ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೋಲಾರ

ವಿಕಿಸೋರ್ಸ್ದಿಂದ

ಕೋಲಾರ

ಕರ್ನಾಟಕ ರಾಜ್ಯದ ಪೂರ್ವದ ಅಂಚಿನಲ್ಲಿರುವ ಒಂದು ಜಿಲ್ಲೆ. ಇದೇ ಹೆಸರಿನ ತಾಲ್ಲೂಕು ಮತ್ತು ಪಟ್ಟಣ.

ಪಶ್ಚಿಮದಲ್ಲಿ ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳು, ಉತ್ತರ ಮತ್ತು ಪೂರ್ವದಲ್ಲಿ ಅನುಕ್ರಮವಾಗಿ ಆಂಧ್ರ ಪ್ರದೇಶದ ಅನಂತಪುರ ಮತ್ತು ಚಿತ್ತೂರು ಜಿಲ್ಲೆಗಳು, ದಕ್ಷಿಣದಲ್ಲಿ ತಮಿಳುನಾಡಿನ ಉತ್ತರ ಆರ್ಕಾಟ್ ಮತ್ತು ಧರ್ಮಪುರಿ ಜಿಲ್ಲೆಗಳು ಇವು ಕೋಲಾರ ಜಿಲ್ಲೆಯ ಮೇರೆಗಳು. ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಎಂಬ ಎರಡು ಉಪವಿಭಾಗಗಳು ಇವೆ. ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಬಾಗೇಪಲ್ಲಿ, ಗುಡಿಬಂಡೆ ಮತ್ತು ಗೌರಿಬಿದನೂರು, ತಾಲ್ಲೂಕುಗಳು ಚಿಕ್ಕಬಳ್ಳಾಪುರ ಉಪವಿಭಾಗದಲ್ಲೂ ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು, ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕುಗಳು ಕೋಲಾರ ಉಪವಿಭಾಗದಲ್ಲೂ ಇವೆ. ಜಿಲ್ಲೆಯ ವಿಸ್ತೀರ್ಣ 8223ಚ.ಕಿಮೀ. ಇದು ಕರ್ನಾಟಕ ರಾಜ್ಯದ 1ಃ23ರಷ್ಟಿದೆ. ಜನಸಂಖ್ಯೆ 25,23,406 (2001)

ಕೋಲಾರ ಜಿಲ್ಲೆ ಕರ್ನಾಟಕ ಪ್ರಸ್ಥಭೂಮಿಯ ಅಂಚಿನ ಭಾಗವಾಗಿದ್ದು, ಅದರ ಎಲ್ಲೆಗಳು ವಾಯವ್ಯ ಮತ್ತು ದಕ್ಷಿಣ ಭಾಗದಲ್ಲಿ ಪೂರ್ವಘಟ್ಟಗಳ ಬೆಟ್ಟಶ್ರೇಣಿಯನ್ನು ಮುಟ್ಟುತ್ತವೆ. ಜಿಲ್ಲೆಯಲ್ಲೂ ಹಲವು ಬೆಟ್ಟಶ್ರೇಣಿಗಳಿವೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿದುರ್ಗದಿಂದ ಗುಡಿಬಂಡೆಯ ಮೂಲಕ ಮುಂದೆ ಆಂಧ್ರಪ್ರದೇಶದ ಪೆನುಗೊಂಡೆಯೆಡೆಗೆ ದಕ್ಷಿಣೋತ್ತರವಾಗಿ ಹಬ್ಬಿರುವ ಶ್ರೇಣಿ ಮುಖ್ಯವಾದುದು. ಈ ನಂದಿದುರ್ಗ ಶ್ರೇಣಿಯಲ್ಲಿ ನಂದಿದುರ್ಗ (ಎತ್ತರ 1479ಮೀ) ಚಿಕ್ಕಬಳ್ಳಾಪುರದ ಆಗ್ನೇಯಕ್ಕೆ 8ಕಿಮೀ ದೂರದಲ್ಲಿರುವ ಚೆನ್ನರಾಯನ ಬೆಟ್ಟ ಎ1451ಮೀಏ, ನಂದಿದುರ್ಗದ ಉತ್ತರಕ್ಕೆ 8ಕಿಮೀ ದೂರದಲ್ಲಿರುವ ಸ್ಕಂದಗಿರಿ (1447ಮೀ), ನಂದಿದುರ್ಗದ ಆಗ್ನೇಯ ದಿಕ್ಕಿನಲ್ಲಿರುವ ಬ್ರಹ್ಮಗಿರಿ (1419ಮೀ), ನಂದಿದುರ್ಗದ ಉತ್ತರಕ್ಕಿರುವ ಹರಿಹರೇಶ್ವರ ಬೆಟ್ಟ (1256ಮೀ), ವಾಯವ್ಯಕ್ಕೆ ಇರುವ ಕಳವರದುರ್ಗ ಮತ್ತು ದಕ್ಷಿಣದಲ್ಲಿರುವ ದಿಬ್ಬಗಿರಿ ಇವು ನಂದಿದುರ್ಗ ಶ್ರೇಣಿಯ ಮುಖ್ಯ ಶಿಖರಗಳು. ಈ ಶ್ರೇಣಿಗೆ ಸಮಾನಾಂತರದಲ್ಲಿ ಸು.5065ಕಿಮೀ ಪೂರ್ವಕ್ಕೆ ಇನ್ನೊಂದು ಬೆಟ್ಟಸಾಲಿದೆ. ಆಂಧ್ರಪ್ರದೇಶದ ಕಡೆಯಿಂದ ಹಬ್ಬಿರುವ ಈ ಶ್ರೇಣಿ ಈ ಜಿಲ್ಲೆಯಲ್ಲಿ ಗುಮ್ಮನಾಯಕನ ಪಾಳ್ಯದ ಉತ್ತರದಲ್ಲಿ ದೊಂಗಲಕೊಂಡ ಅಥವಾ ದೊಕ್ಕಲದುರ್ಗದ ಬಳಿ ಆರಂಭವಾಗಿ ದಕ್ಷಿಣಾಬಿsಮುಖವಾಗಿ ಸಾಗುತ್ತದೆ. ಮುಂದೆ ಸ್ವಲ್ಪ ದೂರ ತಗ್ಗಾಗಿದ್ದು ಮತ್ತೆ ಮುರುಗಮಲೆ, ಅಂಬಾಜಿದುರ್ಗ (1341ಮೀ), ರಹಮಾನ್‍ದುರ್ಗ (1304ಮೀ) ಈ ರೀತಿಯ ಒಂಟಿ ಬೆಟ್ಟಗಳಾಗಿ ಕಾಣಿಸಿಕೊಳ್ಳುತ್ತದೆ. ಅಲ್ಲಿಂದಾಚೆಗೆ ಕೋಲಾರ ನಗರದ ಪಶ್ಚಿಮದಿಂದ ಮತ್ತೆ ಅವಿರತವಾಗಿ ದಕ್ಷಿಣದಲ್ಲಿ ವಕ್ಕಲೇರಿ ಮತ್ತು ಟೇಕಲ್ ಬೆಟ್ಟಗಳವರೆಗೂ ಮುಂದುವರಿಯುತ್ತದೆ. ಇವೆರಡರ ಜೊತೆಗೆ ಅಲ್ಲಲ್ಲಿ ಕುಳ್ಳುಗುಡ್ಡಗಳಂತೆ ಕಾಣಿಸಿಕೊಳ್ಳುವ ಇನ್ನೊಂದು ಶ್ರೇಣಿ ಇದೆ. ಇದು ಶ್ರೀನಿವಾಸಪುರದ ಬಳಿ ಆರಂಭವಾಗಿ ಕೋಲಾರ ಪಟ್ಟಣದ ಪೂರ್ವದಲ್ಲಿ ಸಾಗಿ, ಬಂಗಾರಪೇಟೆಯ ದಕ್ಷಿಣಾಗ್ರವನ್ನು ಹಾದು ಕುಪ್ಪಂ ಕಡೆಯ ಘಟ್ಟದವರೆಗೂ ಮುಂದುವರಿಯುತ್ತದೆ. ಇನ್ನೂ ಪೂರ್ವಕ್ಕೆ ವೃತ್ತಾಕಾರವಾಗಿ ಬಾಗಿರುವ ಕೆಲವು ಬೆಟ್ಟಗಳಿವೆ. ಇವುಗಳ ನಡುವೆ ಗ್ರಾಮವಸತಿಗಳಿಗೆ ಅನುಕೂಲವಾಗಿರುವ ಎತ್ತರದ ಕಣಿವೆಗಳು ಇರುವುದು ವಿಶೇಷ.

