ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೇರಳದ ಇತಿಹಾಸ

ವಿಕಿಸೋರ್ಸ್ ಇಂದ
Jump to navigation Jump to search
ಕೇರಳದ ಇತಿಹಾಸ

ಪ್ರಾಗಿತಿಹಾಸ:[ಸಂಪಾದಿಸಿ]

ಕೇರಳದ ಪ್ರಾಗಿತಿಹಾಸ ನಿಖರವಾಗಿ ಆರಂಭವಾಗುವುದು ಕಬ್ಬಿಣದ ಯುಗದಲ್ಲಿ. ಆ ಕಾಲದ ಬೃಹತ್-ಶಿಲಾಸಮಾಧಿ ಸಂಸ್ಕøತಿಗೆ ಸೇರಿದ ಅನೇಕ ರೀತಿಯ ಸಮಾಧಿಗಳು ಉತ್ತರದಲ್ಲಿ ಕೋಟ್ಟಯಂ ಜಿಲ್ಲೆಯಿಂದ ಹಿಡಿದು ದಕ್ಷಿಣದ ಕೊಲ್ಲಂ ಜಿಲ್ಲೆಯವರೆಗಿನ ಪ್ರದೇಶದಲ್ಲಿ ಬೆಳಕಿಗೆ ಬಂದಿವೆ. ಈ ಸಮಾಧಿಗಳನ್ನು ಒರಟು ಬಂಡೆಗಳ ಕುಳ್ಳುಮಂಟಪ (ಡಾಲ್ಮೆನ್), 2 ಪ್ರವೇಶದ್ವಾರವಿರುವ ಶಿಲಾತೊಟ್ಟಿ (ಪೋರ್ಟ್‍ಹೋಲ್ಡ್ ಸಿಸ್ಟ್), 3 ಜಲ್ಲಿರಾಶಿ (ಕೇರ್ನ್), 4 ಶವಜಾಡಿ (ಆರ್ನ್),5 ನೆಡುಗಲ್ಲು (ಮೆನ್‍ಹಿರ್), 6 ಟೋಪಿಕಲ್ಲು, 7 ಹೆಡೆಗಲ್ಲು (ಹುಡ್‍ಸ್ಟೋನ್), 8 ಭೂಗತಗುಹೆ ಎಂದು ಎಂಟು ರೀತಿಗಳಲ್ಲಿ ವಿಂಗಡಿಸಬಹುದು. (ನೋಡಿ: ಬೃಹತ್ ಶಿಲಾಸಮಾಧಿ ಸಂಸ್ಕøತಿ). ಒಂದೊಂದು ಶಿಲಾವರ್ತುಲದ ಮಧ್ಯೆಯೂ ಅನೇಕ ಕುಳ್ಳು ಮಂಟಪಗಳು ತ್ರಿಚೂರು ಜಿಲ್ಲೆಯ ವರಂದರಪಲ್ಲಿ, ಕುನ್ನಾತುಪದಂ, ಕರುಣಥರ್‍ಗಳಲ್ಲೂ ಒಂಟಿ ಮಂಟಪಗಳು ಅದಿರಪಿಲ್ಲಿ ಜಲಪಾತ, ಪರಂಬಿಕುಲಮ್ ಮುಂತಾದೆಡೆಗಳಲ್ಲೂ ಇವೆ. ತ್ರಿಚೂರು ಜಿಲ್ಲೆಯಲ್ಲಿ ಶಿಲಾತೊಟ್ಟಿ ಸಮಾಧಿಗಳು ಪೋರ್ಕಲಂ, ತಿರುವಿಲ್ವಮಲ, ಕರಲಂ ಮತ್ತು ಪುಳಕ್ಕಲಗಳಲ್ಲಿಯೂ ಕೋಟ್ಟಯಂ ಜಿಲ್ಲೆಯ ವಲ್ಲಿಯನೂರು ಬಳಿಯೂ ದೊರಕಿವೆ. ಜಲ್ಲಿರಾಶಿ ಸಮಾಧಿಗಳು ಕೋಟ್ಟಯಂ ಜಿಲ್ಲೆಯ ಕಲ್ಲರ್, ವೇದಗಿರಿಬೆಟ್ಟ, ಕೊಲ್ಲಂ ಜಿಲ್ಲೆಯ ಪೂಥನ್‍ಕರ, ಕೊಡುಮಾನ್ ಮುಂತಾದೆಡೆಗಳಲ್ಲಿ ಸಿಕ್ಕಿವೆ. ಶವಜಾಡಿ ಸಮಾಧಿಗಳು ಎರ್ನಾಕುಲಂ ಜಿಲ್ಲೆಯ ಚೆಂಗಮನಾಡ್, ತ್ರಿಚೂರು ಜಿಲ್ಲೆಯ ಕಂಜಿರಕುಡ, ಕರುನ್‍ಥರ, ಕೊಲ್ಲಂ ಜಿಲ್ಲೆಯ ಅಂಗಡಿಕಲ್ ಮುಂತಾದ ಅನೇಕ ಸ್ಥಳಗಳಲ್ಲೂ ನೆಡುಗಲ್ಲು ಸಮಾಧಿಗಳು ಪಾಲಕ್ಕಾಡು ಜಿಲ್ಲೆಯ ಅತ್ತಪಡಿ, ಥಚ್ಚನ್ ಥುಕರ, ತ್ರಿಚೂರು ಜಿಲ್ಲೆಯ ಅನಪ್ಪರ, ಕುತ್ತೂರು, ಚುರತ್ತುರ, ಕೋಮಲ ಪರಥಲ, ಕೋಟ್ಟಯಂ ಜಿಲ್ಲೆಯ ಕೆಲ್ಲರ್ ಮುಂತಾದ ಸ್ಥಳಗಳಲ್ಲಿಯೂ ಕಂಡು ಬಂದಿವೆ. ಕೊನೆಯ ಮೂರು ರೀತಿಯ ಸಮಾಧಿಗಳು ಕೇರಳ ಪ್ರದೇಶಕ್ಕೆ ವಿಶಿಷ್ಟವಾದವು. ಟೋಪಿಕಲ್ಲುಗಳು ತ್ರಿಚೂರು ಜಿಲ್ಲೆಯ ಅರಿಯನ್ನೂರು, ಚೇರಮನ್‍ಗಾಡ್, ಪಾಲಕ್ಯಾಡು ಜಿಲ್ಲೆಯ ಉಂಗಲ್ಲೂರ್ ಮೊದಲಾದ ಸ್ಥಳಗಳಲ್ಲಿವೆ. ಹೆಡೆಕಲ್ಲು ಸಮಾಧಿಗಳು ತ್ರಿಚೂರು, ಕೋಟ್ಟಯಂ, ಪಾಲಕ್ಕಾಡು ಜಿಲ್ಲೆಗಳಲ್ಲಿ ಅರಿಯನ್ನೂರು, ಆಲನಲ್ಲೂರು ಮುಂತಾದ ಅನೇಕ ಸ್ಥಳಗಳಿವೆ. ಭೂಗತ ಸಮಾಧಿಗುಹೆಗಳು ಹೆಚ್ಚಾಗಿ ಕೋಳಿಕ್ಕೋಡ್, ಮಲಪ್ಪರಂ, ಕೋಟ್ಟಯಂ, ತ್ರಿಚೂರು ಜಿಲ್ಲೆಗಳಲ್ಲಿ ದೊರಕಿವೆ. ಇವೆಲ್ಲ ಲ್ಯಾಟರೈಟ್ ಕಲ್ಲುಗಳಲ್ಲಿ ಕೊರೆಯಲಾದವು. ಭೂಗತ ಗುಹಾಸಮಾಧಿಗಳಲ್ಲಿ ಮುಖ್ಯವಾಗಿ ತ್ರಿಚೂರು ಜಿಲ್ಲೆಯ ಪೋರ್ಕಲಮ್, ಕೋಟ್ಟಯಂ ಜಿಲ್ಲೆಯ ಕಣ್ಣವಂ, ಕಣ್ಣನ್ನೂರು ಜಿಲ್ಲೆಯ ವಲ್ಲಿಯನೂರು, ಕೋಳಿಕ್ಕೋಡ್ ಜಿಲ್ಲೆಯ ಪಾಲಂಗಾಡ್, ಕುಮಾರನ್ ಪುತ್ತೂರುಗಳನ್ನು ಹೆಸರಿಸಬಹುದು.

 • ಪೋರ್ಕಲಂನಲ್ಲಿ ನಡೆದಿರುವ ಉತ್ಖನನದಲ್ಲಿ ಮತ್ತು ಪ್ರಾಕೃತಿಕ ಕಾರಣಗಳಿಂದ ಅರೆಬರೆ ನಶಿಸಿರುವ ಅನೇಕ ಸಮಾಧಿಗಳಲ್ಲಿ ವಿವಿಧ ರೀತಿಯ ಕಬ್ಬಿಣದ ಆಯುಧಗಳು, ಕಾರ್ನೀಲಿಯನ್ ಮತ್ತಿತರ ವಸ್ತುಗಳ ಮಣಿಗಳು, ಕಪ್ಪು-ಕೆಂಪು ಮಡಕೆಗಳು ದೊರಕಿವೆ. ಇವೆಲ್ಲ ದಕ್ಷಿಣ ಭಾರತದ ಬೃಹತ್ ಶಿಲಾ ಸಂಸ್ಕøತಿಯ ಕಾಲದಲ್ಲಿ ಪ್ರಚಲಿತವಾಗಿದ್ದವೇ. ಕೇರಳದ ಈ ಸಮಾಧಿಗಳನ್ನು ಕ್ರಿ.ಪೂ. ಒಂದನೆಯ ಸಹಸ್ರಮಾನಕ್ಕೆ ಸೇರಿಸಬಹುದು.
 • ಪೋರ್ಕಲಂ ಬಿಟ್ಟರೆ ಬೇರೆಲ್ಲೂ ವೈe್ಞÁನಿಕ ರೀತಿಯ ಉತ್ಖನನಗಳು ನಡೆದಿಲ್ಲ. ಇತ್ತೀಚೆಗೆ ಕ್ರಾಂಗನೂರು ಬಳಿಯ ಚೇರಮಾನ್ ಪೆರಂಬುವನಲ್ಲಿ ನಡೆಸಿದ ಸಣ್ಣ ಗಾತ್ರದ ಉತ್ಖನನದಲ್ಲಿ ಕ್ರಿ.ಶ. 13 ರಿಂದ 16ನೆಯ ಶತಮಾನಕ್ಕೆ ಸೇರಿದ ಕೆಲವು ಅವಶೇಷಗಳು ಮಾತ್ರ ದೊರಕಿವೆ. (ಎಸ್.ಎನ್.)

ಇತಿಹಾಸ:[ಸಂಪಾದಿಸಿ]

 • ಕೇರಳದ ಚರಿತ್ರೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು: 1 ಕೊಡಂಗಲ್ಲೂರು ರಾಜರ ಕಾಲ, 2 ತಂಪುರನ್ನರ ಕಾಲ, 3 ಬ್ರಿಟಿಷ್ ಸಾರ್ವಭೌಮತ್ವ ಕಾಲ ಮತ್ತು 4 ಭಾರತ ಸ್ವಾತಂತ್ರ್ಯಾ ನಂತರದ ಕಾಲ.
 • ಕೇರಳ ರಾಜ್ಯಕ್ಕೆ ಭಾರತದ ಚರಿತ್ರೆಯಲ್ಲಿ ಒಂದು ಪ್ರಮುಖ ಸ್ಥಾನವಿದೆ. ಭಾರತ ಮತ್ತು ಪಾಶ್ಚಾತ್ಯ ದೇಶಗಳ ನೇರ ಸಂಪರ್ಕ ಕೇರಳ ಪ್ರದೇಶದಲ್ಲಿ ಸಮುದ್ರದ ಮೂಲಕ ಕ್ರಿ.ಪೂ. 1ನೆಯ ಸಹಸ್ರಮಾನದಿಂದ ಪ್ರಾರಂಭವಾಯಿತು. ರೋಮನ್ ನಾವಿಕ ಹಿಪ್ಪಾಲಸ್ ಕ್ರಿ.ಶ. 1ನೆಯ ಶತಮಾನದಲ್ಲಿ ವಾಣಿಜ್ಯ ಮಾರುತಗಳ ಸಹಾಯದಿಂದ ಕಂಡುಹಿಡಿದ ಸಮುದ್ರಮಾರ್ಗದ ಮೂಲಕ ಕೊಡಂಗಲ್ಲೂರಿಗೆ ಬಂದ. ಆಗ ಕೇರಳವನ್ನಾಳುತ್ತಿದ್ದ ಚೇರಮನ್ ದೊರೆಗಳು ಲಕ್ಷದ್ವೀಪ ದ್ವೀಪಗಳನ್ನು ಆಕ್ರಮಿಸಿಕೊಂಡಿದ್ದರು. ರೋಮನ್ ಸಾಮ್ರಾಜ್ಯದೊಡನೆ ನಡೆಯುತ್ತಿದ್ದ ಲಾಭದಾಯಕ ವ್ಯಾಪಾರದ ಹತೋಟಿ ಪಡೆದಿದ್ದರು.
 • 11ನೆಯ ಶತಮಾನದ ಪ್ರಾರಂಭದವರೆಗೆ ಕೇರಳರು ಮತ್ತು ಅವರಿಗೆ ಪೂರ್ವದಲ್ಲಿ ನೆರೆಯವರಾಗಿದ್ದ ಚೋಳರು ಮತ್ತು ಪಾಂಡ್ಯರು ಒಂದೇ ರೀತಿಯ ಭಾಷೆ ಮತ್ತು ಸಂಸ್ಕøತಿಗಳನ್ನು ಹೊಂದಿದ್ದರು. ಕ್ರಿಸ್ತಶಕದ ಮೊದಲ ಮೂರು ಶತಮಾನಗಳ ಸಂಘಸಾಹಿತ್ಯದ ಪ್ರಕಾರ ಕೊಡಂಗಲ್ಲೂರಿನ ಚೇರಮನ್ ರಾಜರು ಉತ್ತರದಲ್ಲಿ ಕಾಸರಗೋಡಿನವರೆಗೂ ಪೂರ್ವಕ್ಕೆ ಕರೂರು ಮತ್ತು ಕೊಲ್ಲಿಮಲೈವರೆಗೂ ದಕ್ಷಿಣದಲ್ಲಿ ಕನ್ಯಾಕುಮಾರಿ ಭೂಶಿರದವರೆಗೂ ಪಶ್ಚಿಮದಲ್ಲಿ ಲಕ್ಷದ್ವೀಪ ದ್ವೀಪಗಳವರೆಗೂ ಅಧಿಕಾರ ಹೊಂದಿದ್ದರು. ರೋಮನ್ ಸಾಮ್ರಾಜ್ಯ ಮತ್ತು ಚೀನ ದೇಶಗಳೊಡನೆ ವ್ಯಾಪಾರ ಲಾಭದಾಯಕವಾಗಿತ್ತು. ಕೇರಳರು ಉಚ್ಚ್ರಾಯಸ್ಥಿತಿಯಲ್ಲಿದ್ದರು. ಆದರೆ ಕ್ರಿ.ಶ. 4ನೆಯ ಶತಮಾನದಲ್ಲಿ ರೋಮನ್ ಚಕ್ರಾಧಿಪತ್ಯದ ಅವನತಿಯಿಂದಲೂ ನಾಯರರು ಮತ್ತು ಇತರರ ಆಕ್ರಮಣದಿಂದಲೂ ಈ ವ್ಯಾಪರಕ್ಕೆ ಧಕ್ಕೆ ಉಂಟಾಯಿತು.
 • 988ರಲ್ಲಿ ಮೊದಲನೆಯ ರಾಜರಾಜ ಚೋಳನ ಕೇರಳ ದಂಡಯಾತ್ರೆ ಪ್ರಾರಂಭವಾಯಿತು. 1120ರಲ್ಲಿ ಚೋಳರು ಹಿಮ್ಮೆಟ್ಟಿದ್ದಾಗಲೇ ಅವರ ಆಕ್ರಮಣ ಕೊನೆಗೊಂಡಿದ್ದು. ಚೋಳರ ಆಕ್ರಮಣಕಾಲದಲ್ಲಿ ಚೇರರ ಆಳ್ವಿಕೆ ಕೊನೆಗೊಂಡು ಕೇರಳ ಸಣ್ಣಸಣ್ಣ ರಾಜ್ಯಗಳಾಗಿ ಒಡೆಯಿತು. ಪ್ರತಿರಾಜ್ಯದಲ್ಲೂ ಒಬ್ಬ ತಂಪುರನ್ ಅಥವಾ ನಾಯಕನ ಆಳ್ವಿಕೆ ಸ್ಥಾಪಿತವಾಯಿತು. ನಾಯರರು ಮತ್ತು ಇತರರ ಆಕ್ರಮಣವಾಯಿತು. ನಾಯರರು ನಾಗಪೂಜೆ ಮಾಡುತ್ತಿದ್ದ ಸಿಥಿಯನರೆಂದೂ ಅವರು ಭಾರತಕ್ಕೆ ವಾಯುವ್ಯ ಗಡಿಯಿಂದ ಬಂದು ಅನೇಕ ಭಾಗಗಳಲ್ಲಿ ನೆಲಸಿದರೆಂದೂ ಪ್ರತೀತಿ ಇದೆ. ನಾಗಪೂಜೆ ಮಾಡುವವರು ನಗರರೆನಿಸಿಕೊಂಡರೆಂದೂ ಈ ಹೆಸರು ಅನಂತರ ನಾಯರ್ ಎಂದು ಬದಲಾಯಿತೆಂದೂ ಒಂದು ಅಭಿಪ್ರಾಯವುಂಟು. ನಾಯರರು ದ್ರಾವಿಡರೆಂದು ಕಾಲ್ಡ್‍ವೆಲ್ ಮತ್ತು ಗುಂಡರ್ಟ್ ಹೇಳುತ್ತಾರೆ. ನಾಯರರು ಆರ್ಯರ ಮತ್ತು ದ್ರಾವಿಡರ ಸಂಸ್ಕøತಿಯ ಅಂಶಗಳನ್ನು ಪಡೆದುಕೊಂಡಿದ್ದಾರೆ. ಕೇರಳದಲ್ಲಿ ನಂಬೂದಿರಿಗಳು ಪೂಜಾರಿಗಳಾಗಿದ್ದರು; ನಾಯರರು ದೇವಸ್ಥಾನಗಳ ಒಡೆಯರಾಗಿ ಹತೋಟಿ ಗಳಿಸಿದ್ದರು.
 • ಕೇರಳ ಕ್ರಿಸ್ತಶಕದ ಪ್ರಾರಂಭದಲ್ಲಿ ಚೇರರ ಅಧೀನದಲ್ಲಿ ಒಂದು ಚಿಕ್ಕ ರಾಜ್ಯವಾಗಿತ್ತು. ಕೊಡುಗಲ್ಲೂರು ಅದರ ರಾಜಧಾನಿ. ಕ್ರಮೇಣ ಚೇರ ದೊರೆಗಳು ಕೊಂಗಲನಾಡು, ಪುನ್ನಾಡು, ಕೊಲತುನಾಡು ಮತ್ತು ಕುಟ್ಟನಾಡನ್ನು ಆಕ್ರಮಿಸಿಕೊಂಡರು. ಚೇರರ ಅವನತಿಗೆ ಆ ರಾಜರ ಸೋಮಾರಿತನ ಮತ್ತು ಅಸಮರ್ಥತೆ ಕಾರಣ. ರೋಮನ್ ಚಕ್ರಾಧಿಪತ್ಯದ ಆಮದು ಮಾಡಿಕೊಂಡ ಭೋಗ ಸಾಮಗ್ರಿಗಳೂ ಇವರ ಅವನತಿಗೆ ಕಾರಣವಾದುವು. ನಾಯರರು ಕೇರಳಕ್ಕೆ ಬಂದು ಈ ದೊರೆಗಳ ಅಧಿಕಾರವನ್ನೂ ನಾಶ ಮಾಡಿದರು. 6ನೆಯ ಶತಮಾನದಲ್ಲಿ ಪಲ್ಲವರು ಮತ್ತು ಪಾಂಡ್ಯರು ತಮ್ಮ ರಾಜ್ಯವನ್ನು ವಿಸ್ತರಿಸಿದರು. 645ರಿಂದ 670ರವರೆಗೆ ಆಳಿದ ಪಾಂಡ್ಯರಾಜ ಜಯಂತವರ್ಮ ಕೇರಳದ ಮೇಲೆ ದಂಡೆತ್ತಿ ಬಂದಾಗ ಕೇರಳದ ರಾಜರು ಪಾಂಡ್ಯರ ಶತ್ರುಗಳಾದ ಪಲ್ಲವರೊಡನೆ ಸೇರಿದರು. ಪಲ್ಲವರು ಜಯಶೀಲರಾದರು. ಆದರೆ ಚೇರಮನ್ ಪೆರುಮಾಳ್ ರಾಜನಾದ ಮೇಲೆ, ಪಾಂಡ್ಯರ ಮುನ್ನಡೆಯನ್ನು ತಡೆಗಟ್ಟಿದ. 844ರಲ್ಲಿ ಸ್ಥಾಣುರವಿ ಕೇರಳದ ರಾಜನಾದ. ಕೇರಳ ರಾಜನ ಸಹಾಯದಿಂದ ಚೋಳರು ಪ್ರವರ್ಧಮಾನರಾದರು. ಸ್ಥಾಣುರವಿ ಚೋಳರಾಜ 1ನೆಯ ಆದಿತ್ಯನ ಸಹಾಯಕ್ಕೆ ಹೋಗಿ ಪಲ್ಲವರನ್ನು ಸೋಲಿಸಿದ. ಆದರೆ ಚೋಳರು ಪಾಂಡ್ಯ ರಾಜ್ಯವನ್ನು ಆಕ್ರಮಿಸಿ ಕೇರಳದ ಕಡೆ ಗಮನಹರಿಸಿದರು. 1ನೆಯ ರಾಜರಾಜನ (985-1014) ಕಾಲದಲ್ಲಿ ಚೋಳರು ಕೇರಳದ ಮೇಲೆ ಯುದ್ಧ ಪ್ರಾರಂಭಿಸಿದರು. ಇದು 1ನೆಯ ಚೋಲ-ಚೇರ ಯುದ್ಧ, ಇದರಲ್ಲಿ ರಾಜರಾಜ ಸುಚೀಂದ್ರಂ ಕೊಟ್ಟರ್, ನಾಗರ್‍ಕೋಯಿಲ್ ಮತ್ತು ಕುಮಾರಿ ಪ್ರದೇಶಗಳನ್ನು ಆಕ್ರಮಿಸಿ ಅವನ್ನು ರಾಜರಾಜ ತೆನ್ನಾಡು ಎಂಬ ಪ್ರಾಂತ್ಯವನ್ನಾಗಿ ಮಾಡಿದ. ಅನಂತರ ಕೊಡಂಗಲ್ಲೂರಿನಲ್ಲಿ ಚೇರ ರಾಜ ಭಾಸ್ಕರ ರವಿವರ್ಮ ಚೋಳರಾಜ ಚೋಳರಾಜನಿಗೆ ಶರಣಾಗತನಾದ. ರಾಜರಾಜನ ಮರಣಾನಂತರ ಭಾಸ್ಕರ ರವಿವರ್ಮ ಚೋಳರಾಜ 1ನೆಯ ರಾಜೇಂದ್ರÀನ ಸಾರ್ವಭೌಮತ್ವವನ್ನು ಅಂಗೀಕರಿಸಲಿಲ್ಲ. ಇದರಿಂದ 1018ರಲ್ಲಿ ರಾಜೇಂದ್ರ ದಂಡಯಾತ್ರೆ ಕೈಗೊಂಡು ಕೊಡಂಗಲ್ಲೂರನ್ನು ಆಕ್ರಮಿಸಿಕೊಂಡ. ಭಾಸ್ಕರವರ್ಮ ಯುದ್ಧದಲ್ಲಿ ಮರಣ ಹೊಂದಿದ. ಇದು 2ನೆಯ ಚೋಳ-ಚೇರ ಯುದ್ಧ 3ನೆಯ ಯುದ್ಧ 1034ರಲ್ಲಿ ಪ್ರಾರಂಭವಾಯಿತು. 1ನೆಯ ರಾಜಾಧಿರಾಜ ಚೋಳನಿಗೆ ಕೇರಳರು ಶರಣಾಗಲಿಲ್ಲ. 4ನೆಯ ಚೋಳ-ಚೇರ ಯುದ್ಧ 1070ರಲ್ಲಿ ಚೋಳದೊರೆ 1ನೆಯ ಕುಲೋತ್ತುಂಗನ ಕಾಲದಲ್ಲಿ ನಡೆಯಿತು. ಆದರೆ 1102ರ ವರೆಗೆ ಕೇರಳದ ದೊರೆ ರಾಮನ್ ತಿರುವಡಿ ರಾಜಧಾನಿ ಕೊಡಂಗಲ್ಲೂರನ್ನು ವಶಪಡಿಸಿಕೊಂಡು ಕ್ರಮೇಣ ಚೋಳರನ್ನು ಹಿಮ್ಮೆಟ್ಟಿಸಿದ. ಚೋಳರು ಹಿಂದಿರುಗಿದ ಮೇಲೆ ತಂಪುರನ್ನರ ಕಾಲ ಪ್ರಾರಂಭವಾಯಿತು.
 • ಚೇರ-ಚೋಳ ಘರ್ಷಣೆಯಿಂದ ಕೇರಳದಲ್ಲಿ 18 ನಾಯಕರು ತಲೆ ಎತ್ತಿದರು. ಇವರಿಗೆ ಒಬ್ಬ ಸಾಮಾನ್ಯ ಪ್ರಭು ಇಲ್ಲದಿದ್ದುದರಿಂದ ಪರಸ್ಪರ ಕಾದಾಡುತ್ತಿದ್ದರು. ಇವರಲ್ಲಿ ಎರ್ನಾಡ್ ನಾಯಕ ಒಬ್ಬ ಇವನನ್ನು ಸ್ವಾಮಿ ತಿರುಮುಲ್‍ಪಡ್ (ಗೌರವಯುತ ರಾಜ) ಎಂದು ಕರೆಯುತ್ತಿದ್ದರು. ಅನಂತರ ಇವನು ಸಾಮುರಿ ಎಂದು ಹೆಸರು ಪಡೆದ. ಪೋರ್ಚುಗೀಸರ ಬಾಯಲ್ಲಿ ಈ ಹೆಸರು ಜಾಮುರಿನ್ (ಜಾಮೊರಿನ್) ಎಂದಾಯಿತು. ಜಾಮೊರಿನ್ ಪೊಲನಾಡನ್ನು ಆಕ್ರಮಿಸಿಕೊಂಡು ಕೋಳಿಕ್ಕೋಡ್ ಪಟ್ಟಣವನ್ನು ನಿರ್ಮಿಸಿದ. ಇದನ್ನು ಐರೋಪ್ಯರು ಕ್ಯಾಲಿಕಟ್ ಎಂದರು. ಪಶ್ಚಿಮ ತೀರದಲ್ಲಿ ಇದು ಬಹು ಮುಖ್ಯ ರೇವಾಗಿದ್ದು ಇದರ ಹೆಸರು ಯೂರೋಪಿಗೂ ಹರಡಿತು. 15ನೆಯ ಶತಮಾನದ ಕೊನೆಗೆ ಜಾಮೊರಿನ್ ಕೇರಳದ ಸುಮಾರು ಅರ್ಧ ಭಾಗವನ್ನು ಆಳುತ್ತಿದ್ದ. ಅವನ ಬಳಿ 60,000 ಸಂಖ್ಯೆಯ ನಾಯರ್ ಸೈನ್ಯವಿತ್ತು. 1498ರ ಮೇ 20ರಂದು ಕೋಳಿಕ್ಕೋಡಿಗೆ ಅನಿರೀಕ್ಷಿತವಾಗಿ ಬಂದ ನಾಲ್ಕು ಪೋರ್ಚುಗೀಸ್ ಹಡಗುಗಳು ಕೇರಳದ ಚರಿತ್ರೆಯ ಸ್ವರೂಪವನ್ನೇ ಬದಲಾಯಿಸಿದುವು. ಕೇರಳ ಸುಮಾರು ಎರಡೂವರೆ ಶತಮಾನಗಳವರೆಗೆ ಐರೋಪ್ಯ ಸಾಮ್ರಾಜ್ಯಶಾಹಿಯೊಡನೆ ಹೋರಾಟ ನಡೆಸಿತು.
