ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೌಂಡಿಣ್ಯಪುರ
ಕೌಂಡಿಣ್ಯಪುರ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿನ ವರ್ಧಾನದಿಯ ದಡದಲ್ಲಿರುವ ಒಂದು ಪುಣ್ಯಕ್ಷೇತ್ರ. ಇದಕ್ಕೆ ಕುಂಡಿನಪುರವೆಂಬ ಹೆಸರೂ ಇತ್ತು. ಇದು ರುಕ್ಮಿಣಿ, ದಮಯಂತಿಯರ ತವರುಮನೆಯಾಗಿದ್ದು ಇಬ್ಬರ ಸ್ವಯಂವರವೂ ಇಲ್ಲಿಯೇ ನಡೆಯಿತೆನ್ನಲಾಗಿದೆ. ವರ್ಧಾ ನದಿಯ ಪಾತ್ರದಲ್ಲಿರುವ ಪುಂಡಲೀಕ ಕುಂಡದ ಹತ್ತಿರ ಶ್ರೀ ಸದಾರಾಮ ಮಹಾರಾಜ, ಬೈರಾಗೀ ಮಹಾರಾಜ ಮೊದಲಾದ ಸಂತಶ್ರೇಷ್ಠರ ಸಮಾಧಿಗಳಿವೆ.
ಪಾಂಡುರಂಗನ ಆದೇಶದಂತೆ ಇಲ್ಲಿಗೆ ಬಂದ ಸದಾರಾಮರು ಆತನೇ ಕೊಟ್ಟ ವಿಟ್ಠಲಮೂರ್ತಿಯನ್ನಿಲ್ಲಿ ಪ್ರತಿಷ್ಠಾಪಿಸಿ ಒಂದು ದೇವಾಲಯವನ್ನು ಕಟ್ಟಿಸಿದರು. ಇದರಿಂದಾಗಿ ಇಲ್ಲೊಂದು ವಿಟ್ಠಲಕ್ಷೇತ್ರ ನಿರ್ಮಾಣವಾಯಿತು. ಕೌಂಡಿಣ್ಯಪುರಕ್ಕೆ ವಿದರ್ಭದ ಪಂಢರೀ ಎಂದು ಹೆಸರು ಬಂದುದು ಹೀಗೆ.
ವಿಟ್ಠಲಮಂದಿರದ ಹತ್ತಿರದಲ್ಲೆ ಚೌರಂಗೀನಾಥರ ಸಮಾಧಿ ಇದೆ. ಪಕ್ಕದಲ್ಲೆ ಶ್ರೀದತ್ತ, ಶ್ರೀಮಹಾದೇವ ಮತ್ತು ಶ್ರೀಲಕ್ಷ್ಮಿನಾರಾಯಣರ ದೇವಸ್ಥಾನಗಳೂ ಒಂದು ಜೈನಬಸದಿಯೂ ಇವೆ. ಜ್ಯೇಷ್ಠ ಶುದ್ಧ ಪ್ರಥಮೆಯ ದಿವಸ ಇಲ್ಲಿಂದ ರುಕ್ಮಿಣಿಯ ಪಲ್ಲಕ್ಕಿ ಹೊರಟು ಆಷಾಢಶುದ್ಧ ದಶಮಿಯ ದಿವಸ ಪಂಢರಪುರವನ್ನು ಸೇರಿ ಗೋಕುಲಾಷ್ಟಮಿಯ ದಿವಸ ಕೌಂಡಿಣ್ಯಪುರಕ್ಕೆ ಹಿಂತಿರುಗುತ್ತದೆ.
ಊರ ಹೊರಗಡೆ ಗಿರಿಜೆಯ ಒಂದು ಮಂದಿರವಿದೆ. ರುಕ್ಮಿಣಿ ತನ್ನ ಲಗ್ನದ ಹಿಂದಿನ ದಿವಸ ಗಿರಿಜಾದೇವಿಯ ದರ್ಶನ ತೆಗೆದುಕೊಂಡಳೆಂದು ಪ್ರತೀತಿ. ಇಲ್ಲಿಯೇ ಹತ್ತಿರದಲ್ಲಿ ಭೀಷ್ಮಕರಾಜನ ಉದ್ಯಾನವಿತ್ತು ಎಂದು ಹೇಳುತ್ತಾರೆ. ಈಚಿನ ಉತ್ಖನನಗಳಿಂದ ಪ್ರಾಚೀನ ನಗರದ ಅವಶೇಷಗಳು ಬೆಳಕಿಗೆ ಬಂದಿವೆ. *