ಕೋಲಾರ ಜಿಲ್ಲೆ ಬಹುಮಟ್ಟಿಗೆ ನೈಸ್ ಕಣಶಿಲೆಯ ಪ್ರದೇಶ. ಶ್ರೀನಿವಾಸಪುರದಿಂದ ದಕ್ಷಿಣಾಬಿsಮುಖವಾಗಿ ಜಿಲ್ಲೆಯ ಅಂಚಿನವರೆಗೆ ಸುಮಾರು 6ಕಿಮೀ ಅಗಲದ ಶಿಸ್ಟ್ ಕಲ್ಲಿನ ಪಟ್ಟೆಯೊಂದು ಹಬ್ಬಿದೆ. ಜಿಲ್ಲೆಯ ಹೆಚ್ಚಿನ ಭಾಗದಲ್ಲಿ ನೆಲ ಅಲ್ಪಸ್ವಲ್ಪ ಏರುತಗ್ಗುಗಳೊಡನೆ ಹರಡಿದ್ದು ಕಣಶಿಲೆಯ ಗುಡ್ಡಬೆಟ್ಟಗಳು ಅಲ್ಲಲ್ಲಿ ಎದ್ದು ನಿಂತಂತಿರುತ್ತವೆÉ. ದೊಡ್ಡ ದೊಡ್ಡ ಬಂಡೆಗಳನ್ನು ಒಂದರ ಮೇಲೊಂದು ವಿಚಿತ್ರಾಕಾರದಲ್ಲಿ ಪೇರಿಸಿದಂತಿರುವ ಈ ಬೆಟ್ಟಗಳು ಕೋಲಾರ ಜಿಲ್ಲೆಯ ವೈಶಿಷ್ಟ್ಯ. ಶಿಸ್ಟ್ ಕಲ್ಲಿನ ಪಟ್ಟೆಯ ಪ್ರದೇಶ ಆರ್ಥಿಕವಾಗಿ ಮುಖ್ಯವಾದುದು. ಇದಕ್ಕೆ ಹೊಂದಿಕೊಂಡಂತೆ ಕ್ವಾರ್ಟೈಟ್, ಬೆಣಚುಕಲ್ಲು ಮುಂತಾದ ವಿವಿಧ ಬಗೆಯ ಶಿಲೆಗಳ ಸಮುದಾಯವಿದೆ. ಪ್ರಸಿದ್ಧವಾದ ಚಿನ್ನದ ಭೂನಿಕ್ಷೇಪಗಳು ಹಬ್ಬಿರುವುದೂ ಇದರ ಜೊತೆಯಲ್ಲೇ. ಇದಲ್ಲದೆ ಜಿಲ್ಲೆಯ ಹಲವು ಭಾಗಗಳಲ್ಲಿ ಉತ್ತರ ದಕ್ಷಿಣ ಅಥವಾ ಪೂರ್ವ ಪಶ್ಚಿಮವಾಗಿ ಹಬ್ಬಿರುವ ಡಾಲರೈಟ್‍ನ ಹೊಡೆಸಾಲುಗಳೂ ಇವೆ. ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಜಂಗಮಕೋಟೆ ಈ ತ್ರಿಕೋನ ಪ್ರದೇಶದಲ್ಲಿ ಮತ್ತು ಸ್ವಲ್ಪಮಟ್ಟಿಗೆ ಶ್ರೀನಿವಾಸಪುರದ ಬಳಿ ಜಂಬುಮಣ್ಣು ಸಹ ಇದೆ. ಕೋಲಾರದ ಚಿನ್ನದ ಗಣಿಗಳು ಜಗತ್ಪ್ರಸಿದ್ಧ. ಇಲ್ಲಿ ಅಲ್ಪಾಂಶ ಬೆಳ್ಳಿಯೂ ದೊರಕುತ್ತದೆ. ಬಂಗಾರಪೇಟೆ ತಾಲ್ಲೂಕಿನ ರಾಮಸಮುದ್ರದ ಬಳಿ ಕೊರಂಡಂ, ಮಾಲೂರು ತಾಲ್ಲೂಕಿನ ಕರಡಿಬಂಡೆ ಬಳಿ ಸುದ್ದೆಮಣ್ಣು ದೊರಕುತ್ತವೆ.

ಕೋಲಾರ ಜಿಲ್ಲೆಯಲ್ಲಿ ಸರ್ವಋತು ನದಿಗಳು ಯಾವುವೂ ಇಲ್ಲ. ಬಹುತೇಕ ನದಿಗಳು ಸಣ್ಣವು. ಮಳೆಗಾಲದಲ್ಲಿ ಮಾತ್ರ ಇವುಗಳಲ್ಲಿ ಪ್ರವಾಹ. ಪಾಲಾರ್ ಮತ್ತು ಉತ್ತರಪಿನಾಕಿನಿ (ಉತ್ತರ ಪೆನ್ನಾರ್) ಇವು ಮುಖ್ಯನದಿಗಳು. ಇವೂ ಹಲವು ಸಣ್ಣ ನದಿಗಳೂ ಜಿಲ್ಲೆಯಲ್ಲಿ ಹುಟ್ಟಿ ವಿವಿಧ ದಿಕ್ಕುಗಳಲ್ಲಿ ಹರಿಯುತ್ತವೆ. ಪಾಲಾರ್ ನದಿ ಮೊದಲು ಕಾಣಿಸಿಕೊಳ್ಳುವುದು ಕೈವಾರದ ದಕ್ಷಿಣಕ್ಕಿರುವ ಗೌತಮ ಗುಡ್ಡದಲ್ಲಿ. ಅಲ್ಲಿಂದ ಜಂಗಮಕೋಟೆಯವರೆಗೆ ಪೂರ್ವಾಬಿsಮುಖವಾಗಿ, ಮುಂದೆ ದಕ್ಷಿಣ ಮತ್ತು ಆಗ್ನೇಯಾಬಿsಮುಖವಾಗಿ ಹರಿದು, ಬಂಗಾರಪೇಟೆಯನ್ನು ಹಾದು, ಜಿಲ್ಲೆಯನ್ನು ಬಿಡುತ್ತದೆ. ಉಗಮಸ್ಥಳದಿಂದ ಜಿಲ್ಲೆಯನ್ನು ಬಿಡುವಲ್ಲಿಯ ವರೆಗೆ ಇದರ ಉದ್ದ 108ಕಿಮೀ ಉತ್ತರಪಿನಾಕಿನಿ ಚೆನ್ನಕೇಶವ ಬೆಟ್ಟದಲ್ಲಿ ಹುಟ್ಟಿ ವಾಯವ್ಯ ದಿಕ್ಕಿನಲ್ಲಿ ಹರಿದು, ಮಂಚೇನಹಳ್ಳಿ ಮತ್ತು ಗೌರಿಬಿದನೂರುಗಳ ಬಳಿಯಲ್ಲಿ ಸಾಗಿ ಅನಂತಪುರ ಜಿಲ್ಲೆಯ ಹಿಂದೂಪುರ ತಾಲ್ಲೂಕನ್ನು ಪ್ರವೇಶಿಸುತ್ತದೆ. ಜಿಲ್ಲೆಯಲ್ಲಿ ಈ ನದಿಯ ಉದ್ದ 55ಕಿಮೀ. ನಂದಿಬೆಟ್ಟದ ಬಳಿ ಹುಟ್ಟಿ ದಕ್ಷಿಣಕ್ಕೆ ಪ್ರವಹಿಸುವ ದಕ್ಷಿಣಪಿನಾಕಿನಿ ಕೋಲಾರ ಜಿಲ್ಲೆಯಲ್ಲಿ ಸ್ವಲ್ಪ ದೂರ ಮಾತ್ರ ಹರಿಯುತ್ತದೆ. ಜಿಲ್ಲೆಯ ಇನ್ನೊಂದು ಮುಖ್ಯ ನದಿ ಪಾಪಘ್ನಿ. ಚಿಕ್ಕಬಳ್ಳಾಪುರದ ಬಳಿಯ ಬೆಟ್ಟದಲ್ಲಿ ಇದರ ಉಗಮ. ಇದು ಈಶಾನ್ಯ ದಿಕ್ಕಿನಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಮೂಲಕ ಹರಿದು, ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲ್ಲೂಕನ್ನು ಪ್ರವೇಶಿಸುತ್ತದೆ. ಜಿಲ್ಲೆಯಲ್ಲಿ ಈ ನದಿಯ ಉದ್ದ 68ಕಿಮೀ. ಚಿತ್ರಾವತಿ ಇನ್ನೊಂದು ನದಿ. ನಂದಿ ಬೆಟ್ಟಕ್ಕೆ ಉತ್ತರದಲ್ಲಿ 14ಕಿಮೀ ದೂರದಲ್ಲಿ ಹುಟ್ಟಿ ಈಶಾನ್ಯಾಬಿsಮುಖವಾಗಿ ಹರಿದು ಹಿಂದೂಪುರವನ್ನು ಪ್ರವೇಶಿಸುತ್ತದೆ. ಇದು ಉತ್ತರ ಪಿನಾಕಿನಿಯ ಒಂದು ಉಪನದಿ. ಜಿಲ್ಲೆಯಲ್ಲಿ ಇದರ ಹರಿವು 48ಕಿಮೀ. ಇದರ ಜಲಾನಯನ ಪ್ರದೇಶ 538ಚ.ಕಿಮೀ. ಇಲ್ಲಿ 206 ಕೆರೆಗಳಿವೆ. ನಂಗ್ಲಿಹೊಳೆ ಮುಳಬಾಗಿಲಬಳಿಯ ಕುರುಡುಮಲೆಯಲ್ಲಿ ಹುಟ್ಟಿ ಪೂರ್ವಾಬಿsಮುಖವಾಗಿ ಹರಿದು ಜಿಲ್ಲೆಯನ್ನು ದಾಟಿ ಹೋಗುತ್ತದೆ. ಇದು ಕೌಂಡಿನ್ಯ ನದಿಯ ಉಪನದಿ. ಕುಮುದ್ವತಿ ನದಿ ಉತ್ತರ ಪಿನಾಕಿನಿಯ ಉಪನದಿ. ಜಿಲ್ಲೆಯಲ್ಲಿ ಇದರ ಉದ್ದ 29ಕಿಮೀ. ಇದು ಮಾಕಳಿದುರ್ಗಕ್ಕೆ ಪಶ್ಚಿಮದಲ್ಲಿ ಉಜನಿ ಬೆಟ್ಟದಲ್ಲಿ ಹುಟ್ಟಿ ಉತ್ತರಕ್ಕೆ ಹರಿದು ಗೌರಿಬಿದನೂರು ತಾಲ್ಲೂಕಿನಲ್ಲಿ ಸಾಗಿ ಜಿಲ್ಲೆಯ ಎಲ್ಲೆಯನ್ನು ದಾಟುತ್ತದೆ. ಕುಶಾವತಿ ಎಂಬ ಹೆಸರಿನ ಎರಡು ಹೊಳೆಗಳು ಈ ಜಿಲ್ಲೆಯಲ್ಲುಂಟು. ಒಂದು ಪಾಪಘ್ನಿಯನ್ನೂ ಇನ್ನೊಂದು ಚಿತ್ರಾವತಿಯನ್ನೂ ಸೇರುತ್ತದೆ. ಮಾರ್ಕಂಡೇಯ ಇನ್ನೊಂದು ಹೊಳೆ. ಕೋಲಾರ ತಾಲ್ಲೂಕಿನ ವಕ್ಕಲೇರಿ ಬೆಟ್ಟಗಳ ಮೇಲೆ ಮತ್ತು ಮಾಲೂರು ತಾಲ್ಲೂಕಿನ ಟೇಕಲ್ ಬೆಟ್ಟಗಳ ಮೇಲೆ ಹುಟ್ಟುವ ಎರಡು ತೊರೆಗಳು ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಎಂಬಲ್ಲಿ ಸೇರಿ ಮಾರ್ಕಂಡೇಯ ನದಿಯಾಗಿ ದಕ್ಷಿಣದತ್ತ ಹರಿದು ವೃಷಭಾವತಿಯನ್ನು ಸೇರಿಕೊಳ್ಳುವುದು. ಜಿಲ್ಲೆಯಲ್ಲಿ 50ಕಿಮೀ ದೂರ ಈ ನದಿ ಹರಿಯುವುದು. ಇದರ ಜಲಾನಯನ ಪ್ರದೇಶದಲ್ಲಿ 274 ಕೆರೆಗಳಿವೆ. ದಕ್ಷಿಣಪಿನಾಕಿನಿ ನದಿ ಹುಟ್ಟುವುದು ಚೆನ್ನರಾಯನ ಬೆಟ್ಟದಲ್ಲಿ. ಶಿಡ್ಲಘಟ್ಟದವರೆಗೆ ಪೂರ್ವಾಬಿsಮುಖವಾಗಿ ಹರಿದು, ದಕ್ಷಿಣಕ್ಕೆ ತಿರುಗಿ, ಬೆಂಗಳೂರು ಜಿಲ್ಲೆಯನ್ನು ಪ್ರವೇಶಿಸುತ್ತದೆ. ಕೋಲಾರ ಜಿಲ್ಲೆಯಲ್ಲಿ ಇದರ ಉದ್ದ 39ಕಿಮೀ. ಜಲಾನಯನ ಪ್ರದೇಶ 580ಚ.ಕಿಮೀ. ಕಾವೇರಿಯ ಉಪನದಿಗಳಲ್ಲಿ ಒಂದಾದ ಅರ್ಕಾವತಿ ಉದಿಸುವುದು ನಂದಿದುರ್ಗದಲ್ಲಿ. ಇದು ಬೆಟ್ಟವನ್ನಿಳಿದು ಜಿಲ್ಲೆಯನ್ನು ದಾಟಿ ಬೆಂಗಳೂರು ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕನ್ನು ಸೇರುತ್ತದೆ. ವೃಷಭಾವತಿ ನದಿ ವಕ್ಕಲೇರಿ ಬೆಟ್ಟದಲ್ಲಿ ಹುಟ್ಟುತ್ತದೆ. ಬಂಗಾರಪೇಟೆ ತಾಲ್ಲೂಕಿನಲ್ಲಿ ಹಾಯ್ದು, ಕೊಪ್ಪ ದೊಡ್ಡ ಕೆರೆಗೆ ನೀರು ಒದಗಿಸಿ, ಕಾಮಸಂದ್ರದ ಬಳಿ ದಕ್ಷಿಣಕ್ಕೆ ಹರಿದು ತಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆಯ ಹೊಸೂರು ತಾಲ್ಲೂಕನ್ನು ಪ್ರವೇಶಿಸುತ್ತದೆ. ಕಾಮಸಂದ್ರದ ಬಳಿ ಇದಕ್ಕೆ ಕಟ್ಟೆ ಕಟ್ಟಲಾಗಿದೆ. ಜಿಲ್ಲೆಯಲ್ಲಿ ಈ ನದಿಯ ಉದ್ದ 58ಕಿಮೀ. ಜಲಾನಯನ ಪ್ರದೇಶ 347ಚ.ಕಿಮೀ. ಈ ಪ್ರದೇಶದಲ್ಲಿ 264 ಕೆರೆಗಳಿವೆ.