 • ಪೋರ್ಚುಗೀಸರು ಕೇರಳದಲ್ಲಿ 1498ರಿಂದ 1663ರವರೆಗೆ ಇದ್ದರು. 1498ರಲ್ಲಿ ಆಗಮಿಸಿದ ಪೋರ್ಚುಗೀಸರಿಗೆ ಜಾಮೊರಿನ್ ವ್ಯಾಪಾರ ಸೌಲಭ್ಯ ಮತ್ತು ರಕ್ಷಣೆಗಳನ್ನು ನೀಡಿದ. ಪೋರ್ಚುಗೀಸ್ ನಾವಿಕ ವ್ಯಾಸ್ಕೋ ಡ ಗ್ಯಾಮನಿಗೆ ಜಾಮೊರಿನ್ ಸತ್ಕಾರ ಕೂಟ ಏರ್ಪಡಿಸಿ, ಪೋರ್ಚುಗೀಸರ ಸ್ವಾಧೀನಕ್ಕೆ ಒಂದು ಕೋಠಿಯನ್ನು ಕೊಟ್ಟು ಅದನ್ನು ಕಾಯಲು ನಾಯರರನ್ನು ನೇಮಿಸಿದ. ಪೋರ್ಚುಗೀಸ್ ದೊರೆ ಸ್ವಲ್ಪ ಕಾಲದ ಅನಂತರ ಕವ್ರಾಲನನ್ನು ಕಳುಹಿಸಿ, ಜಾಮೊರಿನ್ ತನ್ನ ರಾಷ್ಟ್ಟದಿಂದ ಮುಸ್ಲಿಮರನ್ನು ಹೊರಗೋಡಿಸದಿದ್ದರೆ ಯುದ್ಧ ಮಾಡುವುದಾಗಿ ಹೇಳಿದ. ಸ್ವಾತಂತ್ರ್ಯಾಕಾಂಕ್ಷಿಯಾಗಿದ್ದ ಕೊಚ್ಚಿ ರಾಜನೊಡÀನೆ ಕವ್ರಾಲನ ಸ್ನೇಹ ಬೆಳೆಯಿತು. ಕವ್ರಾಲ್ ಹತ್ತು ಮುಸ್ಲಿಂ ಹಡಗುಗಳನ್ನು ಹಿಡಿದು ಅದರಲ್ಲಿದ್ದ ಮುಸ್ಲಿಂ ನಾಯಕರನ್ನು ಕೊಂದು ಹಡಗುಗಳಿಗೆ ಬೆಂಕಿ ಹಚ್ಚಿ ಕೊಚ್ಚಿಗೆ ಹೋಗಿ ಅಲ್ಲಿ ಒಂದು ವ್ಯಾಪಾರದ ಕೋಠಿಯನ್ನು ಸ್ಠಾಪಿಸಿದ. 1502ರಲ್ಲಿ ವ್ಯಾಸ್ಕೋಡ ಗ್ಯಾಮ ಪುನ: ಬಂದು ಕೊಚ್ಚಿಯ ರಾಜನ ಮೇಲೆ ಹಲವು ಷರತ್ತುಗಳನ್ನು ಹಾಕಿದ. ಇದರಿಂದ ಪೋರ್ಚುಗೀಸರಿಗೆ ಕೊಚ್ಚಿಯ ವಿದೇಶೀ ವ್ಯಾಪಾರದ ಮೇಲೆ ಹತೋಟಿ ಲಭ್ಯವಾಯಿತಲ್ಲದೆ ಬೆಲೆ ನಿಗದಿ ಮಾಡುವ ಅಧಿಕಾರವೂ ಪ್ರಾಪ್ತವಾಯಿತು. ಕೋಟೆಗಳು, ಕೋಠಿಗಳು ಮತ್ತು ಚರ್ಚುಗಳನ್ನು ಕಟ್ಟಲು ಅವರು ಹಕ್ಕು ಪಡೆದರು. ಕೊಚ್ಚಿಯ ರಾಜ ಈ ಎಲ್ಲ ಷರತ್ತುಗಳಿಗೂ ಒಪ್ಪಿದರೂ 1503ರಲ್ಲಿ eೂಮೊರಿನನ ವಿರುದ್ಧ ಸಹಾಯ ಮಾಡಲಿಲ್ಲ. ಅಲ್ಬುಕರ್ಕ್ 1503ರಲ್ಲಿ ನೌಕಾಬಲದೊಡನೆ ಕೊಚ್ಚಿಗೆ ಬಂದಾಗ ಜಾಮೊರಿನ್ ಕೊಚ್ಚಿಯಿಂದ ಹಿಂದಿರುಗಿದ. ಪೋರ್ಚುಗೀಸರಿಗೂ ಜಾಮೊರಿನನಿಗೂ ಯುದ್ಧವಾಯಿತು. 1505ರಲ್ಲಿ ಆಲ್‍ಮಿಡನನ್ನು ವೈಸ್‍ರಾಯ್ ಆಗಿ ಕೊಚ್ಚಿಗೆ ಕಳುಹಿಸಲಾಯಿತು. ಇವನು ಕೊಚ್ಚಿಯ ರಾಜನನ್ನು ಅಧೀನದಲ್ಲಿಟ್ಟುಕೊಳ್ಳಲು ಉನ್ನಿ ರಾಮವರ್ಮನನ್ನು ರಾಜನನ್ನಾಗಿ ಮಾಡಿದ. 1513ರಲ್ಲಿ ಜಾಮೊರಿನನಿಗೂ ಪೋರ್ಚುಗೀಸರಿಗೂ ಒಪ್ಪಂದವಾಯಿತು. 1661ರಲ್ಲಿ ಡಚ್ಚರು ಕೇರಳಕ್ಕೆ ಆಗಮಿಸಿದ್ದರು. ಜಾಮೊರಿನ್ ಪೋರ್ಚುಗೀಸರನ್ನು ಓಡಿಸಲು ಡಚ್ಚರೊಡನೆ ಒಪ್ಪಂದ ಮಾಡಿಕೊಂಡ. ಡಚ್ಚರು ಪೋರ್ಚುಗೀಸರನ್ನು ಸೋಲಿಸಿದರು. ಹೀಗೆ ಪೋರ್ಚುಗೀಸರ ಆಳ್ವಿಕೆ ಕೊನೆಗೊಂಡಿತು. ಪೋರ್ಚುಗೀಸರ ಆಗಮನದಿಂದ ಜಾಮೊರಿನನ ಮುನ್ನಡೆಗೆ ತಡೆಯುಂಟಾಗಿ ಕೇರಳದ ಐಕ್ಯಕ್ಕೆ ಧಕ್ಕೆಯುಂಟಾಯಿತು. ಪೋರ್ಚುಗೀಸರು ಕೇರಳ ಮಹಿಳೆಯರನ್ನು ವಿವಾಹವಾದರು. 1541ರಲ್ಲಿ ಫ್ರಾನ್ಸಿಸ್ ಕ್ಸೇವಿಯರ್ ತಿರುವಾಂಕೂರಿಗೆ ಬಂದು ಅನೇಕರನ್ನು ಕ್ರೈಸ್ತಮತಕ್ಕೆ ಪರಿವರ್ತಿಸಿದ. ಈತ ಬೈಬಲನ್ನು ಮಲಯಾಳಂ ಭಾಷೆಗೆ ಅನುವಾದಿಸಿದ. ಇದಕ್ಕೆ ವೇದೋಪದೇಶಂ ಎಂದು ಹೆಸರು.
 • ವೈನಾಡ್ ನಾಯಕರು ತಿರುವಿತಂ ಕೊಡೆಯಲ್ಲಿ ವಾಸಿಸುತ್ತಿದ್ದರು. 16ನೆಯ ಶತಮಾನದಲ್ಲಿ ಬಂದ ಐರೋಪ್ಯರು ವೈನಾಡನ್ನು ಟ್ರಾವಂಕೂರ್ ಎಂದು ಕರೆದರು. ಮಾರ್ತಾಂಡವರ್ಮ ರಾಜನನ್ನು (1729-1758) ಆಧುನಿಕ ತಿರುವಾಂಕೂರಿನ ಸ್ಥಾಪಕನೆಂದು ತಿರುವಾಂಕೂರಿನ ಚರಿತ್ರೆಯಲ್ಲಿ ಕರೆಯಲಾಗಿದೆ. ಈತ ಡಚ್ಚರೊಡನೆ ಸ್ನೇಹ ಬೆಳೆಸಿ ಒಪ್ಪಂದ ಮಾಡಿಕೊಂಡ. ಈತ ತನ್ನ ಅಧಿಕಾರವನ್ನು ಪದ್ಮನಾಭ ದೇವರಿಗೆ ಎರೆದುಕೊಟ್ಟು ಆತನ ದಾಸನಾಗಿ ರಾಜ್ಯಭಾರ ಮಾಡಿದ; ಜನ ದಂಗೆ ಎದ್ದರೆ ಅದು ದೇವರ ವಿರುದ್ಧ ದಂಗೆಯಾಗುತ್ತಿತ್ತು. 1754ರಲ್ಲಿ ಕೊಚ್ಚಿಯ ರಾಜ ಇವನಿಗೆ ಅಧೀನನಾದ. ಈತ ರಾಜ್ಯದ ಆಡಳಿತವನ್ನು ಉತ್ತಮಪಡಿಸಿ ಶಕ್ತಿಯುತವಾದ ಕೇಂದ್ರ ಸರ್ಕಾರವನ್ನು ಸ್ಥಾಪಿಸಿದ್ದಲ್ಲದೆ ಇಂಗ್ಲಿಷರೊಡನೆ ಮೈತ್ರಿ ಗಳಿಸಿದ್ದ. ಇವನು ರಾಜಕಾರಣ ನಿಪುಣನೂ, ದೈವಭಕ್ತನೂ ಉತ್ತಮ ಸೈನಿಕನೂ ಕಲಾಪೋಷಕನೂ ಆಗಿದ್ದ. ಡಚ್ಚರು ಈತನ ಶತ್ರುಗಳೊಡನೆ ಮೈತ್ರಿ ಬೆಳೆಸಿದರು. 1748ರಲ್ಲಿ ಈತ ಡಚ್ಚರನ್ನು ಸೋಲಿಸಿದ. 1766ರಲ್ಲಿ ಹೈದರ್ ಆಲಿ ಕೋಳಿಕ್ಕೋಡನ್ನು ಆಕ್ರಮಿಸಿಕೊಂಡ. ತಿರುವಾಂಕೂರಿನ ಮೇಲೆ ಹೈದರನ ದಾಳಿ ಆರಂಭವಾಗುವುದಕ್ಕೆ ಮುಂಚೆ 1789ರಲ್ಲಿ ಡಚ್ಚರು ಕೊಡಂಗಲ್ಲೂರನ್ನು ತಿರುವಾಂಕೂರಿನ ರಾಜನಿಗೆ ಮಾರಿದರು. 1795ರಲ್ಲಿ ಇಂಗ್ಲಿಷರು ಕೊಚ್ಚಿ ಮತ್ತು ಥಂಕಚೇರಿ ಕೋಟೆಗಳನ್ನು ವಶಪಡಿಸಿಕೊಂಡ ಫಲವಾಗಿ ಡಚ್ಚರು ಕೇರಳವನ್ನು ಬಿಡಬೇಕಾಯಿತು. ಮಾರ್ತಾಂಡವರ್ಮನ ಆಳ್ವಿಕೆಯಲ್ಲಿ ತಂಪುರನ್ನರ ಪ್ರಾಬಲ್ಯ ಕೊನೆಗೊಂಡಿತು. ಹೈದರ್ ಮತ್ತು ಟಿಪ್ಪೂಗಳ ದಾಳಿಯಿಂದ ಮಲಬಾರಿನಲ್ಲಿ ತಂಪುರನ್ನರ ಅವನತಿ ಪ್ರಾರಂಭವಾಯಿತು. ಅಂತಿಮವಾಗಿ ಇಂಗ್ಲಿಷರು ಕೊಚ್ಚಿ ಮತ್ತು ತಿರುವಾಂಕೂರಿನಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸಿದರು.
