲ್ಲವೆಂದು ವಿದ್ವಾಂಸರು ತೀರ್ಮಾನಿಸಿದ್ದರೂ ದ್ರೌಪದಿಯ "ಗೋವಿಂದ ಪುಂಡರೀಕಾಕ್ಷ ರಕ್ಷಮಾಂ ಶರಣಾಗತಾಂ ಎಂಬ ಮಾತು ಭಾರತೀಯರ ನಿತ್ಯ ಪ್ರಾರ್ಥನೆಯಲ್ಲಿ ಇಂದಿಗೂ ಅನುರಣಿತವಾಗುತ್ತಿದೆ. ಪಾಂಡವರು ಅರಣ್ಯಕ್ಕೆ ತೆರಳಿದಾಗ ಕೃಷ್ಣ ಅವರಲ್ಲಿಗೆ ಆಗಾಗ ಬಂದು ಸಂತೈಸುತ್ತಾನೆ. ದ್ರೌಪದಿಗೆ ದುರ್ವಾಸ ಮುನಿಯ ಆತಿಥ್ಯವನ್ನು ನಡೆಸಲು ಅಕ್ಷಯ ಪಾತ್ರೆ ದೊರೆತುದು ಇಂಥ ಒಂದು ಪ್ರಸಂಗದಲ್ಲಿ. ಅಜ್ಞಾತವಾಸದಲ್ಲಿದ್ದಾಗ ಗೋಗ್ರಹಣ ಮತ್ತು ಯುದ್ಧ ಮುಗಿದು ಅರ್ಜುನನ ಅಭಿಮನ್ಯುವಿಗೆ ವಿರಾಟನ ಮಗಳು ಉತ್ತರೆಯನ್ನು ತಂದುಕೊಂಡಾಗ ಕೃಷ್ಣ ಬಂದು ವಧೂವರರನ್ನು ಹರಸಿ ಹೋಗುತ್ತಾನೆ. ನ್ಯಾಯವಾಗಿ ಪಾಂಡವರಿಗೆ ಸಲ್ಲಬೇಕಾದ ರಾಜ್ಯದ ಪಾಲನ್ನು ಕೊಡದೆ, ದುರ್ಯೋಧನ ನಿರಾಕರಿಸಿ, ಉಭಯರೂ ಕಾಳಗಕ್ಕೆ ನಿಂತಾಗ ಕೃಷ್ಣ ರಾಯಭಾರಿಯಾಗಿ ಸಂಧಿ ಮಾಡಿಸಲು ಸಕಲ ಯತ್ನ ಮಾಡಿದ. ಅದು ಕೈಗೂಡದಿರಲು ಅವರವರ ಕೋರಿಕೆಯಂತೆ ಕೌರವನಿಗೆ ತನ್ನ ಸಕಲ ಸೈನ್ಯವನ್ನೂ ಅರ್ಜುನನಿಗೆ ನಿರಾಯುಧನಾಗಿ ಯುದ್ಧ ಮಾಡದ ತನ್ನನ್ನೂ ಕೊಟ್ಟುಕೊಂಡ. ಹೀಗೆ ಅರ್ಜುನನಿಗೆ ಸಾರಥಿಯಾಗಿ ಕೃಷ್ಣ ನಿಲ್ಲದಿದ್ದರೆ ಪಾಂಡವರು ಜಯ ಕಾಣುತ್ತಿರಲಿಲ್ಲ. ಕೌರವರು ಹತರಾಗುತ್ತಿರಲಿಲ್ಲ. ಯುದ್ಧದ ಪ್ರಾರಂಭದ ದಿನದಲ್ಲೇ ಅರ್ಜುನ ಸ್ವಜನವಧೆಗೆ ಅಂಜಿ ಶೋಕಾವಿಷ್ಟನಾಗಿ ಕರ್ತವ್ಯ ಮೂಢನಾಗಿರುವಾಗ ಗೀತೋಪದೇಶದಿಂದ ಆತನ ಮೋಹವನ್ನು ಹೋಗಲಾಡಿಸಿ ತಿಳಿಮೆಯನ್ನು ತರುತ್ತಾನೆ. ಪಾರ್ಥಸಾರಥಿ, ಗೀತಾಚಾರ್ಯ, ಕೃಷ್ಣ. ಕರ್ಣನಿಗೆ ತಾನು ಕುಂತಿಯ ಮಗನೆಂಬ ಅರಿವನ್ನು ಕೊಟ್ಟು ಪಾಂಡವರ ಕಡೆಗೆ ಸೆಳೆಯಲು ಪ್ರಯತ್ನಿಸಿ ವಿಫಲನಾಗಿ ಕುಂತಿಯ ಮೂಲಕ ಅರ್ಜುನ ಹೊರತು ಮಿಕ್ಕವರನ್ನು ಕೊಲ್ಲುವುದಿಲ್ಲವೆಂಬ ವರವನ್ನು ಕರ್ಣನಿಂದ ದೊರಕಿಸಿಕೊಳ್ಳುತ್ತಾನೆ. ಭೀಷ್ಮನ ಕೈಮೇಲಾಗಿ ಪಾಂಡವರಿಗೆ ಸೋಲು ಎನ್ನಿಸಿದಾಗ ತಾನೇ ತನ್ನ ಪ್ರತಿಜ್ಞೆಯನ್ನು ಮರೆತು ಭೀಷ್ಮನ ಮೇಲೆ ಕೈಯೆತ್ತಲು ಹಿಂಜರಿಯುವುದಿಲ್ಲ. ಆ ದೃಶ್ಯವನ್ನು ಭೀಷ್ಮ ತನ್ನ ಅಂತ್ಯಕಾಲದಲ್ಲಿ ಬಹು ಮಮತೆಯಿಂದ ನೆನೆಯುತ್ತಾನೆ. ಭಗದತ್ತ ತನ್ನ ಅಜೇಯನಾದ ಶಕ್ತ್ಯಾಯುಧವನ್ನು ಅರ್ಜುನನ ಮೇಲೆ ಪ್ರಯೋಗಿಸಿದಾಗ ಅದನ್ನು ಕೃಷ್ಣ ತಾನೇ ಧರಿಸಿ ಪಾರ್ಥನನ್ನು ಕಾಪಾಡುತ್ತಾನೆ. ಜಯದ್ರಥ, ದ್ರೋಣ, ಕರ್ಣ, ದುರ್ಯೋಧನ-ಇವರ ಸಂಹಾರದಲ್ಲಿ ವಿಷಮ ಸಂದರ್ಭವೊದಗಿದಾಗಲೆಲ್ಲ ತಕ್ಕ ಉಪಾಯಗಳನ್ನು ಸೂಚಿಸಿ ಪಾಂಡವರನ್ನು ಗೆಲ್ಲಿಸುತ್ತಾನೆ. ಈ ಉಪಾಯಗಳ ನೀತಿಯನ್ನು ಕುರಿತು ಕೃಷ್ಣನನ್ನು ದೂರುವುದುಂಟು. ಆದರೆ ಕೌರವರು ಗೆದ್ದು ಪಾಂಡವರು ಸೋಲುವ ಹಾಗಾದರೆ ಆಗ ಅಧರ್ಮಗಳೇ ಗೆದ್ದು ಸತ್ಯವಂತರು ಸೋಲುವುದಾಗುತ್ತಿತ್ತು; ಧರ್ಮವನ್ನು ದೃಢವಾಗಿ ನೆಲೆಗೊಳಿಸುವುದಕ್ಕೆ ಅವತರಿಸಿದ ಕೃಷ್ಣನ ಜನ್ಮವೇ ವಿಫಲವಾಗುತ್ತಿತ್ತು. ಭೂಭಾರವಿಳಿಯುತ್ತಿರಲಿಲ್ಲ. ಏರಿನಲ್ಲಿ ನೇರಹಾದಿ ಲೇಸೆನಿಸದು; ಕೊಂಕು ಕೊಂಕಾಗಿ ಹೋಗುವುದರಿಂದ ಸುಲಭವಾಗಿ ಕೊನೆಮುಟ್ಟಬಹುದು. ಮಹಾಭಾರತದ ಯುದ್ಧದಲ್ಲಿ ಕೃಷ್ಣನ ನಡವಳಿಕೆಗಳೂ ಇಂಥವು. ಯುದ್ಧದ ಕೊನೆಯಲ್ಲಿ ಕೃಷ್ಣ ಧರ್ಮರಾಯನನ್ನು ಕರೆತಂದು ಧೃತರಾಷ್ಟ್ರನ ಕಾಲಿಗೆರಗಿಸಿ ಸಾಂತ್ವ ವಚನಗಳನ್ನಾಡುತ್ತಾನೆ. ವ್ಯಾಸನೊಂದಿಗೆ ತಾನೂ ಸೇರಿ ಗಾಂಧಾರಿ ಮೊದಲಾದ ಸ್ತ್ರೀಯರನ್ನೂ ಸಂತೈಸುತ್ತಾನೆ. ಅಂಬುಗಳ ಮೇಲೆ ಮಲಗಿದ್ದ ಭೀಷ್ಮನ ಕೈಯಲ್ಲಿ ಸಕಲ ನೀತಿಗಳನ್ನೂ ಕೇಳಿ ತಿಳಿದುಕೊಳ್ಳಲು ಧರ್ಮರಾಯನನ್ನು ಕಳಿಸುತ್ತಾನೆ. ಸಾಯುವ ವೇಳೆಗೆ ಭೀಷ್ಮನ ಬಳಿಗೆ ಹೋಗಿ ಆತನಿಗೆ ಬಹು ಹರ್ಷವನ್ನು ತರುತ್ತಾನೆ. ಕೃಷ್ಣನ ಅನುಜ್ಞೆಯನ್ನು ಪಡೆದೇ ಭೀಷ್ಮ ದಿವಂಗತನಾಗುವುದು. ಅಂತ್ಯಕಾಲದಲ್ಲಿ ಶ್ರೀಕೃಷ್ಣನನ್ನು ಕುರಿತು ಭೀಷ್ಮನ ಸ್ತೋತ್ರ ಬಹು ರಮಣೀಯವಾಗಿದೆ. ಬಂಧುಗಳ ಮರಣದಿಂದಲೂ ಯುದ್ಧದ ಪಾಪಭೀತಿಯಿಂದಲೂ ಕಂಗೆಟ್ಟು ಕುಸಿದು ಕುಳಿತ ಯುಧಿಷ್ಠಿರ ವ್ಯಾಸನ ಪ್ರೇರಣೆಯಿಂದ ಪ್ರಾಯಶ್ಚಿತ್ತ ರೂಪವಾದ ಅಶ್ವಮೇಧಯಾಗಕ್ಕೆ ತೊಡಗಲು ಶ್ರೀಕೃಷ್ಣ ಅದರಲ್ಲಿ ಸಂತೋಷದಿಂದ ಪಾಲುಗೊಳ್ಳುತ್ತಾನೆ. ಅಶ್ವತ್ಥಾಮನ ನಾರಾಯಣಾಸ್ತ್ರದ ವಿಪತ್ತಿನಿಂದ ಉತ್ತರೆಯ ಗರ್ಭವನ್ನು ಕಾಪಾಡಿ ಪಾಂಡವರ ಸಂತತಿ ಕೊನೆಗೊಳ್ಳದಂತೆ ಮಾಡುತ್ತಾನೆ. ಪಾಂಡವರೊಡನೆ ಕೆಲಕಾಲ ಸುಖವಾಗಿದ್ದು ದ್ವಾರಕೆಗೆ ಮರಳುತ್ತಾನೆ.

ರಾಮಕೃಷ್ಣ ಬಾಹುಪಾಲಿತವಾದ ದ್ವಾರಕೆ ನಿಷ್ಕಂಟಕವಾಗಿ ಸುಖ ಸಮೃದ್ಧಿಗಳಿಂದ ತುಳುಕಾಡುತ್ತಿತ್ತು. ಕೃಷ್ಣ ಅದನ್ನು ಬಿಟ್ಟು ಹೊರಟು ದೂರದಲ್ಲಿದ್ದಾಗಲೆಲ್ಲ ಅದಕ್ಕೆ ವಿಪತ್ತು ಕಾದಿರುತ್ತಿತ್ತು. ರಾಜಸೂಯಕ್ಕೆ ಆತ ಬಂದಾಗ ರುಕ್ಮಿಣಿಯ ಅಣ್ಣ ರುಕ್ಮಿಯ ಸ್ನೇಹಿತ ಸಾಲ್ವನೆಂಬ ಪ್ರಬಲನಾದ ಅರಸ ಸೌಭವೆಂಬ ಆಕಾಶಪುರಿಯಲ್ಲಿ ಕುಳಿತು ದ್ವಾರಕೆಯ ಮೇಲೆ ದಾಳಿಯಿಟ್ಟು ವಸುದೇವ ಪ್ರದ್ಯುಮ್ನಾದಿಗಳನ್ನು ಘಾತಿಸಿದ. ಆಗ ಕೃಷ್ಣನೇ ಇಂದ್ರಪ್ರಸ್ಥದಿಂದ ಹೊರಟು ಬಂದು ಆತನನ್ನೂ ಆತನಿಗೆ ಶಿವನ ಪ್ರಸಾದದಿಂದ ಮಯನ ಮೂಲಕ ಪ್ರಾಪ್ತವಾದ ಆಕಾಶಪುರಿಯನ್ನೂ ನಾಶಪಡಿಸಬೇಕಾಯಿತು. ಮತ್ತೊಮ್ಮೆ ಹಸ್ತಿನಾವತಿಯಲ್ಲಿ ಹೀಗೆಯೇ ಪ್ರವಾಸವಿದ್ದಾಗ ಶ್ಯಮಂತಕ ಮಣಿಯ ನಿಮಿತ್ತವಾಗಿ ದ್ವಾರಕೆಯಲ್ಲಿ ಸತ್ಯಭಾಮೆಯ ತಂದೆ ಸತ್ರಾಜಿತುವಿನ ಕೊಲೆ ನಡೆಯಿತು. ಅಳುತ್ತ ಬಂದ ಸತ್ಯಭಾಮೆಯ ಸಂಗಡ ಹೊರಟು ದುಷ್ಟರನ್ನು ಶಿಕ್ಷಿಸಬೇಕಾಯಿತು, ಶ್ರೀಕೃಷ್ಣ. ತಾನೇ ಅವತಾರಪುರುಷ ವಾಸುದೇವನೆಂದು ಕೃಷ್ಣನೊಡನೆ ಸ್ಫರ್ಧಿಸಹೊರಟ ಪೌಂಡ್ರಕನನ್ನೂ ಆತನ ಮಿತ್ರ ಕಾಶೀರಾಜನನ್ನೂ ಕೃಷ್ಣ ಸಂಹರಿಸಿದ. ಬಲರಾಮನಿಂದ ದಂತವಕ್ರವಿಡೂರಥರು ಮಡಿದರು. ಭಾರತಯುದ್ಧದಲ್ಲಿ ಅನೇಕ ಬಲಿಷ್ಠರೂ ಮದಾಂಧರೂ ಆದ ಕ್ಷತ್ರಿಯರ ನಾಶವಾಗಿ ಭೂಭಾರವಿಳಿದು ಶ್ರೀಕೃಷ್ಣನ ಅವತಾರದ ಕೆಲಸ ಮುಕ್ಕಾಲು ಪಾಲು ಕೊನೆಗೊಂಡಿತು. ತನ್ನ ಮಗ ಪ್ರದ್ಯುಮ್ಮನಿಗೆ ರುಕ್ಮಿಯ ಮಗಳನ್ನೇ ತಂದುಕೊಂಡು ಮದುವೆ ಮಾಡಿದ್ದರಿಂದ ಆ ಮನಸ್ತಾಪವೂ ಶಾಂತವಾಗಿ ರುಕ್ಮಣಿ ಸಂತುಷ್ಟಳಾಗಿದ್ದಳು. ಇಂದ್ರನೊಡನೆ ಹೋರಾಡಿ ಪಾರಿಜಾತವೃಕ್ಷವನ್ನು ತಂದು ಸತ್ಯಭಾಮೆಗೆ ಕೊಟ್ಟದ್ದರಿಂದ ಆಕೆ ಪ್ರಸನ್ನóಳಾಗಿದ್ದಳು. ತನ್ನ ಮಡದಿಯರಲ್ಲಿ ಯಾವಳೂ ತನ್ನ ವಿರಹವನ್ನು ಅನುಭವಿಸದಂತೆ ಕೊರೆಯಾಗದ ತನ್ನ ಮಮತೆಯನ್ನು ತನ್ನ ಯೋಗೈಶ್ವರ್ಯದಿಂದ ತೋರುತ್ತ ಕೃಷ್ಣ ಸುಖವಾಗಿ ದ್ವಾರಕೆಯಲ್ಲಿ ಇದ್ದ. ಕಾಲಕ್ರಮದಲ್ಲಿ ಪ್ರದ್ಯುಮ್ಮನ ಮಗ ಅನಿರುದ್ಧ ತನ್ನಲ್ಲಿ ಅನುರಕ್ತಳಾದ ಬಾಣಾಸುರನ ಮಗಳು ಉಷೆಯನ್ನು ವರಿಸಿದ. ಬಾಣಾಸುರನನ್ನು ಸ್ವಲ್ಪ ಕಷ್ಟದಿಂದಲೇ ಜಯಿಸಿ ಕೃಷ್ಣ ಉಷಾಪರಿಣಯವನ್ನು ಸಾಧಿಸಬೇಕಾಯಿತು. ಹೀಗೆ ಶ್ರೀಕೃಷ್ಣ ತನ್ನ ಅಪಾರ ಸಂಸಾರವನ್ನು ಯಾರಿಗೂ ಕೊರಗು ತಟ್ಟದಂತೆ ಒಂದು ನೆಲೆಗೆ ಮುಟ್ಟಿಸಿದ. ಶತ್ರುಬಾಧೆಯಿಂದ ಪಾರಾದ ದ್ವಾರಕೆ ತನ್ನ ಈ ನೆಮ್ಮದಿಯ ದೆಸೆಯಿಂದಲೇ ದುರ್ವಿನೀತರೂ ವಿಷಯಾಸಕ್ತರೂ ಆದ ಸ್ವಜನರಿಂದಲೇ ಬಾಧೆಗೀಡಾಯಿತು. ಸಾಮಾನ್ಯ ಜನ ಸಂತೋಷದಿಂದಿದ್ದರೂ ಕೃಷ್ಣ ನೆಮ್ಮದಿಯಿಂದ ಇದ್ದನೆಂದು ಹೇಳುವಂತಿರಲಿಲ್ಲ. ಕೃಷ್ಣನು ದ್ವಾರಕ ದಿಂದ ಹೊರಟಾಗ ಅವನಿಗೆ 45 ವರ್ಷಗಳಾಗಿದ್ದವು. ಶಾಂತಿಪರ್ವದ 81ನೆಯ ಅಧ್ಯಾಯದಲ್ಲಿ ಆತ ನಾರದರೊಡನೆ ತನ್ನ ಸು:ಖದು:ಖಗಳನ್ನು ತೋಡಿಕೊಂಡ ಪ್ರಕರಣ ಸ್ವಾರಸ್ಯವಾಗಿದೆ. ತನ್ನನ್ನು ಕಾಣಲು ಬಂದ ನಾರದನಿಗೆ ಕೃಷ್ಣ ಹೇಳುತ್ತಾನೆ: 'ನಾನು ಒಡೆಯ ಎನ್ನಿಸಿಕೊಂಡು ಈ ನನ್ನವರಿಗೆ ಆಳಾಗಿ ದುಡಿಯುತ್ತಿದ್ದೇನೆ. ನನ್ನ ಬೋಗ ಯಾವುದು ಗೊತ್ತೆ, ಅವರ ಬೈಗುಳವನ್ನು ತಿನ್ನುವುದು, ಇಲ್ಲ ಅಹವಾಲುಗಳನ್ನು ಕೇಳುವುದು. ಅವರ ಕಠಿಣ ಮಾತುಗಳು ನನ್ನ ಎದೆಯನ್ನು ಕೊರೆದು ಕಿಡಿಕಾರಿಸುತ್ತಿತ್ತು. ಅಣ್ಣ ಬಲರಾಮನಿಗೆ ತನ್ನ ತೋಳಬಲ ಮತ್ತು ಮದ್ಯಗಳನ್ನು ಬಿಟ್ಟರೆ ಮಾತೇ ಇಲ್ಲ. ತಮ್ಮನಾದ ಗದ ಒಬ್ಬ ಶಿಸ್ತುಗಾರ ಪುಟ್ಟಸ್ವಾಮಿ, ಆತನ ಸೂಕ್ಷ್ಮ ನಸನಸೆ ಹೇಳತೀರದು. ನನ್ನ ಮಗ ಪ್ರದ್ಯುಮ್ನನಿಗೆ ತನ್ನ ಮುಖ ನೋಡಿಕೊಂಡಷ್ಟೂ ತೃಪ್ತಿಯೇ ಇಲ್ಲ. ನನ್ನ ಪಾಡನ್ನು ಕೇಳುವವರೇ ಇಲ್ಲ. ಅಹುಕನೂ ಅಕ್ರೂರನೂ ಯಾವಾಗಲೂ ಜಗಳವಾಡುತ್ತಲೇ ಇರುತ್ತಾರೆ. ಅಣ್ಣ ತಮ್ಮಂದಿರಿಬ್ಬರೂ ಜೂಜಾಡುತ್ತಿರುವಾಗ ಒಬ್ಬ ಗೆಲ್ಲಲೆಂದೂ ಮತ್ತೊಬ್ಬ ಸೋಲದಿರಲೆಂದೂ ಹರಸಿಕೊಳ್ಳುವ ತಾಯಿಯ ಸ್ಥಿತಿ ನನಗೆ ಬಂದಿದೆ. ಅವರಿಲ್ಲದೆ ನಾನು ಬದುಕಲಾರೆ; ಅವರಿದ್ದರೆ ಬದುಕೇ ಭಾರ. ಏನು ಮಾಡಲಯ್ಯ?' ಕೃಷ್ಣನ ಈ ಮಾತಿಗೆ ನಾರದನ ಉತ್ತರ ಹೀಗಿದೆ: 'ನಿನ್ನ ಪಾಡು ಹೊರಗಿನಿಂದ ಬಂದದ್ದಲ್ಲ; ನೀನೇ ಬರೆಸಿಕೊಂಡದ್ದು. ಮುದಿಯ ಉಗ್ರಸೇನನಿಗೆ ಪಟ್ಟಗಟ್ಟುವುದಕ್ಕೆ ಬದಲು ನೀನೇ ಏಕೆ ಸಿಂಹಾಸನವೇರಬಾರದಾಗಿತ್ತು? ಏಕೆ ಹಾಗೆ ಹೊರಗೆ ನಿಂತೆ? ಈಗ ತಾಳಿಕೊಳ್ಳುವುದು ಒಂದೇ ಉಪಾಯ. ಬೈಗುಳಕ್ಕೆ ಮಿದುಮಾತು, ಕದಿಯ ಬಂದವನಿಗೆ ಕೊಟ್ಟು ಕಳುಹಿಸುವುದು-ನಂಟರ ಹತ್ತಿರ ನಡೆದುಕೊಳ್ಳಬೇಕಾದ ಉಪಾಯ ಇದು. ಔದಾರ್ಯವಿಲ್ಲದೆ, ಸಂತತವಾದ ಸ್ವಾರ್ಥ ತ್ಯಾಗವಿಲ್ಲದೆ, ತಾಳ್ಮೆಯ ಧೀಮಂತಿಕೆ ಇಲ್ಲದೆ, ಆಪ್ತ ಸಹಾಯವಿಲ್ಲದೆ, ಇರುವವ ಇಂಥ ದೊಡ್ಡ ಕುಲವನ್ನೂ ನೀನು ಕೈಗೊಂಡಿರುವ ಮಹತ್ಕಾರ್ಯಗಳನ್ನೂ ನಿರ್ವಹಿಸುವುದು ಕಷ್ಟ.. ಭೇದದಿಂದ ಸಂಘ ಒಡೆದು ಹೋಗುತ್ತದೆ. ನೀನು ಸಂಘದ ತಲೆಯವ. ಇದು ಒಡೆದು ಹೋಗದಂತೆ ನಡದುಕೊ. ಅಷ್ಟಕ್ಕೂ ನಿನಗೆ ಬುದ್ದಿ ಹೇಳತಕ್ಕವನು ನಾನೇ! ನೀನು ನಗುತ್ತಿದ್ದೀಯೇ. ಇದೆಲ್ಲ ನಿನಗೆ ಗೊತ್ತಿಲ್ಲದೆ ಇಲ್ಲ, ಶಿಷ್ಯನಿಂದಲೇ ಗುರು ಉಪದೇಶ ಪಡೆಯುವ ಹವಣು, ಇದು.' ಇದರಿಂದ ಯಾದವರೂ ಸಹ ಎಂಥ ಗುಣಲಕ್ಷಣದವರು ಎಂಬುದು ಗೊತ್ತಾಗುತ್ತದೆ. ಕೃಷ್ಣನ ತಾಳ್ಮೆ ಕೂಡ ಇವರ ವಿಷಯದಲ್ಲಿ ಕೊನೆಮುಟ್ಟಿತು. ದ್ವಾರಕೆಯಲ್ಲಿ ಮಹೋತ್ಪಾತ ತೋರಿದಾಗ ಪೀಡಾ ಪರಿಹಾರಾರ್ಥವಾಗಿ ಪ್ರಭಾಸ ಕ್ಷೇತ್ರಕ್ಕೆ ಯಾದವ ಪ್ರಮುಖರೆಲ್ಲ ಹೊರಡುತ್ತಾರೆ. ಅಲ್ಲಿ ಅನ್ನಪಾನಾದಿಗಳಲ್ಲಿ ಮಗ್ನರಾಗಿ ಮತ್ತಿನಿಂದ ಮತಿಗೆಟ್ಟು ಒಬ್ಬರಿಗೊಬ್ಬರು ಹೊಡೆದಾಡಿ ಮಡಿಯುತ್ತಾರೆ; ಕೃಷ್ಣನ ಮೇಲೂ ಅಂದು ಕೈಯೆತ್ತಲು ಹಿಂಜರಿಯುವುದಿಲ್ಲ. ಆತನೂ ಕುಪಿತನಾಗಿ ಕೈಗೆ ಸಿಕ್ಕಿದವರನ್ನು ಹೊಡೆದು ಕೊಲ್ಲುತ್ತಾನೆ. ಬಲರಾಮನೂ ಈ ಹತ್ಯೆಯಲ್ಲಿ ಪಾಲುಗೊಳ್ಳುತ್ತಾನೆ. ಕೊನೆಗೆ ಉಳಿದವರು ಬಲರಾಮ, ಕೃಷ್ಣ, ಆತನ ಸಾರಥಿ ದಾರುಕ. ಬಲರಾಮ ಸಮುದ್ರವನ್ನು ಹೊಗುತ್ತಾನೆ. ಕೃಷ್ಣ ಕಾಡಿನೊಳಕ್ಕೆ ಹೋಗಿ ಅಲ್ಲಿ ಯೋಗದಲ್ಲಿ ಮಲಗುತ್ತಾನೆ. ಆತನ ಕಾಲವನ್ನು ಮೃಗವೆಂದು ಭಾವಿಸಿ ಜರನೆಂಬ ಬೇಡ ಅಂಬಿನಿಂದ ಹೊಡೆಯುತ್ತಾನೆ. ಕೃಷ್ಣ ದಾರುಕನೊಂದಿಗೆ ಅರ್ಜುನನನ್ನು ಬರಮಾಡಿಕೊಂಡು, ವಜ್ರನೆಂಬ ಯದುಬಾಲಕನೊಡನೆ ಎಲ್ಲರೂ ದ್ವಾರಕೆಯನ್ನು ಬಿಟ್ಟು ಹೊರಡುವಂತೆ ಹೇಳಿಕಳಿಸಿ, ತಾನು ಯೋಗದಿಂದ ಪ್ರೇಯಸೀ ಸರ್ವನೇತ್ರಾಣಾಂ ಎಂದು ಭಾಗವತಕಾರರು ವರ್ಣಿಸುವ ತನ್ನ ಕಳೇಬರವನ್ನು ತ್ಯಜಿಸುತ್ತಾನೆ.

ಇದು ಐತಿಹಾಸಿಕವೆಂದು ಹೇಳಬಹುದಾದ ಶ್ರೀಕೃಷ್ಣ ಚರಿತೆ. ಆದರೆ ಮಹಾಪ್ರಾಜ್ಞನಾದ ಭೀಷ್ಮನಿಂದ ಪೂಜಿತನಾದ ಶ್ರೀಕೃಷ್ಣನನ್ನು ಬರಿ ಐತಿಹಾಸಿಕ ಮಹಾಪುರುಷನನ್ನಾಗಿ ಭಾವಿಸಿದರೆ ನಮಗೆ ನಾವೇ ಅಪಚಾರಮಾಡಿಕೊಂಡಂತಾಗುತ್ತದೆ. ತನ್ನ ಕಾಲದಲ್ಲೇ ಆತ ದೇವರೆಂದು ಪರಿಗಣಿತನಾಗಿದ್ದನೆಂಬ ಅಂಶ ಆತನಿಗೆ ರಾಜಸೂಯಯಾಗದಲ್ಲಿ ಸಂದ ಅಗ್ರಪೂಜೆಯಿಂದ ವಿದಿತವಾಗುತ್ತದೆ. ಈ ದಿವ್ಯ ಪುರುಷನೊಡನೆ ಆ ಕಾಲದ ಎಲ್ಲ ಜನರೂ ಒಂದಿಲ್ಲೊಂದು ತೆರದಲ್ಲಿ ಸಂಬಂಧವನ್ನು ಕಲ್ಪಿಸಿಕೊಂಡಿದ್ದರು. 