ಜಿಲ್ಲೆಯ ವಾಯುಗುಣ ಹಿತಕರ, ವರ್ಷದಲ್ಲಿ ಸ್ಥೂಲವಾಗಿ ನಾಲ್ಕು ಋತುಗಳಿವೆv ಡಿಸೆಂಬರ್‍ಫೆಬ್ರವರಿ ಶುಷ್ಕ ಹವೆ. ಮಾರ್ಚ್‍ಮೇ ಬೇಸಗೆ. ಜೂನ್‍ಅಕ್ಟೋಬರ್ ಮಳೆಗಾಲ. ನವೆಂಬರಿನಲ್ಲಿ ಮುಂಗಾರು ಹಿಂದೆ ಸರಿಯುತ್ತದೆ. ಕೋಲಾರ ಚಿನ್ನದ ಗಣಿಯ ಉಷ್ಣತೆ ಸ್ಥೂಲವಾಗಿ ಇಡೀ ಜಿಲ್ಲೆಗೆ ಪ್ರಾತಿನಿದಿsಕವಾದ್ದು. ನಂದಿ ಬೆಟ್ಟ ತಂಪಿನ ತಾಣ. ವರ್ಷದ ಅತ್ಯಂತ ಉಷ್ಣತೆಯ ತಿಂಗಳು ಮೇ. ಆಗ ಕೋಲಾರ ಚಿನ್ನದ ಗಣಿಯಲ್ಲಿನ ದೈನಿಕ ಗರಿಷವಿ ಉಷ್ಣತೆ 3್ಝ530 ಸೆಂ. ನಂದಿ ಬೆಟ್ಟದ ಮೇಲೆ ಏಪ್ರಿಲ್‍ನಲ್ಲಿ ಹೆಚ್ಚು ಉಷ್ಣತೆ ಇರುತ್ತದೆ. ಎಮಧ್ಯಕದೈನಿಕ ಗರಿಷವಿ 3160 ಸೆಂ.ಏ. ಡಿಸೆಂಬರ್ ಅತ್ಯಂತ ತಣ್ಣನೆಯ ತಿಂಗಳು.ಆಗ ಕೋಲಾರ ಚಿನ್ನದ ಗಣಿ ಪ್ರದೇಶದ ದೈನಿಕ ಕನಿಷವಿ ಉಷ್ಣತೆ 2270 ಸೆಂ. ನಂದಿ ಬೆಟ್ಟದ ಮೇಲೆ 2060 ಸೆಂ. ಸರಾಸರಿಯಲ್ಲಿ ಜಿಲ್ಲೆಯಲ್ಲಿಯ ಮಳೆದಿನಗಳು 47. ನಂದಿಬೆಟ್ಟದಲ್ಲಿ ವರ್ಷದ ಸರಾಸರಿ ಮಳೆ 11958ಮಿಮೀ. ಇಡೀ ಜಿಲ್ಲೆಯ ಸರಾಸರಿ 7305ಮಿಮೀ.

ಸ್ವಲ್ಪ ಹೆಚ್ಚು ಮಳೆಯಾಗುವ ಬೆಟ್ಟಗುಡ್ಡಗಳಲ್ಲಿ ಚಿಕ್ಕ ಮರ ಮತ್ತು ಕುರುಚಲು ಕಾಡುಗಳಿವೆ. ಈ ಕಾಡುಗಳಲ್ಲಿ ಬೇವು, ಹುಣಿಸೆ, ಗಂಧ, ಹೊಂಗೆ, ಕರಿಜಾಲಿ, ಬಿಳಿಜಾಲಿ, ಕಗ್ಗಲಿ, ಬನ್ನಿ, ಗುಜ್ಜಲು, ಬಿಲ್ವಾರ, ಚುಜ್ಜಲು, ದಿಂಡಿಗ, ನೇರಳೆ, ಚೆನ್ನಂಗಿ, ಪಚರಿ, ನವಿಲಾದಿ, ದೇವದಾರು, ಆಲ, ಬೇಲ, ಮುತ್ತುಗ ಬೆಳೆಯುತ್ತವೆ. ಸೌದೆ, ಶ್ರೀಗಂಧ ಮುಖ್ಯ ಉತ್ಪನ್ನಗಳು. ನಂದಿಬೆಟ್ಟದ ಕಾಡುಗಳಲ್ಲಿ ಕರಡಿ, ಚಿರತೆ, ಕಾಡುಮೊಲ, ಕಾಡುಹಂದಿ ಮತ್ತು ಜಿಂಕೆಗಳಿವೆ.

ದೊಡ್ಡ ನದಿಗಳಿಲ್ಲದಿರುವುದರಿಂದಲೂ ಮಳೆ ಕಡಿಮೆಯಾದ್ದ ರಿಂದಲೂ ಈ ಜಿಲ್ಲೆಯ ವ್ಯವಸಾಯಕ್ಕೆ ಕೆರೆಗಳು ಮುಖ್ಯ ಆಧಾರ. ಜಿಲ್ಲೆಯಲ್ಲಿ ಉತ್ತಮ ವಿದ್ಯುತ್ ಸಂಪರ್ಕಗಳಿರುವುದರಿಂದ, ನೀರಾವರಿ ಪಂಪ್‍ಗಳೂ ಹೆಚ್ಚು ಸಂಖ್ಯೆಯಲ್ಲಿವೆ. ರಾಗಿ, ಬತ್ತ, ಜೋಳ, ಸಜ್ಜೆ, ಕಾಳುಗಳು, ನೆಲಗಡಲೆ, ಕಬ್ಬು, ಆಲೂಗೆಡ್ಡೆ, ಈರುಳ್ಳಿ ಮತ್ತು ಹೊಗೆಸೊಪ್ಪು ಇಲ್ಲಿಯ ಮುಖ್ಯ ಬೆಳೆಗಳು.