 • ಇಂಗ್ಲಿಷರು 1615ರಲ್ಲಿ ಕೋಳಿಕ್ಕೋಡಿನಲ್ಲಿ ಒಂದು ವ್ಯಾಪಾರ ಕೋಠಿಯನ್ನು ಸ್ಥಾಪಿಸಿದರು. ಆದರೆ ಅದು ಬಹುಕಾಲ ಉಳಿಯಲಿಲ್ಲ. 1635ರಲ್ಲಿ ಅವರು ಕೊಚ್ಚಿಯಲ್ಲಿ ಮತ್ತೊಂದು ವ್ಯಾಪಾರ ಕೋಠಿಯನ್ನು ಸ್ಥಾಪಿಸಿದರು. 1663ರಲ್ಲಿ ಡಚ್ಚರು ಇಂಗ್ಲಿಷರನ್ನು ಕೊಚ್ಚಿಯಿಂದ ಹೊರದೂಡಿದರು. ಆದರೆ ಜಾಮೊರಿನ್ ಇಂಗ್ಲಿಷರಿಗೆ ವ್ಯಾಪಾರ ಸೌಲಭ್ಯಗಳನ್ನು ಒದಗಿಸಿಕೊಟ್ಟ. 1700ರ ವೇಳೆಗೆ ಇಂಗ್ಲಿಷರು ತಲಚ್ಚೇರಿಯಲ್ಲಿ ಸ್ಥಾಪಿತರಾಗಿದ್ದರು.
 • 1761ರಲ್ಲಿ ಹೈದರ್ ಆಲಿ ಮೈಸೂರಿನ ನವಾಬನಾದ. ಇವನಿಗೆ ಕೇರಳವನ್ನು ಆಕ್ರಮಿಸಿಕೊಳ್ಳಬೇಕೆಂಬ ಅಭಿಲಾಷೆಯಿತ್ತು. 1766ರಲ್ಲಿ ಮಲಬಾರ್ ದಂಡಯಾತ್ರೆಯನ್ನು ಕೈಗೊಂಡು, ಜಾಮೊರಿನನನ್ನು ಸೋಲಿಸಿ, ಕೋಳಿಕ್ಕೋಡನ್ನು ಆಕ್ರಮಿಸಿಕೊಂಡ. ಅನಂತರ ಕೊಚ್ಚಿಯ ರಾಜನ ಶರಣಾಗತಿಯನ್ನು ಒಪ್ಪಿ, ಪಾಲಕ್ಕಾಡಿನಲ್ಲಿ ಕೋಠಿ ಕಟ್ಟಿದ. 1773ರಲ್ಲಿ ಹೈದರ್ ಪುನ: ಮಲಬಾರಿಗೆ ಬಂದ. ಜಾಮೊರಿನ್ ಫ್ರೆಂಚರ ಸಹಾಯವನ್ನು ಕೇಳಿದರೂ ಪ್ರಯೋಜನವಾಗಲಿಲ್ಲ. 1776ರಲ್ಲಿ ಹೈದರನ ದಳಪತಿ ಸಾದರ್‍ಖಾನ್, ತ್ರಿಚೂರ್ ಮತ್ತು ಚಟ್‍ವೇಗಳನ್ನು ಆಕ್ರಮಿಸಿಕೊಂಡ. 1779ರಲ್ಲಿ ಇಂಗ್ಲಿಷರು ಕೋಳಿಕ್ಕೋಡನ್ನು ಆಕ್ರಮಿಸಿಕೊಂಡರು. 1782ರಲ್ಲಿ ಹೈದರನ ಮರಣಾನಂತರ ಇಂಗ್ಲಿಷರು ಪಾಲಕ್ಕಾಡನ್ನು ಆಕ್ರಮಿಸಿಕೊಂಡರು. 1784ರಲ್ಲಿ ಆದ ಮಂಗಳೂರು ಒಪ್ಪಂದದ ಪ್ರಕಾರ ಇಂಗ್ಲಿಷರು ಮಲಬಾರನ್ನು ಟಿಪ್ಪು ಸುಲ್ತಾನನಿಗೆ ಬಿಟ್ಟುಕೊಟ್ಟರು. 1789ರಲ್ಲಿ ಟಿಪ್ಪು ತಿರುವಾಂಕೂರು ದಂಡಯಾತ್ರೆಯನ್ನು ಕೈಗೊಂಡು ಕೊಡಂಗಲ್ಲೂರು, ಕುರಿಯಪ್ಪಳ್ಳಿ ಮುಂತಾದ ಪ್ರದೇಶಗಳನ್ನು ಆಕ್ರಮಿಸಿಕೊಂಡ. ಇಂಗ್ಲಿಷರು ಟಿಪ್ಪುವಿನ ವಿರುದ್ಧ ಒಕ್ಕೂಟವನ್ನು ಸಾಧಿಸಿ, ಅವನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದ ಕಡೆಗೆ ನುಗ್ಗಿದರು. ಇಂಗ್ಲಿಷರೊಡನೆ ಉತ್ತರ ಮಲಬಾರಿನ ರಾಜರು ಮತ್ತು ಜಾಮೊರಿನ್ ಒಪ್ಪಂದ ಮಾಡಿಕೊಂಡು, ತಮ್ಮ ನಾಡನ್ನು ತಮಗೆ ಹಿಂದಿರುಗಿಸಿದರೆ ಇಂಗ್ಲಿಷರಿಗೆ ಕಪ್ಪ ಕೊಡಲು ಒಪ್ಪಿದರು. ಕೊಚ್ಚಿಯ ರಾಜ ಟಿಪ್ಪುವಿಗೆ ತನ್ನ ನಿಷ್ಠೆಯನ್ನು ತ್ಯಜಿಸಿ ಇಂಗ್ಲಿಷರೊಡನೆ ಒಪ್ಪಂದ ಮಾಡಿಕೊಂಡು ಅವರಿಗೆ ಪೊಗದಿ ಕೊಡಲು ಒಪ್ಪಿದ. ಈ ಒಕ್ಕೂಟದಿಂದ ಟಿಪ್ಪುವಿಗೆ ಸೋಲಾಯಿತು. ಇಂಗ್ಲಿಷರು ಬೆಂಗಳೂರನ್ನು ಆಕ್ರಮಿಸಿಕೊಂಡು ಶ್ರೀರಂಗಪಟ್ಟಣದ ಕಡೆಗೆ ನುಗ್ಗಿದರು. ತನ್ನ ರಾಜಧಾನಿಯನ್ನು ಉಳಿಸಿಕೊಳ್ಳಲು ಟಿಪ್ಪು 1792ರಲ್ಲಿ ಇಂಗ್ಲಿಷರಿಗೆ ಮಲಬಾರ್, ಕೊಚ್ಚಿ ಮತ್ತು ಕೊಡಗನ್ನು ಬಿಟ್ಟು ಕೊಡಬೇಕಾಯಿತು. 1799ರಲ್ಲಿ ಇಂಗ್ಲಿಷರ ವಿರುದ್ದ ನಡೆದ ಯುದ್ಧದಲ್ಲಿ ಟಿಪ್ಪು ಮಡಿದಾಗ ಇಂಗ್ಲಿಷರು ಮೈಸೂರು ರಾಜ್ಯವನ್ನು ಒಡೆಯರ್ ರಾಜವಂಶದವರಿಗೆ ಹಿಂದಿರುಗಿಕೊಟ್ಟರು. ಮೈಸೂರು ರಾಜರು ಇಂಗ್ಲಿಷರಿಗೆ ವೈನಾಡ್ ಮತ್ತು ಕನ್ನಡ ಜಿಲ್ಲೆಗಳನ್ನು ಬಿಟ್ಟುಕೊಟ್ಟರು. ಕೊಚ್ಚಿಯ ರಾಜ ಇಂಗ್ಲಿಷರ ಮಿತ್ರನಾದ. 1805ರಲ್ಲಿ ಬ್ರಿಟಿಷರು ಮತ್ತು ತಿರುವಾಂಕೂರು ರಾಜರಿಗೆ ಒಪ್ಪಂದವಾಗಿ ತಿರುವಾಂಕೂರಿನಲ್ಲಿ ಬ್ರಿಟಿಷರ ಸಾರ್ವಭೌಮತ್ವ ಸ್ಥಾಪಿತವಾಯಿತು. ಕೇರಳದ ಚರಿತ್ರೆಯಲ್ಲಿ ಮಧ್ಯಯುಗ ಇಲ್ಲಿಗೆ ಕೊನೆಗೊಂಡಿತು.
