ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೆಂದಲೆ ಹಾವು

ವಿಕಿಸೋರ್ಸ್ದಿಂದ

ಕೆಂದಲೆ ಹಾವು ಕ್ರೋಟಾಲಿಡೀ (ಪಿಟ್ವೈಪರ್ಸ್) ಕುಟುಂಬಕ್ಕೆ ಸೇರಿದ ಹಾವು (ಕಾಪರ್ ಹೆಡ್ ಸ್ನೇಕ್) ಶಾಸ್ತ್ರೀಯ ನಾಮ ಅಗ್ಕಿಸ್ಟ್ರಡಾನ್ ಕಂಟಾರ್ಟ್ರಿಕ್ಸ್. ಇದರ ತಲೆಯ ಮೇಲ್ಭಾಗ ತಾಮ್ರದಂತೆ ಕೆಂಪಗಿರುವುದರಿಂದ ಈ ಹೆಸರು ಬಂದಿದೆ. ಇದು ಮಂಡಲದ ಹಾವುಗಳಿಗೆ ಹತ್ತಿರದ ಸಂಬಂಧಿ. ಅಮೆರಿಕದಲ್ಲಿ ಸಿಕ್ಕುವ ಕೆಲವೇ ವಿಷಪೂರಿತ ಸರ್ಪಗಳಲ್ಲಿ ಇದು ಒಂದು. ಇದು ಅಮೆರಿಕ ಸಂಯುಕ್ತಸಂಸ್ಥಾನದ ಟೆಕ್ಸಾಸ್ ರಾಜ್ಯದ ಪಶ್ಚಿಮ ಭಾಗ, ಮಸ್ಸಾಚೂಸೆಟ್ಸ ಮತ್ತು ಫ್ಲಾರಿಡ ರಾಜ್ಯಗಳ ಉತ್ತರ ಭಾಗಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ. ವರ್ಣವೈವಿಧ್ಯದ ಆಧಾರದ ಮೇಲೆ ಸುಮಾರು ನಾಲ್ಕು ಬಗೆಯ ಕೆಂದಲೆ ಹಾವುಗಳನ್ನು ಗುರುತಿಸಲಾಗಿದೆ. ಇದೊಂದು ಸಣ್ಣ ಹಾವು. ಅಪೂರ್ವವಾಗಿ 4 ಅಡಿ ಉದ್ದವಿರುವುದಾದರೂ 3 ಅಡಿ ಉದ್ದವೇ ಸಾಮಾನ್ಯ. ದೇಹದ ಬಣ್ಣ ಕಂದು. ದೇಹದುದ್ದಕ್ಕೂ ಅಲ್ಲಲ್ಲಿ 15-25 ಕಗ್ಗಂದು ಬಣ್ಣದ ಅಡ್ಡಪಟ್ಟೆಗಳಿವೆ. ಪಟ್ಟೆಗಳು ಬೆನ್ನು ಮೇಲೆ ಕಿರಿದಾಗಿಯೂ ಪಕ್ಕಗಳಲ್ಲಿ ಅಗಲವಾಗಿಯೂ ಇವೆ. ದೇಹದ ತಳಭಾಗದ ಬಣ್ಣ ಹಳದಿ ಮಿಶ್ರಿತ ಕಂದು. ಕಣ್ಣಿಗೂ ನಾಸಿಕರಂಧ್ರಕ್ಕೂ ನಡುವೆ ತಲೆಯ ಎರಡೂ ಪಕ್ಕಗಳಲ್ಲಿಯೂ ಒಂದೊಂದು ಕುಳಿ(ಪಿಟ್) ಇರುವುದು ಕ್ರೋಟಾಲಿಡಿ ಕುಟುಂಬದ ಇತರ ಹಾವುಗಳಂತೆ ಈ ಹಾವಿನ ವೈಶಿಷ್ಟ್ಯವೂ ಹೌದು. ಈ ಕುಳಿಗಳು ಉಷ್ಣಗ್ರಾಹಕಗಳಾಗಿ ಬಿಸಿರಕ್ತದ ಪ್ರಾಣಿಗಳ ಸುಳಿವನ್ನು ತಿಳಿಯಲು ಸಹಾಯಕವಾಗಿವೆ ಎಂದು ತಿಳಿದುಬಂದಿದೆ.

ಇದು ಸಾಮಾನ್ಯವಾಗಿ ಜೌಗುನೆಲ, ಹುಲ್ಲುಗಾವಲು ಮತ್ತು ಕಲ್ಲುಬಂಡೆಗಳಿರುವ ಪ್ರದೇಶಗಳಲ್ಲಿ ಕಂಡುಬರುತ್ತದೆ. ವಸಂತಋತುವಿನಲ್ಲಿ ಹಗಲು ಹೊತ್ತಿನಲ್ಲೆ ಸಂಚರಿಸುತ್ತವೆ. ಆದರೆ ಬೇಸಗೆಯಲ್ಲಿ ಸೆಕೆ ತಾಳಲಾರದೆ ಮರೆಯಲ್ಲಿದ್ದು ರಾತ್ರಿ ಹೊತ್ತಿನಲ್ಲಿ ಮಾತ್ರ ಹೊರ ಹೊರಡುತ್ತದೆ. ಚಳಿಗಾಲದಲ್ಲಿ ಹಲವಾರು ಹಾವುಗಳು ಗುಂಪುಗೂಡಿ ಭೂಮಿಯ ಬಿರುಕುಗಳಲ್ಲಿ ಮತ್ತು ಬಂಡೆಗಳ ಸಂದುಗಳಲ್ಲಿ ಶಿಶಿರನಿದ್ರೆಯಲ್ಲಿ (ಹೈಬರ್‍ನೇಷನ್) ತೊಡಗುತ್ತವೆ. ಈ ಸಮಯದಲ್ಲಿ ಬುಡುಬುಡುಕೆ ಹಾವು (ರ್ಯಾಟಲ್ ಸ್ನೇಕ್) ಮುಂತಾದವೂ ಇವುಗಳ ಜೊತೆ ಸೇರುವುದುಂಟು. ಸಣ್ಣ ಗಾತ್ರದ ಸ್ತನಿ, ಹಲ್ಲಿ, ಕಪ್ಪೆ, ಹಕ್ಕಿ ಮತ್ತು ಕೀಟಗಳನ್ನು ತಿನ್ನುವುದಾದರೂ ಇಲಿಗಳೇ ಇದರ ಮೆಚ್ಚಿನ ಆಹಾರ. ಕೆಂದಲೆ ಹಾವು ಸ್ವಭಾವತ: ಸಾಧುಪ್ರಾಣಿಯಾದರೂ ಹೆದರಿಸಿದರೆ, ಗಾಯಗೊಳಿಸಿದರೆ, ರೇಗಿಸಿದರೆ ಕಚ್ಚುತ್ತದೆ. ಇದರ ವಿಷ ರಕ್ತಗೆರಣೆಕಟ್ಟುವುದರ ಮೇಲೆ ಪರಿಣಾಮವುಂಟು ಮಾಡುತ್ತದೆ.

ಕೆಂದಲೆ ಹಾವಿನ ಸಂತಾನೋತ್ಪತ್ತಿಯ ಕಾಲ ಏಪ್ರಿಲ್-ಮೇ ತಿಂಗಳು. ಒಂದು ಸೂಲಿಗೆ 4-8 ಮರಿಗಳಿರುತ್ತವೆ. (ಎಸ್.ಎಚ್.ಒ.) (ಪರಿಷ್ಕರಣೆ: ಡಿ.ಆರ್.ಪ್ರಹ್ಲಾದ್)