ಚಿನ್ನದ ಗಣಿಗಾರಿಕೆ ಜಿಲ್ಲೆಯ ಒಂದು ದೊಡ್ಡ ಉದ್ಯಮ. ಭಾರತದ ಒಟ್ಟು ಚಿನ್ನದ ಉತ್ಪಾದನೆಯಲ್ಲಿ ಸೇ.99ನ್ನು ಕೋಲಾರ ಚಿನ್ನದ ಗಣಿಗಳಲ್ಲಿ ತೆಗೆಯಲಾಗುತ್ತಿತ್ತು. ಈಗ ಚಿನ್ನದ ಗಣಿಗಾರಿಕೆ ಸ್ಥಗಿತಗೊಳ್ಳುವ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಭಾರತ ಸರ್ಕಾರದ ರಕ್ಷಣಾ ಇಲಾಖೆಯ ಆಡಳಿತ ನಿಯಂತ್ರಣಕ್ಕೊಳಪಟ್ಟ ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್ ಸಂಸ್ಥೆ ಭಾರಿ ಯಂತ್ರೋಪಕರಣಗಳನ್ನು ತಯಾರಿಸುತ್ತಿದೆ. ಗೌರಿಬಿದನೂರಿನಲ್ಲಿ ಸಹಕಾರ ಸಕ್ಕರೆ ಕಾರ್ಖಾನೆ ಸ್ಥಾಪಿತವಾಗಿದೆ. ಹಲವು ಸಣ್ಣ ಕೈಗಾರಿಕೆಗಳು ಕೋಲಾರ, ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿವೆ. ಉಕ್ಕಿನ ಸಾಮಾನುಗಳು, ವ್ಯವಸಾಯೋಪಕರಣಗಳು, ಅಲ್ಯುಮಿನಿಯಂ ಪಾತ್ರೆಗಳು, ಹೆಂಚು, ಇಟ್ಟಿಗೆ, ಸ್ಲೇಟ್, ಸೀಸದಕಡ್ಡಿ, ಸಾಬೂನು, ಅಂಟು, ಸುಗಂಧದ್ರವ್ಯಗಳು, ಔಷದಿsಗಳು, ಕಡ್ಡಿಪೆಟ್ಟಿಗೆ, ಪ್ಲಾಸ್ಟಿಕ್ ಸಾಮಾನುಗಳು ಕೊಡ ಕೋಲಾರ ಜಿಲ್ಲೆಯಲ್ಲಿ ತಯಾರಾಗುತ್ತವೆ. ಕಲ್ಲಿಗೆ ಹೊಳಪು ಕೊಡುವುದು, ಬೀಡಿ ಕಟ್ಟುವುದು, ಊದುಬತ್ತಿ ತಯಾರಿಕೆ, ಕೈಮಗ್ಗ, ಕಂಬಳಿ ತಯಾರಿಕೆ, ಗಾಣದಿಂದ ಮತ್ತು ಯಂತ್ರಗಳಿಂದ ಎಣ್ಣೆ ಉತ್ಪಾದನೆ, ಬೆಲ್ಲ ತಯಾರಿಕೆ ಇವೂ ಇವಕ್ಕೆ ಸಂಬಂಧಪಟ್ಟ ಸಣ್ಣಪುಟ್ಟ ಉತ್ಪಾದನೆ ಮತ್ತು ಕೈಕೆಲಸಗಳೂ ಹಲವು ಜನರಿಗೆ ಉದ್ಯೋಗ ದೊರಕಿಸಿವೆ. ಜಿಲ್ಲೆಯಲ್ಲಿ ರೇಷ್ಮೆಉದ್ಯಮ ಉತ್ತಮ ಸ್ಥಿತಿಯಲ್ಲಿದೆ. ಶಿಡ್ಲಘಟ್ಟ ಈ ಉದ್ಯಮಕ್ಕೆ ಪ್ರಸಿದ್ಧವಾಗಿದೆ. ಚರಕದಿಂದ ನೂಲು ತೆಗೆಯುವುದು. ಮಣ್ಣಿನ ಸಾಮಾನುಗಳನ್ನು ತಯಾರಿಸುವುದು. ಚರ್ಮ ಹದ ಮಾಡುವುದು, ಜೇನುಸಾಕಣೆ, ಕೊಟ್ಟಣದ ಅಕ್ಕಿ ತಯಾರಿಕೆ -ಇವು ಇತರ ಕೆಲವು ಸಣ್ಣ ಕೈಗಾರಿಕೆಗಳು. ಆಲೂಗೆಡ್ಡೆ, ಮೆಣಸಿನಕಾಯಿ ಮತ್ತು ಈರುಳ್ಳಿ ಇವನ್ನು ಆಂಧ್ರಪ್ರದೇಶಕ್ಕೂ ಶ್ರೀಲಂಕಾಗೂ ಕಳುಹಿಸುತ್ತಾರೆ. ಉಣ್ಣೆಕಂಬಳಿಗಳೂ ರೇಷ್ಮೆ ಬಟ್ಟೆಗಳೂ ಚರ್ಮದ ವಸ್ತುಗಳೂ ನೆರೆ ರಾಜ್ಯಗಳಿಗೆ ಹೋಗುತ್ತವೆ. ಆಂಧ್ರಪ್ರದೇಶದಿಂದ ಜಿಲ್ಲೆಗೆ ಅಕ್ಕಿಪೂರೈಕೆಯಿದೆ. ಕೋಲಾರ ಜಿಲ್ಲೆಯಲ್ಲಿ ರಸ್ತೆ ಸಂಪರ್ಕ ಚೆನ್ನಾಗಿ ಬೆಳೆದಿದೆ. ರಾಷ್ಟೀಯ ಹೆದ್ದಾರಿ ನಂ. 4 ಮತ್ತು 7 ಮತ್ತು ರಾಜ್ಯ ಹೆದ್ದಾರಿಗಳು ಇಲ್ಲಿ ಹಾದು ನೆರೆರಾಜ್ಯಗಳಿಗೆ ಸಂಪರ್ಕ ಕಲ್ಪಿಸಿವೆ. ಪ್ರತಿ ಹಳ್ಳಿಗೂ ತಾಲ್ಲೂಕಿಗೂ ಜಾಲದಂತೆ ರಸ್ತೆ ಮಾರ್ಗಗಳು ಹೆಣೆದುಕೊಂಡಿವೆ. ಸರ್ಕಾರಿ ಮತ್ತು ಖಾಸಗಿ ಬಸ್ಸುಗಳೂ ಕಾರುಗಳೂ ಬಂಡಿಗಳೂ ಜನರನ್ನೂ ಸರಕುಗಳನ್ನೂ ಒಂದೆಡೆಯಿಂದ ಇನ್ನೊಂದೆಡೆಗೆ ಸುಲಭವಾಗಿ ಸಾಗಿಸುತ್ತವೆ. ಹಿಂದೂಪುರ - ಬೆಂಗಳೂರು ರೈಲುಮಾರ್ಗ ಗೌರಿಬಿದನೂರು ಮೂಲಕವೂ ಚೆನ್ನೈ - ಬೆಂಗಳೂರು ರೈಲುಮಾರ್ಗ ಬಂಗಾರಪೇಟೆಯ ಮೂಲಕವೂ ಸಾಗುತ್ತವೆ. ಇನ್ನೊಂದು ರೈಲುಮಾರ್ಗ ಬೆಂಗಳೂರಿನಿಂದ ನಂದಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಕೋಲಾರಗಳ ಮೂಲಕ ಬಂಗಾರ ಪೇಟೆಗೆ ಸಾಗುತ್ತದೆ. ಬಂಗಾರಪೇಟೆಯಿಂದ ಚಿನ್ನದ ಗಣಿ ಪ್ರದೇಶಕ್ಕೆ ರೈಲ್ವೆ ಸಂಪರ್ಕವುಂಟು.

ಕೋಲಾರ ಜಿಲ್ಲೆಯಲ್ಲಿ ಹಲವಾರು ಪ್ರಾಚೀನ ಅವಶೇಷಗಳು ಬೆಳಕಿಗೆ ಬಂದಿವೆ. ಹಳೆಯ ಶಿಲಾಯುಗಕ್ಕೆ ಸಂಬಂದಿsಸಿದ ಯಾವ ಅವಶೇಷಗಳೂ ಇದುವರೆಗೆ ಕಂಡುಬಂದಿಲ್ಲ. ನವಶಿಲಾಯುಗಕ್ಕೆ ಸಂಬಂದಿsಸಿದ ನೆಲೆಗಳು ಬಂಗಾರಪೇಟೆ ತಾಲ್ಲೂಕಿನ ಹುನಗುಂದ, ಬೂದಿಕೋಟೆ ಮತ್ತು ಸೂಲಿಕುಂಟೆ ಗ್ರಾಮಗಳಲ್ಲಿಯೂ ಮಾಲೂರು ತಾಲ್ಲೂಕಿನ ಬನಹಳ್ಳಿ ಗ್ರಾಮದಲ್ಲಿಯೂ ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲು ಬೆಟ್ಟಪ್ರದೇಶಗಳಲ್ಲಿಯೂ ಬೆಳಕಿಗೆ ಬಂದಿವೆ. ಅಲ್ಲದೆ ಮಾಲೂರು ತಾಲ್ಲೂಕಿನ ಕೆಂದನಹಳ್ಳಿ ಮತ್ತು ಗಂಗಸಂದ್ರ ಹಳ್ಳಿಗಳ ಸುತ್ತಮುತ್ತಲಿನಲ್ಲಿ ಹೊಸ ಶಿಲಾಯುಗದ ಕಲ್ಲಿನ ಆಯುಧಗಳು ದೊರಕಿವೆ. ಇವು ತಯಾರಿಕೆಯ ಹಲವು ಹಂತಗಳಲ್ಲಿರುವುದರಿಂದ ಈ ಪ್ರದೇಶ ಶಿಲಾಯುಧಗಳನ್ನು ತಯಾರಿಸುವ ಕೇಂದ್ರವಾಗಿದ್ದಿತೆಂದು ಹೇಳಬಹುದು. ಬಂಗಾರಪೇಟೆ ತಾಲ್ಲೂಕಿನಲ್ಲಿ ಚಿನ್ನದ ಗಣಿ ಪ್ರದೇಶದ ನೈಋತ್ಯಕ್ಕೆ ಸು.21ಕಿಮೀ ದೂರದಲ್ಲಿರುವ ಹುನಗುಂದದಲ್ಲಿ ನವಶಿಲಾಯುಗದ ಕಾಲದಲ್ಲಿ ಚಿನ್ನದ ಗಣಿಗಳಿದ್ದವೆಂದೂ ಅಲ್ಲಿ ಚಿನ್ನವನ್ನು ತೆಗೆಯುತ್ತಿದ್ದರೆಂದೂ ಊಹಿಸಲಾಗಿದೆ. ಅಲ್ಲಿರುವ 9ನೆಯ ಶತಮಾನದ ತಮಿಳು ಶಾಸನವೊಂದು ಇದನ್ನು ಪೆÇನ್‍ಕುನ್ರಂ-ಪೆÇನ್-ಚಿನ್ನ, ಕುನ್ರಂ-ಬೆಟ್ಟ ಎಂದು ಕರೆದಿದೆ. ಈ ಜಿಲ್ಲೆಯಲ್ಲಿ ಬೃಹತ್ ಶಿಲಾಯುಗದ ಸಮಾದಿsಗಳ ನೆಲೆಗಳು ಅಸಂಖ್ಯಾತವಾಗಿವೆ. ಆದರೆ ಆಗಿನ ಕಾಲಕ್ಕೆ ಸಂಬಂದಿsಸಿದ ವಸತಿ ನೆಲೆಗಳು ಬಹಳ ಕಡಿಮೆ.

ಜಿಲ್ಲೆಯ ಪ್ರಾಚೀನತೆಯನ್ನು ಸಾರುವ ಹಲವು ಐತಿಹ್ಯಗಳು ಪ್ರಚಾರದಲ್ಲಿವೆ. ಮುಳಬಾಗಿಲು ತಾಲ್ಲೂಕಿನ ಆವನಿ ಪ್ರದೇಶದಲ್ಲಿ ವಾಲ್ಮೀಕಿ ವಾಸಿಸುತ್ತಿದ್ದನೆಂದು ಪ್ರತೀತಿ. ಕೋಲಾರಕ್ಕೆ ಪಶ್ಚಿಮದಲ್ಲಿರುವ ಶತಶೃಂಗಪರ್ವತ ರೇಣುಕ ಮತ್ತು ಪರಶುರಾಮನಿಗೆ ಸಂಬಂದಿsಸಿದಂತೆ ಪ್ರಸಿದ್ಧವಾಗಿದೆ. ಈ ಎರಡು ಸ್ಥಳಗಳಲ್ಲಿಯೂ ಪಾಂಡವರು ತಮ್ಮ ಅರಣ್ಯವಾಸದಲ್ಲಿ ಸುತ್ತಾಡಿದ್ದರೆಂದೂ ಚಿಂತಾಮಣಿಯ ಹತ್ತಿರವಿರುವ ಕೈವಾರ ಏಕಚಕ್ರಪುರವಾಗಿತ್ತೆಂದೂ ನಂಬಿಕೆ. ಶಿಡ್ಲಘಟ್ಟದ ಸಾದಲಿ ಎಂಬ ಊರನ್ನು ಸಹದೇವ ನಿರ್ಮಿಸಿದನೆಂದು ಹೇಳುತ್ತಾರೆ. ಮುಳಬಾಗಿಲು ತಾಲ್ಲೂಕಿನ ಕುರುಡುಮಲೆಯಲ್ಲಿ ತ್ರಿಪುರಾಂತಕನ ಮೇಲೆ ಯುದ್ಧಕ್ಕೆ ಹೊರಡುವುದಕ್ಕೆ ಮುಂಚೆ ದೇವತೆಗಳೆಲ್ಲರೂ ಒಂದುಗೂಡಿದ್ದರಂತೆ.