 • ಚೋಳರ ಆಕ್ರಮಣದಿಂದ 11ನೆಯ ಶತಮಾನದಲ್ಲಿ ಕೇರಳ 18 ನಾಡುಗಳಾಗಿ ಒಡೆದು ಹೋಗಿದ್ದುದು 19ನೆಯ ಶತಮಾನದಲ್ಲಿ ಮೂರು ರಾಜಕೀಯ ವಿಭಾಗಗಳಾಗಿ ಒಂದುಗೂಡಿತು. ಇವು 7,625 ಚ.ಮೈ. ವಿಸ್ತಾರದ ತಿರುವಾಂಕೂರು, 1,417 ಚ.ಮೈ. ವಿಸ್ತಾರದ ಕೊಚ್ಚಿ ಮತ್ತು 5,787 ಚ.ಮೈ. ವಿಸ್ತಾರದ ಬ್ರಿಟಿಷ್ ಮಲಬಾರ್. 1758ರಿಂದ 1798ರವರೆಗೆ ಆಳಿದ ಕಾರ್ತಿಕ ತಿರುನಾಳ್ ರಾಮವರ್ಮ ದೊರೆ ತಿರುವಾಂಕೂರಿನ ರಾಜಧಾನಿಯನ್ನು ಕಲ್‍ಕುಲಂ ಅಥವಾ ಪದ್ಮನಾಭಪುರದಿಂದ ತಿರುವನಂತಪುರಕ್ಕೆ ಬದಲಿಸಿದ. ಈತ ವ್ಯವಸಾಯಕ್ಕೆ ಉತ್ತೇಜನ ಕೊಟ್ಟನಲ್ಲದೆ ಹೊಸ ನಾಣ್ಯಗಳನ್ನೂ ಮುದ್ರಿಸಿದ. ಬಾಲರಾಮವರ್ಮನ (ಆಳ್ವಿಕೆ : 1798-1810) ದಿವಾನ್ ವೇಲುತಂಪಿ ಅನೇಕ ಸುಧಾರಣೆಗಳನ್ನು ಆಚರಣೆಗೆ ತಂದ. 1810 ರಿಂದ 1814ರ ವರೆಗೆ ಗೌರಿ ಲಕ್ಷ್ಮೀಬಾಯಿ ತಿರುವಾಂಕೂರಿನ ಪ್ರಥಮ ರಾಣಿಯಾಗಿ ಆಳಿದಳು. 1860 ರಿಂದ 1880ರ ವರೆಗೆ ಆಳಿದ ರಾಮವರ್ಮನ ಕಾಲದಲ್ಲಿ ತಿರುವಾಂಕೂರು ಮಾದರಿ ಸಂಸ್ಥಾನವಾಗಿತ್ತು. ಅನಂತರ ಬಂದ ರಾಜರು ಸಂಸ್ಥಾನದ ಈ ಕೀರ್ತಿಯನ್ನು ಉಳಿಸಿಕೊಂಡು ಬಂದರು.
 • 20ನೆಯ ಶತಮಾನದ ಆದಿಯಲ್ಲಿ ಸ್ವಾತಂತ್ರ್ಯ ಚಳವಳಿ ಕೇರಳಕ್ಕೂ ಹಬ್ಬಿತು. 1903ರಲ್ಲಿ ಮಲಬಾರ್ ಜಿಲ್ಲಾ ಕಾಂಗ್ರೆಸ್ ಸಮಿತಿಯನ್ನು ಸ್ಥಾಪಿಸಲಾಯಿತು. ಸಂಸ್ಥಾನದ ಪ್ರಜೆಗಳ ರಾಜಕೀಯ ಆಶೋತ್ತರಗಳಿಗೆ ಪ್ರಭುತ್ವ ಮಾನ್ಯತೆ ನೀಡುವುದು ಅನಿವಾರ್ಯವಾಯಿತು. 1904ರಲ್ಲಿ ತಿರುವಾಂಕೂರಿನಲ್ಲಿ ಶ್ರೀಮುಲಂ ವಿಧಾನಸಭೆಯನ್ನು ಸ್ಥಾಪಿಸಲಾಯಿತು. 1919ರಲ್ಲಿ ಕೊಚ್ಚಿ ಸಂಸ್ಥಾನದಲ್ಲಿ ಪ್ರಾಂತೀಯ ಕಾಂಗ್ರೆಸ್ ಸಮಿತಿ ಸ್ಥಾಪಿತವಾಯಿತು. 1930ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ 1931ರ ಗುರುವಾಯೂರು ಸತ್ಯಾಗ್ರಹ ಯುವಜನರಲ್ಲಿ ಜಾಗೃತಿಯನ್ನು ಹೆಚ್ಚಿಸಿದವು. ಅದೇ ವರ್ಷ ತಿರುವಾಂಕೂರಿನಲ್ಲಿ ಯುವಜನ ಸಂಘವನ್ನು ಸ್ಥಾಪಿಸಲಾಯಿತು. 1932ರಲ್ಲಿ ಎರಡನೆಯ ಉಪ್ಪಿನ ಸತ್ಯಾಗ್ರಹ ನಡೆಯಿತು. ಕೇರಳದಲ್ಲಿ ಕಮ್ಯೂನಿಸ್ಟ್ ಪಕ್ಷ ಸ್ಥಾಪಿತವಾದ್ದು 1939ರಲ್ಲಿ. 1942ರ ಸ್ವಾತಂತ್ರ್ಯ ಚಳವಳಿ ಕೇರಳದಲ್ಲೂ ನಡೆಯಿತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ತಿರುವಾಂಕೂರು ಮತ್ತು ಕೊಚ್ಚಿ ಸಂಸ್ಥಾನಗಳು ಭಾರತ ಒಕ್ಕೂಟಕ್ಕೆ ಸೇರಿದುವು. 1949ರಲ್ಲಿ ಈ ಎರಡು ಸಂಸ್ಥಾನಗಳ ಐಕ್ಯವಾಯಿತು. ಈಗಿನ ಕೇರಳ ರಾಜ್ಯ ಸ್ಥಾಪನೆಯಾದ್ದು 1956ರಲ್ಲಿ.

(ಎ.ವಿ.ವಿ.)