'ಗೋಪಿಗಳು ಕಾಮದಿಂದ, ಕಂಸ ಭಯದಿಂದ, ಶಿಶುಪಾಲ ಮೊದಲಾದವರು ದ್ವೇಷದಿಂದ, ವೃಷ್ಣಿಗಳು ಬಾಂಧವ್ಯದಿಂದ, ಪಾಂಡವರು ಸಖ್ಯದಿಂದ, ಮಿಕ್ಕ ಸಾಧುಸಂತರಾದಿಯಾಗಿ ಸಮಸ್ತರೂ ಭಕ್ತಿಯಿಂದ ಭಗವಾನ್ ಶ್ರೀಕೃಷ್ಣನಿಗೆ ಸಂಬಂಧರಾಗಿದ್ದರು-ಎನ್ನುತ್ತದೆ ಭಾಗವತ; 'ಸಕಲ ಸುಂದರ ಸನ್ನಿವೇಶವಾದ ತನುವನ್ನು ತಳೆದು, ಸುಮಂಗಲ ಕಾರ್ಯಗಳನ್ನು ಭೂಮಿಯಲ್ಲಿ ನಡೆಸಿ, ತನ್ನಿಷ್ಟಾರ್ಥವನ್ನು ಪೂರೈಸಿಕೊಂಡು, ತಾನಲ್ಲದೆ ಇತರರನ್ನೂ ನಿಮಿತ್ತವಾಗಿ ಮಾಡಿಕೊಂಡು, ರಾಜರನ್ನೆಲ್ಲ ಧ್ವಂಸಮಾಡಿ ಭೂಭಾರವನ್ನಿಳಿಸಿದನು, ಸ್ವಾಮಿ-ಎಂದೂ ಕೊಂಡಾಡುತ್ತದೆ.

ಇಂಥ ರೂಪಶಾಲಿಯೂ ಸಂಯಮಿಶ್ರೇಷ್ಠನೂ ತತ್ತ್ವಜಿಜ್ಜಾಸುವೂ ಜಗನ್ಮಂಗಲವಿದನೂ ಜಗತ್ ಕಲ್ಯಾಣಕಾರನೂ ಆದ ಶ್ರೀಕೃಷ್ಣಸ್ವಾಮಿಯ ಪೂಜೆ ಬಹುಕಾಲದ ಹಿಂದೆಯೇ ಭಾರತದಲ್ಲಿ ಪ್ರವೃತ್ತವಾಯಿತು. ಕ್ರಿ.ಪೂ.400 ವೇಳೆಗೆಯೇ ಮಥುರಾ ನಗರದಲ್ಲಿ ಪಾಂಡವಸಖ ಕೃಷ್ಣ ಪೂಜೆಗೊಳ್ಳುತ್ತಿದ್ದನೆಂದು ಮೆಗಾಸ್ತನೀಸನಿಂದ ತಿಳಿದು ಬರುತ್ತದೆ. ಕ್ರಿಸ್ತಪೂರ್ವ 6ನೆಯ ಶತಮಾನದಿಂದ ಕೃಷ್ಣನಿಗೆ ಗುಡಿಗಳಾಗಿದ್ದವೆಂದು ಶಾಸನಗಳು ಗರುಡಗಂಬಾದಿ ಶಿಲ್ಪಗಳು ಘೋಷಿಸುತ್ತವೆ. ಕೃಷ್ಣ ಬಲರಾಮರು ದೇವತ್ತ್ವಕ್ಕೇರಿದ ಕ್ಷತ್ರಿಯ ವೀರರೆಂದು ಪಾಣಿನಿ ತನ್ನ ಸೂತ್ರಗಳ ಉದಾಹರಣೆಗಳಲ್ಲಿ ಭಾವಿಸಿದ್ದಾನೆ. ಪತಂಜಲಿಯ ಕಾಲಕ್ಕೆ ಇವರು ದೇವರೆಂಬ ವಿಷಯ ಸ್ಥಿರಪಟ್ಟು ಹೋಗಿತ್ತು. ಈಗಲೂ ಶ್ರೀಕೃಷ್ಣನನ್ನು ದೇವರ ಪೂರ್ಣ ಅವತಾರವೆಂದೇ ಭಾರತೀಯರು ನಂಬುತ್ತಾರೆ. ಕೃಷ್ಣನನ್ನು ಹಾಡಿ ಹೊಗಳದ ಸಾಧುಸಂತರಿಲ್ಲ. ಕವಿಗಳು ಎಲ್ಲ ಕಾಲದಲ್ಲೂ ಆತನ ವಿಷಯಕವಾದ ಕತೆಗಳನ್ನು ಕವಿತೆಗಳನ್ನೂ ರಚಿಸಿದ್ದಾರೆ. ರಚಿಸುತ್ತಲೂ ಇದ್ದಾರೆ. ಗಾನ ನೃತ್ಯಗಳಲ್ಲೂ ಕೃಷ್ಣನನ್ನು ಕೊಂಡಾಡದ ಕಲೆಗಾರರಿಲ್ಲ. ಕನ್ನಡನಾಡಿನ ದಾಸರು ಆತನ ನೆನಪನ್ನು ಮನೆಮನೆಗಳಿಗೆ ಕೊಂಡೊಯ್ದು ಭವತಾಪವನ್ನು ಹಿಂಗಿಸಿದ್ದಾರೆ. ಪ್ರೇಮವನ್ನೂ ಸಂತೋಷವನ್ನೂ ಬೆಳೆಸಿದ್ದಾರೆ. ಕೃಷ್ಣನ ನೇರವಾದ ಉಪದೇಶ ಮಹಾಭಾರತದಲ್ಲಿನ ಭಗವದ್ಗೀತೆಯ ಮತ್ತು ಅನುಗೀತೆಗಳಲ್ಲೂ ಭಾಗವತದ ಉದ್ಧವ ಕೃಷ್ಣಸಂವಾದದಲ್ಲೂ ದೊರೆಯುತ್ತದೆ. ಮತ ಪ್ರವರ್ತಕರಾದ ಆಚಾರ್ಯರೆಲ್ಲರೂ ಭಗವದ್ಗೀತೆಯ ಮೇಲೆ ವ್ಯಾಖ್ಯಾನಗಳನ್ನು ರಚಿಸಿದ್ದಾರೆ. ಈಗಲೂ ಇದು ವಿದ್ವಾಂಸರಿಂದಲೂ ಜಿಜ್ಞಾಸುಗಳಿಂದಲೂ ವ್ಯಾಖ್ಯಾನವಾಗುತ್ತಲೇ ಇದೆ. ಭಗವದ್ಗೀತೆ (ನೋಡಿ- ಭಗವದ್ಗೀತೆ) ಶ್ರೀಕೃಷ್ಣ ಸ್ವಾನುಭವದಿಂದ ಹೇಳಿದ ಮಾತುಗಳಾಗಿವೆ. ಭಾರತಕ್ಕೆ ಆತ ಕೊಟ್ಟ ಕೊಡುಗೆ ಎಂದರೆ ಇಲ್ಲ ಮತಗಳನ್ನೂ ಗೌರವದಿಂದ ಕಾಣಬೇಕೆಂಬ ಮನೋವೃತ್ತಿ, ಸ್ವಾರ್ಥದೂರವೂ ಜ್ಞಾನಭಕ್ತಿಯುತವೂ ಶುದ್ಧಾಂತ:ಕರಣ ಪ್ರವೃತ್ತವೂ ಫಲಾಸಕ್ತಿರಹಿತವೂ ಆದ ಪ್ರಾಪ್ತ ಕರ್ತವ್ಯ ನಿರ್ವಹಣೆಯ ಬುದ್ಧಿ. ಅಲ್ಲದೆ ಅಂತಃಕರಣಕ್ಕೆ ಒಗ್ಗದೆ ಸುವಿಚಾರಕ್ಕೆ ಸಗ್ಗದೆ ಇರುವ, ಆದರೆ ಕಾಮಾತ್ಮರೂ ಅಲ್ಪಸುಖಾಪೇಕ್ಷಿಗಳೂ ಆದ ಸ್ವಾರ್ಥಿಗಳಿಗೆ ಮಾತ್ರ ಇಷ್ಟವಾಗುವ ಕುರುಡು ನಂಬಿಕೆ ಮತ್ತು ಆಚರಣೆಗಳ ತಿರಸ್ಕಾರ. ಅಧ್ಯಾತ್ಮ ಸಂಪನ್ನರಾದ ಜ್ಞಾನಿಗಳ ಮಾತಿಗೆ ಪುರಸ್ಕಾರ. ಸುವಿಚಾರಿತವೂ ಆಚರಣೀಯವೂ ಆದ ಆತ್ಮವೃದ್ಧಿಕರ ಉಪದೇಶವನ್ನು ಕೃಷ್ಣ ಸ್ವಾನುಭಾವದಿಂದ ನಿರೂಪಿಸಿರುವುದರಿಂದ ಭಗವದ್ಗೀತೆ ಎಂಥ ಸೂಕ್ಷ್ಮ, ತೀಕ್ಷ್ಣಮತಿಗೂ ಹಿಡಿಸುತ್ತದೆ. ಆತನ ಸ್ಮರಣೆಯಿಂದ ನಮಗೆ ಲಭಿಸುವುದು ಸೈರಣೆಯ ಹಾಗೂ ಪ್ರೇಮಲ ಕೋಮಲ ಸಂತುಷ್ಟಿಯ ಮನೋಭಾವ. ಆತನ ಉಪದೇಶ ಮಾಮನುಸ್ಮರ ಯುದ್ಧ್ಯ ಚ-ಪರಮಾತ್ಮನನ್ನು ಸಂತತವಾಗಿ ಸ್ಮರಣೆಯಲ್ಲಿಟ್ಟುಕೊಂಡು ವಿಗಜ್ವರನಾಗಿ ಮಾಡಬೇಕಾದುದನ್ನು ಅಳುಕದೆ ಮಾಡುತ್ತ ಈ ಬಾಳಿನಲ್ಲಿ ಏಗು-ಎಂಬುದು. (ಪಿ.ಟಿ.ಎನ್.)