ಸುಮಾರು 4ನೆಯ ಶತಮಾನದಲ್ಲಿ ಗಂಗರಸರು ಇಲ್ಲಿ ತಮ್ಮ ರಾಜ್ಯವನ್ನು ಕಟ್ಟಿ ರಾಜ್ಯಭಾರ ಮಾಡಲಾರಂಬಿsಸಿದರು. 7-8ನೆಯ ಶತಮಾನಗಳಲ್ಲಿ ಮಹಾವಲಿ ಬಾಣರಸರು ಪಾಲಾರ್ ನದಿಯ ಪೂರ್ವಪ್ರದೇಶದಲ್ಲಿ ರಾಜ್ಯಭಾರ ಮಾಡುತ್ತಿದ್ದರು. 8, 9 ಮತ್ತು 10ನೆಯ ಶತಮಾನಗಳಲ್ಲಿ ಜಿಲ್ಲೆಯ ಬಹುಭಾಗ ನೊಳಂಬರ ವಶದಲ್ಲಿತ್ತು. 10ನೆಯ ಶತಮಾನದ ಅಂತ್ಯದಲ್ಲಿ ಜಿಲ್ಲೆಯ ಪ್ರದೇಶ ಚೋಳರ ವಶವಾಯಿತು. 12ನೆಯ ಶತಮಾನದ ಹೊತ್ತಿಗೆ ಹೊಯ್ಸಳರ ಆಳಿಕೆಗೆ ಬಂತು. ಆದರೂ ಮಧ್ಯೆ ಮಧ್ಯೆ ಸ್ವಲ್ಪಕಾಲ ತಮಿಳು ಗಂಗರು ಬ್ರಹ್ಮಾದಿsರಾಜರು ಮೊದಲಾದ ವಂಶಗಳವರು ಕೆಲವು ಪ್ರದೇಶಗಳಲ್ಲಿ ಸ್ವತಂತ್ರವಾಗಿಯೂ ಆಳುತ್ತಿದ್ದರು. ಅನಂತರ ವಿಜಯನಗರದರಸರು ಮತ್ತು ಕೆಲವು ಪಾಳೆಯಗಾರರು ಈ ಜಿಲ್ಲೆಯ ರಾಜ್ಯಭಾರ ಮಾಡಿದರು. ಮುಂದೆ ಇದು ಮೈಸೂರು ಸಂಸ್ಥಾನದ ಕಕ್ಷೆಯಲ್ಲಿತ್ತು.

ಇದುವರೆಗೆ ಈ ಜಿಲ್ಲೆಯಲ್ಲಿ ಸಿಕ್ಕಿರುವ ಅತ್ಯಂತ ಪ್ರಾಚೀನ ಶಾಸನ ಸು.370ರದು. ಇದು ಗಂಗಕುಲದ ಕೊಂಗುಣಿವರ್ಮ ಧರ್ಮಮಹಾರಾಜನಿಗೆ ಸಂಬಂಧಿಸಿದ್ದು; ಮಾಲೂರು ತಾಲ್ಲೂಕಿನ ನೊಣಮಂಗಲದಲ್ಲಿರುವ ಪಾಳು ಜೈನಬಸ್ತಿಯಲ್ಲಿದೆ. ಅಂದಿನಿಂದ ಹಿಡಿದು ಇತ್ತೀಚಿನವರೆಗಿನ ಕನ್ನಡ, ಸಂಸ್ಕøತ, ತಮಿಳು ಮತ್ತು ತೆಲುಗು ಶಾಸನಗಳು ಜಿಲ್ಲೆಯ ಹಲವು ಸ್ಥಳಗಳಲ್ಲಿ ದೊರಕಿವೆ. ನಂದಿಯಲ್ಲಿರುವ ಭೋಗನಂದೀಶ್ವರ (ಸು.800) ಮತ್ತು ಅರುಣಾಚಲೇಶ್ವರ (ಸು.880) ದೇವಾಲಯಗಳು ಜಿಲ್ಲೆಯ ಅತಿ ಪ್ರಾಚೀನ ವಾಸ್ತುಕೃತಿಗಳು. ಆವನಿಯ ರಾಮಲಿಂಗೇಶ್ವರ ದೇವಾಲಯ ಮತ್ತು ಇತರ ದೇವಾಲಯಗಳು ನೊಳಂಬರ ಕಾಲದ ಕಟ್ಟಡಗಳು. ಕೋಲಾರ ತಾಲ್ಲೂಕಿನ ಸೀತಿ ಬೆಟ್ಟದ ಮೇಲಿರುವ ದೇವಾಲಯ ಸಹ ಬಹುಶಃ ನೊಳಂಬರ ಕಾಲಕ್ಕೆ ಸಂಬಂದಿsಸಿದ್ದು. ಕುರುಡುಮಲೆಯ ಚೋಳರ ಕಾಲದ ಸೋಮೇಶ್ವರ ದೇವಾಲಯ ಮತ್ತು ಬೃಹದಾಕಾರದ ಗಣಪತಿ ದೇವಾಲಯಗಳು ಬಹಳ ಪ್ರಸಿದ್ಧವಾಗಿವೆ. ಕೋಲಾರದಲ್ಲಿರುವ ಕೋಲಾರಮ್ಮನ ದೇವಾಲಯ ಚೋಳ ಮತ್ತು ಗಂಗರಸರಿಂದ ನಿರ್ಮಿತವಾದುದೆಂದು ಹೇಳಬಹುದು.

ವಿಜಯನಗರ ಮತ್ತು ಪಾಳೆಯಗಾರರ ಕಾಲಕ್ಕೆ ಸಂಬಂದಿsಸಿದ ದೇವಾಲಯಗಳಲ್ಲಿ ಮುಳಬಾಗಿಲು ಹತ್ತಿರವಿರುವ ವಿರೂಪಾಕ್ಷಪುರದಲ್ಲಿರುವ ವಿರೂಪಾಕ್ಷ ದೇವಾಲಯ ಕೋಲಾರದ ಸೋಮೇಶ್ವರ ದೇವಾಲಯ, ಮುಳಬಾಗಲ ಆಂಜನೇಯ ದೇವಾಲಯಗಳನ್ನು ಹೆಸರಿಸಬಹುದು. ಅಲ್ಲದೆ ಚಿಕ್ಕಬಳ್ಳಾಪುರದ ಸಮೀಪದಲ್ಲಿರುವ ರಂಗಸ್ಥಳದ ಶ್ರೀರಂಗನಾಥ ದೇವಾಲಯ, ಕೈವಾರದ ಅಮರನಾರಾಯಣ ದೇವಾಲಯ, ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿ ಮತ್ತು ಗೌರಿಬಿದನೂರಿನ ವಿದುರಾಶ್ವತ್ಥ ಇವುಗಳು ಗಣನೀಯವಾದ ಯಾತ್ರಾಸ್ಥಳಗಳಾಗಿವೆ. ಮುಳಬಾಗಲಿನ ಶ್ರೀಪಾದರಾಯರ ಮಠ, ಬಾಗೇಪಲ್ಲಿ ತಾಲ್ಲೂಕು ಗೂಳೂರಿನಲ್ಲಿರುವ ವೀರಶೈವಮಠ, ತಂಬಿಹಳ್ಳಿಯಲ್ಲಿಯ ಮಾಧ್ವಮಠಗಳು ಪ್ರಾಚೀನವಾದವು.

ಮಹಮ್ಮದೀಯರ ಕಾಲದ ಕಟ್ಟಡಗಳಲ್ಲಿ ಗೌರಿಬಿದನೂರಿನ ಹತ್ತಿರವಿರುವ ಹೀರೇಬಿದನೂರಿನ ಬಿಜಾಪುರದ ಪ್ರಾಂತ್ಯಾದಿsಕಾರಿಯ ಸಮಾಧಿ ಮತ್ತು ಕೋಲಾರದಲ್ಲಿರುವ ಹೈದರ್ ಅಲಿಯ ತಂದೆಯ ಸಮಾಧಿಗಳು ಉಲ್ಲೇಖಾರ್ಹ. ಖ್ಯಾತ ಎಂಜಿನಿಯರ್ ಎಂ.ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಚಿಕ್ಕಬಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿ ವಸ್ತು ಸಂಗ್ರಹಾಲಯವಿದೆ.

ಈ ಜಿಲ್ಲೆಯಲ್ಲಿ ಅನೇಕ ಪ್ರಸಿದ್ಧ ಕೋಟೆಗಳಿವೆ. ನಂದಿದುರ್ಗ, ರಹಮಾನ್ ದುರ್ಗ ಪ್ರಖ್ಯಾತವಾದುವು (ಜಿಲ್ಲೆಯ ಅನೇಕ ಮುಖ್ಯಸ್ಥಳಗಳಿಗೆ ಆಯಾ ಶೀರ್ಷಿಕೆಯಲ್ಲಿ ಪ್ರತ್ಯೇಕ ಲೇಖನಗಳಿವೆ). (ಸಿ.ಕೆ.)

ತಾಲ್ಲೂಕು: ಜಿಲ್ಲೆಯ ಮಧ್ಯಭಾಗದಲ್ಲಿ ಸ್ವಲ್ಪಮಟ್ಟಿಗೆ ದಕ್ಷಿಣಕ್ಕಿದ್ದು, ಉತ್ತರದಲ್ಲಿ ಚಿಂತಾಮಣಿ, ಶ್ರೀನಿವಾಸಪುರ ತಾಲ್ಲೂಕುಗಳು, ಪೂರ್ವದಲ್ಲಿ ಮುಳಬಾಗಲು ತಾಲ್ಲೂಕು, ದಕ್ಷಿಣದಲ್ಲಿ ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕುಗಳು ಮತ್ತು ಪಶ್ಚಿಮದಲ್ಲಿ ಬೆಂಗಳೂರು ಜಿಲ್ಲೆಯ ಎಲ್ಲೆಗಳು ಸುತ್ತುವರಿದಿವೆ. ವಿಸ್ತೀರ್ಣ 791.1ಚ.ಕಿಮೀ. ಜನಸಂಖ್ಯೆ 3,41,784. ಕಸಬೆ, ವಕ್ಕಲೇರಿ, ವೇಮಗಲ್ಲು, ನರಸಾಪುರ, ಸುಗಟೂರು, ಹೋಳೂರು, ಹುತ್ತೂರು ಈ ಏಳು ಹೋಬಳಿಗಳು. ಒಟ್ಟು ಗ್ರಾಮಗಳ ಸಂಖ್ಯೆ 361. ತಾಲ್ಲೂಕು ಕಣಶಿಲೆಯ ಪ್ರದೇಶ, ಅಲೆಯಲೆಯಾಗಿ ಸುಮಾರು ಮಟ್ಟಸವಾದ ಭೂಪ್ರದೇಶದಲ್ಲಿ ಅಲ್ಲಲ್ಲಿ ಕಣಶಿಲೆಯ ಬೆಟ್ಟಗುಡ್ಡಗಳಿವೆ. ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ಕೋಲಾರ ಮತ್ತು ವೇಮಗಲ್ಲು ಬೆಟ್ಟಗಳ ಸಾಲುಗಳು ಇವೆ. ತಾಲ್ಲೂಕಿನ ಉತ್ತರ ಮತ್ತು ಪೂರ್ವಭಾಗ ಪಾಲಾರ್ ನದಿಯ ಹರಿವಿನ ಪ್ರದೇಶ. ತಾಲ್ಲೂಕಿನ ಹೆಚ್ಚುಭಾಗ ಮರಳುಮಿಶ್ರಿತ ಕೆಂಪು ಮಣ್ಣಿನದು. ಹೋಳೂರು ಹೋಬಳಿ ಮತ್ತು ದಲಸನೂರಿನ ಸುತ್ತಮುತ್ತ ಉತ್ಕøಷ್ಟ ಭೂಮಿ ಇದೆ. ಈ ಭಾಗದಲ್ಲಿ ಕೆಲವೆಡೆ ಕಪ್ಪು ಎರೆ ಮಣ್ಣು ಸಹ ಇದೆ. ವಾರ್ಷಿಕ ಸರಾಸರಿ ಮಳೆ 693.93ಮಿಮೀ. ಪಾಲಾರ್ ನದಿಗೆ ಕಟ್ಟಲಾಗಿರುವ ಸೋಮಾಂಬುದಿs ಅಗ್ರಹಾರಕೆರೆ ಮತ್ತು ಇತರ ಅನೇಕ ಕೆರೆಗಳು ಮತ್ತು ಬಾವಿಗಳೂ ನೀರಾವರಿ ಸೌಲಭ್ಯವನ್ನು ಒದಗಿಸಿವೆ. ತಾಲ್ಲೂಕಿನ ಮುಖ್ಯ ಬೆಳೆಗಳು ರಾಗಿ ಮತ್ತು ಬತ್ತ. ಸ್ವಲ್ಪಮಟ್ಟಿಗೆ ಕಬ್ಬು, ಕಡಲೆಕಾಯಿ, ಆಲೂಗೆಡ್ಡೆ, ಮೆಣಸಿನಕಾಯಿ, ಈರುಳ್ಳಿ, ದ್ವಿದಳಧಾನ್ಯಗಳು ಮತ್ತು ತರಕಾರಿ ಬೆಳೆ ಸಹ ಇದೆ. ರೇಷ್ಮೆ ವ್ಯವಸಾಯ ವ್ಯಾಪಕವಾಗಿದೆ. ಕೋಲಾರ ತಾಲ್ಲೂಕಿನ ಕಂಬಳಿಗಳು ಪ್ರಸಿದ್ಧ. ಕೋಲಾರ, ಜೋಡಿ ಬ್ಯಾಲಹಳ್ಳಿ, ರಾಜಕಲ್ಲಹಳ್ಳಿ ಮತ್ತು ಪಡಿಗನಹಳ್ಳಿಗಳಲ್ಲಿ ಕೈಮಗ್ಗದ ಕೈಗಾರಿಕೆಯಿದೆ. ರೈಲುಮಾರ್ಗವಲ್ಲದೆ ಉತ್ತಮ ರಸ್ತೆಸಂಪರ್ಕವಿದೆ.

ಹೋಬಳಿ ಗ್ರಾಮಗಳಲ್ಲದೆ ಬೆಳ್ಳೂರು, ಗರುಡನಪಾಳ್ಯ, ಪಾಪರಾಜನ ಹಳ್ಳಿ, ಸೀತಿ, ಸುಗಟೂರು ತೇರುಹಳ್ಳಿ, ವಾಣರಾಸಿ, ವಕ್ಕಲೇರಿ, ವೇಮಗಲ್ಲು ಮೊದಲಾದವು ಈ ತಾಲ್ಲೂಕಿನಲ್ಲಿನ ಮುಖ್ಯ ಸ್ಥಳಗಳು. ಗರುಡನಪಾಳ್ಯದ ಬಳಿಯ ಚಿಕ್ಕಗುಡ್ಡದಲ್ಲಿ ಸ್ಥಳೀಯವಾಗಿ ಪಾಂಡವರ ಗುಡಿಗಳೆಂದು ಕರೆಯುವ ಬೃಹತ್ ಶಿಲಾಸಮಾದಿsಗಳಿವೆ. ಕೋಲಾರದ ಬಳಿಯ ಬೆಟ್ಟವೊಂದರ ಮೇಲಿರುವ ಪಾಪರಾಜನ ಹಳ್ಳಿಯಲ್ಲಿ ಒಂದು ಶಿವ ದೇವಾಲಯ ಮತ್ತು ಉಸ್ಮಾನ್ ಅಲಿಯ ದರ್ಗ ಅಲ್ಲದೆ ಭೂತಗೌಡನ ಗವಿ, ಮುಗಲ್ ಸುಬೇದಾರನ ಕೋಟೆ ಮೊದಲಾದವು ಇವೆ. ಮತ್ತೊಂದು ಬೆಟ್ಟದ ಮೇಲೆ ತೇರುಹಳ್ಳಿ ಗ್ರಾಮದಲ್ಲಿ ಸು.12-13ನೆಯ ಶತಮಾನದ ಗಂಗಾಧರೇಶ್ವರನ ಬೃಹತ್ ದೇವಾಲಯ ಮತ್ತು ಕೆಲವು ಪ್ರಾಗೈತಿಹಾಸಿಕ ಅವಶೇಷಗಳು ಇವೆ. ಬೆಳ್ಳೂರು ಗಂಗರ ಕಾಲದಿಂದಲೂ ಅಸ್ತಿತ್ವದಲ್ಲಿದ್ದು ಹೊಯ್ಸಳರ ಕಾಲದಲ್ಲಿ ವಿಷ್ಣುವರ್ಧನ ಚತುರ್ವೇದಿ ಮಂಗಲಂ ಎಂದು ಪ್ರಸಿದ್ಧವಾಗಿದ್ದ ಶ್ರೀವೈಷ್ಣವ ಅಗ್ರಹಾರವಾಗಿತ್ತು. ಮಣವಾಲ ಮಹಾಮುನಿಯ ಶಿಷ್ಯರಾದ ಪ್ರತಿವಾದಿ ಭಯಂಕರರ ಅಣ್ಣ ಇಲ್ಲಿಯವರೆಂದು ಪ್ರತೀತಿ. ಇಲ್ಲಿ ರಾಮದೇವಾಲಯವಿದೆ. ವೆಂಕಟಾಪುರದಲ್ಲಿ ವೆಂಕಟರಮಣ ದೇವಾಲಯವಿದೆ. ವಕ್ಕಲೇರಿಯ ಬೆಟ್ಟದ ಮೇಲೆ ಪ್ರಾಚೀನ ಮಾರ್ಕಂಡೇಶ್ವರ ದೇವಾಲಯವಿದೆ. ಪ್ರತಿ ಮಾಘ ಮಾಸದಲ್ಲಿ ಸು.20 ದಿನಗಳ ಕಾಲ ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ವಾಣರಾಸಿಯಲ್ಲಿ ಸ್ಥಳೀಯ ವೀರ ಇರಳಪ್ಪನ ದೇವಾಲಯವಿದೆ. ಪ್ರತಿ ಚೈತ್ರಮಾಸದಲ್ಲಿ ಇಲ್ಲೂ ದೊಡ್ಡ ಜಾತ್ರೆ ನಡೆಯುತ್ತವೆ. ಹೋಳೂರಿನಲ್ಲಿ ಲಕ್ಷ್ಮೀನಾರಾಯಣ ದೇವಾಲಯವಿದೆ. ಮಾಘ ಶುದ್ಧ ಪಾಡ್ಯಮಿಯಂದು ಜಾತ್ರೆ ನಡೆಯುತ್ತದೆ. ವೇಮಗಲ್ಲಿನಲ್ಲಿರುವ ದರ್ಗಾ ಪ್ರಸಿದ್ಧವಾದುದು. ಪಟ್ಟಣ: ಕೋಲಾರ, ದೊಡ್ಡ ಊರು; ಜಿಲ್ಲೆ ಹಾಗೂ ತಾಲ್ಲೂಕಿನ ಆಡಳಿತ ಕೇಂದ್ರ. ಬೆಂಗಳೂರಿನಿಂದ 72ಕಿಮೀ ಪೂರ್ವ ಈಶಾನ್ಯಕ್ಕೆ ಹಳೆಯ ಬೆಂಗಳೂರು - ಚೆನ್ನೈ ಹೆದ್ದಾರಿಯ ಮೇಲಿದೆ. ಬೆಂಗಳೂರು - ಬಂಗಾರಪೇಟೆ ರೈಲುಮಾರ್ಗ ಈ ಪಟ್ಟಣದ ಮೂಲಕ ಹಾದುಹೋಗುತ್ತದೆ. ಜನಸಂಖ್ಯೆ 1,13,299.

ಈ ಊರು ರೈಲುಮಾರ್ಗದ ಉತ್ತರಕ್ಕೆ ಬೆಳೆದಿದೆ. ಪೂರ್ವದಲ್ಲಿ ಅಮಾನಿಕೆರೆ ಇದೆ. ಕೈಗಾರಿಕಾ ತರಬೇತಿ ಕೇಂದ್ರ, ರೇಷ್ಮೆ ತಯಾರಿಕಾ ತರಬೇತಿ ಕೇಂದ್ರ ಇವೆ. ಸುತ್ತಲ ಪ್ರದೇಶದಲ್ಲಿ ಉತ್ಪನ್ನವಾಗುವ ರೇಷ್ಮೆಯ ವ್ಯಾಪಾರ ಈ ನಗರದ ಮೂಲಕ ಸಾಗುತ್ತದೆ. ರೇಷ್ಮೆಮೊಟ್ಟೆ ಕೇಂದ್ರಗಳಿವೆ. ಇಲ್ಲಿನ ಕಂಬಳಿಗಳು ಹೆಸರುವಾಸಿ. ಸರ್ಕಾರದ ಒಂದು ಉಣ್ಣೆನೇಯ್ಗೆ ಕಾರ್ಖಾನೆ ಇದೆ. ಒಂದು ಕೈಗಾರಿಕಾ ಎಸ್ಟೇಟ್, ಅಲ್ಯುಮಿನಿಯಂ ಪಾತ್ರೆಗಳ ಕಾರ್ಖಾನೆ, ಗೋಂದು ಮತ್ತು ಪರಿಮಳ ದ್ರವ್ಯಗಳ ಕಾರ್ಖಾನೆ ಇವೆ. ಅಗರಬತ್ತಿ ತಯಾರಿಕೆಯೂ ಊರಿನ ಮುಖ್ಯ ಉದ್ಯಮಗಳಲ್ಲೊಂದು. ಉತ್ತಮ ತಳಿಯ ಕೋಳಿಗಳನ್ನು ಸಾಕಿ, ಬೆಂಗಳೂರು, ಬಳ್ಳಾರಿ ಮೊದಲಾದೆಡೆಗೆ ರಫ್ತು ಮಾಡುವುದು ಇಲ್ಲಿಯ ಮತ್ತೊಂದು ಉದ್ಯಮ. ಕೋಲಾರದಿಂದ ಸುತ್ತಲ ಎಲ್ಲ ಮುಖ್ಯ ಊರುಗಳಿಗೂ ಉತ್ತಮ ರಸ್ತೆ ಸೌಲಭ್ಯವಿದೆ. ಇದು ವ್ಯಾಪಾರಕೇಂದ್ರವೂ ಆಗಿದೆ. ಪ್ರತಿ ಗುರುವಾರ ದೊಡ್ಡ ಸಂತೆ ಜರುಗುತ್ತದೆ.

ಕೋಲಾರ ಬಹು ಪ್ರಾಚೀನ ಊರು. ಕೋಲಾಹಲಪುರ, ಕುವಲಾಲ, ಕೋಳಾರ, ಕೋಲಾಲ - ಇವು ಇದರ ಪ್ರಾಚೀನ ಹೆಸರುಗಳು, ಕಾರ್ತವೀರ್ಯಾರ್ಜುನ ಹಿಂದೆ ಈ ಪ್ರದೇಶದಲ್ಲಿ ದೊರೆಯಾಗಿದ್ದಾಗ ಒಮ್ಮೆ ಜಮದಗ್ನಿ ಮಹರ್ಷಿ ಅವನನ್ನು ಸುರಬಿs ಎಂಬ ಗೋವಿನ ಸಹಾಯದಿಂದ ಸತ್ಕರಿಸಿದ. ಕಾರ್ತವೀರ್ಯ ಆ ಗೋವನ್ನು ತನಗೆ ಕೊಡಬೇಕೆಂದು ಜಮದಗ್ನಿಯನ್ನು ಪೀಡಿಸಿದ. ಜಮದಗ್ನಿ ಗೋವನ್ನು ಕೊಡಲು ನಿರಾಕರಿಸಲು ಅದನ್ನು ಬಲಾತ್ಕಾರವಾಗಿ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ. ಆಗ ಜಮದಗ್ನಿಯ ಮಗ ಪರಶುರಾಮನಿಂದ ಕಾರ್ತವೀರ್ಯಾರ್ಜುನ ಹತನಾದ. ಅನಂತರ ಕಾರ್ತವೀರ್ಯಾರ್ಜುನನ ಮಕ್ಕಳಿಂದ ಜಮದಗ್ನಿಯ ಹತ್ಯೆ ನಡೆಯಿತು. ಜಮದಗ್ನಿಯ ಪತ್ನಿ ರೇಣುಕೆ ಪತಿಯ ದೇಹದೊಡನೆ ಚಿತೆಯೇರಿದಳು. ಇದರಿಂದ ಕುಪಿತನಾದ ಪರಶುರಾಮ ಎಲ್ಲ ಕ್ಷತ್ರಿಯರನ್ನೂ ನಾಶಮಾಡುವುದಾಗಿ ಪಣ ತೊಟ್ಟು ಕಾರ್ತವೀರ್ಯಾರ್ಜುನನ ಎಲ್ಲ ಮಕ್ಕಳನ್ನೂ ಯುದ್ಧದಲ್ಲಿ ಕೊಂದುಹಾಕಿದ. ಆ ಯುದ್ಧಗಳಿಂದ ಉಂಟಾದ ಕೋಲಾಹಲ ಸುತ್ತಲ ಬೆಟ್ಟಗಳಿಂದ ಮಾರ್ದನಿ ಕೊಟ್ಟು ಆ ಪ್ರದೇಶಕ್ಕೆ ಕೋಲಾಹಲವೆಂಬ ಹೆಸರು ಬಂತು. ಅದೇ ಇಂದಿನ ಕೋಲಾರವೆಂದು ಪ್ರತೀತಿ. ರೇಣುಕೆಯ ನೆನಪಿಗಾಗಿ ಇಲ್ಲಿನ ಕೋಲಾರಮ್ಮನ ದೇವಾಲಯವನ್ನು ಕಟ್ಟಲಾಯಿತು. ಇದು ಇಲ್ಲಿಯ ಐತಿಹ್ಯ. ಈಗ ಕೋಲಾರ ಪಟ್ಟಣವಿರುವ ಜಾಗದಲ್ಲಿ ಕೋಲ ಎಂಬ ಗೊಲ್ಲ ನೇಗಿಲಿನಿಂದ ಭೂಮಿಯನ್ನು ಉಳುತ್ತಿರುವಾಗ ಬಚ್ಚಿಟ್ಟ ಹಣ ದೊರಕಿತೆಂದೂ ಚೋಳ ದೊರೆ ಉತ್ತಮಚೋಳ ಆ ಗೊಲ್ಲನನ್ನು ಕಂಚಿಗೆ ಬರುವಂತೆ ಹೇಳಿಕಳುಹಿಸಿದನೆಂದೂ ಆಗ ರೇಣುಕಾದೇವಿ ಕೋಲಾಹಲಮ್ಮನ ರೂಪದಲ್ಲಿ ಕಾಣಿಸಿಕೊಂಡು ಅವನಿಗೆ ಎಚ್ಚರಿಕೆ ಕೊಟ್ಟಿದ್ದರಿಂದ ದೊರೆ ಕೋಲಾರಮ್ಮನ ಹೆಸರಿನಲ್ಲಿ ದೇವಾಲಯವನ್ನೂ ಊರನ್ನೂ ಕಟ್ಟಿಸಿದನೆಂದೂ ಇನ್ನೊಂದು ಕಥೆ ಇದೆ. ಕೋಲನ ನೇಗಿಲು ಹಲ ಎಂಬುದರಿಂದ ಕೋಲಾಹಲ (ಕೋಲಾರ) ಹೆಸರು ಬಂದಿರಬೇಕೆಂಬ ಊಹೆಯೂ ಇದೆ.

ಸು.4ನೆಯ ಶತಮಾನದಿಂದಲೂ ಈ ಊರು ಅಸ್ತಿತ್ವದಲ್ಲಿದ್ದಿರ ಬೇಕು. ತಲಕಾಡಿನ ಗಂಗವಂಶದ ಅರಸರು ಮೂಲತಃ ಕೋಲಾರದವರಾಗಿದ್ದು ತಮ್ಮನ್ನು ಕೋಳಾಲಪುರವರೇಶ್ವರರೆಂದು ಕರೆದುಕೊಂಡಿದ್ದಾರೆ. ತಲಕಾಡು ರಾಜಧಾನಿಯಾಗುವುದಕ್ಕೆ ಮುಂಚೆ ಕೋಲಾರ ಅವರ ರಾಜಧಾನಿಯಾಗಿದ್ದಿರಬೇಕು. ಇಲ್ಲಿ ಚೋಳ, ಹೊಯ್ಸಳ, ವಿಜಯನಗರ ಮತ್ತು ಪಾಳೆಯಗಾರರ ಕಾಲದ ಶಾಸನಗಳು ದೊರಕಿವೆ. ಆ ಕಾಲಗಳಲ್ಲೂ ಇದೊಂದು ಮುಖ್ಯ ಪಟ್ಟಣವಾಗಿ ಮೆರೆದಿತ್ತು. 15ನೆಯ ಶತಮಾನದಲ್ಲಿ ಇದು ತಿಮ್ಮೇಗೌಡನೆಂಬ ಪಾಳೆಯಗಾರನ ವಶದಲ್ಲಿತ್ತು. ಆತ ಇಲ್ಲಿನ ಕೋಟೆಯನ್ನು ದುರಸ್ತಿ ಮಾಡಿಸಿದ. 1639ರಲ್ಲಿ ಬಿಜಾಪುರದ ಸರದಾರ ಷಾಜಿಯ ವಶಕ್ಕೆ ಬಂತು. ಇಪ್ಪತ್ತು ವರ್ಷಗಳ ಅನಂತರ ಈ ಊರು ಮುಗಲರ ವಶವಾಯಿತು. 1720ರಲ್ಲಿ ಹೈದರನ ತಂದೆ ಫತೆ ಮಹಮ್ಮದ್ ಶಿರಾ ಸುಬೇದಾರರ ಅದಿsೀನದಲ್ಲಿ ಇದರ ಫೌಜುದಾರನಾದ. 1761ರಲ್ಲಿ ಪಟ್ಟಣ ಹೈದರನ ಅದಿsೀನಕ್ಕೆ ಬಂತು. 1768ರಲ್ಲಿ ಬ್ರಿಟಿಷ್ ಸೇನಾನಿ ಕ್ಯಾಂಪ್‍ಬೆಲ್ ವಶಪಡಿಸಿಕೊಂಡಿದ್ದ. 1770ರಲ್ಲಿ ಮಾಧವರಾವ್‍ನ ಕೈಸೇರಿತು. 1791ರಲ್ಲಿ ಇದನ್ನು ಕಾರ್ನವಾಲಿಸ್ ಗೆದ್ದ. 1792ರ ಸಂದಿsಯ ಪ್ರಕಾರ ಇದು ಮೈಸೂರು ಸಂಸ್ಥಾನಕ್ಕೆ ಸೇರಿತು. ಮೆಕೆಂಜಿ ಎಂಬ ಬ್ರಿಟಿಷ್ ಅದಿsಕಾರಿ 1801ರಲ್ಲಿ ಇದನ್ನು ನೋಡಿದಾಗ ಇಲ್ಲಿ ಮಣ್ಣಿನ ಕೋಟೆಯೂ ಸುತ್ತಣ ಕಂದಕ ಸುಸ್ಥಿತಿಯಲ್ಲಿತ್ತೆಂದೂ ವರ್ಣಿಸಿದ್ದಾನೆ. 19ನೆಯ ಶತಮಾನದ ಉತ್ತರ ಭಾಗದಲ್ಲಿ ಕೋಟೆಯನ್ನು ನೆಲಸಮ ಮಾಡಿ ಕಂದಕವನ್ನು ಮುಚ್ಚಲಾಯಿತು.

ಈ ಊರಿನಲ್ಲಿ ಕೋಲಾರಮ್ಮ, ಸೋಮೇಶ್ವರ, ಆಂಜನೇಯ, ವೆಂಕಟರಮಣ ಮತ್ತು ಕೋದಂಡರಾಮ ದೇವಾಲಯಗಳಿವೆ. ಕೋಲಾರಮ್ಮನ ದೇವಾಲಯ ಊರಿನ ಮುಖ್ಯ ಗುಡಿ. ಮುಂದುಗಡೆ ಒಂದು ಮಹಾದ್ವಾರವಿದೆ. ಇಲ್ಲಿನ ಚೌಕ ಕಂಬಗಳ ಮೇಲೆ ಅನೇಕ ಶಿಲ್ಪಗಳಿವೆ. ಈ ಭಾಗ ವಿಜಯನಗರ ಕಾಲದ್ದು. ಈ ಮಹಾದ್ವಾರದ ಮೇಲೆ ಗೋಪುರವಾಗಲಿ ಇದಕ್ಕೆ ಹೊಂದಿಕೊಂಡಂತೆ ಪ್ರಾಕಾರವಾಗಲಿ ಇಲ್ಲ. ಮುಂದೆ 14 ಕಂಬಗಳ ಮೇಲೆ ಎತ್ತಿದ ಮತ್ತೊಂದು ಮಹಾದ್ವಾರವಿದೆ. ಅದಕ್ಕೆ ಹೊಂದಿಕೊಂಡಂತೆ ಪ್ರಾಕಾರವಿದೆ. ಒಳಭಾಗದಲ್ಲಿ ಕೈಸಾಲೆಯಿದೆ. ಇದು ಪ್ರಾಯಶಃ ದಿಂಪಣ್ಣ ಒಡೆಯರ್ ಎಂಬ ಇಮ್ಮಡಿ ಹರಿಹರನ ಅದಿsಕಾರಿಯೊಬ್ಬ ಕಟ್ಟಿಸಿದ್ದು. ಪ್ರಾಕಾರದ ಒಳಗೆ ಮಧ್ಯದಲ್ಲಿ ಮುಖ್ಯ ಗುಡಿ ಇದೆ. ಗರ್ಭಗುಡಿಯಲ್ಲಿ ಸು. 2' ಎತ್ತರದ ಸಪ್ತಮಾತೃಕಾ ವಿಗ್ರಹಗಳಿವೆ. ಎರಡೂ ಪಕ್ಕಗಳಲ್ಲಿ ದಕ್ಷಿಣಾಮೂರ್ತಿ ಮತ್ತು ವಿನಾಯಕನ ಮೂರ್ತಿಗಳಿವೆ. ಇವುಗಳಲ್ಲಿ ಚಾಮುಂಡಾ ವಿಗ್ರಹ ದೊಡ್ಡದು ಇದರ ಎದುರು ಶ್ರೀಯಂತ್ರವನ್ನು ಸ್ಥಾಪಿಸಲಾಗಿದೆ. ಮಧ್ಯದ ಅಂಕಣದಲ್ಲಿ 5' ಎತ್ತರದ ಕಪಾಲಭೈರವಿಯ ಮೂರ್ತಿ ಇದೆ. ಈ ದೇವಿ ಚೇಳುಕಡಿತವನ್ನು ನಿವಾರಿಸುವಳೆಂಬ ನಂಬಿಕೆ ಇದೆ. ದಕ್ಷಿಣದ ಕಡೆಗೆ ನಾಲ್ಕು ಕುಬ್ಜ ಕಂಬಗಳಿರುವ ಇನ್ನೊಂದು ಗುಡಿ ಇದೆ. ಇದರಲ್ಲಿ ಸಪ್ತಮಾತೃಕೆಯರ ಸುದ್ದೆಮಣ್ಣಿನ ದೊಡ್ಡ ವಿಗ್ರಹಗಳೂ ಕೋಲಾರಮ್ಮನ ಉತ್ಸವಮೂರ್ತಿಯೂ ಇವೆ. ಉತ್ತರಕ್ಕಿರುವ ನವರಂಗದಲ್ಲಿ ಚಂಡಿಕೇಶ್ವರ ಮತ್ತು ಚೋಳರಾಜನ ವಿಗ್ರಹಗಳಿವೆ. ಈ ಭಾಗಗಳೆಲ್ಲವೂ ಬಹುಶಃ ಗಂಗರ ಕಾಲದಲ್ಲಿದ್ದಂತೆ ತೋರುತ್ತದೆ. ಇದರಿಂದ ದಕ್ಷಿಣಕ್ಕಿರುವ ಕಟ್ಟಡಗಳು ಚೋಳರ ಕಾಲದ ಸೇರ್ಪಡೆಗಳು. ದೇವಾಲಯದಲ್ಲಿ ರಾಜೇಂದ್ರ ಚೋಳ ಮೊದಲಾದ ಹಲವು ಚೋಳರಾಜರ ತಮಿಳು ಶಾಸನಗಳಿವೆ.

ಸೋಮೇಶ್ವರ ದೇವಾಲಯ ದ್ರಾವಿಡ ಶೈಲಿಯ ದೊಡ್ಡ ಕಟ್ಟಡ. ದೊಡ್ಡ ಪ್ರಾಕಾರದ ಮುಂದೆ ಮಹಾದ್ವಾರ ಮತ್ತು ಮೇಲೆ ಇಟ್ಟಿಗೆಯ ಗೋಪುರ ಇದೆ. ಒಳಭಾಗದ ಮುಖ್ಯ ಗುಡಿಯಲ್ಲಿ ಒಂದು ಗರ್ಭಗೃಹ, ದೊಡ್ಡ ಸುಕನಾಸಿ ಮತ್ತು ನಾಲ್ಕು ಕಂಬಗಳ ನವರಂಗ ಇವೆ. ಮುಂದೆ ಅನೇಕ ಕಂಬಗಳನ್ನುಳ್ಳ ಒಂದು ಮುಖಮಂಟಪವಿದೆ. ಗರ್ಭಗುಡಿಯ ಮೇಲೆ ಇಟ್ಟಿಗೆಯ ವಿಮಾನವಿದೆ. ಪ್ರಾಕಾರದ ಒಳಗೆ ಕೆಲವು ಸಣ್ಣ ಗುಡಿಗಳೂ ನೈಋತ್ಯದಲ್ಲಿ ದೊಡ್ಡ ಕಲ್ಯಾಣಮಂಟಪವೂ ಇವೆ. ಗರ್ಭಗುಡಿಯಲ್ಲಿ ಸೋಮೇಶ್ವರ ಲಿಂಗವಿದೆ. ಮುಖ್ಯ ದೇವಾಲಯದ ಹೊರಗೋಡೆಗಳು ಶಿಲ್ಪಗಳಿಂದ ಅಲಂಕೃತವಾಗಿವೆ. ಉತ್ತಮವಾದ ಶಿಲ್ಪಾಲಂಕರಣವಿರುವ ಈ ಭಾಗ ಮತ್ತು ಕಲ್ಯಾಣಮಂಟಪದ ಸುಂದರ ಕರಿಯ ಕಲ್ಲಿನ ಕಂಬಗಳು ಬಹುಶಃ 13ನೆಯ ಶತಮಾನದ ಉತ್ತರಾರ್ಧ ಅಥವಾ 14ನೆಯ ಶತಮಾನದ ಆದಿಭಾಗದಲ್ಲಿ ಕಟ್ಟಲ್ಪಟ್ಟಂತಹವು. ಮಹಾದ್ವಾರವೇ ಮೊದಲಾದ ಉಳಿದ ಭಾಗಗಳು ವಿಜಯನಗರ ಅಥವಾ ಅದಕ್ಕೂ ಅನಂತರದ ಕಾಲದವು. ದೇವಾಲಯದ ನವರಂಗ, ಕಲ್ಯಾಣಮಂಟಪ ಮುಂತಾದವುಗಳ ವಿನ್ಯಾಸ ಮತ್ತು ಶಿಲ್ಪಗಳ ಸೌಂದರ್ಯ ಆಕರ್ಷಕವಾಗಿವೆ. ಗುಡಿಯ ಬಳಿಯಲ್ಲಿ ಒಂದು ದೊಡ್ಡ ಕೊಳವಿದೆ.

ಕೋಲಾರದ ಮಕ್ಬರಾ ಇಲ್ಲಿನ ಇಸ್ಲಾಮೀ ಕಟ್ಟಡಗಳಲ್ಲಿ ಮುಖ್ಯವಾದುದು. ಇದು ಒಂದು ಮಂಟಪ. ಇದರಲ್ಲಿ ಹೈದರ್ ಅಲಿಯ 12 ಜನ ಸಂಬಂದಿsಕರ ಗೋರಿಗಳಿವೆ. ಇಲ್ಲಿ ಹೈದರ್ ಅಲಿಯ ತಂದೆ ಫತೆ ಮಹಮ್ಮದ್, ತಾಯಿ ರಜಿಯಾ ಬೇಗಂ ಮತ್ತು ಹಿರಿಯ ಮಲತಾಯಿ ಖೂಲ್ಸಿನ್ ಬೀಬಿ ಇವರ ಗೌರವಾರ್ಥ ವಾರ್ಷಿಕವಾಗಿ ಉರುಸ್ ನಡೆಯುತ್ತದೆ. ಮಕ್ಬರಾದ ಪ್ರಾಂಗಣದಲ್ಲಿ ಒಂದು ದರ್ಗಾ ಮತ್ತು ಮಸೀದಿ ಇವೆ. *